Monday, November 17, 2025

ದೇವರ ಎಲೆ


ಹಿಂದಿನ ಒಂದು ಸಂಚಿಕೆಯಲ್ಲಿ "ಪಂಡಿತರ ಮನೆ ಎಲ್ಲಿದೆ?" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಶ್ರೀ ಶಂಕರಾಚಾರ್ಯರು ಮಾಹಿಷ್ಮತಿ ನಗರಕ್ಕೆ ಬಂದು ಮಂಡನ ಮಿಶ್ರ ಪಂಡಿತರ ಮನೆ ಹುಡುಕುವಾಗ ನೀರು ತರಲು ಹೊರಟಿದ್ದ ಹೆಣ್ಣು ಮಕ್ಕಳನ್ನು ಆ ಬಗ್ಗೆ ವಿಚಾರಿಸಿದ್ದು ಮತ್ತು ಅವರು ಕೊಟ್ಟ ಉತ್ತರವನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಆಚಾರ್ಯರು ಅದೇ ಜಾಡಿನಲ್ಲಿ ನಡೆದು ಮಂಡನ ಮಿಶ್ರ ಪಂಡಿತರ ಮನೆ ತಲುಪಿದರು. "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಮಿಶ್ರರ ಮನೆ ವಿಶಾಲವಾಗಿ ಒಂದು ಅರಮನೆಯಂತೆ ಇತ್ತು ಎಂದು ವರ್ಣಿತವಾಗಿದೆ. ಆಚಾರ್ಯರು ಆ ಮನೆಯ ಮುಂದೆ ಬಂದು ನಿಂತಾಗ ಮುಂಬಾಗಿಲು ಮುಚ್ಚಿತ್ತು. ಅಲ್ಲಿ ಕಂಡ ಲಕ್ಷಣಗಳಿಂದ ಅಂದು ಆ ಮನೆಯಲ್ಲಿ ಶ್ರಾದ್ಧ (ಪಿತೃಕಾರ್ಯ) ನಡೆಯುತ್ತಿರುವುದಾಗಿ ಆಚಾರ್ಯರು ತಿಳಿದರು. 

ಶ್ರಾದ್ಧ ನಡೆಯುವ ದಿನ ಬೆಳಗ್ಗೆ ಪ್ರತಿದಿನದಂತೆ ಆ ಮನೆಯ ಮುಂದೆ ರಂಗೋಲಿ ಹಾಕುವುದಿಲ್ಲ. ಅಂದು ಬಂದ ಅಭ್ಯಾಗತರನ್ನು ಸ್ವಾಗತಿಸಿ, ಮನೆಯ ಹೆಬ್ಬಾಗಿಲ ಮುಂದೆ ಕಾಲು ತೊಳೆದು, ನಂತರ ಮನೆಯ ಒಳಗೆ ಕರೆದುಕೊಂಡು ಹೋಗಿರುವ ಲಕ್ಷಣಗಳು ಕಾಣಿಸುತ್ತವೆ. ಇವನ್ನು ಕಂಡ ಅತಿಥಿಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಗೃಹಸ್ಥರಿಂದ ಆಹ್ವಾನ ಪಡೆದು ಬಂದವರಿಗೆ "ಅಭ್ಯಾಗತರು" ಎಂದೂ, ಆಹ್ವಾನವಿಲ್ಲದೆ ಬಂದವರನ್ನು "ಅತಿಥಿಗಳು" ಎಂದೂ ನಿರ್ದೇಶಿಸುವುದು ಕ್ರಮ. (ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ). ಶ್ರಾದ್ಧ ಕಾರ್ಯ ಮುಗಿದ ನಂತರ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಅದಾದ ನಂತರ ಬೇರೆಯವರು ಆ ಮನೆಯೊಳಗೆ ಪ್ರವೇಶ ಮಾಡಲು ಅಭ್ಯಂತರವಿಲ್ಲ. 

ಆಚಾರ್ಯರು ತಾವು ಬಂದ ಕೆಲಸವನ್ನು ಮುಂದೆ ಹಾಕಲು ಇಷ್ಟಪಡಲಿಲ್ಲ. ವಾಯುಮಾರ್ಗದಿಂದ ಮನೆಯನ್ನು ಪ್ರವೇಶಿಸಿದರು. (ಆ ಮನೆ ವಿಶಾಲವಾಗಿದ್ದು ತೊಟ್ಟಿಯ ಮನೆಯಾಗಿತ್ತು. ಮನೆಯ ಹೊರಗಡೆ ಇದ್ದ ದೊಡ್ಡ ಮರವೊಂದನ್ನು ಹತ್ತಿ ಮನೆಯ ಕಡೆಗೆ ಬಾಗಿರುವ ಕೊಂಬೆಯ ಮೂಲಕ ಒಳಗಡೆ ಇಳಿದರು ಎಂದು ಕೆಲವರು ಹೇಳುತ್ತಾರೆ. ಯೋಗಶಕ್ತಿಯಿಂದ ಅಲ್ಲಿ ತಲುಪಿದರು ಎಂದೂ ಅಭಿಪ್ರಾಯವಿದೆ). ಅಂಗಳದಲ್ಲಿ ಇಳಿದು ಅಭ್ಯಾಗತರಾದ ಜೈಮಿನಿ-ವ್ಯಾಸರನ್ನು ಸತ್ಕರಿಸುತ್ತಿದ್ದ ಮಂಡನ ಮಿಶ್ರರ ಎದುರು ನಿಂತರು!
*****

ತಾವು ಶ್ರದ್ದೆಯಿಂದ ಮಾಡುತ್ತಿದ್ದ ಪಿರ್ತುಕಾರ್ಯದ ಮಧ್ಯೆ ಏಕಾಏಕಿಯಾಗಿ ಬಂದು ನಿಂತ ಯತಿಯೊಬ್ಬರನ್ನು ಕಂಡು ಮಂಡನ ಮಿಶ್ರರಿಗೆ ಆಶ್ಚರ್ಯವೂ, ಕೋಪವೂ ಒಟ್ಟಿಗೆ ಆದವು. ಶ್ರಾದ್ಧದ ದಿನ ಕೋಪ ಮಾಡಿಕೊಳ್ಳಬಾರದು ಎಂದು ನಿಯಮ. (ಬೇರೆ ದಿನ ಕೋಪ ಮಾಡಿಕೊಳ್ಳಬಹುದು ಎಂದು ಅರ್ಥವಲ್ಲ. ಎಂದೂ ಕೋಪ ಮಾಡಿಕೊಳ್ಳಬಾರದು. ಶ್ರಾದ್ಧದ ದಿನವಂತೂ ಸರ್ವಥಾ ಕೂಡದು ಎಂದು ತಾತ್ಪರ್ಯ). ಆಚಾರ್ಯರು, ಜೈಮಿನಿ-ವ್ಯಾಸರು ಪರಸ್ಪರ ವಂದಿಸಿದರು. ಆಚಾರ್ಯರನ್ನು ಉದ್ದೇಶಿಸಿ ಮಂಡನ ಮಿಶ್ರರು ಕೆಲವು ಪ್ರಶ್ನೆಗಳನ್ನು ಕೇಳಿದರು. ಆಚಾರ್ಯರು ಉತ್ತರಿಸಿದರು. ಪರಸ್ಪರ ದೀರ್ಘ ಸಂವಾದವೇ ನಡೆಯಿತು. 

ವಾದದ ಸಮಯದಲ್ಲಿ ವಾದಿ-ಪ್ರತಿವಾದಿಗಳು ಒಬ್ಬರು ಇನ್ನೊಬ್ಬರ ಮಾನಸಿಕ ಮತ್ತು ಬೌದ್ಧಿಕ ಸಮತೋಲನವನ್ನು ತಪ್ಪಿಸಿ ಇಕ್ಕಟ್ಟಿಗೆ ಸಿಲುಕಿಸುವುದು ಒಂದು ರೀತಿಯ ತಂತ್ರ. ಆಗ ಎದುರಾಳಿ ತಪ್ಪು ಮಾಡುವ ಸಾಧ್ಯತೆ ಹೆಚ್ಚು. (ಅನೇಕ ಕ್ರೀಡೆಗಳಲ್ಲೂ ಕೆಲವು ಆಟಗಾರರು ಈ ತಂತ್ರ ಉಪಯೋಗಿಸುವುದನ್ನು ನಾವು ನೋಡಿದ್ದೇವೆ). ಆಚಾರ್ಯರು ಇದೇ ರೀತಿಯ ತಂತ್ರವನ್ನು ಉಪಯೋಗಿಸಿದರು. ಮಿಶ್ರರ ಪ್ರತಿ ಪ್ರಶ್ನೆಗೂ ಇನ್ನೊಂದು ಅರ್ಥ ತೆಗೆದು, ಅದಕ್ಕೆ ಚಮತ್ಕಾರಿಕವಾದ ಉತ್ತರ ಕೊಟ್ಟು ಅವರ ಸಮತೋಲನವನ್ನು ಕೆದಕುತ್ತಾ ಹೋದರು. ಇದರಿಂದ ಇನ್ನಷ್ಟು ಕೋಪಗೊಂಡ ಮಿಶ್ರರು ಕೆಲವು ಅಪಶಬ್ದಗಳ ಪ್ರಯೋಗ ಮಾಡಬೇಕಾಯಿತು. 

ಈ ಸಂದರ್ಭದಲ್ಲಿ ಮಿಶ್ರರು ಮತ್ತು ಆಚಾರ್ಯರ ನಡುವೆ ನಡೆದ ಸಂವಾದ ಬಹಳ ಸೊಗಸಾಗಿದೆ. ತರ್ಕ ಮತ್ತು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳು ಇದನ್ನು ಅವಶ್ಯ ಗಮನಿಸಬೇಕು. ಪ್ರತಿ ಪದಕ್ಕೂ, ಪ್ರತಿ ಪ್ರಶ್ನೆಗೂ ಬೇರೆ ಅರ್ಥ ಅನುಸಂಧಾನ ಮಾಡಿ ಆಚಾರ್ಯರು ಉತ್ತರಿಸುತ್ತಾ ಹೋದರು. ಕಡೆಗೆ ಇಬ್ಬರ ನಡುವಿನ ಮಾತುಗಳು ದಿಕ್ಕು ತಪ್ಪಿ ಎಲ್ಲೆಲ್ಲಿಗೋ ಹೋಯಿತು. 

*****
ಈ ಸಂದರ್ಭದ "ಶ್ರೀ ಶಂಕರ ದಿಗ್ವಿಜಯ" ಕೃತಿಯ ಒಂದು ಶ್ಲೋಕವನ್ನು ನೋಡಬಹುದು. ಅದು ಹೀಗಿದೆ:

ಕುತೋ ಮುಂಡೀ ಗಲಾನ್ಮುಂಡೀ 
ಪಂಥಾಸ್ತೇ ಪೃಚ್ಛತಾ ಮಯಾ 
ಕಿಮಾಹ ಪಂಥಾ ತ್ವನ್ಮಾತಾ 
ಮುಂಡೇತ್ಯಾಹ ತಥೈವಹಿ 

ಮಿಶ್ರರು "ಕುತೋಮುಂಡೀ?" ಎಂದು ಕೇಳಿದರು. "ತಲೆ ಬೋಳಿಸಿಕೊಂಡಿರುವ ಯತಿಯೇ, ಎಲ್ಲಿಂದ ಬಂದೆ?" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ಎಲ್ಲಿಂದ ಬೋಳಿಸಿದೆ?" ಎಂದು ಅರ್ಥಮಾಡಿ "ಗಲಾನ್ಮುಂಡೀ", ಅಂದರೆ "ಕುತ್ತಿಗೆಯಿಂದ ಮೇಲೆ ಬೋಳಿಸಿದೆ", ಎಂದು ಉತ್ತರ ಕೊಟ್ಟರು. 

ಇದರಿಂದ ಕೆರಳಿದ ಮಿಶ್ರರು "ಪಂಥಾಸ್ತೇ ಪೃಚ್ಛತಾ ಮಯಾ" ಎಂದರು. "ನಾನು ಕೇಳಿದ್ದು ದಾರಿಯನ್ನು" ಎಂದು ಪ್ರಶ್ನೆ. ಇದಕ್ಕೆ ಆಚಾರ್ಯರು "ದಾರಿಯನ್ನು ಕೇಳಿದೆ" ಎಂದು ಅರ್ಥಮಾಡಿ "ಕಿಮಾಹ ಪಂಥಾ?", "ದಾರಿಯನ್ನು ಕೇಳಿದೆಯಲ್ಲಾ, ಅದು ಏನು ಹೇಳಿತು?", ಎಂದು ಪುನಃಪ್ರಶ್ನೆ ಮಾಡಿದರು. 

ಮಿಶ್ರರು ಮತ್ತಷ್ಟು ಕೋಪಗೊಂಡರು. "ತ್ವನ್ಮಾತಾ ಮುಂಡೇತ್ಯಾಹ", ಅಂದರೆ "ನಿನ್ನ ತಾಯಿ ವಿಧವೆ ಎಂದಿತು" ಎಂದು ಹೇಳಿದರು. ಆಚಾರ್ಯರು "ತಥೈವಹಿ", ಅಂದರೆ "ಹಾಗಿದ್ದರೆ ಸರಿ" ಅಂದರು. ("ದಾರಿಯನ್ನು ಪ್ರಶ್ನೆ ಕೇಳಿದ್ದು ನೀನು. ಅದು ಕೊಟ್ಟ ಉತ್ತರವೂ ನಿನಗೇ ಸೇರಿದ್ದು. ಅಂದರೆ ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅರ್ಥ).  

ಪ್ರಶ್ನೋತ್ತರ ಎಲ್ಲಿಂದ ಎಲ್ಲಿಗೋ ಹೋಯಿತು ಎಂದು ಮತ್ತೆ ಹೇಳಬೇಕಾಗಿಲ್ಲ. ಹೀಗೇ ಸಂಭಾಷಣೆ ಮುಂದುವರೆಯಿತು. 

*****

ಇದೆಲ್ಲವನ್ನೂ ಜೈಮಿನಿ-ವ್ಯಾಸರು ನೋಡುತ್ತಿದ್ದರು. ಈಗ ವ್ಯಾಸರು ಮಧ್ಯೆ ಪ್ರವೇಶಿಸಿದರು. 

"ಮಿಶ್ರರೇ, ಬಂದಿರುವವರು ಯತಿಗಳು. ಬಂದಿರುವುದು ಶ್ರಾದ್ಧಕಾಲ. ಹೀಗಿರುವಾಗ ಅವರೊಡನೆ ಹೀಗೆ ಸಂವಾದ ಸಲ್ಲದು. ಬಂದಿರುವುದು "ಶ್ರಾದ್ಧ ಸಂರಕ್ಷಕನಾದ ಶ್ರೀ ಮಹಾವಿಷ್ಣು" ಎಂದು ತಿಳಿದು ಅವರನ್ನು ಸತ್ಕರಿಸಿರಿ" ಎಂದರು. 

ಮಿಶ್ರರಿಗೆ ತಮ್ಮ ತಪ್ಪಿನ ಅರಿವಾಯಿತು. ತಕ್ಷಣ ಆಚಾರ್ಯರನ್ನು "ಭಿಕ್ಷಾ ಸ್ವೀಕಾರ" ಮಾಡಬೇಕೆಂದು ಕೋರಿದರು. ಆಚಾರ್ಯರು "ನನಗೆ ವಾದಭಿಕ್ಷೆ ಬೇಕು. ಅನ್ನದ ಭಿಕ್ಷೆ ಅಲ್ಲ" ಅಂದರು. ಮಿಶ್ರರು "ತಮ್ಮೊಡನೆ ವಾದ ಮಾಡುವುದು ಒಂದು ಭಾಗ್ಯವೇ. ಆದರೆ ಇಂದು ಶ್ರಾದ್ಧ ಕಾಲ. ಇಂದು ಈ ಭಿಕ್ಷಾ ಸ್ವೀಕರಿಸಿ. ವಾದ ನಾಳೆ ನಡೆಯಬಹುದು" ಎಂದರು. ಆಚಾರ್ಯರು ಒಪ್ಪಿದರು. 

ಆಚಾರ್ಯರಿಗೆ ಮತ್ತೊಂದು ಎಲೆಯಲ್ಲಿ ಬಡಿಸಿ ಭಿಕ್ಷಾಸ್ವೀಕಾರ ಆಯಿತು. ಜೈಮಿನಿ-ವ್ಯಾಸರನ್ನು ಕೂಡಿಸಿಕೊಂಡು ಶ್ರಾದ್ಧ ಕರ್ಮವೂ ನಡೆಯಿತು. ಹೀಗೆ ಮಿಶ್ರರು "ಯತಿಭಿಕ್ಷಾ" ಮತ್ತು "ಶ್ರಾದ್ಹಕಾರ್ಯ" ಎರಡನ್ನೂ ನಡೆಸಿದರು. 

ಮಾರನೆಯ ದಿನದಿಂದ ನಡೆದ ಐತಿಹಾಸಿಕ ವಾದದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಎಂಟು ದಿನಗಳ ಅಖಂಡ ವಾದದಲ್ಲಿ ಸೋತ ಮಂಡನ ಮಿಶ್ರರು ಆಚಾರ್ಯರಿಂದ ಸನ್ಯಾಸ ಸ್ವೀಕರಿಸಿ "ಶ್ರೀ ಸುರೇಶ್ವರಾಚಾರ್ಯ" ಎಂದು ಪ್ರಸಿದ್ಧರಾದರು. 

*****

ಕಾಶ್ಮೀರದ ರಾಜಧಾನಿ ಶ್ರೀನಗರ ಪಟ್ಟಣದ ಹೊರಭಾಗದಲ್ಲಿ "ಶಂಕರಾಚಾರ್ಯ ದೇವಾಲಯ" ಎಂದು ಹೆಸರಿನ ಸಣ್ಣ ಬೆಟ್ಟ ಇದೆ. ಅಲ್ಲಿ ಒಂದು ಶಿವನ ದೇವಾಲಯವಿದೆ. ಅದರ ಗರ್ಭಗುಡಿಯ ಕೆಳಭಾಗದಲ್ಲಿ ಒಂದು ಗುಹೆಯಿದೆ. ಶ್ರೀ ಶಂಕರಾಚಾರ್ಯರು ಈ ಗುಹೆಯಲ್ಲಿ ವಾಸಿಸಿ ತಪಸ್ಸು ಮಾಡಿದರೆಂದು ಹೇಳುತ್ತಾರೆ. (ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಈ ಮಾಡಿ ಓದಬಹುದು). ಬೆಟ್ಟದ ದೇವಾಲಯದಿಂದ ನೋಡಿದರೆ ಒಂದು ಕಡೆ "ದಾಲ್ ಲೇಕ್" ಸರೋವರ ಕಾಣುತ್ತದೆ. ಅದರ ಬಳಿ "ಸುರೇಶ್ವರಿ" ಎನ್ನುವ ಹೆಸರಿನ ದೇವಿಯ ದೇವಾಲಯವೊಂದು ಇತ್ತಂತೆ. ಈಗ ಇಲ್ಲ. "ಕಾಶ್ಮೀರಪುರವಾಸಿನಿ" ಶಾರದೆಯನ್ನು ನಮ್ಮ ಕರ್ನಾಟಕಕ್ಕೆ ಕರೆತಂದು ಶೃಂಗೇರಿಯಲ್ಲಿ ನೆಲೆಯಾಗುವಂತೆ ಮಾಡಿದ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಹಾಗೆಯೇ ಶ್ರೀ ಸುರೇಶ್ವರಾಚಾರ್ಯರನ್ನು ಶೃಂಗೇರಿ ಪೀಠದ ಮೊದಲ ಮಠಾಧೀಶರಾಗಿ ನೇಮಿಸಿದರು. 

ಮಂಡನ ಮಿಶ್ರರ ಮನೆಯಲ್ಲಿ ನಡೆದ ಈ ಘಟನೆ ನಂತರ ಶ್ರಾದ್ಧಗಳಲ್ಲಿ "ಶ್ರಾದ್ಧ ಸಂರಕ್ಷಕ ಶ್ರೀ ಮಹಾವಿಷ್ಣು" ಬಂದಿದ್ದಾನೆ ಎಂದು ಭಾವಿಸಿ "ದೇವರ ಎಲೆ" ಹಾಕುವ ಸಂಪ್ರದಾಯ ನಡೆದು ಬಂದಿದೆ. (ದ್ವೈತಿಗಳಲ್ಲಿ ಈ ಸಂಪ್ರದಾಯ ಇಲ್ಲ). ಜ್ಞಾನವೃದ್ಧರು ಮತ್ತು ವಯೋವೃದ್ಧರೊಬ್ಬರನ್ನು ಕರೆದು ಈ ಎಲೆಯಲ್ಲಿ ಭೋಜನಕ್ಕೆ ಕೂಡಿಸುತ್ತಿದ್ದರು. ಅಥವಾ ಆ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದ ಅತಿಥಿಗೆ ಅಲ್ಲಿ ಅವಕಾಶ ಇತ್ತು. ಯಾರೂ ಬಾರದಿದ್ದರೆ ನಂತರ ಮನೆಯ ಹಿರಿಯರು ಅಥವಾ ಶ್ರಾದ್ಧ ಮಾಡುವ ಕರ್ತೃಗಳಲ್ಲಿ ಒಬ್ಬರು ಅಲ್ಲಿ ಭೋಜನ ಮಾಡುತ್ತಿದ್ದರು. 

"ನಾಲ್ಕು ಮಾತುಗಳು" ಅನ್ನುವ ಸಂಚಿಕೆಯಲ್ಲಿ ಶ್ರಾದ್ಧ ಕರ್ಮಗಳಲ್ಲಿ ದೌಹಿತ್ರರ ಆಹ್ವಾನದ ವಿಷಯ ಬಂದಿದೆ. (ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). ಮಿತ್ರರೊಬ್ಬರು ದೌಹಿತ್ರರು ಹೆಣ್ಣಾಗಿದ್ದರೆ ಈ ಎಲೆಯಲ್ಲಿ ಭೋಜನ ಮಾಡಲು ಕೂಡಿಸುತ್ತಾರೆ ಎಂದು ತಿಳಿಸಿದ್ದಾರೆ. ಅವರವರ ಮನೆಯ ಸಂಪ್ರದಾಯದಂತೆ ಇದು ನಡೆಯುತ್ತದೆ. 

ಹೀಗೆ ನಡೆದುಬಂದಿರುವ "ದೇವರ ಎಲೆ" ಒಂದು ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇರುವ, ಬಹಳ ಗೌರವದಿಂದ ಕೂಡಿರುವ ಆಚರಣೆ. 

3 comments:

  1. Very interesting to know about ‘Devara Yele’. Your topics in your blog give us a meaning we are looking for about why certain things are done certain way. There is always an instance to prove it like in this one. The divine purpose has played a part in it all the time. UR….

    ReplyDelete
  2. ಅವೀಕ ವಷಯಗಳು ತಿಳಿಯದ್ದು ಇಲ್ಲ ತಿಳಿಯುವ ಅವಕಾಶ ಶ್ರೀಮಾನ್ಯರು ಕಲ್ಪಿಸಿರುತ್ತಾರೆ
    ಧನ್ಯೋಸ್ಮಿ

    ReplyDelete
  3. ಎ.ಎನ್.ಮೂರ್ತಿ.November 17, 2025 at 7:17 PM

    ನಮ್ಮ ಪೂರ್ವಜರು ಆಚರಿಸುತ್ತಿದ್ದ ಎಲ್ಲ ಕ್ರಿಯೆಗಳಿಗೂ ವೈಜ್ಞಾನಿಕ/ವೈಚಾರಿಕ ಹಿನ್ನೆಲೆ ಇದೆ. ಅದನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ.ಈ ನಿಟ್ಟಿನಲ್ಲಿ ನಿಮ್ಮ ಕೊಡುಗೆ ಶ್ಲಾಘನೀಯ. ಧನ್ಯವಾದಗಳು.

    ReplyDelete