ಬೆಂಗಳೂರು ನಗರದಿಂದ ಉತ್ತರ ದಿಕ್ಕಿನ ಮೂವತ್ತು ಮೈಲಿಗಳ ದೂರದಲ್ಲಿ ದೊಡ್ಡಬಳ್ಳಾಪುರ ಪಟ್ಟಣ ಇರುವುದು ಎಲ್ಲರಿಗೂ ಚಿರಪರಿಚಿತ. ಈ ಪಟ್ಟಣದ ಹೊರವಲಯದಲ್ಲಿ (ಈಗ ಪಟ್ಟಣದಲ್ಲಿಯೇ ಸೇರಿಹೋಗಿದೆ) ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯವಿದೆ. ಈ ದೇವಾಲಯ ಇರುವ ಊರಿಗೆ "ಅರಳುಮಲ್ಲಿಗೆ" ಎಂದು ಹೆಸರು.
"ಅರಳುಮಲ್ಲಿಗೆ" ಎಂದರೇನು? ಮಲ್ಲಿಗೆ ಬೆಳೆದವರಿಗೆಲ್ಲಾ ಇದು ಗೊತ್ತಿರುವ ವಿಚಾರ. ಮಲ್ಲಿಗೆಯು ಒಂದು ಬಳ್ಳಿಯ ಕುಟುಂಬ ಬಳಗದ ಸಸ್ಯ. ಇದರಲ್ಲಿ ಅನೇಕ ವಿಧಗಳು ಉಂಟು. ಆಸರೆ ಸಿಕ್ಕಿದ ಕಡೆ ಹಬ್ಬಿಕೊಂಡು ಹೋಗುವುದು. ಹೊಲಗಳಲ್ಲಿ ಕೃಷಿ ಮಾಡಿದರೆ ಒಂದು ಪೊದೆಯಂತೆ ಬೆಳೆದು ನಿಲ್ಲುವುದು. ಸಂಜೆಯ ವೇಳೆ ಮೊಗ್ಗು ತುಂಬಿದ ಗಿಡ ಕಾಣಬಹುದು. ಬೆಳಗ್ಗೆ ನೋಡಿದರೆ ಗಿಡದ ತುಂಬಾ ಹೂವುಗಳು. ಮತ್ತೇರಿಸುವ ಸುಗಂಧ. ದೇವರ ಪೂಜೆಗೆ ತುಂಬಾ ಬೇಕಾದ ಹೂವು. ಮದುವೆ-ಮುಂಜಿಗಳಿಗೆ, ಗಣ್ಯರಿಗೆ, ಅತಿಥಿಗಳಿಗೆ ಮಲ್ಲಿಗೆ ಮಾಲೆ ಹಾಕಿ ಸ್ವಾಗತಿಸುವುದು, ಸತ್ಕರಿಸುವುದು ಈಗಲೂ ನಡೆಯುತ್ತದೆ. ಮೈಸೂರಿನ "ದೇವರಾಜ ಮಾರ್ಕೆಟ್" ಒಳಗೆ, ನಾವು ಚಿಕ್ಕವರಿದ್ದಾಗ ಹೂವಿನ ಅಂಗಡಿಗಳ ಮುಂದೆ ಸುಗಂಧ ಸೇವನೆಗಾಗಿ ಸುಮ್ಮನೆ ಈಕಡೆಯಿಂದ ಆಕಡೆ, ಆಕಡೆಯಿಂದ ಈಕಡೆ ಒಮ್ಮೆ ಹೋಗಿ ಬರುತ್ತಿದ್ದುದೂ ಉಂಟು!
ಹಿಂದೆಲ್ಲಾ ಗಂಡು ಮಕ್ಕಳಿಗೂ ಐದಾರು ವರುಷ ಆಗುವವರೆಗೆ ಉದ್ದ ಕೂದಲು ಬೆಳೆಸುತ್ತಿದ್ದರು. ನಂತರ "ಚಂಡಿಕಾ ಕಾರ್ಯಕ್ರಮ" ನಡೆಯುತ್ತಿತ್ತು. "ಚೌಲ" ಅನ್ನುವ ಇದು ಷೋಡಶ (ಹದಿನಾರು) ಕರ್ಮಗಳಲ್ಲಿ ಒಂದಾಗಿತ್ತು. ಕನ್ನಡಲ್ಲಿ "ಮುಡಿ ಕೊಡುವುದು" ಎಂದು ಹೇಳುತ್ತಿದ್ದರು. ಒಂದು ಹಬ್ಬ ಮಾಡಿ, ಕುಲದೇವರ ಮುಂದೆ ಮೊದಲ ಬಾರಿ ತಲೆಯ ಕೂದಲು ಕತ್ತರಿಸುತ್ತಿದ್ದರು. ಅದರ ಹಿಂದಿನ ಒಂದೆರಡು ದಿನಗಳಲ್ಲಿ ಉದ್ದದ ಜಡೆ ಹೆಣೆದು, ಅದಕ್ಕೆ ಮಲ್ಲಿಗೆ, ಕನಕಾಂಬರ, ಸಿಕ್ಕಿದರೆ ತಾಳೆ ಹೂವು, ಮೊದಲಾದ ಹೂವುಗಳಿಂದ "ಮೊಗ್ಗಿನ ಜಡೆ" ಎನ್ನುವ ಹೆಸರಿನಿಂದ ಹೆಣ್ಣು ಮಗುವಿನಂತೆ ಅಲಂಕರಿಸುತ್ತಿದ್ದರು. ಕೆನ್ನೆಯ ಮೇಲೆ ಒಂದು ಕರಿಯ ದೃಷ್ಟಿ ಬೊಟ್ಟು ಇರುತ್ತಿತ್ತು. ನಂತರ ಅವರಿವರ ಮನೆಗೆ ಕರೆದುಕೊಂಡು ಹೋಗಿ ತೋರಿಸಿ, ಫೋಟೋ ಸ್ಟುಡಿಯೋದಲ್ಲಿ ಫೋಟೋ ತೆಗೆಸುತ್ತಿದ್ದರು. ಹೆಣ್ಣು ಮಕ್ಕಳಿಗಂತೂ ಈ "ಮೊಗ್ಗಿನ ಜಡೆ" ಕಾರ್ಯಕ್ರಮ ಆಗಲೇಬೇಕಿತ್ತು. ಕೆಲವರಿಗೆ ಎರಡು-ಮೂರು ಬಾರಿ ಈ ಉತ್ಸವ ಆಗುತ್ತಿದ್ದುದೂ ಉಂಟು.
******
ಮಲ್ಲಿಗೆ ಗಿಡ ಇರುವ ಕಡೆಗಳಲ್ಲೆಲ್ಲಾ ಸಂಜೆ ಮೊಗ್ಗು ಕಾಣಿಸಿಕೊಂಡು ಮಾರನೆಯ ಬೆಳಿಗ್ಗೆ ಹೂವು ಅರಳಿ ಸುಗಂಧ ಪಸರಿಸುವುದುದು ಇದ್ದದ್ದೇ. ಅಂಥದುದರಲ್ಲಿ ಒಂದು ಊರಿಗೆ ಹೀಗೆ "ಅರಳುಮಲ್ಲಿಗೆ" ಎಂದು ಹೆಸರು ಬರಲು ಕಾರಣ ವಿಶೇಷ ಏನು? ಇದಕ್ಕೆ ಒಂದು ಸೊಗಸಾದ ಇತಿಹಾಸ ಇದೆ.
ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಬಗ್ಗೆ ಹಿಂದಿನ "ಇಷ್ಟು ಹೇಳಿದರೆ ನೀನು ಪಂಡಿತ!" ಅನ್ನುವ ಸಂಚಿಕೆಯಲ್ಲಿ ಕೆಲವು ಸಂಗತಿಗಳನ್ನು ತಿಳಿದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.
ಸುಮಾರು ನಾಲ್ಕು ನೂರು ವರುಷಗಳ ಹಿಂದಿನ ಮಾತು. ಶ್ರೀ ರಾಘವೇಂದ್ರ ಗುರು ರಾಯರ ನೇರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ಕುಂಭಕೋಣ ಮಠದಲ್ಲಿ ಶ್ರೀ ವಿಜಯೀ೦ದ್ರ ತೀರ್ಥರ ಬಳಿ ಸನ್ಯಾಸ ಸ್ವೀಕರಿಸಿ (1596), ಅಲ್ಲಿ ಕೆಲ ಕಾಲ ಹೆಚ್ಚಿನ ವಿದ್ಯಾರ್ಜನೆ ನಡೆಸಿ, ತಮ್ಮ ಗುರು ಪರಂಪರೆಯ ಎಲ್ಲ ಯತಿಗಳಂತೆ ವ್ಯಾಕರಣ, ತರ್ಕ, ಪೂರ್ವ ಮೀಮಾಂಸಾ, ಉತ್ತರ ಮೀಮಾಂಸಾ ಮೊದಲಾದ ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಗಳಿಸಿದ್ದರು. ತಂಜಾವೂರು ಅರಸರ ಆಸ್ಥಾನದಲ್ಲಿ ನಡೆದ ಅನೇಕ ವಾದಗಳಲ್ಲಿ ಜಯಭೇರಿ ಬಾರಿಸಿ "ಷಟ್-ದರ್ಶನಾಚಾರ್ಯ" ಎಂದು ಬಿರುದನ್ನೂ ಸಂಪಾದಿಸಿದ್ದರು. ಶ್ರೀ ಸುಧೀಂದ್ರ ತೀರ್ಥರು ಯತಿಗಳು ಸಾಮಾನ್ಯವಾಗಿ ಹೆಚ್ಚು ಗಮನ ಕೊಡದ ಕಾವ್ಯ, ಅಲಂಕಾರ, ನಾಟಕ ಮುಂತಾದುವುಗಳಲ್ಲಿ ಸಹ ವಿಶೇಷ ಪರಿಣತಿ ಪಡೆದಿದ್ದರು. ನಂತರ ಗುರುಗಳ ಅಪ್ಪಣೆ ಪ್ರಕಾರ "ವಿಜಯ ಯಾತ್ರೆ" ಹೊರಟಿದ್ದರು. ಹೀಗೆ ಸಂಚಾರದ ಸಮಯದಲ್ಲಿ ದೊಡ್ಡಬಳ್ಳಾಪುರಕ್ಕೆ ಬಂದರು.
******
ಶ್ರೀ ವಿಜಯೀ೦ದ್ರ ತೀರ್ಥರ ಮೊದಲ ಗುರುಗಳಾದ ಪೂರ್ವದಿ ಮಠದ ಶ್ರೀ ವ್ಯಾಸ ತೀರ್ಥರು ವಿಜಯನಗರದ ಅರಸರ ರಾಜಗುರುಗಳಾಗಿದ್ದವರು. ಅಭೂತಪೂರ್ವ ಕೀರ್ತಿ ಸಂಪಾದಿಸಿ ಜಯಶಾಲಿಗಳಾದವರು. ಶ್ರೀ ಮುಖ್ಯಪ್ರಾಣನ ಉಪಾಸಕರಾದ ಅವರು ದಕ್ಷಿಣ ಭಾರತ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಸಂಚರಿಸಿ 732 ಆಂಜನೇಯ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದ್ದಾರೆ. ಇವುಗಳ ವಿಶೇಷವೆಂದರೆ ಇಂತಹ ಮೂರ್ತಿಗಳ ಬಾಲದ ಕೊನೆಯಲ್ಲಿ ಒಂದು ಗಂಟೆ ಇರುವುದು.
ಶ್ರೀ ಸುಧೀಂದ್ರ ತೀರ್ಥರು ದೊಡ್ಡಬಳ್ಳಾಪುರಕ್ಕೆ ಬಂದಾಗ ಹತ್ತಿರದಲ್ಲೇ ಇದ್ದ, ತಮ್ಮ ಪರಮಗುರುಗಳ ವಿದ್ಯಾಗುರುಗಳಾದ ಶ್ರೀ ವ್ಯಾಸರಾಜ ಪ್ರತಿಷ್ಠಿತ ಮುಖ್ಯಪ್ರಾಣನ ಪೂಜೆ ಮಾಡಲು ಇಚ್ಛಿಸಿದರು. ಅಲ್ಲಿಗೆ ಹೋಗಿ ಪೂಜೆ ಮಾಡುವ ಸಂದರ್ಭದಲ್ಲಿ ಮಲ್ಲಿಗೆ ಹೂವು ಅಥವಾ ಮಾಲೆ ಇರಲಿಲ್ಲ. ಅವರ ಬಳಿ ಚಿನ್ನದಿಂದ ಮಾಡಿದ ಮಲ್ಲಿಗೆ ಮೊಗ್ಗುಗಳ ಸರ ಇತ್ತು. ಅದನ್ನೇ ಆಂಜನೇಯನಿಗೆ ಅರ್ಪಿಸಿ ಪೂಜಿಸಿದರು. ಪೂಜೆಯ ನಂತರ ದೇವಾಲಯದ ಗುಡಿಯ ಬಾಗಿಲು ಹಾಕಿ ಎಲ್ಲರೂ ಹೊರಬಂದರು. ರಾತ್ರಿ ಕಳೆಯಿತು.
ಮಾರನೆಯ ದಿನ ದೇವಾಲಯದ ಬಾಗಿಲು ತೆರೆದಾಗ ಎಲ್ಲೆಲ್ಲೂ ಮಲ್ಲಿಗೆ ಹೂವುಗಳ ಅಮೋಘ ಪರಿಮಳ. ಆಂಜನೇಯನ ವಿಗ್ರಹಕ್ಕೆ ಹಾಕಿದ್ದ ಬಂಗಾರದ ಮಲ್ಲಿಗೆ ಸರದ ಮೊಗ್ಗುಗಳು ಅರಳಿದ್ದವು. ಅಂದಿನಿಂದ ಆ ಗ್ರಾಮಕ್ಕೆ "ಅರಳುಮಲ್ಲಿಗೆ" ಎಂದು ಹೆಸರಾಯಿತು.
******
ಶ್ರೀ ಸುಧೀಂದ್ರ ತೀರ್ಥರು ತಮ್ಮ ವಿಜಯ ಯಾತ್ರೆಯ ಸಂದರ್ಭದಲ್ಲಿ ಗ್ವಾಲಿಯರ್, ಬರೋಡ, ಜೈಪುರ ಮತ್ತು ಸುತ್ತಮುತ್ತಲಿನ ಇತರೆ ಸಂಸ್ಥಾನಗಳಿಗೂ ಭೇಟಿ ಕೊಟ್ಟಿದ್ದರು. ಗ್ವಾಲಿಯರ್ ಮಹಾರಾಜ ಸಿಂಧಿಯಾ ಅವರ ವಿದ್ವತ್ತಿಗೆ ಮೆಚ್ಚಿ "ರಾಜಗುರು" ಎಂದು ವಿಶೇಷ ಮನ್ನಣೆ ನೀಡಿದ್ದನು. ತಾನು ಉಪಯೋಗಿಸುವಂತಹ ಛತ್ರ, ಚಾಮರ ಮುಂತಾದುವುಗಳನ್ನು ಕೊಟ್ಟು ಗೌರವಿಸಿದನು. ವಿಜಯನಗರದ ವೀರ ವೆಂಕಟರಾಯ ಮಹಾರಾಜನು ಅವರಿಗೆ "ವಿಜಯ ಶಂಖ" ಕೊಟ್ಟು "ರತ್ನಾಭಿಷೇಕ" ಮಾಡಿ ಗೌರವಿಸಿದನು.
ಬಿಜಾಪುರ ಆಳಿದ ಆದಿಲ್ ಶಾಹಿ ವಂಶದಲ್ಲಿ ಎರಡನೆಯ ಇಬ್ರಾಹಿಂ ಆದಿಲ್ ಷಾ (1579-1626) ಅತ್ಯಂತ ಪ್ರಭಾವಶಾಲಿ ಅರಸು. ಅವನ ಕಾಲದಲ್ಲಿ ಹನ್ನೆರಡು ವರುಷಗಳ ಸುದೀರ್ಘ ಕ್ಷಾಮ ಬಂದಿತ್ತಂತೆ. ಶ್ರೀ ಸುಧೀಂದ್ರ ತೀರ್ಥರಲ್ಲಿ ಬಹಳ ಗೌರವ ಇಟ್ಟಿದ್ದ ಅವನ ಮನವೀಯ ಮೇರೆಗೆ ಅವರು ರಾಜ್ಯದ ಧಾನ್ಯಾಗಾರದಲ್ಲಿ ಒಂದು ವಾರ ಕಾಲ ವಿಶೇಷ ಜಪಾದಿಗಳನ್ನು ನಡೆಸಿದರು. ನಂತರ ಧಾರಾಕಾರ ಮಳೆಯಾಗಿ ಸುಭಿಕ್ಷ ಬಂದಿತು. ಮೊದಲಿಗೆ ಸ್ವಲ್ಪ ಹಿಂಜರಿಯುತ್ತಿದ್ದ ಅವನ ಮಂತ್ರಿಯಾಗಿದ್ದ ಘನಶ್ಯಾಮ ರಾಯ ಅವರ ಶಿಷ್ಯನಾಗಿ "ಆನೆ ಹೊಸೂರು" ಎನ್ನುವ ತನ್ನ ಸ್ವಂತ ಗ್ರಾಮವನ್ನು ಗುರುಗಳಿಗೆ ಬಳುವಳಿಯಾಗಿ ಕೊಟ್ಟನು.
ಈ ಎಲ್ಲ ಸಂಗತಿಗಳಿಗೂ ಸಂಬಂಧಪಟ್ಟ ಸ್ಥಳಗಳಲ್ಲಿ ದಾಖಲೆಗಳಿವೆ. ಶ್ರೀ ಸುಧೀಂದ್ರ ತೀರ್ಥರು ಅನೇಕ ಸತ್ವಯುತ ಗ್ರಂಥಗಳ ರಚಯಿತರು. ಅವುಗಳಲ್ಲಿ ಕೆಲವು ಸಿಕ್ಕಿವೆ. ಕೆಲವು ಉಪಲಬ್ಧವಿಲ್ಲ.
ಶ್ರೀ ರಾಘವೇಂದ್ರ ಗುರುಗಳ ಸ್ತೋತ್ರದಲ್ಲಿ "ವಿಜಯೀ೦ದ್ರ ಕರಾಬ್ಜೋಥಾ ಸುಧೀಂದ್ರ ವರಪುತ್ರಕಃ" ಎಂಧು ಹೇಳುವುದಕ್ಕೆ ಈ ಎಲ್ಲಾ ಹಿನ್ನೆಲೆಗಳಿವೆ.
******
ಈ ತಿಂಗಳ (ಆಗಸ್ಟ್ 2026) 30ನೆಯ ದಿನಾಂಕ ಶ್ರೀ ಗುರು ರಾಘವೇಂದ್ರ ರಾಯರ 355ನೇ ವರ್ಷದ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ಗುರು ಪರಂಪರೆಯ ಶ್ರೀ ಸುರೇಂದ್ರ ತೀರ್ಥರು, ಶ್ರೀ ವಿಜಯೀ೦ದ್ರ ತೀರ್ಥರು ಮತ್ತು ಶ್ರೀ ಸುದೀಂಧ್ರ ತೀರ್ಥರ ಬಗ್ಗೆ ಸ್ವಲ್ಪ ಪರಿಚಯವನ್ನು ಮೂರು ಸಂಚಿಕೆಗಳಲ್ಲಿ ಮಾಡಿಕೊಂಡೆವು.
ಒಬ್ಬರು ಕಣ್ಣ ಮುಂದೆ ಇಲ್ಲವಾದ ಬಳಿಕ ಕೆಲವು ವರುಷಗಳ ನಂತರ ಅವರ ಹೆಸರೂ ಇರುವುದಿಲ್ಲ. ನಾಲ್ಕು ಶತಮಾನ ಕಳೆದ ಬಳಿಕವೂ ಈ ಮಹನೀಯರ ಕಾರ್ಯಗಳು, ಕೃತಿಗಳು ಮತ್ತು ಸಾಧನೆಗಳ ವಿವರಗಳು ವಿಪುಲವಾಗಿ ಸಿಗುತ್ತವೆ. ಮೇಲೆ ಹೇಳಿದ ದೂರ ದೂರದ ಸ್ಥಳಗಳಲ್ಲಿಯೂ ಈಗಲೂ ಅವರ ಬಗ್ಗೆ ಗೌರವಾದರಗಳಿವೆ. ರಾಯರ ಆರಾಧನೆಯಂತೂ ವರುಷದಿಂದ ವರುಷಕ್ಕೆ ಇನ್ನೂ ಬೆಳೆಯುತ್ತಲೇ ಇದೆ.
ಶ್ರಮಪಟ್ಟು ಆಯಾ ಗ್ರಂಥಗಳನ್ನು ಅಭ್ಯಸಿಸಿ, ಸ್ಥಳಗಳನ್ನು ನೋಡಿ ಬಂದರೆ, ಅವುಗಳ ಪರಿಣಾಮವಾಗಿ ಹೆಚ್ಚಿನ ನಂಬಿಕೆ ಬರುತ್ತದೆ.
Very nicely described the most preferred flower by everyone. Thanks Sir for such a wonderful description.
ReplyDeleteರಾಘವೇಂದ್ರ ಸಾರ್ವಭೌಮ ನಮೋನಮಃ
ReplyDeleteರಾಯರಿದ್ದಾರೆ ಎನ್ನುವ ಒಂದು ಅಧ್ಬುತ ನಿಶ್ಚಿಂತೆಯ ಭಾವನೆ ಈ ಲೇಖನಮಾಲೆಯಿಂದ ಮೂಡಿಬರುತ್ತಿದೆ. ಸಂಜೆ ಪಾರಿಜಾತ ಅರಳಿದ ಘಮ ಆಸ್ವಾದಿಸುತ್ತಾ ಈ ಲೇಖನ ಓದಿದ್ದು. ಮನಸ್ಸಿಗೆ ಬಹಳ ಮುದವಾಯಿತು.
Felt fresh like blossomed jasmine spreading sugandha all around. Blessed to know about Guru Vijayeendra and Guru Sudheendra Theertha.
ReplyDeleteNarahari CMD
ReplyDelete