Friday, January 5, 2024

ತಿಥಿದ್ವಯ ಮತ್ತು ಶ್ರಾದ್ದಾಭಾವ



ಗೌರಿ ಮತ್ತು ಗಣೇಶ ತಾಯಿ-ಮಗ. ಭಾದ್ರಪದ ಶುಕ್ಲಪಕ್ಷ ತದಿಗೆ ತಾಯಿ ಗೌರಿ ನಮ್ಮೆಲ್ಲರ ಮನೆಗೆ ಬರುತ್ತಾಳೆ. ನಾವು ವೈಭವದಿಂದ ಅವಳನ್ನು ಸ್ವಾಗತಿಸಿ ಪೂಜಿಸುತ್ತೇವೆ. ಬರುವಾಗ ಒಬ್ಬಳೇ ಬಂದಳು. ಮಗನನ್ನು ಹಿಂದೆ ಬಿಟ್ಟಳು. ಮುದ್ದಿನ ಮಗ ತಾಯಿಯನ್ನು ಬಿಟ್ಟು ಉಳಿಯಲಾರ. ಮಾರನೆಯ ದಿನವೇ, ಅಂದರೆ ಭಾದ್ರಪದ ಶುದ್ಧ ಚೌತಿ ತಾಯಿಯನ್ನು ಹುಡುಕಿಕೊಂಡು ಬಂದೇಬಿಡುತ್ತಾನೆ. ನಾವೂ ಸಂಭ್ರಮದಿಂದ ಗಣಪನನ್ನು ಬರಮಾಡಿಕೊಂಡು ಭಕ್ತಿಯಿಂದ ಪೂಜಿಸುತ್ತೇವೆ. ಕೆಲವುದಿನ ನಮ್ಮ ಮನೆಯಲ್ಲಿದ್ದು ಆಥಿತ್ಯ ಸ್ವೀಕರಿಸಿ ತಾಯಿ-ಮಗ ಒಂದೇ ದಿನ ಹೊರಡುತ್ತಾರೆ. ನಮ್ಮ ಪದ್ದತಿಯಂತೆ ಮನೆಗೆ ಬಂದ ಮಗಳು ಗೌರಿಯನ್ನು ಒಳ್ಳೆಯ ದಿನ ನೋಡಿ ಕಳಿಸಿಕೊಡುತ್ತೇವೆ. ತಾಯಿಯ ಜೊತೆ ಮಗನೂ ಹೊರಡುತ್ತಾನೆ. ಇದು ಪ್ರತಿ ವರುಷ ನಡೆದು ಬರುವ ಸಂಪ್ರದಾಯ. 

ಆದರೆ ಕೆಲವು ವರುಷ ಮಾತ್ರ ಗೌರಿ ಬರುವಾಗ ಮಗ ಗಣಪನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಬರುತ್ತಾಳೆ. ಆಗ ಮಾತ್ರ ಇಬ್ಬರಿಗೂ ಒಂದೇ ದಿನ ಪೂಜೆ. ಒಂದು ದಿನ ಹೋಳಿಗೆ, ಮಾರನೆಯ ದಿನ ಕಡುಬು ತಿನ್ನುವ ಅವಕಾಶ ನಮಗಿಲ್ಲ. ಜೊತೆಗೆ ಎರಡು ವ್ರತಗಳು ಒಂದೇ ದಿನ ನಡೆಸುವ ಗಡಿಬಿಡಿ. ಗೃಹಿಣಿಯರಿಗಂತೂ ಅಂದು ಇಮ್ಮಡಿ ಕೆಲಸ. ಪೂಜೆ ಮಾಡಿಸುವುದೇ ವೃತ್ತಿಯಾಗಿರುವ ಪುರೋಹಿತರಿಗೆ ಎರಡು ಪಾಳಿಯಲ್ಲಿ ಕೆಲಸ ಮಾಡಬೇಕಾದ ಅವಾಂತರ. 

ಏಕೆ ಹೀಗೆ? 
*****

ಜೀವನದ ಕ್ರಮ ಬದಲಾವಣೆ ಆಗುತ್ತಿದ್ದಂತೆ ಶ್ರಾದ್ಧ ಕರ್ಮಗಳನ್ನು ಮಾಡುವ ರೀತಿಯೂ ಬದಲಾಗಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಈಗಲೂ ತಮ್ಮ ತಮ್ಮ ಮನೆಗಳಲ್ಲಿಯೇ ವಾರ್ಷಿಕ ಶ್ರಾದ್ಧ ನಡೆಸುತ್ತಾರೆ. ಅನೇಕರು ಮಾಡುವುದನ್ನೇ ಬಿಟ್ಟಿದ್ದಾರೆ. ಈ ಎರಡೂ ಪಂಗಡಗಳಿಗೆ ಸೇರದ ದೊಡ್ಡ ಗುಂಪಿನ ಜನ ಮಠಗಳಲ್ಲಿಯೋ ಅಥವಾ ಶ್ರಾದ್ಧ ಭವನಗಳಲ್ಲಿಯೋ ಆಚರಿಸುತ್ತಾರೆ. ಪಿಂಡಪ್ರದಾನದಲ್ಲಿ ನಂಬಿಕೆ ಇರುವ ಶ್ರದ್ಧಾಳುಗಳು ಅಲ್ಲಿಗೆ ಹೋಗಿ ನಮಸ್ಕಾರ ಹಾಕಿ ಊಟಮಾಡಿ ಬರುತ್ತಾರೆ. ಶ್ರಾದ್ಧ ಮಾಡುವವರಿಗೂ ಸುಲಭ. ಹೆಸರು ಬರೆಸಿ ದುಡ್ಡು ಕಟ್ಟಿದರೆ ಆಯಿತು. ಕೈ ಬೀಸಿಕೊಂಡು ಹೋಗಿ ಕರ್ತವ್ಯ ಮುಗಿಸಿ ಬರಬಹುದು. ಬಂಧುಗಳಿಗೂ ಸರಳ. ಹೊತ್ತಿಗೆ ಸರಿಯಾಗಿ ಹೋದರೆ ಆಯಿತು. ಕೈ ಜೋಡಿಸಿ, ಕೈ-ಬಾಯಿ ಸೇರಿಸಿ, ಕೈ ಬೀಸಿ ಬಂದುಬಿಡಬಹುದು. 

ಈ ಕಾರಣಗಳಿಗಾಗಿ ಮಠಗಳಲ್ಲಿ, ಶ್ರಾದ್ಧ ಭವನಗಳಲ್ಲಿ ಗುಂಪು ಗುಂಪು. ಕೆಲವು ದೊಡ್ಡ ಕಡೆಗಳಲ್ಲಿ ಅನೇಕ ಕೊಠಡಿಗಳಲ್ಲಿ ಅನೇಕಾನೇಕ ಶ್ರಾದ್ಧಗಳು ನಡೆಯುತ್ತಿರುತ್ತವೆ. ಒಂದೇ ಕೊಠಡಿಯಲ್ಲಿ ಸರದಿಯ ಮೇಲೆ ಎರಡು ಅಥವಾ ಮೂರು ಶ್ರಾದ್ಧ ಒಂದೇ ದಿನ ನಡೆಯುತ್ತದೆ. ಸರಿಯಾಗಿ ಗೊತ್ತಿಲ್ಲದೇ, ವಿಚಾರಿಸಿದೇ ಹೋದವರು ಯಾರ ಪಿಂಡಕ್ಕೋ ನಮಸ್ಕರಿಸಿ ಊಟ ಮಾಡಿ ಬರಬಹುದು. ಊಟ ಮಾತ್ರ ಸಾಮಾನ್ಯವಾಗಿ ಒಂದೇ! ಒಂದೇ ಅಡುಗೆ ಮನೆ. ಒಂದೇ ಅಡಿಗೆಯವರ ತಂಡ. ಒಂದೇ ಅಡಿಗೆ. ಒಂದು ವ್ಯತ್ಯಾಸ ಬರಬಹುದು. ಕೆಲವು ಕಾರ್ಯಕ್ರಮಗಳಲ್ಲಿ (ವೈಕುಂಠ ಸಮಾರಾಧನೆ ಇತ್ಯಾದಿ) ಲಾಡು ಅಥವಾ ಒಬ್ಬಟ್ಟು ಸಿಗಬಹುದು. ಕೆಲವದರಲ್ಲಿ ವಡೆ, ರವೇ ಉಂಡೆ ಇರಬಹುದು. ಇದು ಮಾತ್ರ ಅದಲುಬದಲಾಗಬಹುದು. ಅದೇನೂ ಹೆಚ್ಚು ಚಿಂತಿಸಬೇಕಾದ ವಿಷಯವಲ್ಲವಲ್ಲ! 

ಈ ದಿನ ಮಠದಲ್ಲಿ ಜನ ಕಡಿಮೆ. ಶ್ರಾದ್ದ ಭವನದಲ್ಲಿ ಬಿಕೋ ಎನ್ನುವ ವಾತಾವರಣ. ಪಿಂಡಪ್ರದಾನವೇ ಇಲ್ಲ. ಭವನದ ಅಕ್ಕ ಪಕ್ಕದ ಮನೆಯವರಿಗೆ ಬಹಳ ಖುಷಿ. ಯಾರೋ ಬಂದು ನಮ್ಮ ಬಾಗಿಲ ಮುಂದೆ ವಾಹನ ನಿಲ್ಲಿಸಿ ಹೋಗಿ ಕಿರಿಕಿರಿ ಮಾಡುತ್ತಾರೆ ಎನ್ನುವ ಸಮಸ್ಯೆಯಿಲ್ಲ. 

ಹುಟ್ಟು ಮತ್ತು ಸಾವುಗಳಿಗೆ ಬಿಡುವಿಲ್ಲ. ರಜೆಯೇ ಇಲ್ಲದ ಕಾರ್ಯಕ್ರಮಗಳು ಅವು. ಆದರೆ ಇಂದೇಕೆ ಶ್ರಾದ್ಧಗಳಿಲ್ಲ?

*****

ಕಾಲದ ಗಣನೆ ಮತ್ತು ಲೆಕ್ಕಾಚಾರದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡಿದೆವು. ಉಪರಿ ಎನ್ನುವ ದಿನಗಳ ಬಗ್ಗೆ ನೋಡಿದೆವು. ಸೂರ್ಯ, ಚಂದ್ರ, ಮತ್ತು ಭೂಮಿ, ಇವುಗಳ ಪರಸ್ಪರ ಸ್ಥಾನಗಳ ಕಾರಣದಿಂದ ಕಾಲವಿಲ್ಲದ ಕಾಲವನ್ನೂ ಅಳೆಯುತ್ತೇವೆ. ಭೂಮಿ ತನ್ನ ಅಕ್ಷದ ಮೇಲೇ ತಿರುಗುತ್ತಿರುವುದರಿಂದ ಹಗಲು-ರಾತ್ರಿಗಳು ಆಗುತ್ತವೆ. ಇದರ ಜೊತೆಗೆ ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳು, ಸಂವತ್ಸರ ಬರುತ್ತವೆ. ಚಂದ್ರನೂ ಭೂಮಿಯ ಸುತ್ತ ಸುತ್ತುತ್ತಾ ಇದ್ದಾನೆ. ಈ ಚಲನೆಗಳೆಲ್ಲಾ ನಿಲ್ಲದೆ ನಡೆಯುತ್ತಲೇ ಇರುತ್ತವೆ. ಇವೆಲ್ಲದರ ಪರಿಣಾಮ ಕೆಲವು ವಿಶೇಷ ಘಟನೆಗಳು ಸಂಭವಿಸುತ್ತವೆ. 

360 ಡಿಗ್ರಿ ಚಂದ್ರನ ಸುತ್ತಿಗೆ 30 ದಿನ. ಅಂದರೆ 12 ಡಿಗ್ರಿಗೆ ಒಂದು ದಿನ. 360 ಡಿಗ್ರಿ ಬಂದರೆ ಒಂದು ತಿಂಗಳು. ಆದರೆ ನಮ್ಮ ಎಲ್ಲ ಗೂಟಗಳೂ ಚಲಿಸುತ್ತಲೇ ಇವೆ! ಚಲಿಸುತ್ತಿವೆ ಮಾತ್ರವಲ್ಲ, ಚಲನೆಯ ಗತಿಯಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ. ಆದ್ದರಿಂದ ಚಂದ್ರನ 12 ಡಿಗ್ರಿ ಚಾಲನೆ ಕಾಲದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಯಾವಾಗಲೂ 24 ಘಂಟೆಗಳಿಗೆ 12 ಡಿಗ್ರಿ ಆಗುವುದಿಲ್ಲ. 24 ಘಂಟೆಗಳು ಒಂದು ದಿನಕ್ಕೆ ಎಂದು ನಾವು ಮಾಡಿಕೊಂಡಿದ್ದೇವೆ. ಸೂರ್ಯ, ಚಂದ್ರ, ಭೂಮಿಗಳಿಗೆ ಈ ಕಟ್ಟುಪಾಡಿಲ್ಲ. 12 ಡಿಗ್ರಿ ಚಂದ್ರನ ಚಲನೆಗೆ 18 ರಿಂದ 26 ತಾಸು ಹಿಡಿಯುತ್ತದೆ. ಸುಮಾರು 28 ದಿನಕ್ಕೆ ಒಂದು ಚಾಂದ್ರಮಾನ ತಿಂಗಳು. ನಾವು ಸೌರಮಾನವನ್ನೂ ಉಪಯೋಗಿಸುತ್ತೇವೆ. ಅಲ್ಲಿ ಸುಮಾರು 30 ದಿನಕ್ಕೆ ಒಂದು ತಿಂಗಳು. ಆದ್ದರಿಂದ ಆಗೊಮ್ಮೆ ಈಗೊಮ್ಮೆ ಇವೆರಡರ ನಡುವೆ ಬರುವ ವ್ಯತ್ಯಾಸವನ್ನು ಸರಿಪಡಿಸಲು ವಿಶೇಷ ಕಾರ್ಯಕ್ರಮ ಅಥವಾ ಲೆಕ್ಕಾಚಾರ ಇದೆ. 

*****

ಸೂರ್ಯೋದಯದ ಸಮಯದಲ್ಲಿ ಇರುವ ತಿಥಿಯನ್ನು ಶುಭ ಕಾರ್ಯಗಳಿಗೆ, ಹಬ್ಬ-ಹರಿದಿನಗಳಿಗೆ ಎಂದು ಗೊತ್ತುಮಾಡುವುದು ಪದ್ದತಿ. ಮಧ್ಯಾನ್ಹ ವ್ಯಾಪ್ತಿಯಲ್ಲಿರುವ ತಿಥಿಯನ್ನು ಶ್ರಾದ್ಧಾದಿ ಕರ್ಮಗಳಿಗೆ ಗೊತ್ತು ಮಾಡುವುದು ಹೀಗೆಯೇ. ಶ್ರಾದ್ಧ ಪ್ರಾರಂಭ ಮಾಡುವುದು ಅಪರಾನ್ಹದಲ್ಲಿಯೇ. (ಮಠ, ಶ್ರಾದ್ಧ ಭವನಗಲ್ಲಿ ಅನುಕೂಲಕ್ಕೆ ಬೇಗ ಮಾಡುತ್ತಾರೆ) ಚಂದ್ರನ ಗತಿಯ ಪ್ರಕಾರ ದಿನ (12 ಡಿಗ್ರಿ ಚಲನೆ) 24 ಗಂಟೆಗಳಿಗೂ ಹೆಚ್ಚಾದಾಗ ಅಥವಾ ಹದಿನೆಂಟು ಗಂಟೆಗಳಂತೆ ಚಿಕ್ಕದಾದಾಗ ಸೂರ್ಯೋದಯದ ಕಾಲದಲ್ಲಿ ಅಥವಾ ಮಧ್ಯಾನ್ಹದ ಕಾಲದಲ್ಲಿ ಇರುವ ತಿಥಿಗಲ್ಲಿ ವ್ಯತ್ಯಾಸ ಬರುತ್ತದೆ. 

ಭಾದ್ರಪದ ತಿಂಗಳ ಎರಡನೆಯ ದಿನ ಸೂರ್ಯೋದಯದಲ್ಲಿ ಬಿದಿಗೆ. ಮೂರನೆಯ ದಿನ ಸೂರ್ಯೋದಯದಲ್ಲಿ ತದಿಗೆ. ನಾಲ್ಕನೆಯ ದಿನ ಸೂರ್ಯೋದಯದಲ್ಲಿ ಚತುರ್ಥಿ ಅಥವಾ ಚೌತಿ. ಇಂತಹ ವರ್ಷಗಳಲ್ಲಿ ಯಾವುದೇ ತಕರಾರಿಲ್ಲದೆ ಗೌರಿ ತದಿಗೆ ಬಂದು ಗಣೇಶ ಮಾರನೆಯ ದಿನ ಚೌತಿ ಬರುವುದು. ಎರಡು ದಿನ ಹಬ್ಬಗಳು. 

ಭಾದ್ರಪದ ತಿಂಗಳ ಎರಡನೆಯ ದಿನ (ಸೋಮವಾರ ಎನ್ನೋಣ) ಸೂರ್ಯೋದಯದಲ್ಲಿ ಬಿದಿಗೆ. ಆದ್ದರಿಂದ ಸೋಮವಾರ ಬಿದಿಗೆ ಆಚರಣೆ. ಸ್ವಲ್ಪ ಸಮಯದ ನಂತರ ತದಿಗೆ ಬಂತು. ಆದರೆ ಮಾರನೆಯ ದಿನ ಮಂಗಳವಾರ ಸೂರ್ಯೋದಯದಲ್ಲಿಯೂ ತದಿಗೆ ಇದೆ. ಆದ್ದರಿಂದ ಅಂದು ಮಂಗಳವಾರ ಗೌರಿ ಹಬ್ಬ. ಸ್ವಲ್ಪ ಸಮಯದಲ್ಲಿ ಚೌತಿಯೂ ಬಂತು. ಆದರೆ ಅದರ ಮಾರನೆಯ ದಿನ ಬುಧವಾರ ಸೂರ್ಯೋದಯದವರೆಗೆ ಚೌತಿ ಕಳೆದುಹೋಯಿತು. ಪಂಚಮಿ ಬಂತು. ಈ ಕಾರಣಕ್ಕಾಗಿಯೇ ಚೌತಿಯ ಆಚರಣೆಯೂ ಮಂಗಳವಾರವೇ ಆಗಬೇಕಾಯಿತು.  ಎರಡು ತಿಥಿಗಳ ಆಚರಣೆಯೂ ಒಂದೇ ದಿನ ನಡೆಯಿತು. ತಾಯಿ-ಮಗ ಒಂದೇ ದಿನ ಬಂದರು! 

*****
 
ಶ್ರಾದ್ಧದ ವಿಷಯಕ್ಕೆ ಬರೋಣ. ಇದಕ್ಕೆ ಖಚಿತ ಉದಾಹರಣೆಗಳನ್ನು ತೆಗೆದುಕೊಂಡರೆ ಒಳ್ಳೆಯದು. ಇದೇ ವರ್ಷ, ಶೋಭನಾ ನಾಮ ಸಂವತ್ಸರ, ವೈಶಾಖ ಕೃಷ್ಣ ಪಕ್ಷದಲ್ಲಿ ನೋಡೋಣ:

ತಿಥಿದ್ವಯ: 

09.05.2023  ಮಂಗಳವಾರ  ವೈಶಾಖ ಕೃಷ್ಣ ಚತುರ್ಥಿ (ಚೌತಿ) - ಸಂಜೆ 5.25 (17.25) ವರೆಗೆ. 
ಆದ್ದರಿಂದ ಶುಭಕಾರ್ಯಗಳಿಗೆ  ಚತುರ್ಥಿ ಆಚರಣೆ. ಶ್ರಾದ್ಧ ತಿಥಿಯೂ ಚತುರ್ಥಿ. 

10.05.2023 ಬುಧವಾರ - ವೈಶಾಖ ಕೃಷ್ಣ ಪಂಚಮಿ - ಮಧ್ಯಾಹ್ನ 3-16 (15.16) ವರೆಗೆ 
ಆದ್ದರಿಂದ ಶುಭಕಾರ್ಯಗಳಿಗೆ ಪಂಚಮಿ ಆಚರಣೆ. ಪಂಚಮಿ ಶ್ರಾದ್ಧವೂ ಇಂದೇ. 
ಮಾರನೆಯದಿನ ಗುರುವಾರ ಷಷ್ಠಿ ಮಧ್ಯಾಹ್ನ 12.58 ವರೆಗೆ ಮಾತ್ರ. ಆದ್ದರಿಂದ ಷಷ್ಠಿ ಶ್ರಾದ್ಧವೂ ಇಂದೇ. 
ಪಂಚಮಿ ಮತ್ತು ಷಷ್ಠಿ ಎರಡೂ ಶ್ರಾದ್ಧಗಳು ಒಂದೇ ದಿನ ಆದ್ದರಿಂದ ಇದು "ತಿಥಿದ್ವಯ"

11.05. 2023 ಗುರುವಾರ - ವೈಶಾಖ ಕೃಷ್ಣ ಷಷ್ಠಿ  - ಮಧ್ಯಾಹ್ನ 12.58 ವರೆಗೆ ಮಾತ್ರ. 
ಆದ್ದರಿಂದ ಶುಭಕಾರ್ಯಗಳಿಗೆ ಷಷ್ಠಿ ಆಚರಣೆ. 12.58 ನಂತರ ಸಪ್ತಮಿ ಇರುವುದರಿಂದ ಶ್ರಾದ್ಧಕ್ಕೆ ಸಪ್ತಮಿ ಆಚರಣೆ. 

ತಿಥಿದ್ವಯದ ಒಂದು ಉದಾಹರಣೆ ನೋಡಿದೆವು. 

ಶ್ರಾದ್ಧಾಭಾವ:

ಇದೇ ವರ್ಷ, ಶೋಭನಾ ನಾಮ ಸಂವತ್ಸರ ವೈಶಾಖ ಶುಕ್ಲಪಕ್ಷದಲ್ಲಿ ನೋಡೋಣ:

27.04. 2023 ಗುರುವಾರ - ಸಪ್ತಮಿ 12.44 ವರೆಗೆ. 
ಆದ್ದರಿಂದ ಶ್ರಾದ್ಧ ತಿಥಿ ಅಷ್ಟಮಿ ಆಚರಣೆ. (ಸಪ್ತಮಿ ಶ್ರಾದ್ಧ 26.04.2023 ಆಗಿ ಹೋಗಿದೆ)

28.04.2023 ಶುಕ್ರವಾರ - ಅಷ್ಟಮಿ 14.44 ವರೆಗೆ. 
ಅಷ್ಟಮಿ ತಿಥಿ ಆಚರಣೆ ಹಿಂದಿನ ದಿನವೇ ಆಗಿ ಹೋಗಿದೆ. 
ಮಾರನೆಯ ದಿನ 29.04.2023 ನವಮಿ 16.48 ವರೆಗೂ ಇದೆ. ನವಮಿ ತಿಥಿ ಆಚರಣೆ ಮುಂದಿನ ದಿನ.
ಒಂದು ನಿನ್ನೆ ಆಗಿಹೋಯಿತು. ಇನ್ನೊಂದು ನಾಳೆ! ಇಂದು (28.04.2023) ಏನೂ ಇಲ್ಲ. ಇದೇ  "ಶ್ರಾದ್ಧಾಭಾವ"  

29. 04. 2023 ಶನಿವಾರ - ನವಮಿ 16-48 ವರೆಗೆ 
ನವಮಿ ಶ್ರಾದ್ಧ ಆಚರಣೆ ಇಂದು. 

28.04.2023 ಶುಕ್ರವಾರ ಶ್ರಾದ್ಹಾಭಾವದ ಕಾರಣ ಶ್ರಾದ್ಧ ಭವನ ಬಿಕೋ ಎನ್ನುತ್ತಿದೆ. 

*****

ಮೇಲೆ ಹೇಳಿದ ರೀತಿ ನಿರ್ಣಯ ಮಾಡುವುದು ಸಾಮಾನ್ಯ ನಿಯಮ. ಇಂಗ್ಲೀಷಿನಲ್ಲಿ "Thumb Rule" ಎಂದಂತೆ. ಕೆಲವೊಮ್ಮೆ ಇದಕ್ಕೂ ಮೀರಿ ಸ್ವಲ್ಪ ವ್ಯತ್ಯಾಸ ಆಗಬಹುದು. "ಧರ್ಮ ಸಿಂಧು" ಮತ್ತು "ನಿರ್ಣಯ ಸಿಂಧು" ಎನ್ನುವ ಗ್ರಂಥಗಳಲ್ಲಿನ  ವಿಸ್ತಾರವಾದ ವಿವರಣೆಯನ್ನು ಆಧರಿಸಿ ದಿನಗಳನ್ನು ನಿರ್ಧರಿಸಿ ಪಂಚಾಂಗಗಳಲ್ಲಿ ಹಾಕುತ್ತಾರೆ. ಕೆಲವು ವೇಳೆ ಒಮ್ಮತ ಬರದೇ ಬೇರೆ ಬೇರೆ ಪಂಗಡಗಳಲ್ಲಿ ಬೇರೆ ಬೇರೆ ಆಚರಣೆಗಳೂ ಇರುವ ಉದಾಹರಣೆಗಳೂ ಉಂಟು. 

ಈಚಿನ ದಿನಗಳಲ್ಲಿ ಇಂತಹ ವಿಚಾರಗಳಲ್ಲಿ ಶ್ರದ್ದೆ ಕಡಿಮೆಯಾಗಿದೆ. ಕಡಿಮೆಯಾಗಿದೆ ಏನು, ಮಾಯವಾಗಿದೆ ಎಂದರೂ ತಪ್ಪಿಲ್ಲ. ಅವರವ ಇಷ್ಟದಂತೆ ನಡೆಸುವ ಕಾಲ ಇದು. ಅದು ತಪ್ಪು ಎಂದೇನೂ ಹೇಳುವಹಾಗಿಲ್ಲ. ಆದರೂ ಕೆಲವರಿಗೆ ಈ ವಿಚಾರಗಳಲ್ಲಿ ಸ್ವಲ್ಪ ಆಸಕ್ತಿ ಉಂಟು. ಅಂತಹ ಯುವಕರು ಇಂದೂ ಪ್ರಶ್ನೆಗಳನ್ನು ಹಾಕುತ್ತಾರೆ. ಹಬ್ಬ ಮತ್ತು ಶ್ರಾದ್ಧಾದಿಗಳನ್ನು ನಡೆಸಿಕೊಡುವ ಮಂದಿ ಹಿಂದೆ ಇವುಗಳಿಗೆ ಸರಿಯಾದ ಸಮಾಧಾನ ಹೇಳುತ್ತಿದ್ದರು. ಆದರೆ ಈಗ ಅನೇಕರಿಂದ ಸರಿಯಾದ ಸಮಾಧಾನಕರ ಉತ್ತರ ಸಿಗುವುದಿಲ್ಲ. 

ಮೇಲೆ ಹೇಳಿರುವುದೇ ಕೊನೆಯ ಮಾತು ಎಂದೇನೂ ಇಲ್ಲ. ನಮ್ಮ ಹಿರಿಯರು ಸುಮಾರು ಅರವತ್ತು ವರುಷಗಳ ಹಿಂದೆ ಚರ್ಚೆ ಮಾಡಿದಾಗ ಕೇಳಿದುದನ್ನು ಇಲ್ಲಿ ಹೇಳಿದೆ. ಇನ್ನೂ ಹೆಚ್ಚು ತಿಳಿಯಬೇಕಾದರೆ ತಿಳಿದವರಲ್ಲಿ ವಿಚಾರಿಸಬೇಕು. ಇಲ್ಲವೇ ಮೇಲೆ ಹೇಳಿದ ಗ್ರಂಥಗಳನ್ನು ಅಭ್ಯಸಿಸಬೇಕು.   

No comments:

Post a Comment