ಕಾವ್ಯಗಳ ಮೂಲಕ ನಮಗೆ ಆನೇಕ ಪ್ರಯೋಜನಗಳು ಆಗುವುವು ಎಂದು ಲಾಕ್ಷಣಿಕರು ಬಹಳ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಹನ್ನೊಂದನೆಯ ಶತಮಾನದ ಕವಿ ಮಮ್ಮಟ (ನೈಷಧೀಯ ಚರಿತಂ ಮುಂತಾದ ಕೃತಿಗಳ ರಚಯಿತನಾದ ಶ್ರೀಹರ್ಷನ ಸೋದರಮಾವ) ಕಾವ್ಯಗಳಿಂದ ಆರು ಮುಖ್ಯ ಪ್ರಯೋಜನಗಳು ಉಂಟೆಂದು ತನ್ನ "ಕಾವ್ಯ ಪ್ರಕಾಶ" ಕೃತಿಯಲ್ಲಿ ವಿವರಿಸುತ್ತಾನೆ. ಈ ಆರು ಪ್ರಯೋಜನಗಳನ್ನು ಇಲ್ಲಿ ಕ್ಲಿಕ್ ಮಾಡಿ (ಇಂಗ್ಲೀಷಿನಲ್ಲಿ) ಓದಬಹುದು. ಇವೆಲ್ಲವೂ ಇದ್ದರೂ ಸಾಹಿತ್ಯದ ಇನ್ನೂ ದೊಡ್ಡ ಪ್ರಯೋಜನವೆಂದರೆ ರಸಾನುಭವ. ಶ್ರೇಷ್ಠ ಕೃತಿಗಳ ಅವಗಾಹನೆಯಿಂದ ಸಿಗುವ ಹಿರಿದಾದ ಆನಂದ. ಇದನ್ನೂ ಮೀರಿದ್ದು ಇಂತಹ ಉತ್ತಮ ಸಾಹಿತ್ಯದ ಪ್ರಭಾವದಿಂದ ಪಡೆದ ಪಾಠಗಳಿಂದ ನಮ್ಮಗಳ ಬಾಳು ಹಸನಾಗುವುದು.
ಕಾವ್ಯದ ರಸಾನುಭವದಿಂದ ಬಂದ ಆನಂದ "ಕಾವ್ಯಾನಂದ". ಕಾವ್ಯ ಕೊಡುವ ಆನಂದ. ಕಾವ್ಯದಿಂದ ಪಡೆವ ಆನಂದ. ತಿಳಿದವರು ಈ ಪದಕ್ಕೆ ಅನೇಕ ರೀತಿಯಲ್ಲಿ ಅರ್ಥ ಮಾಡುತ್ತಾರೆ. "ಕಾವ್ಯಾನಂದ" ಎಂದು ಕವಿಗಳು "ಕಾವ್ಯನಾಮ" ಇಟ್ಟುಕೊಳ್ಳುವುದೂ ಉಂಟು.
*****
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ "ಕಾವ್ಯಾನಂದ" ಎನ್ನುವ ಕಾವ್ಯನಾಮ ಇರುವವರು ಇಬ್ಬರು ಮಹನೀಯರು. ಮೊದಲನೆಯವರು ಶ್ರೀ ನರಸಿಂಹಾಚಾರ್ಯ ಪುಣೇಕರ (1870-1929) ಅವರು. (ಕೆಲವು ಕಡೆ ನರಸಿಂಹಾಚಾರ್ಯ ಕಿತ್ತೂರ ಎಂದೂ ಉಂಟು). ಇವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದವರು. ಸಂಸ್ಕೃತ ಮತ್ತು ಹಳಗನ್ನಡಗಳಲ್ಲಿ ಉದ್ದಾಮ ಪಂಡಿತರು. 'ಬಾಲರಂಜನ" ಅನ್ನುವ ಕೃತಿಯನ್ನೂ ಮತ್ತು ಅನೇಕ ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದಾರೆ ಎಂದು ತಿಳಿದುಬರುತ್ತದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಬೆಟಗೇರಿ ಗ್ರಾಮದ ಡಾ. ಬೆಟಗೇರಿ ಕೃಷ್ಣಶರ್ಮ (1900-1982) ಕಿತ್ತೂರಿನಲ್ಲಿ ಈ ಕಾವ್ಯಾನಂದರ ಶಿಷ್ಯರಾಗಿದ್ದವರು.
ಕನ್ನಡ ನವೋದಯ ಕಾಲದ ಹಿರಿಯ ಲೇಖಕ, ಜಾನಪದ ತಜ್ಞ ಮತ್ತು ಪತ್ರಕರ್ತರಾದ ಬೆಟಗೇರಿ ಕೃಷ್ಣಶರ್ಮರು ಮೊದಲ ಪಾಠಗಳನ್ನು ಈ ಶ್ರೀ ನರಸಿಂಹಾಚಾರ್ಯ ಪುಣೇಕರರಿಂದ ಕಲಿತವರು. ಪುಣೇಕರರವರ ಕಾವ್ಯನಾಮ "ಕಾವ್ಯಾನಂದ" ಆದರೆ ಕೃಷ್ಣಶರ್ಮರ ಕಾವ್ಯನಾಮ "ಆನಂದಕಂದ" ಎನ್ನುವುದನ್ನು ಗಮನಿಸಬೇಕು.
"ಕಾವ್ಯಾನಂದ" ಎಂಬ ಕಾವ್ಯನಾಮದಿಂದ ಹೆಚ್ಚು ಪರಿಚಿತರಾದವರು ಕೊಪ್ಪಳ ಜಿಲ್ಲೆಯ ಡಾ. ಸಿದ್ದಯ್ಯ ಪುರಾಣಿಕ (1918-1994) ಅವರು. ಹಿರಿಯ IAS ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸಿದ್ದಯ್ಯ ಪುರಾಣಿಕರು ಮಾಡಿರುವ ವಿಶಾಲವಾದ ಸಾಹಿತ್ಯ ಸೇವೆ ಅತ್ಯಂತ ಗಮನಾರ್ಹ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಮಾನ್ಯತೆಗಳನ್ನು ಪಡೆದವರು. ದೊಡ್ಡ ಹುದ್ದೆಯ ತಮ್ಮ ಕರ್ತವ್ಯಗಳ ನಡುವೆಯೂ ಅವರು ಮಾಡಿರುವ ಸಾಹಿತ್ಯ ಕೃಷಿ ಅಪಾರವಾದುದು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿರುವ ಅನುಪಮ ಸೇವೆಯ ಗುರುತಾಗಿ 1985ರಲ್ಲಿ ಧಾರವಾಡದಲ್ಲಿ ನಡೆದ ಎರಡನೆಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವ ಅವರಿಗೆ ಸಂದಿತು. "ವಚನೋದ್ಯಾನ" ಅನ್ನುವ ಅವರ "ಸಿದ್ದೇಶ್ವರ ವಚನಗಳು" ಮತ್ತನೇಕ ಕೃತಿಗಳು ಅಧ್ಯಯನ ಯೋಗ್ಯವಾದುವು.
ಈ ಕಾವ್ಯಾನಂದರ ಮಕ್ಕಳ ಸಾಹಿತ್ಯದ ಹಾಡುಗಳನ್ನು ಕೇಳದವರು ವಿರಳ. "ಅಜ್ಜನ ಕೋಲಿದು ನನ್ನಯ ಕುದುರೆ", "ದೋಸೆ, ದೋಸೆ, ತಿನ್ನಲು ಆಸೆ", "ಇವರ ಬಿಟ್ಟು ಇವರ ಬಿಟ್ಟು ಇವರ್ಯಾರು?", "ನಂಜನಗೂಡಿನ ರಸಬಾಳೆ" ಎನ್ನುವ ಹಣ್ಣು ಮಾರುವವನ ಹಾಡು, "ನೀನೂ ನನ್ನಷ್ಟಿದ್ದಾಗ", ಮುಂತಾದ ಪದಗಳನ್ನು ಕೇಳುತ್ತಲೇ ನಮ್ಮ ಬಾಲ್ಯ ಕಳೆಯಿತು. "ನ್ಯಾಯ ನಿರ್ಣಯ" ಎನ್ನುವ ಅರೇಬಿಯನ್ ನೈಟ್ಸ್ ಕತೆಗಳು, ಶುಕವನ, ಸಮುದ್ರಲೋಕ ಮುಂತಾದುವು ಎಲ್ಲ ವಯಸ್ಸಿನವರೂ ಓದಿ ಆನಂದ ಪಡಬಹುದಾದ ಕೃತಿಗಳು.
*****
ಸುಮಾರು ಅರವತ್ತು ವರುಷಗಳ ಹಿಂದಿನ ಮಾತು. ನಾವು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ಕನ್ನಡ ಪುಸ್ತಕದಲ್ಲಿ ಈ ಕಾವ್ಯಾನಂದರ "ಪಂಜರದ ಹಕ್ಕಿ" ಎನ್ನುವ ಪದ್ಯವೊಂದು ಇತ್ತು. ಬೇಡನೊಬ್ಬನ ಬಲೆಯಲ್ಲಿ ಸಿಕ್ಕಿಬಿದ್ದು ಪಂಜರದೊಳಗೆ ಬಂಧನದಲ್ಲಿರುವ ಹಕ್ಕಿಯೊಂದು ತನ್ನ ವೃತ್ತಾಂತವನ್ನು ಹೇಳಿಕೊಳ್ಳುವ ಹಾಡು ಅದು. ಅದೊಂದು ಶೋಕಗೀತೆ. ಅದರ ಸಾಲುಗಳು ಇಷ್ಟು ವರ್ಷಗಳು ಕಳೆದರೂ ಮನಸ್ಸಿನಲ್ಲಿ ಗುಯಿಗುಡುತ್ತವೆ:
ಕೇಳಬಯಸುವಿಯೇನು ನನ್ನ ಕಥೆಯಾ?
ಬಹುದೂರ ಯಾವುದೋ ಪರ್ವತದ ಓರೆಯಲಿ
ಮರದ ಕಿರು ಪೊಟರೆಯಲ್ಲಿ ಜನಿಸಿ ಬಂದೆ
ಆ ತಮ್ಮ ಆ ತಾಯಿ, ನನ್ನಣ್ಣ ತಂಗಿ
ಅವರ ಜೊತೆಯಲಿ ನಾನು ನಲಿಯುತಿದ್ದೆ
ಮುಂದೆ ಬೇಡನೊಬ್ಬನ ಬಲೆಯಲ್ಲಿ ಸಿಕ್ಕಿಹಾಕಿಕೊಡು ಈಗ ಪಂಜರದಲ್ಲಿ ಬಂದಿಯಾಗಿ ನರಳುವ ಪರಿಸ್ಥಿತಿ ಬಂದಿರುವುದನ್ನು ಹೇಳಿಕೊಳ್ಳುತ್ತಾ ಅದರ ಸ್ವಾತಂತ್ರ್ಯದ ಸವಿ ಕಳೆದುಕೊಂಡ ಪರಿಯನ್ನು ಗೀತೆ ವಿವರಿಸುತ್ತದೆ. ಎಳೆಯ ವಯಸ್ಸಿನಲ್ಲಿ ಓದುವ ಮಕ್ಕಳಿಗೆ ಸ್ವಾತಂತ್ರ್ಯದ ಸೊಗಸು, ಬಂಧನದ ಬಿಸಿ, ಇವೆರಡನ್ನೂ ಮನ ಮುಟ್ಟುವಂತೆ ವಿವರಿಸುತ್ತದೆ.
ಎಲ್ಲಾ ಪ್ರಾಣಿಗಳಿಗೂ ಅವುಗಳದೇ ಆದ ವಿಶಿಷ್ಟತೆಯಿದೆ. ಪಕ್ಷಿಗಳಿಗೆ ಇರುವ ವಿಶೇಷತೆ ಗಾಳಿಯಲ್ಲಿ ಹಾರಾಡುತ್ತಾ, ತೆಲಾಡುತ್ತಾ, ಸ್ವಚ್ಛಂದವಾಗಿ ವಿಹರಿಸುವ ಗುಣ. ಮೀನಿಗೆ ನೀರಿನಲ್ಲಿ ಈಜಾಡುವುದು ತಪ್ಪಿದರೆ ಅದರ ಕೊನೆ ಬಂದಿತು. ಅಂತೆಯೇ, ಹಾರಾಡುವ ಸ್ವಾತಂತ್ರ್ಯ ತಪ್ಪಿದ ಹಕ್ಕಿ ಬದುಕಿದ್ದರೂ ಸತ್ತಂತೆಯೇ. ಕೇವಲ ಉಸಿರಾಡುತ್ತಿರುವುದರಿಂದ ಬದುಕಿದೆ ಎಂದು ಭಾಸವಾಗಬೇಕು. ಆ ಕಾರಣ ಹೇಗಾದರೂ ಈ ಪಂಜರದಿಂದ ತಪ್ಪಿಸಿಕೊಂಡು ಮತ್ತೆ ಹಾರಾಡುವ ಸುಯೋಗಕ್ಕಾಗಿ ಅದು ಹಾತೊರೆಯುತ್ತದೆ. ಅದರ ಜೀವನದ ಸಾರ್ಥಕತೆ ಹೀಗೆ ಎಲ್ಲೆಂದರಲ್ಲಿ ಸುತ್ತಿ ತೇಲಾಡುವುದರಲ್ಲಿಯೇ ಅಡಗಿದೆ.
*****
ಮನುಷ್ಯನ ಜೀವಿತದಲ್ಲಿಯೂ ಹೀಗೆ ಒಂದು ಪಕ್ಷಿಯಿದೆ. ಅದು ಮನಸ್ಸು ಎನ್ನುವ ಪಕ್ಷಿ. ಈ ಪಕ್ಷಿಗೋ ಯಾವ ಬಂಧನಗಳೂ ಇಲ್ಲ. ಅದು ಪಂಜರದ ಒಳಗಡೆ ಇರುವುದಕ್ಕಿಂತ ಹೊರಗಡೆ ಹಾರಾಡುವುದೇ ಹೆಚ್ಚು! ಅತ್ಯಂತ ವೇಗವನ್ನು ನಿರ್ದೇಶಿಸಲು ಹೇಳುವುದು "ಮನೋವೇಗ" ಎಂದೇ. ಅದು ವಾಯುವೇಗಕ್ಕಿಂತ ಎಷ್ಟೊಂದು ಅಧಿಕ! ಅದು ಒಂದೆಡೆ ನಿಲ್ಲುವುದಕ್ಕಿಂತ ಹಾರಾಡುವುದೇ ತನ್ನ ಚಾಳಿ ಮಾಡಿಕೊಂಡಿರುವ ಹಕ್ಕಿ. ಹೀಗೆ ಹಾರಾಡುವುದರಿಂದ ಅದಕ್ಕೆ ಆಯಾಸವೇ ಆಗುವುದಿಲ್ಲ. ಅದನ್ನು ನಿಯಂತ್ರಿಸಲು ಮಾಹಾಯೋಗಿಗಳಿಗೂ ಪ್ರಯಾಸವೇ. ಸಾಮಾನ್ಯರಿಗೆ ಅದು ನಿಲುಕದ ಕೆಲಸ.
ಮನುಷ್ಯನ ದೇಹದಲ್ಲಿ ಇನ್ನೊಂದು ಹಕ್ಕಿಯೂ ಇದೆ. ಅದು "ಪ್ರಾಣಪಕ್ಷಿ". ಇದೊಂದು ಪಾಪದ ಪಕ್ಷಿ. (ಪಾಪ ಅಂದರೆ ಪುಣ್ಯ-ಪಾಪಗಳ ಪಾಪವಲ್ಲ). ಅದು ಪ್ರತಿ ಎರಡು ಸೆಕೆಂಡುಗಳಿಗೆ ಒಮ್ಮೆ ದೇಹದಿಂದ ಹೊರಬಂದು ತಕ್ಷಣ ಒಳಸೇರುತ್ತದೆ. ಹೀಗೆ ನಡೆಯುತ್ತಿದ್ದರೆ ಮಾತ್ರ ಜೀವನ. ಅದೇನಾದರೂ ಹೊರಗಡೆ ಹೋದ ಮೇಲೆ ಒಳಗಡೆ ಬರದಿದ್ದರೆ ಅಲ್ಲಿಗೆ ಎಲ್ಲವೂ ಮುಗಿಯಿತು. "ಪ್ರಾಣಪಕ್ಷಿ ಹಾರಿಹೋಯಿತು" ಅನ್ನುತ್ತಾರೆ. ಮನುಷ್ಯನ ಗಮನ ಅದರಮೇಲೆ ಹೋಗುವುದು ಅದಕ್ಕೆ ಏನಾದರೂ ತೊಂದರೆ ಆದಾಗ ಮಾತ್ರ. ಈ ಕಾರಣದಿಂದ ಮನಸ್ಸು ಎನ್ನುವ ಪಕ್ಷಿಯದೇ ಎಲ್ಲ ಕಾರುಬಾರು.
ಮಹಾನುಭಾವರಾದ ಶ್ರೀ ಕುಲಶೇಖರ ಆಳ್ವಾರ್ ಅವರು ತಮ್ಮ "ಮುಕುಂದಮಾಲಾ" ಸ್ತೋತ್ರದಲ್ಲಿ ಈ ಮನಸ್ಸು ಎನ್ನುವ ಹಕ್ಕಿಯ ಬಗ್ಗೆ ಮನೋಜ್ಞವಾಗಿ ಹೇಳುತ್ತಾರೆ:
ಕೃಷ್ಣ ತ್ವದೀಯ ಪದಪಂಕಜ ಪಂಜಾರಾಂತಂ
ಅದೈವ ಮೇ ವಿಷತು ಮಾನಸರಾಜಹಂಸಃ
ಪ್ರಾಣ ಪ್ರಯಾಣ ಸಮಯೇ ಕಫ ವಾತ ಪಿಥೈ:
ಕಂಠಾವಿರೋಧನವಿಧೌ ಸ್ಮರಣಂ ಕುತಸ್ತೇ?
"ಹೇ ಪರಮಾತ್ಮನಾದ ಶ್ರೀಕೃಷ್ಣ! ನನ್ನ ಪ್ರಾಣವು ಈ ದೇಹವನ್ನು ಬಿಟ್ಟು ಪರಲೋಕಕ್ಕೆ ಪ್ರಯಾಣ ಮಾಡುವಾಗ ದೇಹವನ್ನು ಕಾಡುವ ಕಫ, ವಾತ, ಪಿತ್ಥ ಮುಂತಾದುವುಗಳಿಂದ ಮಾತು ಹೊರಡದೇ ಗಂಟಲು ಕಟ್ಟಿಹೋಗುತ್ತದೆ. ಆಗ ನಿನ್ನ ಪಾದಪದ್ಮಗಳ ಸ್ಮರಣೆ ಬರುವುದು ದುಸ್ತರ. ಆ ಕಾರಣದಿಂದ (ಎಲ್ಲೆಲ್ಲೋ ಹಾರಾಡುವ ಅಭ್ಯಾಸ ಮಾಡಿಕೊಂಡಿರುವ) ನನ್ನ ಮನಸ್ಸು ಎನ್ನುವ ಪಕ್ಷಿಯನ್ನು ಈಗಲೇ ನಿನ್ನ ಚರಣಗಳೆಂಬ ಪಂಜರದಲ್ಲಿ ಭದ್ರವಾಗಿ ಕೂಡಿಸಿ ಪಂಜರದ ಬಾಗಿಲನ್ನು ಮುಚ್ಚಿಬಿಡು!"
"ಎಂದೋ ಹೋಗುವ ಪ್ರಾಣಕ್ಕೆ ಈಗಿನಿಂದ ಚಿಂತೆ ಏಕೆ? ಆ ಕಾಲ ಬಂದಾಗ ನೋಡಿಕೊಳ್ಳೋಣ" ಎಂದು ಸುಮ್ಮನಿರುವಂತಿಲ್ಲ. ಪ್ರಾಣವು ಯಾವಾಗ ಹೋಗುವುದೆಂದು ಯಾರಿಗೆ ಗೊತ್ತು? ಈಗಿನಿಂದಲೇ ಮನಸ್ಸು ಅಲ್ಲಿ ಕುಳಿತಿರಲಿ ಎಂದು ಭಾವ.
*****
ನಮ್ಮ ಜೀವನಗಳ ಕಥೆಯೂ ಈ ಎರಡು ಪಕ್ಷಿಗಳ ರೀತಿಯ ಮಧ್ಯೆ ತೊಳಲಾಡುವುದೇ ಆಗಿದೆ. ಬಾಲ್ಯ, ಯೌವನ ಮತ್ತು ಮಧ್ಯ ವಯಸ್ಸುಗಳಲ್ಲಿ ಮನಸ್ಸು ಸ್ವಚ್ಛಂದವಾಗಿ ಹಾರಾಡಲು ಬಯಸುವುದು. ಯಾರ, ಯಾವ ಅಂಕೆ-ಶಿಕ್ಷೆಗಳಿಗೂ ಅದು ಬಗ್ಗದು. ಸ್ವಲ್ಪ ವಯಸ್ಸಾಗುತ್ತಿದ್ದಂತೆ, ದೇಹದಾರ್ಢ್ಯ ಕುಂದಿದಂತೆ, ರಕ್ತಪುಷ್ಠಿ ಕಡಿಮೆ ಆಗುತ್ತಾ ಬಂದಂತೆ ಹೀಗೆ ಹಾರಾಡುವ ಮನಸ್ಸನ್ನು ಹಿಡಿದಿಡಲು ಬುದ್ಧಿ ಯೋಚಿಸುವುದು. ಆದರೆ ದೀರ್ಘ ಕಾಲದ ಅಭ್ಯಾಸ ಬಿಡಬೇಕಲ್ಲ. ಮನಸ್ಸು ಕೇಳದು. ಹೀಗೆ-ಹಾಗೆ ತೊಳಲಾಡುವುದರಲ್ಲಿ ಕೊನೆ ಬಂದೇಬಿಟ್ಟಿತು!
ಶ್ರೀ ಕುಲಶೇಖರ ಅಳ್ವಾರ್ ಅವರು ಹೇಳುವಂತೆ ನಮ್ಮ ಜೀವನದಲ್ಲಿ ನಡೆಯುವುದು ಪುಸ್ತಕ ಓದಿದರೆ ಅಥವಾ ಇನ್ನೊಬ್ಬರು ಹೇಳಿದರೆ ತಿಳಿಯುವ ವಿಷಯವಲ್ಲ. ಅದು ನಮ್ಮ ನಮ್ಮ ಅನುಭವದಿಂದಲೇ ಬರಬೇಕಾದದ್ದು. ಕಾಲ ಕಳೆಯುತ್ತಿದ್ದಂತೆ ನಮ್ಮ ವೈಯುಕ್ತಿಕ ಕೆಲಸಗಳಿಗೇ ಬೇರೆಯವರನ್ನು ಅವಲಂಬಿಸಬೇಕಾದ ಕಾಲ ಬಂದೇಬಿಡುತ್ತದೆ. ನಮ್ಮ ಕಾಲ ಉಗುರುಗಳನ್ನು ಕತ್ತರಿಸಲೂ ಇನ್ನೊಬ್ಬರ ಸಹಾಯ ಬೇಕಾಗುತ್ತದೆ. ಅನಾರೋಗ್ಯವಾದಾಗ ವೈದ್ಯರ ಬಳಿ ಹೋಗಲೂ ತ್ರಾಣ ಇರುವುದಿಲ್ಲ. ಯಾರೋ ಇನ್ನೊಬ್ಬರು ಪ್ರೀತಿಯಿಂದಲೋ, ಕರುಣೆಯಿಂದಲೋ ನಮ್ಮನ್ನು ಕರೆದುಕೊಂಡು ಹೋಗಬೇಕಾದ ಸ್ಥಿತಿ ಬರುವುದು. ತಾವು ಗಟ್ಟಿಯಾಗಿದ್ದಾಗ ಇನ್ನೊಬ್ಬರಿಗೆ ಒಂದು ದಿನವೂ ಸಹಾಯ ಮಾಡದವರೂ ಕೂಡ ಈಗ ಮತ್ತೊಬ್ಬರ ನೆರವಿಗೆ ಕಾತರಿಸಬೇಕಾಗುವುದು. ಇವೆಲ್ಲ ಅನುಭವದಿಂದ ತಿಳಿಯುವ ವಿಷಯಗಳು.
ಎರಡು ಹಕ್ಕಿಗಳು. ಒಂದು ಪಂಜರ. ಒಂದು ಪಂಜರದಲ್ಲಿ ಸಿಕ್ಕಿ ಹೊರಗಡೆ ಹೋಗಲು ಕಾತರಿಸುತ್ತಿದೆ. ಇನ್ನೊಂದು ಹೊರಗಡೆ ಹಾರುತ್ತಿದೆ. ಅದರ ಯಜಮಾನ ಅದನ್ನು ಪರಮಾತ್ಮನ ಪಾದಪಂಜರದಲ್ಲಿ ಕೂಡಿಹಾಕಲು ಚಡಪಡಿಸುತ್ತಿದ್ದಾನೆ. ಇದೇ ಎರಡು ಹಕ್ಕಿಗಳು ಮತ್ತು ಪಂಜರ ಅನ್ನುವ ನಿಜವಾದ ಕಥೆ.
Mukundamala is most humble type of inclination to possess the devotion for lord Krishna with earnest humility it crosses the limits of Narada Bhakti sutra even
ReplyDeleteHe is such a sadhak who defies Any liberation but wishes to remain in human form with ability to chant lord s name with no end in millions of birth he may be bestowed by lord Krishna
Thank you for this blog , good subject and well written
ReplyDeleteI shall treasure this writeup for my life time for sure.
ReplyDeleteIn my childhood days while being a part of a joint family, my elder sister and cousins used to byheart this poem," naanu panjarada pakshi" as a part of their kannada curriculam, in a beautiful rythemic manner ,which inadvertently used to fall on my ears. This one poem has touched not only my sensitivities in the formative years but also influenced my personality so much so that i feel a deep connect with all the creatures around me and experience a true pain for all the cruelities goings on around me.
Your words and strengh of expression through this writing am sure will travel far and wide and touch the finest cord of humanity amongst the people. This is the scale of your success. 🙏🏼🙏🏼🙏🏼🙏🏼🙏🏼
MMB
The good works of Betegeri Krishna Sharma and Dr. Puranik are worth reading. I used to read them whenever i get an oppertunity. Keshava Murthy sir has referred them with good review. Very good blog providing useful information. Hats of to Keshava Murthy sir..
ReplyDeleteಬಹಳ ಉತ್ತಮವಾದ ಲೇಖನ.
ReplyDelete5ನೇ ತರಗತಿಯಲ್ಲಿ, ಪಂಜರದ ಪಕ್ಷೀ ಪದ್ಯವನ್ನು, ಓದ್ದಿದ್ದೆವು.
ಅಜ್ಜನ ಕೋಲಿದು ನನ್ನಯ ಕುದುರೆ", out of syllabus ಆದ್ದರಿಂದ, ಇಂತಹ ಹಾಡುಗಳು ಈಗಿನ ಮಕ್ಕಳಿಗೆ ತಿಳಿದಿಲ್ಲ.
"ಮನಸ್ಸು ಮತ್ತು ಪ್ರಾಣ" ಪಕ್ಷಿ ಗಳ
ವಿವರಣೆ ಸೂಗಸಾಗಿದೆ.
"ಅನುಭವ ಹೆಚ್ಚು ಪಾಠ ಕಲಿಸುವುದು " ಎಂಬುದು ಅಕ್ಷರ ಸಹ ನಿಜ.
Beautifully written. UR….
ReplyDeleteEnjoyed the length and depth of this blogpost. Yes, I did read it in Kannada (albeit slowly and with a bit of Googly help).
ReplyDeleteಒಂದು ಪಂಜರದಲ್ಲಿರುವ ಎರಡು ಪಕ್ಷಿಗಳ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮ್ಮ ಬರಹಗಳು ಒಂದಕ್ಕಿಂತ ಒಂದು ಚೆನ್ನಾಗಿರುತ್ತವೆ. ನನ್ನ ಮನಸ್ಸೆಂಬ ಪಕ್ಷಿ ಎಲ್ಲೆಲ್ಲೊ ಹಾರುತ್ತಿತ್ತು. ಈಗ ಅದನ್ನು ಹಿಡಿದು ನಿಮ್ಮ ಬರಹಗಳತ್ತ ಓಡುವಂತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೀಗೇ ಮುಂದೆ ಸಾಗುತ್ತಲಿರಲಿ🙏
ReplyDelete