Tuesday, February 13, 2024

ಅಳಿಯ ಅಲ್ಲ; ಮಗಳ ಗಂಡ


"ದೇಶ ಸುತ್ತು, ಕೋಶ ಓದು" ಅಥವಾ "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಅನ್ನುವುದು ಕೆಲವು ದಶಕಗಳ ಹಿಂದೆ ಬಹಳ ಪ್ರಚಲಿತವಾದ ಗಾದೆ ಮಾತಾಗಿತ್ತು. ಅನುಭವದಿಂದ ಬಂದ ಜ್ನ್ಯಾನವನ್ನು ನಮ್ಮ ಹಿರಿಯರು ಗಾದೆಗಳ ರೂಪದಲ್ಲಿ ಕೊಡುತ್ತಿದ್ದರು. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎನ್ನುವುದು ಗಾದೆಗಳಿಗೆ ಸಂಭಂದಿಸಿದ ಇನ್ನೊಂದು ಗಾದೆ. ಇದೊಂದು ತಗಾದೆ ಇಲ್ಲದ ಗಾದೆ! ಪುಸ್ತಕದ ಜ್ನ್ಯಾನಕ್ಕಿಂತ ಅನುಭವದ ಜ್ನ್ಯಾನ ಹಿರಿದು ಎನ್ನುವುದನ್ನು ತಿಳಿಸುವ ಸಲುವಾಗಿ ಈ ಗಾದೆ. 

ಜ್ನ್ಯಾನಾರ್ಜನೆಗೆ ಎರಡು ಪ್ರಮುಖವಾದ ದಾರಿಗಳು. ಗ್ರಂಥಗಳನ್ನು ಅಭ್ಯಸಿಸುವುದರಿಂದ  ತಿಳುವಳಿಕೆ ಪಡೆಯುವುದು ಒಂದು ದಾರಿ. ಹೊರಗಡೆಯ ಪ್ರಪಂಚದಲ್ಲಿ ತಿರುಗಾಡಿ ಜ್ನ್ಯಾನ ಸಂಪಾದನೆ ಮಾಡುವುದು ಇನ್ನೊಂದು ದಾರಿ. ಮೇಲೆ ಹೇಳಿದ ದೇಶ-ಕೋಶದ ಗಾದೆ ಇವೆರಡು ದಾರಿಗಳನ್ನೂ ಸೂಚಿಸುತ್ತದೆ. ಇದೇ ಕಾರಣಕ್ಕಾಗಿಯೇ ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ಕಡೆಯ ವರ್ಷದ ವಿದ್ಯಾರ್ಥಿಗಳನ್ನು "ವಾರ್ಷಿಕ ಪ್ರವಾಸ" ಕರೆದುಕೊಂಡು ಹೋಗುತ್ತಿದ್ದುದು. 

ಇವೆರಡೂ ಅಲ್ಲದೆ ಇನ್ನೊಂದು ವಿಶೇಷವಾದ ದಾರಿ ಇದೆ. ಅದು ತಿಳಿದವರ ಒಡನಾಟ. ಜ್ನ್ಯಾನಿಗಳ ಸಂಗದಲ್ಲಿ ಕಾಲ ಕಳೆದರೆ ಅವರ ಕಲಿಕೆಯ ಒಂದು ಪಾಲು ನಮಗೂ ಸೇರುತ್ತದೆ. "ಮೀನು ಮಾರುವವಳನ್ನು ಮುದ್ದಾಡುವುದಕ್ಕಿಂತ ಗಂಧ ಮಾರುವವಳ ಜೊತೆ ಗುದ್ದಾಡುವುದು ಲೇಸು" ಎನ್ನುವುದು ಇನ್ನೊಂದು ತುಂಟ ಗಾದೆ! ಕೆಡುಗರ ಜೊತೆ ಸ್ನೇಹಕ್ಕಿಂತ ಸಜ್ಜನರ ಜೊತೆ ಹಗೆತನವೇ ವಾಸಿ. ಅಂದಮಾತ್ರಕ್ಕೆ ಸಜ್ಜನರ ಜೊತೆ ಜಗಳ ಮಾಡಬೇಕೆಂದು ಅರ್ಥವಲ್ಲ. ಒಳ್ಳೆಯವರ ಜೊತೆಯ ದ್ವೇಷವೂ ಒಳ್ಳೆಯದನ್ನೇ ಉಂಟು ಮಾಡುತ್ತದೆ ಎಂದರೆ ಅವರ ಜೊತೆ ಪ್ರೀತಿಯ ಫಲ ಇನ್ನೂ ಹೆಚ್ಚಿನ ಹಿತವನ್ನು ಮಾಡುತ್ತದೆ ಎನ್ನುವುದು ಇದರ ತಾತ್ಪರ್ಯ. ಆದ್ದರಿಂದ ಹುಡಿಕಿಕೊಂಡು ಹೋಗಿ ಸಜ್ಜನರ ಸಂಗ ಮಾಡಬೇಕು ಎನ್ನುವುದು ಇದರ ಆಶಯ. 

ಮೇಲಿನ ಗಾದೆಯಲ್ಲಿ ಕೋಶ ಎನ್ನುವ ಪದ "ಗ್ರಂಥ ಕೋಶ" ಎನ್ನುವುದನ್ನು ಸೂಚಿಸುತ್ತದೆ. ಕೋಶ ಎನ್ನುವ ಪದಕ್ಕೆ ಇನ್ನೊಂದು ಅರ್ಥ ಭಾಷೆ, ಮಾತು ಮತ್ತು ಅದರ ಉಪಯೋಗಕ್ಕೆ ಸಂಭಂದಿಸಿದ್ದು. ಈ ಸಂದರ್ಭದಲ್ಲಿ ಇಂಗ್ಲಿಷಿನ "ಡಿಕ್ಷನರಿ" ಮತ್ತು "ಥೆಸರುಸ್" (Dictionary and Thesaurus) ಪದಗಳನ್ನು ನೆನೆಸಿಕೊಳ್ಳಬಹುದು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಈ ರೀತಿಯ ಅನೇಕ ಕೋಶಗಳು ಪ್ರಚಲಿತವಿದ್ದವು. ಭಾಷೆಯಲ್ಲಿನ ಪದಗಳ ಅರ್ಥಗಳು, ಸಮಾನಾರ್ಥ ಮತ್ತು ವಿರುದ್ದಾರ್ಥ ಪದಗಳನ್ನು ತಿಳಿಯಲು ಈ ಕೋಶಗಳನ್ನು ಉಪಯೋಗಿಸುತ್ತಿದ್ದರು. ಅಮರಸಿಂಹನ "ಅಮರಕೋಶ" ಅವನ ಕಾಲದವರೆಗೆ ಪ್ರಚಲಿತವಿದ್ದ ಅನೇಕ ಕೋಶಗಳನ್ನು ಸಂಗ್ರಹಿಸಿ ಕೊಟ್ಟಿರುವ ಒಂದು ಕೋಶ. ಅದೆಲ್ಲ ಕಾಗದ, ಅಚ್ಚು, ಇಂಕು ಇಲ್ಲದ ಕಾಲ. ಆದ ಕಾರಣ ಕಲಿಯುವ ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂತಹ ಕೋಶಗಳನ್ನು ಪ್ರತಿದಿನ ಸಂಜೆ ಉರು ಹೊಡೆಸುತ್ತಿದ್ದರು. 

*****

ಒಂದು ವಾಕ್ಯದಲ್ಲಿ ಒಮ್ಮೆ ಪ್ರಯೋಗಿಸಿದ ಪದವನ್ನು ಮತ್ತೆ ಉಪಯೋಗಿಸಬಾರದು ಎಂದು ಭಾಷಾ ಶಾಸ್ತ್ರಜ್ಞರು ಹೇಳುತ್ತಾರೆ. (ಕಾವ್ಯಗಳಲ್ಲಿ ಬೇಕೆಂದೇ ಈ ರೀತಿ ಉಪಯೋಗಿಸುವ ಪುನರುಕ್ತಿ ವಿಷಯ ಬೇರೆ). ಪ್ರತಿ ಭಾಷೆಯಲ್ಲಿಯೂ ವಿಪುಲವಾದ ಪದಸಂಪತ್ತಿದೆ. ಇರುವ ಈ ಪದಗಳ ಭಂಡಾರವನ್ನು ಚೆನ್ನಾಗಿ ತಿಳಿಯಲಿ ಮತ್ತು ಅವುಗಳ ಉಪಯೋಗವನ್ನು ಮಾಡಲಿ ಎಂದು ಈ ರೀತಿ ಹೇಳುವುದು. ಈ ಕಾರಣಕ್ಕಾಗಿ ಕೋಶಗಳನ್ನು ಉಪಯೋಗಿಸಿ ಸಮಾನಾರ್ಥ ಪದಗಳನ್ನು ಹೊರ ತೆಗೆದು ಬಳಸುವುದು. ಆದರೆ ಕೋಶಕಾರರು ಸಮಾನಾರ್ಥ ಪದಗಳನ್ನು ಕೊಟ್ಟಾಗ ಈ ರೀತಿ ಕೊಟ್ಟಿರುವ ಅನೇಕ ಪದಗಳಲ್ಲಿ ಹೆಚ್ಹೂ ಕಡಿಮೆ ಒಂದೇ ಅರ್ಥ ಬಂದರೂ ಅನೇಕ ಪದಗಳಲ್ಲಿ ಸೂಕ್ಷ್ಮವಾದ ಅರ್ಥ ವ್ಯತ್ಯಾಸಗಳು ಇರುತ್ತವೆ. ಅಡುಗೆ ಮನೆಯಲ್ಲಿ ಇರುವ ಸೌಟುಗಳನ್ನೇ ತೆಗೆದುಕೊಳ್ಳೋಣ. ಅಲ್ಲಿ ಅನೇಕ ಸೌಟುಗಳು ಇವೆ. ಪ್ರತಿಯೊಂದೂ ಸೌಟೇ. ತುಂಬಾ ದೊಡ್ಡದರಿಂದ ಹಿಡಿದು ಪುಟ್ಟ ಸೌಟಿನವರೆಗೂ ಉಂಟು. ಹುಳಿ ಬಡಿಸಲು ದೊಡ್ಡ ಸೌಟು. ಪಾಯಸ ಬಡಿಸಲು ಅದಕ್ಕಿಂತ ಸಲ್ಪ ಚಿಕ್ಕದು. ಗೊಜ್ಜಿಗೆ ಇನ್ನೂ ಸ್ವಲ್ಪ ಚಿಕ್ಕದು. ಉಪ್ಪಿನಕಾಯಿಗೆ ಮತ್ತೂ ಸಣ್ಣದು. ಎಲ್ಲವೂ ಸೌಟು ಎಂದು ಹುಳಿ ಬಡಿಸುವ ಸೌಟಿನಲ್ಲಿ ಉಪ್ಪಿನಕಾಯಿ ಬಡಿಸಿದರೆ ಹೇಗೆ? ಪದಗಳ ಪ್ರಯೋಗದಲ್ಲಿಯೂ ಹಾಗೆ. ಆರಿಸಿದ ಪದ ನಾವು ಹೇಳಬೇಕೆನ್ನುವ ವಿಷಯವನ್ನು ಖಚಿತವಾಗಿ, ಕರಾರುವಾಕ್ಕಾಗಿ ಹೇಳಬೇಕು. ಇಲ್ಲದಿದ್ದಲ್ಲಿ ಏನೋ ಕೊರತೆ ಕಾಡುತ್ತದೆ. 

ಪ್ರಪಂಚ ಪ್ರತಿ ದಿನ ಬದಲಾಗುತ್ತಲೇ ಇರುತ್ತದೆ. ನಿನ್ನೆ ಇದ್ದಂತೆ ಇಂದಿಲ್ಲ. ಇಂದು ಇರುವಂತೆ ನಾಳೆ ಇರುವುದಿಲ್ಲ. ಇನ್ನು ಹತ್ತು ವರುಷದ ನಂತರ ಅನೇಕ ವಿಷಯಗಳಲ್ಲಿ ಗುರುತು ಸಿಗದ ಬದಲಾವಣೆ ಕಾಣುತ್ತೇವೆ. ಪದಗಳ ಪ್ರಯೋಗದಲ್ಲೊ ಹಾಗೆ. ಇಂದು ವ್ಯಾಪಕವಾದ ಅರ್ಥ ಇರುವ ಪದಕ್ಕೆ ಅಥವಾ ಪದಪುಂಜಕ್ಕೆ ಮುಂದೆ ಬೇರೆಯೇ ಅರ್ಥ ಹುಟ್ಟಿಕೊಳ್ಳಬಹುದು. ವಿಪರ್ಯಾಸವೆಂದರೆ ಕೆಲವರು ತಪ್ಪು ಪ್ರಯೋಗ ಮಾಡಿ, ಅದನ್ನೇ ಅನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿಯೆಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು! "ಗತಾನುಗತಿಕೋ ಲೋಕಃ" ಎನ್ನುವಂತೆ ಅನೇಕರು ತಪ್ಪು ದಾರಿ ಹಿಡಿದರೆ ಅವರ ಹಿಂದೆ ಬರುವವರೂ ತಪ್ಪು ದಾರಿ ಹಿಡಿದಂತೆ!

*****

ಈ ಸಂದರ್ಭದಲ್ಲಿ "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಗಾದೆಯನ್ನೇ ನೋಡೋಣ. ಇದು ಬಹಳ ಚಾಲ್ತಿಯಲ್ಲಿರುವ ಒಂದು ಗಾದೆ. ಇದನ್ನು ಪ್ರಯೋಗಿಸದಿರುವವರೇ ವಿರಳ. ಇಂದಿನ ಈ ಗಾದೆಯ ಪ್ರಯೋಗದಲ್ಲಿ "ಇದಲ್ಲ. ಅದು" ಎನ್ನುವ ಬದಲು "ಎರಡೂ ಒಂದೇ" ಎನ್ನುವ ಅರ್ಥದಲ್ಲಿ ಪ್ರಯೋಗ ಆಗುತ್ತಿದೆ. "ಹೀಗೆ ಹೇಳುವ ಬದಲು ಹಾಗೆ ಹೇಳಿದರು. ಎಲ್ಲ ಒಂದೇ!" ಎನ್ನುವ ಅರ್ಥ. ಐವತ್ತು ಅರವತ್ತು ವರುಷಗಳ ಹಿಂದೆ ಹಾಗಿರಲಿಲ್ಲ. ಎರಡರ ನಡುವೆ ಬಹಳ ವ್ಯತ್ಯಾಸ ಇತ್ತು. 

ಮಕ್ಕಳ ವಿವಾಹ ಸಂಬಂಧವಾದ ತೀರ್ಮಾನಗಳನ್ನು ವಧು ಅಥವಾ ವರನ ತಂದೆ-ತಾಯಿಗಳು ತೆಗೆದುಕೊಳ್ಳುತ್ತಿದ್ದರು. ವಿವಾಹ ವಧೂ-ವರರು ಇನ್ನೂ ಚಿಕ್ಕ ವಯಸ್ಸಿನವರಿದ್ದಾಗಲೇ ನಡೆಯುತ್ತಿತ್ತು. ಲಗ್ನದ ಸಂದರ್ಭದಲ್ಲಿ ವಧು ಮತ್ತು ವರರ ನಡುವೆ ಒಂದು ವಸ್ತ್ರದ ಅಂತರ್ಪಟ ಹಿಡಿದಿರುತ್ತಿದ್ದರು. ಅದನ್ನು ಸರಿಸಿದಾಗಲೇ ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಿದ್ದರು, ಎಂದು ಹೇಳಿದುದನ್ನು ನಾವು ನಮ್ಮ ಬಾಲ್ಯದಲ್ಲಿ ಕೇಳಿದ್ದೇವೆ. ಮೆಚ್ಚಿ ಮದುವೆಯಾದ ಜೋಡಿಗಳು ಅಪರೂಪ ಅಂದಿನ ಕಾಲದಲ್ಲಿ. ಹುಡುಗಿಯ ತಂದೆ-ತಾಯಿಯರಿಗೆ ಹುಡುಗನ ಜೊತೆ ನೇರ ಸಂಭಂದವಿತ್ತು. ಅವನು ಅಳಿಯ ಆಗುತ್ತಿದ್ದ. ಹುಡುಗಿ ಅತ್ತೆಯ ಮನೆಯಲ್ಲಿ ಸೊಸೆ ಆಗುತ್ತಿದ್ದಳು. 

ಕಾಲಕ್ರಮದಲ್ಲಿ ಯುವಕ ಯುವತಿಯರಿಗೆ ಹೆಚ್ಚಿನ ಸ್ವಾತಂತ್ರ್ಯ ಸಮಾಜದಲ್ಲಿ ಸಿಕ್ಕಿತು. ವಿವಾಹವಾಗುವ ವೇಳೆಗೆ ಅವರಿಗೆ ಹೆಚ್ಚಿನ ವಯಸ್ಸೂ ತಿಳುವಳಿಕೆಯೂ ಇರುತ್ತಿದ್ದವು. ತಂದೆ-ತಾಯಿಯರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದು, ಕೆಲವರು ಮದುವೆ ಆಗುತ್ತಿದ್ದರು. ಕೆಲವರು ಮದುವೆಯಾದಮೇಲೆ ತಿಳಿಸುತ್ತಿದ್ದರು. ಇನ್ನೂ ಕೆಲವು ಜೋಡಿಗಳು ಹೆದರಿಕೆಯಿಂದ ಮದುವೆಯಾದುದನ್ನು ಕೆಲವು ಕಾಲ ಗುಟ್ಟಾಗಿ ಇಡುತ್ತಿದ್ದುದೂ ಉಂಟು. ಅನೇಕ ಸಂದರ್ಭಗಳಲ್ಲಿ ಹುಡುಗಿಯ ತಂದೆ ತಾಯಿಯರಿಗೆ ಮಗಳು ತಂದ ಹುಡುಗ ಇಷ್ಟವಾಗುತ್ತಿರಲಿಲ್ಲ. ಜಾತಿ, ಪಂಗಡ, ವಿದ್ಯೆ, ಅಂತಸ್ತು, ದೇಶ, ಭಾಷೆ, ವರಸಾಮ್ಯ, ಮೊದಲಾದ ಹತ್ತಾರು ಕಾರಣಗಳಿಂದ ಕುಟುಂಬಗಳಲ್ಲಿ ವಿರಸ ಮೂಡುತ್ತಿತ್ತು. ಕೆಲವು ಹಿರಿಯರು ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿ ಮಾಡಿ ಮದುವೆ ಮಾಡಿಸುತ್ತಿದ್ದ ಪ್ರಕರಣಗಳೂ ಇದ್ದವು. "ನೀನು ನನ್ನ ಮಗಳಲ್ಲ. ನಾನು ನಿನ್ನ ತಂದೆಯೂ ಅಲ್ಲ. ಇಂದಿಗೆ ನಮ್ಮಿಬ್ಬರ ಸಂಬಂಧ ಕಡಿದುಹೋಯಿತು" ಎಂದು ಹೇಳಿದ ಪ್ರಕರಣಗಳೂ ಬೇಕಾದಷ್ಟಿದ್ದವು. ಇಂತಹ ಪ್ರಕರಣಗಲ್ಲಿ ಸ್ವಲ್ಪ ದಿನ ಕಳೆದ ನಂತರ ಅಥವಾ ಮೊಮ್ಮಗುವಿನ ಆಗಮನದ ನಂತರ ಮತ್ತೆ ಕುಟುಂಬಗಳು ಒಂದಾಗುತ್ತಿದ್ದ ಸುಖಾಂತ್ಯದ ಕೆಲವು ಪ್ರಕರಣಗಳು ಇದ್ದರೂ, ಕೊನೆಯವರೆಗೆ ವಿರಸ ಮುಂದುವರೆದ ಸಂದರ್ಭಗಳೂ ಇದ್ದವು. 

ಹುಡುಗಿಯ ತಂದೆ-ತಾಯಿಗಳು ಒಪ್ಪಿ ನಡೆದ ವಿವಾಹದಲ್ಲಿ ವರ ವಧುವಿನ ತಂದೆ-ತಾಯಿಯರಿಗೆ ಅಳಿಯ ಆಗುತ್ತಿದ್ದ. ಅವರಿಗೆ ಬೇಡದ ಸಂದರ್ಭಗಳಲ್ಲಿ ಹುಡುಗ ಅಳಿಯನಾಗದೇ ಮಗಳ ಗಂಡ ಆಗಿ ಉಳಿದುಬಿಡುತ್ತಿದ್ದ. 

ಈ ವ್ಯತ್ಯಾಸ ಕೆಳಗಿನ ಎರಡು ಚಿತ್ರಗಳಿಂದ ಇನ್ನೂ ವಿಶದವಾಗಿ ತಿಳಿಯಬಹುದು:

 ಅಳಿಯ 

ಅಪ್ಪ/ಮಾವ                                                                  ಮಗಳು 

ಮೇಲಿನ ಚಿತ್ರದಲ್ಲಿ ಅಪ್ಪ-ಅಮ್ಮ, ಮಗಳು ಮತ್ತು ವರನ ಜೊತೆ ಮಧುರವಾದ ಸಂಭಂದ ಇದೆ. ಇಲ್ಲಿ ಮೂರು ಸಂಬಂಧ ಉಂಟು. ಮೊದಲನೆಯದು ತಂದೆ-ತಾಯಿ ಮತ್ತು ಮಗಳ ಸಂಬಂಧ. ಎರಡನೆಯದು ಮಗಳು ಮತ್ತು ಅವಳ ಗಂಡನ ಪತಿ-ಪತ್ನಿ ಸಂಬಂಧ. ಮೂರನೆಯದು ಅತ್ತೆ-ಮಾವ ಮತ್ತು ಅಳಿಯನ ನೇರ ಸಂಬಂಧ. ನೇರ ಸಂಬಂಧ ಅಂದರೆ ಇದರಲ್ಲಿ ಮಗಳ ಕೊಂಡಿಯಿಲ್ಲ. ಈ ರೀತಿ ಮೂರು ಮುಖದ ತ್ರಿಕೋಣಾಕೃತಿಯ ಸಂಬಂಧ ಇರುವಾಗ "ಅಳಿಯ" ಅನ್ನುವ ಪದಕ್ಕೆ ಸರಿಯಾದ ಅರ್ಥ ಸಿಗುತ್ತದೆ. 


ಈಗ ಇನ್ನೊಂದು ಚಿತ್ರ ನೋಡೋಣ:

                               ಅಪ್ಪ                               ಮಗಳು               ಮಗಳ ಗಂಡ 

ಈ ಸಂಬಂಧದಲ್ಲಿ ಮಗಳು ಹಿಡಿದುಕೊಂಡು ಬಂದಿರುವ (!) ಹುಡುಗ ತಂದೆ-ತಾಯಿಯರಿಗೆ ಬೇಡವಾದವನು. ಇಲ್ಲಿ ತ್ರಿಕೋಣಾಕೃತಿಯ ಸಂಬಂಧ ಇಲ್ಲ. ಕೇವಲ ಎರಡೇ ಸಂಬಂಧಗಳು. ಒಂದು ಕಡೆ ತಂದೆ-ತಾಯಿ ಮತ್ತು ಮಗಳ ನೇರ ಸಂಬಂಧ. ಅಂತೆಯೇ, ಮಗಳು ಮತ್ತು ಅವಳ ಗಂಡನ ಪತಿ-ಪತ್ನಿಯ ಸಂಬಂಧ.  ಮಗಳ ಗಂಡನಿಗೂ ಮಗಳ ತಂದೆ-ತಾಯಿಯರಿಗೂ ಸಂಬಂಧ ಇಲ್ಲ. (ಇಲ್ಲಿ ಸಂಬಂಧ ಅಂದರೆ ವ್ಯಾವಹಾರಿಕ ಸಂಬಂಧ. ಕಾನೂನಿನ ಸಂಬಂಧ ಅಲ್ಲ). ಇಂತಹ ಪರಿಸ್ಥಿತಿಯಲ್ಲಿ ಹುಡುಗ ಹುಡುಗಿಯ ತಂದೆ-ತಾಯಿಯರಿಗೆ ಕೇವಲ "ಮಗಳ ಗಂಡ".  ಅವನು ಅಳಿಯನಾಗುವುದೇ ಇಲ್ಲ. 

ಐವತ್ತು-ಅರವತ್ತು ವರುಷಗಳ ಹಿಂದೆ ಎರಡನೇ ಚಿತ್ರದ ರೀತಿಯ ಸಂದರ್ಭಗಳಲ್ಲಿ "ಅವನು ನಮ್ಮ ಅಳಿಯ ಅಲ್ಲ. ಕೇವಲ ಮಗಳ ಗಂಡ" ಎಂದು ಕೆಲವರು ಖಡಾಖಂಡಿತವಾಗಿ ಹೇಳುತ್ತಿದ್ದರು. "ಅವನನ್ನು ನನ್ನ ಅಳಿಯ ಎಂದು ಹೇಳಬೇಡಿ. ಅವನು ಕೇವಲ ನನ್ನ ಮಗಳ ಗಂಡ. ಅಷ್ಟೇ." ಎಂದು ಕೆಲವರು ಹೇಳುತ್ತಿದ್ದರು. ನಮ್ಮಲ್ಲಿ ಅನೇಕರು ಈ ರೀತಿ ಕೆಲವರು ಹೇಳಿದ್ದನ್ನು ಕೇಳಿದ್ದೇವೆ. ಇಂದು ಇಂತಹ ಸಂದರ್ಭಗಳು ಅತಿ ವಿರಳ. 

*****

"ಅಳಿಯ ಅಲ್ಲ; ಮಗಳ ಗಂಡ" ಅನ್ನುವ ಗಾದೆಯ ಹಿಂದೆ ಇಷ್ಟು ಇತಿಹಾಸವಿದೆ. ಹಿಂದೆ ಇದರ ಅರ್ಥ ಇವೆರಡೂ ಬೇರೆ ಬೇರೆ ಎಂದು. 

ಕಾಲಕ್ರಮದಲ್ಲಿ ಭಾಷೆಯ ಬದಲಾವಣೆ ಆದಂತೆ ಗಾದೆಯ ಪ್ರಯೋಗದಲ್ಲಿಯೂ ಬದಲಾವಣೆ ಆಗಿದೆ. ಈಗ "ಅಳಿಯ ಅಲ್ಲ; ಮಗಳ ಗಂಡ" ಅನ್ನುವ ಗಾದೆಗೆ ಎರಡೂ ಒಂದೇ ಎನ್ನುವ ಅರ್ಥ ಬಂದಿದೆ!

*****

ಕೋಶಗಳಲ್ಲಿ ಕೊಡುವ ಸಮಾನಾರ್ಥಕ ಶಬ್ದಗಳಲ್ಲಿ (Synonyms) ಸೂಕ್ಷ್ಮವಾದ, ಆದರೆ ಮುಖ್ಯವಾದ ಅರ್ಥ ವ್ಯತ್ಯಾಸಗಳು ಇರುತ್ತವೆ ಎನ್ನುವುದನ್ನು ವಿಶದೀಕರಿಸುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು. 

5 comments:

  1. Very well written. I was not knowing the difference of Aliya alla Magala ganda

    ReplyDelete
  2. ನಂಗೆಲ್ಲಾ ಗೊತ್ತು ಎನ್ನುುವುದು ಕೇವಲ ಅಹಂಕಾರ ಆದರೆ ಏನೇತಿಳಿದಿದ್ದರೂ ತಿಳಿಯುವುದು ಇನ್ನೂ ಹೆಚ್ಚೇ ಇರುತ್ತದೆ

    ReplyDelete
  3. ತುಂಬಾ ಚೆನ್ನಾಗಿ ಬರೆದಿದ್ದೀರಿ

    ReplyDelete
  4. Very nice to know about the real meanings of some of the proverbs when used in the past especially Aliya alla magaLa Ganda. Thanks for making us aware of so many things in your article. UR….

    ReplyDelete
  5. Very good explanation with diagram. Anybody can understand.

    ReplyDelete