Friday, March 7, 2025

ಶ್ರದ್ದೆ ಮತ್ತು ನಂಬಿಕೆ


ಹವಾಮಾನ ಮುನ್ಸೂಚನೆ ಕೊಡುವ ವಿಷಯದಲ್ಲಿ ಇಂದು ಬಹಳ ಪ್ರಗತಿ ಸಾಧಿಸಲಾಗಿದೆ. ಚಂಡಮಾರುತಗಳ ಉಗಮ, ಅವು ಮುಂದುವರೆಯುವ ಮಾರ್ಗ, ಮಹಾಸಾಗರಗಳ ಮಧ್ಯದಲ್ಲಿ ಮೈತಳೆದ ಅವು ಯಾವಾಗ ಸಮುದ್ರ ತೀರವನ್ನು ದಾಟಿ ಭೂಪ್ರವೇಶ ಮಾಡುತ್ತವೆ, ಅವುಗಳ ತೀವ್ರತೆ ಎಷ್ಟು, ಅವುಗಳ ಜೊತೆ ಬರುವ ಗಾಳಿಗಳ ವೇಗವೇನು, ಇನ್ನೂ ಮುಂತಾದ ವಿವರಗಳನ್ನು ಎಷ್ಟೋ ದಿನ ಮುಂಚೆ ಕೊಡುವಷ್ಟರ ಮಟ್ಟಿಗೆ ಮುನ್ಸೂಚನೆ ನೀಡಲು ಇಂದು ಸಾಧ್ಯವಾಗಿದೆ. ಮಧ್ಯಾಹ್ನ ಎರಡು ಗಂಟೆಗೆ ಹಿಮಪಾತ ಪ್ರಾರಂಭವಾಗುತ್ತದೆ ಎಂದು ಸೂಚನೆ ಕೊಟ್ಟರೆ ಸರಿಯಾಗಿ ಎರಡು ಗಂಟೆಗೆ ಹಿಮ ಬೀಳಲು ಪ್ರಾಂಭವಾಗುವದನ್ನು ನೋಡಬಹುದು. ನಾಗರಿಕ ವಿಮಾನಯಾನದಲ್ಲಿ ಚಾಲನೆಯ ಹೊಣೆ ಹೊತ್ತವರಿಗೆ ವಿಮಾನ ಸಾಗಬೇಕಾದ ದಾರಿ ನಿಖರವವಾಗಿ ತಿಳಿಸುವ ವ್ಯವಸ್ಥೆಗಳಿವೆ. 

ಐವತ್ತು ವರುಷಗಳ ಹಿಂದೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಆಕಾಶವಾಣಿಯಲ್ಲಿ (ಆಲ್ ಇಂಡಿಯಾ ರೇಡಿಯೋ) ಬಂದರೆ ಅದೊಂದು ನಗೆಪಾಟಿಲಿನ ವಿಷಯ ಆಗಿತ್ತು. ಮಳೆಗಾಲದಲ್ಲಿ ಯಾರಾದರೂ ಛತ್ರಿ ಹಿಡಿದು ಹೊರಗಡೆ ಹೋಗಲು ತಯಾರಾದರೆ "ಯಾಕೆ? ಇಂದು ಮಳೆ ಬರುತ್ತದೆ ಎಂದು ರೇಡಿಯೋದಲ್ಲಿ ಹೇಳಿದ್ದು ಕೇಳಲಿಲ್ಲವೇ? ಕೊಡೆ ಹಿಡಿದು ಹೊರಟಿದ್ದೀಯಲ್ಲ? ಖಂಡಿತ ಮಳೆ ಬರುವುದಿಲ್ಲ!" ಎಂದು ಹೇಳುತ್ತಿದ್ದ ದಿನಗಳು ಅವು. ಮಳೆ ಆಧಾರಿತ ಬೆಳೆ ತೆಗೆಯುವ ರೈತರು ಆಕಾಶ ನೋಡುತ್ತಿರುವ ಚಿತ್ರಗಳು ಸರ್ವೇಸಾಮಾನ್ಯವಾಗಿದ್ದವು. ಮೊದಲು ಹೊಲ ಉಳಲು ಮಳೆಗಾಗಿ ಕಾಯುವುದು. ನಂತರ ಬಿತ್ತನೆ ಮಾಡಲು ಕಾಯುವುದು. ಅದಾದಮೇಲೆ ತೆನೆಗಳು ಕಾಳು ತುಂಬುವ ಕಾಲದಲ್ಲಿ ಮತ್ತೆ ಮತ್ತೆ ಆಕಾಶ ನೋಡುವುದು. ಇವೆಲ್ಲವೂ ಒಂದು ರೀತಿಯ ದಿನಚರಿಯೇ ಆಗಿದ್ದವು ಆ ದಿನಗಳಲ್ಲಿ. 
*****

ಖ್ಯಾತ ಸಾಹಿತಿ ತರಾಸು. (ತ. ರಾ. ಸುಬ್ಬರಾವ್)  ಅವರ ಕಾದಂಬರಿ ಆಧಾರಿತ "ಚಂದವಳ್ಳಿಯ ತೋಟ" ಅರವತ್ತರ ದಶಕದಲ್ಲಿ ತೆರೆಕಂಡ ಒಂದು ಸದಭಿರುಚಿಯ ಚಿತ್ರ. ಹನುಮ ಎಂಬ ಪಾತ್ರದ (ರಾಜಕುಮಾರ್) ತಂದೆ ಮತ್ತು ಊರಿನ ಹಿರಿಯ ಶಿವನಂಜೇಗೌಡ ಪಾತ್ರದಲ್ಲಿ ಉದಯ ಕುಮಾರ್ ಅಭಿನಯ ಅವರಿಗೆ ಬಹಳ ಒಳ್ಳೆಯ ಹೆಸರು ತಂದಿತು. ಆ ಚಿತ್ರದಲ್ಲಿ ಮಳೆ ಕಾಣದೆ ಉರಿಬಿಸಿಲಿನಲ್ಲಿ ಇಡೀ ಹಳ್ಳಿಗಳು ಬೆಂದು ಜನ ನರಳುವ ದೃಶ್ಯಗಳಿವೆ.  ಕೋಪದ ಭರದಲ್ಲಿ ಶಿವನಂಜೇಗೌಡ ಊರ ಮುಂದಿನ ಹನುಮನ ಮೂರ್ತಿಗೆ ಅರೆದ ಮೆಣಸಿನಕಾಯಿ ಹಚ್ಚುತ್ತಾನೆ! ನಂತರ ಮಳೆ ಬಂದ ಮೇಲೆ ತಪ್ಪು ಕಾಣಿಕೆ ಕೊಟ್ಟು ಹಾಲಿನಿಂದ ಅಭಿಷೇಕ ಮಾಡಿಸುತ್ತಾನೆ. ಮಳೆಯಿಲ್ಲದೆ ಪರದಾಡುವ ಜನ ಅನುಭವಿಸುವ ದುಃಖದ ಒಂದು ಚಿತ್ರಣ ಇದು. 

ಮಳೆ ಬರುತ್ತದೆ ಎಂದು ಕಾದು ಕಾದು ಸುಣ್ಣವಾಗಿ ಕಡೆಗೆ ಹಳ್ಳಿಯ ಜನ "ಮಳೆರಾಯನ ಉತ್ಸವ" ಮಾಡುತ್ತಿದ್ದರು. ಒಂದು ಮರದ ಮಣೆಯ ಮೇಲೆ ಜೇಡಿ ಮಣ್ಣಿನಿಂದ ಮಳೆರಾಯನ ಮೂರ್ತಿಯನ್ನು ಮಾಡಿ, ಹುಡುಗನೊಬ್ಬನ ತಲೆಯ ಮೇಲೆ ಹೊರಿಸಿ, ಅವನ ಹಿಂದೆ ಸೇರಿ ಹಳ್ಳಿಯ ಮನೆ ಮನೆಗಳಿಗೆ ಹೋಗುತ್ತಿದ್ದರು. ಮನೆಗಳ ಮುಂದೆ ನಿಂತು "ಹುಯ್ಯೋ, ಹುಯ್ಯೋ, ಮಳೆರಾಯ! ಹೂವಿನ ತೋಟಕ್ಕೆ ನೀರಿಲ್ಲ", "ಹುಯ್ಯೋ, ಹುಯ್ಯೋ, ಮಳೆರಾಯ! ತೆಂಗಿನ ತೋಟಕ್ಕೆ ನೀರಿಲ್ಲ" ಮುಂತಾಗಿ ಕೂಗುತ್ತಿದ್ದರು. ಮನೆಯವರು ಒಂದು ಬಿಂದಿಗೆ ನೀರು ತಂದು ಮಳೆರಾಯನ ಮೇಲೆ ಸುರಿಸುತ್ತಿದ್ದರು. ಊರಿನ ಎಲ್ಲಾ ಮನೆಗಳ ಮುಂದೆ ಹೀಗೆ ಮಾಡಿದ ಮೇಲೆ ಊರ ಮುಂದಿನ ಅಶ್ವತ್ಥ ಕಟ್ಟೆಯಲ್ಲಿ ಅದನ್ನು ಇಟ್ಟು ಪೂಜೆ ಮಾಡುತ್ತಿದ್ದರು. "ಪರ್ಜನ್ಯ ಹೋಮ-ಜಪಗಳು" ಮುಂತಾದುವನ್ನು ನಡೆಸುತ್ತಿದ್ದರು. 

*****

ಸುಮಾರು ಎಂಭತ್ತು ವರುಷಗಳ ಹಿಂದಿನ ಮಾತು. ಈಗಿನ ಕನಕಪುರ ಆಗ "ಕಾನ ಕಾನ್ ಹಳ್ಳಿ" ಎಂದು ಕರೆಸಿಕೊಳ್ಳುತ್ತಿತ್ತು. ಆಗ ಅದು ಬೆಂಗಳೂರಿಂದ ಮೂವತ್ತೈದು ಮೈಲಿ ದೂರದ ಒಂದು ದೊಡ್ಡ ಹಳ್ಳಿ. ಅರ್ಕಾವತಿ ನದಿ ದಡದಲ್ಲಿ ಇದ್ದ ದೊಡ್ಡ ಹಳ್ಳಿಗಳಲ್ಲಿ ಅದೂ ಒಂದು. (ಈಗಿನ ರಾಮನಗರ ಆಗ "ಕ್ಲೋಸ್ ಪೇಟೆ" ಎಂದು ಕರೆಸಿಕೊಳ್ಳುತ್ತಿತ್ತು). ಸುತ್ತಮುತ್ತಲಿನ ಹಳ್ಳಿಗಳಾದ ಕಲ್ಲಹಳ್ಳಿ, ಮಳಗಾಳು, ಚೀರಣಕುಪ್ಪೆ, ಅರಳಾಳು ಮುಂತಾದ ಗ್ರಾಮಗಳ ಜನರು ವಾರಕ್ಕೊಮ್ಮೆ  ಕಾನ ಕಾನ್ ಹಳ್ಳಿಯಲ್ಲಿ ನಡೆಯುವ ಸಂತೆಗೆ ತಮ್ಮ ತರಕಾರಿ, ಬೆಲ್ಲ, ತುಪ್ಪ ಮೊದಲಾದ ಪದಾರ್ಥಗಳನ್ನು ತಂದು ಮಾರಿ, ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗುತ್ತಿದ್ದರು. 

ಕಾನ್ ಕಾನ್ ಹಳ್ಳಿಯಲ್ಲಿ ಒಂದು ಪುರಾತನ ಕೋಟೆಯಿದೆ. ಅದರ ಅವಶೇಷಗಳನ್ನು ಈಗಲೂ ಕಾಣಬಹುದು. ಕೋಟೆಯ ಒಳಭಾಗದಲ್ಲಿ ಹಳೆಯ ಊರಿದೆ. ಕೋಟೆಯ ಹೊರಗಡೆ ಭಾಗದಲ್ಲಿ ಪೇಟೆ ಎಂದು ಹೊಸ ಊರಿದೆ. ಈಗ ಎಲ್ಲ ಬೆರೆತುಹೋಗಿದ್ದರೂ ಕೋಟೆ ಮತ್ತು ಪೇಟೆ ಎನ್ನುವ ಪದಗಳ ಬಳಕೆ ಇನ್ನೂ ಇದೆ. ಊರಿನ ಪೂರ್ವ ಭಾಗದಲ್ಲಿ ಅರ್ಕಾವತಿ ನದಿ ಹರಿಯುತ್ತದೆ. ದಕ್ಷಿಣ ಭಾಗದಲ್ಲಿ ಕೋಟೆ ಪ್ರದೇಶ. ಉತ್ತರದಲ್ಲಿ ಪೇಟೆಯ ಭಾಗ. ಕೋಟೆ ಪ್ರದೇಶದಲ್ಲಿ ಕೆಳಗಿನ ಕೋಟೆ ಮತ್ತು ಮೇಲಿನ ಕೋಟೆ ಎಂಬ ವಿಭಾಗವಿತ್ತು. ಐವತ್ತು ವರುಷಗಳ ಹಿಂದೆ ಉತ್ತರ ಭಾಗದಲ್ಲಿ ಎಕ್ಸಟೆನ್ಶನ್ ಎಂದು ಇನ್ನೊಂದು ಬಡಾವಣೆ ಆಯಿತು. ಈಗ ಇನ್ನೂ ಬೇರೆ ಬೇರೆ ಬೆಳವಣಿಗೆಗಳು ಆಗಿವೆ. 

ಆಗ ರೇಡಿಯೋ ಕೂಡ ಇರಲಿಲ್ಲ. ಸುತ್ತ ಮುತ್ತಲಿನ ಹಳ್ಳಿಯ ಜನರು ತಮಗೆ ಬೇಕಾದ ಅನೇಕ ಕೆಲಸಗಳಿಗೆ, ಸರ್ಕಾರೀ ಕಚೇರಿಗಳಿಗೆ, ಹಾಲು-ಮೊಸರು ಮುಂತಾದುವನ್ನು ಮಾರಲು ಕಾನ ಕಾನ್ ಹಳ್ಳಿಗೆ ಬರಬೇಕಾಗಿತ್ತು. ಎಲ್ಲರೂ ಕಾಲ್ನಡಿಗೆಯಲ್ಲೇ ಬಂದುಹೋಗುತ್ತಿದ್ದರು. ಎಲ್ಲೋ ಒಬ್ಬಿಬ್ಬರು ಸೈಕಲ್ ಇದ್ದವರು ದೊಡ್ಡ ಕುಳ! ರೈತಾಪಿ ಜನರು ತಮಗೆ ಪರಿಚಯವಿದ್ದ ಜೋಯಿಸರು, ಪಂಡಿತರು, ಶಾಸ್ತ್ರಿಗಳು, ವಾದ್ಯಾರ್, ಬುದ್ಯೋರು ಇವರ ಬಳಿ ಮಳೆ ಬರುವ ದಿನಗಳನ್ನು ಜ್ಯೋತಿಷ್ಯ ಕೇಳಿ ತಿಳಿದುಕೊಳ್ಳುತ್ತಿದ್ದರು. ಮಳೆಯ ನಕ್ಷತ್ರ, ಗ್ರಹಗಳ ಬಲಾಬಲ ನೋಡಿ ಅವರುಗಳು ಮಳೆ ಬರಬಹುದಾದ ದಿನಗಳನ್ನು ಹೇಳುತ್ತಿದ್ದರು. ಸಾಮಾನ್ಯವಾಗಿ ಅದರಂತೆ ರೈತರು ಉಳುಮೆ, ಬಿತ್ತನೆ ಮುಂತಾದ ವ್ಯವಸಾಯ ಸಂಬಂಧದ ಕೆಲಸಗಳನ್ನು ಮಾಡುತ್ತಿದ್ದರು.

***** 

ಇದೇ ಸಮಯದ ಘಟನೆಯ ವಿಷಯ. ಬೆಳಗಿನ ಸುಮಾರು ಹನ್ನೊಂದು ಘಂಟೆಯ ಸಮಯ. ವಾದ್ಯಾರ್ ಶ್ರೀನಿವಾಸ ದೀಕ್ಷಿತಾಚಾರ್ಯರು ಕೆಳಗಿನ ಕೋಟೆಯ ತಮ್ಮ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತು ಯಾವುದೋ ಗ್ರಂಥವನ್ನು ನೋಡುತ್ತಿದ್ದರು. ಅವರಿದ್ದ ಮನೆಗೆ "ವಾದ್ಯಾರ್ ಮನೆ" ಎಂದೇ ಹೆಸರು. ಪರಂಪರೆಯಿಂದ ವಿಶಿಷ್ಟಾದ್ವೈತ ಸಂಪ್ರದಾಯದ ಘನ ಪಂಡಿತರ ವಂಶಾವಳಿ. ಮುಂದಿನ  ತಲೆಮಾರಿನಲ್ಲಿ ಇವರ ಮಗ "ರಾಮಾಯಣಾಚಾರ್ಯ" ಎಂದು ಎಲ್ಲರ ಪ್ರಶಂಸೆಗೆ ಪಾತ್ರರಾದ ಮಹಾ ವಿದ್ವಾಂಸ ಪ್ರೊಫೆಸರ್ ಕೆ. ಎಸ. ನಾರಾಯಣಾಚಾರ್ಯರು. ಅನೇಕ ಪ್ರವಚನಗಳನ್ನು ನೀಡಿ, ಗಾತ್ರದಲ್ಲೂ, ಸತ್ವದಲ್ಲೂ ಬಹು ದೊಡ್ಡದಾದ ಜ್ಞಾನ ಭಂಡಾರವನ್ನು ಅನೇಕ ಪುಸ್ತಕಗಳ ರೂಪದಲ್ಲಿ ಕೊಟ್ಟವರು. 

ನದಿಯ ಆಚೆ ದಡದ ಬದಿಯ ಹಳ್ಳಿಯ ರೈತನೊಬ್ಬ ವಾದ್ಯಾರ್ ಮನೆಯ ಮುಂದೆ ಬಂದು ನಿಂತ. 

"ಅಡ್ಡ ಬಿದ್ದೆ, ಸ್ವಾಮಿ"
"ಏನು ಸೀನಪ್ಪ? ಸಂತೆಗೆ ಬಂದಿದ್ಯಾ?  ಸಂತೆ ವ್ಯವಹಾರ ಆಯಿತೇನು?'
"ಸಂತೆಗೇ ಬಂದಿದ್ದೆ ಬುದ್ಧಿ. ಆದರೆ ಅದಕ್ಕಿಂತ ಹೆಚ್ಚಾಗಿ ನಿಮ್ಮನ್ನೇ ನೋಡಲು ಬಂದಿದ್ದೆ"
"ಏನು ಅಂತಹ ವಿಷಯ. ನನ್ನನ್ನು ನೋಡುವುದು?"
"ಊರಲ್ಲಿ ಎಲ್ಲ ರೈತರೂ ಹೊಲ ಉತ್ತವ್ರೆ. ಬಿತ್ತನೆ ಬೀಜ ತಯಾರು ಮಡಿಕೊಂಡು ಕುಂತವ್ರೆ"
"ಸರಿ ಮತ್ತೆ. ಬಿತ್ತನೆ ಕಾಲ ಬಂತಲ್ಲ. ಬಿತ್ತನೆ ಮಾಡೋದು ತಾನೇ?"
"ಅದೇ ಮಳೆ ವಿಷಯ ಬುದ್ದಿ. ಮಳೆ ಹೆಂಗೈತೆ? ಎಂದು ಬರತೈತೆ? ನಿಮ್ಮನ್ನು ಕೇಳೋಣ ಅಂತ"
"ತಡಿ ನೋಡೋಣ"
ವಾದ್ಯಾರ್ ಒಂದೆರಡು ನಿಮಿಷ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದರು. 

"ಭಾನುವಾರ ಬಿತ್ತನೆ ಮಾಡಿ. ಸೋಮವಾರ ಚೆನ್ನಾಗಿ ಮಳೆ ಬರುತ್ತದೆ"
"ಸೋಮವಾರ ಬಂದೇ ಬರುತ್ತದ, ಬುದ್ಧಿ?'
"ಹೇಳಿದಿನಲ್ಲಯ್ಯ. ಚೆನ್ನಾಗಿ ಮಳೆ ಬರುತ್ತದೆ"
"ಕಷ್ಟ ಪಟ್ಟು ದುಡ್ಡು ಹೊಂದಿಸಿ ಬಿತ್ತನೆ ಬೀಜ ತಂದೀವಿ ಸ್ವಾಮಿ"
"ಅದು ನನಗೂ ಗೊತ್ತು, ಸೀನಪ್ಪ"
"ಬಿತ್ತನೆ ಮಾಡಿದ ತಕ್ಷಣ ಮಳೆ ಬರದಿದ್ದರೆ ಬೀಜವೆಲ್ಲ ಭೂಮಿಯಲ್ಲಿ ಸುಟ್ಟು ಹೋಗುತ್ತೆ ಸ್ವಾಮಿ"
"ಅದು ನನಗೆ ಗೊತ್ತಿಲ್ಲವೇ?"
"ಅದಕ್ಕೆ ಸ್ವಾಮಿ ಭಯ. ಮಳೆ ಖಂಡಿತ ಬರುತ್ತೆ ಅಂತೀರಾ?'

ವಾದ್ಯಾರ್ ಅವರಿಗೆ ಕೋಪ ಬಂದಿರಬೇಕು. ಜನಿವಾರ ಕೈಲಿ ಹಿಡಿದರು ಕೇಳಿದರು. 
"ಏನು ಇದು, ಗೊತ್ತೇ?"
"ಜನಿವಾರ ಅಲ್ಲವೇ ಬುದ್ದಿ"
" ನೀರು ಸೇದೋ  ಹಗ್ಗ ಹೆಗಲ ಮೇಲೆ ಹಾಕಿಕೊಂಡಿದ್ದೇನೆ ಅಂದುಕೊಂಡ್ಯಾ"
"ಯಾಕೆ ಹಾಗೆ ಹೇಳ್ತೀರಿ ಸ್ವಾಮಿ?"
"ಮತ್ತೆ? ಮಳೆ ಬರಲೇಬೇಕು. ಬರದಿದ್ದರೆ ದೇವೇಂದ್ರನ ಸುಟ್ಟುಬಿಡ್ತೀನಿ!" 

ಸೀನಪ್ಪ ಇದನ್ನು ನಿರೀಕ್ಷಿಸಿರಲಿಲ್ಲ. 
"ಸ್ವಾಮಿ, ಊರಲ್ಲಿ ಎಲ್ಲರಿಗೂ ಭಾನುವಾರ ಬಿತ್ತನೆ ಮಾಡಕ್ಕೆ ಹೇಳ್ತಿನಿ. ನಿಮ್ಮನ್ನ ಮತ್ತೆ ಬಂದು ಕಾಣ್ತೀನಿ"

ಇಷ್ಟು ಹೇಳಿ ಸೀನಪ್ಪ ನಮಸ್ಕಾರ ಮಾಡಿ ಹೊರಟುಹೋದ. ಊಟ ತಯಾರಾಗಿದೆ ಎಂದು ವಾದ್ಯಾರ್ ಗೆ ಮನೆ ಒಳಗಿನಿಂದ ಸೂಚನೆ ಬಂತು. ಭೋಜನಕ್ಕೆ ಒಳಗೆ ಹೋದರು. 

ಸೋಮವಾರ ಚೆನ್ನಾಗಿಯೇ ಮಳೆ ಬಂತಂತೆ. ಆ ವರ್ಷ ಬೆಳೆ  ಚೆನ್ನಾಗಿ  ಆಯ್ತ೦ತೆ . (ಅದೊಂದು ಕಾಕತಾಳೀಯ ಅಂದವರೂ ಇದ್ದರು)

ಈ ವೃತ್ತಾಂತ ಒಬ್ಬರಿಂದ ಒಬ್ಬರಿಗೆ ಹರಡಿತಂತೆ. 

*****

ಈ ಘಟನೆ ಕಳೆದು ಕೆಲವು ವರ್ಷಗಳೇ ಕಳೆದಿದ್ದವು. ನಾನು ಕೇಳಿದಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಕೇಳಿದಾಗ ಕೆಲವು ಅನುಮಾನಗಳು ಬಂದವು. ನಮಗೆ ಮಾತಾಡಲು ಎಲ್ಲರಂತೆ ಸುಲಭವಾಗಿ ಸಿಗುತ್ತಿದ್ದುದು ತಾಯಿಯೇ. ಅಡಿಗೆ ಕೆಲಸ, ಊಟ ಮುಗಿಸಿ ಮಧ್ಯಾಹ್ನ ಅವಳು ವಿಶ್ರಾಂತಿಯಲ್ಲಿ ಇದ್ದಾಗ ಹತ್ತಿರ ಹೋದೆ.

"ಅಮ್ಮ, ಇವತ್ತು ಒಂದು ವಿಷಯ ಕೇಳಿದೆ"
"ಏನದು?"
"ವಾದ್ಯಾರ್ ಮತ್ತು ಮಳೆ ವಿಷಯ" 
"ದೇವೇಂದ್ರನ್ನ ಸುಟ್ಟುಬಿಡುತ್ತೇನೆ ಅಂತ ಹೇಳಿದ್ದು ತಾನೇ?"
" ಹೌದು. ಅದರಲ್ಲಿ ಒಂದು ಅನುಮಾನ ಬಂತು"
"ಏನು ಅನುಮಾನ?"
"ದೇವೇಂದ್ರ ದೇವತೆಗಳ ರಾಜ. ಅವನನ್ನು ಸುಟ್ಟುಬಿಡುತ್ತೇನೆ, ಅನ್ನಬಹುದೇ?"
"ವಾದ್ಯಾರ್ ಮತ್ತು ದೇವೇಂದ್ರನ ಸಂಬಂಧ ನಮಗೇನು ಗೊತ್ತು?"
"ಅಂದರೆ?"
"ಮಳೆಯ ಬಗ್ಗೆ ಪ್ರಶ್ನೆ ಕೇಳಿದವನು ಉತ್ತರ ಹೇಳಿದರೂ ಅನುಮಾನ ಪಟ್ಟ. ಆಗ ಅವರು ಏನು ಮಾಡಬೇಕು? ಮಳೆ ಬಂದರೂ ಬರಬಹುದು. ಇಲ್ಲದಿದ್ದರೂ ಇರಬಹುದು, ಎಂದು ಹೇಳಬೇಕೇ? ಅದು ಅವನಿಗೂ ಗೊತ್ತು. ಇವರೇನು ಹೇಳುವುದು? ಅವನಿಗೆ ಖಚಿತವಾಗಲಿ ಎಂದು ಅವರು ಹಾಗೆ ಹೇಳಿರಬಹುದು. ಉತ್ತರ ಹೇಳುವವರಿಗೇ ಅದರಲ್ಲಿ ನಂಬಿಕೆ ಇಲ್ಲದಿದ್ದರೆ ಪ್ರಶ್ನೆ ಕೇಳುವವರಿಗೆ ಉತ್ತರದಲ್ಲಿ ನಂಬಿಕೆ ಹೇಗೆ ಬರುತ್ತದೆ?"

"ಅವನಿಗೇನೋ ನಂಬಿಕೆ ಬಂದು ಹೊರಟುಹೋದ. ಆದರೆ ಹಾಗೆ  ಹೇಳಿದ್ದು ತಪ್ಪಲ್ಲವೇ?"
"ಅವರು ಹೇಳಿದ್ದು ತಪ್ಪು ಸರಿ ಎಂದು ತೀರ್ಮಾನಿಸಲು ನಾವು ಯಾರು? ದೊಡ್ಡವರ ವಿಷಯ ಕೆಲವು ನಮಗೆ ಅರ್ಥ ಆಗುವುದಿಲ್ಲ. ನೀನು ವಿಶ್ವಾಮಿತ್ರರ ಕಥೆ ಕೇಳಿದ್ದೀಯಲ್ಲ"
"ಯಾವುದು? ತ್ರಿಶಂಕು ಪ್ರಸಂಗವೇ?"
"ಹೌದು. ತನ್ನ ಮಾತು ಕೇಳದ್ದಕ್ಕಾಗಿ ಇನ್ನೊಂದು ಇಂದ್ರನನ್ನು, ಮತ್ತೊಂದು ಸ್ವರ್ಗವನ್ನು ಮಾಡಲು ಅವರು ಹೋಗಲಿಲ್ಲವೇ? 
"ಅದು ಸರಿ"

"ವಾದ್ಯಾರ್ ತಮ್ಮ ಉಪಾಸನೆಯಲ್ಲಿ ಶ್ರದ್ದೆ ಇದ್ದವರು. ತಮ್ಮ ಲೆಕ್ಕಾಚಾರ ಸರಿ ಎಂದು ನಂಬಿದವರು. ಅದಕ್ಕೇ ಹಾಗೆ ಹೇಳಿರಬಹುದು. ನಂತರ ಅವರ, ದೇವೇಂದ್ರನ ನಡುವೆ ಏನಾಯಿತು? ನಮಗೆ ಗೊತ್ತಿಲ್ಲ. ನಮಗೆ ಸಂಬಂಧಿಸದ ವಿಷಯದಲ್ಲಿ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕ? ಈ ಪ್ರಸಂಗದಲ್ಲಿ ನಾವು ಕಲಿಯುವುದೇನು? ಅದು ನಮಗೆ ಮುಖ್ಯ."
"ಏನದು, ನಾವು ಕಲಿಯಬೇಕಾದದ್ದು?"

"ನಾವು ಮಾಡುವ ಕೆಲಸದಲ್ಲಿ ನಮಗೆ ಪೂರ್ಣ ಶ್ರದ್ದೆ ಇರಬೇಕು. ಕಾಟಾಚಾರಕ್ಕೆ,  ತೋರಿಕೆಗೆ, ಅರ್ಧ ಮನಸ್ಸಿನಲ್ಲಿ ಮಾಡುವ ಕೆಲಸಗಳು ಎಂದೂ ಪೂರ್ಣ ಫಲ ಕೊಡುವುದಿಲ್ಲ. ಅನೇಕ ವಿಷಯಗಳಲ್ಲಿ ನಂಬಿಕೆ ಮುಖ್ಯ. ಎಲ್ಲ ವಿಷಯಗಳಲ್ಲೂ ನಂಬಿಕೆ ಪ್ರಶ್ನಿಸುತ್ತ ಹೊರಟರೆ ಏನೂ ಕೆಲಸವಾಗುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ನಂಬಿದವರು ಹಾಳಾಗುವಂತೆ, ಏನನ್ನೂ, ಯಾರನ್ನೂ ನಂಬದವರೂ ಹಾಳಾಗುತ್ತಾರೆ! ಜೀವನದಲ್ಲಿ ಒಂದು ಸಮತೋಲನ ಇರಬೇಕು. ಶ್ರದ್ದೆ ಮತ್ತು ನಂಬಿಕೆ. ಇವು ಬಹಳ ಮುಖ್ಯ. ಆದರೆ ಅಂಧ ಶ್ರದ್ದೆ, ಕುರುಡು ನಂಬಿಕೆ ಕೂಡದು. "

*****

ಹಳ್ಳಿಯಲ್ಲಿ ಹುಟ್ಟಿದವಳು; ಬೆಳೆದವಳು. ಏಳನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ಪ್ರೈಮರಿ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮುಗಿಯಿತು. ಹದಿನಾಲ್ಕು ವರುಷಕ್ಕೆ ಮದುವೆ. ನಂತರ ಹನ್ನೆರಡು ಮಕ್ಕಳು. ಆದರೆ ಸಂಸಾರವೇ ಅವಳ ವಿಶ್ವವಿದ್ಯಾಲಯ. 

 ಮನೆಯೆ ಮೊದಲ ಪಾಠಶಾಲೆ 
ಜನನಿ ತಾನೇ ಮೊದಲ ಗುರುವು 
ಜನನಿಯಿಂದ ಪಾಠ ಕಲಿತ ಜನರು ಧನ್ಯರು!

10 comments:

  1. ಸರಳ ಸುಂದರ

    ReplyDelete
  2. Good subject, well written, remembering a conversation with your mother on Women's Day is really nice.

    ReplyDelete
  3. Its a great tribute to your mother on Women's day! .....SA



    ReplyDelete
  4. This is an excellent tribute to your mother. Especially we are celebrating a special day for women. Thank you.UR…

    ReplyDelete
  5. One and only mother! !!! Her words are veda vakya for the little fluttering hearts. Nobody can be more convincing for a child than that of a a loving mother.
    What a befitting tribute , and a very unique one.
    Narration is excellent as usual...

    ReplyDelete
  6. Mathru devo bhava🙏👏

    ReplyDelete
  7. ಲೇಖನ ಓದುವಾಗ ದಿವಂಗತ ಶ್ರೀ ನವರತ್ನ ರಾಮರಾಯರ ಪುಸ್ತಕ ಓದಿದಂತೆ ಭಾಸವಾಯಿತು

    ReplyDelete
  8. ಹಳೆಯ ಕಾಲದ ಸ್ತ್ರೀಯರು ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ ಒಳ್ಳೆಯ ಸಂಸ್ಕಾರವಂತರು ವ್ಯವಹಾರ ಕುಶಲರೂ ಆಗಿರುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ ಎಷ್ಟು ಆಚರಣೆಗಳನ್ನು ನಾವು ಶ್ರದ್ಧೆ ಇಲ್ಲದೆ ಮಾಡುತ್ತೇವೆ ಮತ್ತು ಅದರ ಫಲವನ್ನು ನಿರೀಕ್ಷಿಸಲು ಸಾಧ್ಯವೇ

    ReplyDelete
  9. ಭಾನುಮತಿMarch 12, 2025 at 12:45 AM

    ಎಂದಿನಂತೆ ಅತ್ಯಂತ ಸೊಗಸಾದ ಲೇಖನ ಕೇಶವ ಸರ್. ಎಲ್ಲಾ ವಿಷಯಗಳಲ್ಲೂ ನಮ್ಮ ಪೂರ್ವಜರ ಜ್ಞಾನ, ಮುಂದಾಲೋಚನೆ, ನೈಪುಣ್ಯಗಳನ್ನು ನೋಡಿದರೆ ಅತೀವ ಹರ್ಷ ಹಾಗೂ ಹೆಮ್ಮೆ ಉಂಟಾಗುತ್ತದೆ. ಪೂಜನೀಯ ಪ್ರೊ. ಕೆ.ಎಸ್. ನಾರಾಯಣಾಚಾರ್ಯರ ತಂದೆಯವರ ಭವಿಷ್ಯ ವಾಣಿಯ ಬಗ್ಗೆ ಅವರಿಗಿದ್ದ ನಂಬಿಕೆ ಹಾಗೂ ಅದು ನಿಜವಾದ ವಿಷಯ ಅತ್ಯಂತ ಕುತೂಹಲಕಾರಿಯಾಗಿದೆ. ಹಾಗೂ ಅದನ್ನು ನಿಮ್ಮ ಚಿಕ್ಕಂದಿನಲ್ಲಿ ನಿಮಗೆ ತಾಯಿಯವರು ಮನವರಿಕೆ ಮಾಡಿದ ರೀತಿಯನ್ನು ಮನೋಜ್ಞವಾಗಿ ವಿವರಿಸಿದ್ದೀರಿ. ಖಂಡಿತವಾಗಿಯೂ ತಾಯಿಯೇ ಮಗುವಿನ ಮೊದಲ ಗುರು ಮತ್ತು ಅಂತಹ ಮಕ್ಕಳೇ ಪುಣ್ಯವಂತರು ಎನ್ನುವುದರಲ್ಲಿ ಏನೂ ಸಂಶಯವಿಲ್ಲ 🙏

    ReplyDelete
  10. Nice writing Keshava Sir

    ReplyDelete