Showing posts with label Kereya Padmarasa. Show all posts
Showing posts with label Kereya Padmarasa. Show all posts

Tuesday, February 27, 2024

ಕೆರೆಯ ಪದ್ಮರಸನ "ದೀಕ್ಷಾಬೋಧೆ"


ವಿಶಾಲ ಕನ್ನಡ ಸಾಹಿತ್ಯ ಸಮುದ್ರಕ್ಕೆ ವಿಪುಲ ಸಾಹಿತ್ಯ ಜಲರಾಶಿಯನ್ನು ಕಾಣಿಕೆಯಾಗಿ ಕೊಟ್ಟ ಅನೇಕ ಮಹಾನದಿಗಲ್ಲಿ ಮೂರು ಪ್ರಮುಖವಾದ ಧಾರೆಗಳೆಂದರೆ ಜೈನ ಸಾಹಿತ್ಯ, ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ. ಮೂಲತಃ ಧಾರ್ಮಿಕ ಸ್ರೋತಗಳಿಂದ ಹುಟ್ಟಿದ ರಚನೆಗಳಾದರೂ ಇವುಗಳಲ್ಲಿ ಹೇರಳವಾದ ಕಾವ್ಯ ಸಂಪತ್ತು ಇರುವುದನ್ನು ನೋಡಬಹುದು. ಇವುಗಳಲ್ಲಿನ ಗ್ರಂಥಕರ್ತರು ತಮ್ಮ ತಮ್ಮ ಧಾರ್ಮಿಕ ಅಂಶಗಳನ್ನು ಪ್ರಸಾರ ಮಾಡುವುದಕ್ಕಾಗಿ ರಚನೆಗಳನ್ನು ಮಾಡಿದ್ದರೂ, ಅವರೆಲ್ಲ ತಮ್ಮ ಕ್ಷೇತ್ರಗಳಲ್ಲಿಯೂ ಮತ್ತು ಭಾಷಾಪ್ರಯೋಗದಲ್ಲಿಯೂ ಚತುರರು. ಅನೇಕರು ಮೇಲು ದರ್ಜೆಗೆ ಸೇರಿದ ವಿದ್ವಾಂಸರು. ಭಾಷೆ, ವ್ಯಾಕರಣ, ಅಲಂಕಾರ, ಛಂದಸ್ಸುಗಳಲ್ಲಿ ಪಳಗಿದವರು. ತಮ್ಮ ಧರ್ಮ ಪ್ರಸಾರದ ಜೊತೆ ಜೊತೆಯಲ್ಲಿ ಕನ್ನಡ ಭಾಷೆಯ ವಿಸ್ತಾರ ಮತ್ತು ಬೆಳವಣಿಗೆಗೆ ಇಂಬು ಕೊಟ್ಟವರು. ನಮ್ಮ ಭಾಷೆಯ ಮೇಲೆ ಈಗಿನ ಸನ್ನಿವೇಶದಲ್ಲಿ ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳಲ್ಲಿ, ಅನೇಕ ಶತಮಾನಗಳು ಕಳೆದರೂ ಮಾಸದ ಅವರ ಕೊಡುಗೆಯನ್ನು ಕನ್ನಡಿಗರು ಅತ್ಯಂತ ಗೌರವದಿಂದ ನೆನೆಯಬೇಕಾದ ಸಮಯವಿದು.

"ಕರಡಿಗೆಯಿಂದ ಬಂದ ಕರಡಿ" ಸಂಚಿಕೆಯಲ್ಲಿ ಗುರುಗಳಿಂದ "ಲಿಂಗದೀಕ್ಷೆ" ಪಡೆದ ಶಿಷ್ಯನು "ಇಷ್ಟಲಿಂಗ" ಪಡೆದು ಕರಡಿಗೆಯಲ್ಲಿ ಧರಿಸುವ ಬಗ್ಗೆ ಸಂಕ್ಷಿಪ್ತ ಚರ್ಚೆ ನೋಡಿದೆವು. ಈ ರೀತಿಯ ದೀಕ್ಷೆ ಕೊಡುವ ವೇಳೆಯಲ್ಲಿ ಗುರುವು ಶಿಷ್ಯನಿಗೆ ಅವನ ಆಧ್ಯಾತ್ಮಿಕ ಉನ್ನತಿಗಾಗಿ ದಾರಿ ದೀವಿಗೆಯಾಗಿ ನೀಡುವ ಉಪದೇಶವೇ "ದೀಕ್ಷಾಬೋಧೆ". ಹೊಯ್ಸಳ ಧೊರೆ ನರಸಿಂಹ ಬಲ್ಲಾಳನ ಮಂತ್ರಿಯಾಗಿದ್ದ ಕೆರೆಯ ಪದ್ಮರಸ ಈ ಸಂಬಂಧವಾಗಿ "ದೀಕ್ಷಾಬೋಧೆ" ಎಂಬ ಗ್ರಂಥವನ್ನು ಸರಳ ರಗಳೆಯಲ್ಲಿ ರಚಿಸಿದ್ದಾನೆ. ಶರಣ ಸಾಹಿತ್ಯದಲ್ಲಿ ಈ ಗ್ರಂಥಕ್ಕೆ ಉನ್ನತ ಸ್ಥಾನವಿದೆ. ಈ ಗ್ರಂಥ ಕರ್ತೃ, ಗ್ರಂಥ ರಚನೆಯ ಸಂದರ್ಭ ಮತ್ತು ಗ್ರಂಥ ವಿಶೇಷ ಇವುಗಳ ಬಗ್ಗೆ ಸ್ವಲ್ಪ ದೃಷ್ಟಿ ಹಾಯಿಸೋಣ. 

***** 

ಹನ್ನೆರಡನೇ ಶತಮಾನದ ಕೊನೆಯ ಸಮಯದಲ್ಲಿ (ಸುಮಾರು 1190 AD) ನಡೆದ "ಕಲ್ಯಾಣ ಕ್ರಾಂತಿ"  ಸಂದರ್ಭದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಅವರ ಪ್ರಭಾವಕ್ಕೆ ಒಳಗಾಗಿ ಅನೇಕರು ಅವರ ಅನುಯಾಯಿಗಳಾದರು. ಇಂತಹವರಲ್ಲಿ ಸಮಾಜದ ಎಲ್ಲ ಸ್ತರಗಳ ಜನ ಸಮುದಾಯಕ್ಕೆ ಸೇರಿದವರೂ ಇದ್ದರು. ಜನ ಸಾಮಾನ್ಯರಿಂದ ಹಿಡಿದು ಪಂಡಿತರು ಮತ್ತು ಆಳುವ ವರ್ಗದ ಅಧಿಕಾರಿಗಳೂ, ಅರಸರೂ ಸೇರಿದ್ದರು. ಇಂತಹವರಲ್ಲಿ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಶಿವಯೋಗಿ ಮಲ್ಲರಸ ಸಹ ಒಬ್ಬರು. ಇವರನ್ನು ಕೆಲವೆಡೆ ಶಿವಯೋಗಿ ಮಲ್ಲಿಕಾರ್ಜುನ ಎಂದೂ ಕರೆದಿದ್ದಾರೆ. ಕಲ್ಕುರ್ಕಿ ಎನ್ನುವ ಸಂಸ್ಥಾನದ ಅರಸು ಮನೆತನಕ್ಕೆ ಸೇರಿದವರು ಶಿವಯೋಗಿ ಮಲ್ಲರಸರು. ಇವರ ಮಗನೇ ವಚನಕಾರರಾದ ಸಕಳೇಶ ಮಾದರಸ. ಸಕಳೇಶ ಮಾದರಸರು ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಹಿರಿಯರು. ರಾಜ್ಯಆಡಳಿತದ ನಡುವೆ ಶಿವನಿಗೆ ಆರಾಧನೆಯ ಜೊತೆಗೆ ಸಂಗೀತ ಸೇವೆ ಅರ್ಪಿಸುವ ಕಾಯಕ ನಡೆಸುತ್ತಿದ್ದರು. ವೀಣೆ ಮೊದಲಾದ ತಂತಿ ವಾದ್ಯಗಳ ನುಡಿಸುವಿಕೆಯಲ್ಲಿ ಕುಶಲಿಗಳು. ಅನುಭವ ಮಂಟಪದ ಹಿರಿಯ ಸದಸ್ಯರಾದ ಇವರ 133 ವಚನಗಳು ಸಿಕ್ಕಿವೆ. ಸಕಳೇಶ್ವರ ಅಥವಾ ಸಕಳೇಶ್ವರ ದೇವಾ ಎನ್ನುವುದು ಅವರ ವಚನಗಳ ಅಂಕಿತ ಪದ. ಅವರ ಒಂದು ವಚನ ಹೀಗಿದೆ: 

ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ 
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಆಲಸ್ಯವಿಲ್ಲದೆ 
ಭಯಭಕ್ತಿಯಿಂದ ಮಾಡೋದು ಭಕ್ತರಿಗೆ ಲಕ್ಷಣ. 
ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು 
ಅದ್ವೈತದಿಂದ ಉದರವ ಹೊರೆದೊಡೆ 
ಭವಭವದಲ್ಲಿ ನರಕ ತಪ್ಪದಯ್ಯಾ, ಸಕಳೇಶ್ವರಾ 

ಮೇಲಿನ ವಚನದಲ್ಲಿ "ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ" ಎನ್ನುವುದು ಗುರುವಿನಿಂದ ಪಡೆಯುವ "ಲಿಂಗ ದೀಕ್ಷೆ"ಯನ್ನು ಸೂಚಿಸುತ್ತದೆ. ಕಾಲಕ್ರಮದಲ್ಲಿ ಸಕಳೇಶ ಮಾದರಸರು ಕಲ್ಯಾಣವನ್ನು ಬಿಟ್ಟು ದಕ್ಷಿಣಕ್ಕೆ ಬಂದರು. ನಂತರ ಎಲ್ಲ ಐಹಿಕ ಹೊಣೆಯನ್ನೂ ತಮ್ಮ ಮಗನಾದ ಮಾಯಿದೇವರಸನಿಗೆ ವಹಿಸಿ ಲಿಂಗೈಕ್ಯರಾದರು. ಮಾಯಿದೇವರಸನ ಪತ್ನಿಯ ಹೆಸರು ಮಂಗಳಾದೇವಿ. ಈ ಮಾಯಿದೇವರಸ-ಮಂಗಳಾದೇವಿ ದಂಪತಿಗಳ ಮಗನೇ ಪದ್ಮರಸ. ಪದ್ಮರಸನು ಪ್ರಾಯಕ್ಕೆ ಬರುವ ವೇಳೆಗೆ ಕಲ್ಯಾಣದ ಕ್ರಾಂತಿಯಾಗಿ ಸುಮಾರು ಅರವತ್ತು ವರುಷಗಳು. 

ಪದ್ಮರಸನು ತನ್ನ ವಂಶದ ಹಿರಿಯರಂತೆ ಘನ ಪಂಡಿತನು. ಪದ್ಮರಸನ ಸೋದರಮಾವ ಗೌರಪದ ನಾಯಕ ದೋರಸಮುದ್ರದ ಹೊಯ್ಸಳ ವಂಶದ ಅರಸು ನರಸಿಂಹ ಬಲ್ಲಾಳನ ಮಂತ್ರಿಯಾಗಿದ್ದನು. ತನ್ನ ಮಗಳು ಮಹಾದೇವಿಯನ್ನು ಪದ್ಮರಸನಿಗೆ ಕೊಟ್ಟು ವಿವಾಹ ಮಾಡಿ ದೋರಸಮುದ್ರದಲ್ಲಿಯೇ ಇರಿಸಿಕೊಂಡನು. ಪದ್ಮರಸನ ಪಾಂಡಿತ್ಯ ಮತ್ತು ಆಡಳಿತ ಚತುರತೆಯನ್ನು ಮೆಚ್ಚಿದ ನರಸಿಂಹ ಬಲ್ಲಾಳ ಗೌರಪದನಾಯಕನ ಮರಣಾನಂತರ ಪದ್ಮರಸನನ್ನು ಮಂತ್ರಿಯಾಗಿ ನೇಮಿಸಿದನು. ವೇಲಾಪುರಿಯ ಬಳಿ (ಈಗಿನ ಬೇಲೂರು) "ಬಿಟ್ಟಿ ಸಮುದ್ರ" ಎಂಬ ವಿಶಾಲ ಕೆರೆಯನ್ನು ಕಟ್ಟಿಸಿದ ಕಾರಣ ಪದ್ಮರಸನಿಗೆ "ಕೆರೆಯ ಪದ್ಮರಸ" ಎಂದು ಹೆಸರು ಬಂದು ಪ್ರಖ್ಯಾತನಾದನು. 

*****

ಪ್ರತಿ ಪಂಥದವರೂ ತಮ್ಮ ತಮ್ಮ ಮತ ಪ್ರಚಾರಕ್ಕಾಗಿ ದೇಶ ಸಂಚಾರ ಮಾಡಿ, ಪರ ಮತದವರನ್ನು ವಾದಕ್ಕೆ ಕರೆದು, ಅವರನ್ನು ಸೋಲಿಸಿ ತಮ್ಮ ಮತವನ್ನು ಸ್ಥಾಪಿಸುವ ಪದ್ಧತಿ ನಮ್ಮ ದೇಶದಲ್ಲಿ ಅನೇಕ ಶತಮಾನಗಳಿಂದ ಬಂದಿದೆ. ಇಂತಹ ವಾದದಲ್ಲಿ ಸೋತವರು ತಮ್ಮ ಎಲ್ಲ ಬಿರುದು-ಬಾವಲಿಗಳನ್ನು ಗೆದ್ದವರಿಗೆ ಒಪ್ಪಿಸಿ ಅವರ ಶಿಷ್ಯರಾಗಿ ಗೆದ್ದವರ ಮತವನ್ನು ಸ್ವೀಕರಿಸುವುದೂ ನಡೆದು ಬಂದಿದೆ. "ತ್ರಿಭುವನ ತಾತ" ಎಂದು ಪ್ರಸಿದ್ಧನಾದ ಆಂಧ್ರದ ವೈಷ್ಣವ ವಿದ್ವಾಂಸನು ದೋರಸಮುದ್ರಕ್ಕೆ ಬಂದು ಅಲ್ಲಿನ ಪಂಡಿತರನ್ನು ವಾದಕ್ಕೆ ಕರೆದನು. ಹಿರಿಯನಾಗಿದ್ದ ಪದ್ಮರಸನು ತನ್ನ ಮಗನಾದ ಕುಮಾರ ಪದ್ಮರಸನನ್ನು ತ್ರಿಭುವನ ತಾತನ ಎದುರು ವಾದಕ್ಕೆ ನಿಲ್ಲಿಸಿದನು. ಕುಮಾರ ಪದ್ಮರಸನು ವಾದದಲ್ಲಿ ತ್ರಿಭುವನ ತಾತನನ್ನು ಸೋಲಿಸಿ ಜಯಶಾಲಿಯಾದನು. ಒಪ್ಪಂದದಂತೆ ತ್ರಿಭುವನ ತಾತನು ಕೆರೆಯ ಪದ್ಮರಸನ ಶಿಷ್ಯನಾಗಿ ಲಿಂಗದೀಕ್ಷೆ ಪಡೆದನು. 

ತ್ರಿಭುವನ ತಾತನು ದೀಕ್ಷೆ ಪಡೆಯುವ ವೇಳೆಯಲ್ಲಿ ಪದ್ಮರಸನು ವಿವರಿಸಿದ ತತ್ವ-ರಹಸ್ಯಗಳನ್ನು ವಿವರವಾಗಿ ಎಲ್ಲರಿಗೂ ತಿಳಿಯುವಂತೆ ವ್ಯವಸ್ಥೆ ಮಾಡಬೇಕೆಂದು ತನ್ನ ಗುರುವನ್ನು ಕೇಳಿಕೊಂಡನು. ಪದ್ಮರಸನು ಈ ವಿವರಗಳನ್ನೇ ರಗಳೆಯ ರೂಪದಲ್ಲಿ ವಿವರಿಸಿ "ದೀಕ್ಷಾಬೋಧೆ" ಎನ್ನುವ ಗ್ರಂಥವನ್ನು ರಚಿಸಿದನು. ಅದು ಕನ್ನಡದ ಹೆಮ್ಮೆಯ ಕವಿಗಳಾದ ಹರಿಹರ ಮತ್ತು ಅವನ ಸೋದರಳಿಯನಾದ ರಾಘವಾಂಕ ಅವರ ಕೃತಿಗಳು ರಚಿತವಾಗಿ ಪ್ರಚಲಿತವಾಗಿದ್ದ ಕಾಲ.  ಹರಿಹರನಾದರೋ ರಗಳೆಯ ಕವಿ ಎಂದೇ ಪ್ರಖ್ಯಾತನಾದವನು. ಪದ್ಮರಸನು ತನ್ನ ಕೃತಿಗೆ ರಗಳೆಯನ್ನು ಆರಿಸಿಕೊಂಡದ್ದು ಈ ಕಾಲಘಟ್ಟದಲ್ಲಿ ಸಮಂಜಸವೇ ಆಗಿದೆ. (ಕೆಲವರು "ಏನೋ ನಿನ್ನ ರಗಳೆ!" ಎಂದು ಹೇಳುವ ಪ್ರಯೋಗ ಇದರಿಂದಲೇ ಬಂದಿದೆ). 

*****

ದೀಕ್ಷಾಬೋಧೆಯ ವಿಷಯ ಲಿಂಗದೀಕ್ಷೆ ಕೊಡುವ ಕಾಲದಲ್ಲಿ ಗುರುವು ಶಿಷ್ಯನಿಗೆ ನೀಡುವ ಬೋಧನೆಯ ವಿವರಗಳೇ. ಜೀವನು ಮೂಲತಃ ಶಿವ ಸ್ವರೂಪಿಯೇ. ಆದರೆ, ಆಣವ ಮಲ, ಕಾರ್ಮಿಕ ಮಲ ಮತ್ತು ಮಾಯಾ ಮಲ ಎಂಬ (ಮೂರು ಕೊಳೆಗಳೆಂಬ) ಕಶ್ಮಲಗಳಿಂದ ಸಂಕುಚಿತಗೊಳ್ಳುತ್ತಾನೆ. ಶಿವನ ಸರ್ವ ಪರಿಪೂರ್ಣತ್ವ, ಸರ್ವಜ್ಞತ್ವ, ಮತ್ತು ಸರ್ವ ಕರ್ತೃತ್ವ ಎನ್ನುವ ಗುಣಗಳನ್ನು ಮರೆತವನಾಗಿ ಸಂಸಾರದಲ್ಲಿ ಸಿಲುಕುತ್ತಾನೆ. ಗುರುವಿನಿಂದ ದೀಕ್ಷೆ ಪಡೆದು ಮಲತ್ರಯ ನಿವೃತ್ತಿಯಾಗಿ (ಮೇಲೆ ಹೇಳಿದ ಮೂರು ಕೊಳೆಗಳನ್ನು ತೊಳೆದು ಶುದ್ಧನಾಗಿ) ಮೇಧಾ-ಮಂತ್ರ-ಕ್ರಿಯಾ ದೀಕ್ಷೆ ಪಡೆದು,ತನುತ್ರಯದಲ್ಲಿ ಲಿಂಗತ್ರಯಗಳ ಸಂಬಂಧ ಅರಿಯುತ್ತಾನೆ. 

ದೀಕ್ಷಾಬೋಧೆ ಗ್ರಂಥವು ದೀಕ್ಷೆಯ ಪೂರ್ವದಲ್ಲಿ ತಿಳಿಸುವ ಸದಾಚಾರ ವಿವರಣೆ, ದೀಕ್ಷೆಯ ಸಮಯದಲ್ಲಿ ಮಾಡುವ ಉಪದೇಶ (ಬೋಧನೆ), ಮತ್ತು ದೀಕ್ಷೆಯ ನಂತರದ ಅರ್ಪಿತ ಪ್ರಸಾದಾದಿಗಳನ್ನು ಕುರಿತ ವಿವರಣೆ ಎಂಬ ಮೂರು ಭಾಗಗಳಲ್ಲಿದೆ ಎಂದು ಹೇಳಬಹುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ಸಂಪಾದಿಸಿ ಪ್ರಕಟಿಸಿರುವ ಪುಸ್ತಕವನ್ನು ನೋಡಬಹುದು. 

*****

ಭಾರತೀಯ ಜ್ಞಾನಪೀಠ ಸ್ಥಾಪಿಸಿದ "ಮೂರ್ತಿದೇವಿ ಪ್ರಶಸ್ತಿ" ಮೊದಲ ವರ್ಷದಲ್ಲೇ ಕನ್ನಡಕ್ಕೆ ತಂದುಕೊಟ್ಟ ಖ್ಯಾತಿ ಕನ್ನಡದ ಹೆಸರಾಂತ ಲೇಖಕ ಸಿ. ಕೆ. ನಾಗರಾಜ ರಾವ್ ಅವರದು. ಅವರ "ಪಟ್ಟಮಹಾದೇವಿ ಶಾಂತಲದೇವಿ" ಎರಡು ಸಾವಿರ ಪುಟಗಳಿಗೂ ಮೀರಿದ ಬೃಹತ್ ಕಾದಂಬರಿ. "ವೀರಗಂಗ ವಿಷ್ಣುವರ್ಧನ" ಮತ್ತು "ದಾಯಾದ ದಾವಾನಳ?" ಈ ಕೃತಿಯ ಮುಂದುವರೆದ ಭಾಗಗಳು. ಹೊಯ್ಸಳರ ಕಾಲದ ಇತಿಹಾಸವನ್ನು ಕಾದಂಬರಿಯ ರೂಪದಲ್ಲಿ ಈ ಕೃತಿಗಳಲ್ಲಿ ಓದಬಹುದು. ಕೆರೆಯ ಪದ್ಮರಸನ ಪ್ರಸ್ತಾಪ ಈ ಕಾದಂಬರಿಗಳಲ್ಲಿ ಅಲ್ಲಲ್ಲಿ ಬರುತ್ತದೆ. 

ಪಂಡಿತ ಕೆ. ಪಿ. ಶಿವಲಿಂಗಯ್ಯ ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದ ಪಂಡಿತರು. ಶರಣ ಸಾಹಿತ್ಯದಲ್ಲಿ ವಿಶೇಷ ಪರಿಶ್ರಮ ಹೊಂದಿದವರು. ಸುಮಾರು ನಲವತ್ತು ವರುಷಗಳ ಹಿಂದೆ ಮೇಲೆ ಹೇಳಿದ ಕಾದಂಬರಿಗಳ ಕುರಿತಾದ ಸಾಹಿತ್ಯ ಗೋಷ್ಠಿಯೊಂದರಲ್ಲಿ "ಕೆರೆಯ ಪದ್ಮರಸನ ದೀಕ್ಷಾಬೋಧೆ"ಎನ್ನುವ ವಿದ್ವತ್ಪೂರ್ಣ ಉಪನ್ಯಾಸ ಮಾಡಿದ್ದರು. ಅದನ್ನು ಕೇಳುವ ಸುಯೋಗ ನನಗೆ ಸಿಕ್ಕಿತ್ತು. ನಲವತ್ತು ವರುಷಗಳು ಕಳೆದಿದ್ದರೂ ಅವರು ನೀಡಿದ ಉಪನ್ಯಾಸ ಈಗಲೂ ನೆನೆಯುವಂತಹುದು. ಈ ಸಂದರ್ಭದಲ್ಲಿ ಅವರನ್ನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ