ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಎನ್ನುವ ಕೃತಿಯ ಬಗ್ಗೆ ಹಿಂದೆ (ಡಿಸೆಂಬರ್ 2024) ಒಂಭತ್ತು ಸಂಚಿಕೆಗಳಲ್ಲಿ ವಿವರವಾಗಿ ವಿಚಾರ ಮಾಡಿದ್ದೆವು. ಇವುಗಳಲ್ಲಿ ಒಂದು ಸಂಚಿಕೆಯ ಶೀರ್ಷಿಕೆ "ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ" ಎಂಬುದಾಗಿತ್ತು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಇದರ ಹಿಂದು-ಮುಂದಿನ ಸಂಚಿಕೆಗಳನ್ನೂ ಅಲ್ಲಿ ಸಿಕ್ಕುವ ಲಿಂಕುಗಳ ಸಹಾಯದಿಂದ ಓದಬಹುದು.
ಪರಮಾತ್ಮನ ವಿಷಯದಲ್ಲಿ ಅವನ ಯಾವುದೇ ನಿರ್ಬಂಧಗಳಿಲ್ಲದ ಅನಿಯಂತ್ರಿತ ಸ್ವಾತಂತ್ರ್ಯದ ಬಗ್ಗೆ (unfettered freedom) ಚಿಂತಿಸುವಾಗ ಅದನ್ನು ನಮ್ಮ ಮಿತವಾದ ಪರಿಧಿಯಲ್ಲಿ ಆಲೋಚಿಸುವುದು ಆಗದ ಕೆಲಸ. ಇದನ್ನು ನಾವು ಎಲ್ಲಿಯೋ ಓದಿಕೊಂಡು, ಅಥವಾ ಯಾರೋ ಹೇಳಿದ್ದನ್ನು ಕೇಳಿ ತಿಳಿದುಕೊಳ್ಳಲು ಆಗುವುದಿಲ್ಲ. ನಮ್ಮ ಜೀವನದ ಅನುಭವಗಳಲ್ಲಿ ಸಾಕ್ಷಾತ್ತಾಗಿ ಕಂಡ ಸಂಗತಿಗಳನ್ನು ಮತ್ತೆ ಮತ್ತೆ ವಿಮರ್ಶಿಸಿದಾಗ ಸ್ವಲ್ಪಮಟ್ಟಿನ ಅರ್ಥ ಸಿಗಬಹುದು.
ನಮ್ಮ ಬಾಲ್ಯಕಾಲದಲ್ಲಿ ಮನೆಗಳಲ್ಲಿ ಹಿರಿಯರು ಹೇಳುತ್ತಿದ್ದ ಅನೇಕ ದೃಷ್ಟಾಂತಗಳಲ್ಲಿ ಇಂತಹ ಆಳವಾದ ವಿಷಯಗಳ ನಾಟಿ ಆಗುತ್ತಿತ್ತು. ಅವು ಮುಂದೆ ನಾವು ಬಾಳಿನಲ್ಲಿ ಮಾಗಿದಂತೆ ತೆರೆದುಕೊಳ್ಳುತ್ತಾ ಹೋಗುತ್ತಿದ್ದವು. ಇಂತಹ ಒಂದು ಅನುಭವವನ್ನು ಈಗ ನೋಡೋಣ.
******
ಮೇಲೆ ಹೇಳಿದ "ಸರಸಿಜಾಕ್ಷನ ಸಕಲ ಸ್ವಾತಂತ್ರ್ಯ" ಸಂಚಿಕೆಯಲ್ಲಿನ ತಿರುಳನ್ನು ಮತ್ತೊಮ್ಮೆ ಗಮನಕ್ಕೆ ತಂದುಕೊಂಡು ಮುಂದೆ ಹೋಗೋಣ.
ಅವನ ಸ್ವಾತಂತ್ರ್ಯದ ವಿಸ್ತಾರವೇನು?
- ಯಾವುದೇ ಕ್ರಿಯೆ ಮಾಡಲೇಬೇಕೆಂದಿಲ್ಲ.
- ಯಾವುದಾದರೂ ಕ್ರಿಯೆಯನ್ನು ಹೀಗೆಯೇ ಮಾಡಬೇಕೆಂಬ ವಿಧಿ ಇಲ್ಲ.
- ಹಾಗೆ ಮಾಡಬಾರದು ಎನ್ನುವ ನಿಷೇಧವಿಲ್ಲ.
- ಇದೇ ಕ್ರಮದಲ್ಲಿ ಮುಂದುವರೆಯಬೇಕೆಂಬ ಅವಶ್ಯಕತೆ ಇಲ್ಲ.
- "ಮಾಡಿದಮೇಲೆ ಮುಗಿದುಹೋಯಿತು; ಮತ್ತೆ ಬಲಾಯಿಸುವಂತೆ ಇಲ್ಲ" ಎಂದಿಲ್ಲ.
- ಕ್ರಿಯೆ ನಡೆಯುತ್ತಿರುವಾಗ ಅಲ್ಲಿಯೇ ಕಾದು ಕುಳಿತಿರಬೇಕೆಂಬ ಅನಿವಾರ್ಯತೆ ಇಲ್ಲ.
- ಇನ್ನೊಬ್ಬರ ಅನುಮತಿ ಪಡೆದು ನಂತರ ಮಾಡಬೇಕಿಲ್ಲ.
- ಹೋಗಲಿ, ಮಾಡಿದ ನಂತರ ಬೇರೆಯವರಿಗೆ ತಿಳಿಸಬೇಕು ಎನ್ನುವ ಕಟ್ಟುಪಾಡಿಲ್ಲ.
- ಮಾಡಿದ್ದು ಸರಿ ಇದೆಯೇ ಎಂದು ನೋಡುವ ಇನ್ನೊಬ್ಬನಿಲ್ಲ.
- ಅವನು ಮಾಡುವುದು ಯಾರಿಗೂ ಗೊತ್ತಾಗುವುದೂ ಇಲ್ಲ.
- ಮಾಡದಿದ್ದರೆ ಏಕೆ ಮಾಡಲಿಲ್ಲ ಎಂದು ಕೇಳುವವನೂ ಇಲ್ಲ.
- ಇಲ್ಲಿ ಹೇಳದೆ ಬಿಟ್ಟ ಇನ್ಯಾವುದೋ ನಿಯಮ-ನಿಬಂಧನೆ ಇಲ್ಲ.
******
ಪುಟ್ಟ ಮಕ್ಕಳು ಮನೆಯಲ್ಲಿರುವ ತಾಯಂದಿರಿಗೆ ಮನೆಗೆಲಸ ಸರಿತೂಗಿಸುವುದು ಬಲು ಕಷ್ಟದ ಕೆಲಸ. ಮಗುವನ್ನು ಮಲಗಿಸಿದ ಮೇಲೆ ಮನೆ ಕೆಲಸ ಮಾಡಬೇಕು. ಇಲ್ಲವೇ ಮಲಗಿರುವ ಮಗು ಏಳುವ ಮುನ್ನ ಮಾಡಿ ಮುಗಿಸಬೇಕು. ಕೂಸಿಗೆ ಸ್ವಲ್ಪ ಚೆನ್ನಾಗಿ ಓಡಾಡುವ ವಯಸ್ಸಾದ ಮೇಲೆ ಇನ್ನೊಂದು ರೀತಿಯ ಕಷ್ಟ. ಮಗುವಿನ ತುಂಟತನಕ್ಕೆ ಪದಾರ್ಥಗಳು ಸಿಗುವುದಕ್ಕೆ ಬಿಡದಂತೆ ಕೆಲಸಗಳನ್ನು ಮಾಡಿ ಮುಗಿಸಬೇಕು. ಹೀಗೆ.
ತಾಯಿ ಯಶೋದೆಯ ಮಗ ಶ್ರೀಕೃಷ್ಣನ ವಿಷಯವಂತೂ ಹೇಳುವಂತಿಲ್ಲ. ಹೇಳಲು ಸಾಧ್ಯವೂ ಇಲ್ಲ. ಒಂದು ದಿನ ಬೆಳಗ್ಗೆ ತನ್ನ ಪ್ರೀತಿಯ ಮತ್ತು ಬಹು ಬೆಲೆ ಬಾಳುವ ಮುತ್ತಿನ ಸರ ಹಾಕಿಕೊಂಡು ಆನಂದದಿಂದ ಮೊಸರು ಕಡೆಯುತ್ತಿದ್ದಳು. ಎಷ್ಟು ನಾಜೂಕಾಗಿ ಕಡೆಯುತ್ತಿದ್ದರೂ ಮಲಗಿದ್ದ ಕೃಷ್ಣ ಆ ಶಬ್ದಕ್ಕೆ ಎದ್ದು ಬಂದ. ಹಿಂದಿನಿಂದ ಅಮ್ಮನನ್ನು ಅಪ್ಪಿಕೊಂಡ. ಮಗನನ್ನು ಮುದ್ದಿಸಲು ಕಡೆಯುವುದನ್ನು ನಿಲ್ಲಿಸಿ ಹಿಂದೆ ತಿರುಗಿದಳು. ಅಷ್ಟರಲ್ಲಿ ದೂರ ಓಡುವ ಪ್ರಯತ್ನ ಮಾಡಿದ. ಅವನ ಕೈಯಲ್ಲಿ ಸಿಕ್ಕಿದ್ದ ಮುತ್ತಿನ ಹಾರ ಕಿತ್ತುಹೋಗಿ ಮುತ್ತುಗಳೆಲ್ಲಾ ಚಲ್ಲಾಪಿಲ್ಲಿ ಆದವು.
ಮಗುವನ್ನು ಬೈದು ಏನು ಪ್ರಯೋಜನ? ತಾಳ್ಮೆ ತೆಗೆದುಕೊಂಡು ಎಲ್ಲಾ ಮುತ್ತುಗಳನ್ನೂ ಆರಿಸಿಟ್ಟಳು. ಸಂದಿಯಲ್ಲಿದ್ದ ಒಂದೊಂದು ಮುತ್ತೂ ಹುಡುಕಿ ಲೆಕ್ಕ ಮಾಡುವಷ್ಟರಲ್ಲಿ ಸಾಕು ಸಾಕಾಯಿತು. ಸೊಂಟ ನೋವು ಬಂತು. ಸದ್ಯ, ಎಲ್ಲಾ ಸಿಕ್ಕಿತು ಎಂದು ಸಮಾಧಾನ ಆಯಿತು. ಈಗ ಎಲ್ಲಾ ಮುತ್ತುಗಳನ್ನು ಹೊಸ ದಾರದಲ್ಲಿ ಪೋಣಿಸಿಕೊಂಡು ತಯಾರು ಮಾಡಬೇಕು. ಕೃಷ್ಣ ಮನೆಯಲ್ಲಿ ಇರುವಾಗ ಇದು ಸಾಧ್ಯವಿಲ್ಲ. ಅವನು ರಾತ್ರಿ ಮಲಗಿದ್ದಾಗ, ಬೆಳಗ್ಗೆ ಏಳುವ ಮೊದಲು, ಅಥವಾ ಹೊರಗಡೆ ಹೋದಾಗ ಈ ಕೆಲಸ ಮಾಡಿ ಮುಗಿಸಬೇಕು. ಮಾರನೆಯ ದಿನ ಬೆಳಿಗ್ಗೆ ಆ ಕೆಲಸ ಮಾಡುವುದು ಎಂದುಕೊಂಡಳು.
******
ಶ್ರೀ ಪುರಂದರದಾಸರು ಈ ಪ್ರಸಂಗವನ್ನು ಒಂದು ದೇವರನಾಮದಲ್ಲಿ ಹೇಳುತ್ತಾರೆ:
ಹೊತ್ತಾರೆ ಎದ್ದು ಕುಳಿತು ಗೋಪ್ಯಮ್ಮ ತಾನು
ಮುತ್ತ ಪೋಣಿಸುತ್ತಿದ್ದಳು
ಅತ್ತಲಿಂದ ಕೃಷ್ಣ ಬಂದು
ಒಂದು ಮುತ್ತು ಕೈಲಿ ಪಿಡಿದು
ಹಿತ್ತಿಲಲ್ಲಿ ಹಾಕಿ ಪೋದ
ಸೂಜಿ-ದಾರ, ಆರಿಸಿಟ್ಟಿದ್ದ ಮುತ್ತುಗಳು, ಇವುಗಳನ್ನು ಹೊಂದಿಸಿಕೊಂಡು ಪೋಣಿಸುವುದು ಪ್ರಾರಂಭವಾಯಿತು. ಹೊತ್ತಾರೆ ಎನ್ನುವ ಪದ (ಹಳ್ಳಿ ಕಡೆಯಲ್ಲಿ ವತ್ತಾರೆ ಅನ್ನುತ್ತಿದ್ದರು) ಈಗ ಉಪಯೋಗಿಸುವುದು ನಿಂತೇಹೋಗಿದೆ. ಬೆಳ್ಳಂಬೆಳಿಗ್ಗೆ ಅನ್ನುವುದೂ ಇಲ್ಲ. (ಅಚ್ಚ ಕನ್ನಡದಲ್ಲಿ "ಅರ್ಲಿ ಮಾರ್ನಿಂಗ್" ಎಂದುಬಿಡುತ್ತೇವೆ!) ಬಾಲಕೃಷ್ಣ ಅದು ಯಾವ ಮಾಯದಲ್ಲಿ ಎಲ್ಲಿಂದ ಬಂದನೋ! ಮುತ್ತಿನ ಗುಡ್ಡೆಯಲ್ಲಿ ಒಂದು ಮುತ್ತು ಎತ್ತಿಕೊಂಡ. ಯಶೋದೆ "ಕೃಷ್ಣಾ, ಬೇಡ. ಅದನ್ನು ಇಟ್ಟುಬಿಡು" ಅನ್ನುತ್ತಿರುವಾಗಲೇ ಕೈಯಲ್ಲಿ ಅದನ್ನು ಹಿಡಿದುಕೊಂಡು ಮನೆಯ ಹಿತ್ತಿಲಿನ ಕಡೆ ಓಡಿದ. ನೋಡುತ್ತಿದ್ದಂತೆ ಅದನ್ನು ಹಿತ್ತಿಲಲ್ಲಿ ಎಲ್ಲಿಯೋ ಎಸೆದವನು ಓಡಿ ಹೊರಟೇ ಹೋದ. ಆ ಹಿತ್ತಿಲೋ, ನಂದಗೋಪನ ನೂರಾರು ಹಸುಗಳನ್ನು ಕಟ್ಟುವ ವಿಶಾಲವಾದ ಹಿತ್ತಿಲ ಪ್ರದೇಶ.
ಅವನು ತೆಗೆದುಕೊಂಡು ಹೋದದ್ದು ಒಂದೇ ಮುತ್ತು. ಆದರೆ ಅದಿಲ್ಲದೆ ಹಾರ ಪೂರ್ಣ ಆಗುವುದಿಲ್ಲ. ಸರಿ-ಸಮನಾಗಿ ಕಾಣುವುದಿಲ್ಲ. ಯಶೋದೆಗೆ ಅಸಾಧ್ಯ ಕೋಪ ಬಂತು.
ಸಿಟ್ಟು-ಸಿಟ್ಟಿಲಿ ಎದ್ದಳು
ಗೋಪ್ಯಮ್ಮ ತಾನು ದುಷ್ಟ ಕೃಷ್ಣ ಮೇಲೆ
ಕೇರಿ-ಕೇರಿ ಹುಡುಕಿದಾಳು
ದಾರಿ ತಪ್ಪಿ ತಿರುಗಿದಾಳು
ಪೋಣಿಸುವ ಕೆಲಸ ಅಲ್ಲಿಗೇ ಬಿಟ್ಟು ಥಟ್ಟಂತ ಎದ್ದಳು. ಅವನ ಹಿಂದೆ ಓಡಿದಳು. ಅವನೇನು ಅವಳ ಕೈಗೆ ಸಿಗುವವನಲ್ಲ. ಕಾಣದಂತೆ ಎಲ್ಲಿಗೋ ಹೋದ. ಇವಳು ನಂದಗೋಪನ ರಾಣಿ. ಅನೇಕ ಸೇವಕರು. ಹೆಚ್ಚಿಗೆ ಹೊರಗೆ ಹೋಗಿ ಅಭ್ಯಾಸವಿಲ್ಲ. ಗೋಕುಲದ ಸಂದು-ಗೊಂದುಗಳಲ್ಲಿ ಅಲೆಯುತ್ತಾ ದಾರಿ ತಪ್ಪಿದಳು. (ನಂದಗೋಪನ ಮಂದಿರಂಗಳ ಸಂದು-ಗೊಂದಿನಲಿ ಎನ್ನುವ "ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ?" ಕೃತಿ ನೆನಪಿಸಿಕೊಳ್ಳಿ). ಕಡೆಗೆ ಸುಸ್ತಾಗಿ ಏನೂಮಾಡಲು ತೋಚದೆ ಒಂದೆಡೆ ನಿಂತಳು.
******
ತಾಯಿ ಬಸವಳಿದು ನಿಂತಿರುವುದು ಕೃಷ್ಣನಿಗೆ ಗೊತ್ತಾಯಿತು. ತಕ್ಷಣ ಯಾವುದೋ ಸಂದಿಯಿಂದ ಬಂದವನು ಮುಂದೆ ನಿಂತ! ಅಮ್ಮನ ಕೈ ಹಿಡಿದುಕೊಂಡು ತಾನೇ ಸುಲಭವಾಗಿ ಮನೆಗೆ ಕರೆದುಕೊಂಡು ಬಂದ. ಮನೆಗೆ ಬರುತ್ತಿದ್ದಂತೆಯೇ ಯಶೋದೆಯ ಮಾತೃತ್ವ ಜಾಗೃತವಾಯಿತು. ಮಗು ಬೆಳಗ್ಗಿನಿಂದ ಏನನ್ನೂ ತಿಂದಿಲ್ಲವಲ್ಲ ಎನ್ನುವ ಆತಂಕ ಮುಂದೆ ಬಂದಿತು.
ಹೊತ್ತು ಬಹಳ ಆಯಿತೆಂದು
ತುತ್ತು ಮಾಡಿ ಉಣಿಸಿದಾಳು
ಮುತ್ತು ಏನು ಆಯಿತೆಂದು
ಒತ್ತಿ-ಒತ್ತಿ ಕೇಳಿದಾಳು!
ಒಂದು ಕಡೆ ಹಸಿದ ಕಂದನಿಗೆ ಪ್ರೀತಿಯ ಕೈತುತ್ತು ಕೊಡುವಳು. ಇನ್ನೊಂದು ಕಡೆ ಮುತ್ತಿನ ಯೋಚನೆ. ಅದರ ಬಗ್ಗೆ ವಿಚಾರಿಸಿದಳು. ಮುದ್ದು ಸುರಿಯುತ್ತಾ ಕೃಷ್ಣ ತುತ್ತುಗಳನ್ನು ತಿಂದ. "ಮುತ್ತು ತೋರಿಸುತ್ತೇನೆ ಅಮ್ಮಾ", ಅಂದ.
ಹೆತ್ತ ತಾಯಿಯ ಕರೆದು ಕೃಷ್ಣಯ್ಯ ತಾನು
ಹಿತ್ತಿಲ ಮುತ್ತಿನ ಮರ ತೋರಿದ
ಎಂಟು-ಎಂಟು ಕೊಂಬೆ ಒಡೆದು
ಗೊಂಚಲಾಗಿ ಜಗ್ಗುತಿರಲು
ಕೊಯ್ದು ಕೊಯ್ದು ರಾಶಿ ಹಾಕಿದ
ಪುರಂದರ ವಿಠಲರಾಯ
ಯಾರಿಗೆ ಪೇಳಲಮ್ಮಾ?
ಕೃಷ್ಣನ ಮಹಿಮೆ ಯಾರಿಗೆ ತಿಳಿವುದಮ್ಮಾ?
ಕೃಷ್ಣ ಬಿಸಾಡಿದ್ದು ಒಂದು ಮುತ್ತು. ಅದು ಮೊಳಕೆಯಾಗಿ, ಚಿಗುರೊಡೆದು, ಬೆಳೆದು ಮರವಾಗುವ ಪದಾರ್ಥವಲ್ಲ. ಜಡವಸ್ತುಗಳಲ್ಲಿ ಅತ್ಯಂತ ಜಡವಾದದ್ದು. ಗೊಬ್ಬರವಿಲ್ಲ. ನೀರಿನ ಆಸರೆಯಿಲ್ಲ. ಬೆಳೆಯುವವನ ಆರೈಕೆಯಿಲ್ಲ. ಎಸೆದು ಹೋಗಿದ್ದು ಬೆಳಗಿನ ಹೊತ್ತಿನಲ್ಲಿ. ಮಧ್ಯಾನ್ಹಕ್ಕೆ ಮರವಾಗಿ ಬೆಳೆದು, ರೆಂಬೆ-ಕೊಂಬೆಗಳಿಂದ ತುಂಬಿಕೊಂಡು, ಗೊಂಚಲು-ಗೊಂಚಲಿನ ಮುತ್ತುಗಳು ರಾಶಿ-ರಾಶಿಯಾಗುವಷ್ಟು ಬೆಳೆದು ತುಂಬಿ ನಿಂತಿವೆ!
******
ಬಾಲ್ಯದಲ್ಲಿ ತಾಯಿ ಹೇಳುತ್ತಿದ್ದ ಈ ಹಾಡು ಬಹಳ ರಂಜಕ ಅನಿಸುತ್ತಿತ್ತು. ಕೃಷ್ಣನ ತುಂಟಾಟ ಮತ್ತು ಯಶೋದೆಯ ಪರಿಪಾಟಲು ತಿಳಿಯುತ್ತಿತ್ತು. ಒಂದು ಸುಂದರ ಕಥಾ ಪ್ರಸಂಗ. ಅಷ್ಟೇ.
ನಲವತ್ತು-ಐವತ್ತು ವರುಷಗಳ ನಂತರ "ಕರ್ತುಮ್, ಆಕರ್ತುಮ್ ಅಥವಾ ಅನ್ಯಥಾ ಕರ್ತುಮ್ ಶಕ್ತ:. ಅವನು ಮಾಡಬಹುದು. He can do. ಮಾಡಿದ್ದನ್ನು ಹಿಂದಿರುಗಿಸಬಹುದು. He can undo what is done. ಬೇರೇನನ್ನೋ ಸಹ ಮಾಡಬಹುದು. He can do something else as well!. ಇಂತಹ ಸ್ವಾತಂತ್ರ್ಯ ಅವನಿಗೆ ಉಂಟು. ಅವನೊಬ್ಬನಿಗೆ ಮಾತ್ರ ಉಂಟು." ಎನ್ನುವ ಪ್ರಮೇಯಕ್ಕೆ ಇದು ಒಂದು ಅನನ್ಯ ದೃಷ್ಟಾಂತ ಎಂದು ನಿಧಾನವಾಗಿ ಅರ್ಥ ಆಗುತ್ತಿದೆ.
- ಅತ್ಯಂತ ಜಡವಾದ ಒಂದು ಮುತ್ತು ಅವನ ಕೈಯಲ್ಲಿ ಸಸ್ಯದ ಬೀಜದಂತೆ ಆಯಿತು. (ಅನ್ಯಥಾ ಕರ್ತುಮ್ ಶಕ್ತ:)
- ಬೆಳಗ್ಗೆ ಎಸೆದುಹೋದ ಮುತ್ತು, ಮಧ್ಯಾನ್ಹದ ವೇಳೆಗೆ ಮುತ್ತಿನ ಮರವಾಗಿ ಬೆಳೆದು ನಿಂತಿತು. (ಅವನೇ ಕಾಲರೂಪ!)
- ಅವನ ಕಣ್ಣು ತಪ್ಪಿಸಿ ನಾವು ಏನೂ ಮಾಡುವಂತಿಲ್ಲ. (ಅವನು ಸಹಸ್ರಾಕ್ಷ. ಅನಂತ ಕಣ್ಣುಗಳುಳ್ಳವನು)
- ಅವನನ್ನು ನಾವು ಹಿಡಿಯಲಾಗುವುದಿಲ್ಲ. ಹಿಡಿಯುವ ಪ್ರಯತ್ನ ಮಾಡಲೇಬೇಕು. ಆಗ ಅವನೇ ತಾನಾಗಿ ಸಿಗುತ್ತಾನೆ.
- ನಾವು ದಾರಿ ತಪ್ಪಿ ನಿಂತಾಗ ಅವನು ಸುಲಭವಾಗಿ ದಾರಿ ತೋರಿಸುತ್ತಾನೆ.
- ಯಶೋದೆಗೆ ಮನೆಗೆ ಕರೆತಂದಂತೆ ಜೀವರನ್ನು ಮುಕ್ತಿ ಎಂಬ ಮನೆಗೆ ಕರೆದೊಯ್ಯುತ್ತಾನೆ.
- ಯಶೋದೆಯಿಂದ ಕೊಂಡೊಯ್ಡಿದ್ದು ಒಂದು ಮುತ್ತು. ನಂತರ ಅವಳಿಗೆ ಸಿಕ್ಕಿದ್ದು ಮುತ್ತಿನ ರಾಶಿ. (ಕೊಡುವನು ಆನಂತ ಮಡಿಮಾಡಿ. ಮೂರ್ಮಡಿ, ನಾಲ್ಮಡಿ ಅಲ್ಲ. ಅನಂತ ಮಡಿ)
- ಲೋಕದ ದೃಷ್ಟಿಯಲ್ಲಿ ಅವಳು ಹೆತ್ತ ತಾಯಿ. ಹುಟ್ಟೇ ಇಲ್ಲದವನಿಗೆ ಎಲ್ಲಿಯ ತಾಯಿ?
ಕಾಲಾಂತರ್ಗತ ಕಾಲ ನಿಯಾಮಕ ಕಾಲಾತೀತ ತ್ರಿಕಾಲಜ್ಞ
ಕಾಲ ಪ್ರವರ್ತಕ ಕಾಲ ನಿವರ್ತಕ ಕಾಲೋತ್ಪಾದಕ ಕಾಲರೂಪ ತವ ದಾಸೋಹಂ
ಕೃತಿಯ ಒಂದೊಂದು ಪದಕ್ಕೂ ಒಂದು ಪುಟ ವ್ಯಾಖ್ಯಾನ ಬರೆಯಬಹುದು.
ಈ ಕೃತಿಯನ್ನು ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು:
******
ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವ ಮನಸ್ಸಾಗಬೇಕು. ಆಮೇಲೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ನಂತರ ಅರ್ಥ ಆಗಬೇಕು. ಇಷ್ಠಾದನಂತರ ಅರ್ಥವಾಗಿದ್ದು ನೆನಪಿನಲ್ಲಿ ಉಳಿಯಬೇಕು. ಕಡೆಗೆ ಅರ್ಥವಾಗಿ ಉಳಿದಿದ್ದು ಅನುಷ್ಠಾನಕ್ಕೆ ಒದಗಿಬರಬೇಕು!
ಯಾವ ಹಂತದಲ್ಲಿ ಕೈತಪ್ಪಿದರೂ ಹೋಯಿತು!

No comments:
Post a Comment