ಕೆಲವು ವಾಕ್ಯಗಳು ಅಥವಾ ವಾಕ್ಯಖಂಡಗಳು (ನುಡಿಗಟ್ಟುಗಳು) ಆಗಾಗ್ಗೆ ನಮ್ಮ ಕಿವಿಗಳ ಮೇಲೆ ಬೀಳುತ್ತಿರುತ್ತವೆ. ಅವು ಪೂರ್ಣವಾಗಿರುವುದಿಲ್ಲ. ಅವನ್ನು ಕೇಳಿದ ತಕ್ಷಣ "ಇದರ ಹಿಂದೆ-ಮುಂದೆ ಇನ್ನೇನೋ ಇರಬೇಕು" ಎಂದು ಅನ್ನಿಸುತ್ತದೆ. ಅದು ಅನೇಕ ವೇಳೆ ಪೂರ್ತಿಯಾಗಿ ಹೇಳುವವರಿಗೂ ಗೊತ್ತಿಲ್ಲ; ಕೇಳುವವರಿಗೂ ಗೊತ್ತಿಲ್ಲ. ಯಾವುದೋ ಒಂದು ಉಕ್ತಿಯ ಭಾಗ ಅವು.
ಹಿಂದು-ಮುಂದಿನ ಭಾಗಗಳು ಕೂಡ ಚೆನ್ನಾಗಿಯೇ ಇರಬೇಕು. ಆದರೆ ಈ ಭಾಗ ಅವುಗಳಿಗಿಂತ ಸ್ವಲ್ಪ ಹೆಚ್ಚಾಗಿ ಚೆನ್ನಾಗಿತ್ತು. ಹೀಗಾಗಿ ಅವುಗಳಿಗಿಂತ ವಿಸ್ತಾರವಾಗಿ ಪ್ರಸಾರವಾಯಿತು. ಈ ಕಾರಣದಿಂದ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿ ನಿಂತಿತು. ಇದರ ಹಿಂದು-ಮುಂದಿನವು ಇಷ್ಟು ಜನಪ್ರಿಯವಾಗಲಿಲ್ಲ. ಕ್ರಮೇಣ ಮರೆತುಹೋದುವು. ಅಥವಾ ಹುಡುಕಿಕೊಂಡು ಹೋದವರಿಗೆ ಮಾತ್ರವೇ ಸಿಕ್ಕುವುವು. ಇದು ಎಲ್ಲ ಭಾಷೆಗಳಲ್ಲೂ, ಎಲ್ಲ ಕಾಲಗಳಲ್ಲೂ ನಡೆದುಬಂದಿರುವ ಒಂದು ಸಂಗತಿ. ಒಂದು ಒಳ್ಳೆಯ ಊಟದಲ್ಲಿ ಎಲ್ಲ ಪರಿಕರಗಳೂ ಚೆನ್ನಾಗಿಯೇ ಇದ್ದವು. ಆದರೂ ಅವುಗಳಲ್ಲಿ ಒಂದು ಮಿಕ್ಕೆಲ್ಲವನ್ನೂ ಮೀರಿಸಿ, ಮನಸ್ಸಿಗೆ ಹಿತವೆನಿಸಿ ನೆನಪಿನಲ್ಲಿ ನಿಂತಿತು. ಸರದಲ್ಲಿರುವ ಎಲ್ಲ ಮಣಿಗಳೂ ಹೊಳೆಯುತ್ತಿದ್ದರೂ ಪದಕದ ಮಣಿ (ಪೆಂಡೆಂಟ್) ಆಕರ್ಷಿಸುವಂತೆ. ಹೀಗೆ.
"ವರ್ಣಮಾತ್ರಂ ಕಲಿಸಿದಾತಂ ಗುರು" ಮತ್ತು "ಬಡವಂ ಬಲ್ಲಿದನಾಗನೇ" ಎನ್ನುವುವು ಈ ರೀತಿಯ ನುಡಿಗಟ್ಟುಗಳು. "ಧರೆಯೊಳ್ ದಾತರು ಪುಟ್ಟರೇ" ಎಂದೂ ಒಂದುಂಟು. "ಕೆಲವಂ ಬಲ್ಲವರಿಂದ ಕಲ್ತು" ಅನ್ನುವುದು ಮತ್ತೊಂದು. ಇವೆಲ್ಲಾ ಎಲ್ಲಿಂದ ಬಂದವು? ಹಿಂದಿನ ಪೀಳಿಗೆಯ ಮಕ್ಕಳು ಶಾಲೆಗಳಲ್ಲಿ ಇವೆಲ್ಲವನ್ನೂ ಕಲಿಯುತ್ತಿದ್ದರು. ಈಗ ಪಾಠಕ್ರಮವೇ ಬದಲಾಗಿ ಇವೆಲ್ಲವೂ ಮರೆತುಹೋಗುತ್ತಿವೆ.
*****
"ಗದುಗಿನ ವೀರನಾರಾಯಣ" ಅಂಕಿತದ "ಕರ್ನಾಟ ಭಾರತ ಕಥಾಮಂಜರಿ" ಮೂಲಕ ಗದಗ ಪಟ್ಟಣವೂ, ಕುಮಾರವ್ಯಾಸನೂ, ಕನ್ನಡ ಭಾರತವೂ ಅಮರರಾದರು. ಮೊದಲಿಗೆ ಈ ಗದಗ ಪಟ್ಟಣವು ಧಾರವಾಡ ಜಿಲ್ಲೆಯ ಭಾಗವಾಗಿದ್ದು ಈಗ ಅದೇ ಒಂದು ಜಿಲ್ಲೆಯ ಕೇಂದ್ರವಾಗಿದೆ. ಈ ಗದಗ ನಗರದಿಂದ ಇಪ್ಪತ್ತೈದು ಮೈಲಿ ದೂರದ ಒಂದು ಊರು "ಲಕ್ಷ್ಮೇಶ್ವರ". ಇದು ಒಂದು ಕಾಲದಲ್ಲಿ ಬಾದಾಮಿ ಚಾಲುಕ್ಯರ ರಾಜಧಾನಿ. ಅಲ್ಲಿರುವ ಸೋಮೇಶ್ವರ ದೇವಾಲಯ ಮತ್ತು ಜೈನ ಬಸದಿಗಳು ಬಲು ವಿಖ್ಯಾತ.
ಈ ಲಕ್ಷ್ಮೇಶ್ವರದ ಪುರಾತನ ಹೆಸರು "ಪುಲಿಗೆರೆ". ಕನ್ನಡದ "ಆದಿಕವಿ ಪಂಪ" ತನ್ನ ಪಂಪಭಾರತವನ್ನು ರಚಿಸಿದ್ದು ಈ ಪುಲಿಗೆರೆಯಲ್ಲಿ ಮತ್ತು ಹತ್ತಿರದ ಬನವಾಸಿಯಲ್ಲಿ ಎಂದು ನಂಬಿಕೆ. ಬನವಾಸಿ ಈ ಲಕ್ಶ್ಮೇಶ್ವರ ಅಥವಾ ಪುಲಿಗೆರೆಯಿಂದ ಐವತ್ತು ಮೈಲು ದೂರ. "ಪಸರಿಪ ಕನ್ನಡಕ್ಕೊಡೆಯನೋರ್ವನೇ ಸತ್ಕವಿಪಂಪನಾವಗಂ" ಎಂದು ಹೆಮ್ಮೆಯ ಹೇಳಿಕೆ. ಪಂಪನಿಗೆ ಬನವಾಸಿ ಬಲು ಪ್ರಿಯ. "ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದು ಹೇಳಿಕೊಳ್ಳುತ್ತಾನೆ. "ಪುಲಿಗೆರೆಯ ತಿರುಳ್ಗನ್ನಡ" ಎಂದು ಅಂದಿನ ಕನ್ನಡಕ್ಕೆ ವಿಶೇಷಣ.
ಆದಿಕವಿ ಪಂಪ ಹತ್ತನೆಯ ಶತಮಾನದವನು. ಇದೇ ಲಕ್ಷ್ಮೇಶ್ವರದ ಪುಲಿಗೆರೆಯ ಸೋಮ (ಪುಲಿಗೆರೆ ಸೋಮನಾಥ) ಅನ್ನುವ ಇನ್ನೊಬ್ಬ ಕವಿ ಹದಿಮೂರನೆಯ ಶತಮಾನದವನು. ಇವನು ಸಂಸ್ಕೃತ ಮತ್ತು ಕನ್ನಡಗಳಲ್ಲಿ ಉದ್ದಾಮ ಕವಿ. ಇವನ "ಸೋಮೇಶ್ವರ ಶತಕ" ಸಂಸ್ಕೃತದ "ಭರ್ತೃಹರಿ" ಮಹಾಕವಿಯ "ಶೃಂಗಾರ ಶತಕ", "ನೀತಿ ಶತಕ" ಮತ್ತು "ವೈರಾಗ್ಯ ಶತಕ" ಇವುಗಳಂತೆ ಒಂದು ಗ್ರಂಥ. ಒಂದು ನೂರು ಪದ್ಯಗಳುಳ್ಳ ಗ್ರಂಥವಾದ ಕಾರಣ ಶತಕವೆಂದು ಹೆಸರು. ಪ್ರತಿ ಪದ್ಯವೂ "ಹರಹರಾ ಶ್ರೀಚನ್ನ ಸೋಮೇಶ್ವರ" ಎನ್ನುವ ಅಂಕಿತ ಹೊಂದಿದೆ.
"ಸೋಮೇಶ್ವರ ಶತಕ" ಪಾಲ್ಕುರಿಕೆ ಸೋಮ ಎನ್ನುವ ಕವಿಯ ಕೃತಿ ಎಂದೂ ಒಂದು ಅಭಿಪ್ರಾಯವಿದೆ. ಈ ಸೋಮನೂ ಸಂಸ್ಕೃತ, ತೆಲುಗು ಮತ್ತು ಕನ್ನಡದ ಕವಿ. ಈತನೂ ಹದಿಮೂರನೆಯ ಶತಮಾನದವನು. ಜಗಜ್ಯೋತಿ ಬಸವೇಶ್ವರರ ಅನುಯಾಯಿ. ಇವನ "ಬಸವಪುರಾಣ" ಎನ್ನುವ ತೆಲುಗು ಕೃತಿ ಪ್ರಸಿದ್ದವಾದದ್ದು. ಆದರೆ ಹೆಚ್ಚಿನ ವಿದ್ವಾಂಸರು "ಸೋಮೇಶ್ವರ ಶತಕ" ಪುಲಿಗೆರೆಯ ಸೋಮನಾಥ ರಚಿಸಿದ ಕೃತಿ ಎಂದು ನಂಬುತ್ತಾರೆ.
*****
ಪುರಾತನ ಕನ್ನಡ ಗ್ರಂಥಗಳಲ್ಲೊಂದಾದ ಅಮೋಘವರ್ಷ ನೃಪತುಂಗ (ಅಥವಾ ಶ್ರೀನಾಥ ಕವಿ) ಕೃತಿ "ಕವಿರಾಜಮಾರ್ಗ" ಹೇಳುವಂತೆ ಕನ್ನಡಿಗರು "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್". ಓದು ಬರಹ ಬರದಿದ್ದ ಹಳ್ಳಿಗಾಡಿನ ಜನಗಳೂ ಕಾವ್ಯ ಸೂಕ್ಷ್ಮಗಳನ್ನು ತಿಳಿದವರಾಗಿದ್ದರು. ಇದನ್ನು ನಾವೇ ನಮ್ಮ ಬಾಲ್ಯಕಾಲದಲ್ಲಿ ಕಂಡಿದ್ದೇವೆ. ಅನೇಕ ಹಳ್ಳಿಯ ಜನ ಓದು ಬರಹ ಬಾರದ "ಹೆಬ್ಬೆಟ್ಟು" ಎನ್ನುವವರಾಗಿದ್ದರೂ ಸರ್ವಜ್ಞ ವಚನಗಳು, ಹದಿಬದೆಯ ಧರ್ಮ, ಸೋಮೇಶ್ವರ ಶತಕ, ಜಾನಪದ ಸಾಹಿತ್ಯ, ಗಾದೆಗಳು, ಶರಣರ ವಚನಗಳು ಮತ್ತು ದಾಸರ ಪದಗಳಿಂದ ಚೆನ್ನಾದ ಲೋಕಜ್ಞಾನ ಹೊಂದಿದ್ದರು. ಆಡುಮಾತಿನ ಮಧ್ಯದಲ್ಲಿ ಇವುಗಳಿಂದ ಆಯ್ದ ನುಡಿಗಟ್ಟುಗಳನ್ನು ಸುಲಭವಾಗಿ ಸೇರಿಸುತ್ತಿದ್ದರು.
ಸೋಮೇಶ್ವರ ಶತಕದ ಒಂದು ಪದ್ಯ ಹೀಗಿದೆ:
ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು
ಕೃತಿಮಾರ್ಗಂ ಬಿಡದಾತ ಸುವ್ರತಿ ಮಹಾಸಾದ್ವಿದ್ಯೆಯೇ ಪುಣ್ಯದಂ
ಸುತನೇ ಸದ್ಗತಿದಾತನೈ ಹರಹರಾ ಶ್ರೀ ಚನ್ನ ಸೋಮೇಶ್ವರಾ
"ಒಳ್ಳೆಯದನ್ನು ಮಾಡುವವನೇ ನೆಂಟನು. (ಆಪತ್ತಿಗಾದವನೇ ನೆಂಟ ಅನ್ನುವ ಗಾದೆ ನೆನಪಿಸುವುದು). (ಬಾಲ್ಯದಲ್ಲಿ) ಕಾಪಾಡಿದವನೇ ತಂದೆ. (ಹೆತ್ತಮಾತ್ರಕ್ಕೆ ತಂದೆಯಾಗುವುದಿಲ್ಲ!). ಎಲ್ಲ ಸಾಧನೆಗೂ ಹೆಂಡತಿಯೇ (ಹೆಂಗಸರಿಗೆ ಗಂಡನೇ?) ಕಾರಣ. (ಹೆಂಡತಿಯ ಸಹಕಾರವಿಲ್ಲದಿದ್ದರೆ ಸಾಧನೆ ಸೊನ್ನೆ). ಒಂದಕ್ಷರ ಕಲಿಸಿದವನೂ ಗುರುವೇ. ಸರಿಯಾದ ದಾರಿಯಲ್ಲಿ ನಡೆಯುವವನೇ ಮುನಿ ಎನ್ನಿಸಿಕೊಳ್ಳುವವನು. ಒಳ್ಳೆಯ ರೀತಿ ಬದುಕುವುದನ್ನು ಕಲಿಸುವುದೇ ಬ್ರಹ್ಮವಿದ್ಯೆ. ಮಗನೇ ಸದ್ಗತಿ ಕೊಡುವವನು" ಎನ್ನುವುದು ಇದರ ತಾತ್ಪರ್ಯ.
"ವರ್ಣಮಾತ್ರಂ ಕಲಿಸಿದಾತಂ ಗುರು" ಎಂದು ನಾವು ಮತ್ತೆ ಮತ್ತೆ ಕೇಳುವುದು ಈ ಶತಕ ಪದ್ಯದ ಒಂದು ವಾಕ್ಯಖಂಡ ಮಾತ್ರ.
*****
ಹಿಂದೊಂದು ಸಂಚಿಕೆಯಲ್ಲಿ "ಪಂಡಿತರ ಮನೆ ಎಲ್ಲಿದೆ?" ಎನ್ನುವ ಶೀರ್ಶಿಕೆಯ ಅಡಿಯಲ್ಲಿ ಮಹಾವಿದ್ವಾಂಸರಾದ ಶ್ರೀ ಕುಮಾರಿಲ ಭಟ್ಟರು ಶ್ರೀ ಶಂಕರಾಚಾರ್ಯರು ಅವರನ್ನು ನೋಡಲು ಬರುವ ಸಮಯಕ್ಕೆ ತುಷಾಗ್ನಿಯಲ್ಲಿ ಸುಟ್ಟುಕೊಂಡು ಪ್ರಾಣಾರ್ಪಣೆ ಮಾಡುವ ಸಂಗತಿ ನೋಡಿದ್ದೆವು. ಗುರುದ್ರೋಹ ಮಾಡಿದ ಕಾರಣಕ್ಕೆ ಅವರಿಗೆ ಅವರೇ ಈ ಶಿಕ್ಷೆ ಕೊಟ್ಟುಕೊಂಡಿದ್ದರು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು).
ಈ ಸಂದರ್ಭವನ್ನು ವಿವರಿಸುವ ಶ್ರೀ ವಿದ್ಯಾರಣ್ಯ ಸ್ವಾಮಿಗಳ ರಚನೆ ಎನ್ನುವ "ಶ್ರೀ ಶಂಕರ ದಿಗ್ವಿಜಯ" ಕೃತಿಯಲ್ಲಿ ಕಂಡು ಬರುವ ಒಂದು ಶ್ಲೋಕ ಹೀಗಿದೆ (ಏಳನೆಯ ಸರ್ಗ, ನೂರನೆಯ ಶ್ಲೋಕ):
ಏಕಾಕ್ಷರಸ್ಯಾಪಿ ಗುರು: ಪ್ರದಾತಾ
ಶಾಸ್ತ್ರೋಪದೇಷ್ಟಾ ಕಿಮು ಭಾಷಣೀಯಂ
ಅಹಂ ಹಿ ಸರ್ವಜ್ಞ ಗುರೊರಧೀತ್ಯ
ಪ್ರತ್ಯಾದಿಶೇ ತೇನ ಗುರೋರ್ಮಹಾಗ:
"ಒಂದು ಅಕ್ಷರವನ್ನು ಕಲಿಸಿದವನೂ ಗುರುವಾಗುತ್ತಾನೆ. ಬೌದ್ಧ ಗುರುವಿನಿಂದ ಕಲಿತು ಅವನ ಮತವನ್ನೇ ಖಂಡಿಸಿದೆ. ಅದು ಗುರುದ್ರೋಹವಲ್ಲವೇ? ಆದ್ದರಿಂದ ತುಷಾಗ್ನಿಯಲ್ಲಿ ಪ್ರಾಯೋಪವೇಶ ಮಾಡಿ ದೇಹತ್ಯಾಗ".
ಶ್ರೀ ವಿದ್ಯಾರಣ್ಯರ ಕಾಲ ಕ್ರಿ. ಶ. 1295-1386 ಎಂಬುದಾಗಿ ನಿರ್ಣಯಿಸುತ್ತಾರೆ. ಹಾಗಿದ್ದರೆ ಈ ಕೃತಿಯು "ಸೋಮೇಶ್ವರ ಶತಕ" ಹೊರಬಂದ ಕೆಲವು ವರ್ಷಗಳಲ್ಲೇ ಬಂದಿರುವುದು. "ವರ್ಣಮಾತ್ರಂ ಕಲಿಸಿದಾತಂ ಗುರು" ಎನ್ನುವುದಕ್ಕೂ "ಏಕಾಕ್ಷರಸ್ಯಾಪಿ ಗುರು: ಪ್ರದಾತಾ" ಅನ್ನುವುದಕ್ಕೂ ಸಾಮ್ಯ ನೋಡಬಹುದು. ಇಲ್ಲಿ ಯಾರು ಯಾರಿಂದ ಪ್ರಭಾವಿತರಾದರು ಎನ್ನುವುದು ಮುಖ್ಯವಲ್ಲ. ಈಗಿನ ಕಂಪ್ಯೂಟರ್ ಯುಗದಂತೆ ಆಗ ಕೃತಿಗಳು ಸುಲಭವಾಗಿ ಎಲ್ಲರಿಗೂ ಸಿಗುತ್ತಿರಲಿಲ್ಲ. ಒಂದೇ ಅಂಶ ಅನೇಕರಿಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಹೊಳೆಯಲೂಬಹುದು. "ಒಂದಕ್ಷರ ಕಲಿಸಿದವನನ್ನೂ ಗುರುವೆಂದು ತಿಳಿದು ಗೌರವ ಕೊಡಬೇಕು" ಎನ್ನುವುದು ನಮ್ಮ ದೇಶದಲ್ಲಿ ಒಂದು ಸಾಮಾನ್ಯ ನಿಯಮ ಆಗಿದ್ದಿತು ಅನ್ನುವುದು ಮುಖ್ಯ.
*****
ಶ್ರೀ ಕುಮಾರಿಲ ಭಟ್ಟರು ತುಷಾಗ್ನಿಯಲ್ಲಿ ದೇಹತ್ಯಾಗ ಮಾಡಿದ್ದಕ್ಕೆ ಕಾರಣವನ್ನು ವಿವರವಾಗಿ ಮತ್ತೊಮ್ಮೆ ನೋಡೋಣ.
ಶೀರ್ಷಿಕೆಯಲ್ಲಿ "ವರಣಮಾತ್ರಂ" ಎಂದು ಕಾಣುತ್ತದೆ. ಇದು ದೋಷವಲ್ಲ. ಬರೆದಲ್ಲಿ ಸರಿಯಾಗಿ ಕಂಡರೂ ಓಡುವೆಡೆ ಹೀಗೆ ಕೆಲವೊಮ್ಮೆ ಕಂಪ್ಯೂಟರ್ ಭಾಷೆಯಲ್ಲಿ ಆಗುತ್ತದೆ!
ಇದು 2025 ಇಸವಿಯ 100ನೇ ಲೇಖನ (ಬ್ಲಾಗ್ ಪೋಸ್ಟ್). ಈ ಕಳೆದ ಹನ್ನೊಂದು ತಿಂಗಳುಗಳು ಒಂದು ರೀತಿಯ ಪರೀಕ್ಷಾ ಕಾಲವೇ. ಹನ್ನೊಂದು ತಿಂಗಳಲ್ಲಿ ಮೂರು ಶಸ್ತ್ರ ಚಿಕಿತ್ಸೆಗಳ ನಡುವೆ ಒಂದು ನೂರು ಲೇಖನಗಳು ಹೊರಬರಲು ಸನ್ಮಿತ್ರರು ಮತ್ತು ಓದುಗರ ಪ್ರೋತ್ಸಾಹ ಹಾಗೂ ಸಹೃದಯ ಪ್ರತಿಕ್ರಿಯೆಗಳೇ ಕಾರಣ. ಕಾವ್ಯ-ಶಾಸ್ತ್ರ ರಸಾನುಭವ ನೋವನ್ನು ಮರೆಸಿ ಮನಸ್ಸಿಗೆ ಮುದವನ್ನು ಕೊಡುವುದು ಎನ್ನುವುದರ ಪ್ರತ್ಯಕ್ಷ ಅನುಭವ ಇಲ್ಲಾಯಿತು. ಈ ಯಾನದಲ್ಲಿ ಭಾಗಿಯಾದ ಎಲ್ಲರಿಗೂ ಅನಂತ ಕೃತಜ್ಞತೆಗಳು.
ಲೇಖನ ಚೆನ್ನಾಗಿದೆ, ನೀವೂ ಇವೆಲ್ಲದರ ತಿಳುವಳಿಕೆ ಕೊಡುತ್ತಿರುವುದರಿಂದ ಗುರುವೇ ಸರಿ. ಆರೋಗ್ಯದ ಕಡೆ ಗಮನವಿರಲಿ.ಧನ್ಯವಾದಗಳು
ReplyDelete