Saturday, April 18, 2026

ಪವಮಾನ ಮತ್ತು ಪೂಯಮಾನ ಹೋಮಗಳು

 

ಯಾವುದೇ ವ್ಯಕ್ತಿ ತಾನು ಕೊಳಕಾಗಿರಬೇಕೆಂದು ಬಯಸುವುದಿಲ್ಲ. ತನ್ನನ್ನು ನೋಡಿದವರು ಅಸಹ್ಯ ಪಡದೆ ಮತ್ತೊಮ್ಮೆ ನೋಡಬೇಕೆಂದು ಇಚ್ಚಿಸುವುದು ಸ್ವಾಭಾವಿಕ. ಚೆನ್ನಾಗಿ ಕಾಣಿಸಬೇಕೆಂದು ಅನೇಕ ರೀತಿಯಲ್ಲಿ ಅಲಂಕರಿಸಿಕೊಳ್ಳುವುದು ಮತ್ತು ಸುಗಂಧ ದ್ರವ್ಯಗಳನ್ನು ಪೂಸಿಕೊಳ್ಳುವುದೂ ನಡೆಯುತ್ತಲೇ ಇರುತ್ತದೆ. ಆಕರ್ಷಕವಾಗಿ ಕಾಣಲು ಒಳ್ಳೆಯ ವಸ್ತ್ರಗಳು ಮತ್ತು ಇತರ ಪರಿಕರಗಳನ್ನೂ ಬಳಸುವುದು ಬಹಳ ಹಿಂದಿನಿಂದ ಬಂದಿದೆ. ನಾಗರೀಕತೆ ಬೆಳೆದಂತೆ ಇದರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುತ್ತಿರುವುದು ದಿನನಿತ್ಯ ಕಾಣುವ ದೃಶ್ಯ. ಸೌಂದರ್ಯ ವರ್ಧಕಗಳ ಸಂಬಂಧದ ಉದ್ಯಮವು ಹಿಂದೆಂದಿಗಿಂತ ಅಧಿಕ ವೇಗದಲ್ಲಿ ಬೆಳೆದು ಶತಕೋಟಿ ಡಾಲರುಗಳ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. 

ಏನೋ ಕಾರಣಕ್ಕೆ ಮನೆಯ ಹೊರಗಡೆ ಹೋಗಿ ಬಂದಾಯಿತು. ಹೊರ ಪ್ರಪಂಚದ ಧೂಳು, ಹೊಗೆ, ಅಂಟು ಪದಾರ್ಥಗಳು, ಮಳೆ-ಗಾಳಿ, ನಮ್ಮ ದೇಹದಲ್ಲೇ ತಯಾರಾದ ಬೆವರು ಮುಂತಾದುವುಗಳಿಂದ ದೇಹ ಮಲಿನವಾಯಿತು. ಇದು ದಿನ ಆಗುವುದೇ. ಏನು ಮಾಡುವುದು? ಆದ್ದರಿಂದ ಹಾಗೇ ಇದ್ದುಗೊಳ್ಳಲಿ. ಹೀಗೆಂದು ನಾವು ಬಿಡುವುದಿಲ್ಲ. ಮನೆಗೆ ಬಂದ ತಕ್ಷಣ ಕೈ-ಕಾಲು, ಮುಖ ತೊಳೆದುಕೊಳ್ಳುತ್ತೇವೆ. ಹೆಚ್ಚಿನ ಪ್ರಮಾಣದ ಕೊಳೆ ಆಗಿದ್ದರೆ ಸ್ನಾನವೂ ಮಾಡುತ್ತೇವೆ. ಮೊದಲು ಧರಿಸಿದ್ದ ಬಟ್ಟೆ-ಬರೆಗಳನ್ನು ಬದಲಿಸಿ ಶುಭ್ರವಾದ ಅರಿವೆ ಧರಿಸುತ್ತೇವೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ಮಾಡಿಕೊಂಡಾಗ "ಸದ್ಯ, ಈಗ ಆರಾಮ ಎನಿಸಿತು" ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಹತ್ತಿರವಿದ್ದವರಿಗೆ ಹಾಗೆ ಹೇಳುವುದೂ ಉಂಟು. 

ಈ ರೀತಿ ಶುಭ್ರವಾಗುವುದಕ್ಕೇ ಚಟುವಟಿಕೆ ನಿಲ್ಲುವುದಿಲ್ಲ. ಮಾರನೆಯ ದಿನ ಹೊರಗಡೆ ಹೋಗುವಾಗ ಹೆಚ್ಚಿನ ಕೊಳೆ-ಗಲೀಜು ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೇವೆ. ಅದಕ್ಕೆ ಬೇಕಾದ ಪರಿಕರಗಳನ್ನೂ ಹೊಂದಿಸಿಕೊಳ್ಳುತ್ತೇವೆ. ಧೂಳಿನ ವಾತಾವರಣ ಅಥವಾ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ತಂಪು ಕನ್ನಡಕ ಇರಬಹುದು. ಮಳೆ ಬರುವ ವಾತಾವರಣ ಇದ್ದರೆ ಒಂದು ಛತ್ರಿ, ಅದಕ್ಕೆ ಸರಿಯಾದ ಪಾದರಕ್ಷೆ ಇರಬಹುದು. ವಾಹನ ಬದಲಿಸಬಹುದು. ಸ್ಕೂಟರಿನಲ್ಲಿ ಹೋಗುವ ಬದಲು ಕಾರಿನಲ್ಲಿ ಹೋಗಬಹುದು. ಈ ರೀತಿ ಮುಂದೆ ಆಗುವ ಕೊಳೆ  ತಪ್ಪಿಸಿಕೊಳ್ಳಲೂ ಪ್ರಯತ್ನಿಸುತ್ತೇವೆ. 

*****

ಒಂದಲ್ಲ ಒಂದು ಕಾರಣಕ್ಕೆ ನಾವು ಆಗಾಗ ಔಷಧಿಗಳನ್ನು ಸೇವಿಸುತ್ತಿರುತ್ತೇವೆ. ದೇಹಕ್ಕೆ ರೋಗ-ರುಜಿನಗಳು ಬರುವುದು ಸ್ವಾಭಾವಿಕ. ಹೀಗೆ ಕಾಯಿಲೆ-ಕಸಾಲೆಗಳು ಬಂದಾಗ ಅವುಗಳ ಪೀಡೆಯಿಂದ ಹೊರಬಂದು ಮತ್ತೆ ಪೂರ್ಣ ಅರೋಗ್ಯ ಪಡೆಯಲು ಸೇವಿಸುವ ಔಷಧಿಗಳಿಗೆ "ರೋಗ ನಿವಾರಕ" ಔಷಧಿಗಳು ಅನ್ನುತ್ತೇವೆ. ಅಂತೆಯೇ ನಮಗೆ ರೋಗ ಬರದಿರಲು ಕೆಲವು ಔಷಧಗಳನ್ನು, ಟಾನಿಕ್ಕು ಮೊದಲಾದುವುಗಳನ್ನೂ ಸೇವಿಸುತ್ತೇವೆ. ಉದಾಹರಣೆಗೆ ವ್ಯಾಕ್ಸಿನೇಷನ್, ಬೂಸ್ಟರ್ ಮುಂತಾದುವು. ಇವುಗಳಿಗೆ "ರೋಗ ನಿರೋಧಕ" ಅನ್ನುತ್ತೇವೆ. ಆಗಲೇ ಬಂದು ವಕ್ಕರಿಸಿರುವ ರೋಗದಿಂದ ಹೊರಬರಲು ರೋಗ ನಿವಾರಕಗಳು. ರೋಗವೇ ಬಾರದಿರಲು ರೋಗ ನಿರೋಧಕಗಳು!

ಕಾನೂನಿನ ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಕಾನೂನಿನ ಪುಸ್ತಕಗಳನ್ನು ಎರಡು ರೀತಿಯಾಗಿ ವಿಭಾಗಿಸುತ್ತಾರೆ. ಒಂದು "ನಿರ್ಣಾಯಕ ಕಾನೂನು" (Substantive law) ಎಂದು. ನಿರ್ಣಾಯಕ ಕಾನೂನು "ಹಕ್ಕು ಮತ್ತು ಜವಾಬ್ದಾರಿ" ಮತ್ತು "ಅಪರಾಧಗಳು" ಇವುಗಳ ಮಹತ್ವವನ್ನು ವಿವರಿಸುತ್ತವೆ. ಇನ್ನೊಂದು "ಕಾರ್ಯ ವಿಧಾನ ಕಾನೂನು" (Procedural law) ಎಂದು. ಇವು ನ್ಯಾಯ ನಿರ್ಣಯ ಮಾಡುವ ಕ್ರಮವನ್ನು ವಿವರಿಸುತ್ತವೆ. ಕೆಲವು ಕಾನೂನುಗಳು ಇವೆರಡರನ್ನೂ ಒಳಗೊಂಡು ಎರಡು ಭಾಗಗಳಿಗೂ ಸೇರುತ್ತವೆ. 

***** 

ಯಾವುದೋ ಒಂದು ವಿಷಯ ಪೂರ್ತಿಯಾಗಿ ತೀರ್ಮಾನ ಆಗಿರುವುದಿಲ್ಲ. ಇಂತಹ ಹಂತದಲ್ಲಿ ಅವುಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುತ್ತದೆ. ಆಗ ಅದು ಒಂದು ಗೊಂದಲದ ಸ್ಥಿತಿ. ಪೂರ್ತಿ ಚರ್ಚೆ ನಡೆದು, ಸಾಧಕ-ಬಾಧಕಗಳ ಪರಿಶೀಲನೆ ನಡೆದು, ಕೊನೆಯ ತೀರ್ಮಾನ ಹೊರಬರುತ್ತದೆ. ಈಗ ಗೊಂದಲ ನಿವಾರಣೆ ಆಯಿತು. ಸರ್ಕಾರದ ವಿಷಯಗಳಲ್ಲಿ "ಸರ್ಕಾರೀ ಆದೇಶ" (Goverement Order) ಆಯಿತು ಅನ್ನುತ್ತೇವೆ. ಹೀಗೆ ಸರ್ಕಾರಿ ಆದೇಶ ಹೊರಬಿದ್ದಮೇಲೆ ಮತ್ತೆ ಚರ್ಚೆಗೆ ಅವಕಾಶ ಇಲ್ಲ. 

ವೇದಗಳನ್ನು ನಂಬುವವರು ಅವುಗಳಲ್ಲಿ ಹೇಳಿರುವುದನ್ನು ಈ ರೀತಿಯ ಸರ್ಕಾರಿ ಆದೇಶದಂತೆ ಪರಿಗಣಿಸುತ್ತಾರೆ. "ಹೀಗಿರಬೇಕು" ಅಂದರೆ ಹೀಗೆಯೇ ಇರಬೇಕು. ಹಾಗಿರುವಂತಿಲ್ಲ. "ಹೀಗೆ ಮಾಡಬೇಕು" ಅಂದರೆ ಹೀಗೆಯೇ ಮಾಡಬೇಕು. ಹಾಗೆ ಮಾಡುವಂತಿಲ್ಲ. ಏಕೆ ಎಂದು ಕೇಳುವಂತಿಲ್ಲ. ಯಾಕಂದರೆ ಚರ್ಚೆಯ ಕಾಲ ದಾಟಿ ಸರ್ಕಾರಿ ಆದೇಶ ಹೊರಬಂದಿದೆ. ಈಗ ಆದೇಶವನ್ನು ಪ್ರಶ್ನಿಸುವಂತಿಲ್ಲ. ಇಂತಹ ಆದೇಶಗಳ ಪಾಲನೆಯಲ್ಲಿ ದಯೆ-ದಾಕ್ಷಿಣ್ಯ, ಅಂತಃಕರಣ, ಸ್ವಲ್ಪ ಅಡ್ಜಸ್ಟ್ ಮಾಡು, ಇಂತಹವುಗಳಿಗೆ ಅವಕಾಶವಿಲ್ಲ. 
*****

ಮೇಲಿನ ಎಲ್ಲ ಅಂಶಗಳು ಲೌಕಿಕ ವಿಚಾರಗಳಿಗೆ ಅನ್ವಯವಾಗುತ್ತವೆ. ಹಾಗಿದ್ದರೆ, ತಾತ್ವಿಕ ವಿಚಾರಗಳಲ್ಲಿ ಇವುಗಳ ಅನ್ವಯ ಹೇಗೆ? ದೇಹ ಮತ್ತು ಆತ್ಮ ಬೇರೆ ಬೇರೆ. ದೇಹವನ್ನು ಇಲ್ಲಿ ಬಿಡುತ್ತೇವೆ. ಮುಂದಿನ ಲೋಕಕ್ಕೆ ಆತ್ಮ ಪ್ರಯಾಣ ಬೆಳೆಸುತ್ತದೆ. ಇಹಲೋಕ-ಪರಲೋಕ ಎಂಬುವುವು ಉಂಟು. ಪಾಪ-ಪುಣ್ಯ ಎಂದುಂಟು. ಹೀಗೆ ನಂಬಿದಾಗ ಅವುಗಳ ಸಮಾಚಾರ ಏನು? ಈ ಪ್ರಶ್ನೆಗಳಿಗೆ ಉತ್ತರ ಹೇಗೆ? ಇವು ಯೋಚಿಸಬೇಕಾದ ವಿಷಯಗಳೇ. 

ಋಗ್ವೇದದ ಒಂಭತ್ತನೆಯ ಮಂಡಲದ ಕಡೆಯ ಭಾಗದಲ್ಲಿನ ಕೆಲವು ಮಂತ್ರಗಳನ್ನು "ಕರ್ಣ ಮಂತ್ರಗಳು" ಎಂದು ನಿರ್ದೇಶಿಸುತ್ತಾರೆ. ಜೀವಿತದ ಕಡೆಯ ಭಾಗ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಚೆನ್ನಾಗಿರುವಾಗಲೇ ಅಂತ್ಯ ಕಾಲ ಬರಬಹುದು. ಮತ್ತೆ ಕೆಲವರಿಗೆ ಹಾಸಿಗೆ ಹಿಡಿದು ಕಾಲ ಕಳೆಯುವ ಸಂದರ್ಭ ಒದಗಿಬರಬಹುದು. ಹೀಗೆ ಹಾಸಿಗೆ ಹಿಡಿದು ಮಲಗಿದ ಹಿರಿಯರಿಗೆ ಅಂತ್ಯ ಕಾಲದಲ್ಲಿ ಅವರ ಮಕ್ಕಳೋ, ಬಂಧುಗಳೋ ಅವರ ಮುಂದಿನ ಪ್ರಯಾಣದ ಕಾಲದಲ್ಲಿ ಅನುಕೂಲವಾಗಲೆಂದು ಕೆಲವು ವಿಶೇಷವಾದ ಮಂತ್ರಗಳನ್ನು ಅವರ ಕಿವಿಯಲ್ಲಿ ಹೇಳುವ ಪರಿಪಾಠವಿದೆ. ಇವೇ ಕರ್ಣ ಮಂತ್ರಗಳು. 

ವೇದಗಳಲ್ಲಿರುವ ಎಲ್ಲ ಮಂತ್ರಗಳೂ ಪವಿತ್ರವಾದುವೇ. ಅದಕ್ಕೇ ಅವುಗಳಿಗೆ ಅಲ್ಲಿ ಸ್ಥಾನ ಸಿಕ್ಕಿರುವುದು. ಆದರೂ ಎಲ್ಲದರಲ್ಲಿಯೂ "ಯಾವುದು ಮುಖ್ಯ?" ಎಂದು ಹುಡುಕುವುದು ಮಾನವ ಸಹಜ ಅಭ್ಯಾಸ. ಹೀಗೆ ನೋಡಿದಾಗ ಒಂಭತ್ತನೆಯ ಮಂಡಲದ ಭಾಗಗಳನ್ನು "ಪವಿತ್ರನಾಮ್ ಚ ಪವಿತ್ರಂ" ಎಂದು ತಿಳಿದವರು ಹೇಳುತ್ತಾರೆ. ಹೀಗೆ ಹೇಳುವ ಒಟ್ಟು ಸೂಕ್ತಗಳು 114 ಎನ್ನುತ್ತಾರೆ. ಅವುಗಲ್ಲಿ 1,108 ಋಕ್ಕುಗಳಿವೆ. 

ಇವುಗನ್ನು ಅನುಕೂಲಕ್ಕಾಗಿ ಎರಡು ಭಾಗ ಮಾಡಿದ್ದಾರೆ. ಮೊದಲ ಭಾಗ (ಪೂರ್ವ ಭಾಗ) 67 ಸೂಕ್ತಗಳ 610 ಋಕ್ಕುಗಳು. ಎರಡನೆಯ ಭಾಗ (ಉತ್ತರ ಭಾಗ) 47 ಸೂಕ್ತಗಳ 498 ಋಕ್ಕುಗಳು. ಪೂರ್ವ ಭಾಗವನ್ನು "ಪವಮಾನ ಸೂಕ್ತ" ಎಂದೂ, ಉತ್ತರ ಭಾಗವನ್ನು "ಪೂಯಮಾನ ಸೂಕ್ತ" ಎಂದೂ ನಿರ್ದೇಶಿಸುತ್ತಾರೆ. ಇವುಗಳ ಪ್ರಧಾನ ದೇವತೆ "ಪವಮಾನ ಸಂಜ್ಞಕ ಸೋಮ". ಸೋಮ ಅನ್ನುವ ಪದಕ್ಕೆ ವಿಶಾಲಾರ್ಥಗಳಿವೆ. ಸಾಮಾನ್ಯವಾಗಿ ಸೋಮ ಅಂದರೆ ಚಂದ್ರ. ಸ-ಉಮಾ (ಅಂದರೆ ಉಮೆಯ ಜೊತೆಯಲ್ಲಿ ಇರುವವನು) ಎಂದು ಅರ್ಥ ಮಾಡಿದ್ದಾಗ ಶಿವನೂ ಸೋಮ ಆಗುತ್ತಾನೆ. ಮಹಾವಿಷ್ಣುವಿಗೂ ಸೋಮ ಶಬ್ದ ಅನ್ವಯವಾಗುತ್ತದೆ ಅನ್ನುತ್ತಾರೆ. 

*****

ಸೋಮ ಎಂಬ ಹೆಸರಿನ ಒಂದು ಬಳ್ಳಿ. ಅದೊಂದು ಬಲು ವಿಶೇಷಕರ ಬಳ್ಳಿ. ಎಲ್ಲ ಬಳ್ಳಿ ರೀತಿಯ ಸಸ್ಯ. ಹಿಮಾಲಯದ ಕೆಲವು ಪ್ರದೇಶಗಳಲ್ಲಿ ಸಿಗುತ್ತದೆ ಅನ್ನುತ್ತಾರೆ. ಬಳ್ಳಿಯಂತೆ ಹಬ್ಬಿಕೊಂಡು ಬೆಳೆಯುವ ಸಸ್ಯಕ್ಕೆ ಸಂಸ್ಕೃತದಲ್ಲಿ "ಲತೆ" ಎಂದು ಹೆಸರು. ಆದ್ದರಿಂದ ಅದು "ಸೋಮ ಲತೆ". ಅದರ ರಸವು ಬಹಳ ಅಮೂಲ್ಯ. ಆದ್ದರಿಂದ ಅದರ ರಸವನ್ನು ಹೋಮ-ಹವನಗಳಲ್ಲಿ ಹವಿಸ್ಸಾಗಿ ಬಳಸುತ್ತಾರೆ. ಮೇಲೆ ಹೇಳಿದ ಸೂಕ್ತಗಳಲ್ಲಿ ಈ ಸೋಮಲತೆಯ ಮರ್ದನ (ಜಜ್ಜಿ ರಸ ತೆಗೆಯುವುದು), ರಸ ಶೋಧನ (ರಸವನ್ನು ಶೋಧಿಸಿ ಶೇಖರಿಸುವುದು), ಸಂಸ್ಕರಣ (ಹೀಗೆ ಶೇಖರಿಸಿದ ರಸಕ್ಕೆ ಬೇರೆ ಪದಾರ್ಥಗಳನ್ನು ಸೇರಿಸಿ ಇನ್ನೂ ಉತ್ತಮ ಮಾಡುವುದು), ನಂತರ ಅಗ್ನಿಯಲ್ಲಿ ಹೋಮ ಮಾಡುವ ಮೂಲಕ ದೇವತೆಗಳಿಗೆ ಅರ್ಪಿಸುವುದು, ಮುಂತಾದುವು ಈ ಸೂಕ್ತಗಳಲ್ಲಿ ಕಂಡುಬರುತ್ತವೆ. 

ಹೀಗೆ ಹೋಮ ಮಾಡುವಾಗ ದೇವತೆಗಳನ್ನು ನಮಗೆ ಬೇಕಾದ ವರಗಳನ್ನು ಬೇಡುವುದು, ಬೇಕಿದ್ದನ್ನು ಕೊಡಿ ಎಂದು ಪ್ರಾರ್ಥಿಸುವುದು. ಸ್ತುತಿಸುವುದು ಮತ್ತು ಸ್ತುತಿಸುವಾಗ ಬೇಡಿಕೆಗಳನ್ನು ಮುಂದಿಡುವುದು. ಈ ಸೋಮರಸದ ಬಣ್ಣ ಹಳದಿಮಿಶ್ರಿತ ಕೆಂಪು. ಇದು ಮುಖ್ಯ ಹೋಮದ್ರವ್ಯ. ಹೀಗೆ ದೇವತೆಗಳಿಗೆ ಅರ್ಪಿಸಿದ ನಂತರ ಮಿಕ್ಕ 'ಸೋಮರಸ" ಪ್ರಸಾದ ರೂಪದಲ್ಲಿ ಸೇವಿಸುವುದು. ಇದೇ "ಸೋಮಪಾನ". ಈಗ ಸೋಮಲತೆ ಸಿಗದಿರುವುದರಿಂದ ಒಳ್ಳೆಯ ತುಪ್ಪವನ್ನು ಹೋಮದ್ರವ್ಯವಾಗಿ ಬಳಸುತ್ತಾರೆ.

ಪವಮಾನ ಸೂಕ್ತದ ಭಾಗ ಐಹಿಕ ಫಲಗಳನ್ನು ಕೊಡುವುದಂತೆ. ಇದು ರೋಗನಿವಾರಕದಂತೆ ಪಾಪನಿವಾರಕ. ದೇಹಕ್ಕೆ ರೋಗಗಳು. ಆತ್ಮಕ್ಕೆ ಪಾಪಗಳು. ರೋಗಗಳಿಗೆ ರೋಗನಿವಾರಕ ಔಷಧಗಳು. ತಿಳಿಯದೆ ಮತ್ತು ತಿಳಿದೂ ಮಾಡಿ ಶೇಖರಿಸಿರಿವ ಪಾಪಗಳಿಂದ ಬಿಡುಗಡೆಗಾಗಿ "ಪವಮಾನ ಹೋಮ". ಮೊದಲು ಶುಚಿ ಆಗುವುದು. ನಂತರ ಮತ್ತೊಮ್ಮೆ ಕೊಳೆ ಆಗದಂತೆ ಪ್ರಯತ್ನ ಮಾಡಲು ಅವಕಾಶ.

ಪೂಯಮಾನ ಸೂಕ್ತದ ಭಾಗ ದೇಹಾವಸಾನದ ನಂತರ ಮತ್ತೆ ಪುನರ್ಜನ್ಮ ಇಲ್ಲದಂತೆ ಮಾಡುವುದಂತೆ. ಜನನ-ಮರಣ ಚಕ್ರದಿಂದ ಹೊರಗಡೆ ತಂದು ಶಂಖ-ಚಕ್ರ-ಗದಾಧಾರಿಯಾದ ಶ್ರೀ ಮಹಾವಿಷ್ಣುವಿನ ಸಾನ್ನಿಧ್ಯ ಮತ್ತು ಮುಕ್ತಿ ಕೊಡುವಂತೆ ಇದರಲ್ಲಿ ಪ್ರಾರ್ಥನೆ. ಈ ಕಾರಣ ಇದು ರೋಗನಿರೋಧಕ ಚುಚ್ಚುಮದ್ದಿನಂತೆ. ಈ ವ್ಯಾಕ್ಸಿನೇಷನ್ ತೆಗೆದುಕೊಂಡರೆ ಮತ್ತೆ ಹುಟ್ಟುವ ರೋಗ ನಿವಾರಣೆ. ಇದು "ಪೂಯಮಾನ ಹೋಮ" ಮಾಡುವ ವಿಶೇಷತೆ.  

ಈ ಎರಡೂ ಸೂಕ್ತಗಳಲ್ಲಿ "ನಿರ್ಣಾಯಕ ಕಾನೂನು" ಮತ್ತು "ಕಾರ್ಯವಿಧಾನ ಕಾನೂನು" ಇರುವಂತೆ ಹೋಮ ದ್ರವ್ಯಗಳನ್ನು ತಯಾರಿಸುವುದು, ಹೋಮ ಮಾಡುವುದು ಮತ್ತು ಅವುಗಳ ಮಹತ್ವ ಮುಂತಾದ ಎಲ್ಲ ವಿಷಯಗಳೂ ಇವೆ. 

ಪ್ರತಿ ಜೀವಿಯೂ ತನ್ನ ಭಾರ ತಾನೇ ಹೊರಬೇಕು. ತನ್ನ ಮುಕ್ತಿಗೆ ತಾನೇ ಶ್ರಮಿಸಬೇಕು. ಅದು ಇನ್ನೊಬ್ಬರು ಕೊಡುವುದಲ್ಲ. "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಾಶು:" ಎಂದು ಮಾತುಂಟು. (ಮಕ್ಕಳು ಮಾಡುವ ಪಿಂಡಪ್ರದಾನ ಇತ್ಯಾದಿಗಳು ಮಾತ್ರವೇ ಮುಕ್ತಿದಾಯಕವಲ್ಲ ಎಂದು ಭಾವ). ಬೇರೆಯವರು ನಮಗೆ ಮಾಡುವ ನೆರವು ಸಾಕಾಗುವುದಿಲ್ಲ. ಅವುಗಳು ಸ್ವಲ್ಪಮಟ್ಟಿಗೆ ಸಹಾಯಕವಾಗಬಹುದು. ಅಷ್ಟೇ. ನಮ್ಮ ಸಾಧನೆಯೇ ಮುಖ್ಯ. ಅದಕ್ಕೇ ಪೂಯಮಾನ ಹೋಮ ಮಾಡಿ ಕೋರಿಕೊಳ್ಳುವುದು. 

*****

ಈ ಹೋಮಗಳು ಕೇವಲ ವೈದಿಕ ಕ್ರಿಯೆಗಳು ಎಂದು ತಿಳಿಯಬಾರದು. ಇವುಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವಗಳೂ ಇವೆ. ಇಂತಹ ಮುಖ್ಯ ಹೋಮಗಳನ್ನು ಯಾರೂ ತಮ್ಮ ಪಾಡಿಗೆ ತಾವು ಮನೆಯ ಮಟ್ಟಿಗೆ ಸೀಮಿತವಾಗಿ ಮಾಡಿಕೊಳ್ಳುವುದಿಲ್ಲ. ಬಂಧು-ಬಾಂಧವರು, ಮಿತ್ರರು-ಹಿತೈಷಿಗಳನ್ನು ಆಮಂತ್ರಿಸುತ್ತಾರೆ. ಇಂತಹ ಕೆಲಸಗಳನ್ನು ಸರಿಯಾಗಿ ಮಾಡಲು ಜನಸಹಾಯ ಬಹಳ ಮುಖ್ಯ. ಬಂದವರು ಎರಡು-ಮೂರು ದಿನ ಒಟ್ಟಿಗೆ ಒಂದು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಊಟ-ಉಪಚಾರಗಳು ಇರುತ್ತವೆ. ಹಾಡು-ಹಸೆ, ಕಥೆ-ಪ್ರವಚನ ನಡೆಯುತ್ತವೆ. ಆದ ಕಾರಣ ಇವು ಒಂದು ರೀತಿಯ ವೈದಿಕ-ಸಾಮಾಜಿಕ-ಸಾಂಸ್ಕೃತಿಕ ಹಬ್ಬ. 

ಪವಮಾನ ಹೋಮದ ಆಚರಣೆ ಸಾಕಷ್ಟು ವ್ಯಾಪಕವಾಗಿ ಉಂಟು. ಅಲ್ಲಲ್ಲಿ ಈ ಹೋಮ ನಡೆಯುವುದು ಕೇಳಿ ಬರುತ್ತದೆ. ಆದರೆ "ಪೂಯಮಾನ ಹೋಮ" ಆಚರಣೆ ಅಷ್ಟು ವ್ಯಾಪಕವಾಗಿಲ್ಲ. ಕೆಲವು ಪಂಗಡಗಳಲ್ಲಿ, ವಿಶೇಷವಾಗಿ ಅದ್ವೈತಿಗಳಲ್ಲಿ, ಇದು ಮೂರು ದಿನದ ಕಾರ್ಯಕ್ರಮ. ಏಕಾದಶಿಯ ದಿನ ಪವಮಾನ ಹೋಮ. ದ್ವಾದಶಿಯ ದಿನ ಪೂಯಮಾನ ಹೋಮ. ಹೀಗೆ ದ್ವಂದ್ವವಾಗಿ ಮಾಡುವ ಪದ್ಧತಿ ಇದೆ. ದ್ವೈತಿಗಳಲ್ಲಿ ಏಕಾದಶಿಯ ದಿನ ಹೋಮ ಮಾಡುವುದಿಲ್ಲ. 

*****

ಈಗಿನ ನಗರಗಳ ಮನೆಗಳಲ್ಲಿ ಹೋಮ-ಹವನದಂತಹ ಕಾರ್ಯಕ್ರಮ ಮಾಡುವುದು ಅಸಾಧ್ಯವೇ. ಯಾವುದಾದರೂ ಪಾರ್ಟಿ ಹಾಲ್ ಅಥವಾ ಛತ್ರಗಳಲ್ಲಿ ನಡೆಸಬಹುದು. ಆದರೆ ಒಬ್ಬ ಮಿತ್ರ ದಂಪತಿಗಳು ಕಳೆದ ವಾರ ಇಂತಹ ಕಾರ್ಯಕ್ರಮವೊಂದನ್ನು ಅಧ್ಭುತವಾಗಿ, ಅಚ್ಚುಕಟ್ಟಾಗಿ ತಮ್ಮ ಮನೆಯಲ್ಲಿಯೇ ನಡೆಸಿದರು. ಆ ಕಾರಣ ನಮಗೂ ಅದರಲ್ಲಿ ಭಾಗವಹಿಸುವ ಆಪೂರ್ವ ಅವಕಾಶ ಸಿಕ್ಕಿತು. ಅವರಿಗೆ ಅನೇಕ ವಂದನೆಗಳು. 

ಇದೊಂದು ಅಪರೂಪದ ಕಾರ್ಯಕ್ರಮ ಆದುದರಿಂದ  ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ಅನೇಕ ಅನುಮಾನಗಳೂ, ಪ್ರಶ್ನೆಗಳೂ ಹುಟ್ಟಿ ನಿಂತವು. ಇಂತಹ ಸಂದರ್ಭದಲ್ಲಿ ನೆನಪಾದ ಹೆಸರು ವೇದಬ್ರಹ್ಮಶ್ರೀ ಡಾ. ಎಸ್. ಆರ್. ನರಸಿಂಹ ಮೂರ್ತಿ ಅವರದು. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಪ್ರಕಟಿಸಿರುವ ಗ್ರಂಥಗಳು, ತಯಾರು ಮಾಡಿರುವ ಶಿಷ್ಯವೃಂದ, ಇವೆಲ್ಲವೂ ಒಂದು ವಿಸ್ಮಯವೇ ಸರಿ. ಅವರೊಡನೆ ಮಾತನಾಡಿದಾಗ ಹಳೆಯ ಪರಿಚಯವೇ ಇಲ್ಲದಿದ್ದರೂ ಅತ್ಯಂತ ಸೌಜನ್ಯದಿಂದ ವಿಷಯಗಳನ್ನು ತಿಳಿಸಿಕೊಟ್ಟರು. ಅವರಿಗೆ ಸಾದರ ಪ್ರಣಾಮಗಳು. 
*****

ಇಂತಹ ಕಾರ್ಯಕ್ರಮ ನಡೆಯುವುದು ತಿಳಿದರೆ ತಪ್ಪಿಸಿಕೊಳ್ಳಬಾರದು. "ಸತ್ಯನಾರಾಯ ಪೂಜೆ" ನಡೆದರೆ ಆಹ್ವಾನವಿಲ್ಲದಿದ್ದರೂ ಹೋಗಬಹುದು ಅನ್ನುತ್ತಾರೆ. ಅದಕ್ಕೆ "ಪೂಯಮಾನ ಹೋಮ" ಕಾರ್ಯಕ್ರಮವನ್ನೂ ಸೇರಿಸಿಕೊಳ್ಳಬಹುದು!

12 comments:

  1. Many relavent issues highlighted which are with understanding for a ritualistic trend followers

    ReplyDelete
  2. ಪವಮಾನ - ಪೂವಮಾನ ಹೋಮಗಳು - ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪೂವಮಾನ ಹೋಮದ ಬಗ್ಗೆ ಕೇಳಿರಲಿಲ್ಲ. ಲೇಖನ ಮಾಹಿತಿಪೂರ್ಣವಾಗಿದೆ.

    ReplyDelete
  3. ಅಧ್ಬುತ ಲೇಖನ. ತುಂಬ ವಿಚಾರಗಳನ್ನು/ವಿಷಯಗಳನ್ನು ತಿಳಿಸಿದ್ದೀರಿ. ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮನ.
    CR Ramesh babu

    ReplyDelete
  4. ಸದಾನಂದ ಮೂರ್ತಿApril 18, 2026 at 9:48 PM

    ಪವಮಾನ-ಪೂಯಮಾನ, ಕರ್ಣಮಂತ್ರ ವಿಚಾರಗು ತಿಳಿದವು.ಶರಣ ಸಂಪ್ರದಾಯ ದಲ್ಲಿ, ಬ್ರಾಹ್ಮಣ ಮಕ್ಕಳಿಗೆ ಉಪನಯನ ಮಾಡುವುವ ರೀತಿಯಲ್ಲಿ, ಶೋಡಷ ವಯಸ್ಲು ತಲುಪಿದಾದ ಇಷ್ಟಲಿಂಗ ಧಾರಣೆ ಮಾಡುತ್ತಾರೆ-ಆಗ ಗುರುಗಳು ಅಂಗನಾದ ಹುಡುಗನಿಗೆ ಕಿವಿಯಲ್ಲಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ( ಬೇರೆಯವರಿಗೆ ಕೇಳದ ಹಾಗೆ) ಅದನ್ನು ಇಷ್ಟ ಲಿಂಗ ಪೂಜೆ ಮಾಡುವಾಗ ಮನಸಿನಲ್ಲಿ ಹೇಳಿಕೊಂಡಂತೆ ಜಪಿಸಬೇಕೆಂದು ಅನುಗ್ರಹಿಸುತ್ತಾರೆ.ಈ ಕರ್ಣ ಮಂತ್ರಾಚರಣೆಯಾದ ಮೇಲೆ ಅವನು ಲಿಂಗಾಂಗಿಯಾಗುತ್ತಾನೆ.ಹೀಗಾಗಿ ಎಲ್ಲಾ ಮತಾಚಾರಗಳಲ್ಲೂ ಕರ್ಣ ಮಂತ್ರಕ್ಕೆ ಮಹತ್ವವಿದೆ

    ReplyDelete
  5. ನಾನು ಪೂಯಮಾನ ಹೋಮ ಹೆಸರು ಕೂಡ ತಿಳಿದಿರಲಿಲ್ಲ, ನಿಮ್ಮ ಬ್ಲಾಗ್ ಓದಿ ಎಷ್ಟೋ ವಿಷಯಗಳು, ಅದರ ವಿಚಾರಗಳು ತಿಳಿದು ಕೊಂಡಿದ್ದೇನೆ, ತುಂಬಾ ಚೆನ್ನಾಗಿ ಬರೆಯುತ್ತೀರಿ, ಧನ್ಯವಾದಗಳು

    ReplyDelete
  6. ಅದ್ಭುತವಾದ ಲೇಖನ. ನನಗೆ ಪುಯಮಾನ ಅಥವಾ ಪವಮಾನ ದ ಬಗ್ಗೆ ತಿಳಿದೇ ಇರಲಿಲ್ಲ. ಬಹಳಷ್ಟು ಮಾಹಿತಿ ಸಿಕ್ಕಿತು.

    ReplyDelete
  7. Very good and useful information Muthyavara. Madae me to understand about homas also. Thank you.

    ReplyDelete
  8. I was not aware of this Homa.Thank you.

    ReplyDelete
  9. ನಿಮ್ಮ ಲೇಖನ ಅದ್ಭುತವಾಗಿದೆ . ಪವಮಾನ ಹಾಗೂ ಪೂಯಮಾನ ಹೋಮಗಳ ಪರಿಚಯ,ಅವೆರಡು ಹೋಮಗಳ ವ್ಯತ್ಯಾಸಗಳು, ಈ ಹೋಮಗಳನ್ನು ಏತಕ್ಕಾಗಿ ಆಚರಿಸಲಾಗುತ್ತದೆ, ಈ ಹೋಮಗಳ ಅಸ್ತಿತ್ವದ ಬಗ್ಗೆ ಆಧಾರವೇನು, ಈ ಹೋಮಗಳಲ್ಲಿ ಹವಿಸ್ಸು ಯಾವುದು, ಲೌಕಿಕ ಸುಖ, ಮನಶ್ಶಾಂತಿ ಇವೆಲ್ಲವನ್ನೂ ಸರಳವಾಗಿ ಸುಂದರವಾಗಿ, ಉದಾಹರಣೆಗಳ ಸಮೇತ ಓದುಗರಿಗೆ ಮನದಟ್ಟು ಮಾಡಿದ್ದೀರಿ.ಪೂಯಮನ ಹೋಮಕಾರ್ಯ ಮಾಡುವುದಕ್ಕೆ ಮುಂಚೆ ನನಗೆ ಅಲ್ಪ ಮಾಹಿತಿ ಇತ್ತು. ನಿಮ್ಮ ಲೇಖನ ಹೋಮದ ಮುಂಚೆ ನನಗೆ ಲಭ್ಯ ವಾಗಿದ್ದರೆ ಎಷ್ಟು ಚೆನ್ನಾಗಿತ್ತು ಅನ್ನಿಸುತ್ತಿದೆ. ನಿಮ್ಮ ಲೇಖನವನ್ನು ಹೋಮದಲ್ಲಿ ಭಾಗಿಯಾಗಿದ್ದ ಪುರೋಹಿತರಿಗೂ, ಅಭಿಮಾನಿಗಳಿಗೂ share ಮಾಡಿದ್ದೇನೆ. ನಿಮಗೆ ತುಂಬು ಹೃದಯದ ಧನ್ಯವಾದಗಳು.

    ReplyDelete
  10. Many issues highlighted which are ritualistic. All the best.

    ReplyDelete
  11. The significance of both Pavamana and Pooryamana are described very well..it is for the purification of both body and soul is what I got from this. I hope my thinking is right. Thanks Keshav. UR…

    ReplyDelete
  12. ಪವಮಾನ ಹೋಮದ ಬಗ್ಗೆ ಕೇಳಿದ್ದರೂ ವಿವರಗಳು ಗೊತ್ತಿರಲಿಲ್ಲ. ಪೂಯಮಾನ ಹೋಮದ ಹೆಸರನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ. ಅವುಗಳ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮಿತ್ರರ ಮನೆಯಲ್ಲಿ ಅಂತಹ ಕಾರ್ಯಕ್ರಮಕ್ಕೆ ಹೋಗಿಬಂದು ಅದರ ಬಗ್ಗೆ ತಿಳಿದವರಿಂದ ಇನ್ನಷ್ಟು ತಿಳಿದು ತಿಳಿಯದವರಿಗೆ ಅರ್ಥ ಮಾಡಿಸುವ ನಿಮ್ಮ ಜ್ಞಾನ ದಾಹಕ್ಕೆ ಅಧ್ಯಯನಶೀಲತೆಗೆ ಒಂದು ಸಲಾಂ.

    ReplyDelete