Sunday, January 7, 2024

ಅಧಿಕ ಮಾಸ



ದೀಪಾವಳಿ ನಮ್ಮೆಲ್ಲರಿಗೂ ಬಹಳ ದೊಡ್ಡ ಹಬ್ಬ. ಅಂದು ಇಡೀ ಸಮಾಜ ಸಂತೋಷದಿಂದ ಸಂಭ್ರಮಿಸುತ್ತದೆ. ಎಲ್ಲೆಲ್ಲಿಯೂ ಹರ್ಷದ ಮತ್ತು ಬೆಳಕಿನ ಸಾಮ್ರಾಜ್ಯ. ಈ ಹಬ್ಬ ಕೆಲವು ಸಲ ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ. ಕೆಲವು ಸಲ ನವೆಂಬರವರೆಗೆ ಜಾರುವುದೂ ಉಂಟು. 

ಆದರೆ ಸಂಕ್ರಾಂತಿ ಅಥವಾ ಪೊಂಗಲ್ ಹಾಗಲ್ಲ. ಅದು ಯಾವಾಗಲೂ ಜನವರಿ 14 ಹಾಜರಾಗುತ್ತದೆ. ಎಲ್ಲೋ ಅಪರೂಪಕ್ಕೆ,  ಐದಾರು ವರುಷಗಳಿಗೆ ಒಮ್ಮೆ, ಜನವರಿ 15 ಬರುವುದೂ ಉಂಟು. ಆದರೆ ಸಂಕ್ರಾಂತಿ ಫೆಬ್ರುವರಿಗೆ ಹೋದ ಸಮಾಚಾರವೇ ಇಲ್ಲ. ಡಿಸೆಂಬರ್ ಅಂತೂ ಸಂಭವವೇ ಇಲ್ಲ. 

ಹೀಗೇಕೆ ಆಗುತ್ತದೆ? ಈ ಎರಡು ಹಬ್ಬಗಳಲ್ಲಿ ವ್ಯತ್ಯಾಸವೇನು?

*****

ಅಶ್ವಯುಜ ಬಹುಳ (ಕೃಷ್ಣ ಪಕ್ಷ) ಚತುರ್ದಶಿ ನರಕ ಚತುರ್ದಶಿ ಆಚರಣೆ. ಮಾರನೆಯ ದಿನ ಅಶ್ವಯುಜ ಬಹುಳ ಅಮಾವಾಸ್ಯ ದೀಪಾವಳಿ ಅಮಾವಾಸ್ಯೆ. ಅದರ ಮುಂದಿನ ದಿನ ಕಾರ್ತೀಕ ಶುದ್ಧ ಪ್ರತಿಪದ ಬಲಿಪಾಡ್ಯಮಿ. ಮೂರು ದಿನಗಳ ಭರ್ಜರಿ ದೀಪಾವಳಿ ಆಚರಣೆ. ಈ ಎಲ್ಲ ಹಬ್ಬ ಚಾಂದ್ರಮಾನ ಲೆಕ್ಕದ ಮೇಲೆ ಆಚರಣೆ. ಒಂದು ಚಾಂದ್ರಮಾನ ತಿಂಗಳಿಗೆ ಸಾಮಾನ್ಯ ೨೯.೫೩ ದಿನ. ಚಾಂದ್ರಮಾನ ವರುಷದಲ್ಲಿ ೩೫೪ ದಿನಗಳು. ಸೌರಮಾನ ವರ್ಷದಲ್ಲಿ ೩೬೫ ದಿನಗಳು. ಇವೆರಡನ್ನೂ ಸರಿ ತೂಗಿಸಿ ಕಾಲಕ್ರಮದಲ್ಲಿ ಆಗಾಗ ಒಟ್ಟಿಗೆ ಕೂಡಿಸಲು "ಅಧಿಕ ಮಾಸ" ಅನ್ನುವ ಉಪಾಯ. 

ದೀಪಾವಳಿ ಚಂದ್ರಮಾನದಿಂದ ಅಳೆಯುವುದರಿಂದ ಕ್ಯಾಲಂಡರ್ ಲೆಕ್ಕದಲ್ಲಿ ಹಿಂದೆ ಮುಂದೆ ಆಗುತ್ತದೆ. ಅಧಿಕ ಮಾಸದಿಂದ ಒಂದು ತಿಂಗಳಷ್ಟು ಮುಂದೆ ಹೋಗಬಹುದು. ಮತ್ತೆ ಹಿಂದೆ ಹಿಂದಕ್ಕೆ ಬರುತ್ತಾ ಮೂರು ನಾಕು ವರುಷವಾದ ಮೇಲೆ ಮತ್ತೆ ಮುಂದೆ ಹೋಗಬಹುದು. 

ಚಾಂದ್ರಮಾನದಲ್ಲಿ ಚೈತ್ರ, ವೈಶಾಖ ಮುಂತಾದ ೧೨ ತಿಂಗಳುಗಳು. ಸೌರಮಾನದಲ್ಲಿ ಮೇಷ ಮಾಸ, ವೃಷಭ ಮಾಸ ಮುಂತಾಗಿ ಹನ್ನೆರಡು ತಿಂಗಳು. ಚಿತ್ತಿರೈ, ವೈಕಾಶಿ, ಆಣಿ ಮುಂತಾಗಿ ತಮಿಳಿನಲ್ಲಿ. ಚಂದ್ರನಿಲ್ಲದ ರಾತ್ರಿ ಅಮಾವಾಸ್ಯ. ಅಮಾವಾಸ್ಯೆಯ ಮುಂದಿನ ದಿನದಿಂದ ಒಂದು ಚಾಂದ್ರಮಾನ ಮಾಸ ಪ್ರಾರಂಭ. ಸೌರಮಾನದಲ್ಲಿ ಸೂರ್ಯ ರಾಶಿ ಚಕ್ರದ ಹನ್ನೆರಡು ಮನೆಯಲ್ಲಿ ಯಾವ ಮನೆಯಲ್ಲಿ ಇದ್ದಾನೋ ಆ ತಿಂಗಳಿಗೆ ಆ ಹೆಸರು. ಸೂರ್ಯ ಒಂದು ಮನೆಯಿಂದ ಇನ್ನೊಂದು ಮನೆಗೆ ಹೊರಟ ದಿನ ಸಂಕ್ರಮಣ ಅನ್ನುತ್ತಾರೆ. ಸಂಕ್ರಮಣ ಅಂದರೆ ಸಂಧಿ ಕಾಲ. ಇಂಗ್ಲೀಷಿನಲ್ಲಿ ಟ್ರಾನ್ಸಿಷನ್ ಎನ್ನಬಹುದು. 

ಸಂಕ್ರಾಂತಿ ಹಬ್ಬ ಎಂದು? ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಬರುವ ದಿನ. ಅಲ್ಲಿಗೆ ಧನುರ್ಮಾಸ ಮುಗಿದು ಮಕರ ಮಾಸ ಪ್ರಾರಂಭವಾಗುವ ದಿನವೂ ಹೌದು. ಭೂಮಿಯಿಂದ ನೋಡಿದಾಗ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಕಾಲ. ಅದಕ್ಕೇ ಈ ದಿನವನ್ನು "ಉತ್ತರಾಯಣ ಪುಣ್ಯಕಾಲ" ಎನ್ನುತ್ತಾರೆ. ಚಳಿಗಾಲ ಮುಗಿದು ತಾಪಮಾನ ಏರುವ ಸೂಚನೆ. ಇದು ಸೂರ್ಯನ ಚಲನೆಯ ಲೆಕ್ಕದಿಂದ ಬರುವ ಹಬ್ಬವಾದುದರಿಂದ ಯಾವಾಗಲೂ ಜನವರಿ ೧೪ ಬರುತ್ತದೆ. ಕೆಲವೊಮ್ಮೆ ಒಂದು ದಿನ ಹಿಂದೆ ಮುಂದೆ ಆಗಬಹುದು. ಅಷ್ಟೇ.   
*****

ಚಾಂದ್ರಮಾನದ ಮತ್ತು ಸೌರಮಾನದ ಲೆಕ್ಕಗಳ ಸರಿಮಾಡುವಿಕೆಗೆ ಚಾಂದ್ರಮಾನದ ಲೆಕ್ಕದಲ್ಲಿ ಅಧಿಕ ಮಾಸ ಬರುತ್ತದೆ ಎಂದು ಮೇಲೆ ನೋಡಿದೆವು. ಈ ಅಧಿಕ ಮಾಸದ ಲೆಕ್ಕ ಹೇಗೆ? ಯಾವುದೋ ಒಂದು ಮನಸ್ಸಿಗೆ ಬಂದ ತಿಂಗಳನ್ನು ಅಧಿಕ ಮಾಸ ಎಂದು ಹೇಳಬಹುದೇ? ಅಥವಾ ಈ ಅಧಿಕ ಮಾಸ ಗುರುತಿಸುವುದಕ್ಕೆ ಏನಾದರೂ ಖಚಿತವಾದ ಆಧಾರ ಅಥವಾ ಸೂತ್ರ ಇದೆಯೇ? ಇದು ಸಹಜವಾದ ಪ್ರಶ್ನೆ. 

ಚಂದ್ರನ ಒಂದು ಸುತ್ತು ಬರುವಿಕೆಗೆ (ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆವರೆಗೆ) ಚಂದ್ರಮಾನದಲ್ಲಿ ಒಂದು ತಿಂಗಳು. ಚೈತ್ರ, ವೈಶಾಖ ಇತ್ಯಾದಿ. ಸೌರಮಾನದಲ್ಲಿ ರವಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋದಾಗ ಒಂದು ತಿಂಗಳು. ರವಿಯ ಈ ರಾಶಿ ಪ್ರವೇಶವನ್ನು "ಸಂಕ್ರಮಣ" ಎನ್ನುತ್ತೇವೆ. ಉದಾಹರಣೆಗೆ, ತುಲಾ ರಾಶಿ ಪ್ರವೇಶ ಮಾಡುವ ದಿನ "ತುಲಾ ಸಂಕ್ರಮಣ". (ಈ ದಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಉತ್ಸವ ನಡೆಯುತ್ತದೆ). ಅಂದರೆ, ಯಾವುದೇ ಒಂದು ತಿಂಗಳಲ್ಲಿ, ಅದು ಚಾಂದ್ರಮಾನ ಲೆಕ್ಕವೇ ಆಗಲಿ ಅಥವಾ ಸೂರ್ಯಮಾನ ಲೆಕ್ಕವೇ ಆಗಲಿ,  ಒಂದು ಅಮಾವಾಸ್ಯೆ ಮತ್ತು ಒಂದು ಸಂಕ್ರಮಣ ಬರುವುದು ಸಹಜ. ಚಾಂದ್ರಮಾನದ ಸುಮಾರು ಒಂದು ದಿನ ಪ್ರತಿ ತಿಂಗಳೂ ಕಡಿಮೆ ಆಗುತ್ತಾ ಇರುತ್ತದೆ. ಆದ್ದರಿಂದ 33 ತಿಂಗಳಿಗೆ ಒಮ್ಮೆ ಒಂದು ಚಾಂದ್ರಮಾನ ತಿಂಗಳಲ್ಲಿ ಸಂಕ್ರಮಣವೇ ಬರುವುದಿಲ್ಲ! ಇಂತಹ ತಿಂಗಳನ್ನೇ ಅಧಿಕ ಮಾಸ ಎಂದು ತಿಳಿಯಲಾಗುವುದು. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಎರಡು ಸಂಕ್ರಮಣಗಳ ನಡುವೆ ಬರುವ ಒಂದು ಪೂರ್ತಿ ಚಾಂದ್ರಮಾನ ತಿಂಗಳೀ ಅಧಿಕ ಮಾಸ.  

ಇದನ್ನು ಸರಿಯಾಗಿ ತಿಳಿಯಲು ಒಂದು ಉದಾಹರಣೆಯನ್ನು ನೋಡೋಣ. ಇದೇ ಶೋಭನ ಸಂವತ್ಸರ 17.07.2023 ಸೋಮವಾರ ಆಷಾಡದ ಅಮಾವಾಸ್ಯ ಬಂದಿತು. ಅಂದೇ ಕರ್ಕಾಟಕ ಸಂಕ್ರಮಣವೂ ಬಂತು. ಅಂದು ದಕ್ಷಿಣಾಯಣ ಪುಣ್ಯ ಕಾಲ ಸಹ. ಮುಂದಿನ ಸಂಕ್ರಮಣ, ಸಿಂಹ ಸಂಕ್ರಮಣ, 18.08.2023 ಗುರುವಾರ. ಆದರೆ ಮುಂದಿನ ಅಮಾವಾಸ್ಯ 16.08.2023 ಬುಧವಾರವೇ ಬಂದಿತು. ಇದರಿಂದ 18.07.2023 ರಿಂದ 16.08.2023 ವರೆಗಿನ ಚಾಂದ್ರಮಾನ ತಿಂಗಳಲ್ಲಿ ಸಂಕ್ರಮಣವೇ ಇಲ್ಲ. ಆದ ಕಾರಣ ಇದು ಆಧಿಕ ಮಾಸ ಆಯಿತು! ಈ ಚಾಂದ್ರಮಾನ ತಿಂಗಳಲ್ಲಿ ಸೂರ್ಯ ಪೂರ್ಣ ಕಾಲ ಕರ್ಕಾಟಕ ರಾಶಿಯಲ್ಲೇ ಇದ್ದನು. 

ಅಧಿಕ ಮಾಸ ಹೇಗೆ ಪತ್ತೆ ಹಚ್ಚುವುದು ಎನ್ನುವುದಕ್ಕೆ ಈಗ ಒಂದು ಸೂತ್ರ ಸಿಕ್ಕಿತು. ಈ ತಿಂಗಳಿಗೆ ಏನು ಹೆಸರು ಇಡುವುದು ಎನ್ನುವ ಪ್ರಶ್ನೆ ಮುಂದೆ ಬಂತು. ಅದಕ್ಕೊ ಒಂದು ಸೂತ್ರ ಕೊಟ್ಟರು. 17.07.2023 ರಂದು ಸೋಮವಾರ ಅಮಾವಾಸ್ಯೆ ಬಂದು ಆಷಾಡ ಮಾಸ ಮುಗಿಯಿತು. ಮುಂದಿನ ಚಾಂದ್ರಮಾನ ತಿಂಗಳು ಶ್ರಾವಣ ಆಗಬೇಕು. ಆದರೆ ಮುಂದಿನ ಚಾಂದ್ರಮಾನ ತಿಂಗಳಲ್ಲಿ ಸಂಕ್ರಮಣ ಇಲ್ಲ. ಶ್ರಾವಣ ಮಾಸಕ್ಕೆ ಮುಂಚೆ ಬಂದ ಅಧಿಕ ಮಾಸ ಆದರಿಂದ ಇದು "ಅಧಿಕ ಶ್ರಾವಣ ಮಾಸ" ಆಯಿತು. ನಮ್ಮ ಮಾಮೂಲಿನ ಶ್ರಾವಣ ಮಾಸ ಅದರ ಮುಂದೆ, ಅಂದರೆ 17.08.2023 ರಿಂದ ಪ್ರಾಂಭವಾಯಿತು. ಅದು "ನಿಜ ಶ್ರಾವಣ ಮಾಸ" ಎಂದು ಕರೆಸಿಕೊಂಡಿತು. 

ಈಗ ಅಧಿಕ ಮಾಸ ಗುರುತಿಸುವ ಮತ್ತು ಅದರ ಹೆಸರಿಡುವ ಎರಡೂ ಸೂತ್ರಗಳೂ ಸಿಕ್ಕವು! 

*****

"ದುರ್ಭಿಕ್ಷದಲ್ಲಿ ಅಧಿಕ ಮಾಸ" ಎನ್ನುವುದು ಒಂದು ಪ್ರಚಲಿತ ಗಾದೆ. "ಏಕಾದಶಿಯ ಮನೆಗೆ ಶಿವರಾತ್ರಿ ಬಂದಂತೆ", "ಕುರುವಿನ ಮೇಲೆ ಬೊಕ್ಕೆ ಎದ್ದಂತೆ", "ಅಳುವವನ ಮೇಲೆ ಗಳು ಬಿದ್ದಂತೆ""ನ್ಯುಮೋನಿಯಾ ಇರುವವನಿಗೆ ಕರೋನಾ ಬಂದಂತೆ" ಎನ್ನುವ ಗಾದೆಗಳಿಗೆ ಸುಮಾರಾಗಿ ಸಮನಾದುದು. "ಕುಡಿದವನಿಗೆ ಚೇಳು ಕಚ್ಚಿದಂತೆ" ಅನ್ನುವುದನ್ನೂ ಇದರಲ್ಲಿ ಸೇರಿಸಬಹುದು. ಮೊದಲೇ ತಿಕ್ಕಲಾಗಿ ಆಡುವವನಿಗೆ ಇನ್ನೊಂದು ಕಾರಣ ಸಿಕ್ಕಂತೆ ಎಂದು ಸರಿಯಾದ ಅರ್ಥ ಆದರೂ, ಹೆಚ್ಚು ಕಡಿಮೆ ಇವುಗಳ ಸಾಲಿಗೆ ಸೇರುವುದು ಅದು.  ಕಷ್ಟದಲ್ಲಿ ಇರುವಾಗ ಅದರ ಮೇಲೆ ಇನ್ನಷ್ಟು ಕಷ್ಟ ಬಂತು ಅನ್ನುವುದು ಅದರ ತಾತ್ಪರ್ಯ. ಈ ರೀತಿಯ ಗಾದೆ ಏಕೆ ಬಂತು?

"ಆಹಾ! ಒಳ್ಳೆಯ ಸಮಯದಲ್ಲಿ ಕೊಟ್ಟರು" ಎಂದು ಅನೇಕ ವೇಳೆ ಸಂತೋಷ ಪಡುತ್ತೇವೆ. ಅದೇ ರೀತಿ "ಒಹೋ! ಸರಿಯಾದ ಸಮಯಕ್ಕೇ ಕೈ ಕೊಟ್ಟರು" ಎಂದೂ ಪರಿತಾಪ ಪಡುತ್ತೇವೆ. ಕೊಟ್ಟದ್ದು ಅಷ್ಟೇ. ಆದರೆ ನಮಗೆ ಬೇಕಿದ್ದಾಗ, ಬೇಕಾದ ಪದಾರ್ಥ  ಕೊಟ್ಟರೆ ಅದರ ಬೆಲೆ ಹೆಚ್ಚು. ಯಾವಾಗಲೋ ಕೊಟ್ಟರೆ ಬೆಲೆ ಇಲ್ಲ. ಅಥವಾ ಬೆಲೆ ಕಮ್ಮಿ. ಬೇಸಗೆಯಲ್ಲಿ ಉಣ್ಣೆಯ ಕೋಟು ಕೊಟ್ಟರೆ ಏನು ಮಾಡಬೇಕು? ಕೋಟೇನೋ ಒಳ್ಳೆಯದೇ. ಆದರೆ ಈಗ ಉಪಯೋಗವಿಲ್ಲ. ಚಳಿಗಾಲದವರೆಗೂ ಎತ್ತಿಟ್ಟಿದ್ದು ರಕ್ಷಣೆ ಮಾಡಿ ಆಮೇಲೆ ಉಪಯೋಗಿಸಬೇಕು. ವೈಶಾಖ ಮಾಸದ ಸುಡು ಬಿಸಿಲಿನಲ್ಲಿ ಬೆವರಿಳಿಯುತ್ತಿರುವಾಗ ಸೊಗಸಾದ ಬಿಸಿ ಬಿಸಿ ಕಾಫಿ ಕೊಟ್ಟಂತೆ. ಕಾಫಿಯೇನೋ ಬಹಳ ಚೆನ್ನಾಗಿದೆ. ಆದರೆ ಈಗ ಬೇಕಾದುದು ತಣ್ಣನೆಯ ಪಾನಕ. ಮಾಘ ಮಾಸದ ಚಳಿಯಲ್ಲಿ ಅದೇ ಕಾಫಿ ಬಹಳ ಹಿತ. ಏನು ಕೊಟ್ಟರೂ ಸರಿಯಾದ ಸಮಯದಲ್ಲಿ ತೆಗೆದುಕೊಂಡವನಿಗೆ ಪ್ರಯೋಜನ ಆಗುವಂತೆ ಕೊಡಬೇಕು. ದಾನದ ವಿಷಯದಲ್ಲಿಯೂ ಇದು ಸೂಕ್ತವೇ. ಆದ್ದರಿಂದ ಯಾವ ಯಾವ ಕಾಲಕ್ಕೆ ಯಾವ ಯಾವ ದಾನ ಸೂಕ್ತ ಎಂದು ನಮ್ಮ ಹಿರಿಯರು ಪಟ್ಟಿ ಮಾಡಿ ಕೊಟ್ಟಿದ್ದಾರೆ. "ದೇಶೇ ಕಾಲೇಚ ಪಾತ್ರೇಚ ತದ್ದಾನಂ ಸಾತ್ವಿಕಮ್ ಸ್ಮೃತಂ" ಎನ್ನುವುದು ಅದಕ್ಕೇ. 

ಇಂದು ಹಬ್ಬ ಎನ್ನುತ್ತೇವೆ. ಏಕೆ? ಅದೂ ಎಲ್ಲ ದಿನದಂತೆ ಅಲ್ಲವೇ? ಎಲ್ಲ ದಿನದಂತೆ ಆದರೂ, ಅದರಲ್ಲಿ ದಿನ ವಿಶೇಷ ಇದೆ. ವಿಶಾಲ ವಿಶ್ವದ ನಿಯಮನದಲ್ಲಿ ಇಂದು ಏನೋ ವಿಶೇಷ. ಗ್ರಹಗಳು, ಉಪಗ್ರಹಗಳು ಪ್ರತಿದಿನ ಇದ್ದೆ ಇವೆ. ಚಲಿಸುತ್ತಲೂ ಇವೆ. ಆದರೆ ಈ ಸೂಚಿತ ಕಾಲದಲ್ಲಿ ಏನೋ ಒಂದು ವಿಶೇಷ ಇದೆ! ಗ್ರಹಗಳ ಪರಸ್ಪರ ಸಂಬಂಧದಲ್ಲಿ, ಅವುಗಳ ಸ್ಥಾನಗಳ ಕ್ರಮದಲ್ಲಿ ದಿನ ಸಾಮಾನ್ಯಕ್ಕಿಂತ ಒಂದು ಹೆಚ್ಚಿನ ಪರಿಸ್ಥಿತಿ. ಇಂತಹ ಕಾಲಗಳನ್ನು "ಪರ್ವ ಕಾಲ" ಎನ್ನುತ್ತಾರೆ. ಅಮಾವಾಸ್ಯೆ. ಹುಣ್ಣಿಮೆ, ಸಂಕ್ರಮಣ, ಗ್ರಹಣ, ಮುಂತಾದವುವು ಈ ರೀತಿ ಪರ್ವ ಕಾಲಗಳು. "365 ದಿನ ಕಚ್ಚಾಡಿಕೊಂಡು ಜೊತೆಯಲ್ಲಿಯೇ ಇದ್ದರೂ ದಂಪತಿಗಳು "ವಿವಾಹದ ವಾರ್ಷಿಕೋತ್ಸವ" ಆಚರಿಸಿದಂತೆ" ಎಂದು ತಮಾಷೆಯಾಗಿ ಹೇಳಬಹುದು. 

ಇಂತಹ ಪರ್ವ ಕಾಲಗಳಲ್ಲಿ ಮಾಡುವ ಪ್ರತಿಯೊಂದು ಕೆಲಸಕ್ಕೊ ವಿಶೇಷವಾದ ಫಲ ಉಂಟು ಎಂದು ಧರ್ಮಶಾಸ್ತ್ರಕಾರರು ಹೇಳುತ್ತಾರೆ. ಒಳ್ಳೆಯ ಕೆಲಸಗಳಾದ ದಾನ, ಉಪವಾಸಾದಿ ವ್ರತಗಳು, ಸತ್ಕಥಾ ಶ್ರವಣ, ಜಪ, ತಪಾದಿಗಳನ್ನು ಪ್ರತಿದಿನವೂ ಮಾಡಬೇಕು. ಪರ್ವ ಕಾಲಗಳಲ್ಲಿ ವಿಶೇಷವಾಗಿ ಮಾಡಬೇಕು. ಅದೂ ಮಹಾನದಿಗಳ ದಡದಲ್ಲಿ ಅಥವಾ ತೀರ್ಥ ಕ್ಷೇತ್ರಗಳಲ್ಲಿ ಮಾಡಬೇಕು. ಹೀಗೆ ನಿಯಮಗಳು. ಅಧಿಕ ಮಾಸವಾದರೋ ಇಂತಹ ಪರ್ವ ಕಾಲಗಳಲ್ಲಿಯೇ ವಿಶೇಷವಾದದು. ಆದ್ದರಿಂದ ಅಧಿಕ ಮಾಸದಲ್ಲಿ ಕೊಡುವ ದಾನಾದಿಗಳಿಗೆ ಅತಿ ಹೆಚ್ಚಿನ ಮಹತ್ವ. "ಮೊದಲೇ ನಮಗೇ ಇಲ್ಲ; ಇದರಲ್ಲಿ ದಾನ ಬೇರೆ" ಎಂದು ಗೊಣಗಾಡದೆ ಇರುವದರಲ್ಲೇ ಸ್ವಲ್ಪ ದಾನ ಮಾಡಬೇಕು ಅಧಿಕ ಮಾಸಗಳಲ್ಲಿ ಎಂದು ಕಿವಿಮಾತು. ಎಷ್ಟು ಕೊಡುತ್ತೀರಿ ಎನ್ನುವುದು ಮುಖ್ಯವಲ್ಲ. ಹೇಗೆ (ಯಾವ ಮನಸ್ಥಿತಿಯಲ್ಲಿ) ಕೊಡುತ್ತೀರಿ ಎನ್ನುವುದು ಮುಖ್ಯ. ಆದ್ದರಿಂದ ಅಧಿಕ ಮಾಸ ದಾನಾದಿಗಳಿಗೆ ಬಹಳ ಪ್ರಾಶಸ್ತ್ಯ. "ವರ್ಷಾವಧಿ ಹಬ್ಬ. ಬಿಟ್ಟರುಂಟೇ ?" ಎಂದು ಆಚರಿಸುವಾಗ, "ಇದು ಮೂರು ವರುಷಕ್ಕೊಮ್ಮೆ ಬರುವ ಅಧಿಕ ಮಾಸ" ಎನ್ನುವುದನ್ನು ನೆನಪಿಡಬೇಕು. 

"ಅಧಿಕಸ್ಯ ಅಧಿಕಂ ಫಲಂ" ಅನ್ನುವುದು ಅಪರೂಪಕ್ಕೆ ಬರುವ ಅಧಿಕ ಮಾಸದಲ್ಲಿ ಮಾಡುವ ಶುಭ ಕಾರ್ಯಗಳಿಗೆ ಬೇರೆ ಸಮಯದಲ್ಲಿ ಮಾಡುವ ಅದೇ ಕೆಲಸಕ್ಕಿಂತ ಹೆಚ್ಚು ಫಲ ಎನ್ನುವುದನ್ನು ಸೂಚಿಸುವುದಕ್ಕಾಗಿಯೇ. ಅಧಿಕ ಮಾಸಕ್ಕೆ "ಮಲ ಮಾಸ" ಎಂದೂ ಹೇಳುತ್ತಾರೆ. ಇಲ್ಲಿ ಮಲ ಎಂದರೆ "ಹೆಚ್ಚಿನ" ಎಂದು ಅರ್ಥ. (ಮಲತಾಯಿ ಅಂದರೆ ವಾಸ್ತವಾಗಿ ಹೆಚ್ಚಿನ ತಾಯಿ ಎಂದೇ ಅರ್ಥ. ಲೋಕಾರೂಢಿಯಲ್ಲಿ ಯಾವಳೋ ಕೆಟ್ಟ ಮಲತಾಯಿಯ ದೆಸೆಯಿಂದ ಮಲ ಎನ್ನುವ ಪದಕ್ಕೆ ಕೆಟ್ಟ ಅರ್ಥ ಬಂದು ಕೂತಿದೆ. ಅದು ತಪ್ಪು ಭಾವನೆ.) ಅಧಿಕ ಮಾಸದಲ್ಲಿ ಮಾಡುವ ಒಳ್ಳೆಯ ಕೆಲಸಗಳಿಗೆ ಒಳ್ಳೆಯ ಹೆಚ್ಚಿನ ಫಲ ಉಂಟಾದರೂ ಚೌಲ, ಉಪನಯನ, ವಿವಾಹ ಮುಂತಾದ ಶುಭ ಕರ್ಮಗಳನ್ನು ಮಾಡುವುದಿಲ್ಲ. 

ಅಧಿಕ ಮಾಸದಲ್ಲಿ ಎಲ್ಲ ದಾನಗಳಿಗಿಂತ "ಅಪೂಪ ದಾನ" ಬಹಳ ಶ್ರೇಷ್ಠ ಎಂದು ಹೇಳುತ್ತಾರೆ. ಏನೀ ಅಪೂಪ? ಅಚ್ಚ ಕನ್ನಡದಲ್ಲಿ "ಕಜ್ಜಾಯ" ಅನ್ನಬಹುದು. ಉತ್ತರ ಭಾರತದಲ್ಲಿ "ಅನರಸ" ಎನ್ನುತ್ತಾರೆ. ಅಕ್ಕಿ, ಬೆಲ್ಲ, ಗಸಗಸೆ, ಇತ್ಯಾದಿ ಪದಾರ್ಥಗಳನ್ನು ಉಪಯೋಗಿಸಿ ಮಾಡುತ್ತಾರೆ. ಮಿತ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಈ ಅಪೂಪ ದಾನವನ್ನು 33 ಸಂಖ್ಯೆಯಲ್ಲಿ ಮಾಡಬೇಕೆನ್ನುತ್ತಾರೆ. 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ ಅಷ್ಟೇ ಸಂಖ್ಯೆಯ ಅಪೂಪ ದಾನ ಮಾಡಲು ಪ್ರಯತ್ನ. 

ಹಿಂದಿನ ಕಾಲದಂತೆ ಈಗಿನ ದಿನಗಳಲ್ಲಿ ಜನಗಳಿಗೆ ಅಂತಹ ದಾರಿದ್ರ್ಯವೇನೂ ಇಲ್ಲ. ಒಟ್ಟಾರೆ ಆರ್ಥಿಕ ಸ್ಥಿತಿ ಪ್ರತಿ ಕುಟುಂಬದ್ದೂ ಐವತ್ತು, ಅರವತ್ತು , ಅಥವಾ ಮೂವತ್ತು ವರುಷಗಳ ಹಿಂದಿಗಿಂತ ಎಷ್ಟೋ ಉತ್ತಮವಾಗಿದೆ. ನಂಬಿಕೆಯಿದ್ದವರು, ಇಷ್ಟವಿದ್ದವರು, ಶಕ್ತಿ ಇರುವಷ್ಟು ದಾನಾದಿ ಕರ್ಮಗಳನ್ನು ಅಧಿಕ ಮಾಸದಲ್ಲಿ ಅವಶ್ಯ ಮಾಡಬಹುದು; ಮಾಡಬೇಕು. 

2 comments:

  1. Habbada bagge chennagi vivarane neediddiri.

    ReplyDelete
  2. Explained so well with examples to understand better. Thanks Keshav. UR….

    ReplyDelete