Friday, July 3, 2026

ಜ್ಯೋತಿಷ್ಯದಲ್ಲಿ ನಂಬಿಕೆ


ಆಸ್ಪತ್ರೆಯ ಕೋಣೆಯೊಂದರಲ್ಲಿ ಅಣ್ಣ-ತಮ್ಮ ಇಬ್ಬರ ನಡುವೆ ನಡೆದ ಸಂಬಾಷಣೆಯನ್ನೂ, ಅದರ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ನಡೆದ ವಿಚಾರ ವಿನಿಮಯವನ್ನೂ ನೋಡಿದೆವು. "ಅಂತರಂಗದ ಮಾತುಗಳು" ಎನ್ನುವ ಶೀರ್ಷಿಕೆಯ, ಕಳೆದ ಸಂಚಿಕೆಯಲ್ಲಿ ಇದರ ವಿವರಗಳಿವೆ. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಸಹೋದರರ ನಡುವೆ ನಡೆದ ಮಾತು-ಕತೆ ಹುಟ್ಟುಹಾಕಿದ ಅನೇಕ ಅನುಮಾನಗಳಲ್ಲಿ "ಸಾವಿನ ಬಗ್ಗೆ ಮುಕ್ತ ಚರ್ಚೆ ಮಾಡಬೇಕೇ ಅಥವಾ ಮಾಡಬಾರದೇ? ಆಸ್ಪತ್ರೆಯಲ್ಲಿದ್ದವರೊಂದಿಗೆ ಹಾಗೆ ಮಾತನಾಡಿದುದು ಸರಿಯೇ? ಅಲ್ಲಿ ಅನೇಕ ಇತರರು ಇದ್ದರೂ ಚರ್ಚೆ ಮಾಡಿದುದು ಸಾಧುವೇ?" ಅನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿಯಾಯಿತು. ಇನ್ನೂ ಕೆಲವು ಮುಖ್ಯ ಪ್ರಶ್ನೆಗಳು ಉಳಿದಿವೆ. "ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇಡುವುದು ಸರಿಯೇ? ಇಟ್ಟರೆ ಎಷ್ಟು ಮಟ್ಟದವರೆಗೆ ನಂಬಿಕೆ ಇಡಬಹುದು?" ಅನ್ನುವ ಪ್ರಶ್ನೆ ಉಳಿದಿದೆ. ಹಾಗೆಯೇ, "ತಮ್ಮ ಕುಂಡಲಿಯನ್ನು ತಾವೇ ಪರಿಶೀಲಿಸಿ ನೋಡುವುದು ಸರಿಯೇ?" ಮತ್ತು "ಹೀಗೆ ನಂಬಿ ಬಾಳುವುದರಿಂದ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳು ಆಗುವುದಿಲ್ಲವೇ?" ಎನ್ನುವ ಪ್ರಶ್ನೆಗಳು ಉಳಿದಿವೆ. ಈ ಚರ್ಚೆಗಳ ಸಂದರ್ಭದಲ್ಲಿ ಅವುಗಳಿಂದ ಹುಟ್ಟುವ ಬೇರೆ ಪ್ರಶ್ನೆಗಳೂ ಮುಂದೆ ಕಾಣಸಿಗಬಹುದು!

"ಜ್ಯೋತಿಷ್ಯದಲ್ಲಿ ನಂಬಿಕೆ" ಅನ್ನುವ ಬಗ್ಗೆ ಈ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡೋಣ. 

*****

ಮತ್ತೊಮ್ಮೆ ವಿರಾಮವಾಗಿ ಕುಳಿತಾಗ ತಂದೆ-ಮಗನ ಮಾತುಕತೆ ಮುಂದುವರೆಯಿತು.

"ನಿನ್ನೆ ಮಾತನಾಡಿದುದರ ಬಗ್ಗೆ ಏನಾದರೂ ಅನುಮಾನಗಳು ಉಳಿದಿವೆಯೋ?"
"ಇಲ್ಲ. ಮಾತಾಡಿದಾಗ ಎಲ್ಲಾ ಪರಿಹಾರವಾದಂತಿರುತ್ತದೆ. ನಂತರ ಅನುಮಾನ ಬರಬಹುದು"
"ಹಾಗಾಗುವುದು ಉಂಟು. ಕೆಲವೊಮ್ಮೆ ಒಬ್ಬರಿಂದ ಪ್ರಶ್ನೆಗೆ ಉತ್ತರ ಬಂದರೆ ಮನಸ್ಸಿಗೆ ಸಮಾಧಾನ ಆಗುವುದಿಲ್ಲ. ಇನ್ನೊಬ್ಬರನ್ನು ಕೇಳಬೇಕು ಅನ್ನಿಸಬಹುದು"
"ಆಗ ಏನು ಮಾಡುವುದು?"
"ತಿಳಿದವರನ್ನು ಕೇಳಬಹುದು. ಸಿಕ್ಕಸಿಕ್ಕವರನ್ನೆಲ್ಲ ಕೇಳುತ್ತಾ ಹೋಗಬಾರದು. ಅಷ್ಟೇ"
"ಹೇಳುವವರಲ್ಲಿ ಅಭಿಪ್ರಾಯ ಭೇದ ಕಂಡುಬಂದರೆ?"
"ಕಾಲಮಾನದಲ್ಲಿ ಗಟ್ಟಿಯಾಗಿ ನಿಂತ ಗ್ರಂಥಗಳಿವೆ. ಹಿಂದಿನವರ ಅನುಭವದ ಸಾರಸಂಗ್ರಹ ಇದೆ. ಇವುಗಳ ಉಪಯೋಗ ಪಡೆಯಬಹುದು"
"ಕಡೆಗೆ ಯಾವ ತೀರ್ಮಾನ ಉಳಿಯುತ್ತದೆ?"
"ಇವೆಲ್ಲಾ ಪರಾನುಭವದ ತಿಳಿವು. ಕಡೆಗೆ ನಮ್ಮ ಅನುಭವದ ತಿಳಿವಿಗೆ ದಾರಿ ತೋರಬೇಕಷ್ಟೆ"

"ಜ್ಯೋತಿಷ್ಯ ನಂಬಬೇಕೆ? ನಂಬಬಾರದೇ? ಇದು ಒಂದು ದೊಡ್ಡ ಪ್ರಶ್ನೆ ಆಗಿದೆ"
"ಜ್ಯೋತಿಷ್ಯದ ಉಗಮ ಎಲ್ಲಿ?"
"ಆರು ವೇದಾಂಗಗಳಲ್ಲಿ ಜ್ಯೋತಿಷ್ಯ ಒಂದು ಅನ್ನುತ್ತಾರೆ"
"ಹೌದು. ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಕಲ್ಪ ಮತ್ತು ಜ್ಯೋತಿಷ್ಯ, ಇವು ಆರು ವೇದಾಂಗಗಳು"
"ಇವುಗಳ ಪ್ರಯೋಜನವೇನು?"
"ಅನೇಕ ಸ್ರೋತಗಳಿಂದ ಬಂದ ಅರಿವನ್ನು ಕ್ರೋಢೀಕರಿಸಿ ಒಟ್ಟು ಜ್ಞಾನವನ್ನು ಸ್ಫುಟ ಮಾಡಲು ಇವು ಸಹಾಯಕ"
"ಜ್ಯೋತಿಷ್ಯ ನಂಬಬೇಕೆ? ಅಥವಾ ನಂಬಬಾರದೇ?"
"ಪಕ್ಕದ ಮನೆ ರಾಮರಾಯರನ್ನು ನಂಬಬೇಕೆ? ನಂಬಬಾರದೇ?"
"ಅದಕ್ಕೂ ಇದಕ್ಕೂ ಏನು ಸಂಬಂಧ?"
"ಈ ಪ್ರಶ್ನೆಗೆ ಉತ್ತರದಂತೆ ಅದೂ ಕೂಡ"
"ಅದು ಹೇಗೆ?"
"ಕೆಲವರು ಅವರನ್ನು ನಂಬಬಹುದು ಅನ್ನುತ್ತಾರೆ. ಮತ್ತೆ ಕೆಲವರು ನಂಬಬೇಡ ಅನ್ನುತ್ತಾರೆ"
"ಹಾಗೆ ಹೇಳುವುದಕ್ಕೆ ಏನಾದರೂ ಆಧಾರ ಬೇಡವೇ?'
"ರಾಮರಾಯರನ್ನು ಸರಿಯಾಗಿ ತಿಳಿದುಕೊಂಡವರನ್ನು ಕೇಳಬೇಕು. ಅವರನ್ನು ಕಾರಣವಿಲ್ಲದೆ ಇಷ್ಟ ಪಡುವವರನ್ನು ಕೇಳಿದರೆ? ಅವರ ವಿನಾಕಾರಣ ಶತ್ರುಗಳನ್ನು ಕೇಳಿದರೆ?"
"ಇಬ್ಬರಿಂದಲೂ ಅತಿರೇಕದ ಅಭಿಪ್ರಾಯಗಳು ಬರಬಹುದು"
"ಇದೂ ಹಾಗೆಯೇ"

ಇದು ಯಾಕೋ ಸರಿಬರುತ್ತಿಲ್ಲ!
*****

"ಜ್ಯೋತಿಷ್ಯ ಖಗೋಳ ಶಾಸ್ತ್ರದಿಂದ ಉಗಮವಾಯಿತು ಎನ್ನುತ್ತಾರೆ. ಗ್ರಹಗಳ ಬಲಾಬಲ, ನಮ್ಮ ಜೀವನದ ಮೇಲೆ ಅವುಗಳ ಪ್ರಭಾವ, ಇವನ್ನು ಅರಸುವ ವಿದ್ಯೆ"
"ಗ್ರಹಗಳ ಪ್ರಭಾವ ನಮ್ಮ ಮೇಲೆ ಇದೆ ಎಂದು ಹೇಗೆ ನಂಬುವುದು?"
"ನಮ್ಮ ಮೇಲೆ ಹಗಲು-ರಾತ್ರಿಗಳ ಪ್ರಭಾವ ಇದೆಯೇ?"
"ಇದೆ. ನಮ್ಮ ಜೀವನ ಕ್ರಮವೇ ಇದರ ಮೇಲೆ ನಡೆಯುತ್ತಿಲ್ಲವೇ?"
"ಋತುಗಳ-ಸಂವತ್ಸರಗಳ ಪ್ರಭಾವ ಇದೆಯೇ?"
"ಖಂಡಿತ ಇದೆ"
"ಹಗಲು-ರಾತ್ರಿ, ಋತುಮಾನಗಳು ಇವೆಲ್ಲಾ ಗ್ರಹಗಳ ಚಲನೆಯಿಂದ ತಾನೇ?"
"ಹೌದು"
"ಜ್ಯೋತಿಷ್ಯವೂ ಇದನ್ನೇ ಹೇಳುವುದು"
"ಏನೋ ಲೆಕ್ಕ ಹಾಕಿ ಹೇಳುವುದು ಎಷ್ಟು ಸರಿಯಾದೀತು?"
"ಮನೆಗಳಲ್ಲಿ ಪಂಚಾಗ ಇರುತ್ತದಲ್ಲ?"
"ಅನೇಕ ಮನೆಗಳಲ್ಲಿ ಇರುತ್ತದೆ. ಮತ್ತನೇಕ ಮನೆಗಳಲ್ಲಿ ಇರುವುದಿಲ್ಲ"
"ಕೆಲವು ರೂಪಾಯಿ ಕೊಟ್ಟು ಪಂಚಾಂಗ ತಂದು ಮನೆಯಲ್ಲಿ ಇಟ್ಟಿರುತ್ತೇವೆ"
"ಹೌದು. ಯುಗಾದಿಯ ದಿನ "ಪಂಚಾಂಗ ಶ್ರವಣ" ಸಹ ನಡೆಸುತ್ತೇವಲ್ಲ"
"ಹೀಗೆ ಯಾರೋ ಲೆಕ್ಕ ಹಾಕಿ, ಬರೆದು, ಮುದ್ರಿಸಿರುವ ಪಂಚಾಂಗದಲ್ಲಿ ಗ್ರಹಣಗಳ ವಿವರ ಬರೆದಿರುತ್ತಾರಲ್ಲ"
"ಹೌದು. ಬರೆದಿರುತ್ತಾರೆ"
"ಗ್ರಹಣ ಹಿಡಿಯುವ ಸಮಯ, ಮಧ್ಯದ ಸಮಯ, ಬಿಡುವ ಸಮಯ ಬರೆದಿರುತ್ತಾರಲ್ಲ"
"ಹೌದು. ಎಲ್ಲ ವಿವರಗಳೂ ಇರುತ್ತವೆ"
"ಈಗ ವಿಜ್ಞಾನದಲ್ಲಿ ಪ್ರಚಂಡ ಬೆಳವಣಿಗೆ ಆಗಿದೆ. ಪಂಚಾಂಗಗಳು ಬಹಳ ಹಿಂದಿನಿಂದಲೂ ಇವೆ. ಆಗಿನಿಂದಲೂ ಇದೇ ರೀತಿ ವಿವರಗಳು ಇರುತ್ತಿದ್ದವಲ್ಲ. ಗ್ರಹಣದ ದಿನ ಹಾಗೇ ಆಗುತ್ತದೋ?"
"ಆಗುವುದನ್ನು ನಾವು ನೋಡುತ್ತೇವಲ್ಲ. ಚಂದ್ರ ಗ್ರಹಣದಲ್ಲಂತೂ ಚೆನ್ನಾಗಿ ಗೊತ್ತಾಗುತ್ತದೆ"
"ಸೂರ್ಯ ಗ್ರಹಣದಲ್ಲೂ ಹಗಲಿನಲ್ಲಿ ಕತ್ತಲಾಗುತ್ತದಲ್ಲ"
"ಅದೂ ಕಣ್ಣಿಗೆ ಕಾಣುವ ಮಾತೇ"
"ಅಂದರೆ ಅದರಲ್ಲಿ ಸತ್ಯ ಇದೆ ಎಂದಾಯಿತಲ್ಲವೇ?"
"ಹೌದು ಅಂತಲೇ ಹೇಳಬೇಕಾಗುತ್ತದೆ"
"ಮತ್ತೆ ಜ್ಯೋತಿಷ್ಯದಲ್ಲಿ ಅನುಮಾನ ಯಾಕೆ?"

ಯೋಚಿಸಬೇಕಾದ ವಿಷಯವೇ. ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ ಮೊದಲಾದುವು ಖಚಿತವಾಗಿ ಹೇಳಿರುತ್ತಾರಲ್ಲ. ಗ್ರಹಣಾದಿಗಳು ಪ್ರಪಂಚದ ಯಾವ ಭಾಗಗಳಲ್ಲಿ ಕಾಣಿಸುತ್ತವೆ ಅನ್ನುವುದನ್ನೂ ನಿಖರವಾಗಿ ಹಾಕಿರುತ್ತಾರಲ್ಲ! 

*****

"ಲೆಕ್ಕ ಹಾಕಿ ಹೇಳುತ್ತಾರೆ ಅಂದಮಾತ್ರಕ್ಕೆ ನಂಬಬೇಕೇ?"
"ಒಂದು ವಿದ್ಯಾರ್ಥಿಗಳ ತರಗತಿ ಇದೆ ಅನ್ನೋಣ. ಗಣಿತದ ಪಾಠ ನಡೆಯುತ್ತಿದೆ. ಗುರುಗಳು ಒಂದು ಗಣಿತದ ಪ್ರಶ್ನೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಸಮಸ್ಯೆ ಬಿಡಿಸಿ ಉತ್ತರ ಬರೆದಿಟ್ಟಿದ್ದಾರೆ. ಗುರುಗಳು ಉತ್ತರಗಳನ್ನು ಪರಿಶೀಲಿಸುತ್ತಿದ್ದಾರೆ. ಸಾಮಾನ್ಯವಾಗಿ ಕಂಡುಬರುವ ದೃಶ್ಯ ಹೇಗಿರುತ್ತದೆ?"
"ಕೆಲವು ವಿದ್ಯಾರ್ಥಿಗಳ ಉತ್ತರಗಳು ಸರಿ ಇರುತ್ತವೆ. ಕೆಲವರದು ತಪ್ಪು ಇರುತ್ತವೆ"
"ಸರಿ ಇರುವ ಉತ್ತರಗಳು ಎಲ್ಲವೂ ಒಂದೇ ಆಗಿರಬೇಕಲ್ಲವೇ?"
"ಹೌದು. ಅದರಲ್ಲಿ ವ್ಯತ್ಯಾಸ ಆಗುವಂತಿಲ್ಲ"
"ತಪ್ಪು ಉತ್ತರಗಳಲ್ಲಿ?"
"ಎಲ್ಲ ತಪ್ಪು ಉತ್ತರಗಳೂ ಒಂದೇ ಇರಬೇಕೆಂದಿಲ್ಲ"
"ಕೆಲವೊಮ್ಮೆ ಅನೇಕ ವಿದ್ಯಾರ್ಥಿಗಳು ಒಂದೇ ತಪ್ಪು ಉತ್ತರ ಬರೆದಿರಬಹುದೋ?"
"ಅದು ಸಾಧ್ಯ. ಯಾವುದೋ ಒಂದು ಸೂತ್ರ ಅಥವಾ ತತ್ವ ಅನೇಕ ವಿದ್ಯಾರ್ಥಿಗಳು ಒಂದೇ ರೀತಿ ತಪ್ಪಾಗಿ ಪ್ರಯೋಗಿಸಿದ್ದರೆ ಅವರೆಲ್ಲಾ ಒಂದೇ ತಪ್ಪು ಉತ್ತರ ಪಡೆದಿರುತ್ತಾರೆ. ಇತರರು ಬೇರೆ ಬೇರೆ ತಪ್ಪು ಉತ್ತರ ಪಡೆದಿರಬಹುದು"
"ಕೆಲವು ವಿದ್ಯಾರ್ಥಿಗಳು ತಪ್ಪು ಉತ್ತರ ಪಡೆದಿದ್ದಾರೆ ಅಂದರೆ ಗಣಿತವೇ ತಪ್ಪು ಅನ್ನಬಹುದೇ? ಉತ್ತರ ತಪ್ಪಿದ್ದರೆ ಗಣಿತವೇ ತಪ್ಪೇ?"
"ಅದು ಹೇಗೆ ಸಾಧ್ಯ? ಅದು ವಿದ್ಯಾರ್ಥಿಗಳ ತಪ್ಪು. ಗಣಿತದ್ದಲ್ಲ"
"ಜ್ಯೋತಿಷ್ಯದಲ್ಲಿಯೂ ಹೀಗೆ ಅಲ್ಲವೇ? ತಪ್ಪು ಭವಿಷ್ಯವಾಣಿ ಹೇಳಿದರೆ ಅದು ಜ್ಯೋತಿಷಿಯ ತಪ್ಪೋ, ಅಥವಾ ಜ್ಯೋತಿಷ್ಯದ್ದೋ?"

ಯೋಚಿಸಬೇಕಾದ ವಿಷಯವೇ. ಒಂದೇ ಕುಂಡಲಿ, ಒಬ್ಬನೇ ವ್ಯಕ್ತಿ ಬಗ್ಗೆ ಬೇರೆ ಬೇರೆ ಜ್ಯೋತಿಷ್ಕರು ಹೇಳಿದುದು ಬೇರೆ ಬೇರೆ ಆಗಿರಬಹುದು. ಹೀಗಾಗಲು ಕಾರಣ?

*****

"ಇದೆಲ್ಲಾ ಸರಿ. ಒಂದೇ ವಿಷಯದ ಬಗ್ಗೆ ಬೇರೆ ಬೇರೆ ವ್ಯಕ್ತಿಗಳು ಹೇಳಿದ ಭವಿಷ್ಯಗಳು ಏಕೆ ಒಂದೇ ಆಗಿರುವುದಿಲ್ಲ?"
"ಅಲ್ಲಿ ಗಸಗಸೆ ಪಾಯಸ ಮಾಡಿಟ್ಟಿದ್ದಾರೆ. ಹತ್ತು ಜನ ಸೇವಿಸುತ್ತಾರೆ. ಅವರ ಅಭಿಪ್ರಾಯಗಳು ಏನು ಹೇಳುತ್ತವೆ?"
"ಕೆಲವರು ಚೆನ್ನಾಗಿದೆ ಅನ್ನುತ್ತಾರೆ. ಕೆಲವರು ತುಂಬಾ ಚೆನ್ನಾಗಿದೆ ಅನ್ನುತ್ತಾರೆ. ಕೆಲವರು ಅಷ್ಟು ಸರಿಯಿಲ್ಲ ಅನ್ನಬಹುದು"
"ಹೀಗೆ ಆಗಲು ಕಾರಣ?'
"ಪಾಯಸ ಒಂದೇ ಆದರೂ ಅವರವರ ಅನುಭವ, ಇಷ್ಟ-ಅನಿಷ್ಟ, ನಿರೀಕ್ಷೆ, ಇವುಗಳ ಛಾಯೆ ಅವರವರ ಅಭಿಪ್ರಾಯದಲ್ಲಿ ಕಂಡುಬರುತ್ತದೆ"
"ಜ್ಯೋತಿಷ್ಯದಲ್ಲೂ ಅಷ್ಟೇ. ಒಂದೇ ಸಂದರ್ಭವನ್ನು ಅರ್ಥ ಮಾಡಿ ವಿಶ್ಲೇಷಿಸುವಾಗ ಹೀಗೆ ಮಾಡುವವರ ಗುಣಗಳ ಛಾಯೆಯೂ ಬೀಳುತ್ತದೆ. ಮೊದಲ ಬಾರಿ ಪಾಯಸ ತಿಂದವನ ಅಭಿಪ್ರಾಯಕ್ಕೂ, ಅನೇಕ ಬಾರಿ ಪಾಯಸ ತಿಂದವನ ಅಭಿಪ್ರಾಯಕ್ಕೂ ಬೇಧ ಇರುವುದಿಲ್ಲವೇ? ಒಂದೇ ಕಡೆ ಅನೇಕ ಬಾರಿ ಪಾಯಸ ತಿಂದವನಿಗೂ, ಅನೇಕ ಕಡೆ ಅನೇಕ ಬಾರಿ ಪಾಯಸ ತಿಂದವನಿಗೂ ಅಭಿಪ್ರಾಯ ವ್ಯತ್ಯಾಸ ಇರುವುದಿಲ್ಲವೇ? ಪಾಯಸ ತಯಾರಿ ಮಾಡಿದವರನ್ನು ಸಂತೋಷಪಡಿಸಲು ಹೇಳುವವನಿಗೂ, ವಸ್ತುನಿಷ್ಠ ರೀತಿಯಲ್ಲಿ ಹೇಳುವವನಿಗೂ ಒಂದೇ ರೀತಿ ಇರುತ್ತದೆಯೇ?"
"ಹೀಗಿದ್ದರೆ ಕೇಳುವವನಿಗೆ ವ್ಯತ್ಯಾಸ ಗೊತ್ತಾಗುವುದು ಹೇಗೆ? ಯಾರು ವಸ್ತುನಿಷ್ಠವಾಗಿ ಹೇಳುತ್ತಾರೆ ಎಂದು ತಿಳಿಯುವ ಬಗೆ?'
"ಇಲ್ಲಿ ನಮ್ಮ ನಮ್ಮ ವಿವೇಚನೆ ಕೆಲಸ ಮಾಡಬೇಕು"

ಇದು ಸುಲಭದ ಕೆಲಸವಲ್ಲ. ಎಷ್ಟೋ-ಇಷ್ಟೂ ತಿಳಿದು, ಪುಸ್ತಕ ಓದಿ, ಜ್ಯೋತಿಷ್ಯ ಹೇಳುವುದು ಕೆರೆಯ ಏರಿಯ ಮೇಲೆ ನಿಂತು ನೀರಿನ ಆಳ ಹೇಳಿದಂತೆ.

*****

"ಆಯಿತು. ನೀವು ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಿದ್ದೀರಿ. ಅನುಭವ ಇದೆ. ನೀವು ಅದನ್ನು ನಂಬುತ್ತೀರಾ?"
"ನಾನು ನಂಬುವುದೂ ಬಿಡುವುದೂ ನನಗೆ ಸೇರಿದ್ದು"
"ಇರಲಿ. ಈ ಪ್ರಶ್ನೆಗೆ ನೇರ ಉತ್ತರ ಏನು?"
"ಒಂದು ಪರೀಕ್ಷೆ ಇದೆ. ಹಲವರು ಪರೀಕ್ಷೆ ಬರೆಯಲು ಹೋಗುತ್ತಾರೆ. ತಯಾರಿ ಮಾಡಿಕೊಂಡು ಹೋಗುವುದು ಒಳ್ಳೆಯದೋ, ಇಲ್ಲವೇ ಸುಮ್ಮನೆ ಹೋಗುವುದು ಒಳ್ಳೆಯದೋ?'
"ತಯಾರಿ ಮಾಡಿಕೊಂಡು ಹೋಗುವುದೇ ಒಳ್ಳೆಯದು"
"ಜೀವನದಲ್ಲಿಯೂ ಹಾಗೆ. ಪುರುಷ ಪ್ರಯತ್ನ ಮತ್ತು ದೈವ ಸಂಕಲ್ಪ ಎಂದು ಎರಡು ಇವೆ. ಪುರುಷ ಪ್ರಯತ್ನವೇ ದೊಡ್ಡದು ಎನ್ನುವ ಅನೇಕ ಹೇಳಿಕೆಗಳಿವೆ. ದೈವಸಹಾಯವೇ ದೊಡ್ಡದು ಎನ್ನುವುದಕ್ಕೂ ಅಷ್ಟೇ ಹೇಳಿಕೆಗಳಿವೆ. ಎರಡೂ ಬೇಕು ಎನ್ನುವುದು ನನ್ನ ಅಭಿಮತ"
"ಅಂದರೆ?"
"ತಯಾರಿ ಮಾಡಿಕೊಂಡು ಪರೀಕ್ಷೆಗೆ ಹೋದವರೆಲ್ಲ ಪಾಸ್ ಆಗುತ್ತಾರೆ ಅನ್ನುವಂತಿಲ್ಲ. ನೂರು ಪ್ರಶ್ನೆಗೆ ಉತ್ತರ ತಿಳಿದು ಅಲ್ಲಿ ಹೋಗಿ ಕೂಡಬಹುದು. ನೂರಾ ಒಂದರಿಂದ ನೂರಾ ಹತ್ತರವರೆಗಿನ ಪ್ರಶ್ನೆ ಅಲ್ಲಿ ಕೇಳಬಹುದು. ಅಂದಮಾತ್ರಕ್ಕೆ ಏನೂ ಓದದೇ ಪರೀಕ್ಷೆಗೆ ಹೋಗುವುದು ಜಾಣತನವಲ್ಲ"
"ಜ್ಯೋತಿಷ್ಯದ ಸಂದರ್ಭದಲ್ಲಿ ಇದರ ಅನ್ವಯ ಹೇಗೆ?"
"ಪರವೂರಿಗೆ ಪ್ರಯಾಣ ಹೋಗಬೇಕು. ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೂಡಬಹುದು. ಇಲ್ಲವೇ ಬಸ್ ವೇಳಾಪಟ್ಟಿ ನೋಡಿಕೊಂಡು ಬಸ್ ಸಿಗುವ ವೇಳೆಗೆ ಹೋಗಬಹುದು. ನಿಲ್ದಾಣಕ್ಕಂತೂ ಹೋಗಬೇಕು"
"ಅಂದರೆ?"
"ಗ್ರಹಗತಿ ನೋಡಿ ಅನುಕೂಲ ಸಮಯದಲ್ಲಿ ಕೆಲಸಗಳನ್ನು ಮಾಡಿದರೆ ಬಹುತೇಕ ಯಶಸ್ಸು ಕಾಣಬಹುದು"
"ನಮ್ಮ ಬಳಿ ಬಸ್ಸಿನ ವೇಳಾಪಟ್ಟಿಯೇ ಇಲ್ಲದಿದ್ದರೆ?" 
"ಅಂತಹ ಸಮಯದಲ್ಲಿಯೂ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸು ಹಿಡಿದಿರುವುದು ಉಂಟು. ನಮ್ಮ ಕುಟುಂಬದಲ್ಲಿಯೇ ವಧೂ-ವರರು ಪರಸ್ಪರ ಒಪ್ಪಿ ಮುಂದೆ ಬಂದು ನಿಂತಾಗ ಜಾತಕಗಳ ಬಗ್ಗೆ ಯೋಚಿಸದೇ ವಿವಾಹ ಮಾಡಿಸಿದ್ದೇನೆ. ಅವರು ಚೆನ್ನಾಗಿ ಬಾಳಿ-ಬದುಕುತ್ತಿರುವುದೂ ಉಂಟು"

"ಅಂತೂ ಈ ನಂಬಿಕೆಯ ವಿಷಯ ಬಹಳ ಕಷ್ಟದ್ದು. ಅಲ್ಲವೇ?"
"ನಾನು ಏನನ್ನೂ ನಂಬುವುದಿಲ್ಲ ಅನ್ನುವವನೂ ಅದನ್ನು ನಂಬುತ್ತಾನೆ. "ದೇವರಿಲ್ಲ" ಅನ್ನುವ ನಿರೀಶ್ವರವಾದಿಯೂ ಆ ತತ್ವವನ್ನು ನಂಬುತ್ತಾನೆ! ನಂಬಿಕೆಯಿಲ್ಲದೆ ಜೀವನವಿಲ್ಲ"

ನಂಬಿಕೆಯ ಬಗ್ಗೆ ಇನ್ನಷ್ಟು ಪ್ರಶ್ನೆಗಳು! ಮತ್ತೊಮ್ಮೆ ಇವುಗಳ ಬಗ್ಗೆ ನೋಡೋಣ.

*****

ಯೋಗಾಯೋಗದಿಂದ ಇದು 550 ಸಂಖ್ಯೆಯ ಸಂಚಿಕೆ. ಕಳೆದ ಹದಿನಾರು ವರುಷಗಳಿಂದ ಇವುಗಳನ್ನು ಓದಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಓದುಗರಿಗೂ, ಹಿತೈಷಿಗಳಿಗೂ ಅನಂತಾನಂತ ವಂದನೆಗಳು. 

No comments:

Post a Comment