ಕಾವ್ಯ ಮೀಮಾಂಸೆಯ ವಿಷಯ ಚರ್ಚಿಸುವಾಗ ವಿದ್ವಾಂಸರು ಆಚಾರ್ಯ ಆನಂದವರ್ಧನ (820-890 AD) ಮತ್ತು ಆಚಾರ್ಯ ಅಭಿನವ ಗುಪ್ತರನ್ನು (950-1016 AD) ಬಹಳ ಕೃತಜ್ಞತೆಯಿಂದ ನೆನೆಯುತ್ತಾರೆ. ಆಚಾರ್ಯ ಅಭಿನವ ಗುಪ್ತರ ಸಹಸ್ರಮಾನೋತ್ಸವ ಆರೇಳು ವರ್ಷಗಳ ಹಿಂದೆ ಆಚರಿಸಲಾಯಿತು. ಕಾಶ್ಮೀರದವರಾದ ಈ ಇಬ್ಬರು ವಿದ್ವನ್ಮಣಿಗಳು ನಮ್ಮ ಪರಂಪರೆಗೆ ಬಹು ದೊಡ್ಡ ಕಾಣಿಕೆಗಳನ್ನು ಕೊಟ್ಟ ದಿವ್ಯ ಪುರುಷರು. ಇಂದಿನ ವಿಜ್ಞಾನ ಪ್ರಪಂಚದ ಸಾಧನ ಸಲಕರಣೆಗಳು ಇಲ್ಲದ ಕಾಲದಲ್ಲಿ ಈ ಪುಣ್ಯಾತ್ಮರು ಮಾಡಿರುವ ಜ್ಞಾನ ಪ್ರಸಾರ ಕಾರ್ಯ ಒಂದು ವಿಸ್ಮಯವೇ ಸರಿ. ಒಬ್ಬ ವ್ಯಕ್ತಿಯು ಒಂದು ಜೀವಮಾನ ಕಾಲದಲ್ಲಿ ಇಷ್ಟು ಸತ್ವ ಮತ್ತು ಗಾತ್ರದ ಕೃತಿಗಳನ್ನು ಹೇಗೆ ರಚಿಸಿದರು ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಂದು ಸಾವಿರ ವರ್ಷಗಳಿಗೂ ಹಿಂದೆಯೇ ಅದ್ಭುತವಾದ ಸಾಧನೆಗಳನ್ನು ಮಾಡಿದ ಇವರಿಗೆ ಸಾದರ ನಮನಗಳನ್ನು ಸಲ್ಲಿಸಿ ಮುಂದೆ ಸಾಗೋಣ.
"ಧ್ವನಿ" ಸಿದ್ಧಾಂತ:
ಆನಂದವರ್ಧನನ "ಧ್ವನ್ಯಾಲೋಕ" ಒಂದು ಮೇರು ಕೃತಿ. ಅಭಿನವ ಗುಪ್ತನು ಈ ಕೃತಿಗೆ "ಧ್ವನ್ಯಾಲೋಕಲೋಚನ" ಎಂಬ ವಿವರವಾದ ವ್ಯಾಖ್ಯಾನವನ್ನು ರಚಿಸಿದ್ದಾನೆ. ಆನಂದವರ್ಧನ ಸೂಚಿಸುವಂತೆ ಕವಿಯೊಬ್ಬ ತನ್ನ ರಚನೆಯಿಂದ ಭಾವತರಂಗಗಳನ್ನು ಹೊರಸೂಸುತ್ತಾನೆ. ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ಕೇಳುವಾಗ ನಮ್ಮ ಸಾಧನವನ್ನು (ರೇಡಿಯೋ ಅಥವಾ ಟ್ರಾನ್ಸಿಸ್ಟರ್ ಸೆಟ್) ಆ ಕೇಂದ್ರದಿಂದ ಬರುವ ತರಂಗಗಳಿಗೆ ಸರಿಯಾಗಿ ಹೊಂದಿಸಬೇಕು. ಇಲ್ಲದಿದ್ದರೆ ಸರಿಯಾದ ಪ್ರಸಾರ ಸಿಗುವುದಿಲ್ಲ. ಅಂತೆಯೇ ಯಾವುದೇ ಕೃತಿಯ ಓದುಗ ಅಥವಾ ಕೇಳುಗ (ಕೃತಿಯನ್ನು ಓದುವ ಅಥವಾ ಅದರ ವಾಚನ/ಗಾಯನ ಕೇಳುವ ವ್ಯಕ್ತಿ) ಆ ತರಂಗಗಳನ್ನು ಮುಟ್ಟದಿದ್ದರೆ ಅವನಿಗೆ ಅದರ ಪೂರ್ಣ ರಸಾನುಭವ ಆಗುವುದಿಲ್ಲ. ಇದು ನಮ್ಮೆಲ್ಲರಿಗೂ ಅನುಭವದಿಂದ ತಿಳಿದ ಸತ್ಯ.
ದೇಶ-ಕಾಲಗಳ ಪರಿಜ್ಞಾನ:
ಕವಿಯು ಸೃಷ್ಟಿಸಿದ ಭಾವ ತರಂಗಗಳಿಗೆ ತನ್ನನ್ನು ಹೊಂದಿಸಿಕೊಳ್ಳುವುದರ ಜೊತೆಗೆ ಓದುಗ/ಕೇಳುಗ ಆ ಕೃತಿ ರಚನೆಯ ದೇಶ ಮತ್ತು ಕಾಲಗಳ ವಿಷಯವನ್ನೂ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ಈ ಹಿನ್ನೆಲೆ ತಿಳಿಯದಿದ್ದಾಗ ಅಲ್ಪ ರಸಾನುಭವ ಆದರೂ ಪೂರ್ಣವಾದ ರಸಾಸ್ವಾದನೆ ಸಾಧ್ಯವಾಗದು. ನಮ್ಮದಲ್ಲದ ಭಾಷೆಯ (Foreign Language) ರಚನೆಗಳನ್ನು ಅವಲೋಕಿಸುವಾಗಲಂತೂ ಈ ದೇಶ ಮತ್ತು ಕಾಲಗಳ ಪ್ರಜ್ಞೆ ಇರಬೇಕಾದದ್ದು ಅತ್ಯಂತ ಅವಶ್ಯಕ.
ದೇಶದ (ಭೌಗೋಲಿಕ) ಪರಿಜ್ಞಾನದ ಉದಾಹರಣೆಗೆ, ತಂದೆ ತಾಯಿಗಳನ್ನು ಕಾವಡಿಯಲ್ಲಿ ಕುಳ್ಳಿರಿಸಿ ಹೆಗಲ ಮೇಲೆ ಹೊತ್ತು ತೀರ್ಥ ಯಾತ್ರೆ ಮಾಡಿಸುವ ಶ್ರವಣ ಕುಮಾರನ ಪರಂಪರೆ ನಮ್ಮದು. "ಉಬಾಸೂಟೇ" ಎನ್ನುವ ಒಂದು ಪದ್ದತಿ ಜಪಾನ್ ದೇಶದಲ್ಲಿ ಕೇಳಿ ಬರುತ್ತದೆ. ಇದರಲ್ಲಿ ವಯಸ್ಸಾದ ತಂದೆ-ತಾಯಿಯರನ್ನೋ ಅಥವಾ ಬಂಧುವನ್ನೋ ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟದ ಅಥವಾ ಕಾಡಿನ ದುರ್ಗಮ ಪ್ರದೇಶದಲ್ಲಿ ಬಿಟ್ಟು ಬರುವ ಉಲ್ಲೇಖವಿದೆ. ಆ ಪರಿಸರದಲ್ಲಿ ಹಿರಿಯ ಜೀವಗಳ ನಿರ್ಯಾಣ ಆಗಲಿ ಎಂದು. ಮುಂದಿನ ತಲೆಮಾರಿನ ಯುವಕರು ಹೀಗೆ ಮಾಡಿದರೆ ಆ ಹಿರಿಯರು ಸಂತೋಷ ಪಡುತ್ತಿದ್ದರು ಎಂದೂ ಹೇಳುತ್ತಾರೆ. ತಾಯಿಯೊಬ್ಬಳು ತನ್ನನ್ನು ಹೀಗೆ ಹೊತ್ತುಕೊಂಡು ಹೋಗುವ ಮಗನಿಗೆ ಹಿಂತಿರುಗಿ ಹೋಗಲು ದಾರಿ ಗೊತ್ತಾಗಲಿ ಎಂದು ಎರಡೂ ಕೈಗಳಿಂದ ಗಿಡಗಳ ಕೊಂಬೆಗಳನ್ನು ಕಿತ್ತು ಹಾಕುತ್ತಾಳೆ. ಈ ರೀತಿಯ ಕವಿತೆ ಓದುವಾಗ ಉಬಾಸೂಟೇ ವಿಷಯ ಗೊತ್ತಿಲ್ಲದಿದ್ದರೆ ಹೇಗಾಗಬೇಡ? ಈ ರೀತಿ ಸಂಪ್ರದಾಯ ನಿಜವಾಗಿ ಇತ್ತೋ ಅಥವಾ ಇಲ್ಲವೋ, ಅದು ಸಾಧುವೋ ಅಲ್ಲವೋ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಎಂಥ ವಿಷಮ ಪರಿಸ್ಥಿತಿಯಲ್ಲೂ ಮಾತೃ ಹೃದಯ ಹೇಗೆ ಯೋಚಿಸಿತು ಎನ್ನುವುದು ಇಲ್ಲಿಯ ರಸ. ಆ ಪರಿಸರದ ಆಚಾರ-ವಿಚಾರಗಳ ತಿಳುವಳಿಕೆ ಇರಬೇಕು ಎನ್ನುವುದನ್ನು ಸೂಚಿಸುವುದಕ್ಕಾಗಿ ಮಾತ್ರ ಈ ಉದಾಹರಣೆ.
ಕಾಲದ ವಿಷಯದಲ್ಲೂ ಇದೆ ರೀತಿಯ ತಿಳುವಳಿಕೆ ಬೇಕಾಗುತ್ತದೆ. ಸತಿ ಸಾವಿತ್ರಿಯಂತೆ ಯಮನ ಹಿಂದೆ ಹೋಗಿಯೂ ಗಂಡನನ್ನು ಉಳಿಸಿಕೊಳ್ಳುವ ಸಮಯ ಒಂದು ಇತ್ತು. ಸೀತೆಗಾಗಿ ಶ್ರೀರಾಮ ಪಟ್ಟ ಪಾಡಿನ ಕಥೆಯೂ ಗೊತ್ತು. ಆ ಕಾಲದ ಮಾನದಂಡವನ್ನು ವಿವಾಹದ ಸಮಯದಲ್ಲೇ ವಿಚ್ಛೇದನಕ್ಕೆ ದಿನ ನಿಗದಿಪಡಿಸುವ ಕಾಲಕ್ಕೆ ಉಪಯೋಗಿಸಲು ಬರುವುದಿಲ್ಲ. ರಸ ಆಸ್ವಾದನೆಯಲ್ಲಿ ದೇಶ-ಕಾಲಗಳ ಪರಿಜ್ಞಾನದ ಮಹತ್ವವನ್ನು ಸೂಚಿಸಲು ಮಾತ್ರ ಈ ಉದಾಹರಣೆ ಎಂದು ಮತ್ತೊಮ್ಮೆ ಹೇಳಬೇಕು. ಇಲ್ಲದಿದ್ದರೆ ವಿಷಯಾಂತರವಾಗುವ ಪ್ರಬಲವಾದ ಸಾಧ್ಯತೆ ಉಂಟು!
ಭಾಷಾಂತರವೋ, ಭಾವಾಂತರವೊ?
ಪರಭಾಷೆಗಳ ಕಾವ್ಯದ ವಿಷಯದಲ್ಲಿ ಯೋಚಿಸುವಾಗ ಆ ಭಾಷೆಗಳ ಪರಿಚಯವಿಲ್ಲದಿದ್ದರೆ ಭಾಷಾಂತರ ಕೃತಿಗಳನ್ನೇ ಆಸರೆಯಾಗಿ ಪಡೆಯಬೇಕಾಗುತ್ತದೆ. ಈ ಪ್ರಸಂಗಗಳಲ್ಲಿ ಭಾಷೆಯ ಜೊತೆಗೆ ಭಾಷಾಂತರದ ತೊಡಕೂ ಸೇರಿಕೊಳ್ಳುತ್ತದೆ. ಭಾಷಾಂತರಕಾರನಿಗೆ ಮೂಲ ಕೃತಿಯ ಭಾಷೆಯ ನೇರ ಪರಿಚಯವಿದ್ದಲ್ಲಿ ಸ್ವಲ್ಪ ವಾಸಿ. ಇಲ್ಲದಿದ್ದಲ್ಲಿ ಮೂಲದ ಭಾಷೆಗೂ ಮತ್ತು ನಾವು ಓದುವ ಭಾಷೆಗೂ ಮಧ್ಯ ಬೇರೊಂದು ಭಾಷೆ ಸೇರಿ ಪರಿಸ್ಥಿತಿ ಇನ್ನಷ್ಟು ಗೋಜಲಾಗುತ್ತದೆ. ಮೂಲ ಭಾಷೆಯ ಸೊಗಡಿನ ಬದಲು ಮಧ್ಯದ ಭಾಷೆಯ ವಾಸನೆ ದೊಡ್ಡದಾಗುವ ಭೀತಿಯೂ ಉಂಟು. ನೇರವಾದ ಭಾಷಾಂತರವಾದರೂ ಭಾಷಾಂತರಕಾರನಿಗೆ ಎರಡೂ ಭಾಷೆಗಳ ಮೇಲೆ ಪ್ರಭುತ್ವ ಇಲ್ಲದಿದ್ದರೆ ಮುಖ್ಯ ರಸಘಟ್ಟಗಳು ಸೋರಿಹೋಗಿ ಬರೀ ಸಿಪ್ಪೆ-ತೊಂಡುಗಳ ಪಾಕ ಸಿಗುವ ಸಾಧ್ಯತೆಯೂ ಇಲ್ಲದಿಲ್ಲ. ಎರಡೂ ಭಾಷೆಗಳ ಚೆನ್ನಾದ ಪರಿಚಯ ಇರುವ, ಸ್ವತಃ ಕವಿಯೂ ಆದ ಭಾಷಾಂತರಕಾರನು ಸಿಕ್ಕರೆ ಅದು ಓದುಗ/ಕೇಳುಗನ ಭಾಗ್ಯವೆಂದೇ ಹೇಳಬೇಕು.
ಥಾಮಸ್ ಕ್ಯಾಂಬೆಲ್ ನ "ಲಾರ್ಡ್ ಅಲ್ಲಿನ್ಸ್ ಡಾಟರ್" ಕವನ:
ಥಾಮಸ್ ಕ್ಯಾಂಬೆಲ್ಲ್ (Thomas Campbell) (1777-1844) ಒಬ್ಬ ಬಹು ಪ್ರತಿಭಾನ್ವಿತ ಸ್ಕಾಟ್ಲೆಂಡ್ ದೇಶದ ಕವಿ. ಈತನು ವಿಲಿಯಂ ವರ್ಡ್ಸವರ್ತ್ (William Wordsworth) ಮತ್ತು ಸ್ಯಾಮ್ಯುಯೆಲ್ ಟೇಲರ್ ಕೊಲೆರಿಜ್ (Samuel Taylor Coleridge) ಮಹಾಕವಿಗಳ ಸಮಕಾಲೀನ. ಸ್ಕಾಟ್ಲೆಂಡ್ ನ (Scottish Lowlands) ಗ್ಲಾಸ್ಗೋ (Glasgow) ನಗರದಲ್ಲಿ ಹುಟ್ಟಿ ಬೆಳೆದವನು. ಈತನ ಅನೇಕ ಕೃತಿಗಲ್ಲಿ "The Ballad of Lord Ullin's Daughter" ಒಂದು ಪ್ರಸಿದ್ಧವಾದ ನೀಳ್ಗವನ. ಗ್ಲಾಸ್ಗೋ ನಗರದ ವಾಯುವ್ಯದಲ್ಲಿ (northwest) ಸುಮಾರು ೧೦೦ ಮೈಲುಗಳ ದೂರದಲ್ಲಿರುವ Isle of Mull ಪ್ರದೇಶಕ್ಕೆ ಭೇಟಿ ನೀಡಿದಾಗ ಪ್ರೇರಿತನಾಗಿ ಈ ಕೃತಿ ರಚಿಸಿದ್ದಾನೆ ಎಂದು ಹೇಳಲಾಗುತ್ತದೆ.
ಈ ಭೂಭಾಗದಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದ ಹಿನ್ನೀರು ಚಾಚಿಕೊಂಡು ಭೂಪ್ರದೇಶದಿಂದ ಸುತ್ತುವರಿದು ಅನೇಕ ಸರೋವರಗಳು ನಿರ್ಮಾಣವಾಗಿವೆ. Loch Gyle ಅಥವಾ Loch na Keal ಅಂತಹ ಒಂದು ಸರೋವರ. ಉಲ್ವ (Ulva) ಎನ್ನುವ ಭೂಭಾಗವನ್ನು ಉತ್ತರದ ಮುಲ್ ನಿಂದ (Gribun on Mull) ಈ ಸರೋವರ ಬೇರ್ಪಡಿಸುತ್ತದೆ. ಈ ಕವನದಲ್ಲಿ ಬಣ್ಣಿಸಿರುವುದು ಇದೇ ಪ್ರದೇಶವನ್ನು,
ಕನ್ನಡದ ಕಣ್ವ ಎಂದು ಖ್ಯಾತರಾದ ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಈ ಇಂಗ್ಲಿಷ್ ಕವನವನ್ನು "ಕಾರಿ ಹೆಗ್ಗಡೆಯ ಮಗಳು" ಎಂಬ ಹೆಸರಿಟ್ಟು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.
ಕೃತಿಯ ಹಿನ್ನೆಲೆ:
ಉಲ್ವ ಪ್ರದೇಶದ ಅಧಿಪತಿ ಅಥವಾ ಪಾಳೇಗಾರನ (Lord Ullin) ಚಲುವೆ ಮಗಳು ಸರೋವರದ ಉತ್ತರ ಭಾಗದ ದ್ವೀಪವೊಂದರ ಪಾಳೇಗಾರನ ತರುಣ ಮಗನನ್ನು ಪ್ರೇಮಿಸಿ ಮದುವೆಯಾಗಲು ಇಷ್ಟ ಪಡುತ್ತಾಳೆ. ಈ ಸಂಭಂಧ ಹುಡುಗಿಯ ತಂದೆಗೆ ಇಷ್ಟವಾಗುವುದಿಲ್ಲ. ಪ್ರಿಯಕರನನ್ನು ಬಿಡಲಾಗದ ಯುವತಿ ಅವನ ಜೊತೆಯಲ್ಲಿ ಪಲಾಯನ ಮಾಡುತ್ತಾಳೆ. ಇದರಿಂದ ಕುಪಿತನಾದ ತಂದೆ ತನ್ನ ನೆಚ್ಚಿನ ರಾವುತರನ್ನು (ಕುದುರೆಯ ಮೇಲೆ ಕುಳಿತು ಯುದ್ಧ ಮಾಡುವ ಸೈನಿಕರು) ಅವರ ಹಿಂದೆ ಛೂ ಬಿಡುತ್ತಾನೆ. ಮಗಳ ಪ್ರಿಯಕರನನ್ನು ಕೊಂದು ಮಗಳನ್ನು ಹಿಂದೆ ಕರೆದುಕೊಂಡು ಬರುವಂತೆ ಆಜ್ಞಾಪಿಸುತ್ತಾನೆ. ಅವರ ಹಿಂದೆ ತಾನೂ ಹೊರಡುತ್ತಾನೆ ಕೂಡ.
ಭೀತಿಯಿಂದ ಯುವ ಜೋಡಿ ಪಲಾಯನ ಮಾಡುತ್ತದೆ. ಕಣಿವೆಗಲ್ಲಿ ಕಣ್ಣಾಮುಚ್ಚಾಲೆಯಂತೆ ಮೂರು ದಿನ ಪಯಣಿಸಿದ ನಂತರ ಸರೋವರದ ದಡಕ್ಕೆ ಬರುತ್ತಾರೆ. ಚಂಡಮಾರುತದ ವಾತಾವರಣ. ಸರೋವರ ದಾಟಿ ಆ ದಡ ತಲುಪಿಬಿಟ್ಟರೆ ಯುವಕನ ಕಡೆಯ ಜನರಿಂದ ರಕ್ಷಣೆ ಸಿಗುತ್ತದೆ. ದಾಟದಿದ್ದರೆ ರಾವುತರ ಕೈಲಿ ಯುವಕನ ಸಾವು ಖಂಡಿತ. ಚಂಡಮಾರುತದ ಸಮಯದಲ್ಲಿ ಯಾರೂ ದೋಣಿ ಹಾಯಿಸಲು ತಯಾರಿಲ್ಲ. ಅಲ್ಲಿ ಇದ್ದ ಒಬ್ಬನೇ ಅಂಬಿಗನನ್ನು ಯುವಕ ಆ ದಡಕ್ಕೆ ಕರೆದೊಯ್ಯುವುದಕ್ಕೆ ಕೇಳುವುದರಿಂದ ಕವನ ಪ್ರಾರಂಭ ವಾಗುತ್ತದೆ.
ತಂದೆ-ಮಗಳ ಸಂಭಂಧ, ವಿಷಮ ವಿವಾಹ, ಮನಸ್ಸುಗಳು ಕೊಡದಿದ್ದಾಗ ಕುಟುಂಬಗಳ ನಡುವೆ ಬರುವ ಗುದ್ದಾಟಗಳು, ಈ ಎಲ್ಲ ಗೋಜಲಿನ ನಡುವೆ ಆಗುವ ದುರಂತ - ಇದು ಈ ಕವನದ ವಸ್ತು. ಮಗಳ ಮೇಲಿನ ಅತಿಯಾದ ಪ್ರೀತಿಯೇ ಹೇಗೆ ಕೋಪಕ್ಕೆ ಕಾರಣವಾಗಿ ಕಡೆಗೆ ಆ ಪ್ರೀತಿಯ ಮಗಳ ಪ್ರಾಣಕ್ಕೇ ಸಂಚಕಾರ ತಂದದ್ದು ವರ್ಣಿತವಾಗಿದೆ. ಕಡೆಯ ಹಂತದಲ್ಲಿ ಮಗಳ ಕಷ್ಟ ಕಂಡ ತಂದೆಯ ಕೋಪ ಕರುಣೆಯಾಗಿ ಪರಿವರ್ತಿತವಾಗುತ್ತದೆ. ಆದರೆ ಸಮಯ ಮಿಂಚಿ ದುರಂತದಲ್ಲಿ ಪರ್ಯವಸಾನ ಆಗುತ್ತದೆ.
ತಂದೆ-ತಾಯಿಯರ ಇಷ್ಟಕ್ಕೆ ವಿರುದ್ಧವಾಗಿ ಮಕ್ಕಳು ವಿವಾಹ ಮಾಡಿಕೊಂಡಾಗ ಉಂಟಾಗುವ ಪರಿಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಯಾರು ಸರಿ, ಯಾರು ತಪ್ಪು ಅನ್ನುವ ಪ್ರಶ್ನೆಗಿಂತ ಸಮನ್ವಯವಿಲ್ಲದೆ ವಿರಸ ಮೂಡಿ ದುರಂತ ಎದುರಾಗುತ್ತದೆ. ಇಂತಹ ಸನ್ನಿವೇಶಗಳನ್ನು ಎದುರಿಸಿದವರೇ ಅದನ್ನು ತಿಳಿಯಬಲ್ಲರು.
ಕಾರಿ ಹೆಗ್ಗಡೆಯ ಮಗಳು:
ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳ ಮೇಲೆ ಸಂಪೂರ್ಣ ಪ್ರಭುತ್ವ ಹೊಂದಿ ಎರಡೂ ಭಾಷೆಗಳನ್ನು ಶಿಷ್ಯರಿಗೆ ಪಾಠ ಹೇಳಿದ್ದಲ್ಲದೇ ಅನೇಕ ಘಟಾನುಘಟಿ ಸಾಹಿತಿಗಳನ್ನು ತಯಾರು ಮಾಡಿ ಕೊಟ್ಟ ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಅನೇಕ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ಅವರ ಸಾಹಿತ್ಯ ಕೃಷಿ ಅಗಾಧವಾದದ್ದು. ಹಳಗನ್ನಡ ಕೃತಿಗಳನ್ನು ನಾಟಕಗಳಾಗಿ ರೂಪಾಂತರ ಮಾಡಿ ಎಲ್ಲರೂ ಅವುಗಳ ಸೊಗಸನ್ನು ಅರಿಯುವ ಅನುಕೂಲ ಮಾಡಿಕೊಟ್ಟವರು. ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ಸಾಹಿತ್ಯ ರಚನೆಯ ಸಮಯವನ್ನು ಕನ್ನಡದ ಬೆಳವಣಿಗೆಗೆ ವಿನಿಯೋಗಿಸಿ ಅನೇಕ ಕವಿಗಳನ್ನೂ, ಲೇಖಕರನ್ನೂ ಗುರುತಿಸಿ ಕನ್ನಡಕ್ಕೆ ಕೊಟ್ಟವರು.
"ಕಾರಿ ಹೆಗ್ಗಡೆಯ ಮಗಳು" ಕವನವನ್ನು ನೋಡಿದಾಗ ಇದು ಒಂದು ಇಂಗ್ಲಿಷ್ ಕವನದ ಭಾಷಾಂತರ ಎಂದು ಅನಿಸದು. ಮೂಲ ಕೃತಿಯನ್ನು ಪೂರ್ತಿ ಅರಗಿಸಿಕೊಂಡು ಹೊಸ ಕನ್ನಡ ಕವನಕ್ಕೆ ಜನ್ಮ ಕೊಟ್ಟಿದ್ದಾರೆ ಶ್ರೀಕಂಠಯ್ಯನವರು.
ಶ್ರೀಯವರ ಕೈಯ್ಯಲ್ಲಿ ಲಾರ್ಡ್ ಅಲ್ಲಿನ್ ಕಾರಿ ಹೆಗ್ಗಡೆಯಾಗುತ್ತಾನೆ. ಸ್ಕಾಟ್ಲೆಂಡಿನ ಸಮುದ್ರ ಭಾಗ ನಮ್ಮ ಕಾರವಾರದ ಬಳಿಯ ಕಡಲಾಗುತ್ತದೆ. ಸ್ಕಾಟಿಷ್ ಹೈಲ್ಯಾಂಡ್ ಪಡುವದಿಬ್ಬ ಆಗುತ್ತದೆ. ಸಿಲ್ವರ್ ಪೌಂಡ್ ಕೇಳಿದ ಹೊನ್ನು ಆಗುತ್ತದೆ!