
ಒಂದು ಬಹಳ ಹಳೆಯ ಕಥೆ. ಎಲ್ಲರಿಗೂ ಗೊತ್ತಿರುವಂಥದ್ದೇ. ಎಲ್ಲರ ಬಾಯಿಯಲ್ಲಿ ಒಂದೇ ನಾಲಿಗೆ ಇರುವುದು. (ಹಾವುಗಳಿಗೆ ಎರಡು ನಾಲಿಗೆಯಂತೆ. ಆದರೆ ಹಾವಿನ ಸ್ವಭಾವದ ಮನುಷ್ಯರಿಗೂ ಒಂದೇ ನಾಲಿಗೆ). ಹಲ್ಲುಗಳು ಸಂಖ್ಯೆಯಲ್ಲಿ ಅನೇಕ. ಅವುಗಳಲ್ಲಿ ಒಗ್ಗಟ್ಟು ಚೆನ್ನಾಗಿ ಇದೆ. ಕಬಡ್ಡಿ ಆಟದಲ್ಲಿ ಎದುರಾಳಿಯನ್ನು ಹಿಡಿದುಹಾಕಲು ಕೈ-ಕೈ ಹಿಡಿದುಕೊಂಡು ನಿಂತಿರುವ ಆಟಗಾರರಂತೆ ಅವುಗಳ ಮಾಟ. ಜೊತೆಗೆ, ಮೇಲೆ-ಕೆಳಗೆ ಸೇರಿಕೊಂಡು ಹಿಡಿದು-ಕಚ್ಚುವ ಅಭ್ಯಾಸ ಬೇರೆ. ಮಧ್ಯದಲ್ಲಿ ಸಿಕ್ಕಿದ್ದನ್ನು ಅಗಿದು ನುಣ್ಣಗೆ ಮಾಡುವ ಚಪಲ ಕೂಡ ಉಂಟು. ನಾಲಿಗೆಗೂ ಹಲ್ಲುಗಳಿಗೂ ಒಮ್ಮೆ ಜಗಳ ಆಯಿತಂತೆ. ಎಲ್ಲವೂ ನಾಲಿಗೆಯ ಮೇಲೆ ಬಿದ್ದವು. "ನೋಡು, ಹುಷಾರ್, ನೀನು ಇರುವುದು ಒಬ್ಬ. ನಾವು ಗುಂಪಾಗಿ ಇದ್ದೇವೆ. ಕಡಿದು ಚಟ್ನಿ ಮಾಡುತ್ತೇವೆ" ಅಂದವಂತೆ. ನಾಲಿಗೆ ಒಂದು ನಿಮಿಷ ಯೋಚಿಸಿತು. ನಂತರ ಹೇಳಿತು: "ಇರಬಹುದು. ಆದರೆ ನಾನು ಒಂದೇ ಒಂದು ತಪ್ಪು ಮಾತನಾಡಿದರೆ ನೀವು ಅಷ್ಟು ಮಂದಿಯನ್ನೂ ಬೇರೆ ಯಾರೋ ಉದುರಿಸಿಬಿಡುತ್ತಾರೆ. ನಾನು ಏನೂ ಕಷ್ಟ ಪಡಬೇಕಾಗಿಲ್ಲ". ಅದೇ ಜಗಳದ ಕಡೆ. ಅಂದಿನಿಂದ ಹಲ್ಲುಗಳು ನಾಲಿಗೆಯ ಸಹವಾಸ ಬೇಡ ಅಂತ ತೀರ್ಮಾನಿಸಿವೆಯಂತೆ.
ಹುಟ್ಟುವಾಗ ಇಲ್ಲದವು ಮಧ್ಯೆ ಬಂದು ಕೂಡುತ್ತವೆ. ನಂತರವೂ ಒಮ್ಮೆ ಬಿದ್ದು ಮತ್ತೆ ಹುಟ್ಟುತ್ತವೆ. ಆಮೇಲೆ ಬಿದ್ದರೆ ಕಥೆ ಮುಗಿಯಿತು. ಆದರೂ ಮುಖದ ಅಂದಕ್ಕೆ, ಹೊಟ್ಟೆಯ ಯೋಗಕ್ಷೇಮಕ್ಕೆ ಈ ಹಲ್ಲುಗಳು ಬಹಳ ಮುಖ್ಯ. ಬೊಚ್ಚುಬಾಯಿ ಆಗುವುದು ಯಾರಿಗೂ ಬೇಡ. ಹಲ್ಲುಗಳ ಚಂದದ ಬಗ್ಗೆ ಅನೇಕ ರೀತಿ ವಿವರಣೆಗಳಿವೆ. ಮಲ್ಲಿಗೆ ಮೊಗ್ಗಿನ ತರಹ ಅನ್ನುತ್ತಾರೆ. ಮುತ್ತಿನ ತರಹ ಅನ್ನಬಹುದು. ಚರ್ಮದ ಬಣ್ಣ ಏನೇ ಇರಬಹುದು. ಎಲ್ಲರಿಗೂ ಬಿಳಿ ಬಣ್ಣದ ಹಲ್ಲೇ ಬೇಕು. ಅದನ್ನು ಬಿಳಿಯಾಗಿಡಲು ಅನೇಕ ಸಾಹಸ ಮಾಡುತ್ತಾರೆ. ಅವು ಸ್ವಲ್ಪ ಸೊಟ್ಟ ಇದ್ದರೆ "ವಕ್ರ ದಂತ ಚಿಕಿತ್ಸಾಲಯ" ದರ್ಶನ ಮಾಡುತ್ತಾರೆ. ಗಂಟೆಗಟ್ಟಲೆ ಅಲ್ಲಿ ಕಾದು ಕುಳಿತಿದ್ದು, ಕಾಸು ಕೊಟ್ಟು ಸರಿ ಮಾಡಿಸಿಕೊಳ್ಳುತ್ತಾರೆ.
ಏನು ಮಾಡಿದರೂ ಬಾಯಿ ಬಿಡದವರು ದಂತ ವೈದ್ಯರ ಮುಂದೆ ಬಾಯಿ ಬಾಯಿ ಬಿಡುತ್ತಾರೆ. ಕೆಲವರ ಬಾಯಿ ಮುಚ್ಚಿಸುವುದು ಬಹಳ ಕಷ್ಟ. ಅಂತಹವರನ್ನು ದಂತ ವೈದ್ಯರ ಬಳಿ ಕಳುಹಿಸಬೇಕು. ಅಲ್ಲಿ ಹೆಚ್ಚು ಮಾತಾಡುವಂತಿಲ್ಲ. ಹೆಚ್ಚೇನು, ಮಾತೇ ಆಡುವಂತಿಲ್ಲ. "ಬಾಯಿ ತೆಗಿ" ಅಂದರೆ ತೆಗಿಯಬೇಕು. ಸುಮ್ಮನೆ ತೆಗೆದರೆ ಸಾಲದು. ಗಂಟಲು ನೋವು ಬರುವವರೆಗೂ ಹಿಗ್ಗಿಸಬೇಕು. "ಬಾಯಿ ಮುಚ್ಚು" ಅಂದಾಗ ತಕ್ಷಣ ಮುಚ್ಚಬೇಕು. ಇಷ್ಟೆಲ್ಲಾ ಮಾಡಿ ಕಡೆಗೆ ನಾವೇ ದುಡ್ಡು ಕೊಟ್ಟು ಬರಬೇಕು. ಆದರೂ ಹಲ್ಲುಗಳು ಬಾಯಲ್ಲಿ ಉಳಿಯಬೇಕು. ಇದು ಕೊನೆಯಿರದ ಒಂದು ಆಸೆ.
*****
ಮನುಷ್ಯನ ದೇಹದ ರೂಪಕ್ಕೆ ಮೆರಗುಕೊಡುವ ಒಂದು ಮುಖ್ಯ ಭಾಗ ಕೂದಲು. ಅದನ್ನು ಸರಿಯಾಗಿ ಗಮನಿಸದಿದ್ದರೆ ಅದೇ ಕುರೂಪಕಾರಕ ಆಗುವುದೂ ಹೌದು. ಅದನ್ನು ದೇಹದ ಒಂದು ಅಂಗ ಎನ್ನುವಂತಿಲ್ಲ. ಕತ್ತರಿಸಿ ಬಿಸಾಡಿದರೂ ಮತ್ತೆ ಮತ್ತೆ ಚಿಗುರುವುದು ಈ ಕೂದಲು. ನೀರು, ಗೊಬ್ಬರ ಬೇಕಾಗಿಲ್ಲ. ಒಬ್ಬನೇ ವ್ಯಕ್ತಿಗೆ ಬೇರೆ ಬೇರೆ ಕಾಲಗಳಲ್ಲಿ ವಿವಿಧ ರೀತಿಯ ನೋಟಗಳನ್ನೂ ಮತ್ತು ಹೊಳಪನ್ನು ಕೊಡುವ ಶಕ್ತಿ ಈ ಕೂದಲೆಂಬುದಕ್ಕೆ ಮತ್ತು ಅದಕ್ಕೆ ಮಾಡುವ ಕೇಶವಿನ್ಯಾಸಗಳಿಗೆ ಉಂಟು. ಹೆಂಗಸರಿಗಂತೂ ಅದು ಸೌಂದರ್ಯದ ಅಳತೆಗೋಲುಗಳಲ್ಲಿ ಒಂದು. "ನೀಲವೇಣಿ", "ನಾಗವೇಣಿ", "ಮೊಣಕಾಲುವರೆಗಿನ ಜಡೆ", ಹೀಗೆ ವರ್ಣನೆಗಳು. ಹಿಂದೆ ಗಂಡಸರೂ ಶಿಖೆ ಬಿಡುತ್ತಿದ್ದರು. ಈಗ ಅದಿಲ್ಲ. ಶಿಖೆ ಇಲ್ಲ ಅಂದ ಮಾತ್ರಕ್ಕೆ ಕೂದಲು ಉದ್ದ ಬಿಡುವುದೇನೂ ಕಡಿಮೆಯಾಗಿಲ್ಲ ಅನ್ನುವುದೇನೋ ಸತ್ಯವೇ.
ಗಂಡುಮಕ್ಕಳಿಗೂ ಚಿಕ್ಕ ವಯಸ್ಸಿನಲ್ಲಿ ಮೊಗ್ಗಿನ ಜಡೆ, ಮುತ್ತಿನ ಜಡೆ ಇತ್ಯಾದಿ ಹಾಕಿ ಫೋಟೋ ತೆಗೆಸುತ್ತಿದ್ದ ಕಾಲ ಒಂದಿತ್ತು. ಬೋಡು ಬುರುಡೆ ವೃದ್ಧರೂ ಚೆನ್ನಾಗಿ "ಭೃಂಗಾಮಲಕ ತೈಲ" ಹಚ್ಚಿಕೊಂಡು ಕೂದಲು ಬೆಳೆಯುವುದೆಂದು ಕನ್ನಡಿ ನೋಡಿಕೊಳ್ಳುತ್ತಿದ್ದ ಕಾಲವೂ ಇತ್ತು. ಕೆಲವರು ಈಗಲೂ ಅದನ್ನು ಮುಂದುವರೆಸಿರಬಹುದು. ಚಿಕ್ಕ ವಯಸ್ಸಿನಲ್ಲೇ ತಲೆಗೂದಲು ಬರಿದಾದ ಗಂಡುಗಳಿಗೆ ವಿವಾಹವೇ ಕಷ್ಟ. ತಲೆಯ ಒಳಗಡೆ ಏನೂ ಇಲ್ಲದಿದ್ದರೂ ಚಿಂತೆಯಿಲ್ಲ. ಹೊರಗಡೆ ಕೂದಲು ಹುಲುಸಾಗಿ ಬೆಳೆದಿರಬೇಕು. ಮದುವೆಯಾದಮೇಲೆ ಎಲ್ಲ ಕೂದಲು ಉದುರಿಹೋದರೂ ಪರವಾಗಿಲ್ಲ. "ಹೆಂಡತಿ ಜುಟ್ಟು ಹಿಡಿದು, ಎಳೆದು, ಕಿತ್ತುಹಾಕಿದಳು" ಎಂದು ಅವಳ ಮೇಲೆ ಗೂಬೆ ಕೂರಿಸಬಹುದು. ಕೂದಲಿಗೆಂದೇ ಮುಡುಪಾದ ಅನೇಕ ಸೌಂದರ್ಯವರ್ಧಕ ಸ್ಥಳಗಳು ಉಂಟು. ಬಣ್ಣ ಬದಲಾಯಿಸುವುದರಿಂದ ಹಿಡಿದು ಅನೇಕ ಸೊಗಸು ಹೆಚ್ಚಿಸುವ ಕ್ರಿಯೆಗಳಿವೆ. ಅವರವರ ಇಷ್ಟ ಮತ್ತು ಹಣದಚೀಲಕ್ಕೆ ತಕ್ಕಂತೆ.
ಶ್ರೀಕೃಷ್ಣನನ್ನು ನೆನೆಯುವಾಗ ಅವನ ವರ್ಣನೆ ಗುಂಗುರು ಕೂದಲಿನಿಂದಲೇ ಪ್ರಾರಂಭ, "ಕುಟಿಲ ಕುಂತಲಂ, ಕುವಲಯದಳ ನೀಲಂ, ಕೋಟಿ ಮದನ ಲಾವಣ್ಯಂ" ಎಂದು ಪ್ರಾರಂಭ. ಚಾಣಕ್ಯನ ಕೂದಲು ವಿಶ್ವ ಪ್ರಸಿದ್ಧ. ಒಂದು ದೊಡ್ಡ ರಾಜ ಸಂತತಿಯನ್ನೇ ನುಂಗಿ ನೀರು ಕುಡಿದದ್ದು ಅವನ ಉದ್ದ ಕೂದಲೇ. ನೂರು ಮಂದಿ ಕೌರವರನ್ನು ಬಲಿ ತೆಗೆದುಕೊಂಡದ್ದೂ ದ್ರೌಪದಿಯ ಕೂದಲೇ ಅಲ್ಲವೇ?
ಶ್ರೀಕೃಷ್ಣ ಹಾಲು ಕುಡಿಯಲು ಯಶೋದೆಯನ್ನು ಬಹಳ ಸತಾಯಿಸುತ್ತಿದನಂತೆ. ಅವಳು ಒಂದು ದಿನ "ಹಾಲು ಕುಡಿದರೆ ನಿನ್ನ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ" ಎಂದು ಪುಸಲಾಯಿಸಿದಳು. ಕೃಷ್ಣ ಹಾಲಿನ ಲೋಟ ಹಿಡಿದ. ಒಂದೊಂದು ಗುಟುಕು ಕುಡಿದ ಕೂಡಲೇ, "ಅಮ್ಮಾ, ಕೂದಲು ಬೆಳೆದಿದೆಯೇ ನೋಡು" ಎಂದು ಕೇಳುತ್ತಾ ಇನ್ನೊಂದು ರೀತಿ ಅಮ್ಮನನ್ನು ಸತಾಯಿಸಿದನಂತೆ. ಲೀಲಾಶುಕ ಕವಿ ಇದನ್ನು ತನ್ನ "ಕೃಷ್ಣ ಕರ್ಣಾಮೃತ" ಕೃತಿಯ ಶ್ಲೋಕವೊಂದರಲ್ಲಿ (ಕ್ಷೀರೇ ಅರ್ಧಪಿತೇ ಹರಿಃ) ಬಲು ಸೊಗಸಾಗಿ ವರ್ಣಿಸಿದ್ದಾನೆ.
*****
ಉಗುರುಗಳು ನಮ್ಮ ದೇಹಗಳ ಒಂದು ಮುಖ್ಯ ಅಂಗ. "ಅದೇನು? ಹೃದಯ ಅಥವಾ ಮಿದುಳಿಗಿಂತ ಮುಖ್ಯವೇ? ಅಥವಾ ಕೈ-ಕಾಲುಗಳಿಗಿಂತ ದೊಡ್ಡವೇ? ಅದು ಹೇಗೆ?" ಎಂದು ಯಾರಾದರೂ ಕೇಳಬಹುದು. ಪ್ರತಿಯೊಂದು ಅಂಗಕ್ಕೂ ಅದರದರ ಪ್ರಾಮುಖ್ಯತೆ ಇದ್ದೇ ಇದೆ. ಉಗುರುಗಳ ನಿಜವಾದ ಉಪಯೋಗ ಅವು ಇಲ್ಲದವರನ್ನು ಕೇಳಬೇಕು. ಯಾವುದಾದರೂ ಅಪಘಾತದಲ್ಲಿ ಅದನ್ನು ಕಳೆದುಕೊಂಡವರು, ಇಲ್ಲವೇ ತೀರ ನುಣುಪಾಗಿ ಕತ್ತರಿಸಿಕೊಂಡವರಿಗೆ ಅದು ಗೊತ್ತಾಗುವುದು. ಬೆರಳುಗಳ ಭದ್ರತೆಗೆ ಮತ್ತು ಅವುಗಳ ಪರಿಣಾಮಕಾರಿ ಉಪಯೋಗಕ್ಕೆ ಉಗುರುಗಳು ಅತ್ಯವಶ್ಯಕ. ಹಾಗೆಂದು ಅವು ಹೆಚ್ಚು ಬೆಳೆಯಲು ಬಿಡುವಂತೆಯೂ ಇಲ್ಲ. ಅವುಗಳು ಎಷ್ಟಿರಬೇಕೋ ಅಷ್ಟಿರಬೇಕು. ಇಲ್ಲದೆ ಇರುವಂತಿಲ್ಲ. ಹಿತ-ಮಿತವಾಗಿ ಅನ್ನುವುದಕ್ಕೆ ಅವನ್ನು ಉದಾಹರಣೆಯಾಗಿ ಕೊಡಬಹುದು!
ಗಿನ ಲೊಲಬ್ರಿಗಿಡ (Gina Lollobrigida) (1927-2023) ಐವತ್ತು-ಅರವತ್ತರ ದಶಕದಲ್ಲಿ ಒಬ್ಬ ಅಪ್ರತಿಮ ಸುಂದರಿ. ಇಟಲಿ ದೇಶದ ನಟಿ, ರೂಪದರ್ಶಿ ಮತ್ತು ಛಾಯಾಚಿತ್ರಗ್ರಾಹಕಿ. "ಹಾಲಿವುಡ್ ಚಲನಚಿತ್ರಗಳ ಸ್ವರ್ಣಯುಗ" ಅನಿಸಿಕೊಂಡ ಆ ಕಾಲದಲ್ಲಿ ಮತ್ತೊಬ್ಬ ಇಟಾಲಿಯನ್ ನಟಿ ಮತ್ತು ಸುಂದರಿ ಸೋಫಿಯಾ ಲೊರೆನ್ (Sophia Loren) ಜತೆಯಲ್ಲಿ ಪ್ರಬಲ ಪ್ರತಿಸ್ಪರ್ಧಿ. ಆ ಸಮಯದಲ್ಲಿ ಗಿನ ಲೊಲಬ್ರಿಗಿಡ ತನ್ನ ಉಗುರುಗಳನ್ನು ಒಂದು ಮಿಲಿಯನ್ ಡಾಲರ್ ಮೊತ್ತಕ್ಕೆ (ಹತ್ತು ಲಕ್ಷ ಡಾಲರ್) ವಿಮೆ ಮಾಡಿಸಿದ್ದಳು ಎನ್ನುವ ಸುದ್ದಿ ಹರಡಿತ್ತು. ಆಗಿನ ಮಿಲಿಯನ್ ಡಾಲರ್ ಅಂದರೆ ಈಗಿನ ಲೆಕ್ಕದಲ್ಲಿ ಬಹಳ ದೊಡ್ಡ ಮೊತ್ತ.
ಈಗಲೂ ಅನೇಕರು, ವಿಶೇಷವಾಗಿ ಹೆಣ್ಣುಮಕ್ಕಳು, ತಮ್ಮ ಉಗುರುಗಳ ಅಂದಕ್ಕೆ, ಬಣ್ಣ ಬಳಿಯುವ ಚಂದಕ್ಕೆ, ವಿಶೇಷ ಗಮನ ಕೊಡುತ್ತಾರೆ. ಉಗುರುಗಳ ನಿರ್ವಹಣೆಗಾಗಿಯೇ ಕ್ಲಿನಿಕ್ಕುಗಳಿವೆ. ಉಗುರುಗಳ ಸೌಂದರ್ಯ ನಿರ್ವಹಣೆಯ ವ್ಯವಹಾರ ಶತಕೋಟಿ ಡಾಲರುಗಳ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಸೌಂದರ್ಯವರ್ಧಕಗಳ ದೊಡ್ಡ ದೊಡ್ಡ ಜಾಹಿರಾತುಗಳು ಅಲ್ಲಲ್ಲಿ ಕಂಡುಬರುತ್ತವೆ.
*****
ಹಲ್ಲು, ಕೂದಲು ಮತ್ತು ಉಗುರುಗಳು ದೇಹದ ಭಾಗಗಳಾದುವು. ಇಡೀ ದೇಹವನ್ನು ಹೊತ್ತ ಮನುಷ್ಯರ ಕಥೆ ಏನು? ಮನುಷ್ಯನು ಸುಮ್ಮನೆ ಇರುವವನಲ್ಲ. ಅವನಿಗೆ ಒಂದು ಸ್ಥಾನ ಬೇಕು. ಸ್ಥಾನಕ್ಕೆ ತಕ್ಕ ಮಾನವೂ ಬೇಕು. ವಾಸ್ತವವಾಗಿ ಸ್ಥಾನಕ್ಕೂ ಮಾನಕ್ಕೂ ಏನೂ ಸಂಬಂಧವಿಲ್ಲ. ಆದರೂ ಸ್ಥಾನ-ಮಾನ ಅನ್ನುವುದು ಈಗಿನ ರಾಜಕೀಯದಲ್ಲಿ ಜೊತೆ-ಜೊತೆಯಾಗಿ ಉಪಯೋಗಿಸುವುದು ಬಂದಿದೆ. ಬರೀ ಸ್ಥಾನ ಸಿಕ್ಕರೆ ಸಾಲದು. ಸರಿಯಾದ ಸ್ಥಾನ ಸಿಗಬೇಕು. ಸರಿಯಾದದ್ದು ಅಂದರೆ ಹೇಗೆ? ಹೇಳುವುದು ಕಷ್ಟ. ಒಬ್ಬನ ಯೋಗ್ಯತೆಗಿಂತ ಸ್ವಲ್ಪ ಹೆಚ್ಚಿದ್ದರೆ ಒಳ್ಳೆಯದು. ತುಂಬಾ ಹೆಚ್ಚಿದ್ದರೆ ಇನ್ನೂ ಒಳ್ಳೆಯದು. ಸಭೆ-ಸಮಾರಂಭಗಳಲ್ಲಿ ಆದರೆ ಮೊದಲನೇ ಸಾಲು. ಮೊದಲ ಸಾಲಿನ ಮಧ್ಯದಲ್ಲಿ ಆದರೆ ಇನ್ನೂ ಉತ್ತಮ. "ಅವನಿಗಿಂತ ಒಳ್ಳೆಯ ಜಾಗದಲ್ಲಿ ನನಗೆ ಕೊಡಬೇಕಾಗಿತ್ತು" ಎಂದು ಜಗಳ ನಡೆಯುವುದು ಸರ್ವೇ ಸಾಮಾನ್ಯ.
ವಿಧಾನಸಭೆ ಸದಸ್ಯ ಆಗಬೇಕು. ಸದಸ್ಯನಾದ ಮೇಲೆ ಮಂತ್ರಿ ಆಗಬೇಕು. ಮಂತ್ರಿ ಆದಮೇಲೆ ಮುಖ್ಯ ಮಂತ್ರಿ ಆಗಬೇಕು. ಮುಖ್ಯ ಮಂತ್ರಿ ಆದಮೇಲೆ ಪ್ರಧಾನ ಮಂತ್ರಿ ಆಗಬೇಕು. ನೇರವಾಗಿ ಪ್ರಧಾನ ಮಂತ್ರಿ ಆದರೆ ಇನ್ನೂ ಒಳ್ಳೆಯದು. "ಅಂತಹ ಸ್ಥಾನವನ್ನು ನಾನು ಅಲಂಕರಿಸುವುದರಿಂದ(?) ಆ ಸ್ಥಾನಕ್ಕೆ ಗೌರವ" ಎಂದು ಹೇಳಿಕೊಳ್ಳುವುದು ಸಾಮಾನ್ಯ. ಸ್ಥಾನಕ್ಕೆ ತಕ್ಕ ಅಧಿಕಾರ ಬೇಕು. ಹಿಂದೆ-ಮುಂದೆ ಬಾಲಬಡುಕರು ಬೇಕು. ಕಾರುಗಳ ಸಾಲು ಬೇಕು. ಕೆಂಪು ಗೂಟದ ಕಾರುಗಳು. ಒಳಗೆ ತಣ್ಣಗಿರುವ, ಹೊರಗಡೆ ಹೊಳೆಯುವ ಕಾರುಗಳು. ಬಾಗಿಲು ತೆಗೆಯುವವರು, ಸಲ್ಯೂಟ್ ಹೊಡೆಯುವವರು, ಹಾರ ಹಾಕುವವರು, ತುರಾಯಿ ಕೊಡುವವರು, ನಿಂಬೆ ಹಣ್ಣು (ಈಗ ಕಡಿಮೆಯಾಗಿರಬಹುದು) ಹಿಡಿದಿದ್ದರೆ ಇನ್ನೂ ಒಳ್ಳೆಯದು. ಹೀಗೆ ಆಸೆಗಳು.
ಆಯಿತು. ಸ್ಥಾನ ಸಿಕ್ಕಿತು. ಒಮ್ಮೆ ಸಿಕ್ಕಿದ ಮೇಲೆ ಆ ಸ್ಥಾನ ಬಿಡುವಂತೆ ಆಗಬಾರದು. ಹೋಗಲಿ. ಬಿಡೋಣ. ಯಾವಾಗ? ಅದಕ್ಕಿಂತ ದೊಡ್ಡ ಸ್ಥಾನ ಸಿಕ್ಕಿದ ಕೂಡಲೇ ಬಿಡೋಣ. ಬಸ್ಸಿನಲ್ಲಿ ಟವಲ್ ಹಾಕಿ ಸೀಟು ಹಿಡಿದಂತೆ ಅಧಿಕಾರಕ್ಕಾಗಿ ಕಾದಿರುವುದು. ಇದು ನಮ್ಮ ಸುತ್ತ-ಮುತ್ತ ನಡೆಯುತ್ತಲೇ ಇರುವುದು. ಕರ್ನಾಟಕದಲ್ಲಂತೂ ಈಗ ಕೆಲವು ದಿನಗಳಿಂದ ಇದು ಬಹಳ ಜೋರಾಗಿ ನಡೆದಿದೆ. "ಜಾಗ ಖಾಲಿ ಇಲ್ಲ" ಎಂದು ಕೆಲವರು. "ಖಾಲಿ ಆದಾಗ ಕೊಡಿ" ಎಂದು ಮತ್ತೆ ಕೆಲವರು. "ಖಾಲಿ ಮಾಡಿಸಿ ಕೊಡಿ" ಎಂದು ಇನ್ನೂ ಕೆಲವರು!
*****
ಮೇಲೆ ಹಲ್ಲು, ಕೂದಲು, ಮತ್ತು ಉಗುರುಗಳ ವಿಷಯ ನೋಡಿದೆವು. ಇವು ಮೂರೂ ಬಹಳ ಬೆಲೆ ಬಾಳುವುವು. ಯಾವಾಗ? ಹಲ್ಲು ಬಾಯಿಯ ಒಳಗಡೆ ಗಟ್ಟಿಯಾಗಿ ಕೂತಿದ್ದಾಗ. ಕೂದಲು ತಲೆಯಲ್ಲಿ ಭದ್ರವಾಗಿ ಬೇರೂರಿದ್ದಾಗ. ಉಗುರು ಬೆರಳಿನ ಭಾಗವಾಗಿದ್ದಾಗ. ಅದೇ ಹಲ್ಲು ನೆಲದ ಮೇಲೆ ಬಿದ್ದಾಗ? ಅಥವಾ ಕೈಗೆ ಸಿಕ್ಕಾಗ? ಕೂದಲು ಆಹಾರದ ಮಧ್ಯೆ ಬಂದಾಗ? ಉಗುರು ಕಾಲಿನ ಕೆಳಗೆ ಸಿಕ್ಕಿ ಗಾಯವಾದಾಗ? ಇವೆಲ್ಲವೂ ಅಪಶಕುನ ಅನ್ನುತ್ತಾರೆ. "ಛೀ, ಇದೇನಿದು ಅಸಹ್ಯ?" ಎಂದು ಮುಖ ಸಿಂಡರಿಸುತ್ತಾರೆ.
ಮನುಷ್ಯರೂ ಅಷ್ಟೇ. ಒಳ್ಳೆಯ ಸ್ಥಾನದಲ್ಲಿದ್ದಾಗ ಅವರಿಗೆ ಒಂದು ಬೆಲೆ. ಅದೇ ಆ ಸ್ಥಾನದಿಂದ ಕೆಳಗಿಳಿದಾಗ? ಯೋಗ್ಯ ಮುನುಷ್ಯನಾದರೆ ಅವನಿಗೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಇಲ್ಲದಿದ್ದರೆ ಆ ಸ್ಥಾನ ಹೋದಮೇಲೆ ಮುಗಿಯಿತು.
ಈ ನಾಲ್ಕನ್ನೂ ಸೇರಿಸಿ ಒಂದು ಸುಭಾಷಿತ ಹೀಗೆ ಹೇಳುತ್ತದೆ:
ಸ್ಥಾನಭ್ರಷ್ಟಾ: ನ ಶೋಭಂತೇ ದಂತಾಃ ಕೇಶಾ: ನಖಾ: ನರಾಃ
ಇತಿ ವಿಜ್ಞಾಯ ಮತಿಮಾನ್ ಸ್ವಸ್ಥಾನಂ ನ ಪರಿತ್ಯಜೇತ್
ಹಲ್ಲುಗಳು, ಕೂದಲು, ಉಗುರು ಮತ್ತು ಮನುಷ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಂಡಾಗ ತಮ್ಮ ಮೌಲ್ಯ ಕಳೆದುಕೊಳ್ಳುತ್ತವೆ. ಇದನ್ನು ತಿಳಿದಿರುವ ಬುದ್ಧಿವಂತರು ತಮ್ಮ ಜಾಗಗಳನ್ನು ಬಿಡುವುದಿಲ್ಲ!
*****
ಮಹಾರಾಷ್ಟ್ರದ ರಾಜಕೀಯದಲ್ಲಿ ವಿಶೇಷ ನಡೆಯಿತು. ಹಿಂದೆ ಮುಖ್ಯಮಂತ್ರಿಗಳಾಗಿದ್ದ ಒಬ್ಬರು ಇನ್ನೊಂದು ಸರಕಾರ ಬೀಳಿಸುವ ಸಲುವಾಗಿ ಉದಯಿಸಿದ ಮತ್ತೊಂದು ಮಂತ್ರಿ ಮಂಡಲದಲ್ಲಿ ಉಪಮುಖ್ಯಮಂತ್ರಿ ಆಗಬೇಕಾಯಿತು. ಮುಂದಿನ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹೆಚ್ಚಿನ ಜನಬೆಂಬಲ ಸಿಕ್ಕಿತು. ಈಗ ಮಧ್ಯದಲ್ಲಿ ಮುಖ್ಯಮಂತ್ರಿ ಆಗಿದ್ದವರು ಅದೇ ಸ್ಥಾನ ಬೇಕೆಂದರು. ಕಡೆಗೆ ಅವರು ಉಪಮುಖ್ಯಮಂತ್ರಿ ಆಗಬೇಕಾಯಿತು. ಕಾಲಕಾಲಕ್ಕೆ ಮೌಲ್ಯಯುತ ಜಾಗಗಳೇನೋ ಸಿಕ್ಕಿವೆ. ಆದರೆ ಜಾಗ ಬಿಡಬೇಕಾದಾಗ ಬಹಳ ಸಂಕಟ. ಕಡೆಯವರೆಗೂ ಹಿಡಿದುಕೊಂಡಿರುವುದು. ವಿಧಿಯೇ ಇಲ್ಲದಿದ್ದರೆ ಆಗ ನೋಡೋಣ. ಹೀಗೆ ಕುರ್ಚಿಯ ಆಟ.
ಏನಾದರಾಗಲಿ, ಬುದ್ಧಿವಂತರು ಜಾಗ ಬಿಡುವುದಿಲ್ಲ. ಅವರಿಗಿಂತ ಬುದ್ಧಿವಂತರು ಈ ಜಾಗ ಹಿಡಿಯುವ ಪ್ರಯತ್ನ ಬಿಡುವುದಿಲ್ಲ. ಪೆದ್ದು ಪ್ರಜೆಗಳು ಈ ಕಣ್ಣಾಮುಚ್ಚಾಲೆ ಆಟ ನೋಡುತ್ತಾ ಕೂಡಬೇಕು.
ಜಾಗ ಬಿಟ್ಟವರುಂಟೇ?
ಅತೀ ಸುಂದರ ಲೇಖನ ಮತ್ತೆಮತ್ತೆ ಓದಬೇಕೆನಿಸುತ್ತದೆ
ReplyDeleteಸುಂದರವಾದ ಸುಭಾಷಿಚ
ReplyDeleteEvery other sentence holds a mirror and reflects our knowledge , what to do. 😆
ReplyDeleteEach paragraph interspersed with suttle humour, made an interesting reading.
Knowledge laced with the depth of study and understanding is what makes it standout tall 👏👏👍🏻