ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಮಳೆಯ ಬರುವಿಕೆಯನ್ನು ಖಚಿತವಾಗಿ ತಿಳಿಯಲು ವಾದ್ಯಾರ್ ಬಳಿ ಬಂದ ರೈತ ಪ್ರತಿನಿಧಿ ಮತ್ತು ವಾದ್ಯಾರ್ ಅವರ ಸಂಭಾಷಣೆ ಉಳ್ಳ ವಿಷಯಗಳನ್ನು "ಶ್ರದ್ದೆ ಮತ್ತು ನಂಬಿಕೆ" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಮಳೆಯ ಬರುವಿಕೆಯ ದಿನವನ್ನು ವಾದ್ಯಾರ್ ಹೇಳಿದಾಗ ಅನುಮಾನಿಸಿದ ರೈತ, ಕೋಪದಿಂದ ತಮ್ಮ ಜನಿವಾರವನ್ನು ತೋರಿಸಿ ವಾದ್ಯಾರ್ "ಇದೇನು ನೀರು ಸೇದುವ ಹಗ್ಗ ಎಂದು ತಿಳಿದೆಯಾ?" ಎಂದು ಕೇಳಿದ ಪ್ರಸಂಗವನ್ನು ಅಲ್ಲಿ ಕಂಡೆವು. ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನು ಓದಿದ ಕೆಲ ಯುವ ಮಿತ್ರರು "ಜನಿವಾರಕ್ಕೂ ಮತ್ತು ನೀರು ಸೇದುವ ಹಗ್ಗಕ್ಕೂ ಸಂಬಂಧ ಕಲ್ಪಿಸುವುದು ಎಷ್ಟು ಸರಿ?" ಎಂದು ಸಂದೇಹ ವ್ಯಕ್ತ ಪಡಿಸಿದ್ದಾರೆ. ಈ ಸಂದೇಹ ನಿವಾರಣೆಗೆ ಸ್ವಲ್ಪ ಪ್ರಯತ್ನಿಸೋಣ. ಇವೆರಡರ ಸಂಬಂಧ ಸ್ವಲ್ಪ ಉತ್ಪ್ರೇಕ್ಷೆ ಅನ್ನುವುದರಲ್ಲಿ ಸಂದೇಹವಿಲ್ಲ. ಪರಸ್ಪರ ಸಂಭಾಷಣೆಯಲ್ಲಿ ಇಂತಹ ಉತ್ಪ್ರೇಕ್ಷೆಗೆ ಎಂದೂ ಅವಕಾಶ ಉಂಟು. ಆದರೆ ಈ ವಿಷಯವನ್ನು ಸರಿಯಾದ ಹಿನ್ನೆಲೆಯಲ್ಲಿ ತಿಳಿಯಬೇಕಾದರೆ ಅನಿವಾರ್ಯವಾಗಿ ಜನಿವಾರದ ಬಗ್ಗೆ ಕೆಲವು ಮೂಲ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
*****
ಈಗಿನ ಕಾಲದಂತೆ ಹಿಂದೆ ಜನಿವಾರಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರಲಿಲ್ಲ. ಉಪಯೋಗಿಸುವ ಜನರು ಅವನ್ನು ಕೊಳ್ಳುತ್ತಲೂ ಇರಲಿಲ್ಲ. ಸಣ್ಣ ಊರುಗಳಲ್ಲಿ ಅಂಗಡಿಗಳೂ ಇರಲಿಲ್ಲ. ಮನೆಗೆ ಯಾರಾದರೂ ಬಂದರೆ, ವಿಶೇಷವಾಗಿ ಶ್ರಾದ್ಧಾದಿ ಕಾರ್ಯಕ್ರಮಗಳಲ್ಲಿ, ಅಂತಹ ಅತಿಥಿಗಳಿಗೆ ಆತಿಥೇಯರೇ ಜನಿವಾರಗಳನ್ನು ಕೊಡುತ್ತಿದ್ದರು. ಪ್ರವಾಸ ಅಥವಾ ಪರಸ್ಥಳಗಳಿಗೆ ಹೋಗುವಾಗ ತಮ್ಮ ವಿಭೂತಿ, ಗೋಪಿಚಂದನ ಅಥವಾ ನಾಮದ ಪೆಟ್ಟಿಗೆಗಳಲ್ಲಿ ಒಂದೆರಡು ಜನಿವಾರಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು.
ಹೆಣ್ಣು ಮಕ್ಕಳು ಹತ್ತಿಯಿಂದ ಸಂಜೆಯ ಹೊತ್ತು ದೀಪದ ಬತ್ತಿ, ಮಂಗಳಾರತಿ ಬತ್ತಿ ಮತ್ತು ಗೆಜ್ಜೆ-ವಸ್ತ್ರಗಳನ್ನು ಮಾಡಿಕೊಳ್ಳುತ್ತಿದ್ದರು. ಅದರಂತೆ ಗಂಡಸರು ತಕಲಿಗಳನ್ನು ಇಟ್ಟುಕೊಂಡು ಹತ್ತಿಯಿಂದ ತಾವೇ ನೂಲು ದಾರಗಳನ್ನು ತೆಗೆಯುತ್ತಿದ್ದರು. ಬಾಲ್ಯದಲ್ಲಿ ನಾವೂ ಈ ರೀತಿ ಮಾಡಿದ್ದೇವೆ. ಈಗ ತಕಲಿಗಳನ್ನು ನೋಡಬೇಕಾದರೆ ಮ್ಯೂಸಿಯಂಗಳಿಗೆ ಹೋಗಬೇಕಷ್ಟೆ! ಸ್ವಾತಂತ್ರ್ಯ ಚಳುವಳಿಗಳ ಕಾಲದಲ್ಲಿ ಮನೆ ಮನೆಗಳಲ್ಲಿ ಚರಕಗಳು ಇರುತ್ತಿದ್ದವು. ನೂಲು ತೆಗೆದು ಬಟ್ಟೆ ನೇಯುವುದು ಕೆಲವರ ಕಸಬು ಮತ್ತು ಜೀವನೋಪಾಯ ಆಗಿತ್ತು. ತಕಲಿಗಳಿಂದ ನೂತ ದಾರದಿಂದ ಮನೆಗಳಿಲ್ಲಿಯೇ ಜನಿವಾರ ಮಾಡಿಕೊಳ್ಳುತ್ತಿದ್ದರು.
ಒಂದು ಜನಿವಾರಕ್ಕೆ ಇಷ್ಟು ಉದ್ದದ ದಾರ ಇರಬೇಕು ಎಂದು ನಿಯಮಗಳಿದ್ದವು. (144 ಮೊಳ ಉದ್ದ ಎಂದು ನೆನಪು). ತಕಲಿಯ ದಾರ ಆದ್ದರಿಂದ ಮತ್ತು ಇಷ್ಟು ಉದ್ದದ ದಾರ ಆದದ್ದರಿಂದ ಅವು ದಪ್ಪ ಇರುತ್ತಿದ್ದವು. ಈ ರೀತಿ ತಯಾರಿಸಿದ ದಾರವನ್ನು ಮತ್ತೆ ಹುರಿ ಮಾಡಿ ಮೂರು ಎಳೆ ಮಾಡಿ ಒಂದು ಜನಿವಾರ ಮಾಡುತ್ತಿದ್ದರು. ಆಗ ಮೂರು ಎಳೆ ಸೇರುವಕಡೆ ಗಂಟು ಹಾಕಿ ಅದನ್ನು "ಬ್ರಹ್ಮಗಂಟು" ಎಂದು ಕರೆಯುತ್ತಿದ್ದರು. ಹೀಗೆ ಮೂರು ಎಳೆ ಮಾಡಿ ಒಂದು ಗಂಟು ಹಾಕಿ ತಯಾರಿಸಿದ ಜನಿವಾರ. "ಒಂಟಿ ಜನಿವಾರ". ಎರಡು ಒಂಟಿ ಜನಿವಾರ ಜೋಡಿಸಿ ಸುತ್ತಿ "ಜೋಡಿ ಜನಿವಾರ" ಮಾಡಿ ಇಡುತ್ತಿದ್ದರು. ಈಗ ಅಂಗಡಿಗಳಲ್ಲಿ ಸಿಗುವ ಜನಿವಾರಗಳನ್ನೂ ಈ ರೀತಿ ಜೋಡಿ ಮಾಡಿ ಇಟ್ಟಿರುತ್ತಾರೆ.
*****
ಮುಂಜಿ (ಉಪನಯನ) ಮಾಡುವ ಪದ್ಧತಿ ಇರುವ ಕುಟುಂಬಗಳಲ್ಲಿ ಬಾಲಕರಿಗೆ ಏಳು ವರುಷಗಳು ಆಗಿರುವಾಗ ಮುಂಜಿ ಮಾಡುತ್ತಿದ್ದರು. "ಗರ್ಭಾಷ್ಟಮ" ಎನ್ನುವುದು ಮುಂಜಿ ಮಾಡುವುದಕ್ಕೆ ಸರಿಯಾದ ವಯಸ್ಸು ಎಂದು ಹೇಳುತ್ತಿದ್ದರು. ಗರ್ಭಾಷ್ಟಮ ಎಂದರೆ ತಾಯಿಯ ಗರ್ಭದಲ್ಲಿ ಇದ್ದ ಸಮಯವನ್ನೂ ಲೆಕ್ಕ ಹಿಡಿದು ಎಂಟನೆಯ ವರುಷ ಎಂದು ನಂಬಿಕೆ. ಅಂದರೆ, ಏಳು ವರುಷಗಳು ತುಂಬಿದ ನಂತರದಲ್ಲಿ. ಈ ಸಂಸ್ಕಾರ ಮಾಡುವಾಗ ಬಾಲಕನನ್ನು ವಟು ಎಂದು ಕರೆಯುತ್ತಾರೆ. ವಟುವಿಗೆ ಸೊಂಟದಲ್ಲಿ ದರ್ಭೆಯ ಹುಲ್ಲಿನಲ್ಲಿ ಒಂದು ಹಗ್ಗದ ರೀತಿ ಮಾಡಿ ಕಟ್ಟುತ್ತಾರೆ, ಅದಕ್ಕೆ "ಮೌ೦ಜಿ" ಅನ್ನುತ್ತಾರೆ. ಅದರಿಂದ "ಮುಂಜಿ ಮಾಡುವುದು" ಎಂದು ಬಂದಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ವಟುವಿನ ತಂದೆ, ತಂದೆ ಇಲ್ಲದಿದ್ದ ಪಕ್ಷದಲ್ಲಿ ಇನ್ನು ಯಾರಾದರೂ ಹಿರಿಯರು, ಮಂತ್ರೋಪದೇಶ ಮಾಡುತ್ತಾರೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಆ ವಟುವಿಗೆ "ಒಂಟಿ" ಜನಿವಾರ ಹಾಕುತ್ತಾರೆ. ಅಂದಿನಿಂದ ಅವನು ಬ್ರಹ್ಮಚಾರಿಯಾಗಿ ಅವನ ವಿದ್ಯಾಭ್ಯಾಸ ಪ್ರಾರಂಭ ಮಾಡುತ್ತಿದ್ದರು. ಗುರುಕುಲಗಳು ಇದ್ದ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಗುರುಕುಲಗಳಿಗೆ ಕಳುಹಿಸುತ್ತಿದ್ದರು. ಗುರುಕುಲಗಳಲ್ಲಿ ಸಾಮಾನ್ಯವಾಗಿ ಹನ್ನೆರಡು ವರುಷ ವಿದ್ಯಾಭ್ಯಾಸ ನಡೆಯುತ್ತಿತ್ತು. ಈ ರೀತಿ ವಿದ್ಯಾಭ್ಯಾಸ ಮುಗಿದ ನಂತರ "ಸಮಾವರ್ತನ" ಎನ್ನುವ ಸಂಸ್ಕಾರ ಮಾಡುತ್ತಿದ್ದರು. ಇದು ಈಗಿನ "ಪದವಿ ಪ್ರದಾನ ಸಮಾರಂಭ" ಅಥವಾ "ಕಾನ್ವೊಕೇಶನ್" ಇದ್ದಂತೆ. ಅಲ್ಲಿಗೆ ವಿದ್ಯಾಭ್ಯಾಸ ಮುಗಿದು ಗೃಹಸ್ಥಾಶ್ರಮ ಪಡೆಯಲು ಯೋಗ್ಯನಾದ ಎಂದು. ಈ ಸಮಾವರ್ತನ ಹೋಮ ಮಾಡಿದ ಸಂದರ್ಭದಲ್ಲಿ ಎರಡನೆಯ ಜನಿವಾರ ತೊಡಿಸುತ್ತಿದ್ದರು. ಬ್ರಹ್ಮಚಾರಿಯ ಒಂಟಿ ಜನಿವಾರ ದಾಟಿ ಈಗ ಗೃಹಸ್ಥಾಶ್ರಮದ ಎರಡು ಜನಿವಾರಗಳು ಬಂದಂತಾಯಿತು.
ಇಂತಹ ಸ್ನಾತಕನು ಮುಂದಿನ ತಿಳುವಳಿಕೆಗಾಗಿ ಆಗ ಬಹುದೊಡ್ಡ ವಿದ್ಯಾಕೇಂದ್ರವಾಗಿದ್ದ ಕಾಶಿ ಕ್ಷೇತ್ರಕ್ಕೆ ಹೋರಡುತ್ತಿದ್ದನು. ಮಾರ್ಗಮಧ್ಯದಲ್ಲಿ ಯಾರಾದರೂ ಗೃಹಸ್ಥರು ಅವನಿಗೆ ತಮ್ಮ ಮಗಳನ್ನು ಕೊಟ್ಟು ಮಾಡುವೆ ಮಾಡುತ್ತಿದ್ದರು. ಇದೇ ಈಗಿನ ಮದುವೆಗಳಲ್ಲಿ "ಕಾಶಿಯಾತ್ರೆ" ಶಾಸ್ತ್ರವಾಗಿ ಉಳಿದಿದೆ. (ಇದೇ ಕಾರಣಕ್ಕೆ, ಗಂಡಿಗೆ ಎರಡನೇ ಮದುವೆ ಮಾಡುವ ಸಂದರ್ಭ ಬಂದರೆ ಆಗ ಕಾಶಿಯಾತ್ರೆ ಇರುವುದಿಲ್ಲ.) ವಿವಾಹದ ನಂತರ ಗೃಹಸ್ಥನಾಗಿ ಇರುವವರೆಗೂ ಜೋಡಿ ಜನಿವಾರ ಹಾಕಿಕೊಳ್ಳುವುದು ರೀತಿ.
ಯಾವುದೇ ಪೂಜೆ-ಪುನಸ್ಕಾರಾದಿ ಕೆಲಸಗಳು ಮಾಡುವುದಕ್ಕೆ ಉಟ್ಟಿರುವ ಧೋತ್ರದ (ಪಂಚೆಯ) ಜೊತೆಗೆ ಒಂದು ವಸ್ತ್ರ ಹೊದ್ದಿರಲೇ ಬೇಕು (ಉತ್ತರೀಯ) ಎಂದು ನಿಯಮ. (ಶವ ಸಂಸ್ಕಾರ ಮಾಡುವ ಕಾಲದಲ್ಲಿ ಅಂಚು (ಬಾರ್ಡರ್) ಇಲ್ಲದ ಹೊಸ ಒಂಟಿ ಬಟ್ಟೆ ಉಟ್ಟುಕೊಂಡು ಮಾಡುತ್ತಾರೆ. ಅವಾಗ ಮಾತ್ರ ಮೈಮೇಲೆ ಹೊದ್ದುಕೊಳ್ಳುವುದಿಲ್ಲ. ಇದು "ಸಪಿಂಡೀಕರಣ" ಮಾಡುವವರೆಗೆ. ಇದೇ ಕಾರಣಕ್ಕೆ ಅಂಚು ಇಲ್ಲದ ಬಟ್ಟೆಗಳನ್ನು ಬೇರೆ ಸಂದರ್ಭಗಳಲ್ಲಿ ಉಪಯೋಗಿಸುವುದಿಲ್ಲ. ಯಾರಿಗಾದರೂ ಬಟ್ಟೆಗಳನ್ನು ಕೊಡಬೇಕಾದರೆ ಜೊತೆ ಬಟ್ಟೆ ಕೊಡಬೇಕು, ಒಂಟಿ ಕೊಡಬಾರದು ಎನ್ನುವುದು, ಅದಲ್ಲದೆ ಹೊಸ ಬಟ್ಟೆಗೆ ಅಂಚಿನಲ್ಲಿ ಅರಿಸಿನ ಹಚ್ಚುವುದು ಇವೇ ಕಾರಣಕ್ಕೆ). ವಯಸ್ಸಾದ ಕಾಲದಲ್ಲಿ ತುಂಬಾ ಹಿರಿಯರಾದವರಿಗೆ ಕೆಲವು ವೇಳೆ ಜಾರಿಹೋದ ಬಟ್ಟೆಗಳನ್ನು ಮತ್ತೆ ಮತ್ತೆ ಹಾಕಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಅಂತಹ ಹಿರಿಯರು ಉತ್ತರೀಯರದಂತೆ ಇರಲಿ ಎಂದು (ಉತ್ತರೀಯಾರ್ಥೇ ತೃತೀಯ ಯಗ್ನೋಪವೀತಂ) ಎಂದು ಮೂರನೆಯ ಜನಿವಾರ ಧರಿಸುತ್ತಾರೆ. ಅಂದರೆ ಮೂರು ಒಂಟಿ ಜನಿವಾರಗಳು. ಸಾಮಾನ್ಯವಾಗಿ ಎಪ್ಪತ್ತು ವರುಷ ದಾಟಿದ ಹಿರಿಯರು ಹೀಗೆ ಮೂರನೆಯ ಜನಿವಾರ ಧರಿಸುತ್ತಾರೆ.
ಸನ್ಯಾಸ ಸ್ವೀಕಾರ ಮಾಡುವ ಮುನ್ನ ತನಗೆ ತಾನೇ ಶ್ರಾದ್ಧ ಮಾಡಿಕೊಂಡು (ಆತ್ಮಶ್ರಾದ್ಧ ಅನ್ನುತ್ತಾರೆ) ಶಿಖೆ (ತಲೆಯಲ್ಲಿ ಬಿಟ್ಟುಕೊಂಡಿರುವ ಜುಟ್ಟು) ಮತ್ತು ಜನಿವಾರ ವಿಸರ್ಜಿಸುತ್ತಾರೆ (ತೆಗೆದು ಹಾಕುತ್ತಾರೆ). ಅಲ್ಲಿಂದ ಮುಂದೆ ಅವರು ಜನಿವಾರ ಧರಿಸುವುದಿಲ್ಲ. ಆದ್ದರಿಂದ ಸನ್ಯಾಸಿಗಳಿಗೆ ಜುಟ್ಟು-ಜನಿವಾರ ಇಲ್ಲ ಅನ್ನುವುದು.
ಹೀಗೆ ಬ್ರಹ್ಮಚಾರಿಗಳಿಗೆ ಒಂಟಿ ಜನಿವಾರ, ಗೃಹಸ್ಥರಿಗೆ ಎರಡು ಒಂಟಿ (ಅಥವಾ ಒಂದು ಜೊತೆ) ಜನಿವಾರ, ಮತ್ತು ಹಿರಿಯರಿಗೆ ಮೂರು ಒಂಟಿ ಜನಿವಾರ (ಉತ್ತರೀಯವಾಅಗಿ ಮೂರನೆಯದು) ಧರಿಸುವ ಸಂಪ್ರದಾಯ.
*****
ಮೇಲೆ ವಿವರಿಸಿದಂತೆ ತಕಲಿಯಲ್ಲಿ ತೆಗೆದ ನೂಲಿನಿಂದ ಮತ್ತು ನಿಯಮದಂತೆ ಉದ್ದವಾದ ದಾರವನ್ನು ಹುರಿ ಮಾಡಿ ಮಾಡಿದ ಜನಿವಾರ ದಪ್ಪಗಿರುತ್ತದೆ. ಇಂತಹ ಮೂರು ಜನಿವಾರಗಳು ಸೇರಿದರೆ ಅದು ಮತ್ತಷ್ಟು ದಪ್ಪಗೂ ಕಾಣುತ್ತದೆ. ಆದ ಕಾರಣ ವಾದ್ಯಾರ್ "ಇದು ನೀರು ಸೇದುವ ಹಗ್ಗ ಎಂದು ತಿಳಿದೆಯಾ?" ಎಂದು ಕೇಳಿದ್ದು. ತಿರುಪತಿ, ಮೇಲುಕೋಟೆ ಇತ್ಯಾದಿ ಕ್ಷೇತ್ರಗಳಲ್ಲಿ ನಡೆಯುವ ಉತ್ಸವದ ವಿಡಿಯೋ ನೋಡಿದರೆ ಅಲ್ಲಿ ಕಾಣುವ ಅರ್ಚಕರ ಜನಿವಾರಗಳನ್ನು ಗಮನಿಸಿದರೆ ಇದು ಇನ್ನೂ ವಿಶದವಾಗಿ ಗೊತ್ತಾಗಬಹುದು!
ಈಗಿನ ಸಮಾಜದಲ್ಲಿ ಮುಂಜಿ, ಸಮಾವರ್ತನ ಕಾರ್ಯಗಳಿಗೆ ಹೆಚ್ಚು ಮಹತ್ವವಿಲ್ಲ. ಅನೇಕ ವೇಳೆ ನಲವತ್ತು ವಯಸ್ಸಿನ ಹತ್ತಿರದ ಹುಡುಗನಿಗೆ ಮದುವೆಯ ಹಿಂದಿನ ದಿನ ಮುಂಜಿ, ಮದುವೆಯ ದಿನ ಸಮಾವರ್ತನ ಹೋಮ, ಅದಾದ ಕಾಲು ಗಂಟೆಯಲ್ಲಿ ಕಾಶಿಯಾತ್ರೆ, ಅರ್ಧ ಗಂಟೆಯಲ್ಲಿ ವಿವಾಹ ನಡೆಯುವುದು ಸಾಮಾನ್ಯ. ಬಟ್ಟೆಗಳನ್ನು ಕೊಳ್ಳುವ, ಕೊಡುವ, ತೊಡುವ ರೀತಿಗಳೂ ಬದಲಾಗಿವೆ. ಕಾಲ ಕಾಲಕ್ಕೆ ಸಮಾಜ ಬದಲಾವಣೆ ಆಗುವುದಕ್ಕೆ ಇದು ಒಂದು ಉದಾಹರಣೆ.
ಪ್ರತಿಯೊಂದು ಸಣ್ಣ ವಿಷಯವೂ ಎಷ್ಟು ವಿಶದವಾಗಿ ಇರುತ್ತದೆ. ಈ ಲೇಖನ ನಿಜವಾಗಿ ಅರ್ಥಪೂರ್ಣವಾಗಿದೆ.
ReplyDeleteVery interesting
ReplyDeleteನಾವು ಯಾಂತ್ರಿಕವಾಗಿ ಆಚರಿಸುವ ಎಷ್ಟೋ ಆಚರಣೆಗಳ ಮೂಲ ದಾಖಲಿಸುವುದು ಅವಶ್ಯವಾಗಬಹುದು ಇಲ್ಲವಾದರೆ ಅವುಗಳ ಮಹತ್ವ ಮುಂದಿನ ಜನಾಂಗಕ್ಕೆ ಗೊತ್ತಾಗದೆ ಹೋಗಬಹುದು
ReplyDeleteಎರಡನೇ ಮದುವೆಯಲ್ಲಿ ಕಾಶಿಯಾತ್ರೆ ಇರುವುದಿಲ್ಲ ಎಂದು ಗೊತ್ತಿರಲಿಲ್ಲ. ಅಂತಹ ಸಮಾರಂಭವನ್ನು ನೋಡಿಯೂ ಇಲ್ಲ!
ReplyDeleteಚಿಕ್ಕಂದಿನಲ್ಲಿ ತಕಲಿಯಲ್ಲಿ ದಾರ ತೆಗೆಯಲು ಕಲಿತಿದ್ದು ನೆನಪಿಗೆ ಬಂತು.
ಲೇಖನ ಆಸಕ್ತಿಕರ ಮತ್ತು ಮಾಹಿತಿಪೂರ್ಣವಾಗಿದೆ👌
Lekhana tumba chennagi moodibandide sir, came to know so many things , about the important features of "janiwara" and the proper way of making. Thanks so much, great job
ReplyDeleteಬ್ರಹ್ಮಚಾರಿ, ಗೃಹಸ್ಥ ಹಾಗೂ ಸನ್ಯಾಸಿಗಳ ಬಗ್ಗೆ ವಿಷದವಾಗಿದೆ ನಿಮ್ಮ ವಿವರಣೆ. ಉಪನಯನ ಸಂಸ್ಕಾರ, ಸಮಾವರ್ತನ ಮತ್ತು ಮದುವೆಗೆ ಮುಂಚೆ ಮಾಡುವ ಕಾಶೀಯಾತ್ರೆ ಇತ್ಯಾದಿಗಳು ಈ ಕಾಲದಲ್ಲಿ ಕೇವಲ ಆಚರಣೆಗಷ್ಟೇ ಸೀಮಿತವಾಗಿರುವುದು ಬೇಸರದ ಸಂಗತಿ. ನಿಮ್ಮ ಇಂತಹ ಲೇಖನಗಳಿಂದ ನಮ್ಮ ಪೂರ್ವಜರು ಪಾಲಿಸುತ್ತಿದ್ದ ಅನೇಕ ಸಂಪ್ರದಾಯಗಳ ಅರ್ಥ ಈಗ ಆಗುತ್ತಿದೆ 🙏 ಅನಂತ ಧನ್ಯವಾದಗಳು ಸರ್ 🙏
ReplyDeleteಜನಿವಾರದ ಬಗ್ಗೆ ಮಾಡಿರುವ ವಾಸ್ತವ ವಿಚಾರ ತುಂಬ ಚೆನ್ನಾಗಿದೆ
ReplyDelete