ಮನುಷ್ಯನ ಜೀವನ ಯಾತ್ರೆಯ ಸಮಯ ಅಳೆಯುವ "ಹೊರಗಿನ ಕಾಲ" ಮತ್ತು "ಆಂತರಿಕ ಕಾಲ" ಇವುಗಳ ಬಗ್ಗೆ ಜೀವನದ "ಸ್ಲೋ ಸೈಕಲ್ ರೇಸ್" ಎಂಬ ಶೀರ್ಷಿಕೆಯಡಿ ಹಿಂದಿನ ಸಂಚಿಕೆಯಲ್ಲಿ ಕೆಲ ವಿಷಯಗಳನ್ನು ನೋಡಿದೆವು. ಶ್ವಾಸದ ಮೇಲೆ ನಿಯಂತ್ರಣ ಸಾಧಿಸಿ ಹೇಗೆ ಬಾಹ್ಯ ಕಾಲಕ್ಕಿಂತ ಹೆಚ್ಚಿನ ಕಾಲ ಬದುಕಬಹುದು, ಒಂದು ನೂರು ವರ್ಷ ಬಾಹ್ಯ ಕಾಲಕ್ಕಿಂತ ಹೆಚ್ಚಿಗೆ ಸಮಯ ಬದುಕಲು ಸಾಧ್ಯವುಂಟೇ, ಮುಂತಾದ ಕೆಲವು ವಿಷಯಗಳನ್ನು ನೋಡಿಯಾಯಿತು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಜೀವನದಲ್ಲಿ ಶ್ವಾಸದ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ವಿಶೇಷವಾಗಿ ಉತ್ತರ ಬದರಿಯಲ್ಲಿ, ನೂರು ವರುಷ ವಯಸ್ಸು ದಾಟಿದ ಅನೇಕ ಯೋಗಿಗಳು ಈಗಲೂ ಇರುತ್ತಾರೆ ಎಂದು ಕೇಳಿದ್ದೇವೆ. ಉತ್ತರ ಬದರಿ ಅಂದರೆ "ಚಾರ್ ಧಾಮ್ ಯಾತ್ರಾ" ಮಾಡುವಾಗ ಹೋಗುವ ಬದರಿನಾಥ್ ಕ್ಷೇತ್ರದಿಂದ ಉತ್ತರದಲ್ಲಿ ಪರ್ವತ ಶ್ರೇಣಿಗಳಲ್ಲಿ ಹರಡಿರುವ ಪ್ರದೇಶ. ಬದರಿನಾಥಕ್ಕೆ ಹೋಗುವುದೇ ಒಂದು ಪ್ರಯಾಸದ ವಿಷಯವಾಗಿತ್ತು. ಈಗ ಅನೇಕ ಅನುಕೂಲಗಳನ್ನು ಮಾಡಿದ್ದಾರೆ. ಆದರೂ ವರುಷದಲ್ಲಿ ಆರು ತಿಂಗಳು ಮಾತ್ರ ಹೋಗಲು ಸಾಧ್ಯ. ಉತ್ತರ ಬದರಿ ಇನ್ನೂ ದುರ್ಗಮ ಪ್ರದೇಶ ಮತ್ತು ಬೇಸಗೆ ಕಾಲದಲ್ಲಿಯೇ ತಡೆಯಲಾಗದ ಚಳಿ. ಅಲ್ಲಿಂದ ಮೇಲೆ ಮೇಲೆ ಹೋದಂತೆ ಶೈತ್ಯ ಇನ್ನೂ ಹೆಚ್ಚಾಗುವುದು ಸಹಜ. ಇಂತಹ ವಾತಾವರಣದಲ್ಲಿ ವರ್ಷವಿಡೀ ವಾಸಿಸುವುದು ಅಂತಹ ಯೋಗಿಗಳಿಗೆ ಮಾತ್ರ ಸಾಧ್ಯವೆಂದು ತಿಳಿಯಬೇಕಷ್ಟೆ.
*****
ನಮ್ಮ ಪುರಾತನ ವಾಂಗ್ಮಯ ಮತ್ತು ನಂಬಿಕೆಗಳ ಪ್ರಕಾರ ಜೀವಿಯು ತನ್ನ ಜನ್ಮದ ಆಯುಸ್ಸಿನ ಸಮಯ ಕಳೆದ ನಂತರ ಇದ್ದ ದೇಹದಿಂದ ಬಿಡುಗಡೆ ಹೊಂದಿ ಸೂಕ್ಷ್ಮರೂಪದಲ್ಲಿ ವಾತಾವರಣದಲ್ಲಿ ತೇಲುತ್ತಿರುತ್ತಾನೆ. ಮುಂದೆ ಬರುವ ಮಳೆಯ ಹನಿಯಲ್ಲಿ ಬೆರೆತು ಮತ್ತೆ ಭೂಮಿಗೆ ಹಿ೦ದಿರುಗುತ್ತಾನೆ. ಅಲ್ಲಿ ಬೆಳೆವ ಧಾನ್ಯವೋ, ಸೊಪ್ಪು-ಸದೆಯೋ, ಹಣ್ಣು-ಹಂಪಲೋ, ಗೆಡ್ಡೆ-ಗೇಣಸೋ ಸೇರಿ ಅದರ ಮೂಲಕ ಎಲ್ಲಿ ಹುಟ್ಟಬೇಕೋ ಅಲ್ಲಿ ತಲುಪುತ್ತಾನೆ. ಮನುಷ್ಯ ಜನ್ಮ ಬರಬೇಕಾದರೆ ಈ ರೀತಿ ಪದಾರ್ಥದಲ್ಲಿ ಸೇರಿ ತಂದೆಯ ಶರೀರವನ್ನು ಪ್ರವೇಶಿಸುತ್ತಾನೆ. ತಂದೆಯ ಶರೀರದಲ್ಲಿ ಮೂರು ತಿಂಗಳ ಕಾಲ ರೂಪಾಂತರವಾಗಿ ಮುಂದೆ ತಾಯಿಯ ಗರ್ಭವನ್ನು ಹೊಂದುತ್ತಾನೆ. ತಾಯಿಯ ಗರ್ಭದಲ್ಲಿರುವಾಗ ಆಕೆ ಸೇವಿಸಿದ ಆಹಾರ ಪದಾರ್ಥಗಳ ರಸವನ್ನು ಹೊಕ್ಕುಳ ಬಳ್ಳಿಯ ಮೂಲಕ ಸೇವಿಸಿ ಆಕೆಯ ಶ್ವಾಸದ ಗಾಳಿಯನ್ನೇ ಹಂಚಿಕೊಂಡು ಉಸಿರಾಡುತ್ತಾನೆ. ಈಗಿನ ವಿಜ್ಞಾನದ ಫಲವಾದ ಸ್ಕಾನಿಂಗ್ ಚಿತ್ರಗಳಿಂದ ಬೆಳವಣಿಗೆಯ ಹಂತಗಳನ್ನೂ, ಉಸಿರಾಟ ಮತ್ತು ಚಲನೆಯನ್ನೂ ನೋಡಬಹುದು.
ಈ ಹೊಕ್ಕುಳ ಬಳ್ಳಿಯ ನಂಟಿನ ಕಾರಣಕ್ಕೇ ತಾಯಿ-ಮಗುವಿನ ವಿಶೇಷ ಸಂಬಂಧ ಉಂಟಾಗುವುದು. ಈ ರೀತಿಯ ಸಂಬಂಧವನ್ನು ಇನ್ನು ಯಾವುದೇ ರೀತಿಯ ಬಾಂಧವ್ಯದಲ್ಲಿ ಕಾಣಲಾಗದು. ತಂದೆಯಲ್ಲಿಯೂ ಕೂಡ. ಯಾವ ಮನುಷ್ಯನಿಗೇ ಆದರೂ ನೇರವಾಗಿ ದೇಹ ಸಂಬಂಧ ಇರುವುದು ತನ್ನ ತಾಯಿಯ ಜೊತೆಯೇ! ಅದು ಒಂದು ಎರಡಾದಂತೆ. ತಾಯಿ-ಮಕ್ಕಳ ಸಂಬಂಧದ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಆದ್ದರಿಂದ ಮೊದಲು "ಮಾತೃದೇವೋ ಭವ". ನಂತರ "ಪಿತೃದೇವೋ ಭವ". ಸನ್ಯಾಸ ಸ್ವೀಕರಿಸಿ ಯಾರಿಗೂ (ತಮ್ಮ ಗುರುಗಳನ್ನು ಬಿಟ್ಟು) ನಮಸ್ಕರಿಸದ ಮಠಾಧಿಪತಿಗಳೂ ತಮ್ಮ ತಾಯಿಗೆ ನಮಸ್ಕರಿಸುವ ಪದ್ಧತಿಯೂ ಇದನ್ನೇ ಸೂಚಿಸುತ್ತದೆ.
ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳು ಕಳೆದ ಬಳಿಕ ಪೂರ್ಣ ಪ್ರಮಾಣದಲ್ಲಿ ಬೆಳೆದು ಶಿಶುವಿನ ರೂಪ ತಳೆದು ಜನಿಸುತ್ತಾನೆ. ತಾಯಿಯಿಂದ ಬೇರ್ಪಟ್ಟ ನಂತರ ಹೊರಗಿನ ವಾತಾವರಣದ ಗಾಳಿಯಿಂದ ಮೊದಲ ಶ್ವಾಸ ತೆಗೆದುಕೊಳ್ಳುತ್ತಾನೆ. ಮಗು ಹುಟ್ಟಿದ ತಕ್ಷಣ ಅಳುವುದೇ ಮೊದಲ ಶ್ವಾಸ ಪ್ರಾಂಭವಾದ ಗುರುತು. ಹುಟ್ಟಿದ ಮಗು ಶ್ವಾಸನಾಳದಲ್ಲಿ ಕಲ್ಮಶಗಳು ತುಂಬಿದ ಕಾರಣ ಅಳದಿದ್ದರೆ, ವೈದ್ಯರು ಅಥವಾ ದಾದಿ ಮಗುವನ್ನು ಕಾಲಲ್ಲಿ ಹಿಡಿದು ತಲೆ ಕೆಳಗೆಮಾಡಿ ಅಲ್ಲಾಡಿಸಿ ಶ್ವಾಸನಾಳ ಕಲ್ಮಶದಿಂದ ಬಿಡುಗಡೆ ಮಾಡಿ ಉಸಿರಾಟ ಶುರುವಾಗಲು ಸಹಾಯಮಾಡುತ್ತಾರೆ.
ಅಂದು ಪ್ರಾರಂಭವಾದ ಉಸಿರಾಟ ಮತ್ತು ಹೃದಯ ಬಡಿತ ಒಂದು ಕ್ಷಣ ನಿಲ್ಲದೆ ಜೀವಿಯು ಬದುಕಿರುವವರೆಗೂ ನಡಿಯುತ್ತಲೇ ಇರುತ್ತದೆ! ವಿರಾಮವಿಲ್ಲದ ಕಮ್ಮಾರನ ತಿದಿಯಂತೆ ಒತ್ತುತ್ತಿರುವ ಎರಡು ಶ್ವಾಸಕೋಶ ಮತ್ತು ನಿಲ್ಲದೆ ಒತ್ತುತ್ತಿರುವ ಪಂಪಿನಂತಹ ಹೃದಯ ಸೃಷ್ಟಿಯ ವಿಸ್ಮಯವೇ ಸರಿ. (ತಿದಿಗೆ ಇಂಗ್ಲೀಷಿನಲ್ಲಿ ರೀಡ್ ಅನ್ನಬಹುದು. ಹಿಂದೆ ಕಂಪನಿ ನಾಟಕಗಳಲ್ಲಿ ಡಬಲ್ ರೀಡ್ ಹಾರ್ಮೋನಿಯಂ ಉಪಯೋಗಿಸುತ್ತಿದ್ದರು. ಅವೂ ತಿದಿಯಂತೆ ಕೆಲಸ ಮಾಡುತ್ತಿದ್ದವು. ವಾದ್ಯಗಾರ ತನ್ನ ಕಾಲುಗಳಿಂದ ಈ ರೀಡುಗಳನ್ನು ಒತ್ತುತ್ತಿದ್ದುದು ಇಂತಹ ಹಾರ್ಮೋನಿಯಂ ವಾದನ ನೋಡಿದ್ದವರು ನೆನಪಿಸಿಕೊಳ್ಳಬಹುದು),
ಹೀಗೆ ಪ್ರಾಂರಂಭವಾದ ಮೊದಲ ಶ್ವಾಸದಿಂದ ಹಿಂದಿನ ಸಂಚಿಕೆಯಲ್ಲಿ ಹೇಳಿದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಲೆಕ್ಕ ಶುರು. ಒಂದು ಓಟದ ಅಥವಾ ಸ್ಲೋ ಸೈಕಲ್ ರೇಸಿನ ಪಂದ್ಯಾಳುಗಳಂತೆ ಎಲ್ಲರೂ ಕಡೆಯ ಗೆರೆಯವರೆಗೆ ಓಡದೇ ಇರಬಹುದು. ಅನೇಕರು ಮುಂಚೆಯೇ ಬೀಳಬಹುದು. ಕೆಲವರು ಐವತ್ತು ವರುಷ ತಲುಪುವುದೂ ಇಲ್ಲ. ನಿಜ ಜೀವನದಲ್ಲಿ ಹಾಗೆಯೇ ಆಗುತ್ತದೆ. ನೂರು ವರುಷ ತಲುಪುವವರು ಐದು ಸಾವಿರದಲ್ಲಿ ಒಬ್ಬರಂತೆ. ಆದ್ದರಿಂದಲೇ ಶತಮಾನ ಶಾಂತಿ ಅನ್ನುವುದು ಬಲು ಅಪರೂಪ. ಸ್ಲೋ ಸೈಕಲ್ ರೇಸ್ ನೋಡಿದವರು ಅದನ್ನು ನೆನೆಸಿಕೊಂಡರೆ ಜೀವನದ ಈ ರೇಸ್ ಸಾಮ್ಯ ಕಾಣುತ್ತದೆ. ಇಲ್ಲಿ ಹೇಳಿರುವುದರಲ್ಲಿ ಏನೂ ವಿಶೇಷವಿಲ್ಲ. ಇವು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೂ ಇವುಗಳ ಬಗ್ಗೆ ನಾವು ಚಿಂತಿಸುವುದು ಕಮ್ಮಿಯೇ. ಆದ್ದರಿಂದ ಪ್ರಾಸ್ತಾವಿಕವಾಗಿ ಈ ವಿವರಗಳನ್ನು ಕೊಡಬೇಕಾಯಿತು.
*****
ಒಂದು ಭೀಕರ ಅಪಘಾತ ಆಗಿದೆ. ವಾಹನಗಳು ಚಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಮತ್ತು ರಸ್ತೆಯ ಪಕ್ಕ ಬಿದ್ದಿವೆ. ನೋಡುಗರು ಸುತ್ತ ನೆರೆದಿದ್ದಾರೆ. ಆ ದಾರಿಯಲ್ಲಿ ಹೋಗುವವರೆಲ್ಲರೂ ನೋಡುತ್ತಿದ್ದಾರೆ. ಕೆಲವರು ಸಹಾಯ ಮಾಡಲು ಯತ್ನಿಸುತ್ತಿದ್ದಾರೆ. ಆಂಬುಲೆನ್ಸ್ ಮತ್ತು ಟ್ರ್ಯಾಫಿಕ್ ಪೊಲೀಸರಿಗೆ ಫೋನ್ ಮಾಡಿಯಾಗಿದೆ. ಅಪಘಾತ ಹೇಗೆ ಆಯಿತು ಎಂದು ಎಲ್ಲರಿಗೆ ಕುತೂಹಲ, ಆತಂಕ. ಯಾರಿಗೆ ಎಷ್ಟು ಪೆಟ್ಟಾಗಿದೆ ಅನ್ನುವ ಚಿಂತೆ. ಎಲ್ಲರದೂ ಒಂದೇ ಪ್ರಶ್ನೆ. "ಪ್ರಾಣಾಪಾಯ ಇಲ್ಲ ತಾನೇ?". ಬಾಕಿ ವಿಷಯಗಳು ಆಮೇಲೆ. ಬಹಳ ಬೆಲೆಬಾಳುವ ಕಾರು ಇರಬಹುದು. ಹೊಸ ಬಸ್ಸು ಇರಬಹುದು. ಮೂರ್ನಾಲ್ಕು ವಾಹನಗಳು ಒಟ್ಟಿಗೆ ಢಿಕ್ಕಿ ಆಗಿರಬಹುದು. ಸರಣಿ ಅಪಘಾತವೇ ಆಗಿರಬಹುದು. ಆದರೆ ಮೊದಲ ಪ್ರಶ್ನೆ "ಪ್ರಾಣಾಪಾಯವಿಲ್ಲ ತಾನೇ?" ಎಂದೇ. ರಕ್ತ ಹರಿದಿರುವುದು ಕಾಣುತ್ತಿದೆ. ಮೂಳೆ ಮುರಿದಿರುವುದು ಬಲು ಸಾಧ್ಯ. ಆದರೆ ಪ್ರಶ್ನೆ ಅದೇ: "ಪ್ರಾಣಾಪಾಯವಿಲ್ಲ ತಾನೇ?"
ಮನೆಯಲ್ಲಿ ಹಾಸಿಗೆ ಹಿಡಿದಿದ್ದ ವ್ಯಕ್ತಿ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾನೆ. ನೋಡುವವರಿಗೂ ಕಷ್ಟ. ನಿನ್ನೆ ತಾನೇ ವೈದ್ಯರು ಬಂದು ನೋಡಿದ್ದರು. ಈಗ ಮತ್ತೆ ಬರಲು ಕರೆ ಹೋಗಿದೆ. ವೈದ್ಯರು ಬಂದರು. ಅವರ ಪರೀಕ್ಷೆ ಹೇಗೆ? ಮೊದಲು ಮಾಡುವುದು ಮೂಗಿನ ಬಳಿ ಎರಡು ಬೆಟ್ಟು ಹಿಡಿದು ಮಾಡುವ ಪರೀಕ್ಷೆ, ನಂತರ ನಾಡಿ ಬಡಿತ. ಉಸಿರಾಟ ನಡೆಯುತ್ತಿದ್ದರೆ ಮುಂದಿನ ಚಿಕಿತ್ಸೆ. ಉಸಿರಾಟವಿಲ್ಲ ಎಂದರೆ ಎಲ್ಲ ಮುಗಿಯಿತು. ಸಿನಿಮಾಗಳಲ್ಲಿ ತೋರಿಸುವಂತೆ ಹೊದ್ದಿಕೆಯಿಂದ ಮುಖ ಮುಚ್ಚುವುದು ಮತ್ತು ವೈದ್ಯರು ತಲೆ ಅಲ್ಲಾಡಿಸುವುದು. ಮುಂದೆ ಇನ್ನೇನೂ ಇಲ್ಲ. ಕ್ರಿಯಾಕರ್ಮಗಳ ವ್ಯವಸ್ಥೆಯ ಯೋಚನೆ ಬಿಟ್ಟು.
*****
ಮನುಷ್ಯ ದೇಹಗಳಲ್ಲಿ ಇರುವ ಅಂಗಗಳಲ್ಲಿ ಅನೇಕ ದೇವತೆಗಳು ವಾಸಿಸಿತ್ತಾ ಇದ್ದು ಆಯಾ ಅಂಗಗಳು ಸರಿಯಾಗಿ ಕೆಲಸ ಮಾಡಲು ಅವಕಾಶ ಮಾಡಿ ಕೊಡುತ್ತಾರಂತೆ. ಅವರಿಗೆ ಅಭಿಮಾನಿ ದೇವತೆಗಳು ಎನ್ನುತ್ತಾರೆ. ಹಿಂದೊಂದು ಸಂಚಿಕೆಯಲ್ಲಿ ಲೇಖನಿಯ ವಿಷಯದಲ್ಲಿ ನೋಡಿದ್ದೇವೆ. ಲೇಖನಿ ಒಂದು ಜಡ ವಸ್ತು. ಅದಾಗಿಯೇ ಏನನ್ನೂ ಬರೆಯಲಾರದು. ಒಂದು ಕೈ ಆ ಲೇಖನಿ ಹಿಡಿದು ಚೈತನ್ಯ ಕೊಟ್ಟು ಬರೆಸಬೇಕು. ಹಾಗೆಯೇ ದೇಹದ ಅಂಗಗಲ್ಲಿರುವ ಅಭಿಮಾನಿ ದೇವತೆಗಳು ಚೈತನ್ಯ ಕೊಟ್ಟು ಕೆಲಸ ನಡೆಸಬೇಕು. ಈ ರೀತಿಯ ಕೆಲಸಗಳನ್ನು ಆ ದೇವತೆಗಳು ಮಾಡುವ ವ್ಯಾಪಾರ ಎನ್ನುತ್ತೇವೆ. ಇಲ್ಲಿ ವ್ಯಾಪಾರ ಎಂದರೆ ಸಾಮಾನ್ಯ ಅರ್ಥದ ಕೊಡು-ಕೊಳ್ಳುವಿಕೆ ಅಲ್ಲ. ಸೇಲ್ ಮತ್ತು ಪರ್ಚೆಸ್ ಅಂತಲ್ಲ. ಚೈತನ್ಯದಿಂದ ಮಾಡುವ ಕ್ರಿಯೆಗಳು.
ಕಣ್ಣಿನಲ್ಲಿ ಅಭಿಮಾನಿ ದೇವತೆಯಾಗಿ ಸೂರ್ಯನಿದ್ದಾನೆ. ಅವನು ಚೈತನ್ಯ ಕೊಟ್ಟು ನೋಡಿಸಿದರೆ ದೃಷ್ಟಿ ಉಂಟು. ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಸ್ವಲ್ಪ ಕಡಿಮೆ ಚೈತನ್ಯ ಕೊಟ್ಟರೆ ಮಸಕು ಮಸಕಾಗಿ ಕಾಣುತ್ತದೆ. ಸೂರ್ಯನು ನಿರ್ಗಮಿಸಿದರೆ ಕಣ್ಣು ಚೆನ್ನಾಗಿದ್ದರೂ ದೃಷ್ಟಿ ಇಲ್ಲದ ಕುರುಡ. ಕಣ್ಣೆನೋ ನೋಡಲು ಚೆನ್ನಾಗಿ ಬಟ್ಟಲುಗಣ್ಣು, ಕಮಲದಂತೆ ಇದೆ ಅನ್ನುತ್ತಾರೆ. ಆದರೆ ನೋಟವಿಲ್ಲ. ಕಿವಿಯಲ್ಲಿ ಅಭಿಮಾನಿ ದೇವತೆಯಾಗಿ ಚಂದ್ರನಿದ್ದಾನೆ. ಅವನು ಚೈತನ್ಯ ಕೊಟ್ಟಾಗ ಕಿವಿ ಕೇಳಿಸುತ್ತದೆ. ಅವನು ನಿಷ್ಕ್ರಿಯನಾದರೆ ಕಿವಿ ಬೇರೆಯವರು ನೋಡಲು ಚೆನ್ನಾಗಿದ್ದರೂ ಕೇಳಿಸದು. ಒಳ್ಳೆಯ ವಜ್ರದ ವಾಲೆ ಹಾಕಬಹುದು. ಆದರೆ ಶಬ್ದಗ್ರಹಣವೇ ಇಲ್ಲ. ಕಾಲಿನಲ್ಲಿ ಇಂದ್ರನ ಮಗನಾದ ಜಯಂತ ಅಭಿಮಾನಿ ದೇವತೆ. ಅವನು ಶಕ್ತಿ ಕೊಟ್ಟರೆ ನಡೆದಾಟ. ಇಲದಿದ್ದರೆ ಕುಂಟ. ಹೀಗೆ ಎಲ್ಲ ಅಂಗಗಳೂ ಸಹ.
ಒಮ್ಮೆ ಎಲ್ಲ ಅಭಿಮಾನಿ ದೇವತೆಗಳ ನಡುವೆ ಒಂದು ಜಗಳ ಆಯಿತಂತೆ. ನಾನು ಹೆಚ್ಚು, ನಾನು ಹೆಚ್ಚು ಅಂದು. ಯಾರು ದೊಡ್ಡವರು ಎಂದು ನಿರ್ಣಯಿಸಲು ಒಂದು ಪರೀಕ್ಷೆ ನಡೆಯಿತು. ಒಂದೊಂದು ದೇವತೆ ಆ ಅಂಗ ಬಿಟ್ಟು ಹೊರನಡೆಯುವಂತೆ ಏರ್ಪಟ್ಟಿತು. ಆಯಾಯಾ ದೇವತೆ ಹೊರಟರೆ ಕಿವುಡು, ಮೂಗು, ಕುಂಟು, ಇತ್ಯಾದಿ ಆಯಿತು. ಆದರೆ ಜೀವಿ ಇನ್ನೂ ಬದುಕಿಯೇ ಇತ್ತು. ಕಡೆಯಲ್ಲಿ ಉಸಿರು. ಮುಖ್ಯಪ್ರಾಣ ದೇವರು ಉಸಿರಿನ ನಿಯಮಕರು. ಅವರು ಹೊರಗೆ ಹೊರಟರು. ಬೇರೆ ದೇವತೆಗಳಿಗೆ ಆ ದೇಹದಲ್ಲಿ ಉಳಿಯಲೇ ಆಗಲಿಲ್ಲ. ಕಡೆಯ ಉಸಿರಿನ ಜೊತೆ ಎಲ್ಲ ಅಂಗಗಳೂ ಬಿದ್ದು ಹೋಗಿ ಆ ದೇಹ "ಶವ" ಅಂತಾಯಿತು.
ಮುಖ್ಯ ಪ್ರಾಣ ದೇವರು ಉಸಿರಾಡುತ್ತಿರುವವರೆಗೇ ಬದುಕು. ಅವರು ಹೊರಟರೆ ಎಲ್ಲ ಮುಗಿಯಿತು. ಕನಕದಾಸರು ಹೇಳುವಂತೆ "ನೆಂಟ ನೀನಗಲಿದರೆ ಒಣ ಹೆಂಟೆಯಲಿ ಮುಚ್ಚುವರು". ಅಂತಹ ದೇಹವನ್ನು ಮನೆಯ ಒಳಗೆ ಇಟ್ಟುಕೊಳ್ಳುವುದೂ ಇಲ್ಲ. "ಹಿಡಿ, ಹಿಡಿ" ಎಂದು ಹೊರಗೆ ಹಾಕುತ್ತಾರೆ. "ಹಿತ್ತಲ ಕಸಕ್ಕಿಂತ ಕಡೆಯಾಯಿತೀ ದೇಹ". "ಎಷ್ಟು ಹೊತ್ತು ಇಟ್ಟುಕೊಳ್ಳುವುದು? ಮೊದಲು ಸಾಗಿಸಿರಿ" ಅನ್ನುತ್ತಾರೆ. ಅಷ್ಟೇ.
*****
ನಮ್ಮಗಳ ಜೀವನದಲ್ಲಿ ಶ್ವಾಸದ ಪಾತ್ರವನ್ನು ಈ ಸಂಚಿಕೆಯಲ್ಲಿ ಸ್ವಲ್ಪ ವಿವರವಾಗಿ ನೋಡಿಯಾಯಿತು. ಈ ರೀತಿ ಉಸಿರು ಆಡುತ್ತಿರುವಾಗ ನಡೆಯುವ "ಶ್ವಾಸ ಜಪ" ಮತ್ತು "ಮೂರು ವಿಧ ಜೀವರು" ಎನ್ನುವುದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ.
Excellent writing. Collection of information is extrordinary. Hats off to you Sir
ReplyDeleteಓದಿದಷ್ಟು ಇನ್ನೂ ತಿಳಿದುಕೂಳ್ಳುವ ಕುತೂಹಲ.
ReplyDeleteತುಂಬಾ interesting ಆಗಿದೆ
CR Ramesh babu