ಹಿಂದಿನ ಸಂಚಿಕೆಗಳಲ್ಲಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎನ್ನುವ ಶೀರ್ಷಿಕೆಗಳ ಅಡಿಯಲ್ಲಿ ಮನುಷ್ಯನಿಗೆ ಸಿಗಬಹುದಾದ ವಿವಿಧ ರೀತಿಯ ಭೋಗಗಳು ಮತ್ತು ಭಾಗ್ಯಗಳು ಯಾವುವು, ಅವುಗಳ ವಿಶೇಷತೆ ಏನು, ಎನ್ನುವುದನ್ನು ಕುರಿತು ಸ್ವಲ್ಪ ಚರ್ಚೆ ಮಾಡಿದೆವು. ಈ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
"ಸಂಕಟ ಬಂದಾಗ ವೆಂಕಟರಮಣ" ಎನ್ನುವುದು ಒಂದು ಬಹಳ ಪ್ರಸಿದ್ಧ ಗಾದೆ ಮಾತು. ಮನುಷ್ಯನಿಗೆ ಯಶಸ್ಸು ಸಿಕ್ಕಾಗ, ತಾನು ನೆನೆಸಿದ ಕೆಲಸ ಆದಾಗ, ತನ್ನ ಪ್ರಯತ್ನದ ಬಗ್ಗೆ ಅಪಾರ ಹೆಮ್ಮೆ. "ನನ್ನಿಂದಲೇ ಆಯಿತು. ನೋಡಿದೆಯಾ? ಹೇಗೆ ಮಾಡಿದೆ!" ಎಂದು ಬೀಗುತ್ತಾನೆ. ಆದರೆ ಅದು ಆಗದಿದ್ದಾಗ ಪರಮಾತ್ಮನ ನೆನಪು ಬರುತ್ತದೆ. ಕೆಲವರು "ದೇವರು ಕೈಕೊಟ್ಟ" ಎಂದು ಅವನನ್ನೇ ದೂಷಿಸಬಹುದು. ಮತ್ತೆ ಕೆಲವರು (ಇಂತಹವರ ಸಂಖ್ಯೆ ಬಹಳ ಕಡಿಮೆ) ಎಲ್ಲವನ್ನೂ ಅವನ ಮೇಲೆ ಬಿಟ್ಟು ತಮ್ಮ ಕರ್ತವ್ಯ ತಾವು ಮಾಡುತ್ತಾರೆ.
ಮನುಷ್ಯ ಏನನ್ನಾದರೂ ಮಾಡುವುದು ಎರಡು ಕಾರಣಗಳಿಗಾಗಿ. ಒಂದು ಸುಖ ಪ್ರಾಪ್ತಿಗೆ. ಇನ್ನೊಂದು ದುಃಖ ನಿವೃತ್ತಿಗೆ. ಈ ವಿಷಯವನ್ನು ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿರುವುದರಿಂದ ಅದನ್ನು ನೆನಪಿಸಿಕೊಂಡು, ಹೆಚ್ಚು ವಿಸ್ತರಿಸದೆ, ಮುಂದೆ ಹೋಗೋಣ. ದುಃಖ ನಿವೃತ್ತಿ ಆಗಬೇಕಾದಾಗ ಪರಮಾತ್ಮನ ನೆನಪು ತಾನೇತಾನಾಗಿ ವಿಜೃಂಭಿಸುತ್ತದೆ. ಆ ದುಃಖ ಕಳೆದ ತಕ್ಷಣ ಅವನ ನೆನಪೂ ಮಾಸುತ್ತದೆ. ಸುಖಪ್ರಾಪ್ತಿಗೆ ಮಾಡುವ ಅವನ ಸ್ಮರಣೆ ಮೇಲೆ-ಕೆಳಗೆ ಆಗುತ್ತಿದ್ದರೂ ಯಾವಾಗಲೂ ಸ್ವಲ್ಪವಾದರೂ ಇರುತ್ತದೆ!
ಹೀಗೆ ಸುಖಪ್ರಾಪ್ತಿಗೆ ಮನುಷ್ಯ ಮಾಡುವ ಪ್ರಾರ್ಥನೆಗಳಲ್ಲಿ ಯಾವ ಯಾವ ಬೇಡಿಕೆಗಳು ಸೇರಿವೆ, ಅವುಗಳಲ್ಲಿ ಮುಖ್ಯವಾದವು ಯಾವುವು ಮತ್ತು ಅವುಗಳ ಲಕ್ಷಣಗಳೇನು ಎನ್ನುವುದನ್ನು ಈಗ ಸ್ವಲ್ಪ ನೋಡೋಣ.
*****
"ವರ" ಎನ್ನುವ ಪದವನ್ನು ಎರಡು ಮುಖ್ಯ ಹಿನ್ನೆಲೆಯಲ್ಲಿ ಬಳಸುತ್ತೇವೆ. ಮೊದಲನೆಯದು ವಿವಾಹಗಳ ವಿಷಯದಲ್ಲಿ. ಆಗ "ವಧು ಮತ್ತು ವರ" ಎನ್ನುವ ಪದಗಳು ಜೊತೆಯಾಗಿ ಬರುತ್ತವೆ. ಹೆಣ್ಣಿಗೆ "ವಧು" ಎಂದೂ ಗಂಡಿಗೆ "ವರ" ಎಂದೂ ಗುರುತಿಸುವುದು. ಎರಡನೆಯ ಸಂದರ್ಭ "ಶ್ರೇಷ್ಠ", "ಉತ್ತಮ", "ಒಳ್ಳೆಯದು", "ಅದಕ್ಕಿಂತ ಇದು ಚೆನ್ನ" ಮುಂತಾದ ಅರ್ಥದಲ್ಲಿ. ವಿವಾಹದ ಸಂದರ್ಭದಲ್ಲಿಯೂ ವಾಸ್ತವವಾಗಿ ಇದೇ ಅರ್ಥವೇ. "ಈ ಹುಡುಗಿಗೆ ಆ ಹುಡುಗ ಸರಿಯಾದ ಜೋಡಿ. ಈ ಜೋಡಿ ಚೆನ್ನಾಗಿರುತ್ತದೆ" ಎನ್ನುವ ರೀತಿಯಲ್ಲಿಯೇ ಅಲ್ಲಿಯೂ "ವರ" ಎನ್ನುವ ಪದ ಪ್ರಯೋಗ ಆಗುತ್ತದೆ.
ಒಟ್ಟಿನಲ್ಲಿ, ಬೇಡುವ ಸಂದರ್ಭದಲ್ಲಿ "ವರ" ಅಂದರೆ "ನಮ್ಮಲ್ಲಿಲ್ಲದ್ದು, ಅದು ಇದ್ದರೆ ಚೆನ್ನ, ಅದು ನಮಗೆ ಬೇಕು, ಆದ್ದರಿಂದ ಅದನ್ನು ನಮಗೆ ಕೊಡಿ" ಎಂದು ಕೇಳುವುದು. ಕೊಡುವವರ ದೃಷ್ಟಿಯಲ್ಲಿಯೂ ಹಾಗೆಯೇ. ಅನೇಕ ವೇಳೆ "ನಿಮ್ಮಿಂದ ನಮಗೆ ಬಹಳ ಸಂತೋಷವಾಗಿದೆ. ಈ ವರವನ್ನು ಕೊಡುತ್ತೇವೆ" ಎಂದು ಕೊಡುವುದು. ಅಥವಾ "ನಾವು ಪ್ರೀತರಾಗಿದ್ದೇವೆ, ನಿಮಗೊಂದು ವರ ಕೊಡುತ್ತೇವೆ. ಏನು ಬೇಕು?' ಎಂದು ಕೇಳುವುದು. ಸಾಮಾನ್ಯವಾಗಿ "ಏನು ಬೇಕು?" ಎಂದು ಕೇಳಿ ಕೊಡಬಹುದು. ಒಮ್ಮೊಮ್ಮೆ ಅವರೇ ತೀರ್ಮಾನಮಾಡಿ "ನಿಮಗೆ ಇದನ್ನು ಕೊಡುತ್ತೇವೆ" ಎಂದು ಕೊಡಬಹುದು. ಮೊದಲನೆಯದು ಕೇಳಿದ್ದು ಕೊಡುವ ಕ್ರಿಯೆ. ಎರಡನೆಯದು ಕೊಟ್ಟಿದ್ದು ತೆಗೆದುಕೊಳ್ಳುವ ಕೆಲಸ. ಶಾಲೆಗೆ ಹೋಗುವ ವಿದ್ಯಾರ್ಥಿ "ನನಗೆ ಈ ಬ್ಯಾಗು ಕೊಡಿಸಿ" ಎನ್ನುವುದು ಮೊದಲಿನಂತೆ. ಕೊಡುವವರು ತಾವೇ ಒಂದು ಒಂದು ಬ್ಯಾಗು ತಂದು "ಇದನ್ನು ಉಪಯೋಗಿಸಿಕೋ" ಎನ್ನುವುದು ಎರಡನೆಯ ರೀತಿ.
ಮೂರನೆಯದೂ ಒಂದು ಉಂಟು. ಒಂದಷ್ಟು ದುಡ್ಡು ಕೊಟ್ಟು "ನಿನಗೆ ಬೇಕಾದುದು ತೆಗೆದುಕೋ" ಎಂದು ಹೇಳುವಂತೆ. ದುಡ್ಡು ಸಿಕ್ಕವನು ತನಗೆ ಬೇಕಾದಾಗ, ಬೇಕಿದ್ದು ತೆಗೆದುಕೊಳ್ಳಬಹುದು. ಅಷ್ಟು ಮಟ್ಟಿಗೆ ಸ್ವಾತಂತ್ಯ ಸಿಕ್ಕಿತು. ದೇವೇಂದ್ರನು ಕರ್ಣನಿಗೆ ಶಕ್ತ್ಯಾಯುಧ ಕೊಟ್ಟಂತೆ. "ಒಂದು ಬಾರಿ ಪ್ರಯೋಗಿಸು. ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯುತ್ತಾರೆ" ಎಂದು ಹೇಳಿದಂತೆ. ಎಂದು, ಯಾರ ಮೇಲೆ ಪ್ರಯೋಗಿಸಬೇಕು ಅನ್ನುವ ಸ್ವಾತಂತ್ರ್ಯ ಕರ್ಣನಿಗೆ ಸಿಕ್ಕಿತು.
ವರರೂಪದಲ್ಲಿ ಬೇಕಿದ್ದು ಪಡೆಯಲು ಮಾಡುವ ಸಾಧನೆಗಳು "ಕಾಮ್ಯ ಕರ್ಮಗಳು". ಇಲ್ಲಿ ಇಡೀ ಶ್ರಮ ಯಾವುದೋ ಒಂದು ಉದ್ದೇಶಿತ ಲಾಭ ಪಡೆಯಲು ಮಾಡುವುದು. ಬಸ್ಸಿನಲ್ಲಿ ಹನ್ನೆರಡನೇ ನಂಬರಿನ ಸೀಟು ಕೊಡಿ ಎಂದಂತೆ. ಇನ್ನು ಕೆಲವು "ಯಾವುದೊ ಒಂದು ಸೀಟು ಕೊಟ್ಟರೆ ಸಾಕು" ಎನ್ನುವಂತಹುದು. "ಪುತ್ರಕಾಮೇಷ್ಠಿ" ಮಾಡಿದರೆ ಸಂತಾನವೇ ಬೇಕು. ಬೇರೆ ಯಾವುದೋ ಸಿಕ್ಕರೆ ಸಾಲದು. ಈ ರೀತಿ.
*****
ಎಲ್ಲಾ ಬೇಡಿಕೆಗಳಲ್ಲಿ ಮೊದಲನೆಯದು "ಆಯುಸ್ಸು". ದೀರ್ಘಾಯುಸ್ಸು ಬೇಕು. ತುಂಬಾ ದಿನ ಬದುಕಬೇಕು. ಚಿರಂಜೀವಿಯೇ ಆಗಬೇಕು. ಆದರೆ ಅದು ಕೇಳಿದರೂ ಕೊಡುವುದಿಲ್ಲ. ಹಿಂದೆ ಅನೇಕರು ಕೇಳಿದರು. ಆದರೆ ಒಬ್ಬರಿಗೂ ಸಿಗಲಿಲ್ಲ. ಕೈ ತೋರಿಸಿ ಅವಲಕ್ಷಣ ಎಂದು ಏಕೆ ಹೇಳಿಸಿಕೊಳ್ಳುವುದು? ಆದ್ದರಿಂದ ದೀರ್ಘಾಯುಸ್ಸು ಕೊಡಿ ಎಂದು ಕೇಳುವುದು. "ನಮ್ಮ ಮೊಮ್ಮಗನ ಮೊಮ್ಮಗನ ಮಗನ ಮದುವೆ ನೋಡಿದರೆ ಸಾಕು" ಎಂದು ಕೇಳಿ ಕೊಡುವವರಿಗೆ ಟೋಪಿ ಹಾಕುವ ಬುದ್ಧಿವಂತಿಕೆ. "ಮೊದಲು ಬದುಕಿರೋಣ. ಆಮೇಲೆ ಉಳಿದುದನ್ನು ಕೇಳಿದರಾಯಿತು" ಅನ್ನುವ ಜಾಣತನ. ಆಯುಸ್ಸೇ ಇಲ್ಲದಿದ್ದರೆ ಏನು ಪ್ರಯೋಜನ?
ಎರಡನೆಯದು ಆರೋಗ್ಯ. ಕೇವಲ ಬದುಕಿದ್ದರೆ ಸಾಕೆ? ನೂರು ವರುಷ ಆಯುಸ್ಸು. ಕೈ-ಕಾಲು ಆಡುವಹಾಗಿಲ್ಲ. ಹಾಸಿಗೆ ಮೇಲೆ ಬಿದ್ದಿರಬೇಕು. ಆದರೆ ಉಸಿರಾಡುವುದರಿಂದ ಬದುಕಿದ್ದಾನೆ. ಇಂತಹ ಆಯುಸ್ಸಿನಿಂದ ಏನು ಪ್ರಯೋಜನ? ಆದ್ದರಿಂದ ಒಳ್ಳೆಯ ಅರೋಗ್ಯ ಬೇಕು.
ಇವೆರಡೂ ಸಿಕ್ಕ ಮೇಲೆ ಮುಂದಿನದು ಐಶ್ವರ್ಯ. ಸುಮ್ಮನೆ ಬದುಕಿ ಗಟ್ಟಿಮುಟ್ಟಾಗಿದ್ದರೆ ಏನು ಸಂತಸ? ಬದುಕಿದ ಮೇಲೆ ಸುಖ ಪಡದೆ ಏನು ಪ್ರಯೋಜನ? ಸುಖ ಪಡಲು ಸಾಧನಗಳು ಬೇಕಲ್ಲ? ಅವುಗಳನ್ನು ಪಡೆಯಬೇಕು. ಈ ಕಾರಣಕ್ಕೆ ಮೂರನೆಯದಾದ ಐಶ್ವರ್ಯ ಬೇಕು. ಒಮ್ಮೆ ಬೇಡಿದಾಗ ಮುಂದೆ ಬೇಡುವಂತೆ ಇಲ್ಲದಷ್ಟು ಸಿಗಬೇಕು. ಮತ್ತೆ ಮತ್ತೆ ಬೇಡುವಂತೆ ಜೀವನ ಇರಬಾರದು. ಇನ್ನೂ ಅದರ ಬದಲು ನಾವೇ ಇನ್ನೊಬ್ಬರಿಗೆ ಕೊಡುವ ಶಕ್ತಿ ಇರಬೇಕು. ಆದ್ದರಿಂದ ಹೇರಳವಾದ ಐಶ್ವರ್ಯ ಬೇಕು.
ಈ ಮೂರು ಕಾರಣಗಳಿಂದ "ಆಯುರಾರೋಗ್ಯ ಐಶ್ವರ್ಯ" ಒಟ್ಟಿಗೆ ಕೂಡಿತು. ಎಲ್ಲಕ್ಕಿಂತ ಮೊದಲು ಇವನ್ನು ಕೇಳುವ ಪರಿಪಾಠ ಬಂತು.
*****
ಐಶ್ವರ್ಯ ಅನ್ನುವ ಪದ ಒಂದು ರೀತಿ ಅಸ್ಪಷ್ಟ ಅಲ್ಲವೇ? ಕೇಳುವುದು ಖಚಿತವಾಗಿರಬೇಕು. ಆದ ಕಾರಣ ಇದರಲ್ಲಿ ಮತ್ತೆ ಕವಲುಗಳು ಬಂದವು. ಐಶ್ವರ್ಯದ ಬೇರೆ ಬೇರೆ ರೂಪಗಳಲ್ಲಿ ಕೇಳುವುದು ಪ್ರಾರಂಭವಾಯಿತು. ಅವುಗಳಲ್ಲಿ ಮತ್ತೆ ಎಂಟು ಮುಖ್ಯವಾಯಿತು. "ಅಷ್ಟ ಭೋಗ," "ಅಷ್ಟ ಭಾಗ್ಯ", ಇವುಗಳ ಜೊತೆ "ಅಷ್ಟ ಐಶ್ವರ್ಯ" ಸೇರಿದುವು.
ಅಷ್ಟಐಶ್ವರ್ಯಗಳು ಯಾವುವು ಎನ್ನುವುದಕ್ಕೆ ಅನೇಕ ವ್ಯಾಖ್ಯಾನಗಳು ಉಂಟು. "ಅಷ್ಟ ಲಕ್ಷ್ಮಿ" ಚಿಂತಿಸುವ ಸಂದರ್ಭದಲ್ಲಿ ಕೆಲವನ್ನು ಹೇಳುವುದು ಉಂಟು. ಆದರೆ, ಜನಸಾಮಾನ್ಯರ ಬೇಡಿಕೆಯ ದೃಷ್ಟಿಯಲ್ಲಿ ಈ ಕೆಳಗಿನ ಎಂಟು ರೀತಿಯ ಐಶ್ವರ್ಯಗಳು ಹೆಚ್ಚಾಗಿ ಕಂಡುಬರುತ್ತವೆ:
- ಮೊದಲನೆಯದು "ಧನ". "ಕಾಂಚಾಣಂ ಕಾರ್ಯಸಿದ್ಧಿ:". ಕನ್ನಡದಲ್ಲಿ ಹೇಳುವಂತೆ ಎಲ್ಲಕ್ಕೂ "ದುಡ್ಡೇ ದೊಡ್ಡಪ್ಪ". ಹಣವಿದ್ದರೆ ಬೇರೆ ಎಲ್ಲವನ್ನೂ ಪಡೆಯಬಹುದು ಎಂದು ನಂಬಿಕೆ. ಆದ್ದರಿಂದ ಆಯುರಾರೋಗ್ಯಗಳ ನಂತರ ಮೊದಲು ಕೇಳುವುದು ಧನವನ್ನು. ಕನ್ನಡದಲ್ಲಿ "ನಗದು" ಅಥವಾ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ "ಕ್ಯಾಶ್". ದುಡ್ಡಿನಿಂದ ಆಯುಸ್ಸು ಮತ್ತು ಆರೋಗ್ಯಗಳನ್ನು ಪಡೆಯಲಾಗುವುದಿಲ್ಲ. ಅನಾರೋಗ್ಯದ ನಿವಾರಣೆಗೆ ದುಡ್ಡು ಸಹಾಯಕಾರಿ ಆಗಬಹುದು. ಆದರೂ ನಮ್ಮ ಅನುಭವದಲ್ಲಿ ಅನೇಕವೇಳೆ ಜೇಬಲ್ಲಿ ದುಡ್ಡಿದ್ದರೂ ಪದಾರ್ಥಗಳು ಸಿಗುವುದಿಲ್ಲ. ಎಲ್ಲ ಕಡೆ "ಬಂದ್" ಅಥವಾ "ಕರ್ಫ್ಯೂ" ಇದ್ದಾಗ ಎಷ್ಟು ಹಣವಿದ್ದರೂ ಅನ್ನ ಸಿಗುವುದಿಲ್ಲ. ಕೆಲವು ಪದಾರ್ಥಗಳು ಕೆಲವು ಕಾಲಗಳಲ್ಲಿ ಮಾತ್ರ ಸಿಗುತ್ತವೆ. ಇನ್ನು ಕೆಲವು ಯಾವುದೋ ಕೆಲವು ಪ್ರದೇಶಗಳಲ್ಲಿ ಮಾತ್ರ ಸಿಗುತ್ತವೆ. ಆದರೂ ದುಡ್ಡಿದ್ದರೆ ಹೆಚ್ಚಿನವನ್ನು ಪಡೆಯಲು ಸಹಕಾರಿ ಎನ್ನುವುದು ಬಹುತೇಕ ಸತ್ಯ.
- ಎರಡನೆಯದು "ಕನಕ". ಕನಕ ಎಂದರೆ ಚಿನ್ನ ಎಂದು ಅರ್ಥವಾದರೂ ಇಲ್ಲಿ ಅದರ ವ್ಯಾಪಕ ಅರ್ಥವಾದ ಚಿನ್ನ, ಬೆಳ್ಳಿ, ನವರತ್ನಗಳು ಮುಂತಾದ ಬೆಲೆಬಾಳುವ ವಸ್ತುಗಳ ಆಭರಣಗಳು ಎಂದು ಗ್ರಹಿಸಬೇಕು. ಇವೂ ಸಹ ಧನವೇ ಅಲ್ಲವೇ ಎಂಬ ಸಂದೇಹ ಬರಬಹುದು. ಇವು ಬೆಲೆಬಾಳುವ ವಸ್ತುಗಳು ಮತ್ತು ಈಗಿನ ಸಮಯದಲ್ಲಿ ಕೆಲವೇ ಘಂಟೆಗಳಲ್ಲಿ ಹಣವಾಗಿ ಪರಿವರ್ತಿಸಬಹುದು ಎನ್ನುವುದು ಸರಿಯಾದರೂ, ಇವು ಧನದ ಒಂದು ಉಪಯೋಗ ಎಂದು ಗಣಿಸಬೇಕು.
- ಮೂರನೆಯದು ವಸ್ತುಗಳು. ವಸ್ತುಗಳು ಅನೇಕ ರೀತಿಯಲ್ಲಿರಬಹುದು. ಸಾಮಾನ್ಯವಾಗಿ ನಿರ್ಜೀವ ಭೋಗೋಪಯೋಗಿ ಪದಾರ್ಥಗಳಿಗೆ ವಸ್ತುಗಳು ಎಂದು ನಿರ್ದೇಶಿಸುವುದು. ಪೀಠೋಡಕರಣಗಳು, ಪಾತ್ರೆ-ಪಡಗ, ಆಯುಧಗಳು, ಮುಂತಾದುವುಗಳು.
- ನಾಲ್ಕನೆಯದು ವಾಹನಗಳು. ಹಿಂದಿನ ಕಾಲದಲ್ಲಿ ವಾಹನಗಳು ಅಂದರೆ ಕುದುರೆ, ಆನೆ, ಸಾರೋಟು, ರಥ ಮುಂತಾದುವು ಆಗಿದ್ದವು. ಇಂದಿಗೆ ಅವು ಸ್ಕೂಟರ್, ಕಾರು, ಖಾಸಗಿ ನೌಕೆ, ಖಾಸಗಿ ವಿಮಾನ ಮುಂತಾದುವವೇ ಆಗಬಹುದು.
- ಐದನೆಯದು ಗೃಹ ಅಥವಾ ಮನೆ. ಏಕವಚನದಲ್ಲೂ ಇರಬಹುದು ಅಥವಾ ಅನೇಕವೂ ಇರಬಹುದು. ಮನೆ, ಕೊಟ್ಟಿಗೆ, ಗೋಶಾಲೆ, ಅಶ್ವ-ಗಜ ಶಾಲೆ, ಮುಂತಾದುವುಗಳು. ಮನೆ ಅಂದರೆ ಅದರ ಜೊತೆ ಭೂಮಿ-ಕಾಣಿಯೂ ಸೇರಿತು. ವಸ್ತುಗಳು ಚರಾಸ್ತಿ (ಇಂಗ್ಲೀಷಿನಲ್ಲಿ "movable") ಆದರೆ ಗೃಹ ಸ್ಥಿರಾಸ್ತಿ (ಇಂಗ್ಲಿಷಿನಲ್ಲಿ "immovable").
- ಆರನೆಯದು "ಸಂತಾನ". ತಾನೊಬ್ಬನೇ ಇಷ್ಟೆಲ್ಲಾ ಸುಖದ ಸಾಧನಗಳನ್ನು ಇಟ್ಟುಕೊಂಡು ಏನು ಮಾಡುವುದು? ಅದಕ್ಕೆ ಮಕ್ಕಳು, ಮೊಮ್ಮಕ್ಕಳು, ಬಂಧು-ಬಾಂಧವರು, ನೆಂಟರು-ಇಷ್ಟರು ಇರಬೇಕು. ಎಲ್ಲರೂ ತನ್ನನ್ನು ಓಲೈಸಬೇಕು ಎಂದು ಆಸೆ.
- ಏಳನೆಯದು ಅಧಿಕಾರ. ಇದು ಕಣ್ಣಿಗೆ ಕಾಣದ್ದು. ಅಮೂರ್ತ. ಇಂಗ್ಲೀಷಿನಲ್ಲಿ intangible. ಆದರೆ ಅದರ ಪ್ರಭಾವ ಕಾಣುತ್ತದೆ. ಸುತ್ತಲಿರುವವರೆಲ್ಲ ತಾನು ಹೇಳಿದಂತೆ ಕೇಳಬೇಕೆಂಬ ಇಚ್ಛೆ.
- ಎಂಟನೆಯದು "ಅಂತಸ್ತು" ಅಥವಾ ಸಮಾಜದಲ್ಲಿ "ಮನ್ನಣೆ". ಹತ್ತು ಜನರಲ್ಲಿ ಎದ್ದು ಕಾಣಬೇಕು. ತಾನು ಬಂದರೆ ಎಲ್ಲರೂ ಎದ್ದು ಗೌರವ ಸೂಚಿಸಬೇಕು. ಅವರ ಕೆಲಸಗಳಿಗೆ ತನ್ನ ಸಲಹೆ ಮತ್ತು ಒಪ್ಪಿಗೆ ಪಡೆಯಬೇಕು. ಈ ರೀತಿಯ ಆಸೆ.
ಮೊದಲಿನ ನಾಲ್ಕು ಸಾಮಾನ್ಯವಾಗಿ ಒಟ್ಟಾಗಿ "ಧನ, ಕನಕ, ವಸ್ತು, ವಾಹನಾದಿ" ಎಂದು ಸಮೂಹವಾಚಕದಿಂದ ಹೇಳುತ್ತಾರೆ. ಬೇರೆ ಇನ್ನೇನೇ ಇದ್ದರೂ ಅವೆಲ್ಲಾ ಸಾಮಾನ್ಯವಾಗಿ ಮೇಲೆ ಹೇಳಿದ ಎಂಟು ರೀತಿಯ ಐಶ್ವರ್ಯಗಳಲ್ಲಿ ಮಿಳಿತವಾಗುತ್ತವೆ. ಇವಿಷ್ಟೂ ಇದ್ದರೆ ನಿಜವಾಗಿ ಅಷ್ಟಐಶ್ವರ್ಯವಂತನಾದಂತೆ.
*****
"ಇಷ್ಟೆಲ್ಲಾ ಬೇಕು. ಇನ್ನೂ ಬೇರೇನಾದರೂ ಇದ್ದರೆ ಸೇರಿಸಿ ಕೊಡು" ಎಂದು ದೇವರನ್ನು-ದೇವತೆಗಳನ್ನು ಬೇಡುವವರು ಅನೇಕರು. (ನಮ್ಮ ಆಟೋರಿಕ್ಷಾ ಚಾಲಕರು ಮೀಟರಿಗೆ ಸೇರಿಸಿ ಕೊಡಿ ಎನ್ನುವಂತೆ). ಪೂಜೆ-ಪುನಸ್ಕಾರಗಳನ್ನು ಅವರು ಮಾಡುವುದೇ ದುಃಖಗಳ ಶಮನವಾಗಿ ಈ ಐಶ್ವರ್ಯಗಳ ಪ್ರ್ರಾಪ್ತಿ ಆಗಲಿ ಎನ್ನುವ ಕಾರಣಕ್ಕಾಗಿ. ಯಾವುದೇ ಕೆಲಸ ಮಾಡುವ ಮೊದಲು ಸಂಕಲ್ಪದಲ್ಲಿ "ಅಸ್ಮಾಕಂ ಸಹ-ಕುಟುಂಬಾನಾ೦ ಕ್ಷೇಮ, ಸ್ಥೈರ್ಯ, ಆಯುರಾರೋಗ್ಯ ಐಶ್ವರ್ಯ ಅಭಿವ್ರುಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ ........" ಎಂಬ ದೊಡ್ಡ ಪಟ್ಟಿ ಕೊಟ್ಟ ನಂತರವೇ.
ಆದರೆ ಅನೇಕ ಜಿಜ್ಞಾಸುಗಳಿಗೆ "ಇದೇನು, ಈ ರೀತಿ? ನಮ್ಮ ಅನೇಕ ಸ್ತೋತ್ರಗಳಲ್ಲಿ, ಹವನ-ಹೋಮ, ಜಪ-ತಪಾದಿ ಅನುಷ್ಠಾನಗಳಲ್ಲಿ ಈ ರೀತಿ ಬೇಡುವ ಸಂಗತಿಗಳಿವೆಯಲ್ಲ? ಇದು ಸರಿಯೇ? ಮನುಷ್ಯ ಜೀವನದ ಧ್ಯೇಯವು ಸಾಧನೆ ಮಾಡಿ ಜೀವನ-ಮರಣ ಚಕ್ರದಿಂದ ಬಿಡುಗಡೆ ಪಡೆಯುವುದಲ್ಲವೇ? ಹೀಗೆ ಕೇಳಿಕೊಳ್ಳುವುದು ಮಾಡಿದ ಕೆಲಸಕ್ಕೆ ಕೂಲಿ ಕೇಳಿದಂತೆ ಆಗಲಿಲ್ಲವೇ?" ಎನ್ನುವ ಪ್ರಶ್ನೆ ಕಾಡುವುದು ಸಹಜ.
ಈ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.
Good explanation for the word ' Vara' and also about human tendency Keshava Murthyji.
ReplyDeleteಪುರಂದರ ದಾಸರ ದೇವರ ನಾಮ ನೆನಪಾಯಿತು.
ReplyDeleteಬಿನ್ನಹಕೆ ಬಾಯಿಲ್ಲವೈಯ...
ಇಷ್ಟು ದೊರಕಿದರು ಮತ್ಅಷ್ಟು ಬೇಕೆಂಬ ಆಸೆ, ಅಷ್ಟು ದೊರಕಿದರು, ಮತ್ಅಷ್ಟರಾಸೆ,....
ಮನುಷ್ಯನ ಆಸೆಗೆ, ಕೊನೆಯಿಲ್ಲ
ಆದರೆ ಹೊಟ್ಟೆ ತುಂಬಿದ ನಂತರ, ಸಾಕು ಎನ್ನುತ್ತಾರೆ.
(ತೃಣ್ಣನ ಕಾದನ್ನಪಿ ...
, ತದ್ದ್ ಭಾಗದೇಯಂ ಪರಮ್ಮ್ ಪಶುನಾಂ).
ಮನುಷ್ಯ ಎಷ್ಟೇ ಇದ್ದರೂ ತೃಪ್ತಿ ಹೊಂದುವುದಿಲ್ಲ." ಏನು ಬೇಡಲಿ ನಿನ್ನ ನೀನಿಟ್ಟ ಸೌಭಾಗ್ಯ ನಿಬಿಡ ವಾಗಿದೆ " ಎಂದು ಭಗವಂತನೇ ಸಕಲವೂ ಎಂದು ನಂಬಿರುವ ದಾಸರಷ್ಟೇ ಹಾಡಬಲ್ಲರು.ಒಮ್ಮೊಮ್ಮೆ ನಾವು ನಮ್ಮ ಜೀವನವನ್ನು ಹಿಂತಿರುಗಿ ನೋಡಿದಾಗ ಹೌದಲ್ಲವೇ ಭಗವಂತ ನಮಗೆ ಕೊಟ್ಟ ಸೌಭಾಗ್ಯ ಎಷ್ಟೊಂದು ಎನ್ನಿಸುತ್ತದೆ.ಹಾಗೆ ಅನ್ನಿಸಿದರೆ ಬಹುಶಃ ನಾವು ಮತ್ತೇನನ್ನೂ ಬೇಡಲಾರೆವು
ReplyDelete