Tuesday, March 19, 2024

ಡಾ. ವಸಂತ ಕವಲಿ - ಒಂದು ನೆನಪು


ಅಮೇರಿಕ ಸಂಯುಕ್ತ ಸಂಸ್ಥಾನಗಳ ಲಾಸ್ ಎಂಜೆಲೆಸ್ ನಗರ ವಿಶ್ವದ ಹೆಸರಾಂತ ನಗರಗಳಲ್ಲೊಂದು. ಇಲ್ಲಿನ "ಹಾಲಿವುಡ್" ಜಗತ್ತಿನ ಮನರಂಜನೆ ರಾಜಧಾನಿ ಎಂದು ಪ್ರಸಿದ್ಧ. ಹಾಲಿವುಡ್ ಮಾದರಿಯಲ್ಲಿಯೇ ನಮ್ಮಲ್ಲಿ ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್, ಕೊಲಿವುಡ್ ಮುಂತಾಗಿ ಮನರಂಜನೆಯ ಸ್ಥಳಗಳನ್ನು ಗುರುತಿಸುತ್ತಾರೆ. ಹಾಲಿವುಡ್ ಪ್ರದೇಶದ "ಹಾಲಿವುಡ್ ಬುಲ್ವಾರ್ಡ್" ಮತ್ತು ಅದರ ಪಕ್ಕದ "ವೈನ್ ಸ್ಟ್ರೀಟ್" ರಸ್ತೆಗಳ ನಡೆದಾಡುವ ಜಾಗಗಳಲ್ಲಿ ಮನರಂಜನೆಯ ಜಗತ್ತಿನ ಪ್ರಸಿದ್ಧ ಸಾಧಕರ ಹೆಸರುಗಳುಳ್ಳ ನಕ್ಷತ್ರಗಳನ್ನು ರಚಿಸಿದ್ದಾರೆ. "ಹಾಲಿವುಡ್ ವಾಕ್ ಆಫ್ ಫೇಮ್" ಎಂದು ಹೆಸರು ಪಡೆದ ಈ ಪ್ರದೇಶವನ್ನು ನೋಡಲು ಈ ನಗರಕ್ಕೆ ಬಂದ ಪ್ರವಾಸಿಗರು ತಪ್ಪದೆ ಬರುತ್ತಾರೆ. 

1958ರಲ್ಲಿ ಪ್ರಾರಂಭವಾದ ಈ ಪದ್ಧತಿ ಕಳೆದ 66 ವರ್ಷಗಳಿಂದ ನಡೆದು ಬಂದಿದೆ. ಇಲ್ಲಿನವರೆಗೆ 2,774 ಕಲಾಸಾಧಕರ ನಕ್ಷತ್ರಗಳನ್ನು "ವಾಕ್ ಆಫ್ ಫೇಮ್" ನಲ್ಲಿ ಅಳವಡಿಸಲಾಗಿದೆ. ಈ ದಿನ ಮಂಗಳವಾರ, ಮಾರ್ಚ್ 19, 2024. ಈ ದಿನ ಡಾ. ಡ್ರೇ ಎಂದು ಪ್ರಸಿದ್ಧರಾದ ಡಾ. ಅಂಡ್ರೆ ಯಂಗ್ ಅವರ ನಕ್ಷತ್ರವನ್ನು 2775ನೆಯ ನಕ್ಷತ್ರವಾಗಿ ಸೇರಿಸುತ್ತಿದ್ದಾರೆ. ಈಗ ಈ ಕಾರ್ಯಕ್ರಮ ಇದೇ ಸಮಯದಲ್ಲಿ ನಡೆಯುತ್ತಿದೆ. ಡಾ. ಡ್ರೇ ಅವರನ್ನು "ರಿಕಾರ್ಡಿಂಗ್" ವಿಶೇಷಜ್ಞರಾಗಿ ಗುರುತಿಸಿ ಈ ಗೌರವವನ್ನು ನೀಡುತ್ತಿದ್ದಾರೆ. ಕೇವಲ ಮೂರು ವರುಷಗಳ ಹಿಂದೆ ಡಾ. ಡ್ರೇ ಅವರಿಗೆ ಎರಡು ವಾರಗಳ ಸಮಯದಲ್ಲಿ ಮೂರು ಬಾರಿ ಸ್ಟ್ರೋಕ್ ಆಗಿತ್ತಂತೆ. ಅಂತಹ ಆಘಾತದಿಂದ ಚೇತರಿಸಿಕೊಂಡು ಇಂದು ಈ ಗೌರವವನ್ನು ಪಡೆದುಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ. 

ಮೂರು ದಿನಗಳ ಹಿಂದೆ ಇದೇ ಹಾಲಿವುಡ್ ಬುಲ್ವಾರ್ಡ್ನನಲ್ಲಿರುವ "ಪ್ಯಾಂಟೇಜ್ಸ್ " ಥೀಯೇಟರ್ ಕಲಾಕೇಂದ್ರದಲ್ಲಿ ಪ್ರಸಿದ್ಧ ಸಂಗೀತ ರೂಪಕ (ಮ್ಯೂಸಿಕಲ್) "ಷಿಕಾಗೋ" ನೋಡುವ ಸಂದರ್ಭದಲ್ಲಿ ಈ ವಾಕ್ ಆಫ್ ಫೇಮ್ ಮೇಲೆ ನಡೆದು ಹೋಗಬೇಕಾಯಿತು. ಆ ಸಂದರ್ಭದಲ್ಲಿ ನಮ್ಮ ಮಧ್ಯೆ ಇದ್ದು ಸಾಹಿತ್ಯ-ಸಂಗೀತ-ನಾಟಕ ರಂಗಗಳಲ್ಲಿ ಸೇವೆ ಮಾಡಿದ ಮಹನೀಯರ ನೆನಪುಗಳು ತಲೆಯಲ್ಲಿ ತೇಲಿದಾಗ ಬಂದ ಹೆಸರುಗಳಲ್ಲಿ ಡಾ. ವಸಂತ ಕವಲಿ ಅವರದೂ ಒಂದು.
 
*****

ಅರವತ್ತು-ಎಪ್ಪತ್ತರ ದಶಕದಲ್ಲಿ ಟೆಲಿವಿಷನ್ ಕೇಳರಿಯದ್ದು. ಜನಗಳಿಗೆ ಮನರಂಜನೆ ಬೇಕಾದರೆ ಯಾವುದಾದರೂ ಸಭಾಂಗಣಕ್ಕೆ ಹೋಗಿ ಸಂಗೀತ ಅಥವಾ ನಾಟಕವನ್ನೋ, ಅಥವಾ ಚಲನಚಿತ್ರವನ್ನೋ ನೋಡಬೇಕಾಗಿತ್ತು. ಮನೆಯಲ್ಲಿಯೇ ಸುಲಭವಾಗಿ ಹೊತ್ತು ಕಳೆಯಬೇಕು, ಮತ್ತೆ ಹಾಗೇ ಸ್ವಲ್ಪ ಮನರಂಜನೆಯೂ ಬೇಕು ಎಂದರೆ ಸಿಗುತ್ತಿದ್ದುದು ಆಕಾಶವಾಣಿ ಕಾರ್ಯಕ್ರಮಗಳು ಮಾತ್ರ. ಟ್ರಾನ್ಸಿಸ್ಟರುಗಳು ಸುಲಭ ಬೆಲೆಯಲ್ಲಿ ಸಿಗುವಂತಾದಾಗ ಆಕಾಶವಾಣಿಯ ಕಾರ್ಯಕ್ರಮಗಳು ಎಲ್ಲೆಂದರಲ್ಲಿ ಕೇಳುವಂತಾದವು. ಪ್ರತಿ ಭಾನುವಾರ ಬೆಳಗ್ಗೆ ಮುಂದಿನವಾರ ಪ್ರಸಾರವಾಗಲಿರುವ ಕಾರ್ಯಕ್ರಮಗಳ ತುಣುಕುಗಳು "ಪಕ್ಷಿನೋಟ" ಎನ್ನುವ ಶೀರ್ಷಿಕೆಯಲ್ಲಿ ಪ್ರಸಾರ ಆಗುತ್ತಿದ್ದವು. ರೇಡಿಯೋ ಆಲಿಸುವ ಆಸಕ್ತರು ಕಾಯುತ್ತಿದ್ದುದು ಚಲನಚಿತ್ರದ ಧ್ವನಿಸುರಳಿ ಮತ್ತು ಡಾ. ವಸಂತ ಕವಲಿ ಅವರ ನಾಟಕ ಪ್ರಸಾರಕ್ಕಾಗಿ. ಕವಲಿಯವರ ನೇತೃತ್ವದ ನಾಟಕಗಳೆಂದರೆ ಸದಭಿರುಚಿಯ ಸಾಹಿತ್ಯಕ ಪ್ರಸಾರ ಖಾತರಿ. 

ಕನ್ನಡ, ಇಂಗ್ಲಿಷ್, ಸಂಸ್ಕೃತ, ಮತ್ತು ಮರಾಠಿ ಭಾಷೆಗಲ್ಲಿ ಆಳವಾದ ಪಾಂಡಿತ್ಯ, ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಕ್ರಮವಾಗಿ ಹಿರಿಯ ವಿದ್ವಾಂಸರುಗಳಿಂದ ಕಲಿತ ಸಂಗೀತ ಸಂಪತ್ತು, ಕರ್ನಾಟಕ ಸಂಗೀತದಲ್ಲಿ ಸ್ವಯಂ ಕೃಷಿ, ಅಂದಿನ ಈ ಎಲ್ಲ ಭಾಷೆಗಳ ಹಿರಿಯ ಸಾಹಿತಿಗಳ ಒಡನಾಟ, ಹಿರಿಯ ಮತ್ತು ಕಿರಿಯ ಕಲಾವಿದರಿಂದ ಕಸರತ್ತು ಮಾಡಿಸುವ ಕೌಶಲ್ಯ, ತನ್ನದೇ ಗರಡಿಯಲ್ಲಿ ಪಳಗಿಸಿ ತಯಾರು ಮಾಡಿದ ಶಿಷ್ಯ ಸಂಕುಲ, ಆಕಾಶವಾಣಿಯ ಸಹೋದ್ಯೋಗಿಗಳ ಸಹಕಾರ, ಇವೆಲ್ಲವುಗಳ ಪರಿಪಾಕದಿಂದ ಕವಲಿಯವರ ಆಕಾಶವಾಣಿ ಧ್ವನಿ ಪ್ರಸಾರವಾಗಲೀ, ರಂಗದ ಮೇಲೆ ತಂದ ನಾಟಕಗಳಾಗಲೀ, ಶ್ರೋತೃ-ಪ್ರೇಕ್ಷರಿಗೆ ರಸದೂಟ. ಕೇವಲ ಕಿವಿಯಲ್ಲಿ ಕೇಳಿದ ಹಿರಿಯ ಕವಿಗಳ ಕೃತಿಗಳ ಭಾಗಗಳನ್ನು ಹೆಚ್ಚು ಶ್ರಮವಿಲ್ಲದೆ ಸ್ವಲ್ಪ ಕಾಲದಲ್ಲಿಯೇ ಅನುಭವಿಸುವ ಸೌಕರ್ಯ ಅವರ ಪ್ರಯತ್ನಗಳಿಂದ ಇತರರಿಗೆ ಸಿಗುತ್ತಿತ್ತು. 
*****

ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ವಸಂತ ಕವಲಿಯವರ ಸ್ಥಳ. ಪಂಡಿತರ ಮನೆತನದಲ್ಲಿ ಜನನ. ತಂದೆ ಪಂಡಿತ ಚನ್ನಬಸಪ್ಪ ಎಲ್ಲಪ್ಪ ಕವಲಿಯವರು ದೊಡ್ಡ ವಿದ್ವಾಂಸರು. ಆಗಿನ ಸಮಯದಲ್ಲಿ ದಡ್ಡರನ್ನು "ಪಂಡಿತ ಪುತ್ರ" ಎಂದೋ  "ರಜಕಾಶ್ವ" (ಅಗಸನ ಕುದುರೆ ಅಥವಾ ಕತ್ತೆ) ಎಂದೋ ಹಾಸ್ಯ ಮಾಡುತ್ತಿದು ಉಂಟು. ವಸಂತ ಕವಲಿಯವರ ವಿಷಯದಲ್ಲಿ ಹಾಗಿರಲಿಲ್ಲ. ಪರ್ವತವಾಣಿ ನರಸಿಂಗ ರಾವ್ ಹಾಸ್ಯಕ್ಕೆ ವಸಂತ ಕವಲಿ ಅವರು "ಪಂಡಿತ ಪುತ್ರ" ಅಲ್ಲ, "ಪುತ್ರ ಪಂಡಿತ" ಎಂದು ಹೇಳುತ್ತಿದ್ದರು. ವಿದ್ಯಾಭ್ಯಾಸ ಕಾಲದಲ್ಲಿಯೇ ಅಸಾಧಾರಣ ಪ್ರತಿಭೆ ತೋರಿದವರು ವಸಂತ ಕವಲಿಯವರು. ಹೆಚ್ಚಿನ ವಿದ್ಯಾಭ್ಯಾಸವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು. ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಎಂ. ಎ. ಪದವಿ ಪಡೆದರು. "ದುರಂತ ನಾಟಕಗಳು" ಎನ್ನುವ ವಿಷಯ ಕುರಿತಾದ ಪ್ರಬಂಧವನ್ನು ಮಂಡಿಸಿ ಪಿ.ಎಚ್ ಡಿ ಪಡೆದು ಡಾ. ವಸಂತ ಕವಲಿ ಆದರು. 

ಪಂಡಿತ ರಾಮರಾವ್ ನಾಯಕ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. ಸ್ವಲ್ಪ ಕಾಲ ಪಂಡಿತ ಮಲ್ಲಿಕಾರ್ಜುನ ಮನ್ಸೂರ ಅವರಲ್ಲಿಯೂ ಕಲಿತರಂತೆ. ಮುಂಬೈನ ಕಾಲೇಜೊಂದರಲ್ಲಿ ಲೆಕ್ಚರರ್ ಕೆಲಸ ಸ್ವಲ್ಪ ಕಾಲ ಮಾಡಿದರಂತೆ. ಆ ಸಮಯದಲ್ಲಿ ಆದ ಅನೇಕ ಹಿರಿಯ ಮರಾಠಿ ಸಾಹಿತಿಗಳ ಪರಿಚಯ ಕವಲಿಯವರ ಮುಂದಿನ ಕೆಲಸಗಳಿಗೆ ಪೂರಕವಾಯಿತು. ಮುಂಬೈನಲ್ಲಿ "ಮಧ್ಯಮ ವ್ಯಾಯೋಗ" ಸಂಸ್ಕೃತ ನಾಟಕದ ರಂಗ ಪ್ರಯೋಗ ಮಾಡಿದ್ದರಂತೆ. ಹೀಗೆ ಸಾಹಿತ್ಯ-ಸಂಗೀತಗಳ ಸಂಗಮದ ಸಿರಿಯೊಂದಿಗೆ ಬೆಂಗಳೂರಿಗೆ ಬಂದರು. ಆಕಾಶವಾಣಿಯಲ್ಲಿ ಉದ್ಯೋಗ ಹಿಡಿದು ನಿಂತರು. ನಾಟಕ ವಿಭಾಗದ "ಪ್ರೊಡ್ಯೂಸರ್" ಆದರು. 

ವಸಂತ ಕವಲಿಯವರಿಗೆ ಸಂಶೋಧನೆ, ತೌಲನಿಕ ಅಧ್ಯಯನದಲ್ಲಿ ಆಪಾರ ಒಲವು. ಹಳಗನ್ನಡ, ಹೊಸಗನ್ನಡ ಎರಡರಲ್ಲೂ ಸಲೀಸಾದ ಓಡಾಟ. ಎಂತಹ ವಿದ್ವಾಂಸರನ್ನೂ ಅಲ್ಲಾಡಿಸುವ ಸಾಹಿತ್ಯ ಕೃಷಿ. ಆಗಲೇ ಲಭ್ಯವಿದ್ದ ಸಾಹಿತ್ಯ ಕೃತಿಗಳನ್ನು ನಾಟಕೀಕರಿಸಿ ರಂಗದ ಮೇಲೆ ತಂದರು. ಧ್ವನಿ ನಾಟಕಗಳಾಗಿ ಆಕಾಶವಾಣಿಯಲ್ಲಿ ಪ್ರಸಾರ ಮಾಡಿದರು. ಸ್ವತಃ ನಟರೂ ನಾಟಕಕಾರರೂ ಆದ ಪರ್ವತವಾಣಿ ನರಸಿಂಗ ರಾವ್, ಸಿ. ಕೆ. ನಾಗರಾಜ ರಾವ್ ಅವರಂಥವರ ಜೊತೆಗೆ ಆಗ ಪ್ರಚಲಿತವಿದ್ದ ನಟರನ್ನೂ ಸೇರಿಸಿ, ತಾವು ತಯಾರು ಮಾಡಿದ ಯುವ ಕಲಾವಿದರ ದಂಡನ್ನೂ ಕೂಡಿಸಿ, ತಮ್ಮ ಪಾಂಡಿತ್ಯದ ಕಾರಂಜಿಯ ಸೊಬಗನ್ನು ಎಲ್ಲರಿಗೆ ನೀಡಿದರು. 

ರಾಗ-ರಂಗ, ಕರ್ನಾಟಕ ಪರಂಪರೆ, ಗಂಗಾ-ಕಾವೇರಿ, ಕವಿ ಕಂಡ ಕರ್ನಾಟಕ, ಸರಸಮ್ಮನ ಸಮಾಧಿ (ಮಹಾಸತಿ ಸರಸ್ವತಿ), ತಮ್ಮದೇ ಆದ ರಚನೆ "ಕಣ್ವಕೇಶನ್", ಮುಂತಾದ ಅನೇಕ ರಂಗ ಪ್ರಯೋಗಗಳನ್ನು ಮಾಡಿದರು.  ಭಾಸ ಮಹಾಕವಿಯ "ಸ್ವಪ್ನ ವಾಸವದತ್ತ" ಅವರ ಕೈಯಲ್ಲಿ "ಕನಸಿನ ರಾಣಿ" ಆದಳು. ಆಕಾಶವಾಣಿಯ ಕಾರ್ಯ ಬಾಹುಳ್ಯದಿಂದ ಸಂಗೀತ ಕಚೇರಿಗಳನ್ನು ಮಾಡಲು ಹೆಚ್ಚು ಅವಕಾಶವಿಲ್ಲದಿದ್ದರೂ, ಮಿತ್ರರ ಕೂಟಗಳಲ್ಲಿ ಹಾಡಿದರು. ಅನೇಕರಿಗೆ ಸಂಗೀತವನ್ನೂ ಕಲಿಸಿದರು. ಅವರ ಸಂಗೀತ ಸೇವೆಯನ್ನು ಕೆಲವರು ಈಗಲೂ ನೆನೆಸುತ್ತಾರೆ. 

ಇವೆಲ್ಲವುಗಳ ಮಧ್ಯ ಸ್ವಂತ ಸಾಹಿತ್ಯ ರಚನೆಯನ್ನೂ ಮಾಡಿದರು. "ರಾಗ-ತಾನ-ಸೇನ" ಎಂದು ಯುರೋಪ್ ಪ್ರವಾಸ ಕಥನ ಬರೆದರು. ಕಣ್ವಕೇಶನ್, ಅಲಂಕಾರ, ಘನ ಆನಂದ, ಮತ್ತನೇಕ ಪುಸ್ತಕಗಳನ್ನು ಬರೆದರು. ಇಂಗ್ಲಿಷ್ನಲ್ಲಿ ತಾನ್ ಸೇನ್ ಎಂದು ಪುಸ್ತಕ ಬರೆದರು, ಅವರು ಏನು ಮಾಡಿದರೂ ಅಚ್ಚುಕಟ್ಟು; ಸಮಯದ ಮೇಲೆ ಗಮನ, ಶಿಸ್ತು ಎದ್ದು ಕಾಣುತ್ತಿತ್ತು. ಬ್ಯಾಡಗಿಯವರಾದರೂ ಎಲ್ಲರಿಗೂ ಉದ್ದಕ್ಕೂ ಸಕ್ಕರೆಯನ್ನೇ ಹಂಚಿದರು. ಅವರು ಮೆಣಸಿನಕಾಯಿ ಆಗುತ್ತಿದ್ದುದು "ರಿಹರ್ಸಲ್" ವೇಳೆಯಲ್ಲಿ ಮಾತ್ರ. ಅವರ ನಾಟಕದ ರಿಹರ್ಸಲ್ ಕಾಲಕ್ಕೆ ಬಸ್ಸುಗಳು ಸಕಾಲಕ್ಕೆ ಬರುತ್ತಿದ್ದವು. ಆಟೋದವರು ಆಕಾಶವಾಣಿ ಕಡೆಗೆ ಕರೆದ ತಕ್ಷಣ ಬರುತ್ತಿದ್ದರು. ಏಕೆಂದರೆ ಯಾವ ಕಲಾವಿದರೂ ಬಸ್ಸುಬರಲಿಲ್ಲ ಅಥವಾ ಆಟೋ ಸಿಕ್ಕಲಿಲ್ಲ ಎಂದು ಹೇಳಲಿಲ್ಲ!  

1987ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಂಗೀತ ಸಮ್ಮೇಳನದಲ್ಲಿ "ಜಾನಪದ ಸಂಗೀತ - ಶಾಸ್ತ್ರೀಯ ಸಂಬಂಧ" ಎನ್ನುವ ವಿಷಯದ ಮೇಲೆ ಪ್ರಾತ್ಯಕ್ಷಿಕೆ ನೀಡಿದರು. ಅವರು ಸ್ವತಃ ಆಕಾಶವಾಣಿ ನಾಟಕಗಳಲ್ಲಿ ಧ್ವನಿ ಕೊಡುತ್ತಿರಲಿಲ್ಲ. ಆದರೆ ಕೆಲವು ನಾಟಕಗಳಲ್ಲಿ ರಂಗದ ಮೇಲೆ ಅಭಿನಯಿಸುತ್ತಿದ್ದರು. ಅವರ "ಕಣ್ವಕೇಶನ್" ನಾಟಕದ ದುಷ್ಯಂತನ ಪಾತ್ರ ನೋಡಿದ್ದ ನೆನಪು. ಮಹರ್ಷಿ ಕಣ್ವರ ಗುರುಕುಲದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲು ಬಂದ ಚಕ್ರವರ್ತಿ ದುಷ್ಯಂತನ ಮುಂದೆ ಪದವಿ ಪಡೆಯಲು ಬಂದ ಗರ್ಭಿಣಿ ಶಕುಂತಲೆಯ ಸನ್ನಿವೇಶ! ಹಾಸ್ಯದ ಹೊನಲು. 

ಖ್ಯಾತ ಮರಾಠಿ ಸಾಹಿತಿ ಪು. ಲ. ದೇಶಪಾಂಡೆ ಅವರ ಸಹಯೋಗದಲ್ಲಿ "ಮರಾಠಿ ನಾಟ್ಯಗೀತೆ - ಕನ್ನಡ ರಂಗಗೀತೆ" ಎನ್ನುವ ಕಾರ್ಯಕ್ರಮ ಮುಂಬಯಿಯ ಗಿರ್ಗಾಮ್ "ಸಾಹಿತ್ಯ ಸಂಘ ಮಂದಿರ"ದಲ್ಲಿ ಅನೇಕ ಹಿರಿಯ ಮರಾಠಿ ಮತ್ತು ಕನ್ನಡ ವಿದ್ವಾಂಸರ ಸಹಕಾರದಿಂದ ನಡೆಸಿದರು. ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಂದ ಸಹಕಾರ ಪಡೆದು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಹೆಗಡೆಯವರು ಪೂರ್ತಿ ಕಾರ್ಯಕ್ರಮ ನೋಡಿ, ವಿನೂತನ ಪ್ರಯತ್ನಕ್ಕೆ  ಸಂತೋಷ ಪಟ್ಟರು. 

ಭದ್ರಾವತಿ ಆಕಾಶವಾಣಿ ನಿಲಯದ ನಿರ್ದೇಶಕರಾಗಿ ಬಡ್ತಿ ಪಡೆದು ಅಲ್ಲಿ ಸೇವೆ ಸಲ್ಲಿಸಿದರು, ಕಡೆಯ ಎರಡು-ಮೂರು ವರ್ಷಗಳು ಅವರಿಗೆ ಕಿಡ್ನಿ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಬೇಕಾಯಿತು. ಅಕ್ಟೋಬರ್ 31, 1988ರಂದು ಸೇವಾನಿವೃತ್ತಿ ಪಡೆದರು. ಕೆಲವೇ ದಿನದ ನಂತರ ಕಿಡ್ನಿ ಸಮಸ್ಯೆ ಉಲ್ಬಣವಾಗಿ ಭದ್ರಾವತಿಯಿಂದ ಬೆಂಗಳೂರಿಗೆ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಕರೆತರುತ್ತಿದ್ದಾಗ 17ನೇ ನವೆಂಬರ್, 1988 ರಂದು ತಿಪಟೂರಿನ ಬಳಿ ನಿಧನರಾದರು. ಇಪ್ಪತ್ತು ವರ್ಷ ಸೇವೆ ಸಲ್ಲಿಸಿ ನಲವತ್ತು ವರುಷ ಪಿಂಚಣಿ ಪಡೆಯುವ ಜನರ ಮಧ್ಯೆ, ಮೂವತ್ತು ವರುಷ ಸೇವೆ ಸಲ್ಲಿಸಿ ಒಂದು ತಿಂಗಳೂ ಪಿಂಚಣಿ ಪಡೆಯದಾದರು. 

ಅವರ ಜೀವನ ಯಾತ್ರೆ ಕೊನೆಯಾದಾಗ ಅವರಿಗೆ ಕೇವಲ 56 ವರ್ಷ ವಯಸ್ಸು. ಸೇವಾನಿವೃತ್ತಿಯ ನಂತರ ಮಾಡಬೇಕಾದ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ಅವೆಲ್ಲ ಹಾಗೆಯೇ ಉಳಿಯಿತು. 

******
 

ಖ್ಯಾತ ಶಿಲಾಶಾಸನ (ಎಪಿಗ್ರಾಫಿಸ್ಟ್ ) ಮತ್ತು ಇತಿಹಾಸ ತಜ್ಞೆ ಡಾ. ವಸುಂಧರಾ ಕವಲಿ-ಫಿಯೋಜಟ್ ವಸಂತ ಕವಲಿಯವರ ತಂಗಿ. ಅವರ ಫ್ರೆಂಚ್ ಪತಿ ಪಿಯಾ ಸೆಲ್ವ ಫಿಯೋಜಟ್ ( Dr Pierre Sylvan Filliozat) ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ದಂಪತಿಗಳಿಬ್ಬರೂ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳಿಂದ ವಿಶೇಷವಾಗಿ ಗೌರವಿಸಲ್ಪಟ್ಟವರು. ಅನೇಕ ಸಂಘ ಸಂಸ್ಥೆಗಳಿಂದ ಪ್ರತಿ ವರ್ಷ ಪ್ರಶಸ್ತಿಗಳನ್ನೂ ಗೌರವಗಳನ್ನೂ ಪಡೆಯುತ್ತಲೇ ಇರುವವರು. ಫಿಯೋಜಟ್ ಅವರಿಗೆ "ಮಹಾಮಹೋಪಾಧ್ಯಾಯ" ಎನ್ನುವ ಗೌರವವೂ ಸಂದಿದೆ. ಫ್ರಾನ್ಸ್ ದೇಶದಲ್ಲಿ ಪ್ರತಿ ವರುಷ "ಸಂಸ್ಕೃತ ದಿನ" ಆಚರಿಸುವುದು ಇವರದೊಂದು ಹೆಗ್ಗಳಿಕೆ. ಅಪಾರ ಗ್ರಂಥ ರಾಶಿಯನ್ನು ಈ ದಂಪತಿಗಳು ಸಾಹಿತ್ಯ ಜಗತ್ತಿಗೆ ನೀಡಿದ್ದಾರೆ. ವಿದ್ಯಾರಣ್ಯ ಪ್ರಶಸ್ತಿ, ಇತಿಹಾಸ ಸಂಸ್ಕೃತಶ್ರೀ, ಕರ್ನಾಟಕ ಕಲಾ ಪ್ರವರ್ತಕ ಮೊದಲಾದವು ಇವರಿಗೆ ಸಂದ ಕೆಲವು ಗೌರವಗಳು. 

ಹಂಪಿಯು "ವರ್ಲ್ಡ್ ಹೆರಿಟೇಜ್ ಸೆಂಟರ್" ಎಂದು 1986ರಲ್ಲಿ ಘೋಷಿತವಾಯಿತು. ಇದರಲ್ಲಿ ಡಾ. ವಸುಂಧರಾ ಅವರ ದೊಡ್ಡ ಕಾಣಿಕೆಯಿದೆ. ಕರ್ನಾಟಕದ, ದೇಶದ ಇತರ ಭಾಗಗಳಲ್ಲಿಯ ಅನೇಕ ಶಾಸನಗಳನ್ನು ಅಭ್ಯಸಿಸಿ "ವಿಜಯನಗರ ಸಾಮ್ರಾಜ್ಯ" ಅನ್ನುವುದು ಒಂದು ತಪ್ಪು ಕಲ್ಪನೆ; ಅದು ವಾಸ್ತವವಾಗಿ "ಕರ್ನಾಟಕ ಸಾಮ್ರಾಜ್ಯ" ಎಂದೇ ಇರಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದವರು ಡಾ. ವಸುಂಧರಾ. ಅವರ ಅನೇಕ ವಿದ್ವತ್ಪೂರ್ಣ ಗ್ರಂಥಗಳು ಕರ್ನಾಟಕದ ಗತಿಸಿದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆಯನ್ನು ನಾವು ಕೃತಜ್ಞತೆಯಿಂದ ನೆನೆಯಬೇಕು. 
*****

ವಸಂತ ಕವಲಿಯವರ "ಕಣ್ವಕೇಶನ್" ನಾಟಕದ ರಿಹರ್ಸಲ್ ಕೆಲವು ದಿನ ಅವರ ಮನೆಯಲ್ಲಿಯೇ ನಡೆಯಿತು. ಅಂತಹ ಸಂದರ್ಭದಲ್ಲಿ ಒಂದು ದಿನ ಅವರ ಮನೆಗೆ ಭೇಟಿ ನೀಡಿ ಅವರ ರಿಹರ್ಸಲ್ ವ್ಯವಸ್ಥೆಯನ್ನು ನೋಡುವ ಸುಯೋಗ ನನಗೆ ಸಿಕ್ಕಿತ್ತು. ಆಗ ಅವರ ಮೇಜಿನ  ಮೇಲೆ ಇದ್ದ ಅವರ ಲೇಟರ್ ಹೆಡ್ ನೋಡಿದೆ. ಅದರಲ್ಲಿ ಅವರ ಹೆಸರು Dr. Wasant Kawli* ಎಂದಾಗಿತ್ತು! ಇದೇನಿದು, ಈ * ಗುರುತಿನ ಸೂಚನೆ ಎಂದು ಆಶ್ಚರ್ಯ ಆಯಿತು. ಉತ್ತರ ಲೆಟರ್ ಹೆಡ್ ಕೆಳಗೆ ಸಿಕ್ಕಿತು. *Please note the spelling in my name" ಎನ್ನುವುದು ಅದರ ಒಕ್ಕಣೆ! 

ಬ್ಯಾಂಕಿನ ಸಹೋದ್ಯೋಗಿಗಳು ಮತ್ತು ಮುಂದೆ ಬ್ಯಾಂಕ್ ಅಧಿಕಾರಿಗಳ ಉದ್ಯೋಗಕ್ಕೆ ಬರುವ ಪ್ರಶಿಕ್ಷಣಾರ್ಥಿಗಳಿಗೆ ಬ್ಯಾಂಕಿನ ರೆಕಾರ್ಡಗಳಲ್ಲಿ ಗ್ರಾಹಕರ ಸರಿಯಾದ ಹೆಸರು ನಮೂದಿಸುವ ಅವಶ್ಯಕತೆಯನ್ನು ತಿಳಿಸುವಾಗ ಅನೇಕ ಸಲ ಡಾ. ವಸಂತ ಕವಲಿ ಅವರ ಹೆಸರನ್ನು ಉಪಯೋಗಿಸಿ ಅವರನ್ನು ನೆನೆಸಿಕೊಂಡಿದ್ದೇನೆ. 

*****

ನಾಲ್ಕು ದಿನ ಪ್ರಯತ್ನ ಪಟ್ಟರೂ ಡಾ. ವಸಂತ ಕವಲಿ ಅವರ ಸರಿಯಾದ ಭಾವಚಿತ್ರ ಸಿಗಲಿಲ್ಲ. ಯಾರಾದರೂ ಸಹೃದಯರು ಕಳಿಸಿಕೊಟ್ಟರೆ ಕೃತಜ್ಞೆತೆಯಿಂದ ಸೇರಿಸುತ್ತೇನೆ. 

2 comments:

  1. Thank you for this article about Sri. Wasant Kavali. Happy to know about his achievements. Happy also to know about his sister and her husband. They are precious gifts to Karnataka. I wish there will be a place where all the well known stars like Wasant Kavali from Karnataka will be recognized like Hollywood Hall of Fame in one place.
    UR…..

    ReplyDelete
  2. Very well written about Dr Vasantha kavali. Did not know many things about him.

    ReplyDelete