Tuesday, April 1, 2025

"ಹಂಸ ಮಂತ್ರ " ಮತ್ತು "ಅಜಪಾಜಪ"


ಜೀವನದ "ಸ್ಲೋ ಸೈಕಲ್ ರೇಸ್" ಎಂಬ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ ನಮ್ಮ ಭೌತಿಕ ದೇಹದ ಜೀವಿತದ ಕಾಲಮಿತಿ, ಹೊರಗಿನ ಕಾಲದಲ್ಲಿ ಅದರ ಅಳತೆ, ನಮ್ಮ ದೇಹದ ಆಂತರಿಕ ಕಾಲ ಮಾಪನ ವ್ಯವಸ್ಥೆಯಲ್ಲಿ ಜೀವಿತ ಕಾಲದ ಅಳತೆ, ಇವನ್ನು ನೋಡಿದೆವು. ಸೃಷ್ಟಿಯಲ್ಲಿ ಈ ಹೊರಗಿನ ಕಾಲದ ಅಳತೆ ಮತ್ತು ಆಂತರಿಕ ಕಾಲದ ಲೆಕ್ಕ, ಇವೆರಡರ ಸಾಮ್ಯ ಹೇಗೆ ಮಾಡಲಾಗಿದೆ ಅನ್ನುವುದನ್ನೂ ತಿಳಿದೆವು. ಪ್ರಾಣಾಯಾಮ ಮೊದಲಾದ ಅಭ್ಯಾಸಗಳಿಂದ ಶ್ವಾಸದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಯೋಗಿಗಳು ಇದೇ ದೇಹದಲ್ಲಿ ಹೇಗೆ ನೂರು ವರುಷಗಳಿಗೂ ಹೆಚ್ಚು ಕಾಲ ಬದುಕುವುದು ಸಾಧ್ಯ ಎನ್ನುವುದನ್ನು ಮಾಡಿ ತೋರಿಸಿದ್ದಾರೆ ಅನ್ನುವುದನ್ನೂ ಸ್ವಲ್ಪಮಟ್ಟಿಗೆ ಚರ್ಚಿಸಿದೆವು. ಶ್ರೀ ಜಗನ್ನಾಥದಾಸರ ಮೇರು ಕೃತಿ "ಹರಿಕಥಾಮೃತಸಾರ" ಬಗ್ಗೆ ಸೂಚ್ಯವಾಗಿ ತಿಳಿದು ಅಲ್ಲಿ ಕೊಟ್ಟಿರುವ ಶ್ವಾಸದ ಲೆಕ್ಕದ ಸೂಕ್ಷ್ಮ ತಿಳುವಳಿಕೆ ಪಡೆದೆವು. (ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ).  ಇನ್ನು ಮುಂದೆ ಕೊಟ್ಟಿರುವ ವಿಷಯಗಳ ತಿಳುವಳಿಕೆಗೆ ಇದನ್ನು ಮತ್ತೊಮ್ಮೆ ಮೆಲುಕು ಹಾಕುವುದು ಅವಶ್ಯಕ. 


ಶ್ರೀಜಗನ್ನಾಥದಾಸರು ಹದಿನೆಂಟನೆಯ ಶತಮಾನದಲ್ಲಿ (1728-1809) ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ವಾಸವಾಗಿದ್ದವರು. ತಮ್ಮ ಜೀವಿತದ ಮೊದಲ ಭಾಗದಲ್ಲಿ ಶ್ರೀನಿವಾಸಾಚಾರ್ಯ ಎನ್ನುವ ಹೆಸರು ಹೊಂದಿದ್ದ ಅವರು ಸಂಸ್ಕೃತ ಭಾಷೆಯಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿ, ಕನ್ನಡದ ಗ್ರಂಥಗಳು ಮತ್ತು ಪದಗಳ ವಿಷಯದಲ್ಲಿ ಹೆಚ್ಚಿನ ಉದಾಸೀನ ಭಾವನೆ ಹೊಂದಿದ್ದರು. ಅವರ ಜೀವನದ ಮಧ್ಯಭಾಗದಲ್ಲಿ ಆದ ಕೆಲವು ಘಟನೆಗಳ ಪರಿಣಾಮದಿಂದ ಮತ್ತು ಆಗಿನ ಹರಿದಾಸರಲ್ಲಿ ವಿಶೇಷವಾಗಿ ಪ್ರಸಿದ್ಧರಾದ ಶ್ರೀವಿಜಯದಾಸರ ಪ್ರಭಾವದಿಂದ ಅನೇಕ ಕನ್ನಡ ಪದ, ಸುಳಾದಿಗಳನ್ನು ರಚಿಸಿದರು. ಅವರ "ತತ್ವ ಸುವ್ವಾಲಿ" ಎಂಬ ಗ್ರಂಥವು "ತ್ರಿಪದಿ" ರೀತಿಯ ಕೃತಿ (ಸರ್ವಜ್ಞ ವಚನಗಳಂತೆ). ಇದು ಸುಮಾರು 1200 ತ್ರಿಪದಿಗಳ ಗ್ರಂಥವೆನ್ನುತ್ತಾರೆ. ಈಗ ಸುಮಾರು 600 ತ್ರಿಪದಿಗಳು ಲಭ್ಯವಿವೆ. ಅವರ ಮೇರು ಕೃತಿ "ಹರಿಕಥಾಮೃತಸಾರ". ಈ ಗ್ರಂಥ ರಚನೆ ಮಾಡಿದಾಗ ಅವರಿಗೆ ಎಂಭತ್ತರ ಮಾಗಿದ ವಯಸ್ಸು. 

"ಹರಿಕಥಾಮೃತಸಾರ" ಭಾಮಿನಿ ಷಟ್ಪದಿ ಶೈಲಿಯಲ್ಲಿ ರಚಿತವಾದ ಗ್ರಂಥ. 32 ಸಂಧಿಗಳುಳ್ಳ 988 ಪದ್ಯಗಳಿವೆ. ಅನೇಕ ಸಂದರ್ಭಗಳಲ್ಲಿ ಸಂಖ್ಯಾಶಾಸ್ತ್ರದ ಉಪಯೋಗವುಳ್ಳ ಪದ್ಯಗಳನ್ನು ರಚಿಸಿದ್ದಾರೆ. ಬಹು ಜಟಿಲವಾದ ಆಧ್ಯಾತ್ಮಿಕ ಪ್ರಮೇಯಗಳನ್ನು ಬಲು ಸರಳವಾದ ದೃಷ್ಟಾಂತಗಳ ಮೂಲಕ ವಿವರಿಸಿದ್ದಾರೆ. ಸಂಸ್ಕೃತ ಗ್ರಂಥಗಳಿಗೆ ಸಂಸ್ಕೃತದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ವಿವರಣಾತ್ಮಕ ಟೀಕಾಗ್ರಂಥಗಳು (ವ್ಯಾಖ್ಯಾನಗಳು) ಇರುವುದು ಸಾಮಾನ್ಯ. ಆದರೆ ಕನ್ನಡ ಗ್ರಂಥವೊಂದಕ್ಕೆ ಸಂಸ್ಕೃತದಲ್ಲಿ ಟೀಕಾಗ್ರಂಥ ಇರುವ ಹೆಗ್ಗಳಿಕೆ ಈ ಹರಿಕಥಾಮೃತಸರದ್ದು. ಶ್ರೀ ಸಂಕರ್ಷಣ ಒಡೆಯರು ಎನ್ನುವವರು ಈ ಕನ್ನಡ ಗ್ರಂಥಕ್ಕೆ ಸಂಸ್ಕೃತದಲ್ಲಿ ವ್ಯಾಖ್ಯಾನ ಬರೆದಿದ್ದಾರೆ. ಇದಲ್ಲದೆ ಹತ್ತು ಪ್ರಸಿದ್ಧ ಕನ್ನಡದ ವ್ಯಾಖ್ಯಾನಗಳೂ ಇವೆ. 

ಶ್ರೀ ಜಗನ್ನಾಥದಾಸರ ಕನ್ನಡ ಪದಗಳು ಇಂದಿಗೂ ಜನಪ್ರಿಯವಾಗಿ ಸಾಮಾನ್ಯ ಜನರಲ್ಲದೆ ಸಂಗೀತ ವಿದ್ವಾಂಸರೂ ಕಚೇರಿಗಳಲ್ಲಿ ಹಾಡುವ ಸಂಪ್ರದಾಯವಿದೆ. ಶ್ವಾಸದ ಲೆಕ್ಕದ ಮೂಲಕ ದೇಹದ ಆಯುಸ್ಸನ್ನು ಅಳೆಯುವ ವಿವರಣೆಯುಳ್ಳ ಒಂದು ಪದ್ಯವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಅಲ್ಲಿ ಬಂದ "ಶ್ವಾಸಜಪ" (ಆರು ಮೂರೆರಡೊಂದು ಸಾವಿರ ಮೂರೆರಡು ಶತ ಶ್ವಾಸಜಪಗಳ....) ಉಲ್ಲೇಖದ ಬಗ್ಗೆ ಸ್ವಲ್ಪ ವಿವರಣೆ ಮುಂದೆ ನೋಡೋಣ. 

*****

ಭಾಗವತಾದಿ ಗ್ರಂಥಗಳ ಪ್ರಕಾರ, ಚತುರ್ಮುಖ ಬ್ರಹ್ಮದೇವರು ಶ್ರೀಮನ್ನಾರಾಯಣನ ನಾಭೀಕಮಲದಿಂದ ಜನಿಸಿದವರು. ಪರಮಪುರುಷನ ದೇಹದಿಂದ ಜನಿಸಿದ ನೇರ ಮಗ ಅವರು. ಸೃಷ್ಟಿಯ ಮೊದಲ ಹಂತದಲ್ಲಿ ಅನೇಕರು ಅವರ ಮಾನಸಪುತ್ರರಾಗಿ ಹುಟ್ಟಿದರು. ಅಂತಹವರಲ್ಲಿ ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರ ಎಂಬ ಹೆಸರಿನ ನಾಲ್ಕು ಜನ ಸೇರಿದವರು. ಇವರನ್ನು ಒಟ್ಟಾಗಿ "ಸನಕಾದಿಗಳು" ಎಂದು ಸಂಬೋಧಿಸುವುದು ವಾಡಿಕೆ. ಅವರು ಒಮ್ಮೆ ವೈಕುಂಠದಲ್ಲಿದ್ದ ಶ್ರೀಮನ್ನಾರಾಯಣನ ದರ್ಶನಕ್ಕೆ ಹೋದಾಗ ದ್ವಾರಪಾಲಕರಾದ ಜಯ ಮತ್ತು ವಿಜಯರು ಅವರನ್ನು ತಡೆದ ಕಾರಣ ಶಾಪಗ್ರಸ್ತರಾಗಿ ಹಿರಣ್ಯಾಕ್ಷ-ಹಿರಣ್ಯ ಕಷಿಪು, ರಾವಣ-ಕುಂಭಕರ್ಣ ಮತ್ತು ಶಿಶುಪಾಲ-ದಂತವಕ್ತ್ರರಾಗಿ ಹುಟ್ಟಿದ್ದು ಮೊದಲಾದುವು ಎಲ್ಲರಿಗೂ ತಿಳಿದ ವಿಷಯ. ಈ ನಾಲ್ವರು ಕುಮಾರರು ಬಾಲ ಬ್ರಹ್ಮಚಾರಿಗಳಾಗಿ ತಮ್ಮ ಜೀವಿತವನ್ನು  ಜ್ಞಾನ ಪ್ರಸಾರಕ್ಕಾಗಿ ಮೀಸಲಿಟ್ಟವರು. 

ಒಮ್ಮೆ ಈ ನಾಲ್ವರು ಯಾವುದೋ ಒಂದು ಸಮಸ್ಯೆಯ ಪರಿಹಾರಕ್ಕಾಗಿ (ಉತ್ತರ ಪಡೆಯಲು) ತಮ್ಮ ತಂದೆಯಾದ ಬ್ರಹ್ಮರ ಬಳಿಗೆ ಹೋದರು. ಅವರು ಕೇಳಿದ ಸಮಸ್ಯೆಗೆ ಉತ್ತರ ಹೇಳಲು ಶಕ್ತರಾದರೂ ಬ್ರಹ್ಮರು ಪರಮಪುರುಷನನ್ನು ಧ್ಯಾನಿಸಿದರು. ಪರಮಪುರುಷನು ಅವರು ಐವರ ಮುಂದೆ ಒಂದು ಹಂಸ ರೂಪದಲ್ಲಿ ಕಾಣಿಸಿಕೊಂಡನು. ಮುಂದೆ ಸಂವಾದ ನಡೆದು ಆ ಸಮಸ್ಯೆಗೆ ಉತ್ತರಗಳು ದೊರೆತವು. ಹೀಗೆ ಕಾಣಿಸಿಕೊಂಡ ರೂಪಕ್ಕೆ "ಹಂಸ ನಾಮಕ ಪರಮಾತ್ಮ" ಎಂದು ಹೆಸರಾಯಿತು. ಭಾಗವತಾದಿ ಗ್ರಂಥಗಳಲ್ಲಿ ಈ ಹಂಸ ರೂಪಿ ಪರಮಾತ್ಮನ ಬಗ್ಗೆ ಅನೇಕ ವಿವರಣೆಗಳಿವೆ. ಕೆಲವು ವಿವರಣೆಗಳನ್ನು "ಹಂಸಗೀತೆ" ಎಂದು ಹೇಳುತ್ತಾರೆ. (ಇದು ಮೂಲ - ಒರಿಜಿನಲ್ - ಹಂಸಗೀತೆ. ಎಲ್ಲರೂ ಹಂಸಗೀತೆ ಎಂದಾಕ್ಷಣ ಕನ್ನಡ ಸಿಮಿಮಾ ಎನ್ನಬಹುದು!), ಹಂಸ ಮಂತ್ರ ಅನ್ನುವುದು ಆ ಪರಮಪುರುಷನನ್ನು ನಿರ್ದೇಶಿಸುವ ಒಂದು ಮಂತ್ರ. ಈ ಮಂತ್ರ ಜಪ ಮಾಡುವವರು "ಹಂಸಃ ಸೋಹಂ ಹಂಸಃ" ಎಂದು ಜಪಿಸಿ ಆರಾಧಿಸುತ್ತಾರೆ. 

"ಹಂಸ" ಎಂದರೇನು? ಹಂ ಅಂದರೆ ಬಿಟ್ಟವನು, ತೊರೆದವನು ಎಂದರ್ಥ. ಏನು ಬಿಟ್ಟವನು? ಎಲ್ಲ ರೀತಿಯ ದೋಷಗಳನ್ನು ಬಿಟ್ಟವನು. ಇದನ್ನೇ "ಸತ್" ಎನ್ನುವುದು. ನಾವುಗಳು "ಅಹಂ" ತುಂಬಿದವರಾದರೆ ಅವನು "ಹ೦".  ಪರಮಪುರುಷನಲ್ಲಿ ಯಾವ ದೋಷಗಳೂ ಇಲ್ಲ. ಸಕಲ ದೋಷದೂರ ಅವನು.  ಸಃ ಅಂದರೆ ಎಲ್ಲದರ ಸಾರಸ್ವರೂಪನು. ಸಕಲ ಸದ್ಗುಣಗಳೂ ಅವನಲ್ಲಿ ಇವೆ. ಈ ಅನಂತ ಗುಣಗಳಲ್ಲಿ ಜ್ಞಾನ (ಚಿತ್) ಮತ್ತು ಆನಂದ ಮೊದಲಿನವು. ಈ ಕಾರಣದಿಂದ ಪರಮಪುರುಷನ ಗುಣಗಳನ್ನು ಹೇಳುವಾಗ "ಜ್ಞಾನಾನಂದಾದಿ ಗುಣಗಳು" ಎನ್ನುತ್ತಾರೆ. ಹಂಸ ಅಂದರೆ ಈ ಮೂರು ಪದಗಳನ್ನು ಸೂಚ್ಯವಾಗಿ ಸೇರಿಸಿದ್ದು. ಸತ್, ಚಿತ್ ಮತ್ತು ಆನಂದ. ಅದೇ ಒಟ್ಟಾಗಿ ಬಳಸುವ "ಸಚ್ಚಿದಾನಂದ" ಆಗುತ್ತದೆ. ಪರಮಪುರುಷನು ಹಂಸ ಅಂದರೂ ಒಂದೇ; ಸಚ್ಚಿದಾನಂದ ಅಂದರೂ ಒಂದೇ. "ಹಂಸ ಮಂತ್ರ" ಜಪ ಅಂದರೆ ಪರಮಾತ್ಮನು ಈ ಸ್ವರೂಪ ಉಳ್ಳವನು ಎಂದು ಆರಾಧಿಸುವುದು. 

*****

ಸರಿ, ಹಂಸ ಮತ್ತು "ಹಂಸ ಮಂತ್ರ ಜಪ" ಅಂದರೆ ಏನು ಅಂದು ಗೊತ್ತಾಯಿತು. "ಅಜಪಾಜಪ" ಅಂದರೇನು? ಯಾವುದಾದರೂ ಮಂತ್ರ ಜಪ ಮಾಡಬೇಕಾದರೆ ಪ್ರಯತ್ನಪೂರ್ವಕವಾಗಿ ಮಾಡಬೇಕು. ಅದು ಮಾಡುವಾಗ ನಾವು ಬೇರೇನೂ ಮಾಡುವಂತಿಲ್ಲ. ಬೇರೇನಾದರೂ ಮಾಡಬೇಕಾದರೆ ಜಪ ಮಾಡುವುದನ್ನು ನಿಲ್ಲಿಸಬೇಕು! ನಮ್ಮ ಪ್ರಯತ್ನವಿಲ್ಲದೇ, ನಮಗೆ ಗೊತ್ತಿಲ್ಲದೇ, ಅದಾಗದೇ ಆಗುವ ಜಪವೇ 'ಅಜಪಾಜಪ". ಇಂತಹ ಅಜಪಾಜಪ ನಡೆಯುವಾಗ ನಾವು ಬೇರೆಲ್ಲ ಏನು ಬೇಕಿದ್ದರೂ ಮಾಡಬಹುದು. ಅದು ಹೇಗೆ ಸಾಧ್ಯ? ಇದೊಂದು ವಿಚಿತ್ರವಲ್ಲವೇ?

ನಮ್ಮ ಬಾಲ್ಯದಲ್ಲಿ ಹರಿಕಥೆ ಎಂಬ ಒಂದು ಕಲೆ ಬಹಳ ಪ್ರಚಾರದಲ್ಲಿತ್ತು. ಸಾಹಿತ್ಯ, ಸಂಗೀತ ಮತ್ತು ಕಥೆ ಹೇಳುವ ಕಲೆ ಭಕ್ತಿಯ ಜೊತೆಯಲ್ಲಿ ಸೇರಿ ಸಾಮಾನ್ಯವಾಗಿ ಸಂಜೆಯ ವೇಳೆ ನಡೆಯುವ ಒಂದು ಕಾರ್ಯಕ್ರಮ ಅದು. ಕಥೆ ಹೇಳುವ ವ್ಯಕ್ತಿಗೆ ಹಾಡು-ಪದ್ಯ-ಕೀರ್ತನೆ ಹೇಳುವ ಸಂದರ್ಭಗಳಿಗಾಗಿ ಒಂದು ಹಾರ್ಮೋನಿಯಂ ಅಥವಾ ಪಿಟೀಲು (ಸಾಮಾನ್ಯವಾಗಿ ಹಾರ್ಮೋನಿಯಂ) ಮತ್ತು ತಬಲಾ ಅಥವಾ ಮೃದಂಗ (ಸಾಮಾನ್ಯವಾಗಿ ತಬಲಾ) ಇರುತ್ತಿದ್ದವು. ಹಾರ್ಮೋನಿಯಂ ವಾದಕರು ಹಾರ್ಮೋನಿಯಂ ಜೊತೆ ಒಂದು ಸಣ್ಣ ಪೆಟ್ಟಿಗೆ ತರುತ್ತಿದ್ದರು. ಅದು ಒಂದು ಹಾರ್ಮೋನಿಯಂನ ಮರಿಯಂತೆ ಇರುತ್ತಿತ್ತು. "ಶ್ರುತಿ ಪೆಟ್ಟಿಗೆ" ಎಂದು ಅದಕ್ಕೆ ಹೆಸರು. ತಮಗೆ ಬೇಕಾದ ಶ್ರುತಿಯಲ್ಲಿ ಅದನ್ನು ಇಟ್ಟು ಒಬ್ಬ ಬಾಲಕನಿಗೆ ಅದನ್ನು ಕೊಡುತ್ತಿದ್ದರು. ಅವನು ಅದನ್ನು ತನ್ನ ಕೈಗಳಿಂದ ಹಾರ್ಮೋನಿಯಂನಂತೆಯೇ ಮೀಟುತ್ತಿದ್ದ. ಹರಿಕಥೆ ಪ್ರಾರಂಭವಾಗುವುದಕ್ಕೆ ಮೊದಲು ಮೀಟುವುದು ಶುರುವಾದರೆ ಎಲ್ಲ ಮುಗಿದಮೇಲೆ ಅದಕ್ಕೆ ವಿಶ್ರಾಂತಿ. ಅದು ನಿಂತಿತು ಅಂದರೆ ಗಂಟು ಮೂಟೆ ಕಟ್ಟಿ ಹೊರಡುವುದೇ. ಸಂಗೀತ ಕಚೇರಿಗಳಲ್ಲಿ ತಂಬೂರಿ ಶ್ರುತಿ ಈ ಕೆಲಸ ಮಾಡುತ್ತಿತ್ತು. ಈಗ ಎಲ್ಲ ಕಡೆ ವಿದ್ಯುತ್ ಚಾಲಿತ ಶ್ರುತಿಪೆಟ್ಟಿಗೆಗಳು ಬಂದಿವೆ. ಅವು ಮಾಡುವ ಕೆಲಸವೂ ಅದೇ. 

ನಮ್ಮ ಶರೀರದಲ್ಲೊ ಇದೇ ಶ್ರುತಿ ಪೆಟ್ಟಿಗೆಯ ರೀತಿ ವ್ಯವಸ್ಥೆ ಇದೆ! ಹುಟ್ಟಿದ ಮೊದಲ ಉಸಿರಿನಿಂದ ಶ್ರುತಿ ಪೆಟ್ಟಿಗೆ ಕೆಲಸ ಪ್ರಾರಂಭ. ಕೊನೆಯ ಉಸಿರಿನಲ್ಲಿ ಅದು ನಿಲ್ಲುತ್ತದೆ. ಶ್ರುತಿ ಪೆಟ್ಟಿಗೆ (ಶ್ವಾಸಕೋಶ) ಕೆಲಸ ಮುಗಿಯಿತು ಅಂದರೆ ಹೊರಡುವುದೇ! ಗಂಟು ಮೂಟೆ ಕಟ್ಟುವಂತೆಯೂ ಇಲ್ಲ. ಎಲ್ಲವನ್ನೂ ಎಲ್ಲಿದ್ದರಲ್ಲಿ ಬಿಟ್ಟು ಓಡಲೇಬೇಕು. ("ನಾಳೆ ಬರುತೇನೆನ್ನಬೇಡಣ್ಣ" ಅನ್ನುವ ದಾಸರ ಪದ ಇದನ್ನು ಬಹಳ ಚೆನ್ನಾಗಿ ಹೇಳುತ್ತದೆ.)  ಇದರ ವಿವರಗಳನ್ನು "ಪ್ರಾಣಾಪಾಯ ಇಲ್ಲ ತಾನೇ?" ಎಂಬ ಶೀರ್ಷಿಕೆಯ ಹಿಂದಿನ ಸಂಚಿಕೆಯಲ್ಲಿ ಕೊಟ್ಟಿದೆ. ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

*****

ಈ ಅಜಪಾಜಪಕ್ಕೂ, ಹಂಸ ಮಂತ್ರಕ್ಕೂ, ನಮಗೂ ಏನು ಸಂಬಂಧ? ನಾವು ನಾಲ್ಕು ಸೆಕೆಂಡಿಗೆ ಒಮ್ಮೆ ಶ್ವಾಸ ತೆಗೆದುಕೊಳ್ಳುವುದನ್ನು ಹಿಂದಿನ ಸಂಚಿಕೆಗಳಲ್ಲಿ ನೋಡಿದ್ದೇವೆ. ಹೀಗೆ ತೆಗೆದುಕೊಳ್ಳುವ ಪ್ರತಿ ಉಸಿರಿನಲ್ಲಿ ಎರಡು ಭಾಗಗಳು. ಒಂದು ದೇಹದ ಒಳಗಿರುವ ಗಾಳಿಯನ್ನು ಹೊರಗೆ ಬಿಡುವುದು. ಇದಕ್ಕೆ "ರೇಚಕ" ಅನ್ನುತ್ತಾರೆ. ಮತ್ತೆ ಹೊರಗಿನ ಗಾಳಿಯನ್ನು ಒಳಗಡೆಗೆ ಎಳೆದುಕೊಳ್ಳುವುದು. ಇದಕ್ಕೆ "ಪೂರಕ" ಎನ್ನುತ್ತಾರೆ. ಒಂದು ರೇಚಕ ಮತ್ತು ಒಂದು ಪೂರಕ ಸೇರಿ ಒಂದು ಶ್ವಾಸ (ಉಸಿರಾಟ) ಆಯಿತು. ಒಂದೆಡೆ ಶಬ್ದಗಳಿಲ್ಲದ ಕಡೆ ಕುಳಿತು ಗಮನಿಸಿದರೆ ಗಾಳಿ ಹೊರಗಡೆ ಹೋಗುವಾಗ "ಹಂ" ಎನ್ನುವ ಶಬ್ದ ಬರುತ್ತದೆ. ಮೂಗಿನ ಒಂದು ಹೊಳ್ಳೆಯನ್ನು ಬೆಟ್ಟಿನಲ್ಲಿ ಮುಚ್ಚಿಕೊಂಡು ಇನ್ನೊಂದು ಹೊಳ್ಳೆಯಲ್ಲಿ ಗಾಳಿ ಹೊರಬಿಟ್ಟರೆ ಇನ್ನೂ ಚೆನ್ನಾಗಿ ಗೊತ್ತಾಗುತ್ತದೆ. ಇದೇ ರೀತಿ ಗಾಳಿ ಒಳಗೆ ತೆಗೆದುಕೊಳ್ಳುವಾಗ "ಸಃ" ಎಂದು ಶಬ್ದವಾಗುತ್ತದೆ. ಎರಡನ್ನೂ ಸೇರಿಸಿದರೆ "ಹಂಸಃ" ಎಂದಾಯಿತು. 

ನಾವು ಮೊದಲ ಶ್ವಾಸ ತೆಗೆದುಕೊಂಡಾಗಿನಿಂದ ಕೊನೆಯ ಉಸಿರಿನವರೆಗೆ ಈ ಹಂಸಃ ಅನ್ನುವ ಕ್ರಿಯೆ ನಡೆಯುತ್ತಲೇ ಇರುತ್ತದೆ. ಇದೇ ನಮ್ಮ ದೇಹದಲ್ಲಿ ನಡೆಯುವ ಹಂಸ ಮಂತ್ರದ ಅಜಪಾಜಪ. ಇದನ್ನು ಮಾಡುವವರು ಯಾರು? ಮುಖ್ಯಪ್ರಾಣ ದೇವರು. ಅವರು ಈರೀತಿ ಮಾಡುತ್ತಿರುವವರೆಗೂ ನಮ್ಮ ಜೀವನ. ಅದು ನಿಂತ ತಕ್ಷಣ ಜೀವನ ಕಥೆ ಮುಗಿಯಿತು. ಇದನ್ನೇ "ಪರಮ ಮುಖ್ಯಪ್ರಾಣ ತೊಲಗಲಾ ದೇಹವನು ಅರಿತು ಪೆಣನೆಂದು (ಹೆಣವೆಂದು) ಪೇಳ್ವರು ಬುಧಜನ (ತಿಳಿದವರು)" ಎಂದು ಒಂದು ದೇವರನಾಮದಲ್ಲಿ ಸೂಚಿಸಿದ್ದಾರೆ. ಪ್ರತಿ ಉಸಿರಿನಲ್ಲಿ ಹೀಗೆ ಹಂಸಮಂತ್ರ ಜಪ ಮಾಡಿ ಮುಖ್ಯಪ್ರಾಣರು ನಮ್ಮ ಖಾತೆಗೆ ಹಾಕುತ್ತಲೇ ಇದ್ದಾರೆ!  

ಬಸ್ಸಿನಲ್ಲಿ ಹತ್ತು ರೂಪಾಯಿ ಕೊಟ್ಟರೆ ಒಂದು ಟಿಕೆಟ್ ಕೊಡುತ್ತಾರೆ. ಅದು ಆ ಹತ್ತು ರೂಪಾಯಿ ಕೊಟ್ಟದ್ದಕ್ಕೆ ರಸೀತಿ. ವಿದ್ಯುತ್ ಬಿಲ್ ಅವರ ಆಫೀಸಿನಲ್ಲಿ ಕಟ್ಟಿದರೆ ಹಣ ಬಂದದ್ದಕ್ಕೆ ರಸೀತಿ ಕೊಡುತ್ತಾರೆ. ಆದರೆ ಕೆಲವರು ಅವರ ಖಾತೆಗೆ ದುಡ್ಡು ಹಾಕಿದರೂ ಹಣ ಬಂದಿತು ಎಂದು ಹೇಳುವ ಸೌಜನ್ಯವನ್ನೂ ತೋರಿಸುವುದಿಲ್ಲ. ಅಕಸ್ಮಾತ್ ಮುಂದೆಂದೋ ಒಂದುದಿನ ಎದುರಿಗೆ ಸಿಕ್ಕಾಗ ಬಂದಿತು ಎಂದು ಹೇಳಿದರೂ ಹಣ ಬಂದಿದ್ದು ಏಕೆ ತಕ್ಷಣ ಹೇಳಲಿಲ್ಲ ಅನ್ನುವುದಕ್ಕೆ ಕಾರಣಗಳ ದೊಡ್ಡ ಪಟ್ಟಿಯನ್ನೇ ಕೊಡುತ್ತಾರೆ!  

ನಮಗೆ ಹಣದ ಅವಶ್ಯಕತೆಯಿದೆ. ಯಾರೋ ಒಬ್ಬರು ತಿಳಿದ ಬಂಧುಗಳಲ್ಲಿಯೋ ಅಥವಾ ಸ್ನೇಹಿತರ ಹತ್ತಿರ ಹೋಗಿ ಕೇಳುತ್ತೇವೆ. ಅವರು ನಾಲ್ಕಾರು ಸಾರಿ ಓಡಾಡಿಸಿ ನಂತರ ಹಣ ಕೊಟ್ಟರೂ ಅವರಿಗೆ ಬಹಳ ಕೃತಜ್ಞರಾಗುತ್ತೇವೆ. ಅದೇನೂ ಸುಮ್ಮಸುಮ್ಮನೆ ಕೊಟ್ಟದ್ದಲ್ಲ. ಅದೊಂದು ಸಾಲ. ಹಿಂದಿರುಗಿ ಕೊಡಬೇಕು. ಕೆಲವು ಸಲ ಬಡ್ಡಿಯೂ ಕೊಡಬೇಕಾಗಬಹುದು. ಆದರೂ ನಮಗೆ ಉಪಕಾರ ಮಾಡಿದರು ಅನ್ನುವ ಭಾವನೆ ನಮಗೆ. 

ಪಕ್ಕದ ಮನೆಯಲ್ಲಿ ಚಪ್ಪರ ಹಾಕಬೇಕು. ಅವರಲ್ಲಿ  ಏಣಿ ಇಲ್ಲ. ನಮ್ಮ ಮನೆ ಏಣಿ ಎರವಲು ಪಡೆಯುತ್ತಾರೆ. ಹಿಂದೆ ಕೊಡುವುದೇ ಇಲ್ಲ. ಕಡೆಗೆ ನಾವೇ ಹೋಗಿ ಅವರ ಮನೆಯಿಂದ ಹೊತ್ತು ತರುತ್ತೇವೆ. ಸದ್ಯ, ನಮ್ಮ ಪದಾರ್ಥ ನಮಗೆ ಸಿಕ್ಕಿತಲ್ಲಾ ಎಂದು ಅವರಿಗೆ ಹಿ೦ದಿರುಗಿ ಕೊಟ್ಟಿದ್ದಕ್ಕೆ (?) ಕೃತಜ್ಞತೆ ಹೇಳುತ್ತೇವೆ. 

*****

ಮುಖ್ಯಪ್ರಾಣರು ಪ್ರತಿದಿನ 21,600 ಹಂಸ ಮಂತ್ರ ಜಪ ಮಾಡಿ ನಮ್ಮ ಖಾತೆಗೆ ಹಾಕುತ್ತಲೇ ಇದ್ದಾರೆ. ಅನೇಕರಿಗೆ ಇದು ಗೊತ್ತೇ ಇಲ್ಲ. ಕೃತಜ್ಞತೆ ಹೇಳುವುದಂತೂ ದೂರ ಉಳಿಯಿತು. ನಾವು ಉಸಿರಾಟದ ಕಡೆ ಗಮನ ಕೊಡುವುದು ಸರಿಯಾಗಿ ಉಸಿರಾಡಲು ಆಗದಿದ್ದರೆ ಮಾತ್ರ. ಇಲ್ಲದಿದ್ದರೆ ಅದೊಂದು ಸ್ವಾಭಾವಿಕ ಕ್ರಿಯೆ. ಅಷ್ಟೇ. ಮುಖ್ಯಪ್ರಾಣರು ಉಸಿರಿನಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿದಾಗ ಮಾತ್ರ ಅದರ ಕಡೆ ಗಮನ. ಆಗ ಮತ್ತೆಲ್ಲ ಬಿಟ್ಟು ಪ್ರಾಣವಾಯು (ಆಕ್ಸಿಜನ್) ಸಿಗುವಲ್ಲಿಗೆ ಓಡುತ್ತೇವೆ. ಓಡುತ್ತೇವೆ ಅನ್ನುವುದಕ್ಕಿಂತ ಮತ್ಯಾರೋ ನಮ್ಮನ್ನು ಕರೆದೊಯ್ಯುತ್ತಾರೆ ಅನ್ನುವುದು ಹೆಚ್ಚು ಸಮಂಜಸವಾದೀತು. 

ಪ್ರತಿದಿನ ಕನಿಷ್ಠ ಪಕ್ಷ ಬೆಳಿಗ್ಗೆ ಎದ್ದಾಗಲೊಮ್ಮೆ ಮತ್ತು ರಾತ್ರಿ ಮಲಗುವಾಗಲೊಮ್ಮೆ ಈ ಹಂಸಮಂತ್ರ ಜಪ ಮಾಡಿ ನಮ್ಮ ಖಾತೆಗೆ ಹಾಕುತ್ತಿರುವ ಮುಖ್ಯಪ್ರಾಣರಿಗೆ ಕೃತಜ್ಞತೆ ಹೇಳಿದರೆ ನಮಗೂ ಆ ಜಪ ಮಾಡಿದ ಫಲ ದಕ್ಕುತ್ತದೆ. ಇಲ್ಲದಿದ್ದರೆ ಪ್ರತಿದಿನ ನಮ್ಮ ಮನೆಯಲ್ಲಿ ಯಾರೋ ಹಿತೈಷಿಗಳು ಮೃಷ್ಟಾನ್ನಗಳನ್ನು ತಂದಿಡುತ್ತಿದ್ದರೂ ಅದು ಗೊತ್ತಿಲ್ಲದೇ ಭಿಕ್ಷೆ ಬೇಡಿ ಜೀವಿಸುವವರಂತೆ ನಮ್ಮ ಜೀವನ ನಡೆಯುತ್ತದೆ.  

*****

"ಮೂರು ವಿಧ ಜೀವರು" (ತ್ರಿವಿಧಜೀವರು) ಅನ್ನುವುದರ ವಿವರಣೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

5 comments:

  1. Bahala bahala upayukthavaada maahithi neediddeeri. Dhanyavaadagalu Sir....

    ReplyDelete
  2. Many interesting things to know about in the practical as well as spiritual aspects
    Of life. Thanks again Keshav. UR…..

    ReplyDelete
  3. Thank you so much for the pearls of wisdom. I can experience hearing your voice while reading your articles, that is the beauty of your writings.
    Fortunately only we people who are endowed with knowledge of kannada language are really blessed to enjoy the inticasies of the subject matter. It made a very interesting reading.

    ReplyDelete
  4. ಭಾನುಮತಿApril 3, 2025 at 1:21 AM

    ನಿಮ್ಮ ಲೇಖನಗಳೆಲ್ಲ ಒಂದಕ್ಕಿಂತ ಒಂದು ಮಿಗಿಲಾದವು. 🙏 ನಮ್ಮ ಅನೈಚ್ಛಿಕ ಕ್ರಿಯಯಾದ ಉಸಿರಾಟ ಕೂಡಾ ಮುಖ್ಯಪ್ರಾಣ ದೇವರ ನಿರಂತರ ದಯೆಯಿಂದ ನಡೆಯುವುದರಿಂದ ನಾವು ಅವರಿಗೆ ಚಿರಋಣಿಯಾಗಿರಬೇಕೆನ್ನುವುದರ ಬಗ್ಗೆ ಎರಡನೇ ಮಾತಿಲ್ಲ 🙏

    ಕನ್ನಡದ ಲೇಖನವೊಂದಕ್ಕೆ ಸಂಸ್ಕೃತದ ವ್ಯಾಖ್ಯಾನವಿದೆಯೆಂದು ತಿಳಿದು ಆಶ್ಚರ್ಯಾನಂದವಾಯಿತು🙏

    ಹಂಸಮಂತ್ರ ಜಪ ಮತ್ತು ಅಜಪಾಜಪಗಳ ವಿವರಣೆ ಬಲು ಸೊಗಸಾಗಿದೆ.

    ನಮ್ಮ ಚಿಕ್ಕಂದಿನಲ್ಲಿ ನೋಡಿ/ಕೇಳಿ ಆನಂದಿಸಿದ ಹರಿಕಥೆಗಳ ನೆನಪು ತಾಜಾ ಆಯಿತು😊

    ನಮ್ಮದೇ ವಸ್ತುಗಳನ್ನು ಬೇರೆಯವರಿಗೆ ಕಡ ಕೊಟ್ಟು ವಾಪಸ್ ಪಡೆಯಲು ಪರದಾಡಿದ ಎಷ್ಟೋ ಪ್ರಸಂಗಗಳಿವೆ 😅

    ಅನಂತಾನಂತ ಧನ್ಯವಾದಗಳು ಪ್ರೀತಿಯ ಕೇಶವ ಸರ್ 🙏

    ReplyDelete
  5. ತುಂಬಾ ಚೆನ್ನಾಗಿ ಮೂಡಿಬಂದಿದೆ.
    ಈಗ, ಹರಿಕಥೆ ಮಾಡುವರು ಬಹಳ ಕಡಿಮೆ. ‌*ಇಲ್ಲವೆ ಇಲ್ಲ ವೇನೂ*

    ಹಂಸ ಮಂತ್ರ ಹಾಗೂ ಅಜಪಾಜಪ ವಿವರಣೆ ಸೂಗಸಾಗಿದೆ.
    ನಮ್ಮ ಜೀವನವನ್ನು ಶೃತಿ ಪೆಟ್ಟಿಗೆ ಗೆ ಹೂಳಿಸಿರುವುದು ಚೆನ್ನಾಗಿದೆ.

    ReplyDelete