ಇದು ಅನೇಕ ಶತಮಾನಗಳ ಹಿಂದಿನ ಸಂದರ್ಭ. ಚಿಕ್ಕ ವಯಸ್ಸಿನಲ್ಲಿಯೇ ಗುರುಕುಲಗಳಿಗೆ ಸೇರಿ ಹನ್ನೆರಡು ಅಥವಾ ಹದಿನಾಲ್ಕು ವರ್ಷಗಳು ಸತತ ಅಭ್ಯಾಸ ಮಾಡಿ, ಗುರುಕೃಪೆಗೆ ಪಾತ್ರರಾಗಿ ವಿದ್ಯೆ ಸಂಪಾದನೆ ಮಾಡುತ್ತಿದ್ದ ದಿನಗಳು. ಗುರುಕುಲಗಳಿಗೆ ಸಮಾಜದ ಒತ್ತಾಸೆ ಇರುತ್ತಿತ್ತು. ಕುಲಪತಿಗಳಿಗೆ ವಿಶೇಷವಾದ ಗೌರವ ಸಲ್ಲುತ್ತಿತ್ತು. ಹತ್ತಿರದ ಗ್ರಾಮಗಳ ರೈತಾಪಿ ಜನ ತಮ್ಮ ಬೆಳೆಯ ಒಂದು ಭಾಗವನ್ನು ಗುರುಕುಲಗಳಿಗೆ ಒಪ್ಪಿಸುತ್ತಿದ್ದರು. ರಾಜ, ಮಹಾರಾಜರು ಕುಲಪತಿಗಳಿಗೆ ಉಚಿತ ಸ್ಥಾನ-ಮಾನ ಕೊಟ್ಟು ಆಡಳಿತದಲ್ಲಿ ಅವರ ಸಲಹೆ-ಸಮಾಧಾನ ಪಡೆಯುತ್ತಿದ್ದರು. ಗುರುಕುಲದ ಹತ್ತಿರಿದ್ದ ಕಾಡಿನಲ್ಲಿ ಸಿಗುವ ಗೆಡ್ಡೆ-ಗೆಣಸು, ಹಣ್ಣು-ಹಂಪಲು, ಸೌದೆ, ದರ್ಭೆ-ಸಮಿಧೆ, ಮತ್ತು ಇತರೆ ಪದಾರ್ಥಗಳು ದಿನ ನಿತ್ಯದ ಕಾಯಕಕ್ಕೆ ಒದಗುತ್ತಿದ್ದವು. ಗುರುಕುಲಗಳಲ್ಲಿ ಸಾಕಿರುವ ಹಸು-ಕರುಗಳಿಂದ ಬೇಕಾದ ಹಾಲು-ಮೊಸರು-ತುಪ್ಪ ಪಡೆಯುತ್ತಿದ್ದರು. ಹತ್ತಿರಿದ್ದ ತೊರೆಯಿಂದಲೋ ಅಥವಾ ಜಲಾಶಯದಿಂದಲೋ ಸಮೃದ್ಧವಾದ ಸ್ವಚ್ಛ ನೀರು ಸಿಗುತ್ತಿತ್ತು. ಒಟ್ಟಿನಲ್ಲಿ ಗುರುಕುಲದ ವಾಸಿಗಳಿಗೆ ವಿದ್ಯೆ ಕಲಿಸುವುದು-ಕಲಿಯುವುದು ಮುಖ್ಯ ಕೆಲಸ. ಮಿಕ್ಕಿದ್ದೆಲ್ಲ ಚಟುವಟಿಕೆಗಳು ದೈನಂದಿನ ಜೀವನಕ್ಕೆ ಪೋಷಕಗಳು ಮಾತ್ರ. ಸಂಪಾದನೆ ಮಾಡಿ ಗಂಟು ಮಾಡಬೇಕೆನ್ನುವ ಗೋಜೇ ಇಲ್ಲ.
ಗುರುಕುಲದ ಎಲ್ಲ ಕೆಲಸಗಳನ್ನೂ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಿಷ್ಯರೇ ಮಾಡಬೇಕು. ಆವರಣವನ್ನು ಸ್ವಚ್ಛ ಮಾಡುವುದು, ಪತ್ರೆ-ಪಡಗ ತೊಳೆಯುವುದು, ನೀರು ತಂದು ತುಂಬುವುದು, ಅಡಿಗೆ ಮಾಡುವುದು, ಕಾಡಿನಿಂದ ಪದಾರ್ಥಗಳನ್ನು ತರುವುದು, ಮತ್ತೆಲ್ಲ ಸುತ್ತು ಕೆಲಸ ಮಾಡುವುದೂ ಅವರಿಗೆ ಸೇರಿದ್ದು. ದಿನಂಪ್ರತಿ ಸರದಿಯ ಮೇಲೆ ದನ-ಕರುಗಳನ್ನು ಕಾಡಿಗೆ ಕರೆದೊಯ್ದು ಮೇವುಣಿಸಿ ಸಂಜೆ ಕರೆದು ತರುವುದೂ ಮಾಡಬೇಕಾಗಿತ್ತು. ಶಿಷ್ಯರೂ ಪ್ರೀತಿ-ಉತ್ಸಾಹಗಳಿಂದ ಈ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರು. ಎಲ್ಲೂ ಜಗಳ-ಕದನ ಇರುತ್ತಿರಲಿಲ್ಲ. ಪರಸ್ಪರ ಹೊಂದಾಣಿಕೆಯಿಂದ ದಿನಗಳು ಸರಿಯುತ್ತಿದ್ದುವು. ಎಲ್ಲರ ಗುರಿ ಒಂದೇ - ವಿದ್ಯಾರ್ಜನೆ.
*****
ಗುರುಕುಲಕ್ಕೆ ಸ್ವಲ್ಪ ದೂರದ ಊರಿನಲ್ಲಿ ಒಂದು ಕುಟುಂಬ. ತನ್ನ ಬಾಲ್ಯದಲ್ಲಿ ಗುರುಕುಲವೊಂದರಲ್ಲಿ ಸ್ವತಃ ಕಲಿತಿದ್ದ ಗಂಡ. ಆ ವಾತಾವರಣಕ್ಕೆ ಹೊಂದಿಕೊಂಡ ಕುಟುಂಬದಿಂದ ಬಂದ ಹೆಂಡತಿ. ಕ್ರಮೇಣ ಅವರಿಗೆ ಮಕ್ಕಳೂ ಆದರು. ಆ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ನಂತರ ದಂಪತಿಗಳು ಈ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆ ಕಳಿಸಿದರು. ಕೆಲವು ವರುಷಗಳ ನಂತರ ಒಬ್ಬರಾದ ಮೇಲೆ ಒಬ್ಬರಂತೆ ಏಳು ಮಂದಿ ಸಹೋದರರೂ ಗುರುಕುಲದಲ್ಲಿ ಸೇರಿದರು. ಮೊದಲನೆಯವನು ಇನ್ನೆರಡು ವರ್ಷಗಳ ನಂತರ ವಿದ್ಯಾಭ್ಯಾಸ ಮುಗಿಸಬೇಕು. ಕಡೆಯವನು ಈಗ ಸೇರಿದ್ದಾನೆ. ಮತ್ತೈವರು ಕ್ರಮವಾಗಿ ಇವರಿಬ್ಬರ ಮಧ್ಯದ ತರಗತಿಗಳಲ್ಲಿದ್ದಾರೆ. ಗುರುಕುಲಕ್ಕೆ ಬಂದರೂ ಅವರ ಜೊತೆ ಮುಂದುವರೆದಿದೆ.
ಕಾಲಕ್ರಮದಲ್ಲಿ ಒಂದು ದಿನ ಗುರುಕುಲದ ಹಸು-ಕರುಗಳನ್ನು ಕಾಡಿನಲ್ಲಿ ಮೇಯಿಸುವ ಕೆಲಸ ಈ ಅಣ್ಣ-ತಮ್ಮಂದಿರ ಸರದಿಗೆ ಬಿತ್ತು. ಒಂದು ದಿನ ಪೂರ್ತಿ ಸಹೋದರರಿಗೆ ಒಟ್ಟಾಗಿ ಕಾಲ ಕಳೆಯುವ ಸುಸಮಯ. ಸಂತೋಷದಿಂದ ದನಗಳನ್ನು ಅಟ್ಟಿಕೊಂಡು ಕಾಡಿಗೆ ಹೊರಟರು. ಕಾಡಿನಲ್ಲಿ ಹಸುಗಳನ್ನು ಮೇಯಲು ಬಿಟ್ಟು ಆಡುತ್ತ, ಮಾತನಾಡುತ್ತಾ ಕಾಲ ಕಳೆದರು. ಮತ್ತೆ ಸಮಯದ ನೆನಪಾದಾಗ ಮಧ್ಯಾಹ್ನ ದಾಟಿತ್ತು. ಹಸುಗಳೆಲ್ಲಾ ಎತ್ತಲೋ ಹೋಗಿದ್ದವು. ಒಂದು ಹಸು ಮಾತ್ರ ಸ್ವಲ್ಪ ದೂರದಲ್ಲಿ ಮೇಯುತ್ತಿತ್ತು. ಬೇರೆ ಹಸುಗಳನ್ನು ಹುಡುಕುವಾಗ ದಾರಿ ತಪ್ಪಿದರು. ಹಸಿವಿನ ಬಾಧೆ ಬೇರೆ. ಚಿಕ್ಕವರಿಗೆ ತಾಳಲಾರದ ಹಸಿವೆ. ಸುತ್ತ ಮುತ್ತ ಏನೂ ತಿನ್ನುವ ಪದಾರ್ಥ ಕಾಣಸಿಗುತ್ತಿಲ್ಲ. ಏನು ಮಾಡುವುದು?
ಎದುರಿಗೆ ಮೇಯುತ್ತಿರುವ ಹಸು ಕಂಡಿತು. "ಬೇರೆ ದಾರಿಯಿಲ್ಲ. ಈ ಹಸುವನ್ನು ಕೊಂದು ಅದರ ಮಾಂಸವನ್ನು ತಿನ್ನೋಣ. ಇದು ಆಪತ್ಕಾಲ. ಇದರಲ್ಲಿ ತಪ್ಪಿಲ್ಲ. ತಪ್ಪಿದ್ದರೂ ಏನಾದರೂ ಪ್ರಾಯಶ್ಚಿತ್ತ ಮಾಡಿಕೊಳ್ಳೋಣ. ಈಗ ಹಸಿವಿನಿಂದ ಬದುಕಿ ಉಳಿಯುವುದು ಮುಖ್ಯ" ಎಂದ ಒಬ್ಬ. ಇನ್ನಿಬ್ಬರು ಅದೇ ಸರಿ ಎಂದರು. ಇಬ್ಬರು ವಿರೋಧಿಸಿದರು. ಮತ್ತೊಬ್ಬ "ಗುರುಗಳಿಗೆ ಏನು ಉತ್ತರ ಕೊಡುವುದು? ಅವರಿಗೆ ಹಸು ಕಡಿಮೆಯಾಗಿರುವುದು ಗೊತ್ತೇ ಆಗುತ್ತದೆ" ಎಂದ. "ಹೌದು. ಈಗಲೇ ಬೇರೆ ಹಸುಗಳು ಎಲ್ಲೋ ಹೋಗಿವೆ. ಏನು ಮಾಡುವುದು?" ಎಂದು ಮತ್ತೊಬ್ಬ ಹೇಳಿದ. "ಯೋಚಿಸಲು ಸಮಯವಿಲ್ಲ. ಹುಲಿ ಬಂದಿದುರಿಂದ ಹಸುಗಳು ಚಲ್ಲಾಪಿಲ್ಲಿ ಆದವು. ಒಂದು ಹಸುವನ್ನು ಹುಲಿ ತಿಂದಿತು. ನಾವು ಹೇಗೋ ಜೀವ ಉಳಿಸಿಕೊಂಡು ಬಂದೆವು ಎಂದು ಹೇಳೋಣ" ಅಂದ ದೊಡ್ಡವ. ಸರಿ ಎಂದು ಎಲ್ಲರೂ ಹೂಗುಟ್ಟಿದರು.
ಹಸುವನ್ನು ಕೊಂದಾಯಿತು. ಕಿರಿಯವನಿಗೆ ಅಂದಿನ ಪದ್ಧತಿಯಂತೆ "ಪಿಂಡಪ್ರದಾನ" ಮಾಡಬೇಕು ಎನಿಸಿತು. ಆ ಹಸುವಿನ ಮಾಂಸದಲ್ಲೇ ಪಿಂಡಗಳನ್ನು ಮಾಡಿ ಪಿತೃಗಳಿಗೆ ಅರ್ಪಿಸಿದ. ಮಿಕ್ಕ ಮಾಂಸವನ್ನು ಏಳು ಜನ ಸಹೋದರರೂ ಸೇವಿಸಿದರು. ಹಸಿವಿನ ಬಾಧೆ ಕಳೆಯಿತು. ಹುಡುಕುತ್ತ, ಹುಡುಕುತ್ತಾ ಸಂಜೆಯ ಮೇಲೆ ಗುರುಕುಲ ತಲುಪಿದರು.
ಇವರು ಗುರುಕುಲ ತಲುಪುವ ವೇಳೆಗೆ ಬೇರೆ ಹಸುಗಳು ತಮ್ಮ ಅಭ್ಯಾಸ ಬಲದಿಂದ ಗುರುಕುಲ ಸೇರಿದ್ದವು. ಒಂದು ಹಸು ಮಾತ್ರ ಬಂದಿರಲಿಲ್ಲ. ಕುಲಪತಿಗಳು ಈ ಸಹೋದರರು ಬಾರದಿದ್ದುದರಿಂದ ವ್ಯಾಕುಲರಾಗಿದ್ದರು. ಇವರನ್ನು ನೋಡಿ ಅವರಿಗೆ ಬಹಳ ಸಂತೋಷವಾಯಿತು. ಒಂದು ಹಸು ಮಾತ್ರ ಕಡಿಮೆಯಾಯಿತಲ್ಲಾ ಎಂದು ವಿಚಾರಿಸಿದರು. ತಮ್ಮಲ್ಲಿ ಒಪ್ಪಂದವಾಗಿದ್ದಂತೆ "ಹುಲಿಯು ನುಗ್ಗಿ ಒಂದು ಹಸುವನ್ನು ತಿಂದು ಹಾಕಿತು. ಬಾಕಿ ಹಸುಗಳು ಚಲ್ಲಾಪಿಲ್ಲಿ ಆದವು. ನಾವು ಹೇಗೋ ಬದುಕಿ ಬಂದೆವು" ಎಂದು ಹಿರಿಯ ಸುಳ್ಳು ಹೇಳಿದ. ಬಾಕಿಯವರು ಹೌದೆಂದು ತಲೆ ಆಡಿಸಿದರು. "ಹೋಗಲಿ ಬಿಡಿ. ಒಂದು ಗಂಡಾಂತರ ಕಳೆಯಿತು. ಸದ್ಯ, ನೀವು ಕ್ಷೇಮವಾಗಿ ಬಂದಿರಲ್ಲ" ಎಂದು ಗುರುಗಳು ಸಮಾಧಾನ ಪಟ್ಟುಕೊಂಡರು.
ಈ ಏಳು ಜನ ಸಹೋದರರಿಗೆ ಹಸುವನ್ನು ಕೊಂದಿದುರಿಂದ ಗೋಹತ್ಯೆಯೂ, ಗುರುಗಳಿಗೆ ಸುಳ್ಳು ಹೇಳಿದುದರಿಂದ ಗುರು ಹತ್ಯೆಯೂ ಸುತ್ತಿಕೊಂಡಿತು.
*****
"ಗೋಹತ್ಯೆಯೇನೋ ಸರಿ. ಆದರೆ ಗುರುಹತ್ಯೆ ಎಲ್ಲಿಯದು?" ಎಂದು ಸಂದೇಹ ಬರಬಹುದು. ನಮ್ಮಲ್ಲಿ ಹತ್ಯೆ ಅಂದರೆ ಪ್ರಾಣ ತೆಗೆಯುವುದು ಎಂದು ಒಂದೇ ಅರ್ಥ ಮಾಡುವುದು ರೂಢಿಯಾಗಿದೆ. ವಾಸ್ತವವಾಗಿ ಪ್ರಾಚೀನ ನ್ಯಾಯ ಶಾಸ್ತ್ರದ ಪ್ರಕಾರ ಹತ್ಯೆಯ ಹಲವು ಮಜಲುಗಳಿವೆ. "ಹತ್ತು ಜನರ ಮುಂದೆ ನನ್ನ ಮಾನ ಹರಾಜು ಹಾಕಿ ಕೊಂದುಹಾಕಿಬಿಟ್ಟ" ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ನನ್ನ ಕೊಂದುಹಾಕಿಬಿಟ್ಟ ಎಂದು ಬದುಕಿರುವ ವ್ಯಕ್ತಿ ಹೇಗೆ ಹೇಳುತ್ತಾನೆ? ವಿನಾಕಾರಣ ಮತ್ತೊಬ್ಬರ ತೇಜೋವಧೆ ಮಾಡುವುದೂ ಹತ್ಯೆಗೆ ಸಮವೇ. ಗುರುಗಳಿಗೆ ಸುಳ್ಳು ಹೇಳುವುದೂ, ಗುರುನಿಂದೆ ಮಾಡುವುದೂ ಹತ್ಯೆಗೆ ಸಮಾನವೇ. ಗೋವುಗಳಿಗೆ ಹಿಂಸಿಸುವುದೂ, ಹೊಡೆದು-ಬಡಿದು ಮಾಡುವುದೂ ಒಂದು ರೀತಿಯ ಗೋಹತ್ಯೆಯೇ! ಹಸುವನ್ನು ಕೊಂದಿದ್ದರಿಂದ ಗೋಹತ್ಯಾ ದೋಷ ಬಂತು. ಬೇಕೆಂದೇ ಗುರುಗಳಿಗೆ ಸುಳ್ಳು ಹೇಳಿದ್ದರಿಂದ ಗುರುಹತ್ಯಾ ದೋಷವೂ ಬಂತು.
ಸಾಂದರ್ಭಿಕವಾಗಿ ಹೇಳುವುದಾದರೆ, ಪ್ರಾಚೀನ ನ್ಯಾಯ ಶಾಸ್ತ್ರದ ಪ್ರಕಾರ ಗಡೀಪಾರು ಶಿಕ್ಷೆ ಮರಣದಂಡನೆಗೆ ಸಮ ಎಂದು ಉಂಟು. ವ್ಯಕ್ತಿ ಯೋಗ್ಯನಿದ್ದು ಏನೋ ಕಾರಣಾಂತರದಿಂದ ಮರಣದಂಡನೆಗೆ ಭಾಗಿಯಾಗುವ ತಪ್ಪು ಮಾಡಿದಾಗ ಅವನ ಜೀವ ತೆಗೆಯುವ ಬದಲು ಅವನನ್ನು ಗಡೀಪಾರು ಮಾಡುತ್ತಿದ್ದರು. ಈ ಸಮಾಜದ ಪಾಲಿಗೆ ಅವನು ಅಂದಿನಿಂದ ಸತ್ತಂತೆ. ಯೋಗ್ಯನಾದದ್ದರಿಂದ ಬೇರೆಲ್ಲಾದರೂ ಬದುಕಿಕೊಳ್ಳಲಿ ಎಂದು ಮರಣದಂಡನೆಗೆ ಸಮನಾದ ಗಡೀಪಾರಿನ ಶಿಕ್ಷೆ. ಹೀಗಿವೆ ನ್ಯಾಯ ಪಾಲನೆಯ ಸೂಕ್ಷ್ಮತೆಗೆ ಉದಾಹರಣೆಗಳು.
*****
ಅನೇಕ ವರುಷಗಳಾದ ಮೇಲೆ ಸಹೋದರರಿಗೆ ಆಯಸ್ಸು ತೀರಿ ಮರಣ ಪ್ರಾಪ್ತವಾಯಿತು. ಹಸುವನ್ನು ಕೊಂದ ಪಾಪಕ್ಕೆ ಏಳು ಜನರೂ ದಶಾರ್ಣ ಎನ್ನುವ ಕಾಡಿನಲ್ಲಿ ಬೇಡರಾಗಿ ಹುಟ್ಟಿದರು. ದಶಾರ್ಣ ಅಂದರೆ ಹತ್ತು ಕಾಡುಗಳ ಸಮೂಹ. ಸಪ್ತಗಿರಿ, ಅಂದರೆ ಏಳು ಬೆಟ್ಟಗಳು ಎಂದಂತೆ. ಪ್ರಾಣಿಯನ್ನು ಕೊಂದದ್ದರಿಂದ ಪ್ರಾಣಿಗಳನ್ನು ಕೊಂದೇ ಜೀವಿಸುವ ವ್ಯಾಧರಾಗಿ ಜನ್ಮ. ಆ ಜನ್ಮ ಕಳೆದ ನಂತರ ಏಳು ಜನವೂ ಮತ್ತೆ ಕಾಲಂಜಿರ ಎನ್ನುವ ಬೆಟ್ಟದ ಪ್ರದೇಶದಲ್ಲಿ ಏಳು ಜಿಂಕೆಗಳಾಗಿ ಹುಟ್ಟಿದರು. ಹಿಂದಿನ ಜನ್ಮದಲ್ಲಿ ಪ್ರಾಣಿಗಳನ್ನು ಕೊಂದು ಬದುಕಿದ್ದು. ಈಗ ಬೇಡರ ಕೈಯಲ್ಲಿ ಕೊಲ್ಲಿಸಿಕೊಳ್ಳುವ ಜಿಂಕೆಗಳಾಗಿ ಹುಟ್ಟಿದ್ದು! ಆ ಜನ್ಮವೂ ಕಳೆದ ಮೇಲೆ ಶರದ್ವೀಪದಲ್ಲಿ ಏಳು ಚಕ್ರವಾಕ ಪಕ್ಷಿಗಳಾಗಿ ಹುಟ್ಟಿದರು. ಅದಕ್ಕೂ ಮುಂದಿನ ಜನ್ಮದಲ್ಲಿ ಮಾನಸ ಸರೋವರದಲ್ಲಿ ಏಳು ಹಂಸ ಪಕ್ಷಿಗಳಾಗಿ ಜನಿಸಿದರು.
ಈ ರೀತಿ ಅನೇಕ ಜನ್ಮಗಳನ್ನು ಪಡೆದು ಹುಟ್ಟಿದರೂ ಹಿಂದೆ ಪಿಂಡಪ್ರದಾನ ಮಾಡಿದ ಪುಣ್ಯ ವಿಶೇಷದಿಂದ ಅವರೆಲ್ಲರಿಗೂ ಪೂರ್ವ ಜನ್ಮದ ಸ್ಮರಣೆ ಇದ್ದಿತು. ಇದರ ಜೊತೆಗೆ ಏಳು ಮಂದಿಯೂ ಒಟ್ಟಾಗಿ ಒಂದೇ ಕಡೆ ಹುಟ್ಟುವ ಭಾಗ್ಯವೂ ಸಿಕ್ಕುತ್ತಿತ್ತು.
ಮಾನಸ ಸರೋವರದಲ್ಲಿ ಹಂಸ ಪಕ್ಷಿಗಳಾಗಿದ್ದ ಕಾಲದಲ್ಲಿ ಒಮ್ಮೆ ಅಲ್ಲಿ ವಿಹರಿಸಲು ಬಂದ ಮಹಾರಾಜನೊಬ್ಬನ ರಾಜಭೋಗವನ್ನು ಕಂಡರು. ಒಬ್ಬನಿಗೆ ಮನಸ್ಸು ಚಂಚಲವಾಗಿ "ಹುಟ್ಟಿದರೆ ಈ ರೀತಿ ರಾಜನಾಗಿ ಹುಟ್ಟಿ ರಾಜಭೋಗಗಳನ್ನು ಅನುಭವಿಸಬೇಕು!" ಎಂದನು. ಅದನ್ನು ಕೇಳಿ ಇನ್ನಿಬ್ಬರು "ನೀನು ಈ ರೀತಿ ಮಹಾರಾಜನಾಗಿ ಹುಟ್ಟಿದರೆ ನಾವು ನಿನ್ನ ಮಂತ್ರಿಗಳು!" ಎಂದರು.
ಹಂಸಗಳ ಜನ್ಮ ಮುಗಿದ ನಂತರ ಮುಂದಿನ ಜನ್ಮದಲ್ಲಿ ಮಹಾರಾಜನಾಗುವ ಆಸೆ ತೋರಿಸಿದವನು ಬ್ರಹ್ಮದತ್ತ ಎಂಬ ಹೆಸರಿನ ರಾಜನಾಗಿ ಹುಟ್ಟಿದನು. ಅವನ ಮಂತ್ರಿಗಳಾಗುವ ಆಸೆ ತೋರಿಸಿದ ಇಬ್ಬರು ತಮ್ಮಂದಿರು ಅವನ ಮಂತ್ರಿಗಳಾಗಿ ಹುಟ್ಟಿದರು. ಐಹಿಕ ಸುಖ-ಭೋಗಗಳ ಆಸೆ ತೋರಿಸಿದ ಕಾರಣ ಈ ಮೂವರಿಗೆ ಹಿಂದಿನ ಜನ್ಮಗಳ ಸ್ಮರಣೆ ಹೋಯಿತು. ರಾಜಭೋಗದಲ್ಲಿ ಮುಳುಗಿದರು. ಮಿಕ್ಕ ನಾಲ್ವರು ಸಹೋದರರು ಕುರುಕ್ಷೇತ್ರದಲ್ಲಿ ಒಳ್ಳೆಯ ವಂಶದಲ್ಲಿ ಹುಟ್ಟಿ ವೇದಾಧ್ಯಯನಗಳನ್ನು ಮಾಡಿ ಸಾಧನೆಯ ದಾರಿಯಲ್ಲಿ ಮುನ್ನಡೆದರು.
*****
ಬ್ರಹ್ಮದತ್ತ ಮಹಾರಾಜನು ಸುಖ-ಭೋಗಗಳಲ್ಲಿ ಆಸಕ್ತನಾದರೂ ಒಳ್ಳೆಯ ರಾಜನಾಗಿದ್ದನು. ಸಾಧುವೊಬ್ಬರ ಕರುಣೆಯ ಫಲವಾಗಿ ಅವನಿಗೆ ಪ್ರಾಣಿಗಳ ಸಂಭಾಷಣೆಯನ್ನು ತಿಳಿಯುವ ವಿದ್ಯೆ ಕರಗತವಾಯಿತು. ಒಂದು ದಿನ ತನ್ನ ರಾಣಿಯ ಜೊತೆ ಏಕಾಂತದಲ್ಲಿದ್ದಾಗ ಇರುವೆಗಳು ಮಾತಾಡಿದ್ದು ಕೇಳಿ ನಗು ಬಂತು. ನಕ್ಕುಬಿಟ್ಟನು. "ಏತಕ್ಕೆ ನಗುತ್ತಿರುವೆ? ನನ್ನನ್ನು ಪರಿಹಾಸ್ಯ ಮಾಡುತ್ತಿರುವೆಯಾ?" ಎಂದು ರಾಣಿ ಕೇಳಿದಳು. ಅಲ್ಲವೆಂದು ಎಷ್ಟು ಪರಿಯಾಗಿ ಹೇಳಿದರೂ ಅವಳು ಒಪ್ಪಲಿಲ್ಲ. ಈ ವಿಷಯವನ್ನು ಮತ್ತೊಬ್ಬರಿಗೆ ಹೇಳಿದರೆ ತನ್ನ ತಲೆ ಸಾವಿರ ಹೋಳಾಗುವುದೆಂದು ಶಾಪವೂ ಇದೆ ಎಂದು ಸತ್ಯವನ್ನು ಹೇಳಿದರೂ ಅವಳು ನಂಬಲಿಲ್ಲ. ಸಂಸಾರದಲ್ಲಿ ವಿರಸ ಮೂಡಿತು. ಜಿಗುಪ್ಸೆಗೊಳಗಾಗಿ ಬ್ರಹ್ಮದತ್ತನು ಕಾಡಿಗೆ ತಪಸ್ಸಿಗಾಗಿ ಹೋದನು. ಮಂತ್ರಿಗಳಿಬ್ಬರೂ ರಾಜ್ಯದ ಆಡಳಿತ ನೋಡಲು ಹಿಂದೆ ಉಳಿದರು.
ಸಾಧನೆಯ ದಾರಿಯಲ್ಲಿ ಮುನ್ನಡೆಯುತ್ತಿದ್ದ ನಾಲ್ವರು ಸಹೋದರರಿಗೆ ಜೀವನ ಸಾಕು ಎನ್ನಿಸಿತು. ಕಾಡಿಗೆ ಹೋಗಿ ಪೂರ್ಣ ವಿರಕ್ತ ಜೀವನ ನಡೆಸಿ ಮುಕ್ತಿ ಪಡೆಯಬೇಕೆಂದು ನಿರ್ಧರಿಸಿದರು. ಆದರೆ ವೃದ್ಧರಾದ ತಾಯಿ ತಂದೆಯರ ಜೀವನಕ್ಕೆ ದಾರಿ ಮಾಡಬೇಕಿತ್ತು. ಆ ಕಾರಣ ಒಂದು ಶ್ಲೋಕವನ್ನು ಬರೆದು ಸಂಗಡಿಗರಿಗೆ ಕೊಟ್ಟು ಅದನ್ನು ಬ್ರಹ್ಮದತ್ತ ಮಹಾರಾಜನಿಗೆ ತಲುಪಿಸಿದರೆ ತಂದೆ ತಾಯಿಯರ ಮುಂದಿನ ಜೀವನಕ್ಕೆ ವ್ಯವಸ್ಥೆ ಮಾಡುತ್ತಾನೆಂದು ಹೇಳಿ ಅರಣ್ಯಕ್ಕೆ ಹೊರಟು ಹೋದರು.
ಇತ್ತ ತಪಸ್ಸಿನಲ್ಲಿದ್ದ ಬ್ರಹ್ಮದತ್ತನಿಗೆ ರಾಜನಾಗಿ ತನ್ನ ಕರ್ತವ್ಯ ಬಿಟ್ಟಿದ್ದೇನೆಂದು ಅನಿಸಿತು. ರಾಜಧಾನಿಗೆ ಹಿಂತಿರುಗಿದನು. ನಾಲ್ವರು ಸಹೋದರರು ರಾಜನಿಗೆ ಕಳುಹಿಸಿದ್ದ ಪತ್ರವು ಅವನಿಗೆ ಕಾಯುತ್ತಿತ್ತು. ಅದನ್ನು ಓದಿದಾಗ ಅದರಲ್ಲಿ ಹೀಗೆ ಬರೆದಿತ್ತು:
ಸಪ್ತವ್ಯಾಧಾ ದಶಾರ್ಣೇಷು ಮೃಗಾ: ಕಾಲಾಂಜಿರೇ ಗಿರೌ
ಚಕ್ರವಾಕಾ: ಶರದ್ವೀಪೇ ಹಂಸಾ: ಸರಸಿ ಮಾನಸೇ
ತೇಭಿಜಾತಾಃ ಕುರುಕ್ಷೇತ್ರೇ ಬ್ರಾಹ್ಮಣಾ: ವೇದಪಾರಗಾ:
ಪ್ರಸ್ಥಿತಾ ದೀರ್ಘಮಧ್ವಾನಂ ಯೂಯಂ ಕಿಮವಸೀದತ
ಓದಿದ ತಕ್ಷಣ ಬ್ರಹ್ಮದತ್ತ ಮಹಾರಾಜನಿಗೆ ಪೂರ್ವ ಜನ್ಮಗಳ ಸ್ಮರಣೆ ಬಂತು. ದಶಾರ್ಣದಲ್ಲಿ ಬೇಡರಾಗಿದ್ದುದು, ಕಾಲಾಂಜಿರದಲ್ಲಿ ಜಿಂಕೆಗಳಾಗಿದ್ದದು, ಶರದ್ವೀಪದಲ್ಲಿ ಚಕ್ರವಾಕಗಳಾಗಿದ್ದದು, ಮಾನಸ ಸರೋವರದಲ್ಲಿ ಹಂಸಗಳಾಗಿದ್ದುದು ಮತ್ತು ಇವೆಲ್ಲದರ ಹಿಂದೆ ಗುರುಕುಲದಲ್ಲಿ ನಡೆದ ಘಟನೆಗಳೆಲ್ಲಾ ಸ್ಮರಣೆಗೆ ಬಂದವು. ಈ ಪತ್ರ ಬರೆದು ಕಳಿಸಿದವರು ತನ್ನ ನಾಲ್ವರು ಸಹೋದರರು ಎಂದು ಗೊತ್ತಾಯಿತು. ಆ ಪತ್ರವನ್ನು ನೋಡಿದ ಮಂತ್ರಿಗಳಿಬ್ಬರಿಗೂ ಇದೇ ರೀತಿ ಹಿಂದಿನ ಘಟನೆಗಳೆಲ್ಲ ನೆನಪಿಗೆ ಬಂತು. ಪತ್ರ ನೋಡಿದ ರಾಣಿಯೂ ಸಹ "ನೀವು ಕೊಂದ ಹಸುವು ನಾನೇ ಆಗಿದ್ದೆ. ಈಗ ನನಗೂ ಮುಕ್ತಿ ಸಿಗುವ ಕಾಲ ಬಂತು" ಎಂದಳು.
ನಾಲ್ವರು ಸಹೋದರರ ತಂದೆ ತಾಯಿಯರಿಗೆ ಮುಂದಿನ ಜೀವನದ ಮಾರ್ಗ ನಿರ್ದೇಶಿಸಿ, ಉತ್ತರಾಧಿಕಾರಿಗಳಿಗೆ ರಾಜ್ಯವನ್ನು ಒಪ್ಪಿಸಿ ಬ್ರಹ್ಮದತ್ತನೂ, ಮತ್ತು ಇಬ್ಬರು ಮಂತ್ರಿಗಳೂ ಕಾಡಿನಲ್ಲಿ ತಮ್ಮ ಸಹೋದರರನ್ನು ಸೇರಿಕೊಂಡರು.
ಪೂರ್ಣ ವಿರಕ್ತ ಜೀವನ ನಡೆಸಿ ಏಳು ಮಂದಿ ಅಣ್ಣ-ತಮ್ಮಂದಿರೂ ಅದೇ ಜನ್ಮದಲ್ಲಿ ಹುಟ್ಟು-ಸಾವುಗಳ ಚಕ್ರದಿಂದ ಮುಕ್ತಿ ಪಡೆದರು.
*****
ಬ್ರಹ್ಮದತ್ತ ಮತ್ತು ಅವನ ಸಹೋದರರ ಕಥೆ "ಹರಿವಂಶ"ದಲ್ಲಿ ಬರುತ್ತದೆ. ಇದನ್ನು ಮೊದಲ ಬಾರಿ ಕೇಳಿದುದು ಸುಮಾರು ಮೂವತ್ತು ವರ್ಷಗಳಿಗೂ ಹಿಂದೆ ಮೊದಲ ಬಾರಿ ನಮ್ಮ ತಾಯಿಯವರ ಶ್ರಾದ್ಧ ಮಾಡಿದ ಸಮಯದಲ್ಲಿ. ಪಿಂಡಪ್ರದಾನ ಸಮಯದಲ್ಲಿ ಪುರೋಹಿತರು ಈ ಶ್ಲೋಕವನ್ನು ಹೇಳಿದರು. ಇದರ ವಿವರವೇನು ಎಂದು ಕೇಳಿದಾಗ ಇದು ಪಿಂಡಪ್ರದಾನದ ಪ್ರಾಮುಖ್ಯತೆಯನ್ನು ವಿವರಿಸುವ ಮಂತ್ರ ಎಂದಷ್ಟೇ ಹೇಳಿದರು. ಶ್ರಾದ್ಧದ ದಿನ ಸಂಜೆ ಯಾವುದಾದರೂ ಜ್ಞಾನ ಕಾರ್ಯ ಮಾಡಬೇಕೆಂಬುದು ಒಂದು ಪರಂಪರೆ. ಆ ರೀತಿ ಸಂಜೆ ಜ್ಞಾನ ಕಾರ್ಯಕ್ಕೆ ಬಂದ ಆಚಾರ್ಯರನ್ನು ಕೇಳಿದಾಗ ಅವರು ಸೂಕ್ಷ್ಮವಾಗಿ ಈ ವಿಷಯ ಹೇಳಿದರು. ಮುಂದೆ ಹರಿವಂಶದ ಅಧ್ಯಯನ ಮಾಡುವಾಗ ಈ ವೃತ್ತಾಂತದ ಪೂರ್ಣ ವಿವರಗಳು ಸಿಕ್ಕಿದುವು. ಬ್ರಹ್ಮದತ್ತ ಮತ್ತು ಅವನ ಸಹೋದರರಿಗೆ ಉತ್ತಮ ಗತಿ ಸಿಗುವುದಕ್ಕೆ ಮೂಲ ಅವರು ಮಾಡಬಾರದ ಗೋಹತ್ಯೆ ಮಾಡಿದ್ದಾಗಲೂ ಪಿಂಡಪ್ರದಾನ ಮಾಡಿದ್ದು ಮತ್ತು ಅದರಿಂದ ಪ್ರೀತರಾದ ಪಿತೃಗಳು ಅವರಿಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ದಾರಿ ತೋರಿದುದು. ಆದ ಕಾರಣ ಪಿಂಡಪ್ರದಾನದ ಶ್ರೇಷ್ಠತೆಯನ್ನು ನೆನಪಿಸುವ ಸಲುವಾಗಿ ಅತಿಥಿಗಳ ಭೋಜನ ಇನ್ನೇನು ಮುಗಿಯುವ ಸಮಯದಲ್ಲಿ ಪಿಂಡಪ್ರದಾನ ಮಾಡುವಾಗ ಈ ಶ್ಲೋಕವನ್ನು ಹೇಳುವ ಪದ್ದತಿ.
ಈಗಿನ ಸಮಯದಲ್ಲಿ ಈ ಶ್ಲೋಕವನ್ನು ಹೇಳುವ ಪರಿಪಾಠವೇ ನಿಂತು ಹೋದಂತೆ ಕಾಣುತ್ತದೆ. ಶ್ರಾದ್ಧ ಮಾಡುವವರಿಗೂ ಮತ್ತು ಮಾಡಿಸುವವರಿಗೂ ಬೇಗ ಎಲ್ಲ ಕೆಲಸ ಮುಗಿಸುವ ಆತುರ. ಅಕಸ್ಮಾತ್ ಹೇಳಿದರೂ ಅನೇಕ ಮಂತ್ರಗಳಂತೆ ಇದೂ ಒಂದು! ಪೂರ್ತಿ ಹಿನ್ನೆಲೆ ತಿಳಿದು ಮಾಡಿಸುವವರು ಹೇಳಬೇಕು. ಮಾಡುವವರು ಕೇಳಬೇಕು. ಶ್ರಾದ್ಧ ಮಾಡುವುದೇ ನಿಂತು ಹೋಗುವ ದಿನಗಳಲ್ಲಿ ಇದೆಲ್ಲ ಕೇಳುವವರು ಯಾರು?
*****
ಶ್ರಾದ್ಧಾದಿಗಳು ಮಾಡಬೇಕೇ? ಅವು ಅವಶ್ಯಕವೇ? ಎಲ್ಲಿಯೋ ಇದ್ದಾರೆಂದು ನಂಬುವ ಪಿತೃಗಳಿಗೆ ಅದು ಹೇಗೆ ತಲುಪುತ್ತದೆ? ಇದೊಂದು ಕಂದಾಚಾರವಲ್ಲವೇ? ಶ್ರಾದ್ಧ ಮಾಡದಿದ್ದವರೂ ಚೆನ್ನಾಗಿಯೇ ಇದ್ದಾರಲ್ಲ? ಇವೆಲ್ಲ ನ್ಯಾಯವಾದ ಪ್ರಶ್ನೆಗಳು. ಇವುಗಳಿಗೆ ಸಾಧ್ಯವಾದಷ್ಟು ಉತ್ತರಗಳನ್ನೂ ಹುಡುಕಬೇಕು. ಈ ವಿಷಯಗಳಲ್ಲಿ ಆಸಕ್ತಿ ಇದ್ದಾರೆ ಮಾತ್ರ ಈ ಕೆಲಸ.
ಶ್ರಾದ್ಧ ಸಮಯದಲ್ಲಿ ಹೇಳುವ ಉಪಚಾರದ ಶ್ಲೋಕದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಕಂಡೆವು. ಪಿಂಡಪ್ರದಾನದ ಮಹತ್ವ ತಿಳಿಸುವ ಬ್ರಹ್ಮದತ್ತ ಮತ್ತು ಅವನ ಸಹೋದರರ ಕಥೆ ಇಲ್ಲಿ ನೋಡಿದೆವು. ಮೇಲೆ ತಿಳಿಸಿದಂತೆ ಹುಟ್ಟಿದ ಪ್ರಶ್ನೆಗಳಿಗೆ ಸಾಧ್ಯವಾದ ಉತ್ತರವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ತುಂಬಾ ಚೆನ್ನಾಗಿ ಬರೆದಿದ್ದೀರಾ. ಈಗಿನ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯುಕ್ತವಾದ ಬರಹ.
ReplyDeleteತುಂಬಾ ಚೆನ್ನಾಗಿದೆ
ReplyDeleteನಿಮ್ಮ ಅಗಾಧ ಜ್ಞಾನಕ್ಕೆ, ನೆನಪಿನ ಶಕ್ತಿಗೆ, ಜ್ಞಾನವನ್ನು ಇತರರಿಗೆ ಹಂಚುವ ಔದಾರ್ಯಕ್ಕೆ ದೊಡ್ಡದೂಂದು ನಮಸ್ಕಾರ. ಬ್ಯಾಂಕಿನಲ್ಲಿ ನಾನು ನಿಮ್ಮ ಒಂದು ಮುಖವನ್ನು ಮಾತ್ರ ನೋಡಿದ್ದೆ. ಈಗ ನಿಮ್ಮ ಬರಹಗಳನ್ನು ಓದುತ್ತಾ ಹೋದಂತೆ, ನಿಮ್ಮ ಜ್ಞಾನದ ಆಳ, ಅಗಲಗಳಿಗೆ ಎಲ್ಲೆಯೇ ಇಲ್ಲ ಎಂದು ಅನ್ನಿಸುತ್ತದೆ. You are really great 🙏🙏🙏.
ReplyDeleteVery nice. Looking forward for the next episode
ReplyDeleteYour narration is amazing. I look forward to the next part.
ReplyDelete