ಇಂದಿಗೆ ಸರಿಯಾಗಿ ನಲವತ್ತು ವರುಷಗಳ ಹಿಂದಿನ ಮಾತು. ಆಗ ಇಸವಿ 1985, ಜೂನ್ ತಿಂಗಳ ಮೊದಲ ಭಾಗ.
ಕನ್ನಡದ ಖ್ಯಾತ ಸಾಹಿತಿ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಪ್ರಸಿದ್ಧ ಬೃಹತ್ ಚಾರಿತ್ರಿಕ ಕಾದಂಬರಿ (2,200 ಪುಟಗಳ ವಿಸ್ತಾರ) "ಪಟ್ಟಮಹಾದೇವಿ ಶಾಂತಲದೇವಿ" ಕೃತಿಗೆ "ಭಾರತೀಯ ಜ್ಞಾನಪೀಠ" ಹೊಸದಾಗಿ ಸ್ಥಾಪಿಸಿದ್ದ "ಮೂರ್ತಿದೇವಿ ಸಾಹಿತ್ಯ ಪ್ರಶಸ್ತಿ" ಲಭಿಸಿತ್ತು. 1983ರಲ್ಲಿ ಪ್ರಾರಂಭಿಸಿದ ಈ ಪ್ರಶಸ್ತಿಯ ಮೊದಲ ಕೊಡುಗೆ ಕನ್ನಡಕ್ಕೆ ಸಂದಿತ್ತು. ಪ್ರಶಸ್ತಿ 1983ನೆಯ ವರುಷದ್ದಾದರೂ, ಅದನ್ನು ಘೋಷಿಸಿ, ನಂತರ ಸಮಾರಂಭ ನಡೆಸಿ, ಪ್ರಶಸ್ತಿ ಪ್ರದಾನ ನಡೆದುದು ಮೇ 12, 1985 ರಂದು, ನವದೆಹಲಿಯಲ್ಲಿ. ಅಂದಿನ ಭಾರತ ಕೇಂದ್ರ ಸರ್ಕಾರದ "ವಾರ್ತಾ ಮಾತು ಪ್ರಸಾರ" ಖಾತೆಯ ಮಂತ್ರಿಗಳಾಗಿದ್ದ ಶ್ರೀ ವಿ.ಏನ್. ಗಾಡ್ಗಿಲ್ ಅವರು ಆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು. ನಂತರದ ದಿನಗಳಲ್ಲಿ ಖ್ಯಾತ ಸಾಹಿತಿ ಮತ್ತು ಪ್ರಾಧ್ಯಾಪಕರಾಗಿದ್ದ ಪ್ರೊ. ಎಲ್. ಎಸ. ಶೇಷಗಿರಿ ರಾವ್ ಅವರು ಕನ್ನಡ ಪತ್ರಿಕೆಯೊಂದರಲ್ಲಿ "ಮೂರ್ತಿದೇವಿಯ ಪ್ರಥಮಾನುಗ್ರಹ" ಎನ್ನುವ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು.
ಭಾತತೀಯ ಉದ್ಯಮ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ-ಸಾಮಾಜಿಕ ದತ್ತಿ-ಪುದುವಟ್ಟುಗಳಲ್ಲಿ "ಸಾಹು ಜೈನ ಕುಟುಂಬ" ಒಂದು ದೊಡ್ಡ ಹೆಸರು. ಸಾಹು ಶ್ರೇಯಾಂಸ್ ಪ್ರಸಾದ್ ಜೈನ್ ಮತ್ತು ಸಾಹು ಶಾಂತಿ ಪ್ರಸಾದ್ ಜೈನ್ ಅಣ್ಣ-ತಮ್ಮಂದಿರು. ಶ್ರೇಯಾಂಸ್ ಪ್ರಸಾದ್ ಜೈನ್ ರಾಜ್ಯಸಭಾ ಸದಸ್ಯರಾಗಿದ್ದರು (1952-58) ಮತ್ತು ಕೆಲವು ಕಾಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿಯೂ ಇದ್ದರು (1953-54). ಶಾಂತಿ ಪ್ರಸಾದ್ ಜೈನ್ ಅವರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿದ್ದರು (1954-59). "ಟೈಮ್ಸ್ ಆಫ್ ಇಂಡಿಯಾ" ಸಮೂಹಕ್ಕೆ ಶಾಂತಿ ಪ್ರಸಾದ್ ಜೈನ್ ಒಡೆಯರಾಗಿದ್ದರು. ಇವರಿಬ್ಬರ ತಾಯಿಯವರ ಹೆಸರು "ಮೂರ್ತಿ ದೇವಿ" ಎಂದು. ತಮ್ಮ ತಾಯಿಯ ನೆನಪಾಗಿ ಶಾಂತಿ ಪ್ರಸಾದ್ ಜೈನ್ ಅವರು ತಮ್ಮ ಭಾರತೀಯ ಜ್ಞಾನಪೀಠ ಸಂಸ್ಥೆಯ ಮೂಲಕ "ಮೂರ್ತಿ ದೇವಿ ಸಾಹಿತ್ಯ ಪ್ರಶಸ್ತಿ" ಪ್ರಾರಂಭಿಸಿದರು. "ಮೂರ್ತಿ ದೇವಿ" ಅಂದರೆ ಜೈನ ಸಂಪ್ರದಾಯದಲ್ಲಿ ವಿಶೇಷವಾಗಿ ಆರಾಧಿಸುವ ಸರಸ್ವತಿ. ("ಮೂರ್ತಿ ದೇವಿ ಗ್ರಂಥಮಾಲಾ" ಎನ್ನುವ ಹೆಸರಿನಲ್ಲಿ ಅನೇಕ ಪುಸ್ತಕಗಳ ಪ್ರಕಟಣೆ ಕೂಡ ಉಂಟು). ಈ ಸರಸ್ವತಿಯ ಮೊದಲ ಅನುಗ್ರಹ ಸಿ. ಕೆ. ನಾಗರಾಜ ರಾಯರಿಗೆ ದೊರಕಿತು.
ಮೇಲೆ ಕೊಟ್ಟಿರುವ ಚಿತ್ರ ನಾಗರಾಜ ರಾಯರಿಗೆ ಆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿದ "ಪ್ರಶಸ್ತಿ ಮೂರ್ತಿ" ಛಾಯಾಚಿತ್ರ. ಇದರೊಂದಿಗೆ ಪಂಚಲೋಹದ "ಉಲ್ಲೇಖ" (Citation) ಸಹ ಇತ್ತು.
*****
ಅಂದು, ನಲವತ್ತು ವರುಷಗಳ ಹಿಂದೆ, ನಾಗರಾಜ ರಾಯರ ಬನಶಂಕರಿ ಮೂರನೆಯ ಹಂತದ ಮನೆಗೆ ಹೋದಾಗ ಅವರು ತಮ್ಮ ಮನೆಯ ಗ್ಯಾರೇಜ್ ಪುಸ್ತಕಾಲಯದ ಮೂಲೆಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದರು. ತಮ್ಮ ಬಾಲ್ಯದಿಂದಲೂ ಅವರು ಪ್ರತಿ ವರುಷ ಹೀಗೆ ತಾವೇ ಮಣ್ಣಿನ ಮೂರ್ತಿಗಳನ್ನು ಮಾಡಿ ಪೂಜಿಸುತ್ತಿದ್ದುದು ಅವರ ಮನೆಯಲ್ಲಿ ನಡೆದು ಬಂದ ಸಂಪ್ರದಾಯ. ಕೆಲವು ದಿನಗಳ ಹಿಂದೆ ಕಗ್ಗಲೀಪುರದ ಕೆರೆಯ ಅಂಗಳದಿಂದ ಮೂರ್ತಿಗಳ ತಯಾರಿಕೆಗಾಗಿ ಬೇಕಾದ ಮಣ್ಣು ತಂದಿದ್ದೆವು. ಸರಿಯಾದ ಮಣ್ಣಿನ ಮೂರ್ತಿಗಳನ್ನು ಮಾಡುವುದು ಕಡಬು-ಒಬ್ಬಟ್ಟು ಮಾಡುವುದಕ್ಕಿಂತ ಪ್ರಯಾಸದ ಕೆಲಸ! ಮೊದಲು ಮಣ್ಣು ಕುಟ್ಟಿ, ಹದಮಾಡಿ, ಜರಡಿ ಹಿಡಿದು ಸೋಸಬೇಕು. ನಂತರ ಹಿತಪ್ರಮಾಣದಲ್ಲಿ ನೀರು ಮತ್ತು ಹತ್ತಿ ಸೇರಿಸಿ ಸಂಸ್ಕರಿಸಬೇಕು. ಪೀಠ ಹುಡುಕಿ ಕ್ರಮೇಣ ಅದರ ಮೇಲೆ ಮಣ್ಣಿನ ಉಂಡೆಗಳಿಂದ ತಿದ್ದಿ ತಿದ್ದಿ ಆಕಾರ ಕೊಡಬೇಕು. ಒಮ್ಮೆಲೇ ಮಾಡಿ ಮುಗಿಸುವ ಹಾಗಿಲ್ಲ. ಹಾಗೆ ಮಾಡಿದರೆ ಬಿರುಕುಗಳು ಬಂದುಬಿಡುತ್ತವೆ. ನೆರಳಿನಲ್ಲಿ ಇಟ್ಟು ನಿಧಾನವಾಗಿ ಒಣಗಿಸುತ್ತಾ ಮುಂದುವರೆಸಬೇಕು. ಮುಂದೆ ಸೂಕ್ತವಾದ ಬಣ್ಣಗಳನ್ನು ಹಚ್ಚಬೇಕು. ಆಮೇಲೆ ಬಣ್ಣ-ಬಣ್ಣದ ವರ್ತಿ, ಲಕ್ಕಿ ಮುಂತಾದುವುಗಳಿಂದ ಅಲಂಕರಿಸಬೇಕು. ಹೀಗೆ, ಹಂತ ಹಂತವಾಗಿ ಮಾಡಬೇಕು.
ಗೌರಿಯ ಮೂರ್ತಿ ಮಾಡುವುದು ಹೆಚ್ಚು-ಕಡಿಮೆ ಮುಗಿದಿತ್ತು. ಕಿರೀಟ, ಒಲೆಗಳು, ಮೂಗುತಿ, ಮಾಂಗಲ್ಯ, ಸರಗಳು, ಬಳೆಗಳು, ತುರುಬಿನ ಕೂದಲ ಶೃಂಗಾರ, ಸೀರೆ, ರವಿಕೆ ಇವುಗಳ ಆಕಾರ ಮುಗಿದಿತ್ತು. ಮುಂದೆ ಕ್ರಮವಾಗಿ ಸೂಕ್ತವಾದ ಬಣ್ಣಗಳನ್ನು ಹಚ್ಚಿ ಸಿಂಗರಿಸುವುದು ಬಾಕಿ. ಗಣೇಶನ ಮೂರ್ತಿ ಇನ್ನೂ ಪ್ರಾರಂಭದ ಹಂತದಲ್ಲಿತ್ತು.
"ಗೌರಮ್ಮ ಚೆನ್ನಾಗಿದ್ದಾಳೆ. ಎದ್ದು ಬರುವಂತಿದ್ದಾಳೆ" ಎಂದೆ.
"ಹೌದು. ಈ ಸಲ ಹೊಸ ಫ್ಯಾಷನ್ನಿನ ಜರಿ ಸೀರೆ ಉಟ್ಟಿದ್ದಾಳೆ. ಬಣ್ಣ ಹಾಕಿದ ಮೇಲೆ ಗೊತ್ತಾಗುತ್ತದೆ" ಅಂದರು. ಮಾತು ಮುಂದುವರೆಯಿತು.
"ಮೂರ್ತಿದೇವಿಯ ಪ್ರಥಮಾನುಗ್ರಹ ಲೇಖನ ಓದಿದೆ. ಚೆನ್ನಾಗಿ ಬರೆದಿದ್ದಾರೆ"
"ಶೇಷಗಿರಿ ರಾಯರಿಗೆ ನನ್ನ ಕಾದಂಬರಿ ರಚನೆಯ ವಿವರಗಳೆಲ್ಲ ಗೊತ್ತು. ಅದರ ರಚನೆಯ ಹಿಂದಿನ ಶ್ರಮ ತಿಳಿದವರು ಅವರು. ಸಹೃದಯರು. ಪುಸ್ತಕದ ಮೇಲಿನ ವಿಚಾರ ಸಂಕಿರಣ ಸಮಾರಂಭಗಳಲ್ಲಿ ಭಾಷಣ ಮಾಡಿರುವವರು. ಅಭಿಮಾನದಿಂದ ಬರೆದಿದ್ದಾರೆ"
"ಅನುಗ್ರಹ" ಅನ್ನುವ ಪದದ ಬಳಕೆ, ಈ ಹಿನ್ನೆಲೆಯಲ್ಲಿ ಸರಸ್ವತಿಯ ಅನುಗ್ರಹದ ಸಂಕೇತವೋ?"
"ಹಾಗೆ ಅಂದುಕೊಳ್ಳಬಹುದು. ಸರಸ್ವತಿ ಅನುಗ್ರಹ ಸಿಕ್ಕಿತು. ಹಿಂದೊಮ್ಮೆ ತಾಯಿ ಶಾರದೆಯ ಅನುಗ್ರಹ ಸ್ವಲ್ಪದರಲ್ಲಿ ತಪ್ಪಿತ್ತು. ಈಗ ಸರಸ್ವತಿಯ ರೂಪದಲ್ಲಿ ಬಂದಿದೆ ಅನ್ನಬಹುದು"
"ಹಿಂದೆ ಹೇಗೆ ತಪ್ಪಿತು? ಅದರ ವಿವರವೇನು?'
ನಾಗರಾಜರಾಯರು ತಮ್ಮ ಜೀವನದ (ಅಂದಿಗೆ) ಮೂವತ್ತು ವರುಷಗಳ ಹಿಂದಿನ ಪ್ರಸಂಗವನ್ನು ವಿವರಿಸಿದರು. ಅವರದೇ ಮಾತಿನಲ್ಲಿ ವಿವರಣೆ ಹೀಗಿತ್ತು.
*****
"ನನಗೂ ಬೇಲೂರು-ಹಳೇಬೀಡಿಗೂ ಒಂದು ವಿಶೇಷ ಸಂಬಂಧ. ಬೇಲೂರು-ಹಳೇಬೀಡು ದೇವಾಲಯಗಳನ್ನು ಹಿಂದೆ ನೋಡಿದ್ದರೂ ಹೆಚ್ಚಿನ ಗಮನ ಹರಿಸಿದ್ದು ಮಾನ್ಯ ಡಿ. ವಿ. ಗುಂಡಪ್ಪ ಅವರ "ಅಂತಃಪುರ ಗೀತೆಗಳು" ಪ್ರಕಟಣೆಯ ಸಂದರ್ಭದಲ್ಲಿ. ಆ ಪುಸ್ತಕ ಅಚ್ಚಾಗುವಾಗ ಅದರಲ್ಲಿ ಸಂಬಂಧಿಸಿದ ಶಿಲಾಬಾಲಿಕೆಯರ ಪಡಿಯಚ್ಚು (ಫೋಟೋ) ಹಾಕಬೇಕಿತ್ತು. ಫೋಟೋಗ್ರಫಿಯಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದ ವಿಷಯ ತಿಳಿದಿದ್ದ ಗುಂಡಪ್ಪನವರು ನನಗೆ ಆ ಕೆಲಸ ವಹಿಸಿದರು. ಆಗ ಎರಡು ಮೂರು ದಿನ ಬೇಲೂರಿನಲ್ಲೇ ವಾಸ್ತವ್ಯ ಹೂಡಿ ಚಿತ್ರಗಳನ್ನು ಬೇರೆ ಬೇರೆ ಕೋಣಗಳಿಂದ ತೆಗೆಯಬೇಕಾಯಿತು. ನಂತರ ನನಗೆ "ಕನ್ನಡ ಸಾಹಿತ್ಯ ಪರಿಷತ್ತು" ಗೌರವ ಕಾರ್ಯದರ್ಶಿ ಆಗಿ ಕೆಲಸ ಮಾಡುವ ಸುಯೋಗ ಕೊಟ್ಟಿತು. ಹಾಸನ-ಚಿಕ್ಕಮಗಳೂರುಗಳಲ್ಲಿ "ಕರ್ನಾಟಕ ಸಂಘ" ಅಷ್ಟು ಕಾರ್ಯಶೀಲವಾಗಿರಲಿಲ್ಲ. ಈ ಕೆಲಸ ನಿಮಿತ್ತವಾಗಿ ಅನೇಕ ಸಲ ಬೇಲೂರು ಸುತ್ತಮುತ್ತ ಓಡಾಡಬೇಕಾಯಿತು. ನಾನು ಗೌರವ ಕಾರ್ಯದರ್ಶಿಯಾದ ಎರಡು-ಮೂರು ವರ್ಷಗಳಲ್ಲಿ, 1952 ಇಸವಿಯಲ್ಲಿ "ಕನ್ನಡ ಸಾಹಿತ್ಯ ಸಮ್ಮೇಳನ" ಬೇಲೂರಿನಲ್ಲಿ ನಡೆಯಿತು. ಆಗಂತೂ ಕೆಲವು ದಿನ ಬೇಲೂರಿನಲ್ಲೇ ಇದ್ದು ಕೆಲಸ ಮಾಡಬೇಕಾಗಿತ್ತು."
"ಶೃಂಗೇರಿ ನಮ್ಮ ನಾಡಿನ ಹೆಮ್ಮೆಯ ಧಾರ್ಮಿಕ-ಶೈಕ್ಷಣಿಕ-ಸಾಂಸ್ಕೃತಿಕ ಕೇಂದ್ರ. ಆಗ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಪೀಠಾಧಿಪತಿಗಳು. ಅವರು ಮಹಾತಪಸ್ವಿಗಳು ಮತ್ತು ಶಿಷ್ಯವತ್ಸಲರು ಎಂದು ಗುರುತಿಸಲ್ಪಟ್ಟವರು. ಹೀಗೆ ಬೇಲೂರು-ಚಿಕ್ಕಮಗಳೂರು ಸುತ್ತಮುತ್ತ ಓಡಾಡುವಾಗ ಸಾಧ್ಯವಾದಾಗಲೆಲ್ಲ ಅವರ ಸಂದರ್ಶನ ಪಡೆಯುವ ಅವಕಾಶವಿತ್ತು. 1912ರಲ್ಲಿ ಪೀಠಾರೋಹಣ ಮಾಡಿದ ಅವರು ಮುಂದಿನ 42 ವರ್ಷಕಾಲ ಪೀಠವನ್ನು ನಡೆಸಿದವರು."
"1954ನೆಯ ಇಸವಿ ಆಗಸ್ಟ್ ತಿಂಗಳ ಕೊನೆಯ ದಿನ ಹೀಗೆ ಶೃಂಗೇರಿ ತಲುಪಿದಾಗ ರಾತ್ರಿಯಾಗಿತ್ತು. ಜೊತೆಯಲ್ಲಿ ಸ್ನೇಹಿತರಿದ್ದರು. ಮಾರನೆಯ ಬೆಳಿಗ್ಗೆ ಬೇಗ ಶಾರದಾ-ಚಂದ್ರಮೌಳೇಶ್ವರರ ದರ್ಶನ ಮಾಡಿದ ನಂತರ ಶ್ರೀಗಳ ಸಂದರ್ಶನ ಸಿಕ್ಕಿತು. ಹೊರಡಲು ಅನುಮತಿ ಬೇಡಿದಾಗ "ಏನು ಆತುರ? ಮಧ್ಯಾನ್ಹದವರೆಗೆ ಇದ್ದು ಪೂಜೆಯ ನಂತರ ಪ್ರಸಾದ ಸ್ವೀಕರಿಸಿ ಹೊರಡಬಹುದಲ್ಲ" ಅಂದರು. "ಇಲ್ಲ. ಬೆಳಗಾದರೆ ಗೌರಿ-ಗಣೇಶ ಹಬ್ಬಗಳು. ಮನೆಗೆ ಹೊರಊರುಗಳಿಂದ ಅತಿಥಿಗಳು ಬರುವವರಿದ್ದಾರೆ. ಸಂಜೆಯೊಳಗೆ ಬೆಂಗಳೂರು ಸೇರಬೇಕು. ನವರಾತ್ರಿ ಉತ್ಸವ ಸಂದರ್ಭದಲ್ಲಿ ಮತ್ತೆ ದರ್ಶನ ಪಡೆಯುತ್ತೇವೆ" ಎಂದೆವು. "ನವರಾತ್ರಿ ಉತ್ಸವಕ್ಕೆ ಬರುವುದೇನೋ ಒಳ್ಳೆಯದೇ. ಅಮಾವಾಸ್ಯೆಗೆ ಮುಂಚೆ ಬರುತ್ತೀರೋ ಅಥವಾ ಆಚೆಗೂ?' ಅಂದರು. "ಆದಷ್ಟೂ ಬೇಗ ತಮ್ಮ ದರ್ಶನ ಪಡೆಯುತ್ತೇವೆ" ಎಂದೆವು. ನಸುನಕ್ಕು ಫಲಗಳನ್ನು ಕೊಟ್ಟು ಆಶೀರ್ವದಿಸಿದರು."
"ಸೆಪ್ಟೆಂಬರ್ 25ನೆಯ ತಾರೀಖು ಭಾನುವಾರ. ತುಂಗೆಯು ತುಂಬಿ ಹರಿಯುತ್ತಿದ್ದಳು. ಶ್ರೀಗಳು ಶಿಷ್ಯನ ಜೊತೆ ಬೆಳಿಗ್ಗೆ ನದಿಸ್ನಾನಕ್ಕೆ ಹೊರಟರಂತೆ. ನದಿಯ ಮಧ್ಯೆ ನಡೆದ ಶ್ರೀಗಳು ಒಮ್ಮೆ ಮುಳುಗು ಹಾಕಿ ಮತ್ತೊಮ್ಮೆ ನೀರಿನಲ್ಲಿ ಹೋದವರು ಮೇಲೆ ಬರಲಿಲ್ಲ. ಶಿಷ್ಯನೂ ಅವರನ್ನು ಹುಡುಕುತ್ತ ಮುಳುಗು ಹಾಕಿದನು. ಇದನ್ನು ನೋಡಿದ ಮತ್ಯಾರೋ ನದಿಗೆ ಧುಮಿಕಿದರು. ಸ್ವಲ್ಪ ಕೆಳಗೆ ಶ್ರೀಗಳ ದೇಹ ಸಿಕ್ಕಿತು. ಪದ್ಮಾಸನ ಹಾಕಿ ಧ್ಯಾನಮುದ್ರೆಯಲ್ಲಿದ್ದ ಶರೀರ. ನೀರಲ್ಲಿ ಮುಳುಗಿದಂತೆ, ನೀರು ಕುಡಿದು ದೇಹತ್ಯಾಗವಾಗಿರಲಿಲ್ಲ. ನೀರಿಂದ ಹೊರಬರಲು ಪ್ರಯಾಸ ಇರಲಿಲ್ಲ. ಯಾವ ಹೊಡೆದಾಟವೂ ಇಲ್ಲ. ಧ್ಯಾನಮಗ್ನರಾಗಿ ಸ್ವಇಚ್ಛೆಯಿಂದ ಜೀವನ್ಮುಕ್ತಿ ಪಡೆದಂತೆ ಇತ್ತಂತೆ."
"ಅಮಾವಾಸ್ಯೆಗೆ ಮೊದಲು ಶೃಂಗೇರಿಗೆ ಹೋಗಿದ್ದರೆ ಅವರ ಸಾನ್ನಿಧ್ಯದಲ್ಲಿ ಶಾರದೆಯ ಅನುಗ್ರಹ ಸಿಗುತ್ತಿತ್ತು. ಸ್ವಲ್ಪದರಲ್ಲಿ ತಪ್ಪಿಹೋಯಿತು."
"ಶ್ರೀಗಳವರಿಗೆ ಭಾನುವಾರ ಬಹಳ ವಿಶೇಷವಂತೆ. ಭಾನುವಾರ ಜನನ. ಭಾನುವಾರ ಉಪನಯನ. ಭಾನುವಾರ ಸನ್ಯಾಸ ಸ್ವೀಕಾರ. ಮಹಾಲಯ ಅಮಾವಾಸ್ಯೆಯಂದು (ನವರಾತ್ರಿ ಉತ್ಸವ ಪ್ರರಂಭದ ಹಿಂದಿನ ದಿನ) ಭಾನುವಾರವೇ ಜೀವನ್ಮುಕ್ತಿ."
*****
"ದೊಡ್ಡವರು ಕೆಲವೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ನಾವು ಅದನ್ನು ತಿಳಿದುಕೊಂಡು ವ್ಯವಹರಿಸಬೇಕು." ಎಂದು ಅಂದು ನಾಗರಾಜರಾಯರು ಹೇಳಿದ ಮಾತು ಅನೇಕ ವೇಳೆ ನಮ್ಮಗಳ ಜೀವನದ ಅನುಭವದಲ್ಲಿ ಬಂದಿರುತ್ತದೆ. ಆದರೆ ಬಹಳ ಬೇಗ ಅದರ ಪ್ರಾಮುಖ್ಯತೆ ಮರೆತೂ ಹೋಗುತ್ತದೆ!