ಇದು ಅಂತ್ಯವಿಲ್ಲದ ಆರಂಭದ ಕಥೆ. ಅರವತ್ತು, ಅರವತ್ತೆರಡು ವರುಷಗಳಿಗೂ ಹಿಂದಿನ ಮಾತು. ಇಪ್ಪತ್ತನೆಯ ಶತಮಾನದ ಅರವತ್ತಮೂರರಿಂದ ಅರವತ್ತೈದನೆಯ ಇಸವಿಗಳ ಕಾಲ. ಭಾರತದ ಉತ್ತರ ಗಡಿಯ ಹಿಮಾಲಯ ಪರ್ವತ ಶ್ರೇಣಿಯಲ್ಲಿನ ಗಿರಿ-ಕಂದರಗಳಲ್ಲಿ ಭಾರತ-ಚೀನಾ ಗಡಿ ಘರ್ಷಣೆಯ ಸಮಯ (1962) ಕಳೆದು, ಮೂರು ವರ್ಷಗಳಲ್ಲಿ (1965) ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿತ್ತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಹದಿನೈದು, ಹದಿನಾರು ವರುಷಗಳು ಕಳೆದಿದ್ದವು. ದೇಶ ಹರಿದು ಹಂಚಿ ಹೋಗಿ, ರಾಜಕೀಯ ಸ್ವಾತಂತ್ರ್ಯ ಬಂದರೂ ಆರ್ಥಿಕವಾಗಿ ಕಡು ಬಡತನ ಅನುಭವಿಸುತ್ತಿದ್ದ ಕಾಲವದು. ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿದ್ದ ನಾವು ಪಂಚವಾರ್ಷಿಕ ಯೋಜನೆಗಳ ಬಗ್ಗೆ ಪ್ರತಿ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಎದುರಿಸುತ್ತಿದ್ದೆವು. ಆಗ ಮೂರನೆಯ ಪಂಚವಾರ್ಷಿಕ ಯೋಜನೆ (1961-66) ಚಾಲ್ತಿಯಲ್ಲಿದ್ದ ಸಮಯ. ಐದು ವರ್ಷದಲ್ಲಿ ಈ ಯೋಜನೆಯ ಒಟ್ಟು ವೆಚ್ಚ 11,250 ಕೋಟಿ ರೂಪಾಯಿಗಳು. ಅಂದರೆ ಅರವತ್ತು ತಿಂಗಳಿಗೆ 11,250 ಕೋಟಿ ರೂಪಾಯಿಗಳು. ಆಗಿನ ಕಾಲಘಟ್ಟದಲ್ಲಿ ಇದೊಂದು ಬಹು ದೊಡ್ಡ ಮೊತ್ತ. ಈಗ ತಿಂಗಳೊಂದಕ್ಕೆ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಜಿ. ಎಸ. ಟಿ. ಎಂಬ ಒಂದು ಮೂಲದಿಂದಲೇ ಸಂಗ್ರಹವಾಗುತ್ತದೆ!
ಮೊದಲನೆಯ ಪಂಚ ವಾರ್ಷಿಕ (1951-56) ಯೋಜನೆಯ ಎರಡು ಸಾವಿರದ ನೂರು ಕೋಟಿ ರೂಪಾಯಿ ಖರ್ಚು ಮುಖ್ಯವಾಗಿ ವ್ಯವಸಾಯ ಕ್ಷೇತ್ರಕ್ಕೆ ಮೀಸಲಿತ್ತು. ನಂತರ ಐದು ಸಾವಿರ ಕೋಟಿ ರೂಪಾಯಿಯ ದೊಡ್ಡ ಮೊತ್ತದ ಎರಡನೇ ಪಂಚವಾರ್ಷಿಕ (1956-61) ಯೋಜನೆಯೂ ಮುಗಿದಿತ್ತು. ಈಗಿನಂತೆ "ಸರ್ವಿಸ್ ಸೆಕ್ಟರ್" ಎನ್ನುವ ಒಂದು ವಿಷಯದ ಕಲ್ಪನೆಯೂ ಆಗ ಇರಲಿಲ್ಲ. ಜನಸಂಖ್ಯೆಯ ಹೆಚ್ಚು ಮಂದಿಗೆ ತೊಡಲು ಅಂಗಿಯೇ ಇರಲಿಲ್ಲ. ಅಂಗಿ ಇದ್ದವರಿಗೆ ಅದರಲ್ಲಿ ಜೇಬು ಇರಲಿಲ್ಲ. ಜೇಬಿರುವ ಅಂಗಿ ಇದ್ದವರಿಗೆ ಅದರಲ್ಲಿ ಹಣವಿರಲಿಲ್ಲ. ಅಕಸ್ಮಾತ್ ಜೇಬಿನಲ್ಲಿ ಹಣವಿದ್ದರೂ ಕಾಳಸಂತೆಕೋರರಿಂದ ಅಂಗಡಿಗಳಲ್ಲಿ ದಿನಸಿ ಪದಾರ್ಥಗಳು ಸಿಕ್ಕುತ್ತಿರಲಿಲ್ಲ. ಎಲ್ಲರೂ ತಪ್ಪದೆ "ಏಕಾದಶಿ' ಆಚರಿಸುತ್ತಿದ್ದರು. ಆದರೆ ಅದು ಏಕಾದಶಿ ವ್ರತ ಆಗಿರಲಿಲ್ಲ. ಕೆಲವರಿಗೆ ವಾರಕ್ಕೆ ಎರಡು, ಮೂರು, ನಾಲ್ಕು ಏಕಾದಶಿಯೂ ಇತ್ತು!
ಹಳ್ಳಿಗಾಡಿನಲ್ಲಿ ವಾಸವಿದ್ದ ಬಹಳ ಮಂದಿ ಅನಕ್ಷರಸ್ಥರು. ಹಳ್ಳಿಗಳಲ್ಲಿ ಓದು-ಬರಹ ಬಂದವರ ಸಂಖ್ಯೆ ಬಹಳ ಕಡಿಮೆ. ಅನೇಕ ಹಳ್ಳಿಗಳಲ್ಲಿ ಯಾರೂ ಅಕ್ಷರಸ್ಥರೇ ಇರಲಿಲ್ಲ. ಮೂರನೆಯ ಪಂಚವಾರ್ಷಿಕ ಯೋಜನೆ (1961-66) ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಅನೇಕ ಶಾಲೆಗಳನ್ನು ತೆರೆಯಲಾಯಿತು. ನಾಲ್ಕೈದು ಗ್ರಾಮಗಳ ಮಧ್ಯದ ಒಂದು ಸ್ಥಳದಲ್ಲಿ ಇಂತಹ ಶಾಲೆಗಳನ್ನು ಕಟ್ಟುತ್ತಿದ್ದರು. ಹೆಚ್ಚಿನ ಗ್ರಾಮಸ್ಥರು ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಿರಲಿಲ್ಲ. ಬದಲಿಗೆ ಹೊಲ-ಗದ್ದೆಗಳಲ್ಲಿ ಕೆಲಸ ಮಾಡಿಕೊಂಡಿರಲಿ ಎಂದು ಅಭಿಪ್ರಾಯ ಪಡುತ್ತಿದ್ದರು. "ಮೂಲ ಶಿಕ್ಷಣ" (Basic Education) ಶಾಲೆಗಳು ಎನ್ನುವ ಯೋಜನೆಯಡಿ ಓದು-ಬರಹದ ಜೊತೆಯಲ್ಲಿ ಅನೇಕ ಕಸುಬುಗಳನ್ನು ಕಲಿಸುವ ವ್ಯವಸ್ಥೆ ಶುರುವಾಯಿತು.
ಆಗ ಅಮೇರಿಕಾ ದೇಶದಲ್ಲಿ ಪಿ. ಎಲ್. 480 (Public law - 480) ಅಥವಾ ಫುಡ್ ಫಾರ್ ಪೀಸ್ ಆಕ್ಟ್,, (Food for Peace Act, 1954) ಎನ್ನುವ ಕಾನೂನಿನನ್ವಯ ಹಿಂದುಳಿದ ದೇಶಗಳಿಗೆ ರವೆ, ಪಾಮ್ ಆಯಿಲ್ ಮತ್ತು ಹಾಲಿನ ಪುಡಿ ಸರಬರಾಜು ಮಾಡುತ್ತಿದ್ದರು. ಇವುಗಳನ್ನು ಉಪಯೋಗಿಸಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ವೇಳೆಯಲ್ಲಿ ಉಪ್ಪಿಟ್ಟು ಮತ್ತು ಹಾಲು ಕೊಡುತ್ತಿದ್ದರು. ಇದರಿಂದಲಾದರೂ ಮಕ್ಕಳು ತರಗತಿಗಳಿಗೆ ಬರಲಿ ಎನ್ನುವ ಪ್ರಲೋಭನೆ. ಕೆಲವು ಪೋಷಕರು ಶಾಲೆಯ ಬಳಿ ಕಾದಿದ್ದು ಮಧ್ಯಾನ್ಹದ ಉಪ್ಪಿಟ್ಟು-ಹಾಲಿನ ಸೇವನೆಯ ನಂತರ ಮಕ್ಕಳನ್ನು ಹೊಲದ ಕೆಲಸಗಳಿಗೆ ಕರೆದೊಯ್ಯುತ್ತಿದ್ದರು. ಈ ಕಾರಣಕ್ಕೆ ಮಧ್ಯಾನ್ಹ ತರಗತಿಗಳಿಗೆ ಹಾಜರಾತಿ ಕಡಿಮೆ. ಪರವಾಗಿಲ್ಲ, ಅರ್ಧ ದಿನವಾದರೂ ಮಕ್ಕಳು ಶಾಲೆಗೆ ಬರುತ್ತಾರಲ್ಲ ಎಂಬ ಸಂತೋಷ ಅಧ್ಯಾಪಕರುಗಳಿಗೆ.
*****
"ರಾಷ್ಟ್ರೀಯ ವಿಸ್ತರಣಾ ಯೋಜನೆ" (National Extension Service) ಎಂದು ಹೆಸರಿನ ಒಂದು ಕಾರ್ಯಕ್ರಮವನ್ನು ಭಾರತ ಸರ್ಕಾರ 1953ರಲ್ಲಿ ಪ್ರಾರಂಭಿಸಿತ್ತು. ಏನ್. ಈ. ಎಸ. ಎಂದು ಕರೆಸಿಕೊಳ್ಳುತ್ತಿದ್ದ ಈ ಆಫೀಸುಗಳ ಮೂಲಕ ಕೆಲವು ಉದ್ಯೋಗಿಗಳ ಸಹಾಯದಿಂದ ರೈತರಿಗೆ ವ್ಯವಸಾಯಕ್ಕೆ ಸಂಬಂಧಿಸಿದಂತಹ ಮಾಹಿತಿ ಮತ್ತು ಸವಲತ್ತುಗಳನ್ನು ಕೊಡಲಾಗುತ್ತಿತ್ತು. ಹಳ್ಳಿಗಳ ತುಂಬಾ ಅನಕ್ಷರಸ್ಥರೇ ಇದ್ದ ಕಾರಣ ಸರಕಾರಿ ಕಚೇರಿಗಳಿಗೆ ಕೊಡಬೇಕಾದ ಯಾವುದೇ ಅರ್ಜಿಗಳನ್ನು ತುಂಬಲು ರೈತಾಪಿ ಜನರು ವಿದ್ಯಾವಂತರನ್ನು ಆಶ್ರಯಿಸುತಿದ್ದರು. ಹಳ್ಳಿಗಳ ಶಾನುಭೋಗರು ಮತ್ತು ಉಪಾಧ್ಯಾಯರು ಈ ಕೆಲಸ ಮಾಡಿಕೊಡುತ್ತಿದ್ದರು. ಹಳ್ಳಿಯ ಜನರು ಇವರುಗಳ ಸಮಯ ಕಾದು ಆ ಕೆಲಸಗಳನ್ನು ಮಾಡಿಸಿಕೊಳ್ಳಬೇಕಿತ್ತು. ನಮ್ಮ ತಂದೆ ಇಂತಹ ಐದು ಹಳ್ಳಿಗಳ ನಡುವಿನಲ್ಲಿದ್ದ ಒಂದು ಬೇಸಿಕ್ ಎಜುಕೇಶನ್ ಮಾದರಿ (New Type Middle School ಅಥವಾ ಎನ್.ಟಿ.ಎಮ್.ಎಸ್.) ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದುದರಿಂದ ಶಾಲೆಯ ಹಿಂದಿನ ಸಣ್ಣ ಮನೆಯಲ್ಲಿ ನಮ್ಮ ವಾಸ. ಆ ಕಾರಣ ಸುತ್ತಲಿನ ಹಳ್ಳಿಗಳ ಜನರು ನಮ್ಮಲ್ಲಿಗೆ ಬಂದು ಇಂತಹ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು.
ಒಮ್ಮೆ ಒಬ್ಬ ಹಳ್ಳಿಗ ಇಂತಹ ಕೆಲಸಕ್ಕಾಗಿ ಒಂದು ಫಾರಂ ಹಿಡಿದುಕೊಂಡು ಭಾನುವಾರ ನಮ್ಮ ಮನೆಗೆ ಬಂದ. ಮನೆಯ ಮುಂದಿನ ಜಗಲಿಯಲ್ಲಿ ಈ ತರಹದ ಕೆಲಸ ನಡೆಯುತ್ತಿತ್ತು. ಬಂದವರೊಂದಿಗೆ ಸುತ್ತಮುತ್ತಿನ ವಿಷಯ ಮಾತಾಡುತ್ತ,, ಪ್ರಶ್ನೆಗಳನ್ನು ಕೇಳಿ, ವಿಷಯ ಸಂಗ್ರಹಣೆ ಮಾಡಿ, ಅರ್ಜಿ ತುಂಬುತ್ತಿದ್ದರು. ಮನೆಯಲ್ಲಿ ಒಂದು ಸ್ಟ್ಯಾಂಪ್ ಪ್ಯಾಡ್ ಇರುತ್ತಿತ್ತು. ಅದರಲ್ಲಿ ರೈತರ ಹೆಬ್ಬೆಟ್ಟಿಗೆ ಇಂಕು ಹಚ್ಚಿ ಅರ್ಜಿಯ ಮೇಲೆ ಹೆಬ್ಬೆಟ್ಟು ಹಾಕಿಸುವುದು ನನ್ನ ಕೆಲಸ. (ಸ್ಟ್ಯಾಂಪ್ ಪ್ಯಾಡ್ ಸಿಗದಿದ್ದ ಕಡೆ ಅಲ್ಲಿ ಓಡಾಡುತ್ತಿದ್ದ ಎತ್ತಿನ ಗಾಡಿಗಳ ಚಕ್ರದ ಏರೆ ಎಣ್ಣೆಯಲ್ಲಿ ಹೆಬ್ಬೆಟ್ಟು ಮಸಿ ಮಾಡಿಕೊಂಡು ಅರ್ಜಿದಾರರು ಬರುತ್ತಿದ್ದರು). ಬಂದ ಹಳ್ಳಿಗನ ಜೊತೆ ನಮ್ಮ ತಂದೆಯ ಸಂಭಾಷಣೆ ನಡೆಯುತ್ತಿತ್ತು. ಸ್ಟ್ಯಾಂಪ್ ಪ್ಯಾಡ್ ಹಿಡಿದು ನಾನು ಕಾಯುತ್ತಿದ್ದೆ. ಅರ್ಜಿ ತುಂಬಿದ್ದಾಯಿತು. ಹೆಬ್ಬೆಟ್ಟು ಹಾಕಿ, ಫಾರಂ ಪಡೆದು ಅವನು ತನ್ನ ಹಳ್ಳಿಗೆ ಹೊರಟ.
ಫಾರಂಗೆ ಹೆಬ್ಬೆಟ್ಟಿನ ಗುರ್ತು ಹಾಕುವಾಗ ನಾನು ಸ್ವಲ್ಪ ತಡ ಮಾಡಿದ್ದೆ. ಅದನ್ನು ಗಮನಿಸಿದ್ದ ತಂದೆಯವರು "ಏನು? ಫಾರಂ ನೋಡಿದೆಯಲ್ಲ. ಏನಾದರೂ ಅನುಮಾನವಿತ್ತೋ?" ಎಂದು ಕೇಳಿದರು. "ಹೌದು. 'ಏನು ಉದ್ಯೋಗ ಮಾಡಿಕೊಂಡಿದ್ದಿ?' ಎಂದು ನೀವು ಕೇಳಿದಿರಿ. 'ಅದೇ ಆರಂಭ ಸ್ವಾಮಿ' ಅಂತ ಅವನು ಹೇಳಿದ. ಆದರೆ ನೀವು ಉದ್ಯೋಗ ಅನ್ನುವ ಕಡೆ 'ವ್ಯವಸಾಯ' ಎಂದು ಬರೆದಿದ್ದೀರಿ. ಅದನ್ನೇ ನೋಡುತ್ತಿದ್ದೆ" ಎಂದು ಹೇಳಿದೆ.
"ಹೌದು. ಆಡು ಮಾತಿನಲ್ಲಿ 'ಆರಂಭ, ಬೇಸಾಯ, ಜೀರಾಯ್ತಿ' ಎಂದೆಲ್ಲ ಹೇಳುತ್ತಾರೆ. ಆದರೆ ಸರ್ಕಾರೀ ಭಾಷೆಯಲ್ಲಿ "ವ್ಯವಸಾಯ" ಎನ್ನುವುದು ಸರಿ. ಅದಕ್ಕೇ ಹಾಗೆ ಬರೆದಿದ್ದು" ಅಂದರು ಅಪ್ಪ. "ಅದು ಹೇಗೆ? ಯಾಕೆ ಆರಂಭ ಅನ್ನುತ್ತಾರೆ? ಅದಕ್ಕೆ ಅಂತ್ಯವಿಲ್ಲವೇ?" ಎಂದು ಕೇಳಿದೆ. "ಇಂದಿನಿಂದ ನಿನ್ನ ಸುತ್ತ ಮುತ್ತ ನಡೆಯುವ ವ್ಯವಸಾಯದ ಕೆಲಸಗಳನ್ನು ಗಮನಿಸು. ಅದಕ್ಕೆ ಉತ್ತರ ನೀನೇ ಕಂಡುಕೊಳ್ಳುವೆ. ಈಗ ನೀನು ಸುಮಾರಾಗಿ ಕನ್ನಡ ಬರೆಯಲು ಕಲಿತಿರುವೆ. ಇನ್ನು ಮುಂದೆ ನಾನು ಇಲ್ಲದ ಸಮಯದಲ್ಲಿ ಯಾರಾದರೂ ಇಂತಹ ಕೆಲಸಕ್ಕೆ ಬಂದರೆ ನೀನೇ ಮಾಡಿಕೊಡು. ಮೊದಮೊದಲು ಒಂದೆರಡು ತಪ್ಪಾಗಬಹುದು. ಕ್ರಮೇಣ ಸರಿಹೋಗುತ್ತದೆ. ಇದರಿಂದ ರೈತಾಪಿ ಜನಗಳೂ ನನಗೆ ಕಾಯುವುದೂ ತಪ್ಪುತ್ತದೆ" ಎಂದರು.
ಸುತ್ತಲಿನ ವಿದ್ಯಮಾನಗಳನ್ನು ಗಮನವಿಟ್ಟು ನೋಡುವುದರ ಜೊತೆ ಈ ರೀತಿ ಕೆಲಸಗಳನ್ನು ಮಾಡುವುದು ಪ್ರಾರಂಭವಾಯಿತು. ಹಳ್ಳಿಗರಿಗೂ ಸಂತೋಷವಾಗುತ್ತಿತ್ತು. ನಮ್ಮನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಸೀಬೆಕಾಯಿ, ಕಬ್ಬು, ಮಾವಿನಕಾಯಿ, ಆಲೆಮನೆ ಹಾಕಿರುವ ಕಡೆ ಕಬ್ಬಿನ ಹಾಲು ಮತ್ತು ಬಿಸಿ ಬೆಲ್ಲ, ಇತ್ಯಾದಿ ನಮಗೆ ಧಾರಾಳವಾಗಿ ಸಿಗುತ್ತಿತ್ತು!
*****
ಶಾಲಾ-ಕಾಲೇಜುಗಳಿಗೆ ಅರ್ಧವಾರ್ಷಿಕ (ದಸರಾ ರಜೆ) ಮತ್ತು ವಾರ್ಷಿಕ (ಬೇಸಿಗೆ ರಜೆ) ರಜೆ ಇರುತ್ತಿದ್ದವು. ಈಗಲೂ ಇವೆ. ಸರ್ಕಾರೀ ನೌಕರರಿಗೆ ಕೇಳಿದಾಗ ಹಕ್ಕಿನ ರಜೆ. ಪುರೋಹಿತರಿಗೆ ಅಂದಿನ ದಿನಗಳಲ್ಲಿ ಆಷಾಢ, ಶೂನ್ಯ ಮಾಸಗಳಲ್ಲಿ ಹೆಚ್ಚು ಕಡಿಮೆ ರಜೆಯೇ. ನಿರುದ್ಯೋಗಿಗಳಿಗೆ ಸರ್ವಕಾಲದ ರಜೆ. ಎರಡು ಕೆಲಸಗಳಿಗೆ ಮಾತ್ರ ರಜೆ ಇಲ್ಲ ಎಂದು ನಮ್ಮ ತಾಯಿಯವರು ಹೇಳುತ್ತಿದ್ದರು. ಮೊದಲನೆಯದು ಅಡಿಗೆ ಮನೆಗೆ. ಅದಕ್ಕೆ ರಜೆಯೇ ಇಲ್ಲ. ವಾಸ್ತವವಾಗಿ ರಜೆಯ ದಿನಗಳಲ್ಲಿ ಮನೆಯವರೆಲ್ಲಾ ಮನೆಯಲ್ಲಿಯೇ ಇರುತ್ತಿದ್ದರಿಂದ (ಅಂದಿನ ಕಾಲದಲ್ಲಿ) ಅಡಿಗೆ ಮನೆ ಜವಾಬ್ದಾರಿ ಹೊತ್ತವರಿಗೆ ಇನ್ನೂ ಹೆಚ್ಚಿನ ಕೆಲಸ! ಈಗಿನಂತೆ ಸ್ವೀಗ್ಗಿ, ಝೋಮ್ಯಾಟೊ ಎನ್ನುವುದು ಕನಸಿನಲ್ಲಿಯೂ ಇರಲಿಲ್ಲ.
ರಜೆಯಿರದ ಸದಾಕಾಲದ ಇನ್ನೊಂದು ಕೆಲಸ ವ್ಯವಸಾಯ. ಖುಷ್ಕಿ, ತರಿ ಮತ್ತು ಬಾಗಾಯ್ತು ಎಂದು ವರ್ಗೀಕರಿಸುತ್ತಿದ್ದರು. ಮಳೆಯ ಆಧಾರದ ಬೆಳೆ ತೆಗೆಯುವುದು ಒಂದು. ಕೆರೆ-ಕಟ್ಟೆ, ನಾಲೆಗಳ ಅಥವಾ ಬೋರೆವೆಲ್ ಮತ್ತು ಪಂಪ್ ಸೆಟ್ ನೀರಾವರಿ ನೀರಿನಿಂದ (ಆಗ ಬೋರೆವೆಲ್ ಕಾಣವು. ಅಲ್ಲೊಂದು ಇಲ್ಲೊಂದು ಏತ ನೀರಾವರಿ ಅಥವಾ ಕಪಿಲೆ ಇದ್ದವು) ಬೆಳೆ ತೆಗೆಯುವುದು ಇನ್ನೊಂದು. ಮೂರನೆಯದು ತೋಟಗಾರಿಕೆ. ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ಕೆಲಸ ಪ್ರತಿದಿನ ಇರುತ್ತಿತ್ತು.
- ಬೇಸಗೆಯಲ್ಲಿ ಕೆರೆ-ಕಟ್ಟೆ, ನದಿಗಳು ಒಣಗಿದಾಗ ಗೋಡು ಶೇಖರಣೆ ಮಾಡುವುದು. ಕೆರೆಗಳ, ನದಿಗಳ ಪಾತ್ರಕ್ಕೆ (ನೀರು ನಿಂತಿರುತ್ತಿದ್ದ ಅಥವಾ ಹರಿಯುತ್ತಿದ್ದ ಸ್ಥಳ) ಎತ್ತಿನ ಗಾಡಿಗಳಲ್ಲಿ ಹೋಗಿ, ಗುದ್ದಲಿ, ಸನಿಕೆಗಳಿಂದ ಗೋಡನ್ನು ತೆಗೆದು, ಗಾಡಿಗಲ್ಲಿ ತುಂಬಿಕೊಂಡು ಬಂದು ಹೊಲಗಳಲ್ಲಿ ಅಲ್ಲಲ್ಲಿ ಗುಡ್ಡೆ ಹಾಕುವುದು.
- ಮನೆಗಳಲ್ಲಿ ಮತ್ತು ಹಳ್ಳಿಯ ಹೊರಗಡೆ ತಿಪ್ಪೆಗಳಲ್ಲಿ ಶೇಖರವಾಗಿರುವ ಗೊಬ್ಬರಗಳನ್ನು ಎತ್ತಿನ ಗಾಡಿಗಳಲ್ಲಿ ಸಂಗ್ರಹಿಸಿ ಹೊಲಗಳಲ್ಲಿ ಅಲ್ಲಲ್ಲಿ ಗುಡ್ಡೆ ಹಾಕುವುದು.
- ಬಿತ್ತನೆಯ ಬೀಜಗಳನ್ನು ಶೇಖರಿಸುವುದು.
- ಈಗಿನಂತೆ ಆಗ ರಾಸಾಯನಿಕ ಗೊಬ್ಬರಗಳು ಇರಲಿಲ್ಲ. ಈಗ ಅದನ್ನೂ ಶೇಖರಿಸ ಬೇಕು.
- ಹಣ-ಕಾಸು ಹೊಂದಿಸುವುದು, ಸಹಕಾರ ಸಂಘ-ಬ್ಯಾಂಕುಗಳ ವ್ಯವಹಾರ.
- ಕಾಲ ಕಾಲಕ್ಕೆ ಜನ ಸಹಾಯದ ವ್ಯವಸ್ಥೆ. ಕೂಲಿ ಕಾರ್ಮಿಕರ ವ್ಯವಹಾರ.
- ಮಳೆ ಬಂದಂತೆ ಹೊಲಗಳ ಬಿತ್ತುವುದು. ಆಗ ನಾಡ ನೇಗಿಲುಗಳು ಮಾತ್ರ ಇದ್ದವು. ಮುಂದೆ ಕಬ್ಬಿಣದ ನೇಗಿಲುಗಳು ಬಂದವು. ಈಗಂತೂ ಟ್ರ್ಯಾಕ್ಟರುಗಳ ಕಾಲ.
- ಕೆಲವೆಡೆ ಮೊದಲ ಉತ್ತಿನ ಜೊತೆ ಹುರಳಿ ಬಿತ್ತಿ ಅದನ್ನೇ ಮುಖ್ಯ ಬೆಳೆಗೆ ಮುಂಚೆ ಗೊಬ್ಬರ ಮಾಡುವುದು.
- ಮತ್ತೆ ಮಳೆ ಬಂದಾಗ ಮತ್ತೊಮ್ಮೆ ಉಳುಮೆ.
- ನಂತರ ಗೊಬ್ಬರ-ಗೋಡುಗಳನ್ನು ಉತ್ತ ಮಣ್ಣಿನ ಜೊತೆ ಮಿಶ್ರಣ ಮಾಡುವುದು.
- ಸಮಯ ನೋಡಿ, ಕೂರಿಗೆಯಿಂದ ರಾಗಿ ಮತ್ತು ಸಾಲು ಬೆಳೆಗಳ ಬಿತ್ತುವುದು.
- ಭತ್ತದ ಬೆಳೆ ಆದರೆ "ಒಟ್ಲು" ಬಿಟ್ಟು ಸಮಯ ನೋಡಿ "ನಾಟಿ" ಮಾಡುವುದು.
- ಇತರೆ ಬೆಳೆಗಳಿಗೆ (ಕಡಲೆಕಾಯಿ, ತರಕಾರಿಗಳು, ಮುಂತಾದುವು) ಅವಕ್ಕೆ ಬೇಕಾದಂತೆ ಬಿತ್ತನೆ.
- ತೆಂಗು, ಮಾವು ಮುಂತಾದುವಕ್ಕೆ ಗುಂಡಿ ಹೊಡೆದು, ಸಸಿ ತಂದು ನೆಡುವುದು.
- ಎರ್ರಾಬಿರ್ರಿ ಬೆಳೆದ ಸಸಿಗಳನ್ನು ಕುಂಟೆ ಹೊಡೆದು ನಾಶಮಾಡುವುದು.
- ಕಳೆ ತೆಗೆಯುವುದು. ಇದೊಂದು ಮುಖ್ಯ ಕೆಲಸ. ಹೀಗೆ ಮಾಡದಿದ್ದರೆ ನಾವೇ ಹಾಕಿದ ಗೊಬ್ಬರ, ನೀರು ಉಪಯೋಗಿಸಿಕೊಂಡು ಕಳೆಗಳು ಹುಲುಸಾಗಿ ಬೆಳೆಯುತ್ತವೆ!
- ಸಮಯಕ್ಕೆ ನೀರಿನ ವ್ಯವಸ್ಥೆ ಮಾಡುವುದು. ಇದು ಗದ್ದೆಗಳಿಗೆ ಮತ್ತು ತೋಟಗಳಿಗೆ.
- ಮತ್ತೆ ಸಮಯ ಕಾದು ಮೇಲುಗೊಬ್ಬರ ಕೊಡುವುದು. (ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ!)
- ಕೀಟನಾಶಕಗಳನ್ನು ಸಿಂಪಡಿಸುವುದು.
- ಎಲ್ಲಾ ಕಾಲದಲ್ಲೂ, ಮುಖ್ಯವಾಗಿ ಫಸಲು ಬರುವ ವೇಳೆ, ಪ್ರಾಣಿಗಳಿಂದ ಮತ್ತು ಕಳ್ಳ-ಕಾಕರಿಂದ ರಕ್ಷಿಸುವುದು.
- ಟೊಮೇಟೊ. ಹೀರೆ, ಪಡವಲ ಮುಂತಾದುವಕ್ಕೆ ಕಡ್ಡಿ ನೆಡುವುದು, ಚಪ್ಪರ ಹಾಕುವುದು.
- ಇಲಿಗಳಿಂದ, ಪಕ್ಷಿಗಳಿಂದ ಮತ್ತು ಕೀಟಗಳಿಂದ ರಕ್ಷಿಸುವುದು.
- ಬಿರುಗಾಳಿ ಮತ್ತು ಅಕಾಲಿಕ ಮಳೆ ನೋಡಿಕೊಂಡು ಸಾಧ್ಯವಾದಷ್ಟು ಬೆಳೆ ಕಾಪಾಡುವುದು.
- ಕೆಲವು ಬೆಳೆಗಳಿಗೆ ರಾತ್ರಿ ಕಾವಲು ಕಾಯುವುದು.
- ಸಮಯಕ್ಕೆ ಸರಿಯಾಗಿ ಕಟಾವು ಮಾಡುವುದು.
- ಕಟಾವು ಮಾಡಿದ ಫಸಲನ್ನು ಗುಡ್ಡೆ ಹಾಕುವುದು; ಮೆದೆ ಮಾಡುವುದು.
- ತೆನೆಗಳನ್ನು ಬಡಿದು ತೂರುವುದು. (ಗಾಳಿಬಂದಾಗ ತೂರಿಕೋ!)
- ಧಾನ್ಯಗಳನ್ನು ಮೂಟೆ ಮಾಡಿ ಗಾಡಿಗಳಲ್ಲಿ ಮನೆಗೆ ಸಾಗಿಸುವುದು.
- ತರಕಾರಿ ಬೆಳೆದರೆ ಕಾಲಕಾಲಕ್ಕೆ ಕಟಾವು ಮಾಡಿ ಮಾರಾಟ.
- ಕಬ್ಬು ಬೆಳೆದರೆ ಸಕ್ಕರೆ ಕಾರ್ಖಾನೆಗೆ ಸಾಗಿಸುವುದು. ಇಲ್ಲದಿದ್ದರೆ ಆಲೆಮನೆ ಕೆಲಸ.
- ತಂದ ಮೂಟೆಗಳನ್ನು, ಧಾನ್ಯವನ್ನು ವಾಡೆ, ಗುಡಾಣ, ಕಣಜ, ಹಗೇವುಗಳಲ್ಲಿ ಶೇಖರಿಸುವುದು.
- ಹೀಗೆ ಶೇಖರಿಸಿದ ಧಾನ್ಯಗಳ ರಕ್ಷಣೆ. ಆಗಾಗ ಪರಿಶೀಲನೆ, ಇಲಿ, ಕೀಟಗಳಿಂದ ರಕ್ಷಣೆ.
- ಹುಲ್ಲಿನ ಮೆದೆ, ಬಣವೆಗಳನ್ನು ಬೆಂಕಿ, ಗೆದ್ದಲು, ಮಳೆ ಇತ್ಯಾದಿಗಳಿಂದ ರಕ್ಷಿಸುವುದು.
- ಮುಂದಿನ ಬೆಳೆಗೆ ನೇಗಿಲು, ಕೃಷಿ ಯಂತ್ರಗಳ ದುರಸ್ತಿ.
- ಮತ್ತೆ ಗೊಬ್ಬರ, ಗೋಡು ಶೇಖರಣೆ.
- ಮುಂದಿನ ಕೃಷಿ ಚಕ್ರ.....
ಇಂದಿನ ತಲೆಮಾರಿಗೆ ಮೇಲೆ ಹೇಳಿದ ಅನೇಕ ಪದಗಳೇ ಗೊತ್ತಿಲ್ಲ. ಅವುಗಳ ಉಪಯೋಗವೇ ನಿಂತುಹೋಗುತ್ತಿದೆ. ಅವಕ್ಕೆ ಸರಿಯಾಗಿ ಸಮಾನಾಂತರ ಹೊಸ ಪದಗಳೂ ಬಂದಿವೆ.
ಇಂದಿನ ಯುವ ಜನಾಂಗ ಆರಂಭ, ಜೆರಾಯ್ತಿ, ಬೇಸಾಯ, ವ್ಯವಸಾಯ ಎನ್ನುವುದೇ ಇಲ್ಲ. ಇಂದಿನ ಕನ್ನಡದ "ಅಗ್ರಿಕಲ್ಚರು" ಎಂದುಬಿಡುತ್ತಾರೆ.
ಕೃಷಿಯ ಜೊತೆ ಪಶುಪಾಲನೆ ಇದ್ದೇ ಇರುತ್ತದೆ. ಹಸು-ಕರು, ಎತ್ತು-ಹೋರಿ, ಕುರಿ-ಮೇಕೆ, ಕೋಳಿ, ಹಂದಿ,ಮುಂತಾದುವು. ಇವು ನಮ್ಮಂತೇ ಜೀವಿಗಳಾದದ್ದರಿಂದ ಪ್ರತಿದಿನ ಆಹಾರ, ಶುಚಿ, ಕಾಯಿಲೆ-ಕಸಾಲೆ ಮೊದಲಾದುವುಗಳ ನಿರ್ವಹಣೆ. ಹಾಲು ಕರೆದು, ಮೊಸರು, ಬೆಣ್ಣೆ ಮಾಡಿ ತುಪ್ಪ ತೆಗೆಯುವುದು, ಅವುಗಳ ವಿಲೇವಾರಿ. ಇವೇ ಮುಂತಾದ ಒಂದರ ಮೇಲೆ ಒಂದು ಕೆಲಸ........
ಹೀಗೆ ನಿರಂತರ. ನಿಲ್ಲದ ಚಟುವಟಿಕೆ. ಅಂತ್ಯವಿಲ್ಲದ ಕೆಲಸ. ಅದರಿಂದಲೇ ಇದು "ಆರಂಭ" ಮಾತ್ರ.
ಅಂತ್ಯವೇ ಇಲ್ಲದ ಆರಂಭ.
*****
ಹಿಂದಿನ ಬೆಳೆ ಚಕ್ರ ಮುಗಿಯುತ್ತಿರುವಂತೆಯೇ ಮುಂದಿನ ಬೆಳೆ ಚಕ್ರದ ಪ್ರಾರಂಭ. ಕವಿ ಗೋಪಾಲಕೃಷ್ಣ ಅಡಿಗರು ಯುಗಾದಿಗೆ ಕವಿತೆಯೊಂದು ಬರೆದಿದ್ದರು. "ಮತ್ತೆ ಮತ್ತೆ ಯುಗಾದಿ; ಯಾವುದಕೆ ಹಾದಿ? ಕಂಭ ಸುತ್ತುವತೆರದಿ ವೃತ್ತ ಗತಿಯೇ ಅನಾದಿ" ಎಂದು. ಸರಳರೇಖೆಗೆ ಮೊದಲು, ಕೊನೆ ಉಂಟು. ವೃತ್ತಕ್ಕೆ ಕೊನೆ ಮೊದಲೆಲ್ಲಿ? ವ್ಯವಸಾಯಕ್ಕೆ ಕೊನೆ ಮೊದಲೆಲ್ಲಿ?
ಆರಂಭಕ್ಕೆ ಅಂತ್ಯವೆಲ್ಲಿ?
ಅದಕ್ಕೆ ಅದನ್ನ ಆರಂಭ ಅನ್ನೋದು :)
ReplyDeleteಕೃಷಿಯಬಗ್ಗೆ ಕೃಷಿಕರೂ ತಲೆದೂಗುವಂತೆ ವಿವರವಾಗಿ ಬರೆದದ್ದು ಓದಿ ಸಂತೋಷವಾಯಿತು. ಕೃಷಿಯಲ್ಲಿ “ಆರಂಭ” ದ ಅರ್ಥವನ್ನು ಸೊಗಸಾಗಿ ಬಣ್ಣಿಸಿದ್ದಕ್ಕೆ ಧನ್ಯವಾದಗಳು.
ReplyDeleteIt was a great pleasure to read and learn about ಆರಂಭ in agriculture. The narrative is beautiful.
ReplyDeleteBest regards...SA