ಹಿಂದಿನ ಸಂಚಿಕೆಯಲ್ಲಿ "ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯಡಿಯಲ್ಲಿ ಗುರುವು ತನ್ನ ಬಳಿ ಬಂದ ಜ್ಞಾನಾರ್ಥಿಯನ್ನು ಹೇಗೆ ಪರೀಕ್ಷಿಸಿ, ನಂತರ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ ಎನ್ನುವುದನ್ನು ನೋಡಿದೆವು. ಈಗಿನ ಕಾಲದ ಶಿಕ್ಷಕ-ವಿದ್ಯಾರ್ಥಿ ನಡುವಿನ ಬಾಂಧವ್ಯಕ್ಕೂ ಗುರು-ಶಿಷ್ಯರ ನಡುವಿನ ಹೊಂದಾಣಿಕೆ, ಸಾಮ್ಯ-ವಿರುದ್ಧಗಳ ಸಣ್ಣ ನೋಟದ ಪ್ರಯತ್ನ ಮಾಡಿದೆವು. ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಹಿಂದಿನ ಸಂಚಿಕೆಯ ಒಂದು ಕಡೆಯಲ್ಲಿ "ಶಿಷ್ಯನಿಗೆ ಉತ್ತರ ಗೊತ್ತಿಲ್ಲ. ಆದದ್ದರಿಂದ ಪ್ರಶ್ನೆ ಕೇಳುತ್ತಾನೆ. ಗುರುವಿಗೆ ಉತ್ತರ ಗೊತ್ತಿದ್ದರೆ ಹೇಳುತ್ತಾನೆ. ಅವನಿಗೂ ಗೊತ್ತಿಲ್ಲದಿದ್ದರೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಾರೆ. ಇಲ್ಲಿ ಸೋಲು-ಗೆಲವುಗಳ ಜಂಜಾಟವಿಲ್ಲ" ಎಂದಿದ್ದೆವು. ಹಿರಿಯ ಸ್ನೇಹಿತರೊಬ್ಬರು "ಗುರುವು ಪ್ರತಿ ಶಿಷ್ಯನೊಂದಿಗೆ, ಅವನ ಪ್ರತಿ ಸಂಶಯಕ್ಕೆ ಅವನ ಜೊತೆಯಲ್ಲಿ ಉತ್ತರ ಹುಡುಕಲು ಹೋಗುತ್ತಾನೆಯೇ? ಇದು ಸಾಧ್ಯವೇ?" ಎಂದು ಕೇಳಿದ್ದಾರೆ. ಹೌದು. ಇದು ಸಾಧ್ಯವಿಲ್ಲದ ಮಾತು. ಅನವಶ್ಯಕವೂ ಹೌದು. ಜಿಜ್ಞಾಸುವು ತನ್ನ ಅನೇಕ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳಬೇಕು. ಗುರುವು ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬಹುದು. ಮಾರ್ಗದರ್ಶನ ನೀಡಬಹುದು. ಪರಮಸತ್ಯದ ಅನ್ವೇಷಣೆಯಲ್ಲಿ ಜೊತೆ-ಜೊತೆಯಾಗಿ ಉತ್ತರ ಹುಡುಕುವ ಅನೇಕ ನಿದರ್ಶನಗಳಿವೆ. ಆದರೆ ಪ್ರತಿಯೊಬ್ಬ ಶಿಷ್ಯನ ಪ್ರತಿಯೊಂದು ಸಂಶಯದ ಪರಿಹಾರ ಇಬ್ಬರೂ ಜೊತೆಯಲ್ಲಿ ಹುಡುಕುವುದು ಸಾಧ್ಯವಿಲ್ಲ.
ಒಂದು ವಿಷಯದ ಬಗ್ಗೆ ಹೊರಗಿನಿಂದ ತಿಳಿಯುವುದು ಅನುಭವ. ಒಳಗಿನಿಂದ ತಿಳಿಯುವುದು ಅನುಭಾವ. ಲೌಕಿಕದ ಅನೇಕ ವಿಷಯಗಳು ಅನುಭವದ ಮಟ್ಟದಲ್ಲಿಯೇ ನಿಲ್ಲುತ್ತವೆ. ಪಾರಮಾರ್ಥಿಕ ವಿಷಯಗಳಲ್ಲಿ ಇನ್ನೊಬ್ಬರ ಅನುಭವದಿಂದ ನಮಗೆ ತೃಪ್ತಿಯಾಯಿತು ಎನ್ನುವಂತಿಲ್ಲ. ನಾವೇ ನಮ್ಮ ಅನುಭವದಿಂದ ತಿಳಿಯಬೇಕು. ಆಗ ಅನುಭವದ ಮಟ್ಟದಿಂದ ಅನುಭಾವಕ್ಕೆ ಏರುವ ಅವಶ್ಯಕತೆ ಇದೆ. ಇಲ್ಲಿ ಗುರುವು ಮಾರ್ಗದರ್ಶಕನಾಗಬಹುದೇ ಹೊರತು ಉತ್ತರ ಹುಡುಕಲು ಶಿಷ್ಯನ ಜೊತೆಯಲ್ಲಿ ಸೇರುವಹಾಗಿಲ್ಲ.
*****
"ನಿನಗೆ ಮೈಮೇಲೆ ಪ್ರಜ್ಞೆ ಇದೆಯೇ?" ಎಂದು ದೊಡ್ಡವರು ಚಿಕ್ಕವರನ್ನು ಗದರುವುದು ಕೇಳಿದ್ದೇವೆ. "ಪ್ರಜ್ಞೆ" ಅಂದರೆ ಏನು? "ಅಪಘಾತದಿಂದ ಅವನಿಗೆ ಪ್ರಜ್ಞೆ ಹೋಯಿತು" ಅನ್ನುತ್ತೇವೆ. ಪ್ರಜ್ಞೆ ಅನ್ನುವ ಪದವನ್ನು ಸಾಮಾನ್ಯವಾಗಿ "ಎಚ್ಚರ" (conciousness) ಅನ್ನುವ ಅರ್ಥದಲ್ಲಿ ಪ್ರಯೋಗಿಸುತ್ತೇವೆ. ಪ್ರಜ್ಞೆ ಪದದ ಸರಿಯಾದ ಅರ್ಥವೆಂದರೆ "ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಬೇರೆಲ್ಲ ಹಿಂದೆ ಕಲಿತ ವಿಷಯಗಳನ್ನೂ ಸೇರಿಸಿಕೊಂಡು ಒಟ್ಟಾರೆ ಅರ್ಥ ತಿಳಿಯುವ ಶಕ್ತಿ". ಈ ಪ್ರಜ್ಞಾಶಕ್ತಿಯ ವಿಕಾಸ ಮಾಡಿಕೊಂಡು ಬೆಳೆಯುವುದು "ಪ್ರತಿಭೆ".
ಆಚಾರ್ಯ ಅಭಿನವ ಗುಪ್ತನು ತನ್ನ ಗುರುಗಲ್ಲೊಬ್ಬ ಎಂದು ಹೇಳಿಕೊಂಡಿರುವ ಭಟ್ಟತೌತ (ಭಟ್ಟತಾತ) ತನ್ನ "ಕಾವ್ಯ ಕೌತುಕ" ಅನ್ನುವ ಗ್ರಂಥದಲ್ಲಿ ಈ "ಪ್ರತಿಭೆ" ಅನ್ನುವ ಪದಕ್ಕೆ ವಿವರಣೆ ಕೊಡುತ್ತಾನೆ. ದುರ್ದೈವಕ್ಕೆ ಈ "ಕಾವ್ಯ ಕೌತುಕ" ಅನ್ನುವ ಗ್ರಂಥವೂ, ಅದಕ್ಕೆ ಅಭಿನವ ಗುಪ್ತ ರಚಿಸಿಕೊಟ್ಟ "ವಿವರಣ" ಎನ್ನುವ ಟೀಕಾಗ್ರಂಥವೂ ಈಗ ಸಿಕ್ಕುವುದಿಲ್ಲ. ಆದರೆ ಈ ಗ್ರಂಥದ ಒಂದು ಶ್ಲೋಕ ಬೇರೆ ಕಡೆಗಳಲ್ಲಿ ಮುಂದಿನ ಕವಿಗಳು ಉಲ್ಲೇಖಿಸಿರುವುದರಿಂದ ಸಿಗುತ್ತದೆ. ಅದು ಹೀಗಿದೆ:
ತದನುಪ್ರಾಣನಾಜೀವದ್ ವರ್ಣಾನಾನಿಪುಣಃ ಕವಿ:ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ
"ಹೊಸಹೊಸದಾಗಿ ಉಲ್ಲೇಖಿಸುವ ಸಾಮರ್ಥ್ಯವುಳ್ಳ ಪ್ರಜ್ಞಾಶಕ್ತಿಗೆ "ಪ್ರತಿಭೆ" ಎಂದು ಹೆಸರು. ಆ ಪ್ರತಿಭೆಯನ್ನವಲಂಬಿಸಿ ಜೀವಂತವಾದ ವರ್ಣನೆಯನ್ನು ಮಾಡುವುದರಲ್ಲಿ ನೈಪುಣ್ಯವುಳ್ಳವನು ಕವಿ" ಎನ್ನುವುದು ಇದರ ಅರ್ಥ. ಸುಮಾರು ಒಂದು ಸಾವಿರದ ಎರಡು ನೂರು ವರುಷಗಳ ಹಿಂದೆ (ಎಂಟನೆಯ ಶತಮಾನ) ಈ ಮಟ್ಟದ ಖಚಿತವಾದ ಲಕ್ಷಣ (ಅರ್ಥ ನಿರೂಪಣೆ) ನಮ್ಮ ಹಿರಿಯರು ಮಾಡಿದ್ದಾರೆ ಎಂದು ಹೆಮ್ಮೆ ಪಡಬಹುದು. ಇಂತಹ ನುಡಿಮುತ್ತುಗಳುಳ್ಳ ಗ್ರಂಥಗಳು ಪರಕೀಯರ ಧಾಳಿಗಳಲ್ಲಿ ಸುಟ್ಟು ಬೂದಿಯಾದುವು ಎಂದು ವಿಷಾದಿಸಲೂಬಹುದು.
ಒಳ್ಳೆಯ ಗುರುವನ್ನು ಆರಿಸಿಕೊಂಡು ಅವನಿಂದ ಕಲಿಯುವ ಶಿಷ್ಯನಿಗೆ ಈ "ಪ್ರಜ್ಞಾಶಕ್ತಿ" ಇರುವುದು ಅತಿ ಅವಶ್ಯಕ.
*****
ಈಗಿನ ಶಾಲಾ-ಕಾಲೇಜುಗಳ ಮಾದರಿಯ ವಿದ್ಯಾಭ್ಯಾಸ ನಡೆಯುವ ಸಂದರ್ಭದಲ್ಲಿ ಗುರು-ಶಿಷ್ಯರ ಸಂಬಂಧದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಇದಕ್ಕೆ ಒಂದು ಉದಾಹರಣೆ ನೋಡುವುದು ಸೂಕ್ತ. ಇದೇನೂ ಇಂದಿನ ವೃತ್ತಾಂತವಲ್ಲ. ಸುಮಾರು ಆರೇಳು ದಶಕಗಳ ಹಿಂದಿನದು. ಈಗಂತೂ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ಏಕಮೇವ ಗುರಿಯಿಂದ ಓದುವ ವಿದ್ಯಾರ್ಥಿಗಳ ಪರಿ ಹೇಳುವುದೇ ಬೇಡ.
ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅವರಿಗೆ ಮುಂಬಡ್ತಿ (ಪ್ರಮೋಷನ್) ಕೊಡುವ ಸಂದರ್ಭ. ಆಗ ಅಕ್ಸಫರ್ಡ್ ಅಥವಾ ಕೇಂಬ್ರಿಜ್ ವಿದ್ಯಾಲಯಗಳಲ್ಲಿ ಡಿಗ್ರಿ ಪಡೆದವರಿಗೆ ಮಾತ್ರವೇ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗುತ್ತಿತ್ತಂತೆ. ಶ್ರೀಕಂಠಯ್ಯನವರು ಅಲ್ಲಿಗೆ ಹೋಗಿ ಡಿಗ್ರಿ ಪಡೆದವರಲ್ಲ. ಅವರಿಗೆ ಒಂದು ಆಯ್ಕೆಯನ್ನು ಕೊಟ್ಟರಂತೆ. ಹೆಚ್ಚು ಸಂಬಳದ ಕನ್ನಡ ಪ್ರಾಧ್ಯಾಪಕನ ಕೆಲಸ ಅಥವಾ ಕಡಿಮೆ ಸಂಬಳದ ಇಂಗ್ಲಿಷ್ ಪ್ರಾಧ್ಯಾಪಕನ ಕೆಲಸ. ಆಯ್ಕೆ ಶ್ರೀಯವರಿಗೆ ಬಿಟ್ಟದ್ದು. ಅವರ ಎರಡೂ ಭಾಷೆಗಳ ಮೇಲಿನ ಅಪಾರ ಪಾಂಡಿತ್ಯ ತಿಳಿದಿದ್ದ ಮೇಲಧಿಕಾರಿಗಳಿಂದ ಈ ಅವಕಾಶ. "ನಾನು ಕನ್ನಡದ ಕೆಲಸವನ್ನು ಹೇಗಾದರೂ ಮಾಡುತ್ತೇನೆ. ವಿದೇಶೀಯರಿಗಿಂತ, ಅಲ್ಲಿನ ಡಿಗ್ರಿ ಪಡೆದವರಿಗಿಂತ ಇಲ್ಲಿನವರು ಏನೂ ಕಡಿಮೆ ಇಲ್ಲ ಎಂದು ತೋರಿಸಬೇಕು" ಎನ್ನುವ ಛಲದಿಂದ ಕಡಿಮೆ ಸಂಬಳದ ಇಂಗ್ಲಿಷ್ ಪ್ರೊಫೆಸರ್ ಹುದ್ದೆ ಆರಿಸಿಕೊಂಡರು.
ಶೇಕ್ಸಪೀಯರ್ ಮಹಾಕವಿಯ "ಒಥೆಲೋ" ನಾಟಕ ಒಂದು ತರಗತಿಗೆ ಪಠ್ಯಪುಸ್ತಕ. ಶ್ರೀಯವರು ಕೇವಲ ಪರೀಕ್ಷೆಗೆ ಪಾಠ ಹೇಳಿದವರಲ್ಲ. ಆಯಾಗೋ ಪಾತ್ರ ಚಿತ್ರಣ ವಿವರಿಸುವಾಗ ಬೇರೆ ಬೇರೆ ಭಾಷೆಗಳ ಮುಖ್ಯ ಕೃತಿಗಳಲ್ಲಿ ಬರುವ ಖಳನಾಯಕರ ಪಾತ್ರಗಳ ಜೊತೆ ಆಯಾಗೋವಿನ ಸಾಮ್ಯ-ಭೇದಗಳನ್ನು ಒಂದು ವಾರದವರೆಗೂ ವಿವರಿಸಿದರಂತೆ. ಅನೇಕ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಬೇಡವಾಯಿತು. ಕಡೆಗೆ ಉಪಕುಲಪತಿಗಳಾದ ಏನ್. ಎಸ. ಸುಬ್ಬ ರಾವ್ ಅವರಿಗೆ ದೂರೊಂದು ಹೋಯಿತು. "ಪರೀಕ್ಷೆಗೆ ಪಾಠ ಹೇಳದೆ ಏನೇನೋ ಹೇಳುತ್ತಾ ಕಾಲಹರಣ ಮಾಡುತ್ತಾರೆ" ಎಂದು ದೂರು. ಶ್ರೀಯವರ ಬಗ್ಗೆ ಗೊತ್ತಿದ್ದ ಉಪಕುಲಪತಿಗಳು ದೂರಿನ ಮೇಲೆ ಏನೂ ಕ್ರಮ ಕೈಗೊಳ್ಳಲಿಲ್ಲ ಅನ್ನುವುದು ಬೇರೆ ಮಾತು. ವಿದ್ಯಾರ್ಥಿಗಳು ಪಾಠವನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದಕ್ಕೆ ಈ ಉದಾಹರಣೆ. ಇದನ್ನು ಶ್ರೀಯವರ ಜೀವನಚರಿತ್ರೆಯಲ್ಲಿ ಕಾಣಬಹುದು.
*****
ಒಂದು ವಿಷಯವನ್ನು ಓದಿದರೆ ಅಥವಾ ಮತ್ತೊಬ್ಬರಿಂದ ಕೇಳಿದರೆ ಅದು ಪೂರ್ತಿಯಾಗಿ ಅರ್ಥವಾಗುತ್ತದೆ ಅನ್ನುವಂತಿಲ್ಲ. ಸ್ಥೂಲವಾಗಿ ಕೆಲಮಟ್ಟಿಗೆ ತಿಳಿಯಬಹುದು. ಆಳವಾದ ತಿಳಿವಿಗೆ ಅದರ ಸಂಬಂಧಿಸಿದ ವಿಷಯಗಳ ಮನನ-ಮಂಥನ ಬೇಕಾಗುತ್ತದೆ. ಓದಿ, ಕೇಳಿ, ಮನನ ಮಾಡಿ, ಪೂರ್ಣವಾಗಿ ಅರ್ಥವಾಗಿವೆ ಅನ್ನುವ ಅನೇಕ ವಿಷಯಗಳು ಒಂದು ಹಂತದಲ್ಲಿ ಮತ್ತೊಮ್ಮೆ ಅಧ್ಯಯನ ಮಾಡಬೇಕು ಅನ್ನುವ ಪರಿಸ್ಥಿತಿ ಬರುವುದೂ ಉಂಟು.
ಪ್ರಾಚಾರ್ಯ ತಿ. ನಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದೊಡ್ಡ ಹೆಸರು. ತತ್ವಶಾಸ್ತ್ರದ ಪರಮ ಗುರುಗಳಾದ ಪ್ರಾಚಾರ್ಯ ಎಂ. ಹಿರಿಯಣ್ಣನವರ ಶಿಷ್ಯರು. ಹಿರಿಯಣ್ಣನವರು ಮತ್ತು ಇತರ ಪಂಡಿತೋತ್ತಮರ ಶಿಷ್ಯರಾಗಿ ಅಧ್ಯಯನ ಮಾಡಿ ಮುಂದೆ ತಾವೇ ದೊಡ್ಡ ಮಟ್ಟದ ಗುರುವರ್ಯರಾದವರು ತಿ. ನಂ. ಶ್ರೀಕಂಠಯ್ಯನವರು. "ಭಾರತದ ಸಂವಿಧಾನ" ಕನ್ನಡದಲ್ಲಿ ಹೊರಬರಲು ಕಾರಣಕರ್ತರು. "ಪ್ರೆಸಿಡೆಂಟ್" ಅನ್ನುವದಕ್ಕೆ ಪರ್ಯಾಯವಾಗಿ "ರಾಷ್ಟ್ರಪತಿ" ಅನ್ನುವ ಪದವನ್ನು ಕೊಟ್ಟವರು. ಅವರು ಜೀವಿಸಿದ್ದುದು ಕೇವಲ ಅರವತ್ತು ವರ್ಷ. ಅಷ್ಟು ಕಾಲದಲ್ಲೇ ಅನೇಕ ಸಾಧನೆಗಳನ್ನು ಮಾಡಿದ ಮಹನೀಯರು.
ಅವರ ಮೇರು ಕೃತಿ "ಭಾರತೀಯ ಕಾವ್ಯಮೀಮಾಂಸೆ" ರಚನೆಯ ಸಂದರ್ಭ. ಆನಂದವರ್ಧನನ "ಧ್ವನ್ಯಾಲೋಕ" ಮೇರು ಕೃತಿಯನ್ನು ಅನೇಕ ಬಾರಿ ತಾವು ಅಧ್ಯಯನ ಮಾಡಿದುದಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು. "ಭಾರತೀಯ ಕಾವ್ಯಮೀಮಾಂಸೆ" ಕೃತಿ ರಚನೆಯ ಸಂದರ್ಭದಲ್ಲಿ ಅವರಿಗೆ ಅದನ್ನು ಮತ್ತೊಮ್ಮೆ ಗುರುಮುಖೇನ ಅಧ್ಯಯನ ಮಾಡಬೇಕೆನ್ನಿಸಿತಂತೆ! ಆ ವೇಳೆಗೆ ಅವರ ಗುರುಗಳಾದ ಹಿರಿಯಣ್ಣನವರಿಗೆ ಹತ್ತಿರ ಹತ್ತಿರ ಎಂಭತ್ತರ ವಯಸ್ಸು. ಅವರು ಬೇರೆ ಚಟುವಟಿಕೆಗಳನ್ನು ನಿಲ್ಲಿಸಿ ಕೇವಲ ತಮ್ಮ ಅಧ್ಯಯನ ಮಾತ್ರ ನಡೆಸುತ್ತಿದ್ದರಂತೆ. ಆದರೂ ಶಿಷ್ಯನ ಕೋರಿಕೆ ಮನ್ನಿಸಿ ಶಿಷ್ಯ ವಾತ್ಸಲ್ಯದಿಂದ ಮತ್ತೊಮ್ಮೆ ಪಾಠ ಹೇಳಿದರಂತೆ!
"ಭಾರತೀಯ ಕಾವ್ಯಮೀಮಾಂಸೆ" ಕೃತಿಯ ಮುನ್ನುಡಿಯಲ್ಲಿ ಶ್ರೀಕಂಠಯ್ಯನವರು ಈ ವಿಷಯವನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಒಂದು ಕಡೆ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳು. ಮತ್ತೊಂದೆಡೆ ಎಷ್ಟು ತಿಳಿದರೂ ಇನ್ನೂ ತಿಳಿಯುವುದು ಇದೆ ಎನ್ನುವ ಘನಪಾಠಿ ಗುರು-ಶಿಷ್ಯರು. ಗುರು-ಶಿಷ್ಯ ಬಾಂಧವ್ಯಕ್ಕೆ ಸೊಗಸಾದ ಉದಾಹರಣೆಗಳು.
*****
ಜ್ಞಾನದ ಒಂದು ಶಾಖೆಯನ್ನು ಒಬ್ಬರು ಮತ್ತೊಬ್ಬರಿಂದ ಶಿಷ್ಯರಾಗಿ ಕಲಿತು, ಅವರಿಗೆ ಗುರುವಾಗಿ ಮತ್ತೊಂದು ಜ್ಞಾನದ ಶಾಖೆಯನ್ನು ಕಲಿಸಿರುವ ಉದಾಹರಣೆಗಳಿವೆ. ಇದೆ ರೀತಿ ಗುರು-ಶಿಷ್ಯರಿಬ್ಬರೂ ಜೊತೆಯಾಗಿ ಪರಮ ಸತ್ಯದ ಅನ್ವೇಷಣೆ ಮಾಡಿರುವುದೂ ಇದೆ. ಇವುಗಳನ್ನು ಮುಂದೆ ಎಂದಾದರೂ ಅವಕಾಶವಾದಾಗ ನೋಡೋಣ.
ಬಿ ಎಂಶ್ರೀ ಹಾಗೂ ತೀ ನಂಶ್ರೀ ಕೂಡ ಗುರು ಶಿಷ್ಯರ ಬಂಧನದಿಂದಿದ್ದರೆಂದೂ ಕೇಳಿ
ReplyDeleteದ್ದೇನೆ ಹಿಂದಿನ ಘಟಾನುಘಿಗಳಹೆಸರು ಕೇಳಿಯೇ ಕನ್ನಡ ಪ್ರೀಮಿಗಳ ರೋಮನಿಮಿರೇಳುತ್ತದೆ ಈ ಅಂಕಣ ನಓದಿ ಮನಸ್ಸು ಪ್ರಫುಲ್ಲವಾಯಿತು
ನಿಮ್ಮ ಅನುಭವದ ಹೆಚ್ಚು ವಿಷಯಗಳಕಡೆಗೆ ತಮ್ಮ ಜ್ಞಾನದ ಅನುಭವ ನಮಗೆ ನೀಡುತ್ತಿರಿ
ಧನ್ಯೋಸ್ಮಿ
ದಿನೇಶ್
There is so much matter so much going on in the thought process and all that has flown through the pen with a pace so swift !!!
ReplyDeleteBoth the parts are interesting and relatable in one's life .
Thanks so much once again Sir , for all the great efforts that has gone through this work for recalling the greats and their valuable contributions in upholding the values of the "Guru and Shishya parampara" which is immeasurable in terms of words and time alone .
ನಮ್ಮ ಕನ್ನಡ ದ ಪ್ರಾಚೀನ ಮತ್ತು ಅರ್ವಾಚೀನ ಸಾಹಿತ್ಯ ಸಂಪತ್ತು, ಹಿಂದಿನ ವಿದ್ವಾಂಸರ ಘನ ವ್ಯಕ್ತಿತ್ವ ವೂ ಕನ್ನಡಿಗರ ಮನ ರೋಮಾಂಚನಗೊಳಿಸುವಂಹದ್ದು. ಅವರೆಲ್ಲ ಕನ್ನಡಿಗರಿಗೆ ಪ್ರಾತಃ ಸ್ಮರಣೀಯರು.
ReplyDelete