Sunday, June 29, 2025

ಮನವ ಕಬ್ಬಿಣ ಮಾಡು, ಹೇ ಮೃಡನೇ!


"ದೇವರಲ್ಲಿ ಬೇಡುವುದು ಸರಿಯೇ?" ಎಂಬ ಹಿಂದಿನ ಸಂಚಿಕೆಯಲ್ಲಿ ನಾವು ನಂಬಿದ, ಆರಾಧಿಸುವ  ದೇವರು-ದೇವತೆಗಳಲ್ಲಿ ಅನೇಕ ವಿಧವಾಗಿ ವರಗಳನ್ನು ಕೇಳಿಕೊಳ್ಳುವ ರೀತಿ, ಮತ್ತು ಅದರ ಸರಿ-ತಪ್ಪು ಎನ್ನುವ ವಿಚಾರವಾಗಿ ಚರ್ಚೆ ಮಾಡಿದೆವು. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನಾವು ದಿನಂಪ್ರತಿ ಉಪಯೋಗಿಸುವ ಅನೇಕ ಸ್ತೋತ್ರ-ಮಂತ್ರಗಳಲ್ಲಿ ಈ ರೀತಿಯ ಬೇಡುವಿಕೆ ವಿಶಾಲವಾಗಿ ಹರಡಿದೆ. ಅನೇಕರು ಬಹಳ ಭಕ್ತಿ-ಶ್ರದ್ಧೆಗಳಿಂದ ಅನುಷ್ಠಾನ ಮಾಡುವ ಇಂತಹ ಒಂದು ಆಚರಣೆ ರುದ್ರ-ಚಮಕಗಳ ಪಾರಾಯಣಾದಿಗಳು. ಅದರ ತಿರುಳು ಕೆಲವರಿಗೆ ಅರ್ಥವಾಗುತ್ತದೆ. ಅನೇಕರಿಗೆ ಗೊತ್ತಾಗುವುದಿಲ್ಲ. ಆದರೆ ನುರಿತವರು ಅದನ್ನು ಹೇಳುವಾಗ ಕೇಳುಗರೆಲ್ಲರಿಗೂ ಒಂದು ವಿಶೇಷ ಅನುಭವ ಆಗುವುದು ಅಲ್ಲಿ ಕುಳಿತು ಕೇಳಿದವರಿಗೆ ಗೊತ್ತು. ಇಲ್ಲಿಯೂ ಅನೇಕ ಬೇಡಿಕೆಗಳನ್ನು ರುದ್ರದೇವರ ಮುಂದೆ ಇಡುವುದು ಉಂಟು. ಇದರ ಬಗ್ಗೆ ತಿಳಿದವರು ಚೆನ್ನಾಗಿ ವಿವರಿಸಬಲ್ಲರು. ಆದರೂ ನಮ್ಮ ಯೋಗ್ಯತೆ ಇರುವಷ್ಟು ನೋಡುವುದರಲ್ಲಿ ತಪ್ಪೇನೂ ಇಲ್ಲ. 

*****

ಇದೊಂದು ನಮಗೆ ಬೇಕೇ ಬೇಕಾದ ಅತಿ ಹತ್ತಿರದ ಕುಟುಂಬ. ಒಬ್ಬ ಮಗನಾದ ಗಣೇಶನು ವಿಘ್ನಗಳನ್ನು ದೂರಮಾಡಿ ಎಲ್ಲವನ್ನೂ ಸುಗಮ ಮಾಡುವ "ಸುಮುಖ". ಇನ್ನೊಬ್ಬ ಮಗ ದೇವಸೇನಾಪತಿಯಾದ "ಕುಮಾರ". ತಾಯಿಯು ಬುದ್ಧಿ ಶಕ್ತಿಯ ಅಭಿಮಾನಿ ದೇವತೆಯಾದ "ಉಮಾದೇವಿ". ಮತಿ ಪ್ರೇರಕಳು. ತಂದೆಯಾದರೋ ಮನೋಭಿಮಾನಿ "ಮಹರುದ್ರದೇವರು". ಎಲ್ಲ ಸಾಧನೆಗಳ ದಾರಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ವಿಘ್ನೇಶ. ಸಾಧನೆಗಳಿಗೆ ಅಡ್ಡಿ ಪಡಿಸುವ ಆಸುರೀಶಕ್ತಿಗಳನ್ನು ಹತ್ತಿಕ್ಕಲು ದೇವತೆಗಳ ಸೇನಾಧಿಪತಿಯಾದ ಷಣ್ಮುಖ. ಕಪಿಯಂತೆ ದಿಕ್ಕಾಪಾಲಾಗಿ ಓಡುವ ಮನಸ್ಸು ನಿಯಂತ್ರಿಸಿ ಏಕಾಗ್ರತೆ ಸಾಧಿಸಲು ಶಂಭುವಿನ ಕರುಣೆ. ಸಾಧನೆಗೆ ಬುದ್ಧಿಯನ್ನು ಕೇಂದ್ರೀಕರಿಸಲು ಗಿರಿಜೆಯ ಅನುಗ್ರಹ. ಈ ಕುಟುಂಬವನ್ನು ಬಿಟ್ಟು ಸಾಧಕನಿಗೆ ಬೇರೆ ಗತಿಯಿಲ್ಲ. 

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ ಇದನ್ನು ಹೀಗೆ ಒಟ್ಟುಗೂಡಿಸಿ ಹೇಳುತ್ತಾರೆ:

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ 
ಮತಿಪ್ರೇರಿಸುವಳು ಪಾರ್ವತಿದೇವಿ 
ಮುಕುತಿಪಥಕೆ ಮನವೀವ ಮಹರುದ್ರದೇವರು

ರುದ್ರದೇವರು ಸ್ವತಃ ವೈರಾಗ್ಯ ಮೂರ್ತಿಗಳು. ಅವರಿಗಾಗಿ ಏನನ್ನೂ ಇಟ್ಟುಕೊಂಡವರಲ್ಲ. ಆದರೆ ಭಕ್ತರಿಗಾಗಿ ಎಲ್ಲವನ್ನೂ ಕೊಡಬಲ್ಲವರು!
***** 

ನಮ್ಮ ಕುಟುಂಬದಲ್ಲಿ ಒಂದು ಸೊಗಸು. ನಮ್ಮ ಅಪ್ಪನ ತಂದೆಯ ಕಡೆ (ಪಿತಾಮಹ ವಂಶ) ಮಹಾವಿಷ್ಣುವಿನ ಆರಾಧಕರು. ನಮ್ಮ ಅಪ್ಪನ ತಾಯಿಯ ಕಡೆ (ಮಾತಾಮಹ ವಂಶ) ರುದ್ರದೇವರ ಆರಾಧಕರು. ಇವರ ಮನೆಯಲ್ಲಿ ಎಲ್ಲ ಆಚರಣೆಗಳೂ ಈ ರೀತಿ. ಅವರ ಮನೆಯಲ್ಲಿ ಎಲ್ಲ ಆಚರಣೆಗಳೂ ಆ ರೀತಿ. ಇದು ಹಿಂದಿನ ಮೂರು ತಲೆಮಾರುಗಳಿಂದ ನಡೆದುಬಂದಿತ್ತು. ಉಭಯ ಕುಟುಂಬಗಳಲ್ಲೂ ಒಳ್ಳೆಯ ಸಾಮರಸ್ಯ ನಡೆದಿತ್ತು. ಈ ವಿಷಯವಾಗಿ ಎಂದೂ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅವರವರ ನಂಬಿಕೆ, ಆಚರಣೆಗಳು ಅವರವರಿಗೆ. ಅವರ ಹಬ್ಬ-ಉತ್ಸವಗಳಿಗೆ ಇವರು ಹೋಗುವರು. ಇವರ ಹಬ್ಬ-ಆಚರಣೆಗಳಿಗೆ ಅವರು ಬರುವರು. ಒಂದು ಕುಟುಂಬದ ಉಪಸ್ಥಿತಿಯಿಲ್ಲದೆ ಇನ್ನೊಂದು ಕುಟುಂಬದ ಯಾವ ಸಮಾರಂಭವೂ ನಡೆಯದು.  ಹೀಗೆ ನಡೆದುಬಂದಿತ್ತು. 

ನಮ್ಮ ತಂದೆಯವರಿಗೆ ಇಬ್ಬರು ಸೋದರಮಾವಂದಿರು. ಅವರಿಬ್ಬರೂ ವಯಸ್ಸಿನಲ್ಲಿ ನಮ್ಮ ಅಜ್ಜಿಗಿಂತ (ಅವರ ಅಕ್ಕ) ಚಿಕ್ಕವರು. ದೊಡ್ಡ ಸೋದರಮಾವ ತಂದೆಯವರಿಗಿಂತ ಮೂರು ವರುಷ ದೊಡ್ಡವರು. ಚಿಕ್ಕ ಸೋದರಮಾವ ತಂದೆಯವರಿಗಿಂತ ಕೆಲವು ತಿಂಗಳು ದೊಡ್ಡವರು. ಹೀಗಾಗಿ ಇವರು ಮೂವರೂ ಒಂದೇ ಓರಗೆಯವರು. ಜೊತೆಯಲ್ಲಿ ಬೆಳೆದವರು. ಮಾವಂದಿರು - ಸೋದರಳಿಯ ನೆಂಟತನಕ್ಕಿಂತ ಹೆಚ್ಚಾಗಿ ಸ್ನೇಹಿತರು. ಮೂವರೂ ಸೇರಿದಾಗ ವಿನೋದ ಪ್ರಧಾನವಾಗಿ ಕಾಲ ಕಳೆಯುತ್ತಿತ್ತು. 

ನಾನು ಶಾಲೆಗಳಲ್ಲಿ ಓದುತ್ತಿದ್ದಾಗ ತಂದೆಯವರ ಜೊತೆ ಅವರಿರುವಲ್ಲಿಗೆ ಹೋಗುತ್ತಿದ್ದೆ. ಅವರುಗಳ ಮಾತಿನ ವಿಷಯ ಕೆಲವು ವೇಳೆ ಅರ್ಥವಾಗುತ್ತಿತ್ತು. ಕೆಲವು ವೇಳೆ ಇಲ್ಲ. ಆಗ ಕೇಳಿದ ಕೆಲವು ವಿಷಯಗಳು ಮುಂದೆ ಎಂದೋ ನೆನಪಿಗೆ ಬಂದು, ನಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ  ಅರ್ಥವಾಗಿವೆ. ಇದು ನನ್ನೊಬ್ಬನ ವಿಶೇಷ ಎಂದು ಮಾತ್ರವಲ್ಲ. ಅನೇಕರಿಗೆ ಅವರವರ ಜೀವನಗಳಲ್ಲಿ ಇದೇ ರೀತಿ ಅನುಭವಗಳು ಆಗಿರುತ್ತವೆ. 
*****

ನಮ್ಮ ಬಾಲ್ಯದಲ್ಲಿ ಪ್ರತಿ ಊರಿನಲ್ಲೂ ಪ್ರತಿವರುಷ ಊರಹಬ್ಬ ಆಚರಿಸುತ್ತಿದ್ದರು. ಈಗಲೂ ಅನೇಕ ಕಡೆ ನಡೆಯುತ್ತವೆ. ಊರಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಹೊರಗಡೆ ಪ್ರದೇಶಗಳಲ್ಲಿ ಓದು, ಕೆಲಸ, ವ್ಯವಹಾರ ಮುಂತಾದ ಕಾರಣಗಳಿಂದ ವಾಸಿಸುತ್ತಿದ್ದ ಜನರು ಊರಹಬ್ಬಕ್ಕೆ ಬಂದು ಸೇರುತ್ತಿದ್ದರು. ಬಂಧು-ಬಾಂಧವರನ್ನು ಮತ್ತು ಸ್ನೇಹಿತರನ್ನು ವರುಷಕ್ಕೊಮ್ಮೆ ನೋಡಲು ಇದು ಒಂದು ಒಳ್ಳೆಯ ಅವಕಾಶವಾಗಿತ್ತು. ಬೆಂಗಳೂರಿನಲ್ಲಿ ಪ್ರತಿ ವರುಷ ಚಿತ್ರಾಪೂರ್ಣಿಮೆ (ಉಗಾದಿಯನಂತರ ಬರುವ ಹುಣ್ಣಿಮೆ) ಊರಹಬ್ಬ ನಡೆಯುತ್ತದೆ. ಅದು "ಬೆಂಗಳೂರು ಕರಗ" ಎಂದು ಪ್ರಸಿದ್ಧಿ. "ಕೆಂಪೇಗೌಡ ದಿನಾಚರಣೆ" ಎಂದೂ ಕರೆಯುತ್ತಾರೆ. ಈಗಲೂ ಬಹಳ ವಿಜೃಂಭಣೆಯಿಂದ  ನಡೆಯುತ್ತದೆ. ಹತ್ತಾರು ದೇವಾಲಯಗಳು ತಮ್ಮ ಉತ್ಸವ ಮೂರ್ತಿಗಳನ್ನು ಕರೆತಂದು ಸಿಟಿ ಮಾರ್ಕೆಟ್ ಬಳಿ ಸೇರುತ್ತಾರೆ. ಬೇರೆ ಊರುಗಳಲ್ಲಿಯೂ ಹೀಗೆಯೇ ಉಂಟು. 

ಒಮ್ಮೆ ತಂದೆಯವರ ಜೊತೆಗೆ ಅವರ ತೌರುಮನೆಗೆ (ತನ್ನ ತಾಯಿಯ ಹುಟ್ಟಿದ ಮನೆಯನ್ನು ಅವರು ಕರೆಯುತ್ತಿದ್ದುದು ಹೀಗೆಯೇ. ತೌರುಮನೆ ಅಂದರೆ "ತಾಯಿಯ ಮನೆ". ಅದು ಗಂಡಸರಿಗೆ ಏಕೆ ಇರಬಾರದು? ಎಂದು ಕೇಳುತ್ತಿದ್ದರು!) ಹೋಗಿದ್ದೆ. ಆಗ ಕೆಂಗೇರಿ ಬೇರೆಯ ಊರಾಗಿತ್ತು. ಈಗಿನಂತೆ ಬೆಂಗಳೂರಿನ ಹೊಟ್ಟೆಯೊಳಗೆ ಸೇರಿಕೊಂಡಿರಲಿಲ್ಲ. ಮಧ್ಯಾನ್ಹದ ಊಟದ ನಂತರ ಮೂವರು ಜೊತೆಗಾರರು ಮನೆಯ ಜಗುಲಿಯ ಮೇಲೆ ಕುಳಿತು ಮಾತಾಡುತ್ತಿದ್ದರು. ನಾನು ಸ್ವಲ್ಪದೂರ ಕುಳಿತು ನೋಡುತ್ತಿದ್ದೆ. 

"ಮುಂದಿನ ತಿಂಗಳು ಊರ ಹಬ್ಬ. ತಪ್ಪದೆ ಬಾ. ಹೋದ ವರುಷದಂತೆ ಚಕ್ಕರ್ ಹಾಕಬೇಡ"
"ನೋಡೋಣ. ಶಾಲೆಗೆ ರಜೆ ಇದ್ದರೆ ಬರುತ್ತೇನೆ"
"ಅದೆಲ್ಲ ಆಗದು. ರಜೆ ಇಲ್ಲದಿದ್ದರೆ ರಜೆ ಹಾಕಿ ಬಾ"
"ಓದುತ್ತಿದ್ದಾಗ ಅವಾಗವಾಗ ಚಕ್ಕರ್ ಹೊಡೆಯುತ್ತಿದ್ದೆ. ಈಗ ಏನು ಕಷ್ಟ?"
ಮೂವರೂ ನಕ್ಕರು. 

ಅಷ್ಟರಲ್ಲಿ ಎದುರು ಮನೆ ಗೃಹಿಣಿ ತನ್ನ ಮಕ್ಕಳು ಕಾಣಲಿಲ್ಲವೆಂದು ಮನೆಯ ಹೊರಗಡೆ ಬಂದು ನೋಡಿದಳು. ಇಬ್ಬರು ಮಕ್ಕಳು ಚೆನ್ನಾಗಿ ಮಣ್ಣಿನಲ್ಲಿ ಆಟ ಆಡುತ್ತಿದ್ದರು. ಮೈಯೆಲ್ಲ ಧೂಳಿನಿಂದ ಮುಚ್ಚಿತ್ತು. ನೋಡಿದ ಅವಳಿಗೆ ಕೋಪ ಬಂತು. "ಆಡಿ, ಆಡಿ; ಚೆನ್ನಾಗಿ ಆಡಿ. ಆಮೇಲೆ ಮನೆಗೆ ಬನ್ನಿ. ನಿಮಗೆ ಹಬ್ಬ ಮಾಡುತ್ತೇನೆ" ಅಂದು ಹೇಳಿ ಒಳಗೆ ಹೋದಳು. 

"ಏನಪ್ಪಾ, ನಿಮ್ಮಣ್ಣ ನನ್ನ ಊರಹಬ್ಬಕ್ಕೆ ಕರೀತಿದಾನೆ. ಅವಳು ನೋಡಿದರೆ ಮಕ್ಕಳಿಗೆ "ಹಬ್ಬ ಮಾಡುತ್ತೇನೆ" ಎಂದು ಹೇಳುತ್ತಿದ್ದಾಳೆ"
"ಅಣ್ಣ ನಿನಗೂ ಅಂತದೇ ಹಬ್ಬ ಮಾಡಬಹುದು. ಹುಷಾರಾಗಿರು"
"ಅಯ್ಯೋ, ಹುಚ್ಚಪ್ಪಗಳಾ. ಸಂದರ್ಭ ನೋಡಿ ಮಾತಿಗೆ ಅರ್ಥ ಮಾಡಬೇಕು. ಒಂದು ಮಾತಿಗೆ ಎಲ್ಲ ಕಡೆಯೂ ಒಂದೇ ಅರ್ಥ ಇರುವುದಿಲ್ಲ. ಇದು ಚೆನ್ನಾಗಿ ಗೊತ್ತಿದ್ದೂ ನನ್ನ ಹಾಸ್ಯ ಮಾಡುತ್ತಿದ್ದೀರಾ?"
ಮೂವರು ಮತ್ತೊಮ್ಮೆ ನಕ್ಕರು. 
*****

ನಂತರ ಕೆಲವು ವರುಷಗಳು ಕಳೆದ ಮೇಲೆ ಹಿರಿಯ ಸೋದರಮಾವ ತಿರುಮಕೂಡಲು ನರಸೀಪುರದಲ್ಲಿ (ಟಿ. ನರಸೀಪುರ) ವಾಸವಾಗಿದ್ದರು. ಒಮ್ಮೆ ಅವರ ಹುಟ್ಟಿದ ಹಬ್ಬ ಬಂದಿತು. ಪ್ರಾಯಶಃ "ಭೀಮರಥಿ ಶಾಂತಿ" ಇರಬಹುದು. (70ನೆಯ ವರುಷದ ಹುಟ್ಟಿದ ಹಬ್ಬವನ್ನು ಭೀಮರಥಿ ಶಾಂತಿ ಎಂಬುದಾಗಿ ಆಚರಿಸುತ್ತಾರೆ). ತಿರುಮಕೂಡಲು ಕಪಿಲ-ಕಾವೇರಿ ನದಿಗಳ ಸಂಗಮ ಕ್ಷೇತ್ರ. ಉತ್ತರ ಭಾರತದಲ್ಲಿ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಪ್ರಯಾಗದಲ್ಲಿ ಇರುವಂತೆ ಇಲ್ಲಿ ಕಪಿಲಾ-ಕಾವೇರಿ-ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮವೆಂದು ಪ್ರತೀತಿ. ಇಲ್ಲಿನ "ಗುಂಜಾ ನರಸಿಂಹಸ್ವಾಮಿ" ಮತ್ತು "ಅಗಸ್ತ್ಯೇಶ್ವರ" ದೇವಾಲಯಗಳು ಇತಿಹಾಸ ಪ್ರಸಿದ್ಧ. 

"ಗರ್ಗೇಶ್ವರಿ" ಅನ್ನುವುದು ತಿರುಮಕೂಡಲಿನಿಂದ ಮೂರು ಮೈಲು ದೂರದ ಒಂದು ಕ್ಷೇತ್ರ. ಇಲ್ಲಿನ ದೊಡ್ಡ ಶಿವಲಿಂಗ "ಅರ್ಧನಾರೀಶ್ವರ" ಅನ್ನುತ್ತಾರೆ. ಈಗ ಈ ಊರೂ ನರಸೀಪುರದಲ್ಲಿಯೇ ಸೇರಿಹೋಗಿದೆ. ಈ ಗರ್ಗೇಶ್ವರಿ ದೇವಸ್ಥಾನದಲ್ಲಿ ಹುಟ್ಟು ಹಬ್ಬದ ಸಮಾರಂಭದ ಪ್ರಯುಕ್ತ "ಏಕಾದಶವಾರ ರುದ್ರಾಭಿಷೇಕ" ಏರ್ಪಡಿಸಿದ್ದರು. ಜ್ಞಾನವೃದ್ಧರೂ, ವಯೋವೃದ್ಧರೂ ಆದ ಘನಪಾಠಿ ಗುರುಗಳು ಶಿಷ್ಯರ ಸಮೇತ ಆಗಮಿಸಿ ರುದ್ರ-ಚಮಕಗಳ ಅದ್ಭುತ ಪಾರಾಯಣ-ಅಭಿಷೇಕಾದಿಗಳನ್ನು ನಡೆಸಿದರು. 

ಕಾರ್ಯಕ್ರಮ ಮುಗಿದ ನಂತರ ಊಟಕ್ಕೆ ತಯಾರಾಗುವ ವೇಳೆಯಲ್ಲಿ ಈ ಮೂವರೂ ಆ ಗುರುಗಳ ಬಳಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. 

"ಗುರುಗಳೇ. ರುದ್ರದೇವರು ಅಖಂಡ ವೈರಾಗ್ಯ ಮೂರ್ತಿಗಳು. ಅವರ ಬಳಿ ನಾವು ಈ ಪ್ರಾರ್ಥನೆಗಳನ್ನು ಮಾಡಿ ಅನೇಕ ವರಗಳನ್ನು ಕೇಳುತ್ತೇವೆ. ಇವುಗಳಲ್ಲಿ ಅನೇಕ ಕೋರಿಕೆಗಳು ಭೌತಿಕ ವಸ್ತುಗಳು. ಈ ನಮ್ಮ ಜೀವನ ಸುಖವಾಗಿರಲು ಕೇಳಿಕೊಳ್ಳುವುವು. ಹೆಚ್ಚೂ-ಕಡಿಮೆ ಪ್ರತಿಯೊಂದು ವಸ್ತುವನ್ನೂ ಕೇಳುತ್ತೇವೆ. ಇದು ಸರಿಯೇ?"
"ಏಕೆ? ಕೇಳಬಾರದೆಂದು ನಿಮ್ಮ ಅಭಿಪ್ರಾಯವೇ?"
"ವೈರಾಗ್ಯ ಮೂರ್ತಿಯ ಬಳಿ ವೈರಾಗ್ಯ ಹುಟ್ಟುವ ರೀತಿಯ ಬೇಡಿಕೆ ಇಡಬೇಕಲ್ಲದೆ ಈ ರೀತಿ ಸುಖ-ಸಾಧನಗಳನ್ನು ಕೇಳುವುದು ನ್ಯಾಯವೇ?"
"ಎಲ್ಲರಿಗೂ ಸುಲಭವಾಗಿ ವೈರಾಗ್ಯ ಬರುವುದಿಲ್ಲವಲ್ಲ?"
"ಅಂದಮಾತ್ರಕ್ಕೆ ವೈರಾಗ್ಯ ಕೇಳದೆ ಈ ಸುಖ ಸಾಧನಗಳನ್ನು ಕೇಳಬಹುದೇ?"

"ಈ ಭೂಮಿಯಲ್ಲಿ ಜೀವನ ಮಾಡುವಾಗ ಇಹ-ಪರ ಎರಡರ ಕುರಿತೂ ಯೋಚಿಸಬೇಕು. ಬಹಳ ಕಡಿಮೆ ಮಂದಿಗೆ ಚಿಕ್ಕ ವಯಸ್ಸಿನಲ್ಲಿ ವೈರಾಗ್ಯ ಬರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಕಾಲಕ್ರಮದಲ್ಲಿ ವೈರಾಗ್ಯ ಬರುವುದು. ಕೆಲವರಿಗಂತೂ ಅದು ಬರುವುದೇಯಿಲ್ಲ. ಸಾಧನೆಗೆ ಅನೇಕ ಪರಿಕರಗಳು ಬೇಕಲ್ಲ. ಇಲ್ಲಿನ ಜೀವನವೂ ಚೆನ್ನಾಗಿ ನಡೆಯಬೇಕು. ನಾವು ವೈಯುಕ್ತಿಕವಾಗಿ ಏನನ್ನೂ ಬೇಡ ಅನ್ನಬಹುದು. ಆದರೆ ಗೃಹಸ್ಥರಾದ ನಮ್ಮನ್ನು ನಂಬಿ ನಮ್ಮ ಜೊತೆ ಬಾಳುವ ಕುಟುಂಬದವರ ವಿಷಯವೇನು? ಸನ್ಯಾಸಿಯಾಗಿ ಗುರುಕುಲ ನಡೆಸುವವನಾದರೂ ಅವನ ಚಿಕ್ಕ ವಯಸ್ಸಿನ ಶಿಷ್ಯವೃಂದದ ಕಥೆ ಏನು? ಒಂಟಿಯಾಗಿ ಸಾಧನೆ ಮಾಡುವವನಿಗೂ, ಅನೇಕ ಮಂದಿಯ ಜೊತೆಯಲ್ಲಿದ್ದು ಸಾಧನೆ ಮಾಡುವವನಿಗೂ ವ್ಯತ್ಯಾಸವಿಲ್ಲವೇ? ಇಲ್ಲಿಯೂ ಚೆನ್ನಾಗಿ ಬಾಳುವೆ ನಡೆಸಬೇಕು. ಮುಂದಿನ ದಾರಿಯೂ ಸರಿಯಾಗಿ ಗೊತ್ತಾಗಬೇಕು. ಈ ಪ್ರಾರ್ಥನೆಗಳು ಎರಡನ್ನೂ ಸರಿತೂಗಿಸಿ ಜೀವನ ನಡೆಸಲು ಬೇಕಾದುವನ್ನು ಕೇಳುತ್ತವೆ. ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ, ಈ ಪರಿಕರಗಳಿಂದ ಸುಖಿಸುವುದರಲ್ಲಿ ಮುಳುಗಿ ಸಾಧನೆಯನ್ನು ಬಿಡಬಾರದು. ಆ ಎಚ್ಚರ ವಹಿಸಬೇಕು. ಆ ರುದ್ರರೇ ಇದನ್ನು ನಡೆಸಿಕೊಡುತ್ತಾರೆ ಎನ್ನುವುದು ಧೃಡವಾದ ನಂಬಿಕೆಯಾಗಿ ಇರಬೇಕು"

"ಒಂದು ಕಡೆ "ಲೋಹವನ್ನು ಕೊಡು ಎಂದು ಕೇಳುತ್ತೇವಲ್ಲ? ಬದುಕು ಹಸನಾಗಲು, ಸುಖಮಯವಾಗಲು ಬೆಳ್ಳಿ-ಬಂಗಾರ ಮುಂತಾದುವನ್ನು ಕೇಳುವ ಬದಲು ಕಬ್ಬಿಣವನ್ನು ಕೇಳುವುದೇ?"

"ಲೋಹ ಎಂದರೆ ಕೇವಲ ಕಬ್ಬಿಣ ಎಂದು ಅರ್ಥ ಮಾಡಬಾರದು. ಬೆಳ್ಳಿ-ಬಂಗಾರಗಳೂ ಲೋಹಗಳೇ ತಾನೇ? ಲೋಹ (ಮೆಟಲ್) ಆನ್ನುವುದು ವಿಜ್ಞಾದಲ್ಲಿಯೂ ಒಂದು ಧಾತುಗಳ ಕುಟುಂಬ. ಇದಲ್ಲದೆ ಅನೇಕ ವ್ಯವಹಾರಗಳಲ್ಲಿ ಮನುಷ್ಯನ ಮನಸ್ಸು ಬೇರೆ ಬೇರೆ ರೀತಿ ಪ್ರಕಟವಾಗುತ್ತದೆ. ಒಮ್ಮೆ "ಅವರದು ಹೂವಿನಂತಹ ಮನಸ್ಸು" ಎನ್ನುತ್ತೇವೆ. ಮತ್ತೊಮ್ಮೆ "ಅವನದು ಕಲ್ಲಿನ ಮನಸ್ಸು" ಅನ್ನುತ್ತೇವೆ. ಏಕೆ ಹೀಗೆ?"

"ವ್ಯವಹರಿಸುವಲ್ಲಿ ಮನಸ್ಸಿನ ಮೃದುತ್ವ ಅಥವಾ ಕಾಠಿಣ್ಯವನ್ನು ಗುರುತಿಸಲು ಹೀಗೆ ಹೇಳುತ್ತೇವೆ"
"ಕಲ್ಲನ್ನು ಭೇದಿಸಲು ಏನು ಬಳಸುತ್ತಾರೆ?"
"ಉಳಿ ಮತ್ತು ಸುತ್ತಿಗೆ"
"ಉಳಿ ಮತ್ತು ಸುತ್ತಿಗೆಯನ್ನು ಬಂಗಾರದಿಂದ ಮಾಡಬಹುದೋ?"
"ಅರ್ಥವಾಗಲಿಲ್ಲ"

"ಕಲ್ಲಿಗಿಂತಲೂ ಕಠಿಣವಾದುದು ಕಬ್ಬಿಣ. ಇಲ್ಲಿ ಲೋಹವನ್ನು ಕೊಡು ಅಂದರೆ ಕಬ್ಬಿಣದ ಉಂಡೆಯನ್ನು ಕೊಡು ಎಂದು ಅರ್ಥವಲ್ಲ. "ಸಾಧನೆಯ ದಾರಿಯಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾದು" ಎಂದು ಕೇಳುವ ಭಾವ. ಯಾವುದೇ ಪ್ರಲೋಭನೆಗಳಿಗೆ ಮನಸ್ಸು ಮೆದುವಾಗಿ ಸಾಧನೆಯ ದಾರಿಯಿಂದ ವಿಮುಖವಾಗಬಾರದು. ಬೇರೆ ರೀತಿಯ ಸಂಪತ್ತನ್ನು ಕೇಳಿಯಾಗಿದೆ. ಇಲ್ಲಿ ನಮ್ಮ ಮನಸ್ಸನ್ನು ಕಬ್ಬಿಣದಂತೆ ಗಟ್ಟಿ ಮಾಡು ಎಂದು ಕೇಳುವ ಪ್ರಾರ್ಥನೆ. ಸಂದರ್ಭ ನೋಡಿ ಪದಗಳಿಗೆ ಅರ್ಥ ಮಾಡಬೇಕಲ್ಲವೇ?"

ಇನ್ನು ಕೆಲವು ಪ್ರಶ್ನೆಗಳಾದ ಮೇಲೆ ಊಟದ ಕರೆ ಬಂತು.  

*****

ರುದ್ರದೇವರ ಕರುಣೆಯಿಲ್ಲದೆ ಮನಸ್ಸು ಗಟ್ಟಿಯಾಗದು. ಶ್ರೀವಿಜಯದಾಸರು ಶಂಭುವಿನ ಕುರಿತಾದ ಅವರ ಒಂದು ದೇವರನಾಮದಲ್ಲಿ ಹೀಗೆ ಹೇಳುತ್ತಾರೆ:

ಕೈಲಾಸವಾಸ ಗೌರೀಶ ಈಶ 
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ 
ಕೈಲಾಸವಾಸ ಗೌರೀಶ ಈಶ  
 
ಮನಸು ಕಾರಣವಲ್ಲ ಪಾವ ಪುಣ್ಯಕ್ಕೆಲ್ಲ  
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ 
ದನುಜಗಜ ಮದಹಾರಿ ದಂಡಪ್ರಣಾಮ ಮಾಳ್ಪೆ 
ಮಣಿಸೋ ಈ ಶಿರವನ್ನು ಸಜ್ಜನರ ಚರಣದಲಿ 

ಒಂದು ಪಾತ್ರೆಯಿಂದ ನೀರನ್ನು ಸುರಿಸಿದರೆ ಅದು ಬೀಳುವ ರೀತಿಯನ್ನೂ, ಮತ್ತೊಂದು ಪಾತ್ರೆಯಿಂದ ಎಣ್ಣೆಯನ್ನು ಸುರಿದರೆ ಅದು ಬೀಳುವ ರೀತಿಯನ್ನೂ ಒಟ್ಟಾಗಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. (ಇವನ್ನು ನಾವು ಪ್ರತಿದಿನ ನೋಡುತ್ತಿರುತ್ತೇವೆ. ಗಮನಿಸಿರುವುದಿಲ್ಲ) ಮನಸ್ಸು ಅಲ್ಲಿ-ಇಲ್ಲಿ ಹೋಗದಂತೆ ಒಂದೇ ಧಾರೆಯಾಗಿ ಕೇಂದ್ರೀಕರಿಸಲು ಆ ಶಂಭುವಿನ ಕರುಣೆ ಬೇಕು. 

ಪಂಡಿತ ಭೀಮಸೇನ ಜೋಶಿಯವರು ಹಾಡಿರುವ ಈ ಹಾಡನ್ನು ಇಲ್ಲಿ ಕೇಳಬಹುದು:

https://www.youtube.com/watch?v=KO772laPz3I


******

ಮೇಲಿನ ಹಾಡಿನಲ್ಲಿ "ಮನಸು ಕಾರಣವಲ್ಲ" ಮತ್ತು "ದನುಜ ಗಜ ಮದಹಾರಿ" ಎನ್ನುವ ಪದಗಳ ವಿಶೇಷಾರ್ಥಗಳನ್ನು ಮುಂದೊಮ್ಮೆ ನೋಡೋಣ. 

2 comments:

  1. So happy to read this article. Your parent’s family background, I did not know. Thank you for sharing.

    ReplyDelete
  2. ನಿಮ್ಮ ಲೇಖನದಿಂದ ಎಷ್ಟೋ ವಿಷಯಗಳನ್ನು ಅರಿಯುವಂತಾಗಿದೆ .ಧನ್ಯವಾದಗಳು

    ReplyDelete