Monday, December 18, 2023

ಅನೇಕ ಪ್ರತೀಕಗಳು ಏಕೆ ಬೇಕು?


ಒಬ್ಬ ಸಾಧು ಶ್ರೀಮಂತನೊಬ್ಬನನ್ನು ಕಾಣಲೆಂದು ಅವನ ಮನೆಗೆ ಹೋದನಂತೆ. ಶ್ರೀಮಂತನ ಸೇವಕ ಸಾಧುವನ್ನು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕೂಡಿಸಿದ. "ಯಜಮಾನರು ಪೂಜೆ ಮಾಡುತ್ತಿದ್ದಾರೆ. ಪೂಜೆ ಮುಗಿದ ತಕ್ಷಣ ನಿಮ್ಮನ್ನು ನೋಡುತ್ತಾರೆ" ಎಂದು ಹೇಳಿದ. ಸಾಧು ಅಂಗಳದಲ್ಲಿದ್ದ ಒಂದು ಮರದ ಕೆಳಗಿನ ಕಲ್ಲಿನಮೇಲೆ ಕುಳಿತ. ಸುಮಾರು ಹೊತ್ತಾದರೂ ಶ್ರೀಮಂತ ಹೊರಗೆ ಬರಲಿಲ್ಲ. ಸಾಧು ಸೇವಕನನ್ನು ವಿಚಾರಿಸಿದ. "ಗಣಪತಿಯ ಪೂಜೆ ಆಯಿತು. ಈಗ ಸ್ಕಂದನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಇನ್ನೂ ಸ್ವಲ್ಪ ಸಮಯದ ನಂತರ ಸಾಧು ಸೇವಕನನ್ನು ಮತ್ತೆ ವಿಚಾರಿಸಿದ. "ಸ್ಕಂದ, ಲಕ್ಷ್ಮಿ ಪೂಜೆ ಆಯಿತು. ಈಗ ಶಿವನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಸಾಧು ಮತ್ತೆ ಮತ್ತೆ ವಿಚಾರಿಸುತ್ತಿದ್ದ. ಹೀಗೇ ಎರಡು ಮೂರು ತಾಸು ಕಳೆಯಿತು. 

ಕೊನೆಗೆ ಎಲ್ಲ ದೇವರ ಪೂಜೆ ಮುಗಿದು ಶ್ರೀಮಂತ ಹೊರಗೆ ಬಂದು ಸಾಧುವನ್ನು ಕಂಡ. ಶ್ರೀಮಂತನಿಗೆ ಆಶ್ಚರ್ಯ ಆಯಿತು. ಅಂಗಳದಲ್ಲಿ ಸಣ್ಣ ಸಣ್ಣ ಹೊಂಡಗಳು. ಸಾಧುವಿನ ಕೈ ಮಣ್ಣಾಗಿತ್ತು. "ಇದೇನು ಸ್ವಾಮಿಗಳೇ, ಇಷ್ಟೊಂದು ಹೋಂಡ ತೆಗೆದಿದ್ದೀರಿ?" ಎಂದು ಕೇಳಿದ. ಸಾಧು ನಗುತ್ತಾ "ಬಾಯಾರಿಕೆ ಆಯಿತು. ಅದಕ್ಕೆ ಕುಡಿಯುವ ನೀರಿಗಾಗಿ ಬಾವಿ ತೊಡುತ್ತಿದ್ದೆ" ಎಂದ. ಸಾಹುಕಾರ ನಗುತ್ತಾ "ನೀರು ಬೇಕಿದ್ದರೆ ನನ್ನ ಸೇವಕ ಕೊಡುತ್ತಿದ್ದ. ಹೋಗಲಿ, ನೀವು ಹತ್ತಾರು ಕಡೆ ತೋಡುವ ಬದಲು ಒಂದೇ ಕಡೆ ತೋಡಿದ್ದರೆ  ಅದು ಒಂದು ಬಾವಿಯಾಗಿ ನೀರು ಸಿಕ್ಕಿರುತ್ತಿತ್ತು" ಎಂದ. 

ಈಗ ನಗುವ ಸರದಿ ಸಾಧುವಿನದು. "ಅಷ್ಟು ದೇವರುಗಳ ಪೂಜೆ ಸ್ವಲ್ಪ ಸ್ವಲ್ಪ ಹೊತ್ತು ಮಾಡುವ ಬದಲು ಒಬ್ಬನೇ ದೇವರ ಪೂಜೆ ಅಷ್ಟು ಹೊತ್ತೂ ಮಾಡಿದ್ದರೆ ಆ ಒಬ್ಬ ದೇವರು ಪ್ರತ್ಯಕ್ಷವಾಗಿ ನಿಮಗೆ ಕೇಳಿದ ವರಗಳನ್ನು ಕೊಡುತ್ತಿರಲಿಲ್ಲವೇ?" ಎಂದ ಸಾಧು. 

ಅನೇಕ ಪ್ರತೀಕಗಳ ಪೂಜೆ ಮಾಡುವವರನ್ನು ಹಾಸ್ಯ ಮಾಡಲು ಈ ಕಥೆಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. 

*****

ಸಾಧಕನಿಗೆ ಇಷ್ಟೊಂದು ಪ್ರತೀಕಗಳ ಅವಶ್ಯಕತೆ ಏಕೆ? ಒಂದೊ, ಎರಡೋ ಇದ್ದರೆ ಸಾಲದೇ? ಒಂದಾದರ ಮೇಲೆ ಒಂದರಂತೆ ಸರತಿಯಲ್ಲಿ ಪೂಜೆ ಮಾಡುತ್ತಿದ್ದರೆ ಮೇಲಿನ ಕಥೆಯಲ್ಲಿನ ಶ್ರೀಮಂತನಂತೆ ಆಗಲಿಲ್ಲವೇ? ಸಾಧು ಅವನಿಗೆ ಹೇಳಿದ್ದು ಸರಿ ತಾನೇ? ಇವೆಲ್ಲ ನ್ಯಾಯವಾದ ಪ್ರಶ್ನೆಗಳೇ. ಒಂದಾದರ ಮೇಲೆ ಒಂದರಂತೆ ಹೀಗೆ ಪೂಜೆ ಮಾಡುವುದರಲ್ಲಿಯೇ ಕಾಲ ಕಳೆದು ಹೋಗಬಹುದಲ್ಲವೇ? ವಿಮಾನ ಮೇಲೇರುವ ಬದಲು ನಿಲ್ದಾಣದಲ್ಲೇ ಸುತ್ತು ಹೊಡೆದರೆ ಏನು ಪ್ರಯೋಜನ? ಈ ಪ್ರಶ್ನೆಗಳಿಗೆ ಸಮಾಧಾನ ಏನು?

ಪ್ರತೀಕಗಳು ಒಂದು ನಿಮಿತ್ತ; ಆರಾಧಿಸುವುದು ಆ ಪ್ರತೀಕಗಳು ಪ್ರತಿನಿಧಿಸುವ ದೇವತೆಗಳ ಅಂತರ್ಯಾಮಿಯಾದ ಪರಮಪುರುಷನನ್ನು ಎಂದಾದಮೇಲೆ ನಮಗೆ ಅಷ್ಟು ಮಂದಿ ದೇವತೆಗಳೂ, ಅವರ ಪ್ರತೀಕಗಳೂ ಏಕೆ ಬೇಕು? 

ಮನೆಯಲ್ಲಿ ಅಥವಾ ಕಾರ್ಯಾಗಾರದಲ್ಲಿ ಒಂದು "ಉಪಕರಣಗಳ ಪೆಟ್ಟಿಗೆ" ಅಥವಾ "ಟೂಲ್ ಕಿಟ್" ಇರುತ್ತದೆ. ಅದರಲ್ಲಿ ಅನೇಕ ರೀತಿಯ ಉಪಕರಣಗಳು ಇರುತ್ತವೆ. ಅವೆಲ್ಲವನ್ನೂ ಪ್ರತಿದಿನವೂ ಉಪಯೋಗಿಸುವುದಿಲ್ಲ. ಸಮಯ, ಸಂದರ್ಭ, ಅವಶ್ಯಕತೆಗೆ ಹೊಂದಿದಂತೆ ಯಾವ ಉಪಕರಣ ಬೇಕೋ ಅದನ್ನು ಉಪಯೋಗಿಸುತ್ತಾರೆ.  ಕೆಲವನ್ನು ಪ್ರತಿದಿನ ಉಪಯೋಗಿಸುವ ಅವಶ್ಯಕತೆ ಬರುತ್ತದೆ. ಅನೇಕ ವೇಳೆ ಕೆಲವು ಉಪಕರಣಗಳನ್ನು ತಿಂಗಳುಗಟ್ಟಲೆ ಉಪಯೋಗಿಸುವುದಿಲ್ಲ. ಉಪಯೋಗಿಸಲಿಲ್ಲ ಎಂದು ಅವನ್ನು ತ್ಯಜಿಸುವುದೂ ಇಲ್ಲ. 

ಅಡಿಗೆ ಮನೆಯಲ್ಲಿ ಅನೇಕ ಪಾತ್ರೆಗಳು ಇವೆ. ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಉಪಯೋಗ ಇದೆ. ಇಷ್ಟು ಪಾತ್ರೆಗಳು ಇವೆ ಎಂದು ಅವೆಲ್ಲವನ್ನೂ ಪ್ರತಿದಿನ ಬಳಸುವುದಿಲ್ಲ. ಅಂತೆಯೇ ಪ್ರತಿದಿನ ಬಳಸುವುದಿಲ್ಲ ಎಂದು ಕೆಲವು ಪಾತ್ರೆಗಳನ್ನು ಬಿಸಾಡುವುದೂ ಇಲ್ಲ. 

ಸಾಧಕನು ಪ್ರತೀಕಗಳನ್ನು ಆರಾಧಿಸುವಾಗ ತನ್ನ ವಿವೇಚನೆಯನ್ನು ಬಳಸಬೇಕು. ಪ್ರತಿದಿನ ಸರತಿಯ ಮೇಲೆ ಒಂದಾದ ನಂತರ ಒಂದರಂತೆ ಅನೇಕ ಪ್ರತೀಕಗಳನ್ನು ಆರಾಧಿಸುವುದರಿಂದ ಮೂಲ ಉದ್ದೇಶಗಳನ್ನೇ ಮರೆತಂತಾಗುತ್ತದೆ. ಪ್ರತೀಕಗಳ ಅಂತರ್ಯಾಮಿಯಾದ ಪರಮಪುರುಷನೇ ಪರಮ ಗುರಿ ಎನ್ನುವುದನ್ನು ನೆನಪಿಡಬೇಕು. ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಸಾಧನೆಯ ಮಾರ್ಗಗಳೂ ಪರಿವರ್ತನೆಗೆ ಒಳಗಾಗುತ್ತವೆ. ಒಂದು ಹಂತ ದಾಟಿದ ಮೇಲೆ ಅನೇಕ ಸಾಧಕರು ತಮ್ಮ ಆರಾಧನೆಯ ಕ್ರಮವನ್ನೇ ಬದಲಿಸುತ್ತಾರೆ. "ಮಾನಸ ಪೂಜೆ" ನಡೆಸುವ ಹಂತ ತಲುಪಿದ ಸಾಧಕರು ಎಲ್ಲೆಲ್ಲೂ ಪರಮಾತ್ಮನನ್ನೇ ಕಾಣುತ್ತಾರೆ. ಅವರು ಪ್ರತೀಕಗಳ ಅವಶ್ಯಕತೆ ದಾಟಿದವರು. ಆದರೂ ಅವರು ಪ್ರತೀಕಗಳನ್ನು ತಿರಸ್ಕರಿಸುವುದಿಲ್ಲ. ಪ್ರತೀಕಗಳ ಆರಾಧಕರನ್ನು ನಿರ್ಲಕ್ಷಿಸುವುದಿಲ್ಲ. 
*****

ಸರಕಾರದ ಕಾರ್ಯ ನಿರ್ವಹಿಸಲು ಅನೇಕ ಖಾತೆ ಅಥವಾ ವಿಭಾಗಗಳಿವೆ. ಪ್ರತಿಯೊಂದು ವಿಭಾಗದಲ್ಲೂ ಅನೇಕ ಹಂತಗಳಿವೆ. ಪ್ರತಿ ಹಂತದಲ್ಲೂ ಅಧಿಕಾರಿಗಳಿದ್ದಾರೆ. ಆದರೆ ಎಲ್ಲ ವಿಭಾಗಗಳ ಕೆಲಸಗಳೂ "ಪ್ರೆಸಿಡೆಂಟ್ ಆಫ್ ಇಂಡಿಯ" ಅಥವಾ "ಭಾರತದ ರಾಷ್ಟ್ರಪತಿ" ಹೆಸರಿನಲ್ಲಿ ನಡೆಯುತ್ತವೆ. ಪ್ರಜೆಗಳ ಬೇಡಿಕೆಗೆ ಅನುಗುಣವಾಗಿ ಆಯಾ ಇಲಾಖೆಯ ಅಧಿಕಾರಿಗಳು ಅವರವರ ಅಧಿಕಾರದ ಯೋಗ್ಯತೆಗೆ ಮತ್ತು ವ್ಯಾಪ್ತಿಗೆ ತಕ್ಕಂತೆ ಮಾಡಿಕೊಡುತ್ತಾರೆ. ಪ್ರತಿ ಕೆಲಸವೂ ರಾಷ್ಟ್ರಪತಿಗಳ ಗಮನಕ್ಕೆ ಬರಬೇಕಾಗಿಲ್ಲ. ಪ್ರತಿ ಕೆಲಸಕ್ಕೂ ರಾಷ್ಟ್ರಪತಿಗಳ ಅಪ್ಪಣೆ ಬೇಕಾಗಿಲ್ಲ. ತಮ್ಮ ಕೆಲಸಗಳಿಗೆ ತಕ್ಕಂತೆ ಪ್ರಜೆಗಳು ಆಯಾ ವಿಭಾಗದ ಮತ್ತು ಸೂಕ್ತ ಹಂತದ ಕಚೇರಿಗಳಿಗೆ ಹೋಗುತ್ತಾರೆ. ಆದರೆ ಕೆಲಸ ಮಾಡುವ ಪ್ರತಿ ಅಧಿಕಾರಿಗೂ ತಾನು ಸರಕಾರದ ಕೆಲಸ ಮಾಡುತ್ತಿದ್ದೇನೆ, ನನ್ನ ಸ್ವಂತದ್ದಲ್ಲ ಎನ್ನುವ ಅರಿವು ಇರುತ್ತದೆ. ಪರಮಾತ್ಮನ ವ್ಯವಸ್ಥೆಯೂ ಹೀಗೆಯೇ. 

ನಮ್ಮ ಸುತ್ತ ಮುತ್ತ ಕಾಣುವಂತೆ ಅನೇಕ ವಿದ್ಯುತ್ ಉಪಕರಣಗಳಿವೆ. ಬೆಳಕು ನೀಡುವುದಕ್ಕಾಗಿಯೇ ಬೇರೆ ಬೇರೆ ಶಕ್ತಿಯ ಬಲ್ಬುಗಳು ಇವೆ. ಗಾಳಿಗಾಗಿ ಫ್ಯಾನ್ ಇವೆ. ಹವಾನಿಯಂತ್ರಣ ಉಪಕರಣಗಳಿವೆ. ವಿದ್ಯುತ್ನಿಂದ ಚಲಿಸುವ ವಾಹನಗಳಿವೆ. ಕಾರ್ಖಾನೆಗಳಲ್ಲಿ ಚಲಿಸುವ ದೊಡ್ಡ ದೊಡ್ಡ ಯಂತ್ರಗಳಿವೆ. ಮಿಕ್ಸರ್, ಗ್ರೈಂಡರ್ ಇವೆ. ರೆಫ್ರಿಜಿರೇಟರ್, ಡಿಶ್ ವಾಷರ್ ಇವೆ. ಇನ್ನೂ ಅನೇಕ ಉಪಕರಣಗಳಿವೆ. ಆದರೆ ಇವೆಲ್ಲ ಕೆಲಸ ಮಾಡುವುದು ಒಂದೇ ವಿದ್ಯುತ್ತಿನಿಂದ. ವಿದ್ಯುತ್ ಹರಿದರೆ ಕೆಲಸ. ಇಲ್ಲದಿದ್ದರೆ ನಿರುಪಯೋಗಿಗಳು. ಪರಮಾತ್ಮನ "ನಿಯಮನ" ಪ್ರಕಾರವೇ ಸೃಷ್ಟಿಯ ಸಮಸ್ತ ಕಾರ್ಯಗಳೂ ನಡೆಯುತ್ತವೆ. ಈ ಎಲ್ಲ ಸಾಧನ ಯಂತ್ರಗಳೂ ಬೇಕು. ಜೊತೆಗೆ ವಿದ್ಯುತ್ ಇರಲೇ ಬೇಕು. 

ಶ್ರೀಮದ್ಭಾಗವತ ಮೊದಲನೇ ಶ್ಲೋಕದಲ್ಲಿ "ಜನ್ಮಾದ್ಯಸ್ಯ" ಎಂದು ಹೇಳುವಾಗ ವಿರಾಟ್ ವಿಶ್ವದ ಸೃಷ್ಟಿಯಿಂದ ಪ್ರಾರಂಭಿಸಿ ಪರಮಾತ್ಮನ ಎಂಟು ಬಗೆಯ ಕರ್ತೃತ್ವವನ್ನು ವಿವರಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ನ್ಯಾನ, ಅಜ್ನ್ಯಾನ, ಬಂಧ ಮತ್ತು ಮೋಕ್ಷ ಎಂಬ ಎಂಟು ಕರ್ತೃತ್ವಗಳಲ್ಲಿ ನಾಲ್ಕನೆಯದು "ನಿಯಮನ". ಈ ನಿಯಮನ ಎನ್ನುವುದೇ ಆ ವಿಶ್ವಾತ್ಮನ "ಸಂವಿಧಾನ". ಸೃಷ್ಟಿಯಿಂದ ಲಯದವರೆಗೆ, ಮತ್ತು ಲಯದಿಂದ ಪುನಃ ಸೃಷ್ಟಿಯವರೆಗೆ ಎಲ್ಲವೂ ಈ ನಿಯಮನ ಎನ್ನುವ ಸಂವಿಧಾನದ ಪ್ರಕಾರವೇ ನಡೆಯುವುದು. ಆ ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುವ ಅನೇಕ ದೇವತಗಳೇ ಪ್ರಧಾನ ಪ್ರತೀಕಗಳು. ಈ ನಿಯಮನದ ಆದೇಶದಂತೆ ಕಾರ್ಯ ನಿರ್ವಹಿಸುವ ಪ್ರತಿಯೊಂದು ದೇವತೆಯೂ ನಮ್ಮ ಶ್ರದ್ದಾ ಗೌರವಗಳಿಗೆ ಪಾತ್ರರು. ಪ್ರತೀಕಗಳ ಮೂಲಕ ಮಾಡುವ ಸಾಧನೆ ಈ ತತ್ವವನ್ನು ಗೌರವಿಸುವ ಪ್ರಕ್ರಿಯೆಯೇ ಆಗಿದೆ. 

***** 

ಈಗ ಮತ್ತೊಂದು ಪ್ರಶ್ನೆ ಬರಬಹುದು. "ಎಲ್ಲವೂ ಪರಮಾತ್ಮನ ಇಚ್ಛೆಯಿಂದಲೇ ನಡೆಯುವುದಾದರೆ ನಾವು ನೇರವಾಗಿ ಅವನನ್ನೇ ಆರಾಧಿಸುತ್ತೇವೆ. ಬೇರೆಯವರಗೊಡವೆ ನಮಗೆ ಬೇಡ. ಪ್ರತೀಕಗಳೂ ಬೇಡ; ದೇವತೆಗಳೂ ಬೇಡ. ಅವುಗಳೂ ಅವುಗಳ ಆರಾಧನೆಯೂ ಬೇಡ. ನೇರವಾಗಿ ಅವನನ್ನೇ ಆಶ್ರಯಿಸುತ್ತೇವೆ. ಆರಾಧಿಸುತ್ತೇವೆ." ಎಂದು ಕೆಲವರು ಹೇಳಬಹುದು. ಇದು ನಮಗೆ ಯಾವ ಅಧಿಕಾರಿಯ ಸಹವಾಸವೂ ಬೇಡ. ನೆಟ್ಟಗೆ ರಾಷ್ಟ್ರಪತಿಗಳ ಬಳಿಯಲ್ಲಿಯೇ ನಮ್ಮ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದಂತಾಯಿತು. ಆದರೆ  ನಿಯಮನದ ಪ್ರಕಾರ ಪರಮಾತ್ಮನನ್ನು ಧ್ಯಾನಿಸುವಾಗ ಅವನ ಪರಿವಾರ ಸಮೇತ ಧ್ಯಾನಿಸಬೇಕು. ಒಂದು ಲಗ್ನಪತ್ರಿಕೆ ಕೊಡುವಾಗ ಸಕುಟುಂಬ ಸಪರಿವಾರ ಸಮೇತ ಆಗಮಿಸಿ ಎಂದು ಬಿನ್ನೈಸಿಕೊಳ್ಳುವ ನಾವು (ಈಗ ಲಗ್ನಪತ್ರಿಕೆಯಲ್ಲಿ ಈ ರೀತಿಯ ಒಕ್ಕಣೆಯನ್ನು ಕಾಣುವುದು ಬಹಳ ವಿರಳ) ಪರಮಾತ್ಮನ ಚಿಂತನೆಯಲ್ಲಿ ಅದನ್ನು ಯಾಕೆ ಮಾಡಬಾರದು? 

ದೇವತೆಗಳ ಆರಾಧನೆ ಮಾಡುವಾಗ ಇದೇ ಕೊನೆ ಎಂಬ ಭಾವನೆ ಇರದೇ "ಎಲ್ಲ ದೇವ, ದೇವತೆಗಳಿಗೆ ಮಾಡುವ ನಮಸ್ಕಾರವೂ ಪರಮಾತ್ಮನಿಗೇ ತಲುಪುತ್ತವೆ" ಎಂಬ ಸುಜ್ಞಾನ ಇರಬೇಕು. 

ಅನೇಕ ವ್ರತ, ವಿಧಿ, ವಿಧಾನಗಳನ್ನು ಒಳಗೊಂಡ ಪೂಜಾದಿ ಕೈಂಕರ್ಯಗಳಲ್ಲಿಯೂ ಕಡೆಗೆ ಸಮರ್ಪಣೆ ಮಾಡುವಾಗ ಒಂದೇ ಇಷ್ಟ ದೈವಕ್ಕೆ (ಉದಾಹರಣೆಗೆ: ಕೃಷ್ಣಾರ್ಪಣಮಸ್ತು) ಎಂದೇ ಹೇಳುತ್ತಾರೆ. ಗಣೇಶ ಚೌತಿಯಂದು ಒಂದೂವರೆ ಗಂಟೆ ಪೂಜೆ ನಡೆಸಿ ಶ್ರೀ ಕೃಷ್ಣಾರ್ಪಣಮಸ್ತು ಎಂದೇ ಹೇಳುತ್ತಾರೆ, ಅಥವಾ ಶ್ರೀ ಪರಮೇಶ್ವರಾರ್ಪಣಮಸ್ತು ಎನ್ನುತ್ತಾರೆ!

5 comments:

  1. Very useful informarion.

    ReplyDelete
  2. ನಾನು ಸಂಸ್ಕೃತ ಕಲಿತವನಲ್ಲ. ಸಂಧ್ಯಾವಂದನೆ ಮಾಡುವಾಗ "ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ| ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ|| ಎಂದು ಬಾಯಿಪಾಠ ಮಾಡಿಕೊಂಡು ಮಂತ್ರಗಳನ್ನು ಹೇಳುತ್ತಿದ್ದನೇ ಹೊರತು ಅದರ ಅರ್ಥ ತಿಳಿಯುವ ಗೋಜಿಗೆ ಹೋಗುತ್ತಿರಲಿಲ್ಲ. ನಿಮ್ಮ ಲೇಖನಗಳ ಮೂಲಕ ಸ್ವಲ್ಪ ಸ್ವಲ್ಪ ಸಂಸ್ಕೃತವನ್ನು ಕಲಿಯುತ್ತಿದ್ದೇನೆ. ನೀವೀಗ ನನ್ನ ಸಂಸ್ಕೃತದ ಗುರುಗಳು.

    ReplyDelete
  3. Very meaningful and nice.As Adi Shankara said When Karma ceases the Jnana arises.This is the highest from of Atma Jnana and one needs to introspect and is not easy for the ordinary human.Thank you Sir.

    ReplyDelete
  4. Excellent as always.

    ReplyDelete