ಅಂದು ತಿಮ್ಮಪ್ಪಯ್ಯನವರ ಹೆಂಡತಿಯ ಎರಡನೇ ವರುಷದ ಕಾಲ ಶ್ರಾದ್ಧ. (ಕಾಲಶ್ರಾದ್ಧ ಅಂದರೆ ಪ್ರತಿ ವರುಷ ಮಾಡುವ ಒಂದು ದಿನದ ಶ್ರಾದ್ಧ). ಮೊದಲನೇ ಮಹಾಯುದ್ಧದ ಕಾಲದಲ್ಲಿ ಹುಟ್ಟಿದ ತಿಮ್ಮಪ್ಪಯ್ಯನವರ ಮದುವೆ ಸಂಬಂಧಿಯೊಬ್ಬರ ಮಗಳು ಕಮಲಮ್ಮನೊಡನೆ ಎರಡನೇ ಮಹಾಯುದ್ಧದ ಕಾಲದಲ್ಲಿ ಆಯಿತು. ಎರಡು ಮಹಾಯುದ್ಧಗಳ ಸಂಬಂಧ ಹುಟ್ಟು ಮತ್ತು ಮದುವೆಗಳಿಗೆ ಇದ್ದರೂ, ಐವತ್ತಮೂರು ವರುಷಗಳ ದಾಂಪತ್ಯ ಹೆಚ್ಚಿನ ಕದನಗಳಿಲ್ಲದೇ ಅನ್ಯೋನ್ಯವಾಗಿಯೇ ಕಳೆದಿತ್ತು. ಮೊದಲ ಮಗು ಗಂಡು. ನಂತರ ಎರಡು ಹೆಣ್ಣು. ಆಮೇಲೆ ಮತ್ತೆರಡು ಗಂಡು. ಈಗ ಎಲ್ಲರೂ ದೊಡ್ಡವರಾಗಿ, ವಿವಾಹವಾಗಿ ಅವರವರ ಪಾಡಿಗೆ ಜೀವನ ನಡೆಸಿಕೊಂಡಿದ್ದಾರೆ. ಎಷ್ಟಿದ್ದರೂ ತಿಮ್ಮಪ್ಪಯ್ಯ ಈಗ ಒಂಟಿ. ಇಂದು ಕಮಲಮ್ಮನವರ ಶ್ರಾದ್ಧವಾದದ್ದರಿಂದ ಕುಟುಂಬದ ಎಲ್ಲರೂ ಒಂದೆಡೆ ಸೇರುವ ಅವಕಾಶ.
ತುಮಕೂರಿನಿಂದ ಹನ್ನೆರಡು ಮೈಲುಗಳ ದೂರದ ಪುಟ್ಟ ಗ್ರಾಮದವರು ತಿಮ್ಮಪ್ಪಯ್ಯ. ಎಲ್ಲರಿಗೂ ಅನುಕೂಲವಾಗಲೆಂದು ಬೆಂಗಳೂರಿನ ತಮ್ಮ ಬಹುಕಾಲದ ಸ್ನೇಹಿತರೊಬ್ಬರ ಮನೆಯಲ್ಲಿ ಶ್ರಾದ್ಧದ ವ್ಯವಸ್ಥೆ ಮಾಡಿದ್ದರು. ಸ್ನೇಹಿತರು ಈ ಕೆಲಸ ನಡೆಸಲು ತಮ್ಮ ಮನೆಯ ಮಹಡಿಯ ಭಾಗವನ್ನೇ ಮೀಸಲಿಟ್ಟಿದ್ದರು. ಉಪಾಧ್ಯಾಯರಾಗಿ ನಿವೃತ್ತರಾದ ಮೇಲೆ ಅವರಿಗೆ ಇದು ಸಂಪಾದನೆಯ ದಾರಿಯೂ ಆಗಿತ್ತು. ಶ್ರಾದ್ಧಗಳನ್ನು ಮಾಡುವವರಿಗೆ ಇದು ಬಹಳ ಸಲೀಸು. ಎಲ್ಲಾ ಜವಾಬ್ದಾರಿ ರಾಮಾಜೋಯಿಸರದು. ಫೋನ್ ಮಾಡಿ ದಿನ ಹೇಳಿ ಗೊತ್ತುಮಾಡಿದ್ದರೆ ಆಯಿತು. ಎಲ್ಲಾ ಸಿದ್ಧ ಮಾಡಿಟ್ಟು ಕೆಲಸ ನಡೆಸಿಕೊಡುತ್ತಾರೆ.
ತಿಮ್ಮಪ್ಪಯ್ಯನವರ ಎರಡನೇ ಮಗ ಮತ್ತು ಮೂರನೇ ಮಗ ಮನೆಯವರ ಜೊತೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಂದಿದ್ದರು. ದೊಡ್ಡವನು ಇನ್ನೂ ಬಂದಿರಲಿಲ್ಲ. ಒಂದು ಕಾಲು ಗಂಟೆ ಕಾದು ನೋಡಿ ಇಬ್ಬರೂ ಕೆಲಸ ಪ್ರಾರಂಭಿಸಿದರು. ಅದಾದ ಮೇಲೆ ಒಂದು ಘಂಟೆಯ ನಂತರ ದೊಡ್ಡವನು ಬಂದ. ತಡವಾಗಿ ಬಂದಿದ್ದೇನೆ ಎಂದು ಅವನಿಗೂ ಗೊತ್ತು. ಕೆಲಸದ ಮಧ್ಯೆ ಬಂದಿದ್ದರಿಂದ ಮಾಡಿಸುತ್ತಿದ್ದ ರಾಮಾಜೋಯಿಸರಿಗೆ ಕೋಪ ಬಂತು. ಸ್ನೇಹಿತರ ಮಕ್ಕಳನ್ನು ಚಿಕ್ಕಂದಿನಿಂದ ನೋಡಿದ್ದ ಸಲಿಗೆ ಅವರಿಗೆ.
"ಇದೇನು ಬರುವ ಸಮಯವೇ? ನಿನಗಾಗಿ ಎಷ್ಟು ಹೊತ್ತು ಕಾಯಬೇಕು?" ಎಂದು ಥಟ್ಟನೆ ಅಂದುಬಿಟ್ಟರು.
ಬಂದವನಿಗೆ ಮುಖ ಪೆಚ್ಚಾಯಿತು. ಕುಳಿತಿದ್ದವರಲ್ಲಿ ಕೆಲವರು ಘೊಳ್ಳೆಂದು ನಕ್ಕರು. ಇನ್ನಷ್ಟು ಅವಮಾನವಾಯಿತು. ಏನೂ ಹೇಳಲಾರದೇ ಸುಮ್ಮನೆ ನಿಂತ.
"ಆಯಿತು ಬಿಡು. ಬೇಗ ಸ್ನಾನ ಮಾಡಿ ಬಂದು ಸೇರಿಕೋ, ಪರವಾಗಿಲ್ಲ" ಎಂದರು ತಿಮ್ಮಪ್ಪಯ್ಯ.
ತಂದೆಯ ಮಾತಿನಿಂದ ಸ್ವಲ್ಪ ಸಮಾಧಾನವಾಯಿತು. ಬೇಗ ಬಂದು ತಮ್ಮಂದಿರ ಜೊತೆ ಸೇರಿಕೊಂಡ. ಮುಂದಿನ ಕೆಲಸ ನಡೆಯಿತು. ಎಲ್ಲರ ಊಟಗಳಾದ ಮೇಲೆ ಅವರವರ ದಾರಿ ಹಿಡಿದರು.
*****
ಈಚಿನ ದಿನಗಳಲ್ಲಿ ತಿಮ್ಮಪ್ಪಯ್ಯನವರು ಹೆಚ್ಚು ಕಾಲ ಎರಡನೇ ಮಗನ ಕುಟುಂಬದ ಜೊತೆ ಬೆಂಗಳೂರಿನಲ್ಲಿ ಇರುತ್ತಿದ್ದರು. ಮಧ್ಯೆ ಮಧ್ಯೆ ಹಳ್ಳಿಗೆ ಹೋಗಿ-ಬಂದು ಮಾಡುತ್ತಿದ್ದರು. ಇಂದು ಎರಡನೆಯ ಮಗನಿಗೆ ತಾವು ಸ್ವಲ್ಪ ತಡವಾಗಿ ಬರುವುದಾಗಿ ಹೇಳಿ ಜೋಯಿಸರ ಮನೆಯಲ್ಲಿಯೇ ಉಳಿದರು. ಊಟದ ನಂತರ ವಿಶ್ರಾಂತಿಯಾಯಿತು. ಕಾಫಿ ಬಂದಿತು. ಸ್ನೇಹಿತರಿಬ್ಬರೂ ಕಾಫಿ ಲೋಟಗಳನ್ನು ಹಿಡಿದು ಮಾತಾಡತೊಡಗಿದರು.
"ಜೋಯಿಸರೇ, ನಿಮಗೆ ನಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತು. ಆದರೂ ಕೆಲವು ವಿಷಯಗಳನ್ನು ಇವತ್ತು ನಾನು ಇಂದು ನಿಮಗೆ ಹೇಳಬೇಕು. ಅದಕ್ಕೇ ಹಿಂದೆ ಉಳಿದುಕೊಂಡೆ"
"ಹೇಳಿ ತಿಮ್ಮಪ್ಪಯ್ಯನವರೇ. ಏನು ವಿಷಯ?"
"ನಮ್ಮ ದೊಡ್ಡವನು ತಡವಾಗಿ ಬಂದ ಎಂದು ನೀವು ಕೋಪಿಸಿಕೊಂಡಿರಿ. ಅದು ಸಹಜವೇ ಹೌದು. ಆದರೆ ಅದು ಅವನ ತಪ್ಪಲ್ಲ"
"ಹೇಗೆ? ನನಗೆ ಅರ್ಥವಾಗಲಿಲ್ಲ"
"ನೋಡಿ ಜೋಯಿಸರೇ, ನಿಮಗೆ ಗೊತ್ತಿರುವಂತೆ ಐದು ಬೆರಳೂ ಒಂದೇ ಸಮವಿರುವುದಿಲ್ಲ"
"ಅದು ಸರಿ ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ?"
"ದೊಡ್ಡವನು ಹುಟ್ಟಿದಾಗ ನಾವು ಹಳ್ಳಿಯ ಹಿರೀಕರು ಕಟ್ಟಿಸಿದ್ದ ಮನೆಯಲ್ಲಿದ್ದವರು. ಆಗಿನ್ನೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಓದು-ವಿದ್ಯೆಗೆ ಅನುಕೂಲಗಳಿರಲಿಲ್ಲ. ಮೂರು ಮೈಲು ದೂರದ ದೊಡ್ಡ ಹಳ್ಳಿಯಲ್ಲಿ ಪ್ರೈಮರಿ ಶಾಲೆ. ಮಾಧ್ಯಮಿಕ, ಪ್ರೌಢ ಶಾಲೆಗಳಿಗೆ ತುಮಕೂರಿಗೆ ಹೋಗಬೇಕಿತ್ತು. ಮಳೆ-ಗಾಳಿಯಲ್ಲಿ ನಡೆದೇ ಹೋಗಬೇಕಿತ್ತು. ಹಾಗೂ-ಹೀಗೂ ಹೈಸ್ಕೂಲ್ ತನಕ ಓದಿದ. ನಂತರ ಓದು ನಿಲ್ಲಿಸಿ ನನ್ನ ಜೊತೆ ಹೊಲ-ಗದ್ದೆ ನೋಡಿಕೊಂಡು ರೈತನಾದ. ಈಗಲೂ ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ನರಿ. ಗೊತ್ತಾಯಿತು"
"ಎರಡನೆಯವನು ಆಮೇಲೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ನಂತರ ಬಂದ ಸಂತಾನ. ಅವನು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿತ್ತು. ಸ್ವತಂತ್ರ ಭಾರತ. ಹತ್ತಿರದ ಹಳ್ಳಿಯಲ್ಲಿಯೇ ಮಾಧ್ಯಮಿಕ ಶಾಲೆಯೂ ಆಯಿತು. ನನಗೂ ಸ್ವಲ್ಪ ಆರ್ಥಿಕವಾಗಿ ಶಕ್ತಿ ಕೂಡಿಕೊಂಡಿತ್ತು. ಹಿರಿಯರು ಬಿಟ್ಟು ಹೋಗಿದ್ದ ಜಮೀನಿನ ಜೊತೆ ಇನ್ನೂ ಸ್ವಲ್ಪ ಕೊಂಡುಕೊಂಡೆ. ಎರಡನೆಯವನು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ನೌಕರಿ ಹಿಡಿದ. ಅವನು ಬೆಂಗಳೂರಿನಲ್ಲಿ ಎಂ.ಏ. ಓದುತ್ತಿದ್ದಾಗ ಇಲ್ಲಿ ಒಂದು ಸಣ್ಣ ಮನೆ ಕಟ್ಟಿದೆ. ಈಗ ಅವನ ಕುಟುಂಬ ಅದನ್ನೇ ದೊಡ್ಡದು ಮಾಡಿಕೊಂಡು ಇಲ್ಲೇ ವಾಸವಾಗಿದ್ದಾರೆ. ನಾನೂ ಹೆಚ್ಚಿನ ಸಮಯ ಇಲ್ಲೇ ಕಳೆಯುತ್ತಿದ್ದೇನೆ. ಡಾಕ್ಟರು-ಆಸ್ಪತ್ರೆಗಳಿಗೆ ಹತ್ತಿರ "
"ಅದು ಸರಿಯೇ"
"ಮೂರನೆಯವನು ವಿದ್ಯಾಭ್ಯಾಸಕ್ಕೆ ಬರುವ ವೇಳೆಗೆ ಬೆಂಗಳೂರಿನ ಮನೆಯಿತ್ತು. ಓದಿನ ಖರ್ಚು ಕೊಡಲು ನನಗೂ ಶಕ್ತಿ ಬಂದಿತ್ತು. ಎಂ.ಬಿ.ಬಿ.ಎಸ. ಓಡಿಸಿದೆ. ಅವನ ಜೊತೆಯಲ್ಲಿ ಓದುತ್ತಿದ್ದ ಹುಡುಗಿಯ ತಂದೆ ಮದುವೆಯ ಪ್ರಸ್ತಾಪ ಇಟ್ಟರು. ಅವರು ಮುಂಬಯಿನವರು. ಮದುವೆಯಾಗಿ ಮುಂಬಯಿಗೆ ಹೋದ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವರೇ ನೋಡಿಕೊಂಡರು. ಈಗ ಅವನು ಮುಂಬಯಿಯಲ್ಲಿ ಹೆಸರಾದ ಡಾಕ್ಟರು. ಗಂಡ-ಹೆಂಡತಿ ಪ್ರಾಕ್ಟಿಸು ಚೆನ್ನಾಗಿಯೇ ನಡೆಯುತ್ತಿದೆ. ಹೆಂಡತಿ-ಮಕ್ಕಳ ಜೊತೆ ಅಲ್ಲೇ ಇದ್ದಾನೆ"
"ಈಗ ಎಲ್ಲವೂ ಅರ್ಥವಾಗುತ್ತಿದೆ"
"ಎರಡನೆಯವನು ಇಲ್ಲಿಂದಲೇ ಇಂದಿನ ಕೆಲಸಕ್ಕೆ ಬಂದ. ಕಡೆಯವನು ನಿನ್ನೆಯೇ ಮುಂಬಯಿಯಿಂದ ವಿಮಾನದಲ್ಲಿ ಬಂದ. ಹೊತ್ತಿಗೆ ಸರಿಯಾಗಿ ಬಂದರು. ಮೊದಲನೆಯವನು ಹಳ್ಳಿಯಿಂದ ಬರಬೇಕು. ವ್ಯವಸಾಯದ ಕೆಲಸ. ಬಿಟ್ಟು ಬಂದರೆ ಆಳುಗಳು ಕೆಲಸ ಕೆಡಿಸುತ್ತಾರೆ. ಬೆಳಿಗ್ಗೆ ಬೇಗ ಹೊರಟು ತುಮಕೂರಿಗೆ ಬಂದು ಮತ್ತೊಂದು ಬಸ್ಸು ಹಿಡಿದು ಇಲ್ಲಿ ಬರಬೇಕು. ಹಳ್ಳಿಯಲ್ಲಿ ಬೆಳಗಿನ ಬಸ್ಸು ಒಂದೊಂದು ದಿನ ಬರುವುದೇಇಲ್ಲ. ಹೀಗಾಗಿ ತಡವಾಗಿದೆ. ಎಲ್ಲರಿಗಿಂತ ಮೊದಲು ಹೊರಟಿರಬೇಕು ಅವನು. ಇಲ್ಲಿ ಬರುವುದರಲ್ಲಿ ತಡವಾಗಿದೆ"
"ನಾನು ರೇಗಿದ್ದು ತಪ್ಪಾಗಿರಬೇಕು. ಈ ಸೂಕ್ಷ್ಮಗಳು ನನಗೆ ಗೊತ್ತಿಲ್ಲ"
"ಈಗ ನನ್ನ ಕಾಲವೂ ಮುಗಿಯುವಂತೆ ಕಾಣುತ್ತದೆ. ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಕಮಲ ಹೋದ ಮೇಲೆ ಹೆಚ್ಚು ದಿನ ಬದುಕುವ ಉತ್ಸಾಹವೂ ಇಲ್ಲ. ಹಳ್ಳಿಯ ಹೊಲ-ಮನೆ ಹಿರಿಯ ಮಗನಿಗೆ ಕೊಡುತ್ತೇನೆ. ಬೆಂಗಳೂರಿನ ಮನೆ ಎರಡನೇಯವನಿಗೆ. ಕಮಲಳ ಒಡವೆಗಳು, ಇರುವ ಸ್ವಲ್ಪ ನಗದು ಮತ್ತು ಬ್ಯಾಂಕಿನ ಹಣ ಕಡೆಯವನಿಗೆ. ಹೆಣ್ಣು ಮಕ್ಕಳಿಗೆ ಕಾಲಕಾಲಕ್ಕೆ ಚೆನ್ನಾಗಿಯೇ ಕೊಟ್ಟಿದ್ದೇನೆ. ಅವರುಗಳೂ ಅನುಕೂಲವಾಗಿದ್ದಾರೆ. ಈ ರೀತಿ ಭಾಗ ಮಾಡುವುದು ಅವರೆಲ್ಲರಿಗೂ ಒಳ್ಳೆಯದು. ಇವರಿಬ್ಬರೂ ಹಳ್ಳಿಗೆ ಹೋಗುವವರಲ್ಲ. ಅವರಮಟ್ಟಿಗೆ ಚೆನ್ನಾಗಿಯೇ ಇದ್ದಾರೆ. ಹೀಗೆಂದು ಪತ್ರ ಬರೆದಿಟ್ಟಿದ್ದೇನೆ. ನಾನು ಮುಂಚೆ ಹೋದರೆ ನೀವು ಮುಂದೆ ನಿಂತು ಇದನ್ನು ವಿತರಣೆ ಮಾಡಿ"
ಇಷ್ಟು ಹೇಳುವ ಹೊತ್ತಿಗೆ ತಿಮ್ಮಪಯ್ಯನವರ ಕಣ್ಣು ಮಂಜಾಯಿತು. ಜೋಯಿಸರ ಕೈ ಹಿಡಿದುಕೊಂಡರು.
ಜೋಯಿಸರು, "ಛೇ ಛೇ. ಹಾಗೆ ಹೇಳಬೇಡಿ. ದೇವರು ದೊಡ್ಡವನು. ಯಾವುದಕ್ಕೂ ಒಬ್ಬ ಲಾಯರು ಕಂಡು ವಿಲ್ ಮಾಡುವುದು ಒಳ್ಳೆಯದಲ್ಲವೇ?" ಅಂದರು.
"ನಾನು ಮತ್ತೆ ಮುಂದಿನ ವಾರ ಬರುತ್ತೇನೆ. ಹಾಗೆಯೇ ಮಾಡೋಣ. ಈಗಂತೂ ಪತ್ರ ಬರೆದಿಟ್ಟಿದ್ದೇನೆ. ಮಕ್ಕಳು ಒಳ್ಳೆಯವರು. ಏನೂ ಸಮಸ್ಯೆ ಆಗಲಾರದು"
ತಿಮ್ಮಪ್ಪಯ್ಯ ಎರಡನೇ ಮಗನ ಮನೆಗೆ ಹೊರಟರು.
ತಿಮ್ಮಪ್ಪಯ್ಯ ಮತ್ತೆ ರಾಮಾಜೋಯಿಸರ ಮನೆಗೆ ಬರಲಿಲ್ಲ.
ಅವರ ಕಾರ್ಯಗಳು ಮುಗಿದಮೇಲೆ ಅವರು ಬರೆದಿಟ್ಟಿದ್ದ ಪತ್ರದಂತೆ ಆಸ್ತಿ ಹಂಚಿಕೆಯಾಗಲಿಲ್ಲ. ಮಕ್ಕಳು ಒಪ್ಪಿದರೂ ಅವರ ಮನೆಯವರು ಒಪ್ಪುವಂತಿರಲಿಲ್ಲ. ಎಲ್ಲ ಮಕ್ಕಳೂ ಸಮಾನರು. ಎಲ್ಲವೂ ಸರಿ ಭಾಗ ಆಗಬೇಕೆಂದು ಗುದ್ದಾಟ ಪ್ರಾರಂಭವಾಗಿ ವ್ಯಾಜ್ಯ ಕೋರ್ಟಿನ ಮೆಟ್ಟಲೇರಿತು.
*****
ಕೆಲವು ತಿಂಗಳ ಹಿಂದೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಂದೆ (ಹೈಕೋರ್ಟ್) ಒಂದು ಅಣ್ಣ-ತಮ್ಮಂದಿರ ಆಸ್ತಿ ವಿವಾದದ ಮೊಕದ್ದಮೆ ವಿಚಾರಣೆಗೆ ಬಂದಿತು. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ಕೇಸು ವಿಚಾರಣೆಗೆ ನಡೆಯಿತು. (ಆಗ ಅವರು ಹೇಳಿದ ವಿಷಯಗಳ ತುಣುಕುಗಳ ಮೇಲೆ ಮೇಲಿನ ವಿವರಣೆ ಹೆಣೆದಿದೆ). "ಆಸ್ತಿ ವಿಚಾರದಲ್ಲಿ ಸರಿಯಾದ ತಿಳುವಳಿಕೆ ಬೇಕು. ಕಾನೂನಿನ ಪರಿಹಾರ ಕೇಳುವ ಮೊದಲು ತಂದೆ-ತಾಯಿಯರು ಮಾಡಿರುವ ವ್ಯವಸ್ಥೆ ಬಗ್ಗೆ ಸ್ವಲ್ಪ ಯೋಚಿಸುವುದು ಒಳ್ಳೆಯದು" ಎಂದು ಅವರು ಬುದ್ಧಿ ಮಾತು ಹೇಳಿದರು. ಮುಂದಿನ ವಿಚಾರಣೆ ಏನಾಯಿತೋ ಗೊತ್ತಿಲ್ಲ.
ಬೇರೆ ಕುಟುಂಬಗಳಲ್ಲಿನ ಅನೇಕ ಸೂಕ್ಷ್ಮಗಳು ನಮಗೆ ಗೊತ್ತಿರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ, ಒಂದೇ ಅಳತೆಗೋಲಿನಿಂದ ಲೆಕ್ಕ ಹಾಕುವುದು ಸರಿಯಲ್ಲ. ಅಂತಹ ಸಂದರ್ಭಗಳಲ್ಲಿ ನಾವುಗಳು ಯಾವುದೇ ತೀರ್ಮಾನಗಳಿಗೆ ಬಂದು ಮಾತನಾಡುವ ಮೊದಲು ಸ್ವಲ್ಪ ಯೋಚಿಸಬೇಕಲ್ಲವೇ?