Showing posts with label prateeka. Show all posts
Showing posts with label prateeka. Show all posts

Monday, December 18, 2023

ಅನೇಕ ಪ್ರತೀಕಗಳು ಏಕೆ ಬೇಕು?


ಒಬ್ಬ ಸಾಧು ಶ್ರೀಮಂತನೊಬ್ಬನನ್ನು ಕಾಣಲೆಂದು ಅವನ ಮನೆಗೆ ಹೋದನಂತೆ. ಶ್ರೀಮಂತನ ಸೇವಕ ಸಾಧುವನ್ನು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕೂಡಿಸಿದ. "ಯಜಮಾನರು ಪೂಜೆ ಮಾಡುತ್ತಿದ್ದಾರೆ. ಪೂಜೆ ಮುಗಿದ ತಕ್ಷಣ ನಿಮ್ಮನ್ನು ನೋಡುತ್ತಾರೆ" ಎಂದು ಹೇಳಿದ. ಸಾಧು ಅಂಗಳದಲ್ಲಿದ್ದ ಒಂದು ಮರದ ಕೆಳಗಿನ ಕಲ್ಲಿನಮೇಲೆ ಕುಳಿತ. ಸುಮಾರು ಹೊತ್ತಾದರೂ ಶ್ರೀಮಂತ ಹೊರಗೆ ಬರಲಿಲ್ಲ. ಸಾಧು ಸೇವಕನನ್ನು ವಿಚಾರಿಸಿದ. "ಗಣಪತಿಯ ಪೂಜೆ ಆಯಿತು. ಈಗ ಸ್ಕಂದನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಇನ್ನೂ ಸ್ವಲ್ಪ ಸಮಯದ ನಂತರ ಸಾಧು ಸೇವಕನನ್ನು ಮತ್ತೆ ವಿಚಾರಿಸಿದ. "ಸ್ಕಂದ, ಲಕ್ಷ್ಮಿ ಪೂಜೆ ಆಯಿತು. ಈಗ ಶಿವನ ಪೂಜೆ ನಡೆಯುತ್ತಿದೆ" ಎಂದು ಸೇವಕ ಹೇಳಿದ. ಸಾಧು ಮತ್ತೆ ಮತ್ತೆ ವಿಚಾರಿಸುತ್ತಿದ್ದ. ಹೀಗೇ ಎರಡು ಮೂರು ತಾಸು ಕಳೆಯಿತು. 

ಕೊನೆಗೆ ಎಲ್ಲ ದೇವರ ಪೂಜೆ ಮುಗಿದು ಶ್ರೀಮಂತ ಹೊರಗೆ ಬಂದು ಸಾಧುವನ್ನು ಕಂಡ. ಶ್ರೀಮಂತನಿಗೆ ಆಶ್ಚರ್ಯ ಆಯಿತು. ಅಂಗಳದಲ್ಲಿ ಸಣ್ಣ ಸಣ್ಣ ಹೊಂಡಗಳು. ಸಾಧುವಿನ ಕೈ ಮಣ್ಣಾಗಿತ್ತು. "ಇದೇನು ಸ್ವಾಮಿಗಳೇ, ಇಷ್ಟೊಂದು ಹೋಂಡ ತೆಗೆದಿದ್ದೀರಿ?" ಎಂದು ಕೇಳಿದ. ಸಾಧು ನಗುತ್ತಾ "ಬಾಯಾರಿಕೆ ಆಯಿತು. ಅದಕ್ಕೆ ಕುಡಿಯುವ ನೀರಿಗಾಗಿ ಬಾವಿ ತೊಡುತ್ತಿದ್ದೆ" ಎಂದ. ಸಾಹುಕಾರ ನಗುತ್ತಾ "ನೀರು ಬೇಕಿದ್ದರೆ ನನ್ನ ಸೇವಕ ಕೊಡುತ್ತಿದ್ದ. ಹೋಗಲಿ, ನೀವು ಹತ್ತಾರು ಕಡೆ ತೋಡುವ ಬದಲು ಒಂದೇ ಕಡೆ ತೋಡಿದ್ದರೆ  ಅದು ಒಂದು ಬಾವಿಯಾಗಿ ನೀರು ಸಿಕ್ಕಿರುತ್ತಿತ್ತು" ಎಂದ. 

ಈಗ ನಗುವ ಸರದಿ ಸಾಧುವಿನದು. "ಅಷ್ಟು ದೇವರುಗಳ ಪೂಜೆ ಸ್ವಲ್ಪ ಸ್ವಲ್ಪ ಹೊತ್ತು ಮಾಡುವ ಬದಲು ಒಬ್ಬನೇ ದೇವರ ಪೂಜೆ ಅಷ್ಟು ಹೊತ್ತೂ ಮಾಡಿದ್ದರೆ ಆ ಒಬ್ಬ ದೇವರು ಪ್ರತ್ಯಕ್ಷವಾಗಿ ನಿಮಗೆ ಕೇಳಿದ ವರಗಳನ್ನು ಕೊಡುತ್ತಿರಲಿಲ್ಲವೇ?" ಎಂದ ಸಾಧು. 

ಅನೇಕ ಪ್ರತೀಕಗಳ ಪೂಜೆ ಮಾಡುವವರನ್ನು ಹಾಸ್ಯ ಮಾಡಲು ಈ ಕಥೆಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. 

*****

ಸಾಧಕನಿಗೆ ಇಷ್ಟೊಂದು ಪ್ರತೀಕಗಳ ಅವಶ್ಯಕತೆ ಏಕೆ? ಒಂದೊ, ಎರಡೋ ಇದ್ದರೆ ಸಾಲದೇ? ಒಂದಾದರ ಮೇಲೆ ಒಂದರಂತೆ ಸರತಿಯಲ್ಲಿ ಪೂಜೆ ಮಾಡುತ್ತಿದ್ದರೆ ಮೇಲಿನ ಕಥೆಯಲ್ಲಿನ ಶ್ರೀಮಂತನಂತೆ ಆಗಲಿಲ್ಲವೇ? ಸಾಧು ಅವನಿಗೆ ಹೇಳಿದ್ದು ಸರಿ ತಾನೇ? ಇವೆಲ್ಲ ನ್ಯಾಯವಾದ ಪ್ರಶ್ನೆಗಳೇ. ಒಂದಾದರ ಮೇಲೆ ಒಂದರಂತೆ ಹೀಗೆ ಪೂಜೆ ಮಾಡುವುದರಲ್ಲಿಯೇ ಕಾಲ ಕಳೆದು ಹೋಗಬಹುದಲ್ಲವೇ? ವಿಮಾನ ಮೇಲೇರುವ ಬದಲು ನಿಲ್ದಾಣದಲ್ಲೇ ಸುತ್ತು ಹೊಡೆದರೆ ಏನು ಪ್ರಯೋಜನ? ಈ ಪ್ರಶ್ನೆಗಳಿಗೆ ಸಮಾಧಾನ ಏನು?

ಪ್ರತೀಕಗಳು ಒಂದು ನಿಮಿತ್ತ; ಆರಾಧಿಸುವುದು ಆ ಪ್ರತೀಕಗಳು ಪ್ರತಿನಿಧಿಸುವ ದೇವತೆಗಳ ಅಂತರ್ಯಾಮಿಯಾದ ಪರಮಪುರುಷನನ್ನು ಎಂದಾದಮೇಲೆ ನಮಗೆ ಅಷ್ಟು ಮಂದಿ ದೇವತೆಗಳೂ, ಅವರ ಪ್ರತೀಕಗಳೂ ಏಕೆ ಬೇಕು? 

ಮನೆಯಲ್ಲಿ ಅಥವಾ ಕಾರ್ಯಾಗಾರದಲ್ಲಿ ಒಂದು "ಉಪಕರಣಗಳ ಪೆಟ್ಟಿಗೆ" ಅಥವಾ "ಟೂಲ್ ಕಿಟ್" ಇರುತ್ತದೆ. ಅದರಲ್ಲಿ ಅನೇಕ ರೀತಿಯ ಉಪಕರಣಗಳು ಇರುತ್ತವೆ. ಅವೆಲ್ಲವನ್ನೂ ಪ್ರತಿದಿನವೂ ಉಪಯೋಗಿಸುವುದಿಲ್ಲ. ಸಮಯ, ಸಂದರ್ಭ, ಅವಶ್ಯಕತೆಗೆ ಹೊಂದಿದಂತೆ ಯಾವ ಉಪಕರಣ ಬೇಕೋ ಅದನ್ನು ಉಪಯೋಗಿಸುತ್ತಾರೆ.  ಕೆಲವನ್ನು ಪ್ರತಿದಿನ ಉಪಯೋಗಿಸುವ ಅವಶ್ಯಕತೆ ಬರುತ್ತದೆ. ಅನೇಕ ವೇಳೆ ಕೆಲವು ಉಪಕರಣಗಳನ್ನು ತಿಂಗಳುಗಟ್ಟಲೆ ಉಪಯೋಗಿಸುವುದಿಲ್ಲ. ಉಪಯೋಗಿಸಲಿಲ್ಲ ಎಂದು ಅವನ್ನು ತ್ಯಜಿಸುವುದೂ ಇಲ್ಲ. 

ಅಡಿಗೆ ಮನೆಯಲ್ಲಿ ಅನೇಕ ಪಾತ್ರೆಗಳು ಇವೆ. ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಉಪಯೋಗ ಇದೆ. ಇಷ್ಟು ಪಾತ್ರೆಗಳು ಇವೆ ಎಂದು ಅವೆಲ್ಲವನ್ನೂ ಪ್ರತಿದಿನ ಬಳಸುವುದಿಲ್ಲ. ಅಂತೆಯೇ ಪ್ರತಿದಿನ ಬಳಸುವುದಿಲ್ಲ ಎಂದು ಕೆಲವು ಪಾತ್ರೆಗಳನ್ನು ಬಿಸಾಡುವುದೂ ಇಲ್ಲ. 

ಸಾಧಕನು ಪ್ರತೀಕಗಳನ್ನು ಆರಾಧಿಸುವಾಗ ತನ್ನ ವಿವೇಚನೆಯನ್ನು ಬಳಸಬೇಕು. ಪ್ರತಿದಿನ ಸರತಿಯ ಮೇಲೆ ಒಂದಾದ ನಂತರ ಒಂದರಂತೆ ಅನೇಕ ಪ್ರತೀಕಗಳನ್ನು ಆರಾಧಿಸುವುದರಿಂದ ಮೂಲ ಉದ್ದೇಶಗಳನ್ನೇ ಮರೆತಂತಾಗುತ್ತದೆ. ಪ್ರತೀಕಗಳ ಅಂತರ್ಯಾಮಿಯಾದ ಪರಮಪುರುಷನೇ ಪರಮ ಗುರಿ ಎನ್ನುವುದನ್ನು ನೆನಪಿಡಬೇಕು. ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಸಾಧನೆಯ ಮಾರ್ಗಗಳೂ ಪರಿವರ್ತನೆಗೆ ಒಳಗಾಗುತ್ತವೆ. ಒಂದು ಹಂತ ದಾಟಿದ ಮೇಲೆ ಅನೇಕ ಸಾಧಕರು ತಮ್ಮ ಆರಾಧನೆಯ ಕ್ರಮವನ್ನೇ ಬದಲಿಸುತ್ತಾರೆ. "ಮಾನಸ ಪೂಜೆ" ನಡೆಸುವ ಹಂತ ತಲುಪಿದ ಸಾಧಕರು ಎಲ್ಲೆಲ್ಲೂ ಪರಮಾತ್ಮನನ್ನೇ ಕಾಣುತ್ತಾರೆ. ಅವರು ಪ್ರತೀಕಗಳ ಅವಶ್ಯಕತೆ ದಾಟಿದವರು. ಆದರೂ ಅವರು ಪ್ರತೀಕಗಳನ್ನು ತಿರಸ್ಕರಿಸುವುದಿಲ್ಲ. ಪ್ರತೀಕಗಳ ಆರಾಧಕರನ್ನು ನಿರ್ಲಕ್ಷಿಸುವುದಿಲ್ಲ. 
*****

ಸರಕಾರದ ಕಾರ್ಯ ನಿರ್ವಹಿಸಲು ಅನೇಕ ಖಾತೆ ಅಥವಾ ವಿಭಾಗಗಳಿವೆ. ಪ್ರತಿಯೊಂದು ವಿಭಾಗದಲ್ಲೂ ಅನೇಕ ಹಂತಗಳಿವೆ. ಪ್ರತಿ ಹಂತದಲ್ಲೂ ಅಧಿಕಾರಿಗಳಿದ್ದಾರೆ. ಆದರೆ ಎಲ್ಲ ವಿಭಾಗಗಳ ಕೆಲಸಗಳೂ "ಪ್ರೆಸಿಡೆಂಟ್ ಆಫ್ ಇಂಡಿಯ" ಅಥವಾ "ಭಾರತದ ರಾಷ್ಟ್ರಪತಿ" ಹೆಸರಿನಲ್ಲಿ ನಡೆಯುತ್ತವೆ. ಪ್ರಜೆಗಳ ಬೇಡಿಕೆಗೆ ಅನುಗುಣವಾಗಿ ಆಯಾ ಇಲಾಖೆಯ ಅಧಿಕಾರಿಗಳು ಅವರವರ ಅಧಿಕಾರದ ಯೋಗ್ಯತೆಗೆ ಮತ್ತು ವ್ಯಾಪ್ತಿಗೆ ತಕ್ಕಂತೆ ಮಾಡಿಕೊಡುತ್ತಾರೆ. ಪ್ರತಿ ಕೆಲಸವೂ ರಾಷ್ಟ್ರಪತಿಗಳ ಗಮನಕ್ಕೆ ಬರಬೇಕಾಗಿಲ್ಲ. ಪ್ರತಿ ಕೆಲಸಕ್ಕೂ ರಾಷ್ಟ್ರಪತಿಗಳ ಅಪ್ಪಣೆ ಬೇಕಾಗಿಲ್ಲ. ತಮ್ಮ ಕೆಲಸಗಳಿಗೆ ತಕ್ಕಂತೆ ಪ್ರಜೆಗಳು ಆಯಾ ವಿಭಾಗದ ಮತ್ತು ಸೂಕ್ತ ಹಂತದ ಕಚೇರಿಗಳಿಗೆ ಹೋಗುತ್ತಾರೆ. ಆದರೆ ಕೆಲಸ ಮಾಡುವ ಪ್ರತಿ ಅಧಿಕಾರಿಗೂ ತಾನು ಸರಕಾರದ ಕೆಲಸ ಮಾಡುತ್ತಿದ್ದೇನೆ, ನನ್ನ ಸ್ವಂತದ್ದಲ್ಲ ಎನ್ನುವ ಅರಿವು ಇರುತ್ತದೆ. ಪರಮಾತ್ಮನ ವ್ಯವಸ್ಥೆಯೂ ಹೀಗೆಯೇ. 

ನಮ್ಮ ಸುತ್ತ ಮುತ್ತ ಕಾಣುವಂತೆ ಅನೇಕ ವಿದ್ಯುತ್ ಉಪಕರಣಗಳಿವೆ. ಬೆಳಕು ನೀಡುವುದಕ್ಕಾಗಿಯೇ ಬೇರೆ ಬೇರೆ ಶಕ್ತಿಯ ಬಲ್ಬುಗಳು ಇವೆ. ಗಾಳಿಗಾಗಿ ಫ್ಯಾನ್ ಇವೆ. ಹವಾನಿಯಂತ್ರಣ ಉಪಕರಣಗಳಿವೆ. ವಿದ್ಯುತ್ನಿಂದ ಚಲಿಸುವ ವಾಹನಗಳಿವೆ. ಕಾರ್ಖಾನೆಗಳಲ್ಲಿ ಚಲಿಸುವ ದೊಡ್ಡ ದೊಡ್ಡ ಯಂತ್ರಗಳಿವೆ. ಮಿಕ್ಸರ್, ಗ್ರೈಂಡರ್ ಇವೆ. ರೆಫ್ರಿಜಿರೇಟರ್, ಡಿಶ್ ವಾಷರ್ ಇವೆ. ಇನ್ನೂ ಅನೇಕ ಉಪಕರಣಗಳಿವೆ. ಆದರೆ ಇವೆಲ್ಲ ಕೆಲಸ ಮಾಡುವುದು ಒಂದೇ ವಿದ್ಯುತ್ತಿನಿಂದ. ವಿದ್ಯುತ್ ಹರಿದರೆ ಕೆಲಸ. ಇಲ್ಲದಿದ್ದರೆ ನಿರುಪಯೋಗಿಗಳು. ಪರಮಾತ್ಮನ "ನಿಯಮನ" ಪ್ರಕಾರವೇ ಸೃಷ್ಟಿಯ ಸಮಸ್ತ ಕಾರ್ಯಗಳೂ ನಡೆಯುತ್ತವೆ. ಈ ಎಲ್ಲ ಸಾಧನ ಯಂತ್ರಗಳೂ ಬೇಕು. ಜೊತೆಗೆ ವಿದ್ಯುತ್ ಇರಲೇ ಬೇಕು. 

ಶ್ರೀಮದ್ಭಾಗವತ ಮೊದಲನೇ ಶ್ಲೋಕದಲ್ಲಿ "ಜನ್ಮಾದ್ಯಸ್ಯ" ಎಂದು ಹೇಳುವಾಗ ವಿರಾಟ್ ವಿಶ್ವದ ಸೃಷ್ಟಿಯಿಂದ ಪ್ರಾರಂಭಿಸಿ ಪರಮಾತ್ಮನ ಎಂಟು ಬಗೆಯ ಕರ್ತೃತ್ವವನ್ನು ವಿವರಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ನ್ಯಾನ, ಅಜ್ನ್ಯಾನ, ಬಂಧ ಮತ್ತು ಮೋಕ್ಷ ಎಂಬ ಎಂಟು ಕರ್ತೃತ್ವಗಳಲ್ಲಿ ನಾಲ್ಕನೆಯದು "ನಿಯಮನ". ಈ ನಿಯಮನ ಎನ್ನುವುದೇ ಆ ವಿಶ್ವಾತ್ಮನ "ಸಂವಿಧಾನ". ಸೃಷ್ಟಿಯಿಂದ ಲಯದವರೆಗೆ, ಮತ್ತು ಲಯದಿಂದ ಪುನಃ ಸೃಷ್ಟಿಯವರೆಗೆ ಎಲ್ಲವೂ ಈ ನಿಯಮನ ಎನ್ನುವ ಸಂವಿಧಾನದ ಪ್ರಕಾರವೇ ನಡೆಯುವುದು. ಆ ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುವ ಅನೇಕ ದೇವತಗಳೇ ಪ್ರಧಾನ ಪ್ರತೀಕಗಳು. ಈ ನಿಯಮನದ ಆದೇಶದಂತೆ ಕಾರ್ಯ ನಿರ್ವಹಿಸುವ ಪ್ರತಿಯೊಂದು ದೇವತೆಯೂ ನಮ್ಮ ಶ್ರದ್ದಾ ಗೌರವಗಳಿಗೆ ಪಾತ್ರರು. ಪ್ರತೀಕಗಳ ಮೂಲಕ ಮಾಡುವ ಸಾಧನೆ ಈ ತತ್ವವನ್ನು ಗೌರವಿಸುವ ಪ್ರಕ್ರಿಯೆಯೇ ಆಗಿದೆ. 

***** 

ಈಗ ಮತ್ತೊಂದು ಪ್ರಶ್ನೆ ಬರಬಹುದು. "ಎಲ್ಲವೂ ಪರಮಾತ್ಮನ ಇಚ್ಛೆಯಿಂದಲೇ ನಡೆಯುವುದಾದರೆ ನಾವು ನೇರವಾಗಿ ಅವನನ್ನೇ ಆರಾಧಿಸುತ್ತೇವೆ. ಬೇರೆಯವರಗೊಡವೆ ನಮಗೆ ಬೇಡ. ಪ್ರತೀಕಗಳೂ ಬೇಡ; ದೇವತೆಗಳೂ ಬೇಡ. ಅವುಗಳೂ ಅವುಗಳ ಆರಾಧನೆಯೂ ಬೇಡ. ನೇರವಾಗಿ ಅವನನ್ನೇ ಆಶ್ರಯಿಸುತ್ತೇವೆ. ಆರಾಧಿಸುತ್ತೇವೆ." ಎಂದು ಕೆಲವರು ಹೇಳಬಹುದು. ಇದು ನಮಗೆ ಯಾವ ಅಧಿಕಾರಿಯ ಸಹವಾಸವೂ ಬೇಡ. ನೆಟ್ಟಗೆ ರಾಷ್ಟ್ರಪತಿಗಳ ಬಳಿಯಲ್ಲಿಯೇ ನಮ್ಮ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದಂತಾಯಿತು. ಆದರೆ  ನಿಯಮನದ ಪ್ರಕಾರ ಪರಮಾತ್ಮನನ್ನು ಧ್ಯಾನಿಸುವಾಗ ಅವನ ಪರಿವಾರ ಸಮೇತ ಧ್ಯಾನಿಸಬೇಕು. ಒಂದು ಲಗ್ನಪತ್ರಿಕೆ ಕೊಡುವಾಗ ಸಕುಟುಂಬ ಸಪರಿವಾರ ಸಮೇತ ಆಗಮಿಸಿ ಎಂದು ಬಿನ್ನೈಸಿಕೊಳ್ಳುವ ನಾವು (ಈಗ ಲಗ್ನಪತ್ರಿಕೆಯಲ್ಲಿ ಈ ರೀತಿಯ ಒಕ್ಕಣೆಯನ್ನು ಕಾಣುವುದು ಬಹಳ ವಿರಳ) ಪರಮಾತ್ಮನ ಚಿಂತನೆಯಲ್ಲಿ ಅದನ್ನು ಯಾಕೆ ಮಾಡಬಾರದು? 

ದೇವತೆಗಳ ಆರಾಧನೆ ಮಾಡುವಾಗ ಇದೇ ಕೊನೆ ಎಂಬ ಭಾವನೆ ಇರದೇ "ಎಲ್ಲ ದೇವ, ದೇವತೆಗಳಿಗೆ ಮಾಡುವ ನಮಸ್ಕಾರವೂ ಪರಮಾತ್ಮನಿಗೇ ತಲುಪುತ್ತವೆ" ಎಂಬ ಸುಜ್ಞಾನ ಇರಬೇಕು. 

ಅನೇಕ ವ್ರತ, ವಿಧಿ, ವಿಧಾನಗಳನ್ನು ಒಳಗೊಂಡ ಪೂಜಾದಿ ಕೈಂಕರ್ಯಗಳಲ್ಲಿಯೂ ಕಡೆಗೆ ಸಮರ್ಪಣೆ ಮಾಡುವಾಗ ಒಂದೇ ಇಷ್ಟ ದೈವಕ್ಕೆ (ಉದಾಹರಣೆಗೆ: ಕೃಷ್ಣಾರ್ಪಣಮಸ್ತು) ಎಂದೇ ಹೇಳುತ್ತಾರೆ. ಗಣೇಶ ಚೌತಿಯಂದು ಒಂದೂವರೆ ಗಂಟೆ ಪೂಜೆ ನಡೆಸಿ ಶ್ರೀ ಕೃಷ್ಣಾರ್ಪಣಮಸ್ತು ಎಂದೇ ಹೇಳುತ್ತಾರೆ, ಅಥವಾ ಶ್ರೀ ಪರಮೇಶ್ವರಾರ್ಪಣಮಸ್ತು ಎನ್ನುತ್ತಾರೆ!

Friday, November 24, 2023

ಪ್ರತೀಕಗಳ ಅವಶ್ಯಕತೆ


"ತ್ವಮೇವ ಶರಣಂ ಮಮ" ಎಂದು ಹೇಳಿಯಾಯಿತು. "ವ್ಯಾಪ್ತೋಪಾಸನೆ" ಬಗ್ಗೆ ತಿಳಿದಿದ್ದಾಯಿತು. ಅಂತಹ ಉಪಾಸನೆಯ ಮರ್ಮ ಅರಿತ ಮೇಲೆ ಪ್ರತೀಕಗಳ ಉಪಾಸನೆ ಏಕೆ ಮಾಡಬೇಕು? ಎಂಬ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಉತ್ತರ ಹುಕುವ ಕೆಲಸ  ಪ್ರಾರಂಭವಾಯಿತು. 

ದೂರದ ಊರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ತಲುಪಲು ವಿಮಾನದಲ್ಲಿ ಹೋಗಬೇಕು ಎಂದು ನಮಗೆ ಗೊತ್ತು. ಆದರೆ ನೆನೆಸಿದ ತಕ್ಷಣ ವಿಮಾನದಲ್ಲಿ ಹೋಗಲಾದೀತೇ? ನಾವಿರುವ ಸ್ಥಳದಿಂದ ವಿಮಾನ ನಿಲ್ದಾಣ ತಲುಪಬೇಕು. ವಿಮಾನದ ಪ್ರಯಾಣಕ್ಕೆ ಪರವಾನಗಿ ಪಡೆಯಬೇಕು. ಬೇಕಾದ ದಸ್ತಾವೇಜುಗಳನ್ನು ತೋರಿಸಬೇಕು. ಭದ್ರತಾ ತಪಾಸಣೆ ದಾಟಬೇಕು. ವಿಮಾನದವರೆಗೂ ತಲುಪಬೇಕು. ಹತ್ತಿ ವಿಮಾನದಲ್ಲಿ ಕೂಡಬೇಕು. ವಿಮಾನ ಪ್ರಯಾಣ ನಂತರವಷ್ಟೇ ಸಾಧ್ಯ!

ವಿಮಾನದವರೆಗಿನ ಪ್ರಯಾಣಕ್ಕೆ ನಾವು ನಿಲ್ದಾಣದವರೆಗೆ ನಡೆದು ಹೋಗಬೇಕು. ಇಲ್ಲವಾದರೆ ಯಾವುದಾದರೂ ವಾಹನವನ್ನು ಹಿಡಿದು ಅಲ್ಲಿಗೆ ತಲುಪಬೇಕು. ಈ ರೀತಿಯ ವಾಹನಗಳೇ ಪ್ರತೀಕಗಳ ಆರಾಧನೆಗಳು. ಪ್ರತೀಕಗಳೇ (symbols) ಪರಮಾತ್ಮನಲ್ಲ. ಎಲ್ಲೆಲ್ಲೂ  ಇರುವ ಪರಮಾತ್ಮನು ಅವುಗಳಲ್ಲಿ ವಿಶೇಷ ಸನ್ನಿಧಾನ ಇಟ್ಟಿದ್ದಾನೆ ಎಂದು ನಂಬಿ ಆರಾಧಿಸಬೇಕು.

ನಾವು ಮೊದಲನೇ ಅಥವಾ ಎರಡನೇ ತರಗತಿಯಲ್ಲಿ ಇದ್ದಾಗ ಮೊದಲು ವರ್ಣಮಾಲೆ ಹೇಳಿಕೊಟ್ಟರು. ಪೂರ್ತಿ ವರ್ಣಮಾಲೆಯ ಅಕ್ಷರಗಳನ್ನು ತಪ್ಪಿಲ್ಲದೆ ಹೇಳಿದಾಗ ಆನಂದವೋ ಆನಂದ. ನಂತರ ಕಾಗುಣಿತ. ಅದು ಬಂದಾಗಲಂತೂ ಖುಷಿಯೋ ಖುಷಿ. ಆಮೇಲೆ "ಡಬಲ್ ರೂಲ್ಡ್  ನೋಟ್ ಬುಕ್" ಅಂತ ಒಂದು ಕೊಟ್ಟರು, ಅಕ್ಷರ ಆಚೆ ಈಚೆ ಹೋಗದೆ ನೆಟ್ಟ ನೇರವಾಗಿ ಬರೆಯಲು ಬರಲಿ ಎಂದು. ಅದು ಅಭ್ಯಾಸ ಆದ ಮೇಲೆ ಮುಂದಿನ ಹೆಜ್ಜೆ. ಪ್ರತೀಕಗಳ ಆರಾಧನೆ ಈ ರೀತಿಯೇ. ಜೀವಮಾನ ಪೂರ್ತಿ ಡಬಲ್ ರೂಲ್ಡ್  ನೋಟ್ ಬುಕ್"ನಲ್ಲಿ ಬರೆಯುತ್ತ ಕೂಡುವುದಲ್ಲ. ಮುಂದೆ ಹೆಜ್ಜೆ ಇಡಬೇಕು. 

ಸಮುದ್ರದಲ್ಲಿ ಈಜಿ ಗೆದ್ದುಬರುವವರನ್ನು ನಾವು ಕಾಣುತ್ತೇವೆ. ಹಾಗಾದರೆ ನಾವು ಏಕೆ ಸಮುದ್ರಕ್ಕೆ ಹಾರಬಾರದು? ಅವರಿಗೂ ನಮ್ಮಂತೆ ಮೊದಲು ಈಜು ಬರುತ್ತಿರಲಿಲ್ಲ. ಸತತ ಪರಿಶ್ರಮದಿಂದ ಸಣ್ಣದಾಗಿ ಪ್ರಾಂಭ ಮಾಡಿ ಈಗ ಸಮುದ್ರ ಈಜುವ ಹಂತ ತಲುಪಿದ್ದಾರೆ. ಈಜುವ ವಿಷಯದಲ್ಲಿ ಅವರ ಅನುಭವ, ಯೋಗ್ಯತೆ ನಮಗೆ ಸುಲಭವಾಗಿ ಗೊತ್ತಾಗುತ್ತದೆ. ಉಪಾಸನೆಯ ವಿಷಯದಲ್ಲಿ ಉಪಾಸಕರ ನಿಜವಾದ ಯೋಗ್ಯತೆ ನಮಗೆ ಗೊತ್ತಾಗುವುದಿಲ್ಲ. ನಮಗೆ ಅವರ ಯೋಗ್ಯತೆ ಹೇಳಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ನಾವಾಗಿಯೇ ತಿಳಿದುಕೊಳ್ಳುವ ಶಕ್ತಿ ನಮಗಿಲ್ಲ!

*****

ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಮನಸ್ಸು ಬಂದ ತಕ್ಷಣ ವಾಹನ ಹಿಡಿಯುವಹಾಗಿಲ್ಲ. ಮೊದಲು "ಗುರುತಿನ ಚೀಟಿ" ಪಡೆಯಬೇಕು. ಕೇವಲ ಒಂದು "ಆಧಾರ್ ಕಾರ್ಡ್" ಮಾಡಿಸಲು ಪಟ್ಟ ಬವಣೆಗಳನ್ನು ನೆನಪಿಸಿಕೊಳ್ಳಿ. ನಂತರ ಪರವಾನಗಿ ಪಡೆಯಲು ಹಣ ಹೊಂದಿಸಬೇಕು. ಈ ಕೆಲಸಗಳಿಗೇ ಬಹಳ ಪಾಡು ಪಡಬೇಕು. ಅಲ್ಲಿ ತಲುಪಿದ ಮೇಲೆ ಭದ್ರತಾ ಸಿಬ್ಬಂದಿ ನಮ್ಮನ್ನು ತಪಾಸಣೆಗೆ ಒಳಪಡಿಸಿ ಪ್ರಯಾಣಕ್ಕೆ ಯೋಗ್ಯ ಎಂದು ಠಸ್ಸೆ ಒತ್ತಬೇಕು. ನಂತರವಷ್ಟೇ ಪ್ರಯಾಣ. 

ಅಂದರೆ ವಿಮಾನ ನಿಲ್ದಾಣ ತಲುಪಲು ವಾಹನ ಹತ್ತುವ ಮುಂಚೆಯೇ ಬಹಳ ಕೆಲಸ ಇದೆ ಎಂದಾಯಿತು. ಅಂತೆಯೇ ಪ್ರತೀಕಗಳ ಆರಾಧನೆಗೆ ಮುನ್ನವೇ ಬಹಳ ತಯಾರಿ ನಡೆಸಬೇಕು. ಮೈ, ಬುದ್ಧಿ ಮತ್ತು ಮನಸುಗಳನ್ನು ಹದ ಮಾಡಬೇಕು. ಮೈ ಬಗ್ಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬುದ್ಧಿಯನ್ನು ಸರಿಯಾದ ದಾರಿಯಲ್ಲಿ ನಡೆವಂತೆ ತಿರುಗಿಸಬೇಕು. ಮಂಗನಂತೆ ಎಗರಾಡುವ ಮನಸ್ಸನ್ನು ಕಟ್ಟಿ ಒಂದೇ ಕಡೆ ಕೇಂದ್ರೀಕರಿಸಬೇಕು. ಇವೆಲ್ಲ ಮೊದಲ ತಯಾರಿಗಳು. ಈ ರೀತಿ ಸಿದ್ಧತೆ ಮಾಡಿಕೊಂಡು ಪ್ರತೀಕಗಳ ಆರಾಧನೆಯಿಂದ ಪ್ರಾರಂಭಿಸಿ ಕ್ರಮವಾಗಿ ಮೆಟ್ಟಿಲುಗಳನ್ನು ಹತ್ತಿ ನಂತರ ಹೆಚ್ಚಿನ ಮತ್ತು ಕಠಿಣ ಆರಾಧನೆ ಬಗ್ಗೆ ಚಿಂತೆ ಮಾಡಬಹುದು. 

ಸಾಧನೆಯ ದಾರಿ ಬಲು ಕಠಿಣ. ಒಂದೊಂದಾಗಿ ಮೆಟ್ಟಿಲು ಹತ್ತಬೇಕು. ಒಟ್ಟು ಒಂದು ಸಾವಿರ ಮೆಟ್ಟಿಲು ಹತ್ತಬೇಕು ಎನ್ನೋಣ. ಒಂದು ಜೀವಮಾನದಲ್ಲಿ ಅಷ್ಟು ಮೆಟ್ಟಿಲು ಒಟ್ಟಿಗೆ ಹತ್ತಲು ಸಾಧ್ಯವಾಗದಿರಬಹುದು. ಸಾಧ್ಯವಾಗದಿರಬಹುದು ಏನು? ಸಾಧ್ಯವಾಗುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ. ಹಾಗಿದ್ದರೆ ಏನು ಮಾಡುವುದು? ಇದು ಎಂದಿಗೂ ಆಗದ ಕೆಲಸ. ವೃಥಾ ತೊಂದರೆ ಯಾಕೆ ಎಂದು ಬಿಡಬಹುದೇ? ನಮ್ಮ ಗ್ರಂಥಗಳ ಸೂಕ್ಷ್ಮ ಅಧ್ಯಯನದಿಂದ ಪರಿಹಾರ ತಿಳಿಯುತ್ತದೆ. ಪರಮತ್ಮನು ಬಹಳ ಕರುಣಾಳು. ಸಾಧನೆಯ ಒಂದು ಕಣವೂ ವ್ಯರ್ಥವಾಗುವುದಿಲ್ಲ,  ನಮ್ಮ ಖಾತೆಗೆ ಜಮಾ ಆಗುತ್ತಿರುತ್ತದೆ, 

ಒಬ್ಬ ಪ್ರೌಢ ಶಾಲೆ ವಿದ್ಯಾಭ್ಯಾಸದ ನಂತರ ಓದು ಬಿಟ್ಟ. ಬೇರೇನೋ ಮಾಡಲು ಪ್ರಾರಂಭಿಸಿದ. ಮತ್ತೆ ಸ್ವಲ್ಪ ದಿನದ ಮೇಲೆ ಓದು ಮುಂದುವರೆಸಬೇಕು ಎನಿಸಿತು. ಅವನು ಮತ್ತೆ ಪ್ರಾಥಮಿಕ ಶಾಲೆಗೇ ಹೋಗಬೇಕಾಗಿಲ್ಲ. ಎಲ್ಲಿ ಓದು ನಿಲ್ಲಿಸಿದ್ದನೋ ಅಲ್ಲಿಂದ ಮುಂದೆ ಓದಬಹುದು. ಪರಮಾತ್ಮನ ವ್ಯವಸ್ಥೆಯೂ ಹಾಗೆ. ಯಾವ ಮೆಟ್ಟಿಲಿನಲ್ಲಿ ನಿಂತೆವೋ, ಮುಂದಿನ ಜನ್ಮದಲ್ಲಿ ಆ ಮೆಟ್ಟಿಲಿನ ಬಳಿಯೇ ಬಿಡುತ್ತಾನೆ. ಯಾವುದೋ ಒಂದು ರೀತಿಯಲ್ಲಿ ಹಿಂದಿನ ಸ್ಮರಣೆ ಕೊಡುತ್ತಾನೆ. ಹುಟ್ಟಿದ ಆರೇಳು ವರ್ಷಕ್ಕೇ ಕೆಲವರು ಸೊಗಸಾಗಿ ಸಂಗೀತಗಾರರಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಬಾಕಿ ಮಕ್ಕಳು ಅನೇಕ ವರ್ಷ ಶ್ರಮಪಟ್ಟು ಕಲಿಯುವಷ್ಟನ್ನು ಸ್ವಲ್ಪ ಕಾಲದಲ್ಲಿಯೇ ಕಲಿಯುವ ಮಕ್ಕಳಂತೆ ಇದು. ಆದರೆ ಪ್ರಬಲ ನಂಬಿಕೆ ಬೇಕು. ಇಲ್ಲದಿದ್ದರೆ ಅತಂತ್ರ ಪರಿಸ್ಥಿತಿಯೇ!

*****

ಪ್ರತೀಕಗಳು ಹೇಗಿರಬೇಕು? ಇದು ಮುಂದಿನ ಪ್ರಶ್ನೆ. ಅದು ದೇವಾಲಯದ ಮೂರ್ತಿ ಇರಬಹುದು. ಲೋಹದ ಪ್ರತಿಮೆ ಆಗಬಹುದು. ಒಂದು ಫೋಟೋ ಸಹ ಆಗಬಹುದು. ಗೋವು, ಆಶ್ವತ್ಥ ಅಥವಾ ಔದುಂಬರ (ಅರಳಿ ಅಥವಾ ಅತ್ತಿ) ಮರವಾಗಬಹುದು. ತುಳಸಿಯ ಅಥವಾ ಮತ್ತಾವುದೋ ವೃಂದಾವನ ಇರಬಹುದು. ಆದರೆ ನಾವು ನಡೆಸುವ ಆರಾಧನೆ ಆ ಜಡ ವಸ್ತುವಿಗೋ ಅಥವಾ ಸ್ಥಿರ ವೃಕ್ಷಕ್ಕೋ ಮಾತ್ರವಲ್ಲ, ಅವುಗಳಲ್ಲಿ ಅಂತರ್ಯಾಮಿಯಾಗಿ ಇರುವ ಆ ಪರಮಾತ್ಮನಿಗೆ ಎನ್ನುವ ಪ್ರಜ್ಞೆ ಮಾತ್ರ ಸದಾ ಇರಬೇಕಾಗುತ್ತದೆ. 

ಉಪಾಸನೆಯ ಒಂದು ಮುಖ್ಯ ಅಂಗ ಜಪಾದಿಗಳು. ಸಮಸ್ತ ಜೀವರಾಶಿಗಳಿಗೂ ಪರಮಾತ್ಮನನ್ನು ಆರಾಧಿಸುವ ಹಕ್ಕಿದೆ. ಜಾತಿ, ಜನ್ಮ ಇವುಗಳ ಹಂಗಿಲ್ಲ. ಜ್ಞಾನಿಗಳು ಎಲ್ಲ ವರ್ಗಗಳಿಂದ ಬಂದವರಿದ್ದಾರೆ. ಸುಲಭದ ದಾರಿಗಳೂ ಇವೆ. ಕಠಿಣದ ಹಾದಿಗಳೂ ಇವೆ. ಬೇಕಿದ್ದನ್ನು ಆರಿಸಿಕೊಳ್ಳಬಹುದು. ಒಮ್ಮೆ ಸಾಧನೆಯ ಹಾದಿ ಹಿಡಿದರೆ ಸಾಕು. ಮುಂದಿನ ಸಲಕರಣೆಗಳನ್ನು ಆ ದಯಾಳುವೇ ಒದಗಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. 

ಜಪಾದಿಗಳನ್ನು ಮಾಡುವಾಗ "ಧ್ಯಾನ ಶ್ಲೋಕ" ಉಪಯೋಗಿಸುತ್ತಾರೆ. ಆರಾಧ್ಯ ದೈವವನ್ನು ವರ್ಣಿಸುವ ಪರಿ ಅವು. ಕಣ್ಣ ಮುಂದೆ ಇರುವ ಪ್ರತೀಕಗಳು ಆ ರೀತಿಯೇ ಇರಬೇಕು. ಆರಾಧನೆಯ ನಂತರ ಜಪ ಮಾಡುವಾಗ, ಕಣ್ಣು ಮುಚ್ಚಿ ಕುಳಿತಾಗ ಧ್ಯಾನ ಶ್ಲೋಕದಲ್ಲಿ ವರ್ಣಿತವಾದ ಆಕಾರ ಮನಸ್ಸಿನಲ್ಲಿ ಮೂಡಬೇಕು. ಮೇಲೆ ಕೊಟ್ಟಿರುವ ದೇವಿ ಲಕ್ಷ್ಮಿಯ ಚಿತ್ರವನ್ನೇ ಗಮನಿಸಬಹುದು, ಶ್ರೀ ಸೂಕ್ತದಲ್ಲಿ ಹೇಳಿರುವಂತೆ ಸಾಮಾನ್ಯವಾಗಿ ಪ್ರತಿಮೆ ಅಥವಾ ಫೋಟೋ ಮಾಡುತ್ತಿದ್ದರು. ಈಗ ಚಿತ್ರಕಾರರ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಸೂಕ್ತದಂತೆ ಲಕ್ಷ್ಮಿಯು ಪದ್ಮಾಸನದಲ್ಲಿ ಪದ್ಮದಮೇಲೆ ಕುಳಿತಿರಬೇಕು. ಆನೆಗಳು ಬಂಗಾರದ ಕೊಡಗಳಲ್ಲಿ ನವರತ್ನಗಳನ್ನು ಸುರಿಸುತ್ತಿರಬೇಕು. ಇವೇ ಮುಂತಾದ ಧ್ಯಾನ ಶ್ಲೋಕದ ವಿವರಣೆಯ ರೀತಿಯಲ್ಲಿ ಪ್ರತೀಕ ಮಾಡಿರಬೇಕು. 

ಕೆಲವು ವೇಳೆ ಪ್ರತೀಕ ಇಲ್ಲದಿರಬಹುದು. ಆಗ ಧ್ಯಾನ ಶ್ಲೋಕದಂತೆ ಇರುವ ದೇವತೆ ಕಣ್ಣು ಮುಚ್ಚಿ ಕುಳಿತಾಗ ಸ್ಫುರಿಸುವಂತೆ ಅಭ್ಯಾಸದಿಂದ ಕಲಿಯಬೇಕಾಗುತ್ತದೆ. ಪ್ರತೀಕಗಳಿಗೆ ಪೂಜೆ ಸಲ್ಲಿಸುವಾಗ  ಜಡ ಅಥವಾ ಸ್ಥಿರ ಪ್ರತೀಕದಲ್ಲಿ ಅಂತರ್ಯಾಮಿಯಾದ ದೇವತೆ ಅಥವಾ ಪರಮಾತ್ಮನ ಉಪಸ್ಥಿತಿ ನೆನೆಯುತ್ತಿದ್ದರೆ ಧ್ಯಾನ ಕಾಲದಲ್ಲಿ ಆ ಆಕೃತಿ ಮನಸ್ಸಿನಲ್ಲಿ ಸ್ಫುರಿಸುತ್ತದೆ.  

ಕೆಲವರು ದೇವಾಲಯಗಳಿಗೆ ಹೋದಾಗ ವಿಗ್ರಹಗಳ ಮುಂದೆ ಕಣ್ಣು ಮುಚ್ಚಿ ಕೂಡುತ್ತಾರೆ. ಬಹಳ ಶ್ರಮಪಟ್ಟು ಆ ಮೂರ್ತಿ ನೋಡಲು ಹೋಗಿ ಅಲ್ಲಿ ಇರುವ ಸಾಕ್ಷಾತ್ ಮೂರ್ತಿಯನ್ನು ನೋಡದೆ ಕಣ್ಣು ಮುಚ್ಚಿ ಕೂಡುವುದು ಎಷ್ಟು ಸರಿ? ಸಾಧನೆ ಹೆಚ್ಚಿದಂತೆ ಮನಸ್ಸಿನಲ್ಲಿ ಮೂಡುವ ಆಕಾರ ಸ್ಫುಟವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಅದಕ್ಕೆ ಸತತ ಪ್ರಯತ್ನ ಬೇಕು. 

 *****

ಮೇಲಿನ ಹಂತ ತಲುಪಿದ ಮೇಲೆ ಪ್ರತೀಕಗಳ ಪೂಜೆ ನಿಲ್ಲಿಸಬೇಕೇ? ಇದೊಂದು ದಿವ್ಯವಾದ ಪ್ರಶ್ನೆ. ದೊಡ್ಡ ದೊಡ್ಡ ಸಭಾಭವನಗಳಲ್ಲಿ ಕಚೇರಿ ನೀಡುವ ಸಂಗೀತ ವಿದ್ವಾಂಸರು ಪ್ರತಿದಿನ "ರಿಯಾಝ್" ಮಾಡುವುದನ್ನು ನಿಲ್ಲಿಸುತ್ತಾರೆಯೇ? ಭಾರಿ ಕ್ರೀಡಾಂಗಣಗಳಲ್ಲಿ ಭರ್ಜರಿ ಶತಕ ಬಾರಿಸುವ ಕ್ರೀಡಾಪಟು "ನೆಟ್ ಪ್ರಾಕ್ಟೀಸ್" ಬಿಟ್ಟು ಬಿಡುತ್ತಾನೆಯೇ? ವ್ಯಾಪ್ತ ಉಪಾಸನೆ ಮಾಡುವ ಸ್ಥಿತಿ ತಲುಪಿದ ಸಾಧಕರೂ ಪ್ರತೀಕಗಳ ಆರಾಧನೆ ನಿಲ್ಲಿಸುವುದಿಲ್ಲ. ಸಂಚಾರದಲ್ಲಿರುವ ಅಧಿಕಾರಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವ ಅಗತ್ಯವಿಲ್ಲ. ಆದರೆ ಪ್ರಧಾನ ಕಚೇರಿಯಲ್ಲಿ ಇದ್ದಾಗ ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಾನೆ!

ಸಾಧನೆಯ ಯಾವ ಸ್ಥಿತಿಯಲ್ಲಿ ಸಾಧಕನಿದ್ದರೂ ಮತೊಬ್ಬರ ಸಾಧನೆಯ ರೀತಿಯನ್ನು ಹೀಯಾಳಿಸಬಾರದು. ಅವರವರ ಸಾಧನೆ, ರೀತಿ ನೀತಿಗಳು ಅವರವರಿಗೆ. ಪ್ರತಿಯೊಬ್ಬರೂ ಅವರ ಭಾರವನ್ನು ಅವರೇ ಹೊರಬೇಕು. ಅವರಾಗಿ ಕೇಳಿದರೆ, ಸಾಧ್ಯವಿದ್ದರೆ, ಯೋಗ್ಯತೆಯಿದ್ದರೆ, ಸಹಾಯ ಮಾಡಬಹುದು. ಅಷ್ಟೇ.