Sunday, October 25, 2026

ಕವಿ "ಸಂಸ" ಮತ್ತು "ವಿಗಡ ವಿಕ್ರಮರಾಯ"

 

ನಟಸಾರ್ವಭೌಮ ಡಾ. ರಾಜಕುಮಾರ್ ಅವರು ನಾಯಕ ನಟನಾಗಿ ನಟಿಸಿದ ಎರಡು ನೂರ ಐದು ಕನ್ನಡ ಚಲನ ಚಿತ್ರಗಳಲ್ಲಿ ಪೌರಾಣಿಕ, ಚಾರಿತ್ರಿಕ, ಜಾನಪದ, ಸಾಮಾಜಿಕ ಮತ್ತು ಸಾಹಸಮಯ (ಜೇಮ್ಸ್ ಬಾಂಡ್ ಮಾದರಿ) ಚಲನಚಿತ್ರಗಳು ಸೇರಿವೆ. ಇಂತಹ ಚಾರಿತ್ರಿಕ ಚಲನಚಿತ್ರಗಳಲ್ಲಿ 1960 ಇಸವಿಯಲ್ಲಿ ತೆರೆಕಂಡ "ರಣಧೀರ ಕಂಠೀರವ" ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಮೈಸೂರು ಸಂಸ್ಥಾನವನ್ನು ಆಳಿದ ಅರಸರ ಸಾಲಿನಲ್ಲಿ ಹನ್ನೆರಡನೆಯವರಾದ ಶ್ರೀ ಕಂಠೀರವ ನರಸರಾಜ ಒಡೆಯರ್ ಪಾತ್ರದಲ್ಲಿ ಅವರ ಚಿರಸ್ಮರಣೀಯ ಅಭಿನಯ ಈಗಲೂ ಚಿತ್ರಮಂದಿರಗಳಲ್ಲಿ ಜನರನ್ನು ಆಕರ್ಷಿಸುತ್ತದೆ. ಮುಂದೆ "ಇಮ್ಮಡಿ ಪುಲಿಕೇಶಿ", "ಶ್ರೀ ಕೃಷ್ಣದೇವರಾಯ", "ಮಯೂರ" ಮುಂತಾದ ಜನಪ್ರಿಯ ಮತ್ತು ಅತ್ಯಂತ ಯಶಸ್ವಿ ಐತಿಹಾಸಿಕ ಚಿತ್ರಗಳಿಗೆ ಅದೊಂದು ಮುನ್ನುಡಿ ಬರೆದಂತಿತ್ತು.

ಇಪ್ಪತ್ತನೆಯ ಶತಮಾನದ ಐದು, ಆರನೆಯ ದಶಕಗಳು (1950-1960s) ಕನ್ನಡ ಸಿನಿಮಾ ರಂಗಕ್ಕೆ ಇನ್ನೂ ಪ್ರಾರಂಭದ ಕಾಲ. ಇಂದಿನಂತೆ ಹೆಚ್ಚು ಹಣ ಹೂಡಿ ಸಿನೆಮಾ ತೆಗೆಯುವ ಶಕ್ತಿ ನಿರ್ಮಾಪಕರಿಗೆ ಇರಲಿಲ್ಲ. ಮದರಾಸಿನ (ಈಗಿನ ಚೆನ್ನೈ) ಸ್ಟುಡಿಯೋಗಳಲ್ಲಿ ತಮಿಳು ಮತ್ತು ತೆಲುಗು ಸಿನೆಮಾಗಳಿಗೆಂದು ಹಾಕಿರುತ್ತಿದ್ದ ಸೆಟ್ಟುಗಳಲ್ಲಿ ಹಗಲು ಹೊತ್ತು ಆ ಭಾಷೆಗಳ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ರಾತ್ರಿಯ ವೇಳೆ ಆ ಸೆಟ್ಟುಗಳನ್ನು ಕಡಿಮೆ ಬಾಡಿಗೆಗೆ ಪಡೆದು ಕನ್ನಡ ಸಿನಿಮಾ ಚಿತ್ರೀಕರಿಸುತ್ತಿದ್ದರು. ನಟ-ನಟಿಯರಿಗೆ ಮತ್ತು ತಂತ್ರಜ್ಞರಿಗೆ ಸಿಗುತ್ತಿದ್ದ ಸಂಭಾವನೆ ಜೀವನ ನಡೆಸಲೂ ಸಾಲುತ್ತಿರಲಿಲ್ಲ. ಪೂರ್ಣಾವಧಿ ಕೆಲಸ ಸಹ ಇರುತ್ತಿರಲಿಲ್ಲ. ಪ್ರತಿದಿನ ಸ್ಟುಡಿಯೊಗಳ ಮುಂದೆ ಕೆಲಸಕ್ಕಾಗಿ ಕಾಯುವ ಪರಿಸ್ಥಿತಿ ಇತ್ತು.

ಇಂತಹ ಕೆಲಸವಿಲ್ಲದ ಸಂದರ್ಭದಲ್ಲಿ ನಾಲ್ಕು ಕಲಾವಿದರು ಒಟ್ಟಿಗೆ ಸೇರಿ, ನಾಟಕಗಳನ್ನು ಆಡಿ, ಹಣ ಸಂಪಾದಿಸಿ "ರಣಧೀರ ಕಂಠೀರವ" ಚಿತ್ರ ತಯಾರಿಸಿದರು. ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್, ಇವರೇ ಆ ನಿರ್ಮಾಪಕರು. ಚಿತ್ರದ ಟೈಟಲ್ ಕಾರ್ಡಿನಲ್ಲಿ "ಕನ್ನಡ ಕಲಾವಿದರ ಕಾಣಿಕೆ" ಎಂದು ತೋರಿಸಿರುವುದನ್ನು ಈಗಲೂ ಕಾಣಬಹುದು. ಹೀಗೆ ತಯಾರಿಸಿ ಬಿಡುಗಡೆ ಮಾಡಿದ ಚಿತ್ರವೊಂದು ಕನ್ನಡದ ಎಲ್ಲಕಾಲದ ಶ್ರೇಷ್ಠ ಚಿತ್ರ ಎಂದು ನಿಂತುದು ಒಂದು ವಿಶೇಷವೇ ಸರಿ.

ಕಂಠೀರವನಾಗಿ ರಾಜಕುಮಾರ್ ಜೊತೆಯಲ್ಲಿ ದಳವಾಯಿ ವಿಕ್ರಮರಾಯನಾಗಿ ಆರ್. ನಾಗೇಂದ್ರ ರಾವ್ ನೆನೆಯುವಂತಹ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ನಾಗೇಂದ್ರ ರಾವ್ ಆವರ ಪಾತ್ರ ಚಿಕ್ಕದು. ಚಿತ್ರದ ಪ್ರಾರಂಭದ ಕೆಲವು ಸಮಯ ಮಾತ್ರ ಉಂಟು. ಇಷ್ಟಿದ್ದರೂ ಚಿತ್ರ ನೋಡಿದ ನಂತರ ಅವರ ನಟನೆ ನೋಡುಗರ ಮನಸ್ಸಿನಲ್ಲಿ ನಿಲ್ಲುತ್ತದೆ. ಇಮ್ಮಡಿ ರಾಜ ಒಡೆಯರ್ ಪಾತ್ರವನ್ನು (ಇನ್ನೊಂದು ಪುಟ್ಟ ಪಾತ್ರ) ಖ್ಯಾತ ತೆಲುಗು ಚಿತ್ರನಟ ಕಾಂತಾರಾವ್ ನಿರ್ವಹಿಸಿದ್ದಾರೆ. 

******

ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಆಡಳಿತದ ಕಾಲ (1638-59) ಮೈಸೂರು ಸಂಸ್ಥಾನದ ಕಾಲದಲ್ಲಿನ ಒಂದು ಸುವರ್ಣ ಅಧ್ಯಾಯ. ರಣಧೀರ ಕಂಠೀರವರು ತಮ್ಮ ಶೌರ್ಯ-ಸಾಹಸಗಳಿಗೆ ಹೆಸರಾಗಿದ್ದುದು ಮಾತ್ರವಲ್ಲದೆ, ಅನೇಕ ಆಡಳಿತ ಸುಧಾರಣೆಗಳನ್ನು ತಂದು ಪ್ರಜಾವತ್ಸಲರಾಗಿದ್ದವರು. ಮೊದಲ ಬಾರಿಗೆ ರಾಜ ಲಾಂಛನಗಳನ್ನು ಆಯುಧಗಳ ಮೇಲೆ ಮತ್ತಿತರ ರಾಜ ಚಿಹ್ನೆಗಳ ಮೇಲೆ ಬಳಕೆಗೆ ತಂದವರು. ಅರಮನೆಯ ಆಭರಣ, ಬಂಗಾರ-ಬೆಳ್ಳಿಗಳನ್ನು ಕೊಟ್ಟು, ಅವುಗಳನ್ನು ಕರಗಿಸಿ, ತಾವೇ ಸ್ಥಾಪಿಸಿದ ಟಂಕಸಾಲೆಯಲ್ಲಿ "ಕಂಠೀರಾಯ ವರಹ" ಎಂಬ ನಾಣ್ಯಗಳನ್ನು ಟಂಕಿಸಿ ಬಳಕೆಗೆ ತಂದವರು. ಕೆರೆ-ಕಟ್ಟೆಗಳನ್ನು ಕಟ್ಟಿಸಿ ಪ್ರಜೆಗಳ ಯೋಗ-ಕ್ಷೇಮಗಳ ಬಗ್ಗೆ ಗಮನ ಕೊಟ್ಟವರು. ಶತ್ರುಗಳ ಹುಟ್ಟಡಗಿಸಿ ಹೆಸರಿಗೆ ತಕ್ಕಂತೆ "ರಣಧೀರ" ಎಂದು ಬಾಳಿದವರು.

ರಣಧೀರ ಕಂಠೀರವರ ಒಟ್ಟು ಜೀವಿತ ಕಾಲ ಕೇವಲ 44 ವರ್ಷಗಳು (1615-1659). ಇದರಲ್ಲಿ ಅವರು ರಾಜರಾಗಿ ರಾಜ್ಯಭಾರ ನಡೆಸಿದ್ದು 21 ವರ್ಷಗಳ ಸಮಯ. ಅರಸರಾದ ಸ್ವಲ್ಪ ಕಾಲದಲ್ಲೇ ಬಹಮನಿ ಸುಲ್ತಾನ ಆದಿಲ್ ಷಾ ಆಕ್ರಮಣವನ್ನು ಹಿಮ್ಮೆಟ್ಟಿಸಿ ಶ್ರೀರಂಗಪಟ್ಟಣವನ್ನು ತಮ್ಮ ರಾಜ್ಯದಲ್ಲಿ ಉಳಿಸಿಕೊಂಡರು. ಉತ್ತರದಲ್ಲಿ ಹೊಸೂರು, ಪಶ್ಚಿಮದಲ್ಲಿ ಪಿರಿಯಾಪಟ್ಟಣ, ದಕ್ಷಿಣದಲ್ಲಿ ಸತ್ಯಮಂಗಲ ಭಾಗಗಳನ್ನು ಗೆದ್ದುಕೊಂಡು ರಾಜ್ಯವನ್ನು ವಿಸ್ತರಿಸಿದರು. ಮುಂದೆ ಮೈಸೂರು ಒಂದು ಮಾದರಿ ಸಂಸ್ಥಾನವಾಗಲು ಭದ್ರವಾದ ತಳಹದಿ ಹಾಕಿದವರು. 

ಮೈಸೂರು ಅರಸರ ಸಂತತಿಯನ್ನು ಶ್ರೀ ಯದುರಾಯರಿಂದ ಲೆಕ್ಕಮಾಡುತ್ತಾರೆ. ಯದುರಾಯರು ಉತ್ತರದ ದ್ವಾರಕೆಯಿಂದ ಮಹಿಷೂರಿಗೆ (ಈಗಿನ ಮೈಸೂರು) ಬಂದವರಂತೆ. ಆಗ ಮಹಿಷೂರನ್ನು ಆಳುತ್ತಿದ್ದ ರಾಜರ ಸಂತತಿ ನಿಂತುಹೋಗಿ ಸಂಸ್ಥಾನ ಸಂಕಷ್ಟದಲ್ಲಿದ್ದಾಗ ಪರಿಸ್ಥಿತಿ ಸರಿಮಾಡಿದರಂತೆ. ಹಿಂದಿನ ರಾಜರ ಮಗಳನ್ನು ಮದುವೆಯಾಗಿ ಮೊದಲ ಯಾದವ ವಂಶದ ರಾಜರಾದರಂತೆ. (1399-1423). ಹೀಗೆ ಪ್ರಾರಂಭವಾದ ಯಾದವ ರಾಜ ಸಂತತಿಯಲ್ಲಿ ಎಂಟನೆಯವರಾಗಿ ಅರಸರಾದವರು ಬೆಟ್ಟದ ಚಾಮರಾಜ ಒಡೆಯರು (1576-78). ಕೇವಲ ಎರಡು ವರುಷಗಳ ನಂತರ ಇವರು ವೈರಾಗ್ಯದಿಂದ ಅವರ ತಮ್ಮ ಮೊದಲನೇ ರಾಜ ಒಡೆಯರ್ ಅವರಿಗೆ ರಾಜ್ಯವನ್ನು ಬಿಟ್ಟುಕೊಟ್ಟು, ಸಂಸಾರ ಸಮೇತ ಗುಂಡ್ಲುಪೇಟೆಗೆ ಏಳು ಮೈಲು ದೂರದಲ್ಲಿರುವ ತೆರಕಣಾ೦ಬಿ ಎನ್ನುವಲ್ಲಿ ನೆಲೆನಿಂತರು. ರಣಧೀರ ಬಾಲ್ಯವೆಲ್ಲ ಇಲ್ಲಿಯೇ ಕಳೆಯಿತು.

ತಿರುಚಿನಾಪಳ್ಳಿಯ ವೀರಮಲ್ಲ ಎಂಬ ಹೆಸರಿನ ಜಟ್ಟಿಯೊಬ್ಬನು ತನ್ನ ಚಲ್ಲಣವನ್ನು ಕೋಟೆಯ ಬಾಗಿಲಿಗೆ ಕಟ್ಟಿ, ಪುರಪ್ರವೇಶ ಮಾಡುವ ಎಲ್ಲರೂ ಅದರ ಕೆಳಗೆ ಹೋಗಬೇಕೆಂದು ಅಹಂಕಾರದಿಂದ ಮೆರೆಯುತ್ತಿದ್ದನು. ರಣಧೀರರು ಮಾರು ವೇಷದಲ್ಲಿ ಹೋಗಿ ಅವನನ್ನು ಕುಸ್ತಿಯಲ್ಲಿ ಸೋಲಿಸಿ ಕೊಂದೇಬಿಟ್ಟರು. ಈ ಸಂಗತಿ ಅವರು ರಾಜರಾಗುವ ಮೊದಲೇ ಆದದ್ದು. ಚಲನಚಿತ್ರದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

******

ಮೊದಲನೇ ರಾಜ ಒಡೆಯರ್ ಅವರ ನಂತರ ಅವರ ಮೊಮ್ಮಗ (ಹಿರಿಯ ಮಗನ ಮಗ) ಚಾಮರಾಜ ಒಡೆಯರ್ (1617-1637) ಪಟ್ಟಕ್ಕೆ ಬಂದರು. ಅವರ ನಂತರ ಅವರ ಚಿಕ್ಕಪ್ಪ (ಮೊದಲನೇ ರಾಜ ಒಡೆಯರ್ ಅವರ ಕಿರಿಯ ಮಗ) ಎರಡನೇ ರಾಜ ಒಡೆಯರ್ ರಾಜರಾದರು. ಈ ವೇಳೆಗೆ ದಳವಾಯಿಯಾಗಿ ಪ್ರಬಲನಾದ ವಿಕ್ರಮರಾಯನು ಆಡಳಿತ ಸೂತ್ರವೆಲ್ಲ ತನ್ನ ಕಯ್ಯಲ್ಲಿ ಹಿಡಿದುಕೊಂಡು ಎರಡನೆಯ ರಾಜ ಒಡೆಯರ್ ಅಂತಃಪುರದ ವಿಲಾಸಿ ಜೀವನ ನಡೆಸುವಂತೆ ಮಾಡಿಟ್ಟನು. ಇದು ಅವರ ಮಾತೋಶ್ರೀ ಯಡವನಹಳ್ಳಿ ತಿಮ್ಮಾಜಮ್ಮಣ್ಣಿ ಅವರಿಗೆ ಸರಿ ಬರಲಿಲ್ಲ. ಅವರ ಮಧ್ಯ ಪ್ರವೇಶ ಮತ್ತು ಎರಡನೇ ರಾಜ ಒಡೆಯರ್ ಆಡಳಿತದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಗ ದಳವಾಯಿ ವಿಕ್ರಮರಾಯನು ಅವರನ್ನು ಆಸ್ಥಾನ ವೈದ್ಯನ ಮೂಲಕ ವಿಷ ಪ್ರಯೋಗಿಸಿ ಕೊಲ್ಲಿಸಿದನು.

ಮುಂದೆ ಪಟ್ಟಕ್ಕೆ ಬರಲು ಯಾರೂ ಇಲ್ಲದ ಕಾರಣ ಯಡವನಹಳ್ಳಿ ತಿಮ್ಮಾಜಮ್ಮಣ್ಣಿ ಅವರು ತನ್ನ ಭಾವ (ಗಂಡನ ಅಣ್ಣ), ಹಿಂದಿನ ರಾಜರಾಗಿದ್ದ ಬೆಟ್ಟದ ಚಾಮರಾಜ ಒಡೆಯರ್ ಅವರ ಮಗನಾದ ರಣಧೀರ ಕಂಠೀರವನನ್ನು ದತ್ತು ತೆಗೆದುಕೊಂಡು ಯದುವಂಶದ ಹನ್ನೆರಡನೇ ರಾಜನನ್ನಾಗಿ ನೇಮಿಸಲು ಮೂಲ ಕಾರಣರಾದರು. ತೆರಕಣಾ೦ಬಿಯಲ್ಲಿ ಮೂಲತಃ ಕುಸ್ತಿಪಟುವಾಗಿ ಕಾಲಕಳೆಯುತ್ತಿದ್ದ ರಣಧೀರರು ಹೀಗಾಗಿ ಪಟ್ಟಕ್ಕೆ ಬಂದರು.

ದಳವಾಯಿ ವಿಕ್ರಮರಾಯನು ಅಷ್ಟು ಪ್ರಬಲನಾಗಲು ಏನು ಕಾರಣ? ಅವನು ಬೇರೆ ಯಾರೋ ಆಗಿರದೆ ವಾಸ್ತವವಾಗಿ ಬೆಟ್ಟದ ಚಾಮರಾಜರ ಗಾಂಧರ್ವ ಪುತ್ರನಾಗಿದ್ದನು. ಅಂದರೆ ಬಂಗಾರದವರ ಮಗ. (ರಾಣಿಯರಲ್ಲದೆ ಆಗಿನ ರಾಜರಿಗೆ ಬೇರೆಯ ಪತ್ನಿಯರೂ ಇರುತ್ತಿದ್ದರು. ಇವರನ್ನು ಬಂಗಾರದವರು ಎಂದು ಕರೆಯುತ್ತಿದ್ದರು). ಹೀಗಾಗಿ ಅವನಿಗೆ ಹೆಚ್ಚಿನ ಸ್ಥಾನ-ಮಾನ ಇದ್ದವು. ಇವುಗಳನ್ನೇ ಮೂಲಮಾಡಿಕೊಂಡು ಅವನು ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದ್ದನು. ಚನ್ನಪಟ್ಟಣ, ನಾಗಮಂಗಲ ಮತ್ತು ಬೆಳ್ಳೂರು ಪಾಳೇಯಗಾರರನ್ನು ತನ್ನ ಸಾಮರ್ಥ್ಯದಿಂದ ಜಯಿಸಿ ಹೆಸರು ಮಾಡಿದವನು. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ದೊಡ್ಡ ಮಂಟಪವನ್ನು ಕಟ್ಟಿಸಿದ್ದಲ್ಲದೆ ಆ ದೇವಾಲಯದಲ್ಲಿ ಒಂದು ದೊಡ್ಡ ವೃಷಭ ಮೂರ್ತಿಯನ್ನು ಕೆತ್ತಿಸಿದವನು. 

ದಳವಾಯಿ ವಿಕ್ರಮರಾಯನು ರಣಧೀರ ಮತ್ತು ಎರಡನೇ ರಾಜ ಒಡೆಯರ್ ಅವರಿಗಿಂತ ವಯಸ್ಸಿನಲ್ಲಿ ಬಹಳ ಹಿರಿಯನಾಗಿದ್ದನು. ಮಹಾರಾಜನಾದ ಇಮ್ಮಡಿ ರಾಜ ಒಡೆಯರ್ ಅವರನ್ನು ಚಿಕ್ಕಂದಿನಿಂದಲೂ "ಪುಟ್ಟಸ್ವಾಮಿ" ಎಂದು ಕರೆಯುತ್ತಿದ್ದನು. ಇಮ್ಮಡಿ ರಾಜ ಒಡೆಯರ್ ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿಯೇ ವಿಷಪ್ರಾಶನದಿಂದ ಕಾಲವಾದರು. ಅವರ ಆಡಳಿತ ಅವಧಿ ಒಂದೂವರೆ ವರುಶಕ್ಕಿಂತ ಸ್ವಲ್ಪ ಕಮ್ಮಿ. ರಣಧೀರ ಕಂಠೀರವ ನರಸರಾಜ ಒಡೆಯರ್ ರಾಜರಾಗಿದ್ದು ಈ ಸಂದರ್ಭದಲ್ಲಿ. 

ಈ ಎಲ್ಲ ವಿವರಗಳನ್ನು ಚೆನ್ನಾಗಿ ತಿಳಿದರೆ "ರಣಧೀರ ಕಂಠೀರವ" ಚಲನ ಚಿತ್ರ ಸರಿಯಾಗಿ ಅರ್ಥ ಆಗುತ್ತದೆ. ಇಲ್ಲದಿದ್ದರೆ ಸ್ವಲ್ಪ ಗೋಜಲು ಗೋಜಲು. 

******

"ರಣಧೀರ ಕಂಠೀರವ" ಚಿತ್ರದ ಮೊದಲ ಭಾಗ "ಸಂಸ" ಅವರ "ವಿಗಡ ವಿಕ್ರಮರಾಯ" ಎಂಬ ಹೆಸರಿನ ನಾಟಕವನ್ನು ಆಧರಿಸಿದೆ. ಬಹುಪಾಲು ಸಂಭಾಷಣೆಯನ್ನೂ ಈ ನಾಟಕದಿಂದ ತೆಗೆದುಕೊಂಡಿದ್ದಾರೆ. ಚಲನಚಿತ್ರಕ್ಕೆ ಅನುಕೂಲವಾಗುವಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಕಾರಣದಿಂದ "ಸಂಸ ಕವಿ" ಮತ್ತು "ವಿಗಡ ವಿಕ್ರಮರಾಯ" ನಾಟಕದ ಬಗ್ಗೆ ಸ್ವಲ್ಪ ತಿಳಿಯುವುದು ಅವಶ್ಯಕ.

1982-83 ಇಸವಿಯಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಆರ್. ಗುಂಡೂರಾವ್ ಅವರ ನೇತೃತ್ವದ ಸರ್ಕಾರ "ವಿಶ್ವ ಕನ್ನಡ ಸಮ್ಮೇಳನ" ನಡೆದ ಸಂದರ್ಭದಲ್ಲಿ 102 ಕನ್ನಡ ಕೃತಿಗಳನ್ನು ಜನಸಾಮಾನ್ಯರಿಗೆ ಎಟುಕಲೆಂದು ಮುದ್ರಿಸಿ ಕಡಿಮೆ ಬೆಲೆಗೆ ಪ್ರಕಟಿಸಿತು. ಈ 102 ಕೃತಿಗಳಲ್ಲಿ ಸಂಸರ "ವಿಗಡ ವಿಕ್ರಮರಾಯ" ಸಹ ಒಂದು. ಆಗ ಇದಕ್ಕಿಟ್ಟಿದ್ದ ಬೆಲೆ ಕೇವಲ ಒಂದೂವರೆ ರೂಪಾಯಿ! ಆಗ ಸಾಮಾನ್ಯ ಹೋಟೆಲಿನಲ್ಲಿ ಒಂದು ಊಟಕ್ಕೆ ಕೊಡಬೇಕಾಗಿದ್ದ ಮೊತ್ತಕ್ಕಿಂತ ಕಡಿಮೆ. 

"ಸಂಸ" ಎನ್ನುವುದು "ವೆಂಕಟಾದ್ರಿ" ಎಂಬ ಹೆಸರಿನ ಲೇಖಕರ ಕಾವ್ಯನಾಮ. ಅವರ ಪೂರ್ತಿ ಹೆಸರು ಎ. ಏನ್. ಸಾಮಿ ವೆಂಕಟಾದ್ರಿ ಅಯ್ಯರ್ (1898-1939). ಅವರು ಜೀವಿಸಿದ್ದು ಕೇವಲ 41 ವರ್ಷಗಳ ಕಾಲ. ಅವರ ಸ್ಥಳ ಕೊಳ್ಳೇಗಾಲದ ಬಳಿಯ ಆಗರ ಎನ್ನುವ ಹಳ್ಳಿ. ಅವರ ಬಾಲ್ಯದ ಕಾಲದಲ್ಲಿ ಹೆಚ್ಚಿನ ವಿದ್ಯಾಭ್ಯಾಸದ ಅವಕಾಶಗಳಿರಲಿಲ್ಲ. ಎಸ.ಎಸ.ಎಲ್.ಸಿ. ಪರೀಕ್ಷೆಯಲ್ಲಿ ಪಾಸಾಗದೆ ವಿದ್ಯಾಭ್ಯಾಸ ನಿಂತು ಹೋಯಿತಂತೆ. ನಂತರ ಲೈಬ್ರರಿಗಳಲ್ಲಿ ಕುಳಿತು ಕಾವ್ಯ-ನಾಟಕಾದಿಗಳನ್ನು ಅಭ್ಯಾಸ ಮಾಡಿದರಂತೆ. ಹೀಗಿದ್ದರೂ ಮುಂದೆ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಿರಿಯ ಪಂಡಿತರಾಗಿ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರಂತೆ. ಮದರಾಸು ಮತ್ತು ಮಂಗಳೂರು ಶಾಲೆಗಳಲ್ಲೂ ಕನ್ನಡ ಕಲಿಸಿದರಂತೆ. ಫಿಜಿ ದ್ವೀಪಗಳಿಗೆ ಹೋಗಿ ಸ್ವಲ್ಪ ಕಾಲ ಇದ್ದರಂತೆ. ಮಿಲಿಟರಿ ಕಚೇರಿಯಲ್ಲಿ ತಮಿಳು ಭಾಷೆ ತರಬೇತಿ ಕೊಟ್ಟರಂತೆ. ಯಾವುದೋ ಮಾನಸಿಕ ಕಾರಣಗಳಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರಂತೆ. 

"ರಾಮಾಶ್ವಮೇಧಂ" ಕೃತಿ ಕರ್ತೃ "ಮುದ್ದಣ" (ನಂದಳಿಕೆ ಲಕ್ಷ್ಮೀನಾರಾಯಣಪ್ಪ) ತೀರಿಕೊಂಡಾಗ ಅವರಿಗೆ ಕೇವಲ 31 ವರ್ಷ ವಯಸ್ಸು. ಸಂಸರಿಗೆ 41 ವಯಸ್ಸು. ಇಂತಹ ಚಿಕ್ಕ ವಯಸ್ಸಿನಲ್ಲಿ ಪ್ರತಿಭಾನ್ವಿತ ಕವಿಗಳನ್ನು ಕಳೆದುಕೊಂಡುದು ಇದು ನಮ್ಮ ದೌರ್ಭಗ್ಯ.

******

ಸಂಸರು ಬಹು ಪ್ರತಿಭೆಯ ಕವಿ. ಅವರ "ಶ್ರೀಮಂತೋದ್ಯಾನ" ಎಂಬ ಕಾವ್ಯವೊಂದು ಅಚ್ಚಾಗಿತ್ತಂತೆ. "ಸಂಸಪದಂ" ಎಂಬ ಕವನ ಸಂಗಹವೂ ಇತ್ತಂತೆ. "ಬಿರುತೆಂದೆಂಬರ ಗಂಡ", "ಸುಗುಣ ಗಂಭೀರ" ಮತ್ತು "ವಿಗಡ ವಿಕ್ರಮರಾಯ" ಐತಿಹಾಸಿಕ ನಾಟಕಗಳು. "ಬೆಟ್ಟದರಸು", "ಮಂತ್ರಶಕ್ತಿ" ಮತ್ತು "ವಿಜಯನಾರಸಿಂಹ" ಎಂಬ ಇನ್ನೂ ಮೂರು ಐತಿಹಾಸಿಕ ನಾಟಕಗಳು ಸಿಕ್ಕಿದ್ದವಂತೆ. (ಬೆಟ್ಟದರಸು ಅನ್ನುವುದು ವಿಗಡ ವಿಕ್ರಮರಾಯನ ಅಣ್ಣನ ಕಥೆ. ಅವನೂ ದಳವಾಯಿಯಾಗಿದ್ದವನು. ವಿಜಯನಾರಸಿಂಹ ಎನ್ನುವುದು ರಣಧೀರ ಕಂಠೀರವರ ಖಡ್ಗದ ಹೆಸರು). ಅವು ಅಚ್ಚಾದವೋ, ಇಲ್ಲವೋ ಗೊತ್ತಿಲ್ಲ. ಒಂದು ವಾರ್ಧಿಕ ಷಟ್ಪದಿ ಕಾವ್ಯ ಮತ್ತು ಒಂದು ಚಂಪೂ ಕಾವ್ಯ ಇವೆರಡನ್ನೂ ಅವರ ಕಾಲದಲ್ಲಿ ಅವರಿಂದಲೇ ಕೇಳಿದ್ದವರಿದ್ದರಂತೆ. ಇವು ಈಗ ಸಿಕ್ಕುತ್ತ್ತಿಲ್ಲ. ಯಾರಲ್ಲಾದರೂ ಇದ್ದರೆ ತಿಳಿಸಬಹುದು.

ಮೈಸೂರು ಅರಸರ ಸಂಗತಿಗಳನ್ನೇ ವಸ್ತುವಾಗಿ ಇಟ್ಟುಕೊಂಡು ಅವರು ಇಪ್ಪತ್ತಮೂರು ನಾಟಕಗಳನ್ನು ಬರೆದಿದ್ದರೆಂದು ಅವರ ಕಾಲದಲ್ಲಿ ಇದ್ದವರು ಹೇಳಿದ್ದಾರೆ. ಸಿಕ್ಕಿರುವುದು ಆರು ಮಾತ್ರ. ಇನ್ನು ಕೆಲವು ಹಸ್ತಪ್ರತಿಗಳು ಯಾರಲ್ಲಿಯೋ ಕೊಟ್ಟು ಕಳೆದುಹೋದುವಂತೆ. ಮತ್ತೆ ಕೆಲವನ್ನು ಅವರೇ ಯಾವುದೋ ಹತಾಶೆಯ ಪರಿಸ್ಥಿತಿಯಲ್ಲಿ ಸುಟ್ಟುಬಿಟ್ಟರಂತೆ. ಇವೆಲ್ಲವೂ ಸಿಕ್ಕಿ, ಅಚ್ಚಾಗಿ, ಜನಮಾನಸದಲ್ಲಿ ಪ್ರಚಲಿತವಾಗಿದ್ದರೆ ಅವರ ಹೆಸರು ಕನ್ನಡ ಸಾಹಿತ್ಯಲೋಕದಲ್ಲಿ ಅದೆಷ್ಟು ಜನಪ್ರಿಯವಾಗಿರುತ್ತಿತ್ತೋ!

"ವಿಗಡ ವಿಕ್ರಮರಾಯ" ನಾಟಕದ ರಚನೆಯಲ್ಲಿ ಸಂಸರು ಐತಿಹಾಸಿಕ ಘಟನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರೂ ಅಲ್ಲಲ್ಲಿ ನಾಟಕರಂಗಕ್ಕೆ ಅನುವಾಗುವಂತೆ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. "ರಣಧೀರ ಕಂಠೀರವ" ಚಲನಚಿತ್ರದಲ್ಲಿ ಮೊದಲ ಭಾಗದ ಅನೇಕ ಸಂಭಾಷಣೆಗಳು ಈ ನಾಟಕದಿಂದಲೇ ಬಂದವಾಗಿವೆ. ಆ ಕಾಲದ ಆಡುಭಾಷೆ ಮತ್ತು ಅರಮನೆಯ ಭಾಷೆ, ಇವುಗಳನ್ನು ನಾಟಕ ಮತ್ತು ಚಲನಚಿತ್ರಗಳಲ್ಲಿ ಕಾಣಬಹುದು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಳಿಯ ಬಯಲು ರಂಗಮಂದಿರ "ಸಂಸ ಬಯಲು ರಂಗಮಂದಿರ" ಎಂಬ ಹೆಸರಿನಿಂದ ಪರಿಚಿತವಾಗಿದ್ದು ನಮಗೆ ಸಂಸರ ಹೆಸರನ್ನು ನೆನಪಿಸುತ್ತಿರುತ್ತದೆ.

******

ಅನೇಕ ಪ್ರಾಚೀನ ಗ್ರಂಥಗಳು ವಿವಿಧ ಕಾರಣಗಳಿಂದ ನಮ್ಮ ದುರದೃಷ್ಟದಿಂದ ನಮಗೆ ಸಿಕ್ಕಿಲ್ಲ. ಅವುಗಳ ಹೆಸರು ಮಾತ್ರವೇ ಉಳಿದಿವೆ. ಆದರೆ, ಸಿಕ್ಕಿರುವಷ್ಟರಿಂದಲೇ ನಮ್ಮ ದೇಶ-ಭಾಷೆಗಳ ಸಾಹಿತ್ಯ-ಸಂಸ್ಕೃತಿ ಎಷ್ಟು ಶ್ರೀಮಂತ ಎನ್ನುವುದನ್ನು ಅರಿಯಬಹುದು. ಸಂಸರಂತಹ ಕವಿಗಳು ತಮ್ಮ ಬಡತನ, ಕಷ್ಟ-ಕಾರ್ಪಣ್ಯ, ಅಂದಿನ ಸಾಮಾಜಿಕ ಪರಿಸ್ಥಿತಿ, ನಿರುತ್ಸಾಹ ಹುಟ್ಟಿಸುವ ವಾತಾವರಣ, ಪ್ರತಿಭೆಗೆ ತಕ್ಕ ಪುರಸ್ಕಾರ ಸಿಕ್ಕದಿರುವುದು, ಇವುಗಳೆಲ್ಲದರ ನಡುವೆಯೂ ಸಮೃದ್ಧ ಸಾಹಿತ್ಯಸೃಷ್ಟಿ ಮಾಡಿದ್ದಾರೆ. ಅವರಿಗೆ ನಾವು ಎಷ್ಟು ಋಣಿಯಾಗಿದ್ದರೂ ಕಡಿಮೆಯೇ.

No comments:

Post a Comment