Showing posts with label Magic Mace. Show all posts
Showing posts with label Magic Mace. Show all posts

Thursday, May 22, 2025

ಶ್ರುತಾಯುಧ ಮತ್ತು ಅವನ ಅಜೇಯ ಗದೆ


ತಮ್ಮ ವಿವಿಧ ಬಗೆಯ ಸಾಧನೆ ಮತ್ತು ತಪಸ್ಸುಗಳಿಂದ ಚತುರ್ಮುಖ ಬ್ರಹ್ಮ ಮತ್ತು ಪರಶಿವರನ್ನು ಮೆಚ್ಚಿಸಿ, ಅಜೇಯವೆನಿಸುವ ವರಗಳನ್ನು ಪಡೆದು, ಆ ವರಗಳ ಮದದಿಂದ ಲೋಕಕಂಟಕರಾಗಿ ಮೆರೆವವರು ಮತ್ತು ಮಹಾವಿಷ್ಣುವು ಅನೇಕ ಪ್ರಸಂಗಗಳಲ್ಲಿ ಹೇಗೆ ಇಂತಹವರ ಕಾಟವನ್ನು ಕಡೆಗೊಳಿಸಿದನು ಎನ್ನುವುದನ್ನು ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" ಗ್ರಂಥದ 28ನೆಯ ಪದ್ಯದಲ್ಲಿ ವಿವರಿಸಿರುವ ಬಗೆಯನ್ನು "ಕೊಡುವವರಿಬ್ಬರು; ತೆಗೆಯುವವನೊಬ್ಬ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಭಸ್ಮಾಸುರ ಪರಶಿವನನ್ನು ಮೆಚ್ಚಿಸಿ ವರವನ್ನು ಪಡೆದು ಅದರ ಸತ್ವದ ಪರೀಕ್ಷೆ ಮಾಡಲು ವರ ಕೊಟ್ಟವನನ್ನೇ ಗುರಿಮಾಡಿದ್ದು ಮತ್ತು ಮಹಾವಿಷ್ಣುವು ಮೋಹಿನಿ ರೂಪದಿಂದ ಅವನ ಕೊನೆ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ "ಶ್ರುತಾಯುಧ" ಎನ್ನುವ ಅಸುರನೊಬ್ಬನ ಕಥೆ ಬಹಳ ಜನಕ್ಕೆ ಗೊತ್ತಿಲ್ಲ. ಶ್ರುತಾಯುಧನಿಗೆ ಬಲ ಬಂದಿದ್ದು ಶಿವ ಅಥವಾ ಬ್ರಹ್ಮರ ಕೃಪೆಯಿಂದ ಅಲ್ಲ. ತಂದೆಯಾದ ವರುಣನಿಂದ ತನಗೆ ಬಂದ ವರದ ಬಲದಿಂದ ಕೊಬ್ಬಿದ ಶ್ರುತಾಯುಧನನ್ನು ಶ್ರೀಕೃಷ್ಣನು ಹೇಗೆ ಉಪಾಯವಾಗಿ ಕೊಂದನು ಎನ್ನುವುದು ಮಹಾಭಾರತದಲ್ಲಿ ವರ್ಣಿತವಾಗಿದೆ. ಅದನ್ನು ಸ್ವಲ್ಪ ನೋಡೋಣ. 

*****

ಚತುರ್ಮುಖ ಬ್ರಹ್ಮರು ಒಮ್ಮೆ ಸಂಜೆಯ ವೇಳೆ ಸಮುದ್ರ ತೀರದಲ್ಲಿ ಯೋಗಧ್ಯಾನದಲ್ಲಿ ಸಂಚರಿಸುತ್ತಿದ್ದರಂತೆ. ಸಮುದ್ರರಾಜನಾದ ವರುಣನು ಅವರ ಇರವನ್ನು ಗಮನಿಸಿದರೂ ತೀವ್ರವಾಗಿ ಉಕ್ಕುತ್ತಾ ಬಂದು ಅವರ ಮೇಲೆ ಹೆಚ್ಚಾಗಿ ನೀರನ್ನು ಸಿಂಪಡಿಸಿದನಂತೆ. ಯೋಗಧ್ಯಾನದಲ್ಲಿದ್ದ ಬ್ರಹ್ಮರು "ಶಾಂತೋಭವ' (ಶಾಂತನಾಗು) ಎಂದು ಕೈಬೀಸಿ ಸುಮ್ಮನಾಗಿಸಿದರಂತೆ. ದೊಡ್ಡವರಿಗೆ ಅಪಚಾರ ಮಾಡಿದ ಕಾರಣದಿಂದ ಮುಂದೆ ವರುಣನು "ಶಂತನು" ಎನ್ನುವ ಹೆಸರಿನಿಂದ ಭೂಮಿಯಲ್ಲಿ ಹುಟ್ಟಬೇಕಾಯಿತು. ಶಂತನು ಗಂಗೆಯನ್ನು ವಿವಾಹವಾಗಿ, ನಂತರ ಎಂಟು ವಸುಗಳು ಅವರ ಮಕ್ಕಳಾಗಿ ಹುಟ್ಟಿ, ಗಂಗೆಯು ಮೊದಲ ಏಳು ಶಿಶುಗಳನ್ನು ನದಿಯಲ್ಲಿ ಹಾಕಿ, ಎಂಟನೆಯವನು "ದೇವವ್ರತ" ಆಗಿ ಉಳಿದು ಮುಂದೆ "ಭೀಷ್ಮ" ಎಂದು ಪ್ರಸಿದ್ಧನಾದುದು ಎಲ್ಲರಿಗೂ ತಿಳಿದ ವಿಷಯ. ಏಳು ಮಕ್ಕಳನ್ನು ಪತ್ನಿಯು ಹುಟ್ಟಿದ ತಕ್ಷಣ ನದಿಯಲ್ಲಿ ಬಿಸಾಡಿದರೂ ಅವನು ಶಾಂತನಾಗಿ ಸುಮ್ಮನಿರಬೇಕಾಯಿತು. ದೊಡ್ಡವರಿಗೆ ಮಾಡಿದ ಅಪಚಾರಗಳು ಹಿಂದೆ ಅಟ್ಟಿಸಿಕೊಂಡು ಬಂದು ನಮ್ಮನ್ನು ಕಾಡುತ್ತವೆಯೇ ಹೊರತು ಅವುಗಳಿಂದ ತಪ್ಪಿಸಿಕೊಳ್ಳಲಾಗದು. 

ಯೋಗಧ್ಯಾನದಲ್ಲಿ ಇರುವಾಗ ಸಂಚಾರ ಹೇಗೆ ಸಾಧ್ಯ ಎಂದು ಕೆಲವರಿಗೆ ಆಶ್ಚರ್ಯ ಆಗಬಹುದು. ವಾಹನ ಚಲಿಸುವ ಕಲಿಕೆಯಲ್ಲಿ (ಡ್ರೈವಿಂಗ್ ಪ್ರಾಕ್ಟೀಸ್) ಇರುವವರಿಗೆ ಯಾವ ಕ್ಷಣದಲ್ಲಿ ಅಪಘಾತ ಆಗುವುದೋ ಎಂಬ ಚಿಂತೆ ಇರುತ್ತದೆ. ವಾಹನ ಚಲಿಸುವುದು ಪ್ರಾರಂಭಿಸುವುದರಿಂದ ಅದು ನಿಲ್ಲಿಸಿ ಕೆಳಗಿಳಿಯುವವರೆಗೆ ಅದೊಂದು ಮೈ ಬಿಸಿ ಮಾಡುವ ಸನ್ನಿವೇಶ. ಆದರೆ ಚೆನ್ನಾಗಿ ನುರಿತ ಚಾಲಕರಿಗೆ ಹಾಗಲ್ಲ. ಅವರ ಪಕ್ಕ ನಾವು ಕುಳಿತಿದ್ದಾಗ ಅವರು ನಮ್ಮೊಡನೆ ಮಾತನಾಡುತ್ತ ವಾಹನ ನಡೆಸುತ್ತಿರುತ್ತಾರೆ. ಪ್ರಪಂಚದ ಅನೇಕ ಆಗು-ಹೋಗುಗಳ ಗಹನವಾದ ಚರ್ಚೆ ನಡೆದಿರುತ್ತದೆ. ಗಂಟೆಗಟ್ಟಲೆ ಡೊಂಕು-ಹಳ್ಳ-ದಿಣ್ಣೆಗಳಿರುವ ರಸ್ತೆಯಲ್ಲಿ ಮೈಲಿಗಟ್ಟಲೆ ವಾಹನ ಚಲಿಸಿರುತ್ತದೆ. ಅನೇಕ ಕೆಂಪು-ಹಸಿರು ದೀಪಗಳ ದಾರಿ ಕ್ರಮಿಸಿರುತ್ತದೆ. ಪಕ್ಕದಲ್ಲಿ ಮತ್ತು ಎದುರಿನಿಂದ ಸಾವಿರಾರು ವಾಹನಗಳು ಚಲಿಸಿರುತ್ತವೆ. ನಮ್ಮೊಡನೆ ಚಾಲಕ ಮಾತಿನಲ್ಲಿ ತೊಡಗಿರುವಾಗಲೇ ಇದೆಲ್ಲಾ ನಡೆದಿರುತ್ತದೆ. ಆದರೆ ಆ ಪಳಗಿದ ಚಾಲಕರು ನಿರಾಯಾಸವಾಗಿ ಇದೆಲ್ಲ ದಾಟಿ ಬಂದಿರುತ್ತಾರೆ!

ನಾವುಗಳು ಧ್ಯಾನಕ್ಕೆ ಕುಳಿತರೆ ಮನಸ್ಸು ಕಪಿಯಂತೆ ಎಲ್ಲೆಲ್ಲೋ ಎಗರಾಡುತ್ತ ಹರಿಯುತ್ತದೆ. ಬ್ರಹ್ಮರು, ಹನುಮಂತ ಮುಂತಾದವರ ಯೋಗ್ಯತೆ ಬಹಳ ದೊಡ್ಡದು. ಅವರು ಬೇರೆಲ್ಲಾ ಕೆಲಸಗಳನ್ನು ಮಾಡುತ್ತಿದ್ದರೂ ನಿರಂತರವಾಗಿ ಯೋಗನಿಷ್ಠರಾಗಿಯೇ ಇರುತ್ತಾರೆ. ಅವರಿಗೂ ನಮಗೂ ಇರುವ ವ್ಯತ್ಯಾಸ ನುರಿತ ವಾಹನ ಚಾಲಕನಿಗೂ ಹೊಸದಾಗಿ ವಾಹನ ಚಾಲನೆ ಕಲಿಯುತ್ತಿರುವವನಿಗೂ ಇರುವ ಭಿನ್ನತೆಯ ರೀತಿ. ನಮಗೆ ತಿಳಿದಿರುವಂತೆ "ಅಷ್ಟಾವಧಾನ" ಮಾಡುವ ಪಂಡಿತರು ಒಂದೇ ಕಾಲಕ್ಕೆ ಅನೇಕ ದಿಕ್ಕುಗಳಲ್ಲಿ ಮನಸ್ಸು ನೆಟ್ಟು ಬೇರೆ ಬೇರೆ ಪೃಚ್ಛಕರು ಕೇಳಿದ ಹಲವಾರು ಜಟಿಲ ಸಮಸ್ಯೆಗಳಿಗೆ ಉತ್ತರಕೊಡುತ್ತಿದ್ದರೂ ಅವರು ಎಲ್ಲವನ್ನೂ  ಮಾಡಬಲ್ಲರು. ಸಾಮಾನ್ಯರಿಗೆ ಅದರಲ್ಲಿ  ಯಾವುದೇ ಒಂದನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ. ಎಂತಹ ವ್ಯತ್ಯಾಸ!

*****
ಜಲಾಧಿಪತಿಯಾದ ವರುಣ ಮತ್ತು ಪರ್ನಾಸ ಎಂಬ ನದಿ ದೇವತೆಯರ ಸಂತಾನವಾಗಿ ಒಂದು ಮಗು ಹುಟ್ಟಿತು. ತಾಯಿಯಾದ ಪರ್ನಾಸ ಶಿಶು ಜನಿಸಿದ ಸಂಭ್ರಮದಲ್ಲಿ ತಂದೆಯಾದ ವರುಣನಿಗೆ ಅವನಿಗೆ ಚಿರಂಜೀವಿಯಾಗಿರುವಂತೆ ಆಶೀರ್ವದಿಸಲು ಕೇಳಿದಳು. ಚಿರಂಜೀವಿ ಆಗು ಎನ್ನುವ ವರ ಕೊಡಲಾಗದಿದ್ದರಿಂದ ವರುಣನು ಒಂದು ಮಾಯಾ ಗದೆಯನ್ನು ಸೃಷ್ಟಿಸಿ ಮಗನಿಗೆ ಕೊಟ್ಟು "ಇವನು ಈ ಗದೆಯನ್ನು ಹಿಡಿದು ಯುದ್ಧ ಮಾಡುವಾಗ ಇವನು ಅಜೇಯನಾಗುತ್ತಾನೆ. ಅದರಿಂದ ಬಹಳ ದೀರ್ಘ ಕಾಲ ಬದುಕುತ್ತಾನೆ" ಎಂದು ಆಶೀರ್ವದಿಸಿದನು. ಗದೆ ಕೊಡುವಾಗ ಒಂದು ಎಚ್ಚರಿಕೆಯ ಮಾತನ್ನೂ ಹೇಳಿದನು. "ನಿರಾಯುಧನ ಮೇಲೆ  ಈ ಗದೆ ಪ್ರಯೋಗಿಸಬಾರದು. ಹಾಗೆ ಮಾಡಿದಲ್ಲಿ ಅದು ಹಿಂದಿರುಗಿ ಪ್ರಯೋಗಿಸಿದವನಿಗೆ ಹೊಡೆಯುತ್ತದೆ" ಎಂದನು. ತಾಯಿ ಕೇಳಿ ಆಯುಧ ಸಿಕ್ಕಿದ್ದರಿಂದ ಅವನಿಗೆ "ಶ್ರುತಾಯುಧ" ಎಂದು ಹೆಸರಾಯಿತು. 

ಪರ್ನಾಸ ಎಂಬ ನದಿಯ ಹೆಸರು ಅನೇಕ ಜನ ಕೇಳಿರಲಿಕ್ಕಿಲ್ಲ. ದಕ್ಷಿಣ ಅಮೆರಿಕೆಯಲ್ಲಿ ಅಮೆಜಾನ್ ನದಿಯ ನಂತರ ಅತಿದೊಡ್ಡ ನದಿಯೊಂದಿದೆ. ಅದಕ್ಕೆ ಸ್ಪ್ಯಾನಿಷ್ ಭಾಷೆಯಲ್ಲಿ ಈಗ Parana de Las Palmas ಎನ್ನುತ್ತಾರೆ. ಇದರ ಹಿಂದಿನ ಹೆಸರು ಪರ್ನಾಸ. ಬ್ರೆಜಿಲ್ ದೇಶದಲ್ಲಿ ಹುಟ್ಟಿ ಪೆರಗ್ವೆ ಮತ್ತು ಅರ್ಜೆಂಟೈನಾ ದೇಶಗಳಲ್ಲಿ  ಮೂರು ಸಾವಿರ ಮೈಲು ದೂರ ಹರಿಯುವ ಈ ನದಿ ಅಲ್ಲಿನ ಜನರ ಜೀವನಾಡಿಯಾಗಿದೆ. 

ಶ್ರುತಾಯುಧನು ಮಹಾವೀರನಾಗಿ ಬೆಳೆದನು. ಗದೆಯ ಪ್ರಭಾವದಿಂದ ಅಜೇಯನಾಗಿ ಕಳಿಂಗ ದೇಶದ (ಈಗಿನ ಒಡಿಷಾ ಪ್ರದೇಶ) ರಾಜನಾದನು. ದುಷ್ಟರ ಸಂಗ ಸೇರಿ ಕಡೆಗೆ ದುರ್ಯೋಧನನ ಮಿತ್ರನಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯ ಸೈನ್ಯದ ಮಹಾವೀರರಲ್ಲಿ ಒಬ್ಬನಾದನು. ಪಾಂಡವರ ವಿರುದ್ಧ ಹೋರಾಡಿದನು. 
*****  

ಕುರುಕ್ಷೇತ್ರ ಯುದ್ಧದ ಹದಿನಾಲ್ಕನೆಯ ದಿನ. ದ್ರೋಣಾಚಾರ್ಯರು ಕೌರವ ಸೈನ್ಯದ ಅಧಿಪತಿ, ಹಿಂದಿನ ದಿನ ಅಭಿಮನ್ಯುವಿನ ವಧೆಯಾಗಿತ್ತು. ಅರ್ಜುನನು ಮಹಾಕೊಪದಿಂದ ಜಯದ್ರಥನ ವಧೆಮಾಡುವ ಪ್ರತಿಜ್ಞೆ ಮಾಡಿ ಅವನನ್ನು ಅರಸುತ್ತಾ ಚಲಿಸುತ್ತಿದ್ದನು. ಶ್ರೀಕೃಷನು ಪಾರ್ಥಸಾರಥಿಯು. ಅರ್ಜುನನನ್ನು ತಡೆಯಲು ಬಂದ ಅನೇಕ ವೀರರಲ್ಲಿ ಶ್ರುತಾಯುಧನ ಸರದಿ ಬಂತು. ಶ್ರುತಾಯುಧನು ಒಳ್ಳೆಯ ಬಿಲ್ಲುಗಾರನೂ ಆಗಿದ್ದನು. ಅರ್ಜುನನು ಅವನೊಡನೆ ತೀಕ್ಷ್ಣವಾಗಿ ಹೋರಾಡಿ ಶ್ರುತಾಯುಧನ ಬಿಲ್ಲನ್ನು ತುಂಡಿರಿಸಿದನು. ಶ್ರುತಾಯುಧನಿಗೆ ಬಹಳ ಕೋಪ ಬಂದಿತು. 

ಇದೇ ಸಮಯಕ್ಕೆ ಸರಿಯಾಗಿ ಶ್ರೀಕೃಷ್ಣನು ಅರ್ಜುನನನ್ನು ಬೇಕೆಂತಲೇ ಇನ್ನಷ್ಟು ಹುರಿದುಂಬಿಸಿದನು. ಮೊದಲೇ ಕೋಪಗೊಂಡಿದ್ದ ಶ್ರುತಾಯುಧನು ಇನ್ನಷ್ಟು ಕೆರಳಿದನು. ಅವನ ಕೋಪ ಅರ್ಜುನನಿಂದ ಶ್ರೀಕೃಷ್ಣನ ಕಡೆ ಹೊರಳಿತು. ಹಿಂದೆ-ಮುಂದೆ ನೋಡದೆ ಶ್ರೀಕೃಷ್ಣನನ್ನು ಕೊಲ್ಲುವ ಸಲುವಾಗಿ ತನ್ನ ಮಾಯಾ ಗದೆಯನ್ನು ತೆಗೆದು ಶ್ರೀಕೃಷ್ಣನಿಗೆ ಗುರಿಯಿಟ್ಟು ಬಲವಾಗಿ ಪ್ರಯೋಗಿಸಿದನು. ಶ್ರೀಕೃಷ್ಣನೋ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರವನ್ನೇ ಹಿಡಿಯದ ಪ್ರತಿಜ್ಞೆ ಮಾಡಿದವನು. ನಿರಾಯುಧನು. ನಿರಾಯುಧನ ಮೇಲೆ ಪ್ರಯೋಗವಾದದ್ದರಿಂದ ಗದೆ ಶ್ರೀಕೃಷ್ಣ ಹತ್ತಿರ ಹೋಗಿ, ಏನೂ ಮಾಡಲಾಗದೆ, ಹಿಂದೆ ಬಂದು ಶ್ರುತಾಯುಧನಿಗೇ ಬಡಿಯಿತು. ಶ್ರುತಾಯುಧನು ತನ್ನ ಆಯುಧದಿಂದ ತಾನೇ ಸತ್ತನು. 

*****

ಭಕ್ತ ಕನಕದಾಸರು ತಮ್ಮ "ಹರಿಭಕ್ತಿಸಾರ" ಕೃತಿಯ 35ನೆಯ ಪದ್ಯದಲ್ಲಿ ಈ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ: 

ಬವರದಲಿ ಖತಿಗೊಂದು ಗದೆಯೊಳು
ಕವಿದು ನಿನ್ನ ಶ್ರುತಾಯುಧನು ಹೊ 
ಕ್ಕವಗಢಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ 
ವಿವರವೇನೋ ತಿಳಿಯೆ  ಈ 
ಮಾಯವನು ನೀನೇ ಬಲ್ಲೆ  ನಿನ್ನಾ 
ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ 

"ನಿನ್ನಾಯವನು ನೀನೇ ಬಲ್ಲೆ" ಎನ್ನುವಲ್ಲಿ "ಆಯ" ಎಂದರೆ ಪರಮಾತ್ಮನ ಗುಣ ವಿಸ್ತಾರಗಳು. (ಗಣಿತದಲ್ಲಿ "ಆಯ" ಅಂದರೆ ಉದ್ದxಅಗಲ, ಅಂದರೆ ಕ್ಷೇತ್ರಫಲ (ಏರಿಯಾ) ತಾನೇ?). ಪರಮಾತ್ಮನ ಗುಣ-ವಿಸ್ತಾರಗಳನ್ನು ಪೂರ್ತಿ ತಿಳಿದವನು ಅವನೊಬ್ಬನೇ. ಮತ್ತೆ ಇನ್ನೊಬ್ಬರು ಇಲ್ಲ ಎಂದು ಅರ್ಥ. 

ಎಲ್ಲವನ್ನೂ ಹೇಳಿದ ಮೇಲೆ "ವಿವರವೇನೋ ತಿಳಿಯೆ" ಎಂದು ಏಕೆ ಹೇಳಿದರು? ಅನೇಕ ವೇಳೆ ನಮಗಿಂತ ದೊಡ್ಡವರು ಅವರಿಗಿಂತ ದೊಡ್ಡವರ ಬಗ್ಗೆ ಹೇಳುವಾಗ "ಏನೋ ಅಪ್ಪ. ನನಗೆ ಗೊತ್ತಿರುವುದು ಇಷ್ಟು. ಇನ್ನೂ ಏನಿದೆಯೋ, ಅವರಿಗೇ ಗೊತ್ತು!" ಎಂದು ಹೇಳುವ ರೀತಿ! 

*****

ಭಗವಾನ್ ವೇದವ್ಯಾಸರ ಮಹಾಭಾರತದ ಹರವು ಎಷ್ಟು ವಿಸ್ತಾರ! ಎಷ್ಟೊಂದು ಪಾತ್ರಗಳು! ಎಲ್ಲಿಂದ ಎಲ್ಲಿಗೆ! ಯಾವ ಕಾಲದಿಂದ ಯಾವ ಕಾಲಕ್ಕೆ! ಎಲ್ಲೋ, ಎಂದೋ, ಹೇಗೋ ಹುಟ್ಟಿದವರೆಲ್ಲ ಕುರುಕ್ಷೇತ್ರದಲ್ಲಿ ಸೇರಿದರು. ಇಂದಿನ ಕೆಲವು ಕಾದಂಬರಿಗಳನ್ನು ಓದುವಾಗ ಅವುಗಳ ಪಾತ್ರ-ವಿನ್ಯಾಸಗಳನ್ನು ಕಂಡು ವಿಸ್ಮಯ ಪಡುವ ನಾವು ಮಹಾಭಾರತದ ಬಗ್ಗೆ ಏನು ಹೇಳುವುದು?