ಕೆಲವರು ಮಾತನಾಡಿದರೆ ಚೆನ್ನ. ಇನ್ನಷ್ಟು ಕೇಳಬೇಕು ಅನಿಸುವುದು. ಮತ್ತೆ ಕೆಲವರು ಸುಮ್ಮನಿದ್ದರೆ ಚೆನ್ನ. ಮಾತನಾಡುವುದು ಯಾವಾಗ ನಿಲ್ಲಿಸುತ್ತಾರೋ ಎಂದು ಕಾಯಬೇಕಾಗುವುದು. ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದರೆ ಬಲು ಚೆನ್ನ. ಅತಿಯಾಗಿ ಮಾತಾಡಿದರೆ ಕಷ್ಟ. "ಒಡಕು ಮಡಕೆಗೆ ಕಲ್ಲು ಹಾಕಿದಂತೆ" ಆಗಬಾರದು. ಏನು ಹೇಳಬೇಕೆಂದಿದ್ದಾರೋ ಅದನ್ನು ಸರಿಯಾಗಿ, ಪೂರ್ತಿಯಾಗಿ ಹೇಳದೆ ಕಡಿಮೆ ಮಾತಾಡಿದರೆ ಇನ್ನೂ ಕಷ್ಟ. "ಮಾತೇ ಆಡದಿದ್ದರೆ ಅರ್ಥವಾಗುವುದಾದರೂ ಹೇಗೆ?" ಎಂದು ಉದ್ಗರಿಸುವುದು ಆಗಾಗ ಅಲ್ಲಲ್ಲಿ ಕೇಳಿ ಬರುವುದು.
"ಮಾತು ಬೆಳ್ಳಿ; ಮೌನ ಬಂಗಾರ" ಎಂದೊಂದು ಗಾದೆ. ಆದರೆ "ಮೌನದಿಂದಲೇ ಕೊಲ್ಲುತ್ತಾಳೆ" ಎಂದು ಹೇಳುವುದು ಕೇಳಿದ್ದೇವೆ. "ಹರಿತದ ಮಾತಿನಿಂದ ಇರಿಯುತ್ತಾನೆ" ಎಂದು ಕೆಲ ಸಂದರ್ಭಗಳಲ್ಲಿ ಹೇಳುವುದೂ ಉಂಟು. ಆಗ ಮಾತು ಕತ್ತಿಗಿಂತಲೂ ಹರಿತ. ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ದುರ್ಯೋಧನನಿಗೆ ಭೀಮಸೇನನ ಬಿರುಸು ಗದೆಯ ಹೊಡೆತಕ್ಕಿಂತ ಮಾತಿನ ಇರಿತ ತಾಳದಾಯಿತು. ದೊಡ್ಡವರ ಸಾಂತ್ವನದ ನುಡಿಗಳು ಅದಕ್ಕೆ ತದ್ವಿರುದ್ಧ. "ಅವರ ಮಾತಿನಿಂದ ಎಷ್ಟೋ ಸಮಾಧಾನವಾಯಿತು" ಎಂದು ಕೆಲವೊಮ್ಮೆ ಅನಿಸುವುದು. "ಅವನೊಡನೆ ಮಾತಾಡಿದ್ದೇ ತಪ್ಪಾಯಿತಲ್ಲ. ಮನಸ್ಸು ಇನ್ನೂ ಉದ್ವಿಗ್ನವಾಯಿತು" ಅನ್ನುವ ಪರಿಸ್ಥಿತಿಗಳೂ ಉಂಟು. ಮಾತಿಗೆ ತೂಕ ಇರಬೇಕು. ತೂಕದ ಮಾತು ಬೇಕು. ಕೆಲವೊಮ್ಮೆ ಮಾತು ಬೇಕು. ಮತ್ತೆ ಕೆಲವೊಮ್ಮೆ ಮಾತೇ ಬೇಡ.
ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಅನೇಕ ಭೇದಗಳಲ್ಲಿ ಈ ಮಾತನಾಡುವ ಶಕ್ತಿಯೂ ಒಂದು. ಒಂದು ಮಗು ಹುಟ್ಟಿದ ತಕ್ಷಣ ಸಂಭ್ರಮ ಆವರಿಸುತ್ತದೆ. ಆ ಮಗು ತೊದಲು ನುಡಿಗಳನ್ನು ಆಡಲು ಆರಂಭಿಸಿದಾಗ ಇನ್ನೂ ಸಂಭ್ರಮ. ಅರ್ಥವಾಗುವಂತೆ ಮಾತಾಡಿದರೆ ಮತ್ತಷ್ಟು ಸಂತಸ. ಆದರೆ ಜೀವನ ಪೂರ್ತಿ ತೊದಲುತ್ತಾ ಮಾತನಾಡುತ್ತಿದ್ದರೆ ಅದು ಹೇಗೆ? ಅದನ್ನು ಹೆತ್ತ ತಂದೆ-ತಾಯಿಯರಿಗೆ ಅದೊಂದು ಘೋರ ಕಷ್ಟ. ಮಗು ದೊಡ್ಡದಾದರೂ ಮಾತೇ ಬರದಿದ್ದರೆ ಹೇಳಲಾಗದ ವೇದನೆ. ಕಂಡ ಕಂಡ ವೈದ್ಯರಿಗೆಲ್ಲಾ ತೋರಿಸುವುದು ನಡೆಯುತ್ತದೆ.
ಹೆಸರಾಂತ ನಟ, ನಿರ್ಮಾಪಕ, ನಿರ್ದೇಶಕ ಮನೋಜ ಕುಮಾರನ "ಶೋರ್" ಅನ್ನುವ ಹಿಂದಿ ಚಲನಚಿತ್ರದ ಕಥೆ ಅದೇ. ಅವನಿಗೆ ಹುಟ್ಟಿದ ತನ್ನ ಮಗ ಮಾತಾಡುವುದಿಲ್ಲ ಎಂದು ಆತಂಕ. ಪ್ರಪಂಚದ ಬೇರೆಲ್ಲಾ ಶಬ್ದಗಳೂ ಅವನನ್ನು ಹಿಂಸೆ ಮಾಡುತ್ತವೆ. ಅವನು ಕೇಳಬೇಕೆಂದಿರುವ ಒಂದೇ ಶಬ್ದವೆಂದರೆ ಮಗನ ಮಾತು. ಆದರೆ ಅವನು ಮಾತಾಡುವುದಿಲ್ಲ. ಕಡೆಗೊಂದು ದಿನ ಒಬ್ಬ ವೈದ್ಯರು ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮಾತು ಬರಿಸುತ್ತಾರೆ. ಇನ್ನೇನು ಆಸ್ಪತ್ರೆಗೆ ಹೋಗಿ ಮಗನ ಮಾತು ಕೇಳಬೇಕು ಅನ್ನುವ ಸಮಯ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಪಘಾತ. ಅಪಘಾತದಲ್ಲಿ ತಂದೆಗೆ ಶ್ರವಣ ಶಕ್ತಿ ಹೋಗುತ್ತದೆ. ಅಪ್ಪ ಕಿವುಡನಾಗುತ್ತಾನೆ. ಈಗ ಮಗ ಮಾತಾಡುತ್ತಾನೆ. ಆದರೆ ತಂದೆ ಕೇಳಲಾರ. ಅದೊಂದು ವಿಪರ್ಯಾಸ.
ಒಟ್ಟಿನಲ್ಲಿ ಮಾತು ಒಂದು ಪ್ರಶ್ನೆಯೇ!
*****
ಹುಟ್ಟಿದಂದಿನಿಂದ ಮಾತು ಹೊರಡದೇ ಇರುವುದು ಒಂದು ರೀತಿಯ ದೋಷ. ಅವರನ್ನು "ಮೂಕ' ಎನ್ನುತ್ತೇವೆ. ಕೆಲವರಿಗೆ ಕಿವಿ ಕೇಳದೆ, ಮಾತು ಬರೆದೇ ಇರುವುದು ಉಂಟು. ಇವರು "ಮೂಕ-ಬಧಿರರು" ಅಥವಾ "ಕಿವುಡು-ಮೂಗರು". ಇದೊಂದು ರೀತಿಯ ದೋಷ. ಹಾಗೆಯೇ ಮಾತನಾಡಬಲ್ಲ ಕೆಲವರಿಗೆ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಕೆಲವರನ್ನು "ಮೂಗಿನಲ್ಲಿ ಮಾತಾಡುತ್ತಾನೆ" ಅನ್ನಬಹುದು. ಏನೋ ಒಂದು ವಿಕಾರ ಅಥವಾ ಕೊರತೆ. "ಎಲ್ಲರಂತೆ ನಾನಿಲ್ಲ" ಎಂದು ಅವರಿಗೆ ದುಃಖ. ಹೆತ್ತವರಿಗೆ "ಇದೇನು, ಹೀಗೆ ಆಯಿತಲ್ಲ?" ಎನ್ನುವ ಚಿಂತೆ. ಕೆಲವರಿಗೆ ಅವರನ್ನು ನೋಡಿ ಅಪಹಾಸ್ಯ ಮಾಡುವ ಗೀಳು. ಉಳಿದವರಿಗೆ ಅವರನ್ನು ಕಂಡಾಗ ಮರುಕ. ಒಟ್ಟಿನಲ್ಲಿ ಏನೋ ಒಂದು "ಸರಿಯಿಲ್ಲ" ಅನ್ನುವ ಸ್ಥಿತಿ.
ಕೆಲವರಿಗೆ ಮಾತು ಬರದೇ ಪೂರ್ತಿ ಜೀವನ ಹಾಗೆಯೇ ನಡೆಯಬಹುದು. ಮತ್ತೆ ಕೆಲವರಿಗೆ ಮೊದಲು ಮಾತು ಬರದಿದ್ದರೂ ಮುಂದೆಂದೋ, ಶಸ್ತ್ರ ಚಿಕಿತ್ಸೆಯಿಂದ ಅಥವಾ ಮತ್ತ್ಯಾವುದೋ ಕಾರಣದಿಂದ ಮಾತು ಬರಬಹುದು. ಚೆನ್ನಾಗಿ ಮಾತು ಬಂದು ಜೀವನ ನಡೆಸುತ್ತಿರುವವರಿಗೆ ಮುಂದೆಂದೋ ಮಾತಿನ ತೊಂದರೆ ಬರುವುದೂ ಇದೆ. ತೊದಲುವುದು, ಶಬ್ದ ಸರಿಯಾಗಿ ಹೊರಡದಿರುವುದು, ಆಗಾಗ ಮಾತು ನಿಲ್ಲುವುದು, ಮುಂತಾದುವು ಆಗುತ್ತವೆ. ಅನೇಕ ಕಾಯಿಲೆಗಳಿಂದ ಮಾತು ಹೆಚ್ಚು-ಕಡಿಮೆ ಆಗಬಹುದು. ಕೆಲವರಿಗೆ ಹಗಲೆಲ್ಲಾ ಮಾತು ಸರಿಯಿದ್ದು ಸಂಜೆ ಆಗುತ್ತಿದ್ದಂತೆ ಆಯಾಸದಿಂದ ಮಾತು ತೊದಲಬಹುದು. ಅಪಘಾತಗಳಿಂದ ಮಾತೇ ನಿಂತುಹೋಗಬಹುದು. ಹೀಗೆ ಹಲವು ರೀತಿ. ನಾವು ನಮ್ಮ ಸುತ್ತ-ಮುತ್ತ ಕಂಡಂತೆ.
ಹೀಗೆ ಮಾತಿನಲ್ಲಿ ವ್ಯತ್ಯಾಸ ಆಗುವುದು ದೈಹಿಕ ಕಾರಣಗಳ ಜೊತೆ ಮಾನಸಿಕ ಮತ್ತು ಬೌದ್ಧಿಕ ಕಾರಣಗಳಿಂದಲೂ ಉಂಟು. ಕೆಲವು ಮಕ್ಕಳಿಗೆ ಹಿಂದೆ ತಮಗೆ ಹೊಡೆತ ಮೊದಲಾದ ಹಿಂಸೆ ಕೊಟ್ಟವರ ಮುಂದೆ ಮಾತು ಹೊರಡುವುದಿಲ್ಲ. ಚೆನ್ನಾಗಿ ತಯಾರಿ ಮಾಡಿಕೊಂಡು ಸಂದರ್ಶನಕ್ಕೆ (ಇಂಟರ್ವ್ಯೂ) ಹೋದವನಿಗೆ ಅಲ್ಲಿ ಕುಳಿತಾಗ ಆತಂಕದಿಂದ ಮಾತು ಹೊರಡದು. ಹೀಗೆ ಹಲವು ವಿಧ.
*****
ತಿಳಿದವರು "ಹತ್ತು ರೀತಿಯ ಮಾತಿನ ತೊಂದರೆ" ಇವೆ ಎಂದು ಹೇಳುತ್ತಾರೆ. ಇವು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಕಾರಣಗಳು ಒಂದೊಂದರಿಂದ ಅಥವಾ ಎರಡು, ಮೂರು ಸೇರುವುದರಿಂದ ಆಗಬಹುದು. ಇವುಗಳಲ್ಲಿ ಕೆಲವಕ್ಕೆ ಇರುವ ವ್ಯತ್ಯಾಸ ಬಹಳ ತೆಳುವಾದದು. ಒಂದನ್ನು ಇನ್ನೊಂದಕ್ಕೆ ತಪ್ಪಾಗಿ ತಿಳಿಯಬಹುದು.ಈ ಹತ್ತು ದೋಷಗಳು ಯಾವುವು ಎಂದು ನೋಡೋಣ.
- ಅಜ್ಞಾನ (ತಿಳಿಯದಿರುವುದು): ಏನು ಮಾತನಾಡಬೇಕೆಂದು ತಿಳಿಯದೇ ಮೂಕರಾಗುವುದು. "ಏನು ಹೇಳಬೇಕೆಂದು ಗೊತ್ತಾಗಲಿಲ್ಲ" ಎಂದು ನಂತರ ಅನ್ನಬಹುದು. ಹೀಗೆ ಮಾತನಾಡಿದರೆ ಸರಿಯೋ, ತಪ್ಪೋ ಎನ್ನುವ ಭೀತಿ ಇರಬಹುದು. ಹೇಗೆ ಪ್ರಾರಂಭಿಸಬೇಕು ಎಂದು ಗೊತ್ತಾಗದಿರಬಹುದು. ವಿಷಯದ ಪರಿಚಯ ಇಲ್ಲದಿರುವುದರಿಂದ ಆಗಬಹುದು.
- ವಿಸ್ಮೃತಿ (ಮರೆವು): ಮೊದಲು ವಿಷಯ ಚೆನ್ನಾಗಿ ತಿಳಿದಿದ್ದರೂ ಮಾತನಾಡಬೇಕಾದಾಗ ನೆನಪು ಕೈಕೊಡುವುದು. ಬಹಳ ತಯಾರಿ ನಡೆಸಿದ್ದರೂ ಬೇಕಿದ್ದಾಗ ಅದು ಹೊಳೆಯಲಿಲ್ಲ. ಒಂದೇ ವಿಷಯವನ್ನು ಹತ್ತಾರು ಬಾರಿ ಪಾಠ ಹೇಳಿದ್ದರೂ ಕೆಲವರಿಗೆ ಈ ಕಾರಣದಿಂದ ತೊಂದರೆ ಆಗುವುದು. ಪಾಠ ಮುಗಿಸಿ ಹೊರಬಂದ ನಂತರ ಅದೇ ವಿಷಯ ಮತ್ತೆ ನೆನಪಿಗೆ ಬರುವುದುಂಟು.
- ಭ್ರಾಂತಿ (ಭ್ರಮೆ): ಕೆಲವು ಲಕ್ಷಣಗಳಿಂದ ಒಂದನ್ನು ಇನ್ನೊಂದಾಗಿ ತಿಳಿಯುವುದು. ಬೆಳ್ಳಗಿರುವುದರಿಂದ ಸುಣ್ಣದ ನೀರನ್ನು ಹಾಲೆಂದು ತಿಳಿಯುವುದು. ಹಗ್ಗವನ್ನು ಹಾವೆಂದು ಭ್ರಮಿಸುವುದು. ಈ ಕಾರಣದಿಂದ ಮಾತಿನಲ್ಲಿ ವ್ಯತ್ಯಾಸ.
- ಸಂಶಯ (ಅನುಮಾನ): ಮಾತಾಡುತ್ತಿರುವ ವಿಷಯದಲ್ಲಿ ಅನೇಕ ಅನುಮಾನಗಳ ಕಾರಣ ಮಾತು ಸರಿಯಾಗಿ ಹೊರಡದಿರುವುದು. ತಲೆಯಲ್ಲಿ ವಿಷಯ ಕಲಸು-ಮೇಲೋಗರ. ಹೀಗೆ ಹೇಳಿದರೆ ಹೇಗೋ? ಹಾಗೆ ಹೇಳಿದರೆ ಹೇಗೋ? ಈ ರೀತಿಯ ಅಭಿವ್ಯಕ್ತಿಯಲ್ಲಿ ಅನುಮಾನ.
- ಅಪಸ್ಮ್ರುತಿ (ತಪ್ಪು ತಿಳಿವಳಿಕೆ): ಭ್ರಾಂತಿಯ ಇನ್ನೊಂದು ರೂಪ. ಸ್ವಲ್ಪವೇ ವ್ಯತ್ಯಾಸ. ರಾಮಣ್ಣನವರ ವಿಷಯ ಗೊತ್ತು. ಭೀಮಣ್ಣನವರ ವಿಷಯವೂ ಗೊತ್ತು. ಆದರೆ ಮಾತಾಡುವಾಗ ಒಬ್ಬರ ಬದಲು ಇನ್ನೊಬರ ವಿಷಯ ಮಾತಾಡುತ್ತಾ ಹೋಗುವುದು.
- ಕ್ಷಯ (ಕಡಿಮೆಯಾಗುವುದು): ಮೊದಲು ಮಾತು ಚೆನ್ನಾಗಿದ್ದರೂ ಮುಂದೆ ಅನೇಕ ಕಾರಣಗಳಿಂದ ಕ್ರಮೇಣ ಮಾತಿನ ಆಳ ಕಡಿಮೆ ಆಗುವುದು. ಶಬ್ದ ಸರಿಯಾಗಿ ಹೊರಡದಿರುವುದು. ಮಾತಾಡುವ ವಿಷಯಗಳು ಕಡಿಮೆಯಾಗುವುದು. ಹೇಳಿದ್ದೇ ಹೇಳುತ್ತಿರುವುದು. ಮುಂತಾದುವು.
- ತಂದ್ರಾ (ಆಲಸ್ಯ): ತಂದ್ರಾ ಪದಕ್ಕೆ ತೂಕಡಿಕೆ ಎಂದು ಒಂದು ಅರ್ಥ. ಮಾತಿನಲ್ಲಿ ತೂಕಡಿಕೆ ಅಂದರೇನು? ಮಾತಿನ ಮಧ್ಯೆ ನಿಂತು ಹೋಗುವುದು. ಮಾತು ಆಡುತ್ತಿದ್ದಂತೆ ಸುಸ್ತಾಗುವುದು. ನಿದ್ದೆಯಲ್ಲಿ ಮಾತಾಡುತ್ತಿರುವಂತೆ ಅಸಂಗತವಾದ ಮಾತುಗಳು. ಹೀಗೆ.
- ಕಂಪವಚ (ತೊದಲು ಮಾತು): ಉಗ್ಗುವುದು ಅನ್ನುತ್ತಾರೆ. ತೊದಲು ಮಾತು. ಮಾತಿನಲ್ಲಿ ಧೃಡತೆ ಇಲ್ಲ. ನಡುಗುವ ಧ್ವನಿ. ಕೇಳುವವರಿಗೆ ಹಿತವಿಲ್ಲ. ಕಂಪನದಿಂದ ಮಾತು ಹುಟ್ಟುವುದಾದರೂ ಇಲ್ಲಿ ಬೇಡವಾದ ಕಂಪನ. ಸಂಗೀತಗಾರರು ಹಾಡುವಾಗ ಬೇಕೆಂದು ಕಂಪಿಸುವ ಧ್ವನಿಯ ರೀತಿಯಲ್ಲ. ಅನವಶ್ಯಕ ಧ್ವನಿಯ ಅಲ್ಲಾಟ.
- ಕೌ೦ಠ್ಯ (ಅಲ್ಲಲ್ಲಿ ನಿಂತುಹೋಗುವುದು): ನಿರರ್ಗಳ ಮಾತಿಲ್ಲ. ಮಾತಾಡುತ್ತಿದ್ದಾಗ ಅಲ್ಲಲ್ಲಿ ಬೇಡದ ಕಡೆ ಏನು ಹೇಳಬೇಕೆಂದು ತೋಚದಿರುವುದರಿಂದ ಮಾತು ನಿಂತುಹೋಗುವುದರಿಂದ ವಿಚಾರ ಸರಿಯಾಗಿ ಪ್ರಸ್ತುತವಾಗದು. ಕೇಳುಗರಿಗೆ ಹಿತದ ಅನುಭವವಿಲ್ಲ. ಪೂರ್ತಿ ಅರ್ಥವಾಗದೆ ಕೊರತೆಯ ಅನುಭವ.
- ಇಂದ್ರಿಯೋದ್ಭವ (ಪಂಚೇಂದ್ರಿಯಗಳಿಂದ ಹುಟ್ಟಿದುದು): ಕಣ್ಣು, ಕಿವಿ, ನಾಲಿಗೆಗಳು ತಾಳ-ಮೇಳದಲ್ಲಿ ಕೆಲಸ ಮಾಡಬೇಕು. ಹೀಗಾಗದೆ ಏರುಪೇರಾದರೆ ಮಾತಿನಲ್ಲಿ ವ್ಯತ್ಯಾಸ ಉಂಟಾಗುವುದು. ಇನ್ನೊಬ್ಬರು ಹೇಳಿದುದು ಕಿವಿಗೆ ಸರಿಯಾಗಿ ಕೇಳದಿದ್ದರೆ ಅವರು ಕೇಳಿದುದೊಂದು, ಇವರು ಹೇಳಿದುದೊಂದು. ನೋಡಿದುದು ಒಂದು. ಮಾತಾಡುತ್ತಿರುವುದು ಇನ್ನೊಂದರ ಬಗ್ಗೆ. ಹೀಗೆ.
*****
ಹಿಂದೊಂದು ಸಂಚಿಕೆಯಲ್ಲಿ, "ಸರಸ್ವತಿದೇವಿಯ ರಂಗಮಂದಿರ" ಅನ್ನುವ ಶೀರ್ಷಿಕೆಯಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ತಾಯಿ ಶಾರದೆಯ ಕೃಪೆಯಾಗಿ "ಪರಿಮಳ" ಗ್ರಂಥ ಬಂತೆಂದು ಹೇಳಲಾದ ಸಂದರ್ಭ ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆ ಓದಬಹುದು.
ಶ್ರೀ ರಾಘವೇಂದ್ರ ಸ್ವಾಮಿಗಳ ಸಾಕ್ಷಾತ್ ಶಿಷ್ಯರಾದ ಶ್ರೀ ಅಪ್ಪಣ್ಣಾಚಾರ್ಯರು ಅವರ ಪ್ರೀತಿಯ ಗುರುಗಳಾದ ರಾಯರ ಬಗ್ಗೆ ರಚಿಸಿರುವ ಒಂದು ಸ್ತೋತ್ರದಲ್ಲಿ ಈ ಹತ್ತು ಮಾತಿನ ದೋಷಗಳ ಬಗ್ಗೆ ಸೂತ್ರ ರೂಪದಲ್ಲಿ ವಿವರಣೆ ಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲ. ಶ್ರೀ ರಾಘವೇಂದ್ರ ರಾಯರ ಕರುಣೆಯಿಂದ ಈ ರೀತಿಯ ಹತ್ತೂ ವಿಧದ ಮಾತಿನ ದೋಷಗಳು ನಿವಾರಣೆ ಆಗುತ್ತವೆ ಎನ್ನುತ್ತಾರೆ. ಆ ಶ್ಲೋಕ ಹೀಗಿದೆ:
ಅಜ್ಞಾನವಿಸ್ಮೃತಿಭ್ರಾಂತಿ ಸಂಶಯಾಪಸ್ಮೃತಿಕ್ಷಯಾತಂದ್ರಾಕಂಪವಚ: ಕೌ೦ಠ್ಯಮುಖಾಯೇ ಚೇಂದ್ರಿಯೋದ್ಭವಾ:ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ
ಅನೇಕ ನುರಿತ ವೈದ್ಯರಿಂದ ನಿವಾರಣೆ ಸಾಧ್ಯವಾಗದ ಮಾತಿನ ದೋಷಗಳು ಗುರುರಾಯರ ಕರುಣೆಯಿಂದ ಪರಿಹಾರವಾಗಿವೆ ಎಂದು ಹೇಳುತ್ತಾರೆ. ಇದನ್ನು ನಂಬಬೇಕೇ ಅಥವಾ ಬೇಡವೇ ಅನ್ನುವುದು ಅವರವರಿಗೆ ಬಿಟ್ಟ ವಿಚಾರ.
No comments:
Post a Comment