Showing posts with label kaala. Show all posts
Showing posts with label kaala. Show all posts

Wednesday, November 22, 2023

ವ್ಯಾಪ್ತೋಪಾಸನೆ

ಮನುಷ್ಯನ ಜ್ಞಾನ ಪ್ರಾಪ್ತಿ ಮತ್ತು ಸುತ್ತಮುತ್ತಲಿನ ವಸ್ತುಗಳ ಅನುಭವ ಪಡೆಯುವುದು ಐದು ಜ್ಞಾನೇಂದ್ರಿಯಗಳಿಂದ. ಕಣ್ಣಿನಿಂದ ನೋಡುವುದು, ಕಿವಿಯಿಂದ ಕೇಳುವುದು, ಮೂಗಿನಿಂದ ವಾಸನೆ ಇತ್ಯಾದಿ ಗ್ರಹಿಸುವುದು, ನಾಲಿಗೆಯಿಂದ ರುಚಿ ನೋಡುವುದು ಮತ್ತು ಚರ್ಮದಿಂದ ಸ್ಪರ್ಶ ಮಾಡುವುದು. ಇವುಗಳ ಚೌಕಟ್ಟಿನಲ್ಲೇ ನಮ್ಮ ಎಲ್ಲ ವ್ಯಾಪಾರಗಳೂ ನಡೆಯುವುದು. ಬುದ್ಧಿ ಇವುಗಳ ಹೊರಗಡೆಯೂ ಯೋಚಿಸಬಹುದು. ಮನಸ್ಸು ಎಲ್ಲೆಂದರಲ್ಲಿ ಹರಿದಾಡಬಹುದು. ಆದರೆ ಈ ಐದು ಇಂದ್ರಿಯಗಳ ಯೋಗ್ಯತೆಗಿಂತ ದೊಡ್ಡದಾದ ಪದಾರ್ಥವನ್ನು ಅಥವಾ ವಿಷಯವನ್ನು ತಿಳಿಯುವುದು ಕಷ್ಟ. ದೃಷ್ಟಿ ಹೋಗುವವರೆಗೂ ನೋಡಬಹುದು. ಒಂದು ಅಳತೆಯ ದೂರದವರೆಗಿನ ಶಬ್ದ ಕೇಳಬಹುದು. ಅದರಿಂದ ಹೊರಗಿನ ಪದಾರ್ಥಗಳ ಜ್ಞಾನ ಹೇಗೆ? ಅತೀಂದ್ರಿಯವಾದುದನ್ನು (ಇಂದ್ರಿಯಗಳ ವ್ಯಾಪ್ತಿಯ ಅಥವಾ ಯೋಗ್ಯತೆಯ ಹೊರಗಿನದು) ತಿಳಿಯುವುದು ಹೇಗೆ?

ಅತಿ ಸೂಕ್ಷ್ಮವಾದುದನ್ನು ನೋಡಲು ನಾವು "ಸೂಕ್ಷ್ಮದರ್ಶಕ" (ಮೈಕ್ರೋಸ್ಕೋಪ್) ಬಳಸುತ್ತೇವೆ. ಅತಿ ದೂರದಲ್ಲಿ ಇರುವ ವಸ್ತುಗಳನ್ನು ನೋಡಲು "ದೂರದರ್ಶಕ" (ಟೆಲಿಸ್ಕೋಪ್) ಉಪಯೋಗಿಸುತ್ತೇವೆ. ಇವುಗಳ ಪ್ರಯೋಜನ ಪಡೆದರೂ ಈ ಸಾಧನಗಳ ಶಕ್ತಿಗೂ ಒಂದು ಮಿತಿ ಇದೆ. ನಮ್ಮಲ್ಲಿರುವ ಅತ್ಯಂತ ಶಕ್ತಿಯುತ ಸೂಕ್ಷ್ಮದರ್ಶಕದ ಶಕ್ತಿಯನ್ನೂ ದಾಟಿದ ಅತಿ ಸೂಕ್ಷ್ಮ  ವಸ್ತುಗಳು ಸೃಷ್ಟಿಯ ರಹಸ್ಯದಲ್ಲಿ ಅಡಗಿವೆ. ಒಂದು ಕಾಲದಲ್ಲಿ "ಅಣು" ಅತಿ ಚಿಕ್ಕ ವಸ್ತು ಎಂದು ನಂಬಲಾಗಿತ್ತು. ವಿಜ್ನ್ಯಾನಿಗಳು ಅಣುವನ್ನೂ ಭೇದಿಸಿದರು. ಪರಮಾಣು ಬಂದಿತು. ಪರಮಾಣುವನ್ನೂ ಮೀರಿದ ಸೂಕ್ಷ್ಮ ಕಣಗಳು ಇವೆ ಎಂದಾಯಿತು. ಎಷ್ಟು ಶಕ್ತಿಯುತ ದೂರದರ್ಶಕವಾದರೂ ಇನ್ನೂ ನಮ್ಮ "ಹಾಲುಹಾದಿ" (Milkyway) ನಕ್ಷತ್ರಪುಂಜದ (ಗ್ಯಾಲಕ್ಸಿ) ಒಂದು ಭಾಗವನ್ನು ಮಾತ್ರ ತೋರಿಸಲು ಶಕ್ತವಾಗಿವೆ. ನಮ್ಮ ನಕ್ಷತ್ರಪುಂಜಕ್ಕಿಂತಲೂ ದೊಡ್ಡವಾದ ಅನೇಕ ಪುಂಜಗಳು ವಿಶ್ವದಲ್ಲಿ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ನಾವು ತಿಳಿದಿರುವ ಅತಿಸೂಕ್ಷ್ಮ ಪದಾರ್ಥಕ್ಕಿಂತಲೂ ಸೂಕ್ಷ್ಮವಾದದ್ದು ಇದೆ ಎಂದಾಯಿತು. ಅಂತೆಯೇ, ನಾವು ಕಂಡಿರುವ ಅತಿದೊಡ್ಡ ದೃಶ್ಯಕ್ಕಿಂತಲೂ ಅನೇಕ ಪಾಲು ದೊಡ್ಡದಾದ ವಿಶ್ವವಿದೆ ಎಂದೂ ತಿಳಿಯಿತು. ಒಟ್ಟಿನಲ್ಲಿ ಈ ಕಡೆಯೂ ಅನಂತ, ಆ ಕಡೆಯೂ ಅನಂತ. ಇಂತಹ ವಿರಾಟ್ ವಿಶ್ವದ ಯಾವುದೋ ಒಂದು ಕ್ಸುದ್ರ ಕಣದಲ್ಲಿ ಮನುಷ್ಯನಿದ್ದಾನೆ. ಅನಂತ ವಿಶ್ವ ಅವನನ್ನು ಎಲ್ಲ ಕಡೆಯಿಂದಲೂ ವ್ಯಾಪಿಸಿದೆ. ಇಷ್ಟು ಮಾತ್ರವಲ್ಲ. ಮನುಷ್ಯನ ಒಳಗೂ ಅನಂತ ಕಣಗಳಿವೆ. ಮನುಷ್ಯನ ದೇಹದಲ್ಲಿ ಇಷ್ಟೆಲ್ಲಾ ಇದೆಯೇ ಎಂದು ಆಶ್ಚರ್ಯ ಪಡುವಷ್ಟು ಉಂಟು!

ಚಿಂತಿಸಲೂ ಅಗಾಧ.  

*****

ಮಹಾಭಾರತದ ಅತಿ ಮುಖ್ಯ ದೃಶ್ಯವೊಂದನ್ನು ನೆನಪಿಗೆ ತರೋಣ. ಎರಡು ಸೈನ್ಯಗಳ, ಹದಿನೆಂಟು ಅಕ್ಷೋಹಿಣಿಗಳ ವಿಶಾಲ ಹಿನ್ನೆಲೆಯ ಮಧ್ಯದಲ್ಲಿ ಪಾರ್ಥ ಮತ್ತು ಪಾರ್ಥಸಾರಥಿ ರಥದಲ್ಲಿ ಕುಳಿತಿದ್ದಾರೆ. ವಿಜಯನಿಗೆ ಜಯಿಸಲಾಗದ ಮೋಹ ಆವರಿಸಿದೆ. ತನ್ನ ಇಡೀ ಜೀವಮಾನ ಕಾಯುತ್ತಿದ್ದ ಯುದ್ಧ ಎದುರು ನಿಂತಿದ್ದರೂ ರಥದಿಂದ ಕೆಳಗಿಳಿದು ಗಾಂಡೀವ ಬಿಸಾಡಿದ್ದಾನೆ. ಯುದ್ಧ ಒಲ್ಲೆ ಎನ್ನುತ್ತಾನೆ. ವಿಚಿತ್ರವಾದ ತರ್ಕದಿಂದ ವಾದಿಸುತ್ತಾನೆ. "ಸ್ತ್ರೀಷು ದುಷ್ಟೇಷು ವಾರ್ಷ್ಣೇಯ ಜಾಯತೇ ವರ್ಣ ಸಂಕರಃ" ಎನ್ನುತ್ತಾನೆ. ಯುದ್ಧದಿಂದ ಸಮಾಜ ಹಾಳಾಗುತ್ತದೆ ಎನ್ನುವ ಸತ್ಯ ಹೇಳಿದರೂ, ಸಮಾಜವನ್ನು ಮತ್ತಷ್ಟು ಹಾಳುಮಾಡುವ ದುಷ್ಟರನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾನೆ. ಭಿಕ್ಷೆ ಬೇಡಿ ತಿರಿದುಣ್ಣಲೂ  ತಯಾರಾಗಿದ್ದಾನೆ. 

ಇಂಥ ಶಿಷ್ಯನನ್ನು ಇಟ್ಟುಕೊಂಡು ಶ್ರೀಕೃಷ್ಣ ಏನು ಮಾಡಬೇಕು? ಅರ್ಜುನನ್ನು ನೆಪವಾಗಿಟ್ಟುಕೊಂಡು "ಗೀತೋಪದೇಶ" ಮಾಡುತ್ತಾನೆ. ತನ್ನ ವಿರಾಟ್ ಸ್ವರೂಪವನ್ನೂ ತೋರಿಸುತ್ತಾನೆ. "ನಿನ್ನ ಈ ಕಣ್ಣುಗಳು ನನ್ನ ಆ ವಿಶ್ವರೂಪವನ್ನು ನೋಡಲಾರವು. ಅದಕ್ಕಾಗಿ ನಿನಗೆ ದಿವ್ಯ ದೃಷ್ಟಿ ಕೊಡುತ್ತೇನೆ" ಎನ್ನುತ್ತಾನೆ. ಕೊಡುತ್ತಾನೆ. ಅರ್ಜುನ ನೋಡುತ್ತಾನೆ. ದಿವ್ಯ ದೃಷ್ಟಿ ಇದ್ದರೂ ಪೂರ್ತಿ ನೋಡಲಾರ. ಕ್ಷಣಕ್ಕಿಂತ ಹೆಚ್ಚು ಕಾಲ ದಿಟ್ಟಿಸಲಾರ. "ನನ್ನ ಅಂಗಾಂಗಗಳು ಸುಡುತ್ತಿವೆ. ಸೀದಂತಿ ಮಮ ಗಾತ್ರಾಣಿ" ಎಂದು ಕೂಗುತ್ತಾನೆ. ಈ ವಿರಾಟ್ ರೂಪವನ್ನು ಮರೆ ಮಾಡು. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚುತ್ತಾನೆ! 

ವಿರಾಟಪುರುಷನೇ ಕೃಪೆಮಾಡಿ ವಿಶೇಷ ದೃಷ್ಟಿ ಕೊಟ್ಟು ತೋರಿಸಿದ ಆ ರೂಪವನ್ನು ಅರ್ಜುನನಂತಹವನೇ ನೋಡಲಾಗಲಿಲ್ಲ. ಸದಾ ಕೇಶವನ ಹಿಂದೆ-ಮುಂದೆ ಓಡಾಡಿಕೊಂಡಿದ್ದವನು. ಮಾಧವನ ಅನೇಕ ಮುಖಗಳನ್ನು ಕಣ್ಣಾರೆ ಕಂಡವನು. ಯೋಗ್ಯ ಜೀವರಲ್ಲಿ ಅತಿ ಯೋಗ್ಯನು. ಮುಕುಂದನಿಂದಲೇ ತರಬೇತಿ ಪಡೆದವನು. ಇಷ್ಟೆಲ್ಲಾ ಸಿದ್ಧತೆ,  ಯೋಗ್ಯತೆ ಇದ್ದರೂ ಅವನಿಂದಲೇ ಆ ರೂಪವನ್ನು ನೋಡಲಾಗಲಿಲ್ಲ. 

ನಾವೇನು ಕಂಡೇವು?

*****

ನಾವು ಬಹಳ ಕಷ್ಟ ಪಟ್ಟು ಒಂದು ಮನೆ ಕಟ್ಟುತ್ತೇವೆ. ಎಷ್ಟು ವಿಶಾಲವಾಗಿ ಕಟ್ಟಿದರೂ ಕಡೆಗೆ ನಮ್ಮ ಇಷ್ಟಕ್ಕಿಂತಲೂ ಚಿಕ್ಕದೇ. ಅದರೊಳಗೆ ಸೇರುತ್ತೇವೆ. ಸಾರ್ಥಕ ಭಾವ ಬರುತ್ತದೆ. ಮನೆಯ ಒಳಗೆ ನಾವು ಇದ್ದರೆ ಹೊರಗಿಲ್ಲ. ಹೊರಗೆ ಇದ್ದರೆ ಮನೆಯ ಒಳಗಿಲ್ಲ. ಸ್ವಲ್ಪ ಕಾಲದ ನಂತರ ಒಳಗೂ ಇಲ್ಲ; ಹೊರಗೂ ಇಲ್ಲ. ಮತ್ತೆ ಸ್ವಲ್ಪ ದಿನದ ನಂತರ ಇದ್ದೆವು ಅನ್ನುವ ನೆನಪೂ ಬೇರೆಯವರಿಗೆ ಇಲ್ಲ. ನಾವಂತೂ ಎಂದೋ ಇಲ್ಲವಾದೆವು. 

"ವಿಷ್ಣು ಸಹಸ್ರನಾಮ"ದ ಪ್ರತಿಯೊಂದು ಹೆಸರಿಗೂ ನೂರು ಅರ್ಥಗಳಿವೆ ಎಂದು ಹೇಳುತ್ತಾರೆ. "ಗೋವಿಂದ" ಎನ್ನುವ ಪದಕ್ಕೂ ಅನೇಕ ಅರ್ಥಗಳಿವೆ. ಮಹಾಪ್ರಳಯದ ನಂತರ ವಿಶಾಲ ವಿಶ್ವವನ್ನು ಹೊರಗೆ ನಿಂತು ಸೃಷ್ಟಿ ಮಾಡಿದನು ಆ ವಿರಾಟ್ ಪುರುಷ. ಅಷ್ಟೇ ಅಲ್ಲ. ಸೃಷ್ಟಿ ಮಾಡಿದ ನಂತರ ಅದರ ಒಳಗೆ ಪ್ರವೇಶ ಮಾಡಿದನು. ಒಳಗೆ ಆವರಿಸಿದನು. ಆದರೆ ಹೊರಗೂ ಉಳಿದನು. "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ" ಅನ್ನುತ್ತದೆ ಮಹಾನಾರಾಯಣೋಪನಿಷತ್.  ಹಿಂದೆ ಮಾತ್ರ ಅಲ್ಲ. ಇಂದಷ್ಟೇ ಅಲ್ಲ. ಮುಂದೆಯೂ ಉಂಟು. ಅನಂತ ಕಾಲದಿಂದ ಅನಂತ ಕಾಲದವರೆಗೂ ಅನಂತವಾಗಿದ್ದಾನೆ. ಎಲ್ಲವನ್ನೂ ಅವರಿಸಿದ್ದಾನೆ. ಚಿಕ್ಕದರ ಒಳಗೆ ಅದಕ್ಕಿಂತ ಚಿಕ್ಕದಾಗಿದ್ದಾನೆ. ದೊಡ್ಡದರ ಹೊರಗೆ ಅದಕ್ಕಿಂತ ದೊಡ್ಡದಾಗಿದ್ದಾನೆ. 

ಇದರ ತಿಳುವಳಿಕೆ ನಮ್ಮ ಜ್ನ್ಯಾನದ ಪರಿಧಿ ಮೀರಿದ್ದು. ತಾನೇ ಸೃಷ್ಟಿಸಿದ ಜಗತ್ತಿನ ಒಳಗೆ ತಾನೇ ಪ್ರವೇಶ ಮಾಡಿ ಅದರ ಹೊರಗೂ ಉಳಿದಿದ್ದರಿಂದ ಅವನು "ಗೋವಿಂದ". 

ಇದನ್ನು ತಿಳಿಯಲಾಗದೇ ನಾವು ಗೋವಿಂದ!

*****

"ಕಾಲಾಯ ತಸ್ಮೈ ನಮಃ" ಎನ್ನುವುದು ಎಲ್ಲರೂ ಹೇಳುವ ಮಾತು. ಕಾಲವು ಎಲ್ಲವನ್ನೂ ಬದಲಿಸುತ್ತದೆ. ಕಾಲವು ಎಲ್ಲವನ್ನೂ ನುಂಗುತ್ತದೆ. ಕಾಲವೇ ಕೊನೆಗೆ ಉಳಿಯುವುದು. ಎಲ್ಲರ ಕಾಲ ಕಳೆದ ಮೇಲೂ. ಅಂದರೆ ಆ ಪರಮಾತ್ಮನ ಕಥೆ ಏನು? ಅವನಿಗೂ ಒಂದು ಕಾಲವಿಲ್ಲವೇ? ಅವನು ಕಾಲವಾಗುವುದಿಲ್ಲವೇ? ಇದೊಂದು ದೊಡ್ಡ ಪ್ರಶ್ನೆ. 

ಮಹಾ ವಿದ್ವಾಂಸರಾದ ಶ್ರೀನಿವಾಸಾಚಾರ್ಯರು, ಮುಂದೆ ಜಗನ್ನಾಥ ದಾಸರೆಂದು ಪ್ರಸಿದ್ಧರಾದವರು, ಇದಕ್ಕೆ ಉತ್ತರ ಕೊಡುತ್ತಾರೆ:

ಕಾಲಾಂತರ್ಗತ ಕಾಲನಿಯಾಮಕ ಕಾಲಾತೀತ ತ್ರಿಕಾಲಜ್ಞ 

ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ 

ಕಾಲರೂಪ ತವ ದಾಸೋಹಂ ತವ ದಾಸೋಹಂ 

ವಾಸುದೇವ ವಿಘತಾಘಸಂಘ ತವ ದಾಸೋಹಂ ತವ ದಾಸೋಹಂ 

ಕಾಲವನ್ನು ಸೃಷ್ಟಿಸಿ, ಕಾಲದಲ್ಲಿದ್ದು, ಕಾಲವನ್ನು ಹಿಡಿತದಲ್ಲಿಟ್ಟು ಎಲ್ಲ ಕಾಲವನ್ನೂ ತಿಳಿದು, ಕಾಲದ ವ್ಯಾಪ್ತಿಯನ್ನೂ ದಾಟಿ ಕಾಲದ ಪರಮ ಸ್ವರೂಪನಾದವನೇ ಆ ವಿರಾಟ್ ಪುರುಷ. 

ನಮ್ಮ ಸೀಮಿತ ಕಾಲದಲ್ಲಿ ಅವನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ.  ಹಾಗೆಂದು ಬಿಟ್ಟೀ ಬಿಡೋಣವೇ? ಕೂಡದು. ನೂರಕ್ಕೆ ನೂರು ಅಂಕ ಸಿಗುವುದಿಲ್ಲ ಎಂದು ಪರೀಕ್ಷೆಯೇ ಬರೆಯದಿದ್ದರೆ ಹೇಗೆ? 

ಪರೀಕ್ಷೆ ಬರೆಯಲೇ ಬೇಕು. ಪ್ರಯತ್ನ ಪಡಲೇಬೇಕು. 

***** 

ದೇಶಾತೀತ, ಕಾಲಾತೀತನಾದ, ಸರ್ವವ್ಯಾಪ್ತನಾದ, ಸರ್ವಶಕ್ತನಾದ ಆ ವಿರಾಟ್ರೂಪಿ ಪರಮಾತ್ಮನನ್ನು ಹೇಗೆ ಆರಾಧಿಸುವುದು? ಅವನ ವ್ಯಾಪ್ತಿ ನಮ್ಮ ಕಲ್ಪನೆಗೂ ದೊಡ್ಡದು. ಆದರೆ ಅವನು ಈ ಎಲ್ಲ ಗುಣಗಳನ್ನೂ ಹೊಂದಿರುವವನು ಎಂದು ತಿಳಿದವರಿಗೆ ಎಲ್ಲಿ ನೋಡಿದರಲ್ಲಿ ಅವನೇ ಕಾಣಿಸಬೇಕು. ಆ ಸ್ಥಿತಿ ತಲುಪಿದವರು ಮಾಡುವ ಉಪಾಸನೆಯೇ "ವ್ಯಾಪ್ತೋಪಾಸನೆ". ಅವರ ಆರಾಧನೆ ಹೇಗಿರುತ್ತದೆ?

ಜಲ, ಕಾಷ್ಠ, ಶೈಲ, ಗಗನ, ನೆಲ, ಪಾವಕ, ವಾಯು, ತರು 

ಫಲ,  ಪುಷ್ಪ, ಬಳ್ಳಿಗಳೊಳಗೆ  ಪರಮಾತ್ಮನಿದ್ದಾನೆ 

ಎಂದರಿತವಗೆ ಆನಂದ ಆನಂದ 

ಆ ರೀತಿ ಉಪಾಸನೆ ಮಾಡುವ ಶಕ್ತಿ ಇದ್ದವರಿಗೆ ಬೇರೆ ಪ್ರತೀಕಗಳ ಅವಶ್ಯಕತೆಯೇ ಇಲ್ಲ. ಅಂತಹ ಸಾಧಕರಿಗೆ "ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ, ಉಂಡು ಉಟ್ಟದ್ದೆಲ್ಲಾ ದೇವಪೂಜೆ". ಆದರೆ ಆ ಮಟ್ಟ ತಲುಪಲು ಬಹಳ ಬಹಳ ಸಾಧನೆ ಬೇಕು. 

*****

ವ್ಯಾಪ್ತೋಪಾಸನೆಗೆ ಇಷ್ಟು ಮಹತ್ವ ಇದ್ದರೆ ಎಲ್ಲರೂ ಅದನ್ನೇ ಮಾಡಬಹುದಲ್ಲ! ಬೇರೆ ರೀತಿ ಪ್ರಯತ್ನಗಳು ಯಾಕೆ? ಈ ಪ್ರಶ್ನೆಗೆ ಉತ್ತರ ಮುಂದೆ ನೋಡೋಣ.