"ತ್ವಮೇವ ಶರಣಂ ಮಮ" ಎಂದು ಹೇಳಿಯಾಯಿತು. "ವ್ಯಾಪ್ತೋಪಾಸನೆ" ಬಗ್ಗೆ ತಿಳಿದಿದ್ದಾಯಿತು. ಅಂತಹ ಉಪಾಸನೆಯ ಮರ್ಮ ಅರಿತ ಮೇಲೆ ಪ್ರತೀಕಗಳ ಉಪಾಸನೆ ಏಕೆ ಮಾಡಬೇಕು? ಎಂಬ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಉತ್ತರ ಹುಕುವ ಕೆಲಸ ಪ್ರಾರಂಭವಾಯಿತು.
ದೂರದ ಊರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ತಲುಪಲು ವಿಮಾನದಲ್ಲಿ ಹೋಗಬೇಕು ಎಂದು ನಮಗೆ ಗೊತ್ತು. ಆದರೆ ನೆನೆಸಿದ ತಕ್ಷಣ ವಿಮಾನದಲ್ಲಿ ಹೋಗಲಾದೀತೇ? ನಾವಿರುವ ಸ್ಥಳದಿಂದ ವಿಮಾನ ನಿಲ್ದಾಣ ತಲುಪಬೇಕು. ವಿಮಾನದ ಪ್ರಯಾಣಕ್ಕೆ ಪರವಾನಗಿ ಪಡೆಯಬೇಕು. ಬೇಕಾದ ದಸ್ತಾವೇಜುಗಳನ್ನು ತೋರಿಸಬೇಕು. ಭದ್ರತಾ ತಪಾಸಣೆ ದಾಟಬೇಕು. ವಿಮಾನದವರೆಗೂ ತಲುಪಬೇಕು. ಹತ್ತಿ ವಿಮಾನದಲ್ಲಿ ಕೂಡಬೇಕು. ವಿಮಾನ ಪ್ರಯಾಣ ನಂತರವಷ್ಟೇ ಸಾಧ್ಯ!
ವಿಮಾನದವರೆಗಿನ ಪ್ರಯಾಣಕ್ಕೆ ನಾವು ನಿಲ್ದಾಣದವರೆಗೆ ನಡೆದು ಹೋಗಬೇಕು. ಇಲ್ಲವಾದರೆ ಯಾವುದಾದರೂ ವಾಹನವನ್ನು ಹಿಡಿದು ಅಲ್ಲಿಗೆ ತಲುಪಬೇಕು. ಈ ರೀತಿಯ ವಾಹನಗಳೇ ಪ್ರತೀಕಗಳ ಆರಾಧನೆಗಳು. ಪ್ರತೀಕಗಳೇ (symbols) ಪರಮಾತ್ಮನಲ್ಲ. ಎಲ್ಲೆಲ್ಲೂ ಇರುವ ಪರಮಾತ್ಮನು ಅವುಗಳಲ್ಲಿ ವಿಶೇಷ ಸನ್ನಿಧಾನ ಇಟ್ಟಿದ್ದಾನೆ ಎಂದು ನಂಬಿ ಆರಾಧಿಸಬೇಕು.
ನಾವು ಮೊದಲನೇ ಅಥವಾ ಎರಡನೇ ತರಗತಿಯಲ್ಲಿ ಇದ್ದಾಗ ಮೊದಲು ವರ್ಣಮಾಲೆ ಹೇಳಿಕೊಟ್ಟರು. ಪೂರ್ತಿ ವರ್ಣಮಾಲೆಯ ಅಕ್ಷರಗಳನ್ನು ತಪ್ಪಿಲ್ಲದೆ ಹೇಳಿದಾಗ ಆನಂದವೋ ಆನಂದ. ನಂತರ ಕಾಗುಣಿತ. ಅದು ಬಂದಾಗಲಂತೂ ಖುಷಿಯೋ ಖುಷಿ. ಆಮೇಲೆ "ಡಬಲ್ ರೂಲ್ಡ್ ನೋಟ್ ಬುಕ್" ಅಂತ ಒಂದು ಕೊಟ್ಟರು, ಅಕ್ಷರ ಆಚೆ ಈಚೆ ಹೋಗದೆ ನೆಟ್ಟ ನೇರವಾಗಿ ಬರೆಯಲು ಬರಲಿ ಎಂದು. ಅದು ಅಭ್ಯಾಸ ಆದ ಮೇಲೆ ಮುಂದಿನ ಹೆಜ್ಜೆ. ಪ್ರತೀಕಗಳ ಆರಾಧನೆ ಈ ರೀತಿಯೇ. ಜೀವಮಾನ ಪೂರ್ತಿ ಡಬಲ್ ರೂಲ್ಡ್ ನೋಟ್ ಬುಕ್"ನಲ್ಲಿ ಬರೆಯುತ್ತ ಕೂಡುವುದಲ್ಲ. ಮುಂದೆ ಹೆಜ್ಜೆ ಇಡಬೇಕು.
ಸಮುದ್ರದಲ್ಲಿ ಈಜಿ ಗೆದ್ದುಬರುವವರನ್ನು ನಾವು ಕಾಣುತ್ತೇವೆ. ಹಾಗಾದರೆ ನಾವು ಏಕೆ ಸಮುದ್ರಕ್ಕೆ ಹಾರಬಾರದು? ಅವರಿಗೂ ನಮ್ಮಂತೆ ಮೊದಲು ಈಜು ಬರುತ್ತಿರಲಿಲ್ಲ. ಸತತ ಪರಿಶ್ರಮದಿಂದ ಸಣ್ಣದಾಗಿ ಪ್ರಾಂಭ ಮಾಡಿ ಈಗ ಸಮುದ್ರ ಈಜುವ ಹಂತ ತಲುಪಿದ್ದಾರೆ. ಈಜುವ ವಿಷಯದಲ್ಲಿ ಅವರ ಅನುಭವ, ಯೋಗ್ಯತೆ ನಮಗೆ ಸುಲಭವಾಗಿ ಗೊತ್ತಾಗುತ್ತದೆ. ಉಪಾಸನೆಯ ವಿಷಯದಲ್ಲಿ ಉಪಾಸಕರ ನಿಜವಾದ ಯೋಗ್ಯತೆ ನಮಗೆ ಗೊತ್ತಾಗುವುದಿಲ್ಲ. ನಮಗೆ ಅವರ ಯೋಗ್ಯತೆ ಹೇಳಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ನಾವಾಗಿಯೇ ತಿಳಿದುಕೊಳ್ಳುವ ಶಕ್ತಿ ನಮಗಿಲ್ಲ!
*****
ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಮನಸ್ಸು ಬಂದ ತಕ್ಷಣ ವಾಹನ ಹಿಡಿಯುವಹಾಗಿಲ್ಲ. ಮೊದಲು "ಗುರುತಿನ ಚೀಟಿ" ಪಡೆಯಬೇಕು. ಕೇವಲ ಒಂದು "ಆಧಾರ್ ಕಾರ್ಡ್" ಮಾಡಿಸಲು ಪಟ್ಟ ಬವಣೆಗಳನ್ನು ನೆನಪಿಸಿಕೊಳ್ಳಿ. ನಂತರ ಪರವಾನಗಿ ಪಡೆಯಲು ಹಣ ಹೊಂದಿಸಬೇಕು. ಈ ಕೆಲಸಗಳಿಗೇ ಬಹಳ ಪಾಡು ಪಡಬೇಕು. ಅಲ್ಲಿ ತಲುಪಿದ ಮೇಲೆ ಭದ್ರತಾ ಸಿಬ್ಬಂದಿ ನಮ್ಮನ್ನು ತಪಾಸಣೆಗೆ ಒಳಪಡಿಸಿ ಪ್ರಯಾಣಕ್ಕೆ ಯೋಗ್ಯ ಎಂದು ಠಸ್ಸೆ ಒತ್ತಬೇಕು. ನಂತರವಷ್ಟೇ ಪ್ರಯಾಣ.
ಅಂದರೆ ವಿಮಾನ ನಿಲ್ದಾಣ ತಲುಪಲು ವಾಹನ ಹತ್ತುವ ಮುಂಚೆಯೇ ಬಹಳ ಕೆಲಸ ಇದೆ ಎಂದಾಯಿತು. ಅಂತೆಯೇ ಪ್ರತೀಕಗಳ ಆರಾಧನೆಗೆ ಮುನ್ನವೇ ಬಹಳ ತಯಾರಿ ನಡೆಸಬೇಕು. ಮೈ, ಬುದ್ಧಿ ಮತ್ತು ಮನಸುಗಳನ್ನು ಹದ ಮಾಡಬೇಕು. ಮೈ ಬಗ್ಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬುದ್ಧಿಯನ್ನು ಸರಿಯಾದ ದಾರಿಯಲ್ಲಿ ನಡೆವಂತೆ ತಿರುಗಿಸಬೇಕು. ಮಂಗನಂತೆ ಎಗರಾಡುವ ಮನಸ್ಸನ್ನು ಕಟ್ಟಿ ಒಂದೇ ಕಡೆ ಕೇಂದ್ರೀಕರಿಸಬೇಕು. ಇವೆಲ್ಲ ಮೊದಲ ತಯಾರಿಗಳು. ಈ ರೀತಿ ಸಿದ್ಧತೆ ಮಾಡಿಕೊಂಡು ಪ್ರತೀಕಗಳ ಆರಾಧನೆಯಿಂದ ಪ್ರಾರಂಭಿಸಿ ಕ್ರಮವಾಗಿ ಮೆಟ್ಟಿಲುಗಳನ್ನು ಹತ್ತಿ ನಂತರ ಹೆಚ್ಚಿನ ಮತ್ತು ಕಠಿಣ ಆರಾಧನೆ ಬಗ್ಗೆ ಚಿಂತೆ ಮಾಡಬಹುದು.
ಸಾಧನೆಯ ದಾರಿ ಬಲು ಕಠಿಣ. ಒಂದೊಂದಾಗಿ ಮೆಟ್ಟಿಲು ಹತ್ತಬೇಕು. ಒಟ್ಟು ಒಂದು ಸಾವಿರ ಮೆಟ್ಟಿಲು ಹತ್ತಬೇಕು ಎನ್ನೋಣ. ಒಂದು ಜೀವಮಾನದಲ್ಲಿ ಅಷ್ಟು ಮೆಟ್ಟಿಲು ಒಟ್ಟಿಗೆ ಹತ್ತಲು ಸಾಧ್ಯವಾಗದಿರಬಹುದು. ಸಾಧ್ಯವಾಗದಿರಬಹುದು ಏನು? ಸಾಧ್ಯವಾಗುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ. ಹಾಗಿದ್ದರೆ ಏನು ಮಾಡುವುದು? ಇದು ಎಂದಿಗೂ ಆಗದ ಕೆಲಸ. ವೃಥಾ ತೊಂದರೆ ಯಾಕೆ ಎಂದು ಬಿಡಬಹುದೇ? ನಮ್ಮ ಗ್ರಂಥಗಳ ಸೂಕ್ಷ್ಮ ಅಧ್ಯಯನದಿಂದ ಪರಿಹಾರ ತಿಳಿಯುತ್ತದೆ. ಪರಮತ್ಮನು ಬಹಳ ಕರುಣಾಳು. ಸಾಧನೆಯ ಒಂದು ಕಣವೂ ವ್ಯರ್ಥವಾಗುವುದಿಲ್ಲ, ನಮ್ಮ ಖಾತೆಗೆ ಜಮಾ ಆಗುತ್ತಿರುತ್ತದೆ,
ಒಬ್ಬ ಪ್ರೌಢ ಶಾಲೆ ವಿದ್ಯಾಭ್ಯಾಸದ ನಂತರ ಓದು ಬಿಟ್ಟ. ಬೇರೇನೋ ಮಾಡಲು ಪ್ರಾರಂಭಿಸಿದ. ಮತ್ತೆ ಸ್ವಲ್ಪ ದಿನದ ಮೇಲೆ ಓದು ಮುಂದುವರೆಸಬೇಕು ಎನಿಸಿತು. ಅವನು ಮತ್ತೆ ಪ್ರಾಥಮಿಕ ಶಾಲೆಗೇ ಹೋಗಬೇಕಾಗಿಲ್ಲ. ಎಲ್ಲಿ ಓದು ನಿಲ್ಲಿಸಿದ್ದನೋ ಅಲ್ಲಿಂದ ಮುಂದೆ ಓದಬಹುದು. ಪರಮಾತ್ಮನ ವ್ಯವಸ್ಥೆಯೂ ಹಾಗೆ. ಯಾವ ಮೆಟ್ಟಿಲಿನಲ್ಲಿ ನಿಂತೆವೋ, ಮುಂದಿನ ಜನ್ಮದಲ್ಲಿ ಆ ಮೆಟ್ಟಿಲಿನ ಬಳಿಯೇ ಬಿಡುತ್ತಾನೆ. ಯಾವುದೋ ಒಂದು ರೀತಿಯಲ್ಲಿ ಹಿಂದಿನ ಸ್ಮರಣೆ ಕೊಡುತ್ತಾನೆ. ಹುಟ್ಟಿದ ಆರೇಳು ವರ್ಷಕ್ಕೇ ಕೆಲವರು ಸೊಗಸಾಗಿ ಸಂಗೀತಗಾರರಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಬಾಕಿ ಮಕ್ಕಳು ಅನೇಕ ವರ್ಷ ಶ್ರಮಪಟ್ಟು ಕಲಿಯುವಷ್ಟನ್ನು ಸ್ವಲ್ಪ ಕಾಲದಲ್ಲಿಯೇ ಕಲಿಯುವ ಮಕ್ಕಳಂತೆ ಇದು. ಆದರೆ ಪ್ರಬಲ ನಂಬಿಕೆ ಬೇಕು. ಇಲ್ಲದಿದ್ದರೆ ಅತಂತ್ರ ಪರಿಸ್ಥಿತಿಯೇ!
*****
ಪ್ರತೀಕಗಳು ಹೇಗಿರಬೇಕು? ಇದು ಮುಂದಿನ ಪ್ರಶ್ನೆ. ಅದು ದೇವಾಲಯದ ಮೂರ್ತಿ ಇರಬಹುದು. ಲೋಹದ ಪ್ರತಿಮೆ ಆಗಬಹುದು. ಒಂದು ಫೋಟೋ ಸಹ ಆಗಬಹುದು. ಗೋವು, ಆಶ್ವತ್ಥ ಅಥವಾ ಔದುಂಬರ (ಅರಳಿ ಅಥವಾ ಅತ್ತಿ) ಮರವಾಗಬಹುದು. ತುಳಸಿಯ ಅಥವಾ ಮತ್ತಾವುದೋ ವೃಂದಾವನ ಇರಬಹುದು. ಆದರೆ ನಾವು ನಡೆಸುವ ಆರಾಧನೆ ಆ ಜಡ ವಸ್ತುವಿಗೋ ಅಥವಾ ಸ್ಥಿರ ವೃಕ್ಷಕ್ಕೋ ಮಾತ್ರವಲ್ಲ, ಅವುಗಳಲ್ಲಿ ಅಂತರ್ಯಾಮಿಯಾಗಿ ಇರುವ ಆ ಪರಮಾತ್ಮನಿಗೆ ಎನ್ನುವ ಪ್ರಜ್ಞೆ ಮಾತ್ರ ಸದಾ ಇರಬೇಕಾಗುತ್ತದೆ.
ಉಪಾಸನೆಯ ಒಂದು ಮುಖ್ಯ ಅಂಗ ಜಪಾದಿಗಳು. ಸಮಸ್ತ ಜೀವರಾಶಿಗಳಿಗೂ ಪರಮಾತ್ಮನನ್ನು ಆರಾಧಿಸುವ ಹಕ್ಕಿದೆ. ಜಾತಿ, ಜನ್ಮ ಇವುಗಳ ಹಂಗಿಲ್ಲ. ಜ್ಞಾನಿಗಳು ಎಲ್ಲ ವರ್ಗಗಳಿಂದ ಬಂದವರಿದ್ದಾರೆ. ಸುಲಭದ ದಾರಿಗಳೂ ಇವೆ. ಕಠಿಣದ ಹಾದಿಗಳೂ ಇವೆ. ಬೇಕಿದ್ದನ್ನು ಆರಿಸಿಕೊಳ್ಳಬಹುದು. ಒಮ್ಮೆ ಸಾಧನೆಯ ಹಾದಿ ಹಿಡಿದರೆ ಸಾಕು. ಮುಂದಿನ ಸಲಕರಣೆಗಳನ್ನು ಆ ದಯಾಳುವೇ ಒದಗಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ.
ಜಪಾದಿಗಳನ್ನು ಮಾಡುವಾಗ "ಧ್ಯಾನ ಶ್ಲೋಕ" ಉಪಯೋಗಿಸುತ್ತಾರೆ. ಆರಾಧ್ಯ ದೈವವನ್ನು ವರ್ಣಿಸುವ ಪರಿ ಅವು. ಕಣ್ಣ ಮುಂದೆ ಇರುವ ಪ್ರತೀಕಗಳು ಆ ರೀತಿಯೇ ಇರಬೇಕು. ಆರಾಧನೆಯ ನಂತರ ಜಪ ಮಾಡುವಾಗ, ಕಣ್ಣು ಮುಚ್ಚಿ ಕುಳಿತಾಗ ಧ್ಯಾನ ಶ್ಲೋಕದಲ್ಲಿ ವರ್ಣಿತವಾದ ಆಕಾರ ಮನಸ್ಸಿನಲ್ಲಿ ಮೂಡಬೇಕು. ಮೇಲೆ ಕೊಟ್ಟಿರುವ ದೇವಿ ಲಕ್ಷ್ಮಿಯ ಚಿತ್ರವನ್ನೇ ಗಮನಿಸಬಹುದು, ಶ್ರೀ ಸೂಕ್ತದಲ್ಲಿ ಹೇಳಿರುವಂತೆ ಸಾಮಾನ್ಯವಾಗಿ ಪ್ರತಿಮೆ ಅಥವಾ ಫೋಟೋ ಮಾಡುತ್ತಿದ್ದರು. ಈಗ ಚಿತ್ರಕಾರರ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಸೂಕ್ತದಂತೆ ಲಕ್ಷ್ಮಿಯು ಪದ್ಮಾಸನದಲ್ಲಿ ಪದ್ಮದಮೇಲೆ ಕುಳಿತಿರಬೇಕು. ಆನೆಗಳು ಬಂಗಾರದ ಕೊಡಗಳಲ್ಲಿ ನವರತ್ನಗಳನ್ನು ಸುರಿಸುತ್ತಿರಬೇಕು. ಇವೇ ಮುಂತಾದ ಧ್ಯಾನ ಶ್ಲೋಕದ ವಿವರಣೆಯ ರೀತಿಯಲ್ಲಿ ಪ್ರತೀಕ ಮಾಡಿರಬೇಕು.
ಕೆಲವು ವೇಳೆ ಪ್ರತೀಕ ಇಲ್ಲದಿರಬಹುದು. ಆಗ ಧ್ಯಾನ ಶ್ಲೋಕದಂತೆ ಇರುವ ದೇವತೆ ಕಣ್ಣು ಮುಚ್ಚಿ ಕುಳಿತಾಗ ಸ್ಫುರಿಸುವಂತೆ ಅಭ್ಯಾಸದಿಂದ ಕಲಿಯಬೇಕಾಗುತ್ತದೆ. ಪ್ರತೀಕಗಳಿಗೆ ಪೂಜೆ ಸಲ್ಲಿಸುವಾಗ ಜಡ ಅಥವಾ ಸ್ಥಿರ ಪ್ರತೀಕದಲ್ಲಿ ಅಂತರ್ಯಾಮಿಯಾದ ದೇವತೆ ಅಥವಾ ಪರಮಾತ್ಮನ ಉಪಸ್ಥಿತಿ ನೆನೆಯುತ್ತಿದ್ದರೆ ಧ್ಯಾನ ಕಾಲದಲ್ಲಿ ಆ ಆಕೃತಿ ಮನಸ್ಸಿನಲ್ಲಿ ಸ್ಫುರಿಸುತ್ತದೆ.
ಕೆಲವರು ದೇವಾಲಯಗಳಿಗೆ ಹೋದಾಗ ವಿಗ್ರಹಗಳ ಮುಂದೆ ಕಣ್ಣು ಮುಚ್ಚಿ ಕೂಡುತ್ತಾರೆ. ಬಹಳ ಶ್ರಮಪಟ್ಟು ಆ ಮೂರ್ತಿ ನೋಡಲು ಹೋಗಿ ಅಲ್ಲಿ ಇರುವ ಸಾಕ್ಷಾತ್ ಮೂರ್ತಿಯನ್ನು ನೋಡದೆ ಕಣ್ಣು ಮುಚ್ಚಿ ಕೂಡುವುದು ಎಷ್ಟು ಸರಿ? ಸಾಧನೆ ಹೆಚ್ಚಿದಂತೆ ಮನಸ್ಸಿನಲ್ಲಿ ಮೂಡುವ ಆಕಾರ ಸ್ಫುಟವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಅದಕ್ಕೆ ಸತತ ಪ್ರಯತ್ನ ಬೇಕು.
*****
ಮೇಲಿನ ಹಂತ ತಲುಪಿದ ಮೇಲೆ ಪ್ರತೀಕಗಳ ಪೂಜೆ ನಿಲ್ಲಿಸಬೇಕೇ? ಇದೊಂದು ದಿವ್ಯವಾದ ಪ್ರಶ್ನೆ. ದೊಡ್ಡ ದೊಡ್ಡ ಸಭಾಭವನಗಳಲ್ಲಿ ಕಚೇರಿ ನೀಡುವ ಸಂಗೀತ ವಿದ್ವಾಂಸರು ಪ್ರತಿದಿನ "ರಿಯಾಝ್" ಮಾಡುವುದನ್ನು ನಿಲ್ಲಿಸುತ್ತಾರೆಯೇ? ಭಾರಿ ಕ್ರೀಡಾಂಗಣಗಳಲ್ಲಿ ಭರ್ಜರಿ ಶತಕ ಬಾರಿಸುವ ಕ್ರೀಡಾಪಟು "ನೆಟ್ ಪ್ರಾಕ್ಟೀಸ್" ಬಿಟ್ಟು ಬಿಡುತ್ತಾನೆಯೇ? ವ್ಯಾಪ್ತ ಉಪಾಸನೆ ಮಾಡುವ ಸ್ಥಿತಿ ತಲುಪಿದ ಸಾಧಕರೂ ಪ್ರತೀಕಗಳ ಆರಾಧನೆ ನಿಲ್ಲಿಸುವುದಿಲ್ಲ. ಸಂಚಾರದಲ್ಲಿರುವ ಅಧಿಕಾರಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವ ಅಗತ್ಯವಿಲ್ಲ. ಆದರೆ ಪ್ರಧಾನ ಕಚೇರಿಯಲ್ಲಿ ಇದ್ದಾಗ ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಾನೆ!
ಸಾಧನೆಯ ಯಾವ ಸ್ಥಿತಿಯಲ್ಲಿ ಸಾಧಕನಿದ್ದರೂ ಮತೊಬ್ಬರ ಸಾಧನೆಯ ರೀತಿಯನ್ನು ಹೀಯಾಳಿಸಬಾರದು. ಅವರವರ ಸಾಧನೆ, ರೀತಿ ನೀತಿಗಳು ಅವರವರಿಗೆ. ಪ್ರತಿಯೊಬ್ಬರೂ ಅವರ ಭಾರವನ್ನು ಅವರೇ ಹೊರಬೇಕು. ಅವರಾಗಿ ಕೇಳಿದರೆ, ಸಾಧ್ಯವಿದ್ದರೆ, ಯೋಗ್ಯತೆಯಿದ್ದರೆ, ಸಹಾಯ ಮಾಡಬಹುದು. ಅಷ್ಟೇ.
All these things are known to every one but to find exemplary thill in presenting all theskills systematically is an art and also skill in our presenting it self is yoga
ReplyDeleteYoga karmasukaushalam as said inGeeta
ಪ್ರತೀಕೆಯ ವಿವರಗಳು ಚನ್ನಾಗಿ ಮೂಡಿ ಬಂದಿವೆ. ನನ್ನ ತಲ್ಮೆಯಾದ ಅಭಿಪ್ರಾಯವೇನೆಂದರೆ ಕಷ್ಟ ಕಾಲದಲ್ಲಿ ಬೇರೆಯವರೋಡನೆ ನನ್ನ ವೆತೆಯನ್ನು ಹಂಚಿ ಕೊಂಡಲ್ಲಿ ನನಗೆ ಸ್ವಲ್ಪ ಶಾಂತಿ ದೊರಕುತ್ತದೆ ಎಂಬುದೇನೋ ನಿಜ ಸ್ವಾಮಿ
ReplyDeleteತುಂಬಾ ಚೆನ್ನಾಗಿ ಮೂಡಿಬಂದಿದೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡವರು ಹೇಳಿದಂತೆ ಆತ/ಆಕೆ ನಿರಾಕಾರಿ, ನಿರ್ಗುಣಿ. ಆದರೆ ಅದರ ಅನುಭವ ಪಡೆಯಲು ಪ್ರತೀಕ ಗಳು ವಿಮಾನ ಮಾರ್ಗದಂತೆ ಸಹಕಾರಿ. ಸರ್ವ ಶಕ್ತನಾದ ಭಗವಂತನು ಭಕ್ತರು ಆರಾಧಿಸಿದ ರೂಪದಲ್ಲಿ ಕಾಣಿಸಿಕೊಳ್ಳ ಬಲ್ಲ.
ReplyDeleteWonderful article Keshava Murthy Sir,.
ReplyDeleteಶಿಸ್ತಿನ ಜೀವನಕ್ಕೆ ಅತ್ಯಂತ ಅವಶ್ಯಕವಾದ ಅಂಶಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ವಿವರಿಸಿದ್ದೀರಿ. ತಿರುಪತಿಗೆ ಹೋಗಿ ತಿಮ್ಮಪ್ಪ ನ ದರ್ಶನ ಅನುಭವಿಸದೆ ಕಣ್ಣು ಮುಚ್ಚಿ ನಮಸ್ಕರಿಸಿದರೆ, ಏನು ಫಲ?. ಪ್ರತೀಕಗಳನ್ನು ಚನ್ನಾಗಿ ಅರ್ಥ ಮಾಡಿಕೊಂಡು.
ದ್ರವ್ಯಗಳು.
CR Ramesh babu
ಶಿಸ್ತಿನ ಜೀವನಕ್ಕೆ ಅತ್ಯಂತ ಅವಶ್ಯಕವಾದ ಅಂಶಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ವಿವರಿಸಿದ್ದೀರಿ.
ReplyDeleteThis article made me to think of so many deep rooted spiritual matters as I have experienced some by myself. More times I read, each time my knowledge on these matters expand. Thanks Keshav.
ReplyDeleteUR……
Good article to read, know and understand.
ReplyDelete