Wednesday, October 7, 2026

ನನಗೆ ನಾಲ್ಕೂ ಈಗಲೇ ಸಿಕ್ಕಿತು!


ಹಿಂದಿನ ಒಂದು ಸಂಚಿಕೆ "ಸಮ ಮತ್ತು ಸಮನಾ" ಎಂಬ ಶೀರ್ಷಿಕೆಯ ಅಡಿಯಲ್ಲಿ, ಪ್ರಾರಂಭದಲ್ಲಿ ಸಾರೂಪ್ಯ, ಸಾಮೀಪ್ಯ, ಸಾಲೋಕ್ಯ ಮತ್ತು ಸಾಯುಜ್ಯ ಎಂಬ ನಾಲ್ಕು ವಿಧದ ಮುಕ್ತಿ ವಿಶೇಷಗಳಿವೆ ಎಂದು ಹೇಳಿತ್ತು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಸಾರೂಪ್ಯ ಮುಕ್ತಿಯಲ್ಲಿ ಮುಮುಕ್ಷು ಜೀವನು (ಜೀವನ-ಮರಣ ಚಕ್ರದಿಂದ ಬಿಡುಗಡೆ ಪಡೆದ ಜೀವನು) ಪರಮಾತ್ಮನಂತೆಯೇ ಲಕ್ಷಣಗಳುಳ್ಳ ದೇಹ ಉಳ್ಳವನಾಗುತ್ತಾನೆ. ಸಾಮೀಪ್ಯ ಮುಕ್ತಿಯಲ್ಲಿ ಪರಮಪುರುಷನ ಅತಿ ಹತ್ತಿರದಲ್ಲಿ ಇರುವ ಆನಂದ ಪಡೆಯುತ್ತಾನೆ. ಸಾಲೋಕ್ಯ ಮುಕ್ತಿಯಲ್ಲಿ ಪರಮಪುರುಷನ ಲೋಕಗಳಾದ ವೈಕುಂಠ, ಶ್ವೇತದ್ವೀಪ ಮತ್ತು ಅನಂತಾಸನಗಳಲ್ಲಿ ಒಂದರಲ್ಲಿ ವಾಸಿಸುತ್ತಾನೆ. ಸಾಯುಜ್ಯ ಮುಕ್ತಿಯಲ್ಲಿ ಜೀವನು ಪರಮಪುರುಷನ ಮೂಲ ದೇಹದಲ್ಲಿಯೇ ವಾಸಿಸುತ್ತಾನೆ. ಇದು ಜೀವ-ಪರಮಾತ್ಮ ಭೇದವನ್ನು ಹೇಳುವ ದ್ವೈತ ಸಿದ್ಧಾಂತ ಹೇಳುವಂತೆ ನಂಬಿಕೆ. ಜೀವ-ಪರಮಾತ್ಮ ಅಭೇದ ನಂಬುವ ಅದ್ವೈತ ಸಿದ್ಧಾಂತದಂತೆ ಜೀವನು ಪರಮಾತ್ಮನಲ್ಲಿ ಒಂದಾಗುತ್ತಾನೆ. 

ಇದನ್ನು ನೋಡಿದ ಹಿರಿಯ ಸ್ನೇಹಿತರೊಬ್ಬರು ಈ ನಾಲ್ಕು ರೀತಿಯ ಮೋಕ್ಷ ವಿಶೇಷಗಳನ್ನು ಒಂದೆಡೆ ಹೇಳುವ ಆಚಾರ್ಯ ಶಂಕರ ಭಗವತ್ಪಾದ ವಿರಚಿತ 100 ಶ್ಲೋಕಗಳ ಸ್ತೋತ್ರ "ಶಿವಾನಂದ ಲಹರಿ" ಕೃತಿಯ ಶ್ಲೋಕ 28 ಉಲ್ಲೇಖಿಸಿ ನೆನಪಿಸಿದ್ದಾರೆ. 

ಮನುಷ್ಯನಿಗೆ ಹುಟ್ಟಿನಿಂದಲೇ ಬರುವ ಅನೇಕ ಸಾಧನಗಳಲ್ಲಿ "ನೆನಪಿನ ಶಕ್ತಿ" ಎನ್ನುವುದೂ ಒಂದು. ಇದು ಎಲ್ಲರಿಗೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ನೆನಪಿನ ಶಕ್ತಿ ದುರ್ಬಲ. ಕೆಲವರಿಗೆ ಚೆನ್ನಾಗಿರುತ್ತದೆ. ಮತ್ತೆ ಕೆಲವರಿಗೆ ಅದು ತುಂಬಾ ಪ್ರಬಲ. ಒಂದು ಪದವನ್ನು ಹೇಳಿದರೆ ಸಾಕು. ಆ ಪದ ಬೇರೆ ಬೇರೆ ಕಡೆ ಉಲ್ಲೇಖ ಆಗಿರುವುದೆಲ್ಲಾ ಅವರಿಗೆ ಒಮ್ಮೆಲೇ ಹೊಳೆಯುತ್ತದೆ! ಈ ಹಿರಿಯರು ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಒಂದು ವಿಷಯವನ್ನು ಹೇಳಿದರೆ ತಕ್ಷಣವೇ ಅದಕ್ಕೆ ಸಂಬಂಧಿಸಿದ ಇತರೆ ಎಲ್ಲಾ ವಿಷಯಗಳನ್ನೂ ಗ್ರಹಿಸುವುದಕ್ಕೆ "ಪ್ರಜ್ಞಾಶಕ್ತಿ" ಎಂದು ಹೆಸರು. ಪ್ರಬಲ ನೆನಪಿನ ಶಕ್ತಿ ಮತ್ತು ಪ್ರಜ್ಞಾಶಕ್ತಿ ಸೇರಿರುವ ವ್ಯಕ್ತಿಗಳು ಬಹಳ ವಿರಳ. ಇಂತಹವರು ಅನೇಕ ಸಾಧನೆಗಳನ್ನು ಮಾಡುತ್ತಾರೆ.

ನೆನಪಿನ ಶಕ್ತಿ ಏಕೆ ಹೀಗೆ ಬೇರೆ ಬೇರೆ ವ್ಯಕ್ತಿಗಲ್ಲಿ ಹೆಚ್ಚು-ಕಡಿಮೆ ಇರುವುದು? ಇದಕ್ಕೆ ಕಾರಣವೇನು? "ಉಮಾ-ಮಹೇಶ್ವರ ಸಂವಾದ" ಎನ್ನುವ ಗ್ರಂಥದಲ್ಲಿ ಇದರ ವಿವರಗಳು ಸಿಕ್ಕುತ್ತವೆ. ತಾಯಿ ಉಮಾದೇವಿಯು ತಂದೆ ಈಶ್ವರನನ್ನು ನಾವು ಲೌಕಿಕದಲ್ಲಿ ಕಾಣುವ ಈ ರೀತಿಯ ಅನೇಕ ವ್ಯತ್ಯಾಸಗಳಿಗೆ ಮೂಲ ಕಾರಣಗಳನ್ನು ಕೇಳುತ್ತಾಳೆ. ಪರಶಿವನು ಅವುಗಳಿಗೆ ವಿವರವಾದ ಉತ್ತರ ಕೊಡುತ್ತಾನೆ. ನೆನಪಿನ ಶಕ್ತಿ ಪ್ರಶ್ನೆ ಬಂದಾಗ "ಯಾರು ಹಿಂದಿನ ಜನ್ಮಗಳಲ್ಲಿ ಚೆನ್ನಾಗಿ ಗುರುವಿನ ಶುಶ್ರೂಷೆ ಮಾಡಿರುತ್ತಾರೋ ಅಂತಹವರಿಗೆ ಈ ಜನ್ಮದಲ್ಲಿ ನೆನಪಿನ ಶಕ್ತಿ ಚೆನ್ನಾಗಿ ಇರುತ್ತದೆ" ಎಂದು ಉತ್ತರ ಕೊಡುತ್ತಾನೆ. ಇದರ ವಿವರಗಳನ್ನು ಇನ್ನೆಂದಾದರೂ ನೋಡೋಣ.

ಈಗ ಶ್ರೀ ಶಂಕರ ಭಗವತ್ಪಾದರ ಶ್ರೀ ಶಿವನಾನಂದ ಲಹರಿಯ ಇಪ್ಪತ್ತೆಂಟನೇ ಶ್ಲೋಕದ ಅಭಿಪ್ರಾಯವನ್ನು ಯಥಾಶಕ್ತಿ ನೋಡೋಣ.

*******

KBC ಎಂಬ ಹೆಸರಿನ ಕಾರ್ಯಕ್ರಮದಂತೆ ಅನೇಕವು ಪ್ರತಿದಿನ ಟಿವಿಯಲ್ಲಿ ನಡೆಯುತ್ತಿರುತ್ತವೆ. ಪ್ರಾಥಮಿಕ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು ಬಂದ ಅಭ್ಯರ್ಥಿಗಳಿಗೆ ನಿರೂಪಕರು ಪ್ರಶ್ನೆಗಳನ್ನು ಹಾಕುತ್ತಾರೆ. ಪ್ರತಿ ಪ್ರಶ್ನೆಗೂ ನಾಲ್ಕು ಉತ್ತರಗಳ ಸಲಹೆ ಇರುತ್ತದೆ. ಅಭ್ಯರ್ಥಿಯು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಉತ್ತರ ಸರಿಯಿದ್ದರೆ ಮುಂದಿನ ಪ್ರಶ್ನೆ. ಹೀಗೆ ನಡೆದು ಕಡೆಯಲ್ಲಿ ಯೋಗ್ಯ ಬಹುಮಾನ ಕೊಡುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಕಾರ್ಯಕ್ರಮಗಳ ಬಗ್ಗೆ ಅನೇಕ ಹಾಸ್ಯ ಪ್ರಸಂಗಗಳು ಜನಜನಿತವಾಗಿವೆ.

ಮೊದಲ ಮೂರು-ನಾಲ್ಕು ಪ್ರಶ್ನೆಗಳು ಬಹಳ ಸರಳ. ನಂತರದ ಪ್ರಶ್ನೆಗಳು ಕಠಿಣವಾಗುತ್ತಾ ಹೋಗುತ್ತವೆ. ಹೀಗಿರುವುದರಿಂದ ಪ್ರತಿ ಸ್ಪರ್ಧಿಗೂ ಸ್ವಲ್ಪವಾದರೂ ಬಹುಮಾನ ಸಿಗುತ್ತದೆ.

ಒಂದು ಕಾರ್ಯಕ್ರಮದಲ್ಲಿ ಬಂದಿದ್ದ ಅಭ್ಯರ್ಥಿ ಮೊದಲನೇ ಪ್ರಶ್ನೆಯಲ್ಲಿಯೇ ಎಡವಿದ. ಅವನ ಅವಕಾಶ ಅಲ್ಲಿಗೆ ಮುಗಿಯಬೇಕಾಗಿತ್ತು. ನಿರೂಪಕ ಕರುಣೆಯಿಂದ ಮುಂದುವರೆಸಿ ಇನ್ನೂ ಎರಡು ಪ್ರಶ್ನೆ ಕೇಳಿದ. ಅವಕ್ಕೂ ತಪ್ಪು ಉತ್ತರಗಳು. ಅತ್ಯಂತ ನಿರಾಶನಾದ ನಿರೂಪಕ ಸ್ಪರ್ಧಿಗೆ ಇನ್ನೊಂದು ಅವಕಾಶ ಕೊಟ್ಟ.

"ನೀವು ಒಂದು ಪ್ರಶ್ನೆಗೂ ಸರಿಯಾದ ಉತ್ತರ ಕೊಡಲಿಲ್ಲ"
"..........."
"ಈಗ ನಿಮಗೆ ಅತಿ ಸುಲಭದ ಪ್ರಶ್ನೆ ಕೇಳುತ್ತೇನೆ"
"ಕೇಳಿ"
"ಇದಕ್ಕೆ ಉತ್ತರ ಕೊಟ್ಟರೆ ನಿಮಗೆ ಮೂರನೆಯ ಪ್ರಶ್ನೆ ಉತ್ತರಿಸದರೆ ಸಿಗುವಂತೆ ಬಹುಮಾನ ಸಿಗುತ್ತದೆ"
"ಆಗಬಹುದು"
"ನಿಮ್ಮ ಹೆಸರು ಹೇಳಿ"

ಉತ್ತರ ಬರಲಿಲ್ಲ. ಎರಡುನಿಮಿಷ ಆಯಿತು. ಐದು ನಿಮಿಷ ಆಯಿತು. ಹತ್ತು ನಿಮಿಷ ಆಯಿತು.

"ನೀವು ಉತ್ತರ ಕೊಡಲಿಲ್ಲ"
"ನಾನು ತಯಾರಿದ್ದೇನೆ. ಆದರೆ ನೀವು ಪ್ರಶ್ನೆ ಪೂರ್ತಿ ಮಾಡಲಿಲ್ಲ. ಉತ್ತರ ಹೇಗೆ ಕೊಡುವುದು?"
"ಪ್ರಶ್ನೆ ಪೂರ್ತಿ ಆಗಿದೆಯಲ್ಲ!"
"ಇಲ್ಲ. ನೀವು ಉತ್ತರಕ್ಕೆ ನಾಲ್ಕು ಸಲಹೆಗಳನ್ನು ಕೊಡಲಿಲ್ಲ"

ನಮ್ಮ ಜೀವನ ಈ ದಿನಗಳಲ್ಲಿ ನಾಲ್ಕರಲ್ಲಿ ಒಂದು ಆರಿಸಿಕೊಳ್ಳುವುದರಲ್ಲಿ ಲೀನವಾಗಿದೆ. ನಾಲ್ಕು ಸಲಹೆಗಳು ಇಲ್ಲದಿದ್ದರೆ ನಮಗೆ ಜೀವನವೇ ದುರ್ಭರ ಆಗುತ್ತಿದೆ.

*******

ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯ ಮತ್ತು ವಿಕಟಕವಿ ತೆನಾಲಿ ರಾಮಕೃಷ್ಣ ಎಲ್ಲರಿಗೂ ಪರಿಚಿತರು. ಅವರಿಬ್ಬರ ರಂಜಕವಾದ ಕಥೆಗಳೂ ಅಷ್ಟೇ. ಅಧಿಕಾರದಲ್ಲಿರುವವರಿಗೆ ಅನೇಕ ಸಮಸ್ಯೆಗಳಿರುತ್ತವೆ. ಅವರ ಮನಸ್ಸು ಒಂದೇರೀತಿ ಇರುವುದಿಲ್ಲ. ಅಂಥವರೊಡನೆ ಹಾಸ್ಯ ರಸವನ್ನು ಹಿಂದೆ-ಮುಂದೆ ನೋಡಿ ಉಪಯೋಗಿಸಬೇಕು. ಅವರ ಮನಸ್ಸು ಸರಿ ಇಲ್ಲದಿದ್ದಾಗ ಹಾಸ್ಯ ಪರಿಹಾಸ್ಯವಾಗುತ್ತದೆ. ಅವರಿಗೆ ಎಲ್ಲಿಲ್ಲದ ಕೋಪ ಬರುತ್ತದೆ. 

ಒಮ್ಮೆ ರಾಮಕೃಷ್ಣ ಮಾಡಿದ ಹಾಸ್ಯ ಅರಸನಿಗೆ ತಾಳಲಾರದ ಕೋಪ ತರಿಸಿತು. ತಕ್ಷಣ "ಮರಣದಂಡನೆ" ಶಿಕ್ಷೆ ವಿಧಿಸಿದ. 

"ರಾಮಕೃಷ್ಣ, ನಿನಗೆ ಮರಣದಂಡನೆ ಶಿಕ್ಷೆ ಕೊಟ್ಟಿದ್ದೇನೆ"
"ತಮ್ಮ ಚಿತ್ತ, ಪ್ರಭು"
"ಶಿಕ್ಷೆ ಅಂತೂ ತಪ್ಪುವುದಿಲ್ಲ. ನೀನು ಬಹಳ ದಿನ ನಮ್ಮ ಸಂಗಡ ಇದ್ದೀಯೆ. ಆದ ಕಾರಣ ನಿನಗೆ ಸಾವು ಬರಲು ನಾಲ್ಕು ವಿಧಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಕೊಡುತ್ತೇವೆ"
"ಮಹಾಪ್ರಸಾದ, ಜೀಯಾ"
"ವಿಷ ಕುಡಿಯುವುದು. ಆನೆಯ ಕಾಲ ಕೆಳಗೆ ಬೀಳುವುದು. ಶೂಲಕ್ಕೆ ಏರಿಸುವುದು. ಶಿರಛೇದನ. ಈ ನಾಲ್ಕರಲ್ಲಿ ಯಾವುದು ಬೇಕು? ಹೇಳು"
"ಪ್ರಭು, ಅವು ನಿಮ್ಮ ಆಯ್ಕೆ ಆಯಿತು. ನನಗೆ ನನ್ನದೇ ರೀತಿ ಆಯ್ದುಕೊಳ್ಳಲು ಅವಕಾಶ ಕರುಣಿಸಬೇಕು"
"ಏನದು?"
"ನಾನು ಹೇಳಿದ ಮೇಲೆ ತಾವು ಅದನ್ನು ಬದಲಾಯಿಸಬಾರದು"
"ಆಗಲಿ. ನಿನ್ನ ಆಯ್ಕೆಯಂತೆಯೇ ಸಾವನ್ನು ಅಪ್ಪಿಕೋ. ಒಪ್ಪಿದ್ದೇವೆ"
"ನನಗೆ ವೃದ್ಧಾಪ್ಯದಿಂದ ಮರಣ ಬರುವಂತೆ ಆಗಲಿ"

ಕೃಷ್ಣದೇವರಾಯನ ಕೋಪ ಕರಗಿತು. ರಾಜನು ಕೊಟ್ಟ ನಾಲ್ಕು ಆಯ್ಕೆಗಳನ್ನು ಬಿಟ್ಟು, ತನ್ನ ಜಾಣತನದಿಂದ ರಾಮಕೃಷ್ಣ ಸಾವು ತಪ್ಪಿಸಿಕೊಂಡ.

******

ಹಿರಣ್ಯ ಕಷಿಪು ತನ್ನ ಮಗ ಪ್ರಹ್ಲಾದನಿಗೆ ನಾಲ್ಕು ರೀತಿಯಲ್ಲಿ ಸಾವನ್ನು ಆಯ್ದುಕೊಳ್ಳುವ ಸ್ವಾತಂತ್ರವನ್ನೂ ಕೊಡಲಿಲ್ಲ. ಇದಕ್ಕೆ ಬದಲಾಗಿ ಒಬ್ಬನನ್ನು ಕೊಲ್ಲಲು ಏನೆಲ್ಲಾ ಮಾಡಬಹುದೋ ಅವೆಲ್ಲವನ್ನೂ ಮಾಡಿದ. ಆದರೂ ಪ್ರಹ್ಲಾದ ಬದುಕುಳಿದ. 

ಕಡೆಗೆ ಉಗ್ರ ನರಸಿಂಹನ ಆಗಮನ ಆಯಿತು. ಹಿರಣ್ಯಕನನ್ನು ಸೀಳಿ ಕೊಂದಿದ್ದೂ ಆಯಿತು. ನರಸಿಂಹನ ಭಯಂಕರ ರೂಪ ಮತ್ತು ಉಗ್ರ ಕೋಪ ಕಂಡ ದೇವತೆಗಳೂ ಅವನ ಬಳಿ ಹೋಗಲು ತಯಾರಿಲ್ಲ. ಕಡೆಗೆ ಬಾಲಕ ಪ್ರಹ್ಲಾದನನ್ನು ಮುಂದೆ ಕಳುಹಿಸಿದರು. ಪ್ರಹ್ಲಾದ ವಿನಯದಿಂದ ನರಸಿಂಹನ ಬಳಿ ಹೋಗಿ ನಿಂತ. ಸುಂದರವಾಗಿ ಪ್ರಾರ್ಥನೆ ಮಾಡಿದ. ಭಾಗವತ ಇದರ ವಿವರಗಳನ್ನು ಕೊಡುತ್ತದೆ. ಉಗ್ರನರಸಿಂಹ ಈಗ ಶಾಂತನಾದ. ಪುಟ್ಟ ಪ್ರಹ್ಲಾದನನ್ನು ಹತ್ತಿರ ಕರೆದು ಮೈದಡವಿದ. 

"ಪ್ರಹ್ಲಾದ, ನಿನ್ನಿಂದ ನಾನು ಪೂರ್ಣ ಸಂಪ್ರೀತನಾಗಿದ್ದೇನೆ. ನಿನಗೇನು ಬೇಕು? ಕೇಳು"

ಇಲ್ಲಿ ನಾಲ್ಕು ಆಯ್ಕೆಗಳಿಲ್ಲ. ಬೇಕಿದ್ದು ಕೇಳಬಹುದು. ಆಯ್ಕೆಯ ಸ್ವಾತಂತ್ರ್ಯ ಮತ್ತು ಅದರ ವಿಸ್ತಾರ ಎರಡೂ ಪ್ರಹ್ಲಾದನದೇ.

"ನೀನು ಪ್ರೀತನಾದರೆ ಅಷ್ಟೇ ಸಾಕು. ನನಗೆ ಏನೂ ಬೇಡ"
"ನನ್ನ ಬಳಿ ಬಂದವರು ಏನಾದರೂ ಕೇಳುವುದು ಇರುತ್ತದೆ. ಸಂಕೋಚ ಪಡದೆ ಕೇಳು"
"ನನ್ನ ತಂದೆ ಬಲು ದುಷ್ಟ. ನಿನ್ನನ್ನು ಅವಹೇಳನ ಮಾಡುತ್ತಾ ಬದುಕಿದ. ಆದರೂ ತಂದೆಗೆ ಸದ್ಗತಿ ಕೊಡು"
"ಅದನ್ನು ನೀನು ಕೇಳಬೇಕಾಗಿಲ್ಲ. ನಿನ್ನಂತಹ ಪರಮ ಭಾಗವತ ಅವನ ಮಗನಾಗಿ ಹುಟ್ಟಿದ ತಕ್ಷಣ ಅವನಿಗೆ ಸದ್ಗತಿ ಸಿಕ್ಕೇಹೋಯಿತು. ಅದು ಹಿಂದೆ ಆದ ಸಮಾಚಾರ. ಈಗ ನಿನಗೆ ಏನು ಬೇಕು? ಅದು ಕೇಳು"
"ನನಗೆ ಏನೂ ಬೇಡ. ಇಷ್ಟರ ಮೇಲೆ ನೀನು ಮತ್ತೆ ಮತ್ತೆ ಕೇಳಿದುದರಿಂದ ಅದು ನಿನ್ನ ಆಜ್ಞೆಯಾಯಿತು. ಈ ಕಾರಣದಿಂದ ಏನೂ ಬೇಡ ಎಂದು ಮತ್ತೆ ಹೇಳುವುದು ಸರಿಯಲ್ಲ"
"ಹೌದು. ನಿನಗೆ ಬೇಕಿದ್ದುದನ್ನು ಕೇಳು"
"ನಾನು ಎಂದೂ, ಯಾರನ್ನೂ, ಏನನ್ನೂ ಕೇಳದಂತೆ ವರ ಕೊಡು! ಬೇಡದಂತೆ ಮಾಡು ನನ್ನ, ಸ್ವಾಮಿ!"

ನರಸಿಂಹ ಹಾಗೆಯೇ ಅನುಗ್ರಹಿಸಿದ. ಅವನು ಮುಂದೆ ಯಾರನ್ನೂ, ಏನನ್ನೂ ಕೇಳಲಿಲ್ಲ. ಹೀಗಿದ್ದರೂ ಪ್ರಹ್ಲಾದನಿಗೆ ಎಲ್ಲವೂ ಸಿಕ್ಕಿತು. ತಂದೆಯ ಸಾಮ್ರಾಜ್ಯದ ಪಟ್ಟ ಸಿಕ್ಕಿತು. ಸ್ಥಾನ-ಮಾನಗಳು ತಾವಾಗಿಯೇ ಬಂದವು.
******

ಆಚಾರ್ಯ ಶ್ರೀ ಶಂಕರ ಭಗವತ್ಪಾದರು ದೇಶ ಸಂಚಾರದಲ್ಲಿದ್ದರು. ಶ್ರೀಶೈಲದಲ್ಲಿ ಭ್ರಮರಾಂಬ-ಮಲ್ಲಿಕಾರ್ಜುನ ದರ್ಶನ ಪಡೆದರು. ಅವರ ಒಂದು ನೂರು ಶ್ಲೋಕಗಳ ಸುಂದರ ಸ್ತೋತ್ರ ಕಾವ್ಯ "ಶ್ರೀ ಶಿವಾನಂದ ಲಹರಿ" ಅಲ್ಲಿ ರಚನೆ ಆಯಿತೆಂದು ಹೇಳುತ್ತಾರೆ.

ನಾಲ್ಕು ರೀತಿಯ ಮುಕ್ತಿಯ ಬಗ್ಗೆ ಮೇಲೆ ಪ್ರಸ್ತಾಪ ಆಗಿದೆ. ಯಾವ ಭಕ್ತನಿಗೆ ಯಾವ ರೀತಿಯ ಮುಕ್ತಿ ಕೊಡಬೇಕೆಂಬುದು ಕೊಡುವವನ ಮೇಲೆ ಅವಲಂಬಿತ. ಆಯ್ಕೆಯ ಸ್ವಾತಂತ್ರ್ಯ ಮುಮುಕ್ಷುವಿಗೆ ಇಲ್ಲ. 

ಶ್ರೀ ಶಂಕರರ ಯೋಚನಾ ಲಹರಿಯೇ ಬೇರೆ ರೀತಿಯದು. ಅವರು ಶಿವನ ಮುಂದೆ ಆನಂದ ಲಹರಿಯಲ್ಲಿ ತೇಲಾಡುತ್ತಿದ್ದಾರೆ, "ನನಗೆ ನಾಲ್ಕು ರೀತಿಯ ಮುಕ್ತಿಗಳೂ ಈಗಲೇ ಸಿಕ್ಕಿತು!" ಅನ್ನುತ್ತಾರೆ. ನಾಲ್ಕರಲ್ಲಿ ಒಂದಲ್ಲ. ನಾಲ್ಕೂ ಒಟ್ಟಿಗೆ. 

ಅವರ ಸ್ತೋತ್ರದ 28ನೆಯ ಶ್ಲೋಕ ಹೀಗಿದೆ:

ಸಾರೂಪ್ಯo ತವ ಪೂಜನೇ ಶಿವ ಮಹಾದೇವೇತಿ ಸಂಕೀರ್ತನೇ
ಸಾಮೀಪ್ಯo ಶಿವಭಕ್ತಿಧುರ್ಯಜನಸಾಂಗತ್ಯಸಂಭಾಷಣೇ
ಸಾಲೋಕ್ಯo ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ 
ಸಾಯುಜ್ಯo ಮಮ ಸಿದ್ಧಮತ್ರ ಭವತಿ ಸ್ವಾಮಿನ್ ಕೃತಾರ್ಥೋಸ್ಮ್ಯಹಮ್ 

"ನಿನ್ನ ಪೂಜೆ ಮಾಡುವಾಗ ಮತ್ತು ನಿನ್ನ ನಾಮಗಳ ಸಂಕೀರ್ತನೆ ಮಾಡುವಾಗ ಸಾರೂಪ್ಯ ಸಿಕ್ಕಿತು. ನಿನ್ನ ಭಕ್ತರ ಸಹವಾಸ, ಅವರೊಡನೆ ನಿನ್ನ ಬಗ್ಗೆ ಮಾತನಾಡುವಾಗ ಸಾಮೀಪ್ಯ ಸಿಕ್ಕಿತು. ನಿನ್ನ ಅಖಂಡ ಧ್ಯಾನದಲ್ಲಿದ್ದಾಗ ನಿನ್ನ ಲೋಕದಲ್ಲಿರುವಂತೆ ಆಗಿ ಸಾಲೋಕ್ಯ ಸಿಕ್ಕಿತು. ಇಲ್ಲಿ ನಿನ್ನ ದರ್ಶನದಿಂದ ಸಾಯುಜ್ಯ ಸಿಕ್ಕಿ ನಾನು ಕೃತಾರ್ಥನಾದೆನು!" 

"ಎಂದೋ ಸಿಗುವ ಮುಕ್ತಿಯಲ್ಲ. ಅದು ಕಡೆಗೆ ಸಿಗುವ ಫಲವಲ್ಲ. ನಿನ್ನ ಪೂಜೆ, ಸಂಕೀರ್ತನೆ, ನಿನ್ನ ಭಕ್ತರ ಸಂಗ ಮತ್ತು ನಿನ್ನ ಧ್ಯಾನಗಳಿಂದ ಏನೇನು ಸಿಗಬಹುದೋ ಅವೆಲ್ಲ ಇಂದೇ ನನಗೆ ಒಟ್ಟಿಗೆ ಸಿಕ್ಕಿತು". 
******  

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ "ಪೆಸಿಫಿಕ್ ಕೋಸ್ಟ್ ಹೈವೇ" ಎಂದು ಒಂದುಂಟು. ದೇಶದ ಪಶ್ಚಿಮದಲ್ಲಿ ಉತ್ತರ-ದಕ್ಷಿಣ ಮಾರ್ಗವಾಗಿ ಶಾಂತ ಮಹಾಸಾಗರ ಉದ್ದಕ್ಕೂ ಕಾಣುವಂತೆ ಅದರ ಪಕ್ಕದಲ್ಲಿಯೇ ಹಾದುಹೋಗುವ ದೊಡ್ಡ ರಸ್ತೆ. ಅನೇಕರು ಈ ರಸ್ತೆಯ ಅಕ್ಕ-ಪಕ್ಕದ ಸುಂದರ ದೃಶ್ಯ ನೋಡಲೆಂದೇ ಈ ರಸ್ತೆಯಲ್ಲಿ ಹೋಗುತ್ತಾರೆ. ಇದು ಒಂದು ಸ್ಥಳದಿಂದ ಇನ್ನೊಂದಕ್ಕೆ ಹೋಗುವ ಅವಶ್ಯಕತೆಯಿಂದ ಅಲ್ಲ. (ಅದು ಆಗುವುದಾದರೂ ಅದೇ ಮುಖ್ಯ ಗುರಿ ಅಲ್ಲ). ರಸ್ತೆಯ ಬದಿಯಲ್ಲಿ ಇರುವ ಸುಂದರ ದೃಶ್ಯಗಳ ವೀಕ್ಷಣೆಯೇ ಇಲ್ಲಿ ಮುಖ್ಯ. Destination is not important and not the goal. Journey is important and is a reward in itself!

ಒಬ್ಬ ತಾಯಿ ತನ್ನ ಮಗುವಿನ ಲಾಲನೆ-ಪಾಲನೆ ಮಾಡುತ್ತಾಳೆ. ಹೀಗೆ ಮಾಡುವಾಗ ಅವಳಿಗೆ ಅದರಿಂದ ಮುಂದೆ ಏನೋ ಒಂದು ಫಲ ಸಿಗುತ್ತದೆ ಎನ್ನುವ ಆಸೆಯಿಲ್ಲ. ತನ್ನ ಕಂದನ ಆರೈಕೆ ಮಾಡುವುದೇ ಅವಳ ಗುರಿ. ಅದರಲ್ಲೇ ಅವಳು ಅಮಿತವಾದ ಆನಂದ ಅನುಭವಿಸುತ್ತಾಳೆ. The process is more important for her than the outcome. 

ಆಚಾರ್ಯರು ಇಲ್ಲಿ ಹೇಳುವಂತೆ ಭಕ್ತನು ತನ್ನ ಆರಾಧ್ಯ ದೈವದ ಪೂಜೆ-ಪುನಸ್ಕಾರಗಳು, ಅವನ ಭಕ್ತರ ಸಂಗ-ಸಲ್ಲಾಪ, ಅವನಲ್ಲಿ ಮನಸ್ಸು ಲೀನವಾಗಿ ಮಾಡುವ ಧ್ಯಾನ, ಇವುಗಳಲ್ಲೇ ಸಕಲ ಮೋಕ್ಷಗಳ ಸುಖ ಒಟ್ಟಿಗೆ ಮತ್ತು ಇಲ್ಲೇ ಕಾಣುತ್ತಾನೆ. ಮುಂದೆ ಏನೋ ಒಂದು ಸಿಗುತ್ತದೆ ಎನ್ನುವ ಆಸೆಯಿಂದ ಮಾಡುವ ಕ್ರಿಯೆಗಳಲ್ಲ ಇವು. ಪರಮಾತ್ಮನ ಮೇಲಿನ ಅಮಿತ ಭಕ್ತಿ-ಶ್ರದ್ದೆಗಳೇ ಮುಖ್ಯ. 

No comments:

Post a Comment