ಅದೊಂದು ಬಲು ಸುಂದರವಾದ ಮಗು. ಆಗ ತಾನೇ ಹುಟ್ಟಿದ ಕೂಸು. ಅರಳಿದ ಕಮಲದಲ್ಲಿ ಮಲಗಿದ್ದ ಶಿಶು. ಸ್ವಲ್ಪ ವಿಚಿತ್ರವಾದ ಹಸುಳೆ. ಎಲ್ಲಾ ಸರಿ ಇದ್ದರೂ ತಲೆಗಳು ಮಾತ್ರ ನಾಲ್ಕು! ಅದಕ್ಕೆ ಸರಿಯಾಗಿ ನಾಲ್ಕು ಕೈಗಳು. ಅತಿ ಮೋಹಕವಾದ ಶರೀರ. ಎದ್ದ ಮಗು ತಕ್ಷಣ ಕಣ್ಣು ಬಿಟ್ಟಿತು. ತನ್ನ ಸುತ್ತ-ಮುತ್ತ ನೋಡಿತು.
ಎಲ್ಲ ಕಡೆ ಆವರಿಸಿರುವ ಕತ್ತಲು. ಯಾರೂ ಬೇರೆಯವರು ಕಾಣರು. ತಾನು ಯಾರು? ತನಗೆ ಜನ್ಮ ಕೊಟ್ಟವರು ಯಾರು? ಎಲ್ಲಿಂದ ಬಂದೆ? ಯಾವುದೂ ತಿಳಿಯದು. ಇದೇನು ವಿಚಿತ್ರ?
ಸುಮ್ಮನೆ ಇರುವಂತಹ ಮಗುವಲ್ಲ ಅದು. ತನಗೆ ಆಸರೆಯಾಗಿ, ಹಾಸಿಗೆಯಾಗಿ ಹರಡಿದ್ದ ಕಮಲವನ್ನು ಗಮನಿಸಿತು. ಅದರ ಕೆಳಗಿದ್ದ ದೊಡ್ಡ ಕಾಂಡವನ್ನು ಕಂಡಿತು. ಕಮಲದ ದೇಟಿನೊಳಗೆ ಇಳಿಯಿತು. ಇಳಿದು ಎಲ್ಲೆಡೆ ಹುಡುಕಿತು. ಅಲ್ಲಿ ಎಷ್ಟು ಹುಡುಕಿದರೂ ಯಾರೂ ಕಾಣಲಿಲ್ಲ.
ಕಾಂಡದ ಆಳದಿಂದ ಹೊರಗೆ ಬಂದು ಅದೇ ಕಮಲದಲ್ಲಿ ಪದ್ಮಾಸನ ಹಾಕಿ ಕೂತಿತು. ಅದಕ್ಕೇನು ಭಯವಿರಲಿಲ್ಲ. ಆದರೂ ಮುಂದೆ ಏನು ಮಾಡಬೇಕೆಂಬ ಸಮಸ್ಯೆ ಎದುರಿಗೆ ಇತ್ತು. ತನಗೆ ಜನ್ಮದಾತರು ಯಾರು? ಮುಂದೆ ತನ್ನ ಕೆಲಸವೇನು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತೊಡಗಿತು.
*****
ಹೀಗೆ ಕುಳಿತ ಮಗುವಿಗೆ ವಿಶಾಲ ಆಕಾಶದಲ್ಲಿ ಶಬ್ದದ ಅನುಭವ ಆಯಿತು. ಮಗು ಆ ಶಬ್ದವನ್ನು ಗಮನವಿಟ್ಟು ಕೇಳಿತು. ಅದು ವಿಶ್ವದ ಮೊದಲ "ಆಕಾಶವಾಣಿ". ಶರೀರವಿಲ್ಲದ, ಆದರೆ ಚೆನ್ನಾಗಿ ಕೇಳಿಸಿದ ಧ್ವನಿ. ಅದೊಂದು "ಅಶರೀರವಾಣಿ". ಎರಡೇ ಎರಡು ಶಬ್ದಗಳು. ನಂತರ ಮತ್ತೇನಿಲ್ಲ. ಅಷ್ಟೇ.
"ಹದಿನಾರು. ಇಪ್ಪತ್ತೊಂದು."
ಹದಿನಾರು ಅನ್ನುವ ಒಂದು ಶಬ್ದ. ಇಪ್ಪತ್ತೊಂದು ಅನ್ನುವ ಇನ್ನೊಂದು ಶಬ್ದ. ಈ ಶಬ್ದಗಳ ಹಿಂದೆ ಮೌನ. ಈ ಎರಡು ಶಬ್ದಗಳ ನಂತರ ಮತ್ತೆ ಅದೇ ಮೌನದ ತಾಂಡವ.
ಮಗು ಈ ಎರಡು ಶಬ್ದಗಳಿಗೆ ಅರ್ಥ ಹುಡುಕಿತು. ಆಗ ಅದಕ್ಕೆ ಹೊಳೆಯಿತು. ಈ ಎರಡು ಶಬ್ದಗಳು ಎರಡು ಸಂಖ್ಯೆಯನ್ನು ಹೇಳುತ್ತಿವೆ. ಈ ಸಂಖ್ಯೆಗಳ ಅರ್ಥವೇನು?
ಒಹೋ! ಇವು ವರ್ಣಮಾಲೆಯ ಅಕ್ಷರಗಳು!
ಯಾವ ಅಕ್ಷರಗಳು? ಮೊದಲನೆಯದು ಹದಿನಾರು ಎಂದು. ಎರಡನೆಯದು ಇಪ್ಪತ್ತೊಂದು ಎಂದು. ಅಷ್ಟು ಸಂಖ್ಯೆಯ ಸ್ವರ ಅಕ್ಷರಗಳಿಲ್ಲ. ಆದ್ದರಿಂದ ಅವು ವ್ಯಂಜನಾಕ್ಷರಗಳು.
*****
ಹದಿನಾರು. ಕ-ವರ್ಗದ ಐದು ಅಕ್ಷರಗಳು. ಚ-ವರ್ಗದ ಐದು ಅಕ್ಷರಗಳು ಟ-ವರ್ಗದ ಐದು ಅಕ್ಷರಗಳು. ಅಲ್ಲಿಗೆ ಹದಿನೈದಾಯಿತು. ತ-ವರ್ಗದ "ತ" ಅನ್ನುವುದು ಹದಿನಾರನೆಯ ಅಕ್ಷರ.
ಮುಂದೆ ಪ-ವರ್ಗದ ಮೊದಲನೆಯ ಅಕ್ಷರ "ಪ" ಅನ್ನುವುದು ಇಪ್ಪತ್ತೊಂದನೆಯ ಅಕ್ಷರ!
ಎರಡನ್ನೂ ಕೂಡಿಸಿದರೆ "ತಪ' ಎಂದಾಯಿತು. "ತಪ" ಅಂದರೆ ಏನು? "ತಪ್ ತಪನೇ" ಎಂದು. ತಪ ಅನ್ನುವುದರ ಅರ್ಥ "ಆಲೋಚಿಸು" ಎಂದು. ಯಾವುದನ್ನಾದರೂ ಕುರಿತು ಒಂದೇ ಮನಸ್ಸಿನಿಂದ ಯೋಚಿಸುವುದನ್ನೇ ತಪಸ್ಸು ಎನ್ನುವುದು.
ಹೀಗೆ ಯೋಚಿಸಿದಾಗ ಮಗುವಿಗೆ ಆಕಾಶವಾಣಿಯ ಎರಡು ಶಬ್ದಗಳ ಸೂಚನೆಯ ಅರ್ಥವಾಯಿತು. ಜನನಕ್ಕೆ ಕಾರಣವಾಗಿ ಹುಟ್ಟಿಸಿ ತಂದವನು "ತಂದೆ". ತನ್ನ ಜನನಕ್ಕೆ ಕಾರಣನಾದ ತಂದೆಯನ್ನು ಕುರಿತು ತಪಸ್ಸು ಮಾಡಲು ಪ್ರಾರಂಭಿಸಿತು.
******
ಅದೇನು ಸಾಧಾರಣವಾದ ತಪಸ್ಸಲ್ಲ. ಒಂದೆರಡು ದಿನ, ವಾರ, ತಿಂಗಳುಗಳ ತಪಸ್ಸಲ್ಲ. ಒಂದೆರಡು ವರುಷಗಳ ತಪಸ್ಸೂ ಅಲ್ಲ. ಒಂದು ನೂರು ವರುಷಗಳ ತಪಸ್ಸು. ನಮ್ಮ ವರುಷದಂತೆ ಮನುಷ್ಯಮಾನದ ವರುಷವಲ್ಲ. ಬ್ರಹ್ಮದೇವರ ವಯೋಮಾನದ ಲೆಕ್ಕದ ಒಂದು ನೂರು ವರ್ಷ!
ಒಂದು ನೂರು ವರುಷದ ತಪಸ್ಸಿನ ನಂತರ ಕೂಸಿನ ತಂದೆ ಕಾಣಿಸಿಕೊಂಡ. ಅವನು ನೀರಿನ ಮೇಲೆ ಮಲಗಿದವನು."ನಾರಾ" ಅಂದರೆ ನೀರು. ಆದ್ದರಿಂದ ಅವನು "ನಾರಾಯಣ".
ಅವನು ಮಲಗಿರುವುದು ಹಾಲಿನ ಕಡಲ ಮೇಲಲ್ಲವೇ? ಹೌದು. ಆದರೆ ಹಾಲೂ ನೀರಿನಂತೆ. ದ್ರವ ರೂಪ. ಮೇಲಾಗಿ ಇದು ನಡೆದಾಗ ಅವನು "ಪ್ರಳಯಜಲ" ಅಂದರೆ ಎಲ್ಲೆಲ್ಲೂ ಆವರಿಸಿದ್ದ ನೀರಿನ ಮೇಲೆ ಮಲಗಿದ್ದವನು. ಯಾರಾದರೂ ಒಂದು ದ್ರವದ ಮೇಲೆ ಮಲಗಲು ಸಾಧ್ಯವೇ? ಅವನಿಗೆ ಸಾಧ್ಯ.
ಹೀಗೆ ಕಾಣಿಸಿಕೊಂಡ ತಂದೆ ನಾರಾಯಣ ಮಗ ಬ್ರಹ್ಮನಿಗೆ ನಾಲ್ಕು ಶ್ಲೋಕಗಳ ಸಂಕ್ಷಿಪ್ತವಾದ ಉಪದೇಶ ಮಾಡಿದ. ಇದೇ ಪ್ರಪಂಚದ ಮೊದಲ ಪಾಠ. ಮೊಟ್ಟ ಮೊದಲ ಶಿಕ್ಷಣ. ಅದನ್ನೇ "ಚತುಶ್ಲೋಕೀ ಭಾಗವತ" ಅನ್ನುತ್ತಾರೆ. ಈ ನಾಲ್ಕು ಶ್ಲೋಕಗಳಲ್ಲಿ ಇಡೀ ಸೃಷ್ಟಿಯ ರಹಸ್ಯವನ್ನು ಕಮಲನಾಭ ನಾರಾಯಣನು ಕಮಲಸಂಭವ ಬ್ರಹ್ಮನಿಗೆ ತಿಳಿಸಿ ಹೇಳಿದ.
*****
"ಪ್ರಜ್ಞೆ" ಮತ್ತು "ಪ್ರತಿಭೆ" ಅನ್ನುವ ಪದಗಳಿಗೆ ಈಗಿನ ವಾಡಿಕೆಯಲ್ಲಿ ಅನೇಕ ರೀತಿಯ ಅರ್ಥಗಳನ್ನು ಆರೋಪಿಸುತ್ತಾರೆ (ಕೊಡುತ್ತಾರೆ).
ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಎಲ್ಲ ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ತಿಳಿಯುವ ಶಕ್ತಿಗೆ "ಪ್ರಜ್ಞೆ" ಎಂದು ಹೆಸರು. ("ನಿನಗೆ ಮೈಮೇಲೆ ಪ್ರಜ್ಞೆ ಇಲ್ಲವೇ?" ಎಂದು ಕೆಲವೊಮ್ಮೆ ಹೇಳುವುದುಂಟು. ಹೀಗೆ ಹೇಳಿದರೆ "ನಿನಗೆ ಸಮಯ-ಸಂದರ್ಭಗಳ ಹಿನ್ನೆಲೆಯಲ್ಲಿ ತಿಳಿಯುವ ಶಕ್ತಿ ಇಲ್ಲವೇ?" ಎಂದು ತಾನೇ ಕೇಳುವುದು? "ಮೈಮೇಲೆ ಎಚ್ಚರ ಇಲ್ಲವೇ?" ಅನ್ನುವುದು ಅದರ ಅರ್ಥವಲ್ಲ).
ಇದೇ ರೀತಿ ಸ್ವಲ್ಪ ವಿಷಯವನ್ನು ಹೇಳಿದರೆ ಊಹಾಪೋಹ ಮಾಡಿ ಅದನ್ನು ವಿಸ್ತರಿಸಿ ವಿಶಾಲವಾಗಿ ತಿಳಿದುಕೊಳ್ಳುವುದಕ್ಕೆ "ಪ್ರತಿಭೆ" ಎಂದು ಹೆಸರು.
ಪ್ರಜ್ಞಾ ಮತ್ತು ಪ್ರತಿಭೆ ಇರುವವರಿಗೆ ಸ್ವಲ್ಪ ಸುಳಿವು ಕೊಟ್ಟರೆ ಸಾಕು. ಒಂದು ಸಣ್ಣ ಬೀಜ ಮುಂದೆ ಅರಳಿ ಒಂದು ದೊಡ್ಡ ಮರ ಆಗುವಂತೆ ಸೂಕ್ಶ್ಮವಾಗಿ ಹೇಳಿದ ವಿಷಯ ಅವರ ತಲೆಯಲ್ಲಿ ಅರಳಿ ಪೂರ್ತಿ ಅರಿವು ತುಂಬಿಕೊಳ್ಳುತ್ತದೆ. ಇದನ್ನೇ "ಉಗುರು ತೋರಿಸಿದರೆ ಹಸ್ತ ನುಂಗುವುದು" ಎಂದು ಹೇಳುವುದು.
ಬ್ರಹ್ಮದೇವರಿಗಿಂತ ಹೆಚ್ಚಿನ ಪ್ರಜ್ಞೆ ಮತ್ತು ಪ್ರತಿಭೆ ಈ ಜಗತ್ತಿನಲ್ಲಿ ಯಾರಿಗುಂಟು?
*****
ತಂದೆ ನಾರಾಯಣ ಹೇಳಿದ ಪಾಠದಿಂದ ಮುಂದಿನ ದಾರಿ ತಿಳಿದ ಚತುರ್ಮುಖ ಬ್ರಹ್ಮದೇವರು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದರು. ತನ್ನ ಮಾನಸ ಪುತ್ರರಾದ ನಾರದರಿಗೆ ಮುಂದೊಮ್ಮೆ ತಾವು ತಂದೆಯಿಂದ ಕೇಳಿದ ಭಾಗವತವನ್ನು ಉಪದೇಶಿಸಿದರು. ಕಾಲಾನಂತರ ಪರಾಶರ-ಸತ್ಯವತಿಯರ ಮಗನಾದ, ಶ್ರೀಹರಿಯ ಇನ್ನೊಂದು ರೂಪನಾದ ವೇದವ್ಯಾಸ ಮಹರ್ಷಿಯು ನಾರದರಿಂದ ಇದನ್ನು ಪಡೆದರು. ಅದನ್ನು ವಿಶಾಲವಾದ, ಹದಿನೆಂಟನೆಯ ಪುರಾಣವಾದ, ಹದಿನೆಂಟು ಸಾವಿರ ಶ್ಲೋಕದ "ಭಾಗವತ ಪುರಾಣ" ಮಾಡಿ ವಿವರಿಸಿದರು.
ವೇದವ್ಯಾಸರು ಈ ಭಾಗವತ ಮಹಾಪುರಾಣವನ್ನು ತಮ್ಮ ಮಗನಾದ ಶುಕ ಮಹರ್ಷಿಗೆ ಕೊಟ್ಟರು. ಪರೀಕ್ಷಿತ್ ಮಹಾರಾಜನು ಶುಕಮುಖವಾಗಿ ಇದನ್ನು ಕೇಳಿದನು. ನಂತರ ಅದು ಎಲ್ಲೆಡೆ ಹರಡಿತು.
*****
ಚತುರ್ಮುಖ ಬ್ರಹ್ಮರ ಮತ್ತೊಬ್ಬ ಮಗನಾದ ಕರ್ದಮ ಪ್ರಜಾಪತಿ ತನಗೆ ಬಂದ ಸೂಚನೆಯಂತೆ ಸ್ವಾಯಂಭುವ ಮನು ಮತ್ತು ಶತರೂಪಾ ದೇವಿಯರ ಮಗಳಾದ ದೇವಹೂತಿ ದೇವಿಯನ್ನು ವಿವಾಹವಾದರು. ಕರ್ದಮರ ತಪಸ್ಸಿಗೆ ಮೆಚ್ಚಿ ಅವರ ಮಗನಾಗಿ ಹುಟ್ಟುತ್ತೇನೆ ಎಂದು ಮಾತು ಕೊಟ್ಟಿದ್ದ ಮಹಾವಿಷ್ಣುವು ಕರ್ದಮ-ದೇವಹೂತಿಯರ ಮಗನಾಗಿ "ಕಪಿಲ ಋಷಿ" ಎಂದು ಅವತರಿಸಿದನು. ಕರ್ದಮರು ವಾನಪ್ರಸ್ಥರಾದ ಸಮಯದಲ್ಲಿ ದೇವಹೂತಿಯ ಮುಂದಿನ ರಕ್ಷಣೆಯ ಹೊಣೆ ಕಪಿಲರಿಗೆ ಒಪ್ಪಿಸಿದರು.
ಸ್ವಲ್ಪ ಕಾಲಾನಂತರ ದೇವಹೂತಿಯು ಮಗನಾದ ಕಪಿಲನ ಬಳಿಗೆ ಬಂದು ತನಗೆ ಉಪದೇಶ ಮಾಡುವಂತೆ ಕೇಳಿದಳು.
"ಕಪಿಲ, ನನಗೆ ಇನ್ನು ಬದುಕಿದ್ದು ಸಾಕಾಯಿತು. ನನಗೆ ಉಪದೇಶ ಮಾಡಿ ಮೋಕ್ಷ ಮಾರ್ಗವನ್ನು ಸೂಚಿಸು"
"ಅಮ್ಮಾ, ನೀನು ನನ್ನ ಹೆತ್ತ ತಾಯಿ. ತಾಯಿತನ ಬಹಳ ದೊಡ್ಡದು. ನಾನು ನಿನಗೆ ನಮಸ್ಕರಿಸಬೇಕೇ ಹೊರತು ನೀನು ನನಗೆ ನಮಸ್ಕಾರ ಮಾಡುವಂತಿಲ್ಲ. ಸನ್ಯಾಸಿಗಳಾದವರೂ ಸಹ ತಾಯಿಗೆ ನಮಸ್ಕರಿಸುತ್ತಾರೆ. ಗುರುವಿಗೆ ನಮಸ್ಕರಿಸದಿರುವವರಿಗೆ ಉಪದೇಶ ಮಾಡುವಂತಿಲ್ಲ. ಆದ್ದರಿಂದ ನಾನು ನಿನಗೆ ಉಪದೇಶ ಮಾಡಲಾಗದು"
"ಕಪಿಲ, ನೀನು ನಿಮಿತ್ತಕ್ಕೆ ನನ್ನ ಮಗನಾದರೂ ನೀನು ಶ್ರೀಹರಿ ಎಂದು ನಾನು ಬಲ್ಲೆ. ಆ ಕಾರಣದಿಂದ ನಾನು ನಮಸ್ಕರಿಸಬಹುದು. ನೀನು ಉಪದೇಶ ಮಾಡಬಹುದು"
"ನಾನು ಶ್ರೀಹರಿ ಎನ್ನುವ ಜ್ಞಾನ ನಿನಗೆ ಬಂದಿದೆ ಅಂದರೆ ಮತ್ತೆ ಯಾವ ಉಪದೇಶವೂ ಬೇಕಾಗಿಲ್ಲವಲ್ಲ!"
"ಅದೇನೇ ಇರಲಿ. ನಿನ್ನಿಂದ ವಿವರವಾಗಿ ಉಪದೇಶ ಪಡೆಯಬೇಕೆಂದು ನನಗೆ ಆಸೆ. ಈ ಆಸೆಯನ್ನು ಪೂರ್ಣ ಮಾಡು"
ಮುಂದೆ ಮಾತಿಲ್ಲ. ತಾಯಿಯ ಆಸೆ ಪೂರ್ತಿ ಮಾಡಲು ಕಪಿಲ ಮುನಿಯು ದೇವಹೂತಿ ದೇವಿಗೆ ವಿವರವಾಗಿ ಮುಕ್ತಿ ಮಾರ್ಗವನ್ನು ಉಪದೇಶಿಸಿದನು. ಇದು ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ.
ಕರ್ದಮ-ದೇವಹೂತಿ-ಕಪಿಲ ಮುನಿ ಇವರ ಬಗ್ಗೆ ಹೆಚ್ಚಿನ ವಿವರ ಇರುವ ಇಂಗ್ಲಿಷ್ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.
*****
ಭಾರತೀಯ ತತ್ವ್ವಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಬಹಳ ಮಹತ್ವ ಇದೆ. ಅನೇಕ ಗಹನ ವಿಷಯಗಳನ್ನು ಅರಿಯಲು ಅಂಕಿ-ಸಂಖ್ಯೆಗಳ ತಿಳುವಳಿಕೆ ಬಹಳ ಅವಶ್ಯಕ. ಇದೇ ಕಪಿಲ ಮಹರ್ಷಿ ಮುಂದೆ ಮೊದಲು ಸೂಚಿಸಿದ "ಹದಿನಾರು-ಇಪ್ಪತ್ತೊಂದು" ಸೂತ್ರವನ್ನು ಹಿಗ್ಗಿಸಿ "ಸಂಖ್ಯಾಶಾಸ್ತ್ರ" ರಚಿಸಿದ ಮೂಲ ಪುರುಷರು ಎಂದು ನಂಬಿಕೆ. ವೈದಿಕ ವಾಂಗ್ಮಯ ತಿಳಿಯುವ ಪ್ರಯತ್ನ ಮಾಡುವವರಿಗೆ ಇದರ ಅಭ್ಯಾಸ ಬೇಕು.
ಹದಿನಾರು-ಇಪ್ಪತ್ತೊಂದು ಎಂದು ಆಕಾಶವಾಣಿಯಲ್ಲಿ ಕೇಳಿಬಂದ ಎರಡು ಶಬ್ದಗಳು ಕಡೆಗೆ ಹೀಗೆ "ಸಂಖ್ಯಾಶಾಸ್ತ್ರ" ಆಗಿ ರೂಪುಗೊಂಡಿತು!
ಅತ್ಯದ್ಭುತ. ಪೂರ್ತಿಯಾಗಿ ಓದುವವರೆಗೆ ನಿಲ್ಲಿಸಲು ಮನಸ್ಸು ಒಪ್ಪುವುದಿಲ್ಲ..
ReplyDeleteಸೃಷ್ಟಿಯ ( deep mode) ಒಳಹೊಕ್ಕಿ ಬ್ರಹ್ಮನ ಯೋಚನೆಯನ್ನು ವಿವರಿಸಿದ್ದು ಅತ್ಯಂತ ಅದ್ಭುತವಾಗಿತ್ತು..
ಪ್ರಜ್ಞೆ ಮತ್ತು ಪ್ರತಿಭೆ ಹುಟ್ಟು ಗುಣಗಳಿಂದ ಬ್ರಹ್ಮನನ್ನು ಇಡೀ ಸೃಷ್ಟಿಯ ರಚನೆ ಮಾಡಿಸಿದ್ದು ಆ ಶ್ರೀಪ್ರಿಯ ಲೀಲೆ ಅಲ್ಲದೆ ಮತ್ತೇನು.
CR Ramesh Babu