Saturday, February 3, 2024

ಮಹದಾದಿ ದೇವಾ ನಮೋ

 


ಅನೇಕ ದಶಕಗಳ ಹಿಂದೆ ನಾವು ಶಾಲೆಗಳಲ್ಲಿ ಕಲಿಯುತ್ತಿದ್ದಾಗ ಅಂದಿನ ಅಧ್ಯಾಪಕರು ಕೆಲವು ವಿಷಯಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಬರೆಯುವ ಅಕ್ಷರಗಳು ಗುಂಡಾಗಿ ಚೆನ್ನಾಗಿರಬೇಕು, ಬರವಣಿಗೆ ಸೊಟ್ಟಾಗಿರದೆ ನೇರವಾಗಿ ಬರೆಯಬೇಕು, ಸಂದರ್ಭಕ್ಕೆ ಸರಿಯಾದ ಪದಗಳನ್ನು ಉಪಯೋಗಿಸಬೇಕು, ಬರೆದುದನ್ನು ಬೇರೆಯವರು ಓದುವಾಗ ಓದುಗನಿಗೆ ಸುಲಭವಾಗಿ ಅರ್ಥ ಆಗಬೇಕು, ಮುಂತಾದವು. ಒಮ್ಮೆ ಉಪಯೋಗಿಸಿದ ಪದವನ್ನು ಆದೇ ವಾಕ್ಯದಲ್ಲಿ ಮತ್ತೆ ಉಪಯೋಗಿಸಬಾರದು; ಅದೇ ವಾಕ್ಯವೇನು, ಆ ಪ್ಯಾರಾದಲ್ಲಿಯೇ ಮತ್ತೆ ಉಪಯೋಗಿಸಬಾರದು ಎನ್ನುವುದು ಮತ್ತೊಂದು. ಹೀಗೆ ಮಾಡುವುದರಿಂದ ನಮ್ಮ ಪದಸಂಪತ್ತು ಹೆಚ್ಚುತ್ತದೆ ಎನ್ನುವ ಕಿವಿಮಾತು ಕೂಡ ಇದರ ಜೊತೆಯಲ್ಲಿ ಇರುತ್ತಿತ್ತು. ಐದು ಅಂಕಗಳು ತಪ್ಪಿಲ್ಲದ ಮತ್ತು ಅಚ್ಚುಕಟ್ಟಾದ ಬರವಣಿಗೆಗೆ ಎಂದು ಮೀಸಲು ಸಹ ಇಡುತ್ತಿದ್ದರು. 

ನಾವು ಪ್ರಾಥಮಿಕ ಶಾಲಾ ತರಗತಿಗಳಲ್ಲಿ ಇದ್ದಾಗ (ಮೊದಲ ನಾಲ್ಕು ವರ್ಷಗಳು, ಅಂದರೆ ಇಂದಿನ ನಾಲ್ಕನೇ ತರಗತಿವರೆಗೆ) ಸ್ಲೇಟು ಮತ್ತು ಬಳಪ ಉಪಯೋಗಿಸುತ್ತಿದ್ದೆವು. ನೋಟ್ ಬುಕ್ಕು ಮತ್ತು ಪೆನ್ಸಿಲ್ ಅಥವಾ ಪೆನ್ನು  ಕಂಡರಿಯೆವು. ಆ ಸ್ಲೇಟಿನ ಸುತ್ತ ಮರದ ಚೌಕಟ್ಟು ಇರುತ್ತಿತ್ತು. ಅಕ್ಷರ ಸರಿ ಇಲ್ಲದಿದ್ದರೆ ಉಪಾಧ್ಯಾಯರು ಆ ಸ್ಲೇಟಿನ ಚೌಕಟ್ಟಿನಿಂದಲೇ ಬೆರಳುಗಳ ಹಿಂದೆ ಹೊಡೆಯುತ್ತಿದ್ದರು. ಇಂದಿನಂತೆ ಶಿಕ್ಷಕರು ಮಕ್ಕಳಿಗೆ ಹೊಡೆದರೆ ಪೋಷಕರು ಶಾಲೆಗೇ ಹೋಗಿ ಜಗಳ ಆಡುತ್ತಿರಲಿಲ್ಲ. ಪ್ರತಿಯಾಗಿ "ನಮ್ಮ ಮಗನಿಗೆ ಚೆನ್ನಾಗಿ ಹೊಡೆಯಿರಿ. ಸರಿಯಾಗಿ ಬುದ್ಧಿ ಬರಲಿ" ಎಂದು ಹೇಳುವ ಪೋಷಕರೂ ಇದ್ದರು! ಮುದ್ದಾದ ಅಕ್ಷರಗಳಲ್ಲಿ ತಪ್ಪಿಲ್ಲದೆ ಬರೆಯುವ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಅಚ್ಚು ಮೆಚ್ಚು. 

ಅದಿನ್ನೂ ಕನ್ನಡ ನವೋದಯದ ಕಾಲ. ನವ್ಯ ಮತ್ತು ಬಂಡಾಯ ಎನ್ನುವವು ಇನ್ನೂ ಜನಿಸಿರಲಿಲ್ಲ. ಪಠ್ಯ ಪುಸ್ತಕದ ಪದ್ಯಗಳು ಸಾಮಾನ್ಯವಾಗಿ ಕನ್ನಡದ ಹೆಸರಾಂತ ಕಾವ್ಯಗಳ ಭಾಗವೋ  ಅಥವಾ ನವೋದಯ ಹರಿಕಾರರ ಪದ್ಯಗಳೋ ಆಗಿರುತ್ತಿದ್ದವು. ಶಿಕ್ಷಕರು ಅವುಗಳಲ್ಲಿನ ಕಾವ್ಯಗುಣಗಳನ್ನು ಎತ್ತಿ ಹೇಳುತ್ತಿದ್ದರು. ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ಐದರಿಂದ ಹತ್ತನೇ ತರಗತಿಗಳು) ವಿದ್ಯಾರ್ಥಿಗಳಿಗೆ ಈ ವಿಷಯಗಳು ಸ್ವಲ್ಪಮಟ್ಟಿಗೆ ಅರ್ಥ ಆಗುತ್ತಿದ್ದವು. ಈ ಕಾರಣದಿಂದಲೇ ಆಗಿನ ಎಲ್ ಎಸ್ (ಲೋಯರ್ ಸೆಕೆಂಡರಿ, ಅಂದರೆ ಎಂಟನೇ ತರಗತಿವರೆಗೆ) ಓದಿದ್ದವರೂ ಕಾವ್ಯ-ನಾಟಕಗಳಲ್ಲಿನ ಸೊಗಸನ್ನು ಅರಿಯಬಲ್ಲವರಾಗಿದ್ದರು. ಅವರ ಮುಂದಿನ ಜೀವನದಲ್ಲಿ ಕೆಲವು ರಸ ನಿಮಿಷಗಳನ್ನು ಈ ಕಾರಣದಿಂದ ಪಡೆಯಬಲ್ಲವರಾಗಿದ್ದರು. 

*****

ಶ್ರೀಮಹಾವಿಷ್ಣು ಅನೇಕ ಅವತಾರಗಳನ್ನು ಎತ್ತಿದ್ದರೂ ದಶಾವತಾರಗಳಿಗೆ ಹೆಚ್ಚಿನ ಮಹತ್ವ ಬಂದಿದೆ. ಇವುಗಳಲ್ಲಿಯೂ ಶ್ರೀರಾಮ ಮತ್ತು ಶ್ರೀಕೃಷ್ಣ ಅತಿಹೆಚ್ಚು ಪೂಜಿತರು. ಈ ಅವತಾರಗಳ ಗ್ರಂಥಗಳು ಮಹಾಕಾವ್ಯಗಳ ಸಾಲಿನಲ್ಲಿ ಅತಿ ಎತ್ತರದಲ್ಲಿ ನಿಂತಿದುದರಿಂದ ಈ ರೀತಿ ಇರಬಹುದು. ಇವೆರಡರ ನಂತರ ಅತಿ ಹೆಚ್ಚು ಪೂಜಿತವಾದ ರೂಪ ಶ್ರೀನರಸಿಂಹ. ಈ ಮೂರು ರೂಪಗಳಿಗೆ ಪ್ರಸಿದ್ಧವಾದ ನೂರಾರು ಕ್ಷೇತ್ರಗಳು ದೇಶ ವಿದೇಶಗಳಲ್ಲಿ ಹರಡಿವೆ. 

ಮಹಾಭಾರತ, ಭಾಗವತಾದಿ ಗ್ರಂಥಗಳಲ್ಲಿ ಮಹಾವಿಷ್ಣುವಿನ ಅನೇಕ ಅವತಾರಗಳ ವರ್ಣನೆಯಿದೆ. ಸಾಮಾನ್ಯವಾಗಿ ಎಲ್ಲಾರೂಪಗಳನ್ನೂ  "ಅಧ್ಭುತ" ಎಂದು ನಿರ್ದೇಶಿಸುತ್ತಾರೆ. ಆದರೆ ನರಸಿಂಹ ರೂಪವನ್ನು "ಅತ್ಯದ್ಭುತ" ಎಂದು ಹೇಳುತ್ತದೆ ಶ್ರೀಮದ್ಭಾಗವತ. ಎಲ್ಲ ರೂಪಗಳಲ್ಲಿಯೂ ವಿಶೇಷ ಸ್ಥಾನ ಶ್ರೀನರಸಿಂಹ ರೂಪಕ್ಕೆ. ನರಸಿಂಹ ಮಂತ್ರ ಹೇಳುತ್ತದೆ:

ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಂ ಸರ್ವತೋಮುಖಮ್ 

ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಮ್ ನಮಾಮ್ಯಹಮ್ 

ನರಸಿಂಹರೂಪ ಮೃತ್ಯುವಿನ ಅಭಿಮಾನಿ ದೇವತೆಗಳಿಗೂ ಮೃತ್ಯು ಸ್ವರೂಪ. "ಕಠೋಪನಿಷತ್"ನಲ್ಲಿ ನಚಿಕೇತನಿಗೆ ಉಪದೇಶ ಮಾಡುವಾಗ ಯಮನು ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಮಹಾಪುರುಷನು ಎಲ್ಲವನ್ನೂ ತಿನ್ನುವಾಗ ಅವನಿಗೆ ನಾನು ಒಂದು ಉಪ್ಪಿನಕಾಯಿ!"

ನರಸಿಂಹ ಕ್ಷೇತ್ರಗಳಲ್ಲಿ ಒಂದು ವಿಶೇಷ ಕಾಣಬಹುದು. ಹೆಚ್ಚಿನವು ಬೆಟ್ಟ ಪ್ರದೇಶದಲ್ಲಿ ಇವೆ. ಬೆಟ್ಟದ ಮೇಲೆ ಯೋಗಾನರಸಿಂಹಸ್ವಾಮಿ ಮತ್ತು ಬೆಟ್ಟದ ಕೆಳಗೆ ತಪ್ಪಲಿನಲ್ಲಿ ಭೋಗಾನರಸಿಂಹಸ್ವಾಮಿ ಅಥವಾ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳು ಇರುತ್ತವೆ. 

"ಅಹೋಬಲ ನರಸಿಂಹ ಕ್ಷೇತ್ರ" ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದಬಳಿ ಇದೆ. ಇದೇ ಕ್ಷೇತ್ರದಲ್ಲಿ ನರಸಿಂಹಾವತಾರವಾಗಿ ನರಹರಿಯು ಹಿರಣ್ಯಕಶಿಪುವನ್ನು  ಕೊಂದನು ಎಂದು ಪ್ರತೀತಿ. ಈ ಕ್ಷೇತ್ರಕ್ಕೆ "ಗರುಡಾದ್ರಿ" ಎನ್ನುವುದೂ ಇನ್ನೊಂದು ಹೆಸರು. ಇಲ್ಲಿ ಒಂಭತ್ತು ನರಸಿಂಹನ ದೇವಾಲಯಗಳು ಮತ್ತು ಇತರ ದೇವಾಲಯಗಳೂ ಇವೆ. ಶ್ರದ್ದಾಳು ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರ ದರ್ಶನ ಮಾಡಬೇಕೆಂದು ಆಶಿಸುತ್ತಾರೆ. ಭಾರ್ಗವ ನರಸಿಂಹ, ಯೋಗಾನಂದ ನರಸಿಂಹ, ಛತ್ರವಟ ನರಸಿಂಹ, ಅಹೋಬಲ ನರಸಿಂಹ ಅಥವಾ ಉಗ್ರ ನರಸಿಂಹ, ವರಾಹ ನರಸಿಂಹ, ಮಾಲೋಲ ನರಸಿಂಹ ಅಥವಾ ಸೌಮ್ಯ ನರಸಿಂಹ, ಜ್ವಾಲಾ ನರಸಿಂಹ, ಪಾವನ ನರಸಿಂಹ ಮತ್ತು ಕಾರಂಜ ನರಸಿಂಹ ಎಂದು ಈ ಒಂಭತ್ತು ನರಸಿಂಹ ದೇವಾಲಯಗಳು ಇಲ್ಲಿ ಇವೆ. ಕೆಲವರು ತಮ್ಮ ಮನೆಗಳಿಗೆ "ಮಾಲೋಲ" ಎಂದು ಹೆಸರಿಡುವುದು ಈ ಸೌಮ್ಯ ನರಸಿಂಹನ ನೆನಪಿನಲ್ಲಿಯೇ. 

*****

ಶ್ರೀಪುರಂದರ ದಾಸರು ನಮ್ಮ ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ಕವಿಗಳಲ್ಲಿ ಮೊದಲ ಎಣಿಕೆಯಲ್ಲಿ ನಿಲ್ಲುತ್ತಾರೆ. ಭಕ್ತಿಯ ಭರದಲ್ಲಿ ಅವರ ಪದ, ಸುಳಾದಿ, ಉಗಾಭೋಗಗಳಲ್ಲಿ ಕಾವ್ಯ ಗುಣಗಳನ್ನು ಮರೆಯುವುದೇ ಹೆಚ್ಚು. ಅವರ ಪ್ರತಿಯೊಂದು ಕೃತಿಯಲ್ಲಿಯೂ ಗಮನಿಸಿದರೆ ಅನೇಕ ಕಾವ್ಯ ಗುಣಗಳನ್ನು ಕಾಣಬಹುದು. ಅವರೊಬ್ಬ ವರಕವಿ. ಅವರೆಂದೂ ಹಲಗೆ-ಬಳಪ ಹಿಡಿದೋ, ಲೇಖನಿ ಹಿಡಿದೋ ಕೃತಿ ರಚನೆ ಮಾಡಿದಂತೆ ಕಾಣುವುದಿಲ್ಲ. ಅವರು ಹೇಳಿದ್ದೆಲ್ಲಾ ಪದವಾಯಿತು, ಹಾಡಾಯಿತು, ಕೃತಿಯಾಯಿತು. "ಕರ್ಣಾಟ ಸಂಗೀತ ಪಿತಾಮಹ" ಎಂದು ಕರೆಸಿಕೊಳ್ಳುವ ಅವರು ಸಾಹಿತ್ಯ-ಸಂಗೀತ ಎರಕದ ರಚನೆಗಳಿಗೆ ಕೊನೆಯ ಮಾತು.  

ಶ್ರೀಪುರಂದರದಾಸರು ತಮ್ಮ ಜೀವಿತ ಕಾಲದಲ್ಲಿ ದೇಶವನ್ನೆಲ್ಲಾ ಸುತ್ತಿ ಅನೇಕ ತೀರ್ಥ ಕ್ಷೇತ್ರಗಳನ್ನು ಕಣ್ಣಾರೆ ನೋಡಿದವರು. ಪ್ರತಿ ಕ್ಷೇತ್ರದಲ್ಲಿ ಅಲ್ಲಲ್ಲಿನ ದೇವಾಲಯಗಳಲ್ಲಿ ಕೃತಿ ರಚನೆ ಮಾಡಿದವರು. ಉಡುಪಿ, ಫಂಡರಾಪುರ, ತಿರುಪತಿ, ಶ್ರೀರಂಗ, ಅಹೋಬಲ ಮುಂತಾದ ಕ್ಷೇತ್ರಗಲ್ಲಿ ಅವರು ರಚಿಸಿದ ಅನೇಕ ಕೃತಿಗಳು ಇಂದೂ ಹಾಡಲ್ಪಡುತ್ತಿವೆ. ಅವರ ಅಹೋಬಲ ನಾರಸಿಂಹನ ಕೃತಿಯ ಕೆಲವು ವಿಶೇಷಗಳನ್ನು ನೋಡೋಣ. 

"ಮಹದಾದಿದೇವ ನಮೋ ಮಹಾಮಹಿಮನೇ ನಮೋ" ಎನ್ನುವುದು ಅಹೋಬಲದಲ್ಲಿ ರಚಿತವಾದ ಕೃತಿ. ಇದರ ಮೂರು ನುಡಿಗಳಲ್ಲಿ ಅವರು ನರಸಿಂಹಾವತಾರದ ಸಂಕ್ಷಿಪ್ತ ವರ್ಣನೆಯನ್ನು ಕೊಡುತ್ತಾರೆ.:

ಮಹದಾದಿ ದೇವಾ ನಮೋ ಮಹಾಮಹಿಮನೇ ನಮೋ 

ಪ್ರಹ್ಲಾದವರದ ಅಹೋಬಲ ನಾರಸಿಂಹ 

ಮೊದಲ ನುಡಿಯಲ್ಲಿ ನರಸಿಂಹನ ಉದ್ಭವದ ಭೀಷಣವನ್ನು ಹೇಳುತ್ತಾರೆ. ಅವರು ಉಪಯೋಗಿಸಿರುವ ಪದಗಳು ಆ ಅವತಾರ ಪ್ರಕಟವಾದ ಭಯಂಕರ ದೃಶ್ಯವನ್ನು ನಮಗೆ ಕೊಡುತ್ತವೆ. 

ಧರಣಿಗುಬ್ಬಸವಾಗೆ  ತಾರಾಪಥವು ನಡುಗೆ 

ಸುರರು ಕಂಗೆಟ್ಟೋಡೆ ನಭವ ಬಿಟ್ಟು 

ವನಗಿರಿಗಳಲ್ಲಾಡೆ  ಶರಧಿಗಳು ಕುದಿದುಕ್ಕೆ 

ಉರಿಯನುಗುಳುತ ಉದ್ಭವಿಸಿದೆ ನಾರಸಿಂಹಾ 

ಸಕಲ ದೇವತೆಗಳ ಪ್ರಾರ್ಥನೆಯ ಮೇರೆಗೇ ಈ ಅವತಾರವಾದದ್ದು. ದೇವತೆಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಆ ಅವತಾರದ ಭೀಕರತ್ವ ಅವರ ಊಹೆಗೂ ನಿಲುಕಲಿಲ್ಲ. ಅವರವರ ಸ್ಥಾನಗಳನ್ನೇ ಬಿಟ್ಟು ಸ್ವರಕ್ಷಣೆಗೆ ಓಡಿ ಹೋದರು! ಭದ್ರವಾಗಿ ನಿಲ್ಲುವ ಗುಣಕ್ಕೆ ಉದಾಹರಣೆಯಾದ ಬೆಟ್ಟಗಳೂ ಅದುರಿಹೋದವು. ಇಡೀ ಸೃಷ್ಟಿಯೇ ತಲ್ಲಣಿಸಿತು. ವಿಶಾಲ ಸಮುದ್ರದ  ಜಲರಾಶಿ ಒಂದೇ ಕ್ಷಣದಲ್ಲಿ ಕುದ್ದು ಉಕ್ಕಿದವು!

ಪ್ರಕಟವಾದ ನರಸಿಂಹನು ರಕ್ಕಸನನ್ನು ಹೇಗೆ ಕೊಂದ ಎನ್ನುವುದು ಅವರು ವರ್ಣಿಸುವ ರೀತಿ:

ಸಿಡಿಲಂತೆ ಘರ್ಜಿಸುತ ಉರಿವ ನಾಲಗೆ ಚಾಚಿ 

ಅಡಿಗಡಿಗೆ ಲಂಘಿಸುತ ಕೋಪದಿಂದ 

ಮುಡಿಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ 

ಕಡುಉದರ ಬಗೆದೆ ಕಡುಗಲಿ ನಾರಸಿಂಹಾ 

ಸಿಂಹದ ಲಂಘನ; ಸಿಂಹ ಘರ್ಜನೆ. ಹಿರಣ್ಯಕನ ಜುಟ್ಟು ಹಿಡಿದು ಕುಕ್ಕಿ ಉಗುರಿಂದ ಬಗೆದ. ಗದೆ  ಹಿಡಿದು ಹತ್ತು ನಿಮಿಷ ಹಿರಣ್ಯ ಯುದ್ಧ ಮಾಡುವುದು ಸಿನಿಮಾದಲ್ಲಿ ಮಾತ್ರ.  ಹಿರಣ್ಯಕನ ವಧೆಯಾಯಿತು. 

ಅವತಾರ ತಾಳಿದ ಮುಖ್ಯ ಕೆಲಸವಾಯಿತು. ದೇವತೆಗಳ ಮತ್ತು ಪ್ರಹ್ಲಾದನ ಪ್ರಾರ್ಥನೆಯಿಂದ ಈಗ ನರಸಿಂಹನು ಶಾಂತನಾಗಿದ್ದಾನೆ. ಲಕ್ಷ್ಮಿಯು ತೊಡೆಯಮೇಲೆ ಕುಳಿತಿದ್ದಾಳೆ. ಈಗ ಅವನು "ಮಾಲೋಲ" ಆಗಿದ್ದಾನೆ. ಪ್ರಹ್ಲಾದವರದ ರೂಪ ತಾಳಿದ್ದಾನೆ. ದಾಸರು ಉಪಯೋಗಿಸುವ  ಪದಗಳೂ ಸೌಮ್ಯವಾಗುತ್ತವೆ:

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ 

ಸುರರು ಅಂಬರದಿ ಹೂಮಳೆಯ ಕರೆಯೆ 

ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರ 

ಕರುಣಿಸಿದೆ ಪುರಂದರ ವಿಠಲ ನಾರಸಿಂಹ 

ಪ್ರಹ್ಲಾದನಿಗೆ ಕರುಣಿಸಿದ್ದು ಆಯಿತು. ಈಗಲೂ ಬರುವ ಭಕ್ತರಿಗೆ ಕರುಣಿಸುತ್ತಿರುವೆ ಎನ್ನುವುದೇ ತಾತ್ಪರ್ಯ. 

ಅತಿಯಾದ ಪಕ್ಕವಾದ್ಯಗಳ ಆಡಂಬರವಿಲ್ಲದೆ ಸಾಹಿತ್ಯಕ್ಕೆ ಒತ್ತುಕೊಟ್ಟು ಹಾಡಿರುವ ಅನೇಕ ಮುದ್ರಿಕೆಗಳು  ಯೂಟ್ಯೂಬ್ನಲ್ಲಿ ಲಭ್ಯವಿವೆ. 

*****

ನರಸಿಂಹನನ್ನು ವರ್ಣಿಸಲು ಕಠಿಣ ಪದಗಳನ್ನು ಪ್ರಯೋಗಿಸಿದ ದಾಸರು ಬಾಲಕೃಷ್ಣನನ್ನು ವರ್ಣಿಸಲು ಸರಳ ಸುಂದರ ಪದಗಳನ್ನು ಬಳಸುತ್ತಾರೆ. 

ಅದನ್ನು ಇನ್ನೊಮ್ಮೆ ನೋಡೋಣ. 

8 comments:

  1. ಬಹಳವೇ ಸುಂದರ ರೀತಿಯಲ್ಲಿ ಬರೆದಿದ್ದೀರಿ ಧನ್ಯವಾದಗಳು ತಿಳಿಯದಿದ್ದ ಅನೇಕ ವಿಷಯ ಗಮನಕ್ಕೆ ಬರುವಂತೆ ಮಾಡಿದ್ಗೀರಿ ಧನ್ವಾಯವಾದಗಳು

    ReplyDelete
  2. ಧನ್ಯವಾದಗಳು!!!🙏🏼🙏🏼👌👍👏🏻👏🏻🙏🏼🕉️🇮🇳😇 ಬಹಳ ಒಳ್ಳೆ ಸಂಗತಿಗಳನ್ನು ತಿಳಿಸಿದ್ದೀರಿ! ಶ್ರೀ ಲಕ್ಷ್ಮಿ ನರಸಿಂಹಾಯ ನಮೋ ನಮಃ!

    ReplyDelete
  3. Excellent Sir. The was you writer articals is mindset blowing. Hats off to you. H. K. Balakrishna

    ReplyDelete
  4. Very well explained

    ReplyDelete
  5. It is a good oppertunity to know about Ahobila Narasimha kshetra from this blog. Explained in simple words about lord Narasimha.

    ReplyDelete
  6. Excellent explanation. Thanks

    ReplyDelete