ಶಾಲಾ-ಕಾಲೇಜುಗಲ್ಲಿ, ವಾರ್ಷಿಕ ಸಮಾರಂಭಗಳ ಮುನ್ನಾದಿನಗಳಲ್ಲಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ, ಗೆದ್ದವರಿಗೆ ಬಹುಮಾನಗಳನ್ನು ಘೋಷಿಸಿ, ಸಮಾರಂಭದ ದಿನ ಮುಖ್ಯ ಅತಿಥಿಗಳಿಂದ ಅವರಿಗೆ ಬಹುಮಾನ ಕೊಡಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಪದ್ದತಿ. ಅವು ಸಾಂಸ್ಕೃತಿಕ ಕಾರ್ಯಕ್ರಮ ಇರಬಹುದು ಅಥವಾ ಕ್ರೀಡಾಸ್ಪರ್ಧೆಗಳು ಕೂಡ ಆಗಿರಬಹುದು. ಈ ರೀತಿಯ ಸ್ಪರ್ಧೆ ಮತ್ತು ಬಹುಮಾನಗಳಿಲ್ಲದೆ ನಡೆಸುವ ಸಮಾರಂಭಗಳು ನೀರಸ ಅನಿಸುತ್ತವೆ. ಅನೇಕರು ಈ ರೀತಿಯ ಸ್ಪರ್ಧೆಗಳಿಗೆ ಕಾದಿರುತ್ತಾರಲ್ಲದೆ ಬಹಳ ತಯಾರಿ ಕೂಡ ನಡೆಸಿರುತ್ತಾರೆ. ಕೆಲವರಿಗೆ ಕೇವಲ ಸ್ಪರ್ಧಿಸುವುದು ಮುಖ್ಯವಾದರೆ ಮತ್ತೆ ಕೆಲವರಿಗೆ ಗೆಲ್ಲುವುದೂ ಅತಿ ಮುಖ್ಯ. ಅನೇಕ ಸ್ಪರ್ಧೆಗಳಲ್ಲಿ ಕೆಲವರು ಮಾತ್ರ ಬಹುಮಾನ ಗಳಿಸಬಹುದು. ಆದರೆ ಕೆಲವು ರೀತಿಯ ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು.
ಕೆಲವು ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು ಅನ್ನುವುದು ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಸಾಮಾನ್ಯವಾಗಿ ಮೊದಲ ಮೂರು ಸ್ಥಾನ ಗೆದ್ದವರಿಗೆ ಬಹುಮಾನಗಳನ್ನೂ, ತುಂಬಾ ಚೆನ್ನಾಗಿ ಪ್ರದರ್ಶನಗಳನ್ನು ನೀಡಿದ್ದರೂ ಕೂಡ ಬಹುಮಾನ ಗೆಲ್ಲಲಾಗದವರಿಗೆ ಸಮಾಧಾನಕರ ಬಹುಮಾನಗಳನ್ನೂ (ಕನ್ಸೋಲೇಷನ್ ಪ್ರೈಜ್) ಕೊಡುವುದು ಸಾಮಾನ್ಯ ರೀತಿ, ಕೆಲವು ಸ್ಪರ್ಧೆಗಳಲ್ಲಿ ಅನೇಕರು ನೂರಕ್ಕೆ ನೂರು ಅಂಕ ಪಡೆಯಬಹುದು. ಒಂದು ಪ್ರಶ್ನೋತ್ತರ ಪರೀಕ್ಷೆ ಅನ್ನೋಣ. ಹತ್ತು ಪ್ರಶ್ನೆ ಕೇಳಲಾಗುವುದು. ಅನೇಕರು ಹತ್ತಕ್ಕೆ ಹತ್ತು ಸರಿ ಉತ್ತರ ಕೊಡಬಹುದು. ಆಗ ಈ ರೀತಿ ಎಲ್ಲಕ್ಕೂ ಸರಿ ಉತ್ತರ ಕೊಟ್ಟವರು ಎಷ್ಟು ಮಂದಿಯಾದರೂ ಅವರೆಲ್ಲರೂ ಗೆದ್ದಂತೆ!
ನಮ್ಮ ಚಿಕ್ಕ ವಯಸ್ಸಿನಲ್ಲಿ ಶಾಲೆಗಳಲ್ಲಿ ಓಟದ ಸ್ಪರ್ಧೆಗಳು ಇರುತ್ತಿದ್ದವು. ಬೇಗ ಓಡಿ ಮೊದಲು ಗುರಿ ಮುಟ್ಟಿದವರಿಗೆ ಬಹುಮಾನಗಳು ಸಿಗುತ್ತಿದ್ದವು. ಆದರೆ ನಿಧಾನವಾಗಿ ಸೈಕಲ್ ನಡೆಸುವ ಪಂದ್ಯ ಕೂಡ ಇರುತ್ತಿತ್ತು. ಇದಕ್ಕೆ ಸ್ಲೋ ಸೈಕಲ್ ರೇಸ್ ಅನ್ನುತ್ತಿದ್ದರು. (ಈಗಲೂ ಈ ರೀತಿ ಪಂದ್ಯಗಳಿರಬಹುದು) ಈ ಪಂದ್ಯದಲ್ಲಿ ಯಾರು ಅತಿ ನಿಧಾನವಾಗಿ ಸೈಕಲ್ ಚಲಿಸಿ ಕಡೆಯಲ್ಲಿ ಗೆರೆ ದಾಟುವರೋ ಅವರಿಗೆ ಬಹುಮಾನ! ಇಲ್ಲಿ ವೇಗಕ್ಕಿಂತ ಸಮತೋಲನ (ಬ್ಯಾಲನ್ಸ್) ಮತ್ತು ಸಹಿಷ್ಣುತೆ (ಎಂಡ್ಯೂರನ್ಸ್) ಮುಖ್ಯ. ಇದೇನು ಸುಲಭದ ಕೆಲಸವಲ್ಲ. ಈ ಪಂದ್ಯಕ್ಕೇ ತಯಾರಿ ನಡೆಸಿ ಬಹುಮಾನ ಗಿಟ್ಟಿಸುತ್ತಿದ್ದ ಸ್ಪರ್ಧಿಗಳೂ ಇರುತ್ತಿದ್ದರು.
*****
ಪಂದ್ಯಗಳಲ್ಲಿ ಹೀಗಿದ್ದರೆ ಜೀವನ ಯಾತ್ರೆಯಲ್ಲಿ ಹೇಗೆ? ಇದೇ ತತ್ವವನ್ನು ಜೀವನಕ್ಕೂ ವಿಸ್ತರಿಸಬಹುದೇ? ಅವಶ್ಯವಾಗಿ ವಿಸ್ತರಿಸಬಹುದು. ಜೀವನವೂ ಒಂದು ರೀತಿಯ ಓಟದ ಸ್ಪರ್ಧೆ ತಾನೆ? ಇಲ್ಲಿಯೂ ದೂರ ಮತ್ತು ಸಮಯದ ಎರಡು ಲೆಕ್ಕಗಳು. ಎಷ್ಟು ಸಮಯದಲ್ಲಿ ಕೊಟ್ಟ ದೂರ ಸಾಗುತ್ತಾರೆ ಎನ್ನುವುದು. ಹಾಗಿದ್ದರೆ, ಇದರ ವಿಚಾರ ಸ್ವಲ್ಪ ನೋಡೋಣ.
ಯಾರಾದರೂ ದೊಡ್ಡವರಿಗೆ ನಮಸ್ಕಾರ ಮಾಡಿದರೆ ಆಶೀರ್ವಾದ ಮಾಡುತ್ತಾರೆ. "ಧೀರ್ಘಾಯುಷ್ಮಾನ್ ಭವ" ಅಂದರೆ "ದೀರ್ಘಾಯುಸ್ಸು ಹೊಂದು" ಎನ್ನುವುದು ಅನೇಕ ಬಾರಿ ಕೇಳುವ ಆಶೀರ್ವಾದ. ವೈದಿಕ ಸಂಪ್ರದಾಯದಲ್ಲಿ "ಶತಮಾನಂ ಭವತಿ ಪುರುಷಃ" ಎನ್ನುತ್ತಾರೆ. "ನೂರು ವರ್ಷ ಬಾಳು" ಎಂದು. ಯಾವ ನೂರು ವರ್ಷ? ಇದೇನು ಪ್ರಶ್ನೆ ಎನ್ನಬಹುದು. ನಾವು ಸಾಮಾನ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಂದೇ ಕಾಲ. ಅದು ಬಾಹ್ಯ ಅಂದರೆ ಹೊರಗಿನ ಕಾಲ. ಅದನ್ನು ಅಳೆಯುವುದು ಸೆಕೆಂಡು, ನಿಮಿಷ, ಗಂಟೆ, ದಿನ ಮತ್ತು ವರ್ಷಗಳ ಲೆಕ್ಕದಲ್ಲಿ. ಇದರ ಲೆಕ್ಕದಲ್ಲಿ ನೂರು ವರುಷ ಬಾಳು ಎಂದು. ನೂರೇ ಏಕೆ? ಸಾವಿರ ಏಕೆ ಆಗಬಾರದು? ಅದು ಸಾಧ್ಯವಿಲ್ಲ. ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳಿವೆ. ಸುಮ್ಮನೆ ಸಾವಿರ ವರುಷ ಬಾಳು ಎಂದರೆ ಅರ್ಥವಿಲ್ಲ. ಹೇಳಿದ ಮಾತಿಗೆ ಒಂದು ಬೆಲೆ, ತೂಕ ಬೇಕು. ಈ ದೇಹಕ್ಕೆ ನೂರು ವರುಷ ಬದುಕಲು ಸಾಧ್ಯ. ಆದ್ದರಿಂದ "ನೂರು ವರುಷ ಬಾಳು" ಎಂದು ಆಶೀರ್ವಾದ.
ಈ ದೇಹಕ್ಕೆ ಹೊರಗಿನ ಕಾಲದಂತೆ ಒಂದು ಒಳಗಿನ ಕಾಲವೂ ಇದೆ! ಅದು ಹೇಗೆ? ಕೆಲವರು ಚಿಕ್ಕ ವಯಸ್ಸಿಗೇ ಮುದುಕರಂತೆ ಕಾಣುತ್ತಾರೆ. ಇನ್ನು ಕೆಲವರು ತುಂಬಾ ವಯಸ್ಸಾದರೂ ಯುವಕರಂತೆ ಕಾಣುತ್ತಾರೆ. ಅದು ಹೇಗೆ? ಇಬ್ಬರು ಒಂದೇ ದಿನ, ಐವತ್ತು ವರುಷದ ಹಿಂದೆ ಹುಟ್ಟಿದವರು. ಇಬ್ಬರಿಗೂ ಹೊರಗಿನ ಕಾಲದಲ್ಲಿ ಈಗ ಐವತ್ತು ವರುಷ ವಯಸ್ಸು. ಆದರೆ ಒಬ್ಬ ಅರವತ್ತೈದು ವಯಸ್ಸಿನವನಂತೆ ಕಾಣುತ್ತಾನೆ. ಇನ್ನೊಬ್ಬ ಮೂವತ್ತೈದು ವಯಸ್ಸಿನವಂತಿದ್ದಾನೆ. ಇದಕ್ಕೆ ಕಾರಣ ದೇಹದ ಒಳಗಿನ ವಯಸ್ಸು. ಮಕ್ಕಳಲ್ಲಿ "ಬೆಳವಣಿಗೆಯ ಬಿರುಸು" (ಗ್ರೋತ್ ಸ್ಪರ್ಟ್) ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. "ಎಲಾ ಇವನೇ! ಒಂದು ವರುಷದಲ್ಲಿ ಎಷ್ಟು ಬೆಳೆದಿದ್ದಾನೆ!" ಎನ್ನುತ್ತೇವೆ. ಹಾಗೆಯೇ ವಯಸ್ಕರಲ್ಲಿ "ವೃದ್ಧಾಪ್ಯದ ಬಿರುಸು" ಉಂಟಂತೆ. (ಇದರ ಬಗ್ಗೆ ಇನ್ನೊಂದು ಸಂಚಿಕೆಯಲ್ಲಿ ನೋಡೋಣ). "ಏನಿದು? ಒಂದು ವರುಷದಲ್ಲಿ ಎಷ್ಟು ಕುಗ್ಗಿಹೋಗಿದ್ಧಾರೆ!" ಅನ್ನುತ್ತೇವೆ. ಅಂದರೆ ಹೊರಗಿನ ವಯಸ್ಸಿನ ಹಾಗೆ (ಬಾಹ್ಯ ವಯಸ್ಸು) ದೇಹದಲ್ಲಿ ಸಹ (ಆಂತರಿಕ ವಯಸ್ಸು) ಒಂದು ಗಡಿಯಾರ ಇದೆ ಎಂದಾಯಿತು.
ಹಾಗಿದ್ದಲ್ಲಿ ಈ ಬಾಹ್ಯ ವಯಸ್ಸು ಮತ್ತು ಆಂತರಿಕ ವಯಸ್ಸಿನ ಸಮನ್ವಯ ಅಥವಾ ಹೊಂದಾಣಿಕೆ ಹೇಗೆ? ಇದಕ್ಕೆ ನಮ್ಮ ಹಿರಿಯರು ಸೊಗಸಾಗಿ ತಾಳೆ (ಮ್ಯಾಚಿಂಗ್) ಹಾಕುವ ವಿಧಿ ಹೇಳಿಕೊಟ್ಟಿದ್ದಾರೆ.
*****
ಏನೂ ಕೆಲಸ ಮಾಡದೇ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಿ. ನಿಮ್ಮ ಉಸಿರಾಟದ ಮೇಲೆ ಗಮನವಿಡಿ. ಒಂದು ಸಲ ಶ್ವಾಸದಲ್ಲಿ ಗಾಳಿ ಒಳಗೆ ತಗೆದುಕೊಂಡು ಹೊರಗೆ ಬಿಡಿ. ಸಮಯ ನೋಡಿ. ಸರಿಯಾಗಿ ಉಸಿರು ತೆಗೆದುಕೊಳ್ಳಲು ಎರಡು ಸೆಕೆಂಡ್ ಸಮಯ ಬೇಕು. ಹಾಗೆ, ಪೂರ್ತಿ ಗಾಳಿ ಹೊರಬಿಡಲು ಮತ್ತೆರಡು ಸೆಕೆಂಡ್ ಬೇಕು. ಅಂದರೆ ಒಂದು ಸಾರಿ ಉಸಿರಾಡಲು ನಾಲ್ಕು ಸೆಕೆಂಡ್ ಬೇಕು.
- ಉಸಿರು ಒಳಗಡೆ ತೆಗೆದುಕೊಳ್ಳಲು ಎರಡು ಸೆಕೆಂಡುಗಳು.
- ಉಸಿರು ಬಿಡಲು ಎರಡು ಸೆಕೆಂಡುಗಳು.
- ಒಂದು ಸಲ ಉಸಿರಾಡಲು (ಒಂದು ಶ್ವಾಸ) ನಾಲ್ಕು (4) ಸೆಕೆಂಡುಗಳು.
- ಅಂದರೆ, ಒಂದು ನಿಮಿಷಕ್ಕೆ (ಅರವತ್ತು ಸೆಕೆಂಡುಗಳು) ಹದಿನೈದು (15) ಶ್ವಾಸಗಳು.
- ಒಂದು ಗಂಟೆಗೆ (60x15) 900 ಶ್ವಾಸಗಳು.
- ಒಂದು ದಿನಕ್ಕೆ (24 ಗಂಟೆಗಳು) (900x24) 21,600 ಶ್ವಾಸಗಳು.
- ಒಂದು ವರುಷಕ್ಕೆ (360 ದಿನ ಸರಾಸರಿ) (21,600 x 360) 77, 76,000 ಶ್ವಾಸಗಳು.
- ನೂರು ವರುಷಕ್ಕೆ (77,76,000 x 100) 77,76,00,000 ಶ್ವಾಸಗಳು!
ವೈದಿಕ ಕಾಲದಲ್ಲಿ ಲೆಕ್ಕ ಹಾಕುವಾಗ ಚಾಂದ್ರಮಾನ, ಸೌರಮಾನ ವರುಷಗಳ ಪದ್ಧತಿ ಇದೆ. ಎರಡರಲ್ಲಿ ಸ್ವಲ್ಪ ವ್ಯತ್ಯಾಸ ಉಂಟು. ಆದ ಕಾರಣ ಒಂದು ಸ್ಥೂಲ ಲೆಕ್ಕವಾಗಿ 360 ದಿನಕ್ಕೆ ಒಂದು ವರುಷ. (ಈಗಲೂ ಕೆಲವು ಅನಿವಾಸಿ ಠೇವಣಿಗಳಿಗೆ ಬ್ಯಾಂಕಿನವರು ಬಡ್ಡಿ ಕೊಡುವಾಗ ವರುಷಕ್ಕೆ 360 ದಿನವೆಂದೇ ಲೆಕ್ಕಹಾಕುತ್ತಾರೆ!).
ಮೇಲಿನ ಸೂತ್ರದಂತೆ ದೇಹದ ಒಳಗಿನ ಲೆಕ್ಕದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಶ್ವಾಸದ ಸಮಯ ಹೊರಗಿನ ಒಂದು ನೂರು ವರುಷಕ್ಕೆ ಸಮವಾಯಿತು. "ನೂರು ವರುಷ ಬಾಳು ಅಂದರೆ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಲ ಶ್ವಾಸ ತೆಗೆದು ಕೊಳ್ಳುವ ಕಾಲದವರೆಗೆ ಬದುಕು" ಎಂದ ಹಾಗೆ.
*****
ಮಹಾಪಂಡಿತ ಕವಿಗಳಾದ ಶ್ರೀನಿವಾಸಾಚಾರ್ಯರು (ಶ್ರೀ ಜಗನ್ನಾಥ ದಾಸರೆಂದು ಪ್ರಸಿದ್ದರಾದವರು) ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ "ಮಂಗಳಾಚರಣ ಸಂಧಿ" ನಾಲ್ಕನೆಯ ಪದ್ಯದಲ್ಲಿ ಶ್ವಾಸಕ್ರಿಯೆಯ ಮೂಲ ದೇವತೆಯಾದ ಮುಖ್ಯಪ್ರಾಣ ದೇವರನ್ನು ಕುರಿತಾಗಿ ಪ್ರಾರ್ಥಿಸುವಾಗ ಈ ಮೇಲಿನ ಲೆಕ್ಕವನ್ನು ಸೂತ್ರ ರೂಪದಲ್ಲಿ ಹೀಗೆ ಕೊಟ್ಟಿದ್ದಾರೆ:
ಆರು ಮೂರೆರಡೊಂದು ಸಾವಿರ
ಮೂರೆರಡು ಶತ ಶ್ವಾಸಜಪಗಳ
ಮೂರುವಿಧ ಜೀವರೊಳಗಬ್ಜಜಕಲ್ಪ ಪರ್ಯಂತ
ತಾರಚಿಸಿ ಸಾತ್ವರಿಗೆ ಸುಖ ಸಂಸಾರ
ಮಿಶ್ರರಿಗೆ ಅಧಮ ಜನರಿಗಪಾರ
ದುಃಖಗಳೀವ ಗುರು ಪವಮಾನ ಸಲಹೆಮ್ಮ
ಈ ಸೂತ್ರದಲ್ಲಿ ಸ್ವಲ್ಪ ಒಗಟಿದೆ. ಮೊದಲ ಸಾಲಿನಲ್ಲಿ ಆರು ಮೂರು ಎನ್ನುವುದನ್ನು ಗುಣಿಸಬೇಕು. ಆಗ ಹದಿನೆಂಟು ಬರುತ್ತದೆ. ಎರಡೊಂದು ಎನ್ನುವುದನ್ನು ಕೂಡಬೇಕು. ಆಗ ಮೂರು ಸಿಗುತ್ತದೆ. ಹದಿನೆಂಟು + ಮೂರು = ಇಪ್ಪತ್ತೊಂದು ಸಾವಿರ ಆಯಿತು. ಎರಡನೆಯ ಸಾಲಿನ ಮೂರೆರಡು ಅನ್ನುವಲ್ಲಿ ಮೂರನ್ನು ಎರಡರಿಂದ ಗುಣಿಸಬೇಕು. ಆಗ ಆರು ನೂರು ಬಂತು. ಒಟ್ಟು ಇಪ್ಪತ್ತೊಂದು ಸಾವಿರದ ಆರು ನೂರು ಆಯಿತು!
ಈ ಪದ್ಯದಲ್ಲಿ ಇನ್ನೊಂದು ವಿಶೇಷವಿದೆ. ಇದು "ಭಾಮಿನಿ ಷಟ್ಪದಿ" ಪದ್ಯ. ಭಾಮಿನಿ ಷಟ್ಪದಿಯಲ್ಲಿ ಒಟ್ಟು ಆರು ಸಾಲುಗಳು. ಮೊದಲ ಸಾಲಿನಲ್ಲಿ ಏಳು ಮತ್ತು ಏಳು ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲಿನಲ್ಲಿಯೂ ಹೀಗೆ ಹದಿನಾಲ್ಕು ಮಾತ್ರೆಗಳು. ಮೂರನೆಯ ಸಾಲಿನಲ್ಲಿ ಏಳು, ಏಳು ಮತ್ತು ಎಂಟು ಮಾತ್ರೆಗಳು. ಅಂದರೆ ಇಪ್ಪತ್ತೆರಡು ಮಾತ್ರೆಗಳು. ಮೂರು ಸಾಲು ಸೇರಿದರೆ ಐವತ್ತು ಮಾತ್ರೆಗಳು. ನಾಲ್ಕು, ಐದು ಮತ್ತು ಆರನೆಯ ಸಾಲಿನಲ್ಲಿ ಹೀಗೆಯೇ ಮತ್ತೆ ಐವತ್ತು ಮಾತ್ರೆಗಳು. ಒಟ್ಟಿನಲ್ಲಿ ಎಲ್ಲ ಸೇರಿ ನೂರು ಮಾತ್ರೆಗಳು! ನೂರು ವರುಷದ ಲೆಕ್ಕಕ್ಕೆ ನೂರು ಮಾತ್ರೆಗಳ ಛಂದಸ್ಸು! ಆದಕಾರಣ ಹೀಗೆ ಗುಣಿಸುವ ಮತ್ತು ಕೂಡುವ ಲೆಕ್ಕದ ಒಗಟಿನ ಸೂತ್ರ ಕೊಟ್ಟಿದ್ದಾರೆ.
ಭಾರತೀಯ ತತ್ವಶಾಸ್ತ್ರದಲ್ಲಿ "ಸಂಖ್ಯಾ ಶಾಸ್ತ್ರ" ಬಹಳ ಮಹತ್ವದ್ದು. ಕೆಲವು ವಿಷಯಗಳು ಸುಲಭವಾಗಿ ಅರ್ಥ ಆಗುವುದಿಲ್ಲ. ಬಹುಶ್ರುತ ವಿದ್ವಾಂಸರಾದ ಕೀರ್ತಿಶೇಷ ಬನ್ನಂಜೆ ಗೋವಿಂದಾಚಾರ್ಯರು ಇಂತಹ ವಿಷಯಗಳನ್ನು ವಿವರಿಸುವುದರಲ್ಲಿ ಎತ್ತಿದ ಕೈ ಆಗಿದ್ದರು. ಅವರನ್ನು ಇಂತಹ ಸಂದರ್ಭಗಳಲ್ಲಿ ಖಂಡಿತ ನೆನೆಯಬೇಕು.
*****
ಮನುಷ್ಯನು ದೇಹದ ಒಳಗಿನ ಲೆಕ್ಕದಲ್ಲಿ ಒಟ್ಟು 77,76,00,000 ಬಾರಿ ಉಸಿರಾಡಿದರೆ ನೂರು ವರುಷ ಆಗುತ್ತದೆ. ಪ್ರಾಣಾಯಾಮಾದಿಗಳನ್ನು ಅಭ್ಯಾಸ ಮಾಡಿ ಶ್ವಾಸದ ಮೇಲೆ ಹಿಡಿತ ಸಾಧಿಸಿದರೆ, ಉಸಿರು ಬಿಗಿ ಹಿಡಿದು ಎಂಟು ಸೆಕೆಂಡಿಗೆ ಒಂದರಂತೆ ಉಸಿರಾಡಿದರೆ ಹೊರಗಿನ ಕಾಲ ಎರಡು ನೂರು ವರುಷ ಬದುಕಬಹುದು! ಸ್ಲೋ ಸೈಕಲ್ ರೇಸಿನಂತೆ. ಅದೇ ರೀತಿ ಆರು ಸೆಕೆಂಡಿಗೆ ಒಮ್ಮೆ ಉಸಿರಾಡಿದರೆ ನೂರೈವತ್ತು ವರ್ಷ. ಮೂರು ಸೆಕೆಂಡಿಗೊಮ್ಮೆ ಆದರೆ, ಏದುಸಿರು ಬಿಟ್ಟರೆ ಎಪ್ಪತ್ತೈದೇ ವರ್ಷ. ಹೀಗೆಯೇ ಲೆಕ್ಕ.
ಮೇಲಿನ ಪದ್ಯದಲ್ಲಿ ಶ್ವಾಸಜಪದ ಬಗ್ಗೆ ಹೇಳಿದ್ದಾರೆ. ಮೂರುವಿಧ ಜೀವರು ಎಂದಿದ್ದಾರೆ.
ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.
Very good explanation.
ReplyDeleteI was very surprised to read the well explained thing about of how many times in a day, year or during our lifetime we breath in two lines of Sanskrit Sloka.. The Yogis were knowing about this all the time and told us how important it is to do the breathing exercises during yoga practice or meditation. It is a very nice article to read and I found some golden nuggets which I understand now. Great article, Keshav. Thank you.
ReplyDeleteಸ್ಲೋ ಸೈಕಲ್ ರೇಸ್ ಹಾಗೂ ಜೀವನದ ಪಯಣದ ಒಳಗಿನ ಮತ್ತು ಬಾಹ್ಯ ಕಾಲಗಳ ಹೋಲಿಕೆ ತುಂಬ ಕುತೂಹಲಕಾರಿಯಾಗಿದೆ. ನಮ್ಮ ಋಷಿ, ಮುನಿಗಳು ಪ್ರತಿಪಾದಿಸಿದ ಉಸಿರಿನ ನಿಯಂತ್ರಣ ಹೇಗೆ ನಮ್ಮ ಆಯಸ್ಸನ್ನು ನಿರ್ಧರಿಸಬಹುದೆನ್ನುವ ವಿಷಯವನ್ನೂ ಚೆನ್ನಾಗಿ ವಿವರಿಸಿದ್ದೀರಿ. ಸಂತ ಜಗನ್ನಾಥದಾಸರ ಷಟ್ಪದಿಯಲ್ಲಿರುವ ಒಂದೂವರೆ ಸಾಲಿನ ಒಗಟು ನಿಮ್ಮ ಲೇಖನ ಪುನಃ ಪುನಃ ಓದಿದ ಮೇಲೆ ಎಲ್ಲೋ ಸ್ವಲ್ಪ ಅರ್ಥವಾದಂತಿದೆ.😅ನಂತರದ ಸಾಲುಗಳ ವಿವರಣೆಗೋಸ್ಕರ ಮುಂದಿನ ಸಂಚಿಕೆಗಾಗಿ ಕಾಯುವಂತಾಗಿದೆ. ಧನ್ಯವಾದಗಳು ಸರ್ 🙏
ReplyDeleteVery good information Sir. Hats off to you.
ReplyDeleteಬನ್ನಂಜೆ ಗೋವಿಂದಾಚಾರ್ಯರು ಇಂತಹ ವಿಷಯಗಳನ್ನು ವಿವರಿಸುವುದರಲ್ಲಿ ಎತ್ತಿದ ಕೈ ಆಗಿದ್ದರು. ಅವರನ್ನು ಇಂತಹ ಸಂದರ್ಭಗಳಲ್ಲಿ ಖಂಡಿತ ನೆನೆಯಬೇಕು. So true Sir.
ReplyDeleteWas delighted to read about long forgotten "slow cycle race " in high school, to get a prize and the pride behind it.
Really wish we had some teachers like you in our formative years , we would also have developed a enjoy the minutest details of the lives we live and extract its essence to the fullest. Thanks so much....
*****