Monday, December 11, 2023

ನಿರ್ಗುಣ, ನಿರಾಕಾರ - ಸಗುಣ, ಸಾಕಾರ





ನಮ್ಮ ದೇಶ ಅನೇಕ ಕಾರಣಗಳಿಂದ "ಅನನ್ಯ". ಅನನ್ಯ ಅಂದರೆ ಏನು? ಇಂಗ್ಲಿಷ್ ಭಾಷೆಯಲ್ಲಿ ಸುಲಭವಾಗಿ ಯುನಿಕ್ (Unique) ಎಂದು ಹೇಳಬಹುದು. ಅನನ್ಯ ಅಂದರೆ ಅನ್ಯರಿಲ್ಲ. ಅಂದರೆ, ಈ ರೀತಿ ಮತ್ತೊಂದಿಲ್ಲ ಅಥವಾ ಮತ್ತೊಬ್ಬರಿಲ್ಲ. ಈ ವಸ್ತು ಅಥವಾ ವ್ಯಕ್ತಿಗೆ ಹೋಲಿಸಲು ಮತ್ತೊಂದು ವಸ್ತು ಅಥವಾ ವ್ಯಕ್ತಿ ಸಿಗುವುದಿಲ್ಲ. 

ನಮ್ಮ ದೇಶ ಅನನ್ಯವಾಗಿರುವದಕ್ಕೆ ಅನೇಕ ಕಾರಣಗಳು ಇವೆ. ಅವುಗಳಲ್ಲಿ ದಿವ್ಯ ಶಕ್ತಿಯ ಆರಾಧನೆಗೆ ಬಳಸುವ ದಾರಿಗಳೂ, ನಂಬಿಕೆಗಳೂ ಒಂದು ಬಹಳ ಮುಖ್ಯ ಕಾರಣ. ನಿರೀಶ್ವರವಾದದಿಂದ ಹಿಡಿದು, ನಿರ್ಗುಣ-ನಿರಾಕಾರ ಎನ್ನುವುದನ್ನು ದಾಟಿ, ಸದ್ಗುಣ-ಸಾಕಾರ ಅನ್ನುವವರೆಗೆ ನಂಬಿ ಆರಾಧಿಸುವ ಜನಗಳು ಇಲ್ಲುಂಟು. 

ದಕ್ಷಿಣ ಭಾರತದ, ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿರುವ "ಚಿದಂಬರಂ" ನಂಬಿದವರಿಗೆ ಅತ್ಯಂತ ಪವಿತ್ರ ಯಾತ್ರಾ ಸ್ಥಳ. ಬಂಗಾಲ ಕೊಲ್ಲಿಯ ಸಮೀಪದಲ್ಲಿರುವ ಕೇಂದ್ರ. ಅನೇಕ ಕಾರಣಗಳಿಂದ ಇಲ್ಲಿನ ನಟರಾಜ ದೇವಾಲಯ ಬಹು ಪ್ರಸಿದ್ಧವಾಗಿದೆ. ಚಿದಂಬರಂ ವಿಷಯದಲ್ಲಿ ಬಹಳ ಸ್ಥಳ ವಿಶೇಷಗಳನ್ನು ಹೇಳುತ್ತಾರೆ. ಭೌಗೋಳಿಕವಾಗಿ, ಚಾರಿತ್ರಿಕವಾಗಿ, ವೈದಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈ ಸ್ಥಳ ಬಹಳ ಮಹತ್ವವನ್ನು ಪಡೆದಿದೆ. ಸಂಗೀತ ಮತ್ತು ನೃತ್ಯ ಕಲಾವಿದರಿಗಂತೂ ಇದು ಬಹು ದೊಡ್ಡ ಕ್ಷೇತ್ರ. ವರ್ಷಪೂರ್ತಿ ಇಲ್ಲಿ ಸಂಗೀತ ಮತ್ತು ನೃತ್ಯ ಕಲಾವಿದರು ದೇಶದ ಬೇರೆ ಬೇರೆ ಭಾಗಗಳಿಂದ ಬಂದು ನಟರಾಜನನ್ನು ಆರಾಧಿಸಿ ತಮ್ಮ ಕಲಾಸೇವೆಯನ್ನು ನಟರಾಜನಿಗೆ ಸಮರ್ಪಿಸುತ್ತಾರೆ. 

"ಚಿದಂಬರ ರಹಸ್ಯ" ಎನ್ನುವುದು ಒಂದು ನಾಣ್ನುಡಿಯೇ ಆಗಿಹೋಗಿದೆ. ಯಾರಿಗೂ ಅರ್ಥವಾಗದೇ ಇರುವ ಕಗ್ಗಂಟಾದ ವಿಷಯವನ್ನು "ಅದೊಂದು ಚಿದಂಬರ ರಹಸ್ಯ" ಎಂದು ಹೇಳುವುದು ವಾಡಿಕೆಯಾಗಿಹೋಗಿದೆ. ನಟರಾಜ ದೇವಾಲಯದ ಗರ್ಭ ಗುಡಿಯ ದ್ವಾರದ ಪಕ್ಕದಲ್ಲಿ ಒಂದು ವಿಶೇಷ ಸ್ಥಳವಿದೆ. ದೇವಾಲಯದ ಗೋಡೆಯಲ್ಲಿರುವ ಈ ಸ್ಥಳವನ್ನು ಒಂದು ವಸ್ತ್ರದ ತೆರೆಯಿಂದ ಯಾವಾಗಲೂ ಮುಚ್ಚಿರುತ್ತಾರೆ. ವಿಶೇಷ ಪೂಜೆಯ ಸಂದರ್ಭದಲ್ಲಿ ಮಾತ್ರ ಅರ್ಚಕರು ಈ ತೆರೆಯನ್ನು ಸರಿಸಿ ಮಂಗಳಾರತಿ ಮಾಡುತ್ತಾರೆ. ಭಕ್ತ ವೃಂದ ಈ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಮಂಗಳಾರತಿ ಆದ ಸ್ವಲ್ಪ ಸಮಯಕ್ಕೆ ಅರ್ಚಕರು ಮತ್ತೆ ತೆರೆಯಿಂದ ಆ ಜಾಗವನ್ನು ಮುಚ್ಚಿಬಿಡುತ್ತಾರೆ. 

ತೆರೆ ಸರಿಸಿದ ಸಮಯದಲ್ಲಿ ಅಲ್ಲಿ ನೋಡಿದರೆ ಏನೂ ಕಾಣುವುದಿಲ್ಲ. ವಿಗ್ರಹವಾಗಲಿ ಅಥವಾ ಚಿತ್ರವಾಗಲಿ ಅಲ್ಲಿಲ್ಲ. ತೀವ್ರವಾಗಿ ಹತ್ತಿರದಿಂದ ಗಮನಿಸಿದರೆ ಬಂಗಾರದ ಎಲೆಗಳನ್ನು ಕಾಣಬಹುದು. ಬಿಲ್ವ ಪತ್ರೆಯ ರೀತಿಯ ಎಲೆಗಳು. ತೆರೆಯ ಹಿಂದೆ ಶೂನ್ಯ. ಈ ತೆರೆಯನ್ನು ಮಾಯೆಗೆ ಹೋಲಿಸುತ್ತಾರೆ. ಏನೂ ಕಾಣದ ಈ ಸ್ಥಳದಲ್ಲಿ ಶಿವ-ಪಾರ್ವತಿ ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಜ್ಞಾನಿಗಳಿಗೆ ಈ ಏನೂ ಇಲ್ಲದ, ಏನೂ ಕಾಣದ ಸ್ಥಳದಲ್ಲಿ ಶಿವ ಪಾರ್ವತಿಯರ ದರ್ಶನ ಆಗುತ್ತದೆ ಎಂದು ನಂಬಿಕೆ. ಇದೇ "ಚಿದಂಬರ ರಹಸ್ಯ". ಏನೂ ಇಲ್ಲದ ಶೂನ್ಯ. ಅದರಲ್ಲಿ ಸಾಧಕರು ಪರಮಾತ್ಮನನ್ನು ಕಾಣುತ್ತಾರೆ. 
*****

ಇಡೀ ವಿಶ್ವದ ಸೃಷ್ಟಿಗೆ ಮತ್ತು ನಿರ್ವಹಣೆಗೆ ಏನಾದರೂ ಕಚ್ಚಾವಸ್ತು (rawmaterial) ಮತ್ತು ಸಾಧನಗಳು ಬೇಕಲ್ಲ. ಅವು ಐದು ಬಗೆ ಎಂದು ಸಿದ್ಧಾಂತಗಳು ಹೇಳುತ್ತವೆ. ಒಟ್ಟಾಗಿ ಇವನ್ನೇ "ಪಂಚ ಭೂತಗಳು" ಎನ್ನುತ್ತೇವೆ. ಮೊದಲನೆಯದು ಮಣ್ಣು ಅಥವಾ ಪೃಥ್ವಿ. ಅದರ ಜೊತೆಗೆ ನೀರು ಅಥವಾ ಅಪ್ಪು. ಶಕ್ತಿ ಕೊಡಲು ಬೆಂಕಿ ಅಥವಾ ತೇಜಸ್ಸು. ಸಂವಹನದ ಮಾಧ್ಯಮವಾಗಿ ಗಾಳಿ ಅಥವಾ ವಾಯು. ಕ್ರಿಯೆಗಳಿಗೆ ಜಾಗ ಒದಗಿಸುವ ಸಲುವಾಗಿ ಅವಕಾಶ ಅಥವಾ ಆಕಾಶ. ಆಕಾಶ ಅಂದರೆ ಕೇವಲ ಮೇಲೆ ನೋಡುವುದಲ್ಲ. ಎಲ್ಲ ಕಡೆಯೂ ಚಲನೆಗೆ ಅವಕಾಶ ಕೊಡುವುದೇ ಆಕಾಶ. ನಮ್ಮ ಕೈ, ಕಾಲುಗಳು ಆಡಲು ಆಕಾಶ (Space) ಬೇಕು. ಮನುಷ್ಯ, ಪ್ರಾಣಿಗಳು, ಸಸ್ಯಗಳು ಮತ್ತೆಲ್ಲ ವಸ್ತುಗಳೂ ಈ ಐದು ತತ್ವಗಳಿಂದಲೇ ಕಾರ್ಯ ನಿರ್ವಹಿಸುತ್ತವೆ. 

ಪಂಚಭೂತಗಳಿಂದ ಆದ ಪದಾರ್ಥಗಳಲ್ಲಿ, ಪ್ರಾಣಿಗಳಲ್ಲಿ, ಮನುಷ್ಯರಲ್ಲಿ ಸಹಜವಾಗಿಯೇ ಕೆಲವು ಗುಣಗಳು ವ್ಯಕ್ತವಾಗುತ್ತ್ತವೆ. ಇವುಗಳ ಜೊತೆಗೆ ಜೀವಿಗಳ ಸ್ವರೂಪ ಗುಣವೂ ಸೇರುತ್ತವೆ. ಬೇರೆ ಬೇರೆ ಪ್ರಮಾಣಗಲ್ಲಿ ಈ ಕಚ್ಚಾವಸ್ತುಗಳ ಬೆರಕೆಯಿಂದಾದ ಮತ್ತು ಜೀವಿಗಳ ಸ್ವಭಾವವನ್ನು ಅನುಸರಿಸಿ ಗುಣಗಳು ತೋರಿಸಿಕೊಳ್ಳುತ್ತವೆ. ಒಳ್ಳೆಯ ಗುಣಗಳಿಗೆ ಸತ್ವ ಗುಣ ಎನ್ನುತ್ತಾರೆ. ಕೆಟ್ಟ ಗುಣಗಳಿಗೆ ತಾಮಸ ಗುಣ ಎನ್ನುತ್ತಾರೆ. ಇವೆರಡರ ಮಧ್ಯೆ ಇರುವುವನ್ನು ರಾಜಸ ಗುಣ ಎನ್ನುತ್ತಾರೆ. 

ವಿಶೇಷವೇನೆಂದರೆ, ಎಲ್ಲರಲ್ಲಿಯೂ ಎಲ್ಲ ಮೂರು ಗುಣಗಳೂ ಇರುತ್ತವೆ! ಯಾರೊಬ್ಬರಲ್ಲಿಯೂ ಕೇವಲ ಒಂದೇ ಗುಣ ಪೂರ್ಣವಾಗಿ ತುಂಬಿರುವುದಿಲ್ಲ. ಮೂರರಲ್ಲಿ ಯಾವುದು ಅತಿ ಹೆಚ್ಚು ಪ್ರಮಾಣದಲ್ಲಿ ಇದೆಯೋ ಆ ವ್ಯಕ್ತಿ ಆ ಗುಣಿ (ಗುಣವುಳ್ಳವನು) ಎಂದು ಕರೆಸಿಕೊಳ್ಳುತ್ತಾನೆ. ಸತ್ವ ಗುಣ ಪ್ರಧಾನವಾದವರನ್ನು ಸಾತ್ವಿಕರು ಎನ್ನುತ್ತಾರೆ. ರಾಜಸ ಗುಣ ಪ್ರಧಾನವಾದವರನ್ನು ರಾಜಸರು ಎನ್ನುತ್ತಾರೆ. ತಾಮಸ ಗುಣ ಪ್ರಧಾನವಾದವರನ್ನು ತಾಮಸರು ಎನ್ನುತ್ತಾರೆ. ಇದೇ ಕಾರಣಕ್ಕೆ ಸಾತ್ವಿಕರೂ ಸಹ ಕೆಲವು ವೇಳೆ ಕೋಪಿಷ್ಠರಾಗುವುದು, ಗರ್ವಿತರಾಗುವುದು, ಅಸೂಯಾಪರರಾಗುವುದು ಮುಂತಾದುವನ್ನು ಕಾಣುತ್ತೇವೆ. "ಅಯ್ಯೋ, ಅವರು ಹೀಗೆ ಮಾಡುತ್ತಾರೆ ಅಂದರೆ ನಂಬುವುದು ಕಷ್ಟ" ಎಂದು ಉದ್ಗಾರ ತೆಗೆಯುತ್ತೇವೆ. ತಾಮಸರು ಸಹ ಒಮ್ಮೊಮ್ಮೆ ಸತ್ವ ಗುಣ ತೋರಿಸಿ ಸತ್ಕಾರ್ಯ ಮಾಡುವುದೂ ಉಂಟು. "ಆಹಾ! ಆ ಕಟುಕನಲ್ಲಿಯೂ ಕರುಣೆ ಎಲ್ಲಿಂದ ಬಂತು?" ಎನ್ನುವಂತೆಯೂ ಆಗುತ್ತದೆ. ಒಮ್ಮೊಮ್ಮೆ ಹೀಗೆ, ಒಮ್ಮೊಮ್ಮೆ ಹಾಗೆ ಇರುವವರೂ ಉಂಟು. ಸಜ್ಜನರು ಮತ್ತು ದುರ್ಜನರ ನಡುವೆ ಸಾಮಾನ್ಯರೂ ಕಾಣಸಿಗುವುದು ಈ ಕಾರಣಕ್ಕಾಗಿಯೇ. 

ಹೀಗಿರುವಾಗ, ಪರಮಾತ್ಮನ ವಿಷಯ ಏನು? ಅವನಲ್ಲಿ ಯಾವ ಗುಣ ಪ್ರಧಾನ? ಪರಮಾತ್ಮನು ಪಂಚಭೂತಗಳಿಂದ ಅದವನಲ್ಲ. ಅದರೊಂದಿಗೆ ಅವನು ಸ್ವರೂಪದಿಂದಲೂ ಸ್ವಚ್ಛ, ಶುಭ್ರ. ಆದ್ದರಿಂದ ಅವನು ಈ ಮೂರು ಗುಣಗಳನ್ನೂ ದಾಟಿದವನು. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಅವನಲ್ಲಿ ಈ ಮೂರು ಗುಣಗಳೂ ಇಲ್ಲ. ಆದ್ದರಿಂದ ಅವನು "ನಿರ್ಗುಣ".  ಇದನ್ನೇ "ತ್ರಿಗುಣಾತೀತ" ಎನ್ನುತ್ತಾರೆ. 

*****

ದೂರದಿಂದ ಬರುತ್ತಿರುವ ವ್ಯಕ್ತಿಯ ಬಗ್ಗೆ ಇಲ್ಲಿರುವ ಇಬ್ಬರಲ್ಲಿ ಚರ್ಚೆ ಆಗುತ್ತದೆ. "ಅದೋ, ಕುಮಾರ ಬರುತ್ತಿದ್ದಾನೆ" ಎಂದು ಒಬ್ಬ ಹೇಳುತ್ತಾನೆ. "ಇಲ್ಲ. ಅವನು ಕುಮಾರ ಅಲ್ಲವೇ ಅಲ್ಲ. ಕುಮಾರ ಇನ್ನೂ ಎತ್ತರ ಇದ್ದಾನೆ. ಅಲ್ಲದೆ ಅವನು ಇಷ್ಟು ದಪ್ಪ ಇಲ್ಲ" ಎಂದು ಇನ್ನೊಬ್ಬ ಹೇಳುತ್ತಾನೆ. ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಅವರ ಎತ್ತರ, ಗಾತ್ರ, ರೂಪ, ಬಣ್ಣ ಮುಂತಾದ ಗುಣ ಲಕ್ಷಣಗಳಿಂದ ಗುರುತಿಸುತ್ತೇವೆ. ಕಟ್ಟಡಗಳ ಆಕಾರದಿಂದ ಅವು ಯಾವುವು ಎಂದು ಗುರುತು ಹಚ್ಚುತ್ತೇವೆ. ವಾಹನಗಳ ಆಕಾರದಿಂದ ಅವು ಯಾವ ಕಂಪೆನಿಯ ಉತ್ಪನ್ನ ಎಂದು ತಿಳಿಯುತ್ತೇವೆ.  

ಪರಮಾತ್ಮನನ್ನು ಈ ರೀತಿ ಗುರುತಿಸಬಹುದೇ? ಅವನು ಎತ್ತರವೇ ಅಥವಾ ಕುಳ್ಳೇ? ದಪ್ಪವೇ ಅಥವಾ ಸಣ್ಣವೇ? ಅವನ ಆಕಾರವೇನು? ಗುರುತಿಸುವುದು ಹೇಗೆ? ಈ ಪ್ರಶ್ನೆ ನ್ಯಾಯವೇ.  

ಪರಮಾತ್ಮನು ಎಲ್ಲೆಲ್ಲಿಯೂ ವ್ಯಾಪಿಸಿದ್ದಾನೆ ಎಂದ ಮೇಲೆ ಅವನು ಎಲ್ಲ ಆಕಾರದಲ್ಲೂ ಇದ್ದಾನೆ ಎಂದಾಯಿತು. ಅಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿಗೂ ಇದ್ದಾನೆ. ಯಾವುದೋ ಒಂದು ಅಳತೆಗೆ ಸಿಗುವವನಲ್ಲ ಅವನು. ಆದ್ದರಿಂದ ಅವನನ್ನು ಒಂದು ಆಕಾರಕ್ಕೆ ಸೀಮಿತಗೊಳಿಸಲು ಆಗುವುದಿಲ್ಲ. ಯಾವುದೇ ಒಂದು ಆಕಾರಕ್ಕೆ ಸಿಗದಿರುವುದರಿಂದ ಅವನು "ನಿರಾಕಾರ" ಎಂದು ಅನೇಕ ಸಾಧಕರು ಆರಾಧಿಸುತ್ತಾರೆ. 

ಇದೇ ಕಾರಣಕ್ಕೆ "ಚಿದಂಬರ ರಹಸ್ಯ" ಎನ್ನುವಾಗ ಅಲ್ಲಿ ಏನೂ ಇಲ್ಲ. ಅದೊಂದು ಶೂನ್ಯ. ನಿರ್ದಿಷ್ಟ ಆಕಾರವಿಲ್ಲ ನಿರ್ದಿಷ್ಟ ಗುಣವಿಲ್ಲ. ಎಲ್ಲವನ್ನೂ ದಾಟಿನಿಂತ ಮಹಾಚೇತನ. ಅದರಿಂದ ಅವನು ನಿರ್ಗುಣ, ನಿರಾಕಾರ. ಅನೇಕ ಸಾಧಕರಿಗೆ ಈ ಚಿಂತನೆಯೇ ಉಪಾಸನೆಯ ಸಾಧನೆ. 
*****

ಯಾವುದೋ ಒಂದು ಸಮಾರಂಭಕ್ಕೋ, ಕಾರ್ಯಕ್ರಮಕ್ಕೋ ಬಹಳ ಹಣ ಖರ್ಚಾಗುವುದು. ಅದು ಸರಿಯಾಗಿ ಆಗಲು ಹಣ ಹೊಂದಿಸಬೇಕು. ಕಾರ್ಯಕರ್ತರು ಚಂದಾ ವಸೂಲಿಗೆ ಹೋಗುತ್ತಾರೆ. ಯಾರ ಬಳಿಗೆ ಹೋಗುವುದು? ಈ ಪ್ರಶ್ನೆಗೆ ಉತ್ತರವೇನು? ಹಣವಂತರ ಬಳಿ ಹೋಗಬೇಕು. ಬರೀ ಹಣವಂತರಾದರೆ ಸಾಲದು. ಕೊಡುವ ಮನಸ್ಸೂ ಇರಬೇಕು. ಹಿಂದೆ ಯಾರಿಗಾದರೂ ಕೊಟ್ಟಿದ್ದಾರೆಯೇ ಎಂದು ವಿಚಾರಿಸುತ್ತಾರೆ. ಕೊಡುಗೈ ದಾನಿಗಳಾದರೆ ಇನ್ನೂ ಒಳ್ಳೆಯದು. ಅಂತಹವರ ಬಳಿಯೇ ಹೋಗಬೇಕು. ಅವನೇ ಇನ್ನೊಬ್ಬರ ಹಿಂದೆ ಕಾಸಿಗೆ ಓಡಾಡುವಾಗ ನಮಗೇನು ಚಂದಾ ಕೊಟ್ಟಾನು? ಧನಿಕರ ಬಳಿ ಹಣ ಕೇಳಬೇಕು. ತೆಂಗಿನಕಾಯಿ ತೋಟದ ಮಾಲೀಕನ ಬಳಿ ತೆಂಗಿನಕಾಯಿ ಕೇಳಬೇಕು. ವಿದ್ಯುತ್ ಕೆಲಸಗಳ ಗುತ್ತಿಗೆದಾರನ ಹತ್ತಿರ ದೀಪಾಲಂಕಾರ ವ್ಯವಸ್ಥೆ ಮಾಡುವಂತೆ ಕೇಳಬೇಕು. ಕಬ್ಬಿಣದ ಅಂಗಡಿಯಲ್ಲಿ ಹೂವು ಸಿಕ್ಕುವುದಿಲ್ಲ. ಅಕ್ಕಿ ಗಿರಣಿಯಲ್ಲಿ ಉಪ್ಪು ಸಿಕ್ಕುವುದಿಲ್ಲ. ಇದೆಲ್ಲದರ ತಾತ್ಪರ್ಯವೇನು? ಯಾರ ಬಳಿ ಯಾವ ವಸ್ತು ಅಧಿಕವಾಗಿದೆಯೋ ಅದನ್ನು ಕೇಳಬೇಕು. ಏನೂ ಇಲ್ಲದವನ ಬಳಿ ಏನನ್ನೂ ಕೇಳಿ ಪ್ರಯೋಜನವಿಲ್ಲ. ತನ್ನಲ್ಲಿ ಇಲ್ಲದ್ದನ್ನು ಅವನು ಹೇಗೆ ಕೊಟ್ಟಾನು?

ಕೆಲವು ಸಾಧಕರು ಹೀಗೆ ಚಿಂತಿಸುತ್ತಾರೆ. ಪರಮಾತ್ಮ ನಿರ್ಗುಣನಾದರೆ ಏನನ್ನು ಕೊಟ್ಟಾನು? ಅಂತಹವನನ್ನು ಆರಾಧಿಸಿ ಪ್ರಯೋಜನವೇನು? "ಮಾರೇ ತೋ ಹಾಥಿ ಕೋ ಮಾರನಾ, ಲೂಟೇ ತೋ  ಖಜಾನೆ  ಕೋ ಲೂಟಿನಾ!" ಎಂದೊಂದು ಉರ್ದುವಿನಲ್ಲಿ ಗಾದೆ. ಕೊಂದರೆ ಆನೆಯನ್ನು ಕೊಲ್ಲಬೇಕು. ಇಲಿಯನ್ನು ಕೊಂದೇನು ಪ್ರಯೋಜನ? ಕಳ್ಳತನ ಮಾಡಲೇಬೇಕಾದರೆ ಖಜಾನೆಯನ್ನೇ ಲೂಟಿ ಹೊಡೆಯಬೇಕು. ಸಣ್ಣ ಪುಟ್ಟ ಕಿಸೆ ಕತ್ತರಿಸಿ ಏನು ಲಾಭ? ಆರಾಧಿಸಿ, ಸಾಕ್ಷಾತ್ಕರಿಸಿಕೊಂಡು ಬೇಡುವುದಾದರೆ ಎಲ್ಲ ಗುಣಗಳ ಗಣಿಯಾಗಿರುವ ಎಲ್ಲವನ್ನೂ ಕೊಡುವ ಶಕ್ತಿ ಇರುವ ಕಲ್ಪನೆಯ ಪರಮಾತ್ಮನ ರೂಪವನ್ನೇ  ಬೇಡಬೇಕು. 

ಮಹಾತ್ಮರಾದ ಕುಲಶೇಖರ ಆಳ್ವಾರರು ತಮ್ಮ "ಮುಕುಂದಮಾಲಾ ಸ್ತೋತ್ರ" ಕೃತಿಯಲ್ಲಿ ಹೇಳುತ್ತಾರೆ:

ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪತಯೇ ಚೇತಸಾ ಸೇವ್ಯೇ 
ಸ್ವಸ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ 
ಯತ್ಕಂಚಿತ್ ಪುರುಷಾಧಮಮ್ ಕತಿಪಯ ಗ್ರಾಮೇಶಮಲ್ಪಾರ್ಥದಂ  
ಸೇವಾಯೈ ಮೃಗಯಾಮಹೇ, ನರಮಹೋ ಮೂಕಾ ವರಾಕಾ ವಯಮ್ 

ಯಾರಲ್ಲಿ ಬೇಡಿದರೂ ತಮ್ಮಲ್ಲಿರುವುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಕೊಡಬಲ್ಲರು. ಅವರಬಳಿ ಇರುವುದೇ ಅಲ್ಪ. ಅಂತಹವರ ಹತ್ತಿರ ಕೇಳಿ ಪ್ರಯೋಜನವೇನು? ಆ ಪರಮಪುರುಷನಲ್ಲಿ ಎಲ್ಲವೂ ಇದೆ. ಅಷ್ಟೇ ಅಲ್ಲ. ಅವನು ಏನನ್ನು ಕೇಳಿದರೂ ಕೊಡಬಲ್ಲ ಸರ್ವಶಕ್ತನು. ಅದಕ್ಕಿಂತ ಹೆಚ್ಚಾಗಿ ಭಕ್ತರು ಕೇಳಿದರೆ ತನ್ನ ಸ್ಥಾನವನ್ನೇ ಕೊಡಲೂ ಹಿಂಜರಿಯನು! (ನಿಜವಾದ ಭಕ್ತನು ಅದನ್ನು ಕೇಳುವವನೂ ಅಲ್ಲ; ಅವನು ಕೊಡುವ ಪ್ರಮೇಯವೂ ಬರುವುದಿಲ್ಲ. ಅದು ಬೇರೆ ಮಾತು.) ತನ್ನ ಸ್ಥಳವನ್ನೇ ಬಿಟ್ಟುಕೊಡಲು ತಯಾರಿರುವ ಅವನನ್ನು ಬಿಟ್ಟು ಬೇರೆಯವರ ಬಳಿ ಕೈಯ್ಯೊಡ್ಡುವ ಮಂದಿ ಮಾತುಬಾರದ ಹಂದಿಗಳಂತೆ, ಅನ್ನುತ್ತಾರೆ ಕುಲಶೇಖರ ಅಲ್ವಾರರು. "ಬೇಡಿದರೆ ಎನ್ನೊಡಯನ ಬೇಡುವೆ, ಒಡೆಯಗೆ ಒಡಲನು ತೋರುತ ಎನ್ನ ಬಡತನ ಬಿನ್ನಹ ಮಾಡುವೆ" ಎನ್ನುತ್ತಾರೆ ಶ್ರೀ ಪುರಂದರದಾಸರು. ಇಲ್ಲಿ ಬಡತನ ಎಂದರೆ ಕೇವಲ ಹಣದ ದಾರಿದ್ರ್ಯವಲ್ಲ. ಗುಣಗಳ ಬಡತನ. ನವಕೋಟಿ ನಾರಾಯಣ ಎಂಬ ಬಿರುದು ಹೊತ್ತು ಸಕಲ ಸಂಪತ್ತಿನ ಮೇಲೆ ಒಂದು ತುಳಸೀದಳ ಹಾಕಿ ಹಿಂದಿರುಗಿ ನೋಡದೆ ಹೊರಟವರಿಗೆ ಹಣದ ಹಂಗೇನು?

ಈ ರೀತಿ ಆರಾಧಿಸುವ ಸಾಧಕನಿಗೆ ಆ ಪರಮಪುರುಷ ಎಲ್ಲ ಗುಣಗಳ ಗಣಿ. ಆದ್ದರಿಂದ ಅವನು ಸಗುಣಿ, ಎಲ್ಲ ಗುಣಗಳನ್ನೂ ಹೊಂದಿರುವವನು. ಅವನ ಲೆಕ್ಕದಲ್ಲಿ ಸತ್ವ, ರಜಸ್ಸು ಮತ್ತು ತಮಸ್ಸು ಗುಣಗಳಲ್ಲ. ಅವನಿಗೆ ಅವುಗಳ ಲೇಪವಿಲ್ಲ. 

ಎಲ್ಲ ಕಡೆಯಲ್ಲಿಯೂ ವ್ಯಾಪ್ತನಾದವನು ನಿರಾಕಾರ ಹೇಗಾದಾನು? ಕಂಡು ಕೇಳುವ ಎಲ್ಲ ಆಕಾರಗಳೂ ಅವನನ್ನೇ ನಿರ್ದೇಶಿಸುತ್ತವೆ. ಆದ್ದರಿಂದ ಅವನು ಸಾಕಾರನೇ. ಸಾಕಾರ ಮಾತ್ರವಲ್ಲ. ಎಲ್ಲ ಆಕಾರಗಳೂ ಅವನೇ! "ಸಕಲ ನಿಗಮಗೇಯಂ, ಸಕಲ ಶಬ್ಧಾಭಿದೇಯಂ". ಎಲ್ಲ ರೂಪಗಳೂ ಎಲ್ಲ ಶಬ್ದಗಳೂ ಅವನೇ. 

ಈ ವಿಚಾರಧಾರೆಗೆ ಅವನು ಸಗುಣ, ಸಾಕಾರ. 
***** 

ಈ ಚಿಂತನೆಯ ಹಿಂದೆ ಹೋಗುವ ಸಾಧಕನಿಗೆ ಆ ಸಗುಣ, ಸಾಕಾರ ಪರಮಾತ್ಮನಲ್ಲಿ ಎಷ್ಟು ಗುಣಗಳಿವೆ ಎಂದು ತಿಳಿಯಬೇಕು? ಎಣಿಸಲಾಗದಷ್ಟು ಗುಣಗಳು! ನಾವು ನಮ್ಮ ತಿಳುವಳಿಕೆಯಲ್ಲಿ ಎಣಿಸಬಹುದಾದ ಎಲ್ಲ ಗುಣಗಳು. ಅದರಾಚೆ ಇರುವ ಗುಣಗಳೂ ಕೂಡ. ನೀವು ಯಾವ ಗುಣವನ್ನಾದರೂ ಶೋಧಿಸಿ ನೋಡಿ. ಅದು ಅವನಲ್ಲಿ ಇದೆ. ಇನ್ನೊಬ್ಬರು ನಮಗೆ ತಿಳಿಯದ ಗುಣವೊಂದನ್ನು ಹೇಳಲಿ. ಅದೂ ಕೂಡ ಅವನಲ್ಲಿ ಇದೆ. ಒಟ್ಟಿನಲ್ಲಿ ಅನಂತ ಗುಣಗಳು. ಇಂತಹ ಪ್ರತಿಯೊಂದು ಗುಣದ ವ್ಯಾಪ್ತಿಯೂ ಅನಂತ. ಗ್ರಹಿಸಲು ಕಷ್ಟ. ಅಲ್ಲವೇ? 

ಆದ್ದರಿಂದ ಅವನು ಸಗುಣ ಮಾತ್ರವಲ್ಲ. ಗುಣಸಮುದ್ರ. ಗುಣಸಾಗರ. ಗುಣಾರ್ಣವ. 

ಒಂದು ದಿನ ನಲ್ಲಿಯಲ್ಲಿ ನೀರು ಬರುವುದಿಲ್ಲ ಎಂದು ನಗರಸಭೆ ಸಾರಿತು. "ಎಲ್ಲ ಪಾತ್ರೆಗಲ್ಲಿ ಇಂದು ನೀರು ಶೇಖರಿಸಿ. ನಾಳೆಗೆ ಬೇಕಾಗುತ್ತದೆ" ಎಂದು ಮನೆಯ ಹಿರಿಯರು ಹೇಳಿದರು. ಕಿರಿಯರು ಅದರಂತೆ ಮಾಡಿದರು. ಈಗ ಮನೆಯಲ್ಲಿ ಇರುವ ಎಲ್ಲ ಪಾತ್ರೆಯೂ ಜಲಪೂರ್ಣ. ಎಲ್ಲ ಪಾತ್ರೆಯಲ್ಲೂ ಪೂರ್ತಿ ನೀರು ತುಂಬಿ ಆಯಿತು. 

ಯಾವುದೇ ಪಾತ್ರೆ ತೆಗೆದುಕೊಳ್ಳಿ. ಅದರಲ್ಲಿ ಪೂರ್ತಿ ನೀರು ತುಂಬಿದೆ. ಆದರೆ ಆ ತುಂಬಿದ ಪಾತ್ರೆಯಲ್ಲಿ ಕೆಲವು ಹನಿ ನೀರು ಹಾಕಬಹುದೋ? ಹಾಕಬಹುದು. ಹಾಗಿದ್ದರೆ ಸಾಮಾನ್ಯ ಅರ್ಥದಲ್ಲಿ ಪೂರ್ಣ ಎಂದ ಪೂರ್ಣವೂ ಅಪೂರ್ಣ ಎಂದಾಯಿತು! ಚೀಲದ ತುಂಬಾ ತೆಂಗಿನಕಾಯಿ ತುಂಬಿದೆ. ಇನ್ನೊಂದು ಕಾಯಿ ಹಾಕಲಾಗದು. ಆದರೆ ಸ್ವಲ್ಪ ರವೆ  ಹಾಕಬಹುದು!

ಪರಮಾತ್ಮನಲ್ಲಿ ಹೀಗಿಲ್ಲ. ಪೂರ್ಣ ಎಂದರೆ ಪೂರ್ಣವೇ. ಇನ್ನೊಂದು ತೊಟ್ಟು ನೀರು ಹಾಕಲಾಗದ ನೀರು ತುಂಬಿದ ಪಾತ್ರೆಯಂತೆ. ಅವನಲ್ಲಿ ಪೂರ್ಣವೆಂದರೆ ನಿಜವಾಗಿಯೂ, ಹೇಗೆ ನೋಡಿದರೂ ಪೂರ್ಣ. 

ಅವನು ಗುಣಾರ್ಣವ ಮಾತ್ರವಲ್ಲ. ಪೂರ್ಣ ಗುಣಾರ್ಣವ ಅಷ್ಟೇ ಅಲ್ಲ ಕೂಡ. ಅವನು ಪರಿಪೂರ್ಣ ಗುಣಾರ್ಣವ. ಎಲ್ಲಕಡೆ ಇರುವ ಗುಣಗಳೂ ಅವನಲ್ಲಿವೆ. ಅವನಲ್ಲಿಲ್ಲದ ಗುಣಗಳು ಮತ್ತೆಲ್ಲೂ ಇಲ್ಲ. 

*****

ಸಾಧಕನು ನಿರ್ಗುಣ, ನಿರಾಕಾರ ಸ್ವರೂಪನನ್ನು ಆರಾಧಿಸಬೇಕೇ? ಸಾಕಾರ ಪರಿಪೂರ್ಣ ಗುಣಾರ್ಣವನನ್ನು ಆರಾಧಿಸಬೇಕೇ? 

ಆಯ್ಕೆ ಸಾಧಕನದು. ತನ್ನ ಅನುಭವದ ಬಲದಿಂದ ಗುರ್ತಿಸಿ ಮುಂದೆ ಹೋಗಬಹುದು. 

1 comment:

  1. Very nice article to read and get more knowledge about the supreme being whom we worship. Thanks Keshav. UR….

    ReplyDelete