ಮಳೆಗಾಲ. ಜಿಟಿ ಜಿಟಿ ಮಳೆ. ಸೋನೆ ಮಳೆ. ಒಂದೇ ಸಮ ಸುರಿಯುವ ಮಳೆ. ಹಗಲು ರಾತ್ರಿ ನಿಲ್ಲದೆ ಬರುತ್ತಿರುವ ಮಳೆ. ಮನೆಯ ಹೊರಗಡೆ ಹೋಗದಂತೆ ಹಿಡಿದಿಡುವ ಮಳೆ. ಬಿಸಿಲು ಕಾಣದಂತೆ ತಡೆಯುವ ಮಳೆ. ಕೆಲವು ದಿನಗಳ ಹಿಂದೆ ಬಿಸಿಲ ಬೇಗೆಯಲ್ಲಿ ಬೇಕೆನಿಸಿದ ಮಳೆ. ಬಂದರೆ ಸಾಕೆಂದು ಪ್ರಾರ್ಥಿಸಿದ ಮಳೆ. ತಾಳಲಾರದ ಸೆಕೆಗೆ ಕೊನೆ ಹಾಡಲೆಂದು ಬಯಸಿದ ಮಳೆ. ರೈತಾಪಿ ಜನ ಬೀಜ ಬಿತ್ತನೆಗೆ ಕಾತರದಿಂದ ಆಕಾಶದೆಡೆಗೆ ಮುಖ ಮಾಡಿ ನೋಡುತ್ತಿದ್ದ ಮಳೆ. ಈಗ ನಿಂತರೆ ಸಾಕೆಂದು ಆಶಿಸುವ ಮಳೆ!
ಮಧ್ಯಾನ್ಹದ ಊಟ ಆಗಿ ಬಹಳ ಹೊತ್ತಾಗಿದೆ. ರಾತ್ರಿಯ ಭೋಜನಕ್ಕೆ ಇನ್ನೂ ತುಂಬಾ ಸಮಯವಿದೆ. ಆದರೂ ಏನಾದರೂ ತಿನ್ನುವ ಬಯಕೆ. ಯಾವಾಗಲೂ ಏನಾದರೂ ಆಡಬೇಕು; ಇಲ್ಲ ಬಾಯಾಡಿಸಬೇಕು ಎನ್ನಿಸುವ ಚಪಲ ಚೆನ್ನಿಗ ನಾಲಿಗೆ. ಇಂತಹ ಹೊತ್ತಿಗೆ ಸರಿಯಾಗಿ ಹೇಳಿ ಮಾಡಿಸಿದ ಪದಾರ್ಥ ಈ ಪಕೋಡ. ಅಥವಾ ಇದರ ಸೋದರ ಬೋಂಡ. ಕೆಲವರಿಗೆ ಇದರ ಜೊತೆ ಸ್ವಲ್ಪ ಖಾರವಾಗಿರುವ ಚಟ್ನಿ ಸಿಕ್ಕಿದರೆ ಇನ್ನೂ ಸೊಗಸು. ಈಗ ಸಿಕ್ಕರೆ ಎಷ್ಟು ಚೆನ್ನ ಅನ್ನಿಸುವ ತಿಂಡಿಗಳು. ಬಿಸಿಬಿಸಿಯಾಗಿ ಸಿಕ್ಕರೆ ತಿನ್ನುವ ಆಸೆ. ಸ್ವಲ್ಪ ತಿಂದ ಮೇಲೆ ಇನ್ನೂ ಸ್ವಲ್ಪ ತಿನ್ನುವ ಆಸೆ. ಅದೂ ಆದ ಮೇಲೆ ಮತ್ತಷ್ಟು ತಿನ್ನುವ ಆಸೆ! ಒಟ್ಟಿನಲ್ಲಿ ಆಸೆಯ ಮೇಲೆ ಇನ್ನೊಂದಾಸೆ. ಅದು ತೀರಿದಮೇಲೆ ಮತ್ತೊಂದಾಸೆ. ಆಸೆಗಳ ಸರತಿಯ ಸಾಲು. ಬೇಕೆನಿಸುವ ಇಷ್ಟವನ್ನು ಸೂಚಿಸುವ ಪದವೇ ಈ "ಅಸೆ"!
ತುಂಬಾ ದಿನ ಇಡುವ ಪದಾರ್ಥಗಳಲ್ಲ ಈ ಸೋದರ ಸಂಬಂಧಿ ಪಕೋಡ ಮತ್ತು ಬೋಂಡಗಳು. ಸಮಯವೇನೋ ಸರಿಯಾಗಿದೆ. ಆದರೆ ಮಾಡಲು ಸಾಧನ, ಸಲಕರಣೆಗಳಿಲ್ಲ. ಇದ್ದರೂ ಮಾಡುವ ಮನಸ್ಸಿಲ್ಲ. ಮಾಡಿಕೊಡುವವರೂ ಇಲ್ಲ. ಏನು ಮಾಡುವುದು? ಚಿಂತೆಯಿಲ್ಲ. ಇವರ ದಾಯಾದಿಗಳ ಸಂತತಿಯೇ ಇದೆ. ಚಕ್ಕುಲಿ, ಕೋಡುಬಳೆ, ಓಂಪುಡಿ, ಮುಂತಾದ ಸೋದರರ ಗುಂಪು. ಸಿಹಿ ಬೇಕೆನಿಸಿದರೆ ಅವುಗಳ ದಾಯಾದಿ ರವ ಉಂಡೆ ಉಂಟು. ಒಮ್ಮೆ ಮಾಡಿದರೆ ಕೆಲವು ಕಾಲ ಇಡಬಹುದು. ಡಬ್ಬಿಯಲ್ಲಿಯೋ, ಗಾಜಿನ ಶೀಶೆಯಲ್ಲಿಯೋ ಭದ್ರವಾಗಿ ಕುಳಿತಿರುತ್ತವೆ. ಅದರಿಂದ ಹೊರತೆಗೆದು ಹೊಟ್ಟೆಯಲ್ಲಿ ಸೇರಿಸುವ ತನಕ. ನಂತರ ಕೆಡುವುದೆಂಬ ಅಥವಾ ಬೇರೆ ಯಾತರದೋ ಭಯವಿಲ್ಲ.
*****
ಪಕೋಡ ಅಥವಾ ಬೋಂಡಾ ತಿನ್ನಬೇಕೆನಿಸುವುದು ಆಸೆ. ಏನೋ ಒಂದು ಇತಿ-ಮಿತಿಯಲ್ಲಿ ತಿನ್ನುವುದು ಸರಿಯಾದ ಆಸೆ. ಆ ಮಿತಿ ದಾಟಿದ ಮೇಲೂ ತಿನ್ನಬೇಕು ಎನಿಸುವುದು ಅತಿ ಆಸೆ. ಈಗ ತಿನ್ನುವದಕ್ಕೂ ಮುಂಚೆ ಮತ್ತು ಬೇರೆಯವರಿಗೆ ಸಿಗುವ ಮೊದಲು ನಾಳೆಗೆ ಇನ್ನಷ್ಟು ತೆಗೆದು ಇಟ್ಟುಕೊಳ್ಳಬೇಕೆನಿಸುವುದು ಕೆಟ್ಟ ಆಸೆ. ಕೈಯಲ್ಲಿ, ತನ್ನ ತಟ್ಟೆಯಲ್ಲಿ ಸಾಕಷ್ಟು ಇರುವಾಗಲೂ ಬಡಿಸಲು ಇಟ್ಟಿರುವ ದೊಡ್ಡ ತಟ್ಟೆಯಲ್ಲಿ ಕಾಣುವ ದಪ್ಪ ಬೋಂಡವನ್ನು ಇನ್ನೊಬ್ಬರು ತೆಗೆದುಕೊಳ್ಳುವ ಮುಂಚೆ ಹೊಡೆಯಬೇಕೆನ್ನುವುದು ದುರಾಸೆ.
ಆಸೆ, ಅತಿ ಆಸೆ, ಕೆಟ್ಟ ಆಸೆ, ದುರಾಸೆ ಆಯಿತು. ನಮ್ಮ ಮನೆಯಲ್ಲಿ ಇಂದು ಪಕೋಡ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ ಪಕ್ಕದ ಮನೆಯಲ್ಲಿ ಮಾಡುತ್ತಿದ್ದಾರೆ. ವಾಸನೆ ಗಾಳಿಯಲ್ಲಿ ತೇಲಿ ಬರುತ್ತಾ ಇದೆ. "ಹಾಳಾದವರು. ಪಕೋಡ ಅವರು ಇಟ್ಟುಕೊಂಡ ಮೇಲೆ ವಾಸನೆ ನಮಗೆ ಯಾಕೆ ಕಳಿಸಬೇಕು? ಅವರೇ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅಷ್ಟು ಪಕೋಡ ನಮಗೂ ಕಳಿಸಬೇಕು. ಸ್ವಲ್ಪವೂ ಸಂವೇದನೆ ಇಲ್ಲದ ಜನ!" ಎನಿಸುತ್ತದೆ. ಇದೇ ಹೊಟ್ಟೆಕಿಚ್ಚು. ಅಷ್ಟು ಅಂದುಕೊಂಡು ಸುಮ್ಮನಾದದ್ದಲ್ಲ. ಮಾರನೆಯ ದಿನ ಅವರು ಎದುರು ಸಿಕ್ಕಾಗ, "ಏನು? ನಿನ್ನೆಯೆಲ್ಲ ಚೆನ್ನಾಗಿ ಪಕೋಡ ಮಾಡಿಕೊಂಡು ತಿಂದು ತೇಗಿದಿರಿ" ಎಂದು ಹೇಳುವುದು, ಅಥವಾ ಹೇಳುವ ಧೈರ್ಯವಿಲ್ಲದಿದ್ದರೆ ಮನಸ್ಸಿನಲ್ಲಿಯೇ ಹೇಳಿಕೊಳ್ಳುವುದು. ಇದೇ ಅಸೂಯೆ.
"ಅವನಿಗೆ ಇದೆ; ನನಗಿಲ್ಲ" ಎಂದು ಚಿಂತಿಸುವುದೇ ಹೊಟ್ಟೆಕಿಚ್ಚು. ಅವನಿಗಿರುವುದು ನನಗೂ ಬೇಕು ಎಂದು ಪ್ರಯತ್ನ ಮಾಡಿ ಸಾಧಿಸಿ ಪಡೆಯುವುದು ಒಂದು ಧನಾತ್ಮಕ ಕ್ರಿಯೆ. ಇದು ಒಳ್ಳೆಯ ಆಸೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಆ ಪ್ರಯತ್ನವೇ ಪಡದೇ ಒದ್ದಾಡುವುದು ಹೊಟ್ಟೆಕಿಚ್ಚು. ಹೊಟ್ಟೆಕಿಚ್ಚು ಇರುವುದು ಬೇರೆಯವರ ಬಗ್ಗೆ. ತಮಾಷೆಯೆಂದರೆ ಆ ಬೆಂಕಿ ಇರುವುದು ನಮ್ಮ ಒಡಲಲ್ಲಿ. ಆದ್ದರಿಂದ ಅದು ಸುಡುವುದು ನಮ್ಮನ್ನೇ! ಅವರಮೇಲೆ ಅದರ ಪರಿಣಾಮವೇ ಇಲ್ಲ. ಇನ್ನೊಬ್ಬರು ಚೆನ್ನಾಗಿರುವುದು, ಅವರ ಉತ್ಕರ್ಷ ಕಂಡು ಕೊರಗುವುದು ಅಸೂಯೆ. ಅಸೂಯೆಯಲ್ಲಿ ಪರಸ್ಪರ ಸ್ಪರ್ಧೆಯಿಲ್ಲ. ಆದರೆ ಒಂದೇ ಸಮಾನರಲ್ಲಿ, ಒಂದೇ ಗುರಿ ಸಾಧಿಸಲು ಹೊರಟವರಲ್ಲಿ ಸ್ಪರ್ಧೆ ಇದೆ. ಅವನಿಗಿಂತ ನಾನು ಮೇಲೆ ಹೋಗಬೇಕೆಂಬ ಜಿದ್ದು ಉಂಟು. ಇಂತಹ ಸ್ಥಿತಿಯಲ್ಲಿ ಪ್ರತಿಸ್ಪರ್ಧಿಯ ಏಳಿಗೆ ಕಂಡು ಒದ್ದಾಡುವುದೇ ಮತ್ಸರ.
ಆಸೆ, ಅತಿ ಆಸೆ, ಕೆಟ್ಟ ಅಸೆ, ದುರಾಸೆ, ಒಳ್ಳೆ ಆಸೆ, ಅಸೂಯೆ, ಮತ್ಸರ ಆಯಿತು.
*****
ಮಾಡಿರುವ ಪಕೋಡವೆಲ್ಲಾ ನನಗೇ ಇರಬೇಕು. ಇನ್ನೊಬ್ಬರಿಗೆ ಸಿಗಬಾರದು" ಎಂದು ಯೋಚಿಸುವುದು ಲೋಭ. "ಅವರಿಗುಂಟು, ನನಗಿಲ್ಲ" ಎನ್ನುವುದು ಹೊಟ್ಟೆಕಿಚ್ಚಾದರೆ "ನನಗೇ ಬೇಕು, ಅವರಿಗೆ ಸಿಗಬಾರದು" ಎನ್ನುವುದೇ ಲೋಭ. ಲೋಭ ಗುಣ ಉಳ್ಳವನು ಲೋಭಿ. ತನ್ನಲಿರುವುದು ಇನ್ನೊಬ್ಬರಿಗೆ ಸಿಗುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಯೋಚಿಸುತ್ತಾನೆ ಲೋಭಿ.
ತನ್ನಲ್ಲಿರುವುದನ್ನು ತಾನೂ ಅನುಭವಿಸದೇ ಹಾಗೆಯೇ ಕೂಡಿಡುವವನೇ ಕೃಪಣ. ಅಚ್ಚ ಕನ್ನಡಲ್ಲಿ "ಜಿಪುಣ". ಇವನು ತನ್ನಲ್ಲಿರುವ ಸಂಪತ್ತನ್ನು ಮತ್ತೆ ಮತ್ತೆ ನೋಡಿ ಸಂತೋಷಪಡುತ್ತಾನೆ. ಅವನ ಸಂತೋಷವೆಲ್ಲ ನೋಡುವುದರಲ್ಲಿಯೇ ಕಳೆದುಹೋಗುತ್ತದೆ. ಆ ಪದಾರ್ಥ ಅನುಭವಿಸದೆಯೇ ಹಾಳಾಗಬಹುದು. ಅಥವಾ ಆ ಪದಾರ್ಥ ಚೆನ್ನಾಗಿದ್ದರೂ ಇವನಿಗೆ ಅನುಭವಿಸುವ ಕಾಲ ದಾಟಿ ಹೋಗಬಹುದು.
ಅವಳ ಬಳಿ ಅನೇಕ ಸೊಗಸಾದ ಜರಿ ಸೀರೆಗಳಿವೆ. ಈಗ ಅವನ್ನು ಉಟ್ಟು ಮೆರೆಯುವ, ಸಂತೋಷ ಪಡುವ ವಯಸ್ಸು. ಆದರೆ ಅವನ್ನು ಪೆಟ್ಟಿಗೆಗಳಲ್ಲಿ ಮಡಿಸಿಟ್ಟು, ನುಸು ಗುಳಿಗೆಗಳ ಕಂಪನ್ನು ಕೊಟ್ಟು, ಆಗಾಗ ತೆಗೆದು ನೋಡಿ ಸಂತೋಷ ಪಡುತ್ತಾಳೆ. ಆಸೆಗಣ್ಣಿಂದ ನೋಡುವ ಅಕ್ಕ ತಂಗಿಯರಿಗೂ ಒಮ್ಮೆಯೂ ಉಡಲು ಕೊಡುವುದಿಲ್ಲ. ವರ್ಷಗಳ ನಂತರ ಇಟ್ಟಲ್ಲೇ, ಮಡಿಸಿಟ್ಟ ಕಡೆಯೇ, ಆ ಸೀರೆಗಳು ತೂತು ಬೀಳುತ್ತವೆ. ಆಥವಾ ಅವು ಚೆನ್ನಾಗಿದ್ದರೂ ಇವಳಿಗೆ ಉಡುವ ಕಾಲ ದಾಟಿತು. "ಅಬ್ಬಾ, ಇವೆಷ್ಟು ಭಾರ. ನಾನು ಉಡಲಾರೆನಮ್ಮ" ಎಂದು ನಿಟ್ಟುಸಿರು ಬಿಡುತ್ತಾಳೆ. ಇದೇ ಜಿಪುಣತ್ವದ ಪರಿಣಾಮ. "ತಾನೂ ತಿನ್ನ. ಪರರಿಗೂ ಕೊಡ" ಎನ್ನುವ ಗಾದೆ ಹುಟ್ಟಿದ್ದೇ ಇಂತಹವರನ್ನು ಸೂಚಿಸಲು.
*****
ಆಸೆಗೆ ಪರ್ಯಾಯವಾಗಿ ಬಳಕೆಯಲ್ಲಿರುವ ಇನ್ನೊಂದು ಪದ ಕಾಮ. ಇದು ಸಂಸ್ಕೃತ ಪದವಾದರೂ ಸರಿಸಮನಾಗಿ ಕನ್ನಡದಲ್ಲೂ ಮತ್ತು ಇತರ ಅನೇಕ ಭಾರತೀಯ ಭಾಷೆಗಳಲ್ಲೂ ಈ ಪದದ ಪ್ರಯೋಗ ಉಂಟು. ಈ "ಕಾಮ" ಎರಡು ಕಡೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. "ಧರ್ಮ, ಅರ್ಥ, ಕಾಮ, ಮೋಕ್ಷ" ಎನ್ನುವ ನಾಲ್ಕು ಪುರುಷಾರ್ಥಗಳು. ಜೀವನದಲ್ಲಿ ಸಾಧಿಸಬೇಕಾದ ನಾಲ್ಕು ಗುರಿಗಳು. ಹಾಗೆಯೇ "ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ" ಎಂಬ ಅರಿಷಡ್ವರ್ಗಗಳು. ಜೀವನದಲ್ಲಿ ದೂರ ಇಡಬೇಕಾದ, ಪ್ರಯತ್ನ ಪಟ್ಟು ಜಯಿಸಬೇಕಾದ ಆರು ಶತ್ರುಗಳು.
ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. "ನಾಲ್ಕು ಪುರುಷಾರ್ಥಗಳಲ್ಲಿ ಯಾವುದು ಮುಖ್ಯ? ಯಾವುದನ್ನು ಮೊದಲು ಸಾಧಿಸಬೇಕು?" ಎನ್ನುವ ಚರ್ಚೆ ನಡೆಯುತ್ತದೆ. "ಧರ್ಮವೇ ಶ್ರೇಷ್ಠ. ಅದನ್ನೇ ಗುರಿಯಾಗಿಸಬೇಕು" ಎಂದು ಧರ್ಮರಾಯ ಹೇಳುತ್ತಾನೆ. "ಹಾಗಲ್ಲ. ಜೀವನದಲ್ಲಿ ಏನು ಸಾಧಿಸಬೇಕಾದರೂ ಅದಕ್ಕೆ ಮೂಲದ್ರವ್ಯ ಅರ್ಥ. ಆದ್ದರಿಂದ ಅದನ್ನೇ ಮೊದಲು ಸಂಪಾದಿಸಬೇಕು" ಎನ್ನುತ್ತಾನೆ ಅರ್ಜುನ. ಭೀಮಸೇನಾದರೋ "ಎಲ್ಲಕ್ಕೂ ಮೂಲ ಕಾಮ. ಅದಿಲ್ಲದಿದ್ದರೆ ಏನೂ ಇಲ್ಲ. ಅದೇ ಮುಖ್ಯ" ಎನ್ನುತ್ತಾನೆ.
ಮನುಷ್ಯ ಇನ್ನಾದರೂ ಮಾಡಬೇಕಾದರೆ ಎರಡೇ ಕಾರಣಗಳು. ಮೊದಲನೆಯದು "ಸುಖ ಪ್ರಾಪ್ತಿ" ಆಗಬೇಕೆನ್ನಿಸುವ ಆಸೆ. ಈಗಿರುವುದಕ್ಕಿಂತ ಚೆನ್ನಾಗಿರುವ ಸ್ಥಿತಿ ಬೇಕು ಎಂದು ಅನೇಕ ಪ್ರಯತ್ನ ಮಾಡುತ್ತಾನೆ. ಎರಡನೆಯದು "ದುಃಖ ನಿವೃತ್ತಿ" ಆಗಲೆಂಬ ಆಸೆ. ಅಂದರೆ ಈಗಿರುವ ಯಾವುದೋ ಕೊರತೆ ಅಥವಾ ನೋವನ್ನು ಕಳೆದುಕೊಳ್ಳುವುದು. ಇವೆರಡೂ ಇಲ್ಲದಿದ್ದರೆ ಮನುಷ್ಯ ನಿಷ್ಕ್ರಿಯನಾಗಿ ಸುಮ್ಮನೆ ಕೂಡುತ್ತಾನೆ. ಈ ಸ್ಥಿತಿಯಲ್ಲಿ ಅವನು ಏನೂ ಮಾಡುವುದಿಲ್ಲ! ಕಾಮವೇ ನಾಲ್ಕು ಪುರುಷಾರ್ಥಗಳಲ್ಲಿ ಮುಖ್ಯ ಎಂದು ಭೀಮಸೇನ ಹೇಳುವುದು ಇದೇ ಕಾರಣಕ್ಕೆ. ಧರ್ಮ ಸಾಧಿಸಬೇಕೆನ್ನುವುದಕ್ಕೆ ಮೂಲ ಹಾಗೆ ಬದುಕಬೇಕೆಂಬ ಆಸೆ. ಅದರಿಂದಲೇ ಮುಂದಿನ ಪ್ರಯತ್ನ. ಬೇರೆ ಪುರುಷಾರ್ಥಗಳನ್ನು ಸಾಧಿಸಲು ಮೂಲದ್ರವ್ಯವಾದ ಅರ್ಥ ಸಂಪಾದನೆಯೂ ಈ ಆಸೆಯಿಂದಲೇ. ಇದೇ "ಕಾಮ ಎಲ್ಲ ಪುರುಷಾರ್ಥಗಳಿಗೂ ಮೂಲ" ಎಂದು ಭೀಮಸೇನ ಹೇಳಿದ ಮಾತಿನ ತಾತ್ಪರ್ಯ.
ಆದ್ದರಿಂದ ಆಸೆ ಅಥವಾ ಕಾಮ ಇರುವುದು ತಪ್ಪಲ್ಲ. ಅದು ಅತಿ ಆಸೆ, ಕೆಟ್ಟ ಆಸೆ, ದುರಾಸೆ ಆಗಬಾರದು. ಹೊಟ್ಟೆಕಿಚ್ಚು, ಅಸೂಯೆ, ಮತ್ಸರಗಳಿಗೆ ದಾರಿ ಮಾಡಬಾರದು. ಆಸೆಯಿಂದ ನ್ಯಾಯವಾಗಿ ಸಂಪಾಸಿದ್ದು ಸರಿಯಾಗಿ ಅನುಭವಿಸಬೇಕು. ಜಿಪುಣತನದಿಂದ ಹಾಳಾಗಬಾರದು. ಸುಖ ಜೀವನಕ್ಕೆ ಇದೇ ಸರಿಯಾದ ದಾರಿ!
*****
"ತಿಥಿ - ಅತಿಥಿ - ಅಭ್ಯಾಗತ" ಎನ್ನುವ ಸಂಚಿಕೆಯಲ್ಲಿ ಹಿಂದೆ "ಕೋಶಗಳಲ್ಲಿ ಕೊಡುವ ಸಮಾನಾರ್ಥ ಪದಗಳಲ್ಲಿ ಸೂಕ್ಷ್ಮವಾದ ವ್ಯತ್ಯಾಸಗಳಿರುತ್ತವೆ" ಎಂದು ಹೇಳಿತ್ತು. ಅದರ ವಿವರ ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ. ಸಮಾನಾರ್ಥಕ ಪದಗಲ್ಲಿ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ವಿವರಿಸಲು ಪಕೋಡ ತಿನ್ನುವ ಆಸೆಯಾಯಿತು!
ಹೌದು ಪಕೋಡ ಬೋಂಡ ತಿನ್ನಲು ನಾವು ಎವರ್ ರೆಡಿ, ನಿರೂಪಣೆ ತುಂಬಾ ಚೆನ್ನಾಗಿದೆ
ReplyDeleteಒಟ್ಟಿನಲ್ಲಿ ನಮ್ಮ ಬಾಯಲ್ಲಿ ನೀರೂರಿಸಿ ಬಿಟ್ಟಿರಿ. ಮಾಡಿ ಕೊಡುವವರು ಯಾರೂ ಇಲ್ಲ😭
ReplyDeleteVery nice!
ReplyDeleteKelavu shabdagala arthavannu sariyagi tilidu kollalu sadyavayitu. Dhanyavadagalu.
ReplyDeleteಈಗಿನ ಬೆಂಗಳೂರಿನ ವಾತಾವರಣ ಪಕೋಡ ತಿನ್ನಲು ಸದ್ ಸಮಯ ಆದರೆ ಯಾರಾದರೂ ಮಾಡಿಕೊಟ್ಟರೆ ಮಾತ್ರ!
ReplyDeleteಪಕೋಡ ದಂತಹ ಬಾಯಲ್ಲಿ ನೀರೂರಿಸುವ ತಿಂಡಿಯನ್ನು ನೆಪವಾಗಿಟ್ಟುಕೊಂಡು ಆಸೆ ದುರಾಸೆ ಅತಿಯಾಸೆ .ಅದರ ಜೊತೆಗೆ ಅತಿಥಿ ಅಭ್ಯಾಗತ ಪದಗಳ ಸೂಕ್ಷ್ಮ ವ್ಯತ್ಯಾಸವನ್ನು ತಿಳಿಸಲು ಪುರಾಣದ ಕಥೆಗಳನ್ನು ಹೇಳಿ ಕುತೂಹಲ ಹುಟ್ಟಿಸುವಂತೆ ನಿರೂಪಿಸಿದ್ದೀರಿ.ಎಲ್ಲವನ್ನು ಬಹು ಚೆನ್ನಾಗಿ ವಿವರಿಸಿದ್ದೀರಿ ಓದಬೇಕೆಂದು ಕುತೂಹಲ ಹುಟ್ಟಿಸುವ ಲೇಖನ
The photo of pakoda itself is mouth watering and becomes the focal point for ‘Ase’ in your article. From this one thing only , your article has given the deep meaning of other things. I thoroughly enjoyed reading this article. We have all experienced eating more than one or two pakodas or Bondas to our satisfaction. Thanks Keshav. UR……
ReplyDeleteAwesome
ReplyDeletesuper artical,
ReplyDelete