Saturday, February 15, 2025

ಪ್ರತಿದಿನ ಗಂಗಾ ಸ್ನಾನ?



ಇದೀಗ ಎಲ್ಲೆಲ್ಲೂ "ಅಪರೂಪದ ಕುಂಭಮೇಳ" ಎನ್ನುವ ಸುದ್ದಿಯೇ ಸುದ್ದಿ. ಕೇವಲ ಹನ್ನೆರಡು ವರುಷದ್ದಲ್ಲ. ಹನ್ನೆರಡು ಹನ್ನೆರಡಲ ನೂರಾ ನಲವತ್ತನಾಲ್ಕು ವರುಷಗಳ ವಿಶೇಷ ಬೇರೆ. ಈಗಾಗಲೇ ಮೂವತ್ತು-ನಲವತ್ತು  ಕೋಟಿ ಮಂದಿ ಕುಂಭಸ್ನಾನ ಮಾಡಿದ್ದಾರೆ ಎಂದು ಒಂದು ಅಂದಾಜು. ಅಥವಾ, ಮೇಳ ಮುಗಿಯುವುದರ ಒಳಗೆ  ಮುಳುಗು ಹಾಕಿದವರ ಸಂಖ್ಯೆ ನಲವತ್ತು ಕೋಟಿ ದಾಟುತ್ತದೆ ಎಂದು ಇನ್ನೊಂದು ಅಂದಾಜು. (ಈಗಾಗಲೇ ಐವತ್ತು ಕೋಟಿ ಸಂಖ್ಯೆ ದಾಟಿದೆ, ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಆದಾಯ ಬಂದಿದೆ, ಎಂದು ಇಂದಿನ ಸುದ್ದಿ).  ನಲವತ್ತು ಕೋಟಿ ಅಂದರೆ ಅದೇನೂ ಒಂದು ಸಾಮಾನ್ಯ ಜನಗಳ ಕೂಟವಲ್ಲ. ಇಡೀ ಅಮೇರಿಕ ಸಂಯುಕ್ತ ಸಂಸ್ಥಾನಗಳ ಒಟ್ಟು ಜನಸಂಖ್ಯೆಗಿಂತ ಐದು ಕೋಟಿ ಹೆಚ್ಚು. ಮೂರು ನೂರು ಕಿಲೋಮೀಟರು ದೂರ ಟ್ರಾಫಿಕ್ ಜಾಮ್ ಆಗಿದೆ ಎಂದು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಚಿತ್ರಗಳು ಹರಿದಾಡುತ್ತಿವೆ. ವಾರಗಟ್ಟಲೆ ಸ್ನಾನ ಮಾಡದವರೂ ಕುಂಭ ಸ್ನಾನ ಮಾಡಿದ್ದಾರೆ! (ಕೆಲವು ಸಾಧುಗಳು ಹೀಗೆ ಅನೇಕ ದಿನ ಸ್ನಾನ ಮಾಡುವುದಿಲ್ಲ ಎಂದು ವರದಿಗಳಿವೆ). ಪ್ರತಿದಿನ ಸ್ನಾನ ಮಾಡುವ ದುರಭ್ಯಾಸ ಇರುವವರ ವಿಷಯ ಹೇಳಲೇಬೇಕಾಗಿಲ್ಲ. 

"ಕುಂಭಮೇಳ ಪ್ರವಾಸ" ಏರ್ಪಡಿಸುವ ಯಾವ ಪ್ರವಾಸಿ ಸಂಸ್ಥೆಯೂ ಈ ವರ್ಷ ನಷ್ಟ ಅನುಭವಿಸುವ ಸಾಧ್ಯತೆಯೇ ಇಲ್ಲ. ಕುಂಭ ಮೇಳ ಕಾಲದಲ್ಲಿ ಪ್ರಯಾಗ್ ರಾಜ್ ವಿಮಾನದ ಟಿಕೆಟ್ ಬೆಲೆ  ದೆಹಲಿ-ಲಂಡನ್ ಮಾರ್ಗದ ಟಿಕೆಟ್ ಬೆಲೆಗಿಂತ ಜಾಸ್ತಿಯಂತೆ. ಇದರ ಬಗ್ಗೆ ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆಯೂ ಆಯಿತು. ಮೊದಲ ಪಂಕ್ತಿಗಳಲ್ಲಿ ಊಟ ಮಾಡಲಾಗದೆ ಇದ್ದರೂ ಪರವಾಗಿಲ್ಲ. ಕೊನೆಯ ಪಂಕ್ತಿ ಸಿಕ್ಕಿದರೂ ಸರಿಯೇ ಎಂದು ಕಾಯುವವರಂತೆ ಮೇಳ ಮುಗಿದ ನಂತರವಾದರೂ ಹೋಗೋಣ ಎಂದು ಕಾಯುತ್ತಿರುವವರೂ ಉಂಟು. "ಅಯ್ಯೋ, ಒಂದು ನೂರಾ ನಲವತ್ತನಾಲ್ಕು ವರುಷಗಳ ಕುಂಭ ಸ್ನಾನ ತಪ್ಪಿಸಿಕೊಂಡಿರಲ್ಲ!" ಎಂದು ಬೇರೆಯವರು ಹೇಳಬಾರದು ಎಂದು ಪರಿತಪಿಸುತ್ತಾ ಕಾಯುತ್ತಿರುವವರೂ ಉಂಟು. ಜನಜಂಗುಳಿ, ಹಣ-ಕಾಸಿನ ಮುಗ್ಗಟ್ಟು, ಆರೋಗ್ಯದ ಸಮಸ್ಯೆಗಳು, ಚಳಿ ತಡೆಯಲಾಗದ ಸ್ಥಿತಿ, ಜೊತೆಯಿಲ್ಲದೆ ಹೋಗಲಾಗದ ಬಿಕ್ಕಟ್ಟು, ಇವೆಲ್ಲಕ್ಕಿಂತ ಹೆಚ್ಚಾದ ಸೋಮಾರಿತನ, ಮುಂತಾದ ಅನೇಕ ಕಾರಣಗಳಿಂದ "ಈಗ ಬೇಡ. ಬೇಸಗೆ ಬರಲಿ. ಆಗ ಹೋಗೋಣ. ಸ್ವಲ್ಪ ಪುಣ್ಯ ಕಡಿಮೆ ಬಂದರೂ ಪರವಾಗಿಲ್ಲ" ಎಂದು ಅಂದುಕೊಂಡವರೂ ಉಂಟು.  

ಗಂಗಾನದಿಯ ತಟದಲ್ಲಿರುವವರು ಪುಣ್ಯಾತ್ಮರು. ಪ್ರತಿದಿನ ಗಂಗಾಸ್ನಾನ ಮಾಡುತ್ತಾರೆ ಎನ್ನಬಹುದೇ? ಬೆಂಗಳೂರಿನಲ್ಲಿರುವವರು ಪ್ರತಿದಿನ ಲಾಲ್ ಬಾಗಿಗೆ ಹೋಗುತ್ತಾರೆ ಎನ್ನುವಂತೆ! ಬೇರೆಲ್ಲಿಯೋ ಇರುವವರು ಏನು ಮಾಡಬೇಕು? ಕುಮಾರವ್ಯಾಸನು ಹೇಳುವಂತೆ "ಚೋರ ನಿಂದಿಸಿ ಶಶಿಯ ಬೈದೊಡೆ, ಕ್ಷೀರವನು ಕ್ಷಯ ರೋಗಿ ಹಳಿದಡೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು?" ಎನ್ನುವುದನ್ನು ನೆನೆಸಿಕೊಂಡು ಸುಮ್ಮನಿರಬೇಕೇ? ದೇಶದ ದಕ್ಷಿಣ ಭಾಗದಲ್ಲಿ ವಾಸಿಸುವವರು ಏನು ಮಾಡಬೇಕು? ಅವರಿಗೂ ಬೇರೆ ದಾರಿ ಉಂಟು. ಗಂಗೆಯ ಸೋದರಿಯರಾದ ಗೋದೆ, ಕೃಷ್ಣೆ, ಕಾವೇರಿಯರಿದ್ದಾರೆ. ಭೀಮೆ, ತುಂಗೆ, ವೈಗೈ ಇದ್ದಾರೆ. ಶರಾವತಿ, ನೇತ್ರಾವತಿಯರಿದ್ದಾರೆ. (ಅರ್ಕಾವತಿ-ವೃಷಭಾವತಿಯರೂ ಇದ್ದರು. ಅಲ್ಲಿ ಸ್ನಾನ ಮಾಡುವ ಭೀತಿ ಬೇಡ). ಈ ಎಲ್ಲ ನದಿಗಳೂ ದೂರ ಇದ್ದರೆ ಏನು ಮಾಡಬೇಕು? ಸಣ್ಣ ಹಳ್ಳಿಯಳ್ಳಿ ಚಿಕ್ಕ ಕೆರೆ ಮಾತ್ರ ಉಂಟು. ಅವರೇನು ಮಾಡಬೇಕು? ಅಥವಾ ದೊಡ್ಡ ನಗರದ ಸಣ್ಣ ಮನೆಯ ಪುಟ್ಟ ಬಚ್ಚಲು ಮನೆ. ನೀರೇ ಬಾರದ ನಲ್ಲಿಯಲ್ಲಿ ಎಂದೋ ನೀರು ಬಂದಾಗ ಹಿಡಿದಿಟ್ಟ ಪ್ಲಾಸ್ಟಿಕ್ ಬಕೆಟ್ಟಿನ ನೀರು ಮಾತ್ರ. ಅವರಿಗೆ ಪುಣ್ಯ ಸ್ನಾನವಿಲ್ಲವೇ? ಇದು ಸ್ವಲ್ಪ ಯೋಚಿಸಬೇಕಾದ ವಿಷಯವೇ. 
*****

ನಾವು ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಭಾಷೆಗಳನ್ನು ಚೆನ್ನಾಗಿ ಕಲಿಯಲಿ ಎಂದು "ಪ್ರಭಂಧ" ಬರೆಸುತ್ತಿದ್ದರು. ಇಂಗ್ಲಿಷಿನಲ್ಲಿ "Pen is mightier than Sword" ಅಥವಾ ಕನ್ನಡದಲ್ಲಿ "ಕತ್ತಿಗಿಂತ ಲೇಖನಿ ಹರಿತ" ಎನ್ನುವ ವಿಷಯದ ಮೇಲೆ ಸಾಮಾನ್ಯವಾಗಿ ಮೊದಲನೇ ಪ್ರಬಂಧ ಬರೆಸುತ್ತಿದ್ದರು. ಹಿಂದಿಯಲ್ಲಾದರೆ ರಾಮಧಾರಿ ಸಿಂಹ "ದಿನಕರ" ಅವರ "ಕಲಂ ಯಾ ತಲವಾರ್" ಎಂಬ ಇದೇ ವಿಷಯದ ಪದ್ಯ ಓದಬೇಕಿತ್ತು. ಲೇಖನಿ ಅಥವಾ ಪೆನ್ನು ಒಂದು ಜಡ ವಸ್ತು. ಅದೇನು ಮಾಡುತ್ತದೆ? ಮೇಜಿನ ಮೇಲೋ ಜೇಬಿನಲ್ಲೋ ಕುಳಿತಿರುತ್ತದೆ. (ಹಿಂದೆಲ್ಲ ಜೇಬಿನಲ್ಲಿ ಪೆನ್ನಿಲ್ಲದ ವಿದ್ಯಾರ್ಥಿಯನ್ನು "ನೀನೆಂಥ ವಿದ್ಯಾರ್ಥಿಯೋ?" ಎಂದು ಬಯ್ಯುತ್ತಿದ್ದರು. ಈಗ ಪೆನ್ನು ಇಟ್ಟುಕೊಳ್ಳುವ ಅಭ್ಯಾಸವೇ ಹೋಗಿದೆ). ಒಂದು ವೈಚಾರಿಕ ಲೇಖನ ಒಂದು ಕತ್ತಿ ಮಾಡುವುದಕ್ಕಿಂತ ಹೆಚ್ಚು ಕ್ರಾಂತಿಕಾರಕ ಕೆಲಸ ಮಾಡುತ್ತದೆ ಎನ್ನುವುದನ್ನು ಒಪ್ಪೋಣ. ಆದರೆ ಆ ಕೆಲಸ ಮಾಡುವುದು ಪೆನ್ನು ಅಥವಾ ಲೇಖನಿ ಅಲ್ಲ. ಪೆನ್ನು ಅಥವಾ ಲೇಖನಿ ಹಿಡಿದ ಕೈ, ಮತ್ತು ಅದಕ್ಕಿಂತ ಹೆಚ್ಚಾಗಿ ಅದನ್ನು ಉಪಯೋಗಿಸಿ ಬರೆಯುವವನ ತಲೆ; ಅದರಲ್ಲಿರುವ ಮಿದುಳು. 

ಪ್ರಸಿದ್ಧ ನಿರ್ಮಾಪಕ-ನಿರ್ದೇಶಕ ಬಿ. ಅರ್. ಪಂತುಲು ಅವರ ಹೆಮ್ಮೆಯ "ಶ್ರೀ ಕೃಷ್ಣದೇವರಾಯ" ಚಲನಚಿತ್ರದ ಕಡೆಯಲ್ಲಿ ಕೃಷ್ಣದೇವರಾಯನ ಖಡ್ಗವನ್ನು ತೋರಿಸಿ "ಸಹಸ್ರಾರು ಶತ್ರುಗಳ ಶಿರಛೇದ ಮಾಡಿದ ಖಡ್ಗ ನಿರಾಶ್ರಿತವಾಯಿತು" ಅನ್ನುತ್ತಾರೆ. ಹೀಗೇಕೆ? ವೈರಿಗಳ ತಲೆ ಕತ್ತರಿಸಿದ್ದು ಖಡ್ಗವೇ ಆದರೂ ಅದೂ ಒಂದು ಜಡ ವಸ್ತು. ಆ ಕೆಲಸ ನಿಜವಾಗಿ ಮಾಡಿದ್ದು ಆ ಖಡ್ಗ ಹಿಡಿದ ಕೈ; ಆ ಕೈ ಹಿಂದಿದ್ದ ಅಸಾಧಾರಣ ವ್ಯಕ್ತಿ. ಲೇಖನಿ ಅಥವಾ ಕತ್ತಿ ದೊಡ್ಡದು ಎಂದು ಹೇಳುವುದು ಕೇವಲ ಸೂಚ್ಯವಾಗಿ. ಯಾವುದೇ ಜಡ ವಸ್ತು ತನಗೆ ತಾನೇ ಕೆಲಸ ಮಾಡದು. ಅದರ ಹಿಂದಿರುವ ಚೇತನವೇ ಕೆಲಸಗಳನ್ನು ಮಾಡುವುದು. ಜಡ ವಸ್ತು ಒಂದು ಉಪಕರಣ. ಅಷ್ಟೇ. 

*****

ಜಡವಸ್ತು ಕೇವಲ ಒಂದು ಉಪಕರಣ. ನಿಜವಾಗಿ ಕೆಲಸ ಮಾಡುವುದು ಅದರ ಹಿಂದಿರುವ ಚೇತನ ಎನ್ನುವುದಾದರೆ ಗಂಗಾಸ್ನಾನದ ವಿಷಯ ಏನು? ಗಂಗೆಯಲ್ಲಿ ಹರಿಯುವುದು ನೀರು. ಆ ನೀರೂ ಒಂದು ಜಡ ವಸ್ತುವೇ. ಅದು ದ್ರವರೂಪದಲ್ಲಿರುವುದರಿಂದ ಹರಿಯುತ್ತದೆ. ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳಿಂದ ಹರಿದು ಬಂದು, ಅದೇ ರೀತಿಯ ಇತರ ಉಪನದಿಗಳಿಂದ ಕೂಡಿ ಮೈದುಂಬಿ, ಭೋರ್ಗರೆಯುತ್ತಾ ಬೆಟ್ಟಗಳಲ್ಲಿ ಹರಿಯುತ್ತದೆ. ಹರಿದ್ವಾರದ ನಂತರ ಬಯಲು ಪ್ರದೇಶಗಳಲ್ಲಿ ಹರಿಯುವುದರಿಂದ ಆ ವಿಶಾಲ ಜಲರಾಶಿ ಬಲು ರಭಸವಾಗಿ ಚಲಿಸುತ್ತದೆ. ಕೋಟಿ ಕೋಟಿ ಜನಗಳ ಜೀವನ ಹಸನು ಮಾಡಿ ಸಮುದ್ರ ಸೇರುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದರೆ ಪಾಪಗಳು ಹೋಗುವುದು ಹೇಗೆ? 

ನಮ್ಮ ಪುರಾತನ ನಂಬಿಕೆಗಳ ಪ್ರಕಾರ ಪ್ರತಿ ಜಡ ವಸ್ತುವಿನ ಹಿಂದೆ ಅದಕ್ಕೆ ಹೊಂದಿದ ಒಂದು ಚೇತನ ಶಕ್ತಿ ಇದೆ. ಅದನ್ನೇ ನಾವು ಆ ಜಡ ಪದಾರ್ಥದ "ಅಭಿಮಾನಿ ದೇವತೆ" ಎನ್ನುವುದು. ಪುಸ್ತಕ ಜಡ ವಸ್ತು. ಅದರ ಹಿಂದೆ ವಿದ್ಯೆಯ ಅಭಿಮಾನಿ ದೇವತೆಯಾದ ಸರಸ್ವತಿ ಇದ್ದಾಳೆ. ಬೆಂಕಿಯ ಹಿಂದೆ ಅಗ್ನಿದೇವ ಇದ್ದಾನೆ. ನೀರಿನ ಹಿಂದೆ ವರುಣ ಇದ್ದಾನೆ. ಗಾಳಿಯ ಹಿಂದೆ ವಾಯುದೇವ ಇದ್ದಾನೆ. ಹೀಗೆ. ಅದೇ ರೀತಿ ಗಂಗಾನದಿಯಲ್ಲಿ ಹರಿಯುವ ನೀರಿನ ಹಿಂದೆ ತಾಯಿ ಗಂಗೆ ಇದ್ದಾಳೆ. ಹಿಂದೆಲ್ಲ ಕೇವಲ ಗಂಗೆ ಎಂದು ಸಂಬೋಧಿಸಿದರೆ ಹೊಡೆಯಲು ಬರುತ್ತಿದ್ದರು. "ಗಂಗಾಜೀ" ಅಥವಾ "ಗಂಗಾಮಯ್ಯಾ" ಅನ್ನು ಎನ್ನುತ್ತಿದ್ದರು. ಗಂಗೆ ಅಂದರೆ ಅಷ್ಟು ಶ್ರದ್ದೆ. ಅಂತಹ ಭಕ್ತಿ. ಗಂಗೆ ಕೇವಲ ಹರಿವ ನೀರಲ್ಲ. ಅವಳು ಹರಿ ಪಾದೋದಕ. ಹರನ ತಲೆಯಿಂದ ಹರಿದು ಬಂದ ತೀರ್ಥ. ಅನೇಕ ಶ್ರದ್ಧಾಳುಗಳು ಮೊದಲು ಮನೆಯಲ್ಲೋ ಅಥವಾ ಛತ್ರದಲ್ಲೋ ಒಮ್ಮೆ ಸ್ನಾನ ಮಾಡಿ ನಂತರ ಗಂಗಾಸ್ನಾನಕ್ಕೆ ನದಿಗೆ ಹೋಗುತ್ತಿದ್ದರಂತೆ! ಗಂಗಾಸ್ನಾನಕ್ಕೆ ಹೋದಾಗ ಗಂಗೆಯ ನೀರನ್ನು ಮುಟ್ಟುವ ಮುಂಚೆ ದೇಹ ಶುದ್ಧವಾಗಿ ಇರಬೇಕೆಂಬ ಕಳಕಳಿಯಿಂದ. 

*****

ಗಂಗಾನದಿಯಲ್ಲಿ ಹರಿಯುವ ನೀರಿನ ಅಭಿಮಾನಿದೇವತೆ ಗಂಗಾದೇವಿ ನಮ್ಮ ಪಾಪಗಳನ್ನು ಕಳೆಯುತ್ತಾಳೆ ಎಂದಾಯಿತು. ಹಾಗಿದ್ದಲ್ಲಿ ಗಂಗೆ ನೀರಿಗೆ ಅಷ್ಟು ದೂರ ಹೋಗಬೇಕು. ಆದರೆ ಅದರ ಅಭಿಮಾನಿ ದೇವತೆ ನಮ್ಮನ್ನು ಹರಸಲು ಅಲ್ಲಿಗೇ ಹೋಗಬೇಕೇ ಎನ್ನುವುದು ಮುಂದಿನ ಪ್ರಶ್ನೆ. ದೇವತೆಗಳಿಗೆ ಎಲ್ಲಿ ಬೇಕೆಂದರಲ್ಲಿ ಹೋಗುವ, ಬರುವ ಸಾಮರ್ಥ್ಯ ಇದೆಯಲ್ಲವೇ? ನಾವು ಅಲ್ಲಿಗೆ ಹೋಗಲು ಅಶಕ್ತರು. ಅಲ್ಲಿಗೆ ಸುಲಭವಾಗಿ ಹೋಗಲಾರೆವು. ಆ ತಾಯಿಯೇ ನಮ್ಮ ಬಳಿ ಬರಬಹುದೇ? ಅದು ಸಾಧ್ಯವಾದರೆ ಎಂತಹ ಪವಾಡ! ಹಾಗಾಗಬಹುದೇ? 

ಸಂಧ್ಯೆಯನ್ನು ಆಚರಿಸುವಾಗ, ಮತ್ತು ಅನೇಕ ರೀತಿಯ ಸಮಾರಂಭಗಳಲ್ಲಿ ಮಂತ್ರಪೂತ ಜಲದಿಂದ ಸಿಂಪಡಣೆ (ಪ್ರೋಕ್ಷಣೆ ಅಥವಾ ಮಾರ್ಜನ) ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಅವು ಯಾವುವು? ಋಗ್ವೇದದ ಹತ್ತನೆಯ ಮಂಡಲದ "ಆಪಃ ಸೂಕ್ತ" ಮಂತ್ರಗಳು ಅವು. ಅದರಲ್ಲಿ ನೀರಿನ ಅಭಿಮಾನಿ ದೇವತೆಗಳಾದ ಆಪೋದೇವಿಯರನ್ನು ಪ್ರಾರ್ಥಿಸಿಕೊಳ್ಳುವುದು. "ನಿಮ್ಮ ಕರುಣೆಯ ಬಲದಿಂದ ನಾವು ಬದುಕುತ್ತೇವೆ. ನಿಮ್ಮ ಸಹಕಾರದಿಂದ ನಮ್ಮ ಜೀವನ ನಡೆದು ನಾವು ಬಹಳಕಾಲ ಜೀವಿಸುತ್ತೇವೆ. ನಮ್ಮನ್ನು ಯೋಗ್ಯರನ್ನಾಗಿ ಮಾಡುವ, ನಿಮ್ಮಲಿರುವ ಆ ಶಕ್ತಿಯನ್ನು ನಮಗೆ ದಯಪಾಲಿಸಿ" ಎಂದು ಬೇಡುವುದೇ ಈ  ಮಂತ್ರಗಳ ತಿರುಳು. "ಉಷತೀರಿವ ಮಾತರಃ" ಎನ್ನುವುದು ಅಲ್ಲಿ ಬರುವ ವಿಶೇಷಣ. "ಕಂದಮ್ಮಗಳು ಕರೆದಾಗ ಓಡಿ ಬಂದು ಎತ್ತಿಕೊಳ್ಳುವ ತಾಯಿಯರಂತೆ ನೀವು" ಎಂದು ಅವರಲ್ಲಿ ಪ್ರಾರ್ಥನೆ. 

*****

ಎಲ್ಲ ನೀರಿನಲ್ಲಿರುವ ಆಪೋದೇವಿಯರಂತೆ ಗಂಗಾನದಿ ನೀರಿನಲ್ಲಿ ವಿಶೇಷ ಅಭಿಮಾನಿ ದೇವತೆಯಾಗಿ ತಾಯಿ ಗಂಗೆ ಇದ್ದಾಳೆ. ಅವಳದ್ದು ತಾಯಿಯ ಕರುಳು. ಎಳೆಯ ಮಕ್ಕಳು ಕೂಗಿ ಕರೆದಾಗ, ತಾನು ಮಾಡುತ್ತಿರುವ ಕೆಲಸವನ್ನು ಅಲ್ಲಿಯೇ ಬಿಟ್ಟು ಓಡಿ ಬಂದು ಮಗುವನ್ನು ಎತ್ತಿಕೊಳ್ಳುವ ಅಮ್ಮನಂತೆ ಕರುಣಾಮಯಿ ಅವಳು. ಕೂಗಿ ಕರೆದವರಿಗೆಲ್ಲಾ ಅವಳು ತಾಯಿಯೇ. ಆದ್ದರಿಂದ ಆ ನದಿ ಇರುವಲ್ಲಿಗೆ ಹೋಗಲಾರದವರು ಆರ್ತರಾಗಿ ಕರೆದರೆ ಅವಳು ಕರೆದವರು ಇರುವಲ್ಲಿಗೆ ಬರುತ್ತಾಳೆ! ಸ್ನಾನ ಮಾಡುವಾಗ ನಮ್ಮ ಹಿರಿಯರು ಹೇಳುತ್ತಿದ್ದ ಈ ಕೆಳಗಿನ ಶ್ಲೋಕ ಅದನ್ನೇ ಹೇಳುತ್ತದೆ:

ಗಂಗಾ ಗಂಗೇತಿ ಯೋ ಬೃಯಾತ್ ಯೋಜನಾನಾಂ ಶತೈರಪಿ 
ಮುಚ್ಯತೇ ಸರ್ವ ಪಾಪೇಭ್ಯೋ ವಿಷ್ಣು ಲೋಕಂ ಸ ಗಚ್ಛತಿ 

"ಗಂಗಾ, ಗಂಗೆ ಎಂದು ಯಾರು ಸ್ಮರಣೆ ಮಾಡುತ್ತಾರೋ ಅಂತಹವನು ನೂರಾರು ಯೋಜನ ದೂರವಿದ್ದರೂ ತಾಯಿ ಗಂಗೆಯು (ಅವನಿರುವಲ್ಲಿಗೆ ಬಂದು) ಅವರ ಎಲ್ಲ ಪಾಪಗಳಿಂದಲೂ ಬಿಡುಗಡೆ ಮಾಡುತ್ತಾಳೆ. ಅವನು ವಿಷ್ಣುವಿನ ಲೋಕವಾದ ವೈಕುಂಠವನ್ನು ಸೇರುತ್ತಾನೆ" ಎನ್ನುವುದು ಇದರ ಅರ್ಥ. 
*****

ಹಾಗಿದ್ದರೆ ಬಹಳ ಸುಲಭವಾಯಿತಲ್ಲ! ಗೋಮುಖಕ್ಕೋ, ದೇವಪ್ರಯಾಗಕ್ಕೋ, ಹರಿದ್ವಾರಕ್ಕೋ, ಪ್ರಯಾಗಕ್ಕೋ, ವಾರಾಣಸಿಗೋ, ಏಕೆ ಹೋಗಬೇಕು? ಈ ಶ್ಲೋಕ ಹೇಳಿದರೆ ಆಯಿತಲ್ಲ. ಪ್ರತಿದಿನ ಗಂಗಾಸ್ನಾನ ಮಾಡಿದಂತೆ ಆಯಿತಲ್ಲ. ಎಲ್ಲ ಸುಲಭ. ಅಲ್ಲಿಗೆ ಏಕೆ ಹೋಗಬೇಕು? 

ಅದು ಅಷ್ಟು ಸುಲಭವಾದ ಪರಿಹಾರವಲ್ಲ. 

ನಾವು ಪ್ರತಿದಿನ ಸ್ನಾನ ಮಾಡುತ್ತೇವೆ ಎಂದು ತಿಳಿದಿದ್ದೇವೆ. ವಾಸ್ತವವಾಗಿ ನಾವು ಮಾಡುವುದು ಬರೀ ಮೈ ತೊಳೆದುಕೊಳ್ಳುವ ಕ್ರಿಯೆ. ಸ್ನಾನ ಮಾಡುವಾಗ ನೂರಾರು ಯೋಚನೆಗಳು. ಸ್ನಾನ ಮುಗಿಸಿದರೆ ಸಾಕು. ಬೇರೆ ಕೆಲಸಗಳಿಗೆ ಓಡಬಹುದು ಎನ್ನುವ ಮನಸ್ಥಿತಿ. ಶ್ರೀಹರಿಯ ಪಾದದಿಂದ, ಸದಾಶಿವನ ಶಿರದಿಂದ ಇಳಿದು ಬಂದು, ನನ್ನ ತಲೆಯ ಮೂಲಕ ಹಾದು ದೇವಗಂಗೆ ನನ್ನನ್ನು ಪಾವನ ಮಾಡುತ್ತಿದ್ದಾಳೆ ಎಂದು ಅನುಸಂಧಾನ ಬೇಕು. ಆ ಮಂತ್ರದಲ್ಲಿ ಧೃಡವಾದ ನಂಬಿಕೆ ಬೇಕು. ಏಕಾಗ್ರತೆ ಬೇಕು. ಕ್ಷಣದಿಂದ ಕ್ಷಣಕ್ಕೆ ಕಪಿಯಂತೆ ಹಾರುವ ಮನಸ್ಸಿಗೆ ಅದು ಸುಲಭ ಸಾಧ್ಯವಲ್ಲ. 

ನಮಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈ ಶ್ಲೋಕ ಹೇಳಿಕೊಂಡು ಸ್ನಾನ ಮಾಡುತ್ತೇವಲ್ಲ ಎಂದು ಸುಮ್ಮನೆ ಕೂಡುವಹಾಗಿಲ್ಲ. ಗಂಗಾನದಿ ಇರುವಲ್ಲಿಗೆ ಪ್ರಯತ್ನ ಪೂರ್ವಕ ಹೋಗಿ ವಿಧಿಯಂತೆ ಗಂಗಾಸ್ನಾನ ಮಾಡುವುದು ನಂಬಿದವರಿಗೆ ಒಂದು ಕರ್ತವ್ಯ. ಹೋಗುವ ಶಕ್ತಿ ಇದ್ದರೂ ಕಳ್ಳ ಮೈಯಿಂದ ತಪ್ಪಿಸಿಕೊಂಡು ಮೇಲಿನ ಶ್ಲೋಕ ಹೇಳಿಕೊಂಡು ಎಷ್ಟು ವರ್ಷ ಸ್ನಾನಮಾಡಿದರೂ ಪ್ರಯೋಜನವಿಲ್ಲ. 

*****

ಗಂಗಾಸ್ನಾನಕ್ಕೆ ಹಂಬಲಿಸುತ್ತಾ, ಒಮ್ಮೆಯೂ ಅಲ್ಲಿ ಹೋಗಲಾರದಿದ್ದರೂ ಹೋಗುವವರಿಗೆ ಸೇವೆ, ಸಹಕಾರಗಳನ್ನು ಕೊಡುತ್ತಿದ್ದ ಗಂಗಾದಾಸನಿಗೆ ಪ್ರತಿದಿನ ಗಂಗಾಸ್ನಾನ ಮಾಡಿದವನಿಗಿಂತ ಹೆಚ್ಚಿನ ಪುಣ್ಯ ಬಂದಿತೆಂದು ತಿಳಿಸುವ ಕಥೆಯೊಂದು "ಕಾರ್ತಿಕಮಾಸ ಮಹಾತ್ಮೆ" ಸಂದರ್ಭದಲ್ಲಿ ಬರುತ್ತದೆ. ಅದನ್ನು ತಿಳಿಯಲು ಆಸಕ್ತಿ ಇರುವವರು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

3 comments:

  1. ಅನೇಕ ವಿಚಾರಗಳಮೇಲೆ ಸಂಕೀರ್ಣ ಬೀರಿದ್ದಾರೆ ಗಂಗೆಯಬಗ್ಗೆಅಮೋಘ ವಿಷೃಯಗಳ ಜ್ಞಾನಬಂಢಾರಕ್ಕೆಪ್ರಣಾಮಗಳು

    ReplyDelete
  2. Nice article and quite interesting. This is not an "any other occassion". Once in 144 years is something unimaginable for the present generation to visit. This educative article coupled with "Gangaram" episode makes more sence. Thanks Murthigale

    ReplyDelete
  3. Very well written, we had discussed about this when we were in MAB. You had given me this shloka to chant daily.👍👍🙏🙏

    ReplyDelete