Monday, December 25, 2023

ತಿಥಿ - ಅತಿಥಿ - ಅಭ್ಯಾಗತ




ಕಣ್ವ ಋಷಿಗಳು ಆಶ್ರಮದಲ್ಲಿಲ್ಲ. ಅಲ್ಲಿನ ಎಲ್ಲ ನಿರ್ವಹಣೆಯ ಕೆಲಸವನ್ನು ಸಾಕು ಮಗಳು ಶಕುಂತಲೆಗೆ ವಹಿಸಿ ಎಲ್ಲಿಯೋ ಸಂಚಾರ ಹೋಗಿದ್ದಾರೆ. ಶಕುಂತಲೆಯಾದರೋ ತನ್ನದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದಾಳೆ. ಅತಿ ಶೀಘ್ರದಲ್ಲೇ ರಾಜಧಾನಿಗೆ ಕರೆಸಿಕೊಳ್ಳುವುದಾಗಿ ವಚನ ಕೊಟ್ಟಿದ್ದ ಚಕ್ರವರ್ತಿ ದುಷ್ಯಂತನಾಗಲೀ  ಅಥವಾ ಅವನ ಕಡೆಯ ದೂತರಾಗಲೀ ಇನ್ನೂ ಬಂದಿಲ್ಲ. ಸಾಕುತಂದೆಗೇ ಗೊತ್ತಿಲ್ಲದಹಾಗೆ ವಿವಾಹವೇನೋ ಆಯಿತು. ಆದರೆ ಮುಂದಿನ ಕಥೆಯೇನು? ಈ ಸಮಸ್ಯೆಗೆ ಪರಿಹಾರ ಹೇಗೆ? ಇದು ಅವಳ ಚಿಂತೆ. 

ಮಹರ್ಷಿ ದೂರ್ವಾಸರು ಅದೇ ಸಮಯಕ್ಕೆ ಆಶ್ರಮಕ್ಕೆ ಬಂದರು. ಶಕುಂತಲೆಯ ಮುಂದೆ ನಿಂತರು. ನಿಂತೇ ಇದ್ದರು. ಶಕುಂತಲೆ ನೋಡಲೂ ಇಲ್ಲ; ಮಾತಾಡಲೂ ಇಲ್ಲ. ಆಶ್ರಮಕ್ಕೆ ಬಂದ ಅತಿಥಿ ಎದುರು ನಿಂತಿದ್ದರೂ ಸ್ವಾಗತಿಸಲೂ ಇಲ್ಲ. ದೂರ್ವಾಸರಿಗೆ ಅಖಂಡ ಕೋಪ ಬಂತು. ಶಪಿಸಿದರು. ಹೊರಟುಹೋದರು. 

ಹೀಗೆ ಸಾಗುತ್ತದೆ ಮಹಾಕವಿ ಕಾಳಿದಾಸನ ನಾಟಕದ ಕಥೆ,

*****

ಶೂರಸೇನನ ಮಗಳು ಪೃಥಾ. ವಸುದೇವನ ಸೋದರಿ. ಆದ್ದರಿಂದ ಅವಳು ಮುಂದೆ ಶ್ರೀಕೃಷ್ಣನ ಸೋದರತ್ತೆ. ಮಕ್ಕಳಿಲ್ಲದ ಶೂರಸೇನನ ಸಹೋದರ ಕುಂತಿಭೋಜ ಅವಳನ್ನು ದತ್ತು ತೆಗೆದುಕೊಂಡ. ಅಂದಿನಿಂದ ಅವಳು ಕುಂತಿ ಎಂದು ಹೆಸರು ಪಡೆದಳು. (ಶ್ರುತಶ್ರವೆ ಮತ್ತು ಶ್ರುತದೇವೆ ಸಹ ವಸುದೇವನ ತಂಗಿಯರು. ಶಿಶುಪಾಲ ಮತ್ತು ದಂತವಕ್ರರು ಕ್ರಮವಾಗಿ ಇವರ ಮಕ್ಕಳು). 

ಒಮ್ಮೆ ಮಹರ್ಷಿ ದೂರ್ವಾಸರು ಕುಂತಿಭೋಜನ ಸ್ಥಳಕ್ಕೆ ಅನಿರೀಕ್ಷಿತವಾಗಿ ಬಂದರು. ಕುಂತಿಭೋಜನ ವಿನಂತಿಯಂತೆ ಕೆಲವು ದಿನ ನಿಂತರು. ಮಹರ್ಷಿಗಳ ಸೇವೆಗೆ ಕುಂತಿಭೋಜ ಮಗಳು ಕುಂತಿಯನ್ನು ನೇಮಿಸಿದ. ಕುಂತಿಯ ಸೇವೆಯಿಂದ ಅತ್ಯಂತ ಸಂತುಷ್ಟರಾದ ಮಹರ್ಷಿ ದೂರ್ವಾಸರು ಕುಂತಿಗೆ ಐದು ಅಮೂಲ್ಯ ವರಗಳನ್ನು ಕೊಟ್ಟರು. 

ಆದರ ಫಲವಾಗಿ ಮುಂದೆ ಕರ್ಣ, ಯುಧಿಷ್ಠಿರ, ಭೀಮ ಮತ್ತು ಅರ್ಜುನ ಹುಟ್ಟಿ ಕೌಂತೇಯರಾದರು. ಕುಂತಿ ಐದನೆಯ ವರವನ್ನು ಮಾದ್ರಿಗೆ ವರ್ಗಾಯಿಸಿದಳು. ಅದರಿಂದ ನಕುಲ ಮತ್ತು ಸಹದೇವರ ಜನನ. ಅವರಿಬ್ಬರೂ ಮಾದ್ರೀಯರು. ಕರ್ಣನನ್ನು ಬಿಟ್ಟು ಉಳಿದ ಐವರು ಪಾಂಡುರಾಜನ ಮಕ್ಕಳಾದ್ದರಿಂದ ಪಾಂಡವರಾದರು. ಹೀಗೆ ಮುಂದುವರಿಯುತ್ತದೆ ಮಹಾಭಾರತದ ಕಥೆ,

*****

ವಾಜಶ್ರವಸ ಋಷಿಯ ಮಗಳು ಆರುಣಿ. ಆರುಣಿಯ ಪತಿ ಋಷಿ ಉದ್ದಾಲಕ. ಇವರ ಮಕ್ಕಳು ಶ್ವೇತಕೇತು ಮತ್ತು ನಚಿಕೇತ. ತಂದೆಯ ಯಾಗದಲ್ಲಿ ಅವನು ದಾನ ಕೊಡುವ ಕೆಲವು ನಿರುಪಯೋಗಿ ಗೋವುಗಳನ್ನು ಕಂಡು ನಿರಾಶನಾಗಿ ಪುಟ್ಟ ಬಾಲಕ ನಚಿಕೇತ ಯಾಗದಲ್ಲಿ ಮಗ್ನನಾಗಿರುವ ತಂದೆಯನ್ನು "ಅಪ್ಪ, ನನ್ನನ್ನು ಯಾರಿಗೆ ಕೊಡುತ್ತೀ" ಎಂದು ಮತ್ತೆ ಮತ್ತೆ ಕೇಳುತ್ತಾನೆ. ಮೊದಲಿಗೆ ಅವನ ಪ್ರಶ್ನೆಯನ್ನು ಗಮನಿಸದವನಂತೆ ಇದ್ದರೂ ಪದೇ ಪದೇ ಕೇಳಿದಾಗ ಕೋಪದಿಂದ "ನಿನ್ನನ್ನು ಯಮನಿಗೆ ಕೊಡುತ್ತೇನೆ" ಎಂದುಬಿಡುತ್ತಾನೆ ತಂದೆ. (ನಚಿಕೇತ ವಾಜಶ್ರವಸನ ಮಗಳ ಮಗ. ಮೊಮ್ಮಗ. ಉದ್ದಾಲಕನ ಮಗ. ವಾಜಶ್ರವಸನ ಮಗ ಎನ್ನುವುದು ತಪ್ಪು ಗ್ರಹಿಕೆ). 

ನಚಿಕೇತ ನೇರ ಯಮನ ಪಟ್ಟಣಕ್ಕೆ ಬಂದುಬಿಡುತ್ತಾನೆ. ಯಮ ಸಂಚಾರದಲ್ಲಿ ಇದ್ದಾನೆ. ಮನೆಯವರು ಒಳಗೆ ಕರೆದರೂ ಹೋಗದೆ ನಚಿಕೇತ ಮೂರು ಹಗಲು, ಮೂರು ರಾತ್ರಿ ಯಮನ ಮನೆಯ ಬಾಗಿಲ ಬಳಿಯೇ ಕುಳಿತುಬಿಡುತ್ತಾನೆ. ಮೂರು ದಿನದ ನಂತರ ಬಂದ ಯಮನಿಗೆ ಆಶ್ಚರ್ಯ. ಯಮ ಆಹ್ವಾನ ಕೊಟ್ಟವನಲ್ಲ. ನಚಿಕೇತ ಬರುವುದಾಗಿ ಮುಂಚೆ ತಿಳಿಸಿದವನೂ ಅಲ್ಲ. ಆದರೂ ಯಮನು ಮೂರು ದಿನ ಕಾಯಿಸಿದ ತಪ್ಪಿಗೆ ಮೂರು ವರ ಕೊಡುತ್ತಾನೆ. 

ಆ ವರಗಳ ವಿಷಯ ಮತ್ತು ಯಮನು ನಚಿಕೇತನಿಗೆ ವಿವರಿಸಿದ ರಹಸ್ಯ ತತ್ವಗಳು "ಕಠೋಪನಿಷತ್" ಮುಂದಿನ ವಿವರಗಳು. 

*****

ಮೇಲಿನ ಮೂರು ದೃಷ್ಟಾಂತಗಳಲ್ಲಿ ಮೂರು ವಿಧ ಪರಿಣಾಮಗಳನ್ನು ಕಾಣುತ್ತೇವೆ. ಮೊದಲನೆಯದರಲ್ಲಿ ಸತ್ಕಾರವಂಚಿತ ಅಥಿತಿಯ ಕೋಪದ ಪರಿಣಾಮ. ಎರಡನೆಯದರಲ್ಲಿ ಸತ್ಕಾರದಿಂದ ಪ್ರೀತನಾದ ಅಥಿತಿಯ ಸಂತೋಷದ ಫಲ. ಮೂರನೆಯದರಲ್ಲಿ ಅತಿಥಿ ಕೋಪಿಸಿಕೊಳ್ಳುವ ಸಾಧ್ಯತೆ ಇಲ್ಲದಿದ್ದರೂ ಅವನನ್ನು ಸಮಾಧಿನಿಸಿ ಗೌರವ ತೋರುವ ರೀತಿ. ಮೊದಲನೆಯದು ಅತಿಥಿ ಸತ್ಕಾರದಲ್ಲಿ ನಿರಾಸಕ್ತಿ. ಎರಡನೆಯದರಲ್ಲಿ ಅತಿಥಿ ಸತ್ಕಾರದಲ್ಲಿ ಪೂರ್ಣ ಆಸಕ್ತಿ. ಮೂರನೆಯದರಲ್ಲಿ ತಡವಾದುದಕ್ಕೆ ಪ್ರಾಯಶ್ಚಿತ್ತರೂಪವಾಗಿ ಹೆಚ್ಚಿನ ಸತ್ಕಾರದ ಪ್ರಯತ್ನ. 

ಅಥಿತಿ ಅಭ್ಯಾಗತರ ಸತ್ಕಾರ ಎಂದು ಜೊತೆ ಜೊತೆಯಾಗಿ ಹೇಳುತ್ತಾರೆ. ಅಚ್ಚ ಕನ್ನಡದಲ್ಲಿ ಬಂದವರು-ಹೋದವರು ಎನ್ನುತ್ತೇವೆ. ಬಂದವರು ಹೋಗಿಯೇ ಹೋಗುತ್ತಾರೆ. ಆದರೆ ಅದು ಒಂದು ಹೇಳುವ ರೀತಿ. ಪ್ರೀತಿ-ಗೀತಿ ಅಂದಂತೆ. ಅದರಲ್ಲಿ ಒಂದು ವಿಶೇಷವಿದೆ. ಬಂದವರನ್ನು ಸ್ವಾಗತಿಸುವುದು ಎಷ್ಟು ಮುಖ್ಯವೋ, ಅವರು ಹೋಗುವಾಗ ಕ್ರಮವಾಗಿ ಬೀಳ್ಕೊಡುವುದೂ ಅಷ್ಟೇ ಮುಖ್ಯ. ಹಾಗಿದ್ದರೆ ಅಥಿತಿ ಎಂದರೆ ಯಾರು? ಅಭ್ಯಾಗತ ಅಂದರೆ ಯಾರು? ಎರಡರ ಅರ್ಥವೂ ಒಂದೇ? ಅಥವಾ ಬೇರೆಯೇ? ಅವರ ಸತ್ಕಾರಕ್ಕೆ ಏಕೆ ಇಷ್ಟು ಮಹತ್ವ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯುವುದು ಸಹಜವಾಗಿ ಮಾಡಬೇಕಾದ ಕೆಲಸ. 

*****

ಪಂಚಾಂಗ ಎಂಬ ಪದವನ್ನು ಎಲ್ಲರೂ ಬಳಸುತ್ತೇವೆ. ಪಂಚಾಂಗ ಎಂದರೆ ಒಂದು ಪುಸ್ತಕ; ಪ್ರತಿ ವರುಷ ಬರುವ ಹೊಸ ಪುಸ್ತಕ ಎಂದೇ ಅನೇಕರ ತಿಳುವಳಿಕೆ. ಈಚೆಗಂತೂ ವಾಟ್ಸಪ್ಪ್  ಗುಂಪುಗಳಲ್ಲಿ "ಈ ದಿನದ ಪಂಚಾಂಗ" ಎಂದು ಎಲ್ಲರಿಗೂ ಅದನ್ನು ಸುತ್ತು ಹೊಡೆಸದಿದ್ದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ. ಈ ಪಂಚಾಂಗ ಎಂದರೆ ಏನು? ಪಂಚ ಎಂದರೆ ಐದು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಏನು ಈ ಐದು? ಇವು ಯಾವುದರ ಅಂಗಗಳು? 

ಯಾವುದಾದರೂ ಕೆಲಸವನ್ನು ಮಾಡುವಾಗ "ಒಂದು ಒಳ್ಳೆಯ ದಿನವನ್ನು ನೋಡಿ ಮಾಡಿ" ಎಂದು ಎಲ್ಲರೂ ಹೇಳುತ್ತಾರೆ. ಯಾವುದು ಒಳ್ಳೆಯ ದಿನ? ಕೇವಲ ದಿನ ಮಾತ್ರ ಒಳ್ಳೆಯದಾದರೆ ನಮಗೆ ಸಾಲದು. ಒಳ್ಳೆಯ ಹಣ್ಣು ಬೇಕು, ಮಾತ್ರವಲ್ಲ. ಅದರ ಒಳ್ಳೆಯ ಭಾಗವೇ ಬೇಕು! ಆ ದಿನದಲ್ಲೂ ಒಂದು ಒಳ್ಳೆಯ ಸಮಯ, ಅಂದರೆ ಮುಹೂರ್ತ ಹುಡುಕುತ್ತಾರೆ. ಒಳ್ಳೆಯ ದಿನವಾಗಬೇಕಾದರೆ ಐದು ಘಟಕಗಳು ಸೇರಬೇಕು. ಐದು ಘಟಕಗಳು ಪ್ರತಿ ದಿನ ಸೇರೇ ಸೇರುತ್ತವಲ್ಲ! ಐದು ಘಟಕಗಳೂ ಒಳ್ಳೆಯವಾಗಿರಬೇಕು. ದಿನ, ವಾರ, ನಕ್ಷತ್ರ, ಯೋಗ, ಕರಣ ಇವೇ ಆ ಐದು ಅಂಗಗಳು. ಈ ಐದರ ವಿವರಗಳನ್ನು ಕೋಷ್ಟಕದಂತೆ ಕೊಟ್ಟಿರುವ ಪುಸ್ತಕವೇ ಪಂಚಾಂಗ. ಅಷ್ಟೇ ಅಲ್ಲ. ಊಟದಲ್ಲಿ ಐದು ವಿಧವಾದ ಸಿಹಿ ಪದಾರ್ಥ ಇರಬೇಕು ಅಂದರೆ ಬರಿ ಐದು ಸಿಹಿ ತಿಂಡಿ ಮಾಡಿ ಬಡಿಸುವುದಲ್ಲ. ಅವುಗಳ ಜೊತೆ ಬೇರೆ ಅನೇಕ ವ್ಯಂಜಕಗಳೂ ಇರುತ್ತವೆ. ಪಂಚಾಂಗವೂ ಹಾಗೆ. ವರ್ಷದ ಪ್ರತಿ ದಿನದ ಈ ಐದು ಅಂಗಗಳ ಕೋಷ್ಠಕದ ಜೊತೆ ಅನೇಕ ಬೇರೆ ಬೇರೆ ಅವಶ್ಯಕವಾದ ವಿಚಾರಗಳೂ ಪಂಚಾಂಗದಲ್ಲಿ ಇರುತ್ತವೆ. 

ಪಂಚಾಂಗದ ಐದು ಅಂಗಗಳಲ್ಲಿ ಮೊದಲನೆಯದು ದಿನ. ಅನಂತವಾದ ಕಾಲವನ್ನು ನಮ್ಮ ಅನುಕೂಲಕ್ಕಾಗಿ ವಿಭಜಿಸಿ ಲೆಕ್ಕಮಾಡಲು ಸುಲಭವಾದ ಘಟಕಗಳಾಗಿ ಮಾಡಿದ್ದಾರೆ. ಚಂದ್ರ ಮತ್ತು ಸೂರ್ಯರ ಚಲನೆ ಆಧರಿಸಿ ಕಾಲ ಅಳೆಯುವ ಪ್ರಯತ್ನ.  "ಮತ್ತೆ ಮತ್ತೆ ಯುಗಾದಿ! ಯಾವುದಕೆ ಹಾದಿ? ಕಂಭ ಸುತ್ತುವ ವೃತ್ತ, ಕಾಲಗತಿಯೇ ಅನಾದಿ" ಎನ್ನುತ್ತಾರೆ ಕವಿ ಗೋಪಾಲಕೃಷ್ಣ ಅಡಿಗರು. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲ ಹಗಲು. ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲ ರಾತ್ರಿ. ಸೂರ್ಯೋದಯದಿಂದ ಮತ್ತೆ ಮಾರನೆಯ ದಿನ ಸೂರ್ಯೋದಯದವರೆಗಿನ ಕಾಲ ಒಂದು ದಿನ. ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಶುಕ್ಲ ಪಕ್ಷ. ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ಕೃಷ್ಣ ಪಕ್ಷ. ಅಂದರೆ ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆವರೆಗೆ ಒಂದು ತಿಂಗಳು. 

ಚಂದ್ರನ ಗತಿ ಅನುಸರಿಸಿ ಸುಮಾರು ಇಪ್ಪತೆಂಟು ದಿನಗಳಿಗೆ ಒಂದು ತಿಂಗಳು. ಈ ತಿಂಗಳಲ್ಲಿ ಮೂವತ್ತು ತಿಥಿಗಳು. ಆದ್ದರಿಂದ ಕೆಲವು ವೇಳೆ ಒಂದೇ ದಿನ ಎರಡು ತಿಥಿಗಳೂ ಬರಬಹುದು. ಒಂದು ಹಲ್ಲಿನ ಮೇಲೆ ಹುಟ್ಟಿದ ಇನ್ನೊಂದು ಹಲ್ಲು ಅಥವಾ ಉಬ್ಬು ಹಲ್ಲು ಎಂದು ತಮಾಷೆಯಾಗಿ ಹೇಳಬಹುದು. ಇದನ್ನೇ ಉಪರಿ (ಒಂದರ ಮೇಲೆ ಇನ್ನೊಂದು) ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ತಿಥಿ. ಅದಕ್ಕೇ ಐದು ಅಂಗಗಳಲ್ಲಿ ಮೊದಲನೆಯದನ್ನು ದಿನ ಅಥವಾ ತಿಥಿ ಎನ್ನುತ್ತಾರೆ. ಪಾಡ್ಯ, ಬಿದಿಗೆ, ತದಿಗೆ...... ಹುಣ್ಣಿಮೆ ಅಥವಾ ಅಮಾವಾಸ್ಯೆ ಇತ್ಯಾದಿ. 

*****

ಜೀವನದ ವಿವಿಧ ಹಂತಗಳನ್ನು ನಾಲ್ಕು ಆಶ್ರಮಗಳು ಎಂದು ವಿಂಗಡಿಸಿದ್ದಾರೆ. (ಜನ್ಮದಿಂದ) ವಿವಾಹದವರೆಗೂ ಬ್ರಹ್ಮಚರ್ಯ. ನಂತರ ಗೃಹಸ್ಥ. ಹೆಚ್ಚಿನ ಸಾಧನೆಗೋ, ಸಂಸಾರದಲ್ಲಿ ಬೇಸತ್ತು ವೈರಾಗ್ಯ ಬಂದೋ ಸನ್ಯಾಸ ಸ್ವೀಕರಿಸಬಹುದು. ಇಲ್ಲವೇ ಗೃಹಸ್ಥನಾದ ನಂತರ ಕೊನೆಯಲ್ಲಿ ವಾನಪ್ರಸ್ಥ. ಹಿಂದೆ ಸಂಸಾರ ತ್ಯಜಿಸಿ ಕಾಡಿಗೆ ಹೋಗುತ್ತಿದ್ದರು. ಈಗ ಅದೂ ಸಾಧ್ಯವಿಲ್ಲ. ಕಾಡೆಲ್ಲಾ ಊರಾಗಿದೆ. "ನೀನೆಲ್ಲಿ ನಡೆವೆ ದೂರ! ಎಲ್ಲೆಲ್ಲೂ ಲೋಕವೇ!" ಎನ್ನುವಂಥ ಸ್ಥಿತಿ. ಬ್ರಹ್ಮಚಾರಿಗಳೂ ಮತ್ತು ಸನ್ಯಾಸಿಗಳೂ ಗೃಹಸ್ಥರನ್ನೇ ಆಶ್ರಯಿಸಿ ಜೀವಿಸಬೇಕು. ಅದಕ್ಕೇ ಕಾಳಿದಾಸ ಮಹಾಕವಿಯ ರಘುವಂಶದಲ್ಲಿ ಕೌತ್ಸ ರಘು ಮಹಾರಾಜನಿಗೆ "ಸರ್ವೋಪಕಾರ ಕ್ಷಮಮಾಶ್ರಮಂ ತೇ" ಎನ್ನುತ್ತಾನೆ. ಸಮಾಜದ ಆಧಾರ ಕಂಭಗಳೇ ಗೃಹಸ್ಥರು. ಆದ್ದರಿಂದ ಗೃಹಸ್ಥರ ಮನೆಗಳಿಗೆ ಅನೇಕರು ಬಂದು ಹೋಗುತ್ತಾರೆ. ಇವರಲ್ಲಿ ಗೃಹಸ್ಥರೂ ಉಂಟು. ಬ್ರಹ್ಮಚಾರಿ, ಸನ್ಯಾಸಿಗಳೂ ಉಂಟು. 

ಗೃಹಸ್ಥರ ಮನೆಗೆ ಬರುವ ಇಂತಹ ಜನಗಲ್ಲಿ ಎರಡು ವಿಧ. ನಾವಾಗಿ ಆಹ್ವಾನಿಸಿ ಅದಕ್ಕೆ ಸ್ಪಂದಿಸಿ ಬರುವವರು ಒಂದು ವರ್ಗ. ಅವರಾಗಿಯೇ ಬರುವವರು ಇನ್ನೊಂದು ವರ್ಗ. ಮೊದಲನೆಯ ಗುಂಪಿನ ಜನ ಬರುವುದು ನಮಗೆ ಗೊತ್ತು. ಏಕೆಂದರೆ, ನಾವು ಕರೆದಿದ್ದರಿಂದಲೇ ಅವರು ಬರುವುದು. ಹೀಗೆ ಕರೆಯುವುದರಿಂದ ಯಾವ ದಿನ ಅವರು ಬರಬೇಕು ಎನ್ನುವುದನ್ನು ನಾವೇ ನಿಗದಿ ಪಡಿಸುತ್ತೇವೆ. ಇಂತಹ ದಿನ (ತಿಥಿ ಅಥವಾ ದಿನಾಂಕವನ್ನು ನಿಗದಿ ಪಡಿಸಿ) ಬನ್ನಿ ಎಂದು ಹೇಳುತ್ತೇವೆ. ಇಷ್ಟು ಮಾತ್ರವಲ್ಲ, ಸಮಯವನ್ನೂ ನಾವು ಹೇಳಬಹುದು. ಅವರು ಬರುವುದು ನಮಗೆ ಮುಂಚೆಯೇ ಗೊತ್ತಿರುವುದರಿಂದ ಅವರನ್ನು ಸರಿಯಾಗಿ, ಗೌರವಯುತವಾಗಿ ಸ್ವಾಗತಿಸಿ, ಸತ್ಕರಿಸಲು ತಯಾರಿ ಮಾಡಿಕೊಳ್ಳಬಹುದು. ಇವರೇ ಅಭ್ಯಾಗತರು. ಇವರು ಬರುವುದರಲ್ಲಿ ಅನಿರೀಕ್ಷಿತವಾದುದು ಏನೂ ಇಲ್ಲ. 

ತಿಥಿ ಇಲ್ಲದೆ ಬರುವವನು ಅಥಿತಿ. ಅಂದರೆ ಅತಿಥಿ ಬರುವುದಕ್ಕೆ ದಿನ ಅಥವಾ ಕಾಲದ ಕ್ರಮವಿಲ್ಲ. ಧಿಡೀರನೆ ಮನೆಯ ಬಾಗಿಲ ಬಳಿ ಬಂದವರು ಅತಿಥಿಗಳು. ಅವರು ಬರುವ ಸುಳಿವೂ ನಮಗೆ ಗೊತ್ತಿಲ್ಲ. ಆದರೆ ಈಗ ಬಂದಿದ್ದಾರೆ. ಇಂತಹವರನ್ನು ಸ್ವಾಗತಿಸಲು, ಸತ್ಕರಿಸಲು ನಮಗೆ ತಯಾರಿ ಮಾಡಿಕೊಳ್ಳಲು ಸಮಯವಿಲ್ಲ. ಆಗಿಂದಾಗಲೇ ಎಲ್ಲ ಆಗಬೇಕು. ಮನೆಯಲ್ಲಿ ಇರುವ ಸಾಧನ, ಸಾಮಗ್ರಿಗಳಿಂದಲೇ ಎಲ್ಲ ನಡೆಯಬೇಕು. ಗೃಹಸ್ಥನ ಸತ್ಕಾರ ಕೌಶಲ್ಯ ಒರೆಗೆ ಹಚ್ಚುವುದು ಇಂತಹ ಸಮಯದಲ್ಲೇ.  ಇಂತಹ ಸಂದರ್ಭಗಳನ್ನು ಸಹಜವಾಗಿ ನಿಭಾಯಿಸುವ ಕಲೆ ಸಾಮಾನ್ಯವಾಗಿ  ಗೃಹಿಣಿಯರಿಗೆ ಒಲಿದು ಬಂದಿದೆ. ಆದ್ದರಿಂದಲೇ ಗೃಹಸ್ಥರು ಇಕ್ಕಟ್ಟಿನ ಪರಿಸ್ಥಿತಿಯಿಂದ ಸುಲಭವಾಗಿ ಪಾರಾಗುತ್ತಾರೆ! 

ಕೋಶಗಳು ಮತ್ತು ನಿಘಂಟುಗಳಲ್ಲಿ ಅತಿಥಿ ಮತ್ತು ಅಭ್ಯಾಗತ ಅನ್ನುವ ಎರಡೂ ಪದಗಳನ್ನೂ ಅತಿಥಿ ಎನ್ನುವ ಅರ್ಥದಲ್ಲೇ ಕೊಡುತ್ತಾರೆ. ಸಮಾನ ಪದಗಳು ಸುಮಾರಾಗಿ ಒಂದೇ ಅರ್ಥ ಕೊಟ್ಟರೂ ಅವುಗಳಲ್ಲಿ ಸಣ್ಣ ಆದರೆ ಸೂಕ್ಷ್ಮ ಭೇದಗಳಿರುತ್ತವೆ. ಅತಿಥಿ ಅನ್ನುವ ಪದಕ್ಕೆ "ತಿಥಿ ಇಲ್ಲದೆ ಬರುವವನು" ಅನ್ನುವುದನ್ನು ಎಲ್ಲ ಕಡೆ ಖಚಿತವಾಗಿ ಸೂಚಿಸಿದರೂ, ಅಭ್ಯಾಗತ ಅನ್ನುವ ಪದಕ್ಕೆ ಅಷ್ಟು ಖಚಿತವಾಗಿ ಸೂಚಿಸುವುದಿಲ್ಲ. ಸುಮಾರು ಅರವತ್ತು ವರುಷಗಳ ಹಿಂದೆ ನನ್ನ ಬಾಲ್ಯದಲ್ಲಿ ಸಂಸ್ಕೃತ ಕಲಿಸುತ್ತಿದ್ದ ಹಿರಿಯರು ಹೇಳಿದ ಮಾತಿನ ಬಲದ ಮೇಲೆ ಮೇಲೆ ಹೇಳಿದ ಅರ್ಥ ಕೊಟ್ಟಿದ್ದೇನೆ. ಅದು ಸಮಂಜಸವಾಗಿದೆ ಎಂದೂ ತೋರುತ್ತದೆ. ಇಲ್ಲದಿದ್ದರೆ ನಮ್ಮ ಕರೆಯ ಮೇರೆಗೆ ಬರುವ ಮಂದಿಗೆ "ಆಹ್ವಾನಿತರು" ಎಂದೇ ಹೇಳಬೇಕಾಗುತ್ತದೆ. ಈ ರೀತಿ ಹೇಳುವುದು ಬಳಕೆಯಲ್ಲಿಲ್ಲ. ಎಲ್ಲರನ್ನೂ (ಕರೆದು ಬಂದವರನ್ನು ಮತ್ತು ಕರೆಯದೆ ಬಂದವರನ್ನೂ) ಅತಿಥಿ ಎಂದೇ ವ್ಯವಹಾರ ಮಾಡಲಾಗುತ್ತದೆ. ಮೇಲೆ ಹೇಳಿದ ಅರ್ಥಗಳನ್ನು ಒಪ್ಪುವುದೂ ಬಿಡುವುದೂ ಅವರವರ ಸಮ್ಮತಿಗೆ ಬಿಟ್ಟ ವಿಷಯ. 

*****

ತಿಥಿ, ಅತಿಥಿ ಮತ್ತು ಅಭ್ಯಾಗತ ಇವುಗಳ ವ್ಯತ್ಯಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದಾಯಿತು. ಈ ಸಂಚಿಕೆ ಈಗಲೇ ಸಾಕಷ್ಟು ಉದ್ದವೂ ಆಯಿತು. 

ಅಥಿತಿ, ಅಭ್ಯಾಗತರ ಸತ್ಕಾರದ ಇತರ ಮಜಲುಗಳನ್ನು ಮುಂದೆ ನೋಡೋಣ! 

6 comments:

  1. Very informative blog. Everybody should read and understand.

    ReplyDelete
  2. After reading this article, no one will have any doubt about ಅತಿಥಿ ಮತ್ತು ಅಭ್ಯಾಗತರು. Very well written. I am benefited. Thanks Keshavamurthy ಗುರುಗಳೆ.
    CR Ramesh babu

    ReplyDelete
  3. Very logical information not known facts could be understood easily

    ReplyDelete
  4. ಲೇಖನ ಓದಿ ತುಂಬಾ ಸಂತೋಷಪಟ್ಟೆ. ನಚಿಕೇತನ ಹೆಸರು ಗೊತ್ತಿತ್ತೇ ಹೊರತು ಆತನ ಬಗ್ಗೆ ಏನೇನೂ ತಿಳಿದಿರಲಿಲ್ಲ. ಕುಂತಿ ಶ್ರೀಕೃಷ್ಣನ ಸೋದರತ್ತೆ ಎನ್ನುವುದೂ ನನಗೆ ಗೊತ್ತಿರಲಿಲ್ಲ. ಪುರಾಣ ಮತ್ತು ಪುರಾಣ ಪುರುಷರ ಬಗ್ಗೆ ಅಲ್ಪ ಜ್ಞಾನ ಪಡದಂತಾಯಿತು.

    ಅಥಿತಿ ಮತ್ತು ಅಭ್ಯಾಗತರ ನಡುವಿನ ವ್ಯತ್ಯಾಸವನ್ನು ಬಹಳ ಸೊಗಸಾಗಿ ವಿವರಿಸಿದ್ದೀರಿ.

    ಒಂದು ಸಣ್ಣ ಅನುಮಾನ ಉಪರಿ ಎಂದರೆ ಏನೆಂದು ತಿಳಿಸಿದ್ದೀರಿ. ಹಾಗೇ ತಿಥಿದ್ವಯ ಎಂದರೆ ಏನೆಂದು ತಿಳಿಸಿದರೆ ಸಂತೋಷ.

    ಮುಂದಿನ ಸಂಚಿಕೆಗಾಗಿ ಎದಿರು ನೋಡುತ್ತಿರುತ್ತೇನೆ

    ReplyDelete
  5. Very very informative. Did not know about Nachiketa. Very interesting to read. I enjoyed reading it.

    ReplyDelete
  6. ನಚಿಕೇತನ ಪ್ರಶ್ನೆಗಳು ಅನ್ನುವುದನ್ನು ಕೇಳಿದ್ದೇನೆ ಆದರೆ ನಿಮ್ಮಂತೆ ಸರಳವಾಗಿ ಮನಮುಟ್ಟುವಂತೆ ಹೇಳಬಲ್ಲ ಇನ್ನೊಂದು ಲೇಖಕರ ಬಗ್ಗೆ ಗೊತ್ತಿಲ್ಲ. ತಾವೇ ಆ ಪ್ರಸಂಗವನ್ನು ವಿವರಿಸಿದರೆ ಚೆನ್ನ. ಕಥೋಪನಿಷದ್ ಓದಲು ಪ್ರಯತ್ನಿಸಿದೆ ಆದರೆ ಕಬ್ಬಿಣದ ಕಡಲೆ.

    ReplyDelete