Showing posts with label tvameva. Show all posts
Showing posts with label tvameva. Show all posts

Friday, November 24, 2023

ಪ್ರತೀಕಗಳ ಅವಶ್ಯಕತೆ


"ತ್ವಮೇವ ಶರಣಂ ಮಮ" ಎಂದು ಹೇಳಿಯಾಯಿತು. "ವ್ಯಾಪ್ತೋಪಾಸನೆ" ಬಗ್ಗೆ ತಿಳಿದಿದ್ದಾಯಿತು. ಅಂತಹ ಉಪಾಸನೆಯ ಮರ್ಮ ಅರಿತ ಮೇಲೆ ಪ್ರತೀಕಗಳ ಉಪಾಸನೆ ಏಕೆ ಮಾಡಬೇಕು? ಎಂಬ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಉತ್ತರ ಹುಕುವ ಕೆಲಸ  ಪ್ರಾರಂಭವಾಯಿತು. 

ದೂರದ ಊರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ತಲುಪಲು ವಿಮಾನದಲ್ಲಿ ಹೋಗಬೇಕು ಎಂದು ನಮಗೆ ಗೊತ್ತು. ಆದರೆ ನೆನೆಸಿದ ತಕ್ಷಣ ವಿಮಾನದಲ್ಲಿ ಹೋಗಲಾದೀತೇ? ನಾವಿರುವ ಸ್ಥಳದಿಂದ ವಿಮಾನ ನಿಲ್ದಾಣ ತಲುಪಬೇಕು. ವಿಮಾನದ ಪ್ರಯಾಣಕ್ಕೆ ಪರವಾನಗಿ ಪಡೆಯಬೇಕು. ಬೇಕಾದ ದಸ್ತಾವೇಜುಗಳನ್ನು ತೋರಿಸಬೇಕು. ಭದ್ರತಾ ತಪಾಸಣೆ ದಾಟಬೇಕು. ವಿಮಾನದವರೆಗೂ ತಲುಪಬೇಕು. ಹತ್ತಿ ವಿಮಾನದಲ್ಲಿ ಕೂಡಬೇಕು. ವಿಮಾನ ಪ್ರಯಾಣ ನಂತರವಷ್ಟೇ ಸಾಧ್ಯ!

ವಿಮಾನದವರೆಗಿನ ಪ್ರಯಾಣಕ್ಕೆ ನಾವು ನಿಲ್ದಾಣದವರೆಗೆ ನಡೆದು ಹೋಗಬೇಕು. ಇಲ್ಲವಾದರೆ ಯಾವುದಾದರೂ ವಾಹನವನ್ನು ಹಿಡಿದು ಅಲ್ಲಿಗೆ ತಲುಪಬೇಕು. ಈ ರೀತಿಯ ವಾಹನಗಳೇ ಪ್ರತೀಕಗಳ ಆರಾಧನೆಗಳು. ಪ್ರತೀಕಗಳೇ (symbols) ಪರಮಾತ್ಮನಲ್ಲ. ಎಲ್ಲೆಲ್ಲೂ  ಇರುವ ಪರಮಾತ್ಮನು ಅವುಗಳಲ್ಲಿ ವಿಶೇಷ ಸನ್ನಿಧಾನ ಇಟ್ಟಿದ್ದಾನೆ ಎಂದು ನಂಬಿ ಆರಾಧಿಸಬೇಕು.

ನಾವು ಮೊದಲನೇ ಅಥವಾ ಎರಡನೇ ತರಗತಿಯಲ್ಲಿ ಇದ್ದಾಗ ಮೊದಲು ವರ್ಣಮಾಲೆ ಹೇಳಿಕೊಟ್ಟರು. ಪೂರ್ತಿ ವರ್ಣಮಾಲೆಯ ಅಕ್ಷರಗಳನ್ನು ತಪ್ಪಿಲ್ಲದೆ ಹೇಳಿದಾಗ ಆನಂದವೋ ಆನಂದ. ನಂತರ ಕಾಗುಣಿತ. ಅದು ಬಂದಾಗಲಂತೂ ಖುಷಿಯೋ ಖುಷಿ. ಆಮೇಲೆ "ಡಬಲ್ ರೂಲ್ಡ್  ನೋಟ್ ಬುಕ್" ಅಂತ ಒಂದು ಕೊಟ್ಟರು, ಅಕ್ಷರ ಆಚೆ ಈಚೆ ಹೋಗದೆ ನೆಟ್ಟ ನೇರವಾಗಿ ಬರೆಯಲು ಬರಲಿ ಎಂದು. ಅದು ಅಭ್ಯಾಸ ಆದ ಮೇಲೆ ಮುಂದಿನ ಹೆಜ್ಜೆ. ಪ್ರತೀಕಗಳ ಆರಾಧನೆ ಈ ರೀತಿಯೇ. ಜೀವಮಾನ ಪೂರ್ತಿ ಡಬಲ್ ರೂಲ್ಡ್  ನೋಟ್ ಬುಕ್"ನಲ್ಲಿ ಬರೆಯುತ್ತ ಕೂಡುವುದಲ್ಲ. ಮುಂದೆ ಹೆಜ್ಜೆ ಇಡಬೇಕು. 

ಸಮುದ್ರದಲ್ಲಿ ಈಜಿ ಗೆದ್ದುಬರುವವರನ್ನು ನಾವು ಕಾಣುತ್ತೇವೆ. ಹಾಗಾದರೆ ನಾವು ಏಕೆ ಸಮುದ್ರಕ್ಕೆ ಹಾರಬಾರದು? ಅವರಿಗೂ ನಮ್ಮಂತೆ ಮೊದಲು ಈಜು ಬರುತ್ತಿರಲಿಲ್ಲ. ಸತತ ಪರಿಶ್ರಮದಿಂದ ಸಣ್ಣದಾಗಿ ಪ್ರಾಂಭ ಮಾಡಿ ಈಗ ಸಮುದ್ರ ಈಜುವ ಹಂತ ತಲುಪಿದ್ದಾರೆ. ಈಜುವ ವಿಷಯದಲ್ಲಿ ಅವರ ಅನುಭವ, ಯೋಗ್ಯತೆ ನಮಗೆ ಸುಲಭವಾಗಿ ಗೊತ್ತಾಗುತ್ತದೆ. ಉಪಾಸನೆಯ ವಿಷಯದಲ್ಲಿ ಉಪಾಸಕರ ನಿಜವಾದ ಯೋಗ್ಯತೆ ನಮಗೆ ಗೊತ್ತಾಗುವುದಿಲ್ಲ. ನಮಗೆ ಅವರ ಯೋಗ್ಯತೆ ಹೇಳಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ನಾವಾಗಿಯೇ ತಿಳಿದುಕೊಳ್ಳುವ ಶಕ್ತಿ ನಮಗಿಲ್ಲ!

*****

ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಮನಸ್ಸು ಬಂದ ತಕ್ಷಣ ವಾಹನ ಹಿಡಿಯುವಹಾಗಿಲ್ಲ. ಮೊದಲು "ಗುರುತಿನ ಚೀಟಿ" ಪಡೆಯಬೇಕು. ಕೇವಲ ಒಂದು "ಆಧಾರ್ ಕಾರ್ಡ್" ಮಾಡಿಸಲು ಪಟ್ಟ ಬವಣೆಗಳನ್ನು ನೆನಪಿಸಿಕೊಳ್ಳಿ. ನಂತರ ಪರವಾನಗಿ ಪಡೆಯಲು ಹಣ ಹೊಂದಿಸಬೇಕು. ಈ ಕೆಲಸಗಳಿಗೇ ಬಹಳ ಪಾಡು ಪಡಬೇಕು. ಅಲ್ಲಿ ತಲುಪಿದ ಮೇಲೆ ಭದ್ರತಾ ಸಿಬ್ಬಂದಿ ನಮ್ಮನ್ನು ತಪಾಸಣೆಗೆ ಒಳಪಡಿಸಿ ಪ್ರಯಾಣಕ್ಕೆ ಯೋಗ್ಯ ಎಂದು ಠಸ್ಸೆ ಒತ್ತಬೇಕು. ನಂತರವಷ್ಟೇ ಪ್ರಯಾಣ. 

ಅಂದರೆ ವಿಮಾನ ನಿಲ್ದಾಣ ತಲುಪಲು ವಾಹನ ಹತ್ತುವ ಮುಂಚೆಯೇ ಬಹಳ ಕೆಲಸ ಇದೆ ಎಂದಾಯಿತು. ಅಂತೆಯೇ ಪ್ರತೀಕಗಳ ಆರಾಧನೆಗೆ ಮುನ್ನವೇ ಬಹಳ ತಯಾರಿ ನಡೆಸಬೇಕು. ಮೈ, ಬುದ್ಧಿ ಮತ್ತು ಮನಸುಗಳನ್ನು ಹದ ಮಾಡಬೇಕು. ಮೈ ಬಗ್ಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬುದ್ಧಿಯನ್ನು ಸರಿಯಾದ ದಾರಿಯಲ್ಲಿ ನಡೆವಂತೆ ತಿರುಗಿಸಬೇಕು. ಮಂಗನಂತೆ ಎಗರಾಡುವ ಮನಸ್ಸನ್ನು ಕಟ್ಟಿ ಒಂದೇ ಕಡೆ ಕೇಂದ್ರೀಕರಿಸಬೇಕು. ಇವೆಲ್ಲ ಮೊದಲ ತಯಾರಿಗಳು. ಈ ರೀತಿ ಸಿದ್ಧತೆ ಮಾಡಿಕೊಂಡು ಪ್ರತೀಕಗಳ ಆರಾಧನೆಯಿಂದ ಪ್ರಾರಂಭಿಸಿ ಕ್ರಮವಾಗಿ ಮೆಟ್ಟಿಲುಗಳನ್ನು ಹತ್ತಿ ನಂತರ ಹೆಚ್ಚಿನ ಮತ್ತು ಕಠಿಣ ಆರಾಧನೆ ಬಗ್ಗೆ ಚಿಂತೆ ಮಾಡಬಹುದು. 

ಸಾಧನೆಯ ದಾರಿ ಬಲು ಕಠಿಣ. ಒಂದೊಂದಾಗಿ ಮೆಟ್ಟಿಲು ಹತ್ತಬೇಕು. ಒಟ್ಟು ಒಂದು ಸಾವಿರ ಮೆಟ್ಟಿಲು ಹತ್ತಬೇಕು ಎನ್ನೋಣ. ಒಂದು ಜೀವಮಾನದಲ್ಲಿ ಅಷ್ಟು ಮೆಟ್ಟಿಲು ಒಟ್ಟಿಗೆ ಹತ್ತಲು ಸಾಧ್ಯವಾಗದಿರಬಹುದು. ಸಾಧ್ಯವಾಗದಿರಬಹುದು ಏನು? ಸಾಧ್ಯವಾಗುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ. ಹಾಗಿದ್ದರೆ ಏನು ಮಾಡುವುದು? ಇದು ಎಂದಿಗೂ ಆಗದ ಕೆಲಸ. ವೃಥಾ ತೊಂದರೆ ಯಾಕೆ ಎಂದು ಬಿಡಬಹುದೇ? ನಮ್ಮ ಗ್ರಂಥಗಳ ಸೂಕ್ಷ್ಮ ಅಧ್ಯಯನದಿಂದ ಪರಿಹಾರ ತಿಳಿಯುತ್ತದೆ. ಪರಮತ್ಮನು ಬಹಳ ಕರುಣಾಳು. ಸಾಧನೆಯ ಒಂದು ಕಣವೂ ವ್ಯರ್ಥವಾಗುವುದಿಲ್ಲ,  ನಮ್ಮ ಖಾತೆಗೆ ಜಮಾ ಆಗುತ್ತಿರುತ್ತದೆ, 

ಒಬ್ಬ ಪ್ರೌಢ ಶಾಲೆ ವಿದ್ಯಾಭ್ಯಾಸದ ನಂತರ ಓದು ಬಿಟ್ಟ. ಬೇರೇನೋ ಮಾಡಲು ಪ್ರಾರಂಭಿಸಿದ. ಮತ್ತೆ ಸ್ವಲ್ಪ ದಿನದ ಮೇಲೆ ಓದು ಮುಂದುವರೆಸಬೇಕು ಎನಿಸಿತು. ಅವನು ಮತ್ತೆ ಪ್ರಾಥಮಿಕ ಶಾಲೆಗೇ ಹೋಗಬೇಕಾಗಿಲ್ಲ. ಎಲ್ಲಿ ಓದು ನಿಲ್ಲಿಸಿದ್ದನೋ ಅಲ್ಲಿಂದ ಮುಂದೆ ಓದಬಹುದು. ಪರಮಾತ್ಮನ ವ್ಯವಸ್ಥೆಯೂ ಹಾಗೆ. ಯಾವ ಮೆಟ್ಟಿಲಿನಲ್ಲಿ ನಿಂತೆವೋ, ಮುಂದಿನ ಜನ್ಮದಲ್ಲಿ ಆ ಮೆಟ್ಟಿಲಿನ ಬಳಿಯೇ ಬಿಡುತ್ತಾನೆ. ಯಾವುದೋ ಒಂದು ರೀತಿಯಲ್ಲಿ ಹಿಂದಿನ ಸ್ಮರಣೆ ಕೊಡುತ್ತಾನೆ. ಹುಟ್ಟಿದ ಆರೇಳು ವರ್ಷಕ್ಕೇ ಕೆಲವರು ಸೊಗಸಾಗಿ ಸಂಗೀತಗಾರರಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಬಾಕಿ ಮಕ್ಕಳು ಅನೇಕ ವರ್ಷ ಶ್ರಮಪಟ್ಟು ಕಲಿಯುವಷ್ಟನ್ನು ಸ್ವಲ್ಪ ಕಾಲದಲ್ಲಿಯೇ ಕಲಿಯುವ ಮಕ್ಕಳಂತೆ ಇದು. ಆದರೆ ಪ್ರಬಲ ನಂಬಿಕೆ ಬೇಕು. ಇಲ್ಲದಿದ್ದರೆ ಅತಂತ್ರ ಪರಿಸ್ಥಿತಿಯೇ!

*****

ಪ್ರತೀಕಗಳು ಹೇಗಿರಬೇಕು? ಇದು ಮುಂದಿನ ಪ್ರಶ್ನೆ. ಅದು ದೇವಾಲಯದ ಮೂರ್ತಿ ಇರಬಹುದು. ಲೋಹದ ಪ್ರತಿಮೆ ಆಗಬಹುದು. ಒಂದು ಫೋಟೋ ಸಹ ಆಗಬಹುದು. ಗೋವು, ಆಶ್ವತ್ಥ ಅಥವಾ ಔದುಂಬರ (ಅರಳಿ ಅಥವಾ ಅತ್ತಿ) ಮರವಾಗಬಹುದು. ತುಳಸಿಯ ಅಥವಾ ಮತ್ತಾವುದೋ ವೃಂದಾವನ ಇರಬಹುದು. ಆದರೆ ನಾವು ನಡೆಸುವ ಆರಾಧನೆ ಆ ಜಡ ವಸ್ತುವಿಗೋ ಅಥವಾ ಸ್ಥಿರ ವೃಕ್ಷಕ್ಕೋ ಮಾತ್ರವಲ್ಲ, ಅವುಗಳಲ್ಲಿ ಅಂತರ್ಯಾಮಿಯಾಗಿ ಇರುವ ಆ ಪರಮಾತ್ಮನಿಗೆ ಎನ್ನುವ ಪ್ರಜ್ಞೆ ಮಾತ್ರ ಸದಾ ಇರಬೇಕಾಗುತ್ತದೆ. 

ಉಪಾಸನೆಯ ಒಂದು ಮುಖ್ಯ ಅಂಗ ಜಪಾದಿಗಳು. ಸಮಸ್ತ ಜೀವರಾಶಿಗಳಿಗೂ ಪರಮಾತ್ಮನನ್ನು ಆರಾಧಿಸುವ ಹಕ್ಕಿದೆ. ಜಾತಿ, ಜನ್ಮ ಇವುಗಳ ಹಂಗಿಲ್ಲ. ಜ್ಞಾನಿಗಳು ಎಲ್ಲ ವರ್ಗಗಳಿಂದ ಬಂದವರಿದ್ದಾರೆ. ಸುಲಭದ ದಾರಿಗಳೂ ಇವೆ. ಕಠಿಣದ ಹಾದಿಗಳೂ ಇವೆ. ಬೇಕಿದ್ದನ್ನು ಆರಿಸಿಕೊಳ್ಳಬಹುದು. ಒಮ್ಮೆ ಸಾಧನೆಯ ಹಾದಿ ಹಿಡಿದರೆ ಸಾಕು. ಮುಂದಿನ ಸಲಕರಣೆಗಳನ್ನು ಆ ದಯಾಳುವೇ ಒದಗಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. 

ಜಪಾದಿಗಳನ್ನು ಮಾಡುವಾಗ "ಧ್ಯಾನ ಶ್ಲೋಕ" ಉಪಯೋಗಿಸುತ್ತಾರೆ. ಆರಾಧ್ಯ ದೈವವನ್ನು ವರ್ಣಿಸುವ ಪರಿ ಅವು. ಕಣ್ಣ ಮುಂದೆ ಇರುವ ಪ್ರತೀಕಗಳು ಆ ರೀತಿಯೇ ಇರಬೇಕು. ಆರಾಧನೆಯ ನಂತರ ಜಪ ಮಾಡುವಾಗ, ಕಣ್ಣು ಮುಚ್ಚಿ ಕುಳಿತಾಗ ಧ್ಯಾನ ಶ್ಲೋಕದಲ್ಲಿ ವರ್ಣಿತವಾದ ಆಕಾರ ಮನಸ್ಸಿನಲ್ಲಿ ಮೂಡಬೇಕು. ಮೇಲೆ ಕೊಟ್ಟಿರುವ ದೇವಿ ಲಕ್ಷ್ಮಿಯ ಚಿತ್ರವನ್ನೇ ಗಮನಿಸಬಹುದು, ಶ್ರೀ ಸೂಕ್ತದಲ್ಲಿ ಹೇಳಿರುವಂತೆ ಸಾಮಾನ್ಯವಾಗಿ ಪ್ರತಿಮೆ ಅಥವಾ ಫೋಟೋ ಮಾಡುತ್ತಿದ್ದರು. ಈಗ ಚಿತ್ರಕಾರರ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಸೂಕ್ತದಂತೆ ಲಕ್ಷ್ಮಿಯು ಪದ್ಮಾಸನದಲ್ಲಿ ಪದ್ಮದಮೇಲೆ ಕುಳಿತಿರಬೇಕು. ಆನೆಗಳು ಬಂಗಾರದ ಕೊಡಗಳಲ್ಲಿ ನವರತ್ನಗಳನ್ನು ಸುರಿಸುತ್ತಿರಬೇಕು. ಇವೇ ಮುಂತಾದ ಧ್ಯಾನ ಶ್ಲೋಕದ ವಿವರಣೆಯ ರೀತಿಯಲ್ಲಿ ಪ್ರತೀಕ ಮಾಡಿರಬೇಕು. 

ಕೆಲವು ವೇಳೆ ಪ್ರತೀಕ ಇಲ್ಲದಿರಬಹುದು. ಆಗ ಧ್ಯಾನ ಶ್ಲೋಕದಂತೆ ಇರುವ ದೇವತೆ ಕಣ್ಣು ಮುಚ್ಚಿ ಕುಳಿತಾಗ ಸ್ಫುರಿಸುವಂತೆ ಅಭ್ಯಾಸದಿಂದ ಕಲಿಯಬೇಕಾಗುತ್ತದೆ. ಪ್ರತೀಕಗಳಿಗೆ ಪೂಜೆ ಸಲ್ಲಿಸುವಾಗ  ಜಡ ಅಥವಾ ಸ್ಥಿರ ಪ್ರತೀಕದಲ್ಲಿ ಅಂತರ್ಯಾಮಿಯಾದ ದೇವತೆ ಅಥವಾ ಪರಮಾತ್ಮನ ಉಪಸ್ಥಿತಿ ನೆನೆಯುತ್ತಿದ್ದರೆ ಧ್ಯಾನ ಕಾಲದಲ್ಲಿ ಆ ಆಕೃತಿ ಮನಸ್ಸಿನಲ್ಲಿ ಸ್ಫುರಿಸುತ್ತದೆ.  

ಕೆಲವರು ದೇವಾಲಯಗಳಿಗೆ ಹೋದಾಗ ವಿಗ್ರಹಗಳ ಮುಂದೆ ಕಣ್ಣು ಮುಚ್ಚಿ ಕೂಡುತ್ತಾರೆ. ಬಹಳ ಶ್ರಮಪಟ್ಟು ಆ ಮೂರ್ತಿ ನೋಡಲು ಹೋಗಿ ಅಲ್ಲಿ ಇರುವ ಸಾಕ್ಷಾತ್ ಮೂರ್ತಿಯನ್ನು ನೋಡದೆ ಕಣ್ಣು ಮುಚ್ಚಿ ಕೂಡುವುದು ಎಷ್ಟು ಸರಿ? ಸಾಧನೆ ಹೆಚ್ಚಿದಂತೆ ಮನಸ್ಸಿನಲ್ಲಿ ಮೂಡುವ ಆಕಾರ ಸ್ಫುಟವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಅದಕ್ಕೆ ಸತತ ಪ್ರಯತ್ನ ಬೇಕು. 

 *****

ಮೇಲಿನ ಹಂತ ತಲುಪಿದ ಮೇಲೆ ಪ್ರತೀಕಗಳ ಪೂಜೆ ನಿಲ್ಲಿಸಬೇಕೇ? ಇದೊಂದು ದಿವ್ಯವಾದ ಪ್ರಶ್ನೆ. ದೊಡ್ಡ ದೊಡ್ಡ ಸಭಾಭವನಗಳಲ್ಲಿ ಕಚೇರಿ ನೀಡುವ ಸಂಗೀತ ವಿದ್ವಾಂಸರು ಪ್ರತಿದಿನ "ರಿಯಾಝ್" ಮಾಡುವುದನ್ನು ನಿಲ್ಲಿಸುತ್ತಾರೆಯೇ? ಭಾರಿ ಕ್ರೀಡಾಂಗಣಗಳಲ್ಲಿ ಭರ್ಜರಿ ಶತಕ ಬಾರಿಸುವ ಕ್ರೀಡಾಪಟು "ನೆಟ್ ಪ್ರಾಕ್ಟೀಸ್" ಬಿಟ್ಟು ಬಿಡುತ್ತಾನೆಯೇ? ವ್ಯಾಪ್ತ ಉಪಾಸನೆ ಮಾಡುವ ಸ್ಥಿತಿ ತಲುಪಿದ ಸಾಧಕರೂ ಪ್ರತೀಕಗಳ ಆರಾಧನೆ ನಿಲ್ಲಿಸುವುದಿಲ್ಲ. ಸಂಚಾರದಲ್ಲಿರುವ ಅಧಿಕಾರಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವ ಅಗತ್ಯವಿಲ್ಲ. ಆದರೆ ಪ್ರಧಾನ ಕಚೇರಿಯಲ್ಲಿ ಇದ್ದಾಗ ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಾನೆ!

ಸಾಧನೆಯ ಯಾವ ಸ್ಥಿತಿಯಲ್ಲಿ ಸಾಧಕನಿದ್ದರೂ ಮತೊಬ್ಬರ ಸಾಧನೆಯ ರೀತಿಯನ್ನು ಹೀಯಾಳಿಸಬಾರದು. ಅವರವರ ಸಾಧನೆ, ರೀತಿ ನೀತಿಗಳು ಅವರವರಿಗೆ. ಪ್ರತಿಯೊಬ್ಬರೂ ಅವರ ಭಾರವನ್ನು ಅವರೇ ಹೊರಬೇಕು. ಅವರಾಗಿ ಕೇಳಿದರೆ, ಸಾಧ್ಯವಿದ್ದರೆ, ಯೋಗ್ಯತೆಯಿದ್ದರೆ, ಸಹಾಯ ಮಾಡಬಹುದು. ಅಷ್ಟೇ. 

Tuesday, November 14, 2023

ತ್ವಮೇವ ಶರಣಂ ಮಮ


ನಮಸ್ಕಾರ, ನಮಸ್ತೇ, ಅಡ್ಡಬಿದ್ದೆ 

ನಮ್ಮ ಸಂಪ್ರದಾಯದಲ್ಲಿ ಎದುರು ಬಂದವರಿಗೆ ಅಥವಾ ಯಾರನ್ನಾದರೂ ಕಂಡಾಗ ಗೌರವ ಕೊಡುವುದು ಮತ್ತು ಹಾಗೆ ಕಂಡವರು ಅಥವಾ ಬಂದವರು ಪರಿಚಯದವರಾದರೆ ಕುಶಲ ಪ್ರಶ್ನೆ ಮಾಡುವುದು, ಇವುಗಳಿಗೆ ಬಹಳ ಮಹತ್ವವಿದೆ.  ಇಂಗ್ಲೀಷಿನಲ್ಲಿ "ಗ್ರೀಟ್" ಅನ್ನುವ ಪದಕ್ಕೆ ಕನ್ನಡದ ನಿಘಂಟಿನಲ್ಲಿ "ನಮಸ್ಕಾರ" ಎಂದೇ ಅರ್ಥ ಉಂಟು. ಅದರ ಮುಖ್ಯ ಪರಿಣಾಮ ಇನ್ನೊಬ್ಬರನ್ನು ಗುರ್ತಿಸುವುದು ಅಥವಾ ಅವರ ಇರುವಿಕೆಯನ್ನು ಗಮನಿಸುವುದು. ಆ ಗುರುತಿಸುವಿಕೆ ಕೇವಲ ಒಂದು ಮುಗುಳ್ನಗೆ ರೂಪದಲ್ಲಿ ಬರಬಹುದು, ಕೈ ಬೀಸುವುದಿರಬಹುದು ಅಥವಾ ಕೈ ಜೋಡಿಸುವುದೂ ಆಗಬಹುದು. ಪರಿಚಯವಿದ್ದವರು ಕಂಡಾಗ ಹೀಗೆ ಮಾಡದಿದ್ದರೆ ಅವರನ್ನು ಉಪೇಕ್ಷೆ ಮಾಡಿದಂತೆ. ಎದುರಿನವರು ಗುರು, ಹಿರಿಯರಾದರೆ ಅಥವಾ ಅರ್ಹತೆ, ಹುದ್ದೆಯಲ್ಲಿ ನಮಗಿಂತ ಮೇಲೆ ಇರುವವರಾದರೆ ಹೀಗೆ ಮಾಡದುದನ್ನು ಅದೊಂದು ಅಹಂಕಾರದ ಕುರುಹು ಎಂದೂ ವ್ಯಾಖ್ಯಾನಿಸಬಹುದು. ಅವಸರದಲ್ಲಿದ್ದಾಗ ಅಥವಾ ಕೈಗಳಲ್ಲಿ ಏನನ್ನಾದರೂ ಹಿಡಿದಿರುವಾಗ ಬಾಯಿಯಲ್ಲಿ "ನಮಸ್ಕಾರ" ಎಂದಾದರೂ ಹೇಳುವ ಸೌಜನ್ಯವನ್ನು ಸುಸಂಸ್ಕೃತ ಸಮಾಜ ನಮ್ಮಿಂದ ನಿರೀಕ್ಷಿಸುತ್ತದೆ. 

ಅನೇಕರು "ನಮಸ್ಕಾರ" ಅನ್ನುವುದರ ಬದಲು "ನಮಸ್ತೇ" ಅನ್ನುತ್ತಾರೆ. ನಮಸ್ತೇ ಅನ್ನುವುದು ಒಂದು ಸಂಸ್ಕೃತದ ಪದ. ತೇ ಅನ್ನುವುದು "ಅವನಿಗೆ" ಎಂದಾಗುತ್ತದೆ. ಎದುರು ಇರುವರನ್ನು ನೋಡಿ "ಅವನಿಗೆ ನಮಸ್ಕಾರ" ಅಂದರೆ ಹೇಗೆ ಇರುತ್ತದೆ? ಆದರೂ ನಮಸ್ತೇ ಅನ್ನುವುದು ಎಷ್ಟು ಲೋಕಾರೂಢಿಯಾಗಿದೆ ಅಂದರೆ ಅದರ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಉದಾಹರಣೆಗೆ "ರೂಪಸಿ" ಅನ್ನುವ ಪದ. ವಾಸ್ತವವಾಗಿ ಅದು "ರೂಪಿಣಿ" ಆಗಬೇಕು (ಗಮನಿಸಿ: ಸರಸ್ವತಿ ನಮಸ್ತುಭ್ಯಮ್ ವರದೇ ಕಾಮ ರೂಪಿಣಿ). ರೂಪಸಿ ಅಲ್ಲ. ಆದರೆ ರೂಪಸಿಯ ಪ್ರಯೋಗ ಎಷ್ಟು ಆಳವಾಗಿದೆ ಅಂದರೆ ಈಗ ಯಾರಾದರೂ ರೂಪಿಣಿ ಎಂದು ಹೇಳಿದರೆ ಅವರಿಗೆ ಭಾಷೆಯೇ ಬರುವುದಿಲ್ಲ ಎನ್ನಬಹುದು! ಕುರೂಪಿಣೀ ಎನ್ನುತ್ತಾರೆ ಎಂದು ರಾಗ ಎಳೆಯಬಹುದು. ಏಕೆಂದರೆ ಕುರೂಪಿಣಿ ಎನ್ನುವ ಪ್ರಯೋಗ ಇದೆ. ಕುರೂಪಸಿ ಪ್ರಯೋಗ ಇಲ್ಲ. 

ಹಿಂದೆ ಹಳ್ಳಿಗಳ ಕಡೆ "ಅಡ್ಡಬಿದ್ದೆ" ಎನ್ನುವ ಮಾತು ಕೇಳಿಬರುತ್ತಿತ್ತು. ಇದೂ ನಮಸ್ಕಾರ ಎನ್ನುವುದೇ. ಅಡ್ಡಬೀಳು ಎನ್ನುವುದು ಬರೀ ನಮಸ್ಕಾರವಲ್ಲ. ಇನ್ನೂ ಹೆಚ್ಚಿನ ಸಾಷ್ಟಾಂಗ ನಮಸ್ಕಾರ. ಭಯ, ಭಕ್ತಿಯಿಂದ ನಮಸ್ಕಾರ ಮಾಡುವುದು. ಎಲ್ಲೋ ರಸ್ತೆಯಲ್ಲಿ ಅಥವಾ ಹೊರಗಡೆ ಸಿಕ್ಕಿದಾಗ ಸಾಷ್ಟಾಂಗ ಪ್ರಣಾಮ ಮಾಡುವ ಪರಿಸ್ಥಿತಿ ಇಲ್ಲದಿರಬಹುದು. ಆಗ ಅಡ್ಡಬಿದ್ದೆ ಎನ್ನುವ ಪದ ಆ ಕ್ರಿಯೆಯ ಸೂಚಕವಾಗುತ್ತದೆ. 

ನಮಸ್ಕಾರದ ಕ್ರಿಯೆ: ವಾಚಿಕವೋ, ದೈಹಿಕವೋ, ಮಾನಸಿಕವೋ?

ನಮಸ್ಕಾರ ಮಾಡುವ ಕ್ರಿಯೆ ದೈಹಿಕವೋ, ಮಾನಸಿಕವೋ ಎನ್ನುವ ಪ್ರಶ್ನೆ ಸಹಜ. ಮೇಲೆ ಕಂಡಂತೆ ನಮಸ್ಕಾರದ ಕ್ರಿಯೆ ಬಾಯಿಯಿಂದ ಹೇಳುವಾಗ ವಾಚಿಕ. ಕೆಲವು ವೇಳೆ ಮಾತಿನಲ್ಲಿ ಹೇಳದೆ ಕೇವಲ ಕೈಗಳಿಂದ ಮಾಡಿದಾಗ ಅದು ದೈಹಿಕ. ಏಕೆ ಬಾಯಿಯಿಂದ ಹೇಳುವುದಿಲ್ಲ ಎಂದು ಕೇಳಬಹುದು. ಭಾವದ ಸೆಲೆ ಕಾರಂಜಿಯಂತೆ ಚಿಮ್ಮಿದಾಗ ಮಾತು ಹೊರಡದಿರಬಹುದು. ವಾಸುದೇವ ಸಾಕ್ಷಾತ್ ಎದುರಿಗೆ ಬಂದಾಗ ಧ್ಯಾನ ಮಗ್ನನಾದ ಧ್ರುವನಿಗೆ ಆದಂತೆ. ರಸ್ತೆಯಲ್ಲಿ ವಾಹನ ನಡೆಸುತ್ತಾ ಹೋಗುತ್ತಿರುವ ಸವಾರನಿಗೆ ಪಕ್ಕದಲ್ಲಿ ಕಂಡ ದೇವಾಲಯದ ದ್ವಾರದಲ್ಲಿ ಮಾನಸಿಕ ನಮಸ್ಕಾರವೇ ಸಾಧ್ಯ. ಇಡೀ ದೇಹ ಬಿಡುವಾಗಿದ್ದರೂ ಮಾಡುವ ಸ್ಥಳ ಚಿಕ್ಕದಿದ್ದರೆ ಸಂಕುಚಿತ ನಮಸ್ಕಾರವನ್ನೇ ಮಾಡಬೇಕಾಗುತ್ತದೆ.  

ಮಾತು, ದೇಹ, ಮನಸ್ಸು, ಬುದ್ಧಿ, ಎಲ್ಲವೂ ಒಂದೇ ಕಡೆ ಕೇಂದ್ರೀಕೃತವಾಗಿ ಆ ಸಮಯದಲ್ಲಿ ನಮಸ್ಕಾರ ಮಾಡುವುದು ಒಂದೇ ಕೆಲಸವಾದರೆ, ಸ್ಥಳವೂ ವಿಶಾಲವಾಗಿದ್ದರೆ ಆಗ ಎಲ್ಲವೂ ಸೇರಿ ದೀರ್ಘ ದಂಡ ನಮಸ್ಕಾರವನ್ನೇ ಮಾಡಬಹುದು. 

ಸಾಷ್ಟಾಂಗ ನಮಸ್ಕಾರ 

ದೇವಿ, ದೇವತೆಗಳ, ಆರಾಧ್ಯ ಮೂರ್ತಿಯ ಹದಿನಾರು ಮೆಟ್ಟಿಲುಗಳ ಷೋಡಶೋಪಚಾರ ಪೂಜೆ ನಡೆಸಿದ ನಂತರ ಅಥವಾ ದೇವಾಲಯ, ಕ್ಷೇತ್ರಗಳಲ್ಲಿ ಹೋದಾಗ, ಪೂಜೆಯ ಕೊನೆಯ ಹಂತದಲ್ಲಿ "ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ" ಎನ್ನುವಾಗ ಮಾಡುವ ನಮಸ್ಕಾರ ಸಾಷ್ಟಾಂಗ ನಮಸ್ಕಾರ ಆಗುತ್ತದೆ. ಆ ಸಂದರ್ಭದಲ್ಲಿ ಮತ್ತೇನೂ ವ್ಯಾಪಾರವಿಲ್ಲ. ನಮ್ಮ ಎಲ್ಲ ಸಾಧನ ಸಾಮಗ್ರಿಗಳನ್ನು ಒಟ್ಟುಗೂಡಿಸಿ ಇಡೀ ದೇಹವನ್ನು ನೆಲದ ಮೇಲೆ ಮಲಗಿಸಿ ಏಕಾಗ್ರ ಚಿತ್ತದಿಂದ ಎಂಟು ಭಾಗಗಳಿಂದ ಮಾಡುವ ನಮಸ್ಕಾರವೇ ಸಾಷ್ಟಾಂಗ ನಮಸ್ಕಾರ. 

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ 
ಪದ್ಭ್ಯಾಮ್ ಕರಾಭ್ಯಾಮ್ ಜಾನುಭ್ಯಾಮ್ ಪ್ರಣಾಮೋ ಸಾಷ್ಟಾಂಗ ಉಚ್ಯತೇ 

ತಲೆ, ಎದೆ/ಹೊಟ್ಟೆ, ಕೈಕಾಲುಗಳು ಮತ್ತು ತೊಡೆಗಳು (ಅಂದರೆ ಇಡೀ ದೇಹ), ದೃಷ್ಟಿ, ಮಾತು ಮತ್ತು ಮನಸ್ಸು ಎಲ್ಲವೂ ಸೇರಿ ಒಟ್ಟಾಗಿ ಮಾಡುವ ನಮಸ್ಕಾರವೇ ಸಾಷ್ಟಾಂಗ ನಮಸ್ಕಾರ. ಈ ಕ್ರಿಯೆ ನಡೆಯುವಾಗ ನಮ್ಮ ಸಮಸ್ತವೂ ನಮಸ್ಕಾರದಲ್ಲಿಯೇ ಲೀನವಾಗುತ್ತವೆ, ಬೇರೆ ಯಾವ ವ್ಯಾಪಾರವೂ ಇಲ್ಲ. ಅಂದರೆ, ಮತ್ತೇನನ್ನೋ ನೋಡುವುದು ಅಥವಾ ಮತ್ಯಾವುದರ ಬಗ್ಗೆ ಯೋಚಿಸುವುದೂ ಕೂಡದು. ಜೊತೆಗೆ ಇಡೀ ದೇಹ ಭೂಮಿಯ ಮೇಲೆ ಮಲಗುತ್ತದೆ. "ನೀನು ಈಶ, ನಾನು ದಾಸ" ಅನ್ನುವ ಭಾವ ಬಂದು ನನ್ನದೆಲ್ಲವೂ ನಿನ್ನದೇ ಅನ್ನುವ ಸರ್ವ ಸಮರ್ಪಣ ಭಾವ ಬರಬೇಕು. ಇಲ್ಲದಿದ್ದರೆ ಅಂತಹ ಅರೆ ಬೆಂದ ನಮಸ್ಕಾರದಿಂದ ಪ್ರಯೋಜನವಿಲ್ಲ. 

ಇಂತಹ ನಮಸ್ಕಾರಕ್ಕೆ ಏಕೆ ಅಂತಹ ಮಹತ್ವ? ಏಕೆಂದರೆ, ನಾವೇ ಮಾಡಬಹುದಾದ ಒಂದೇ ಕ್ರಿಯೆ ಇದು. ತಂದಿಟ್ಟ ಹಣ್ಣು, ಹೂವು, ಪೂಜಾ ದ್ರವ್ಯಗಳನ್ನು ಯಾರಾದರೂ ಬೇರೆಯವರು ಸಮರ್ಪಣೆ ಮಾಡಬಹುದು. ಮತ್ತೆಲ್ಲ ಪೂಜಾ ಕ್ರಿಯೆಗಳನ್ನು ಇನ್ನೊಬ್ಬರು ನಮ್ಮ ಪರವಾಗಿ ಮಾಡಬಹುದು. ನಮ್ಮ ಹಣವನ್ನು ಮತ್ತೊಬ್ಬರು ಹುಂಡಿಗೆ ಹಾಕಬಹುದು. ಆದರೆ ನಮ್ಮ ಸಾಷ್ಟಾಂಗ ನಮಸ್ಕಾರವನ್ನು ಇನ್ನೊಬ್ಬರು ಮಾಡುವಹಾಗಿಲ್ಲ. ನಮ್ಮ ನಮಸ್ಕಾರದ ಸಂಪೂರ್ಣ ಸ್ವಾಮಿತ್ವ ಅಥವಾ ಅಧಿಕಾರ ನಮ್ಮದೇ!

ಪ್ರದಕ್ಷಿಣ ನಮಸ್ಕಾರ 

ಎಲ್ಲ ಸೇವೆಯ ಕಡೆಯ ಹಂತವಾಗಿ (ಪುನಃ ಪೂಜೆಯ ಮೊದಲು) ಪ್ರದಕ್ಷಿಣ ನಮಸ್ಕಾರ ಮಾಡುವ ಪದ್ಧತಿ ಉಂಟು. ಇದನ್ನು ಹೇಗೆ ಮಾಡಬೇಕು? ಸಾಮಾನ್ಯ ವ್ಯವಹಾರದಲ್ಲಿ ಸುತ್ತು ಹಾಕಿ ಸಾಷ್ಟಾಂಗ ನಮಸ್ಕಾರ ಮಾಡುವುದು. ಅದು ಪ್ರದಕ್ಷಿಣೆ ಆಯಿತೇ? ಪ್ರದಕ್ಷಿಣೆ ಅಂದರೆ ನಮಸ್ಕಾರ ಮಾಡುವ ಪ್ರತೀಕದ ಸುತ್ತ ನೋಡುತ್ತಾ ಗಮನವನ್ನು ಕೇಂದ್ರೀಕರಿಸಿ ಮುಂದುಗಡೆ ಬಂದು ನಮಸ್ಕಾರ ಮಾಡುವುದು. ಪ್ರತೀಕದ ಸುತ್ತ ಬರಲು ಸ್ಥಳವಿದ್ದರೆ ಮಾತ್ರ ಪ್ರದಕ್ಷಿಣೆ ಸಾಧ್ಯ. ದೇವಾಲಯಗಳಲ್ಲಿ ಇದು ಸಾಧ್ಯ. ಅನೇಕ ಕಡೆ ಪ್ರತೀಕಗಳನ್ನು (ಪ್ರತಿಮೆ, ಮೂರ್ತಿ, ಕಲಶ ಇತ್ಯಾದಿ) ಗೋಡೆಗೆ ಸೇರಿಸಿ ಇಟ್ಟಿರುತ್ತಾರೆ. ಇಂತಹ ಕಡೆ ಪ್ರದಕ್ಷಿಣೆ ಅಸಾಧ್ಯ. ಅನೇಕ ಜನ ತಾವು ನಿಂತ ಕಡೆ ಸುತ್ತಿ ನಮಸ್ಕಾರ ಮಾಡುತ್ತಾರೆ. ಹಾಗೆ ಸುತ್ತುವಾಗ ಪ್ರತೀಕಕ್ಕೆ ವಿಮುಖವಾಗಿ ಬರಬೇಕಾಗುತ್ತದೆ, ಇಂತಹ ಪ್ರದಕ್ಷಿಣೆಯಿಂದ ಏನೂ ಪ್ರಯೋಜನವಿಲ್ಲ. ಪ್ರತೀಕದ ಸುತ್ತ ಬರಲು ಸಾಧ್ಯವಿಲ್ಲದಾಗ ಇರುವಲ್ಲಿಯೇ ಸಾಷ್ಟಾಂಗ ನಮಸ್ಕಾರ ಮಾಡಿದರೆ ಸಾಕು. 

ಪ್ರಶಂಸೆ, ಸ್ತುತಿ, ಸ್ತೋತ್ರ ಮತ್ತು ಸಂಸ್ತುತಿ 

ಮೇಲೆ ಹೇಳಿದ ರೀತಿಯಲ್ಲಿ ನಮಸ್ಕಾರ ಮಾಡುವಾಗ ವಚಸಾ ಸಹ ಉಂಟು. ಅಂದರೆ ನಾಲಿಗೆ ಕೂಡ ತನ್ನ ಕಾಣಿಕೆ ಕೊಡುತ್ತದೆ. ಏನು ಹೇಳಬೇಕು? ಇದೊಂದು ಮುಖ್ಯವಾದ ಪ್ರಶ್ನೆ. 

ಪರ್ಯಾಯ ಪದಗಳಲ್ಲಿ ಸೂಕ್ಷ್ಮವಾದ ಅರ್ಥ ಭೇದ ಇರುತ್ತದೆ. (There are subtle differences in Synonyms. They give similar meanings and seldom do give exact equivalent of another word). ಕೋಶಗಳಲ್ಲಿ ಕೊಡುವ ಪದಗಳೂ ಹೀಗೆಯೇ. 

ಈ ಹಿನ್ನೆಲೆಯಲ್ಲಿ, ಪ್ರಶಂಸೆ, ಸ್ತುತಿ, ಸ್ತೋತ್ರ ಮತ್ತು ಸಂಸ್ತುತಿ ಇವುಗಳಲ್ಲಿ ಏನಾದರೂ ಭೇದವಿದೆಯೇ? 
  • ಒಂದು ವ್ಯಕ್ತಿಯಲ್ಲಿ ಅಥವಾ ಪದಾರ್ಥದಲ್ಲಿ ಇಲ್ಲದ ಗುಣಗಳನ್ನು ಆರೋಪಿಸಿ (ಹೇಳಿ ಅಥವಾ ಸೇರಿಸಿ) ಹೊಗಳುವುದು ಪ್ರಶಂಸೆ. ಅನೇಕ ವೇಳೆ ನಮಗೆ ಆ ವ್ಯಕ್ತಿಯಿಂದ ಏನೋ ಕೆಲಸ ಅಥವಾ ಸಹಾಯ ಆಗಬೇಕಾದಾಗ ಹೀಗೆ ಮಾಡುವುದುಂಟು. ತಮಾಷೆಯ ವಿಷಯವೆಂದರೆ ಇವನು ಹೇಳುತ್ತಿರುವುದು ಸುಳ್ಳು ಎಂದು ಪ್ರಶಂಸೆಗೆ ಪಾತ್ರನಾದ ವ್ಯಕ್ತಿಗೂ ಗೊತ್ತಿರುತ್ತದೆ. ಆದರೆ ಕೇಳಲು ಚೆನ್ನ ಎಂದು ಅವರೂ ಸುಮ್ಮನಿರುತ್ತಾರೆ. 
  • ವ್ಯಕ್ತಿಯಲ್ಲಿ ಅಥವಾ ಪದಾರ್ಥದಲ್ಲಿ ಇರುವ ಗುಣಗಳನ್ನು ಹೇಳಿ ಹೊಗಳುವುದು ಸ್ತುತಿ. ಇಲ್ಲಿ ತೋರಿಕೆಯ ಆಡಂಬರವಿಲ್ಲ. ಸತ್ಯದ ಸಾನ್ನಿಧ್ಯ ಉಂಟು. 
  • ಇರುವ ಗುಣಗಳನ್ನು ಕ್ರಮಭದ್ದವಾಗಿ, ಭಾವಪೂರಿತವಾಗಿ ಹೇಳುವುದು ಸ್ತೋತ್ರ. ಇಲ್ಲಿ ಕೇವಲ ಶಬ್ದಗಳ ಗೊಂದಲವಲ್ಲ. ಭಾವನೆಗಳ ಪ್ರತಿಬಿಂಬ ಇರುತ್ತದೆ. 
  • ಸರಿಯಾಗಿ ಅರ್ಥ ಮಾಡಿಕೊಂಡು, "ನನಗೆ ಪೂರ್ತಿ ಗೊತ್ತಿಲ್ಲ" ಎಂದು ಒಪ್ಪಿಕೊಂಡು ಭಯ-ಭಕ್ತಿಗಳಿಂದ ಮಾಡುವುದು ಸಂಸ್ತುತಿ. ಇಲ್ಲಿ ಪದಗಳಿಗೆ ಎಷ್ಟು ಬೆಲೆಯೋ ಭಾವಕ್ಕೂ ಅಷ್ಟು ತೂಕ. ಇದು ಶ್ರದ್ದೆಯ ಪರಾಕಾಷ್ಠೆ. ಭಾವವಿದ್ದರೆ ಶ್ರದ್ದೆ ಬರುತ್ತದೆ. ಇಲ್ಲದಿದ್ದರೆ ಇಲ್ಲ. ಶ್ರದ್ದೆ ಇದ್ದರೆ ಭಗವಂತ ಒಲಿಯುತ್ತಾನೆ. 

ಸರ್ವ ಸಮರ್ಪಣ, ಸಾಷ್ಟಾಂಗ ನಮಸ್ಕಾರ, ಶರಣಾಗತಿ 

ಸರ್ವ ಸಮರ್ಪಣಾ ಬುದ್ಧಿಯಿಂದ, ಭಾವ ತುಂಬಿದ ಶ್ರದ್ದೆಯಿಂದ ಸಾಷ್ಟಾಂಗ ನಮಸ್ಕಾರ ಮಾಡುವಾಗ ನಾಲಿಗೆ ಏನು ಹೇಳುತ್ತದೆ? ಸಾಮಾನ್ಯವಾಗಿ ಹೇಳುವ ಶ್ಲೋಕ ಹೀಗಿರುತ್ತದೆ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ 
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ 
ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವಾ 
ತ್ರಾಹಿ ಮಾಂ ಕೃಪೆಯಾ ದೇವ ಶರಣಾಗತ ವತ್ಸಲ
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ 
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷೋ ಜನಾರ್ದನ 

ಇದು ಉಪಚಾರಕ್ಕೆ ಹೇಳುವ ಮಾತೋ, ಅಥವಾ ಇದರಲ್ಲಿ ನಿಜವಾಗಿ ನಂಬಿಕೆ ಇದೆಯೋ? ಇದು ಹೇಳಿ ಮುಗಿಸದಿದ್ದರೆ ಮುಂದೆ ಊಟ ಹಾಕುವುದಿಲ್ಲ ಎಂದು ಹೇಳುವ ತಂತ್ರವೋ? ಇದು ಸತ್ಯವಾಗಿ ಸಂಸ್ತುತಿ ಆದರೆ ಹೇಳುವವನಿಗೆ ಜನ್ಮ, ಪುನರ್ಜನ್ಮದಲ್ಲಿ ನಂಬಿಕೆ ಇರಬೇಕು. ನಾನು ಪಾಪ ಮಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಇರಬೇಕು, ಪರಮಾತ್ಮನು ದಯಾನಿಧಿ ಎನ್ನುವ ಪ್ರಬಲ ನಂಬಿಕೆ ಬೇಕು, ನನ್ನನ್ನು ಈ ಜೀವನ-ಮರಣ ಚಕ್ರದಿಂದ ಪಾರು ಮಾಡಿಯೇ ಮಾಡುತ್ತಾನೆ ಎಂಬ ಧೃಡ ಹಂಬಲ ಇರಬೇಕು. ಇದೆಲ್ಲದಕ್ಕಿಂತ ಹೆಚ್ಚಾಗಿ ಈಗ ನಾನು ನಮಿಸುತ್ತಿರುವ ದೈವವೇ ಇದನ್ನು ಮಾಡಬಲ್ಲ ಎನ್ನುವ ವಿಶ್ವಾಸ ಬೇಕು. ಆಗ ಮಾತ್ರ ಈ ಸ್ತುತಿ ಸಂಸ್ತುತಿ ಆಗುತ್ತದೆ; ಪ್ರಯೋಜನಕ್ಕೆ ಬರುತ್ತದೆ. ಇಲ್ಲದಿದ್ದರೆ ಅದು ಪ್ರಶಂಸೆ ಆಗಿಯೇ ಉಳಿಯುತ್ತದೆ; ಫಲವೂ ಸಿಗುವುದಿಲ್ಲ!

ಎಲ್ಲರ ಬಳಿಯೂ ಹೇಳುವುದು ಇದೇ - ಅನ್ಯಥಾ ಶರಣಂ ನಾಸ್ತಿ!

ಗಣೇಶ ಚೌತಿಯಂದು ಹೇಳುವುದು ಇದೇ. ಜನಾರ್ದನ ಎನ್ನುವುದು ಗಣಾಧಿಪ ಆಗುತ್ತದೆ. ಸ್ವರ್ಣಗೌರಿ ವ್ರತದಲ್ಲಿಯೂ ಇದೇ. ಜನಾರ್ದನ ಅನ್ನುವುದು ಸುರೇಶ್ವರಿ ಆಗುತ್ತದೆ. ಕೇದಾರೇಶ್ವರ ವ್ರತದಲ್ಲಿಯೂ ಇದೇ  ಹೇಳುವುದು. ಜನಾರ್ದನ ಮಹೇಶ್ವರ ಆಗುತ್ತದೆ. ದೇವೇಂದ್ರನಿಗೆ ಪೂಜೆ ಮಾಡಿದರೂ ಇದನ್ನೇ ಹೇಳುವುದು. ಜನಾರ್ದನ ಸುರಾಧಿಪ ಆಗುತ್ತಾನೆ! 

ಪ್ರತಿಯೊಬ್ಬರಿಗೂ ಭೇದವಿಲ್ಲದೆ "ಅನ್ಯಥಾ ಶರಣಂ ನಾಸ್ತಿ" ಎಂದೇ ಹೇಳುವುದು. ದೇವಾಲಯಗಳಿಗೆ ಹೋದರೆ ಒಂದು ಪ್ರದಕ್ಷಿಣೆ ಬರುವುದರಲ್ಲಿ ಆರೋ ಎಂಟೋ ಸಾರಿ ಬೇರೆಬೇರೆಯವರಿಗೆ ಇದನ್ನೇ ಹೇಳುವುದು. ಇದು ಸರಿಯೇ? ಇದು ಅತ್ಯಂತ ಸಹಜ ಹಾಗೂ ಸಾಧುವಾದ ಪ್ರಶ್ನೆಯೇ. ಇದಕ್ಕೆ ಉತ್ತರ ಏನು?

ಯಾರಿಗೆ ನಮಸ್ಕಾರ?

ಮೇಲಿನ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಯಾರಿಗೆ ನಮಸ್ಕಾರ ಮಾಡುತ್ತಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ. ಅದು ಖಚಿತವಾದರೆ ಪ್ರಶ್ನೆಗೆ ಉತ್ತರವೂ ಸಿಗುತ್ತದೆ; ತೊಡಕೂ ನಿವಾರಣೆ ಆಗುತ್ತದೆ. 

ನಮ್ಮ ವೈದಿಕ ಗ್ರಂಥಗಲ್ಲಿ "ನಮೋ ಮಹದ್ಭ್ಯಹ" ಅನ್ನುವ ಕಡೆಯೇ "ನಮೋ ಅರ್ಭಕೇಭ್ಯಹ, ನಮೋ ಯುವೇಭ್ಯಹ" ಎಂದೂ ಹೇಳುತ್ತದೆ. ಮಕ್ಕಳಿಗೂ ನಮಸ್ಕಾರ ಎಂದರೇನು? ಇದು ಹುಚ್ಚಾಟವಲ್ಲವೇ?

ಪ್ರತಿಯೊಬ್ಬರ ದೇಹದಲ್ಲೂ ಪರಮಾತ್ಮನಿದ್ದಾನೆ. ಅವನು ಇರುವುದರಿಂದಲೇ ಜೀವವುಂಟು. ಅವನು ಹೊರಟರೆ ಜೀವವೂ ಹೋಗಿ ಓಡಾಡುತ್ತಿರುವ ದೇಹ ಜಡವಾಗುತ್ತದೆ. ಒಂದು ಮರದ ಕೊರಡಿಗೂ ಈ ದೇಹಕ್ಕೂ ವ್ಯತ್ಯಾಸವೇ ಇಲ್ಲ. ಮರದ ಕೊರಡಾದರೂ ಯಾವುದಾದರೂ ಕೆಲಸಕ್ಕೆ ಬರಬಹುದು. ಈ ದೇಹ ಯಾವುದಕ್ಕೂ ಬೇಡ. "ಎತ್ತಿದ ಕಸಕಿಂತ  ಕಡೆಯಾಯಿತೀ ದೇಹ" ಎನ್ನುತ್ತಾರೆ ದಾಸರು. ನಾವು ಯಾರಿಗಾದರೂ ಎದುರು ಬಂದವರು ಅಥವಾ ಕಂಡವರಿಗೆ ನಮಸ್ಕರಿಸಿದರೆ ಅದು ಯಾರಿಗೆ? ಅವರು ಸಾಧನೆಯಲ್ಲಿ ನಮಗಿಂತ ದೊಡ್ಡವರಾದರೆ ಅವರಿಗೆ (ಆ ಜೀವನಿಗೆ) ಮತ್ತು ಆ ಜೀವದ ಹೃತ್ಕಮಲದಲ್ಲಿ ನೆಲೆಸಿರುವ ಪರಮಾತ್ಮನಿಗೆ. ನಮಗಿಂತ ಸಾಧನೆಯಲ್ಲಿ ಚಿಕ್ಕವರಾದರೆ ಆ ದೇಹದಲ್ಲಿರುವ ಪರಮಾತ್ಮನಿಗೆ. ನಮೋ ಅರ್ಭಕೇಬ್ಯಹ ಎನ್ನುವಲ್ಲಿಯೂ ಆ ಶಿಶುವಿನಲ್ಲಿಯೂ ಪರಮಾತ್ಮನಿದ್ದಾನೆ ಎಂಬ ಪ್ರಜ್ಞೆ ಜಾಗೃತವಾಯಿತು. 

ಎದುರು ಇರುವವರು ನಮಗಿಂತ ಸಾಧನೆಯಲ್ಲಿ ದೊಡ್ಡವರೋ, ಚಿಕ್ಕವರೋ ಹೇಗೆ ತಿಳಿಯುವುದು? ಇಲ್ಲದಿದ್ದರೆ ಪ್ರಮಾದವಾಗುತ್ತದೆ. ಕೆಲವರು ನಮಗಿಂತ ದೊಡ್ಡವರು ಎನ್ನುವುದು ನಮ್ಮ ಅನುಭವಕ್ಕೆ ಗೊತ್ತಾಗುತ್ತದೆ. ವಯೋವೃದ್ಧರು, ಜ್ಞಾನವೃದ್ಧರು, ಅಭ್ಯಾಸದಲ್ಲಿ ನಮಗಿಂತ ಮುಂದಿರುವವರು ಇತ್ಯಾದಿ. ಆದರೆ ಅನೇಕ ಜ್ಞಾನಿಗಳು ನಮ್ಮ ಸುತ್ತ ಮುತ್ತವೇ ಇರುತ್ತಾರೆ. ಆದರೆ ಅದು ನಮಗೆ ತಿಳಿಯುವುದಿಲ್ಲ. ಅನೇಕ ಅವಧೂತರು ಲೋಕದ ಕಣ್ಣಿಗೆ ಮಂಕಾಗಿ, ಪೆದ್ದರಂತೆ ಇರುತ್ತಾರೆ. ಬೇರೆಯವರು ನನ್ನ ಬಗ್ಗೆ ಏನು ತಿಳಿಯುತ್ತಾರೆ ಎಂದು ಚಿಂತಿಸುವ ಹಂತವನ್ನು ಅವರು ಎಂದೋ ದಾಟಿರುತ್ತಾರೆ. ಜಡಭರತನನ್ನು ಇಡೀ ಪ್ರಪಂಚವೇ ಹಾಸ್ಯ ಮಾಡುತ್ತಿತ್ತು. ರಹೂಗಣ ಮಹಾರಾಜನಿಗೆ ಅವನು ಜ್ಞಾನಿಯೆಂದು ತಿಳಿಯುವವರೆಗೂ. ಆದ್ದರಿಂದ ಯಾರನ್ನೂ ಉಪೇಕ್ಷೆ ಮಾಡಬಾರದು. ಆ ಜೀವದ ಸಾಧನೆಯ ಬಗ್ಗೆ ನಮಗೆ ತಿಳಿಯದಿದ್ದಾಗ ಅದನ್ನು ಪರಮಾತ್ಮನಿಗೇ ಬಿಡಬೇಕು. ಹೊರಗಿನ ಗುಣ ಲಕ್ಷಣಗಳಿಂದ ಯಾರನ್ನೂ ಅಳೆಯಬಾರದು. 

ನಾಸ್ತಿಕರಿಗೂ ನಮಸ್ಕಾರ ಮಾಡಬೇಕೆ?

ಇದು ಒಂದು ವಿಚಿತ್ರ ಸ್ಥಿತಿ. ಎದುರಿನಲ್ಲಿರುವ ನಾಸ್ತಿಕನ ಒಳಗಿರುವ ಪರಮಾತ್ಮನಿಗೆ ನಮಿಸಲು ನಾವು ಸಿದ್ಧ. ಆದರೆ ತನ್ನಲ್ಲಿ ಅವನಿದ್ದಾನೆ ಎಂದು ಅವನೇ ನಂಬುವುದಿಲ್ಲ. ಏನು ಮಾಡುವುದು?

ಒಂದು ಊರಿನಲ್ಲಿ ಅನೇಕ ಮನೆಗಳಿವೆ. ಎಲ್ಲ ಮನೆಗಳಲ್ಲೂ ವಿದ್ಯುತ್ ದೀಪ ಬೆಳಗುತ್ತಿವೆ. ಆದರೆ ಕೆಲವು ಮನೆಗಳಲ್ಲಿ ದೀಪವಿಲ್ಲ. ಮನೆಯವರು ಪ್ರಯತ್ನಪೂರ್ವಕ ಫ್ಯೂಸ್ ಕಿತ್ತು ಹಾಕಿದ್ದಾರೆ. ವಿದ್ಯುತ್ ಇದೆ. ಆದರೆ ಅದರ ಅಭಿವ್ಯಕ್ತಿ ಇಲ್ಲ. 

ನಾಸ್ತಿಕರಲ್ಲಿಯೂ ಭಗವಂತನಿದ್ದಾನೆ. ಎಲ್ಲರ ಹೃದಯದಲ್ಲೂ ಅವನು ಕುಳಿತಿದ್ದಾನೆ. ಆದರೆ ಅವನು ಕುಳಿತಿರುವುದು ಅವರಿಗೆ ಗೊತ್ತಿಲ್ಲ. ಒಬ್ಬನ ಮನೆಯಲ್ಲಿ ಒಂದು ಪೆಟ್ಟಿಗೆಯಿದೆ. ಅದರಲ್ಲಿ ಬಹಳ ಬೆಲೆ ಬಾಳುವ ಆಭರಣಗಳಿವೆ. ಆದರೆ ಅವನಿಗೆ ಅದು ಇರುವುದು ಗೊತ್ತಿಲ್ಲದೇ ಭಿಕ್ಷೆ ಬೇಡುತ್ತಿದ್ದಾನೆ. ನಮಗೂ ಅದಕ್ಕೂ ಸಂಬಂಧವಿಲ್ಲ. ಪರಮಾತ್ಮನಿಲ್ಲದಿದ್ದರೆ ಅವನು ಓಡಾಡುತ್ತಲೇ ಇರಲಿಲ್ಲ. ಆದ್ದರಿಂದ ಅವನಿಲ್ಲಿರುವ ಪರಮಾತ್ಮನಿಗೂ ನಾವು ಗೌರವ ಕೊಡಲೇಬೇಕು. 

ಜ್ಞಾನ, ಅಜ್ಞಾನ, ಸುಜ್ಞಾನ, ವಿಪರೀತ ಜ್ಞಾನ 

ನಮ್ಮ ಜೀವನ ರೀತಿಯಲ್ಲಿ, ನಮ್ಮ ಆರಾಧನೆಯ ದಾರಿಯಲ್ಲಿ ನಮಗಿಂತ ಹೆಚ್ಚಾಗಿ ಬೇರೆಯವರು ಹೇಳಿದ್ದನ್ನೇ ನಾವು ನಂಬುವ ಸ್ಥಿತಿ ಇಂದಿದೆ. "ನಿಮ್ಮಲ್ಲಿ ಅನೇಕ ದೇವರಿದ್ದಾರೆ." ಎಂದು ಹೇಳುವುದನ್ನು ಕೇಳಿ, ಕೇಳಿ ನಾವೂ ಅದನ್ನು ನಂಬುವುದಕ್ಕೆ ಪ್ರಾಂಭ ಮಾಡಿದ್ದೇವೆ. 

ನಮ್ಮ ಸಂಪ್ರದಾಯಗಳಿಗೆ ಮುಖ್ಯ ಆಧಾರವಾದ "ಪುರುಷ ಸೂಕ್ತ", ಋಗ್ವೇದದ "ಮಹಾನಾರಾಯಣೋಪನಿಷದ್" ಮತ್ತನೇಕ ಆಧಾರಗಳು ಸಾರಿ ಸಾರಿ ಹೇಳುತ್ತವೆ: ಎಲ್ಲಕ್ಕೂ ಆಧಾರವಾದ ವಿರಾಟ್ ಪುರುಷ ಇದ್ದಾನೆ. ಅವನೊಬ್ಬನೇ ದೇವರು. ಬಾಕಿಯವರಲ್ಲ ದೇವತೆಗಳು. ಅವನಿಂದ ಹುಟ್ಟಿದವರು. ಪಾಶ್ಚಾತ್ಯರು "ದೇವರು ಮತ್ತು ದೇವದೂತರು" (God and Angels) ಎಂದು ಖಚಿತವಾಗಿ ವಿಭಾಗ ಮಾಡುತ್ತಾರೆ. ನಮ್ಮ ಗ್ರಂಥಗಳಲ್ಲೂ ಇದು ಅದಕ್ಕಿಂತ ಹಿಂದಿನಿಂದ ಇದ್ದರೂ ನಮ್ಮಲ್ಲಿ ಅನೇಕ ದೇವರಿದ್ದಾರೆ ಎಂದು ನಮ್ಮನ್ನು ಮರುಳು ಮಾಡುವುದರಲ್ಲಿ ಅವರು ಸಫಲರಾಗಿದ್ದಾರೆ. 

  • "ಅನೇಕ ದೇವರಿದ್ದಾರೆ. ಅವರೆಲ್ಲ ಸರ್ವ ಶಕ್ತರು" ಎಂದು ತಿಳಿಯುವುದು ಅಜ್ಞಾನ. 
  •  "ಒಬ್ಬನೇ ದೇವರು. ಅವನೇ ಅನೇಕ ರೂಪದಲ್ಲಿದ್ದಾನೆ" ಎಂದು ತಿಳಿಯುವುದು ಜ್ಞಾನ. 
  • "ಒಬ್ಬನೇ ಪರಮ ಪುರುಷ. ಬಾಕಿ ಎಲ್ಲವೂ ಅವನಿಂದ ಸೃಷ್ಟಿಯಾಯಿತು. ಅವನಿಂದ ಸೃಷ್ಟಿಯಾಗಿ ಬೇರೆ ಬೇರೆ ಕಾರ್ಯ ನಿರ್ವಹಿಸುವ ದೇವತೆಗಳೆಲ್ಲ ಅವನ ಆಜ್ಞಾಧಾರಕರು" ಎಂದು ತಿಳಿಯುವುದು ಸುಜ್ಞಾನ. 
  • "ದೇವರೇ ಇಲ್ಲ." ಅಥವಾ "ನಾನೇ ದೇವರು" ಎಂದು ತಿಳಿಯುವುದು ವಿಪರೀತ ಜ್ಞಾನ.
ಚಿಕ್ಕ ವಯಸ್ಸಿನಲ್ಲಿ, ರಟ್ಟೆಯಲ್ಲಿ ಬಲವಿದ್ದಾಗ ನಾಸ್ತಿಕವಾದ ಬಹಳ ಸಂತೋಷ ಕೊಡುತ್ತದೆ. ಯಾವುದೇ ಕಟ್ಟುಪಾಡುಗಳಿಲ್ಲದ ಜೀವನ ಬಹಳ ಸುಖ ಎನಿಸುತ್ತದೆ. ವಯಸ್ಸಾದಂತೆ, ಶಕ್ತಿ ಉಡುಗುತ್ತಿದ್ದಂತೆ, ಪಕ್ಕದಲ್ಲೇ ಇರುವ ನೀರಿನ ಪಾತ್ರೆ ತೆಗೆದುಕೊಳ್ಳುವ ಶಕ್ತಿ ಇಲ್ಲದಿದ್ದಾಗ ನಮಗಿಂತ ದೊಡ್ಡ ಮತ್ತು ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಒಂದಿದೆ ಎಂದು ಭಾಸವಾಗುತ್ತದೆ.  ಶವ ಸಂಸ್ಕಾರವನ್ನು ವಿಡಂಬನೆ ಮಾಡಿ ದೊಡ್ಡವರಾದವರ ಶವ ಸಂಸ್ಕಾರಕ್ಕೆ ಅವರ ಶವದ ತೂಕಕ್ಕಿಂತ ಹೆಚ್ಚಿನ ತೂಕದ ಶ್ರೀಗಂಧ, ಕರ್ಪೂರ, ತುಪ್ಪ ಉಪಯೋಗಿಸಿ ವೈಭವೋಪೇತವಾಗಿ ಸಂಸ್ಕಾರ ಮಾಡಿದ್ದನ್ನು ನಮ್ಮ ಕಾಲದಲ್ಲಿಯೇ ನಾವು ನೋಡಿದ್ದೇವೆ. ದೇವರೇ ಇಲ್ಲ ಎನ್ನುವ ಸಿದ್ಧಾಂತದ ಬಲದಿಂದ ಅಧಿಕಾರಕ್ಕೆ ಬಂದ ಜನರ ಆಯುಷ್ಯ ಹೋಮವನ್ನು ಭರಾಟೆಯಿಂದ ನಡೆಸುತ್ತಿರುವುದನ್ನೂ ನೋಡುತ್ತಿದ್ದೇವೆ!


ಪ್ರಾರ್ಥನೆ ಪ್ರತೀಕಗಳ ಮುಂದೆ 

ನಮ್ಮ ಆಚರಣೆ, ಪೂಜೆ, ನಮಸ್ಕಾರ ಎಲ್ಲವೂ ಆ ಪರಮಪುರುಷನ ಪ್ರತೀಕಗಳ ಮುಂದೆ. "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದು ಆ ಪ್ರತೀಕಗಳ ಅಂತರ್ಯಾಮಿಯಾದ ಪರಮಪುರುಷನಿಗೆ. ಕೆಲವರು ಆ ಪರಮಪುರುಷನ ಸ್ತ್ರೀ ರೂಪವನ್ನೂ ಆರಾಧಿಸಬಹುದು. (ಅದ್ವೈತಿಗಳು ಆರಾಧಿಸುವ ಗಾಯತ್ರಿ ದೇವಿಯು ಆ ಪರಮಪುರುಷನ ಸ್ತ್ರೀ ರೂಪವೇ ಎಂದು ಮಹಾ ವಿದ್ವಾಂಸರಾದ ದೇವುಡು ನರಸಿಹ ಶಾಸ್ತ್ರಿಗಳು ತಿಳಿಸುತ್ತಾರೆ). ಯಾವುದೇ ಪ್ರತೀಕದ ಮುಂದೆ ಸಾಷ್ಟಾಂಗ ಮಾಡಿ "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದೂ ಆ ಪ್ರತೀಕಗಳ ಅಂತರ್ಯಾಮಿ ಪರಮಪುರುಷನಿಗೇ. ಹೇಗೆ ಎದುರು ಬಂಡ ವ್ಯಕ್ತಿಗೂ ಅವನ ಅಂತರ್ಯಾಮಿಯಾದ ಭಗವಂತನಿಗೂ ನಮಸ್ಕರಿಸುತ್ತೇವೆಯೋ, ಅದೇ ರೀತಿ ಇಲ್ಲಿಯೂ ನಡೆಯುತ್ತಿದೆ ಎನ್ನುವ ಅನುಸಂಧಾನವಿದ್ದರೆ ಎಲ್ಲವೂ ಸುಗಮ. 

ದೊಡ್ಡ ದೇವಾಲಯಗಳ ಹುಂಡಿಯಲ್ಲಿ ಅನೇಕ ರಂಧ್ರಗಳನ್ನು ಮಾಡಿರುತ್ತಾರೆ, ಅನೇಕ ಭಕ್ತರು ಒಂದೇ ವೇಳೆ ಕಾಣಿಕೆ ಕೊಡಲೆಂದು. ಹುಂಡಿಯಲ್ಲಿ ಹಣ ಹಾಕುವವನು ರಂಧ್ರವನ್ನು ಗಮನಿಸುವುದಿಲ್ಲ. ಏಕೆಂದರೆ ಎಲ್ಲ ರಂಧ್ರದಲ್ಲಿ ಹಾಕಿದ ಹಣವೂ ಹುಂಡಿಗೇ ಸೇರುತ್ತದೆ ಎನ್ನುವ ಜ್ನ್ಯಾನ ಇರುವುದರಿಂದ. 

ಹೀಗೆ ಚಿಂತಿಸಲು ಸಾಧ್ಯವೇ?

ಅಂಗಡಿಯಿಂದ ಗಣೇಶನ ಮಣ್ಣಿನ ಮೂರ್ತಿಯನ್ನು ತರುತ್ತೇವೆ. ಅದನ್ನು ಇಟ್ಟು ಪೂಜಾ ವಿಧಿಗಳನ್ನು ನಡೆಸುತ್ತೇವೆ. ನಮಸ್ಕಾರ ಮಾಡುವಾಗ ಯಾರಿಗೆ ಮಾಡುತ್ತೇವೆ? ಮಣ್ಣಿನ ಮೂರ್ತಿಗೋ, ಗಣೇಶನಿಗೋ? ಗಣೇಶನಿಗೆ ಹೇಗಾಯಿತು? ಇಲ್ಲಿ ಗಣೇಶ ಕುಳಿತಿದ್ದಾನೆ ಎನ್ನುವ ಅನುಸಂಧಾನದಿಂದ. ಅಂತೆಯೇ, ಯಾವ ಪ್ರತೀಕಕ್ಕೂ ನಮಸ್ಕಾರ ಮಾಡುವ ವೇಳೆಯಲ್ಲಿ ಇದು ಆ ಪರಮಪುರುಷನ ಪ್ರತೀಕ. ಇದಕ್ಕೆ ನಮಿಸಿದರೆ ಅದು ಆ ಪರಮಪುರುಷನಿಗೆ ತಲುಪುತ್ತದೆ ಎನ್ನುವ ಅನುಸಂಧಾನ ಇದ್ದರೆ ಯಾವ ಪ್ರತೀಕಕ್ಕೂ ಅಡ್ಡ ಬಿದ್ದಾಗ "ಅನ್ಯಥಾ ಶರಣಂ ನಾಸ್ತಿ" ಎಂದು ಹೇಳುವುದರಲ್ಲಿ ಯಾವುದೇ ವಿರೋಧ ಕಂಡುಬರುವುದಿಲ್ಲ. 

ಈಗಾಗಲೇ ದೀರ್ಘವಾಯಿತು. ಇದಕ್ಕೇ ಸಂಭಂದಿಸಿದ "ವ್ಯಾಪ್ತಉಪಾಸನೆ" ಬಗ್ಗೆ ಮುಂದೆ ನೋಡೋಣ.