"ಕಾಡು ಬೆಳೆಸಿ; ನಾಡು ಉಳಿಸಿ" ಎನ್ನುವುದು ಈಗ ಒಂದು ದೊಡ್ಡ ಕೂಗಾಗಿದೆ. ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕವೊಂದರ ದೃಶ್ಯ. ಮರ ಬೆಳೆಸುವ ವಿಷಯ ಚರ್ಚೆಗೆ ಬರುತ್ತದೆ. "ಮನೆಗೆರಡು ಮರ ಬೆಳೆಸಿ" ಎಂದು ಪಾತ್ರಧಾರಿಯೊಬ್ಬ ಹೇಳುತ್ತಾನೆ. ದತ್ತು ಪಾತ್ರದ ಮಾಸ್ಟರ್ ಹಿರಣ್ಣಯ್ಯ "ಯಾಕೆ ಬೆಳೆಸಬೇಕು?" ಎಂದು ಕೇಳುತ್ತಾರೆ. "ಗೊತ್ತಿಲ್ಲ" ಎನ್ನುತ್ತಾನೆ ಆ ನಟ. "ಹಿಂದಿದ್ದ ಕಾಡುಗಳು, ಅವುಗಳಲ್ಲಿದ್ದ ಮರಗಳು ಇವೆಲ್ಲವನ್ನೂ ಈ ಪಾಪಿಗಳು ಕಡಿದು ನುಂಗಿದರು. ಇವರ ಮಕ್ಕಳ ಕಾಲಕ್ಕೆ ಕಡಿಯಲು ಮರಗಳು ಬೇಕಲ್ಲ? ಅದಕ್ಕೇ ನಮಗೆ "ಮನೆಗೆರಡು ಮರ ಬೆಳೆಸಿ" ಎಂದು ಹೇಳುತ್ತಿದ್ದಾರೆ" ಎಂದು ಉತ್ತರ ಕೊಡುತ್ತಾರೆ ಅವರು. ನಲವತ್ತು-ಐವತ್ತು ವರ್ಷಗಳ ಹಿಂದೆ ಅವರ ನಾಟಕಗಳನ್ನು ನೋಡಿದವರಿಗೆ ಈ ದೃಶ್ಯ ನೆನಪಿರುತ್ತದೆ.
ನಮ್ಮ ಬಾಲ್ಯ ಅಥವಾ ಅದಕ್ಕೂ ಹಿಂದೆ "ವನ ಸಂಪತ್ತು" ತಾನೇತಾನಾಗಿ ವಿಜೃಂಭಿಸುತ್ತಿದ್ದ ಕಾಲ. ಮನುಷ್ಯನಿಗೂ ಕಾಡುಗಳಿಗೂ ಬಹಳ ಹತ್ತಿರದ ಸಂಬಂಧ ಇರುತ್ತಿತ್ತು. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಬೇಕಿದ್ದಾಗ ಅರಣ್ಯಗಳನ್ನು ದಾಟಿಯೇ ಹೋಗಬೇಕಾಗುತ್ತಿತ್ತು. ಕಾಡುಗಳನ್ನು ದಾಟುವಾಗ ಹಿಂಸ್ರಪ್ರಾಣಿಗಳ ಮತ್ತು ಕಳ್ಳಕಾಕರ ತೊಂದರೆ ಇದ್ದೇ ಇರುತ್ತಿತ್ತು. ಅನೇಕವೇಳೆ ಕೂದಲೆಳೆಯ ಅಂತರದಿಂದ ಅಪಾಯ ತಪ್ಪುತ್ತಿತ್ತು. ಅರಣ್ಯಗಳಲ್ಲಿ ದೊರೆಯುವ ಅನೇಕ ಅವಶ್ಯ ಪದಾರ್ಥಗಳನ್ನು ತರಲೂ ಸಹ ಕಾಡುಗಳಿಗೆ ಹೋಗಬೇಕಾಗಿತ್ತು. ಎಷ್ಟು ಕಾಡು ಕಡಿದು ನಾಡು ಮಾಡಿದ್ದರೂ ಈಗಲೂ ಅಲ್ಲಲ್ಲಿ ವನಗಳು ಅಷ್ಟೋ ಇಷ್ಟೋ ಉಳಿದಿವೆ. ಕಾಡಿನ ದಾರಿಯಲ್ಲಿ ಆನೆಗಳು ಅಥವಾ ಹುಲಿ-ಚಿರತೆಗಳಿಂದ ವಾಹನಗಳು ಸುತ್ತುವರೆದ ಸುದ್ದಿಗಳು ಕೇಳುತ್ತಲೇ ಇರುತ್ತೇವೆ. ಯೂಟ್ಯೂಬಿನಲ್ಲಿ ಇಂತಹ ನೂರಾರು ವಿಡಿಯೋಗಳು ನೋಡಸಿಗುತ್ತವೆ. ದುರ್ಗಮ ರಸ್ತೆಗಳಲ್ಲಿ ಅಪಘಾತಗಳಿಗೇನೂ ಕಡಿಮೆಯಿಲ್ಲ. ಅಂತಹ ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಸಿಗುವುದೂ ದುರ್ಲಭ. "ಇನ್ನಾಯಿತು, ಸಾವು ಬಂದಿತು" ಎಂದುಕೊಂಡವರು "ಅಬ್ಬಾ! ಯಾವ ಜನ್ಮದ ಪುಣ್ಯವೋ, ಬದುಕುಳಿದೆವು!" ಎಂದು ಉದ್ಗಾರ ತೆಗೆಯುತ್ತಾರೆ.
*****
ಯುದ್ಧಭೂಮಿಯಲ್ಲಿ ಎರಡು ಬಣಗಳು ಎದುರಾಗಿ ಹೋರಾಡುತ್ತಿದ್ದ ಕಾಲವೊಂದಿತ್ತು. ಕಾಳಗದಲ್ಲಿ ನೇರವಾಗಿ ಭಾಗವಹಿಸದವರಿಗೆ ಯುದ್ಧದ ಅಪಾಯ ಅಷ್ಟಾಗಿ ಇರಲಿಲ್ಲ. ಸೈನ್ಯಗಳಲ್ಲಿ ಇದ್ದ ಯೋಧರಿಗೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಯೋಧರಿಗೆ ಈಗಲೂ ಅಷ್ಟೇ. ಯುದ್ಧಕ್ಕೆ ಹೊರಟರೆ ಹಿಂದಿರುಗಿ ಬರುವುದು ಅನುಮಾನವೇ. ಅನೇಕ ರೀತಿಗಳಲ್ಲಿ ಸಾವು ಕಾದಿರುತ್ತಿತ್ತು. ಕಾದಿರುತ್ತದೆ. ಇಷ್ಟೆಲ್ಲಾ ಇದ್ದರೂ ಎಲ್ಲಿಂದಲೋ ಬಂದ ಬಾಂಬುಗಳು ಸ್ಫೋಟಿಸಿ ಯಾವರೀತಿಯಲ್ಲಿಯೂ ಆ ಜಗಳಗಳಿಗೆ ಸಂಬಂಧಿಸದಂತಹ ಜನ-ಜಾನುವಾರುಗಳು ಸಾಯುವಂತೆ ಇರಲಿಲ್ಲ.
ಇಂದು ಪರಿಸ್ಥಿತಿ ಇನ್ನೂ ಕೆಟ್ಟಿದೆ. ಯಾವುದೋ ಎರಡು ದೇಶಗಳೋ. ಗುಂಪುಗಳೋ ಕಾದಾಡುವಾಗ ಅದಕ್ಕೆ ಏನೂ ಸಂಬಂಧವೇ ಇಲ್ಲದ ಜನ ಸಾಯುವ ಕಾಲ ಬಂದಿದೆ. ನಾಗರಿಕ ವಿಮಾನ ಹಾರಾಡುತ್ತಿರುವಾಗ ಎಲ್ಲಿಂದಲೋ ಬಂದು ಬಡಿದ ಅಸ್ತ್ರಗಳಿಗೆ ಪ್ರಯಾಣಿಕರು ಜೀವ ತೆತ್ತ ಸಂಗತಿಗಳು ಆಗಾಗ ಬರುತ್ತವೆ. ಜೀವನ ನಿರ್ವಹಣೆಗಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯುವ, ವಿದ್ಯಾಭ್ಯಾಸಕ್ಕೆ ಎಂದು ಹೋಗಿ ಯುದ್ಧಗಳ ಕಾರಣ ಸಿಕ್ಕಿಹಾಕಿಕೊಂಡ ಯುವ ಜನಾಂಗದ ಕಥೆಗಳು ಮತ್ತೆ ಮತ್ತೆ ನೋಡುತ್ತೇವೆ. ಅನೇಕರ ಮತ್ತು ಸರ್ಕಾರಗಳ ಪ್ರಯತ್ನದಿಂದ ತಮ್ಮದೆಲ್ಲವನ್ನೂ ಕಳೆದುಕೊಂಡು, ಪಡಬಾರದ ಪಾಡು ಪಟ್ಟು, ಅನ್ನಾಹಾರಗಳಿಲ್ಲದೆ ಕಡೆಗೆ ಹೇಗೋ ಜೀವ ಉಳಿಸಿಕೊಂಡು ಬಂದವರಿದ್ದಾರೆ. ಅಂತಹವರು "ಅಬ್ಬಾ! ಯಾವ ಜನ್ಮದ ಪುಣ್ಯವೋ, ಬದುಕುಳಿದೆವು!" ಎಂದು ನಿಟ್ಟುಸಿರು ಬಿಡುತ್ತಾರೆ.
*****
ಯುದ್ಧಗಳ ವಿಷಯ ಬೇರೆಯೇ ಆಯಿತು. ಅಲ್ಲಿ ಹೊಡೆದಾಡಲೆಂದೇ ನಿಂತ ಗುಂಪುಗಳ ನಡುವೆ ಘರ್ಷಣೆ. ಕೊಲ್ಲಲೆಂದೇ ಹೊರಟವರ ಸಮೂಹ. ಆದರೆ ಶತ್ರುಗಳು ಕೇವಲ ಯುದ್ಧದಲ್ಲಿ ಮಾತ್ರ ನಮಗೆ ಎದುರಾಗಬೇಕೆಂದಿಲ್ಲ. ನಮ್ಮಲ್ಲಿ ಅನೇಕರು ಯುದ್ಧಗಳಲ್ಲಿ ಭಾಗವಹಿಸುವುದೂ ಇಲ್ಲ. ನಮ್ಮ ಸುತ್ತಮುತ್ತ ಇರುವ ಮಂದಿಯೇ ಶತ್ರುಗಳಾಗಬಹುದು. ಅವರು ನಮ್ಮ ಶತ್ರುಗಳು ಎಂದು ನಮಗೆ ಗೊತ್ತಿರಬಹುದು. ನಮಗೆ ಗೊತ್ತಿಲ್ಲದಂತೆಯೇ ಅನೇಕ ಶತ್ರುಗಳೂ ಇರುವುದು ಸಹಜ. ವಿನಾಕಾರಣ ಹಗೆತನ ಸಾಧಿಸುವವರಿಗೆ ಕಡಿಮೆಯೇನಿಲ್ಲ. ಅವರಿಗಿಂತ ಹೆಚ್ಚಾಗಿ "ಹಿತಶತ್ರು" ಎಂದು ಹೇಳುವ ಸಮೂಹಗಳೂ ಉಂಟು! ನಮಗೆ ಪರಮ ಪ್ರಿಯರು ಎಂದು ನಂಬಿರುವ ಬಂಧು-ಮಿತ್ರರೂ ಅತ್ಯಂತ ಅವಶ್ಯಕ ಹಾಗೂ ಆಯಕಟ್ಟಿನ ಸಮಯದಲ್ಲಿ ನಮ್ಮ ಕತ್ತು ಕುಯ್ಯಲು ಕಾಯುತ್ತಿರುವುದೂ ಉಂಟು.
ವೈರಿಗಳು ಒಬ್ಬೊಬ್ಬರೇ ದಾಳಿಮಾಡಬೇಕೆಂಬ ನಿಯಮವೇನೂ ಇಲ್ಲವಲ್ಲ. ಅನೇಕ ಈ ರೀತಿಯ ಜನರು ಒಟ್ಟಾಗಿ ನಮ್ಮನ್ನು ಮುಗಿಸಲು ಯತ್ನಿಸಬಹುದು. ಇಂತಹ ಶತ್ರುಗಳ ಹೊಡೆತ ನಮಗೆ ಅನೇಕ ಬಾರಿ ಅದು ಬಿದ್ದ ಮೇಲೆಯೇ ಗೊತ್ತಾಗುವುದು. ಮೊದಲೇ ನಿರೀಕ್ಷೆ ಮಾಡಿದ್ದರೆ ಏನಾದರೂ ತಪ್ಪಿಸಿಕೊಳ್ಳುವ ಪ್ರಯತ್ನವಾದರೂ ಮಾಡಬಹುದು. ಹಠಾತ್ತನೆ ಬೀಳುವ ಬಲವಾದ ಗುದ್ದಿಗೆ ಮಾಡುವುದಾದರೂ ಏನು? ಅನೇಕ ವೇಳೆ ಜೀವನದಲ್ಲಿ ಈ ರೀತಿಯ ಶತ್ರುಗಳಿಂದ ಕೂದಲೆಳೆಯ ಅಂತರದಲ್ಲಿ ಪಾರಾಗುತ್ತೇವೆ. ಅಂತಹ ಸಂದರ್ಭಗಳಲ್ಲಿ "ಆಹಾ! ಏನು ಪುಣ್ಯವೋ, ತಪ್ಪಿಸಿಕೊಂಡೆ!" ಎಂದು ಆಶ್ಚರ್ಯ ಪಡುವುದೂ ಉಂಟು.
*****
ನೀರಿಲ್ಲದೆ ಜೀವನವಿಲ್ಲ. "ಜೀವ" ಎನ್ನುವ ಪದಕ್ಕೆ "ನೀರು" ಎಂದೂ ಒಂದು ಅರ್ಥವಿದೆ ಎಂದು ಹೇಳುತ್ತಾರೆ. ಗಾಳಿಯಿಲ್ಲದೆ ಬದುಕಲಾಗುವುದಿಲ್ಲ. ಗಾಳಿಯ ನಂತರದ ಸ್ಥಾನ ನೀರಿನದು. "ಅವನನ್ನು ನೀರು-ನೆರಳು ಇಲ್ಲದ ಸ್ಥಾನಕ್ಕೆ ಹಾಕಬೇಕು" ಎಂದು ಸರಿಯಾಗಿ ಕೆಲಸ ಮಾಡದ ಸರ್ಕಾರೀ ನೌಕರನಿಗೆ ಉದ್ದೇಶಿಸಿ ಹೇಳುತ್ತಿದ್ದ ಕಾಲ ಒಂದಿತ್ತು. "ನಮಗೆ ಒಂದು ಲೋಟ ನೀರೂ ಕೊಡಲಿಲ್ಲ" ಎಂದು ಅತಿಥೇಯರನ್ನು ಆಕ್ಷೇಪಿಸುವ ಪದ್ಧತಿಯೂ ಇತ್ತು. ನದಿಗಳು, ಜಲಾಶಯಗಳು, ಸಮುದ್ರಗಳನ್ನು ಅನೇಕ ವೇಳೆ ದಾಟಿ ಪ್ರಯಾಣ ಮಾಡಬೇಕಿತ್ತು. ವಿಮಾನಯಾನ ಇಲ್ಲದಿದ್ದಾಗ ಇವು ಅತ್ಯಂತ ಅನಿವಾರ್ಯ ಆಗಿದ್ದವು. ಈಗಲೂ ಅಷ್ಟುಮಟ್ಟಿಗೆ ಇಲ್ಲದಿದ್ದರೂ ನೀರಿನಲ್ಲಿ ಪ್ರಯಾಣ ಮಾಡಬೇಕಾದದ್ದು ಇದ್ದೇ ಇದೆ. ಇಂತಹ ಸಂದರ್ಭಗಳಲ್ಲಿ "ಜಲಗಂಡ" ಎನ್ನುವ ಪದ ಬಳಸುತ್ತಿದ್ದರು. ನೀರಿನಲ್ಲಿ ಅಪಾಯ ಕುಳಿತಿರುತ್ತಿತ್ತು.
ಈಜು ಬಾರದವರಿಗೆ ಪೂರ್ಣ ಪ್ರಮಾಣದ ಅಪಾಯ. ಈಸಬಲ್ಲವರಿಗೆ ಕಡಿಮೆ ಅಪಾಯ. ಕೊರೆಯುವ ನೀರು. ಸುಳಿಗಳುಳ್ಳ ನೀರು. ಇದ್ದಕ್ಕಿದ್ದಂತೆ ಸೂಚನೆಯೇ ಇಲ್ಲದೆ ಹರಿದುಬಂದ ಪ್ರವಾಹದ ನೀರು. ಮೊಸಳೆ, ಶಾರ್ಕ್ ಮುಂತಾದ ಜಲಚರಗಳುಳ್ಳ ನೀರು. ಜಲಪಾತ, ಕಲ್ಲು ಬಂಡೆಗಳು ಇರುವ ನೀರು. ತೂತಿರುವ ಹರಿಗೋಲಿನಲ್ಲಿ ಪ್ರಯಾಣ. ಚೆನ್ನಾದ ಹಡಗಿನಲ್ಲಿ ಹೋಗುವಾಗಲೂ ನೀರ್ಗಲ್ಲುಗಳ ಹೊಡೆತದಿಂದ ಹಡಗು ಛಿದ್ರವಾಗಿ ಮುಳುಗುವ ಅಪಾಯ. ಸಮುದ್ರ ತೀರದಲ್ಲಿ ಹಠಾತ್ತನೆ ಬಂದೆರಗಿದ ಅಲೆಗಳ ಗಂಡಗಳು. ಸುನಾಮಿ ಎಂಬ ದೈತ್ಯ ಪ್ರವಾಹಗಳು. ನಗರದಲ್ಲಿ ಮಳೆಯ ನೀರು ತುಂಬಿ ಹರಿವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ಮುಚ್ಚಳ ತೆಗೆದ "ಮ್ಯಾನ್ ಹೋಲ್" ನುಂಗುವ ಭಯ. ಇಂತಹ ಗಂಡಾಂತರಗಳಿಂದ ಸ್ವಲ್ಪದರಲ್ಲಿ ಪಾರಾಗಬಹುದು. "ನಮ್ಮ ಪಕ್ಕದವರು ಹೋದರು. ನಾವು ಹೇಗೋ, ಯಾವುದೋ ಪುಣ್ಯದ ಬಲದಿಂದ ಬದುಕುಳಿದೆವು" ಎಂದು ಸಮಾಧಾನ ಪಡುವ ಸಂದರ್ಭಗಳೂ ಉಂಟು.
*****
ನೀರಿನಂತೆ ಬೆಂಕಿ. ಬೆಂಕಿಯಿಲ್ಲದೆ ಜೀವನ ಸಾಧ್ಯವಾದರೂ ಅದು ನೀರಸ ಜೀವನ. ಬಾಳು ರಸಭರಿತವಾಗಲು ಬೆಂಕಿ ಮತ್ತು ಅದರ ಇನ್ನೊಂದು ರೂಪವಾದ ಶಕ್ತಿ ಬೇಕೇ ಬೇಕು. ಈ ಬೆಂಕಿಯಾದರೋ ಚಾಕುವಿನಂತೆ. ಹಣ್ಣು, ತರಕಾರಿ ಇತ್ಯಾದಿ ಕತ್ತರಿಸಲು ಚಾಕು ಬೇಕೇ ಬೇಕು. ಆದರೆ ಸ್ವಲ್ಪ ಅಜಾಗರೂಕರಾದರೂ ನಮ್ಮನ್ನೇ ಕತ್ತರಿಸುತ್ತದೆ ಅದೇ ಚಾಕು. ಬೆಂಕಿಯೂ ಅಂತೆಯೇ. ಬಹೂಪಯೋಗಿ ಬೆಂಕಿಯೇ ಒಮ್ಮೊಮ್ಮೆ ಅದರ ವಿಶ್ವರೂಪ ತೋರಿಸುತ್ತದೆ. ನಮ್ಮ ಹಿಡಿತ ತಪ್ಪಿ ತಾನೇತಾನಾಗಿ ಮೆರೆಯುತ್ತದೆ. ಆಗ ಅದರ ಆರ್ಭಟ ಹೇಳಲಾಗದು. ನೋಡನೋಡುತ್ತಿದ್ದಂತೆ ಸಣ್ಣಗಿದ್ದ ಉರಿ ಎಲ್ಲೆಲ್ಲೂ ಹರಡಿ ತನ್ನ ಕೆನ್ನಾಲಿಗೆಯಲ್ಲಿ ಸರ್ವವನ್ನೂ ನುಂಗಿ ಬೂದಿಯಾಗಿಸುತ್ತದೆ.
ಇಂತಹ ಬೆಂಕಿಯ ಮಧ್ಯೆ ಸಿಕ್ಕಿದವರ ಪಾಡು ಅವರಿಗೇ ಗೊತ್ತು. ತಪ್ಪಿಸಿಕೊಂಡು ಹೊರಬರಲು ದಾರಿಯೇ ಕಾಣದು. ಕಂಡಿದ್ದು, ಕಾಣದುದು ಎಲ್ಲವೂ ಉರಿದು ಭಸ್ಮ. ಅಂತಹದರಲ್ಲೂ ಬದುಕಿ ಉಳಿದವರು ಇದ್ದಾರೆ. ಪವಾಡದ ರೀತಿಯಲ್ಲಿ ಹೇಗೋ ಪಾರಾಗುತ್ತಾರೆ. ಹೇಗೆ ಪಾರಾದರು ಎನ್ನುವುದು ಹೇಳುವುದೂ ಕಷ್ಟ. "ಯಾವುದೋ ಹಿಂದೆ ಮಾಡಿದ ಪುಣ್ಯ ಕಾಪಾಡಿತಲ್ಲ. ಜೀವ ಉಳಿಯಿತು" ಎಂದು ನಡುಗುತ್ತಲೇ ಸಂತೋಷ ಪಡುತ್ತಾರೆ.
*****
ಒಬ್ಬ ಪರ್ವತಾರೋಹಿಯನ್ನು ಪತ್ರಕರ್ತರು "ನೀವು ಪರ್ವತಾರೋಹಣ ಏಕೆ ಮಾಡುತ್ತೀರಿ?" ಎಂದು ಕೇಳಿದರು. "ಏಕೆ ಎಂದರೆ, ಅದು ಇದೆಯಲ್ಲ, ಅದಕ್ಕೆ!" ಎಂದು ಉತ್ತರಿಸಿದ. ಮನುಷ್ಯನು ಸ್ವಭಾವತಃ ಸಾಹಸ ಪ್ರಿಯ. ಜೊತೆಗೆ ಪರ್ವತಗಳಲ್ಲಿ ಅವನನ್ನು ಆಕರ್ಷಿಸುವ ಶಕ್ತಿಯೂ ಇದೆ. ಪರ್ವತಗಳಲ್ಲಿ ಹುದುಗಿರುವ ರಹಸ್ಯಗಳನ್ನು ಭೇದಿಸಬೇಕೆನ್ನುವುದು ಒಂದು ರೀತಿಯ ಖಯಾಲಿ. ಅವುಗಳಿಲ್ಲಿರುವ ಅನೇಕ ರೀತಿಯ ಸಂಪತ್ತನ್ನು ಹೆಕ್ಕಿ ತೆಗೆದು ಅನುಭವಿಸುವ ಆಸೆ. ಜೊತೆಗೆ ನಾನಾ ಕಾರಣಗಳಿಂದ ನಮ್ಮ ಹಿರಿಯರು ಬೆಟ್ಟ-ಪರ್ವತಗಳಲ್ಲಿ ದೇವಾಲಯಗಳನ್ನು ಮಾಡಿ ಕೂಡಿಸಿದ್ದಾರೆ. ಇವೆಲ್ಲಾ ಮನುಷ್ಯನನ್ನು ಪರ್ವತ ಏರುವಂತೆ ಮಾಡುತ್ತವೆ.
ದುರ್ಗಮವಾದ ಪರ್ವತಗಳಲ್ಲಿ ಅನೇಕ ಅಡಚಣೆಗಳು೦ಟು. ಅವಘಡಗಳು ಸಂಭವಿಸಬಹುದು. ಕಾಲು ಜಾರಿ ಪ್ರಪಾತಕ್ಕೆ ಬೀಳಬಹುದು. ಭೂಕುಸಿತ ಆಗಬಹುದು. ಸೌಮ್ಯವಾಗಿ ಕಾಣುತ್ತಿರುವ ಪರ್ವತವೇ ಅಗ್ನಿಪರ್ವತವಾಗಿ ಬೆಂಕಿ ಉಗುಳಬಹುದು. ಹಿಮಪಾತ ಆಗಬಹುದು. ಮೇಘಪಾತ (ಕ್ಲೌಡ್ ಬರ್ಸ್ಟ್) ನಡೆಯಬಹುದು. ಮಳೆ-ಗಾಳಿಯಿಂದ ಅಥವಾ ದಾರಿ ತಪ್ಪಿ ಕಷ್ಟಕ್ಕೆ ಸಿಕ್ಕಬಹುದು. ಕಾಡುಪ್ರಾಣಿಗಳಿಂದ ಅಪಾಯ ಬರಬಹುದು. ಅನೇಕರು ಪ್ರತಿವರುಷ ಇಂತಹ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಒಂದೇ ಗುಂಪಿನಲ್ಲಿ ಹೋದವರಲ್ಲಿ ಕೆಲವರು ಗತಿಸಿ ಮತ್ತೆ ಕೆಲವರು ಬದುಕಿ ಉಳಿಯುತ್ತಾರೆ. ಉಳಿದು ಹಿಂದೆ ಬಂದವರು "ನಮ್ಮ ಯಾವುದೊ ಪುಣ್ಯ. ಜೊತೆಯಲ್ಲಿ ಇದ್ದವರು ಹೋದರು. ನಾವು ಹಿಂದಿರುಗಿ ಬಂದೆವು" ಅನ್ನುತ್ತಾರೆ.
*****
ದಿನಪೂರ್ತಿ ಎಷ್ಟೆಲ್ಲಾ ಚಟುವಟಿಕೆಗಳು ನಡೆಸಿದರೂ ಕಡೆಗೆ ರಾತ್ರಿಗೆ ಮನುಷ್ಯನಿಗೆ ನಿದ್ದೆ ಬೇಕೇ ಬೇಕು. ರಾತ್ರಿಪಾಳಿಯಲ್ಲಿ ಕೆಲಸ ಮಾಡಿದರೆ ಹಗಲು ನಿದ್ದೆ ಬೇಕು. ಒಂದು ಮಿತಿಯವರೆಗೆ ನಿದ್ದೆ ತಡೆಯಬಹುದು. ಆ ಮಿತಿ ದಾಟಿದರೆ ನಮಗೆ ಅರಿವಿಲ್ಲದಂತೆ ನಿದ್ರೆ ತಾನೇತಾನಾಗಿ ಆವರಿಸುತ್ತದೆ. ಒಮ್ಮೆ ನಿದ್ರೆ ಬಂದರೆ ಎಂತಹ ವ್ಯಕ್ತಿಯಾದರೂ ಜಡನೇ. ನಿದ್ರೆಯ ಕಾರಣ ಮತ್ತು ಅದರ ದೀರ್ಘ ವಿವರಣೆ ನಮ್ಮ ಉಪನಿಷತ್ತುಗಳಲ್ಲಿ ವಿವರವಾಗಿ ಚರ್ಚಿತವಾಗಿದೆ. ಈ ರೀತಿ ನಿದ್ರೆಯಲ್ಲಿರುವಾಗ ಅನೇಕ ಆಪತ್ತುಗಳು ಬರಬಹುದು. ಮಲಗಿರುವಾಗ ಛಾವಣಿಯೇ ಕುಸಿದು ಅಥವಾ ತಿರುಗುತ್ತಿರುವ ಫ್ಯಾನು ತಲೆಯಮೇಲೆ ಬಿದ್ದು ಸತ್ತವರಿದ್ದಾರೆ. ಹಾವು-ಚೇಳುಗಳು ಕಚ್ಚಿ ಸತ್ತವರಿದ್ದಾರೆ. ಪ್ರವಾಹದಲ್ಲಿ ಕೊಚ್ಚಿ ಹೋದವರಿದ್ದಾರೆ. ಏನೂ ಇಲ್ಲ, ಹೃದಯಾಘಾತ ಆಗಿ ಅನೇಕರು ಮಲಗಿದವರು ಮತ್ತೆ ಏಳದಿರುವುದು ಸರ್ವೇ ಸಾಮಾನ್ಯ.
"ಸ್ಕೂಲ್ ಮಾಸ್ಟರ್" ಚಲನಚಿತ್ರದಿಂದ ನಮಗೆ ಚಿರಪರಿಚಿತವಾದ "ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ" ಪ್ರಾರ್ಥನೆಯಲ್ಲಿ ಹೇಳುವಂತೆ "ರಾತ್ರಿ ನಿದ್ರೆಯ ಗೈವ ಕಾಲದಿ ನೀನೆ ಎಮ್ಮನು ಕಾಯುವಿ" ಎಂದಿದೆ. ಆದರೂ ಅದು ಸಾಮಾನ್ಯ ದಿನಗಳ ಸಾಮಾನ್ಯ ನಿದ್ದೆಯಲ್ಲಿ. ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಸಾವಿನಿಂದ ಅಥವಾ ತೀವ್ರ ಅಪಾಯದಲ್ಲಿ ಬದುಕುಳಿದಾಗ "ಏನೋ, ನಮ್ಮ ಪೂರ್ವ ಪುಣ್ಯವೋ ಅಥವಾ ನಮ್ಮ ಹಿರಿಯರ ಪುಣ್ಯವೋ, ಬದುಕುಳಿದೆವು" ಎಂದು ಉದ್ಗರಿಸುತ್ತಾರೆ.
*****
ಮಲಗಿ ನಿದ್ರಿಸುವುದು ಸುಪ್ತ ಸ್ಥಿತಿ. ಅದು ಬೇಕೇಬೇಕಾದದ್ದು. ಪ್ರಜ್ಞೆ ತಪ್ಪುವುದು ಪ್ರಮತ್ತ ಸ್ಥಿತಿ. ಕೆಲವು ವೇಳೆ ಅದಾಗಿಯೇ ಈ ಸ್ಥಿತಿ ಒದಗಬಹುದು. ಅನೇಕ ವೇಳೆ ಅದನ್ನು ನಾವೇ ಮೈಮೇಲೆ ಎಳೆದುಕೊಳ್ಳಬಹುದು. ಕುಡಿತದಿಂದ ಇರಬಹುದು. ಇತರೆ ಮಾದಕ ದ್ರವ್ಯದಿಂದ ಇರಬಹುದು. ಅಪಘಾತಗಳಿಂದ ಆಗಬಹುದು. ಮಲಗುವಾಗ ಸರಿಯಾದ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದಿರಬಹುದು. ಕಳ್ಳ-ಕಾಕರಿಂದ ಅಪಾಯ ಬರಬಹುದು. "ನನಗೆ ಯಾರು ಏನು ಮಾಡಬಲ್ಲರು?' ಎನ್ನುವ ಅಹಂಕಾರ ಇರಬಹುದು. ತೀವ್ರ ಅಪಾಯದ ಮುನ್ನ ಎಚ್ಚರ ಬಂದರೆ ಬದುಕು.
ಮೈಮೇಲೆ ಪ್ರಜ್ಞೆ ಇದ್ದರೂ ಬೇರೆ ರೀತಿಯ ಮದಗಳಿಂದ ಪ್ರಮತ್ತನಾಗಬಹುದು. ಇಂತಹ ಸ್ಥಿತಿಯಲ್ಲಿ ಅದು ಪ್ರಜ್ಞೆ ಇದ್ದರೂ ಇಲ್ಲದ ರೀತಿ ವ್ಯವಹಾರ ಮಾಡಿಸುತ್ತದೆ. "ಅನ್ನ ಮದ, ಅರ್ಥ ಮದ , ಅಖಿಲ ವೈಭವದ ಮದ, ಮುನ್ನ ಪ್ರಾಯದ ಮದವು, ರೂಪ ಮದವು...." ಮುಂತಾಗಿ ದಾಸರು ವರ್ಣಿಸುತ್ತಾರೆ. ವ್ಯಕ್ತಿ ಸ್ವಭಾವತಃ ಒಳ್ಳೆಯವನೇ ಇರಬಹುದು. ಆದರೆ ಈ ರೀತಿಯ ಮದಗಳು ಮಾಡಬಾರದ್ದನ್ನು ಮಾಡಿಸುತ್ತವೆ. ವಿನಾಶದ ಅಂಚಿಗೆ ತಳ್ಳುತ್ತವೆ. ನಿರ್ನಾಮವಾಗುವ ಮುನ್ನ ಹೇಗೋ ಎಚ್ಚರಗೊಂಡು ಉಳಿದುಕೊಳ್ಳುತ್ತಾನೆ. "ಯಾವುದೊ ಪುಣ್ಯ ವಿಶೇಷ. ಪೂರ್ತಿ ನಾಶವಾಗುವ ಮೊದಲು ಬದುಕಿದೆ" ಎಂದು ಸರಿದಾರಿಗೆ ಬರಬಹುದು.
*****
ಭೌತಶಾಸ್ತ್ರದ ತರಗತಿಗಳಲ್ಲಿ "ಈಕ್ವಿಲಿಬ್ರಿಯಂ" ಎನ್ನುವ ವಿಷಯದ ಮೇಲೆ ಪಾಠ ಮಾಡುತ್ತಾರೆ. "ಸಮತೋಲನ ಸ್ಥಿತಿ" ಎನ್ನುತ್ತಾರೆ. ಪದಾರ್ಥಗಳು ಸಮತೋಲನ ಸ್ಥಿತಿಯಲ್ಲಿ ಇದ್ದಾಗ ಎಲ್ಲವೂ ಸರಿ. ಸಮತೋಲನ ಕಳೆದುಕೊಂಡಾಗ ಬರುವುದೇ ವಿಷಮ ಸ್ಥಿತಿ. ಮನುಷ್ಯರ ವಿಷಯದಲ್ಲೂ ಅದೇ. ಜೀವನದಲ್ಲಿ ಸಮತೋಲನ ತಪ್ಪಿದರೆ ವಿಷಮಸ್ಥಿತಿ ತಲುಪುತ್ತೇವೆ. ಇದು ದೈಹಿಕವಾಗಿ ಇರಬಹುದು. ಮಾನಸಿಕವಾಗಿಯೂ ಇರಬಹುದು. ವ್ಯಾವಹಾರಿಕವಾಗಿ ಕೂಡ ಇರಬಹುದು. ಸಮತೋಲನ ತಪ್ಪಿದ ಅಥವಾ ವಿಷಮ ಸ್ಥಿತಿಯಲ್ಲಿ ಅಪಾಯ ಖಚಿತವೇ.
ಇಂತಹ ಸಂದರ್ಭಗಳಲ್ಲಿ, ಹಾಳಾಗುವುದು ತಪ್ಪುವುದಿಲ್ಲ ಎನ್ನುವ ಕಾಲಗಳಲ್ಲಿ, ಹೇಗೋ ಅಥವಾ ಯಾರೋ ಸಮತೋಲನ ಸ್ಥಿತಿಗೆ ಮರಳಲು ಕಾರಣರಾಗಬಹುದು. ಅದು ಆಗದಿದ್ದರೆ ಕೊನೆ ಬಂದಂತೆ. ಇಂತಹ ಸಮಯದಲ್ಲಿ ಬದುಕುಳಿದರೆ ಅಥವಾ ಪೂರ್ತಿ ನಾಶದಿಂದ ಹಿಂದೆ ಸರಿದರೆ "ಎಂದೋ ಮಾಡಿದ ಪುಣ್ಯದಿಂದ ತಪ್ಪಿತು. ಉಳಿದುಕೊಂಡೆ" ಎಂದು ಎಚ್ಚರಾಗಬಹುದು.
*****
ಮೇಲಿನ ಒಂಭತ್ತು ಪ್ಯಾರಗಳಲ್ಲಿ ಹತ್ತು ವಿಷಯಗಳನ್ನು ನೋಡಿದೆವು. ನೀರು ಮತ್ತು ಸಮುದ್ರ, ಅಂದರೆ ಜಲ ಮತ್ತು ಮಹಾರ್ಣವ, ಒಟ್ಟಾಗಿ ಒಂದೇ ಪ್ಯಾರಾದಲ್ಲಿ ನೋಡಿದ್ದರಿಂದ ಒಂಭತ್ತರಲ್ಲಿ ಹತ್ತಾಯಿತು. ನಮ್ಮ ದೇಶದ ಹೆಮ್ಮೆಯ ಕವಿ-ದಾರ್ಶನಿಕ ಶ್ರೇಷ್ಠ ಭರ್ತೃಹರಿ ಈ ಹತ್ತನ್ನೂ ಎರಡೇ ಸಾಲುಗಳಲ್ಲಿ ಸೂತ್ರ ರೂಪದಲ್ಲಿ (ಫಾರ್ಮುಲಾ ಎನ್ನುವಂತೆ) ಪೋಣಿಸಿ ಕೊಟ್ಟಿದ್ದಾನೆ. ಅವನ ನೀತಿಶತಕದ 99ನೆಯ ಶ್ಲೋಕ ಹೀಗಿದೆ:
ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ವತ ಮಸ್ತಕೇವಾ
ಸುಪ್ತಮ್ ಪ್ರಮತ್ತಂ ವಿಷಮಸ್ಥಿತೋವಾ ರಕ್ಷ೦ತಿ ಪುಣ್ಯಾನಿ ಪುರಾಕೃತಾನಿ
ವನ (ಕಾಡು), ರಣ (ಯುದ್ಧಭೂಮಿ), ಶತ್ರು, ಜಲ (ನೀರು), ಅಗ್ನಿ (ಬೆಂಕಿ) ಇವುಗಳ ಮಧ್ಯದಲ್ಲಿ, ಮಹಾರ್ಣವದಲ್ಲಿ (ಸಮುದ್ರದಲ್ಲಿ), ಪರ್ವತದ ಶಿಖರಗಳಲ್ಲಿ, ಸುಪ್ತ (ನಿದ್ದೆ), ಪ್ರಮತ್ತ (ಪ್ರಜ್ಞೆ ತಪ್ಪಿದಾಗ), ಮತ್ತು ಸಮತೋಲನ ತಪ್ಪಿದ ಕಾಲದಲ್ಲಿ (ವಿಷಮ ಸ್ಥಿತಿಯಲ್ಲಿ), ಹಿಂದೆ ಮಾಡಿದ ಪುಣ್ಯಗಳು ಕಾಪಾಡುತ್ತವೆ.
"ಈ ಕಾರಣದಿಂದ ಯಾವಾಗಲೂ ಒಳ್ಳೆಯ ಕೆಲಸಗಳನ್ನು ಮಾಡಿ ಪುಣ್ಯ ಸಂಪಾದನೆ ಮಾಡಿ"ಎಂದು ಹೇಳುವುದು ಕವಿಯ ಆಶಯ.
*****
ಅಮೇರಿಕ ಸಂಯುಕ್ತ ಸಂಸ್ಥಾನಗಳ ಲಾಸ್ ಏಂಜಲೀಸ್ ಮಹಾನಗರದಲ್ಲಿ ಎಂಟು ದಿನಗಳಿಂದ ನಿಲ್ಲದೆ ಉರಿಯುತ್ತಿರುವ ಪಂಚಾಗ್ನಿ (ಐದು ಕಾಡ್ಗಿಚ್ಚುಗಳು) ಮಧ್ಯದಲ್ಲಿ ಕುಳಿತು ಭರ್ತೃಹರಿ ನಮಗೆ ಕೊಟ್ಟಿರುವ ಅನರ್ಘ್ಯ ರತ್ನಗಲ್ಲಿ ಒಂದಾದ ಮೇಲೆ ಹೇಳಿದ ಸ್ಲೋಕವನ್ನು ಪ್ರತಿದಿನವೂ ನೆನೆಯಬೇಕು!
ಈ ಸಂಚಿಕೆ ಈಗಾಗಲೇ ದೊಡ್ಡದಾಯಿತು. ತಪ್ಪು ಭರ್ತೃಹರಿಯದು. ಇಷ್ಟೆಲ್ಲ ವಿಷಯಗಳನ್ನು ಒಂದೇ ಶ್ಲೋಕದಲ್ಲಿ ಸೇರಿಸಿದ್ದರಿಂದ ಹಾಗಾಯಿತು. "ಆಯಿತು. ಭರ್ತುಹರಿ ಹೇಳಿದ. ಪುನರ್ಜನ್ಮದಲ್ಲಿ ನಂಬಿದವರು ಒಪ್ಪಿದರು. ನಾವು ಪುನರ್ಜನ್ಮದಲ್ಲಿ ನಂಬಿಕೆ ಇಟ್ಟವರಲ್ಲ. ನಮಗೇನು ಸಂಬಂಧ?"ಎಂದು ಕೇಳುವವರು ಖಂಡಿತ ಇದ್ದಾರೆ. ಪಂಚಾಗ್ನಿ ವಿದ್ಯೆ ಮತ್ತು ಪಂಚಾಗ್ನಿ ತಪಸ್ಸಿನ ವಿಷಯವೂ ಇದೆ. ಇವೆಲ್ಲವನ್ನೂ ಸಾಧ್ಯವಾದರೆ ಮುಂದಿನ ಸಂಚಿಕೆಗಳಲ್ಲಿ ನೋಡೋಣ.
ಸಮಯೋಚಿತವಾದ ಬರಹ. ಚೆನ್ನಾಗಿ ಬಂದಿದೆ. ಧನ್ಯವಾದಗಳು
ReplyDeleteಅಮೇರಿಕಾದ ಲಾಸ್ ಏಂಜಲೀಸ್ ನಗರದಲ್ಲಿ especially ರಾತ್ರಿ ನಿದ್ದೆ ಮಾಡದೆ alert ಆಗಿ ಇರುವಾಗ ಬೇರೆ ಬೇರೆ , ಭಾಷೆಗಳಲ್ಲಿ, ರೀತಿಯಲ್ಲಿ ದೇವರ ಬಳಿ "ರಾತ್ರಿ ನಿದ್ದೆ ಗೈವ ಕಾಲದಿ...."ಪ್ರಾರ್ಥನೆ ಮಾಡಿರಬೇಕು, ನಾನು ನಿಮ್ಮ ಈ ಬರವಣಿಗೆ ಯನ್ನು ಎದುರು ನೋಡುತ್ತಿದೆ, ಎಂದೋ ಮಾಡಿದ.... ಬದುಕಿದೆ ಎನ್ನುವ ವಿಚಾರವನ್ನು ಚೆನ್ನಾಗಿ ಮೂಡಿಸಿ ಬರೆದಿದ್ದೀರಿ
ReplyDeleteಸಕಾಲಿಕ ಬರಹ ಚೆನ್ನಾಗಿದೆ.
ReplyDeleteWonderful and appropriate blog.
ReplyDeleteಉರಿಯುತ್ತಿರುವ ಬೆಂಕಿಯ ಮಧ್ಯೆ ಇದ್ದುಕೊಂಡು ಇಂತಹ ಸಮಯೋಚಿತ ಲೇಖನಗಳನ್ನು ಬರೆಯುತ್ತಿರುವ ನಿಮ್ಮ ಸ್ಥಿತಪ್ರಜ್ಞತಾ ಮನೋಭಾವಕ್ಕೆ ನಮ್ಮೆಲ್ಲರ ದೊಡ್ಡ ನಮಸ್ಕಾರ 🙏ಹೌದು, ನೀವು ಹೇಳಿದಂತೆ ನಾವು ಮಾಡುವ ಒಳ್ಳೆಯ ಕೆಲಸಗಳ ಪುಣ್ಯವೇ ನಮ್ಮನ್ನೆಲ್ಲ ಕಾಪಾಡುವ ಬಗ್ಗೆ ಸಂಶಯವೇ ಇಲ್ಲ 👍 ಕವಿಶ್ರೇಷ್ಠ ಭರ್ತೃಹರಿಯ ಶ್ಲೋಕವನ್ನು ಸೋದಾಹರಣವಾಗಿ ಸೊಗಸಾಗಿ ವಿವರಿಸಿದ್ದೀರಿ.👌 ಕೊನೆಯಲ್ಲಿ ಇಷ್ಟೊಂದು ಉತ್ತಮ, ಸುದೀರ್ಘ ಲೇಖನಕ್ಕೆ ಅವನ ಚಿಕ್ಕ ಶ್ಲೋಕವೇ ಕಾರಣವೆಂದು ತಪ್ಪನ್ನೂ ಅವನ ಮೇಲೇ ಹೊರಿಸಿದ್ದೀರಿ😂😂🙏 ಎಂದಿನಂತೆ ಧನ್ಯವಾದಗಳು ಸರ್ 🙏
ReplyDeleteವಿಷಯವನ್ನು ಬಹಳ ಚೆನ್ನಾಗಿ ವರ್ಣಿಸಿದ್ಜೀರಿ. ಅಭಿನಂದನೆಗಳು
ReplyDeleteBeautiful write up covering so many aspects of very sensible view indeed pl keep it up
ReplyDeleteIf I had not asked to repost I would have missed a noble article showing you deep concerns on various topics thanks
Great article. Enjoyed reading.
ReplyDeleteCR Ramesh Babu
A wonderful write up of various situations , circumstances and challenges that nature throws at life , is accurately expressed in simple language, and with great flair, in which every word seems to be true.
ReplyDeleteThe importance of the "'Pancha Mahabothas " for the very existence of all living beings and at the same time, what havoc it can cause to erase the very existence of creation is brought about , in a beautifully crafted verbatim !!!!
Thanks so much for all the efforts you have put into the narrative ......