Wednesday, December 17, 2025

ರಾಮನಾಮ ಎಂಬ ರಸವುಳ್ಳ ನೀರಿಗೆ


ಕಳೆದ ಸಂಚಿಕೆಯಲ್ಲಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬಹು ಜನಪ್ರಿಯ ದೇವರನಾಮ ಶ್ರೀ ಪುರಂದರದಾಸರ ಕೃತಿ "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ, ತಾರೇ ಬಿಂದಿಗೆಯ" ವಿಶೇಷಾರ್ಥಗಳ ಅನ್ವೇಷಣೆಯಲ್ಲಿ ಕೃತಿಯ ಪಲ್ಲವಿಯ ಎರಡು ಸಾಲುಗಳಲ್ಲಿ ತುಂಬಿರುವ ಅರ್ಥವಿಶೇಷಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಈಗ ಈ ಹಾಡಿನ ಉಳಿದ ಭಾಗಗಳ ವಿಶೇಷ ಅರ್ಥಗಳನ್ನು ನೋಡೋಣ. 

*****

ಬಿಂದಿಗೆ ಕೊಡು ಎಂದು ಕೇಳಿದ್ದು ನೀರು ತರಲು. ಯಾವ ನೀರು? ನಾವು ನಮ್ಮ ಸುತ್ತ-ಮುತ್ತ ಕಾಣುವ ಮತ್ತು ದಿನಂಪ್ರತಿ ಉಪಯೋಗಿಸುವ ನೀರು ಎನ್ನುವುದು ಸಾಮಾನ್ಯವಾದ ಹೊರ ಅರ್ಥ. ನೀರಿಲ್ಲದೆ ಜೀವನವಿಲ್ಲ. ಗಾಳಿಯ ನಂತರ ಜೀವಿಗೆ ಬೇಕಾದ ಅತ್ಯಂತ ಮುಖ್ಯ ಅವಶ್ಯಕತೆ ನೀರು. ನೀರನ್ನು ಶೇಖರಿಸಿ ತರಲು ಒಂದು ಸಾಧನ ಬೇಕು. ಬಿಂದಿಗೆಯು ಅಂತಹ ಒಂದು ಸಾಧನ. ನೀರಿಲ್ಲದೆ ಕರ್ಮವಿಲ್ಲ. ಏನಾದರೂ ಮಾಡುವ ಮೊದಲು ಕೈ, ಕಾಲುಗಳನ್ನಾದರೂ ತೊಳೆದುಕೊಳ್ಳುತ್ತೇವೆ. ಅದಕ್ಕೆ ನೀರು ಬೇಕು. ಸ್ನಾನ ಮಾಡಿದರೆ ನೀರು ಬೇಕು. ಪೂಜೆ-ಹೋಮಾದಿಗಳನ್ನು ಮಾಡಲು ಮೊದಲು ನೀರಿನಿಂದಲೇ ಪ್ರಾರಂಭ. ಕಡೆಯಲ್ಲಿ ಸಮರ್ಪಣ ಮಾಡಲೂ ನೀರು ಬೇಕು. ನೀರಿನಿಂದ ಪ್ರಾರಂಭವಾದ ಕೆಲಸಗಳು ನೀರಿನಿಂದಲೇ ಕೊನೆ! ಬೇರೆ ಯಾವುದಾದರೂ ಪದಾರ್ಥ ಇಲ್ಲದಿದ್ದರೆ ಹೇಗೋ ಕೆಲಸ ತೂಗಿಸಬಹುದು. ನೀರಿಲ್ಲದಿದ್ದರೆ ಮುಂದೆ ಹೋಗಲು ಆಗುವುದೇ ಇಲ್ಲ.  

ನೀರಿಗೆ ಒಂದು ವಿಶೇಷಾರ್ಥವಿದೆ. ಬಿಂದಿಗೆ ಅನ್ನುವುದು ದೇಹವಾದಾಗ (ಏಕೆ ಅನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ) ನೀರು ಅನ್ನುವುದು ಜೀವಿಯು ಮಾಡುವ "ಕರ್ಮ" ಸೂಚಕವಾಗುತ್ತದೆ. ಬಿಂದಿಗೆಯಲ್ಲಿ ನೀರನ್ನು ತರುವಂತೆ ದೇಹದಿಂದ ಜೀವಿಯು ಕರ್ಮಗಳನ್ನು ಮಾಡಿ ಆ ಮೂಲಕ ಸಾಧನೆಗಳನ್ನು ಮಾಡುತ್ತಾನೆ. 

ಈಶಾವಾಸ್ಯ ಉಪನಿಷತ್ತು ತನ್ನ ನಾಲ್ಕನೆಯ ಮಂತ್ರದಲ್ಲಿ "ತಸ್ಮಿನ್ ಆಪಃ ಮಾತರಿಶ್ವಾ ದಧಾತಿ" ಎಂದು ಹೇಳುತ್ತದೆ. "ಆಪಃ" ಅಂದರೆ ನೀರು. "ಮಾತರಿಶ್ವ" ಅಂದರೆ ವಾಯು. ವಾಯುವು ಕೊಡುವ ನೀರು ಯಾವುದು? ಕೊಡುವುದು ಯಾರಿಗೆ? ಜೀವಿಯ ಎಲ್ಲ ಕರ್ಮಗಳಿಗೆ ಪ್ರತ್ಯಕ್ಷ ಸಾಕ್ಷಿ ಪ್ರಾಣವಾಯು. ಮೊದಲ ಉಸಿರಿನಿಂದ ಪ್ರಾರಂಭವಾದ ಜೀವನದಿಂದ ಕರ್ಮ ಪ್ರಾರಂಭ. ಕೊನೆಯ ಉಸಿರಿನೊಡನೆ ಅದು ಮುಗಿಯಿತು. ಬೇರೆಯವರ ಕಣ್ಣು ತಪ್ಪಿಸಿ ಅನೇಕ ಕೆಲಸಗಳನ್ನು ಮಾಡಬಹುದು. ಹಾಗೆ ಏನಾದರೂ ಮಾಡಿ ಅರಗಿಸಿಕೊಳ್ಳಬಹುದು. ಆದರೆ ಮಾತರಿಶ್ವನ ಕಣ್ಣು ತಪ್ಪಿಸಲಾಗದು. ಇದನ್ನೇ "ಅಂತಃಸಾಕ್ಷಿ" ಎಂದೂ ಹೇಳುತ್ತೇವೆ.  ಜೀವನ ಕಾಲ ಮುಗಿದ ಮೇಲೆ ಜೀವಿಯನ್ನು ಪರಮಾತ್ಮನ ಮುಂದೆ ನಿಲ್ಲಿಸಿ ವಾಯುದೇವನು ಅವನ ಸಮಸ್ತ ಕರ್ಮಗಳನ್ನು ಹಾಜರು ಮಾಡುತ್ತಾನೆ. 

ಈ ಕಾರಣದಿಂದ "ನಾ ನೀರಿಗ್ಹೋಗುವೆ" ಅಂದರೆ "ನೀನು ಕೊಟ್ಟ ದೇಹದಿಂದ ನಾನು ಕರ್ಮಗಳನ್ನು ಆಚರಿಸಿ ಸಾಧನೆಗಳನ್ನು ಮಾಡುವೆ, ಮಹಾಲಕ್ಷ್ಮಿ ಅಕ್ಕಾ" ಎಂದು ಹೇಳುವುದು. ಇದು ಅಂತರಾರ್ಥ. 
***** 

"ರಾಮನಾಮ ಎಂಬೋ ರಸವುಳ್ಳ ನೀರಿಗೆ" ಬಿಂದಿಗೆ ಬೇಕು. ರಾಮನಾಮದ ವಿಶೇಷವೇನು? ಅನಂತರೂಪಿ ಪರಮಾತ್ಮನಿಗೆ ಅನಂತ ಹೆಸರುಗಳು. ಸೃಷ್ಟಿಯಲ್ಲಿ ಇರುವ ಸಕಲ ಶಬ್ದಗಳೂ ಪರಮಾತ್ಮನನ್ನೇ ಹೇಳುತ್ತವೆ ಎನ್ನುವುದು ಒಂದು ಪ್ರಮೇಯ. (ಧ್ವನ್ಯಾತ್ಮಕ ಮತ್ತು ವರ್ಣಾತ್ಮಕ ಶಬ್ದಗಳ ಬಗ್ಗೆ ಹಿಂದೊಂದು ಸಂಚಿಕೆಯಲ್ಲಿ ನೋಡಿದ್ದೇವೆ). "ರಮಯತಿ ಇತಿ ರಾಮಃ". "ಆನಂದ (ಸಂತೋಷ) ಕೊಡುವವನು ರಾಮ" ಎಂದು ಇದರ ಅರ್ಥ. ಜೀವಿಗಳಿಗೆ ಈ ಸುತ್ತುವ ಸಂಸಾರದ ಹುಟ್ಟು-ಸಾವುಗಳಿಂದ ಬಿಡುಗಡೆ ಕೊಟ್ಟು ಶಾಶ್ವತ ಆನಂದ ಕೊಡುವವನು ರಾಮ. ಈ ಮೋಕ್ಷದ ನಂತರದ ಆನಂದಕ್ಕೆ ಅದರ ಪ್ರಮಾಣದಲ್ಲಿ ಆಗಾಗ ಹೆಚ್ಚು-ಕಡಿಮೆ ಆಗುವ ಭಯವಿಲ್ಲ. ಎಂದೋ ಒಂದು ದಿನ ಮುಗಿದುಹೋಗುವುದು ಎನ್ನುವ ಆತಂಕವಿಲ್ಲ. ಅದು ಶಾಶ್ವತವಾದ, ಕೊನೆಯಿಲ್ಲದ, ಪರಿಪೂರ್ಣ ಆನಂದ. 

ರಾಮನು ಎಲ್ಲ ಕಾಲದಲ್ಲೂ ಇದ್ದನು. ಎಲ್ಲ ಕಾಲದಲ್ಲೂ ಇರುತ್ತಾನೆ. ತ್ರೇತಾಯುಗದ ಶ್ರೀರಾಮಚಂದ್ರನು ಅವತಾರ ಮಾಡುವ ಮೊದಲೂ ಇದ್ದನು. ಆ ಅವತಾರ ಮುಗಿದಮೇಲೂ ಇರುತ್ತಾನೆ. ಇಂತಹ ರಾಮನ ಹೆಸರನ್ನೇ ದಶರಥ-ಕೌಸಲ್ಯೆಯರ ಮಗನಿಗೂ ಕೊಟ್ಟರು. ಇಬ್ಬರೂ ಒಂದೇ. ಭೇದವಿಲ್ಲ. 

ಪರಮಾತ್ಮನ ಅನಂತ ನಾಮಗಳಲ್ಲಿ ರಾಮನಾಮ ಅತ್ಯಂತ ಸುಲಭವಾದದ್ದು. ಒತ್ತಕ್ಷರಗಳ ಗೊಂದಲವಿಲ್ಲ. ಆರು-ಎಂಟು-ಹತ್ತು ಅಕ್ಷರಗಳ ದೊಡ್ಡ ಹೆಸರಲ್ಲ. ಈಗ ತಾನೇ ಮಾತು ಕಲಿಯುತ್ತಿರುವ ಮಗುವೂ ಸುಖವಾಗಿ "ರಾಮ" ಎಂದು ಹೇಳುವುದು. "ಹೃಷಿಕೇಶ" "ತ್ರಿವಿಕ್ರಮ" "ಪದ್ಮನಾಭ" "ಸಂಕರ್ಷಣ" "ಅಧೋಕ್ಷಜ" ಮುಂತಾದುವನ್ನು ಹೇಳಲು ಅನೇಕರಿಗೆ ಕಷ್ಟವಾಗುತ್ತದೆ. ರಾಮನಾಮಕ್ಕೆ ಇಂತಹ ಬಂಧವಿಲ್ಲ. ಅದು ಗಟ್ಟಿಯಾದ ಚಕ್ಕುಲಿ, ಕೋಡುಬಳೆ, ಪುಳ್ಳಂಗಾಯಿ ಉಂಡೆ ತಿಂದು ಅರಗಿಸಿಕೊಂಡಂತೆ ಅಲ್ಲ. ಪಾಯಸ ಕುಡಿದಂತೆ ಸುಲಭ. ಸಿಹಿಯೂ ಹೌದು. ಆದ್ದರಿಂದ "ರಾಮನಾಮ ಪಾಯಸ"!
*****

ರಾಮನಾಮ ಎಂಬ ನೀರು ಎಂದಾಯಿತು. "ರಸವುಳ್ಳ ನೀರು" ಎಂದೇಕೆ ಹೇಳಿದರು? ನೀರಿನಲ್ಲಿ ಎಂತಹ ರಸ? ನಮಗೆ ಬಾಯಾರಿಕೆ ಆದಾಗ ಕುಡಿಯಲು ನೀರು ಬೇಕು. ಒಳ್ಳೆಯ ಬಾದಾಮಿ ಹಾಲೋ, ಎಳನೀರೋ ಕೊಟ್ಟರೆ ಹೇಗೆ? ಸೊಗಸಾದ ಕಾಫಿ? ಅಥವಾ ಕಿತ್ತಳೆ ರಸ? "ಅದೆಲ್ಲಾ ಇರಲಿ. ಕೊಡುವಿರಂತೆ. ಮೊದಲು ಒಂದು ಲೋಟ ನೀರು ಕೊಡಿ, ಆಮೇಲೆ ಬೇರೆಯದು" ಎನ್ನುತ್ತೇವೆ. ಆಯಿತು. ಕೊಟ್ಟರು. ಎಲ್ಲ ನೀರೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬೋರ್ವೆಲ್ ನೀರು ಕೊಡಬಹುದು. ಯಾವುದೊ ಕೆರೆಯಿಂದ ತಂಡ ಟ್ಯಾಂಕರ್ ನೀರು ಇರಬಹುದು. ಕಾವೇರಿ, ಅರ್ಕಾವತಿ ನೀರು ತಂದಿರಬಹುದು. ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ನೀರು ಕುಡಿದರೆ ಮುಖ ಸಿಂಡರಿಸುತ್ತೇವೆ. "ಈ ನೀರು ಅಷ್ಟು ಸರಿ ಇಲ್ಲ" ಅನ್ನುತ್ತೇವೆ. ಯಾಕೆ? ನೀರು ಚೆನ್ನಾಗಿರಬೇಕು. "ಇಂತಹ ಒಳ್ಳೆಯ ನೀರು ತರುತ್ತೇನೆ, ಬಿಂದಿಗೆ ಕೊಡು" ಅನ್ನುವುದು ಸಾಮಾನ್ಯ ಅರ್ಥ. 

"ರಸ" ಅನ್ನುವುದಕ್ಕೆ ವಿಶೇಷಾರ್ಥವೂ ಉಂಟು. ಅದು ತಿಳಿಯಬೇಕಾದರೆ ಶ್ರೀಮದ್ ಭಗವದ್ಗೀತೆಯ ಏಳನೆಯ ಅಧ್ಯಾಯ ನೋಡಬೇಕು. ಎಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳುತ್ತಾನೆ:

ರಸೋಹಂ ಅಪ್ಸು ಕೌಂತೇಯ ಪ್ರಭಾಸ್ಮಿ ಶಶಿ ಸೂರ್ಯಯೋ: 
ಪ್ರಣವಃ ಸರ್ವವೇದೇಷು ಶಬ್ದ: ಖೇ ಪೌರುಷಮ್ ನೃಷು 

"ನೀರಿನಲ್ಲಿ ನಾನು ರಸ ಆಗಿದ್ದೇನೆ. ಚಂದ್ರ-ಸೂರ್ಯರಲ್ಲಿ ಬೆಳಕಾಗಿದ್ದೇನೆ. 
ವೇದಗಳಲ್ಲಿ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಶಬ್ದ ರೂಪದಲ್ಲಿ ಇದ್ದೇನೆ. 
ಮನುಷ್ಯರಲ್ಲಿ ಕ್ರಿಯಾಶಕ್ತಿಯ ರೂಪವಾಗಿ ನಿಂತಿದ್ದೇನೆ"

ಪರಮಾತ್ಮನ ಸನ್ನಿಧಾನ ಇದ್ದಾಗ ನೀರು ರುಚಿಸುತ್ತದೆ. ಪದಾರ್ಥಗಳ ಸೊಗಸು ನಾಲಿಗೆಗೆ ಸಿಗುತ್ತದೆ. ಕಿತ್ತಳೆ ತೊಳೆ ನೋಡಲು ಕೆಂಪಾಗಿದೆ. ದಪ್ಪಗೂ ಇದೆ. ಆದರೆ ತಿಂದಾಗ ಬರೀ ಬೆಂಡು ಬೆಂಡು. ಯಾಕೆ? ಅಲ್ಲಿ ಪರಮಾತ್ಮನ ಅಭಿವ್ಯಕ್ತಿ ಇಲ್ಲ. ಬಾದಾಮಿ, ಗೋಡಂಬಿ ಬಹಳ ಚೆನ್ನಾಗಿವೆ. ಬಾಯಿಯಲ್ಲಿ ಹಾಕಿಕೊಂಡು ಎಷ್ಟು ಹೊತ್ತು ಇಟ್ಟುಕೊಂಡರೂ ಏನೂ ರುಚಿಯಿಲ್ಲವಲ್ಲ? ಅಗಿದು ಅದಕ್ಕೆ ಸ್ವಲ್ಪ ರಸರೂಪದ ನೀರು ಸೇರಿದರೆ ತಕ್ಷಣ ರುಚಿ ಸಿಕ್ಕಿತು!  

ಮನುಷ್ಯನು ಮಾಡುವ ಕೆಲಸಗಳೂ ಅಂತೆಯೇ. ಯಾವುದೋ ಕಾರಣಕ್ಕೆ ಮಾಡಿದ ಕಾರ್ಯಗಳು ನೀರಸ. "ಪರಮಾತ್ಮನಿಗೆ ಪ್ರೀತಿಯಾಗಲಿ" ಎಂದು ಮಾಡಿದ ತಕ್ಷಣ ಅಲ್ಲಿ ರಸ ಬಂದು ಕೂತಿತು. ಮಾಡಿದ ಕರ್ಮ ಸತ್ಕರ್ಮ ಆಯಿತು. ಅವನಿದ್ದರೆ ಅದು ಸರಸ. ರಸದಿಂದ ಕೂಡಿದ್ದು. ಅವನಿಲ್ಲದಿದ್ದರೆ ಅದು ನೀರಸ. ರಸವಿಲ್ಲದ್ದು. ಅವನಿಗೆ ವಿರುದ್ಧವಾಗಿದ್ದರೆ ವಿರಸ. ಇದೇ ಸತ್ಕರ್ಮಗಳ ರಹಸ್ಯ!

"ರಾಮನಾಮವೆಂಬ ರಸವುಳ್ಳ ನೀರು ತರುತ್ತೇನೆ, ಬಿಂದಿಗೆ ಕೊಡು ಅಕ್ಕಾ" ಅಂದಾಗ "ಸತ್ಕರ್ಮಗಳನ್ನು ಮಾಡಿ ರಸರೂಪವಾದ ಸಾಧನೆಯನ್ನು ದೇಹದಲ್ಲಿ ತುಂಬಿಕೊಳ್ಳುತ್ತೇನೆ" ಎಂದು ಅರ್ಥ. ಇದೇ ಇಲ್ಲಿನ ವಿಶೇಷಾರ್ಥ. 
*****

"ಗೋವಿಂದ ಎಂಬ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ, ಆವಾವ ಪರಿಯಲ್ಲಿ ಅಮೃತದ ನೀರಿಗೆ ತಾರೇ ಬಿಂದಿಗೆಯ" ಅನ್ನುವುದು ಮುಂದಿನದು. "ಗೋವಿಂದ" ಅನ್ನುವ ಪದಕ್ಕೆ ಅನೇಕ ಅರ್ಥಗಳು. ಗೋ ಅನ್ನುವ ಪದಕ್ಕೆ "ನೀರು" "ಹಸು" "ಭೂಮಿ" "ವೇದಗಳು" ಇನ್ನೂ ಮುಂತಾಗಿ ವಿವರಣೆಗಳಿವೆ. "ಉತ್ತಮವಾದದ್ದು" ಎಂದೂ ಅರ್ಥವುಂಟು. "ನೀರಿನಲ್ಲಿ ಶ್ರೇಷ್ಠವಾದ ರೀತಿಯ ನೀರು ತರುತ್ತೇನೆ" ಎಂದು ಹೇಳುವುದು ಸಾಮಾನ್ಯ ಅರ್ಥ. 

ಅಮೃತದ ನೀರು ಹೇಗೆ? ಸತ್ಕರ್ಮ ಮಾಡಿದ ಮೇಲೆ ಮುಂದೆ ಜನ್ಮವಿಲ್ಲದ ಮುಕ್ತಿ ಸಿಗುತ್ತದೆ. ಸಾವಿಲ್ಲದ್ದು ಅಮೃತ. ಗೋವಿಂದನ ಪ್ರೀತಿಗಾಗಿ ಮಾಡಿದ ಕರ್ಮಗಳನ್ನು, ನಿಷ್ಕಾಮ ಕರ್ಮಗಳನ್ನು, ತುಂಬಿಕೊಂಡಮೇಲೆ ಮತ್ತೆ ಮರಣವಿಲ್ಲ. ಅಂದರೆ ಅಮೃತತ್ವ ಸಿಕ್ಕಿತು. ಆದ್ದರಿಂದ "ಅಮೃತದ ನೀರು". 

"ಕಾಮಿನಿಯರ ಕೂಡೆ ಏಕಾಂತವಾಡೆನು, ತಾರೆ ಬಿಂದಿಗೆಯ" ಎಂದರೇನು? ನೀರು ತರಲು ನದಿಗೋ, ಭಾವಿಗೋ ಹೋದಾಗ ಅಲ್ಲಿ ನಮ್ಮಂತೆಯೇ ಅನೇಕರು ಬಂದಿರುತ್ತಾರೆ. ಸಾಮಾನ್ಯವಾಗಿ ನೀರು ತರಲು ಹೋಗುತ್ತಿದ್ದುದು ಲೋಕಾರೂಢಿಯಾಗಿ ಹೆಣ್ಣುಮಕ್ಕಳು. ಕಾಮಿನಿ ಅನ್ನುವ ಪದಕ್ಕೆ ಹೆಣ್ಣು ಎಂದೂ ಒಂದು ಅರ್ಥ. ಒಂದರ್ಥವೇನು, ಇದೇ ಅರ್ಥದಲ್ಲಿ ಆ ಪದವನ್ನು ಸಾಮಾನ್ಯವಾಗಿ ಬಳಸುವುದು. ಕೆಲವರು ಅಲ್ಲಿ ಕಂಡಾಗ ಸಹಜವಾಗಿ ಸ್ವಲ್ಪ ಅದು-ಇದು ಮಾತಾಡುವಂತೆ ಆಗುತ್ತದೆ. ಹರಟೆಯಲ್ಲಿ ಕಾಲಹರಣ ನಡೆಯುತ್ತದೆ. "ನಾನು ಹರಟೆಯಲ್ಲಿ ಕಾಲ ವ್ಯಯ ಮಾಡುವುದಿಲ್ಲ. ಅಲ್ಲಿ ಹೋಗಿ, ನೀರು ತುಂಬಿಕೊಂಡು ಬೇಗ ಬಂದುಬಿಡುತ್ತೇನೆ" ಎನ್ನುವುದು ಸಾಮಾನ್ಯ ಅರ್ಥ. 

"ಕಾಮ" ಅಂದರೆ ಆಸೆ. ಆಸೆ ಯಾವಾಗಲೂ ಒಂದೇ ಒಂದಾಗಿ ಬರುವುದಿಲ್ಲ. ಆಸೆಗಳು ಗುಂಪಾಗಿ ಮನುಷ್ಯನನ್ನು ಕಾಡುತ್ತವೆ. ಕಾಮದಿಂದ ಹುಟ್ಟಿದ್ದು ಕಾಮಿನಿ ಎಂದಾಗುತ್ತದೆ. "ಅಕ್ಕ, ನೀನು ದೇಹವನ್ನು ಕೊಟ್ಟರೆ ಅದನ್ನು ಇತರೆ ಆಸೆಗಳ, ಪ್ರಾಪಂಚಿಕ ಸುಖ-ಭೋಗಗಳ, ತೃಪ್ತಿಗೆ ಬಳಸುವುದಿಲ್ಲ. ಕೇವಲ ಸಾಧನೆಗಾಗಿಯೇ ಜೀವಿತ ಕಾಲವನ್ನು ಬಳಸಿಕೊಳ್ಳುತ್ತೇನೆ" ಎಂದು ಹೇಳುವುದೇ ವಿಶೇಷಾರ್ಥ. 

ನೀರು ತರಲೆಂದು ಬಿಂದಿಗೆ ಹಿಡಿದು ಹೊರಟು, ಜಲಾಶಯದ ಬಳಿ ಸಮಯವೆಲ್ಲ ಹರಟೆಯಲ್ಲಿ ಕಳೆದು, ಕಡೆಗೆ ಮನೆಗೆ ಖಾಲಿ ಬಿಂದಿಗೆ ಹಿಡಿದು ಬಂದರೆ ಹೇಗಿರುತ್ತದೆ? ಅಮೂಲ್ಯವಾದ ಮತ್ತು ಅಪರೂಪವಾದ ಮನುಷ್ಯ ಜನ್ಮ ಪಡೆದು. ಲೌಕಿಕ ಸುಖಗಳಲ್ಲಿ ಎಲ್ಲ ಕಾಲ ಕಳೆದು, ಕಡೆಗೆ ಅಲ್ಲಿ ಹೋಗಿ ನಿಂತಾಗ ಖಾಲಿ ಕೈ ಆಗುವಂತಾದರೆ ಹೇಗೆ? ಕಾಡಿ-ಬೇಡಿ ಪಡೆದ ದೇಹ, ಜನ್ಮ ವ್ಯರ್ಥವಾಯಿತು. ಹೀಗಾಗಲು ಬಿಡುವುದಿಲ್ಲ ಎಂದು ಮಹಾಲಕ್ಷ್ಮಿ ದೇವಿಗೆ ವಚನ ಕೊಟ್ಟಂತೆ ಈ ಮಾತು. 
***** 

"ಬಿಂದು ಮಾಧವನ ಘಟ್ಟಕ್ಕೆ ಹೋಗುವೆ, ಪುರಂದರ ವಿಠಲಗೆ ಅಭಿಷೇಕ ಮಾಡುವೆ" ಎನ್ನುವುದು ಕಡೆಯ ನುಡಿಯ ತಿರುಳು. ಕಾಶಿಯಲ್ಲಿ ಬಿಂದುಮಾಧವನ ದೇವಾಲಯ ಇದೆ. ಗಂಗಾನದಿಯ ಪಕ್ಕದಲ್ಲೇ ಇದೆ. "ಒಳ್ಳೆಯ ಗಂಗೆ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಬಂದು ವಿಠಲನ ಇನ್ನೊಂದು ರೂಪನಾದ ಮಾಧವನಿಗೆ ಅಭಿಷೇಕ ಮಾಡುತ್ತೇನೆ" ಅನ್ನುವುದು ಸಾಮಾನ್ಯ ಅರ್ಥ. 

"ನೀನು ನನ್ನ ಈ ಬೇಡಿಕೆಯ ಫಲವಾಗಿ ಕೊಡುವ ದೇಹದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಅವುಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಣ ಮಾಡುತ್ತೇನೆ" ಎಂದು ಮಹಾಲಕ್ಷ್ಮೀದೇವಿಯ ಮುಂದೆ ಪ್ರತಿಜ್ಞೆ ಮಾಡುವುದೇ ಒಟ್ಟು ತಾತ್ಪರ್ಯ ಮತ್ತು ವಿಶೇಷಾರ್ಥ. 

"ಪ್ರತ್ಯಕ್ಷರಂ ಪ್ರತಿಪದಂ ಅನೇಕಾಕೂತಿ ಗರ್ಭಿತಂ" ಎಂದು ಒಂದು ಮಾತಿದೆ. ದೊಡ್ಡವರ ಮಾತುಗಳಲ್ಲಿ ಅವರ ಅನೇಕ ಕಾಲದ ಅನುಭವದ, ಅಧ್ಯಯನದ ಸಾರ ತುಂಬಿರುತ್ತದೆ. ಶ್ರೀ ಪುರಂದರದಾಸರ ಪದಗಳಲ್ಲಿ ಇವನ್ನು ಚೆನ್ನಾಗಿ ಕಾಣಬಹುದು. ಒಂದೊಂದು ಸಾಲಿನಲ್ಲೂ, ಒಂದೊಂದು ಪದದಲ್ಲೂ, ಸಾಮಾನ್ಯ ಅರ್ಥಗಳೂ, ಅವುಗಳ ಜೊತೆ-ಜೊತೆಯಾಗಿ ವಿಶೇಷ ಅರ್ಥಗಳೂ, ಗೂಡಾರ್ಥಗಳೂ ತುಂಬಿರುತ್ತವೆ. ಒಂದು ಸಲ ಓದಿದರೆ ಅಥವಾ ಕೇಳಿದರೆ ಅಷ್ಟಿಷ್ಟು ಅರ್ಥವೇನೋ ಆಗುತ್ತದೆ. ಸರಿಯಾದ ಮೌಲ್ಯ ನಮಗೆ ಸಿಗಬೇಕಾದರೆ ಹೆಚ್ಚಿನ ಅಧ್ಯಯನ ಅಗತ್ಯ. 

*****

ಹಿಂದಿನ ಮತ್ತು ಈ ಸಂಚಿಕೆಯನ್ನು ಓದಿದ ನಂತರ ಹಾಡನ್ನು ಕೇಳಿದರೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಅದನ್ನು ಈ ಕೆಳಗೆ ಕೊಟ್ಟಿದೆ:


ಒಂದು ಬಾರಿ ಓದಿದರೆ ವಿಶೇಷಾರ್ಥಗಳು ಮನಸ್ಸಿನಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಎರಡು ಮೂರು ಬಾರಿ ಓದುವ ತಾಳ್ಮೆ ಬೇಕು. ಒಮ್ಮೆ ಮನಸ್ಸಿನಲ್ಲಿ ನಿಂತರೆ ಮುಂದೆ ಬೇರೆ ಬೇರೆ ವಿಷಯಗಳ ಅಧ್ಯಯನ ಕಾಲದಲ್ಲಿ ಮತ್ತಷ್ಟು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. 

1 comment:

  1. ತುಂಬಾ ಚೆನ್ನಾಗಿ ಬರೆದಿದ್ದೀರಿ!

    ReplyDelete