Showing posts with label Adi Murthy. Show all posts
Showing posts with label Adi Murthy. Show all posts

Monday, June 2, 2025

ಒಳ್ಳೆಯ ಸಮಯ


ಮನುಷ್ಯ ಮತ್ತು ಪ್ರಾಣಿಗಲ್ಲಿರುವ ಅನೇಕ ವ್ಯತ್ಯಾಸಗಳಲ್ಲಿ ಸಮಯದ ಬಗ್ಗೆ ಇರುವ ಜ್ಞಾನವೂ ಒಂದು ಮುಖ್ಯವಾದ ಭೇದ. ಪ್ರಾಣಿಗಳಿಗೆ ಸಮಯದ ಜ್ಞಾನ ಕೇವಲ ಸೂರ್ಯೋದಯ, ಸೂರ್ಯಾಸ್ತಗಳಿಂದ ಉಂಟಾಗುವ ಹಗಲು ಮತ್ತು ರಾತ್ರಿಗಳಿಂದ ತಿಳಿಯುತ್ತದೆ. ಇದೇ ಕಾರಣಕ್ಕೆ ಇಡೀ ದಿನದ ವಾತಾವರಣ ಮೋಡ ಕವಿದಂತೆ ಇರುವಂದು ಮತ್ತು ಪೂರ್ಣ ಸೂರ್ಯ ಗ್ರಹಣ ಇರುವ ದಿನ ಅವುಗಳಿಗೆ ಜೀವನದಲ್ಲಿ ವ್ಯತ್ಯಾಸ ಆಗುತ್ತದೆ. ಹಗಲಿನಲ್ಲಿ ಪೂರ್ಣ ಸೂರ್ಯಗ್ರಹಣ ಉಂಟಾದಾಗ ಹಕ್ಕಿಪಕ್ಷಿಗಳು ತಮ್ಮ ಗೂಡುಗಳಿಗೆ ಹಿಂದಿರುಗಿ, ಗ್ರಹಣ ಬಿಟ್ಟ ತಕ್ಷಣ ಮತ್ತೆ ಹಗಲು ಬಂಡ ಭ್ರಮೆಯಲ್ಲಿ ಗಲಿಬಿಲಿಗೊಳ್ಳುತ್ತವೆ. ಮನುಷ್ಯನಾದರೋ ಗಡಿಯಾರಗಳ ಸಹಾಯದಿಂದ ದಿನವನ್ನು ಘಂಟೆ, ನಿಮಿಷಗಳಾಗಿ ವಿಭಜಿಸಿ, ಒಂದು ಸುರಂಗದಲ್ಲಿ ಸಿಕ್ಕಿಬಿದ್ದಿದ್ದರೂ ಸರಿಯಾದ ಸಮಯವನ್ನು ತಿಳಿಯಬಲ್ಲ. "ರಾಬಿನ್ ಸನ್ ಕ್ರೂಸೋ" ಕಥೆಯಲ್ಲಿ ಹಡಗು ಸಮುದ್ರದಲ್ಲಿ ಮುಳುಗಿದ ಕಾರಣ ಒಂದು ದ್ವೀಪದಲ್ಲಿ ಸಿಕ್ಕಿ ಬಿದ್ದ ಅವನು ಹೇಗೆ ತನ್ನದೇ ರೀತಿಯಲ್ಲಿ  ದಿನಗಳ ಲೆಕ್ಕ ಮಾಡಿಕೊಂಡ ಎಂದು ನೋಡಿದ್ದೇವೆ. 

ಪ್ರಾಣಿಗಳ ಜೀವನ ಪ್ರಕೃತಿಯ ಜೊತೆಗೆ ಬೆಸೆದುಕೊಂಡು ಅದರ ಆಗು-ಹೋಗುಗಳ ಮೇಲೆ ಪೂರ್ಣವಾಗಿ ಅವಲಂಬಿತವಾಗುತ್ತದೆ. ಮನುಷ್ಯನೂ ಪ್ರಕೃತಿಯ ಕೂಸೇ ಆದರೂ ತನ್ನ ಬುದ್ಧಿಶಕ್ತಿಯಿಂದ ಸಾಧ್ಯವಾದಷ್ಟೂ ಆಗು-ಹೋಗುಗಳನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊಳ್ಳಲು ನೋಡುತ್ತಾನೆ. ಮನುಷ್ಯನು ಅನೇಕ ಕೆಲಸಗಳನ್ನು ಪ್ರತಿದಿನ ಪ್ರಯತ್ನಪೂರ್ವಕವಾಗಿ ಮಾಡುತ್ತಾನೆ. ಹೀಗೇಕೆ?  ಅವನ ಎಲ್ಲ ಕೆಲಸಗಳಿಗೂ ಎರಡು ಕಾರಣಗಳು. ಮೊದಲನೆಯದು ಯಾವುದೋ ಒಂದು ದುಃಖದಿಂದ ಬಿಡುಗಡೆ. ಇಲ್ಲದಿದ್ದರೆ ಯಾವುದೋ ಒಂದು ಸುಖದ ಪಡೆಯುವಿಕೆಗೆ. ಹಸಿವು ಕಾಡುತ್ತಿದೆ. ಅದರ ಬಿಡುಗಡೆಗೆ ಏನಾದರೂ ತಿನ್ನಬೇಕು. ಇದೊಂದು ದಾರಿ. ಹಸಿವಿಲ್ಲ. ಆದರೂ ಏನಾದರೂ ರುಚಿಯಾದದ್ದನ್ನು ತಿಂದು ಸುಖಪಡಬೇಕು. ಅದಕ್ಕೆ ಪ್ರಯತ್ನ. ಹೀಗೆ ಉದಾಹರಣೆಗಳು ಕೊಡುತ್ತಾ ಹೋಗಬಹುದು. 

ದೈನಂದಿನ ಕೆಲಸಗಳನ್ನು ಮನುಷ್ಯ ಸಾಮಾನ್ಯವಾಗಿ ಯಾಂತ್ರಿಕವಾಗಿ ಮಾಡುತ್ತಾನೆ. ಆದರೆ ಯಾವುದಾದರೂ ಅವನು ಮುಖ್ಯವೆಂದು ತಿಳಿದ, ಅಥವಾ ಹೊಸದಾಗಿ ಪ್ರಾರಂಭಿಸುವ ವಿಶೇಷ ಕಾರ್ಯಗಳನ್ನು "ಸರಿಯಾದ ಸಮಯದಲ್ಲಿ ಮೊದಲುಮಾಡಬೇಕು" ಎಂದು ಆಶಿಸುತ್ತಾನೆ. ತನಗೆ ತಿಳಿದ ಎಲ್ಲ ಲೆಕ್ಕಾಚಾರಗಳನ್ನೂ ಹಾಕಿ ಒಂದು "ಒಳ್ಳೆಯ ಸಮಯ" ನಿರ್ಧರಿಸುತ್ತಾನೆ. ಕೆಲವು ಅತ್ಯಂತ ಮುಖ್ಯ ಕೆಲಸಗಳಿಗಂತೂ ತನ್ನದೇ ಆದ ತೀರ್ಮಾನಕ್ಕೆ ಸೀಮಿತಗೊಳಿಸದೇ ತಾನು ನಂಬಿದ ಮತ್ಯಾರೋ ವಿಶೇಷಜ್ಞರನ್ನು ಕೇಳುತ್ತಾನೆ. ಅವರು ಹಿರಿಯರಿರಬಹುದು, ಸ್ನೇಹಿತರಿರಬಹುದು, ಜ್ಯೋತಿಷಿಗಳಿರಬಹುದು ಅಥವಾ ಯಾರಾದರೂ ಅಧಿಕಾರದಲ್ಲಿ ಇರುವವರು ಇರಬಹುದು. ಒಟ್ಟಿನಲ್ಲಿ 'ಒಳ್ಳೆಯ ಸಮಯ" ಹುಡುಕಿ ಕೆಲಸ ಪ್ರಾರಂಭ ಮಾಡಬೇಕು. ಅದರಿಂದ ಒಳ್ಳೆಯದಾಗಿ ಹಿಡಿದ ಕೆಲಸ ಫಲಪ್ರದ ಆಗುತ್ತದೆ. ಹೀಗೆ ನಂಬಿಕೆ. ಹಾಗೊಂದು  ಆಸೆ ಕೂಡ. 

"ರಾಹುಕಾಲ ಮತ್ತು ಬಲಿಪಾಡ್ಯಮಿ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಮತ್ತು ಅದರ ಹಿಂದಿನ "ಹಿಂದು-ಮುಂದಾದ ಅಕ್ಷಯ ತೃತೀಯ" ಎನ್ನುವ ಸಂಚಿಕೆಯಲ್ಲಿ ಒಳ್ಳೆಯ ಸಮಯದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).  ಒಳ್ಳೆಯ ಸಮಯ ನೋಡುವುದೇನೋ ಸರಿಯೇ. ಆದರೆ ಅದು ಎಂತಹ ಕೆಲಸಗಳಿಗೆ? ಒಳ್ಳೆಯ ಕೆಲಸಗಳಿಗೆ ಎನ್ನುವುದು ಒಂದು ಉತ್ತರ. ಹಾಗಾದರೆ ಯಾವುದು ಒಳ್ಳೆಯ ಕೆಲಸ? ಕಳ್ಳನಿಗೆ ಕಳ್ಳತನ ಮಾಡುವುದು ಒಂದು ವೃತ್ತಿ. ಅದು ಬೇರೆಯವರ, ಸಮಾಜದ ದೃಷ್ಟಿಯಲ್ಲಿ ಕೆಟ್ಟದಿರಬಹುದು. ಆದರೆ ಅವನಿಗೆ ಅದು ಒಂದು ಕೆಲಸ. ಅವನೂ ಆ ಕೆಲಸ ಮಾಡಲು ಒಂದು "ಒಳ್ಳೆಯ ಸಮಯ" ಹುಡುಕುತ್ತಾನೆ!

*****

"ಗುಬ್ಬಿ ವೀರಣ್ಣ" ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಇತಿಹಾಸದಲ್ಲಿ ಒಂದು ಬಲು ದೊಡ್ಡ ಹೆಸರು. ಅವರ "ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ನಾಟಕ ಮಂಡಳಿ" ಇತಿಹಾಸ ಕನ್ನಡ ರಂಗಭೂಮಿಯ ಇತಿಹಾಸದ ಹೊನ್ನಿನ ಭಾಗ. ರಂಗ ಕಲಾವಿದರಾಗಿ, ಕಲಾವಿದರ ಪೋಷಕರಾಗಿ, ಅನೇಕ ಜನ ಕಲಾವಿದರ ಜೀವನಾಧಾರರಾಗಿ, ಕಂಠೀರವ ಸ್ಟುಡಿಯೋ ನಿರ್ಮಾತೃಗಳಲ್ಲೊಬ್ಬರಾಗಿ, ಗುಬ್ಬಿ ವೀರಣ್ಣನವರು ಮಾಡಿರುವ ಕಲಾಸೇವೆ - ಕನ್ನಡ ಸೇವೆ ಅನುಪಮ. ಅವರು, ಅವರ ಶ್ರೀಮತಿಯವರು, ಮಕ್ಕಳು, ಮೊಮ್ಮಕ್ಕಳು, ಹೀಗೆ ಇಡೀ ಕುಟುಂಬವೇ ಮೂರು ತಲೆಮಾರುಗಳಿಂದ ಈ ಕಾಯಕ ಮುಂದುವರೆಸಿಕೊಂಡು ಬಂದಿವೆ.

ರಂಗಭೂಮಿಯ ಪ್ರೇಕ್ಷಕರಿಗೆ ಹೊಸ ಹೊಸ ಪ್ರಯೋಗಗಳು ಬೇಕು. ಅದು ರೇಡಿಯೋ ಹೆಚ್ಚು ಜನಜನಿತವಾಗದ ಕಾಲ. ಟೆಲಿವಿಷನ್ ಕೇಳರಿಯದ ಕಾಲ. ಕಂಪನಿ ಆಡುವ ಎಲ್ಲ ನಾಟಕಗಳನ್ನು ನೋಡಿದ ಪ್ರೇಕ್ಷಕರು ರಂಗಮಂದಿರಕ್ಕೆ ಬರಲು ಕಡಿಮೆಯಾದ ಕಾಲದಲ್ಲಿ ಕಂಪನಿಯ ಮಾಲೀಕರಾದ ವೀರಣ್ಣನವರಿಗೆ ಹೊಸ ಪ್ರಯೋಗಗಳು ಬೇಕಾಯಿತಂತೆ. ಆಗ ಅವರ ಕೋರಿಕೆಯ ಮೇರೆಗೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಎರಡು ಹೊಸ ನಾಟಕಗಳನ್ನು ಬರೆದು ಕೊಟ್ಟರಂತೆ. ಅವೇ "ಶ್ರೀ ಕೃಷ್ಣ ಗಾರುಡಿ" ಮತ್ತು "ಸದಾರಮೆ" ಎಂಬ ಹೆಸರಿನ ನಾಟಕಗಳು. ಈ ನಾಟಕಗಳು ಬಹಳ ಯಶಸ್ವಿಯಾದವು. ಮುಂದೆ ಈ ನಾಟಕಗಳನ್ನು ಬೇರೆ ಬೇರೆ ತಂಡಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಪ್ರದರ್ಶಿಸಿದವು. ಕಾಲಕ್ರಮದಲ್ಲಿ (1935) ಅದು ವೀರಣ್ಣನವರ ನೇತೃತ್ವದಲ್ಲೇ ಚಲನಚಿತ್ರ ಕೂಡ ಆಯಿತು. 

ಗುಬ್ಬಿ ವೀರಣ್ಣನವರೇ "ಸದಾರಮೆ" ನಾಟಕದಲ್ಲಿ "ಆದಿಮೂರ್ತಿ" ಮತ್ತು "ಪಕ್ಕಾ ಕಳ್ಳ" ಅನ್ನುವ ಪಾತ್ರಗಳನ್ನು ಮಾಡುತ್ತಿದ್ದರಂತೆ. ಮುಂದೆ ಕೆಲಕಾಲಾನಂತರ ಆದಿಮೂರ್ತಿ ಪಾತ್ರವನ್ನು ಬೇರೆ ಕಲಾವಿದರಿಗೆ ಮುಂದೆಬರಲು ಅನುವು ಮಾಡಿ ಬಿಟ್ಟುಕೊಟ್ಟರಂತೆ. ಕಳ್ಳನ ಪಾತ್ರವನ್ನು ಅವರೇ ಬಹಳ ಕಾಲ ಮಾಡುತ್ತಿದ್ದರಂತೆ. ಹೀಗೆಂದು ನಮ್ಮ ಹಿರಿಯರು ಹೇಳುತ್ತಿದ್ದರು. ನಾವು ರಂಗ ನಾಟಕಗಳನ್ನು ನೋಡುವ ವೇಳೆಗೆ ವೀರಣ್ಣನವರು ಪಾತ್ರಗಳನ್ನು ಮಾಡುವುದು ನಿಲ್ಲಿಸಿದ್ದುದು ನಮ್ಮ ದುರ್ದೈವ. ವೀರಣ್ಣನವರು ಕಳ್ಳನ ಪಾತ್ರ ಮಾಡುತ್ತಾರೆ ಎಂದು ಗೊತ್ತಾದರೆ ಅಂದಿನ ಕಲೆಕ್ಷನ್ ಮೂರು-ನಾಲ್ಕು ಪಟ್ಟು ಹೆಚ್ಚಾಗುತ್ತಿತ್ತಂತೆ. ಅದನ್ನು ಹತ್ತು-ಇಪ್ಪತ್ತು-ಮೂವತ್ತು ಬಾರಿ ನೋಡಿದವರೂ ಇದ್ದರು ಎಂದು ನಮ್ಮ ಹಿರಿಯರು ಹೇಳಿದ್ದು ಕೇಳಿದ್ದೇನೆ. 

*****

ಕಳ್ಳತನ ಮಾಡಲಿಕ್ಕೂ "ಒಳ್ಳೆಯ ಸಮಯ" ಬೇಕು! ಸದಾರಮೆ ನಾಟಕದ "ಪಕ್ಕಾ ಕಳ್ಳ" ರಂಗದಮೇಲೆ ಹಾಡುತ್ತಿದ್ದ ಹಾಡು ಹೀಗಿದೆ:

ಒಳ್ಳೆಯ ಸಮಯ, ಒಳ್ಳೆ ಸಮಯ, ಒಳ್ಳೆಯ ಸಮಯವು
ಕಳ್ಳತನ ಮಾಡಲೆನಗೆ ಒಳ್ಳೆಯ ಸಮಯವು! 

ದೊಡ್ಡ ಬಂಗ್ಲೆ ಒಳಗೆ ಬಂದ ನನ್ನ ಪುಣ್ಯವೋ 
ಹೆಡ್ಡರಂತೆ ಗೊರಕೆ ಹೊಡೆವರಿವರ ಪಾಪವೋ  

ಹೂತಿಟ್ಟ ದುಡ್ಡಿಗೆಲ್ಲ ನಾವೇ ಬಾಧ್ಯರು 
ಬಚ್ಚಿಟ್ಟ  ದುಡ್ಡಿಗೆಲ್ಲ ನಾವೇ ಬಾಧ್ಯರು  

ಅನ್ಯಾಯದ ದುಡ್ಡಿಗೆಲ್ಲ ನಾವೇ ವಾರಸುದಾರರು  
ದಿಕ್ಕುಗೆಟ್ಟ ಮನೆಗಳಿಗೆಲ್ಲ ನಾವೇ ಜವಾಬ್ದಾರರು  

ನಾವು ಹಳ್ಳಿಗಳನ್ನು ಕೊಳ್ಳೆ ಹೊಡೆವ ಹೊಸಾ ಕಳ್ಳರು 
ನಾವು ಡೊಳ್ಳು ಹೊಟ್ಟೆ ಪೊಲೀಸ್ನವರ ಕಣ್ಗೆ ಬೀಳೆವು 

ಕಣ್ಣುಮುಚ್ಚಿ ಬಿಡುವುದರಲಿ ಕನ್ನ ಹಾಕುವೆ 
ಚಿನ್ನ-ಬೆಳ್ಳಿ ಒಡವೆಗಳನ್ನು ಕೊಂಡು ಹೋಗುವೆ  

ನಮ್ಮ ಬಾಲ್ಯದಲ್ಲಿ ಶಾಲಾ ವಾರ್ಷಿಕೋತ್ಸವಕ್ಕಾಗಿ ನಡೆಯುತ್ತಿದ್ದ "ಏಕಪಾತ್ರಾಭಿನಯ" ಸ್ಪರ್ಧೆಗಳಲ್ಲಿ ಒಬ್ಬ ವಿದ್ಯಾರ್ಥಿಯಾದರೂ ಈ ವೇಷ ಹಾಕಿರುತ್ತಿದ್ದ. ಬಹುಮಾನಗಳನ್ನೂ ಹೊಡೆಯುತ್ತಿದ್ದ. ಈ ಹಾಡು ಎಲ್ಲ ಶಾಲಾಮಕ್ಕಳಿಗೂ ಬಾಯಿಪಾಠವಾದಂತಿತ್ತು!

*****

ಕಳ್ಳತನ ಮಾಡಲಿಕ್ಕೇ ಒಳ್ಳೆಯ ಸಮಯ ಬೇಕು ಎಂದಮೇಲೆ ಮದುವೆ, ಮುಂಜಿ, ನಾಮಕರಣ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳಿಗೆ ಒಳ್ಳೆಯ ಸಮಯ ಬೇಕೇ ಬೇಕು. ಅಲ್ಲವೇ? ಆದ್ದರಿಂದ ತಿಳಿದ ಜೋಯೀಸರೋ, ಪುರೋಹಿತರೋ, ಐನೂರೋ, ಬುದ್ಯೋರೋ, ಅವರ ಬಳಿಗೆ ಹೋಗಿ ಒಳ್ಳೆಯ ದಿನವನ್ನು ಗೊತ್ತು ಮಾಡುವುದು ನಡೆದೇ ಇದೆ. ಬರೀ ಒಳ್ಳೆ ದಿನ ಮಾತ್ರವಲ್ಲ; ಆ ದಿನದಲ್ಲೂ ಒಂದು ಒಳ್ಳೆಯ ಮುಹೂರ್ತ ತೆಗೆಯುತ್ತಾರೆ. ಅಲ್ಲಿ ಕೊಟ್ಟ ಅರ್ಧ ಅಥವಾ ಮುಕ್ಕಾಲು ಗಂಟೆಯಲ್ಲಿಯೇ ಮುಖ್ಯವಾದ ಮಂಗಳ ಕಾರ್ಯ ನಡೆಯಬೇಕು. ಅದು ಮದುವೆಯಲ್ಲಿ ಧಾರೆ-ಮಾಂಗಲ್ಯಧಾರಣೆ ಇರಬಹುದು. ಮುಂಜಿಯಲ್ಲಿ ಮಂತ್ರೋಪದೇಶ ಇರಬಹುದು. ಗೃಹ ಪ್ರವೇಶದಲ್ಲಿ ಗೋಪ್ರವೇಶ ಇರಬಹುದು. ಹೀಗೆ. ಈ ಸಮಯವನ್ನು ಆಹ್ವಾನ ಪತ್ರಿಕೆಗಳಲ್ಲೂ ಹಾಕುತ್ತಾರೆ. ಬಹಳ ಜನ ಆ ಸಮಯಕ್ಕಾಗಿ ಬರುತ್ತಾರೆ. ಎಲ್ಲರ ಗಮನವೂ (ಊಟದ ಮನೆ ಕಡೆ ನೋಡುವವರನ್ನು ಬಿಟ್ಟು) ಲಗ್ನಸಾಧನೆ, ಅಂದರೆ ಆ ಸಮಯದಲ್ಲಿ ಮುಖ್ಯ ಕೆಲಸ ಆಗುವುದರ ಕಡೆ. (ಹೀಗೆಂದು ನಂಬಿಕೆ). 

ಆದರೆ ಚೆನ್ನಾಗಿ ಗಮನಿಸಿ ನೋಡಿದರೆ ಇನ್ನೊಂದು ವಿಶೇಷ ಕಾಣುತ್ತದೆ. ಆ ಸಮಯ ಬಂಡ ನಂತರ ಮಂಗಳ ಕಾರ್ಯ ತಕ್ಷಣ ನಡೆಯುವುದಿಲ್ಲ. "ಮಂಗಳಾಷ್ಟಕ" ಎನ್ನುವ ಎಂಟು (ಶ್ಲೋಕ) ಪದ್ಯಗಳೋ ಅಥವಾ ಕೆಲವು ಪದ್ಯಗಳನ್ನಾದರೂ ಹೇಳುತ್ತಾ "ಸುಲಗ್ನ ಸಾವಧಾನ! ಸುಮುಹೂರ್ತ ಸಾವಧಾನ!" ಎಂದು ಹೇಳುತ್ತಿರುತ್ತಾರೆ. ಕೆಲವು ಪದ್ಯಗಳನ್ನು ಹೀಗೆ  ಹೇಳಿದನಂತರ ಕೊನೆಯಲ್ಲಿ:

ತದೇವ ಲಗ್ನ೦ ಸುದಿನ೦ ತದೇವ, ತಾರಾಬಲ೦ ಚಂದ್ರಬಲ೦ ತದೇವ 
ವಿದ್ಯಾಬಲ೦ ದೈವಬಲ೦ ತದೇವ, ಲಕ್ಷ್ಮೀಪತೇ ತೇ ಅಂಘರಿಯುಗ೦ ಸ್ಮರಾಮಿ 

ಎಂದು ಹೇಳುತ್ತಾ ಮುಖ್ಯ ಕೆಲಸವನ್ನು ನಡೆಸುತ್ತಾರೆ!

"ಹೇ ಸರ್ವಶಕ್ತನಾದ ಪರಮಾತ್ಮನೇ, ನಿನ್ನನ್ನು (ನಿನ್ನ ಪಾದಪದ್ಮಗಳನ್ನು) ನೆನೆಯುವ ಸಮಯವೇ ಒಳ್ಳೆಯ ಸಮಯ. ಅದೇ ಒಳ್ಳೆಯ ಲಗ್ನ. ಅದೇ ಒಳ್ಳೆಯ ದಿನ. ತಾರಾಬಲ, ಚಂದ್ರಬಲಾದಿ ಸಕಲ ಗ್ರಹ ಬಲಗಳೂ ನಿನ್ನನ್ನು ನೆನೆಯುವ ಕಾಲದಲ್ಲಿ ಬಂದು ಒದಗುತ್ತವೆ. ವಿದ್ಯಾಬಲ, ದೈವಬಲ, ಮುಂತಾದ ಎಲ್ಲ ಬಲ ಕೊಡುವ ಕಾರಣಗಳೂ ಆಗ ಬಂದುಬಿಡುತ್ತವೆ. ಈಗ ನಿನ್ನನ್ನು ನೆನೆಯುತ್ತಿದ್ದೇನೆ. ಆದ ಕಾರಣ ಈ ಕ್ಷಣದಲ್ಲಿ ಈ ಮಂಗಳ ಕಾರ್ಯವನ್ನು ಮಾಡುತ್ತಿದ್ದೇನೆ; ಮಾಡುತ್ತಿದ್ದೇವೆ. ಇದು ಸಾರ್ಥಕವಾಗಲಿ!" ಎಂದು ಹೇಳುತ್ತಾ ಮುಖ್ಯ ಕೆಲಸ ನಡೆಯುತ್ತದೆ. 

*****

ಹೀಗೆ ಮೇಲೆ ಹೇಳಿದುದು ಅರ್ಥವಾದರೆ "ಒಳ್ಳೆಯ ಸಮಯ" ಯಾವುದು ಎಂದು ನಂಬಿದವರಿಗೆ ಗೊತ್ತಾಗುವುದು. ಪರಮಾತ್ಮನ ಸ್ಮರಣೆ ಇರುವ ಎಲ್ಲ ಕಾಲವೂ ಒಳ್ಳೆಯ ಕಾಲ. ಸ್ಮರಣೆಯಿಲ್ಲದಿರುವ ಎಲ್ಲ ಕಾಲವೂ, ಅದು ಎಷ್ಟೇ ಶುಭಕರ ಎಂದು ಲೆಕ್ಕ  ಹಾಕಿದ್ದರೂ, ಅಷ್ಟಕ್ಕಷ್ಟೇ!