ಮಹಾಕಾವ್ಯಗಳ ಸಂದರ್ಭದಲ್ಲಿ ಮಾಘ ಕವಿಯ ಬಹು ಮಾನ್ಯ ಕೃತಿ "ಶಿಶುಪಾಲ ವಧ" ಮತ್ತು ಅದಕ್ಕೆ ಸಂಬಂಧಿಸಿದಂತೆ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಕೃತಿಯ ಬಗ್ಗೆ ಸ್ವಲ್ಪ ವಿಚಾರವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಶ್ರೀ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿ ಸಹ ಇದೇ ಕಥಾವಸ್ತು ಒಳಗೊಂಡದ್ದು.
"ಕವಿಕುಲಗುರು" ಎಂದು ಗೌರವ ಪಡೆದಿರುವ ಕಾಳಿದಾಸ ಮಹಾಕವಿಯ "ರಘುವಂಶ" ಮತ್ತು "ಕುಮಾರಸಂಭವ", ಭಾರವಿ ಕವಿಯ "ಕಿರಾತಾರ್ಜುನೀಯಂ", ಮಾಘ ಕವಿಯ "ಶಿಶುಪಾಲ ವಧ" ಮತ್ತು ಶ್ರೀಹರ್ಷ ಕವಿಯ "ನೈಷಧೀಯ ಚರಿತ", ಈ ಐದು ಕಾವ್ಯಗಳು ಸಂಸ್ಕೃತದ "ಪಂಚ ಮಹಾಕಾವ್ಯಗಳು" ಎಂದು ಪ್ರಸಿದ್ಧವಾಗಿವೆ. ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಈ ಐದು ಕಾವ್ಯಗಳಲ್ಲಿ ಯಾವುದಾದರೂ ಒಂದನ್ನು ಓದಲೇಬೇಕೆಂಬ ಅಲಿಖಿತ ನಿಯಮ ಉಂಟು. ಒಂದಕ್ಕಿಂತ ಹೆಚ್ಚು ಓದಿದರೆ ಒಳ್ಳೆಯದು. ಎಲ್ಲವನ್ನೂ ಓದಿದರೆ ಬಹಳ ಒಳ್ಳೆಯದು. ಕೆಳಗಿನ ದರ್ಜೆ ತರಗತಿಗಳಿಗೆ ಇವುಗಳ ಯಾವುದಾದರೂ ಒಂದು ಭಾಗವನ್ನಾದರೂ ಪಠ್ಯ ಕ್ರಮದಲ್ಲಿ ಸೇರಿಸಿರುತ್ತಾರೆ.
ಕಾಳಿದಾಸ ಕವಿಯ ಕಾಲದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ ನಾಲ್ಕು-ಐದನೆಯ ಶತಮಾನದವರೆಗೂ ಅವನ ಕಾಲವನ್ನು ಎಳೆದಾಡುತ್ತಾರೆ. ಭಾರವಿಯು ಆರನೆಯ ಶತಮಾನದ ಕವಿ. ಮಾಘನು ಅವನ ನಂತರ, ಅಂದರೆ ಏಳನೆಯ ಶತಮಾನದವನು. ಶ್ರೀಹರ್ಷನು ಹನ್ನೆರಡನೆಯ ಶತಮಾನದ ಕವಿ. ವೇದಾಂತ ದೇಶಿಕರು ಹದಿಮೂರು-ಹದಿನಾಲ್ಕನೆಯ ಶತಮಾನದವರು. ವಾದಿರಾಜರು ಹದಿನಾರನೆಯ ಶತಮಾನದವರು. ನೂರಾರು ವರ್ಷಗಳು ಕಳೆದರೂ ಈ ಕೃತಿಗಳು ಇನ್ನೂ ಜನಪ್ರಿಯವಾಗಿ ಮಾನ್ಯವಾಗಿವೆ.
ಮಾಘನ "ಶಿಶುಪಾಲ ವಧ" ಶ್ರೀಕೃಷ್ಣನ ಕಥೆಗೆ ಸಂಬಂಧಿಸಿದುದು. ವೇದಾಂತ ದೇಶಿಕರ "ಯಾದವಾಭ್ಯುದಯ' ಮತ್ತು ವಾದಿರಾಜರ "ರುಕ್ಮಿಣೀಶ ವಿಜಯ" ಕೂಡ ಹೀಗೆಯೇ ಶ್ರೀ ಕೃಷ್ಣನ ಕಥೆಯೇ. ಮೇಲೆ ಹೇಳಿದ ಸಂಚಿಕೆಯಲ್ಲಿ "ಯಾದವಾಭ್ಯುದಯ" ಬಗೆಗೆ ನೋಡಿದೆವು. ಈಗ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ನೋಡೋಣ.
******
ಶ್ರೀ ವಾದಿರಾಜ ತೀರ್ಥರು (1481-1600) ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾಧಿಪತಿಗಳಾಗಿದ್ದವರು. ಒಂದು ನೂರಾ ಇಪ್ಪತ್ತು ವರ್ಷಗಳ ದೀರ್ಘ ಜೀವನ ನಡೆಸಿದವರು. ಶ್ರೀ ವಾಗೀಶ ತೀರ್ಥರ ಬಳಿ ವಿದ್ಯಾಭ್ಯಾಸ ಮಾಡಿದವರು. ಉಡುಪಿಯ ಶ್ರೀಕೃಷ್ಣನ ಪೂಜೆಗೆ ಹಿಂದೆ ಇದ್ದ ಅಷ್ಟ ಮಠಗಳ ಎರಡೆರಡು ತಿಂಗಳ ಸರಣಿಯನ್ನು ಎರಡೆರಡು ವರ್ಷ ಪರ್ಯಾಯ ಎಂದು ಮಾಡಿದವರು ಇವರು. ಎರಡೆರಡು ವರುಷಗಳ ಪರ್ಯಾಯ ಇದ್ದರೆ ಪರ್ಯಾಯ ಪೀಠಾಧಿಪತಿಗಳು ಹೆಚ್ಚಿನ ಧಾರ್ಮಿಕ ಕೆಲಸಗಳನ್ನು ನಡೆಸಲು ಅನುಕೂಲ ಆಗುವುದು, ಮತ್ತು ಇತರ ಪೀಠಾಧಿಪತಿಗಳು ದೀರ್ಘ ದೇಶ ಸಂಚಾರ ಮಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಬದಲಾವಣೆ ಮಾಡಿದರು ಎಂದು ಹೇಳುತ್ತಾರೆ. ಕಾಲು ನಡಿಗೆಯಲ್ಲಿ ಸಂಚಾರ ಮಾಡಬೇಕಿದ್ದ ಸಮಯದ ಬದಲಾವಣೆ ಇದು.
ಹೀಗೆ ಎರಡು ವರುಷಗಳ ಅವಧಿ ಒಂದು ಪರ್ಯಾಯ ಮಾಡಿದುದರಿಂದ ಒಂದು ಮಠಕ್ಕೆ ಹದಿನಾಲ್ಕು ವರುಷಗಳಿಗೆ ಒಮ್ಮೆ ಶ್ರೀಕೃಷ್ಣನ ಪೂಜಾ ಸರದಿ ಸಿಗುತ್ತದೆ. ಹೀಗೆ ಎರಡು ವರುಷಗಳಿಗೆ ಒಮ್ಮೆ ಪರ್ಯಾಯ ಬದಲಾವಣೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುವುದನ್ನು ನಾವು ಈಗಲೂ ನೋಡುತ್ತೇವೆ. ಮೂರು ಬಾರಿ ಎರಡು ತಿಂಗಳ ಪರ್ಯಾಯಗಳ ನಂತರ, ಹದಿನಾಲ್ಕು ವರ್ಷಗಳ ದೀರ್ಘ ಅವಧಿ ಆದರೂ ಐದು ಬಾರಿ ತಾವೇ ಎರಡು ವರ್ಷಗಳ ಪರ್ಯಾಯ ಪೀಠಾಧೀಶರಾಗಿದ್ದುದು ಶ್ರೀ ವಾದಿರಾಜರ ಹೆಗ್ಗಳಿಕೆ. ನೂರಾ ಇಪ್ಪತ್ತು ವರುಷ ಜೀವನ ನಡೆಸಿದುದರಿಂದ ಇದು ಸಾಧ್ಯ ಆಯಿತು. ಕೆಳದಿ ಮತ್ತು ಸೋದೆ ಸಂಸ್ಥಾನಗಳ ಅರಸರು ಇವರನ್ನು ರಾಜಗುರುಗಳಾಗಿ ನಡೆಸಿಕೊಂಡು ಅನೇಕ ಜಹಗೀರುಗಳನ್ನು ಕೊಟ್ಟಿದ್ದರು.
ಶ್ರೀ ವಾದಿರಾಜರು ಕುಂದಾಪುರ ಬಳಿಯ ಹೂವಿನಕೆರೆ ಗ್ರಾಮದಲ್ಲಿ ಜನಿಸಿದವರು. ದ್ವೈತ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿ ಅನೇಕ ಸ್ವತಂತ್ರ ಕೃತಿಗಳನ್ನೂ, ಹಿಂದಿನ ಅನೇಕ ಗ್ರಂಥಗಳಿಗೆ ಟೀಕೆ-ಟಿಪ್ಪಣಿಗಳನ್ನೂ ರಚಿಸಿದ್ದಾರೆ. ಸಂಸ್ಕೃತ ಭಾಷೆ ಮಾತ್ರವಲ್ಲದೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಅನೇಕ ದೇವರನಾಮ ಮತ್ತು ದೀರ್ಘ ಗೇಯಕವನ ರಚಿಸಿದ್ದಾರೆ. "ಯುಕ್ತಿಮಾಲಿಕಾ", "ವೈಕುಂಠ ವರ್ಣನೆ", "ಲಕ್ಷ್ಮಿ ಶೋಭಾನೆ" ಮುಂತಾದುವು ಜನಪ್ರಿಯ ಕೃತಿಗಳು. ತಮ್ಮ ದೇಶ ಸಂಚಾರದ ಕಾಲದಲ್ಲಿ ಕಂಡ ಕ್ಷೇತ್ರಗಳ ವಿವರಣೆಯನ್ನು "ತೀರ್ಥ ಪ್ರಭಂಧ" ಎಂಬ ಗ್ರಂಥದಲ್ಲಿ ಕೊಟ್ಟಿದ್ದಾರೆ. "ಹಯವದನ" ಎನ್ನುವ ತಮ್ಮ ಆರಾಧ್ಯ ದೈವದ ಅಂಕಿತದಲ್ಲಿ ಅನೇಕ ಕನ್ನಡ ದೇವರನಾಮಗಳನ್ನು ರಚಿಸಿದ್ದಾರೆ. ಈಗಲೂ ಇವು ಜನಪ್ರಿಯವಾಗಿ ಪ್ರತಿನಿತ್ಯ ಮನೆಮನೆಗಳಲ್ಲಿ ಹಾಡಲ್ಪಡುತ್ತಿವೆ.
******
ಹೀಗೆ ಒಮ್ಮೆ ದೀರ್ಘಕಾಲದ ದೇಶ ಸಂಚಾರದಲ್ಲಿದ್ದ ಸಮಯದಲ್ಲಿ ಶ್ರೀ ವಾದಿರಾಜರು ಪುಣ್ಯಪಟ್ಟಣ ತಲುಪಿದರು. ಪುಣ್ಯಪಟ್ಟಣ ಅನ್ನುವುದು ಈಗಿನ ಪೂನಾ ಅಥವಾ ಪುಣೆ ನಗರದ ಹಿಂದಿನ ಹೆಸರು. ಆಗ ಅಲ್ಲಿ ಪೇಶ್ವೆಯವರ ಆಡಳಿತ ಕಾಲ. ಪೇಶ್ವೆ ಅನ್ನುವುದು ಒಂದು ಹುದ್ದೆ. ಹೆಚ್ಚಿನ ಜನ ತಿಳಿದಿರುವಂತೆ ಅದು ಮರಾಠ ರಾಜರ ಕಾಲದಲ್ಲಿ ಬಂದ ಹುದ್ದೆ ಅಲ್ಲ. ಅದೊಂದು ಪರ್ಷಿಯನ್ ಭಾಷೆಯ ಪದ. ಅದರ ಅರ್ಥ "ನಾಯಕ" ಅಥವಾ "ಅಗ್ರೇಸರ" ಎಂದು. ಮೊದಲು ಈ ಪದವನ್ನು ಹದಿನಾಲ್ಕು-ಹದಿನೈದನೆಯ ಶತಮಾನದಲ್ಲಿ ಬಳಕೆಗೆ ತಂದವರು ಬಹಮನಿ ಸುಲ್ತಾನರು. ಸುಲ್ತಾನರ ನಂತರದ ಅಧಿಕಾರಿಗಳಲ್ಲಿ ಪೇಶ್ವೆ ಅತ್ಯಂತ ಎತ್ತರದವರು. ಮರಾಠ ರಾಜರ ಕಾಲದಲ್ಲಿ ಶಿವಾಜಿ ಮಹಾರಾಜರು ಮೋರೋಪಂತ ಪಿಂಗಳೆ ಅವರನ್ನು ಮೊದಲ ಮರಾಠ ಪೇಶ್ವೆ ಆಗಿ ನೇಮಕ ಮಾಡಿದರು. ಪೇಶ್ವೆ ಪದಕ್ಕೆ ಸಮಾನಾಂತರವಾಗಿ "ಪಂತ ಪ್ರಧಾನ" (ಪ್ರಧಾನ ಮಂತ್ರಿ) ಎನ್ನುವ ಪದ ಬಳಕೆ ಆಯಿತು. ಪಂತ ಪ್ರಧಾನ ಅನ್ನುವ ಪದ ಮರಾಠಿ ಭಾಷೆಯಲ್ಲಿ ಈಗಲೂ ಬಳಕೆಯಲ್ಲಿ ಉಂಟು. ಆದರೂ ಪೇಶ್ವೆ ಅನ್ನುವ ಪದದ ಬಳಕೆ ಜನಸಾಮಾನ್ಯರಲ್ಲಿ ಮುಂದುವರೆಯಿತು. "ತಹಸೀಲ್ದಾರ್" ಅನ್ನುವ ಪದ ಬಂದರೂ ನಮ್ಮ ಜನ "ಅಮಲ್ದಾರ್" ಪದ ಬಳಸುತ್ತಿದ್ದ ರೀತಿಯಲ್ಲಿ.
ಪುಣೆಯ ನಗರದ ಪೇಶ್ವೆಗಳು ಸಾಹತ್ಯ-ಸಂಸ್ಕೃತಿಗಳ ಪೋಷಕರು ಆಗಿದ್ದರು. ಶ್ರೀ ವಾದಿರಾಜರು ಅಲ್ಲಿದ್ದ ಕಾಲದಲ್ಲಿ ಪೇಶ್ವೆಗಳು ಒಂದು ವಿದ್ವನ್ಮಂಡಳಿ ಏರ್ಪಡಿಸಿ, ಸಂಸ್ಕೃತ ಕಾವ್ಯಗಳ ತೌಲನಿಕ ಅಧ್ಯಯನ ಏರ್ಪಡಿಸಿದ್ದರು. ಈ ಅಧ್ಯಯನದಲ್ಲಿ ಮಾಘ ಕವಿಯ "ಶಿಶುಪಾಲ ವಧ" ಶ್ರೇಷ್ಠ ಕಾವ್ಯ ಎಂದು ತೀರ್ಮಾನಿಸಿದರು. ಕಾವ್ಯವನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಇಟ್ಟು, ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವ ಅರ್ಪಿಸಿದರು. ಈ ಸಂಭ್ರಮ ಶ್ರೀ ವಾದಿರಾಜರಿಗೆ ತಿಳಿಯಿತು. ಕಾವ್ಯದ ಹೆಸರು ಅವರಿಗೆ ರುಚಿಸಲಿಲ್ಲ. ಖಳನಾಯಕನಾದ ಶಿಶುಪಾಲನಿಗೆ ಗ್ರಂಥದ ಹೆಸರಿನಲ್ಲಿ ಪ್ರಾಮುಖ್ಯತೆ ಕೊಟ್ಟು ಕಥಾನಾಯಕನಾದ ಶ್ರೀಕೃಷ್ಣನನ್ನು ಕೈಬಿಟ್ಟುದುದು ಅವರಿಗೆ ಸರಿ ಬರಲಿಲ್ಲ.
ಶ್ರೀ ವಾದಿರಾಜರು ನಂತರ ಪೇಶ್ವೆಯವರನ್ನು ಭೇಟಿ ಮಾಡಿದರು. "ಇದೇ ಕಥಾವಸ್ತುವಿನ ಮೇಲೆ ನಾವೂ ಒಂದು ಕಾವ್ಯ ರಚಿಸಿದ್ದೇವೆ. "ಶ್ರೀ ರುಕ್ಮಿಣೀಶ ವಿಜಯ" ಎಂದು ಅದರ ಹೆಸರು. ಅದು ನಮ್ಮ ಮೂಲ ಸ್ಥಾನವಾದ ಉಡುಪಿ ನಗರದಲ್ಲಿದೆ. ಅದನ್ನು ತರಿಸಲು ನಮಗೆ ಇಪ್ಪತ್ತು ದಿನಗಳು ಕಾಲಾವಕಾಶ ಬೇಕು. ಅಲ್ಲಿಂದ ತರಿಸುತ್ತೇವೆ. ಅದನ್ನೂ ನಿಮ್ಮ ವಿದ್ವನ್ಮಂಡಳಿ ಪರಿಶೀಲಿಸಬೇಕು ಎಂದು ನಮ್ಮ ಅಭಿಲಾಷೆ" ಎಂದರು. ಪೇಶ್ವೆಯವರು ಅದಕ್ಕೆ ಒಪ್ಪಿದರು.
******
ಹೀಗೆ ನಡೆದಾಗ ಗ್ರಂಥ ಇನ್ನೂ ರಚನೆ ಆಗಿರಲಿಲ್ಲ. ಮಾರನೆಯ ದಿನದಿಂದ ಶ್ರೀ ವಾದಿರಾಜರು ತಮ್ಮ ಸಂಸ್ಥಾನ ಪೂಜೆಯ ನಂತರ, ಭಿಕ್ಷಾ ಸ್ವೀಕರ ಮಾಡುವ ಮೊದಲು, ಈ ನಡುವಿನ ವೇಳೆಯಲ್ಲಿ ಪ್ರತಿದಿನ ಒಂದೊಂದು ಸರ್ಗದಂತೆ ತಮ್ಮ ಶಿಷ್ಯರಿಗೆ ಹೇಳುತ್ತಾ ಹೋದರು. ಶಿಷ್ಯರು ಬರೆದಿಟ್ಟುಕೊಂಡರು. ಒಟ್ಟು ಗ್ರಂಥ 19 ಸರ್ಗಗಳಲ್ಲಿ 1241 ಶ್ಲೋಕಗಳನ್ನು ಒಳಗೊಂಡಿದೆ. ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ಪೂರ್ಣವಾಯಿತು. ಪ್ರತಿದಿನ ಸುಮಾರು ಅರವತ್ತು-ಎಪ್ಪತ್ತು ಶ್ಲೋಕಗಳು. ಹೀಗೆ ರಚನೆ. ಸತತ ಶ್ರೀಮದ್ಭಾಗವತ ಪಾಠ-ಪ್ರವಚನ ಮಾಡುತ್ತಿದ್ದ ಅವರಿಗೆ ವಿಷಯದ ಹುಡುಕಾಟ ಇರಲಿಲ್ಲ. ಗೊತ್ತಿದ್ದ ವಿಷಯವನ್ನೇ ಕಾವ್ಯವಾಗಿ ಪರಿವರ್ತಿಸಬೇಕಿತ್ತು. ಶ್ರೀಮದ್ಭಾಗವತದ ಹತ್ತನೆಯ ಸ್ಕಂದದ ಶ್ರೀಕೃಷ್ಣನ ಅವತಾರದಿಂದ ರುಕ್ಮಿಣಿ ಸ್ವಯಂವರ ನಡೆಯುವವರೆಗಿನ ಕಥೆ. ಅದಾಯಿತು.
ಇಪ್ಪತ್ತನೆಯ ದಿನ ಪೂರ್ಣವಾದ ಕಾವ್ಯದ ವಾಚನವಾಯಿತು. ಇಪ್ಪತ್ತೊಂದನೆಯ ದಿನ ಗ್ರಂಥವನ್ನು ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಇಡಲಾಯಿತು. ಮಂಡಳಿ ತನ್ನ ಅವಗಾಹನೆಯ ನಂತರ ಗ್ರಂಥ ಉತ್ತಮ ಕಾವ್ಯ ಗುಣಗಳಿಂದ ಕೂಡಿದ ತೂಕದ ಕೃತಿ ಎಂದು ತೀರ್ಮಾನಿಸಿತು. ಪೇಶ್ವೆಯವರು ಈ ಗ್ರಂಥವನ್ನೂ ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಪುಣೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು.
ಶ್ರೀ ರುಕ್ಮಿಣೀಶ ವಿಜಯ ರಚನೆಯ ಸಂದರ್ಭ ಕುರಿತು ಜನಜನಿತವಾಗಿರುವ ಸಂಗತಿ ಇದು. ಶ್ರೀ ವಾದಿರಾಜರು ಸೋದೆಗೆ ಹಿಂದಿರುಗಿದ ನಂತರ ಸೋದೆಯ ಅರಸರು ಸಹ ತಮ್ಮ ರಾಜಧಾನಿಯಲ್ಲಿ ಪುಣೆಯಲ್ಲಿ ನಡೆದಂತೆಯೇ ಈ ಗ್ರಂಥದ ಮೆರವಣಿಗೆ ಮಾಡಿಸಿದರು.
ಶ್ರೀ ರುಕ್ಮಿಣೀಶ ವಿಜಯ ಗ್ರಂಥದ ಒಂದೆರಡು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ.
******
ನಮ್ಮಲ್ಲಿ ಉಪಲಬ್ಧವಿರುವ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉತ್ತಮ ಕಾವ್ಯ ಗುಣಗಳು ತುಂಬಿರುವ ಅನೇಕ ಕೃತಿಗಳಿವೆ. ಈಗಾಗಲೇ ಪರಕೀಯರ ಧಾಳಿಗಳಲ್ಲಿ ಅನೇಕ ಬಹುಮೂಲ್ಯ ಗ್ರಂಥಗಳು ನಷ್ಟವಾಗಿ ನಮಗೆ ಉಳಿದಿರುವುದು ಬಹಳ ಅಲ್ಪ. ಭಾರತೀಯ ತತ್ವ ಶಾಸ್ತ್ರದ ಯಾವುದೇ ಶಾಖೆಯಿರಲಿ, ಅದರ ಪ್ರವರ್ತಕರು ಮತ್ತು ಮುಂದೆ ಅವನ್ನು ಬಲಪಡಿಸಿದ ಮಹನೀಯರುಗಳು ಅಪ್ರತಿಮ ವಿದ್ವಾಂಸರುಗಳು. ಹೀಗಿಲ್ಲದಿದ್ದ ಪಕ್ಷದಲ್ಲಿ ಈ ಕೃತಿಗಳು ನೂರಾರು-ಸಾವಿರಾರು ವರುಷಗಳು ಉಳಿದುಕೊಂಡು ಬಂದು ಪ್ರಚಲಿತ ಇರುತ್ತಿರಲಿಲ್ಲ. ದುರದೃಷ್ಟವಶಾತ್ ಇಂತಹ ಕೃತಿಗಳನ್ನು ನಿರ್ವಿಕಾರ ಭಾವದಿಂದ ನೋಡುವ ಮನಸ್ಥಿತಿ ಅನೇಕ ಜನರಿಗಿಲ್ಲ. ಈ ಕಾರಣದಿಂದಾಗಿ ಈ ಗ್ರಂಥಗಳು ಕೇವಲ ಅವರವರ ಮತಗಳ ಚೌಕಟ್ಟಿನಲ್ಲಿಯೇ ಬಂದಿಯಾಗಿವೆ.
ನಮ್ಮ ತೋಟದ ಹಣ್ಣು ನಮಗೆ ಚೆನ್ನ. ಸರಿ. ಹಾಗೆಂದು ಬೇರೆ ತೋಟದ ಹಣ್ಣುಗಳು ನಮಗೆ ಬೇಡವೇ ಬೇಡ ಅನ್ನುವುದು ಎಷ್ಟು ಸರಿ? ಹಾಗೆ ಅಭಿಪ್ರಾಯಪಟ್ಟಲ್ಲಿ ನಷ್ಟ ನಮಗೇ ಅಲ್ಲವೇ?
Good write up, thanks for the detailed version about Sri. Vadhirajaru, understood so many new things about his works. I had known about his devara naamaas 🙏
ReplyDeleteI am happy to know more about Sri Vadiraja Swamyji of Udupi. Keshava murthy sir has explained in simple words about the great saint. Hats of to you sir. I fully agree with you comment made in the last lines about difference of opinion. Respect others thought and beliefs also.
ReplyDeleteJust by reading this wonderful narration, came to know what all transpired during the creation of the sacred work of "Shri Rukminisha Vijayam" being composed by the great saint, Shri. Vadiraj, in a record time and an impromptu as the circumstantial necessity of that time. That too in the "padya" form.
ReplyDeleteEven as per the present day, with all the available resources at our disposal such an effort is unthinkable.
You brought about a beautiful canvas, just by your artistic skill of words ,that took us back to those times of the great era of the Peshawas and Chatrapati Shivaji Maharaj and the leavel of scholary that existed during their time. Must say, it left an indelible mark in our hearts with your sheer perspective to look deeply into the glorious past. Ofcourse, just imagined how beautiful Pune (Punya patna) might have been then .....
Thanks once again.
MMB
Nice to understand impact of Persian influence in our administration matters gor long time
ReplyDelete