Monday, February 3, 2025

ಕುಂಭ ಸ್ನಾನ ಮತ್ತು ಪಾಪ ಪರಿಹಾರ


ಈಗ ಕೆಲವು ದಿನಗಳಿಂದ ಎಲ್ಲಿಲ್ಲಿ ನೋಡಿದರೂ, ಕೇಳಿದರೂ "ಪ್ರಯಾಗರಾಜ್" ಮತ್ತು ಅಲ್ಲಿ ನಡೆಯುತ್ತಿರುವ "ಕುಂಭ ಮೇಳ", ಅಲ್ಲಿ ಪ್ರತಿದಿನ ನೆರೆದು ಪುಣ್ಯ ಸ್ನಾನ ಮಾಡುತ್ತಿರುವ ಕೋಟ್ಯಾಂತರ ಮಂದಿ ಶ್ರದ್ದಾಳು ಜನರ ಸಮೂಹದ ವಿಷಯವೇ. ಅಲ್ಲಿ ದೇಶದ ನಾನಾ ಕಡೆಗಳಿಂದ ಮತ್ತು ವಿದೇಶಗಳಿಂದ ಹರಿದು ಬರುತ್ತಿರುವ ಜನಸಾಗರ, ಅಲ್ಲಿ ಮಾಡಲಾಗಿರುವ ವ್ಯವಸ್ಥೆಗಳು, ಕಾಲ್ತುಳಿತದಿಂದ ಅನೇಕ ಜನ ಸಾವನ್ನಪ್ಪಿದ ಪ್ರಸಂಗ, ಇವುಗಳ ಚರ್ಚೆಯೇ ಆಗಿದೆ. "ಅಲ್ಲಿ ಸ್ನಾನ ಮಾಡಿದರೆ ಬಡತನ ನಿರ್ಮೂಲನ ಆಗುತ್ತದೆಯೇ?" ಎಂದು ಪ್ರಶ್ನಿಸುವವರು ಕೆಲವರು. ಅಲ್ಲಿ ಹೋಗಿ ಸ್ನಾನ ಮಾಡಿದರೆ ಸಕಲ ಪಾಪಗಳೂ ಪರಿಹಾರ ಆಗುತ್ತವೆ ಎಂದು ವಾದಿಸುವವರು ಕೆಲವರು. "ಅದು ಹೇಗೆ ಸಾಧ್ಯ?" ಎಂದು ಕೇಳುವವರು ಮತ್ತೆ ಕೆಲವರು. "ಕೇವಲ ಪಾಪ ಪರಿಹಾರ ಮಾತ್ರವಲ್ಲ, ಕೈವಲ್ಯವೇ ಸಿಗುತ್ತದೆ" ಎಂದು ಬೇರೆ ಕೆಲವರು. ಈ ಅನೇಕ ಅಭಿಪ್ರಾಯಗಳಲ್ಲಿ ಯಾವುದು ಸರಿ ಎಂದು ಚರ್ಚೆಯಲ್ಲಿಯೇ ಕಾಲ ಕಳೆಯುತ್ತಿರುವವರೂ ಉಂಟು. 

ಕುಂಭ ಮೇಳಕ್ಕೆ ಮಾಡಿದ ಖರ್ಚು, ಅದರ ಅವಶ್ಯಕತೆ, ಆ ಮೇಳದಿಂದ ಬರುವ ಸಂಪಾದನೆ, ಉದ್ಯೋಗ ಸೃಷ್ಟಿ, ಮುಂತಾದವನ್ನು ಅರ್ಥ ಶಾಸ್ತ್ರಿಗಳಿಗೆ ಬಿಡೋಣ. ಎಲ್ಲರಂತೆ ನಮಗೂ ನಮ್ಮ ಅಭಿಪ್ರಾಯ ಹೊಂದಿರುವ ಹಕ್ಕು ಇದೆಯಲ್ಲ! ಕುಂಭ ಮೇಳದಂತಹ ಪರ್ವ ಕಾಲದಲ್ಲಿ ಪ್ರಯಾಗದಂತಹ ವಿಶೇಷ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಸಿಗುವ ಭಾವನಾತ್ಮಕ ಸಮಾಧಾನದ ಬಗ್ಗೆ ಸ್ವಲ್ಪ ನೋಡೋಣ. 

*****

ನಮ್ಮ ಪುರಾತನ ಗ್ರಂಥಗಳು, ಪುರಾಣ, ಪುಣ್ಯ ಕಥೆಗಳಲ್ಲಿ ಅನೇಕ ಕಡೆ ಕೆಲವು ಕೆಲಸಗಳನ್ನು ಮಾಡುವುದರಿಂದ ಪಾಪ ಪರಿಹಾರ ಆಗುತ್ತದೆ ಎಂದು ಹೇಳಿವೆ. ಇಷ್ಟು ಮಾತ್ರವಲ್ಲ, ಪಾಪಗಳನ್ನೂ ಕಳೆದುಕೊಳ್ಳುವುದಕ್ಕೆ ಪ್ರಾಯಶ್ಚಿತ್ತ ಕ್ರಿಯೆಗಳನ್ನೂ ಹೇಳಿವೆ. ಅನೇಕ ಸಂದರ್ಭಗಳಲ್ಲಿ "ಹೀಗೆ ಮಾಡುವುದರಿಂದ ಮುಕ್ತಿ ಸಿಗುತ್ತದೆ" ಎಂದೂ ಹೇಳಿವೆ. ಮನುಷ್ಯನ ಜೀವನದಲ್ಲಿ ಅನೇಕ ತಪ್ಪುಗಳು ಆಗುತ್ತವೆ. ಕೆಲವು ತಪ್ಪುಗಳು ನಮಗೆ ತಿಳಿಯದೆಯೇ ಆಗುತ್ತವೆ. ಮತ್ತೆ ಕೆಲವು ತಪ್ಪುಗಳನ್ನು ನಾವು ತಿಳಿದೂ ತಿಳಿದೂ ಮಾಡುತ್ತೇವೆ. "ಪ್ರಮಾದ" ಎನ್ನುವ ಒಂದು ಪದವಿದೆ. ತಪ್ಪುಗಳನ್ನು ಇದು ಸಣ್ಣ ತಪ್ಪು, ಇದು ದೊಡ್ಡ ತಪ್ಪು, ಎಂದು ವರ್ಗೀಕರಿಸಿ ಈ ಪ್ರಮಾದ ಎನ್ನುವ ಪದವನ್ನು "ದೊಡ್ಡ ತಪ್ಪು" ಎಂದು ಸೂಚಿಸಲು ಪ್ರಯೋಗಿಸುತ್ತಾರೆ. ವಾಸ್ತವವಾಗಿ ಪ್ರಮಾದ ಎಂದರೆ ಒಮ್ಮೆ ತಪ್ಪು ಮಾಡಿ, ಅದು ತಪ್ಪು ಎಂದು ಗೊತ್ತಾದರೂ ತಿದ್ದಿ ಕೊಳ್ಳದೆ ಮತ್ತೆ ಅದೇ ತಪ್ಪು ಮಾಡುವುದು. ಪದಗಳ ತಪ್ಪು ಬಳಕೆ ಹೆಚ್ಚಾಗಿ, ಎಲ್ಲರೂ ಅದನ್ನೇ ಬಳಸಿ, ಕಡೆಗೆ ಅದೇ ಸರಿಯಾದುದು ಎಂದು ಗಟ್ಟಿಯಾಗಿ ನಿಲ್ಲುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ. 

ಅನೇಕ ವ್ರತ ಕಥೆಗಲ್ಲಿ ಕಡೆಗೆ ಈ "ವ್ರತ ಮಾಡುವುದರಿಂದ ಮುಕ್ತಿ ಸಿಗುತ್ತದೆ" ಎಂದು ಹೇಳುತ್ತವೆ. ಮುಕ್ತಿ ಎಂದರೆ "ಬಿಡುಗಡೆ". ಯಾವುದರಿಂದ ಮುಕ್ತಿ? ಈಗ ಇರುವ ಕಷ್ಟದ ಪರಿಸ್ಥಿತಿಯಿಂದ ಬಿಡುಗಡೆ ಆದರೆ ಅದೂ ಒಂದು ಮುಕ್ತಿ. ಈ ಜನ್ಮದಿಂದ ಬಿಡುಗಡೆಯಾದರೆ ಅದೂ ಒಂದು ಮುಕ್ತಿಯೇ. ಕಟ್ಟಕಡೆಗೆ ಜೀವನ್ಮರಣ ಚಕ್ರದಿಂದ ಬಿಡುಗಡೆ ಆಗುವುದೂ ಒಂದು ಮುಕ್ತಿಯೇ! ಬಹಳ ಕಾಲ ಹಾಸಿಗೆ ಹಿಡಿದು, ನರಳಿ, ನರಳಿ ಒಬ್ಬ ವ್ಯಕ್ತಿ ಸತ್ತರೆ "ಬಹಳ ಕಷ್ಟ ಪಟ್ಟ. ಸದ್ಯ, ಬದುಕಿದ" ಎನ್ನುತ್ತಾರೆ. ಎದುರುಗಡೆ ಸತ್ತು ಬಿದ್ದಿದ್ದಾನೆ. ಆದರೂ "ಬದುಕಿದ" ಎನ್ನುತ್ತಾರೆ. "ಅಂತೂ ಇಂದಿಗೆ ಅವನಿಗೆ ಬಿಡುಗಡೆ ಆಯಿತಪ್ಪ" ಅನ್ನುತ್ತಾರೆ. ಅನೇಕ ಸಂದರ್ಭಗಳಲ್ಲಿ ಬದುಕಿ ನರಳುತ್ತಿರುವ ವ್ಯಕ್ತಿ ಮತ್ತು ಅವನ ಜನ ಸಾವಿಗಾಗಿ ಪ್ರಾರ್ಥಿಸುವುದೂ ಉಂಟು. ಅದು ಬಂದಾಗ "ಈ ಹಿಂಸೆಯಿಂದ ಮುಕ್ತಿಯಾಯಿತು" ಅನ್ನುವುದೂ ಉಂಟು. 

*****

ಅಮರ ಎನ್ನುತ್ತೇವೆ. ಸಾವಿಲ್ಲದವರು ಎನ್ನುತ್ತೇವೆ. ಸಮುದ್ರ ಮಥನ ಮಾಡಿ ಅಮೃತ ತರಲಾಯಿತು. ಅಮೃತ ಸೇವಿಸಿದವರು ಅಮರಾದರು. ಅವರಿಗೆ ಸಾವಿಲ್ಲ. ಎಲ್ಲಿಯವರೆಗೆ? ಅಮೃತದ ಒಡೆಯ ಯಾರು? ದೇವತೆಗಳ ನಾಯಕನಾದ ದೇವೇಂದ್ರ. ಮಿಕ್ಕೆಲ್ಲ ದೇವತೆಗಳು ಅವನ ಆಳ್ವಿಕೆಗೆ ಒಳಪಟ್ಟವರು. ಅಮೃತ ಅವನಿಗೆ ಸಿಕ್ಕಷ್ಟು ಬೇರಾರಿಗೂ ಸಿಕ್ಕದು. ಅಂದರೆ ಅವನು ಎಲ್ಲಿಯವರೆಗೆ ಅಮರ? ಅಮೃತ ಕುಡಿದು ಅಮರಾದವರೂ ಒಂದು ಕಾಲದ ಮಿತಿವರೆಗೆ ಮಾತ್ರ ಅಮರರು. ಈಗ ನಡೆಯುತ್ತಿರುವುದು ವೈವಸ್ವತ ಮನ್ವಂತರ. ಈ ಮನ್ವಂತರದ ಕಡೆಯವರೆಗೂ ಇತರ ದೇವತೆಗಳ ಜೊತೆ ಅವನೂ ಅಮರ. 

ದೇವೇಂದ್ರನ ಯೋಗ್ಯತೆ ಬಹಳ ದೊಡ್ಡದು. ಅನೇಕ ಸಾಧನೆಗಳನ್ನು ಮಾಡಿ ಸ್ವರ್ಗದ ಅಧಿಪತ್ಯ ಸಿಕ್ಕಿದೆ. ಬಲಿ ಚಕ್ರವರ್ತಿಯ ಯೋಗ್ಯತೆ ಎಷ್ಟು ದೊಡ್ಡದು ಎಂದು ತಿಳಿದಾದರೂ ದೇವೇಂದ್ರನ ಬಗ್ಗೆ ನಮಗೆ ಇರುವ ದುರಭಿಪ್ರಾಯವನ್ನು ಬಿಡಬೇಕು. ಸಿನಿಮಾಗಳಲ್ಲಿ ದೇವೇಂದ್ರನನ್ನು ಒಬ್ಬ ಖಳನಾಯಕನಂತೆ ತೋರಿಸಿ, ಆ ಚಲನಚಿತ್ರಗಳನ್ನು ಅನೇಕ ಬಾರಿ ನೋಡಿ, ನಮಗೆ ದೇವೇಂದ್ರನ ನಿಜವಾದ ಸ್ವರೂಪವೇ ತಿಳಿಯದಾಗಿದೆ! 

ಎಲ್ಲ ಜೀವಿಗಳನ್ನೂ ಅವರ ಪಾಪಗಳಿಗೆ ತಕ್ಕಂತೆ ನರಕಗಳಲ್ಲಿ ಹಾಕಿ ಶಿಕ್ಷಿಸುವವನು ಯಮಧರ್ಮ. ಅವನಿಗೆ ಎರಡು ರೂಪಗಳು. ಪುಣ್ಯಾತ್ಮರು ನೋಡುವ ಸೌಮ್ಯವಾದ ಧರ್ಮ ರೂಪ. ಆ ರೂಪಿನಲ್ಲಿ ಅವನನ್ನು ನೋಡುವುದೇ ಒಂದು ದೊಡ್ಡ ಪುಣ್ಯವಂತೆ. ಪಾಪಿಗಳು ನೋಡುವುದು ಅವನ ಭೀಕರವಾದ ಯಮ ರೂಪ. ಅಂತಹ ಯಮನೇ ಕಠೋಪನಿಷತ್ತಿನಲ್ಲಿ ಹೇಳುತ್ತಾನೆ: "ಮಹಾಪ್ರಳಯ ಕಾಲದಲ್ಲಿ ಆ ಪರಮ ಪುರುಷನು ಎಲ್ಲವನ್ನೂ ನುಂಗುತ್ತಾನೆ. ಆ ಮಹಾ ಭೋಜನದಲ್ಲಿ ನಾನು ಕೇವಲ ಒಂದು ಉಪ್ಪಿನಕಾಯಿ!"

ಈ ಮನ್ವಂತರದ ಕಡೆಯಲ್ಲಿ ಬರುವ ಮಹಾಪ್ರಳಯದಲ್ಲಿ ಈ ಎಲ್ಲ ದೇವತೆಗಳೂ ತಮ್ಮ ಜೀವಿತ ಕಾಲಾವಧಿ ಮುಗಿಸುತ್ತಾರೆ. ಅವರ ನಾಯಕನಾದ ದೇವೇಂದ್ರನೂ ಸಹ. ಮುಂದಿನ ದೇವೇಂದ್ರನು ಕಾಯುತ್ತಿದ್ದಾನೆ. ಅವನು ಯಾರೆಂದು ಎಲ್ಲರಿಗೂ ಗೊತ್ತು. ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ವಾಮನನು ಅವನಿಗೆ ಮುಂದಿನ ಸಾವರ್ಣಿ ಮನ್ವಂತರದಲ್ಲಿ ದೇವೇಂದ್ರನ ಪಟ್ಟವನ್ನು ಕಾಯಿದಿರಿಸಿದ್ದಾನೆ! ಮತ್ತೊಂದು ಹೊಸ ದೇವತೆಗಳ ತಂಡ ಅಧಿಕಾರ ವಹಿಸಲು ತಯಾರಾಗಿದೆ. 

ಅಮೃತ ಮಥನದ ನಂತರ ಅಮೃತದ ಬಿಂದುಗಳು ಭೂಮಿಯ ಮೇಲೆ ಬಿದ್ದವು. ಅವು ಬಿದ್ದ ನಾಲ್ಕು ಕಡೆಗಳಲ್ಲಿ ಅದರ ನೆನಪಾಗಿ ಕುಂಭ ಮೇಳ ನಡೆಯುತ್ತವೆ. ಪ್ರಯಾಗ, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕಗಳಲ್ಲಿ. ಆ ಅಮೃತ ಕಲಶದ ಅಧಿಪತಿಯಾದ ದೇವೇಂದ್ರನೇ ಈ ವೈವಸ್ವತ ಮನ್ವಂತರದ ಕಡೆಯಲ್ಲಿ ಹೋಗುತ್ತಾನೆ. ಆ ಕಲಶದಿಂದ ಭೂಮಿಯ ಮೇಲೆ ಅಮೃತದ ತೊಟ್ಟುಗಳು ಬಿದ್ದ ಸ್ಥಳಗಳಲ್ಲಿ ನಡೆಯುವ ಕುಂಭ ಮೇಳಗಳಲ್ಲಿ ಪುಣ್ಯ ಸ್ನಾನ ಮಾಡುವ ಮಂದಿ ಹೇಗೆ ಅಮರರಾಗುತ್ತಾರೆ?

*****

ಎಂ. ವಿ ಕೃಷ್ಣ ಸ್ವಾಮಿ ಎಂಬ ಚಲನಚಿತ್ರ ನಿರ್ಮಾಪಕ-ನಿರ್ದೇಶಕರೊಬ್ಬರು ಇದ್ದರು. ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಅವರು ಎತ್ತಿದ ಕೈ. ಸಾರ್ವಕಾಲಿಕ ಶ್ರೇಷ್ಠ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ, ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರ ಬಗ್ಗೆ ಅವರು ತಯಾರಿಸಿದ ಸಾಕ್ಷ್ಯಚಿತ್ರಗಳು ಬಹಳ ಹೆಸರು ಮಾಡಿದವು. ದೊಡ್ಡ ಸೆಟ್ಟುಗಳ, ಕನಸಿನ ರಾಜ್ಯದ ಚಲನಚಿತ್ರಗಳ ನಿರ್ಮಾಪಕ, ನಿರ್ದೇಶಕರಾದ ಹೆಸರಾಂತ ವಿ. ಶಾಂತಾರಾಮ್ ಅವರ ಹೆಸರಿನ ಪ್ರಶಸ್ತಿ ತಮ್ಮ ಜೀವಿತಕಾಲದ ಸಾಧನೆಗಾಗಿ ಕೃಷ್ಣಸ್ವಾಮಿಯವರಿಗೆ ಲಭಿಸಿತ್ತು. ಹಿಂದಿನ ಶತಮಾನದ ನಲವತ್ತನೆಯ ದಶಕದಲ್ಲಿ ಹೊರದೇಶಗಳಲ್ಲಿ ಚಿತ್ರ ಜಗತ್ತಿನಲ್ಲಿ ಕೆಲಸ ಮಾಡಿದ ಸಾಧನೆ ಅವರದು. ಇಟಲಿಯ ಪ್ರಸಿದ್ಧ ನಿರ್ಮಾಪಕ ರೊಬೆರ್ಟೋ ರೊಸ್ಸೆಲಿನಿ ಮತ್ತು ಇಂಗ್ರಿಡ್ ಬೆರ್ಗ್ಮನ್ ಮುಂತಾದವರ ಜೊತೆ ಕೆಲಸ ಮಾಡಿ ಸೈ ಎನ್ನಿಸಿಕೊಂಡವರು ಅವರು. "ಓವರ್ಸಿಸ್ ಫಿಲಂ ಕ್ಲಬ್"ನ ಕಾರ್ಯದರ್ಶಿಗಳಾಗಿದ್ದರು. ಭಾರತೀಯ ಫಿಲ್ಮ್ಸ್ ಡಿವಿಷನ್. ಏನ್. ಎಫ್. ಡಿ. ಸಿ., ಸೆನ್ಸಾರ್ ಬೋರ್ಡ್ ಮತ್ತನೇಕ ಚಲನಚಿತ್ರ ಸಂಬಂಧಿತ ಸಂಸ್ಥೆಗಳಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದವರು ಅವರು. ಹಿಂದಿನ ತಲೆಮಾರಿನ ಅನೇಕ ನಿಆರ್ದೇಶಕರು ಎಂ. ವಿ. ಕೃಷ್ಣಸ್ವಾಮಿಯವರನ್ನು ತಮ್ಮ ಗುರುಗಳು ಎಂದು ತಿಳಿದಿದ್ದರು. 



ಕೃಷ್ಣಸ್ವಾಮಿಯವರು ವಾಣಿಜ್ಯ ಚಿತ್ರಗಳನ್ನೂ ನಿರ್ಮಿಸಿದವರು. ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಎಸ. ಕೃಷ್ಣಮೂರ್ತಿ ಅವರ ಅಮೋಘ ಸಂಗೀತದ ಹೆಸರಾಂತ ಚಿತ್ರ "ಸುಬ್ಬಾಶಾಸ್ತ್ರಿ" ಅವರು ನಿರ್ಮಿಸಿ ನಿರ್ದೇಶಿಸಿದ ಚಿತ್ರವೆಂದು ಅನೇಕರಿಗೆ ಗೊತ್ತಿಲ್ಲ. ಆ ಚಿತ್ರದ ಬಾಲ ಮುರಳಿ ಕೃಷ್ಣ ಅವರು ಹಾಡಿರುವ ಹಾಡುಗಳು ಈಗಲೂ ಜನಪ್ರಿಯ. ಅವರು ನಿರ್ದೇಶಿಸಿದ ಇನ್ನೊಂದು ಹೆಸರಾದ ಚಲನಚಿತ್ರ ಈ ಜೋಡಿ ಎರಡು ಜೊತೆ-ಜೊತೆ ಪದಗಳ ಹೆಸರು ಹೊಂದಿದೆ. ಅದೇ "ಪಾಪ ಪುಣ್ಯ" ಚಲನಚಿತ್ರ. 


ಪ್ರೊಫೆಸರ್ ಎಂ. ವಿ. ಸೀತಾರಾಮಯ್ಯ ಅವರ ಒಂದು ನಾಟಕ "ಶ್ರೀಶೈಲ ಶಿಖರ". ಅದೊಂದು ಜಾನಪದ ಕಥೆಗಳಿಂದ ಪ್ರೇರಿತವಾದದ್ದು. ಆ ನಾಟಕದ ಆಧಾರದ ಮೇಲೆ ಈ ಚಿತ್ರ ನಿರ್ಮಿಸಿದ್ದಾರೆ. "ನಾವು ಬಂದೆವ, ನಾವು ಬಂದೆವ, ನಾವು ಬಂದೆವ ಶ್ರೀಶೈಲ ನೋಡೋದಕ್ಕ, ಸ್ವಾಮಿ ಸೇವಾ ಮಾಡಿ ಮುಂದೆ ಹೋಗೋದಕ್ಕ..." ಎನ್ನುವ ಗೀಗೀ ಪದ ಈ ಚೈತ್ರದ್ದೇ. ಅಂದಿನ ಹೆಸರಾಂತ ಕಲಾವಿದರಾದ ಕಲ್ಯಾಣ್ ಕುಮಾರ್, ಬಿ. ಸರೋಜಾ ದೇವಿ, ಕೆ. ಎಸ. ಅಶ್ವಥ್ ಮುಂತಾದವರು ಅಭಿನಯಿಸಿದ ಚಿತ್ರ ಅದು. ಯೂಟ್ಯೂಬಿನಲ್ಲಿ ಲಭ್ಯ. ಬೇಕಾದವರು ನೋಡಬಹುದು. 


"ಶ್ರೀಶೈಲ ಶಿಖರಂ ದೃಷ್ಟವಾ ಪುನರ್ಜನ್ಮ ನ ವಿದ್ಯತೇ" ಎಂದೊಂದು ನಂಬಿಕೆ. ಶ್ರೀಶೈಲ ದೇವಾಲಯದ ಶಿಖರವನ್ನು ನೋಡಿದವರಿಗೆ ಮತ್ತೊಂದು ಜನ್ಮ ಇಲ್ಲ ಎಂದು ಅದರ ಅರ್ಥ.  ಶ್ರೀಶೈಲಕ್ಕೆ ಹೋದವರೆಲ್ಲ ಆ ದೇವಸ್ಥಾನದ ಶಿಖರವನ್ನು ನೋಡಬಹುದು. ಪ್ರತಿ ವರ್ಷ ರಥೋತ್ಸವಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಎಲ್ಲರೂ ಆ ಶಿಖರ ನೋಡುತ್ತಾರೆ. ಅವರಿಗೆಲ್ಲರಿಗೂ ಮತ್ತೆ ಜನ್ಮ ಇಲ್ಲವೇ? ಇದೇ ಈ ಚಿತ್ರದಲ್ಲಿ ಚರ್ಚಿತವಾಗಿರುವ ಅಂಶ. ಶ್ರೀಶೈಲ ಶಿಖರ ಅಂದರೆ ಕಲ್ಲು, ಮಣ್ಣು, ಗಾರೆಗಳಿಂದ ಮಾಡಿ ನಿಲ್ಲಿಸಿರುವ ಆ ದೇವಾಲಯದ ಶಿಖರ ಅಲ್ಲ. ಶ್ರೀಶೈಲ ಶಿಖರ ಅಂದರೆ ಶ್ರೀ ಮಲ್ಲಿಕಾರ್ಜುನನ ಹೃದಯ. ತನ್ನ ಸಾಧನೆಯಿಂದ, ಅಂದರೆ ಸರಿಯಾದ ಜೀವನ ನಡೆಸಿದ ಕೆಲವರು ಮಾತ್ರ ಆ ಶಿಖರದಲ್ಲಿ ಅವನ ಹೃದಯವನ್ನು ನೋಡುತ್ತಾರೆ. ಅವರು ಮಾತ್ರ ಪರಮಪದ ಹೊಂದುತ್ತಾರೆ ಎಂದು ಅದರ ಭಾವಾರ್ಥ

***** 

ಯಾವುದೇ ಜೀವಿ ಮುಕ್ತಿ ಪಡೆಯಬೇಕಾದರೆ ತನ್ನ ಸಂಚಿತ ಸಾಧನೆಯಿಂದ ಮಾತ್ರ ಸಾಧ್ಯ. ಜೀವನ ಪೂರ್ತಿ ಅನೇಕ ಪಾಪಕರ್ಮಗಳನ್ನು ಮಾಡಿ, ಎಲ್ಲರನ್ನೂ ಗೋಳು ಹೊಯ್ದುಕೊಂಡು ಬದುಕಿ ಶ್ರೀಶೈಲ ಶಿಖರ ನೋಡಿ ಅಥವಾ ಕುಂಭದಲ್ಲಿ ಸ್ನಾನ ಮಾಡಿ ಮುಕ್ತಿ ಸಿಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯ ಪರೋಪಕಾರಿಯಾಗಿ, ತನಗೆ ಸಾಧ್ಯವಿದ್ದಷ್ಟು ಸಮಾಜಕ್ಕೆ ಉಪಕಾರಿಯಾಗಿ ಬದುಕುವುದು. ಈ ರೀತಿ ಮಾಡುತ್ತಿದ್ದಾಗ ಒಮ್ಮೆ ಎಂದೋ ಮುಕ್ತಿ ಸಿಗುತ್ತದೆ. 

ಅಂದರೆ ಕುಂಭ ಸ್ನಾನಕ್ಕೆ ಹೋಗಬಾರದೇ? ಶ್ರೀಶೈಲಕ್ಕೆ ಹೋಗಬಾರದೇ? ಹೋಗಿ ಪ್ರಯೋಜನವಿಲ್ಲವೇ? ಇದು ಸೊಗಸಾದ ಪ್ರಶ್ನೆ. ಹೋಗುವವರಿಗೆ ಬುದ್ಧಿ ಇಲ್ಲವೇ, ಎಂದೂ ಕೇಳಬಹುದು. ಅವಶ್ಯ ಹೋಗಬೇಕು. ನಮಗೆ ಮಾಮೂಲಿನ ದಿನಗಳಲ್ಲಿ ಒಬ್ಬರು ಒಂದು ಲಕ್ಷ ರೂಪಾಯಿ ಕೊಡುತ್ತಾರೆ. ಅವರಿಗೆ ನಾವು ಕೃತಜ್ಞರಾಗುತ್ತೇವೆ. ಇನ್ನೊಬ್ಬರು ಅದೇ ಒಂದು ಲಕ್ಷ ರೂಪಾಯಿಗಳನ್ನು ನಮಗೆ ಅತ್ಯಂತ ಅಗತ್ಯವಾದ ಆಪತ್ಕಾಲದಲ್ಲಿ ಕೊಡುತ್ತಾರೆ. "ನೀವು ಈಗ ಕೊಟ್ಟ ಈ ಲಕ್ಷ ರೂಪಾಯಿ ಕೋಟಿ ರೂಪಾಯಿ ಸಮ" ಎನ್ನುತ್ತೇವೆ. ಇಬ್ಬರು ಕೊಟ್ಟಿದ್ದೂ ಒಂದೇ ಮೊತ್ತದ ಹಣ. ಹೇಳುವುದರಲ್ಲಿ ಏಕೆ ಈ ವ್ಯತ್ಯಾಸ? 

ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಾನೆ. ವರ್ಷದಲ್ಲಿ ಒಂದು ಮಧ್ಯಮ ವಾರ್ಷಿಕ ಪರೀಕ್ಷೆ. ಮತ್ತೊಂದು ದೊಡ್ಡ ಪರೀಕ್ಷೆಗೆ ಮುನ್ನ ತಯಾರಿ ಪರೀಕ್ಷೆ. ಅಚ್ಚ ಕನ್ನಡದಲ್ಲಿ "ಪ್ರಿಪರೇಟರಿ ಎಕ್ಸಾಮಿನೇಷನ್" ಎನ್ನಬಹುದು. ಮತ್ತೆ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ. ಎಲ್ಲ ಪರೀಕ್ಷೆಗಳಲ್ಲೂ ಅದೇ ಪ್ರಶ್ನ ಪತ್ರಿಕೆ. ಅವೇ ಉತ್ತರಗಳು. ಅದೇ ಅಂಕಗಳ ಸಂಪಾದನೆ. ಆದರೆ ಅವುಗಳ ಮೌಲ್ಯ ಬೇರೆ. ಪರ್ವ ಕಾಲಗಳ ಸಾಧನೆಗೆ ಹೆಚ್ಚಿನ ಮೌಲ್ಯ. 

ಮನುಷ್ಯನ ಸಾಧನೆಗೆ ತಕ್ಕಂತೆ ಫಲ. ಅಮಾವಾಸ್ಯೆ-ಹುಣ್ಣಿಮೆಗಳು, ಸಂಕ್ರಮಣಗಳು, ಗ್ರಹಣ ಕಾಲಗಳು, ಕುಂಭ ಮೇಳ ಕಾಲ, ಮುಂತಾದುವುಗಳು ಪರ್ವಕಾಲಗಳು ಎಂದು ಎಣಿಕೆ. ಅದರಲ್ಲಿಯೂ ಮಹಾ ಕುಂಭ ಮೇಳ ಪರ್ವಕಾಲಗಲ್ಲಿಯೂ ಪರ್ವಕಾಲ. "ತೀರ್ಥಿಕುರ್ವಂತಿ ತೀರ್ಥಾಣಿ" ಎನ್ನುವಂತೆ. ಶುದ್ಧಿ ಮಾಡುವವರನ್ನೂ ಶುದ್ಧಿ ಮಾಡುವುದು. ವೈದ್ಯರನ್ನೂ ಉಪಚರಿಸುವ, ಅವರಿಗೂ ಪಾಠ ಹೇಳುವ ದೊಡ್ಡ ವೈದ್ಯರಿದ್ದಂತೆ! ಅದರಿಂದಲೇ ಈ ಮೇಳಕ್ಕೆ ಅಷ್ಟು ವಿಶೇಷತೆ. 

ಬಲಿ ಚಕ್ರವರ್ತಿಯು ವಾಮನ ಮೂರ್ತಿಗೆ ಮೂರು ಹೆಜ್ಜೆ ಭೂಮಿ ಕೊಟ್ಟನು. ಇಡೀ ಕೆಳಗಿನ ಲೋಕಗಳನ್ನು ವಾಮನನು ಮೊದಲನೇ ಹೆಜ್ಜೆಯಿಂದ ಅಳೆದನು. ಎರಡನೇ ಹೆಜ್ಜೆಗೆ ಮೇಲಿನ ಲೋಕಗಳನ್ನು ಅಳೆಯಲು ಒಂದು ಕಾಲನ್ನು ಮೇಲಕ್ಕೆ ಎತ್ತಿದನು. ಆ ಪಾದ ಬೆಳೆದೂ ಬೆಳೆದೂ  ಅವನ ಬೆರಳಿನ ಉಗುರಿನ ಒಂದು ಕೊನೆಯ ಭಾಗ ಇಡೀ ಬ್ರಹ್ಮಾಂಡ ಕಟಾಹ (ಔಟರ್ ಶೆಲ್ ಅಥವಾ ತೆಂಗಿನಕಾಯಿಯ ಕರಟದಂತೆ ಬ್ರಹ್ಮಾಂಡವನ್ನು ಆವರಿಸಿದ್ದ ಕವಚ) ಭೇದಿಸಿತು. ಆಗ ಬ್ರಹ್ಮಾಂಡ ಕವಚದ ಹೊರಗಿದ್ದ ನೀರು ನುಗ್ಗಿ ಬಂದು ಹರಿಯಿತು. ಚತುರ್ಮುಖ ಬ್ರಹ್ಮ ದೇವರು ಓಡಿಬಂದು ಆ ನೀರನ್ನು ತಮ್ಮ ಕಮಂಡಲದಲ್ಲಿ ಹಿಡಿದರು. ಅದೇ ನೀರಿನಿಂದ ಆ ವಾಮನರೂಪಿ ಮಹಾವಿಷ್ಣುವಿನ ಪಾದ ತೊಳೆದು ಪೂಜಿಸಿದರು. (ಪಾದಪೂಜೆ ಪದ್ಧತಿ ಅಲ್ಲಿಂದ ಪ್ರಾಂಭವಾಯಿತು ಎನ್ನುತ್ತಾರೆ). ಈ ಪಾದಗಳಿಂದ ದೇವಗಂಗೆ ಉದ್ಭವಿಸಿದಳು. ದೇವಲೋಕದಲ್ಲಿದ್ದ ಅವಳನ್ನು ಭಗೀರಥನು ಪ್ರಾರ್ಥಿಸಿ ಭೂಮಿಗೆ ತಂದನು. ಅವಳು ಬರುವ ರಭಸ ತಡೆಯಲು ಮಹೇಶ್ವರನು ತನ್ನ ಜಟೆಯಲ್ಲಿ ಕಟ್ಟಿ ತಲೆಯಲ್ಲಿ ಧರಿಸಿದನು. ಮುಂದೆ ಕಡೆಗೆ ಅವಳು ಗಂಗಾ ನದಿಯಾಗಿ ಹರಿದಳು. ಹಾಗೆ ಧುಮ್ಮಿಕ್ಕಿದಾಗ ಅಲ್ಲಿ-ಇಲ್ಲಿ ಹರಿದ ನೀರು ಬೇರೆ ನದಿಗಳಾದವು. 

ಈ ಪ್ರಸಂಗವನ್ನು ಗ್ರಂಥಗಲ್ಲಿ ವಿಶದವಾಗಿ ಹೇಳಿದೆ. ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಇದನ್ನೇ "ಹರಿಯ ಅಡಿಯಿಂದ, ಹರನ ಮುಡಿಯಿಂದ, ಋಷಿಯ ತೊಡೆಯಿಂದ ......" ಮುಂತಾಗಿ ತಮ್ಮ ಗಂಗಾವತರಣ ಕವನದಲ್ಲಿ ವರ್ಣಿಸಿದ್ದಾರೆ. 

ಕುಂಭಮೇಳ ಸ್ನಾನ ಕಾಲದಲ್ಲಿ "ಇಂತಹ ಗಂಗೆಯಲ್ಲಿ, ತ್ರಿವೇಣಿ ಸಂಗಮದಲ್ಲಿ, ಈ ಮಹಾಪರ್ವ ಕಾಲದಲ್ಲಿ ಸ್ನಾನ ಮಾಡುತ್ತಿದ್ದೇನೆ, ಇದರಿಂದ ನನ್ನ ಪಾಪಗಳು ಹೋಗುತ್ತವೆ" ಎಂಬ  ಧೃಡ ನಂಬಿಕೆಯಿಂದ, ಭಯ-ಭಕ್ತಿಗಳಿಂದ ಸ್ನಾನ ಮಾಡಿದರೆ ಪಾಪಗಳು ಹೋಗಬಹುದು. ಕ್ಯಾಮರಾ ನೋಡಿಕೊಂಡು ಬರೀ ಮುಳುಗು ಹಾಕಿದರೆ ಮೈನಲ್ಲಿ ಇರುವ ಕೊಳೆಯೂ ಹೋಗಲಾರದು!

9 comments:

  1. ವಾತ್ಸವಕ್ಕೆ ಎಷ್ಟು ಹತ್ತಿರ. Enjoyed reading. Great article. ನಮಸ್ಕಾರ.

    ReplyDelete
  2. Great piece of writing as usual expressing so many of your opinions about the ongoing Mahakumbha Mela. You got me to read this whole piece written in kannada. I'm so glad I made that effort.

    ReplyDelete
  3. Lot of useful information!! Thank you.

    ReplyDelete
  4. Very interesting to read with very useful information. Thank you!
    Regards.......SA

    ReplyDelete
  5. Beautiful analysis of life, Murthigale !
    Kumbhamela is a dream and which has occurred in our life time. Most of us could not make it. It’s also too expensive now to attend. With the same devotion and NAMBIKE we may hope to take Ganga Snana in a future date.
    You have also told that repeating a thing many times may end up in accepting it as truth. This is very true in most of the cases.
    Thanks again for this wonderful write up

    ReplyDelete
  6. ಬಹಳ ಚೆನ್ನಾಗಿ ಬರೆದಿದ್ದೀರ. ವಿವಿಧ ವಿಷಯಗಳನ್ನು ವಿವರಿಸಿ ಕೇಂದ್ರ ವಿಷಯವನ್ನು ಬಹು ಚೆನ್ನಾಗಿ ನಿರೂಪಣೆ ಮಾಡುವುದೇ ನಿಮ್ಮ ವೈಶಿಷ್ಟ್ಯ. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಪಾಪ ಹೋಗುತ್ತದೆಯೋ ಇಲ್ಲವೋ ಆದರೆ ಆ ಜನಗಳನ್ನು ಆ ದೃಶ್ಯವನ್ನು ಕಣ್ತುಂಬಿಕೊಳ್ಳಲಾದರೂ ಹೋಗಬೇಕು ಎನ್ನಿಸುತ್ತದೆ .ಮಹಾಭಾರತ ಯುದ್ಧದ ಅಕ್ಷೋಹಿಣಿ ಸೈನ್ಯದ ಬೃಹತ್ ತಿನ್ನು ಸ್ವಲ್ಪವಾದರೂ ಕಲ್ಪಿಸಿ. ಕೊಳ್ಳಲು ಸಾಧ್ಯವಾಗುತ್ತದೆಯೋ ಏನೋ.

    ReplyDelete
  7. Very interesting narration with facts and our mythological stories about how this Kumbha Mela occurs. We also got to see in our lives, its magnetic effect of drawing people from far and wide, enduring all the related ups and downs along the way, which is quite unusual and unparalleled in the recent past perhaps. Thanks so much once again to educate us on so many varied subjects and also making it interesting .

    ReplyDelete
  8. Nicely explained kumba snana

    ReplyDelete
  9. ಕುಂಭಮೇಳದ ವಿಶೇಷತೆಯ ಬಗ್ಗೆ ಮತ್ತು ಅದರ ಜೊತೆಗೆ ಸೇರಿದ ಅಂಧ ವಿಶ್ವಾಸಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete