ಮಹಾಕಾವ್ಯಗಳ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಹಿಂದಿನ ಸಂಚಿಕೆಗಳಲ್ಲಿ ನೋಡಿದೆವು. "ವಾದಿರಾಜರ ರುಕ್ಮಿಣೀಶ ವಿಜಯ" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ಶ್ರೀಕೃಷ್ಣನ ಜೀವನ ಕಾಲದ ಘಟನೆಗಳನ್ನು ಆಧರಿಸಿ ರಚಿತವಾಗಿರುವ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಮತ್ತು ಶ್ರೀ ವಾದಿರಾಜರ "ಶ್ರೀ ರುಕ್ಮಿಣೀಶ ವಿಜಯ" ಕೃತಿಗಳ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. "ವಾದಿರಾಜರ ರುಕ್ಮಿಣೀಶ ವಿಜಯ" ಎಂಬ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಉಡುಪಿಯಲ್ಲಿರುವ ತಮ್ಮ ಗ್ರಂಥವನ್ನು ಇಪ್ಪತ್ತು ದಿನಗಳ ಅವಧಿಯಲ್ಲಿ ಪುಣೆಗೆ ತರಿಸಿಕೊಂಡು, ಅಲ್ಲಿನ ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಕೊಡುವುದಾಗಿ ಪೇಶ್ವೆಯವರಿಗೆ ಮಾತುಕೊಟ್ಟು, ದಿನಕ್ಕೊಂದು ಸರ್ಗದಂತೆ ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ರಚನೆ ಮಾಡಿದರೆಂದು ಹೇಳಿತ್ತು. ಪ್ರತಿನಿತ್ಯ ತಮ್ಮ ಪಾಠ-ಪ್ರವಚನದ ಅಂಗವಾದ ಶ್ರೀಮದ್ಭಾಗವತದ ಘಟನೆಗಳನ್ನು ಹೇಗೆ ತಮ್ಮ ಕಾವ್ಯದಲ್ಲಿ ಅಳವಡಿಸಿಕೊಂಡರು ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಶ್ರೀಕೃಷ್ಣನ ಜಯಂತಿಯ ಸಂದರ್ಭವನ್ನು "ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ ಜಯಂತಿ" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
******
ಪ್ರಾಚೀನ ಗ್ರಂಥ ರಚನಾಕಾರರು ತಮ್ಮ ಗ್ರಂಥಗಳ ಪ್ರಾರಂಭದಲ್ಲಿ ತಮ್ಮ ಕುಲದೈವ ಅಥವಾ ಇಷ್ಟದೈವವನ್ನು ಪ್ರಾರ್ಥಿಸುವ ಶ್ಲೋಕಗಳನ್ನು ರಚಿಸಿ, ನಂತರ ಮುಂದಿನ ಕಥಾ ಭಾಗಗಳನ್ನು ನಿರೂಪಿಸುವುದು ನಡೆದು ಬಂದಿರುವ ಪದ್ಧತಿ. ಇದನ್ನು "ಮಂಗಳಾಚರಣೆ" ಎಂದು ಕರೆಯುವುದು ರೂಢಿ. ಶ್ರೀ ವಾದಿರಾಜರು ಇದೇ ರೀತಿಯಲ್ಲಿ "ಶ್ರೀ ರುಕ್ಮಿಣೀಶ ವಿಜಯ" ಗ್ರಂಥದ ಪ್ರಾರಂಭದಲ್ಲಿ ಮೊದಲಿಗೆ ಕಥಾನಾಯಕನಾದ ಶ್ರೀಕೃಷ್ಣ, ತಮ್ಮ ಇಷ್ಟ ದೈವವಾದ ಶ್ರೀ ಹಯವದನನ, ನಂತರ ಕಥಾನಾಯಕಿಯಾದ ರುಕ್ಮಿಣಿ (ಸೀತೆ, ರುಕ್ಮಿಣಿ ಮೊದಲಾದವರು ವಾಸ್ತವವಾಗಿ ಲಕ್ಷ್ಮೀದೇವಿಯೇ ಎಂದು ಪ್ರಮೇಯ) ಇವರನ್ನು ಪ್ರಾರ್ಥಿಸಿ ಶ್ಲೋಕಗಳನ್ನು ರಚಿಸಿದ್ದಾರೆ. ಇಲ್ಲಿಯೂ ಸಹ ಎಲ್ಲರಿಗೂ ಗೊತ್ತಿರುವ ಮತ್ತು ಶ್ರೀಮದ್ಭಗವತಾದಿ ಗ್ರಂಥಗಳಲ್ಲಿ ತಿಳಿಸಿರುವ ಅಂಶಗಳನ್ನೇ ಕಾವ್ಯಕ್ಕೆ ಹೊಂದುವ ರೀತಿಯಲ್ಲಿ ರೂಪಾಂತರಗೊಳಿಸಿ ಪ್ರಯೋಗಿಸಿದ್ದಾರೆ.
ಸಾಮಾನ್ಯವಾಗಿ ಕಾವ್ಯಗಳಲ್ಲಿ ಮಂಗಳಾಚರಣೆ ಮಾಡುವಾಗ ಕವಿಯ ಕುಲದೈವ ಅಥವಾ ಇಷ್ಟದೈವಕ್ಕೂ, ಮತ್ತು ನಂತರ ಬರುವ ಕಾವ್ಯದ ಕಥೆಗೂ ಸಂಬಂಧ ಇರುವುದಿಲ್ಲ. ಆದರೆ ಶ್ರೀ ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ-ರುಕ್ಮಿಣಿಯರು ಕಥಾನಾಯಕ ಮತ್ತು ಕಥಾನಾಯಕಿ ಆಗಿರುವುದು ಒಂದು ಗಮನಿಸಬೇಕಾದ ಅಂಶ.
ಈ ರೂಪಾಂತರ ಪ್ರಯೋಗವನ್ನು ಯಾವ ರೀತಿ ಮಾಡಿದ್ದಾರೆ? ಈಗ ಇರುವ ಮತ್ತು ಎಲ್ಲರಿಗೂ ತಿಳಿದಿರುವ ಅಂಶಗಳನ್ನು ಹೇಗೆ ಬೇರೆಯ ಅರ್ಥ ಕೊಟ್ಟು ಉಪಯೋಗಿಸಿಕೊಂಡಿದ್ದಾರೆ? ಇವಲ್ಲದೇ ಇನ್ನೇನಾದರೂ ವಿಶೇಷಗಳಿವೆಯೇ? ರಚನೆಯ ಸಂದರ್ಭದಲ್ಲಿ ತಿಳಿದಿದ್ದ ಅಂಶಗಳನ್ನು ಹೇಗೆ ಇನ್ನೂ ಸ್ವಾರಸ್ಯಕರವಾಗಿ ಪರಿವರ್ತಿಸಿದರು? ಈ ವಿಷಯಗಳನ್ನು ಗಮನಿಸಲು ಶ್ರೀಕೃಷ್ಣನ ಪ್ರಾರ್ಥನೆಯ ರೂಪದ ಕಾವ್ಯದ ಮೊದಲ ಶ್ಲೋಕವನ್ನು ಸ್ವಲ್ಪ ವಿವರವಾಗಿ ಈಗ ನೋಡೋಣ.
******
ರಕ್ಕಸರ ಹೊಡೆತದಿಂದ ಝರ್ಜರಿತರಾದ ದೇವತೆಗಳು ಮುಂದಿನ ಕದನಗಳಲ್ಲಿ ಸಾವು ಬರದಂತೆ ಇರಲು ಅಮೃತ ಸೇವನೆ ದಾರಿ ಎಂದು ಕಂಡುಕೊಂಡರು. ನಂತರ ಕ್ಷೀರ ಸಮುದ್ರ (ಹಾಲಿನ ಕಡಲು) ಮಥನ ಮಾಡಿದುದರಿಂದ ದೇವತೆಗಳಿಗೆ ಅಮೃತ ಸಿಕ್ಕಿತು. ಅಮೃತ ಸೇವನೆಯಿಂದ ಮುಂದೆ ಅವರಿಗೆ ಸಾವಿಲ್ಲದಂತಾಯಿತು. ಈ ಕಾರಣದಿಂದ ಅವರು ಆ-ಮರ (ಮರಣವಿಲ್ಲದವರು) ಆದರು. ಈ ಸಮುದ್ರ ಮಥನಕ್ಕೆ ಬೇಕಾದ ಪದಾರ್ಥಗಳು ಮತ್ತು ಅದನ್ನು ಮಾಡಿದ ಕೆಲಸ, ಇವುಗಳ ವಿವಗಳೇನು? ಅವನ್ನು ಹೀಗೆ ಸಂಗ್ರಹಿಸಬಹುದು:
- ಮೊದಲಿಗೆ ಕ್ಷೀರ ಸಮುದ್ರ ಬೇಕು. ಅದನ್ನು ಒಂದೇ ಸಮನೆ ಕಡೆದ ಮೇಲೆ ಕೊನೆಯಲ್ಲಿ ಅಮೃತ ಸಿಗುತ್ತದೆ.
- ಕ್ಷೀರ ಸಮುದ್ರಕ್ಕೆ ಅನೇಕ ದಿವ್ಯವಾದ ಓಷಧಿ, ವನಸ್ಪತಿಗಳನ್ನು ಹಾಕಿ, ನಂತರ ಕಡೆದರು.
- ಹಾಲಿನ ಸಮುದ್ರ ಕಡೆಯಲು ಒಂದು ದೊಡ್ಡ ಕಡೆಗೋಲು (ಮಂತು) ಬೇಕಲ್ಲ. ಮಂದರ ಪರ್ವತವನ್ನು ಕಡೆಗೋಲು ಮಾಡಿದರು.
- ಕಡೆಗೋಲಿಗೆ ಸುತ್ತಲು ಒಂದು ದೊಡ್ಡ ಹಗ್ಗ ಬೇಕಾಯಿತು. ವಾಸುಕಿ ಸರ್ಪವನ್ನು ಹಗ್ಗ ಮಾಡಿಕೊಂಡರು.
- ಕಡೆಯಲು ಎರಡು ತಂಡಗಳು. ಒಂದು ಕಡೆ ರಾಕ್ಷಸರು. ಇನ್ನೊಂದು ಕಡೆ ದೇವತೆಗಳು. (ಯಾವುದನ್ನಾದರೂ ಎರಡು ಭಾಗ ಮಾಡಿದಾಗ ಮೊದಲನೆಯದು ಪೂರ್ವ ಪಕ್ಷ ಮತ್ತು ಎರಡನೆಯದು ಉತ್ತರ ಪಕ್ಷ ಎಂದು ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದ್ದೇವೆ).
- ವಾಸುಕಿಯು (ಸರ್ಪವು) ಗಾಳಿ ಕುಡಿದು ಜೀವಿಸುವುದು. ಅದು ವಿಷವನ್ನು ಕಾರಿಕೊಳ್ಳಲು ಅಮೃತಕ್ಕಿಂತ ಮೊದಲು ಕಾರ್ಕೋಟಕ ವಿಷ ಹೊರಬಂದಿತು. ಸುತ್ತಲಿನ ವಾತಾವರಣ ಕಲುಷಿತವಾಯಿತು.
- ಹೀಗೆ ಅಮೃತ ಬಂದರೂ ಅದು ಎಲ್ಲರಿಗೂ ಸಿಗಲಿಲ್ಲ. ದೇವತೆಗಳ ಜೊತೆಯಲ್ಲಿ ಕಡೆದ ರಾಕ್ಷಸರಿಗೇ ಸಿಗಲಿಲ್ಲ.
- ಮೋಹಿನಿ ರೂಪದ ಮಹಾವಿಷ್ಣುವು ಕೊಟ್ಟವರಿಗೆ ಮಾತ್ರ ಅಮೃತ ಸಿಕ್ಕಿತು.
ಈ ಎಲ್ಲ ಅಂಶಗಳನ್ನು ಶ್ರೀವಾದಿರಾಜರು ಶ್ರೀಕೃಷ್ಣನಿಗೆ ಅನ್ವಯಿಸಿಕೊಂಡು ಪ್ರಾರ್ಥನಾ ಶ್ಲೋಕ ಮಾಡಿದರು. ಹೇಗೆ ಅನ್ವಯಿಸಿದರು ಅನ್ನುವುದರ ವಿವರವನ್ನು ನೋಡೋಣ.
******
ಈಗ ನಮ್ಮಗಳ ಪರಿಸ್ಥಿತಿ ಏನು? ನಮಗೆ ಏನು ಬೇಕು? ನಮಗೆ ಅಮೃತ ಸಾಕೆ? ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟುಕೊಳ್ಳುತ್ತಾ, ಹಾಗೆಯೇ ದೇವತೆಗಳು ಮಾಡಿದಂತೆ ನಮಗೆ ಬೇಕಾದುದು ಸಿಗಬೇಕಾದರೆ ನಾವು ಏನು ಮಾಡಬೇಕು?
ಮೇಲಿನ ವಿವರಗಳ ಜೊತೆಯಲ್ಲಿ ತಾಳೆ ಹಾಕುತ್ತಾ, ನಮ್ಮಲ್ಲಿ ಇರುವ ಸಾಧನಗಳನ್ನು ಜೊತೆ ಮಾಡಿಕೊಂಡು, ನಮಗೆ ಬೇಕಾದುದನ್ನು ಹೀಗೆ ಸಂಗ್ರಹಿಸಬಹುದು:
- ನಮ್ಮಲ್ಲಿ ಕ್ಷೀರ ಸಮುದ್ರ ಇಲ್ಲ. ಆದರೆ ನಮ್ಮ ಹೃದಯ ಕಮಲ ಮಧ್ಯದಲ್ಲಿ ಶ್ರೀಕೃಷ್ಣ ಎನ್ನುವ ಹಾಲಿನ ಸಮುದ್ರ ಇದೆ. ಇದೇ "ಕೃಷ್ಣ ದುಗ್ದಾಂಬುಧಿ". ಅವನು ಎಂಥವನು? ಹಾಲು ಹಾಗೆಯೇ ಇಟ್ಟರೆ ಸ್ವಲ್ಪ ಸಮಯದ ನಂತರ ಕೆಡುತ್ತದೆ. ಹಾಲು ಕಾಯಿಸಿ, ಕಾಯಿಸಿದ ಹಾಲಿನಿಂದ ಮೊಸರು ಮಾಡಬೇಕು. ನಂತರ ಕಡೆದು ಬೆಣ್ಣೆ ತೆಗೆಯಬೇಕು. ಆಮೇಲೆ ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕು. ಆದರೆ ಶ್ರೀಕೃಷ್ಣನೆಂಬ ಹಾಲು ಎಂದೂ ಕೆಡುವ ಹಾಲಲ್ಲ. ಶ್ರೀಕೃಷ್ಣನ ಬಳಿ ಈ ರೀತಿ ಒಂದಾದ ಮೇಲೆ ಇನ್ನೊಂದು ಬರುವುದು ಎಂದಿಲ್ಲ. ಅವನು ಹಾಲಿನಿಂದ ಕೇವಲ ತುಪ್ಪ ಮಾತ್ರವಲ್ಲ; ನೇರ ನಮಗೆ ಬೇಕಾದುದನ್ನು ಕೊಡಬಲ್ಲ.
- ದೇವತೆಗಳಿಗೆ ಅಮೃತವೇನೋ ಸಿಕ್ಕಿತು. ಅಮೃತ ಸೇವನೆಯಿಂದ ಸಾವೂ ಇಲ್ಲ. ಆದರೆ ಅದಕ್ಕೂ ಒಂದು ಮಿತಿ ಉಂಟು. ಮಹಾಪ್ರಳಯದ ನಂತರ ಅವರ ಪದವಿಯೂ ಕೊನೆಗೊಳ್ಳುತ್ತದೆ. ಈಗ ಇರುವ ದೇವೇಂದ್ರ ಹೋಗಿ ಮತ್ತೊಬ್ಬ ದೇವೇಂದ್ರ ಬರುತ್ತಾನೆ. (ಬಲಿ ಚಕ್ರವರ್ತಿಯು ಮುಂದಿನ ಮನ್ವಂತರದಲ್ಲಿ ದೇವೇಂದ್ರನಾಗಲು ಕಾದು ಕುಳಿತಿದ್ದಾನೆ!). ನಮಗೆ ಅದಕ್ಕಿಂತ ಹೆಚ್ಚಿನದಾದ ಜನನ-ಮರಣ ಚಕ್ರದಿಂದ ಬಿಡುಗಡೆ ಕೊಡುವ ಮುಕ್ತಿ ಬೇಕು. ಅದನ್ನು ಶ್ರೀಕೃಷ್ಣನೇ ಕೊಡಬೇಕು. ಮತ್ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಈ ಶ್ರೀಕೃಷ್ಣ ಎಂಬ ನಮ್ಮ ಹೃದಯದಲ್ಲಿರುವ ಹಾಲಿನ ಕಡಲನ್ನು ಕಡೆಯಬೇಕು.
- ಈ ಶ್ರೀಕೃಷ್ಣನೆಂಬ ಸಮುದ್ರ ಕಡೆಯುವ ಮೊದಲು ಯಾವುದೇ ಓಷಧಿ, ವನಸ್ಪತಿಗಳು ಹಾಕಬೇಕಿಲ್ಲ. ಏಕೆಂದರೆ ಶ್ರೀಕೃಷ್ಣನಲ್ಲಿ ಸಮಸ್ತವೂ ಈಗಲೇ ಅಡಗಿವೆ. ಈ ಪದಾರ್ಥಗಳ ಗುಣಗಳೆಲ್ಲಾ ಅವನಲ್ಲಿ ತುಂಬಿವೆ ಎಂದು ತಿಳಿದು ಕಡೆದರೆ ಸಾಕು. ಅದಕ್ಕೆ ಅವನನ್ನು "ಸಮಸ್ತ ಗುಣಪೂರ್ಣ" ಎಂದು ತಿಳಿದು ಕಡೆಯಬೇಕು (ನೆನೆಯಬೇಕು). ಸಮುದ್ರದಲ್ಲಿ ಅನೇಕ ಮುತ್ತು, ರತ್ನ, ಮುಂತಾದ ಅನೇಕ ಬೆಲೆಬಾಳುವ ಮಣಿಗಳಿವೆ. ಸಮುದ್ರಕ್ಕೆ "ರತ್ನಾಕರ" ಎನ್ನುವ ಹೆಸರು ಇದೇ ಕಾರಣಕ್ಕೆ. ಶ್ರೀಕೃಷ್ಣನೋ ಇಂತಹ ಸಮುದ್ರಗಳನ್ನೇ ತನ್ನ ಒಳಗೆ ಇಟ್ಟುಕೊಂಡಿರುವವನು. ಆದ್ದರಿಂದ ಅವನು "ಗುಣೋದ್ಯನ್ಮಣಿ". ಹೀಗೆಂದು ಶ್ರೀಕೃಷ್ಣ ಸಮುದ್ರವನ್ನು ಕಡೆಯಬೇಕು. ಕಡೆಯುವುದನ್ನು "ಮಥನ" ಎನ್ನುತ್ತಾರೆ. ಮತ್ತೆ ಮತ್ತೆ ಅದನ್ನೇ ಚಿಂತಿಸುವುದು ಮನಸ್ಸಿನಲ್ಲಿ ಮಾಡುವ ಮಥನ.
- ಶ್ರೀಕೃಷ್ಣ ಸಮುದ್ರವನ್ನು ಕಡೆಯುವ "ಕಡಗೋಲು" ಯಾವುದು? "ಶ್ರೀವೇದಾಂತ" ಎಂಬ ಮಹಾಪರ್ವತ. ಅವನನ್ನು ಪೂರ್ತಿಯಾಗಿ ತಿಳಿಯುವುದು ಸಾಧ್ಯವಿಲ್ಲ. ಆದರೆ ಅಷ್ಟಿಷ್ಟಾದರೂ ತಿಳಿಯಲು ವೇದಗಳು, ಉಪನಿಷತ್ತುಗಳು ಮುಂತಾದುವನ್ನು ಒಳಗೊಂಡ ವೇದಾಂತ ಎನ್ನುವ ಪರ್ವತವನ್ನು ಕಡಗೋಲಾಗಿ ಉಪಯೋಗಿಸಬೇಕು. ಸರಿ. ಶ್ರೀವೇದಾಂತ ಎಂದು ಏಕೆ? ಪರ್ವತವು ಜಡ ವಸ್ತು. ಸಮಸ್ತ ಜಡ ಪ್ರಕೃತಿಗೆ (Static eternity) ಅಭಿಮಾನಿ ದೇವತೆ ಮಹಾಲಕ್ಷ್ಮಿ ದೇವಿ. ಆದ್ದರಿಂದ "ಶ್ರೀವೇದಾಂತ ಮಹಾಚಲಂ" ಎಂದಾಯಿತು.
- ಕಡಗೋಲು ಸಿಕ್ಕಿತು. ಈಗ ಒಂದು ಹಗ್ಗ ಬೇಕು. ವೇದ, ವೇದಾಂಗಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೂತ್ರಗಳ ಮೊರೆ ಹೋಗಬೇಕು. ಅವೇ ಬ್ರಹ್ಮಸೂತ್ರಗಳು. (ಸೂತ್ರ ಅನ್ನುವ ಪದಕ್ಕೆ ದಾರ ಅಥವಾ ಹಗ್ಗ ಅನ್ನುವುದರ ಜೊತೆಗೆ ನಿಯಮ (Formula) ಅನ್ನುವ ಅರ್ಥವೂ ಇದೆ). ವೇದಗಳ ಸರಿಯಾದ ಅರ್ಥ ತಿಳಿಯಲು ಈ ಬ್ರಹ್ಮಸೂತ್ರಗಳು ಸಹಾಯಕ. ಆದ್ದರಿಂದ ಶ್ರೀವೇದಾಂತಮಹಾಚಲ ಎನ್ನುವ ಕಡೆಗೋಲಿಗೆ ಬ್ರಹ್ಮಸೂತ್ರಗಳು ಎನ್ನುವ ಹಗ್ಗವನ್ನು ಬಿಗಿಯಬೇಕು.
- ಎಲ್ಲಾ ಸಿದ್ಧ ಆಯಿತು. ಸಮುದ್ರ ಕಡೆಯಲು ಎರಡು ತಂಡಗಳು ಬೇಕಲ್ಲ. ವಾಕ್ಯಾರ್ಥ ಮಾಡಲು ಎರಡು ತಂಡಗಳು. ಒಂದು ಪೂರ್ವ ಪಕ್ಷ. ಇನ್ನೊಂದು ಉತ್ತರ ಪಕ್ಷ. ನಮ್ಮ ಮನಸ್ಸಿನಲ್ಲಿಯೇ ಎರಡು ರೀತಿಯ ದ್ವಂದ್ವ ಇವೆ. ಒಮ್ಮೊಮ್ಮೆ ನನ್ನನ್ನು ಬಿಟ್ಟರೆ ಇನ್ನೊಬ್ಬನಿಲ್ಲ ಅನ್ನುವ ಆಸುರೀ ಭಾವ. ದೇವರಿಲ್ಲ, ಅಥವಾ ನಾನೇ ದೇವರು (ಹಿರಣ್ಯ ಕಷಿಪುವಿನ ರೀತಿ) ಎನ್ನುವುದು ಒಂದು ರೀತಿಯ ಯೋಚನಾಲಹರಿ. ದೇವರು ಇದ್ದರೂ ಅವನಿಗೆ ಹುಟ್ಟು-ಸಾವುಗಳಿವೆ ಮತ್ತು ಅವನಲ್ಲಿ ದೋಷಗಳಿವೆ ಎನ್ನುವ ಮಿಥ್ಯಾಜ್ಞಾನ ಒಂದು ಕಡೆ. ಇದು ಪೂರ್ವ ಪಕ್ಷ. ಆದ್ದರಿಂದ ಪೂರ್ವಪಕ್ಷಾಸುರರು. ಇನ್ನೊಮ್ಮೆ ನಮ್ಮ ಕೈಲಿ ಏನೂ ಇಲ್ಲ. ಎಲ್ಲಾ ಆ ಪರಮಪುರುಷನ ಪ್ರೇರಣೆಯಿಂದ ನಡೆಯುವುದು ಎನ್ನುವ ಸುಜ್ಞಾನ. ಇದು ಉತ್ತರ ಪಕ್ಷ. ಈ ಕಾರಣದಿಂದ "ಸಿದ್ಧಾಂತೋಕ್ತಿ ಸುರೇಶ್ವರರು". ಇವೇ ನಮ್ಮ ಹೃದಯದಲ್ಲಿರುವ ಶ್ರೀಕೃಷ್ಣ ಸಮುದ್ರ ಕಡೆಯುವ ಎರಡು ಪಕ್ಷಗಳು.
- ಕಡೆಯುವ ಹಗ್ಗ ಕಡಗೋಲಿಗೆ ಸರಿಯಾಗಿ ಸುತ್ತಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಕಡೆಯುವ ಕೆಲಸ ಸುಗಮವಾಗುವುದಿಲ್ಲ. ಈ ಕಾರಣದಿಂದ "ಪರಿತಃ ಸಂಯೋಜ್ಯ ಸೂತ್ರಾಹಿಪಂ". ಕಡೆಗೋಲು ಮತ್ತು ಅದಕ್ಕೆ ಸುತ್ತಿದ ಹಗ್ಗಕ್ಕೆ ಸರಿಯಾದ ತಾಳ-ಮೇಳ ಬೇಕು. ಅಂದರೆ ಬ್ರಹ್ಮಸೂತ್ರಗಳಿಗೆ ಸರಿಯಾದ ಅರ್ಥ ತಿಳಿದು ಉಪಯೋಗಿಸಬೇಕು ಎಂದು ಭಾವ.
- ಹೀಗೆ ಹೃದಯ ಸಮುದ್ರ ಕಡೆಯುವಾಗ ಹೃದಯದಲ್ಲಿನ ವಾತಾವರಣ ತಿಳಿಯಾಗಿರಬೇಕು. ಅಲ್ಲಿ ಹಗ್ಗವಾಗಿ ಉಪಯೋಗಿಸಿದ ವಾಸುಕಿ ಒಂದು ಸರ್ಪ. ಹಾವುಗಳು ಗಾಳಿ ಸೇವಿಸಿ ಬದುಕುವುವು. ಆ ಗಾಳಿ ಒಳ್ಳೆಯದಿರಬೇಕು. ಒಳ್ಳೆಯ ಗಾಳಿ ಅಂದರೆ (ಸದ್-ವಾತ) "ಸದ್ವಾತ". ಶ್ರೀವಾದಿರಾಜರು ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಸಂತತಿಯವರು. ಮಧ್ವಮತಕ್ಕೆ "ಪವನಮತ" ಎಂದೂ ಹೆಸರು. ಶ್ರೀಮದಾಚಾರ್ಯರು ವಾಯುಪುತ್ರರು ಎಂದು ನಂಬಿಕೆ. ಈ ಕಾರಣದಿಂದ "ಸದ್ವಾತಾಗಮ ಪೋಷಿತಾತ್ಮಹೃದಯಂ".
- ಅಲ್ಲಿ ಅಮೃತ ಬಂದಿತು. ಇಲ್ಲಿ ಅಮೃತತ್ವ (ಮುಕ್ತಿ) ಬರಬೇಕು. ಅಲ್ಲಿ ಮೋಹಿನಿ ರೂಪದ ಮಹಾವಿಷ್ಣುವು ಯೋಗ್ಯರಾದ ದೇವತೆಗಳಿಗೆ ಮಾತ್ರ ಅಮೃತ ಕೊಟ್ಟನು. ಲೋಕಕಂಟಕರಾದ ಅಸುರರಿಗೆ ಕೊಡಲಿಲ್ಲ. ಇಲ್ಲಿ ಶ್ರೀಕೃಷ್ಣನು ಯೋಗ್ಯರಿಗೆ ಮಾತ್ರ ಮುಕ್ತಿ ಕೊಡುವವನು. ಆದಕಾರಣ "ಸ್ವೀಯಾನಂ ಅಮೃತಂ ಪ್ರಯಚ್ಛತಿ".
- ಯೋಗ್ಯರಿಗೆ ಅಮೃತತ್ವ ಕೊಡುವ, ಸರ್ವ ಗುಣಗಳ ಗಣಿಯಾದ ಶ್ರೀಕೃಷ್ಣನು ನನ್ನನ್ನು ಕಾಪಾಡಲಿ ಅನ್ನುವುದು ಮುಖ್ಯ ಕೋರಿಕೆ. ಆದ್ದರಿಂದ "ಸ ಮಾಂ ಪಾಯಾತ್". ಗುಣೋದ್ಯನ್ಮಣಿ ಅನ್ನುವುದನ್ನು ಹಿಂದೆ ನೋಡಿದ್ದೇವೆ.
*******
ಹೀಗೆ ಶ್ರೀಕೃಷ್ಣ ಸ್ತುತಿಯ ಎಲ್ಲ ಪರಿಕರಗಳನ್ನೂ ಸೇರಿಸಿ ಶ್ರೀವಾದಿರಾಜರು ತಮ್ಮ "ಶ್ರೀ ರುಕ್ಮಿಣೀಶ ವಿಜಯ" ಮಹಾಕಾವ್ಯದ ಮಂಗಳಾಚರಣೆಯ ಮೊದಲ ಶ್ಲೋಕವನ್ನು "ಶಾರ್ದೂಲವಿಕ್ರೀಡಿತವೃತ್ತ" ಎನ್ನುವ ಛಂದಸ್ಸಿನಲ್ಲಿ ಹೀಗೆ ರಚಿಸಿದ್ದಾರೆ:
ಶ್ರೀವೇದಾಂತಮಹಾಚಲಂ ಹಿ ಪರಿತಃ ಸಂಯೋಜ್ಯ ಸೂತ್ರಾಹಿಪಂಸದ್ವಾತಾಗಮ ಪೋಷಿತಾತ್ಮಹೃದಯಂ ತತ್ಪೂರ್ವಪಕ್ಷಾಸುರೈ:ಸಿದ್ಧಾಂತೋಕ್ತಿಸುರೈಶ್ವರೈಶ್ಚ ಮಥಿತೋ ಯಃ ಕೃಷ್ಣ ದುಗ್ದಾoಬುಧಿ:ಸ್ವೀಯಾನಮಮೃತಂ ಪ್ರಯಚ್ಛತಿ ಸ ಮಾಂ ಪಾಯತ್ಗುಣೋದ್ಯನ್ಮಣಿ:
ಭಾಷೆ-ವೇದಾಂತಗಳಲ್ಲಿ ಹೆಚ್ಚಿನ ಪರಿಶ್ರಮ ಇರುವವರು ಇನ್ನೂ ಅನೇಕ ವಿಶೇಷಾರ್ಥಗಳನ್ನು ಕಂಡುಕೊಳ್ಳಬಹುದು.
ಇಷ್ಟೆಲ್ಲಾ ಏಕೆ ಬೇಕು? ಇದೊಂದು ಒಳ್ಳೆಯ ಪ್ರಶ್ನೆ. ತೆಂಗಿನಕಾಯಿ ಅಥವಾ ಹಲಸಿನ ಹಣ್ಣು ಗಟ್ಟಿ, ಬಿಡಿಸುವುದು ಸುಲಭವಲ್ಲ ಎಂದು ಬಿಟ್ಟುಬಿಡಬಹುದು. ಇಲ್ಲವೇ, ಅದರ ರುಚಿ ಹೆಚ್ಚಿನದು ಎಂದು ಬಿಡಿಸಿ ಸವಿಯಲೂಬಹುದು!
No comments:
Post a Comment