ವಿಶಾಲವಾದ ಸಾಹಿತ್ಯದಲ್ಲಿ ಭಕ್ತಿ ಸಾಹಿತ್ಯಕ್ಕೆ ಒಂದು ವಿಶೇಷ ಸ್ಥಾನವಿದೆ. ಇದು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ನೋಡಬಹುದಾದ ವಿಷಯ. ಭಕ್ತಿ ಸಾಹಿತ್ಯಕ್ಕೆ ಭಾಷೆಯ ಹಂಗಿಲ್ಲ. ಭಾಷೆ ಉಪಯೋಗಿಸುವ ಜನರ ಭಾವನೆಗಳಂತೆ ತಕ್ಕಂತೆ ಈ ಸಾಹಿತ್ಯ ಹರಡಿಕೊಂಡಿದೆ. ದೈವದ ರೂಪ, ಆಕಾರ, ನಂಬಿಕೆ ಬೇರೆ ಬೇರೆ ಇರಬಹುದು. ಆದರೆ ಈ ಸಾಹಿತ್ಯದ ಮೂಲ ಸ್ರೋತ ಭಕ್ತಿಯೇ. "ಅವರವರ ಭಾವಕ್ಕೆ ಅವರವರ ಭಕುತಿಗೆ" ಎನ್ನುವಂತೆ ಆಯಾ ದೇಶ ಮತ್ತು ಭಾಷೆಗಳಿಗೆ ತಕ್ಕಂತೆ, ಸಾಹಿತ್ಯದ ಜೊತೆಯಾಗಿ ಸಂಗೀತವೂ ಸೇರಿ ಈ ಸಾಹಿತ್ಯ ಪ್ರಕಾರ ರೂಪುಗೊಂಡಿದೆ.
ನಮ್ಮ ಭಾರತ ದೇಶದಲ್ಲಂತೂ ಭಕ್ತಿ ಸಾಹಿತ್ಯ ವಿಪುಲವಾಗಿ ಬೆಳೆದಿದೆ ಎಂದು ಧಾರಾಳವಾಗಿ ಹೇಳಬಹುದು. ದೇಶ ಸಂಚಾರ ಮಾಡಿ, ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಧನ್ಯತೆ ಹೊಂದುವ ಜನರಾಶಿ ನಿಸ್ಸಂಕೋಚವಾಗಿ ಆಯಾ ಸ್ಥಳಗಳ ಸಂಕೀರ್ತನೆಗಳಲ್ಲಿ ಭಾಗಿಯಾಗುವುದು ಸರ್ವೇಸಾಮಾನ್ಯ. ಸಂಗೀತಕ್ಕೆ ಭಾಷೆಯಿಲ್ಲ. ಭಕ್ತಿಗಂತೂ ದೇಶ, ಕಾಲ, ಭಾಷೆ, ಸಂಗೀತಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಉಂಟು. ಈ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ , ಅದರಲ್ಲೂ ಧಾರ್ಮಿಕ ಹಿನ್ನೆಲೆ ಇರುವ ಕೂಡುಹಗಳಲ್ಲಿ, ಭಕ್ತಿಗೀತೆಗಳು ವಿಜೃಂಭಿಸುತ್ತವೆ. ದೇಶದ ಹೆಸರಾಂತ ವಿದ್ವಾಂಸರು ಅನೇಕ ಭಾಷೆಗಳ ಗೀತೆಗಳನ್ನು, ಕೀರ್ತನೆಗಳನ್ನು, ಅಭಂಗಗಳನ್ನು ಒಂದೇ ಕಾರ್ಯಕ್ರಮದಲ್ಲಿ ರಸಿಕರಿಗೆ ಉಣಬಡಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಭಕ್ತಿ ಸಾಹಿತ್ಯದಲ್ಲಿ ಭಕ್ತರ ಕಥೆಗಳನ್ನು ತಿಳಿಸುವ ದೀರ್ಘ ಕವನಗಳಿಗೆ ಒಂದು ವಿಶಿಷ್ಟ ಸ್ಥಾನ ಉಂಟು. ವಿಶೇಷವಾಗಿ ಇವುಗಳಲ್ಲಿರುವ ಗೇಯ (ಹಾಡಬಹುದಾದ) ಗುಣಗಳಿಂದ, ಕೆಲವು ವರ್ಷಗಳ ಹಿಂದಿನವರೆಗೂ ಹೆಣ್ಣು ಮಕ್ಕಳು ತಮ್ಮ ಬೆಳಗಿನ ನಿತ್ಯ ಕರ್ಮಗಳ ಸಮಯದಲ್ಲಿ ಹಾಡುತ್ತಾ ಕೆಲಸ ಮಾಡುವ ಪದ್ಧತಿ ಇತ್ತು. ಈಚೆಗಿನ ಜೀವನ ಕ್ರಮದ ಬದಲಾವಣೆಯಿಂದ ಈ ಅಭ್ಯಾಸ ತಪ್ಪಿ ಹೋಗಿದೆ. ಧ್ರುವ ಚರಿತ್ರೆ, ಪ್ರಹ್ಲಾದ ಚರಿತ್ರೆ, ಗಜೇಂದ್ರ ಮೋಕ್ಷ, ದ್ರೌಪದಿ ಮಾನಸಂರಕ್ಷಣೆ ಮುಂತಾದವು ಇಂತಹ "ಖಂಡ ಕಾವ್ಯ"ಗಳಲ್ಲಿ ಪ್ರಮುಖವಾದವು. ಸುಧಾಮ ಚರಿತ್ರೆಯೂ ಈ ಪಟ್ಟಿಯಲ್ಲಿ ಸೇರಿದ ಒಂದು ದೀರ್ಘ ಕವನ.
ಕನ್ನಡ ಸಾಹಿತ್ಯದಲ್ಲಿ ಈ ಸುಧಾಮ ಚರಿತ್ರೆಯ ಹಲವು ರೂಪಗಳು ಪ್ರಚಲಿತವಿವೆ. ಇವುಗಳಲ್ಲಿ ಅತಿ ಮುಖ್ಯವಾದವು ಶ್ರೀ ಪುರಂದರ ದಾಸರ ಮತ್ತು ಹರಪನಹಳ್ಳಿ ಭೀಮವ್ವನ ರಚನೆಗಳು. ಪುರಂದರದಾಸರ ಕೃತಿ ಸುಮಾರು ಹತ್ತು ನಿಮಿಷಗಳ ಕಾಲದಲ್ಲಿ ಹಾಡಬಹುದಾದ ರಚನೆ. ಹರಪನಹಳ್ಳಿ ಭೀಮವ್ವನ ಕೃತಿ ಸ್ವಲ್ಪ ದೊಡ್ಡದು. ಇದನ್ನು ಹಾಡಲು ಸುಮಾರು ಮೂವತ್ತು ನಿಮಿಷಗಳ ಸಮಯ ಬೇಕು. ಭೀಮವ್ವನ ಕೃತಿ ಹೆಚ್ಚೂ ಕಡಿಮೆ ಪುರಂದರದಾಸರ ಕೃತಿಯ ನೆರಳಿನಲ್ಲೇ ಸಾಗುತ್ತದೆ. ಆದರೆ ಭೀಮವ್ವನ ಕೃತಿಯಲ್ಲಿ ಅನೇಕ ವಿಶೇಷ ಅಂಶಗಳನ್ನು ಕಾಣಬಹುದು. ಅವುಗಳ ಮೇಲೆ ಸ್ವಲ್ಪ ಗಮನ ಹರಿಸುವ ವಿಚಾರವನ್ನು ಇಲ್ಲಿ ಮಾಡಲಾಗಿದೆ.
ಹರಪನಹಳ್ಳಿ ಭೀಮವ್ವನ ಜೀವನ
ಮೈಸೂರು ವಿಶ್ವವಿದ್ಯಾನಿಲಯವು ೧೯೮೪ರಲ್ಲಿ ಡಾ. ಟಿ ಏನ್ ನಾಗರತ್ನ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಪುಸ್ತಕದಿಂದ ಭೀಮವ್ವನ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ. ಭೀಮವ್ವ (೧೮೨೩-೧೯೦೨) ತುಂಗಭದ್ರಾ ನದಿಯ ಸುತ್ತಮುತ್ತ ಜೀವಿಸಿದ್ದಳು. ಹೊಸಪೇಟೆಯ ಪರಿಸರದಲ್ಲಿ ಜೀವಿಸಿದ್ದರ ಪರಿಣಾಮ ಅಲ್ಲಿನ ಭಕ್ತಿ ಸಾಹಿತ್ಯದ ಪ್ರಭಾವವನ್ನು ಆಕೆಯ ಕೃತಿಗಳ ಮೇಲೆ ಕಾಣಬಹುದು. ಆಕೆಗೆ ಮದುವೆಯಾದಾಗ ಕೇವಲ ೧೧ ವರ್ಷ ವಯಸ್ಸು. ೪೫ ವಯಸ್ಸಿನ ಮೂರು ಬಾರಿ ವಿಧುರನಾದ ವ್ಯಕ್ತಿಯ ನಾಲ್ಕನೇ ಹೆಂಡತಿಯಾಗಿ, ಎರಡು ಮಕ್ಕಳ ತಾಯಿ ಆದಳು. ೩೬ನೆಯ ವಯಸ್ಸಿನಲ್ಲಿ ವಿಧವೆಯಾಗಿ ಆಗಿನ ಸಮಾಜದ ಪದ್ಧತಿಯಂತೆ ತಲೆ ಬೋಳಿಸಿ ಮಡಿ ಹೆಂಗಸು ಮಾಡಿದರು. ಮುಂದಿನ ೪೩ ವರ್ಷಗಳು ತಣ್ಣೀರು ಸ್ನಾನ, ಒಂದು ಹೊತ್ತಿನ ಊಟ, ಪರರ ಸೇವೆಯಲ್ಲಿ ಜೀವನ ಸವೆಸಿದಳು. ತನ್ನ ವೈಯ್ಯುಕ್ತಿಕ ಬದುಕು ಹೀಗೆ ನಡೆದರೂ ೧೪೫ ಕೃತಿಗಳು ರಚನೆ ಮಾಡಿದಳು. ಭೀಮವ್ವನ ರಚನೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿರಬಹುದಾದರೂ ಲಬ್ಧವಿಲ್ಲ. ಎರಡೇ ಸಾಲುಗಳ ಕೃತಿಯಿಂದ ೧೯೩ ಪದ್ಯಗಳ ಸುಧಾಮನ ಹಾಡಿನವರೆಗೆ ರಚನೆ ಮಾಡಿದ್ದಾಳೆ.
'ಭೀಮೇಶ ಕೃಷ್ಣ" ಎನ್ನುವ ಅಂಕಿತದಿಂದ ಅವಳ ಕೃತಿಗಳು ಗುರುತಿಸಲ್ಪಡುತ್ತವೆ. ವಿದ್ಯಾಭ್ಯಾಸದ ಅವಕಾಶವಿಲ್ಲದ, ಬದುಕಿನಲ್ಲಿ ಬರಿ ಕಷ್ಟಗಳನ್ನೇ ಕಂಡ ಜೀವನ ಆದರೂ ತುಂಬು ಉತ್ಸಾಹದ ಕಾರಂಜಿಗಳನ್ನು ಅವಳ ಕೃತಿಗಲ್ಲಿ ಕಾಣಬಹುದು. ಸುಧಾಮನ ಹಾಡು ಅವಳ ದೊಡ್ಡ ಕೃತಿ. ಅದರಲ್ಲಿರುವ ಕಾವ್ಯ ಗುಣಗಳನ್ನು ನೋಡಿದರೆ ಸರಿಯಾದ ಪರಿಸರ ಸಿಕ್ಕಿದ್ದರೆ ಅವಳು ಎಂತಹ ಕವಯಿತ್ರಿ ಆಗಬಹುದಿತ್ತು ಎಂದು ಸುಳಿವು ಸಿಗುತ್ತದೆ; ವಿಷಾದವೂ ಆಗುತ್ತದೆ.
ಸುಧಾಮನ ಹಾಡಿನ ವಿಶೇಷಗಳು
ಈ ಹಾಡಿನ ಉದ್ದಕ್ಕೂ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳ ಸೊಗಸಾದ ಸರಮಾಲೆ ಕಾಣಸಿಗುತ್ತದೆ. ವ್ಯಂಜನಾರ್ಥಗಳು ಈ ಪುಟ್ಟ ಕೃತಿಯಲ್ಲೂ ಎದ್ದು ಕಾಣುತ್ತವೆ. (ಈಗಿನ ಕನ್ನಡ ಪ್ರಯೋಗದಲ್ಲಿ ವ್ಯಂಗ್ಯ ಅನ್ನುವ ಪದಕ್ಕೆ ಒಂದು ರೀತಿಯ ಸೊಟ್ಟ ಮಾತು ಅಥವಾ ಹೀಯಾಳಿಸುವ ಭಾಷೆ ಅನ್ನುವ ಅರ್ಥ ಇದೆ. ಆದರೆ ವಾಸ್ತವವಾಗಿ ವ್ಯಂಗ್ಯಾರ್ಥ ಅಂದರೆ ವಿಶೇಷವಾದ ಅರ್ಥ ಎಂದು ತಿಳಿಯಬೇಕು. ಕೇವಲ ಪದಗಳು ಹೇಳುವುದಕ್ಕಿಂತ ಹೆಚ್ಚಿನ ಅರ್ಥ ವ್ಯಂಗ್ಯಾರ್ಥ ಸೂಚಕ). ಇದಕ್ಕೆ ಸುಧಾಮನ ಹಾಡಿನ ಒಂದು ಉದಾಹರಣೆ ನೋಡಬಹುದು:
"ಲಕ್ಕುಮೇಷನ ದರ್ಶನಕ್ಕೆ ಹೋಗಲಿಕ್ಕೆ ಮೂರು ಮುಕ್ಕು ಅವಲಕ್ಕಿ ತಿರಿದು ತ೦ದು ಕೊಟ್ಟಳು
ಅದನ್ನು ಗ೦ಟು ಕಟ್ಟಿಕೊ೦ಡು ಬಗಲೊಳಗಿಟ್ಟುಕೊ೦ಡು ನಗರಧರನ ನಗರಕ್ಕಾಗಿ ಬರುತಲಿದ್ದನು"
ಕೃಷ್ಣನನ್ನು ನೋಡಹೊರಡುವಾಗ, ದೊಡ್ಡವರನ್ನು ನೋಡಲು ಹೋಗುವಾಗ ಬರಿಗೈಲಿ ಹೋಗಬಾರದು ಅನ್ನುವುದು ಪದ್ದತಿ, ಅದಕ್ಕೆ ಏನಾದರೂ ನಜರು ಕೊಡು ಎಂದು ಹೆಂಡತಿಯನ್ನು ಕೇಳುತ್ತಾನೆ ಸುದಾಮ. (ನಜರು ಉರ್ದು ಭಾಷೆಯ ಪದ. ಆದರೆ ಉತ್ತರ ಕರ್ನಾಟಕದಲ್ಲಿ ಇಂತಹ ಅನೇಕ ಪದಗಳು ಕನ್ನಡದಲ್ಲಿ ಸೇರಿಹೋಗಿವೆ) ಮನೆಯಲ್ಲಿ ಏನೂ ಇಲ್ಲ. ಅವಳು ಯಾರಲ್ಲೋ ಬೇಡಿ ಮೂರು ಹಿಡಿ ಅವಲಕ್ಕಿ ತಂದು ಕೊಡುತ್ತಾಳೆ. ಅದನ್ನೇ ಗಂಟು ಕಟ್ಟಿ ಹೆಗಲ ಮೇಲೆ ಹೊತ್ತು ಹೊರಡುತ್ತಾನೆ. ನೋಡಹೋಗುವುದು ಯಾರನ್ನು? ಭೀಮವ್ವ ಉಪಯೋಗಿಸಿದ ಪದ "ನಗಧರ" ಎಂದು. ಕೃಷ್ಣನ ಅನೇಕ ಹೆಸರುಗಳಲ್ಲಿ ಯಾವುದಾದರೂ ಬಳಸಬಹುದಿತ್ತು. ನಗ ಅಂದರೆ ಬೆಟ್ಟ ಅಥವಾ ಪರ್ವತ. ಕೃಷ್ಣ ಗೋವರ್ಧನ ಗಿರಿ ಹೊತ್ತವನು. ಜೊತೆಗೆ ಲಕ್ಕುಮೇಷ. ಸಕಲ ಐಶ್ವರ್ಯ ಕೊಡುವ ಲಕ್ಷ್ಮೀದೇವಿಯ ಗಂಡ. ತಿರಿದು ತಂದ, ಕಡಲೆ, ಒಗ್ಗರಣೆ ಇತ್ಯಾದಿ ಏನೂ ಇಲ್ಲದ ಒಣ ಅವಲಕ್ಕಿ. ಅದೂ ಕೇವಲ ಮೂರು ಹಿಡಿ. ಹೆಗಲ ಮೇಲೆ ಇಂತಹ ಅವಲಕ್ಕಿ. ಅವನಾದರೋ ಪರ್ವತವನ್ನೇ ಹೊತ್ತ ಲಕ್ಷ್ಮೀಪತಿ. ಈ ವ್ಯಂಜಕಾರ್ಥವನ್ನು ಸೊಗಸಾಗಿ ಮೇಲಿನ ಎರಡು ಸಾಲುಗಲ್ಲಿ ಕೊಡುತ್ತಾಳೆ ಭೀಮವ್ವ.
ಮೊದಲಿಗೆ ಗಣೇಶ ಮತ್ತು ಸರಸ್ವತಿಯನ್ನು ನೆನೆಯುತ್ತಾಳೆ. "ಸರ್ಪಭೂಷಣ ಸುತ" ಮತ್ತು "ಅಜನ ಸತಿ". ಸುದಾಮ ನಾನು ಬಡವ, ನನಗಾರೂ ನೆಂಟರಿಷ್ಟರು ಇಲ್ಲ ಅನ್ನುತ್ತಾನೆ. ಆದರೆ "ಮಾ-ಧವ" ಇದ್ದಾನೆ. ಮಾ ಅಂದರೆ ಲಕ್ಷ್ಮೀದೇವಿ. ನಾನು ಬಡವನಾದರೂ ನನ್ನೊಡನೆ ಸಕಲ ಸಂಪತ್ತು ಕೊಡುವ ಲಕ್ಷ್ಮೀಪತಿ ಇದ್ದಾನೆ!
ಭೀಮವ್ವನ ಈ ಹಾಡಿನ ಮುಖ್ಯ ರಸ "ಕರುಣ ರಸ". ಅದೇ ಭಕ್ತಿರಸವಾಗಿ ಹರಿದು ಬಂದಿದೆ. ಆದರೆ ಇದರ ಜೊತೆಯಾಗಿ ಉದ್ದಕ್ಕೂ ಶೃಂಗಾರ ಮತ್ತು ಹಾಸ್ಯ ರಸಗಳನ್ನು ಉಣಬಡಿಸುತ್ತಾಳೆ. ಕೃಷ್ಣನ ಅಷ್ಟ ಮಹಿಷಿಯರ ಜೊತೆಯಾ ದಾಂಪತ್ಯದ ಸುಳಿವು ಕೊಡುವಾಗ ಹೇರಳವಾಗಿ ಶೃಂಗಾರ ರಸವನ್ನು ಕಾಣಬಹುದು. ರುಕ್ಮಿಣಿ, ಸತ್ಯಭಾಮೆಯರ ಜೊತೆಯ ಸಲ್ಲಾಪ, ದ್ವಾರಕೆಯಲ್ಲಿನ ವಾತಾವರಣ ಶೃಂಗಾರ ರಸಕ್ಕೆ ಪೂರಕ:
ಮೂರನೆ ಮುಕ್ಕಿಗೆ ನಾರಿ ರುಕ್ಮಿಣಿ ಬ೦ದು ಕೃಷ್ಣ ಏನು ವಿಪ್ರಗೆ ಕೊಡುವೆ ಎನುತ ಕರವ ಪಿಡಿದಳು |
ಭಾವನೋರು ತ೦ದ ಬಹುದೂರದ ಪದಾರ್ಥವು ತಾವು ಸವಿನೋಡುವದಾವ ನೀತಿಯು |
ಅಕ್ಕ ಕಳುಹಿಸಿದ ಅವಲಕ್ಕಿ ನಮಗಿಲ್ಲದಾ೦ಗ ಮುಕ್ಕಿಬಿಡುವಿರಿ ಎನುತ ನಕ್ಕಳಾಗಲೆ |
ಇಷ್ಟು ಮ೦ದಿಯೊಳಗ ನೀ ಮುಷ್ಠಿ ಹಿಡಿದ ಕಾರಣ ದಿಟ್ಟತನವ ಎಲ್ಲಿ ಕಲಿತೆ ಹೇಳು ಎ೦ದನು |
ಸರ್ವರೊಳಗೆ ಅಧಿಕವಾದ ಗರ್ವಿನಾ ರುಕ್ಮಿಣಿಗೆ ಕರೆದು ಬುಧ್ಧಿ ಹೇಳಬಾರೆ ಸತ್ಯಭಾಮೆಗೆ೦ದನು |
ರ೦ಗ ನಿನ್ನ ಪಟ್ಟದರ್ಧಾ೦ಗಿನಿಯಾದ ರುಕ್ಮಿಣಿಗೆ ಮು೦ಗೈ ಹಿಡಿಯಲಿಕ್ಕೆ ಯಾರ ಭಯವು ಯಾತಕೆ೦ದಳು |
ವನಧಿಪಾಲ ಭೀಷ್ಮಕಾನ ಮಗಳು ಮುದ್ದು ರುಕ್ಮಿಣೀಗೆ ಪಶುವ ಕಾಯ್ವ ಗೊಲ್ಲರ೦ಜಿಕೆ ಯಾತಕೆ೦ದಳು |
ಹಾಲಶರಧಿ ಲಕ್ಷ್ಮೀ ಹುಟ್ಟಿದಾಲಯವನೆ ಸೇರಿದ ಗೋಪಾಲಕರ ಭಯವು ನಮಗೆ ಯಾತಕೆ೦ದಳು |
ವ೦ಕಿ ತೋಳ ಪಿಡಿದ ವಯ್ಯಾರಿ ಸತ್ಯಭಾಮನ ಅ೦ಕದಲ್ಲಿ ಕುಳ್ಳಿರಿಸಿಕೊ೦ಡನಾಗ ಮೋಹದಿ |
ಎನ್ನ ಭಕ್ತರಲ್ಲಿ ಪ್ರೇಮ ನಿನಗ ಉ೦ಟಾದರ ಇನ್ನೊ೦ದು ಮುಕ್ಕು ಕೊಡುವೆ ಬಾರೆ ಎ೦ದನು |
ಬಾರೆ ಬಾ ರುಕ್ಮಿಣಿ ಭಾಮೆ ಎರಗಳಿದ್ದ ಮೇಲೆ ನೀಡ ನಿನ್ನ ಕರಗಳೊಡ್ಡಿ ನೀಡುವೆ ಎ೦ದನು |
ಭೀಮವ್ವನ ಊಟ-ತಿಂಡಿಗಳ ವರ್ಣನೆಯೇ ಒಂದು ಸೊಗಸು. ಕುಡಿಯ ಬಾಳೆಲೆಯ ಹಾಕಿ ಅನ್ನುತ್ತಾಳೆ. ಬಡಿಸಿದ ಪದಾರ್ಥಗಳ ಜೊತೆಯಲ್ಲಿ ಬಡಿಸಿದ ಕೃಷ್ಣನ ಸತಿಯರ ವಿವರವೂ ಉಂಟು. ಸುದಾಮನಿಗೆ ಬಡಿಸಲಿಕ್ಕೆ ಯಾರೋ ಕೆಲಸದವರೂ ಅಡಿಗೆಯವರೂ ಬಂದದ್ದಲ್ಲ. ಎಂಟು ಮಂದಿ ಪಟ್ಟದ ಸತಿಯರ ಸಾಲು ಒಬ್ಬನಿಗೆ ಬಡಿಸಲು ನಿಲ್ಲುತ್ತಾರೆ:
ಕುಡಿಯ ಬಾಳೆ ಎಲೆಯ ಹಾಕಿ ನಡುವೆ ಜ್ಯೋತಿ ತ೦ದಿರಿಸಿ ಕಡಲಿ, ಕೋಸ೦ಬ್ರಿ ಉಪ್ಪಿನಕಾಯಿ ರಸಗಳು ,
ಉಪ್ಪು ಉಪ್ಪಿನಕಾಯಿ ಹಪ್ಪಳ ಸ೦ಡಿಗೆ ಮಿತ್ರ ಜಾ೦ಬವತೆಯರು ಬಡಿಸುತ್ತಿದ್ದರು |
ರುಬ್ಬಿದಾಆಂಬೊಡೆಯು, ಉಬ್ಬಿದ ಗುಳ್ಳೂರಿಗೆ, ಭದ್ರೆ ಜಾ0ಬವ0ತೆಯರು ಬಡಿಸುತ್ತಿದ್ದರು |
ಹಾಲು ತುಪ್ಪ ಮ೦ಡಿಗೆ ಮ್ಯಾಲೆ ಬೆಳ್ಳ ಸಕ್ಕರೆ ಭಾಮೆ ರುಕ್ಮಿಣಿಯರು ತ೦ದು ಬಡಿಸುತ್ತಿದ್ದರು |
ದು೦ಡು ಚಕ್ಕುಲಿ, ಫೇಣಿ, ಉ0ಡಿ, ಖರ್ಚಿಕಾಯಿಗಳು , ಉ೦ಡು ಕೆನೆ ಮೊಸರು ಕೈ ತೊಳೆದು ಬ೦ದರು |
ಈಗಿನ ತಲೆಮಾರಿಗೆ ಮೇಲೆ ಹೇಳಿದ ಅನೇಕ ತಿನಿಸುಗಳ ಪರಿಚಯವೇ ಇರಲಾರದು!
ಭೀಮವ್ವನ ಆಭರಣ-ಅಲಂಕಾರಗಳ ಚಿತ್ರಣವೇ ಒಂದು ವಿಶೇಷ:
ಮಿ೦ದು ಪೀತಾ೦ಬರವನುಟ್ಟು ಮೇಲೆ ಜರಿಯಾ ರವಿಕೆ ತೊಟ್ಟು ಕು೦ದಣಾದ ಡಾಬು ತ೦ದು ನಡುವಿಗಿಟ್ಟಳು|
ಎಳೆಯ ಕಾಳಿ೦ಗಪೊಲ್ವ ಹೆರಳಿಗೊಬ್ಬಹೂವ ಸುತ್ತಿ ಚೌರಿ ರಾಗುಟೆಯ ಚ೦ದ್ರದ ಗೊ೦ಡೆ ಹೊಳೆಯುತ್ತಾ
ತೂಕವಾದ ಸರಿಗೆ ಗೆಜ್ಜೆ ಟೀಕ್ಕಿ ನತ್ತು ವಡ್ಡಿಕಿ ಏಕವಾಳಿ ಸರವ ಪದಕ ಹಾಕುತ್ತಿದ್ದರು |
ವಜ್ರದ್ವಾಲೆ ಬುಗುಡಿ ಚ೦ದ್ರ ಚೆಲ್ವೆ ಬಾಳ ಗಲ್ಲಕ ಹೊ೦ದಿದ ಮುಕುರಿ ಬಳಿಕ ದ್ರಾಕ್ಷಿ ಗೊ೦ಚಲು |
ಸಕಲ ಆಭರಣದೊಳಗೆ ಶಿಖರವಾದ ಶ್ರೇಷ್ಠವೋ ಮುಕುರ ಮೂಗಿನಲ್ಲಿಟ್ಟು ಮುದ್ದು ಸೂಸುತಾ |
ಪಿಲ್ಲೆ ಕಾಲು೦ಗುರವನಿಟ್ಟು ಘಿಲ್ಲು ರುಳಿ ಪೈಜಣಾಕಿ ಘಲ್ಲು ಘಲ್ಲೆನುತ ಹೆಜ್ಜೆ ನದೆದು ಬ೦ದಳು |
ಭಕ್ತಿ,, ಶೃಂಗಾರ ರಸಗಳಿಗೆ ಪೂರಕವಾಗಿ ಹಾಸ್ಯ ರಸವನ್ನೂ ಕಾಣಬಹುದು. ದೂತರು ಕೊಡುವ ಸುಧಾಮನ ವರ್ಣನೆ, ಸುದಾಮನೇ ಹೇಳುವ ಕೃಷ್ಣ ಮಡದಿಯರನ್ನು ಅವನು ನೋಡಿದ ರೀತಿ, ಗೋಪಾಲಕರು ಸುದಾಮನನ್ನು ಹಾಸ್ಯ ಮಾಡುವ ಪ್ರಸಂಗ ಎಲ್ಲ ಸೊಗಸಾಗಿವೆ. ಇದನ್ನು ನೋಡಿ:
ಹುಟ್ಟು ಮೊದಲು ಅನ್ನವಿಲ್ಲ, ಹೊಟ್ಟೆಗು೦ಡ ಮನುಜನಲ್ಲ, ಗಟ್ಟಿ ಗಾಳಿ ಬರಲು ಹಾರುವ೦ತೆ ತೋರ್ಪನು |
ಅಸ್ತಿ ಚರ್ಮ ಆತನ ಹತ್ತಿಕೊ೦ಡ ಹೊಟ್ಟೆ ಬೆನ್ನು ಮತ್ತು ನುಡಿಯ ಮಾತನಾಡಲಾರನು |
ಛಿದ್ರ ಬಟ್ಟೆಯನ್ನೆ ಉಟ್ಟು ಚಿಗುರ ತುಳಸಿ ಕಿವಿಯಲಿಟ್ಟು ಪದ್ಮನಾಭ ಪಾಲಿಸೆ೦ದು ಕೂಗುತಿದ್ದನು |
ಮರದ ಗು೦ಡು ಸರಗಳನ್ನೆ ಕೊರಳೊಳಗೆ ಹಾಕಿಕೊ೦ಡು ಇರಳಿ ಚರ್ಮ ಸುತ್ತಿಕೊ೦ಡು ಎಡಬಗಲಲ್ಲಿಟ್ಟನು |
ಕೃಷ್ಣನ ಉದಾರತೆಯನ್ನು ಭೀಮವ್ವ ಚೆನ್ನಾಗಿ ವಿವರಿಸುತ್ತಾಳೆ. ವಿಶ್ವಕರ್ಮನಿಗೆ ಕೃಷ್ಣ ಹೇಳಿದ್ದೇನು? ಸುಧಾಮನಿಗೆ ನೀನು ಕಟ್ಟಿಕೊಡುವ ಸ್ಥಳ ದ್ವಾರಕೆಯನ್ನೂ ಮೀರಿಸಬೇಕು!
ಭೀಮವ್ವ ಸುದಾಮ ಮಾಡುವ ನಿಂದಾಸ್ತುತಿಯಲ್ಲೂ ಹಾಸ್ಯದ ಹೊನಲು ಹರಿಸುತ್ತಾಳೆ. ನಿನ್ನ ಮಗಳನ್ನು (ಗಂಗೆ) ಸಮುದ್ರರಾಜನಿಗೆ ಕೊಟ್ಟು ಅವನ ಮಗಳಾದ ಲಕ್ಷ್ಮಿಯನ್ನು ಪಡೆದುಕೊಂಡೆ. ಈಗ ಯಾರು ಮಾವ? ಯಾರು ಅಳಿಯ? ಎನ್ನುವ ಧ್ವನಿ ಇಲ್ಲಿದೆ:
ಈಶನಾದ ನಿನಗೆ ಈ ಸಮುದ್ರ ವಾಸ ತಪ್ಪದೋ ದಾಸನಾಗಿ ನಾ ಭವ ಸಮುದ್ರ ದಾಟಿ ನಿ೦ತೆನೋ |
ಶ್ರೇಷ್ಟ ಮಗಳ ನೀನು ಉ೦ಗುಷ್ಠದಿ೦ದ ಪಡಿದಿಯೋ | ಕೊಟ್ಟು ಶರಧಿಗವನ ಮಗಳ ಪಡೆದೆಯೋ |
ಬಸುರಿ ಬಾಣ೦ತಿ ಖರ್ಚಿಗಿಲ್ಲದಾ೦ಗ ನಾಭಿಯಿ೦ದ ನಾಲ್ಕು ಮುಖದ ಶಿಶುವಿನ ಪಡೆದಿಯೋ |
ನಾಲ್ಕು ಮುಖದ ಬ್ರಹ್ಮನೆ೦ಬೋ ಏಕಪುತ್ರನ ಪಡೆದಿಯೋ | ೧೪ ಲೋಕ ಸೃಷ್ಟಿ ಮಾಡ೦ತಾಗ ಹೇಳಿದಿ |
ಕೃಷ್ಣ ತಿಂದು ಉಳಿದ ಒಂದೇ ಮುಷ್ಠಿ ಅವಲಕ್ಕಿ ಇಡೀ ದ್ವಾರಾವತಿಯ ಜನಗಳಿಗೆ ಹಂಚುವಷ್ಟು ಆದದ್ದು, ಸುದಾಮ ಬಂಡ ಭಾಗ್ಯವನ್ನು ವಿತರಣೆ ಮಾಡಿದ ಪರಿ, ಪಟ್ಟಣಗಳ ವಿವರಣೆ ಇತ್ಯಾದಿ ಎಲ್ಲ ಘಟ್ಟಗಲ್ಲಿಯೂ ಭೀಮವ್ವನ ಭಾಷೆಯ ಮೇಲಿನ ಹಿಡಿತವನ್ನು ಕಾಣಬಹುದು.
ವಿಶ್ಲೇಷಣೆ ಬಹಳ ದೀರ್ಘವಾಗುವ ಮುನ್ನ ವಿರಮಿಸೋಣ.
"ಇಂದಿನ ದಿನಗಳಲ್ಲಿ ೧೯೩ ಪದ್ಯ ಯಾರು ಓದುತ್ತಾರೆ?" ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ. ಚಿಂತೆಯಿಲ್ಲ. ಮೂವತ್ತು ನಿಮಿಶಗಲ್ಲಿ ಸೊಗಸಾಗಿ ಹಾಡಿರುವ ಮುದ್ರಿಕೆ ಯೂಟ್ಯೂಬಿನಲ್ಲಿ ಸಿಗುತ್ತದೆ. ಅದರ ಕೊಂಡಿ \(Link) ಇಲ್ಲಿದೆ:
https://www.youtube.com/watch?v=JDyrfdbFAl8
ಫೇಸ್ಬುಕ್ ಮತ್ತು ವಾಟ್ಸಪ್ಪ್ ನಲ್ಲಿ ಬರುವ ವಿಡಿಯೋಗಳನ್ನು ಘಂಟೆಗಟ್ಟಲೆ ನೋಡುವ ನಾವು ಕೇವಲ ಮೂವತ್ತು ನಿಮಿಷ ಈ ವಿಡಿಯೋ ಕೇಳಿದರೆ ಭೀಮವ್ವನ ಕೃತಿಯ ಪರಿಚಯದ ಜೊತೆಗೆ ಸಾಹಿತ್ಯ-ಸಂಗೀತಗಳ ಆನಂದವನ್ನೂ ಪಡೆಯಬಹುದು.
ಹಾಗೆ ಮಾಡುತ್ತೀರಾ????
Very great effort made in bringing out this memorable story of Bhimavva, who is an embodiment of devotion and love.
ReplyDeleteI used to listen to this songs in marriages and family functions (during lunch} at my village sung by my aunts. Never knew about the origin.
It is a beautiful experience to go through your narration. After getting an idea, listening to the recital is very useful. I took an hour or so listening to this because I had to go back and listen again and again the earlier stanzas. The Sringara and Karunaa Rasa are mingling with love devotion.
Good you have written in Kannada and now you will have broadened your scope to introduce and write more about the Kannada Sahithya of your choice.
Namaste sir. It's new and interesting knowledge for us about Bhimavva and her 'Krishna Stuti' in kannada . Your inputs and analysis of her work in kannada is extra ordinary. Thanks for sharing.
ReplyDeleteDear Keshav, Thank you very much for sharing and the story of Harappanahalli Bhimavva. The story is very inspiring and your narration in Kannada is highly scholarly. Your blog being written in Kannada for the first time is like icing on the cake as it is more relatable to the subject. Please keep writing in Kannada with your valuable inputs about Kannada literature and culture - Shambhavi
ReplyDeleteAwesome, to read in Kannada, it is very interesting, thank you!! Looking forward for your more articles.
ReplyDeleteIt s wonderfully written. Thoroughly enjoyed reading.
ReplyDeleteBy introducing this extraordinary woman, Harapanahalli Bheemavve and thus poem, you have done a great service to our Kannada Literarure. It was a pleasure to read this in Kannada. More articles should be written in both English and Kannada by you and published in the book form is my earnest wish. UR…..
ReplyDeleteRae opurtunity for part time readers like me understand wealth of literature skills of our ancestors and not very old but extremely interesting to read with your courtesy and initiative
ReplyDeletePlease keep it up
Dear Keshav, I think this is the first time you have written the article in Kannada launguage. The Kannada used by you in this article is highly scholarly. I remember to have heard about Harapanahalli Bhimavva when I was in 10th Standard. Please keep writing in Kannada with your valuable inputs about Kannada literature and culture . Thank you very much for sharing and the story of Harappanahalli Bhimavva.
ReplyDeleteI understand you and your family have shifted to US. How are you doing in US. Wishing you the very best in all your endeavours.- Ananda, Kanakapura
🙏🏽🙏🏽 ತುಂಬಾ ಚೆನ್ನಾಗಿ ಹಾಗೂ ಸರಳವಾಗಿ ವಿವರಿಸಿಸಲಾಗಿದೆ. ಓದುಗರ ಮನಸ್ಸಿಗೆ ತುಂಬಾ ಸಂತೋಷ ಉಂಟುಮಾಡುತ್ತದೆ.
ReplyDeleteWonderful. Like Helavanakatte Giriyamma.
ReplyDelete