ಕಡು ಬಡವನೊಬ್ಬ ಕಾಶಿಯಾತ್ರೆ ಮಾಡಬೇಕೆಂದು ಆಸೆ ಪಟ್ಟ. ಅವನಿದ್ದ ಸ್ಥಳಕ್ಕೆ ಕಾಶಿ ಬಹಳ ದೂರದ ಪಟ್ಟಣ. ಅವನ ಬಳಿ ಹಣವಿಲ್ಲ. ಇದ್ದುದು ಕೇವಲ ಎರಡೇ ಎರಡು ಆಸ್ತಿ. ಎರಡು ಹಳೆಯ ಪಂಚೆಗಳು ಮತ್ತು ಒಂದು ಹಳೆಯ ತಾಮ್ರದ ತಂಬಿಗೆ. ಈ ಆಸ್ತಿಯ ಜೊತೆಗೆ ಇದ್ದುದು ಕಾಶಿ ವಿಶ್ವನಾಥನ ದರ್ಶನ ಮಾಡಬೇಕೆಂಬ ಉತ್ಕಟ ಇಚ್ಛೆ. ಸರಿ, ಕಾಶಿಗೆ ಹೋಗುವ ಸಾಧುಗಳ ಗುಂಪೊಂದು ಅವನ ಊರಿಗೆ ಬಂದಾಗ ಅವರ ಜೊತೆ ಸೇರಿಕೊಂಡ. ಹಾಗೂ ಹೀಗೂ ಕಾಶಿ ತಲುಪಿದ.
ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಅವನು. ಕಾಶಿಯಂತಹ ದೊಡ್ಡ ಪಟ್ಟಣವನ್ನು ಹಿಂದೆಂದೂ ನೋಡಿರಲಿಲ್ಲ. ಕಾಶಿ ತಲುಪಿ ಗಂಗಾ ನದಿಯನ್ನು ನೋಡಿದಾಗ ಬಹಳ ಸಂತೋಷ ಆಯಿತು. ಕಾಶಿ ಸೇರಿದಾಗ ಸೂರ್ಯಾಸ್ತದ ಸಮಯ. ಸಾಧುಗಳ ಜೊತೆ ಗಂಗಾ ತೀರದಲ್ಲಿ ಕುಳಿತಿದ್ದ. ಯಾರೋ ಕೆಲವರು ಬುಟ್ಟಿಯಲ್ಲಿ ರೊಟ್ಟಿಗಳನ್ನೂ ಪಲ್ಯವನ್ನೂ ತಂದು ಅಲ್ಲಿದ್ದ ಎಲ್ಲ ಸಾಧುಗಳಿಗೂ ಕೊಟ್ಟರು. ಇವನಿಗೂ ಸಿಕ್ಕಿತು. ರೊಟ್ಟಿ, ಪಲ್ಯ ತಿಂದು ಹೊಟ್ಟೆ ತುಂಬಾ ಗಂಗೆಯ ನೀರು ಕುಡಿದ. ಯಾವುದೋ ಧರ್ಮಶಾಲೆಯ ಜಗುಲಿಯ ಮೇಲೆ ಸ್ವಲ್ಪ ಜಾಗ ಸಿಕ್ಕಿತು. ಒಂದು ಪಂಚೆ ಉಟ್ಟಿದ್ದ. ಇನ್ನೊಂದನ್ನು ಹೊಡೆದ. ತಂಬಿಗೆಯನ್ನೇ ತಲೆದಿಂಬು ಮಾಡಿ ಮಲಗಿದ. ಪ್ರಯಾಣದ ಆಯಾಸದಿಂದ ಸೊಗಸಾದ ನಿದ್ರೆ ಬಂದಿತು.
ಬೆಳಗ್ಗೆ ಇನ್ನೂ ನಿದ್ರೆಯಲ್ಲಿ ಇದ್ದಾಗ ಸುತ್ತ ತುಂಬಾ ಶಬ್ದ ಕೇಳಿಸಿತು. ಎಲ್ಲರೂ ಗುಸುಗುಟ್ಟುತ್ತಿದ್ದರು. ಕೆಲವರು ಅಳುತ್ತಿದ್ದರು. ಮತ್ತೆ ಕೆಲವರು ಅಳುತ್ತಿದ್ದವರಿಗೆ ಸಮಾಧಾನ ಮಾಡುತ್ತಿದ್ದರು. ವಿಷಯ ಏನೆಂದು ಅವನಿಗೆ ಸ್ವಲ್ಪ ಸಮಯದ ನಂತರ ತಿಳಿಯಿತು. ಎಲ್ಲರೂ ಮಲಗಿದ್ದಾಗ ಮಧ್ಯ ರಾತ್ರಿ ಕಳ್ಳರು ಕೈಗೆ ಸಿಕ್ಕಿದ ಪದಾರ್ಥಗಳನ್ನು ಕದ್ದು ಒಯ್ದಿದ್ದರು. ಕೆಲವರ ಹಣವೆಲ್ಲ ಹೋಗಿತ್ತು. ಕೆಲವರ ಬಟ್ಟೆಬರೆ ನಾಪತ್ತೆ. ಮತ್ತೆ ಕೆಲವರ ಆಭರಣದ ಗಂಟು ಕಾಣಿಸದು. ಏನೂ ಕಳೆಯದೆ ಇದ್ದಿದು ಇವನೊಬ್ಬನೇ. ಅಷ್ಟರಮಟ್ಟಿಗೆ ಅವನು ಬಡವನಾಗಿದ್ದುದೇ ಒಳ್ಳೆಯದಾಯಿತು ಅಂದುಕೊಂಡ.
*****
ಸೂರ್ಯೋದಯವಾಯಿತು. ಎಲ್ಲರ ಜೊತೆ ಗಂಗಾಸ್ನಾನಕ್ಕೆ ಹೋರಟ. ಸ್ನಾನವಾಯಿತು. ಒಗೆದ ಪಂಚೆಯನ್ನು ಮರಳಿನ ಮೇಲೆ ಒಣಗಿಸಿಕೊಂಡ. ಅದನ್ನು ಉಟ್ಟು ಇನ್ನೊಂದನ್ನು ಒಗೆದ. ಈಗ ಅವನ ಉಳಿದ ಆಸ್ತಿ ಒದ್ದೆ ಪಂಚೆಯೊಂದು ಮತ್ತು ತಾಮ್ರದ ತಂಬಿಗೆಯೊಂದು. ತಂಬಿಗೆ ಜಜ್ಜಿ ಹೋಗಿದ್ದರೂ ಅದನ್ನೂ ಯಾರಾದರೂ ಕದ್ದಾರು ಎನ್ನುವ ಭಯ. ಏನು ಮಾಡುವುದು? ಯೋಚಿಸಿದ. ಒಂದು ಉಪಾಯ ಹೊಳೆಯಿತು. ಒದ್ದೆ ಪಂಚೆಯನ್ನು ಹೊದ್ದ. ಮರಳಿನಲ್ಲಿ ಒಂದು ಹೊಂಡ ಮಾಡಿದ. ತಂಬಿಗೆಯನ್ನು ಅದರಲ್ಲಿ ಹೂತ. ವಿಶ್ವನಾಥನ ದರ್ಶನ ಮಾಡಿ ಮರಳಿ ಬಂದು ಒಯ್ಯುವುದು ಎಂದು ತೀರ್ಮಾನಿಸಿದ. ಈಗ ಅದನ್ನು ಯಾರೂ ಕದಿಯಲಾರರು! ತನ್ನ ಉಪಾಯಕ್ಕೆ ತಾನೇ ನಕ್ಕ. ಎರಡು ಹೆಜ್ಜೆ ದೇವಾಲಯದ ಕಡೆ ಇಟ್ಟ.
ಅನುಮಾನ ಬಂತು. ಹಿಂದೆ ಬಂದಮೇಲೆ ಈ ವಿಶಾಲ ಮರಳಿನ ರಾಶಿಯಲ್ಲಿ ತನ್ನ ತಂಬಿಗೆ ಹೂತಿರುವ ಜಾಗ ಹುಡುಕುವುದು ಹೇಗೆ? ಹಿಂದೆ ಬಂದು ಆ ಸ್ಥಳದಲ್ಲಿ ಒಂದು ಸಣ್ಣ ಮರಳಿನ ಗುಡ್ಡೆ ಮಾಡಿದ. ಈಗ ಹುಡುಕುವುದು ಸುಲಭ ಎಂದುಕೊಂಡ. ಸ್ವಲ್ಪ ದೂರ ಹೋಗಿ ಹಿಂದೆ ನೋಡಿದ. ಮರಳ ಗುಡ್ಡೆ ಕಾಣಿಸಿತು. ತನ್ನ ಜಾಣ್ಮೆಗೆ ತಾನೇ ಮೆಚ್ಚಿಕೊಂಡ. ಸಂತೋಷ ಚಿತ್ತನಾಗಿ ವಿಶ್ವನಾಥನ ದರ್ಶನಕ್ಕಾಗಿ ಹೋರಟ.
ದೇವಾಲಯದ ಜನಜಂಗುಳಿಯಲ್ಲಿ ಬಾಕಿ ಎಲ್ಲ ವಿಷಯ ಮರೆತು ಹೋಯಿತು. ವಿಶ್ವನಾಥನ ದಿವ್ಯ ದರ್ಶನವಾಯಿತು. ದೇವಾಲಯದ ಹೊರಗೆ ಬಂದು ಸ್ವಲ್ಪ ದೂರ ನಡೆದು ಯಾರದೋ ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತ. ಯಾರೋ ನಾಲ್ಕು ಮಂದಿ ಬಂದು ರೊಟ್ಟಿ ಪಲ್ಯ ಕೊಟ್ಟರು. ಹೊಟ್ಟೆ ತುಂಬಿ ಆಯಾಸಕ್ಕೆ ಜೋಂಪು ಹತ್ತಿತು. ಕುಳಿತಲ್ಲೇ ನಿದ್ರಿಸಿದ. ಎಚ್ಚರರವಾದಾಗ ಸುಮಾರು ಸಂಜೆ ನಾಲ್ಕು ಗಂಟೆ. ತಂಬಿಗೆ ನೆನಪಾಯಿತು. ಧಡಧಡನೆ ಗಂಗಾ ನದಿಯ ಕಡೆ ಹೆಜ್ಜೆ ಹಾಕಿದ.
*****
ತಾನು ತಂಬಿಗೆ ಹೂತಿಟ್ಟ ಘಟ್ಟಕ್ಕೆ ಬಂದು ನೋಡಿದ. ಕಂಡ ದೃಶ್ಯ ಅವನ ತಲೆ ತಿರುಗಿಸಿತು. ಅವನ ಕಣ್ಣು ಅವನೇ ನಂಬಲಾರ. ಇದೇನಿದು? ನದಿಯ ಪಕ್ಕ ಮರಳಿನ ಮೇಲೆ ಎಲ್ಲಿ ನೋಡಿದರಲ್ಲಿ ಮರಳಿನ ಲಿಂಗಗಳು. ನೂರಾರು, ಸಾವಿರಾರು ಲಿಂಗಗಳು. ಅನೇಕ ಆಕೃತಿಯ ಚಿಕ್ಕ, ದೊಡ್ಡ ಲಿಂಗಗಳು! ಅನೇಕ ಲಿಂಗಗಳ ಮೇಲೆ ಹೂವು ಪತ್ರೆಗಳು! ನದಿಯಲ್ಲಿ ಸ್ನಾನ ಮಾಡಿ ಮೇಲೆ ಬಂದವರೆಲ್ಲ ಮರಳಿನಲ್ಲಿ ಒಂದು ಲಿಂಗ ಮಾಡಿ, ಅದನ್ನು ಪೂಜಿಸಿ, ನಂತರ ದೇವಾಲಯಕ್ಕೆ ಹೋಗುತ್ತಿದ್ದಾರೆ.
ಓಡಿ ಹೋಗಿ ತಾನು ತಂಬಿಗೆ ಹೂತಿಟ್ಟ ಜಾಗ ತಲುಪಿ ಅಲ್ಲಿದ್ದ ಲಿಂಗ ಬಗೆದು ಹುಡುಕಿದ. ತಂಬಿಗೆ ಇಲ್ಲ. ಪಕ್ಕದ ಲಿಂಗ ಬಗೆದ. ಅಲ್ಲೂ ತಂಬಿಗೆ ಇಲ್ಲ. ನಂತರ ಇನ್ನೊಂದು. ಆಮೇಲೆ ಮತ್ತೊಂದು. ಬಗೆಯುತ್ತಲೇ ಹೋದ. ಎಲ್ಲೂ ತಂಬಿಗೆ ಕಾಣಿಸಲೇ ಇಲ್ಲ. ಇವನು ಲಿಂಗಗಳನ್ನು ಬಗೆಯುತ್ತಿರುವುದನ್ನು ನೋಡಿದ ಕೆಲವು ಯಾತ್ರಿಕರು ಇವನಿಗೆ ಹೊಡೆಯಲು ಬಂದರು. ಅವರಿಂದ ತಪ್ಪಿಸಿಕೊಂಡು ಓಡಿದ. ಕಡೆಗೆ ಸುಸ್ತಾಗಿ ಒಂದು ಕಡೆ ಮರಳಿನ ಮೇಲೆ ಕುಳಿತ.
ಆಮೇಲೆ ಅವನಿಗೆ ನಗು ಬಂತು. ಒಂದು ಕಡೆ ತಂಬಿಗೆ ಹೋದ ವ್ಯಥೆ. ಮತ್ತೊಂದು ಕಡೆ ಜನರು ಮಾಡುತ್ತಿರುವ ರೀತಿ ನೋಡಿ ವಿಸ್ಯಯ. ಇವನ ಮರಳಿನ ಗುಡ್ಡೆ ಕಂಡು ಯಾರೋ ಒಬ್ಬರು ತಾವೂ ಒಂದು ಮರಳಿನ ಲಿಂಗ ಮಾಡಿದರು. ಅದನ್ನು ನೋಡಿ ಮತ್ತೊಬ್ಬರು ಇನ್ನೂ ಒಂದು ದೊಡ್ಡ ಲಿಂಗ ಮಾಡಿದರು. ಮಗದೊಬ್ಬರು ಲಿಂಗ ಮಾಡಿ, ಪತ್ರೆ ಮತ್ತು ಹೂವು ಏರಿಸಿದರು. ನಂತರ ಬಂದವರು ಇದೇ ಇಲ್ಲಿನ ಕ್ರಮ ಎಂದು ಸೈಕತ ಲಿಂಗಗಳನ್ನು ಮಾಡಿ ಮಾಡಿ ಪೂಜಿಸಿದರು. ಈ ಲಿಂಗಗಳ ರಾಶಿಯಲ್ಲಿ ನಮ್ಮ ಕಥಾನಾಯಕನ ಮರಳ ಗುಡ್ಡೆ ಕಾಣದಾಯಿತು. ಒಟ್ಟಿನಲ್ಲಿ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿದ್ದ ಅವನ ಜಜ್ಜಿದ ತಾಮ್ರದ ತಂಬಿಗೆ ವಿಶಾಲ ಮರಳಿನ ರಾಶಿಯಲ್ಲಿ ಎಲ್ಲೊ ಸೇರಿಹೋಯಿತು.
ಆ ಪ್ರಪಂಚದಲ್ಲಿ ಜನರು ಹೇಗೆ ಒಬ್ಬರನ್ನು ಇನ್ನೊಬ್ಬರು ಅನುಕರಿಸುತ್ತಾರೆ ಎನ್ನುವುದು ಅವನಿಗೆ ಅರ್ಥ ಆಯಿತು. ತಲೆಯ ಮೇಲೆ ಕೈ ಇಟ್ಟುಕೊಂಡು ಹೀಗೆ ಹೇಳಿದ:
ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ
ಗಂಗಾಯಾಂ ಸೈಕತ ಲಿಂಗೇಷು ನಷ್ಟಮ್ ಮೇ ತಾಮ್ರಭಾಜನಂ
"ಈ ಜಗತ್ತಿನಲ್ಲಿ ಎಲ್ಲರೂ ಒಬ್ಬರನ್ನು ಒಬ್ಬರು ಅನುಕರಿಸುವವರು. (ಯಾವ ಕೃತ್ಯವನ್ನೂ ಏಕೆ ಮಾಡುತ್ತಾರೆ ಎಂದು ಯೋಚಿಸದೆ ಅನುಕರಿಸುವವರು). ನಿಜವಾದ ಸತ್ಯದ ಅರಿವು ಹುಡುಕುವವರು ವಿರಳ. ಗಂಗಾ ನದಿಯ ಮರಳಿನ ಲಿಂಗಗಳಲ್ಲಿ ನನ್ನ ತಾಮ್ರದ ತಂಬಿಗೆ ಇದರಿಂದ ಕಳೆದುಹೋಯಿತು!
*****
ಹಿಂದಿನ ಎರಡು ಸಂಚಿಕೆಗಳಲ್ಲಿ "ಗತಾನುಗತಿಕೋ ಲೋಕಃ" ಎಂದು ಉಪಯೋಗಿಸಿದೆ. ಒಬ್ಬರ ಹಿಂದೊಬ್ಬರು ಕುರುಡು ಅನುಕರಣೆ ಮಾಡುವುದು ಎಂದು ಅದರ ಅರ್ಥ. "ಗತಾನುಗತಿಕೋ ಲೋಕಃ" ಎನ್ನುವುದನ್ನು ಅನೇಕರು ಬೇರೆ ಬೇರೆ ಸಂದರ್ಭಗಲ್ಲಿ ಬಳಸುತ್ತಾರೆ. ಅದರ ಮೂಲ ತಿಳಿಸುವ ಕಥೆ ಮೇಲೆ ಕೊಟ್ಟಿರುವುದು. ಮೊದಲಿನ ತರಗತಿಗಳಲ್ಲಿರುವ ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಇದನ್ನು ಹೇಳುತ್ತಿದ್ದರು. ಕಥೆ ರಂಜಕವಾಗಿಯೂ ಇದೆ; ಒಳ್ಳೆಯ ಸಂದೇಶವನ್ನೂ ಕೊಡುತ್ತದೆ.
Good story to think about some instances we might have followed blindly in certain situations too.
ReplyDeleteAgain, thank you Keshav.
"ಗತಾನುಗತಿಕೋ ಲೋಕಃ" Very nicely narrated. 👌👍🙏
ReplyDeleteಓರ್ವ ಹುಚ್ಚನು ಆಕಾಶ ಕಡೆ ಮುಖ ಮಾಡಿ ಏನೋ ಯೋಚಿಸಿತಿದ್ದನು. ಇದನ್ನು ನೋಡಿದ ಓಬ್ಬನು ಕುತೂಹಲದಿಂದ ತಾನೂ ಆಕಾಶದತ್ತ ಮುಖ ಮಾಡಿ ನೋಡಹತ್ತಿದನು. ಕ್ಷಣ ಮಾತ್ರ ದಲ್ಲಿ ಹುಚ್ಚನ ಸುತ್ತಲೂ ಗುಂಪು ಸೇರಿ ಎಲ್ಲರೂ ಆಕಾಶದತ್ತ ನೋಡಹತ್ತಿದರು.
ReplyDeleteಬಡವನ ಕತೆ ಸಂದೇಶ ಪೊರ್ವಕವಾಗಿದ್ದು, ಸೊಗಸಾಗಿ ಬರೆದಿದ್ದೀರಿ
Very well narrated! Interesting!!
ReplyDeleteWell narated.
ReplyDeleteMany a times we also do this !!
ReplyDeleteಪ್ರಪಂಚವೇ ಹೀಗೆ. ಯಾರೂ ಇದಕ್ಕೆ ಹೊರತಲ್ಲ.
ReplyDelete