Tuesday, November 26, 2024

ಅಗ್ರಪೂಜೆ ಶ್ರೀಕೃಷ್ಣನಿಗೇ ಏಕೆ?



"ಅಗ್ರಪೂಜೆಯಿಂದ ಬೀಳ್ಕೊಡುಗೆವರೆಗೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಅಗ್ರಪೂಜೆ ಎಂದರೇನು ಎಂಬುದನ್ನು ಮತ್ತು ಅದರ ವಿಶೇಷತೆಯನ್ನು ನೋಡಿದೆವು. ಅಗ್ರಪೂಜೆ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಮೂಡುವುದು ಪಾಂಡವರ ರಾಜಸೂಯಯಾಗ ಮತ್ತು ಅದರ ಕೊನೆಯಲ್ಲಿ ನಡೆದ ಶ್ರೀಕೃಷ್ಣನ ಆಗ್ರಪೂಜೆ ಸಂದರ್ಭ. ಅಗ್ರಪೂಜೆಯ ಸಮಯದಲ್ಲಿ ಅಲ್ಲಿದ್ದ ಶಿಶುಪಾಲನು ಶ್ರೀಕೃಷ್ಣನನ್ನು ನಿಂದಿಸಿದ್ದು ಮತ್ತು ಅದರ ನಂತರ ನಡೆದ ಅವನ ವಧೆ ಎಲ್ಲರಿಗೂ ಗೊತ್ತಿರುವ ವಿಷಯ. ಸಿನಿಮಾಗಳಲ್ಲಂತೂ ಇದನ್ನು ವೈಭವದಿಂದ ನಡೆಯುವುದನ್ನು ತೋರಿಸುತ್ತಾರೆ. ಹಿಂದಿನ ಸಂಚಿಕೆಯಲ್ಲಿ ಇದರ ವಿಚಾರವನ್ನು ಇನ್ನೊಮ್ಮೆ ವಿಸ್ತಾರವಾಗಿ ನೋಡೋಣ ಎಂದಿದ್ದೆವು. ಈಗ ಆ ಸಮಯ ಬಂದಿದೆ. 

*****

ದೇವರ್ಷಿ ನಾರದರಿಂದ ವಿವರ ತಿಳಿದು ತನ್ನ ತಂದೆ ಪಾಂಡು ಹಮಹಾರಾಜನಿಗೆ ದೇವಲೋಕದ ಒಡ್ಡೋಲಗದಲ್ಲಿ ಸರಿಯಾದ ಸ್ಥಾನ ಸಿಗಲೆಂದು ಧರ್ಮರಾಯನು ರಾಜಸೂಯಯಾಗವನ್ನು ಮಾಡಲು ನಿರ್ಧರಿಸಿದನು. ನಂತರ ಈ ಕೆಲಸಕ್ಕೆ ಇರುವ ಅನೇಕ ಸಮಸ್ಯೆಗಳು, ಮಾಡಬೇಕಾದ ತಯಾರಿ, ಅವಶ್ಯವಾದ ಸಂಪನ್ಮೂಲ ಮತ್ತು ಶ್ರಮ, ಬಹಳ ಜನ ಹಿರಿಯರ ಸಹಕಾರ ಮತ್ತು ಬೆಂಬಲ ಬೇಕೆಂದೂ ಮತ್ತು ಇವೆಲ್ಲಾ ಸಾಧ್ಯವೇ ಎಂಬ ಚಿಂತೆ ಧರ್ಮರಾಯನನ್ನು ಕಾಡಿತು. ಆಗ ಅವನು ಹಿರಿಯರಾದ ಭೀಷ್ಮ ಪಿತಾಮಹರಲ್ಲಿ ತನ್ನ ದುಗುಡವನ್ನು ತೋಡಿಕೊಂಡದ್ದನ್ನೂ ಮತ್ತು ಅವರು ಹೇಳಿದ ಸಮಾಧಾನವನ್ನು ಕುಮಾರವ್ಯಾಸ ಭಾರತದಲ್ಲಿ ವರ್ಣಿತವಾಗಿರುವುದನ್ನೂ ನೋಡಿದೆವು. 

ಭೀಷ್ಮರ ಸಲಹೆಯಂತೆ ಧರ್ಮರಾಯನು ಶ್ರೀಕೃಷ್ಣನ ನೇತೃತ್ವದಲ್ಲಿ ಮುಂದುವರೆದನು. ಯಾಗಕ್ಕೆ ಇದ್ದ ಮೊದಲ ವಿಘ್ನ ಜರಾಸಂಧನ ಅಡ್ಡಿ. ಶ್ರೀಕೃಷ್ಣನು ಭೀಮಾರ್ಜುನರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಕಡೆಗೆ ಭೀಮಸೇನನಿಂದ ಜರಾಸಂಧನ ವಧೆ ಮಾಡಿಸಿದನು. ಭೀಮಾರ್ಜುನರು ಮತ್ತು ನಕುಲ ಸಹದೇವರು ನಾಲ್ಕು ದಿಕ್ಕುಗಳಲ್ಲೂ ದಿಗ್ವಿಜಯ ಮಾಡಿ ಅಪಾರವಾದ ಕಪ್ಪ-ಕಾಣಿಕೆಗಳನ್ನು ಸಂಗ್ರಹಿಸಿದರು. ಹೀಗೆ ಯಾಗಕ್ಕಿದ್ದ ಅಡ್ಡಿ-ಆತಂಕಗಳು ನಿವಾರಣೆಯಾಗಿ  ಅಪಾರವಾದ ಧನರಾಶಿ ಸಂಗ್ರಹವಾಯಿತು. ಶ್ರೀಕೃಷ್ಣನ ನೇತೃತ್ವವೆಂದ ಮೇಲೆ ಆ ಯಾಗಕ್ಕೆ ಬಂದು ಸಹಕರಿಸುವುದು ಒಂದು ಒಳ್ಳೆಯ ಅವಕಾಶವೆಂದು ಆ ಕಾಲದಲ್ಲಿದ್ದ ಋಷಿ-ಮುನಿಗಳು, ವಿದ್ವಾಂಸರು ಬಂದು ನೆರೆದರು. ಯೋಜಿತವಾದಂತೆ ಎಲ್ಲ ಕೆಲಸಗಳೂ ನಡೆದು, ಆಹ್ವಾನಗಳು ಬೇಕಾದವರೆಲ್ಲರಿಗೂ ತಲುಪಿ, ಅವರೆಲ್ಲರೂ ಬಂದು, ದೊಡ್ಡ ರೀತಿಯಲ್ಲಿ ಯಾಗವು ನಡೆದು ಧರ್ಮರಾಯನ ಉದ್ದೇಶ ಪೂರ್ಣವಾಯಿತು

ಯಾಗಕ್ಕೆ ಬಂದು ಸಹಕರಿಸಿದ ಎಲ್ಲ ಅತಿಥಿ-ಅಭ್ಯಾಗತರಿಗೆ ಯಥೋಚಿತ ಸತ್ಕಾರ ಮಾಡಿ ಬೀಳ್ಕೊಡುವುದು ಕಡೆಯ ಕಾರ್ಯಕ್ರಮ. ಸತ್ಕಾರ ಮಾಡುವಾಗ ಎಲ್ಲಿಂದ ಪ್ರಾಂಭಿಸಬೇಕು? ಯಾರಿಗೆ ಮೊದಲು ಸತ್ಕಾರ ನಡೆಸಬೇಕು? ಈ ಮೊದಲ ಸತ್ಕಾರ ಪಡೆಯಲು ಯೋಗ್ಯರು ಯಾರು? ಈ ಪ್ರಶ್ನೆಗಳು ಧರ್ಮರಾಯನ ಮನಸ್ಸಿನಲ್ಲಿ ಬಂದಿತು. (ಒಂದೇ ವೇಳೆ ಅನೇಕ ದೇವತೆಗಳು ಅಥವಾ ಹಿರಿಯರು ಎದುರು ಬಂದರೆ ಅಥವಾ ನಮ್ಮ ನಿವಾಸಕ್ಕೆ ಆಗಮಿಸಿದರೆ ಅವರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಘನ ವಿದ್ವಾಂಸರಾದ ಕೀರ್ತಿಶೇಷ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ ಪೌರಾಣಿಕ ಕಾದಂಬರಿಗಲ್ಲಿ ವಿವರವಾಗಿ ವರ್ಣಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಕಾದಂಬರಿಗಳನ್ನು ಓದಬಹುದು). ಬಂದವರಲ್ಲಿ ಹಿರಿತನದ ಕ್ರಮ ಗೊತ್ತಿದ್ದರೆ ಅದರ ಪ್ರಕಾರ ದೊಡ್ಡವರಿಂದ ಚಿಕ್ಕವರಿಗೆ ಯಥೋಚಿತ ಗೌರವ ಕೊಡಬಹುದು. ಇಲ್ಲಿ ಚಿಕ್ಕವರು ಎಂದರೆ ಕೀಳು ಎಂದು ಭಾವಿಸಬಾರದು. ಅವರು ಬಂದವರಲ್ಲಿ ಎಷ್ಟೇ ಚಿಕ್ಕವರಾಗಿದ್ದರೂ ನಮಗಿಂತ ಬಹಳ ದೊಡ್ಡವರು ಎಂದು ನೆನಪಿಡಬೇಕು. ಬಂದವರಲ್ಲಿ ದೊಡ್ಡವರು-ಚಿಕ್ಕವರು ಎನ್ನುವ ಕ್ರಮ. ಅಷ್ಟೇ. ಈ ಕ್ರಮ ನಮಗೆ ಗೊತ್ತಿಲ್ಲದಿದ್ದರೆ ಅವರನ್ನೇ ಕೇಳಿ ಅದರಂತೆ ಮುಂದುವರಿಯಬೇಕು. ವಿನಯದಿಂದ ಕೇಳಿದರೆ ಅವರು ಸಂತೋಷದಿಂದ ಕ್ರಮವನ್ನು ತಿಳಿಸುವರು. ಸಮಯದ ಅಭಾವವಿದ್ದರೆ ಅಥವಾ ಇನ್ಯಾವುದೋ ಅಡಚಣೆ ಇದ್ದರೆ, ಮತ್ತು ಎಲ್ಲರಿಗೂ ಗೌರವ ಕೊಡಲಾಗಲಿಲ್ಲ ಎಂದರೆ, ಎಲ್ಲರ ಅನುಮತಿ ಪಡೆದು ಎಲ್ಲರಿಗಿಂತ ಹಿರಿಯರಿಗೆ ಗೌರವ, ಸತ್ಕಾರಾದಿಗಳನ್ನು ಮಾಡಬೇಕು. ಇದು ಸರಿಯಾದ ರೀತಿ. ಈ ಸೂಕ್ಷ್ಮವನ್ನು ಚೆನ್ನಾಗಿ ಅರಿತಿದ್ದ ಧರ್ಮರಾಯನು ತನ್ನ ಕುಲದ ಹಿರಿಯರೂ ಆ ಕಾಲದ ಶ್ರೇಷ್ಠ ತಜ್ಞರೂ ಆದ ಭೀಷ್ಮರನ್ನು "ಅಗ್ರ ಪೂಜೆ ಯಾರಿಗೆ ಮಾಡುವುದು ಸೂಕ್ತ?" ಎಂದು ಕೇಳಿದನು. 

ಆ ಸಭೆಯಲ್ಲಿ ಇದ್ದವರು ಯಾರು ಯಾರು ಎಂದು ಗಮನಿಸಿದರೆ ಅದೊಂದು ಘಟಾನುಘಟಿಗಳ ಸಂಗಮವೇ ಆಗಿದ್ದಿತು. ಸೇರಿದ್ದವರಲ್ಲಿ ಅನೇಕ ಜ್ನ್ಯಾನವೃದ್ಧರು, ವಯೋವೃದ್ಧರು, ತಪೋವೃದ್ಧರು, ರಾಜ-ಮಹಾರಾಜರು, ವಿದ್ವಾಂಸರೂ ಇದ್ದರು. ಇಷ್ಟು ಮಂದಿಯಲ್ಲಿ ಯಾರೆಂದು ಆರಿಸುವುದು? ಆದರೆ ಎಲ್ಲಿಯಾದರೂ ಒಬ್ಬರನ್ನು ಗುರುತಿಸಬೇಕಲ್ಲ? ಬಂದವರಲ್ಲಿ ಮುಖ್ಯವಾಗಿ ಎತ್ತಿ ಕಾಣುತ್ತಿದ್ದ ಮಹನೀಯರೇ ಅನೇಕ ಮಂದಿ. ಪರಶುರಾಮರು ತ್ರೇತಾಯುಗದವರು. ಇಪ್ಪತ್ತೊಂದು ಬಾರಿ ಭೂಮಿಯನ್ನು ಸುತ್ತಿ ಅನೇಕ ದುಷ್ಟರನ್ನು ವಧಿಸಿದವರು. ಈಗಲೋ ದ್ವಾಪರ ಯುಗ. ಅವರನ್ನು ಆರಿಸಿದರೆ ಯಾರೂ ಪ್ರಶ್ನಿಸುವ ಧೈರ್ಯವನ್ನೇ ಮಾಡಲಾರರು. ಅವರು ಭೀಷ್ಮರಿಗೂ ಗುರುಗಳು. ದ್ರೋಣಾಚಾರ್ಯರಾದಿಯಾಗಿ ಎಲ್ಲರೂ ಪರಶುರಾಮರನ್ನು ಗೌರವಿಸುವವರೇ! ವೇದವ್ಯಾಸರೂ ಅಲ್ಲುಂಟು. ಕೌರವ-ಪಾಂಡವರ ವಂಶಕ್ಕೆ ಮೂಲವೇ ಅವರು. ಅವರೂ ಪೂಜ್ಯರೇ. ಅವರನ್ನು ಆರಿಸಿದರೂ ಎಲ್ಲರಿಗೂ ಒಪ್ಪಿಗೆಯೇ. ಭೀಷ್ಮರಾದರೋ ಆ ಕಾಲದ ಶ್ರೇಷ್ಠ ಜ್ನ್ಯಾನಿಗಳಲ್ಲೂ ವೀರರಲ್ಲೂ ಮೊದಲಿಗರು. ಅವರನ್ನು ಒಂದು ರೀತಿಯಲ್ಲಿ ಮನೆಯವರು ಎಂದು ಬಿಟ್ಟರೂ ಆಚಾರ್ಯ ದ್ರೋಣರಿದ್ದಾರೆ.  ಅವರು ಕೌರವ-ಪಾಂಡವರಿಬ್ಬರಿಗೂ ಪೂಜ್ಯರಾದ ಗುರುಗಳು. ಆಚಾರ್ಯ ಕೃಪರೋ ಕುಲಗುರುಗಳು. ಅವರೂ ಆಗ್ರ ಪೂಜೆಗೆ ಯೋಗ್ಯರೇ. ಇನ್ನು ಅನೇಕ ರಾಜ-ಮಹಾರಾಜರಿದ್ದಾರೆ. ದ್ರುಪದ ಮಹಾರಾಜನಾದರೋ ಹೆಣ್ಣು ಕೊಟ್ಟ ಮಾವ ಮತ್ತು ಹಿರಿಯನಾದ ರಾಜನು. ಅನೇಕ ಯಾದವ ವೀರರಲ್ಲಿ ಶ್ರೀಕೃಷ್ಣನ ಅಣ್ಣನಾದ ಬಲರಾಮನೇ ಇದ್ದಾನೆ. ಅವನೂ ಗದಾಪ್ರಯೋಗ ವಿದ್ಯೆಯನ್ನು ಅಲ್ಲಿದ್ದ ಅನೇಕರಿಗೆ ಕಲಿಸಿದ ಗುರುವೇ. ಆದರೆ ಯಾರಾದರೂ ಒಬ್ಬರನ್ನು ಮಾತ್ರ ಆರಿಸಬೇಕು. ಸಾಲಾಗಿ ಕೂರಿಸಿ ಎಲ್ಲರಿಗೂ ಒಂದೇ ಸಲ ನಡೆಸುವಹಾಗಿಲ್ಲ. ಹತ್ತು ಜನಕ್ಕೆ "ಪಂದ್ಯ ಶ್ರೇಷ್ಠ ಆಥವಾ ಮ್ಯಾನ್ ಅಫ್ ದಿ ಮ್ಯಾಚ್ ಕೊಟ್ಟಂತೆ! ಇದೇ ಸಮಸ್ಯೆ! 

*****

ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಹೇಗೆ ಗೌರವ ಸಿಗುತ್ತದೆ? ಆ ರೀತಿಯ ಸನ್ಮಾನಕ್ಕೆ ಯೋಗ್ಯರಾಗಲು ಅಳೆಯುವ ಮಾನದಂಡಗಳೇನು? ಇದಕ್ಕೆ ಸೂಚಕ ಈ ಕೆಳಗಿನ ಶ್ಲೋಕ:

ವಿತ್ತಂ ಬಂಧು ವಯಃ ಕರ್ಮ ವಿದ್ಯಾ ಚೈವ ತು ಪಂಚಮೀ 

ಏತಾನಿ ಮಾನ್ಯ ಸ್ಥಾನಾನಿ ಯದುತ್ತರಂ ತತ್ ಗರೀಯಸೀ 

ಹಣ ಅಥವಾ ಧನ-ಸಂಪತ್ತು, ಯೋಗ್ಯತೆಯಿರುವ ಯಾರೋ ಬಂಧುಗಳಿರುವುದು (ಉದಾಹರಣೆಗೆ ಮಂತ್ರಿಗಳ ಮಗ), ವಯಸ್ಸಿನಿಂದ ಹಿರಿಯ, ಸಾಧನೆಯಿಂದ ದೊಡ್ಡವರು ಮತ್ತು ಹೆಚ್ಚು ವಿದ್ಯಾವಂತನಾದ ಪಂಡಿತ; ಹೀಗೆ ಐದು ಹಂತದ ಯೋಗ್ಯತೆ. ಎರಡನೆಯದು ಮೊದಲನೆಯದಕ್ಕಿಂತ ದೊಡ್ಡದು, ಮೂರನೆಯದು ಎರಡನಯದಕ್ಕಿಂತ ದೊಡ್ಡದು, ಹೀಗೆ. (ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ )

ಮತ್ತೊಂದು ಕಡೆಯಿಂದ ನೋಡಿದರೆ, ಸಮಾಜದಲ್ಲಿ "ಅವರು ದೊಡ್ಡವರಪ್ಪ" ಎಂದು ಹೇಳಲು ಏನು ಕಾರಣಗಳು ಎಂದು ಯೋಚಿಸಿದರೆ ಈ ಕೆಳಗಿನ ವಿಷಯಗಳು ಕಂಡುಬರುತ್ತವೆ:

  • ಹೆಚ್ಚಿನ ಭೂಮಿ-ಕಾಣಿ ಇದ್ದವನು ದೊಡ್ಡವನು. ಹತ್ತು ಎಕರೆ ಭೂಮಿ ಒಡೆಯನಿಗಿಂತ ನೂರು ಎಕರೆ ಇರುವವನು ದೊಡ್ಡವನು. ಇನ್ನೂರು ಎಕರೆ ಇರುವವನು ಇನ್ನೂ ದೊಡ್ಡವನು. ಹೀಗೆ.... ಸಣ್ಣ ರಾಜ್ಯದ ರಾಜನಿಗಿಂತ ದೊಡ್ಡ ರಾಜ್ಯದ ರಾಜ ದೊಡ್ಡವನು. ಇತ್ಯಾದಿ..... 
  • ಬಹಳ ಹಣ ಇರುವವರು ದೊಡ್ಡವರು. ಲಕ್ಷ ಇರುವವನಿಗಿಂತ ಕೋಟಿ ಇರುವವನು ದೊಡ್ಡವನು. ಕೋಟಿ ಇರುವನಿಗಿಂತ ಹತ್ತು ಕೋಟಿ ಇರುವವನು ಇನ್ನೂ ದೊಡ್ಡವನು.  ಈ ರೀತಿ.... 
  • ವಯಸ್ಸಿನಿಂದ ಹಿರಿಯರು. ಎಪ್ಪತ್ತು ವಯಸ್ಸು ಆದವನು ದೊಡ್ಡವನು. ಎಂಭತ್ತು ಆದವನು ಇನ್ನೂ ದೊಡ್ಡವನು ಮುಂತಾಗಿ..... 
  • ವಿದ್ಯಾದಾನ ಮಾಡಿದ ಗುರುಗಳು ಶ್ರೇಷ್ಠರು. ಅವರ ಗುರುಗಳು ಮತ್ತೂ ದೊಡ್ಡವರು. ಹೀಗೆ.... 
  • "ನಿಮ್ಮ ಪಾದ ಧೂಳಿಯಿಂದ ನಮ್ಮ ಮನೆ, ನಮ್ಮ ಜನ್ಮ ಪಾವನವಾಯಿತು" ಎಂದು ಹಿಂದೆ ಹೇಳುತ್ತಿದ್ದರು. ಹೀಗೆ ಇನ್ನೊಬ್ಬರನ್ನು ಪಾವನ ಮಾಡುವ ಶಕ್ತಿ ಇರುವವರು ದೊಡ್ಡವರು. ತುಂಬಾ ದೊಡ್ಡವರನ್ನು "ತೀರ್ಥೀಕುರ್ವನ್ತಿ ತೀರ್ಥಾಣಿ" ಎನ್ನುತ್ತಿದ್ದರು. ಅಂದರೆ, ಇತರನ್ನು ಪಾವನ ಮಾಡುವರನ್ನೇ ಪಾವನ ಮಾಡುವವರು ಎಂದು! (ಇದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ).  
  • ಮನುಷ್ಯರಿಗಿಂತ ದೇವತೆಗಳು ದೊಡ್ಡವರು. ದೇವತೆಗಲ್ಲಿಯೂ ಶ್ರೇಣಿಯುಂಟು. ಒಬ್ಬರಿಗಿಂತ ಒಬ್ಬರು ದೊಡ್ಡವರು..... 
  • ನೋಡಲು ಒಳ್ಳೆಯ ರೂಪ-ಲಾವಣ್ಯ ಇರುವವರಿಗೂ ಲೋಕದಲ್ಲಿ ಬೆಲೆ ಉಂಟು. ಅತಿ ಹೆಚ್ಚು ಸೌಂದರ್ಯ ಇರುವವರು ಮಿಸ್ ವರ್ಲ್ಡ್ ಅಥವಾ ಮಿಸ್ಟರ್ ಇಂಡಿಯಾ ಅಂದಂತೆ.... 
  • ಧೈರ್ಯ-ಶೌರ್ಯ ಇದ್ದು ತೋರಿಸಿದವರೂ ದೊಡ್ಡವರೇ! ವೀರ ಚಕ್ರ, ಮಹಾವೀರ ಚಕ್ರ, ಪರಮವೀರ ಚಕ್ರ ಪಡೆದವರಂತೆ.... 
  • ವಾಹನ ಇರುವವನು ಇಲ್ಲದವನಿಗಿಂತ ದೊಡ್ಡವನು. ಸ್ಕೂಟರ್ ಇರುವವನು ಸೈಕಲ್ ಇರುವವನಿಗಿಂತ ದೊಡ್ಡವನು. ಕಾರು ಇರುವವನು ಇನ್ನೂ ದೊಡ್ಡವನು. ಅನೇಕ ಕಾರುಗಳು ಇರುವವನು ತುಂಬಾ ದೊಡ್ಡವನು,... ಹೀಗೆ.... 
  • ಮನೆ ಇರುವವನು ಇಲ್ಲದವನಿಗಿಂತ ದೊಡ್ಡವನು. ದೊಡ್ಡ ಮನೆ ಇರುವವನು ಸಣ್ಣ ಮನೆ ಇರುವವನಿಗಿಂತ ದೊಡ್ಡವನು. ಅನೇಕ ದೊಡ್ಡ ಮನೆ ಇರುವವನು.... ಇತ್ಯಾದಿ.... 
  • ಹತ್ತು ಜನ ಹೊಗಳುವವರು ದೊಡ್ಡವನು. ನೂರು ಜನ ಹೊಗಳುವವರು ಅವನಿಗಿಂತ ದೊಡ್ಡವನು. ಇಡೀ ದೇಶವೇ ಹೊಗಳುವವನು ಮತ್ತೂ ದೊಡ್ಡವನು. ಈ ರೀತಿ.... 
ಶ್ರೀ ಪುರಂದರದಾಸರು ಇವೆಲ್ಲವನ್ನೂ ಅಳೆದು, ತೂಗಿ (ಹೇಳಿ-ಕೇಳಿ ವರ್ತಕರಾಗಿದ್ದವರು) ಶ್ರೀಹರಿಯನ್ನು ಈ ಎಲ್ಲ ಅಳತೆಗೋಲುಗಳಿಂದ ನೋಡಿ ಹೀಗೆ ಹೇಳುತ್ತಾರೆ:

ಧೊರೆಯತನದಲಿ ನೋಡೆ ಧರಣಿದೇವಿಗೆ ರಮಣ 
ಸಿರಿಯತನದಲಿ ನೋಡೆ ಶ್ರೀಕಾಂತನು 
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡ ಜಗದಾದಿ ಗುರುವು 

ಪಾವನತ್ವದಿ ನೋಡೆ ಅಮರಗಂಗಾಜನಕ 
ದೇವತ್ವದಲಿ ನೋಡೆ ಡಿವಿಜರೊಡೆಯ 
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ 
ಯಾವ ಧೈರ್ಯದಿ ನೋಡೆ ಅಸುರಾಂತಕ 

ಗಗನದಲ್ಲಿ ಸಂಚರಿಪ ಗರುಡದೇವನೆ ತುರಗ 
ಜಗತೀಧರ ಶೇಷ ಪರ್ಯಂಕ ಶಯನ 
ನಿಗಮಗೋಚರ ಪುರಂದರವಿಠಲಗಲ್ಲದೆ 
ಮಿಗಿಲಾದ ದೈವಗಳಿಗೆ ಈ ಭಾಗ್ಯವುಂಟೆ?

ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ 
ಗೋಪೀಜನಪ್ರಿಯ ಗೋಪಾಲಗಲ್ಲದೆ!  

  • ಅಷ್ಟಿಷ್ಟು ಭೂಮಿಯಲ್ಲ. ಎಲ್ಲೋ ಕೆಲವು ವರುಷಗಳಲ್ಲ. ಎಲ್ಲಕಾಲಕ್ಕೂ ಇಡೀ ಭೂಮಂಡಲಕ್ಕೆ ಅಭಿಮಾನಿ  ದೇವತೆಯಾದ ಭೂದೇವಿಯು ಇವನು ಒಮ್ಮೆ ನನ್ನನ್ನು ನೋಡಲಿ ಎಂದು ಕಾದಿರುವವಳು. ಅವನಿಗಿಂತ ದೊಡ್ಡ ಭೂಮಿ ಒಡೆಯ ಎಲ್ಲಿದ್ದಾನು? 
  • ಧನವಂತರೆನಿಸಿಕೊಂಡ ಎಲ್ಲರಿಗೂ ಹಣ-ಹೊನ್ನು ಕೊಡುವ ಸಿರಿದೇವಿ ಲಕ್ಷ್ಮಿಯು ಇವನು ಕೊಟ್ಟ ಶಕ್ತಿಯಿಂದಲೇ ಎಲ್ಲರಿಗೂ ಅವನ್ನು ಕೊಡುವವಳು. ಅವನಿಗಿಂತ ದೊಡ್ಡ ಹಣವಂತ ಎಲ್ಲಿರುವನು? 
  • ಇಡೀ ಪ್ರಪಂಚವೇ ಬ್ರಹ್ಮನಿಂದ ಸೃಷ್ಟಿಯಾಯಿತು. ಸೃಷ್ಟಿಯಲ್ಲಿರುವ ಎಲ್ಲರೂ ಅವನಿಗಿಂತ ಚಿಕ್ಕವರು. ಅವನೇ ಹಿರಿಯ. ಶ್ರೀಹರಿಯು ಅವನಪ್ಪ! ಇವನಿಗಿಂತ ಹಿರಿಯರೆಲ್ಲಿದ್ದಾರು?
  • ಅವರಿವರಿಗೆ ಗುರುವಾದವರ ವಿಷಯವೇಕೆ? ಬ್ರಹ್ಮನಿಗೇ ಉಪದೇಶ ಮಾಡಿದವನು ಶ್ರೀಹರಿ. (ಚತುಶ್ಲೋಕೀ ಭಾಗವತ ಎನ್ನುವುದು ಇದೆ. ಈ ನಾಲ್ಕು ಶ್ಲೋಕಗಳನ್ನು ಶ್ರೀಹರಿಯು ಬ್ರಹ್ಮನಿಗೆ ಮೊದಲಿಗೆ ಉಪದೇಶ ಮಾಡಿದನು. ಅದರಿಂದಲೇ ಮುಂದೆ ಎಲ್ಲ ವಾಂಗ್ಮಯ ಹುಟ್ಟಿತು). ಆದ್ದರಿಂದ ಅವನು ಜಗದಾದಿಗುರು. ಮಿಕ್ಕವರೆಲ್ಲ ಹೆಸರಿಗೆ ಜಗದ್ಗುರು. 
  • ಗಂಗೆಯು ಎಲ್ಲರ ಪಾಪ ಕಳೆದು ಪಾವನ ಮಾಡುವವಳು. ಅವಳು ಹುಟ್ಟಿದ್ದು ಬಲಿ ಚಕ್ರವರ್ತಿ ವಾಮನನ ಕಾಲು ತೊಳೆದಾಗ. (ಅದಕ್ಕೇ "ಗಂಗಾವತರಣ"ದಲ್ಲಿ ಬೇಂದ್ರೆಯವರು "ಹರಿಯ ಅಡಿಯಿಂದ" ಎಂದು ಹೇಳಿದ್ದು). ಅವನಿಗಿಂತ ಪಾವನ ಮಾಡುವರು ಮತ್ಯಾರು? 
  • ದೇವತೆಗಳಲ್ಲಿ ಶ್ರೇಣಿಯಿದೆ. ಒಬ್ಬರಿಗಿಂತ ಒಬ್ಬರು ದೊಡ್ಡವರಿದ್ದಾರೆ. ಆದರೆ ಬ್ರಹ್ಮನಿಂದ ಪ್ರಾರಂಭಿಸಿ ಎಲ್ಲಾದೇವತೆಗಳೂ ಶ್ರೀಹರಿಯ ಪಾದ ಪೀಠದ ಮುಂದೆ ಕಿರೀಟ ಹೊತ್ತ ತಲೆಗಳನ್ನು ಘಟ್ಟಿಸಿ ಕುಡಿ ನೋಟಕ್ಕಾಗಿ ಕಾದಿದ್ದಾರೆ. (ಕಿರೀಟಾಗೃಷ್ಟ   ಪೀಠವತ್ - ಶ್ರೀಹರಿಯ ಪಾದಪೀಠ ದೇವತೆಗಳ ಕಿರೀಟ ಘಟ್ಟಿಸಿ ಘಟ್ಟಿಸಿ ಜಜ್ಜಿಹೋಗಿದೆ ಎನ್ನುತ್ತಾರೆ ಸ್ತೋತ್ರಗಳಲ್ಲಿ). 
  • ರೂಪ-ಲಾವಣ್ಯಗಳಲ್ಲಿ ಮನ್ಮಥ ಕೊನೆಯ ಮಾತು. ಅವನು ಸುಂದರಾಂಗ. ಶ್ರೀಹರಿಯಾದರೋ ಮನ್ಮಥನಿಗೇ ಜನ್ಮ ಕೊಟ್ಟ ತಂದೆ! (ಪ್ರಪಂಚದಲ್ಲಿ ಸ್ತ್ರೀಯರನ್ನು ಕಂಡರೆ ಪುರುಷರಿಗೂ, ಪುರುಷರನ್ನು ಕಂಡರೆ ಸ್ತ್ರೀಯರಿಗೂ ಮನಸ್ಸು ಚಂಚಲವಾಗುವುದು ಸೃಷ್ಟಿಯ ನಿಯಮ. ಆದರೆ ಶ್ರೀಹರಿಯದು "ಪುಂಸಾಂ ಮೋಹನರೂಪಾಯ". ಪುರುಷರೂ ಮೋಹಿಸುವ ರೂಪ. ಮೋಹಿನಿ ರೂಪವಂತೂ ಸರಿಯೇ ಸರಿ}. 
  • ಧೈರ್ಯ-ಶೌರ್ಯಗಳ ವಿಷಯದಲ್ಲಿ ನೋಡಿದಾಗ ಅವನು ಕೊಂದ ರಕ್ಕಸರಿಗೆ ಲೆಕ್ಕವಿಲ್ಲ. ಹಿರಣ್ಯ, ರಾವಣ ಮೊದಲಾದವರು ಉದಾಹರಣೆ ಮಾತ್ರ. ಜಗತ್ತೇ ಗೆದ್ದ ವೀರರೂ ಅವನಿಂದ ಹತರಾದರು. 
  • ನೆಲದ ಮೇಲೆ ಸಂಚರಿಸುವ ವಾಹನಗಳಿರಲಿ; ಆಕಾಶದಲ್ಲಿ ಹಾರುವ ಪಕ್ಷಿರಾಜ ಗರುಡನೇ ಅವನಿಗೆ ಕಾರು ಅಥವಾ ವಿಮಾನ. ಅದಕ್ಕಿಂತ ವೇಗದ ವಾಹನವಿಲ್ಲ. 
  • ದೊಡ್ಡ ಮನೆ ಬೇಕೇ? ಇಡೀ ಭೂಮಂಡಲವನ್ನೇ ಹೊತ್ತುಕೊಂಡಿರುವ ಆದಿಶೇಷನೇ ಅವನ ಮಲಗುವ ಮಂಚ ಮಾತ್ರ. ಅವನು ಅದಕ್ಕಿಂತಲೂ, ಒಳಗೂ ಹೊರಗೂ ವ್ಯಾಪಿಸಿದ್ದಾನೆ. ಇನ್ನಾರು ದೊಡ್ಡವರಿದ್ದರು?
  • ಅವರಿವರು ಹೊಗಳುವುದೇನು? ಭಕ್ತ ಕನಕದಾಸರು ತಮ್ಮ "ಹರಿಭಕ್ತಿಸಾರ" ಕೃತಿಯ ೨೧ನೇ ಪದ್ಯದಲ್ಲಿ ಹೀಗೆ ಹೇಳುತ್ತಾರೆ:
ಪೊಗಳಲಳವೇ ನಿನ್ನ ನಾಮವ 
ಸುಗುಣ ಸಚ್ಚಾರಿತ್ರ ಕಥನವ 
ನಗಣಿತೋಪಮ ಅಮಿತವಿಕ್ರಮ ಗಮ್ಯ ನೀನೆಂದು 
ನಿಗಮತತಿ ಕೈವಾರಿಸುತ ಪದ 
ಯುಗವ ಕಾಣದೆ ಬಳಲುತಿದೆ ವಾ 
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ

ಅನಂತ ವೇದಾದಿ ಗ್ರಂಥಗಳು ತಮ್ಮ ಎಲ್ಲ ಶಬ್ದ ಭಂಡಾರಗಳನ್ನು ಉಪಯೋಗಿಸಿ ಮುಗಿಸಿ, ಬಸವಳಿದು "ಇನ್ನು ಮುಂದೆ ಹೇಳಲು ನಮ್ಮಲ್ಲಿ ಶಬ್ದಗಳಿಲ್ಲ. ಹೇಳುವ ಶಕ್ತಿಯಿಲ್ಲ" ಎಂದು ಕೈಚೆಲ್ಲಿ ಕುಳಿತಿವೆ! ಆದರೂ "ಅವನ ಮಹಿಮೆಯ ಸ್ವಲ್ಪ ಭಾಗವೂ ಹೇಳಿ ಮುಗಿದಿಲ್ಲ"  ಎನ್ನುತ್ತಿವೆ!

ಇನ್ನು ಭೀಷ್ಮರು ಅಗ್ರ ಪೂಜೆಗೆ ಶ್ರೀಕೃಷ್ಣನೇ ಅರ್ಹನೆಂದು ಹೇಳುವುದರಲ್ಲಿ ವಿಶೇಷವೇನು?

*****

"ಈ ಕಥೆಗಳೆಲ್ಲಾ ಬಿಡಿ. ಶ್ರೀಕೃಷ್ಣನು ನಿಮಗೆ ದೇವರಿರಬಹುದು. ಅದನ್ನು ನಾವು ನಂಬುವುದಿಲ್ಲ. ನಮ್ಮಲ್ಲಿ ಇನ್ನೂ ಕೆಲವರು ದೇವರಿದ್ದಾನೆ ಎನ್ನುವುದನ್ನೇ ನಂಬುವುದಿಲ್ಲ. ಅವನೂ ನಮ್ಮಂತೆ ಒಬ್ಬ ಮನುಷ್ಯ. ಅವನೊಬ್ಬ ಗೊಲ್ಲ. ದನಕಾಯುವ ಹುಡುಗ. ಅವನಿಗೇಕೆ ಅಗ್ರ ಪೂಜೆ?" ಎಂದು ಕೆಲವರು ಹೇಳಬಹುದು. 

ಶಿಶುಪಾಲ ಹೇಳಿದುದೂ ಇದನ್ನೇ. 

ಆಗಲಿ. ಈ ವಾದವನ್ನೂ ಒಪ್ಪೋಣ. ಶ್ರೀಕೃಷ್ಣನು ಎಲ್ಲರಂತೆ ಮನುಷ್ಯ ಎಂದೇ ಲೆಕ್ಕ ಮಾಡೋಣ. ಹಾಗಿದ್ದರೂ ಅವನಿಗೆ ಅಗ್ರ ಪೂಜೆ ಸ್ವೀಕರಿಸುವ ಯೋಗ್ಯತೆ ಇದೆಯೇ? ಇದನ್ನೂ ಪರಿಶೀಲಿಸಬಹುದು. 

  • ಭೀಷ್ಮರ ಸಲಹೆಯಂತೆ ಧರ್ಮರಾಯನು ರಾಜಸೂಯಯಾಗ ಮಾಡಲು ಶ್ರೀಕೃಷ್ಣನ ಸಹಾಯ ಕೇಳಿದಾಗ ಅವನು ಸಬೂಬು ಹೇಳದೆ ಓಡೋಡಿ ಬಂದ
  • ಬಂದವನು "ಅದು ನಿನ್ನ ಕೈಲಾಗುವುದಿಲ್ಲ. ಸುಮ್ಮನೆ ಇದ್ದುಬಿಡು" ಎಂದು ಹೇಳಿ ಸುಮ್ಮನಾಗಲಿಲ್ಲ. ಧೈರ್ಯ ತುಂಬಿದ. ಮುಖ್ಯವಾದ ಶತ್ರುಗಳನ್ನು ನಿವಾರಿಸಲು ಮುಂದೆ ನಿಂತ. 
  • ರಾಜಸೂಯದ ಪ್ರಾರಂಭದಿಂದ ಕೊನೆಯವರೆಗೂ ದೊಡ್ಡ ಕೆಲಸ, ಸಣ್ಣ ಕೆಲಸ ಎಂದು ನೋಡದೆ ಎಲ್ಲವನ್ನೂ ಮಾಡಿದ; ಮಾಡಿಸಿದ. 
  • ಯಾಗದ ಕುದುರೆಯ ರಕ್ಷಣೆಗೆ ಬಂದ  ತೊಂದರೆಗಳನ್ನು ನಿವಾರಿಸಲು ಸದಾ ಟೊಂಕ ಕಟ್ಟಿ ನಿಂತ
  • ಅತಿಥಿಗಳು ಊಟ ಮಾಡಿದ ಎಂಜಲು ಎಲೆಗಳನ್ನೂ ತಾನುಟ್ಟ ಪೀತಾಂಬರದ ನೆರಿಗೆಗಳನ್ನು ಮೇಲೆ ಸಿಕ್ಕಿಸಿ, ನಡು ಬಗ್ಗಿಸಿ, ಹೆಕ್ಕಿ ತೆಗೆದು ನೆಲ ಸಾರಿಸಿದ. ಶುಚಿ ಮಾಡಿದ. (ಅವನು ಎಂಜಲೆಲೆ ಹೇಗೆ ತೆಗೆದ ಎನ್ನುವುದನ್ನು ವರ್ಣಿಸುವ  ಸೊಗಸಾದ ಹಾಡೊಂದಿದೆ. ಅದನ್ನು ಮುಂದೆ ಎಂದಾದರೂ ನೋಡೋಣ).
  • ಎಂದೋ ಒಂದು ದಿನ ಹಬ್ಬದ ಸಮಯ ಬಂದು ಸಿಹಿಯೂಟ ಹೊಡೆದ ನೆಂಟನಲ್ಲ ಅವನು. ಸದಾಕಾಲಕ್ಕೂ, ಸರ್ವಕೆಲಸಕ್ಕೂ ಸಿದ್ಧನಿದ್ದ. 
ಈ ಎಲ್ಲ ಕಾರಣಗಳಿಂದ ಕೇವಲ ಒಬ್ಬ ಮನುಷ್ಯನಾಗಿಯೂ, ಸೋದರತ್ತೆಯ ಮಗನಾಗಿಯೂ, ಒಡನಾಡಿಯಾಗಿಯೂ ಶ್ರೀಕೃಷ್ಣ ಅಗ್ರ ಪೂಜೆಗೆ, ಮೊದಲ ಸತ್ಕಾರಕ್ಕೆ ಸಂಪೂರ್ಣ ಯೋಗ್ಯನಾಗಿದ್ದ. ಪರಶುರಾಮರೂ ಮತ್ತು ವೇದವ್ಯಾಸರೂ ಪರಮಾತ್ಮನ ಸ್ವರೂಪವೇ ಆದರೂ ರಾಜಸೂಯಯಾಗದಲ್ಲಿ ಅವರ ಪಾತ್ರ ಇಷ್ಟು ಎಲ್ಲಿಯೂ ಇಲ್ಲ. ಹೀಗಾಗಿ ಭೀಷ್ಮರು ಅಗ್ರ ಸನ್ಮಾನಕ್ಕೆ ಶ್ರೀಕೃಷ್ಣನನ್ನೇ ಸೂಚಿಸಿದರು.  ತನ್ನ ಯೋಗ್ಯತೆಯನ್ನು ಪ್ರಶ್ನಿಸಿದ ಶಿಶುಪಾಲನನ್ನು ಸಂಹರಿಸಿ ಎಲ್ಲರ ಮುಂದೆ ತನ್ನ ಯೋಗ್ಯತೆಯನ್ನು ಸ್ಥಾಪಿಸದ ಸಹ. 

*****

ಶಿಶುಪಾಲನ ಅನೇಕ ಕೊಂಕು ಪ್ರಶ್ನೆಗಳಿಗೆ ಮೇಲೆ ಉತ್ತರಗಳಿವೆ. ಅವನೇನು ರಾಜನೇ? ಅವನೇನು ಜ್ಞಾನಿಯೇ? ಎಂಬುವು ಶಿಶುಪಾಲನ ಮುಖ್ಯ ಪ್ರಶ್ನೆಗಳು. 

ಶ್ರೀಕೃಷ್ಣನು ರಾಜನಾಗಿರಲಿಲ್ಲ. ರಾಜರುಗಳನ್ನು ಸೋಲಿಸಿ ಅವರ ರಾಜ್ಯಗಳನ್ನು ಗೆದ್ದವರು ಆಕ್ರಮಿಸಿಕೊಂಡು ತಾವೇ ರಾಜರಾಗುವುದು ಹಿಂದೆಂದಿನಿಂದಲೋ ಬಂದ ಸಂಪ್ರದಾಯ. ತನ್ನನ್ನು ಕೊಲ್ಲಲು ಅನೇಕ ವಿಧಗಳಲ್ಲಿ ಪ್ರಯತ್ನ ಪಟ್ಟ ಸೋದರಮಾವ ಕಂಸನನ್ನು ಕೊಂದ ಬಳಿಕ ಶ್ರೀಕೃಷ್ಣ ತಾನೇ ಮಥುರೆಗೆ ರಾಜನಾಗಬಹುದಿತ್ತು. ಅವನನ್ನು ತಡೆಯುವವರು ಯಾರೂ ಇರಲಿಲ್ಲ. ವಾಸ್ತವವಾಗಿ ಅನೇಕರು ಇದನ್ನೇ ಸೂಚಿಸಿದರು. ಆದರೆ ಅವನು ಒಪ್ಪದೇ ತನ್ನ ಅಜ್ಜ ಉಗ್ರಸೇನನಿಗೆ ಪಟ್ಟಕಟ್ಟಿದ. ಜರಾಸಂಧನನ್ನು ಕೊಲ್ಲಿಸಿದಾಗ ಮತ್ತೆ ಮಗಧಕ್ಕೆ ದೊರೆಯಾಗಬಹುದಿತ್ತು. ಆದರೆ ಜರಾಸಂಧನ ಮಗ ಸಹದೇವನಿಗೆ (ಜರಾಸಂಧನ ಮಗನ ಹೆಸರೂ ಸಹದೇವ) ರಾಜ್ಯ ಬಿಟ್ಟು ಕೊಟ್ಟ. ಅವನು ಸ್ವತಃ ರಾಜನಲ್ಲದಿದ್ದರೂ ಅನೇಕರಿಗೆ ರಾಜ್ಯ ಕೊಟ್ಟ. 

ಅವನೇನು ತಿಳಿದವನೇ ಅಥವಾ ಜ್ಞಾನಿಯೇ ಎನ್ನುವ ಪ್ರಶ್ನೆಗೂ ಅಲ್ಲಿಯೇ ಉತ್ತರವಿದೆ. ಇಡೀ ರಾಜಸೂಯ ಯಾಗ ಮಾಡಿಸುವ ತಿಳುವಳಿಕೆ ಮತ್ತು ಜ್ನ್ಯಾನ ಅವನಿಗೆ ಇತ್ತು. ಮುಂದೆ ಗೀತೋಪದೇಶ ಮಾಡಿ, ಕುರುಕ್ಷೇತ್ರ ಯುದ್ಧ ಗೆಲ್ಲಿಸಿ, ಅನೇಕ ಸಮಯದಲ್ಲಿ ತನ್ನ ಲೋಕಜ್ನ್ಯಾನ ಮತ್ತು ಧರ್ಮಜ್ಞಾನದಿಂದ ಪಾಂಡವರಿಗೆ ಮತ್ತು ಅನೇಕರಿಗೆ ಮಾರ್ಗದರ್ಶನ ಮಾಡಿದ. 

ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅಗ್ರ ಪೂಜೆಗೆ ಶ್ರೀಕೃಷ್ಣನೇ ಸರಿಯಾದ ವ್ಯಕ್ತಿ. ಅಲ್ಲವೇ?

Friday, November 22, 2024

ಆಗ್ರಪೂಜೆಯಿಂದ ಬೀಳ್ಕೊಡುಗೆವರೆಗೆ



"ಎಣ್ಣೆ-ಅರಿಶಿನದಿಂದ ಹೂ-ವೀಳ್ಯದವರೆಗೆ" ಎನ್ನುವ ಹಿಂದಿನ ಸಂಚಿಕೆಯಲ್ಲಿ (ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ)  ನಮ್ಮಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬಂಧು-ಭಾಂಧವರನ್ನು, ನೆಂಟರಿಷ್ಟರನ್ನು ಪ್ರೀತಿ-ವಿಶ್ವಾಸಗಳಿಂದ ಆಮಂತ್ರಿಸುವುದರಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಾಗತಿಸುವವರೆಗೆ ಸ್ವಲ್ಪಮಟ್ಟಿಗೆ ನೋಡಿದ್ದಾಯಿತು. ಎಲ್ಲರ ಸ್ವಾಗತವಾದ ನಂತರ ಕ್ರಮವಾಗಿ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಬಂದವರು ಎಲ್ಲ ಕಾಲಕ್ಕೆ ನಮ್ಮ ಒಡನೆ ಇರುವುದಿಲ್ಲ. ಎಲ್ಲ ಆಚರಣೆಯ ಸಂಭ್ರಮಗಳೂ ಮುಗಿದ ನಂತರ, ನಮ್ಮ ಆಹ್ವಾನವನ್ನು ಗೌರವಿಸಿ ಬಂದವರನ್ನು ಬೀಳ್ಕೊಡುವುದರ ಬಗ್ಗೆ ಸ್ವಲ್ಪ ನೋಡೋಣ. 

ಆಹ್ವಾನಿತರನ್ನು ಆದರದಿಂದ ಬರಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಅವರನ್ನು ಸತ್ಕರಿಸಿ ಗೌರವಯುತವಾಗಿ ಬೀಳ್ಕೊಡುವುದೂ ಸಹ ಅಷ್ಟೇ ಮುಖ್ಯ. ಅನೇಕ ವೇಳೆ ಬೇರೆ ಬೇರೆ ಕಾರಣಗಳಿಂದ ಉಂಟಾಗುವ ಗಡಿಬಿಡಿಯಿಂದ ಮತ್ತು ಕಾರ್ಯಕ್ರಮಗಳನ್ನು ನಿಭಾಯಿಸುವುದರಿಂದ ಆಗುವ ಆಯಾಸದಿಂದ ಈ ಬೀಳ್ಕೊಡುವಿಕೆ ಸ್ವಲ್ಪ ಮಟ್ಟಿಗೆ ಹಿಂದೆ ಉಳಿಯುವುದು ಸಾಮಾನ್ಯ. ಇದಲ್ಲದೇ ಬಂದ ಅತಿಥಿ-ಅಭ್ಯಾಗತರೂ ಸಹ ಹೊರಡುವ ಆತುರದಲ್ಲಿ ಇರುವುದರಿಂದ ಈ ಮುಖ್ಯವಾದ ಅಂಗವು ಸರಿಯಾಗಿ ನಡೆಯುವುದಿಲ್ಲ. 

ಸಮಾರಂಭಗಳಿಗೆ ಬರುವ ಆಹ್ವಾನಿತರು ಸಂದರ್ಭಕ್ಕೆ ತಕ್ಕಂತೆ ಉಡುಗೊರೆಗಳನ್ನು ಸಾಮಾನ್ಯವಾಗಿ ತಂದಿರುತ್ತಾರೆ. ಹಾಗೆಯೇ, ಕಾರ್ಯಕ್ರಮಗಳನ್ನು ನಡೆಸುವವರು ತಮ್ಮ ಕಡೆಯಿಂದ ಯುಕ್ತವಾದ ನೆನಪಿನ ಕಾಣಿಕೆಗಳನ್ನು ಕೊಡುವ ಸಂಪ್ರದಾಯವೂ ಇದೆ. ಆಹ್ವಾನ ನೀಡುವ ವೇಳೆಯಲ್ಲಿಯೇ ಈ ವಿಷಯವನ್ನು ಯೋಚಿಸಿ ಯೋಗ್ಯವಾದ ಕೊಡುಗೆಗಳನ್ನು ತಂದು ಇಟ್ಟುಕೊಂಡಿರುವುದು ಪದ್ಧತಿ. ಅನೇಕ ವೇಳೆ ಬಂದವರು ಹೊರಡುವ ವೇಳೆ ಇವುಗಳನ್ನು ಅವರಿಗೆ ಕೊಡಲಾಗದೇ, "ಅಯ್ಯೋ, ಅವರಿಗೆ ಕೊಡುವುದು ತಪ್ಪೇ ಹೋಯಿತು" ಎಂದು ಪರಿತಪಿಸುವುದೂ ಉಂಟು. ನಂತರ ಮತ್ಯಾರದೋ ಮುಖಾಂತರ ಅವನ್ನು ತಲುಪಿಸಲು ಹೆಣಗಾಡುವುದೂ ಉಂಟು. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಅವರಿಗೆ ಹೊರಡುವ ಆತುರ ಮತ್ತು ನಮಗೆ ಬೇರೆ ಬೇರೆ ಕಾರ್ಯಗೌರವದಿಂದ ಬಿಡದಿಯ ಕೋಣೆಯಲ್ಲಿ ಕೂಡಿಸಿಯೋ ಅಥವಾ ನಿಲ್ಲಿಸಿಯೋ ಉಡುಗೊರೆಗಳನ್ನು ಕೊಡುವುದೂ ಉಂಟು. ಇನ್ನೊಂದು ಮುಖ್ಯ ವಿಚಾರ. ನಾವು ಉಡುಗೊರೆ  ಕೊಡುವುದನ್ನು ಅವರು ಏನಾದರೂ ತಂದಿದ್ದರೋ ಅಥವಾ ಇಲ್ಲವೋ, ತಂದಿದ್ದರೆ ಅದರ ಮೌಲ್ಯವೇನು ಎನ್ನುವುದಕ್ಕೆ ತಳುಕು ಹಾಕಬೇಕಾಗಿಲ್ಲ. ನಮ್ಮ ಪ್ರೀತಿ-ವಿಸ್ವಾಸ ಮತ್ತು ಕರ್ತವ್ಯ ನಮ್ಮದು ಎನ್ನುವ ಪರಿಜ್ಞಾನವಿರಬೇಕು 

*****

ಹಿಂದಿನ ಸಮಯಗಳಲ್ಲಿ ಎಲ್ಲ ಹಂತಗಳ ಸಂಭ್ರಮ ಮುಗಿದ ಮೇಲೆ ಕೊನೆಗೆ ನಡೆಯುವ ಈ ಬೀಳ್ಕೊಡುಗೆ ಕಾರ್ಯಕ್ರಮವನ್ನು ಒಂದು ಸಭೆ ನಡೆಸಿ ಅಲ್ಲಿ ಸಾಂಗವಾಗಿ ನೆರವೇರಿಸುತ್ತಿದ್ದರು. ಇಂತಹ ಸಭೆಗಳಿಗೆ ಒಂದು ಘನತೆ ಮತ್ತು ಗೌರವಗಳು ಇದ್ದವು. ಆ ಸಭೆಗಳಲ್ಲಿ ಬಂದವರ ಯೋಗ್ಯತಾನುಸಾರ ಕ್ರಮವಾಗಿ ಸತ್ಕರಿಸಿ ನಂತರ ಬೀಳ್ಕೊಡುತ್ತಿದ್ದರು. ಸಮಾರಂಭಗಳಿಗೆ ಬಂದ ಎಲ್ಲರೂ ಈ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಜ್ನ್ಯಾನವೃದ್ಧರು ಮತ್ತು ವಯೋವೃದ್ಧರಿಗೆ ವಿಶೇಷವಾದ ಸತ್ಕಾರಗಳು ನಡೆಯುತ್ತಿದ್ದವು. ನಂತರ ಇತರ ಎಲ್ಲರಿಗೂ ಅವರ ಯೋಗ್ಯತೆಗೆ ತಕ್ಕಂತೆ ಸತ್ಕರಿಸಿ ಬೀಳ್ಕೊಡುವುದು ನಡೆಯುತ್ತಿತ್ತು. ಹೀಗೆ ಸತ್ಕರಿಸುವಾಗ ಎಲ್ಲರಿಗೂ ಮೊದಲಿಗೆ ಯಾರಿಗೆ ಸತ್ಕಾರ ಮಾಡಬೇಕು? ಎನ್ನುವ ಪ್ರಶ್ನೆ ಬರುತ್ತಿತ್ತು. ಅನೇಕ ವೇಳೆ ಈ ಪ್ರಶ್ನೆಗೆ ಎಲ್ಲರಿಗೂ ಸಮ್ಮತವಾದ ಉತ್ತರ ಸುಲಭವಾಗಿ ಸಿಗುತ್ತಿತ್ತು. ಆಗ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಅನೇಕ ಗುರು-ಹಿರಿಯರಿದ್ದಾಗ ಈ ಸಮಸ್ಯೆ ಸ್ವಲ್ಪ ಕಠಿಣವಾಗುತ್ತಿತ್ತು. ಆಗ ಕಾರ್ಯಕ್ರಮ ನಡೆಸುವ ಯಜಮಾನನು ಸಭೆಯಲ್ಲಿರುವ ತನ್ನ ಕುಟುಂಬದ ಹಿರಿಯರನ್ನೋ ಅಥವಾ ಸಭೆಯ ಸದಸ್ಯರನ್ನೋ ಕೇಳಿ ನಂತರ ಸತ್ಕಾರ ಪ್ರಾರಂಭ ಮಾಡುತ್ತಿದ್ದನು. ಹೀಗೆ ಮಾಡುತ್ತಿದ್ದ ಮೊದಲನೇ ಸತ್ಕಾರವೇ "ಆಗ್ರ ಪೂಜೆ" ಎಂದು ಕರೆಸಿಕೊಳ್ಳುತ್ತಿತ್ತು. 

"ಆಗ್ರ ಪೂಜೆ" ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಪಾಂಡವರ "ರಾಜಸೂಯ ಯಾಗ" ಮುಗಿದ ನಂತರ ನಡೆದ ಶ್ರೀ ಕೃಷ್ಣನ ಆಗ್ರ ಪೂಜೆ ಮತ್ತು ಶಿಶುಪಾಲ ವಧೆಯ ವೃತ್ತಾಂತ. ರಾಜಸೂಯ ಯಾಗಕ್ಕೆ ತಮ್ಮ ಆಹ್ವಾನವನ್ನು ಗೌರವಿಸಿ ಬಂದ ಎಲ್ಲ ಅತಿಥಿಗಳಿಗೂ ಯಾಗ ಮುಗಿದ ನಂತರ ನಡೆದ ಸಭೆಯಲ್ಲಿ ಸತ್ಕಾರ ನಡೆಸುವಾಗ ಆದ ಪ್ರಸಂಗಗಳ ವಿವರಗಳೇ ಈ ಆಗ್ರ ಪೂಜೆಗೆ ಸ್ಥಳವಾಯಿತು. ಈ ಹೆಸರಾಂತ ಆಗ್ರ ಪೂಜೆಯ ವಿಷಯವನ್ನಷ್ಟು ನೋಡಿ ಮುಂದೆ ಹೋಗೋಣ. 

*****

ಕೌರವ-ಪಾಂಡವರು ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲವೆಂದು ಅರಿತ ಹಿರಿಯರು ಹಸ್ತಿನಾಪುರ ಸಾಮ್ರಾಜ್ಯವನ್ನು ಎರಡು ಭಾಗಮಾಡಿ ಧರ್ಮರಾಯನಿಗೆ ಒಂದು ಭಾಗ ಕೊಟ್ಟರು. ತಮ್ಮಂದಿರು ಮತ್ತು ದ್ರೌಪಾದಿಯ ಒಡಗೂಡಿ ಶ್ರೀ ಕೃಷ್ಣನ ಸಹಾಯದಿಂದ ಇಂದ್ರಪ್ರಸ್ಥ ನಗರವನ್ನು ಕಟ್ಟಿ, ಅದನ್ನು ರಾಜಧಾನಿ ಮಾಡಿಕೊಂಡು ಧರ್ಮರಾಯನು ರಾಜ್ಯಭಾರ ನಡೆಸುತ್ತಿದ್ದ ಕಾಲ. ಒಂದು ದಿನ ಅವನ ಪಟ್ಟಣಕ್ಕೆ ದೇವರ್ಷಿ ನಾರದರು ಬಂದರು. "ಎಲ್ಲಿಂದ ಬಂದಿರಿ?" ಎಂಬ ಧರ್ಮರಾಯನ ಪ್ರಶ್ನೆಗೆ ಉತ್ತರವಾಗಿ ನಾರದರು ದೇವಲೋಕದಿಂದ ಬಂದದ್ದಾಗಿ ಹೇಳಿ ದೇವೇಂದ್ರನ ಒಡ್ಡೋಲಗದ ಪರಿಯನ್ನೂ ಮತ್ತು ಅಲ್ಲಿ ಮಂಡಿಸಿದ್ದ ರಾಜಶ್ರೇಷ್ಠರ ವಿವರವನ್ನೂ ಕೊಡುತ್ತಾರೆ. ಅಲ್ಲಿ ನೆರೆದಿದ್ದ ರಾಜರ ಹೆಸರುಗಳಲ್ಲಿ ತನ್ನ ತಂದೆಯಾದ ಪಾಂಡು ಮಹಾರಾಜನ ಹೆಸರು ಇಲ್ಲದುದನ್ನು ಕೇಳಿ ಯುಧಿಷ್ಠಿರನು ಅದಕ್ಕೆ ಕಾರಣ ಕೇಳುತ್ತಾನೆ. ದೇವರ್ಷಿ ನಾರದರು "ನಿನ್ನ ತಂದೆಯು ಆ ರಾಜಶ್ರೇಷ್ಠರ ಸಾಲಿನಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಬರಬೇಕಾದರೆ ನೀನು ರಾಜಸೂಯ ಯಾಗವನ್ನು ಮಾಡಿ ಅದರ ಫಲವನ್ನು ನಿನ್ನ ತಂದೆಗೆ ಕೊಡಬೇಕು" ಎಂದು ಹೇಳುತ್ತಾರೆ. ಧರ್ಮರಾಯನು ರಾಜಸೂಯ ಯಾಗವನ್ನು ಮಾಡುವುದಾಗಿ ತೀರ್ಮಾನಿಸುತ್ತಾನೆ. 

ರಾಜಸೂಯ ಯಾಗ ನಡೆಸುವುದಾಗಿ ತೀರ್ಮಾನ ಮಾಡಿದ್ದೇನೋ ಆಯಿತು. ಆದರೆ ಅದಕ್ಕೆ ಅಪಾರ ಧನ ಸಂಪದ ಬೇಕು. ಆ ಸಮಾಯದಲ್ಲಿ ಇದ್ದ ಎಲ್ಲ ರಾಜ, ಮಹಾರಾಜರು ತನ್ನನ್ನು ಚಕ್ರವರ್ತಿ ಎಂದು ಒಪ್ಪಿಕೊಳ್ಳಬೇಕು. ಯಾಗ ನಡೆಸಲು ಅನೇಕ ಸಾಧನ-ಸಲಕರಣೆಗಳು ಕೂಡಿಸಬೇಕು. ಆಹ್ವಾನಿತರು ಸಾಮಾನ್ಯರಲ್ಲ. ಎಲ್ಲರೂ ರಾಜ, ಮಹಾರಾಜರು ಅಥವಾ ಋಷಿಪುಂಗವರು. ಪ್ರಜಾಜನರೂ ಬಹಳ ಇರುವರು. ಜರಾಸಂಧಾದಿಗಳು ಇರುವಾಗ ಇಂತಹ ಯಾಗ ನಡೆಸುವುದು ಅಸಾಧ್ಯ. ಈಗ ಏನು ಮಾಡುವುದು? ಈ ರೀತಿಯ ಚಿoತೆಗಳಿಂದ ಕಂಗೆಟ್ಟ ಯುಧಿಷ್ಠಿರನು ಕುಲದ ಹಿರಿಯರಾದ ಭೀಷ್ಮ ಪಿತಾಮಹರೊಡನೆ ತನ್ನ ಚಿಂತೆಯನ್ನು  ಹೇಳಿಕೊಳ್ಳುತ್ತಾನೆ. 

ಆಗ ಹಿರಿಯರಾದ ಭೀಷ್ಮರು ನೀಡಿದ ಸಮಾಧಾನದ ಮಾತು ಮಹಾಕವಿ ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಕೃತಿಯ ಸಭಾಪರ್ವದ ಎಂಟನೇ ಸಂಧಿಯಲ್ಲಿ ಹೀಗಿದೆ:

ಚಿಂತೆಯೆಕೈ ಕೃಷ್ಣ ನಾರೆಂ 
ದೆಂತು ಕಂಡೆ ಚತುರ್ದಶಾರ್ಥದ 
ತಂತುರೂಪನು ತಾನೇಯೆನ್ನದೆ  ಶ್ರುತಿವಚನ 
ತಂತುವಿನ ಪಟ ಮೃತ್ತಿಕೆಯ ಘಟ 
ದಂತೆ ಜಗವೀತನಲಿ ತೋರ್ಕು ಮು 
ರಾಂತಕನ ಸುಯ್ಧಾನ ನಿನಗಿರಲೆಂಜಲೇಕೆಂದ    

"ಏಕೆ ಚಿಂತೆ ಮಾಡುತ್ತೀಯೆ? ಶ್ರೀಕೃಷ್ಣನು ಯಾರೆಂದು ತಿಳಿದಿದ್ದೀಯೆ? ದಾರಗಳಿಂದ ನೇಯ್ದು ಮಾಡಿರುವ ಗೋಡೆಯಮೇಲಿರುವ ಚಿತ್ರದಂತೆ, ಮಣ್ಣಿನಿಂದ ಮಾಡಿದ ಮಡಕೆಯಂತೆ, ಇಡೀ ಹದಿನಾಲ್ಕು ಲೋಕಗಳ ಪ್ರಪಂಚವೇ ಅವನಲ್ಲಿದೆ ಎಂದು ವೇದಾದಿ ಗ್ರಂಥಗಳಲ್ಲಿ ಹೇಳಿಲ್ಲವೇ? ಇಂತಹ ಅಸುರಾರಿಯ ಬೆಂಬಲ ನಿನಗಿರುವಾಗ ಹೆದರಿಕೆಯೇಕೆ?" ಎನ್ನುತ್ತಾರೆ ಭೀಷ್ಮರು. ಶ್ರೀಕೃಷ್ಣನ ಒತ್ತಾಸೆ ನಿನಗಿರುವಾಗ ಭಯವೇನು? ಅವನನ್ನು ಜೊತೆಗಿಟ್ಟುಕೊಂಡು ಕೆಲಸ  ಪ್ರಾರಂಭಿಸು. ಮುಂದಿನದನ್ನು ಅವನೇ ನಡೆಸುತ್ತಾನೆ ಎನ್ನುವುದು ಇದರ ಭಾವವು. 

ಭೀಷ್ಮರು ಕೊಟ್ಟಿರುವ "ತಂತುವಿನ ಪಟ" ಮತ್ತು "ಮೃತ್ತಿಕೆಯ ಘಟ" ಈ ದೃಷ್ಟಾಂತಗಳ ಒಳ ಅರ್ಥವೇನು? ಗೋಡೆಯ ಮೇಲೆ ನೇತು ಹಾಕಿದ ದಾರಗಳಿಂದ ನೇಯ್ದ ಪಟವನ್ನು ನೋಡೋಣ. ನಮಗೆ ಪಟ ಮತ್ತು ಅದರ ಕಸೂತಿಯ ಚಿತ್ರದ ಸೌಂದರ್ಯ ಮಾತ್ರ ಕಾಣುತ್ತದೆ. ತಂತು ಅಂದರೆ ದಾರ. (ಮಾಂಗಲ್ಯo ತಂತುನಾನೇನ .....  ಎಲ್ಲರಿಗೂ ಗೊತ್ತು. ಮಾಂಗಲ್ಯವನ್ನು ಈ ದಾರದ ಮೂಲಕ ನಿನ್ನ ಕತ್ತಿನಲ್ಲಿ ಕಟ್ಟುತ್ತೇನೆ ಮುಂತಾಗಿ ವರನು ವಧುವಿಗೆ ವಿವಾಹದ ಮಾಂಗಲ್ಯ ಧಾರಣೆಯ ಸಮಯದಲ್ಲಿ ಹೇಳುತ್ತಾನೆ. ಅದು ತಂತುನಾ ಅನೇನ ಎಂದು. ಅಂದರೆ ಈ ದಾರದಿಂದ ಎಂದು. ಟಿವಿ ಸೀರಿಯಲ್ಗಳಲ್ಲಿ ತೋರಿಸುವಂತೆ ಮಾಂಗಲ್ಯo ತಂತು ನಾನೇನ ಅಲ್ಲ).  ಆ ಪಟ ಅನೇಕ ದಾರಗಳನ್ನು ನೇಯ್ದು ಮಾಡಿರುವುದು. ಆದರೆ ಆ ದಾರಗಳು ಕಾಣವು. ಬಹಳ ಹತ್ತಿರ ಹೋಗಿ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಾಣುತ್ತದೆ. ಆದರೆ ನಮಗೆ ಕಾಣದಿದ್ದರೂ ಅದು ಪಟದ ಒಳಗೆ ಇದ್ದೇ ಇದೆ. ಅಂತೆಯೇ ಮಣ್ಣಿನ ಮಡಕೆ. ನಮಗೆ ಇಡೀ ಮಡಕೆ ಒಂದು ಪದಾರ್ಥವಾಗಿ ಕಾಣುತ್ತದೆ. ಅನೇಕ ಮಣ್ಣಿನ ಕಣಗಳಿಂದ ಮಡಿಕೆ ಮಾಡಿದ್ದರೂ ನಮಗೆ ಅವು ಭಾಸವಾಗುವುದಿಲ್ಲ. ನಮಗೆ ಅವುಗಳ ಇರುವು ಅರಿವಿಗೆ ಬರುವುದಿಲ್ಲ ಅಂದ ಮಾತ್ರಕ್ಕೆ ಅವು ಇಲ್ಲದಿಲ್ಲ. ಅದೇ ರೀತಿ ಶ್ರೀಕೃಷ್ಣನು ನಮಗೆ ಒಬ್ಬ ವ್ಯಕ್ತಿಯಾಗಿ ಕಾಣುತ್ತಾನೆ. ಆದರೆ ಅವನಲ್ಲಿ ಹದಿನಾಲ್ಕು ಲೋಕಗಳೂ ತುಂಬಿಕೊಂಡಿವೆ. ಅವನು ನಮ್ಮ ಮುಂದೆ ಸುಳಿದಾಡುವಾಗ ಹದಿನಾಲ್ಕು ಲೋಕಗಳು ಕಾಣದಿದ್ದರೂ ಅವು ಅವನಲ್ಲಿ ಇದ್ದೆ ಇವೆ! ವೇದಾದಿ ಗ್ರಂಥಗಳು ಇವನ್ನೇ ಸಾರಿ ಸಾರಿ ಹೇಳುತ್ತವೆ. ಇದೇ ಈ ದೃಷ್ಟಾಂತಗಳ ತಾತ್ಪರ್ಯ.

ಸಮಕಾಲೀನ ಉದಾಹರಣೆ ಕೊಡುವುದಾದರೆ ಒಂದು ಬೋಯಿಂಗ್ ವಿಮಾನವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಆರು ಮಿಲಿಯನ್ ಗಿಂತ ಹೆಚ್ಚು (ಅರವತ್ತು ಲಕ್ಷಕ್ಕಿಂತ ಜಾಸ್ತಿ ) ಬಿಡಿಭಾಗಗಳಿವೆಯಂತೆ. ಆದರೆ ನಮಗೆ ಒಂದು ವಿಮಾನ ಹಾರುವುದು, ಕೆಳಗೆ ಇಳಿವುದು, ಬಂದು ನಿಲ್ಲುವುದು ಕಾಣುತ್ತದೆ. ಆದರೆ ಈ ಎಲ್ಲ ಕ್ರಿಯೆಗಳು ನಡೆಯುವಾಗಲೂ ಈ ಅರವತ್ತು ಲಕ್ಷಕ್ಕೂ ಹೆಚ್ಚು ಬಿಡಿ ಭಾಗಗಳೂ ಹಾರುತ್ತವೆ, ಕೆಳಗೆ ಇಳಿಯುತ್ತವೆ ಮತ್ತು ಬಂದು ನಿಲ್ಲುತ್ತವೆ! ನಮಗೆ ಭಾಸವಾಗಲಿಲ್ಲ ಎಂದ ಮಾತ್ರಕ್ಕೆ ಅವು ಇಲ್ಲ ಎಂದಲ್ಲ. 

ಭಾರವೂ ಅವನೇ; ಭಾರ ಹೊತ್ತವನೂ ಅವನೇ; ಭಾರ ಹೊತ್ತವನಿಗೆ ಆಧಾರವೂ ಅವನೇ. ಅದು ಹೇಗೆ? "ತಂತುರೂಪನು" ಎನ್ನುವುದಕ್ಕೆ ಇನ್ನೊಂದು ವಿವರಣೆಯೂ ಉಂಟು. ನಲವತ್ತು ಐವತ್ತು ಮುತ್ತುಗಳಿರುವ ಒಂದು ಸರವನ್ನೇ ತೆಗೆದುಕೊಳ್ಳಿ. ಅಷ್ಟು ಸಂಖ್ಯೆಯ ಮುತ್ತುಗಳು ಸರದಲ್ಲಿ ಇವೆ. ಆದರೆ ಅವೆಲ್ಲವನ್ನೂ ಒಟ್ಟುಗೂಡಿಸಿ ಸರ ಮಾಡಿ ಹಿಡಿದಿಟ್ಟಿರುವುದು ಅವುಗಳ ಒಳಗಿನ ದಾರವೇ! ಆದರೆ ಸರ ಕಂಡಾಗ ನಮ್ಮ ಗಮನ ಆ ಮುತ್ತುಗಳು ಮತ್ತು ಅವುಗಳ ಸೌಂದರ್ಯ, ಆ ಸರದ ಒಟ್ಟಾರೆ ಪರಿಣಾಮದ ಮೇಲೆ ಹೋಗುತ್ತದೆಯೇ ವಿನಃ ಅವುಗಳಿಗೆ ಆಧಾರವಾಗಿ ಹಿಡಿದಿಟ್ಟಿರುವ ದಾರದ ಮೇಲಲ್ಲ. 

ಇದೇ ಕಾರಣಕ್ಕೆ ಮುಂದೆ, ರಾಜಸೂಯ ಯಾಗ ಮುಗಿದ ನಂತರ ಎಲ್ಲರನ್ನೂ ಬೀಳ್ಕೊಡುವ ಮೊದಲು ನಡೆಸುವ ಸತ್ಕಾರದ ಸಭೆಯ "ಆಗ್ರ ಪೂಜೆ"ಗೆ ಶ್ರೀಕೃಷ್ಣನೇ ಸರಿಯಾದ ವ್ಯಕ್ತಿ ಎಂದು ಭೀಷ್ಮರು ಹೇಳುತ್ತಾರೆ. ಮುಂದಿನ ನಡಾವಳಿಗಳು ಮತ್ತು ಶಿಶುಪಾಲನ ವಧೆ ಎಲ್ಲರಿಗೂ ತಿಳಿದ ವಿಷಯ. 

ಸಭೆಯಲ್ಲಿ ಅನೇಕ ಮಹನೀಯರು ಇದ್ದರೂ ಶ್ರೀಕೃಷ್ಣನನ್ನೇ ಏಕೆ ಸೂಚಿಸಿದರು ಅನ್ನುವುದನ್ನು ಇನ್ನೂ ವಿಸ್ತಾರವಾಗಿ ಮುಂದಿನ ಸಂಚಿಕೆಯಲ್ಲಿ ನೋಡೋಣ. 

*****

ನಮ್ಮ ಸಮಾರಂಭಕ್ಕೆ ಬಂದ ಅತಿಥಿ-ಅಭ್ಯಾಗತರಿಗೆ ಯಥೋಚಿತ ಸತ್ಕಾರ ಕೂಡ ಮಾಡಿದ್ದಾಯಿತು. ಇನ್ನು ಬೀಳ್ಕೊಡುಗೆಯ ವಿಚಾರ. 

ನಮಗೆ ಅರಿವಿಲ್ಲದೆಯೇ ನಾವು ಈ ಬೀಳ್ಕೊಡುಗೆಯನ್ನು ಪ್ರತಿ ದಿನವೂ ಮಾಡುತ್ತಿರುತ್ತೇವೆ. ಮನೆಗೆ ಬಂದವರನ್ನು ಅವರು ಹೊರಟಾಗ ಅವರ ಜೊತೆ ಬಾಗಿಲವರೆಗೋ, ಹೆಬ್ಬಾಗಿಲು ದಾಟಿ ಹತ್ತು ಹೆಜ್ಜೆ ಜೊತೆಗೆ ಹೋಗಿ ಗೌರವಪೂರ್ವಕ ಕಳಿಸುತ್ತೇವೆ. ಈಗಿನ ಸಮಯದಲ್ಲಿ ಅವರ ವಾಹನದ ಬಳಿ ಹೋಗಿ ನಿಲ್ಲುತ್ತೇವೆ. ಬಂದ ವ್ಯಕ್ತಿಗಳು ನಮಗೆ ಅತಿ ಮುಖ್ಯವಾದರೆ ರೈಲು ನಿಲ್ದಾಣಕ್ಕೋ ಅಥವಾ ವಿಮಾನ ನಿಲ್ದಾಣಕ್ಕೋ ಅವರ ಜೊತೆಯಲ್ಲಿ ಹೋಗಿ ಕಳಿಸಿ ಹಿಂದಿರುಗುತ್ತೇವೆ. ಇದು ಅವರಿಗೆ ನಾವು ಕೊಡುವ ಹೆಚ್ಚಿನ ಗೌರವ. 

ನಮ್ಮ ಹಿರಿಯರು ಈ ಬೀಳ್ಕೊಡಿಗೆಯ ವಿಚಾರದಲ್ಲಿ ಇನ್ನೂ ಒಂದು ಕಿವಿಮಾತು ಹೇಳುತ್ತಿದ್ದರು. ಕೊಡುವ ಉಡುಗೊರೆ ತೆಗೆದುಕೊಳ್ಳುವವರಿಗೆ ಸಂತೋಷ ತರಬೇಕೇ ಹೊರತು ಅದೇ ಒಂದು ಹೊರೆಯಾಗಬಾರದು. ಹೊರಗೆ ಹೋದ ಮೇಲೆ "ಅಯ್ಯೋ, ಇದನ್ನು ಯಾಕೆ ಕೊಟ್ಟರು? ಇದನ್ನು ತೆಗೆದುಕೊಂಡು ಹೋಗುವುದು ಹೇಗೆ?" ಎಂದು ಅವರು ಯೋಚಿಸುವಂತೆ ಆಗಬಾರದು. ಅವರ ಸ್ಥಾನ ತಲುಪಿದ ಮೇಲೆ ಆ ಪದಾರ್ಥ ಅವರಿಗೆ ಉಪಯೋಗಿ ಆಗಬೇಕೆ ವಿನಃ "ಇದನ್ನು ಏನು ಮಾಡುವುದು?" ಎನ್ನುವ ಚಿಂತೆಗೆ ಕಾರಣ ಆಗಬಾರದು. ಭಾರವಾದ ಪದಾರ್ಥಗಳನ್ನು ಕೊಟ್ಟಾಗ (ಉದಾಹರಣೆಗೆ ಶಯ್ಯಾದಾನ ಅಥವಾ ಹಾಸಿಗೆಗಳ ದಾನ) ಅವನ್ನು ನಾವೇ ಅವರ ಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ವಾಹನದ ವೆಚ್ಚವನ್ನೂ ನಮ್ಮ ಹಿರಿಯರು ನಮ್ಮಿಂದ ಕೊಡಿಸುತ್ತಿದ್ದುದನ್ನು ಇಲ್ಲಿ ನೆನೆಯಬಹುದು. 

*****

ಹೀಗೆ ನಮ್ಮ ಸಮಾರಂಭಗಳಿಗೆ ನೆಂಟರಿಷ್ಟರನ್ನು, ಸ್ನೇಹಿತರು-ಹಿತೈಷಿಗಳನ್ನು ಆಮಂತ್ರಿಸುವುದು, ಸ್ವಾಗತಿಸುವುದು, ಸತ್ಕರಿಸುವುದು, ಉಪಚರಿಸುವುದು ಮತ್ತು ಅಂತಿಮವಾಗಿ ಬೀಳ್ಕೊಡುವುದು, ಈ ಎಲ್ಲ ಹಂತಗಳಲ್ಲೂ ಅನೇಕ ಸೂಕ್ಷ್ಮ ಸಂಗತಿಗಳಿರುತ್ತವೆ. ಇವುಗಳಲ್ಲಿ ಕೆಲವನ್ನು ನಾವು ಈಗಲೂ ನಮಗರಿವಿಲ್ಲದಂತೆ ನಡೆಸುತ್ತಿದ್ದೇವೆ. ಕೆಲವನ್ನು ಬಿಟ್ಟಿದ್ದೇವೆ!

Saturday, November 9, 2024

ಎಣ್ಣೆ-ಅರಿಶಿನದಿಂದ ಹೂ-ವೀಳ್ಯದವರೆಗೆ


ಪ್ರಾಣಿ-ಪಕ್ಷಿಗಳಿಗೂ ಮನುಷ್ಯರಿಗೂ ಏನು ಭೇದ? ಆಹಾರ-ನಿದ್ರೆ-ಭಯ-ಮೈಥುನ ಮುಂತಾದವು ಇಬ್ಬರಿಗೂ ಇವೆ. ಆದರೆ ಸೃಷ್ಟಿಯಲ್ಲಿ ಹೆಚ್ಚು ವಿಕಸಿತನಾದ ಮನುಷ್ಯನಿಗೆ ಯೋಚಿಸುವ, ಯೋಗ್ಯ ಮತ್ತು ಅಯೋಗ್ಯ ವಿಚಾರಗಳಲ್ಲಿ ವ್ಯತ್ಯಾಸವನ್ನು ಗಮನಿಸುವ, ಮತ್ತು ಸಂತೋಷ-ದುಃಖಗಳನ್ನು ಹಂಚಿಕೊಳ್ಳುವ ಶಕ್ತಿಯಿದೆ. ಈ ಕಾರಣದಿಂದ ಮನುಷ್ಯ ಸಮಾರಂಭಗಳನ್ನು ಆಯೋಜಿಸುತ್ತಾನೆ. ಇಂತಹ ಸಂದರ್ಭಗಳಲ್ಲಿ ತನ್ನ ಹಿಗ್ಗು-ತಗ್ಗುಗಳನ್ನು ಬಂಧು-ಬಾಂಧವರೊಡನೆ, ನೆಂಟರು-ಇಷ್ಟರ ಸಮೂಹದಲ್ಲಿ ಆಚರಿಸುತ್ತಾನೆ. ಇಂತಹ ಕೂಟಗಳು  ಇಲ್ಲದ ಯಾಂತ್ರಿಕ ಬದುಕು ಬಹಳ ನೀರಸ. 

ಸಮಾಜದ ಅನೇಕ ವರ್ಗಗಳ ಪದ್ಧತಿಯಂತೆ, ಅವರ ಪರಿಸರದ ವಾತಾವರಣದಂತೆ ಈ ಸಮಾರಂಭಗಳು ಏರ್ಪಡಿಸಲ್ಪಡುತ್ತವೆ. ತನ್ನವರೆಂದು ನಂಬಿದ ಜನರ ನಡುವೆ ಆಚರಣೆ ಮಾಡುವಾಗ ತನ್ನವರೆನ್ನುವವರು ಇರಲೇಬೇಕು ತಾನೇ? ಆ ಕಾರಣದಿಂದ ಅವರನ್ನು ಆಹ್ವಾನ ಮಾಡಬೇಕಾಗುತ್ತದೆ. ಕೆಲವರು ವಿಷಯ ತಿಳಿದ ತಕ್ಷಣ ಕಾರ್ಯಕ್ರಮಕ್ಕೆ ಬರಬಹುದು. ಮತ್ತೆ ಕೆಲವರು ಕರೆದಾಗ ಮಾತ್ರ ಬರುವವರು. ಮತ್ತೆ ಕೆಲವರು ಅವರ ಮನಸ್ಸು ಒಪ್ಪುವಂತೆ ಕರೆದಾಗ ಮಾತ್ರ ಬರುವರು. "ನಮ್ಮನ್ನು ಕರೆದಿಲ್ಲ" ಅಥವಾ "ನಮ್ಮನ್ನು ಸರಿಯಾಗಿ ಕರೆದಿಲ್ಲ" ಎಂದು ಮದುವೆ, ಮುಂಜಿ ಇತ್ಯಾದಿಗಳಿಗೆ ಹೋಗದಿರುವುದು ಅನೇಕ ವೇಳೆ ಕಂಡು ಬರುವ ವಿಷಯ. ಕರೆಯದೆ ಇದ್ದಲ್ಲಿ ಹೋಗುವುದು ಮುಜುಗರದ ವಿಷಯವೇ ಸರಿ. ಆದರೆ "ಸರಿಯಾಗಿ ಕರೆದಿಲ್ಲ" ಎಂದು ಹೋಗದೆ, ವಿಷಯವನ್ನು ಅಲ್ಲಿಗೇ ಬಿಡದೆ, ವರ್ಷಾನುಗಟ್ಟಲೆ ಹಗೆ ಸಾಧಿಸಿ, ತಾವೂ ದುಃಖಿಸಿ ಬೇರೆಯವರಿಗೂ ಹಿಂಸೆ ಕೊಡುವ ಸಂದರ್ಭಗಳನ್ನು ನಾವೆಲ್ಲರೂ ನಮ್ಮ ಜೀವಮಾನದಲ್ಲಿ ಕಂಡಿದ್ದೇವೆ. 

ಆಮಂತ್ರಣ ಇಲ್ಲದಿದ್ದಲ್ಲಿಗೆ ಹೋಗದಿರುವುದು ಸರಿಯೇ. ಆಹ್ವಾನ ಇದ್ದಾಗ ಹೋಗಲಾಗದ ಪರಿಸ್ಥಿತಿಗಳೂ ಉಂಟು. ಅಂತಹ ಸಂದರ್ಭಗಳಲ್ಲಿ ಆಮಂತ್ರಣವಿತ್ತವರಿಗೆ ಬರಲಾಗುವುದಿಲ್ಲವೆಂದು ತಿಳಿಸಿ ಸಂದರ್ಭಕ್ಕೆ ತಕ್ಕಂತೆ ಶುಭ ಕೋರುವ ಅಥವಾ ಸಂತಾಪ ಸೂಚಿಸುವ ಸೌಜನ್ಯವೂ ಬೇಕು. "ಸರಿಯಾಗಿ ಕರೆಯುವುದು" ಎಂದರೇನು? ಹಿಂದೆಲ್ಲ ನೆಂಟರಿಷ್ಟರ ಮನೆಗೆ ದಂಪತಿಗಳೇ ಹೋಗಿ ಶುಭ ಸಮಾರಂಭಗಳ ಆಮಂತ್ರಣ ಪತ್ರಿಕೆ ಜೊತೆಗೆ ಮಂತ್ರಾಕ್ಷತೆ ಇಟ್ಟು ಕೊಟ್ಟು ಕರೆಯುವ ಪದ್ಧತಿ ಇತ್ತು. ಸುಮಂಗಲಿಯರನ್ನು ಕರೆಯುವಾಗ ವಿಶೇಷವಾಗಿ ಒಂದು ಬಟ್ಟಲಿನಲ್ಲಿ ಎಣ್ಣೆಯನ್ನೂ, ಅದರ ಜೊತೆಯಲ್ಲಿ ಅರಿಶಿನ-ಕುಂಕುಮ, ಬಳೆ  ಮುಂತಾದ ಮಂಗಳ ದ್ರವ್ಯಗಳನ್ನೂ ಕೊಟ್ಟು ಆಹ್ವಾನಿಸುತ್ತಿದ್ದರು. ಇದನ್ನೇ "ಎಣ್ಣೆ-ಅರಿಶಿನ" ಕೊಟ್ಟು ಕರೆಯುವುದು ಎಂದು ಸೂಕ್ಷ್ಮವಾಗಿ ಹೇಳುತ್ತಿದ್ದರು. ಆಹ್ವಾನಿತ ವ್ಯಕ್ತಿ ಅಭ್ಯಂಗನ ಮಾಡಿ ತಯಾರಾಗಿ ಬರಲಿ ಎಂದು ಈ ರೀತಿ ಕರೆಯುವ ಪದ್ಧತಿ ಇತ್ತು. ಅನೇಕ ವೇಳೆ ಊಟ-ತಿಂಡಿಗಳಿಗೆ ಎಲ್ಲಾ ತಯಾರು ಮಾಡಿ ಬಡಿಸಿದ್ದಾಗ ಯಾರಾದರೂ ಬಂದು ಕುಳಿತುಕೊಳ್ಳದೆ ಇದ್ದರೆ "ಏನೋ, ನಿನಗೇನು ಎಣ್ಣೆ-ಅರಿಸಿನ ಕೊಟ್ಟು ಕರೆಯಬೇಕೇನು?" ಎಂದು ಹಿರಿಯರು ರೇಗುತ್ತಿದ್ದದೂ ಉಂಟು. 

*****

ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ಆಹ್ವಾನ ಪತ್ರಿಕೆಗಳಲ್ಲಿ ಇರುತ್ತಿದ್ದ ಒಕ್ಕಣೆಗಳಲ್ಲಿ "ತಾವು ಸಕುಟುಂಬ-ಸಪರಿವಾರ ಆಗಮಿಸಿ, ಯಥೋಚಿತ ಸತ್ಕಾರ ಸ್ವೀಕರಿಸಿ, ವಧೂ-ವರರನ್ನು ಆಶೀರ್ವದಿಸಿ ನಮ್ಮ  ಮನಸ್ಸಂತೋಷಪಡಿಸಬೇಕೆಂದು ಕೋರುವ.... " ಇತ್ಯಾದಿ ಬರಹಗಳು ಇರುತ್ತಿದ್ದವು. ಆಹ್ವಾನ ನೀಡುವಾಗ ಅದು ಮನೆಯ ಹಿರಿಯರಿಗೆ ಮಾತ್ರವೋ, ಅಥವಾ ದಂಪತಿಗಳಿಗೋ ಇಲ್ಲವೇ ಮನೆಮಂದಿಗೆಲ್ಲರಿಗೋ ಎಂಬುದನ್ನು ಖಚಿತವಾಗಿ ಹೇಳುತ್ತಿದ್ದರು. ಇದರಿಂದ ಉಭಯತ್ರರಿಗೂ ಯಾವುದೇ ಇರುಸು-ಮುರುಸು ಉಂಟಾಗುತ್ತಿರಲಿಲ್ಲ. ಕಾರ್ಯಕ್ರಮದ ದಿನ ಮತ್ತು ವೇಳೆ, ಸ್ಥಳ ಇತ್ಯಾದಿಗಳನ್ನು ಖಚಿತವಾಗಿ ಹೇಳುವುದರಿಂದ ಎಲ್ಲಿ, ಯಾವ ವೇಳೆ ನಮ್ಮ ಬರುವು-ಇರುವು ನಿರೀಕ್ಷಿತ ಎಂದು ನಿಖರವಾಗಿ ಗೊತ್ತಾಗುತ್ತಿತ್ತು. 

ಆಹ್ವಾನ ನೀಡುವ ರೀತಿಯನ್ನು ನಮ್ಮ ಜಾನಪದ ಸಾಹಿತ್ಯದಲ್ಲಿ ಚೆನ್ನಾಗಿ ನೋಡಬಹುದು. ಮಗನ ಅಥವಾ ಮಗಳ ವಿವಾಹದ ಆಮಂತ್ರಣ ನೀಡುವ ಮಹಿಳೆ ತನ್ನ ದೊಡ್ಡಮ್ಮನನ್ನು ಕರೆಯುವ ಈ ಪರಿ ನೋಡಿ: 

ಹಡೆದ ತಾಯಿಗಿಂತ ಹಿರಿಯೋಳೆ 
ವಜ್ರ ಮಾಣಿಕದೋಲೆ ಕಿವಿಯೋಳೆ 
ಮುತ್ತೈದೆ ಮಕ್ಕಳ ಸೊಸೆಯರ ಒಡಗೊಂಡು 
ಅರ್ತಿಲಿ ಬಾ ದೊಡ್ಡಮ್ಮ ಮನೆಯ ಪ್ರಸ್ಥಕ್ಕೆ, ಸುವ್ವಾಲೆ 

ಒಡಹುಟ್ಟಿದ ಅಕ್ಕನನ್ನು ಕರೆಯುವ ರೀತಿ:

ಬೊಂಬೆ ಬಾಗಿನ ಕೊಟ್ಟು ಆಡಿಸಿ 
ಬಲು ಸಂಭ್ರಮದಿಂದೆನ್ನ ಸಲಹಿದಿ 
ಮಕ್ಕಳು ಮೋಮ್ಮಕ್ಕಳು ಸೊಸೆಯರ ಸಹಿತಾಗಿ  
ಪಟ್ಟದ ಅಕ್ಕ ಬಾರೆ ಎನ್ನ ಮನೆಯ ಪ್ರಸ್ಥಕ್ಕೆ, ಸುವ್ವಾಲೆ 

ಇದೆ ರೀತಿ ಪ್ರತಿಯೊಂದು ಸಂಭಂದದವರನ್ನೂ ಕರೆಯುವ ಹಾಡುಗಳಿವೆ. ಮನೆಯ ಕೆಲಸದವರನ್ನೂ ಗೌರವಯುತವಾಗಿ ಕರೆಯಬೇಕು:
ಎಲ್ಲ ಸುತ್ತು ಕೆಲಸಗಳ ಮಾಡೋಳೇ 
ತುಸು ಹೇಸದೆ ಎಂಜಲ ಬಳಿಯೋಳೆ 
ಮಕ್ಕಳು ಮಂದಿಯ ಒಡಗೊಂಡು 
ಬಾರೆ ದಾಸಿ ಎನ್ನ ಮನೆಯ ಪ್ರಸ್ಥಕ್ಕೆ. ಸುವ್ವಾಲೆ  

ಇದೇ ರೀತಿ ಬೇರೆ ಬಂಧು-ಬಾಂಧವರನ್ನು, ಗೆಳೆಯ-ಗೆಳತಿಯರನ್ನೂ ಮದುವೆ-ಮುಂಜಿಗಳಿಗೆ ಕರೆಯುವ ಹಾಡುಗಳಿವೆ. 

ಹಿಂದೆಲ್ಲಾ ಐದು ಅಥವಾ ಏಳು ದಿನಗಳ ಕಾಲ ಮದುವೆ ನಡೆಸುವ ಸಂಪ್ರದಾಯ ಇತ್ತು. "ಮಾಘಾದಿ ಪಂಚಕ" ಎಂದು ಗುರುತಿಸಿ ಆ ಐದು ತಿಂಗಳು ಮಾತ್ರವೇ ಮದುವೆ-ಮುಂಜಿ ಮಾಡುತ್ತಿದ್ದರು. ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ ಈ ಐದು ತಿಂಗಳುಗಲ್ಲಿ ಮಾತ್ರ ಈ ಶುಭ ಕಾರ್ಯಗಳು ನಡೆಸುತ್ತಿದ್ದರು. ಹೆಚ್ಚು ಜನ ಕೃಷಿ ಚಟುವಟಿಕೆಗಳಲ್ಲಿ ಜೀವನ ನಡೆಸುತ್ತಿದ್ದರಿಂದ, ಈ ತಿಂಗಳುಗಳಲ್ಲಿ ಕೃಷಿ ಚಟುವಟಿಕೆ ಕಡಿಮೆ ಇರುತ್ತಿದ್ದರಿಂದ, ಕಾಲ ಎಲ್ಲರಿಗೂ ಅನುಕೂಲ ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ  ಹನ್ನೆರಡೂ ತಿಂಗಳು ಎಲ್ಲ ಕಾರ್ಯಕ್ರಮ ನಡೆಯುತ್ತವೆ. 

*****

ಆಹ್ವಾನ ಪತ್ರಿಕೆ ಆಯಿತು. ಕರೆದೂ ಆಯಿತು. ಇನ್ನು ಮುಂದೆ ಕರೆದವರು ಕಾರ್ಯಕ್ರಮಕ್ಕೆ ಬಂದಾಗ ಅವರನ್ನು ಸ್ವಾಗತಿಸಿ ನೋಡಿಕೊಳ್ಳುವ ರೀತಿ. ಕೆಲವು ಕುಟುಂಬಗಳಲ್ಲಿ "ಹೂವೀಳ್ಯ" ಎನ್ನುವ ಒಂದು ಕಾರ್ಯಕ್ರಮವನ್ನು ನಡೆಸುವ ಸಂಪ್ರದಾಯ ಇದೆ. ಏನಿದು ಈ ಹೂವೀಳ್ಯ?

ವಿಜಯನಗರ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಕವಿಗಳು, ಕಲಾವಿದರು, ವಿದ್ವಾಂಸರಿಗೆ ಆಸ್ಥಾನದಲ್ಲಿ ವಿಶೇಷವಾದ ಆಸರೆ ಮತ್ತು ಗೌರವ ಇತ್ತು. ಕನಕಾಚಲ ಭಟ್ಟ ಎಂಬುವವರು ಸ್ವತಃ ವೀಣಾ ವಿದ್ವಾಂಸರಲ್ಲದೆ ರಾಜವಂಶದವರಿಗೂ ವೀಣೆ ನುಡಿಸುವಿಕೆ ಕಲಿಸುವ ಗುರುಗಳಾಗಿದ್ದರು. ಅವರ ಮಗ ತಿಮ್ಮಣ್ಣ ಭಟ್ಟರೂ ಇದನ್ನು ಮುಂದುವರಿಸಿದರು. ಆ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯ ನುಚ್ಚು ನೂರಾಯಿತು. ವಿದ್ವಾಂಸರು, ಕಲಾವಿದರು ಚೆದುರಿ ಹೋದರು. ಕೆಲವರು ತಂಜಾವೂರು ರಾಜರ ಬಳಿ ಆಶ್ರಯ ಪಡೆದರು. ಶ್ರೀ ಸುಧೀಂದ್ರ ತೀರ್ಥರು ತಂಜಾವೂರು ಅರಸರ ರಾಜಗುರುಗಳಾಗಿದ್ದರು. ತಿಮ್ಮಣ್ಣ ಭಟ್ಟರ ಚಿಕ್ಕ ಮಗನಾದ ಶ್ರೀ ವೆಂಕಟನಾಥರು ಅಸಾಧಾರಣ ಪಂಡಿತರು. ತಂದೆ, ತಾತನಂತೆ ಶ್ರೇಷ್ಠ ವೈಣಿಕರು. ಶ್ರೀ ಸುಧೀಂದ್ರ ತೀರ್ಥರಲ್ಲಿ ಹೆಚ್ಚಿನ ವಿದ್ಯಾಭ್ಯಾಸಮಾಡಿ ಆ ಕಾಲದ ಎಲ್ಲ ವಿದ್ವಾಂಸರನ್ನೂ ವಾದಗಳಲ್ಲಿ ಜಯಿಸಿದರು. 

ಕಾಲ ಕಳೆದಂತೆ ಶ್ರೀ ಸುಧೀಂದ್ರ ತೀರ್ಥರಿಗೆ ಶ್ರೀ ವೆಂಕಟನಾಥರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಬೇಕೆಂದು ಪ್ರೇರಣೆಯಾಯಿತು. ವೆಂಕಟನಾಥರು ಇದಕ್ಕೆ ಒಪ್ಪಲಿಲ್ಲ. ಚಿಕ್ಕ ವಯಸ್ಸಿನ ಹೆಂಡತಿ ಮತ್ತು ಸಣ್ಣ ಮಗನನ್ನು ತ್ಯಜಿಸಿ ಸನ್ಯಾಸ ಸ್ವೀಕಾರ ಮಾಡಲು  ಒಪ್ಪಲಿಲ್ಲ. "ಬಾಲಾ ಸ್ತ್ರೀ, ಬಾಲಕೋನೋಪನೀತಃ" (ಹೆಂಡತಿ ಚಿಕ್ಕ ವಯಸ್ಸಿನವಳು, ಮಗನಿಗೆ ಇನ್ನೂ ಉಪನಯನ ಕೂಡ ಆಗಿಲ್ಲ) ಎಂದು ಸನ್ಯಾಸ ನಿರಾಕರಿಸಿದರು. ನಂತರ ಸಂದರ್ಭಗಳಿಂದ ಮನಸ್ಸು ಬದಲಾಯಿಸಿ, ಮಗನ ಉಪನಯನ ಮಾಡಿ, ಹೆಂಡತಿಗೆ ತಿಳಿಯದಂತೆ ಸನ್ಯಾಸ ಸ್ವೀಕರಿಸಿದರು. ಶ್ರೀ ಸುಧೀಂದ್ರ ತೀರ್ಥರು ಶ್ರೀ ವೆಂಕಟನಾಥರಿಗೆ ಶ್ರೀ ರಾಘವೇಂದ್ರ ತೀರ್ಥ ಎಂದು ನಾಮಕರಣ ಮಾಡಿದರು. ಇದರಿಂದ ಆಘಾತಗೊಂಡ ವೆಂಕಟನಾಥರ ಪತ್ನಿ ಶ್ರೀಮತಿ ಸರಸ್ವತಿ ಬಾವಿಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಂಡರು. ಇದರಿಂದ ಅವರಿಗೆ ಬಂದ ಪಿಶಾಚ ಜನ್ಮವನ್ನು ಶ್ರೀ ರಾಘವೇಂದ್ರ ತೀರ್ಥರು ಪರಿಹಾರ ಮಾಡಿದರು. "ಇನ್ನು ಮುಂದೆ ತಮ್ಮಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ನಿನ್ನ ಗುರುತಾಗಿ "ಸುವಾಸಿನಿ ಸತ್ಕಾರ" ಮಾಡಲಿ ಎಂದು ವರಕೊಟ್ಟರು. ಅಂದಿನಿಂದ ಶುಭ ಕಾರ್ಯಗಳಲ್ಲಿ "ಹೂವೀಳ್ಯ" ಮಾಡುವ ಪದ್ಧತಿ ಬೆಳೆದು ಬಂತು. ಹೀಗೆಂದು ಶ್ರೀ ರಾಘವೇಂದ್ರ ತೀರ್ಥರ (ಮುಂದೆ ಮಂತ್ರಾಲಯದಲ್ಲಿ ನೆಲೆಸಿದ ಶ್ರೀ ರಾಯರು) ಚರಿತ್ರೆ ಗ್ರಂಥಗಳಿಂದ ತಿಳಿದುಬರುತ್ತದೆ. ಇದು ಮೂರು ನೂರಾ ಐವತ್ತು ವರುಷಗಳಿಗೂ ಹಿಂದಿನ ಮಾತು. ಹೂವೀಳ್ಯ ಪದ್ಧತಿ ಅಂದಿನಿಂದ ಪ್ರಾರಂಭ ಆಯಿತು ಎಂದು ನಂಬಿಕೆ.  

*****

ಹಿಂದಿನ ದಿನಗಳಲ್ಲಿ ಮದುವೆ-ಮುಂಜಿ ಮುಂತಾದ ಸಮಾರಂಭಗಳಿಗೆ ಹೋಗುವ ಜನ ಕಾಲ್ನಡಿಗೆಯಲ್ಲೋ ಅಥವಾ ಎತ್ತಿನ/ಕುದುರೆ ಗಾಡಿಗಳಲ್ಲೋ ಹೋಗಬೇಕಾಗಿತ್ತು. ಇಂದಿನಂತೆ ವಿವಾಹ ಮಂಟಪದವರೆಗೂ ಸುಖ ಪ್ರಯಾಣ ಸಾಧ್ಯವಿರಲಿಲ್ಲ. ಪ್ರಯಾಣದಿಂದ ಬರುವ ಮಂದಿ, ಅದರಲ್ಲೂ ಹಿರಿಯರು, ಬಹಳ ಬಸವಳಿದಿರುತ್ತಿದ್ದರು. ಆದ ಕಾರಣ ಅವರನ್ನು ಎದುರುಗೊಂಡಾಗ ಅವರಿಗೆ ಮೊದಲಿಗೆ ಆಯಾಸ ಪರಿಹಾರ ಬೇಕಾಗುತ್ತಿತ್ತು. ಹೀಗೆ ಬಂದವರನ್ನು ಸಮಾರಂಭದ ಸ್ಥಳದ ಮುಖ್ಯ ದ್ವಾರದ ಬಳಿ ಎದುರುಗೊಳ್ಳುತ್ತಿದ್ದರು. ಬಂದ ಹಿರಿಯರಿಗೆ ಕುಶಲ ಪ್ರಶ್ನೆಗಳ ನಂತರ  ಕಾಲು ತೊಳೆದು ಒಳಗೆ ಕರೆದೊಯ್ಯುತ್ತಿದ್ದರು. ನಂತರ ಬ್ರಹ್ಮಜ್ಞರಿಗೆ "ಮಧುಪರ್ಕ" ಮತ್ತು ಸ್ತ್ರೀಯರಿಗೆ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಇತ್ಯಾದಿ ಕೊಡುತ್ತಿದ್ದರು. ಕಾರಣ ಬೇಯಿಸಿದ ಪದಾರ್ಥಗಳ ಅಡಿಗೆ ಇನ್ನೂ ಆಗಿರುತ್ತಿರಲಿಲ್ಲ. ಅವರ ಬಟ್ಟೆಗಳು ಪ್ರಯಾಣದ ಧೂಳಿನಿಂದ ಮಲಿನವಾಗಿರುತ್ತಿದ್ದವು. ಆ ಕಾರಣ ಅವರಿಗೆ ಹೊಸ ಧೋತರ-ಸೀರೆ ಇತ್ಯಾದಿ ಕೊಡುತ್ತಿದ್ದರು. ಹೆಣ್ಣು ಮಕ್ಕಳಿಗೆ ಮಂಗಳ ದ್ರವ್ಯಗಳನ್ನು ಕೊಡುತ್ತಿದ್ದರು. ಹೀಗೆ ಕಾಲುತೊಳೆದು, ಒಳಗೆ ಕರೆದುಕೊಂಡು ಹೋಗಿ ಮಂಗಳದ್ರವ್ಯ ಕೊಟ್ಟು ಸ್ವಲ್ಪ ತಿನ್ನುವ-ಕುಡಿಯುವ ಪದಾರ್ಥ ಕೊಡುವ ಕ್ರಿಯೆ ನಂತರ "ಹೂವು-ವೀಳ್ಯ" ಅಥವಾ "ಹೂವೀಳ್ಯ" ಪದ್ಧತಿಯಾಗಿ ರೂಪುಗೊಂಡಿದೆ. 

ಹೊಸ ವಸ್ತ್ರಗಳನ್ನು ಕೊಡುವ ಪದ್ಧತಿ ಈಗ  ಕೇವಲ ರವಿಕೆಯ ಕಣಕ್ಕೆ ಸೀಮಿತವಾಗಿದೆ. ಇಂದಿನ ದಿನಗಳಲ್ಲಿ ಸೀರೆಯ ಜೊತೆಗೇ ರವಿಕೆಯ ಕಣಗಳಿರುವ ಕಾಲ ಮತ್ತು ಮ್ಯಾಚಿಂಗ್ ಬ್ಲೌಸ್ಗಳಿಂದಾಗಿ ಹೂವೀಳ್ಯದಲ್ಲಿ ಕೊಡುವ ರವಿಕೆಯ ಕಣಕ್ಕೆ ಏನೂ ಬೆಲೆ ಇಲ್ಲವಾಗಿದೆ. ಅನುಕೂಲಸ್ಥರು ಕೇವಲ ರವಿಕೆಯ ಕಣಕ್ಕೇ ಸೀಮಿತ ಮಾಡಬೇಕಾಗಿಲ್ಲ. ಒಂದು ಜೊತೆ ಪೂರ್ಣ ವಸ್ತ್ರಗಳನ್ನೇ ಕೊಡಬಹುದು. 

ಕೆಲವು ಹಿರಿಯರಿಗೆ, ಅದರಲ್ಲೂ ದಂಪತಿಗಳಿಗೆ, ಹೀಗೆ ಕಾರ್ಯಕ್ರಮದ ಆರಂಭದಲ್ಲಿ ನಡೆಯುವ ನಡೆಗಳಲ್ಲಿ (ಚಪ್ಪರ ಪೂಜೆ ಅಥವಾ ದೇವರ ಸಮಾರಾಧನೆ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು) "ಪಾದಪೂಜೆ" ಮಾಡಿ ವಸ್ತ್ರಗಳನ್ನು ನೀಡುವ ಪದ್ಧತಿ ಈಗಲೂ ಮುಂದುವರೆದಿದೆ. 

ಹೂವೀಳ್ಯ ಕಾರ್ಯಕ್ರಮ ಸಾಮಾನ್ಯವಾಗಿ "ನಾಂದಿ" ಕಾರ್ಯಕ್ರಮದ ಜೊತೆ-ಜೊತೆಯಲ್ಲಿ ನಡೆಯುತ್ತದೆ. "ನಾಂದಿ  ಶ್ರಾದ್ಧ" (ಶ್ರದ್ದೇಯಿಂದ ಮಾಡುವ ಕೆಲಸವೇ ಶ್ರಾದ್ಧ) ವೈದಿಕ ರೀತಿಯಿಂದ ಮನೆತನದ ಹಿರಿಯರನ್ನು ಬರಮಾಡಿಕೊಂಡು ಸಮಾರಂಭಗಳು ಮುಗಿಯುವವರೆಗೂ ಅವರು ನಮ್ಮ ಜೊತೆಯಲ್ಲಿ ಇದ್ದಾರೆ ಎಂದು ಭಾವಿಸಲಾಗುತ್ತದೆ. ಇದೆ ರೀತಿ ಹೂವೀಳ್ಯ ಕಾರ್ಯಕ್ರಮದಲ್ಲಿ ನಮ್ಮ ಹಿಂದಿನ ತಲೆಮಾರಿನ ಸ್ತ್ರೀಯರು ಇಲ್ಲಿ ಬಂದಿರುವ ಸುವಾಸಿನಿಯರ ರೂಪದಲ್ಲಿ ಬಂದಿದ್ದಾರೆ ಎಂದು ಸತ್ಕರಿಸುತ್ತಾರೆ.  

ಈ "ಹೂವು-ವೀಳ್ಯ" ಅಥವಾ "ಹೂವೀಳ್ಯ" ಕಾರ್ಯಕ್ರಮದಿಂದ ಒಂದು ಸಾಮಾಜಿಕ ಕೆಲಸವೂ ಗೊತ್ತಿಲ್ಲದಂತೆ ನಡೆಯುತ್ತದೆ. ಕಾರ್ಯಕ್ರಮಕ್ಕೆ ಅನೇಕ ಹೆಣ್ಣು ಮಕ್ಕಳು ಬೇರೆ ಬೇರೆ ಕಡೆಯಿಂದ ಬಂದಿರುತ್ತಾರೆ. ಅನೇಕರಿಗೆ ಪರಸ್ಪರ ಪರಿಚಯ ಇರುವುದಿಲ್ಲ. ಇದು ಸಮಾರಂಭಗಳ ಮೊದಲನೇ ಚಟುವಟಿಕೆ. ಮುಂದಿನ ಅನೇಕ ಚಟುವಟಿಕೆಗಳಲ್ಲಿ ಇವರೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಹೂವೀಳ್ಯ ಕಾರ್ಯಕ್ರಮ ಇಂದಿನ ಮ್ಯಾನೇಜ್ಮೆಂಟ್ ಪದಾವಳಿಯಲ್ಲಿ ಹೇಳುವಂತೆ "ಐಸ್ ಬ್ರೇಕಿಂಗ್" ಮತ್ತು "ಇಂಟ್ರೊಡಕ್ಷನ್" ಕೆಲಸವನ್ನೂ ಮಾಡುತ್ತದೆ!

ಹೂವೀಳ್ಯ ಮುಖ್ಯವಾಗಿ ಮಹಿಳೆಯರ ಚಟುವಟಿಕೆ. ಪುರುಷರಿಗೆ? ಪುರುಷರೂ ಹೂವೀಳ್ಯವನ್ನು ಕುತೂಹಲದಿಂದ ಎದುರು ನೋಡುತ್ತಾರೆ. ಏಕೆ? ಅವರಿಗೆ ನಾಂದಿ ಕಾರ್ಯಕ್ರಮದಲ್ಲಿ ಸಿಕ್ಕುವುದು ಬರೀ ಹೊಗೆ ಮತ್ತು ಅದರಿಂದ ಕೆಮ್ಮು. ಹೂವೀಳ್ಯ ಹಾಗಲ್ಲ. ರವಿಕೆಯ ಕಣ, ಮಂಗಳದ್ರವ್ಯ ಇಲ್ಲದಿದ್ದರೂ ಪಾನಕ, ಕೋಸಂಬರಿಗಳು ಅವರಿಗೂ ಸಿಕ್ಕುತ್ತವೆ!

*****

ಇಲ್ಲಿಯವರೆಗೆ  ಸಮಾರಂಭಗಳಿಗೆ ಆಮಂತ್ರಿಸುವುದನ್ನು ಮತ್ತು ಬಂದವರನ್ನು ಸ್ವಾಗತಿಸುವುದನ್ನು ನೋಡಿದೆವು. ನಮ್ಮ ಆಹ್ವಾನವನ್ನು ಮನ್ನಿಸಿ ಬಂದವರಿಗೆಲ್ಲ ಮುಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಸಮಯ ಕೊಡೋಣ. 

ಸಮಾರಂಭಗಳು ಮುಗಿದ ಮೇಲೆ ಅವರಿಗೆ ಸತ್ಕಾರ ಮಾಡಿ ಬೀಳ್ಕೊಡುವುದೂ ಅಷ್ಟೇ ಮುಖ್ಯ. ಅಲ್ಲವೇ? ಅದರ ವಿಷಯಗಳನ್ನು ಇನ್ನೊಮ್ಮೆ ನೋಡೋಣ. 

Monday, November 4, 2024

Excellence Pooled In One Place


The word "Excellence" means many things in different contexts. One thing is, however, common in anything considered excellent - there should be a confluence of many good qualities. There is no place for any ordinary things in an excellent thing or person or place. They give star ratings nowadays for everything. A five star rating is generally considered the ultimate. It is a standard against which others are measured.

*****

Students of literature and people interested in stage plays are familiar with a famous Sanskrit play "Naagaananda". Even those who are not familiar with this play would have heard of the story of Jeemootavaahana, Shankachooda and Malaya Parvata. It is a part of the famous "Bodhisatva" folklore. The story revolves around the hatred between Garuda and the Nagas, how Garuda was killing the snakes evryday and how the kindness of Jeemootavahana turned even Garuda into Ahimsa and giving up his killing of snakes once and for all. 

Naatakantam kavitvam (नातकन्तम् कवित्वम्) is a popular saying that enunciates that a poet is incomplete until he succeeds in his efforts as a writer by giving a successful stage play (Naataka). What are the components that make a stage play successful? The subject chosen for the play must be one that catches the attention of the audience. The poet must be skilful in his trade. The troupe staging the play must be well versed in the stage management and capable of displaying desired acting skills. Ultimately the audience should be one that can appreciate a good content and performance. 

In the Sanskrit play "Nagaananda" the Sootradhara (one who introduces and manages the stage production) introduces the play with the following sloka:

श्रीहर्षो निपुणः कविः परिषदप्येषा गुणग्राहिणी 
लोकेहारिच बोधिसत्व चरितं नाट्ये च दक्षा वयम् 
वस्वेकैकमपीह वाञ्छितफलप्राप्तेः पदं किं 
पुनर्मद्भग्योपचयादयं समुचितः सर्वे गुणानां गणाः 

ಶ್ರೀಹರ್ಷೋ ನಿಪುಣಃ ಕವಿ: ಪರಿಷದಪಿ ಯೇಷಾ ಗುಣಗ್ರಾಹಿಣೀ 
ಲೋಕೇ ಹಾರಿಚ ಬೋಧಿಸತ್ವ ಚರಿತಂ ನಾಟೈಚ ದಕ್ಷಾ ವಯಂ 
ವಸ್ಯೆಕೈಕಮಪೀಹ ವಾಂಛಿತಫಲಪ್ರಾಪ್ತೆ: ಪದಂ  ಕಿಂ 
 ಪುನರ್ಮದ್ಭಾಗ್ಯೋಪಚಯಾದಯಂ ಸಮುಚಿತಂ ಸರ್ವೇ ಗುಣಾನಾಂ ಗಣಾ:

Sri Harsha is a very skilled poet. This is a knowledgeable assembly that can understand and appreciate quality performance on stage. The subject of the play is Bodhisatva's story that is very well known in the world. We are indeed an excellent troupe that can perform to expectations. Each one of these is sufficient to ensure a successful stage performance. And here we have a confluence of all the requirements. How lucky we are today to have such a pool of excellence!

This sloka is a classic example of many components of excellence pooled in one place which makes for a great presentation or achievements.

*****

We have two Sri Harsha as well known poets that have given us masterpieces in Sanskrit literature. The first one is Chandel King Sri Harsha who ruled the present Bundelkhand area from Kanyakubja (present Kannauj in UP). He ruled in the early part of 7th Century AD and fought Pulikeshi II (Immadi Pulikeshi) of Karnataka and lost. Pulikeshi II then got the title of "Shree Pruthvivallabha". He is believed to have written at least three plays Nagananda, Ratnavali and Priyadarshika, though some opine that someone else wrote for him. The second Sri Harsha is the 12th century Philosopher-Poet who is known for his celebrated work "Naishadeeya Charitam", among others. He iwas given a title "Nara Bharati" meaning he is like Devi Saraswati in the form of a man. There is a saying "Naishadam Vidwadowshadam" meaning that this literary work tests even the great scholars. It is one of the text books for students learning the language and poetics. It is considered as one of the five epic works (Pancha Mahakavyas). His another work Khandana Khndana Khadya is also highly rated by the scholars. 

*****

We had another Sri Harsha in our own family. Whenever i met him in some function or private occasion, I always remembered the above two Sri Harsha and especially the above sloka from Nagananda. He would ask me smilingly, "Uncle, do you remember these two Sri Harsha when you see me or do you remember me when you read their works?". Our Sri Harsha spent his early years in Mumbai while we mostly stayed in Bangalore. he moved to Toronto in Canada for higher studies and later worked in Japan for two years. He continued his work in Mumbai. By the time he moved to Bangalore, we were away elsewhere. Thus though our chemistry perfectly matched, our geography did not. We could not spend a lot of time together, but whatever time was spent together was indeed memorable and productive. He would patiently answer my endless questions on the developments in his chosen professional field.  

Youngsters in schools and colleges are either confused about the careers they wish to pursue after finishing initial education or they are very clear about their goals. our Sri Harsha was very clear about his goals from early years. He wanted a career in Graphics and Animation, especially in the visual medium. After his initial education in Mumbai, he moved to Canada for higher learning in this field. He did learning and working simultaneously there. It was during these years that he was associated with providing resources to the famous Hollywood film "The Lion King" (1994). He moved to Japan and worked as well as learnt there for some two years. After returning to India he worked in Mumbai and Bangalore and provided valuable contributions for films in Hollywood, Bollywood and South Indian films. He built a team of professionals in his chosen area and was very popular among his teammates and co-workers.

He was associated with production of many films that include "Bahubali", "Avatar" and some Rajnikant movies. He kept himself updated with the various developments in the field and could speak with authority on the area of allied subjects.

Many things in life are not fair. Some of them are absolutely unfair. Our Sri Harsha was only 47 years young and at the peak of his excellent performance. Cruel hands of death snatched him away from amidst us last week. The family members did everything possible for humans to nurse him back to good health, but unfortunately there are certain things beyond our control. 

A wonderful son, devoted brother, loved husband, laughing companion for many, a dependable friend and an adorable young talent is not with us now. Dear Harsha, you were indeed a bundle of excellence pooled in one place. You will be missed. Missed a lot.